ಕಾವ್ಯ ಸಂಗಾತಿ
ಎನ್.ಆರ್.ರೂಪಶ್ರೀ ಶಿರಸಿ
ʼಹೆಜ್ಜೆಯ ಸದ್ದುʼ

ಹಾಗೆ ಸುಮ್ಮನೆ ನಿರಾಳವಾಗಿ
ಕುಳಿತು ಕನವರಿಸುತ್ತಿದ್ದಾಗ
ಇದ್ದಕ್ಕಿದ್ದಂತೆ ಝಗ್ಗನೆಂದು
ಹತ್ತಿದ ಬೆಳಕಿನಲ್ಲಿ ನ್ಯಾಸಲು
ನ್ಯಾಸಲು ಮುಖ
ಕಣ್ಣುಜ್ಜಿ ಆಚೆ ಈಚೆ ತಿರುಗಿ
ಕೈ ಗಿಂಡಿ ನೋಡಿದರೆ ಇಲ್ಲ
ಮತ್ತದೆ ಚಹರೆ
ಎಲ್ಲೊ ನೆನಪಿನ ಪಸೆ
ಗೊತ್ತಿಲ್ಲದಂತೆ ಜಾರುತ್ತಿದೆಯಲ್ಲ
ಮನೆಯ ಹಿತ್ತಲಿನಲ್ಲಿ
ಊರ ಕೇರಿಯ ತುದಿಮನೆ
ಹೊಸದಾಗಿ ಬಂದ ಬಳಗ
ಎಲ್ಲಿ ಕಂಡ ಮುಖವಿದು
ಇಲ್ಲ ಎಲ್ಲಿಯೂ ಕಾಣುತ್ತಿಲ್ಲ
ಆಕೆ ತಂಗಾಳಿಗೆ ತೆರೆದು ಮುಖ
ನೀಡಿ ನಿಂತಳು
ಹಾಗೆ ನವಿರಾಗಿ ಸವರಿದಂತೆ
ಪ್ರೀತಿಯ ಪನ್ನೀರು ಚಿಮುಕಿಸಿದಂತೆ
ಒಮ್ಮೆ ಹಾಯ್ ಎನಿಸಿದರೂ
ಕಣ್ಣಲ್ಲಿ ಹನಿ ಬಿಂದು
ಜಾರಿ ಮುಖದ ಮೇಲೆ ಇಳಿಯಿತು
ಇಂದಿಲ್ಲದ ನನ್ನೊಡನಿಲ್ಲದ
ನನ್ನವನಲ್ಲದವನ ಪ್ರತಿ ಹೆಜ್ಜೆಯ
ಸದ್ದಿದು ಪ್ರೇಮವ ಹರಿಸಿದವನ
ಪ್ರೀತಿಯ ಮುಖವಿದು
ಆಕೆ ಒಮ್ಮೆಲೆ ದಿಗಿಲುಗೊಂಡು
ಆಗಸ ದಿಟ್ಟಿಸಿದಳು
ಅವನು ಗಹಗಹಿಸಿ ನಗುತ್ತಿದ್ದ…!
—————-
ಎನ್.ಆರ್.ರೂಪಶ್ರೀ ಶಿರಸಿ





ಕವಿತೆ ಚೆನ್ನಾಗಿದೆ ರೂಪಶ್ರೀ
Beautiful poem ❤️