ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ಗಜಲ್


ಹರಿದ ಹಗಲಿಗೆ ತೇಪೆ ಹಚ್ಚಲು ಪ್ರೀತಿಸಿದೆಯಾ
ಕಪ್ಪು ಕತ್ತಲಿಗೆ ಬಣ್ಣ ಬಳಿಯಲು ಬಯಸಿದೆಯಾ
ಏಕಾಂತ ಭಾರವೆನಿಸುವಷ್ಟು ಹೊರೆಯಾಗಿತ್ತೇ
ಹಗುರಾಗಿಸಲು ಅನುವಾಗುವಷ್ಟು ಆದರಿಸಿದೆಯಾ
ಮಾತಿನಲೇ ಒಲುಮೆಯ ಅರಮನೆ ಕಟ್ಟಿದೆ
ಹುಸಿ ಪ್ರೇಮದ ಕುರುಹೂ ಕಾಣದಷ್ಟು ಸಿಂಗರಿಸಿದೆಯಾ
ಬಿಡದ ಬಂಧ ಬೆಸೆದು ಹೋಯಿತು ಈ ಜನ್ಮಕೆ
ಸ್ವಾಭಿಮಾನ ದಿನವೂ ನಲುಗುವಷ್ಟು ನರಳಿಸಿದೆಯಾ
ಕತ್ತಿ ಮಸೆಯದೇ ಮನವು ಕೊಂದರು ವಾಣಿ
ಉಸಿರು ಕೂಡ ನಡುಗುವಷ್ಟು ನೋಯಿಸಿದೆಯಾ
———-
ವಾಣಿ ಯಡಹಳ್ಳಿಮಠ




