ಕಾವ್ಯ ಸಂಗಾತಿ
ಸತೀಶ್ ಬಿಳಿಯೂರು
ಬದುಕಿಗೆ ಯಾರ ಶಾಪ?


ನೋಯಿಸಬೇಡ ನನ್ನ ಮನವ
ಬಾಡಿಸಬೇಡ ನಗುವ ಮೊಗವ
ಕರಗಿಸಬೇಡ ಈ ಮುಗ್ಧ ಹೃದಯ
ಸುರಿಯಬೇಡ ಕಣ್ಣೀರ ಮಳೆಯ
ನನಗೆ ನೀ ಶಾಪವಾಗಬೇಡ ಒಡೆಯ..
ತಡೆಯದೆ ಕಂಬನಿ ಜಾರಿದೆ ಕೆನ್ನೆಗೆ
ಸೋತು ಶರಣಾಗಿ ಬಸಿದ ಇಳೆಗೆ
ಮೂಕ ರೋದನೆ ನನ್ನ ಪಾಲಿಗೆ
ಯಾರ ಶಾಪ ತಟ್ಟಿದೆ ಬದುಕಿಗೆ
ನಿತ್ಯವೂ ನನಗೆ ಸುಡುಗಾಡ ಬೇಗೆ.
ರಾಶಿ ರಾಶಿ ಬಿದ್ದ ಕನಸಿನ ಕಂತೆ
ನೆಮ್ಮದಿಯಿರದ ಈ ಬಾಳ ಸಂತೆ
ತಿನ್ನುತ ತಲೆಯ ಕೊರೆದಿದೆ ಚಿಂತೆ
ಅರಳಿದ ಸುಮವು ಸಂಜೆಗಷ್ಟೇ
ಭರವಸೆ ಕಳಕೊಂಡ ನಾ ನತದೃಷ್ಟೆ.
ಬಾಳಿನ ದೀಪ ಉರಿಯದು ಇಲ್ಲಿ
ನೆಲೆಯಿಲ್ಲ ಬತ್ತಿಗೆ ಬಿರುಗಾಳಿಯಲ್ಲಿ
ನಿತ್ಯವೂ ವ್ಯಥೆಯ ಕಥೆಯ ನಡುವಲ್ಲಿ
ಮೌನವ ಹೆಣೆದ ಸರಪಳಿಯಲ್ಲಿ
ಬಂಧನವಾಗಿದೆ ನಗುವು ಇಲ್ಲಿ.
ನಾ ಮುಟ್ಟಿ ಬೇಡುವೆ ನಿನ್ನ ಪುಣ್ಯ ಪಾದ
ಕೇಳದಾದೆಯಾ ಈ ಮನದ ಆರ್ತನಾದ
ಮರಳಿ ಕೊಡುವೆಯಾ ನೆಮ್ಮದಿ ಯೋಗ
ಕರುಣಿಸು ಎನಗೆ ಭಾಗ್ಯದ ಒಂದು ಭಾಗ
ಬರುವುದು ಅರ್ಥ ಬದುಕಿಗೆ ಆಗ.
ಸತೀಶ್ ಬಿಳಿಯೂರು



