ಯುವ ಸಂಗಾತಿ
ಜಯಲಕ್ಷ್ಮಿ ಕೆ.
“ಈ ಸಮಯ ಸರಿದುಹೋಗುತ್ತದೆ…”
ಯುವಜನತೆ ಕುರಿತಾಗಿ ಒಂದು ಲೇಖನ-

” ಏನ್ ಮಾಡೋಕಾಗುತ್ತೆ…ನಮ್ಮ ಪಾಲಿಗೆ ಅಂತ ಯಾವ ಪರಿಸ್ಥಿತಿ ಬರುತ್ತದೆಯೋ ಅದನ್ನು ನಾವು ಸ್ವೀಕರಿಸಲೇಬೇಕು. ಅದು ಕಷ್ಟವೋ…ಸುಖವೋ… ನಮ್ಮ ವೈಯಕ್ತಿಕ ಸಮಸ್ಯೆಗಳಿಗೆ ಯಾರನ್ನೂ ಹೊಣೆ ಮಾಡಲು ಸಾಧ್ಯವಿಲ್ಲ. ನಮ್ಮ ನಮ್ಮ ನೋವುಗಳನ್ನು ನಾವೇ ಅನುಭವಿಸಬೇಕು… ಅಳುತ್ತಾ ಕುಳಿತುಕೊಂಡರೆ ನೋವೇನು ಕಡಿಮೆಯಾಗುವುದಿಲ್ಲ, ನಮ್ಮ ಆರೋಗ್ಯದ ಸುಧಾರಣೆಯೂ ಆಗುವುದಿಲ್ಲ… ” ಈ ಮಾತುಗಳು ದೊಡ್ಡವರ ಬಾಯಿಂದ ಬಂದ ಅನುಭವದ ನುಡಿಗಳೇನೂ ಅಲ್ಲ. ನಮ್ಮ ಕಾಲೇಜಿನ ಇನ್ನೂ 17ರ ಹರೆಯದಲ್ಲಿರುವ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳಿಂದ ಹೊರಹೊಮ್ಮಿದ ಮಾತುಗಳು. ಆ ವಿದ್ಯಾರ್ಥಿನಿಗೆ ಇತ್ತೀಚೆಗೆ ಎರಡು ಆಪರೇಷನ್ ಗಳು ಒಟ್ಟೊಟ್ಟಿಗೆ ಆಗಿವೆ. ಆಕೆಗೆ ತರಗತಿಯಲ್ಲಿ ಕುಳಿತು ಪಾಠ ಕೇಳಲು ಆಗುತ್ತಿಲ್ಲ. ನಿಂತೇ ಇರಬೇಕಾದ ಅನಿವಾರ್ಯತೆ. ಒಂದೋ, ನಿಂತೇ ಪಾಠ -ಪ್ರವಚನಗಳನ್ನು ಕೇಳಬೇಕು, ಇಲ್ಲ, ಆರೋಗ್ಯ ಸುಧಾರಿಸುವವರೆಗೂ ಮನೆಯಲ್ಲಿ ಮಲಗಿಕೊಂಡೇ ಇರಬೇಕು. ಆಕೆ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ. ವಿಜ್ಞಾನ ವಿಭಾಗ ಬೇರೆ. ತರಗತಿಯೋ…ಪ್ರಯೋಗಾಲಯವೋ.. ಆಕೆ ನಿಂತೇ ಇರುತ್ತಾಳೆ. ಪಾಠ ಆಲಿಸುತ್ತಾಳೆ, ಬರೆಯುತ್ತಾಳೆ. ಎಲ್ಲ ಮಕ್ಕಳಂತೆ ಖುಷಿಯಾಗಿಯೇ ಇರುತ್ತಾಳೆ. ಅವಳ ಪರಿಸ್ಥಿತಿಯನ್ನು ಕಂಡು ನಮಗೆ ‘ಅಯ್ಯೋ!’ ಎನಿಸ ಬೇಕೇ ಹೊರತು ಆಕೆ ತನ್ನ ಆರೋಗ್ಯ ಸಮಸ್ಯೆಗಾಗಿ, ಕೊರಗುವುದಿಲ್ಲ. ಯಾರಿಂದಲೂ ಕರುಣೆಯನ್ನು ಬಯಸುವುದೂ ಇಲ್ಲ. ” ಸದ್ಯ, ಈ ಪರಿಸ್ಥಿತಿ ಫೈನಲ್ ಎಕ್ಸಾಮ್ ಸಮಯಕ್ಕೆ ಬಂದಿಲ್ಲವಲ್ಲ ” ಎನ್ನುತ್ತಾ ಅಲ್ಲೂ ಸಕಾರಾತ್ಮಕವಾಗಿಯೇ ಚಿಂತನೆ ಮಾಡುತ್ತಾಳೆ ಈ ಬಾಲಕಿ. ಅವಳಲ್ಲಿ ಅಂತಹ ಮನೋಸ್ಥೈರ್ಯವನ್ನು ತುಂಬಿದ ಅವಳ ತಾಯಿಯ ಬಗ್ಗೆ ನಮಗೆಲ್ಲ ಅಪಾರ ಗೌರವ ಮತ್ತು ಹೆಮ್ಮೆ. ಆ ತಾಯಿ ಕೂಡ ಮಗಳ ಅನಾರೋಗ್ಯದ ಬಗ್ಗೆ ಕೊರಗಿದ್ದಿಲ್ಲ. ಅಥವಾ ಕೊರಗು ಇದ್ದರೂ ನಮ್ಮೆದುರು ಅದನ್ನು ತೋಡಿಕೊಂಡಿರಲಿಕ್ಕಿಲ್ಲ. ಮಗಳ ಅನಾರೋಗ್ಯ ಕಾರಣಕ್ಕಾಗಿ ಅವರು ಯಾವುದೇ ಪರೀಕ್ಷೆಗಳಿಂದ ವಿನಾಯತಿಯನ್ನು ಕೂಡ ಪಡೆದಿರಲಿಲ್ಲ. ಸಾಮಾನ್ಯ ಶೀತ, ನೆಗಡಿ ಆದರೂ “ತಮ್ಮ ಮಕ್ಕಳಿಗೆ ಆರೋಗ್ಯ ಸರಿ ಇಲ್ಲ, ಸ್ವಲ್ಪ ವಿಶೇಷ ಕಾಳಜಿ ವಹಿಸಿ” ಎಂದು ಅವಲತ್ತುಕೊಳ್ಳುವ ಪೋಷಕರೇ ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ಇಂತಹ ಗಟ್ಟಿತನದ ಮಾತೆಯರು ನಮಗೆ ಬಹಳ ಇಷ್ಟವಾಗುತ್ತಾರೆ.
ಪೋಷಕತ್ವ ಎನ್ನುವುದು ಒಂದು ಅಪೂರ್ವ ಕಲೆಗಾರಿಕೆ ಎನ್ನುವ ಮಾತಿಗೆ ಬೆಲೆ ಬರುವುದೇ ಇಂತಹ ಸನ್ನಿವೇಶಗಳಲ್ಲಿ. ಮಕ್ಕಳು ಪ್ರೌಢಶಾಲೆಯ ಮೆಟ್ಟಿಲೇರಿದರೂ ಕೆಲ ಅಮ್ಮಂದಿರು ತಮ್ಮ ಮಕ್ಕಳ ಸ್ಕೂಲ್ ಬ್ಯಾಗ್ ತಾವೇ ಹೊತ್ತುಕೊಂಡು ತರಗತಿಯ ಬಾಗಿಲ ವರೆಗೂ ಬರುವುದು, ಅವರ ಬಗ್ಗೆ ಮಿತಿಮೀರಿದ ಕಾಳಜಿ ವಹಿಸುವುದು.. ಮಕ್ಕಳಲ್ಲಿ ಸ್ವಂತಿಕೆಯೇ ಬೆಳೆಯಗೊಡದಂತೆ ಅವರ ಕೆಲಸಗಳನ್ನು ತಾವೇ ಮಾಡುವುದು..ಇತ್ಯಾದಿಗಳನ್ನು ಮಾಡುತ್ತಾರೆ. ಓಡಿ ಆಡುವ ಸಂದರ್ಭದಲ್ಲಿ ಚಿಕ್ಕ ಪುಟ್ಟ ಗಾಯಗಳಾದರೂ ಬೆಟ್ಟದಂತಹ ಆರೈಕೆ ಮಾಡುತ್ತಾ ಮನೆಗಳಲ್ಲಿಯೇ ಕೂರಿಸಿಕೊಳ್ಳುತ್ತಾರೆ. ಮಕ್ಕಳಿಗೆ ಕಷ್ಟ ಎಂದರೇನು ಎಂದೇ ಅರಿಯದಂತೆ ಅತೀವ ಕಾಳಜಿ ವಹಿಸುತ್ತಾರೆ . ಇಂತಹ ಪೋಷಕರು ಶೀತ, ಜ್ವರ, ಕೆಮ್ಮು, ಏಳೋದು – ಬೀಳೋದು ಇವೆಲ್ಲ ಸಹಜ ಎಂಬುದನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡುವುದೇ ಇಲ್ಲ. ಕಷ್ಟವೆಂದರೇನೆಂದೇ ತಿಳಿಯದ ಇಂತಹ ಮಕ್ಕಳು ಮುಂದೆ ಬದುಕಿನಲ್ಲಿ ಸಂಕಷ್ಟಗಳು ಎದುರಾದಾಗ ತಮ್ಮ ಬದುಕಿಗೇ ವಿದಾಯ ಹೇಳುವ ಸ್ಥಿತಿಗೆ ಬಂದರೂ ಅಚ್ಚರಿ ಇಲ್ಲ. ಕೆಲವೊಮ್ಮೆ ಬೇಜವಾಬ್ದಾರಿಗಳ ಮೊತ್ತವಾಗಿ, ಉಡಾಫೆಯಾಗಿ ಬೆಳೆದು ಬಿಡಬಹುದು.
ಹದಿಹರೆಯ ಎನ್ನುವುದು ವ್ಯಕ್ತಿತ್ವ ವಿಕಸನದ ಬಹುಮುಖ್ಯ ಹಂತ. ಸುಂದರ ಭವಿಷ್ಯಕ್ಕಾಗಿ ಮಕ್ಕಳ ಮೈ ಮನಸ್ಸು ಪಕ್ವವಾಗಲು ಬೇಕಾದ ತರಬೇತಿ ಈ ಹಂತದಲ್ಲಿಯೇ ಆಗಬೇಕು. ಪಠ್ಯ ಪುಸ್ತಕಗಳ ಅಧ್ಯಯನದ ಜೊತೆ ಜೊತೆಗೆ ಎನ್ ಎಸ್ ಎಸ್, ಎನ್ ಸಿ ಸಿ, ಕ್ರೀಡೆಗಳು, ಕಲೆಗಳು ಹೀಗೆ ಅನೇಕ ಮಗ್ಗುಲುಗಳಲ್ಲಿ ಮಕ್ಕಳ ಕಲಿಕೆ ಸಾಗಬೇಕು. ಸಹನೆ, ಸಹಿಷ್ಣುತಾ ಗುಣ ಮುಪ್ಪುರಿಗೊಳ್ಳಬೇಕು. ಮಕ್ಕಳಲ್ಲಿ ಮೌಲ್ಯಗಳ ವಿಕಾಸವಾಗುವುದು ಕೂಡಾ ಈ ಹಂತದಲ್ಲಿಯೇ. ಆತ್ಮಾಭಿಮಾನ ಮತ್ತು ಆತ್ಮ ವಿಶ್ವಾಸ ಇವುಗಳ ಜೊತೆಗೆ ಸ್ಪಷ್ಟ ಗುರಿಯನ್ನು ಹೊಂದಿರುವ ವಿದ್ಯಾರ್ಥಿಗೆ ಯಾವುದೇ ಆರೋಗ್ಯ ಸಮಸ್ಯೆಗಳು ಬಂದರೂ ಕಲಿಕೆಗೆ ತೊಡಕಾಗುವುದಿಲ್ಲ. ಕಾರಣ ಅವುಗಳನ್ನು ಮೆಟ್ಟಿ ನಿಲ್ಲುವ ಸಹನೆ ಮತ್ತು ಮನೋಬಲ ಅವರಲ್ಲಿರುತ್ತದೆ. “ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ… ಮನಸೊಂದಿದ್ದರೆ ಮಾರ್ಗವು ಉಂಟು, ಕೆಚ್ಚೆದೆ ಇರಬೇಕೆಂದೆಂದೂ.. ” ಎನ್ನುವ ಹಾಡಿನ ಸಾಲಿನಂತೆ ಇಂತಹ ಮಕ್ಕಳು ಗಟ್ಟಿ ಮನೋಬಲವನ್ನು ಹೊಂದಿದವರು. ಇವರು ಬದುಕಿನ ಯಾವುದೇ ಸವಾಲುಗಳನ್ನು ನಿರ್ಭೀತಿಯಿಂದ ಎದುರಿಸಬಲ್ಲರು. ಪ್ರತಿಕೂಲ ಸನ್ನಿವೇಶಗಳಲ್ಲಿ ಪರಿಸ್ಥಿತಿಯನ್ನು ಚೊಕ್ಕವಾಗಿ ನಿಭಾಯಿಸಬಲ್ಲ ಇಂತಹ ಯುವಕ ಯುವತಿಯರು ದೇಶದ ಅಪೂರ್ವ ಆಸ್ತಿಯಾಗಬಲ್ಲರು.
ಡಾಕ್ಟರ್ ಶಿವರಾಮ ಕಾರಂತರು ಹೇಳುವಂತೆ ಜಗತ್ತಿನ ಪ್ರತಿಯೊಂದು ಜೀವರಾಶಿಗೂ ಕಷ್ಟ ಉಂಟು. ಇದಕ್ಕೆ ಮನುಷ್ಯನೇನೂ ಹೊರತಲ್ಲ. ಬದುಕಿನಲ್ಲಿ ಸಮಸ್ಯೆಗಳು ಎದುರಾದಾಗ ಎಷ್ಟು ಸಂಯಮದಿಂದ ಅದನ್ನು ನಿಭಾಯಿಸುತ್ತೇವೆ ಎನ್ನುವುದರ ಮೇಲೆ ನಮ್ಮ ಸುಖ -ದುಃಖಗಳು ನಿರ್ಧರಿತವಾಗುತ್ತವೆ. ನಮ್ಮ ಕಷ್ಟ ನಷ್ಟಗಳ ಹೊರೆ ಎಂದಿದ್ದರೂ ನಮ್ಮ ಪಾಲಿಗೇ ಮೀಸಲಾದದ್ದು. ಇದಕ್ಕೆ ಯಾರೂ ಪಾಲುದಾರರಾಗಲು ಸಾಧ್ಯವಿಲ್ಲ ಎನ್ನುವ ಬದುಕಿನ ಸೂಕ್ಷ್ಮ ಆ ವಿದ್ಯಾರ್ಥಿನಿಗೆ ಸಣ್ಣ ವಯಸ್ಸಿನಲ್ಲಿಯೇ ಮನದಟ್ಟಾಗಿದೆ. ಸಮಸ್ಯೆ ಶಾಶ್ವತವಲ್ಲ. ಅದನ್ನು ಗೆದ್ದು ಬಿಡಬಲ್ಲೆನೆಂಬ ಆತ್ಮ ವಿಶ್ವಾಸವನ್ನು ಆ ಹುಡುಗಿಯಲ್ಲಿ ಬೆಳೆಸಿದಂತಹ ಗಟ್ಟಿ ಮನಸ್ಸಿನ ಇಂತಹ ತಾಯಂದಿರ ಸಂಖ್ಯೆ ಹೆಚ್ಚಾದಾಗ ಯುವ ಜನತೆ ವಾಸ್ತವದ ಅರಿವು ಬೆಳೆಸಿಕೊಂಡು ಗಟ್ಟಿಯಾಗುತ್ತಾರೆ, ವಾಸ್ತವದಲ್ಲಿ ಬದುಕಲು ಕಲಿಯುತ್ತಾರೆ.
ಜಯಲಕ್ಷ್ಮಿ ಕೆ.,




