ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಧೀಮಂತ ಲೇಖಕ ಸಂತೇಶಿವರ ಲಿಂಗಪ್ಪ ಬೈರಪ್ಪ ಇನ್ನಿಲ್ಲ ಎಂಬ ಮಧ್ಯಾಹ್ನ ಬಂದ ಸುದ್ದಿ ಒಂದು ಕ್ಷಣ ದಿಗ್ಭ್ರಾಂತನರನ್ನಾಗಿ ಮಾಡಿದ್ದು ಸುಳ್ಳಲ್ಲ.
ಎಡಪಂಥ ಬಲಪಂಥ ಎಂಬ ಸಾಹಿತ್ಯ ವರ್ಗೀಕರಣದ ನಡುವಿನಲ್ಲಿ ಯಾವುದಕ್ಕೂ ಸೀಮಿತ ಆಗದೆ ತಮ್ಮದೇ ಸ್ವೋಪಜ್ಞತೆಯಿಂದ ಕೂಡಿದ ಬರವಣಿಗೆ ಭೈರಪ್ಪನವರ ಆಸ್ಮಿತೆ . ಅವರ ಕೂಲಂಕಶ ವೈಚಾರಿಕ ವಿಮರ್ಶೆ ಹಾಗೂ ತಾತ್ವಿಕ ಜಿಜ್ಞಾಸೆಗಳಿಂದ ಕೂಡಿದ ಅದ್ಭುತ ಸಾಹಿತ್ಯ ಕೃಷಿ ಕನ್ನಡಿಗರ ಮನದಲ್ಲಿ ಎಂದೂ ಹಸಿರಾಗಿಯೇ ಉಳಿದಿರುತ್ತದೆ . ಬೈರಪ್ಪನವರ ಕಾದಂಬರಿ ಓದಿ ಮುಗಿಸಿದ ಹಲವಾರು ದಿನಗಳವರೆಗೂ ಚಿಂತನೆಗೆ ಹಚ್ಚುತ್ತವೆ.,ಪಾತ್ರಗಳು ಗುಂಗಾಗಿ ಕಾಡುತ್ತವೆ. ಅವರ ಒಂದೊಂದು ಕೃತಿಯು ಒಂದೊಂದು ವಿಶ್ವವಿದ್ಯಾನಿಲಯ. ಹಾಗಾಗಿಯೇ ಅವರನ್ನು ಓದಲು ಅರಿಯಲು ಮಾನಸಿಕ ಸಿದ್ಧತೆ ಬೇಕು, ಒಂದು ಧ್ಯಾನಸ್ಥ ಸ್ಥಿತಿ ಬೇಕು. ಬರಿಯ ಮನರಂಜನೆಗಾಗಿ ಎಂದು ಅವುಗಳನ್ನು ಓದಿದರೂ ಅವುಗಳ ಭಾವ ಮನಸ್ಸಿನೊಳಕ್ಕೆ ಇಳಿದು ಆಗುವ ವಿಚಾರಗಳ ತಾಕಲಾಟ ಇದೆಯಲ್ಲ ಅದು ಓದಿ ಅನುಭವಿಸಿದವರಿಗೆ ಮಾತ್ರ ವೇದ್ಯ. ಒಂದೊಂದು ಕೃತಿ ರಚನೆಯಲ್ಲೂ ಅವರು ಮಾಡುತ್ತಿದ್ದ ಆಳವಾದ ಅಧ್ಯಯನ ಪ್ರವಾಸಗಳು ಒಂದು ಪಿ ಎಚ್ ಡಿ ಪ್ರಬಂಧಕ್ಕೆ ಮಾಡುವ ತಯಾರಿಗಿಂತಲೂ ಹೆಚ್ಚು ಹಾಗಾಗಿಯೇ ಒಂದು ರೀತಿಯ authenticity, ಗಟ್ಟಿತನ ಹಾಗೂ ಇದಮಿತ್ಥಮ್ ಎಂದೇ ಹೇಳುವಷ್ಟು ಖಚಿತತೆ ಅವುಗಳಿಗೆ ಬರುತ್ತಿದ್ದು .ಸ್ತ್ರೀಪರ ಬರಹಗಾರ ಎಂತಲೇ ಹೆಸರು ಮಾಡಿದ್ದ ಅವರ ಸ್ತ್ರೀ ಪಾತ್ರಗಳ ಅಂತರಂಗದ ಚಿತ್ರಣ ಅದೆಷ್ಟು ಸಂವೇದನಾಶೀಲವಾಗಿವೆ ಎಂದರೆ ಒಬ್ಬ ಗಂಡಸಿಗೆ ಹೆಂಗಸಿನ ಮನಸ್ಸು ಇಷ್ಟು ಚೆನ್ನಾಗಿ ಅರ್ಥವಾಗಲು ಹಾಗೂ ಅದನ್ನು ಹೀಗೆ ಅಭಿವ್ಯಕ್ತಿಸಲು ಸಾಧ್ಯವೇ ಎಂಬ ಪ್ರಶ್ನೆ ಎಷ್ಟೋ ಬಾರಿ ನನ್ನನ್ನು ಕಾಡಿದ್ದುಂಟು. ಪರ್ವ ಮತ್ತು ಉತ್ತರ ಕಾಂಡದಲ್ಲಿ ಪೌರಾಣಿಕ ಪಾತ್ರಗಳನ್ನು ಅವರು ವಿಶ್ಲೇಷಿಸಿ ಕಟ್ಟಿಕೊಟ್ಟ ಪರಿ ಅನನ್ಯ . ಜ್ಞಾನಪೀಠಕ್ಕೆ ಎಂದೋ ಅರ್ಹರಾಗಿದ್ದರೂ ಅದು ಸಿಗದ ಬಗ್ಗೆ ಕಹಿ ಇಟ್ಟುಕೊಳ್ಳದೆ “ಕರ್ಮಣ್ಯೇ ವಾದಿಕಾರಸ್ಥೇ” ಎನ್ನುತ್ತಾ ಬರೆಯುತ್ತಲೇ ಹೋದ ಮಹಾನ್ ದಾರ್ಶನಿಕ. ಅವರು ಬದುಕನ್ನು ನೋಡುತ್ತಿದ್ದ ರೀತಿ, ಭಾರತೀಯ ಸಂಸ್ಕೃತಿಯ ಬಗೆಗಿನ ಅತೀವ ಕಾಳಜಿ, ವೇದ ಉಪನಿಷತ್ತು ಭಾರತೀಯ ತತ್ವ ಚಿಂತನೆಗಳ ಅಧ್ಯಯನ ಇವೆಲ್ಲಾ ಅವರ ಬರಹಗಳಿಗೆ ಅದರದೇ ಆದ ಒಂದು ಮೌಲ್ಯವನ್ನು ಕಟ್ಟಿಕೊಟ್ಟಿತ್ತು. ಅವರ ಒಂದೊಂದು ಕೃತಿ ಒಂದೊಂದು ಓದಿಗೆ ಬೇರೆಯದೇ ರೀತಿ ತೆರೆದುಕೊಳ್ಳುತ್ತಾ ಹೋಗುತ್ತಿದ್ದನ್ನು ನಾನೇ ಸ್ವತಹ ಅನುಭವಿಸಿದ್ದೇನೆ. ವಯಸ್ಸು ಮಾಗಿದಂತೆ ಪಾತ್ರಗಳ ಅನುಭವವನ್ನು ನಾವು ಕಾಣುವ ರೀತಿಯೂ ಬದಲಾಗುತ್ತಾ ಹೋಗುವ ಹಾಗೆ ಮಾಡುವ ಪಾತ್ರಗಳು, ಆ ಪಾತ್ರಗಳನ್ನು ಅವರು ಎಷ್ಟು ಒಳಹೊಕ್ಕು ನೈಜವಾಗಿ  ಚಿತ್ರಿಸಿದ್ದಾರೆ ಎಂಬುದಕ್ಕೆ ಒಂದು ನಿದರ್ಶನ.

ಇಂದು ಕನ್ನಡ ಸಾರಸ್ವತ ಲೋಕಕ್ಕೆ ಗಾಢ ಶೂನ್ಯ ಆವರಿಸಿದೆ. ಕನ್ನಡ ಸಾಹಿತ್ಯ ಲೋಕ ಬಡವಾಗಿದೆ .ಅವರು ತೆರವು ಮಾಡಿ ಹೋದ ಸ್ಥಾನವನ್ನು ತುಂಬಲು ಸಾಧ್ಯವಿಲ್ಲ ಈ ಬಹುದೊಡ್ಡ ನಷ್ಟವನ್ನು ಕನ್ನಡಿಗರು  ಭರಿಸಲೇಬೇಕಾಗಿದೆ.

ಅವರ ಭೌತಿಕ ಶರೀರ ಮರೆಯಾಗಬಹುದು ಆದರೆ ತಮ್ಮ ಅಮರ ಕೃತಿಗಳನ್ನು ಕನ್ನಡ ಸರಸ್ವತ ಲೋಕದ ಆಸ್ತಿಯಾಗಿ ಬಿಟ್ಟು ಹೋಗಿದ್ದಾರೆ. ಭೈರಪ್ಪನವರೇ ಒಂದು ಕಡೆ ಹೇಳುತ್ತಾರೆ

ಕೆಲವರು ಸತ್ತು ದೂರ ಹೋದರೆ ಮತ್ತೆ ಕೆಲವರು ಬದುಕಿರುವಾಗಲೇ ದೂರ  ಹೋಗ್ತಾರೆ. ಅದನ್ನ ನಾವು ಯಾವಾಗಲೂ ಸ್ವೀಕರಿಸಬೇಕು ದುಃಖಿಸಬಾರದು.ಎಸ್ ಎಲ್ ಭೈರಪ್ಪ

ಆದರೆ ಭೈರಪ್ಪನವರು ಸತ್ತರೂ ದೂರವಾಗುವುದಿಲ್ಲ, ಮರೆಯಾಗುವುದಿಲ್ಲ. ಅವರ ಪ್ರತಿಯೊಂದು ಕೃತಿಗಳ ಮೂಲಕ ಆ ಕೃತಿಗಳಲ್ಲಿ ಅವರು ಸೃಜಿಸಿರುವ ಪಾತ್ರಗಳ ಮೂಲಕ ಅವರು ಜೀವಂತವಾಗಿರುತ್ತಾರೆ.  ಅವರ ವಿಶಿಷ್ಟ ಚೈತನ್ಯ ನಮ್ಮಲ್ಲಿ ಹೊಸದೊಂದು ಶಕ್ತಿಯನ್ನು ಖಂಡಿತಾ ತುಂಬುತ್ತದೆ.

ತೀವ್ರ ಸಂತಾಪದೊಂದಿಗೆ ಅಂತಿಮ ವಿದಾಯದ ನಮನಗಳು.


About The Author

8 thoughts on ““ಅಗಲಿದ ಬೈರಪ್ಪನವರಿಗೊಂದು ನುಡಿನಮನ” ಸುಜಾತಾ ರವೀಶ್‌ ಅವರಿಂದ”

  1. ಪ್ರಕಟಿಸಿದ ಸಂಪಾದಕಿಯವರಿಗೆ ಅನಂತ ಧನ್ಯವಾದಗಳು.

    ಸುಜಾತಾ ರವೀಶ್

  2. ಇಡೀ ವ್ಯಕ್ತಿತ್ತ್ವದ ಚಹರೆಗಳನ್ನು ಮೂಡಿಸಿದ್ದಕ್ಕೆ ಭೈರಪ್ಪನವರ ಧೀರ ಬದುಕಿನ ಮಜಲಿಗೆ ನಮೋನಮಃ.

    1. ನಿಮ್ಮ ಸವಿ ಸ್ಪಂದನೆಗೆ ಮತ್ತು ಪ್ರೋತ್ಸಾಹದ ನುಡಿಗಳಿಗೆ ಸದಾ ನಾನು ಆಭಾರಿ.

      ಸುಜಾತಾ ರವೀಶ್

  3. ಚೆಂದದ ನುಡಿನಮನ. ಎಷ್ಟೋ ವೈರುಧ್ಯ ಅಭಿಪ್ರಾಯಗಳ ನಡುವೆಯೂ ಸಾಹಿತ್ಯಲೋಕದಲ್ಲಿ ಮಿನುಗಿದ ಧ್ರುವತಾರೆ.ಹೌದು ಜ್ಞಾನಪೀಠ ದೊರೆಯದಿದ್ದುದ್ದು ಬೇಸರವೇ.
    ಮಮತಾಭಾಮ

  4. ಚಂದದ ನುಡಿ ನಮನ. ಅವರು ಬರೆದು ಬಿಟ್ಟು ಹೋದ ಕೃತಿಗಳ ಮೂಲಕ ಯಾವಾಗಲೂ ಜೀವಂತವಾಗಿರುತ್ತಾರೆ.

    1. ಚಂದದ ನುಡಿ ನಮನ. ಅವರು ಬರೆದ ಕೃತಿಗಳ ಮೂಲಕ ಯಾವಾಗಲೂ ಜೀವಂತವಾಗಿರುತ್ತಾರೆ.

      ಸುಧಾ ಗಾಯತ್ರಿ

Leave a Reply

You cannot copy content of this page

Scroll to Top