ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹೃದಯವೇ ಬಯಸಿದೆ ನಿನ್ನನು….. ಹೀಗೊಂದು ಹೃದಯದ ಪತ್ರ

ನನ್ನ ಪ್ರೀತಿಯ ದಾತನೇ,
 ಹೇಗಿರುವೆ? ಎಂದು ನಾನು ಕೇಳುವುದಿಲ್ಲ. ನಿನ್ನೊಳಗಿದ್ದು ನಿನ್ನನ್ನು ಅರಿಯದೆ ಇರುವವನು ನಾನಲ್ಲ. ನಿನ್ನಲ್ಲಾಗುವ ಕ್ಷಣ ಕ್ಷಣದ ಬದಲಾವಣೆಗಳು ನನಗೆ ಗೊತ್ತು. ನಿನ್ನಮ್ಮನ ಹೊಟ್ಟೆಯಲ್ಲಿ ನೀನಿದ್ದಾಗಿನಿಂದಲೂ ನಾನು ನಿನ್ನೊಂದಿಗೆ ಇದ್ದೇನೆ…. ನೀನು ಕೊನೆಯ ಉಸಿರು ಎಳೆಯುವವರೆಗೆ ನಾನು ನಿನ್ನೊಂದಿಗೆ ಇರುತ್ತೇನೆ. ನಿನಗಾಗಿ ನಾನು ದಿನದ 24 ಗಂಟೆ ಅವಿರತವಾಗಿ ಮಿಡಿಯುತ್ತಾ ಕಾರ್ಯನಿರ್ವಹಿಸುತ್ತೇನೆ….ಆದರೆ ನನಗಾಗಿ ನೀನು ದಿನಕ್ಕೆ ಕೇವಲ ಒಂದು ಗಂಟೆ ಕೆಲಸ ಮಾಡಲು ಒಲ್ಲೆ ಎಂದರೆ ಹೇಗೆ?

 ನೀನಿದ್ದರೆ ನಾನು, ನಾನಿದ್ದರೆ ನೀನು.. ನಮ್ಮಿಬ್ಬರ ಜೋಡಿ ಹಾಲು ಜೇನು ಎಂಬುದು ನಮ್ಮಿಬ್ಬರಿಗೂ ಗೊತ್ತಲ್ಲವೇ? ನೀನಿಲ್ಲದೆ ನನಗೆ ಬದುಕಿಲ್ಲ ಮತ್ತು ನಾನಿಲ್ಲದೆ ನಿನಗೂ ಕೂಡ ಎಂಬುದರ ಅರಿವಿದ್ದು ಕೂಡ ನೀನು ನನಗಾಗಿ ಒಂದು ಕ್ಷಣವೂ ಮಿಡಿಯುವುದಿಲ್ಲ ಎಂಬುದೇ ನನಗೆ ನೋವಿನ ಸಂಗತಿ.

 ಇನ್ನು ನಿನ್ನಂತಹ ಜನರ ಬಗ್ಗೆ ಹೇಳುವುದಾದರೆ ನನ್ನನ್ನು ಬಹಳ ಜನ ತಪ್ಪು ತಿಳಿದುಕೊಂಡಿದ್ದಾರೆ. ತಮ್ಮ ಮನಸ್ಸಿಗೆ ತೋಚಿದಂತೆ ನನ್ನನ್ನು ಬಳಸಿಕೊಳ್ಳುತ್ತಾರೆ. ತಮಗೆ ಯಾರ ಮೇಲಾದರೂ ಮನಸ್ಸಾದರೆ ನಾನು ಕಳೆದು ಹೋದೆ ಎಂದು ಹೇಳುತ್ತಾರೆ. ಅವರು ಇವರನ್ನು ಒಪ್ಪಿದರೆ, ಐ ಲವ್ ಯು ಎಂದು ಹೇಳಿದರೆ ನನ್ನನ್ನು ಹಿಡಿದುಕೊಂಡು ಸಂತಸದಿಂದ ಹಾರಾಡುತ್ತಾರೆ. ಅವರೊಂದಿಗೆ ಒಡನಾಡುವಾಗ, ಪ್ರೀತಿ ಪ್ರೇಮದ ಮಾತನಾಡುವಾಗ ನಾನೇ ಸಂತಸದಿಂದ ಕಳೆದು ಹೋಗಿದ್ದೇನೆ ಎಂದು ಹೇಳುವರು. ಅಕಸ್ಮಾತ್ ಅವರೇನಾದರೂ ಕೈ ಕೊಟ್ಟರೆ ತಮ್ಮೊಳಗಿರುವ ನಾನು ಒಡೆದು ಹೋದೆ ಎಂದು ಹೇಳುತ್ತಾರೆ. ಜೀವನವೇ ಮುಗಿದು ಹೋಯಿತು ಎಂಬಂತೆ ಒದ್ದಾಡುತ್ತಾರೆ. ಮತ್ತೆ ಕೆಲ ಜನ ಮುನ್ನಡೆದು ಬೇರೊಬ್ಬರನ್ನು ಪ್ರೀತಿಸಿ ಇಲ್ಲವೇ ಮದುವೆಯಾಗಿ ಅವರನ್ನು ನನ್ನಲ್ಲಿ ಇಟ್ಟು ಪೂಜಿಸುತ್ತಾರೆ, ಆರಾಧಿಸುತ್ತಾರೆ.

ಇನ್ನು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರು ನಾನು ಒಡೆದು ಹೋಗುವಂತೆ ಅತ್ತು ಕರೆದು ಒದ್ದಾಡುತ್ತಾರೆ. ಬಹಳ ದಿನಗಳ ಕಾಲ ನನ್ನ ಬೇನೆಯಿಂದ ಮಾನಸಿಕವಾಗಿ ನೋಯುತ್ತಾರೆ ಮತ್ತೆ ದಿನಗಳೆದಂತೆ ಸುಧಾರಿಸಿಕೊಂಡು ಬದುಕಿನಲ್ಲಿ ಮುನ್ನಡೆಯುತ್ತಾರೆ.

ಈಗ ನಿಮಗೆ ಅರ್ಥವಾಗಿರಬಹುದು ನಾನಾರೆಂದು?
ಜಾಣರು ನೀವು! ನಿಮ್ಮ ಊಹೆ ನಿಜ…. ಹೌದು ನಾನು ನಿಮ್ಮ ದೇಹದ ಅತ್ಯಂತ ಪ್ರಮುಖ ಅಂಗ ಹೃದಯ…. ನೀವು ಹೇಳುವ ಹಾಗೆ ನಿಮ್ಮ ದಿಲ್, ನಿಮ್ಮ ಲವ್ ನಿಮ್ಮ ಪ್ರೀತಿ ಎಲ್ಲವೂ.

ನೋಡುವವರ ಪಾಲಿಗೆ ನಾನೊಂದು ಅಂಗ ಆದರೆ ನನ್ನ ಕೆಲಸ ನೀನು ಹುಟ್ಟಿದಾಗಿನಿಂದ ಸಾಯುವವರೆಗೆ ನಿನಗಾಗಿ ಮಿಡಿಯುತ್ತಲೇ ಇರುವುದು. ಆಮ್ಲಜನಕವನ್ನು ಹೊಂದಿದ ಶುದ್ಧ ರಕ್ತವನ್ನು ದೇಹದ ಎಲ್ಲ ಪ್ರಮುಖ ಅಂಗಗಳಿಗೆ, ದೇಹದ ಎಲ್ಲ ಭಾಗಗಳಿಗೆ ಸರಬರಾಜು ಮಾಡುವುದು, ದೇಹದಲ್ಲಿ ಸಂಗ್ರಹವಾದ ಅಶುದ್ಧ ರಕ್ತವನ್ನು ಶ್ವಾಸಕೋಶಗಳಿಗೆ ಕಳುಹಿಸುವುದು ನನ್ನ ಮುಖ್ಯ ಕೆಲಸ. ಇನ್ನು ನನ್ನ ಮೇಲಿರುವ ಪುಟ್ಟ
ಎಸ ಎ (ಸೈನೋ ಎಟ್ರಿಯಲ್) ನೋಡ್ ನ್ನು ಪ್ರತಿ ಬಾರಿ
 ಅದುಮುವ ಮೂಲಕ ರಕ್ತವನ್ನು ಪಂಪ್ ಮಾಡುವ ಕೆಲಸ ಕೂಡ ನನ್ನದೇ. ಎಲ್ಲವನ್ನೂ ನಾನು ನಿರ್ವಂಚನೆಯಿಂದ ಮಾಡುತ್ತೇನೆ ನಿಜ ಆದರೆ ನನ್ನ ಮೇಲೆ ಹೊರಿಸುವ ಆಪಾದನೆಗಳನ್ನು ಕೇಳಿ ನನಗೆ ಬೇಸರವಾಗುತ್ತದೆ.

 ನನ್ನ ಹೃದಯಕ್ಕೆ ಪ್ರೀತಿಯಾಗಿದೆ, ನನ್ನ ಹೃದಯಕ್ಕೆ ಮೋಸವಾಗಿದೆ, ನನ್ನ ಹೃದಯಕ್ಕೆ ನೋವಾಗಿದೆ, ನನ್ನ ಹೃದಯ ಮುರಿದುಹೋಯಿತು, ನನ್ನ ಹೃದಯ ಒಡೆದು ಹೋಯಿತು, ನನ್ನ ಹೃದಯಕ್ಕೆ ಬೇಸರವಾಯಿತು…. ಅಯ್ಯೋ ಸ್ವಾಮಿ ಇದಾವುದೂ ನನ್ನ ಕೆಲಸವಲ್ಲ. ನಾನು ಅಪ್ಪಟ ಹೃದಯ. ಇದೆಲ್ಲಾ ಮೆದುಳುನಲ್ಲಿರುವ ಭಾವನಾತ್ಮಕ ನರಮಂಡಲದ  ಕೆಲಸ. ಈ ಭಾವನಾತ್ಮಕ ನರಮಂಡಲವು ತನ್ನೆಲ್ಲ ಭಾವನೆಗಳನ್ನು ಉತ್ಪಾದಿಸಿ ನನ್ನ ಹೆಸರಿನಲ್ಲಿ ಕಳುಹಿಸುತ್ತದೆ ಕೆಲಸ ಮೆದುಳಿನ ಭಾವನಾತ್ಮಕ ನರಕೋಶದ್ದಾದರೆ ಹೆಸರು ಮಾತ್ರ ನನ್ನದು. ಇದು ನನಗೆ ಮಾಡುವ ಅನ್ಯಾಯ ಅಲ್ಲವೇ!

ಅದೂ ಅಲ್ಲದೆ ಕಿಡ್ನಿ ಎಂದು ಸ್ಟೈಲ್ ಆಗಿ ಕರೆಸಿಕೊಳ್ಳುವ ಮೂತ್ರಕೋಶಗಳು ಮಾಡುವ ಅಪಸವ್ಯವನ್ನು ಕೂಡ ನಾನೇ ಸರಿ ಮಾಡಬೇಕು. ಮೂತ್ರಕೋಶವು ತಾನು ಹೊರ ಹಾಕುವ ಕೆಲ ರಾಸಾಯನಿಕಗಳಿಂದ ದೇಹದ ವ್ಯವಸ್ಥೆಯಲ್ಲಿ ರಕ್ತದ ಒತ್ತಡ ಹೆಚ್ಚಾಗುತ್ತದೆ. ಅದನ್ನು ಕಡಿಮೆ ಮಾಡುವ ಕೆಲಸವು ನನ್ನದೇ.

ಇನ್ನು ದಿನದ 24 ಗಂಟೆ ವರ್ಷದ 365 ದಿವಸವು ನಾನು ಒಂದು ನಿಮಿಷಕ್ಕೆ 75 ಬಾರಿಯಂತೆ ಬಡಿದುಕೊಳ್ಳುತ್ತಲೇ ಇರುತ್ತೇನೆ. ಇನ್ನು ಯೋಗ, ವ್ಯಾಯಾಮ, ಜಿಮ್ ನಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಜನರಲ್ಲಿ ನಾನು 90 ರಿಂದ 120ರವರೆಗೆ ಬಡಿದುಕೊಳ್ಳುತ್ತೇನೆ. ಅಬ್ಬ ಒಮ್ಮೊಮ್ಮೆಯಂತೂ  ಇನ್ನೇನು ಸಾಕಾಯಿತು ಬಿಟ್ಟು ಬಿಡಲೇ ಎಂಬಷ್ಟು ಭಯ ಉಂಟಾದರೂ ಅದು ನನ್ನ ಆರೋಗ್ಯಕ್ಕೆ ಒಳ್ಳೆಯದು ಎಂಬ ಭಾವದಿಂದ ಸುಮ್ಮನಾಗುತ್ತೇನೆ.

 ನೀವು ಮಲಗಿದಾಗಲೂ ನನಗೆ ವಿಶ್ರಾಂತಿ ಇಲ್ಲ….. ತುಸುವೇ ನನ್ನ ಬಡಿತದಲ್ಲಿ ಹೆಚ್ಚು ಕಮ್ಮಿಯಾದರೂ ನನ್ನನ್ನು ದೂರುವ ನೀವುಗಳು ನಿಮ್ಮ ತಪ್ಪನ್ನು ಮಾತ್ರ ಮರೆಯುತ್ತೀರಿ.

 ಇಷ್ಟೆಲ್ಲಾ ನಿಮ್ಮ ಕಾಳಜಿ ಮಾಡುವ ನನಗೆ, ನನ್ನ ಕಾಳಜಿಯನ್ನು ನೀವೆಂದಾದರೂ ಮಾಡಿದ್ದರೆ ತಾನೇ?
ನಿಮ್ಮೆಲ್ಲಾ ನೋವು ಸಂಕಟಗಳನ್ನು ನೀವು ಅನುಭವಿಸುವುದಲ್ಲದೆ ನನಗೆ ಕೂಡ ನೋವನ್ನುಂಟು ಮಾಡುತ್ತೀರಿ… ಅದರ ಪರಿಣಾಮವೇ ನನ್ನಲ್ಲಿ ಒತ್ತಡ, ಬೇನೆ ಮುಂತಾದ ತೊಂದರೆಗಳು ಆರಂಭವಾಗುವುದು.

ನೀವು ನಿಯಮಿತವಾಗಿ ಆಹಾರ ಸೇವನೆ, ವ್ಯಾಯಾಮ, ನಡಿಗೆಯಂತಹ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ ನಾನು ನೂರು ವರ್ಷ ನಿಮ್ಮೊಂದಿಗೆ ಇರುವುದರಲ್ಲಿ ಯಾವುದೇ ತೊಂದರೆ ಇಲ್ಲ. ಆದರೆ ಕೈಗೆ ಸಿಕ್ಕದ್ದನ್ನೆಲ್ಲ ತಿನ್ನುವ, ಕಣ್ಣಿಗೆ ಕಂಡದ್ದನ್ನೆಲ್ಲ ಸೇವಿಸುವ ನಿಮ್ಮ ಆಸೆಯ ಕಾರಣಕ್ಕಾಗಿ ಅನಿಯಮಿತ ಆಹಾರ ಪದ್ಧತಿಯಿಂದಾಗಿ ನನಗೆ ತೊಂದರೆ ಆಗುತ್ತದೆ. ವಿಶ್ರಾಂತಿಯ ಹೆಸರಿನಲ್ಲಿ ಗಂಟೆಗಟ್ಟಲೆ ಕುಳಿತಲ್ಲೇ ಕುಳಿತುಕೊಳ್ಳುವ ನೀವುಗಳು ಮಣಭಾರ ತೂಕವನ್ನು ನಿಮ್ಮೊಳಗೆ ಆಹ್ವಾನಿಸಿಕೊಳ್ಳುತ್ತೀರಿ. ಹೆಚ್ಚು ಹಣ ಗಳಿಸುವ ಹೆಚ್ಚೆಚ್ಚು ಮೂಲಭೂತ ಸೌಕರ್ಯಗಳನ್ನು ಪಡೆಯುವ ಐಷಾರಾಮಿ ಜೀವನವನ್ನು ನಡೆಸುವ ಕನಸು ಕಾಣುವ ನೀವುಗಳು ದುಡಿಯುವುದರಲ್ಲಿ ಅದೆಷ್ಟು ಮಗ್ನರಾಗುತ್ತೀರಿ ಎಂದರೆ ನಿಮಗೆ ಮನೆ, ಮಕ್ಕಳು, ಕುಟುಂಬದ ಪರಿವೆಯೇ ಇರುವುದಿಲ್ಲ. ಇಹ-ಪರಗಳ ಚಿಂತೆ ಇಲ್ಲದ ವ್ಯಕ್ತಿ ಕೇವಲ ಹಣ ಗಳಿಸುವ ಯಂತ್ರವಾದಾಗ ಆತನಲ್ಲಿ ಮಾನವೀಯ ಸಂವೇದನೆಗಳು, ಚಿಗುರಲು ಸಾಧ್ಯವೇ?

ಅಂತೆಯೇ ನಿಮ್ಮ ದೇಹದ ಆರೋಗ್ಯವನ್ನು ಕಡೆಗಣಿಸಿ ನೀವು ವಿಶ್ರಾಂತಿ ಇಲ್ಲದೆ ದುಡಿದು ನನ್ನನ್ನು ಕೂಡ ಸಂಕಷ್ಟಕ್ಕೆ ಸಿಲುಕಿಸುತ್ತೀರಿ. ನಿಮಗಾದರೂ ದಣಿವಾದರೆ ನಿದ್ರೆ ತಂತಾನೆ ಆವರಿಸಬಹುದು…ಆದರೆ ನಾನು ಮಲಗಿದರೆ ನಿಮ್ಮ ಮನೆಯ ಮುಂದೆ ತಮಟೆ ಬಡಿಯಬೇಕು ಅಷ್ಟೇ!

 ಈಗಲೂ ಕಾಲ ಮಿಂಚಿಲ್ಲ. ನಮ್ಮಿಬ್ಬರ ಜೋಡಿ ಹೀಗೆಯೇ ಅವಿರತವಾಗಿ ಕಾರ್ಯನಿರ್ವಹಿಸಲು ಒಂದೊಳ್ಳೆಯ ಬದುಕನ್ನು ಸಾಗಿಸಲು ನೀವುಗಳು ನಿಮ್ಮ ಕೆಲಸ ಕಾರ್ಯಗಳ ಜೊತೆ ಜೊತೆಗೆ ಊಟ ತಿಂಡಿಯ ಕುರಿತು ಕಾಳಜಿ ವಹಿಸಿ, ಆಹಾರ- ವಿಹಾರಗಳಿಗೆ ಆದ್ಯತೆ ನೀಡಿ, ಜೊತೆಗೆ ವಿಶ್ರಾಂತಿಗೂ ಕೂಡ. ಎಲ್ಲವನ್ನು ಮಾಡಲೇಬೇಕು ಎಂದು ವಿಪರೀತ ಒತ್ತಡಕೊಳಗಾಗಿ ಕೆಲಸವನ್ನು ನಿರ್ವಹಿಸಿ ನಂತರ ಅನುಭವಿಸಲು ನೀವೇ ಇಲ್ಲವಾದಾಗ ನೀವು ಅಷ್ಟೆಲ್ಲ ಕೆಲಸಗಳನ್ನು ಮಾಡಿಯೂ ಪ್ರಯೋಜನವೇನು?

ನಿಮ್ಮ ಬದುಕಿನಲ್ಲಿ ಆರೋಗ್ಯ ನಿಮ್ಮ ಜೊತೆ ಇರುವಾಗ ನೀವು ಸಾವಿರಾರು ತೊಂದರೆಗಳನ್ನು ಎದುರಿಸಬಹುದು ನಿಜ,’ಆದರೆ ನಿಮ್ಮ ಆರೋಗ್ಯವೇ ಕೈಕೊಟ್ಟಾಗ? ಆರೋಗ್ಯವೊಂದೇ ಮುಖ್ಯ ಸಮಸ್ಯೆಯಾಗಿ ಕಾಡ ತೊಡಗುತ್ತದೆ. ನಿಮ್ಮಲ್ಲಿರುವ ಹಣ, ಯಶಸ್ಸು, ಸಂಬಂಧಗಳು ಎಲ್ಲವೂ ಅನಾರೋಗ್ಯದ ನೆರಳಿನಲ್ಲಿ ಮಸುಕಾಗಿ ಗೋಚರಿಸುತ್ತವೆ. ನಿಮ್ಮ ಆರೋಗ್ಯವನ್ನು ಹೊರತುಪಡಿಸಿ ಉಳಿದೆಲ್ಲವೂ ನಿಮಗೆ ನಗಣ್ಯವಾಗಿ ತೋರುತ್ತದೆ. ನಿಮ್ಮ ದೇಹ ಅನಾರೋಗ್ಯದಿಂದ, ಸಹಿಸಲಾಗದ ನೋವಿನಿಂದ ಚೀರುತ್ತ ಸಹಾಯಕ್ಕಾಗಿ ಅಂಗಲಾಚುತ್ತಿರುವಾಗ ಪ್ರಪಂಚದ ಯಾವ ಸುಖ ಸಂಪತ್ತುಗಳು ನಿಮಗೆ ಗೋಚರಿಸುವುದೇ ಇಲ್ಲ.

ಆರೋಗ್ಯ ಎಂಬುದು ನಾವು ಲವಲವಿಕೆಯಿಂದ, ಉಲ್ಲಾಸ ಮತ್ತು ಉತ್ಸಾಹಗಳಿಂದ ಜೀವನವನ್ನು ನಡೆಸುವ ಸ್ಥಿತಿ. ಒಳ್ಳೆಯ ಆಹಾರ ವಿಹಾರ, ವಾಯು ಸೇವನೆ, ನಗು ನಮ್ಮ ಬದುಕಿನಲ್ಲಿ ಅತ್ಯಂತ ಮುಖ್ಯವಾದವುಗಳು. ಆರೋಗ್ಯವೊಂದಿಲ್ಲದಿದ್ದರೆ ಎಲ್ಲವೂ ಚಿತ್ರವಾಗಿ ಹೋಗುತ್ತದೆ. ಬದುಕು ದುಸ್ತರವಾಗುತ್ತದೆ, ಕನಸುಗಳು ಕಣ್ಮರೆಯಾಗುತ್ತವೆ. ಒಳ್ಳೆಯ ಆರೋಗ್ಯ ನಮಗೆ ನಾವು ಕೊಟ್ಟುಕೊಳ್ಳುವ ಉಡುಗೊರೆ ಎಂದು ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾ ಪ್ರತಿಪಾದಿಸಿದ್ದಾರೆ. ಅವರು ಹೇಳಿರುವ ಒಂದೊಂದು ಮಾತು ಅಕ್ಷರಶಃ ನಿಜ.

 ನಿಮ್ಮ ಬದುಕು ಕೇವಲ ನಿಮ್ಮದು ಮಾತ್ರವಲ್ಲ… ನಿಮ್ಮ ಕುಟುಂಬದ್ದು ಕೂಡ. ನಿಮ್ಮ ಕುಟುಂಬವು ನೆಮ್ಮದಿ,  ಸಂತೋಷದಿಂದ ಇರಲು ನಿಮ್ಮ ಅಸ್ತಿತ್ವವೂ ಜೊತೆಯಾಗಬೇಕು. ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ ಎಂಬ ಹಾಡನ್ನು ನೀವೇ ಬರೆದಿದ್ದೀರಲ್ಲವೇ. ಹೃದಯವೇ ಇಲ್ಲದ ಮೇಲೆ ಹೃದಯವಂತನಿಗೆ ಏನು ಕೆಲಸ?
 ನೀನಿರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ ಎಂಬ ಹಾಡನ್ನು ಹಾಡುತ್ತಾ ಇರಲು ನಮ್ಮಿಬ್ಬರ ಜೊತೆಯಾಟವು ಈ ಬದುಕಿನುದ್ದಕ್ಕೂ ಬೇಕು.

ಆದ್ದರಿಂದ ಸ್ನೇಹಿತರೆ, ನಿಮ್ಮ ಬದುಕು ಕೇವಲ ನಿಮ್ಮದಲ್ಲ ನನ್ನದು ಕೂಡ. ನನಗಾಗಿಯಾದರೂ ನಿಮ್ಮ ಬದುಕಿನಲ್ಲಿ ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಂಡು ಇಬ್ಬರು ಜೊತೆಯಾಗಿ ನಮ್ಮ ಬದುಕಿನ ಕೊನೆಯವರೆಗೂ ಆರೋಗ್ಯಪೂರ್ಣವಾಗಿ ಬದುಕೋಣ ಏನಂತೀರಾ?

ಇಂತಿ ನಿಮ್ಮ ಪ್ರೀತಿಯ
  ಹೃದಯ

About The Author

Leave a Reply

You cannot copy content of this page

Scroll to Top