ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮನದ ತೋಟದಿ ಆಸೆಗಳು ಅರಳಿವೆ
ನಿತ್ಯವೂ ಹೊಸ ಕನಸುಗಳು ಕಂಡಿವೆ
ಅಂತರಂಗದ ಭಾವಗಳು ಮೂಡಿವೆ
ಬಯಸಿದ ಬಯಕೆಗಳು ಚಿಗುರಿವೆ

ನಭದ ನಕ್ಷತ್ರಗಳ ಚುಂಬಿಸುವಾಸೆ
ಚಂದಿರನ ಮೇಲೆ ನಿಲ್ಲುವ ಮಹದಾಸೆ
ಕಾಮನಬಿಲ್ಲಿನ ತುದಿ ಏರುವ ಆಸೆ
ಮುಗಿಲಿಗೆ ಏಣಿಯ ಹಾಕುವ ಆಸೆ

ಪಡೆಯಲಾಗದ ಹೆಬ್ಬಯಕೆಗಳನು
ಕಷ್ಟಪಟ್ಟು ಪಡೆಯಬೇಕೆಂಬ ಹಂಬಲ
ನಿಲುಕಲಾರದ ದೂರದ ಗುರಿಗಳನು
ಬಿಡದೆ ಬೆಂಬೆತ್ತಿ ಜಯಿಸುವ ಛಲ

ಮೆಟ್ಟಿಲು ಏರುವಲ್ಲಿ ಪರಿಶ್ರಮವಿರಲು
ಆತ್ಮ ಶ್ರದ್ಧೆ ಭಕ್ತಿ ಸ್ಫೂರ್ತಿ ತುಂಬಿರಲು
ಕಾಯಕದಲಿ ಸತತ ಪ್ರಯತ್ನವಿರಲು
ಸಂತಸವು ಸಾಧನೆಯ ಗರಿ ಮೂಡಲು

ಇಟ್ಟ ಗುರಿಯತ್ತ ಹೆಜ್ಜೆ ಹಾಕಿದಾಗ
ಬಯಸಿದ ಬಯಕೆಗಳು ಒಲಿದಾಗ
ಮನವು ಖುಷಿಯಲಿ ಕುಣಿವುದಾಗ
ನಲಿದು ಮುಗಿಲಿಗೆ ಹಾರುವುದಾಗ

ಮನುಜನ ಆಸೆಗಳಿಗೆ ಮಿತಿಯಿಲ್ಲ
ಇನ್ನೂ ಬೇಕೆನ್ನುವ ದುರಾಸೆ ಸಲ್ಲ
ಆಶಾಕುದುರೆ ಏರಿ ಬೀಳುವ ಭಯವಿಲ್ಲ
ಮಿತಿಯ ಅರಿವಿದ್ದರೆ ಚೆಂದ ಜಗವೆಲ್ಲ


About The Author

Leave a Reply

You cannot copy content of this page

Scroll to Top