ಕಾವ್ಯ ಸಂಗಾತಿ
ರತ್ನ ಜಹಗೀರದಾರ
“ಛಲದ ಬಲ”

ಬಂಡೆಗಲ್ಲನು ಸೀಳಿಕೊಂಡು ಹೆಮ್ಮರವಾಗಿ ಬೆಳೆದಿದೆ
ಬಿರುಗಾಳಿಯ ಹೊಡೆತಕೆ ಅಲುಗಾಡದೆ ನಿಶ್ಚಲವಾಗಿದೆ
ಬೆಳೆಯುವ ಉತ್ಸಾಹ ಛಲದ ಬಲದಿಂದ ಬಂದಿದೆ
ಆತ್ಮಸ್ಥೈರ್ಯ ಸ್ಪೂರ್ತಿಗೆ ಸೆಲೆಯಾದ ಕಾರಣವಾಗಿದೆ
ಕತ್ತಲೆಯ ಗರ್ಭದಿಂದ ಬೀಜಾಂಕುರಿಸಿದ ಸಸಿಯಲ್ಲಿ
ಬೆಳೆಯುವ ಗುರಿಯನು ಮರೆಯದಿರುವ ದೃಢತೆಯಲ್ಲಿ
ಪರಿಪಕ್ವತೆಯ ಸಾರ್ಥಕತೆ ಜನರ ಉಪಯೋಗದಲ್ಲಿ
ದಾರಿಹೋಕರಿಗೆ ನೆರಳಾದೆನೆಂಬ ಮಹತ್ಕಾರ್ಯದ ಕೈಂಕರ್ಯದಲ್ಲಿ

ತೊಂದರೆಗಳು ಕಾಣುವವು ಭೀಕರವಾದ ಸಾಗರದಂತೆ
ಬುದ್ಧಿಮತ್ತೆಯಿಂದ ಜ್ಞಾನದ ಅಭಿವೃದ್ಧಿ ಗಳಿಸುವಂತೆ
ಮನವೊಂದಿರೆ ಮಾರ್ಗಗಳು ನೂರೆಂಟು ಅರಿವಿನಂತೆ
ಸದವಕಾಶದಲ್ಲಿ ಮುಗಿಲೆತ್ತರಕೆ ಬೆಳೆದಂತಹ ಗಿಡದಂತೆ
ಸೋಲಿಗೆ ಭಯಪಡುವವ ಏನನ್ನು ಸಾಧಿಸಲಾರದವನು
ಸಂಕಷ್ಟ ಎದುರಿಸುವನೆ ಸಾಧನೆಯ ಮೆಟ್ಟಲೇರುವನು
ಶ್ರಮಿಕನಾದವ ಅದೃಷ್ಟದ ಬಾಗಿಲು ತಟ್ಟುವನು
ಅಂದುಕೊಂಡ ಕಾರ್ಯಗಳ ಸಿದ್ಧಿಸುವವನೇ ಸಾಧಕನಾಗುವನು
ರತ್ನ ಜಹಗೀರದಾರ





ಸ್ಪೂರ್ತಿದಾಯಕ ಕವನ