ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮುಂಬಯಿ ಮಹಾನಗರದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲ್ಪಡುವ ಗುಡಿಪಾಡವಾ ಶೋಭಾಯಾತ್ರೆಯು ಮಹಾರಾಷ್ಟ್ರ ರಾಜ್ಯದ ವಿಶಿಷ್ಟ, ವಿಶೇಷ ಸಂಸ್ಕೃತಿ ಮತ್ತು ಪರಂಪರೆಗಳ ಅದ್ಭುತ ಸಮನ್ವಯವಾಗಿದೆ..ಕಲಾ ಗುಣ, ಸಂಪ್ರದಾಯಗಳ ಜೊತೆಗೆ ಆಧುನಿಕ ಪೀಳಿಗೆಯ ನವೋತ್ಸಾಹ, ಉಲ್ಲಾಸ ನವಚೈತನ್ಯಗಳನ್ನು ಪ್ರತಿಬಿಂಬಿಸುವ ಈ ಮಹೋತ್ಸವ ಜಾತಿ‌ ಮತಗಳ ಬೇಧವಿಲ್ಲದೆ ಎಲ್ಲ ವರ್ಗದ ಜನರನ್ನು ಒಗ್ಗೂಡಿಸುವ ಅತ್ಯಂತ ಸಂಭ್ರಮದ ಆಚರಣೆಯಾಗಿದೆ. ಸಂಪ್ರದಾಯ, ಶ್ರದ್ಧೆ, ಭಕ್ತಿ ಸಂಸ್ಕೃತಿಯ ವೈಭವಗಳನ್ನೊಳಗೊಂಡ ಈ ಹಬ್ಬವನ್ನು ಕುಟುಂಬ ಮತ್ತು ಸಮಾಜದ ಸೌಹಾರ್ದತೆಯ ಸಂಕೇತವಾಗಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಗುಡಿಪಾಡವಾ ಹಬ್ಬವು ಭಗವಾನ್ ಬ್ರಹ್ಮನು ವಿಶ್ವವನ್ನು ಸೃಷ್ಟಿಸಿದ ವಿಶೇಷ ದಿನವೆಂದು ಹಲವಾರು ‌ನಂಬುತ್ತಾರೆ..
ಪ್ರಭು ಶ್ರೀರಾಮಚಂದ್ರ, ಸೀತೆ, ಲಕ್ಷ್ಮಣ ರು, ಹದಿನಾಲ್ಕು ವರ್ಷಗಳ ವನವಾಸ ಮುಗಿಸಿ ಮರಳಿ ಅಯೋಧ್ಯೆಗೆ ಬಂದ ದಿನವಾದ ‌ಕಾರಣ ಸಂಭ್ರಮದಿಂದ ಅವರ ಸ್ವಾಗತವನ್ನು ಆಚರಿಸಬೇಕೆಂಬ ನಂಬಿಕೆ ‌ಇದೆ. ಮಹಾರಾಷ್ಟ್ರದ ಛತ್ರಪತಿ ಶಿವಾಜಿ ಮಹಾರಾಜರ ಭಾರೀ ವಿಜಯೋತ್ಸವದ ಸಂಕೇತವೆಂಬ ನಂಬಿಕೆಯೂ ಇದೆ. ನಂಬಿಕೆಗಳು ಏನೇ ಇರಲಿ, ಮುಂಬಯಿಕರರೆಲ್ಲಾ ಒಂದಾಗಿ ಸೇರಿ ಏಕತೆ, ಉತ್ಸಾಹದಿಂದ ಈ ಶೋಭಾಯಾತ್ರೆಯನ್ನು ಆಚರಿಸುತ್ತಾರೆಂಬ ಮಾತು ಸತ್ಯ..ಮಹಾರಾಷ್ಟ್ರ ರಾಜ್ಯದ ಪುಣೆ, ನಾಶಿಕ್ ನಗರಗಳಲ್ಲಿಯೂ ವಿಶೇಷವಾಗಿ ಶೋಭಾಯಾತ್ರೆ ಆಚರಿಸಲ್ಪಡುತ್ತದೆ ಆದರೂ ಮುಂಬಯಿ ಮಹಾನಗರದ ಶೋಭಾಯಾತ್ರೆಯ ಶೋಭೆ ತುಸು ಹೆಚ್ಚೇ ಎನ್ನಬಹುದು..

ಚೈತ್ರ ಮಾಸದ ಶುಕ್ಲ ಪ್ರತಿಪದ ಬ್ರಹ್ಮ ಮುಹೂರ್ತದಲ್ಲಿ ಗುಡಿಪಾಡವಾ (ನಮ್ಮ ಯುಗಾದಿ) ಹಬ್ಬದ ಆರಂಭವಾಗುತ್ತದೆ.
ನಸುಕಿನಲ್ಲಿ ಎದ್ದು ಮನೆಯ ದೇವರ ಪೂಜೆ ಪುನಸ್ಕಾರಗಳನ್ನು ಮುಗಿಸಿಕೊಂಡು ಸಮೀಪದ ಶೋಭಾಯಾತ್ರೆಯಲ್ಲಿಯೂ ಪಾಲ್ಗೊಂಡು, ಕುಣಿದು ಕುಪ್ಪಳಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿ ಸಂಭ್ರಮಿಸುವ ಇವರ ಉತ್ಸಾಹ ಅತ್ಯಂತ ಶ್ಲಾಘನೀಯ..

ಗುಡಿ ಪಾಡವಾ ಹಬ್ಬದ ದಿನ ಮನೆಯ ಹೆಂಗೆಳೆಯರ ಸಂಭ್ರಮ ಹೇಳ ತೀರದು.
ತಳಿರು ತೋರಣಗಳಿಂದ, ಹೂಗಳಿಂದ ವರ್ಣರಂಜಿತ ರಂಗೋಲಿಗಳಿಂದ ಮನೆಯನ್ನು ಅಂದಗೊಳಿಸುತ್ತಾರೆ…
ಉದ್ದನೆಯ ಕೋಲಿಗೆ ಜರಿಯ ರೇಷ್ಮೆ ಸೀರೆಯನ್ನು ಉಡಿಸಿ ಅದರ ಮೇಲು ಭಾಗದಲ್ಲಿ ತಾಮ್ರ ಅಥವಾ ಬೆಳ್ಳಿಯ ತಂಬಿಗೆಯನ್ನು ಇರಿಸಿ, ಅರಶಿನ, ಕುಂಕುಮ, ಗಂಧಾಕ್ಷತೆ, ಮಾವಿನ ತಳಿರು, ಬೇವಿನ ಎಲೆ, ಪುಷ್ಪ ಹಾರಗಳಿಂದ ಅಲಂಕರಿಸುತ್ತಾರೆ..
ಬೆಂಡು ಬತ್ತಾಸಿನಿಂದ ತಯಾರಿಸಿದ ವಿಶೇಷ ಹಾರವನ್ನು ಹಾಕಿ, ಜೊತೆಗೆ ಕಬ್ಬಿನ ಜಲ್ಲೆಯನ್ನೂ ಕೋಲಿಗೆ ಕಟ್ಟಿ ಇಡುತ್ತಾರೆ.. ಬಾಲ್ಕನಿಯ ಮೇಲೆ ಅಥವಾ ಮುಂಬಾಗಿಲಿನ ಬಲಭಾಗದಲ್ಲಿ ಈ ಗುಡಿಯನ್ನು ಇರಿಸುತ್ತಾರೆ..ಮನೆಯ ಮುಂದೆ ಗುಡಿ ಸ್ಥಾಪನೆಯು ಶುಭಸಂಕೇತ ಹಾಗೂ ನಕಾರಾತ್ಮಕ ಶಕ್ತಿಗಳಿಗೆ ವಿರೋಧಿ ಎಂದು ಪರಿಗಣಿಸಲಾಗುತ್ತದೆ..ಇದನ್ನು ಮನೆ ಮೇಲ್ಭಾಗದಲ್ಲಿ ಎಲ್ಲರಿಗೂ ಗೋಚರಿಸುವಂತೆ ಇರಿಸುವುದರಿಂದ ಸಕಾರಾತ್ಮಕ ಭಾವ ತರಂಗಗಳ ಉತ್ಪನ್ನವಾಗುವುದೆಂದು ಇಲ್ಲಿಯ‌ ಜನ ನಂಬುತ್ತಾರೆ..

ಹಬ್ಬದ ದಿನದಂದು ನಸುಕಿನಲ್ಲಿಯೇ ಎದ್ದು ವಿಶೇಷ ಪೂಜೆ ಪುನಸ್ಕಾರಗಳನ್ನು ಮಾಡಿ, ಗುಡಿಯನ್ನು ಪೂಜಿಸುತ್ತಾರೆ..ಬೇವಿನ ಎಲೆ, ಹುಣಿಸೆ ಹಣ್ಣು, ಬೆಲ್ಲ ಮುಂತಾದ ಪದಾರ್ಥಗಳನ್ನು ಬಳಸಿ ಸಿಹಿ, ಕಹಿ, ಉಪ್ಪು,ಹುಳಿ,‌ಒಗರು‌, ಹೀಗೆ ಎಲ್ಲಾ ರುಚಿಗಳನ್ನೊಳಗೊಂಡ ವಿಶೇಷ ಚಟ್ನಿಯೊಂದನ್ನು ತಯಾರಿಸಿ ನೈವೇದ್ಯ ‌ಮಾಡುತ್ತಾರೆ..ಅದೇ ಪ್ರಸಾದವನ್ನು ಸ್ವೀಕರಿಸಿ,ಸಾಂಪ್ರದಾಯಿಕ ಉಡುಗೆ ತೊಡುಗೆಗಳಿಂದ ಸಾಲಂಕೃತರಾಗಿ ಮನೆಮಂದಿ ಎಲ್ಲರೂ ಶೋಭಾಯಾತ್ರೆಗೆ ಹೊರಡುತ್ತಾರೆ..ಹಬ್ಬದ ದಿನ ಕೆಲವರು ಮನೆಯಲ್ಲಿ ಶ್ರೀ ಸತ್ಯನಾರಾಯಣ ಪೂಜೆ ಮಾಡಿಸುತ್ತಾರೆ, ಬಹುತೇಕ ಮನೆಗಳಲ್ಲಿ ಶ್ರೀಖಂಡ,ಪೂರಿ, ಶಿರಾ ಅಥವಾ ಹೋಳಿಗೆಯ ನೈವೇದ್ಯ ಇರುತ್ತದೆ..

ಗುಡಿ ಪಾಡವಾ ಶೋಭಾಯಾತ್ರೆ ಎನ್ನುವುದು ಕೇವಲ ಮೆರವಣಿಗೆಯಷ್ಟೇ ಅಲ್ಲ..ಅದು ಸಂತಸ, ಸಂಸ್ಕೃತಿ, ಸಂಭ್ರಮಗಳ ಮಹಾ ಪ್ರವಾಹ!..ಮುಂಬಯಿ ಗಿರಗಾಂವ್ ನ ಐತಿಹಾಸಿಕ ಶೋಭಾಯಾತ್ರೆ ಅತ್ಯಂತ‌ ಪ್ರಸಿದ್ಧ ಮತ್ತು‌ ಜನಪ್ರಿಯವಾಗಿದೆ..ಇತ್ತೀಚೆಗೆ ನಗರದ ಇನ್ನಿತರ ಹಲವಾರು ‌ಪ್ರದೇಶಗಳಲ್ಲಿಯೂ ವಿಜೃಂಭಣೆಯಿಂದ ಆಚರಿಸಲಾಗುತ್ತದೆ..ಮುಂಬಯಿಯ ಬೀದಿಗಳು ಆ ದಿನ ದೈನಂದಿನ ಗಡಿಬಿಡಿಯನ್ನು ಮರೆತು, ಹೂ,‌ ಪತಾಕೆಗಳಿಂದ ಅಲಂಕೃತವಾಗಿ ಕಂಗೊಳಿಸುತ್ತವೆ..ಪ್ರತಿಯೊಂದು ಹಾದಿಯೂ ವೈಭವದಿಂದ ಅಭಿಮಾನ, ಗರ್ವಗಳಿಂದ ಬೀಗುತ್ತದೆ..ಬೀದಿ ಬದಿಯ ಪ್ರತಿ ಅಂಗಡಿಯ ಮುಂದೆಯೂ ಗುಡಿ,ರಂಗೋಲಿ ಹೂವಿನ ಅಲಂಕಾರ ನೋಡುಗರ ‌ಮಷ*@ನಸೆಳೆಯುವಂತೆ ಇರುತ್ತದೆ..

ಬೆಳಗಿನ ಹೊಂಬಿಸಿಲಿನ ಬಂಗಾರದ ಛಾಯೆ ಆವರಿಸಿದ ಸಮಯದಲ್ಲಿ ಮಹಿಳೆಯರು ಪೇಶ್ವಾಯಿ, ನವ್ವಾರಿ ಸೀರೆಯುಟ್ಟು, ಪಾರಂಪರಿಕ ನತ್ತು, ಚಂದ್ರ‌ಬಿಂದಿ, ತುರುಬಿನಿಂದ ಅಲಂಕರಿಸಿಕೊಂಡು,ಉತ್ಸಾಹದಿಂದ ‌ನಗುತ್ತ ನಲಿಯುತ್ತ ಸಾಗುವ ಹೆಂಗೆಳೆಯರನ್ನು ನೋಡುವುದೇ ಒಂದು ಸಂಭ್ರಮ..ಲೆಜೀಂ ನಾದದಲ್ಲಿ ಹೆಜ್ಜೆ ಹಾಕುತ್ತಾ, ಕುಣಿಯುತ್ತಾ ಸಾಗುವ ಹೆಣ್ಣುಮಕ್ಕಳ ಗುಂಪು ‌ಒಂದೆಡೆಯಾದರೆ, ಗಾಗಲ್ಸ್ ಧರಿಸಿ, ಪೇಟ ಕಟ್ಟಿಕೊಂಡು ಮೋಟಾರ್ ಸೈಕಲ್ ರ‍್ಯಾಲಿಯಲ್ಲಿ ಬೀಗುತ್ತ ಮನಸೆಳೆಯುವ‌ ನಾರಿಯರು‌ ಇನ್ನೊಂದೆಡೆ..ಪುರುಷರು, ಪುಟ್ಟ ವಯಸ್ಸಿನ ಮಕ್ಕಳು ಛತ್ರಪತಿ ಶಿವಾಜಿ ಮಹಾರಾಜ, ಸಂಭಾಜಿ‌ ಮಹಾರಾಜರ ಶೈಲಿಯ ಉಡುಗೆಯಲ್ಲಿ ತಲವಾರ್ ಹಿಡಿದು, ಶೌರ್ಯದಿಂದ ಜಯಕಾರ ಹಾಕುತ್ತ ಠೀವಿಯಿಂದ ಮೆರವಣಿಗೆಯಲ್ಲಿ ‌ನಡೆವುದನ್ನು‌ ನೋಡಲು ಕಣ್ಣೆರಡು ಸಾಲವು..

ವಾತಾವರಣದಲ್ಲಿ ಮಂಗಳಧ್ವನಿಯ ಶೋಭೆ ತಾರಕಕ್ಕೇರಿ, ಢೋಲ್ ತಾಷಾಗಳ ಭಾರೀ ಧ್ವನಿ ಶಂಖನಾದ, ಎಲ್ಲವೂ ಒಟ್ಟಿಗೆ ಸೇರಿ ಪವಿತ್ರ,ದಿವ್ಯ ಭವ್ಯ ಅನುಭವವನ್ನೇ ಉಂಟು ಮಾಡುತ್ತವೆ. ಆ ಢೋಲ್ ನ ತಾಳವಂತೂ ಅಪ್ರತಿಮ ಅನುಭವವನಿತ್ತು ಕೇಳುಗರ ಮೈಮನಗಳಲ್ಲಿ ವಿಲೀನವಾಗಿ ತಮಗರಿವೇ ಇಲ್ಲದಂತೆ ಹೆಜ್ಜೆ ಹಾಕುವಂತೆ ಮಾಡುತ್ತದೆ..
ಪಟಾಕಿಗಳ ಸದ್ದು, ಶಿವ‌ಗರ್ಜನೆ, ಜಯಕಾರಗಳ ಘೋಷಣೆ,ಕೇಸರಿ ‌ಪತಾಕೆಗಳ ಹಾರಾಟ..ಅಬ್ಬಾ ಶೋಭಾಯಾತ್ರೆ ಅದೆಷ್ಟು ಶ್ರೇಷ್ಠ ಎನಿಸುತ್ತದೆ.

ಸಾಂಸ್ಕೃತಿಕ ವೈಭವ, ಭಕ್ತಿಯ ಪಾವಿತ್ರ್ಯ, ಸಂಭ್ರಮದ ಆರ್ಭಟಗಳಿಂದ ತುಂಬಿದ ಈ ಗುಡಿ ಪಾಡವಾ ಶೋಭಾಯಾತ್ರೆ ನಿಜಕ್ಕೂ ಒಂದು ಅದ್ಭುತ ದೈವೀ ಯಾತ್ರೆ!..

ನನ್ನ ಗೆಳತಿಯರೊಂದಿಗೆ ನಾನು ಕಳೆದ ಎಂಟು ವರ್ಷಗಳಿಂದ, ಇಂತಹ ಶೋಭಾಯಾತ್ರೆಯನ್ನು ನಮ್ಮ ಸೊಸೈಟಿಯಲ್ಲಿ ಆಯೋಜಿಸಿ ಸಂಭ್ರಮಿಸುತ್ತಿದ್ದೇನೆ…ಇಡೀ ವರ್ಷದ ಎಲ್ಲಾ ಕಾರ್ಯಕ್ರಮಗಳಿಗಿಂತ ವಿಭಿನ್ನವಾಗಿ, ವಿಶೇಷವಾಗಿ ನಮ್ಮ ಈ ಮರಾಠಿ ಶೋಭಾಯಾತ್ರೆ ಪ್ರತಿ ವರ್ಷವೂ ಅತ್ಯಂತ ಯಶಸ್ವಿಯಾಗಿ ಜರುಗುತ್ತಿದೆ ಎಂದು ಹೇಳಲು ನನಗೆ ಹೆಮ್ಮೆ ಎನಿಸುತ್ತಿದೆ..ಈ ಸುಂದರ ಶೋಭಾಯಾತ್ರೆಯಲ್ಲಿ
ಪಾಲ್ಗೊಳ್ಳಲು ನೀವೆಲ್ಲರೂ ಒಮ್ಮೆ ‌ಮುಂಬಯಿಗೆ ಬನ್ನಿ..


About The Author

Leave a Reply

You cannot copy content of this page

Scroll to Top