ಕಾವ್ಯ ಸಂಗಾತಿ
ಜಯಂತಿ ಕೆ ವೈ
ʼಮೌನರಾಗʼ

ಅಂತರಂಗದೊಳಿಣುಕಿ
ಅರಸುತಿರುವೆ
ಅರಿವಿಗೇ ದಕ್ಕದಿರುವ
ಅಲೆಮಾರಿ ಮನವ
ಅದೆಷ್ಟು
ಹಟಮಾರಿಯದು!
ಹುಡುಕಾಡಿದಷ್ಟೂ
ಕೈಗೇ… ಸಿಗದು!
ನೀಲನಭದುದ್ದಕ್ಕೂ ಹರಡಿ
ಕಡಲಾಳಕೂ ಕೈ ಚಾಚುವ
ಕನಸಿನರಮನೆಯ
ಕುವರಿಯದು
ಕನವರಿಸಿ ಬಿಕ್ಕುವುದು
ನೋವಿಗೊಂದಿಷ್ಟು
ನಲಿವಿಗೊಂದಿಷ್ಟು
ಇಷ್ಟಿಷ್ಟೇ ಹಂಚಿಕೊಂಡು
ಹೋದಕಡೆಯಲ್ಲೆಲ್ಲ
ಕಾಣದಾ ಪ್ರೀತಿಯರಸಿ
ಪರಿತಪಿಸಿ ಅಲೆದಲೆದು
ಕನಲುವುದು
ಕನಲಿ ಕರಗುವುದು
ಹಂಬಲಿಸಿ ಹಾಡುತಿದೆ
ಕನವರಿಸಿ ಕಾಡುತಿದೆ
ಅಂತರಂಗದ ಹಕ್ಕಿ
ಮನದ ಮಾತನು ಹೆಕ್ಕಿ
ಕಠಿಣವದು ಅರಸುವಾ ಹಾದಿ
ಕತ್ತಲ ಕಣ್ಣುಗಳದು ಕಾಣದು ಬೆಳಕು
ಅರಿವಿನಾ ಹಣತೆಯನು
ಹಚ್ಚುವವರಾರು?
ಮೌನರಾಗದ ಹಾಡು
ಕೇಳುವವರ್ಯಾರು?
ಜಯಂತಿ ಕೆ ವೈ




