ಗಜಲ್ ಸಂಗಾತಿ
ಅನಸೂಯಾ ಜಹಗೀರದಾರ
ಗಜಲ್

ಏಕೋ ನಿನ್ನನು ನಾ ತೊರೆಯಲು ಆಗುತ್ತಿಲ್ಲ
ಗೊತ್ತು ನನಗೆ ಮರಳಿ ತಲುಪಲು ಆಗುತ್ತಿಲ್ಲ
ಅದೇನು ಸೆಳೆತವೋ ವರ್ತುಳದ ಬುವಿಗೆ
ನಿನ್ನ ತಾರತಮ್ಯವ ಮನ್ನಿಸಲು ಆಗುತ್ತಿಲ್ಲ
ವೈರಿಯ ಪ್ರೇಮಿಸಿದ್ದೂ ಇದೆ ಈ ನೆಲದಲಿ
ಒಡಲ ಉರಿಯಿದು ನಂದಿಸಲು ಆಗುತ್ತಿಲ್ಲ
ಕೈ ಬಿಡಲು ಹೇಳಿದೆ ಹಲವು ಸಲ ಮನಕೆ
ಮಾಯೆಯಿಂದ ಹೊರಬರಲು ಆಗುತ್ತಿಲ್ಲ
ತಿರುಗಿ ನೋಡಬಾರದು ಅಂದುಕೊಳ್ಳುವೆ
ಹಿಂದಿನ ಚಹರೆಯ ಅಲಕ್ಷಿಸಲು ಆಗುತ್ತಿಲ್ಲ
ಅದೆಷ್ಟು ರಾಗವಿತ್ತೊ ನಮ್ಮ ಕೋಪದಲಿ
ಮಾರು ವೇಷ ತಿಳಿದೂ ಒಪ್ಪಲು ಆಗುತ್ತಿಲ್ಲ
ಮಿಥ್ಯ ಹೂಗಳ ಮಾಲೆ ಧರಿಸಿಹಳು *ಅನು*
ಕೆರೆಗೆಹಾರವಿದು ಕಿತ್ತು ಎಸೆಯಲು ಆಗುತ್ತಿಲ್ಲ

ಅನಸೂಯಾ ಜಹಗೀರದಾರ




. ಓದಿಸಿಕೊಂಡಷ್ಟು ಸರಳ ಇಲ್ಲ… ವಿಹ್ವಲ ….ತೊಳಲಾಟ…. ಬಿಟ್ಟೂ ಬಿಡದಿ ಈ ಮಾಯೆ ಎನ್ನುವಂತಿರುವ ಸಾಲುಗಳು.
ಹೌದು ಸರ್.ನೀ ಮಾಯೆಯೊಳಗೋ
ನಿನ್ನೊಳು ಮಾಯೆಯೋ..
ಕನಕದಾಸರ ಸಾಲು ನೆನಪಿಗೆ ಬಂತು.ನಿಮ್ಮ ಅರ್ಥಪೂರ್ಣ ಸ್ಪಂದನೆಗೆ ಧನ್ಯವಾದಗಳು.
.
ನಮಗೇ ಅರಿಯದಂತೆ ನಮ್ಮ ಮನಸಿನ ಆಳಕ್ಕೆ ಇಳಿದ ಮನಸ್ಸಿನ ಭಾವನೆಗಳ ಬದುಕೇ ಹಾಗೆ.
ನಿಜ..
ಸ್ಪಂದನೆಗೆ ಧನ್ಯವಾದಗಳು.