ಅಂಕಣ ಸಂಗಾತಿ
ಅನುಭಾವ
ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ
*ಅಕ್ಕಮಹಾದೇವಿ ವಚನ*

ಚಂದನವ ಕಡಿದು ಕೊರೆದು ತೇದಡೆ ನೊಂದೆನೆಂದು ಕಂಪ ಬಿಟ್ಟಿತ್ತೆ?
ತಂದು ಸುವರ್ಣವ ಕಡಿದೊರೆ ದಡೆ ಬೆಂದು ಕಳಂಕ ಹಿಡಿದಿತ್ತೆ?
ಸಂದು ಸಂದನು ಕಡಿದು, ಕಬ್ಬನು ತಂದು ಗಾಣದಲಿಕ್ಕಿಅರೆದಡೆ
ಬೆಂದು ಪಾಕಗುಡದೆ ಸಕ್ಕರೆಯಾಗಿ ನೊಂದೆನೆಂದು ಸಿಹಿಯ ಬಿಟ್ಟಿತ್ತೆ?
ನಾ ಹಿಂದೆ ಮಾಡಿದ ಹೀನಂಗಳೆ ಲ್ಲವ ತಂದು ಮುಂದಿಳುಹಲು ನಿಮಗೆ ಹಾನಿ! ಎನ್ನ ತಂದೆ ಚೆನ್ನಮಲ್ಲಿಕಾರ್ಜುನಯ್ಯಾ ನೀ ಕೊಂದೊಡೆ ಶರಣೆಂಬುದ ಮಾಣೆ
ಅಕ್ಕನವರ ಈ ವಚನದಲ್ಲಿ, ವ್ಯಕ್ತಿ ಇಲ್ಲವೆ ವಸ್ತುವಿನ ಸಹಜ ಗುಣ ಸ್ವಭಾವದ ಗುಣಲಕ್ಷಣ ಕುರಿತು ಮೂರು ದೃಷ್ಟಾಂತಗಳನ್ನು ಅಕ್ಕ ನೀಡುತ್ತಾರೆ.
ಮೊದಲನೇಯ ದೃಷ್ಟಾಂತ
ಚಂದನವ ಕಡಿದು ಕೊರೆದು ತೇದೊಡೆ ನೊಂದೆನೆಂದು ಕಂಪ ಬಿಟ್ಟಿತ್ತೆ?
ಚಂದನ ಮರದ ಗುಣ ಸುವಾಸನೆ ಬೀರುವುದು .
ಸುಹಾಸನೆ ನೀಡುವ ಈ ಚಂದನದ ಮರವನ್ನು ಎಷ್ಟೇ ಕೊರೆದರೂ,ಕಡಿದು ತುಂಡರಿಸಿದರೂ ,ಅದನ್ನು ತೆಯ್ದದರೂ ಅದರ ಮೂಲ ಗುಣಕ್ಕೆ ಯಾವುದೇ ಚ್ಯುತಿ ಬಾರದು .
ಹಾಗೆ ನಾನು ಕೂಡ ನನ್ನ ಮನಕ್ಕೆ ಎಷ್ಟೇ ಗಾಯ ಆದರೂ,ನನ್ನ ಮನಕ್ಕೆ ಎಷ್ಟೇ ಅವಮಾನ ಆದರೂ ನಾನು ನನ್ನ ಚೆನ್ನಮಲ್ಲಿಕಾರ್ಜುನನ ಮೇಲಿರುವ ಭಕ್ತಿಯ ಭಾವ ಕಡಿಮೆ ಆಗಲಾರದು ಎನ್ನುವರು ಅಕ್ಕ.
ಎರಡನೆಯ ದೃಷ್ಟಾಂತದಲ್ಲಿ
*ಸುವರ್ಣವ ಕಡಿದೊರೆದೊಡೆ ಬೆಂದು ಕಳಂಕ ಹಿಡಿದಿತ್ತೆ ?
ಚಿನ್ನದ ಮೂಲ ಗುಣ ಹೊಳಪು. ಆ ಚಿನ್ನವನ್ನು ಬೆಂಕಿಯ ಕುಲುಮೆಯಲ್ಲಿ ಹಾಕಿ ಕಾಯಿಸಿ ತುಂಡರಿಸಿ, ಅದನ್ನು ಒರೆಗಲ್ಲಿಗೆ ಹಚ್ಚಿ ತೆಯ್ದರೂ ಅದು ತನ್ನ ಹೊಳೆಯುವ ಗುಣವನ್ನು ಬಿಡಲಾರದು. ಅದರ ಹೊಳಪನ್ನು ಅದು ಕಳೆದುಕೊಳ್ಳಲಾರದು.
ಹಾಗೆ ಅಕ್ಕನ ಮನ ಯಾವಾಗಲೂ ಶುಭ್ರ.ಹೊಳ ಹೊಳೆಯುವ ಭಾವ ಗುಣ .
ಮೂರನೆಯ ದೃಷ್ಟಾಂತ
ಸಂದು ಸಂದನು ಕಡಿದು ಕಬ್ಬನು ತಂದು ಗಾಣದಲಿಕ್ಕೆ ಅರೆದಡೆ ಬೆಂದು ಪಾಕಗೂಡದೆ ಸಕ್ಕರೆಯಾಗಿ ನೊಂದೆನೆಂದು ಸವಿಯ ಬಿಟ್ಟಿತ್ತೆ
ಕಬ್ಬನ್ನು ತುಂಡು ತುಂಡು ಮಾಡಿ ಕಡಿದು ,ಗಾಣದಲ್ಲಿ ಹಾಕಿ ಅರೆದು ಬೇರೆ ಬೇರೆ ಪ್ರಕ್ರಿಯೆಗಳ ಮೂಲಕ ಕಬ್ಬು ಸಕ್ಕರೆಯಾಗಿ ,ಬೆಲ್ಲವಾಗುವ ಕಬ್ಬು ಗಾಣದಲ್ಲಿ ಹಾಕಿದಾಗ ನೋವಾಗುವುದು ಎಂದು ತಿಳಿದು ತನ್ನ ಸವಿ ಗುಣವನ್ನು ಬಿಡಲಾರದು .
ಹಾಗೇ ಅಕ್ಕನ ಗುಣ .
ನನ್ನನ್ನು ಎಷ್ಟೇ ಪರೀಕ್ಷಿಸಿದರೂ ಚೆನ್ನಮಲ್ಲಿಕಾರ್ಜುನ ನನ್ನನ್ನು ನಿರಾಕರಿಸಿ ಕೊಂದರೂ, ನಾನು ಚೆನ್ನಮ್ಮಲ್ಲಿಕಾರ್ಜುನನ ಮೇಲೆ ಇರುವ ನಿರಂತರವಾದ ಭಕ್ತಿ ಧ್ಯಾನದಲ್ಲಿರುವೆನು ಎನ್ನುವರು ಅಕ್ಕ.
ಹಿಂದೆ ಮಾಡಿದ ನನ್ನ ಪಾಪ ಕರ್ಮದ ಫಲವನ್ನು ನಿಮ್ಮ ಮುಂದೆ ತಂದು ಅರುವಿದರೆ, ನಿಮಗೆಯೇ ಹಾನಿ ಎನ್ನ ತಂದೆ ಭಗವಂತಾ . ಚೆನ್ನಮಲ್ಲಿಕಾರ್ಜುನ ನನ್ನನ್ನು ಕೊಂದರೂ ಶರಣೆಂದು ಶರಣಾಗುವೆ ಎನ್ನುವರು ಅಕ್ಕ.
ಚಂದನವು ತನ್ನ ಕಂಪನ್ನು ಬೀರುವಂತೆ ನನ್ನ ಭಕ್ತಿ ಎಂಬ ಕಂಪನ್ನು ನಾನು ಜಗತ್ತಿಗೆ ಪಸರಿಸುವೆ. ಹಾಗೆ ಬಂಗಾರವನ್ನು ಬೆಂಕಿಯ ಕುಲುಮೆಯಲ್ಲಿ ಹಾಕಿದಷ್ಟು ಅದನ್ನು ಕರಗಿಸಿ, ಶೋಧಿಸಿ ,ಪರೀಕ್ಷಿಸಿದಷ್ಟೂ ,ಅದರ ಹೊಳಪು ಮತ್ತಷ್ಟು ಹೆಚ್ಚಾಗುವಂತೆ, ನನ್ನ ಬದುಕು ಕೂಡ ಎನ್ನುವರು ಅಕ್ಕ.
ಒಟ್ಟಿನಲ್ಲಿ ಅಕ್ಕನವರ ಈ ವಚನದಲ್ಲಿ ಯಾರು ನಮಗೆ ಎಷ್ಟೇ ಅವಮಾನ ಮಾಡಿದರೂ , ಎಷ್ಟೇ ನಮ್ಮ ಮನಕ್ಕೆ ನೋವು ಕೊಟ್ಟರೂ, ಭಗವಂತನ ಮೇಲೆ ನಾವು ಇಟ್ಟಿರುವ ದೃಢವಾದ ಭಕ್ತಿ ಭಾವ ಕಡಿಮೆ ಆಗಬಾರದು ಎನ್ನುವುದು ಅಕ್ಕನವರ ಈ ಒಂದು ವಚನದಲ್ಲಿ ನಾವು ಕಂಡುಕೊಳ್ಳುವ ಭಕ್ತಿಯ ಮಾರ್ಗವಾಗಿದೆ .
ಡಾ ಸಾವಿತ್ರಿ ಕಮಲಾಪೂರ




