ಧಾರಾವಾಹಿ 88
ಒಬ್ಬ ಅಮ್ಮನಕಥೆ
ರುಕ್ಮಿಣಿ ನಾಯರ್
ರಜೆಯ ನಂತರ ಶಾಲೆಯತ್ತ ಮುಖ ಮಾಡದ ಮಕ್ಕಳು

ದೊಡ್ಡ ಸಾಹುಕಾರ ಬಂಗಲೆಯಿಂದ ಹೊರ ಬಂದ ಸುಮತಿಗೆ ಸುಂದರವಾದ ಎಸ್ಟೇಟ್ ನ ಪರಿಸರವನ್ನು ಮತ್ತೊಮ್ಮೆ ಹೊಸದಾಗಿ ನೋಡುತ್ತಿರುವಂತೆ ಭಾಸವಾಯಿತು. ಕಣ್ಣು ದೃಷ್ಟಿ ಮಂದವಾದಾಗಿನಿಂದ ಎಲ್ಲವೂ ಅಸ್ಪಷ್ಟವಾಗಿ ಗೋಚರಿಸುತ್ತಿತ್ತು. ಕನ್ನಡಕದ ಭಾರ ಇದ್ದರೂ ಕಣ್ಣುಗಳು ಕಾಣುತ್ತಿದೆ ಎನ್ನುವ ಸಂತೋಷ ಸುಮತಿಗೆ. ಮಗಳ ಕೈ ಹಿಡಿದು ನಡೆಯುತ್ತಾ ತನಗೆ ಎಲ್ಲವೂ ಹೊಸ ಅನುಭವ ಎನ್ನುವಂತೆ ಎಡಬಲಗಳಲ್ಲಿ ಕಂಗೊಳಿಸುತ್ತಿದ್ದ ಹಸಿರನ್ನು ನೋಡುತ್ತಾ ಖುಷಿ ಪಟ್ಟಳು. ಹಾಗೆ ನಡೆಯುತ್ತಾ ದಾರಿ ಸವೆದದ್ದು ತಿಳಿಯಲೇ ಇಲ್ಲ. ಮನೆಗೆ ಬಂದಳು ಬಾಗಿಲ ಬೀಗವನ್ನು ತೆರೆದಳು. ಮನೆಯ ಬಾಗಿಲಿಗೆ ಬೀಗವನ್ನು ಹಾಕಿ ಒಂದು ತಿಂಗಳು ಕಳೆದಿತ್ತು. ಮನೆಯೊಳಗೆ ಹೋದವಳೇ ಅಲ್ಲಿ ತನ್ನ ಚೀಲವನ್ನು ಒಂದು ಬದಿಗಿಟ್ಟು ಸೀಮೆಎಣ್ಣೆಯ ಬಡ್ಡಿಯನ್ನು ಹೊತ್ತಿಸಿದಳು. ಮನೆಯ ಕಸವನ್ನು ಗುಡಿಸಿ ಸ್ವಚ್ಛ ಮಾಡಿದಳು. ಮಗಳು ತಾಯಿಯ ಕೆಲಸದಲ್ಲಿ ಭಾಗಿಯಾಗಿ ತನ್ನಿಂದಾದ ಸಣ್ಣಪುಟ್ಟ ಸಹಾಯವನ್ನು ಮಾಡಿದಳು. ಮನೆಯಲ್ಲಿ ಅಡುಗೆ ಮಾಡಲು ತರಕಾರಿ ಇರಲಿಲ್ಲ. ಹಾಗಾಗಿ ಹಿತ್ತಲ ಕಡೆಗೆ ಹೋದಳು. ಅಲ್ಲಿ ತಾನು ಬೆಳೆದಿದ್ದ ತರಕಾರಿ ಗಿಡಗಳು ನೀರಿಲ್ಲದೆ ಒಣಗಿಹೋಗಿದ್ದು ಕಂಡು ಮನಸ್ಸಿಗೆ ಬಹಳ ನೋವಾಯಿತು. ಸಾರು ಮಾಡಲು ಯಾವುದೇ ತರಕಾರಿ ಇಲ್ಲದ ಕಾರಣ ಕುಸುಲಕ್ಕಿ ಗಂಜಿ ಯನ್ನು ಮಾಡಿ ಒಣಮೀನನ್ನು ಒಲೆಯ ಕೆಂಡದಲ್ಲಿ ಹಾಕಿ ಸುಟ್ಟು ಮಗಳಿಗೂ ಗಂಜಿ ಕೊಟ್ಟು ತಾನು ಕುಡಿದು ಸ್ವಲ್ಪ ಹೊತ್ತು ವಿಶ್ರಮಿಸಿ ನಂತರ ಮಗಳನ್ನು ಜೊತೆಗೆ ಕರೆದುಕೊಂಡು ತೋಟದ ಕೂಲಿ ಕೆಲಸಗಾರರ ಮನೆಯ ಕಡೆಗೆ ಹೊರಟಳು. ಅದಕ್ಕೂ ಮೊದಲೇ ರೈಟರ್ ಅವರ ಮನೆಗೆ ಹೋಗಿ ತಾನು ಕಣ್ಣಿನ ಶಸ್ತ್ರ ಚಿಕಿತ್ಸೆ ಮುಗಿಸಿಕೊಂಡು ಬಂದಿರುವುದಾಗಿ ತಿಳಿಸಿದಳು. ನಾಳೆಯಿಂದ ಶಾಲೆಯನ್ನು ಪ್ರಾರಂಭಿಸುತ್ತೇನೆ ಎಂದಳು.
ಆಗ ರೈಟರ್ ಒಂದು ಲಕೋಟೆಯನ್ನು ತಂದು ಸುಮತಿಯ ಕೈಯಲ್ಲಿ ಇಟ್ಟರು. ಲಕೋಟೆಯನ್ನು ನೋಡಿದಾಗ ಸುಮತಿ ಗಾಬರಿಯಾದಳು ಏನಿರಬಹುದು ಈ ಲಕೋಟೆಯಲ್ಲಿ ಎನ್ನುತ್ತಾ ಸಂಶಯದಿಂದ ರೈಟರ್ ಮುಖವನ್ನು ನೋಡಿದಳು. ಅವರ ಮುಖ ಗಂಭೀರವಾಗಿದ್ದನ್ನು ಕಂಡು ಸ್ವಲ್ಪ ಆತಂಕಗೊಂಡಳು. ಅವಳ ಆತಂಕವನ್ನು ಅರಿತ ರೈಟರ್….”ಸುಮತಿಯವರೇ ಆತಂಕ ಪಡಬೇಡಿ…. ಒಂದು ತಿಂಗಳ ಸಂಬಳವನ್ನು ದೊಡ್ಡ ಸಾಹುಕಾರರು ನಿಮಗೆ ಕೊಡಲೆಂದು ಕಳುಹಿಸಿಕೊಟ್ಟಿದ್ದಾರೆ”…. ಎಂದು ಗಂಭೀರವಾಗಿ ನುಡಿದರು. ಅದನ್ನು ಕೇಳಿದ ಸುಮತಿ…. “ಧನ್ಯವಾದಗಳು ಸರ್”…. ಎಂದು ಹೇಳುತ್ತಾ ಕೈಮುಗಿದು ಕೂಲಿ ಕೆಲಸಗಾರರ ಮನೆಯ ಕಡೆಗೆ ನಡೆದಳು. ಅಲ್ಲಿ ಹೋದಾಗ ಆಗ ತಾನೇ ತೋಟದ ಕೆಲಸವನ್ನು ಮುಗಿಸಿ ಕೆಲಸಗಾರರು ಮನೆಗೆ ಮರಳಿದ್ದರು. ಟೀಚರಮ್ಮ ಬಂದಿರುವುದನ್ನು ಅರಿತ ಕೆಲಸಗಾರರು ಒಳಗಿದ್ದ ತಮ್ಮ ಮಕ್ಕಳನ್ನು ಕೂಗಿ ಕರೆದರು. ಮಕ್ಕಳು ಟೀಚರ್ ಅಮ್ಮನನ್ನು ನೋಡಿ ವಂದಿಸಿದರು. ಪ್ರತಿಯೊಬ್ಬ ಕೂಲಿ ಕೆಲಸಗಾರರ ಮನೆಗಳಿಗೆ ಹೋಗಿ ನಾಳೆಯಿಂದ ಮಕ್ಕಳನ್ನು ಶಾಲೆಗೆ ಕಳುಹಿಸಬೇಕಾಗಿ ವಿನಂತಿಸಿಕೊಂಡಳು. ಪೋಷಕರೆಲ್ಲರೂ ಮಕ್ಕಳನ್ನು ಶಾಲೆಗೆ ಕಳುಹಿಸುವುದಾಗಿ ಭರವಸೆ ನೀಡಿದರು. ಆದರೆ ಮಾರನೇ ದಿನ ಶಾಲೆಯಲ್ಲಿ ನೋಡಿದಾಗ ಒಂದಿಬ್ಬರು ಮಕ್ಕಳು ಮಾತ್ರ ಉಪಸ್ಥಿತರಿದ್ದರು. ಇದನ್ನು ಕಂಡ ಸುಮತಿಗೆ ಆತಂಕವಾಯಿತು. ಹಿಂದಿನ ದಿನ ಸಂಬಳವನ್ನು ಕೊಡುವಾಗ ರೈಟರ್ ಹೇಳಿದ ಮಾತುಗಳು ನೆನಪಾಯಿತು….” ಸುಮತಿಯವರೇ ಸುಮ್ಮನೆ ಕುಳಿತು ನಿದ್ರೆ ಮಾಡಿ ಸಂಬಳವನ್ನು ಪಡೆಯುವುದಲ್ಲ…. ಹೆಚ್ಚು ಮಕ್ಕಳನ್ನು ಕರೆತಂದು ಅವರಿಗೆ ಅಕ್ಷರಾಭ್ಯಾಸ ಮಾಡಿಸಿ….. ಮಕ್ಕಳ ಸಂಖ್ಯೆ ಕಡಿಮೆ ಇದ್ದರೆ ಶಾಲೆಯನ್ನು ಮುಚ್ಚಿಸಬೇಕಾಗುತ್ತದೆ”…. ಎಂದು ಹೇಳಿದ್ದರು.
ಆ ಮಾತುಗಳು ನೆನಪಾದ ಕೂಡಲೇ ಮಗಳನ್ನು ಮಕ್ಕಳ ಜೊತೆ ಶಾಲೆಯಲ್ಲಿಯೇ ಇರುವಂತೆ ಹೇಳಿ ಕೆಲಸಗಾರರ ಮನೆಗಳ ಕಡೆಗೆ ಹೊರಟಳು. ದೂರದಿಂದಲೇ ಸುಮತಿಯನ್ನು ಕಂಡಾಗ ಮಕ್ಕಳು ತೋಟದ ಒಳಗೆ ಹೋಗಿ ಅವಿತು ಕುಳಿತರು. ಮನೆಯಲ್ಲಿದ್ದರೆ ಟೀಚರ್ ತಮ್ಮನ್ನು ಶಾಲೆಗೆ ಕರೆದುಕೊಂಡು ಹೋಗುತ್ತಾರೆ ಎನ್ನುವುದು ಆ ಮಕ್ಕಳಿಗೆ ತಿಳಿದಿತ್ತು. ಒಂದು ತಿಂಗಳು ಶಾಲೆಯಲ್ಲಿ ಕಲಿಯದೆ ಆಟವಾಡಿ ಸಮಯ ಕಳೆದ ಕಾರಣ ಈಗ ಶಾಲೆಗೆ ಹೋಗಲು ಮಕ್ಕಳಿಗೆ ಮನಸ್ಸು ಇರಲಿಲ್ಲ. ಅವರ ಪೋಷಕರು ಕೆಲಸಗಳಿಗೆ ಹೋಗಿದ್ದ ಕಾರಣ ಸುಮತಿ ಏನೂ ಮಾಡುವಂತೆ ಇರಲಿಲ್ಲ. ಆದರೂ ತೋಟದ ಒಳಗೆ ಹೋಗಿ ಬಚ್ಚಿ ಕುಳಿತಿದ್ದ ಮಕ್ಕಳನ್ನು ಕೂಗಿ ಕರೆದಳು. ಸುಮತಿ ಎಷ್ಟೇ ಕರೆದರು ಆ ಮಕ್ಕಳು ಬರಲಿಲ್ಲ. ಶಾಲೆಯಲ್ಲಿ ಆಟವನ್ನು ಆಡಿಸುತ್ತೇನೆ ಎಂದು ಹೇಳಿ ಪುಸಲಾಯಿಸಿ ಕೈಗೆ ಸಿಕ್ಕ ಕೆಲವು ಮಕ್ಕಳನ್ನು ಕರೆತಂದಳು. ಆದರೂ ಎಲ್ಲಾ ಮಕ್ಕಳು ಬರಲಿಲ್ಲ ನಾಲ್ಕೈದು ಮಕ್ಕಳು ಮಾತ್ರ ಸುಮತಿಯ ಜೊತೆ ಶಾಲೆಗೆ ಬಂದಿದ್ದರು. 10 ಮಕ್ಕಳು ಕೂಡ ಶಾಲೆಯಲ್ಲಿ ಇರಲಿಲ್ಲ. ಸಲ್ಪ ಸಮಯದ ಬಳಿಕ ರೈಟರ್ ಶಾಲೆಯ ಬಳಿ ಬಂದರು. ಮಕ್ಕಳ ಸಂಖ್ಯೆ ಕಡಿಮೆ ಇದ್ದಿದ್ದನ್ನು ಕಂಡು….. “ಏನು ಸುಮತಿಯವರೇ ಇಷ್ಟು ಮಕ್ಕಳು ಮಾತ್ರ ಶಾಲೆಗೆ ಬರುವುದಾ?… ಇನ್ನುಳಿದ ಮಕ್ಕಳು ಎಲ್ಲಿ? ಸ್ವಲ್ಪ ಮಕ್ಕಳಾದರೂ ಬಂದರೆ ನಿಮಗೆ ಸಂಬಳ ಕೊಟ್ಟು ಸಾಹುಕಾರರು ಇಲ್ಲಿ ಕೆಲಸಕ್ಕೆ ಇಟ್ಟಿರುವುದಕ್ಕೆ ಒಂದು ಅರ್ಥವಿದೆ…. ಹೀಗಾದರೆ ನಾನು ಶಾಲೆಯನ್ನು ಮುಚ್ಚಿಸಲು ಸಾಹುಕಾರರಿಗೆ ಹೇಳಬೇಕಾಗುತ್ತದೆ…. ಎಂದು ಕೋಪದಿಂದ ನುಡಿದರು. ಅವರ ಮಾತನ್ನು ಕೇಳಿದ ಸುಮತಿ ಅಂಜುತ್ತಲೇ “ಸರ್ ನಾನು ನಿನ್ನೆಯಷ್ಟೇ ಬಂದಿದ್ದೇನೆ…. ಒಂದು ತಿಂಗಳು ರಜೆ ಇದ್ದ ಕಾರಣ ಮಕ್ಕಳು ಆಟವಾಡುತ್ತಾ ಸಮಯ ಕಳೆದಿದ್ದಾರೆ… ಈಗ ಮಕ್ಕಳಿಗೆ ಶಾಲೆಯ ಕಡೆಗೆ ಬರೋದಕ್ಕೆ ಸ್ವಲ್ಪ ಕಷ್ಟ ಅನಿಸುತ್ತಿದೆ…. ಖಂಡಿತ ನಾಳೆಯಿಂದ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಬರುತ್ತಾರೆ…. ಎಂದಳು. ಸುಮತಿಯ ಮಾತನ್ನು ಕೇಳಿದ ರೈಟರ್….” ನೀವು ಶಾಲೆಗೆ ಬರುವ ಮುನ್ನ ಮಕ್ಕಳ ಮನೆಗೆ ಹೋಗಿ ಮಕ್ಕಳನ್ನು ಜೊತೆಗೆ ಕರೆದುಕೊಂಡು ಬನ್ನಿ”…. ಎಂದರು.
“ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬರೆದಿದ್ದರೆ ಸಾಹುಕಾರರು ಸುಮ್ಮನೆ ನಿಮಗೆ ಸಂಬಳ ಕೊಟ್ಟಂತಾಗುತ್ತದೆ”…. ಎಂದು ಹೇಳಿ ತಾವು ಕೈಯಲ್ಲಿ ಹಿಡಿದಿದ್ದ ಕೋಲನ್ನು ನೆಲಕ್ಕೆ ಕುಟ್ಟುತ್ತಾ ಅಲ್ಲಿಂದ ಹೊರಟು ಹೋದರು. ರೈಟರ್ ಹೇಳಿದ ಮಾತುಗಳನ್ನು ಕೇಳಿದ ಸುಮತಿಗೆ ಮನದಲ್ಲಿ ಬಹಳ ಆತಂಕವಾಯಿತು. ಮಕ್ಕಳು ಸಹಜವಾಗಿ ಸ್ವಲ್ಪ ದಿನ ಶಾಲೆ ಇಲ್ಲದಿದ್ದರೆ ಬರಲು ಹಿಂದೇಟು ಹಾಕುತ್ತಾರೆ. ಹೇಗಾದರೂ ಮಾಡಿ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರಲೇ ಬೇಕು ಎಷ್ಟೇ ಕಷ್ಟವಾದರೂ ಸರಿಯೇ ಎಂದು ಮನದಲ್ಲಿ ಅಂದುಕೊಳ್ಳುತ್ತಾ ಅಂದು ಪ್ರಾರ್ಥನೆ ನಂತರ ಸ್ವಲ್ಪ ಹೊತ್ತು ಅಕ್ಷರಾಭ್ಯಾಸ ಮಾಡಿಸಿ ನಂತರ ಮಕ್ಕಳನ್ನು ಆಡಲು ಬಿಟ್ಟಳು. ಟೀಚರ್ ತಮ್ಮನ್ನು ಆಡಲು ಬಿಟ್ಟಿದ್ದೆ ಮಕ್ಕಳಿಗೆ ಬಹಳ ಖುಷಿಯಾಯಿತು. ಅಂದು ಮಧ್ಯಾಹ್ನದವರೆಗೆ ಶಾಲೆ ನಡೆಸಿ ಮಕ್ಕಳನ್ನು ಮನೆಗೆ ಕಳುಹಿಸಿದಳು. ಮನೆಗೆ ಬಂದ ನಂತರ ರೈಟರ್ ಹೇಳಿದ ಮಾತುಗಳು ಅವಳನ್ನು ಚಿಂತೆಗೀಡು ಮಾಡಿತು. ತನಗೆ ಬದುಕಲು ಇದೊಂದೇ ಮಾರ್ಗವಿರುವುದು ದೇವರೇ ಈ ಮಾರ್ಗವು ಮುಚ್ಚಿ ಹೋಗದಂತೆ ನೋಡಿಕೋ. ಮಕ್ಕಳು ಆದಷ್ಟು ಶಾಲೆಗೆ ಬರುವಂತೆ ಅವರಿಗೆ ಮನಸ್ಸು ಕೊಡು ದೇವರೇ ಎಂದು ದೇವರಲ್ಲಿ ಬೇಡಿಕೊಳ್ಳುತ್ತಾ ಮನೆಯ ಕೆಲಸವನ್ನೆಲ್ಲ ಬೇಗನೆ ಮಾಡಿ ಮುಗಿಸಿದಳು. ಸಂಜೆ ಕೂಲಿ ಕೆಲಸಗಾರರು ಮನೆಗೆ ಬರುವ ಹೊತ್ತಾದ ಮೇಲೆ ಹಿಂದಿನ ದಿನದಂತೆ ಅವರ ಮನೆಗಳ ಕಡೆಗೆ ನಡೆದಳು. ಪೋಷಕರಲ್ಲಿ ವಿನಂತಿಸಿಕೊಂಡಳು ಆದರೆ ಪೋಷಕರು…”ನಾವೇನು ಮಾಡುವುದು ಟೀಚರಮ್ಮ…ಬೆಳಗ್ಗೆ ನಾವು ಕೆಲಸಕ್ಕೆ ಹೋಗುತ್ತೇವೆ… ಸಂಜೆಯ ವೇಳೆಗೆ ಬಳಲಿ ಮನೆಗೆ ಬಂದಿರುತ್ತೇವೆ….ಮಕ್ಕಳು ಶಾಲೆಗೆ ಬಂದರೋ ಇಲ್ಲ ಮನೆಯಲ್ಲಿ ಇದ್ದರೋ ಎಂಬುದು ನಮಗೆ ತಿಳಿದಿರುವುದಿಲ್ಲ. ಹಾಗಾಗಿ ಮಕ್ಕಳು ಶಾಲೆಗೆ ಬಂದು ಅಕ್ಷರ ಅಭ್ಯಾಸ ಮಾಡುವಂತೆ ನೀವಾಗಿಯೇ ಏನಾದರೂ ಒಂದು ವ್ಯವಸ್ಥೆ ಮಾಡಿಕೊಳ್ಳಿ”… ಎಂದು ಕೈ ಚೆಲ್ಲಿಬಿಟ್ಟರು.





ಚೆಂದದ ಪ್ರಕಟಣೆಗೆ ಹೃತ್ಪೂರ್ವಕ ಧನ್ಯವಾದಗಳು ಸರ್