ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ರಾತ್ರಿ ಎಂಟು ಗಂಟೆ ಸುಮಾರಿಗೆ ಮಾಧವ್ ತನ್ನ ಟೆರೇಸ್ ಬಾಲ್ಕನಿಯಲ್ಲಿ ನಿಂತು ಯೂಟ್ಯೂಬ್‌ನಲ್ಲಿ ‘ಪುಷ್ಪ 2’ ಚಿತ್ರದ ಕಲೆಕ್ಷನ್ ವಿವರಗಳನ್ನು ಕೇಳುತ್ತಾ ಸುತ್ತಲೂ ನೋಡುತ್ತಿದ್ದ. ಆಗ ಒಂದು ದೃಶ್ಯವನ್ನು ನೋಡಿ ಆಶ್ಚರ್ಯಪಟ್ಟ, ನಂತರ ಸಂತೋಷಪಟ್ಟ. ಮಾಧವ್ ಅವರ ಪಕ್ಕದ ಮನೆಯ ರಘು ಒಂದು ದೊಡ್ಡ ಕೋಲು ಹಿಡಿದು ಎದುರಿನ ಮನೆಗೆ ವೇಗವಾಗಿ ಹೋಗುತ್ತಿದ್ದಾನೆ.

ತಕ್ಷಣ ಮಾಧವ್ ಕಾಲೋನಿಯಲ್ಲಿ ಪರಿಚಯವಿದ್ದ ನಾಲ್ಕು ಜನರಿಗೆ ಈ ವಿಷಯವನ್ನು ಹಂಚಿಕೊಂಡ. ಆಮೇಲೆ ಅವನಿಗೆ ಪಕ್ಕದ ಬೀದಿಯಲ್ಲಿ ವಾಸಿಸುತ್ತಿದ್ದ ಅವನ ಸ್ನೇಹಿತ ಸುಬ್ಬು ನೆನಪಾದ. ಸುಬ್ಬು ಇತ್ತೀಚೆಗೆ ಒಂದು ಟಿವಿ ಚಾನೆಲ್ ಪ್ರಾರಂಭಿಸಿ, ಊರಿನ ಪ್ರತಿ ಸಣ್ಣ ವಿಷಯವನ್ನೂ ಕವರ್ ಮಾಡುತ್ತಿದ್ದ. ತಕ್ಷಣ ಸುಬ್ಬುಗೆ ಫೋನ್ ಮಾಡಿ ವಿಷಯ ಹೇಳಿದ.

“ಇದು ಟಿವಿಯಲ್ಲಿ ಹೇಳುವಷ್ಟು ದೊಡ್ಡ ವಿಷಯವಾ ಮಾಧವ್?” ಎಂದು ಸುಬ್ಬು ಅನುಮಾನದಿಂದ ಕೇಳಿದ.

“ಖಂಡಿತ! ಈ ರಘು ಮೊನ್ನೆ ಮೊನ್ನೆಯವರೆಗೂ ತನ್ನ ಅಣ್ಣನೊಂದಿಗೆ ತಂದೆ-ತಾಯಿಯ ಮನೆಯಲ್ಲೇ ಇದ್ದ. ಇತ್ತೀಚೆಗೆ ಆ ಮನೆಯಿಂದ ಹೊರಬಂದು ಎದುರಿನ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿದ್ದಾನೆ. ಅಣ್ಣ-ತಮ್ಮಂದಿರ ನಡುವೆ ಆಸ್ತಿ ಕಲಹ ಇದೆ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ರಘು ಕೈಯಲ್ಲಿ ಕೋಲು ಹಿಡಿದು ಹೋಗುವುದನ್ನು ನನ್ನ ಕಣ್ಣಾರೆ ನೋಡಿದೆ. ಅವನ ವೇಗ, ಆವೇಶ ನೋಡಿದರೆ ಒಳಗೆ ಒಂದು ಕೊಲೆ ನಡೆಯುವ ಸಾಧ್ಯತೆ ಇದೆ ಎಂದು ನನಗೆ ಅನಿಸುತ್ತಿದೆ. ಮೇಲಾಗಿ ರಘು ತಂದೆ ವೆಂಕಟರಾವ್ ನಮ್ಮ ಏರಿಯಾದ ಕಾರ್ಪೊರೇಟರ್. ಹಾಗಾಗಿ ನಿನಗೆ ಒಳ್ಳೆಯ ಮಸಾಲಾ ನ್ಯೂಸ್ ಆಗುತ್ತದೆ. ಮೇಲಾಗಿ ಈ ಸುದ್ದಿ ಜನರಿಗೆ ತಲುಪಿಸುವ ಮೊದಲ ಚಾನೆಲ್ ನಿಂದೇ ಆಗುತ್ತದೆ” ಎಂದು ಮಾಧವ್ ವಿಶ್ವಾಸದಿಂದ ಹೇಳಿದ.

ಹತ್ತು ನಿಮಿಷಗಳಲ್ಲಿ ಸುಬ್ಬು ತನ್ನ ಕ್ಯಾಮರಾಮ್ಯಾನ್‌ನೊಂದಿಗೆ ಆ ಕಾಲೋನಿಗೆ ತಲುಪಿದ. ಆಗಲೇ ಅಲ್ಲಿ ಬಹಳಷ್ಟು ಜನರು ಜಮಾಯಿಸಿದ್ದರು. ಅವರಲ್ಲಿ ಕೆಲವು ಮಹಿಳೆಯರೂ ಇದ್ದರು. ಎಲ್ಲರ ನಡುವೆ ಮಾಧವ್ ಒಬ್ಬ ನಾಯಕನಂತೆ ನಿಂತು ಏನೋ ಮಾತನಾಡುತ್ತಿದ್ದ. ಆ ಮನೆಯೊಳಗಿನಿಂದ ಜನರ ಕೂಗು ಕೇಳಿಸುತ್ತಿತ್ತು.

ಸುಬ್ಬು ತಕ್ಷಣವೇ ತನ್ನ ಕರ್ತವ್ಯದಲ್ಲಿ ನಿರತನಾದ. ಅಲ್ಲಿರುವವರನ್ನು ಕ್ಯಾಮರಾ ಮುಂದೆ ಕರೆದು ಮನೆಯಲ್ಲಿರುವವರ ಬಗ್ಗೆ ಅವರ ಅಭಿಪ್ರಾಯ ಕೇಳತೊಡಗಿದ. ಅಷ್ಟರಲ್ಲಿ ಒಳಗಿನಿಂದ “ಬೇಡ… ಬೇಡ ರಘು” ಎಂಬ ಕೂಗುಗಳೊಂದಿಗೆ ಮಹಿಳೆಯರು ಕಿರಿಚಿದ್ದು ಎಲ್ಲರಿಗೂ ಕೇಳಿಸಿತು.

“ಅದುಗೋ… ಅದು ರಘುಪತಿ ಅಣ್ಣ ಚಲಪತಿಯ ಧ್ವನಿ. ತನ್ನನ್ನು ಹೊಡೆಯಬೇಡ ಎಂದು ಬೇಡಿಕೊಳ್ಳುತ್ತಿದ್ದಾನೆ. ಮೊದಲಿನಿಂದಲೂ ಚಲಪತಿ ಸ್ವಲ್ಪ ಸೌಮ್ಯ. ರಘು ರಫ್ ಅಂಡ್ ಟಫ್” ಎಂದ ಮಾಧವ್.

ಕ್ಯಾಮರಾಮ್ಯಾನ್ ಆದರ್ಶ್ ಅಲ್ಲಿರುವ ಎಲ್ಲರ ಮಾತುಗಳನ್ನೂ, ಅವರ ಭಾವನೆಗಳನ್ನೂ ತನ್ನ ಕ್ಯಾಮರಾದಲ್ಲಿ ಸೆರೆಹಿಡಿದುಕೊಳ್ಳುತ್ತಿದ್ದ.

“ಒಳಗೆ ಏನಾಗುತ್ತಿದೆ ಎಂದು ನೀವು ಅಂದುಕೊಳ್ಳುತ್ತಿದ್ದೀರಿ?” ಎಂದು ಸುಬ್ಬು ಒಬ್ಬ ಹಿರಿಯನನ್ನು ಕೇಳಿದ.

“ಯಾವ ಕುಟುಂಬದ ಇತಿಹಾಸ ನೋಡಿದರೂ ಏನು ಹೆಮ್ಮೆ ಇದೆ… ಮನುಕುಲವೆಲ್ಲ ಆಸ್ತಿಗಾಗಿ ಹೊಡೆದಾಡಿ ಸಾಯುವುದು” ಎಂದು ಆತ ಒಬ್ಬ ವೇದಾಂತಿಯಂತೆ ಹೇಳಿದ.

ಮತ್ತೊಬ್ಬ ಹಿರಿಯನೊಂದಿಗೆ “ನೀವು ಹಿರಿಯರಲ್ಲವೇ! ನಿಮಗೆ ಆ ಮನೆಯವರು ಚೆನ್ನಾಗಿ ಪರಿಚಯವಿದ್ದಿರುತ್ತಾರೆ. ನೀವು ಒಳಗೆ ಹೋಗಿ ರಘುವನ್ನು ತಡೆಯಬಹುದಲ್ಲವೇ?” ಎಂದು ಸುಬ್ಬು ಕೇಳಿದ.

“ಬುದ್ಧಿಯಿರುವವನು ಇನ್ನೊಬ್ಬರ ಕುಟುಂಬ ವಿಷಯಗಳಲ್ಲಿ ತಲೆಹಾಕಬಾರದು” ಎಂದ ಆತ, ಸಿನಿಮಾಗಳಲ್ಲಿ ವಜ್ರಮುನಿ ಡೈಲಾಗ್ ಡೆಲಿವರಿ ಶೈಲಿಯನ್ನು ಅನುಕರಿಸುತ್ತಾ. “ಕಾರ್ಪೊರೇಟರ್ ವೆಂಕಟರಾವ್ ಬಹಳ ಅನ್ಯಾಯಗಳನ್ನು ಮಾಡಿದ್ದಾನೆ. ಹೊಲಗಳು, ಕೆರೆಗಳು, ಭೂಮಿಗಳನ್ನು ಕಬಳಿಸಿದ್ದಾನೆ. ಆ ಪಾಪ ಹಾಗೆಯೇ ಹೋಗುತ್ತದೆಯೇ? ಕರ್ಮಫಲ ಅನುಭವಿಸದೆ ತಪ್ಪುತ್ತದೆಯೇ?” ಎಂದ ಒಬ್ಬ ಯುವಕ.

“ಅಷ್ಟು ಸಂಪಾದಿಸಿದ್ದರೆ ಮತ್ತೆ ಅರಮನೆಯಲ್ಲಿರದೆ ಈ ಮನೆಯಲ್ಲಿ ಯಾಕಿದ್ದಾನೆ?” ಸುಬ್ಬು ಕೇಳಿದ.

“ಹಾಗಿದ್ದರೆ ಎಲ್ಲರಿಗೂ ಗೊತ್ತಾಗಿಬಿಡುತ್ತದಲ್ಲವೇ!”

“ನಿಮ್ಮ ಹತ್ತಿರ ಪುರಾವೆಗಳಿದ್ದರೆ ಕೊಡಿ. ನಮ್ಮ ಟಿವಿಯಲ್ಲಿ ಪ್ರಸಾರ ಮಾಡುತ್ತೇವೆ” ಎಂದು ಆಸಕ್ತಿಯಿಂದ ಸುಬ್ಬು ಕೇಳಿದ.

“ನನ್ನ ಹತ್ತಿರ ಯಾಕಿರಬೇಕು ಸ್ವಾಮಿ? ಯಾರೋ ಹೇಳುತ್ತಿದ್ದರೆ ಕೇಳಿದೆ” ಎಂದ ಆ ಯುವಕ.

ಅಷ್ಟರಲ್ಲಿ ಆ ಮನೆಯ ಬಾಗಿಲು ತೆರೆಯಿತು. ರಘು ಹೊರಗೆ ಬಂದು ನಿಧಾನವಾಗಿ ಗೇಟಿನ ಕಡೆ ನಡೆದು ಬರುತ್ತಿದ್ದ. “ಮನುಷ್ಯನನ್ನು ಕೊಂದು ಕೂಡಾ ಎಷ್ಟು ಪ್ರಶಾಂತವಾಗಿ ಹೊರಗೆ ಬರುತ್ತಿದ್ದಾನೆ ನೋಡಿ. ಧೈರ್ಯಶಾಲಿ” ಎಂದ ಮಾಧವ್.

ಅಷ್ಟರಲ್ಲಿ ರಘುವಿನ ಅತ್ತಿಗೆ ಸಂಧ್ಯಾ ಹೊರಗೆ ಬಂದು ರಘುವನ್ನು ಕರೆದಳು. ರಘು ಹತ್ತಿರ ಬಂದಾಗ ಅವನ ಕೈ ಹಿಡಿದು ಮಾತನಾಡುತ್ತಿದ್ದಾಳೆ.

“ಅಬ್ಬಾ! ಗಂಡನನ್ನು ಕೊಂದಿದ್ದಕ್ಕೆ ಥ್ಯಾಂಕ್ಸ್ ಹೇಳುತ್ತಿದ್ದಾಳೆ ಅನ್ಸುತ್ತೆ. ಅಂದರೆ ಇದು ಅತ್ತಿಗೆ-ಮೈದುನನ ಗೂಢಸಂಚು ಅನ್ನಬಹುದು. ಮೈದುನ ಅಂದರೆ ಅವಳಿಗೆ ಬಹಳ ಇಷ್ಟ ಅನ್ಸುತ್ತೆ… ಕೈ ಬಿಡುತ್ತಿಲ್ಲ” ಎಂದ ಮಾಧವ್.

“ಛೆ.. ಬಾಯಿಮುಚ್ಚು” ಎಂದು ಸುಬ್ಬು ಅವನನ್ನು ಕೂಗಿದ.

ನಂತರ ವೆಂಕಟರಾವ್, ಅವನ ಪತ್ನಿ ವಸಂತ ಕೂಡಾ ಹೊರಗೆ ಬಂದು ರಘುವಿನೊಂದಿಗೆ ಮಾತನಾಡತೊಡಗಿದರು.

“ಒಂದು ಕುಟುಂಬವೆಲ್ಲಾ ಸೇರಿ ದೊಡ್ಡ ಮಗನನ್ನು ಕೊಂದಿದ್ದಾರೆ ಅನ್ಸುತ್ತೆ. ಅವನ ದುರ್ವರ್ತನೆ ತಾಳಲಾರದೆ ಈ ಕೆಲಸ ಮಾಡಿರುತ್ತಾರೆ” ಎಂದ ಮಾಧವ್.

“ದೊಡ್ಡ ಮಗ ಸೌಮ್ಯ ಎಂದು ಹೇಳಿದೆಯಲ್ಲಾ ಈಗ?” ಎಂದು ಸುಬ್ಬು ಕೇಳಿದ.

“ಹಾಗೆ ಅಂದುಕೊಂಡಿದ್ದೆ. ಹೊರಗೆ ಕಾಣಿಸುವಷ್ಟು ಅಮಾಯಕನಲ್ಲ ಎಂದು ಈಗ ತಿಳಿದುಕೊಂಡೆ” ಎಂದ ಮಾಧವ್.

“ಕುಟುಂಬವೇ ಕುಟುಂಬವನ್ನು ಕೊಂದು ಎಷ್ಟು ನಿರಾಳವಾಗಿ ಮಾತನಾಡಿಕೊಳ್ಳುತ್ತಿದ್ದಾರೆ ನೋಡಿ?” ಎಂದ ಕಾಲೋನಿ ಅಧ್ಯಕ್ಷ ವರ್ಮ.

ಆಗ ಹೊರಗೆ ಬಂದನು… ಚಲಪತಿ. ಕೈಯಲ್ಲಿ ರಘು ತೆಗೆದುಕೊಂಡು ಹೋಗಿದ್ದ ದೊಣ್ಣೆ ಇತ್ತು.

“ಅಯ್ಯೋ… ಇವನು ಬದುಕಿದ್ದಾನಲ್ಲ! ಇದು ಹೇಗೆ ಸಾಧ್ಯ?” ಎಂದು ಮಾಧವ್ ಕೂಗಿದ.

“ಅವನ ಮುಖ ನೋಡಿದರೆ ಮನುಷ್ಯನಂತೆ ಕಾಣುತ್ತಿಲ್ಲ. ದೆವ್ವದಂತೆ ಇದ್ದಾನೆ. ಅವನ ಕಣ್ಣುಗಳೆಲ್ಲಾ ಆ ಕೋಲಿನ ಮೇಲೇ ಇವೆ. ಅಲ್ಲಿರುವವರಲ್ಲಿ ಯಾರಾದರೊಬ್ಬನ ತಲೆ ಒಡೆಯುವಂತೆಯೇ ಇದ್ದಾನೆ” ಎಂದ ವಜ್ರಮುನಿ ಎಂತೆ  ಮಾತನಾಡಿದ ಹಿರಿಯ ವ್ಯಕ್ತಿ.

” ಅಯ್ಯೋ. ಇವನು ಈಗ ರಘುವಿನ ತಲೆ ಒಡೆಯುತ್ತಾನೆ ನೋಡು.. ಸುಬ್ಬು.. ನಿನ್ನ ಕ್ಯಾಮರಾ ರೆಡಿ ಮಾಡಿಕೊ!” ಎಂದು ಮಾಧವ್ ಕೂಗಿದ.

ಚಲಪತಿ ತನ್ನ ತಾಯಿ, ತಂದೆ, ಪತ್ನಿ ಎಲ್ಲರನ್ನೂ ದಾಟಿ ಬರುತ್ತಿದ್ದ. ಎಲ್ಲರೂ ಆತುರದಿಂದ ಅವನ ಕಡೆಗೇ ನೋಡುತ್ತಿದ್ದರು. ಅವನು ತನ್ನ ತಮ್ಮನನ್ನೂ ದಾಟಿ ಗೇಟ್ ಹತ್ತಿರ ಬಂದ.

ಆಗ ಎಲ್ಲರಿಗೂ ಕಂಡಿತು ಅವನ ಕೈಯಲ್ಲಿದ್ದ ದೊಣ್ಣೆಗೆ ನೇತಾಡುತ್ತಾ… ನಾಲ್ಕು ಅಡಿಗಳ ಹಾವು.


About The Author

1 thought on “ಅದು ಕತೆ!ಸಿ.ಯನ್.ಚಂದ್ರಶೇಖರ್ ಅವರ ತೆಲುಗು ಕಥೆಯ ಕನ್ನಡಾನುವಾದ ಕೋಡೀಹಳ್ಳಿ ಮುರಳೀಮೋಹನ್”

  1. ಅನೂಹ್ಯವಾದ ಅಂತ್ಯ. ಒಂದು ಚಿಕ್ಕ ಘಟನೆಗೆ ಏನೆಲ್ಲ ದಿರಿಸು ತೊಡಿಸಿ ಜನ ಮಾತಾಡಿಕೊಳ್ತಾರೆ ಎನ್ನುವುದನ್ನು ಸಮರ್ಪಕವಾಗಿ ಹೊರತಂದಿದೆ ಕತೆ. ಅನುವಾದ ಚೆನ್ನಾಗಿದೆ.

Leave a Reply

You cannot copy content of this page

Scroll to Top