ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ಗಜಲ್

ನಿನಗಾಗಿ ನಿನ್ನನು ಬಿಟ್ಟಿರುವೆನೀ ಖುಷಿಯಿಂದಿರು
ನನ್ನಗುವನು ನಾ ನಗುತ ಕೊಂದಿರುವೆ ನೀ ಸಂತಸದಿಂದಿರು
ನೀ ಕೇಳುವುದು ಹೆಚ್ಚೋ , ನಾ ಕೊಡುವುದು ಹೆಚ್ಚೋ ಹೇಳು ಗೆಳೆಯ
ಅನುನಯಿಸಿ ಬೇಡಿದ ಅಂತರವನು, ಅನುರಾಗದಿ ನೀಡಿರುವೆ ನೀ ಆನಂದದಿಂದಿರು
ನಾ ಕೇಳದಿದ್ದರೂ ನಗುತ , ನೀ ನಲಿವು ನೀಡಿದಕೆ ಎಂದೆಂದಿಗೂ ಆಭಾರಿ
ನೀ ಕಾಣಿಕೆಯಾಗಿ ಕೇಳಿರುವೆಯೆಂದು ದೂರಾಗಿರುವೆ ನೀ ಸುಖದಿಂದಿರು
ಭಾರವಿಳಿಸುವವು ನಿನ್ನ ಮಾತುಗಳೆನ್ನುತಾ, ಭಾರವಾಗುತಿರುವಂತೆ ಬದಲಾಗುತ ನಡೆದೆ
ನಿನ್ನನು ಹಗುರಾಗಿಸಲೆಂದೇ ಮೌನವಾಗಿರುವೆ ನೀ ನೆಮ್ಮದಿಯಿಂದಿರು
ಬಯಸದ ಸ್ನೇಹವನು , ಬಯಸಿ ಬಯಸಿ ನೀಡಿ ಬೇಡವಾದಳು ವಾಣಿ
ಅಭಿಮಾನ ಉಳಿಯಲೆಂದು ಅಭಿನಂದಿಸುತ ಬದಲಾಗಿರುವೆ ನೀ ನಿಷ್ಚಿಂತೆಯಿಂದಿರು

ವಾಣಿ ಯಡಹಳ್ಳಿಮಠ



