ಪ್ರೀತಿ ಸಂಗಾತಿ
ಶಾರದಾಜೈರಾಂ ಬಿ.
́ಪ್ರೀತಿ ಒಂದಿದ್ದರೆ ಸಾಲದು
ಪರಿಪಕ್ವತೆಯು ಬೇಕುʼ


ಪ್ರಸ್ತುತ ದಿನಗಳಲ್ಲಿ ನಾವು ನೋಡುತ್ತಿರುವ,ಓದುತ್ತಿರುವ ದೈನಂದಿನ ಪತ್ರಿಕೆಗಳಲ್ಲಿ, ಟಿವಿಗಳಲ್ಲಿ ಬರೀ ಆಘಾತಕಾರಿ,ಹೀಗೂ ಇರುವರೆ, ಸಂಬಂಧಗಳಲ್ಲಿ ಶಿಥಿಲತೆ ಸುದ್ದಿಗಳೇ ತುಂಬಿರುತ್ತವೆ
ಪ್ರೀತಿ ಪ್ರೇ.ಮ ಎಂಬ ವಿಚಾರ ತಂದೆ, ತಾಯಿ,ಸೋದರ ಸಂಬಂಧ,ಪ್ರೇಮಿಗಳದ್ದು,ದಂಪತಿಗಳ ಮಧ್ಯೆ ಹಲವಾರು ಕೌಟುಂಬಿಕ ಕಾರಣಗಳಿಂದ ಉಂಟಾದ ಮನಸ್ತಾಪ,ವಿರಸ,ಕಲಹ ಅತಿಯಾಗಿ ಅಜ್ಞಾನದಿಂದ,ಕೋಪದ ನಿಯಂತ್ರಣ ಇಲ್ಲದೆ ಕೊಲೆಗಳ ರೂಪ ತಳೆದು ಸ್ವಾಸ್ಥ್ಯ ಸಮಾಜದ ಸೌಖ್ಯ ಹಾಳುಗೆಡವಿವೆ ಮತ್ತು ಸಮಾಜದ ಸೌಹಾರ್ದತೆ ಮರೆಯಾಗುತ್ತಿದೆ ಕವಿ ನುಡಿಯಂತೆ ಮನುಷ್ಯ ಮನುಷ್ಯನಾಗಿ ಬದುಕಲು ಹರಸಾಹಸವಾಗಿದೆ̤ಮೊದಲೆಲ್ಲಾ
ಎರಡು ಹೆಸರು
ಒಂದೇ ಉಸಿರು
ನಾನು ಪತಿ ನೀನು ಸತಿ
ಒಂದೇ ದಂಪತಿ ಎಂಬಂತೆ ಇತ್ತು ಬಾಂಧವ್ಯ
ಪ್ರೇಮಿಸುವವರ ಪ್ರೀತಿಯೇ ಆಗಲಿ ಪ್ರಾಮಾಣಿಕ, ನನಗಾಗಿ ನೀನು, ನಿನಗಾಗಿ ನಾನು ಯಾವುದೇ ನೋವು,ಕಷ್ಟ ಸಹಿಸುವೆ ಎಂಬಂತ ತ್ಯಾಗ, ಸಮರ್ಪಣೆ ಭಾವ ಸ್ಪುರಿಸುತ್ತಿತ್ತು.
ಎಲ್ಲಾ ಸಂಬಂಧಗಳ ನಡುವೆ ಗಾಢವಾದ ಸೆಳೆತ,ಪರಸ್ಪರ ಗೌರವ,ಬಲವಾದ ನಂಬಿಕೆಗಳಿದ್ದವು.
ದಿನವೂ ದೂರದರ್ಶನದಲ್ಲಿ ಪ್ರಸಾರವಾಗುವ ಧಾರಾವಾಹಿಗಳ ವಿಷಯಕ್ಕೆ ಬಂದರೆ ಅವು ಇಡೀ ಕುಟುಂಬ ಕುಳಿತು ನೋಡುವಂತವೇ?ನಾಯಕನಿಗೆ ಪತ್ನಿ, ಜೊತೆಯಲ್ಲಿ ಇನ್ನೊಂದು ಅನೈತಿಕ ಸಂಬಂಧ,ಹೆಣ್ಣನ್ನೇ ಖಳನಾಯಕಿಯನ್ನಾಗಿ ಚಿತ್ರಿಸಿ, ನಾಯಕಿಯನ್ನು ಕೊಲೆ ಮಾಡುವದು ಬಲು ಸುಲಭ ಹಾಗೇಯೇ ಅದಕ್ಕೆ ನೆರವಾಗುವ ಪಾತ್ರಗಳ ಚಿತ್ರಣ ಅದನ್ನು ಕಣ್ಣು,ಕಿವಿ ಅತ್ತ ನೆಟ್ಟು ನೋಡುವ ಹೆಣ್ಣು ಮಕ್ಕಳ ಸಮೂಹ.ನಿಜಕ್ಕೂ ನಾಚಿಕೆಗೇಡಿನ ಸಂಗತಿ ಸದಭಿರುಚಿ ಧಾರಾವಾಹಿ ಮರೀಚಿಕೆಯೇ ಸರಿ.ಎಲ್ಲಾ ಧಾರಾವಾಹಿಗಳ ಸಾರ ಒಂದೇ ಆದರೆ ತೋರಿಸುವ ಮಾದರಿ ವಿಭಿನ್ನ ಇದನ್ನು ಪ್ರಸ್ತಾಪಿಸಲು ಕಾರಣ ನಾವು ಏನು ಯೋಚಿಸುತ್ತೇವೋ,ಏನು ನೋಡುತ್ತೇವೊ ಅವು ಪ್ರಭಾವ ಬೀರುತ್ತವೆ.ಧಾರಾವಾಹಿ ನಿರ್ದೇಶಕರು ಏಕೆ ಈ ತರದ ವಸ್ತುವಿನ ಧಾರಾವಾಹಿ ಮಾಡುತ್ತಾರೆ ಎನ್ನುವಾಗ ನೋಡುಗರ ಅಭಿರುಚಿಗೆ ತಕ್ಕಂತೆ ಅವರು ಚಿತ್ರಿಸುತ್ತಾರೆ ಅಂದ ಮೇಲೆ ನಿಮ್ಮ ನಡೆ ನುಡಿ ಅದನ್ನು ಬೆಂಬಲಿಸುತ್ತಿದೆ ಒಪ್ಪಿಕೊಂಡಿದೆ ಎಂದಥ೯ ಅಲ್ಲವೇ?
ಬದುಕಿನಲ್ಲಿ ವಿವಾಹ ಎನ್ನುವುದು ಬಹುಮುಖ್ಯ ಘಟ್ಟವೇ ಬಹುತೇಕರು ವಂಶೋದ್ಧಾರಕ್ಕೆ, ಕೆಲವರು ದೈಹಿಕ ಅಗತ್ಯತೆ, ಕೆಲವರು ಆಗದೇ ಇದ್ದರು ಕೇಳುವವರ ಕಾಟಕ್ಕೆ ಮದುವೆಯ ಬಂಧನಕ್ಕೆ ಸಿಲುಕುತ್ತಾರೆ.
ಅದು ಎಲ್ಲರ ಪಾಲಿಗೂ ಹೂವಿನ ಹಾಸಿಗೆ ಏನಲ್ಲ ಹಾಗಂತ ಕಡುಕಷ್ಟವೂ ಅಲ್ಲ.ಒಬ್ಬರಿಗೊಬ್ಬರು ಪರಸ್ಪರ ಅರಿತು, ಬೆರೆತು ಬದುಕ ಸಾಗಿಸುವಾಗ ಎದುರಾಗುವ ಸಂಕಷ್ಟಗಳಿಗೆ ಪರಸ್ಪರ ಸಾವಧಾನವಾಗಿ ಯೋಚಿಸಿ ನಿರ್ಧರಿಸಿ ನಡೆಯಬೇಕು.

ಇಲ್ಲಿ ಸಂವಹನದ ಕೊರತೆಯೇ ನ್ಯೂನತೆಯಾಗಿದೆ ಒಬ್ಬರನ್ನೊಬ್ಬರು ಸಮಸ್ಯೆಗೆ ಕಾರಣ ಏನು ಅದು ತಿದ್ದಿಕೊಳ್ಳಲು ಸಾಧ್ಯವಾದರೆ ತಿದ್ದಿಕೊಂಡು ನಡೆಯೋಣ ಎನ್ನುವ ಮನೋಭಾವ ಮರೆಯಾಗಿ ನಾನು ಎಂಬ ಅಹಂ ಅತಿಯಾಗಿ ಸಂಬಂಧಗಳು ದೂರವಾಗುತ್ತಿವೆ.ವಿವಾಹಗಳೇ ಆಗಲಿ ವಿಚ್ಛೇದನದಲ್ಲಿ ಕೊನೆಗಾಣುತ್ತಿವೆ ಇಂದಿನ ದಿನಗಳಲ್ಲಿ.
ಹೌದು ಪ್ರೀತಿಸಿ ಮದುವೆಯಾದ, ಹಿರಿಯರು ನಿಶ್ಚಯಿಸಿದ ವಿವಾಹವೇ ಆಗಲಿ ಎರಡರಲ್ಲೂ ವಿಚ್ಛೇದನ ಪ್ರಕರಣ ಹೆಚ್ಚಾಗಿವೆ.
ಕೆಲವೊಂದು ವಷ೯ಗಳು ಚೆನ್ನಾಗಿ ಸಂಸಾರ ಸಾಗಿಸಿರುತ್ತಾರೆ (ಈಗ ವಿವಾಹವಾಗಿ ತಿಂಗಳುಗಳಲ್ಲಿ ವಿಚ್ಛೇದನ ಬಯಸುವವರಿದ್ದಾರೆ) ಇಲ್ಲಿ ಸವೆ೯ಸಾಮಾನ್ಯವಾಗಿ ಕೇಳಿ ಬರುವ ದೂರು ಪ್ರೀತಿ ಇಲ್ಲ,ಸಮಯ ನೀಡೊಲ್ಲ,ಮೊದಲಿನ ತರ ಮಾತಾಡೋದು ಇಲ್ಲ, ಬೇರೆಲ್ಲೂ ಕರೆದುಕೊಂಡು ಹೋಗುವುದಿಲ್ಲ ಎಂದು ಹೆಣ್ಣಿನ ಆರೋಪಗಳು.
ಅದೇ ಗಂಡಾದರೆ ಕೆಲಸದ ಒತ್ತಡ, ಮನೆಗೆ ಬಂದರೆ ಇಲ್ಲೂ ನೆಮ್ಮದಿ ಇಲ್ಲ ಎಂಬ ಆರೋಪ, ಮಾತಿಗೆ ಮಾತು ಬೆಳೆದು ವಾಗ್ವಾದ,ನನ್ನ ಮಾತಿಗೆ ಬೆಲೆ ಇಲ್ಲ ಎಂಬ ಪುರುಷ ಅಹಂ ಕೆಲವೊಮ್ಮೆ ಹೆಣ್ಣಿನ ಮೇಲೆ ಕೈ ಮಾಡಿ, ಹೊಡೆದು ಹಿಂಸಿಸುವ ಮಟ್ಟಕ್ಕೂ ಹೋಗಿರುತ್ತಾರೆ.ಹಾಗೇ ಇವನ್ನೇ ನೆಪವಾಗಿಸಿ ಅನೈತಿಕ ಸಂಬಂಧ ಹೊಂದಿರುತ್ತಾರೆ.ಹಾಗೇಯೇ ಹೆಣ್ಣು ಸಹ ತನಗೆ ಕಾಳಜಿ ತೋರುವ ಜೀವಕ್ಕೆ ಹಾತೊರೆಯುತ ಅನ್ಯ ಸಂಬಂಧ ಹೊಂದುತ್ತಾಳೆ ಇದು ಸಾಮಾನ್ಯವಾಗಿದೆ.ಮೊದಲೆಲ್ಲಾ ಹಿರಿಯರ ಮಧ್ಯಸ್ಥಿಕೆ,ಸಂಧಾನ ಇರುತ್ತಿತ್ತು ಈಗ ನಡುಮನೆ ದಾಟಿ, ಬೀದಿ ದಾಟಿ ಕೋರ್ಟು ಕಚೇರಿ ಅಂಗಳದಲ್ಲಿವೆ
ಹೆಣ್ಣೆ ಆಗಲಿ ಗಂಡೇ ಆಗಲಿ ಮೊದಲು ನನ್ನಂತೆ ಒಂದು ಜೀವ ಎಂದು ಭಾವಿಸಿ,ಪರಸ್ಪರ ಗೌರವಿಸಿ,ಸರಿತಪ್ಪುಗಳ ತಿದ್ದಿಕೊಳ್ಳಿ ಅವರ ಆಕಾಂಕ್ಷೆಗೆ ಬೆಲೆ ನೀಡಿ, ಸಣ್ಣ ಪುಟ್ಟ ಕೆಲಸಗಳಿದ್ದರೆ ಇಬ್ಬರೂ ಕೈ ಜೋಡಿಸಿ,ಸಂವಹನ ತುಂಬಾ ಮುಖ್ಯ ಎಲ್ಲೇ ಹೋಗುವಂತಿದ್ದರು ಒಮ್ಮೆ ತಿಳಿಸಿ ಇದು ನಂಬಿಕೆಯ ಅಡಿಪಾಯ.ಇಲ್ಲಾ ಬಿಡುವಾದಾಗ ತಿಳಿಸಿ.ನನಗಿಂತ ಬೇರೆಯವರಿಗೆ ಗೌರವ ಕೊಡುವೆ ಎಂದು ಕೆಲವೊಮ್ಮೆ ಮುನಿಸಾಗುವುದು ಹೌದು ಎಲ್ಲಾ ಸಂಬಂಧಗಳು ಒಂದೇ ಅಲ್ಲ ಅವುಗಳಿಗೆ ಅದರದೇ ಆದ ಬೆಲೆ ಬಾಂಧವ್ಯ ಇರುತ್ತದೆ ಎಂದು ಅರ್ಥಮಾಡಿಕೊಂಡರೆ ಬದುಕು ಸಲೀಸು ಸರಾಗ.
ಇಬ್ಬರೂ ಸಹ ಅವರಿಷ್ಟದ ಬದುಕು ಅಂದರೆ ವೃತ್ತಿ ಜೀವನ,ಸಮಾಜಮುಖಿ ಜೀವನ ಕಟ್ಟಿಕೊಳ್ಳಲು ಬೆಂಬಲವಾಗಿದ್ದಾಗ ಘಷ೯ಣೆ ತಪ್ಪುವವು.ಅಹಂ ಇರದ ಸಂಬಂಧ ಕೊನೆಯವರೆಗೂ ಇರುವುದು, ಒಬ್ಬರನ್ನೊಬ್ಬರು ಅರಿತಾಗ ಬದುಕು ಸರಳವೇ.ಇಂದಿನ ದಿನಗಳಲ್ಲಿ ಆಕರ್ಷಣೆ, ಆಮಿಷಗಳಿಗೆ ಬಲಿಯಾಗಿ ಚೆಂದ ಬದುಕಬಹುದಾದ ಜೀವನ ದುಃಖಕರ ಮಾಡಿಕೊಳ್ಳುವರು.ಗೋಪಾಲಕೃಷ್ಣ ಅಡಿಗರ ನುಡಿಯಂತೆ *ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವುದಿ ಮನ* ಎಂಬಂತೆ ಇಲ್ಲದುದರೆಡೆಗೆ ತುಡಿಯದೇ ಇರುವುದ ಒಪ್ಪಿಕೊಂಡು ಬದುಕಿದರೆ ಬದುಕು ಅಸಹ್ಯವಾಗುವ ಬದಲು ಸಹ್ಯವಾಗುವುದು.ಒಂದೇ ಬದುಕು, ಬದುಕು ಎಂದ ಮೇಲೆ ನಲಿವು ನೋವು ಇದ್ದಾಗಲೇ ಅವುಗಳ ಬೆಲೆ ತಿಳಿಯುವುದು
*ನರಕದಲ್ಲಿ ನಾಕವನ್ನೇ
ನೀ ಸೃಜಿಸಿ ಬಲ್ಲೆ
ನಾಕವನು ನಿಂತಲ್ಲೇ
ನರಕವಾಗಿಸಬಲ್ಲೇ*
ಈ ನುಡಿಗಳಂತೆ ಬದುಕು ನಾಕ,ನರಕವಾಗಿಸಿಕೊಳ್ಳುವುದು ನಮ್ಮ ಕೈಲಿದೆ, ನಮ್ಮ ನಿರ್ಧಾರಗಳಲ್ಲಿದೆ, ನಮ್ಮ ಕಾರ್ಯಗಳಲ್ಲಿದೆ ಅದಕ್ಕೂ ಮೀರಿ ಕೆಲವೊಮ್ಮೆ ಬದುಕಿನ ತಿರುವುಗಳಲ್ಲಿ ಅನಿರೀಕ್ಷಿತ ಆಘಾತ ಆಗುವವು ಅದನ್ನು ಆತ್ಮಸ್ಥೈರ್ಯದಿಂದ ಎದುರಿಸಿ ಬದುಕು ಎಲ್ಲ ನೀಡಿರುವಾಗ ಪಡೆದ ನಾವು ನಮ್ಮಿಂದಾಗಬಹುದಾದಷ್ಟು ಹಿಂತಿರುಗಿಸಲು ಪ್ರಯತ್ನಿಸೋಣವೇ?
ಶಾರದಜೈರಾಂ.ಬಿ




ಅದ್ಬುತ ಲೇಖನ ಅರ್ಥಗರ್ಭಿತವಾಗಿದೆ