ಯಶಸ್ಸಿನ ಸಂಗಾತಿ
ವೀಣಾ ಹೇಮಂತ್ ಗೌಡ ಪಾಟೀಲ್
“ಯಶಸ್ಸಿನ ಹಾದಿ ಸುಲಭದ್ದಲ್ಲ…”

ಜನಸಾಮಾನ್ಯರಿಗೂ ಉಪಯೋಗವಾಗುವಂತಹ ವಾಹನವನ್ನು ಆತ ತಯಾರಿಸುತ್ತೇನೆ ಎಂದು ಹೇಳಿದಾಗ ಎಲ್ಲರೂ ಆತನ ಕಡೆ ಕೈ ಮಾಡಿ ನಕ್ಕರು, ಆದರೆ ಅವರಾರ ಮಾತುಗಳಿಗೂ ತಲೆ ಕೆಡಿಸಿಕೊಳ್ಳದ ಆತ ಕೆಲವೇ ವರ್ಷಗಳಲ್ಲಿ ಅಂತಹದೊಂದು ವಾಹನವನ್ನು ನಿರ್ಮಿಸಿ ರಸ್ತೆಗೆ ಬಿಟ್ಟಾಗ ಎಲ್ಲರೂ ಸಂಭ್ರಮದಿಂದ ಅದನ್ನು ಖರೀದಿಸಿ ಬಳಸಿದರು..
ಮಿಚಿಗನ್ ಪ್ರಾಂತದ ಹೊಲಗಳು ಮತ್ತು ದನ ಕರುಗಳಿಂದ ಸುತ್ತುವರಿದ ಹೊಲವೊಂದರಲ್ಲಿ ಇದ್ದ ಪುಟ್ಟ ಮನೆಯಲ್ಲಿ ಹುಟ್ಟಿದ ಆತ ತನ್ನ ಕುಟುಂಬದ ಸಾಂಪ್ರದಾಯಿಕ ಉದ್ಯೋಗವಾದ ಕೃಷಿಯಲ್ಲಿ ಬದುಕನ್ನು ಕಂಡುಕೊಳ್ಳಲಿ ಎಂದೇ ಆತನ ಪಾಲಕರು ಆಶಿಸಿದರು, ಆದರೆ ಸಾಂಪ್ರದಾಯಿಕ ಕೃಷಿ ಮತ್ತು ಹೈನುಗಾರಿಕೆಯಿಂದ ದೂರವಾಗಿ ತನ್ನ ಹೃದಯಕ್ಕೆ ಹತ್ತಿರವಾದ ಮಶೀನುಗಳೊಂದಿಗೆ ಆತ ಸಹವಾಸ ಮಾಡಿದ.
ಎಲ್ಲಾ ಚಿಕ್ಕ ಮಕ್ಕಳಂತೆ ಆತನಿಗೂ ಯಂತ್ರಗಳಲ್ಲಿ ವಿಪರೀತ ಆಸಕ್ತಿ ಕೇವಲ 12ನೆಯ ವಯಸ್ಸಿನಲ್ಲಿ ಆತ ತನ್ನ ತಂದೆ ತನಗೆ ಕೊಡಿಸಿದ ವಾಚನ್ನು ಸಂಪೂರ್ಣವಾಗಿ ತೆರೆದು ಅದರ ಬಿಡಿ ಭಾಗಗಳನ್ನು ಮತ್ತೆ ಜೋಡಿಸಿದ್ದ. ತನ್ನ 15ನೇ ವಯಸ್ಸಿನಲ್ಲಿ ಆತ ಚಿಕ್ಕ ಪುಟ್ಟ ಯಂತ್ರಗಳನ್ನು ತಯಾರಿಸಲಾರಂಭಿಸಿದ. ಉಳಿದವರು ಕುದುರೆಯ ಸವಾರಿ ಮಾಡುತ್ತಿರುವಾಗ ಆತ ಮೋಟರುಗಳ ಗೇರುಗಳನ್ನು ಬಳಸುವ ಆಕರ್ಷಣೆಯನ್ನು ಬೆಳೆಸಿಕೊಂಡ. ಮೋಟರುಗಳ ಗೇರುಗಳ ಕಾರ್ಯವೈಖರಿ ಅವುಗಳ ವಿನ್ಯಾಸ ಮುಂತಾದ ತಾಂತ್ರಿಕ ಮಾಹಿತಿಗಳು ಆತನಿಗೆ ಕರತಲಾಮಲಕವಾಗಿದ್ದವು.

ಜನರಿಗೆ ಆತನ ಈ ವೈಖರಿ ವಿಚಿತ್ರವೆಂದು ತೋರಿದರೆ ಆತನಿಗೆ ಇದು ಸಹಜವಾದ ಪ್ರವೃತ್ತಿಯಾಗಿತ್ತು. ರವಿ ಕಾಣದ್ದನ್ನು ಕವಿ ಕಾಣುತ್ತಾನೆ ಕವಿ ಕಾಣದ್ದನ್ನು ತಾಂತ್ರಿಕ ಕಾಣುತ್ತಾನೆ ಎಂಬಂತೆ ಯಂತ್ರಗಳ ಕುರಿತು ಆಕರ್ಷಣೆಯನ್ನು ಬೆಳೆಸಿಕೊಂಡ ಈ ವ್ಯಕ್ತಿ ಕಂಡಿದ್ದ. ಮಶೀನುಗಳೊಂದಿಗೆ ಆಟವಾಡುತ್ತಲೇ ಅವುಗಳಲ್ಲಿನ ಜೀವಂತಿಕೆಯನ್ನು ಗುರುತಿಸಿದ ಆತ.
ಮುಂದೆ ವಾಹನದ ಬಿಡಿಭಾಗಗಳನ್ನು ಮಾರಾಟ ಮಾಡುವ ಸೇಲ್ಸ್ ಉದ್ಯೋಗಿಯಾಗಿ, ಕಾರ್ಮಿಕನಾಗಿ ಮೋಟಾರು ಕಾರು ತಯಾರಿಕಾ ಕಂಪನಿಯಲ್ಲಿ ಕಾರ್ಯನಿರ್ವಹಿಸಿದ. ಆತ ನಿರ್ಮಿಸಿದ ಮೊದಲ ಕಾರಿನ ಮಾದರಿ ವಿಫಲವಾಯಿತು. ಆತ ಕೆಲಸ ನಿರ್ವಹಿಸುತ್ತಿದ್ದ ಕಂಪನಿಯು ಕೂಡ ಮುಚ್ಚಿಹೋಯಿತು. ಆತನ ಕಂಪನಿಗೆ ಹೂಡಿಕೆ ಮಾಡುತ್ತಿದ್ದ ಹೂಡಿಕೆದಾರರು, ಸ್ನೇಹಿತರು ಆತನಿಂದ ದೂರವಾದರು. ಆತನ ಆರೋಗ್ಯವು ಕೂಡ ಆತನಿಗೆ ಕೈಕೊಟ್ಟಿತು,ಆದರೆ ಆತನ ಛಲ ಮತ್ತು ನಿರಂತರವಾದ ಬದ್ಧತೆ ಆತನೊಂದಿಗೆ ಸದಾ ಇದ್ದುದರ ಪರಿಣಾಮವಾಗಿ ಆತನೆಂದೂ ಹಿಂದೆ ಸರಿಯಲಿಲ್ಲ. ಕಾರಣ ಆತನ ಮಹತ್ವಕಾಂಕ್ಷೆ ಇದ್ದುದು ಐಶಾರಾಮದ ಜೀವನದಲ್ಲಲ್ಲ ಬದಲಾಗಿ ಜನಸಾಮಾನ್ಯರು ಕೂಡ ಸರಳವಾಗಿ ಖರೀದಿಸಲು ಸಾಧ್ಯವಾಗುವ ಮತ್ತು ಆರಾಮದಾಯಕವಾಗಿ ಬಳಸುವ ವಾಹನವನ್ನು ನಿರ್ಮಿಸುವುದರಲ್ಲಿತ್ತು.ಆತನ ನಿರಂತರ ಪರಿಶ್ರಮದ ಫಲವಾಗಿ ಅಂತಿಮವಾಗಿ ರೂಪುಗೊಂಡದ್ದು ಮಾಡೆಲ್ ಟಿ.
ಆತನ ಸಂಶೋಧನೆ ಕೇವಲ ಜನರ ಪಯಣವನ್ನು ನಿರ್ಧರಿಸಲಿಲ್ಲ, ಬದಲಾಗಿ ಮೋಟಾರ್ ಕಾರು ತಯಾರಿಕಾ ಜಗತ್ತಿನ ಕಾರ್ಯವೈಖರಿಯನ್ನು ಬದಲಿಸಿತು. ವಾಹನ ತಯಾರಿಕೆಯಲ್ಲಿ ಬಿಡಿ ಭಾಗಗಳನ್ನು ಜೋಡಿಸುವ ನಿಟ್ಟಿನಲ್ಲಿ ಆತ ಕೈಗೊಂಡ ಸುಧಾರಿತ ಕ್ರಮಗಳು ಕ್ರಾಂತಿಕಾರಕ ಉತ್ಪಾದನಾ ಶೈಲಿ, ಕಡಿಮೆ ಬೆಲೆಯ ಕಾರುಗಳು ಮತ್ತು ಕಾರ್ಮಿಕರಿಗೆ ದೊರೆತ ಹೆಚ್ಚಿನ ಸಂಬಳ ಕಾರು ತಯಾರಿಕಾ ಉದ್ಯಮದಲ್ಲಿ ಕ್ಷಿಪ್ರ ಕ್ರಾಂತಿಯನ್ನು ಮಾಡಿದವು. ಅತ್ಯಂತ ವೇಗವಾಗಿ ಓಡುವ ಕಾರ್ಯಕ್ಷಮತೆಯನ್ನು ಹೊಂದಿರುವ ಮತ್ತು ಎಲ್ಲರ ಕೈಗೆಟಕುವ ಕಡಿಮೆ ಬೆಲೆಯ ಕಾರುಗಳು ಅತ್ಯಂತ ಕಡಿಮೆ ಸಮಯದಲ್ಲಿ ರಸ್ತೆಯಲ್ಲಿ ಓಡಾಡಲಾರಂಭಿಸಿದವು.

ಆಮೆ ವೇಗದಲ್ಲಿ ನಡೆಯುತ್ತಿದ್ದ ಇನ್ನಿತರ ಕಾರು ತಯಾರಿಕಾ ಕಂಪನಿಗಳು ಮೊದಮೊದಲು ಆತನನ್ನು ಅಜಾಗರೂಕ, ಜವಾಬ್ದಾರಿ ಇಲ್ಲದವ, ಮತಿಗೇಡಿ ಎಂದೆಲ್ಲ ಹೀಯಾಳಿಸಿದರೂ ಮುಂದೆ ಆತನ ಕೆಲಸವನ್ನು ನಕಲು ಮಾಡಿದವು.
ಪ್ರಾರಂಭದಲ್ಲಿ ಸಾಕಷ್ಟು ಹರತಾಳಗಳು, ವಿದ್ವಂಸಕ ಕೃತ್ಯಗಳು, ಬೆದರಿಕೆಗಳು ಬಹಿಷ್ಕಾರಗಳನ್ನು ಆತನ ಮೇಲೆ ಹೇರಿದರೂ. ಕೆಲವು ಧನಾತ್ಮಕ ಟೀಕೆಗಳಾಗಿದ್ದರೂ ಮತ್ತೆ ಕೆಲವು ಟೀಕೆಗಳು ದಿಢೀರ್ ಬದಲಾವಣೆಯಿಂದ ಮಾರುಕಟ್ಟೆಯನ್ನು ಕಳೆದುಕೊಳ್ಳುವ ಕಾರಣಕ್ಕೆ ಉಂಟಾದ ಭಯದಿಂದ ಉಂಟಾಗಿದ್ದವು.
ಆದರೆ ಆತನಿಗೆ ಮಾತ್ರ ಎಲ್ಲಾ ಸವಾಲುಗಳು ಇಂಧನದಂತೆ ಕಾರ್ಯ ನಿರ್ವಹಿಸಿದವು. ಯಾವುದೇ ನವೀನ ಸಂಶೋಧನೆಗಳು ಸುರಕ್ಷತೆಯ ವರ್ತುಲ ದೊಳಗೆ ಮೂಡಿ ಬರುವುದಿಲ್ಲ…ದಿನಗಟ್ಟಲೆ ಕೈಗೆ ಮೆತ್ತಿದ ಗ್ರೀಸ್ ಬೆಂಕಿಗೆ ಒಡ್ಡಿದಂತಹ ಮೆದುಳಿನ ಕೆಲಸ, ಎಂದೂ ಬತ್ತದ ಉತ್ಸಾಹ, ಹಿಮ್ಮೆಟ್ಟದ ಸಾಹಸ ಮತ್ತು ಅಪಾರ ಬದ್ಧತೆಯ ಪರಿಣಾಮವೇ ಇತಿಹಾಸವನ್ನು ಸೃಷ್ಟಿ ಮಾಡಿತು. ಮೋಟಾರ್ ವಾಹನ ತಯಾರಿಕಾ ಕ್ಷೇತ್ರದಲ್ಲಿ ಅತಿ ದೊಡ್ಡ ಸಾಧನೆ ಮಾಡಲು ಆತನಿಗೆ ಸಾಧ್ಯವಾಗಿಸಿದ್ದು ಇದೇ ಬದ್ಧತೆ ಎಂಬುದು ನಿರ್ವಿವಾದ.
ಕಾರು ನಿರ್ಮಾಣ ಫ್ಯಾಕ್ಟರಿಯಲ್ಲಿ ಉಂಟಾದ ಭಯಾನಕ ಬೆಂಕಿ ಅಪಘಾತದಲ್ಲಿ ಸ್ನೇಹಿತ ದುರ್ಮರಣ ಹೊಂದಿದ್ದು ಆತನಲ್ಲಿ ಮಾನಸಿಕವಾಗಿ ತೊಂದರೆಯನ್ನು ಉಂಟು ಮಾಡಿ ಕೊಂಚ ಹಿನ್ನಡೆಯನ್ನು ತಂದರೂ ಶೀಘ್ರವೇ ಚೇತರಿಸಿಕೊಂಡು ತನ್ನಲ್ಲಿನ ಬದಲಾವಣೆಗೆ ಕಾರಣನಾದನು ಆತ.
ತಾನು ನಿರ್ಮಿಸಿದ ವಸ್ತು ಜನರ ಜೀವನ ಮಟ್ಟವನ್ನು
ಸುಧಾರಿಸುವ ನಿಟ್ಟಿನಲ್ಲಿ ವಿಫಲವಾದರೆ ಅಂತಹ ವಸ್ತುವನ್ನು ತಯಾರಿಸುವುದರ ಪ್ರಯೋಜನವೇನು? ಎಂಬ ಪ್ರಶ್ನೆ ಆತನನ್ನು ದಣಿವರಿಯದಂತೆ ಕೆಲಸ ಮಾಡಲು ಪ್ರೇರೇಪಿಸುತ್ತಿತ್ತು. ಈ ಪ್ರಶ್ನೆ ಆತನಲ್ಲಿ ಉಂಟಾದ ದಿನದಿಂದಲೇ ಆತನ ಎಲ್ಲ ನಿರ್ಣಯಗಳನ್ನು ಸಾಮಾನ್ಯ ಜನರಿಗಾಗಿ, ತನ್ನ ಬಳಿ ಕೆಲಸ ಮಾಡುವ ಕೆಲಸಗಾರರಿಗಾಗಿ, ಮತ್ತು ಅವರ ಕುಟುಂಬದವರ ಕ್ಷೇಮಾಭಿವೃದ್ಧಿಗಾಗಿ ಮತ್ತು ಮೋಟಾರ್ ವಾಹನ ತಯಾರಿಕಾ ಕ್ಷೇತ್ರದ ಉತ್ತಮ ಭವಿಷ್ಯಕ್ಕಾಗಿ ಮೀಸಲಾಗಿಟ್ಟನು.
ಸೋಲುಗಳು ಆತನನ್ನು ಕಂಗೆಡಿಸಲಿಲ್ಲ ಮತ್ತು ತಡೆಯಲಿಲ್ಲ. ಸೋಲು, ಅವಮಾನಗಳು ಆತನ ಕಾರು ತಯಾರಿಕಾ ನೀಲನಕ್ಷೆಯ ಭಾಗಗಳೇ ಆಗಿದ್ದವು ಎಂದರೆ ಅತಿಶಯೋಕ್ತಿಯೇನಲ್ಲ.
ಆತನೇ ಒಂದು ಇಡೀ ಜೀವಮಾನದ ಸೋಲು, ಅವಮಾನ, ಬೆದರಿಕೆಗಳನ್ನು ಎದುರಿಸಿ ತನ್ನ ಕಾರ್ಯಕ್ಷೇತ್ರದಲ್ಲಿ ಅತಿ ದೊಡ್ಡ ಹೆಸರನ್ನು ಮಾಡಿರುವ ಇಂದಿಗೂ ಜಗತ್ತಿನ ಕಾರು ತಯಾರಿಕಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಫೋರ್ಡ್ ಕಂಪನಿಯ ಜನಕ ಹೆನ್ರಿ ಫೋರ್ಡ್.
ಆತ ಕೇವಲ ಕಾರುಗಳನ್ನು ನಿರ್ಮಿಸಲಿಲ್ಲ….ಆತ ಕಾರು ತಯಾರಿಕಾ ಕ್ಷೇತ್ರದಲ್ಲಿ ಒಂದು ಚಳುವಳಿಯನ್ನೇ ಆರಂಭಿಸಿ ಯಶಸ್ವಿಯಾದ.
ಸ್ನೇಹಿತರೆ…..ಪ್ರತಿಯೊಂದು ಯಶಸ್ಸಿನ ಹಿಂದೆಯೂ ಅಪಾರ ಪರಿಶ್ರಮ ನೋವು ಬದ್ಧತೆಗಳು ಇರುತ್ತವೆ. ಯಶಸ್ಸಿಗೆ ಕೇವಲ ಅದೃಷ್ಟ ಮಾತ್ರ ಕಾರಣವಲ್ಲ …. ಅದೃಷ್ಟದ ಪಾಲು ಸಾವಿರದಲ್ಲಿ ಒಂದು ಮಾತ್ರ. ಈ ಯಶಸ್ಸನ್ನು ಪಡೆಯಲು ತಮ್ಮ ಕಾರ್ಯಕ್ಷೇತ್ರದಲ್ಲಿ ಅವರು ಸವೆಸಿರುವ ಹತ್ತು ಹಲವು ಪ್ರಯತ್ನಗಳು, ಹಗಲು ಇರುಳೆನ್ನದೆ ದಣಿವರಿಯದೆ ಮಾಡಿದ ಕೆಲಸಗಳು, ಅಪಾರ ಮನೋ ದೈಹಿಕ ಕಷ್ಟ ನಷ್ಟಗಳು ಅವರ ಇಂದಿನ ಯಶಸ್ವಿಗೆ ಕಾರಣವಾಗಿರುತ್ತದೆ.
ಬಹಳಷ್ಟು ಬಾರಿ ಯಶಸ್ವಿ ವ್ಯಕ್ತಿಗಳ ಪರಿಶ್ರಮವನ್ನು ಅಸಡ್ಡೆ ಮಾಡುವ, ಅವರನ್ನು ಪರಿಹಾಸ್ಯ ಮಾಡಿ ವಿಕೃತ ಸಂತೋಷಪಡುವ ಜನರ ಗುಂಪೇ ಇರುತ್ತದೆ. ಸರೋವರದಲ್ಲಿ ಪ್ರಶಾಂತವಾಗಿ ತೇಲುತ್ತಿರುವ ಬಾತುಕೋಳಿಯಂತೆ ಅವರ ಜೀವನ. ಮೇಲೆ ನೆಮ್ಮದಿಯಿಂದ ಪ್ರಶಾಂತವಾಗಿ ತೇಲುತ್ತಿರುವಂತೆ ಕಂಡರೂ ನೀರಿನಲ್ಲಿ ಒಂದೇ ಸಮನೆ ಕಾಲುಗಳನ್ನು ಬಡಿದು ತನ್ನ ಚಲನಶೀಲತೆಯನ್ನು ಕಾಯ್ದುಕೊಳ್ಳುವ ಬಾತುಕೋಳಿಯ ಶ್ರಮ ನಮ್ಮ ಕಣ್ಣಿಗೆ ಕಾಣದು…. ಇನ್ನು ಯಶಸ್ವಿ ವ್ಯಕ್ತಿಗಳ ಶ್ರಮ ಕಂಡೀತೇ?
ನಾವು ಬೆಚ್ಚಗೆ ಮಲಗಿ ಕನಸು ಕಾಣುತ್ತಿರುವಾಗ ಅವರು ತಮ್ಮ ಕನಸಿನ ಸಾಕಾರಕ್ಕಾಗಿ ಹಗಲಿರುಳೆನ್ನದೆ ದುಡಿದು ದಣಿಯುತ್ತಾರೆ.
ನಾವು ಸ್ನೇಹಿತರು, ಮೋಜು-ಮಸ್ತಿ ಎಂದು ಐಷಾರಾಮಿ ಭೋಗ ಲಾಲಸೆಗಳಲ್ಲಿ ಮುಳುಗಿರುವಾಗ ಅವರು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡವರಂತೆ ತಮ್ಮ ಕೆಲಸದ ಪ್ರಗತಿಗಾಗಿ ಕಾರ್ಯನಿರ್ವಹಿಸುತ್ತಾರೆ.
ಅಂತಹವರ ಪರಿಶ್ರಮವನ್ನು, ತಾಳ್ಮೆಯನ್ನು, ಪರಿಣತಿಯನ್ನು ಎಂದಿಗೂ ಹೀಗಳೆಯಬೇಡಿ…… ಸಾಧ್ಯವಾದರೆ ಪ್ರೋತ್ಸಾಹಿಸಿ ಇಲ್ಲವಾದರೆ ಸುಮ್ಮನಿದ್ದು ಬಿಡಿ ಅದೊಂದೇ ನೀವು ಅವರಿಗೆ ಮಾಡಬಹುದಾದ ಬಹುದೊಡ್ಡ ಉಪಕಾರ…. ಏನಂತೀರಾ?
ವೀಣಾ ಹೇಮಂತ್ ಗೌಡ ಪಾಟೀಲ್





“ಪರಿಶ್ರಮಕ್ಕೆ ತಕ್ಕ ಫಲ ಸಿಗುತ್ತದೆ “ತಾಳ್ಮೆ ಕಳೆದುಕೊಳ್ಳಬಾರದು .& ಸೋಲೇ ಗೆಲುವಿನ ಸೋಪಾನ. ತುಂಬಾ ಚೆನ್ನಾಗಿ ತಮ್ಮ ಸಂಕಲನದಲ್ಲಿ ವ್ಯಕ್ತಪಡಿಸಿರುತ್ತೀರಿ.ಮೇಡಮ್
ಸ್ಪೂರ್ತಿ ತುಂಬುವ ಲೇಖನ
ಸೋತವರಿಗೆ ಗೆಲುವಿನ ದಾರಿ ದೀಪ ತಮ್ಮ ಲೇಖನ
ತುಂಬಾ ಚೆನ್ನಾಗಿ ಬರೆದಿದ್ದೀರಿ ಮೇಡಂ ಧನ್ಯವಾದಗಳು