ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಇದು ಯುದ್ಧ ಕಾಲ ಗೆಳತಿ
ಹಾಗೆ ನೋಡಿದರೆ
ಈ ಯುದ್ಧ ಇಲ್ಲಿ ಹೊಸದೇನಲ್ಲ…!
ಚರಿತ್ರೆಯೊಳಗಿನ
ಲೆಕ್ಕವಿಲ್ಲದಷ್ಟು ಪುಟಗಳು
ದಂಡೆತ್ತಿ ಹೋದ
ರಾಜಮಹಾರಾಜರ
ವೀರಾಧಿವೀರರ
ಶೌರ್ಯ ಪರಾಕ್ರಮಗಳಿಂದ
ವಿಜೃಂಭಿಸಿ ಹೋಗಿವೆ..!
ಹಾಗೆಯೇ
ಯುದ್ಧ ಮುಗಿದ ಮೇಲಿನ
ಭೀಕರತೆಯನ್ನು, ವಿನಾಶವನ್ನು
ಅವು ತಪ್ಪದೇ ನೆನಪಿಸುತ್ತವೆ..!
ಆದರೂ ಇಲ್ಲಿ
ಯುದ್ಧ ನಿಲ್ಲುವುದಿಲ್ಲ..!

ಹಗಲೆನ್ನದೆ,ಇರುಳೆನ್ನದೆ
ಮಳೆಯೆನ್ನದೆ, ಬಿಸಿಲೆನ್ನದೆ
ಜರುಗುತ್ತಲೆ ಇರುವ
ನೂರಾರು ಯುದ್ಧಗಳ ಕುರಿತಾಗಿ
ಯಾರು ತಲೆಕೆಡಿಸಿಕೊಳ್ಳುವುದಿಲ್ಲ..!

ನಿತ್ಯ ತುತ್ತು ಅನ್ನಕ್ಕಾಗಿ
ನರಳುವವರಿಗೆ
ಹಸಿವೆಯೊಂದಿಗಿನ
ಯುದ್ಧ ತಪ್ಪುವುದಿಲ್ಲ..!
ಮೈ ಬಗ್ಗಿಸಿ ದುಡಿಯುವವನ
ಬೆವರ ಯುದ್ಧ ನಿಲ್ಲುವುದಿಲ್ಲ..!
ಆಸ್ಪತ್ರೆಯಲ್ಲಿ ಮಲಗಿದವನ
ಸಾವು – ಬುದುಕಿನ ಯುದ್ಧ
ಇತ್ಯರ್ಥವಾಗದೆ ಉಳಿಯುವುದಿಲ್ಲ..!
ಹಾಗಾಗಿಯೇ ಯುದ್ದವೆಂದರೆ
ಅದು ಕೇವಲ ಬಂದೂಕು ಬಾಂಬುಗಳೆಂಬ
ಹುಸಿ ನಂಬಿಕೆಯಲ್ಲಿರಬೇಡ..!

ಇಲ್ಲಿ
ಮಾತುಗಳಿಂದಲೇ ಬೆಂಕಿ ಹೊತ್ತಿಸುವ
ಪ್ರಚಂಡ ವಿಚಾರವಾದಿಗಳಿದ್ದಾರೆ..!
ಅಕ್ಷರಗಳಲ್ಲೇ ವಿಷಬೀಜ ಬಿತ್ತುವ
ಆತ್ಮಘಾತುಕರಿದ್ದಾರೆ
ಬರೀಯ ಭಾಷಣದಲ್ಲಿ
ಹರಕೆಯ ಕುರಿಗಳ ತರುವ
ರಾಜಕೀಯ ದಲ್ಲಾಳಿಗಳಿದ್ದಾರೆ
ಇಲ್ಲದವರ ರಕ್ತಹೀರಲೆಂದೆ
ಉಳ್ಳವರ ಖಜಾನೆಯಲ್ಲಿ
ತುಂಬಿಟ್ಟ ಕಪ್ಪು ನೋಟುಗಳಿರುವಾಗ
ಶಾಂತಿಯ ಮಾತುಗಳು
ಹೇಗೆ ತಾನೇ ರುಚಿಸುತ್ತವೆ?

ಇಲ್ಲಿ ಪರಸ್ಪರ ಪ್ರೀತಿಸಿದವರ
ಬೆನ್ನ ಹಿಂದೆಯೂ ಟೀಕೆಗಳ ಯುದ್ಧವಿದೆ
ಪ್ರೇಮಿಸಿದರಂತೂ ಅದೊಂದು
ಮಹಾ ಹೋರಾಟದ ಗಾಥೆ..!
ಜಾತಿ- ಮತ- ಧರ್ಮ – ದೇವರುಗಳ ಹೆಸರಿನಲ್ಲಿ ಜರುಗುವ
ನೂರಾರು ತಿಕ್ಕಾಟಗಳು
ಕೊನೆಗಾಣುವುದೇ ಇಲ್ಲ..!

ಆದರೂ ಯುದ್ಧವೆಂದರೆ
ರಕ್ತಪಿಪಾಸುಗಳು ಹಪಹಪಿಸುವ
ತೆವಲುಗಳಿಗಿಂತ
ಯಾವ ಶಸ್ತ್ರಾಸ್ತ್ರಗಳು ಇಲ್ಲದೆಯೂ
ಹರೆಯದ ಪೋರಿಯೊಬ್ಬಳು
ತನ್ನ ಕಣ್ಣೋಟದಲ್ಲೇ
ಹತ್ತಾರು ಹುಡುಗರ ಕ್ಷಣಾರ್ಧದಲ್ಲಿ
ಕೆಡವಬಲ್ಲದರ ಕುರಿತು
ಯಾವ ಚಿಂತಕ ತಾನೇ ಯೋಚಿಸಿಯಾನು?
ಈಗಲೂ
ಒಂದೇ ಒಂದು ಬಿಂದಿಗೆಯ ನೀರಿಗೆ
ಬೀದಿಯಲ್ಲಿಯೇ
ಮಾರಾಮಾರಿ ರಂಪ ಮಾಡಿಕೊಂಡ
ಗರತಿಯರ ಸಂಕಟಗಳು
ಇಲ್ಲಿ ಗೇಲಿಗಳಾಗುತ್ತವೆ ಹೊರತು
ನೀರಿನ ಹಾಹಕಾರವಲ್ಲ..!

ಅಷ್ಟೇ ಏಕೆ?
ಬೆಳ್ಳಂಬೆಳಿಗ್ಗೆಯೇ ಕಿಕ್ಕಿರಿದು
ತುಂಬಿಕೊಳ್ಳುವ
ನೂಕು ನುಗ್ಗಲಿನ ನಡುವೆ
ಕೆಂಪು ಬಸ್ಸೊಂದರ ಸೀಟಿಗಾಗಿ
ಹಲುಬುತ್ತಾ
ಪ್ರಯಾಣದುದ್ದಕ್ಕೂ
ಅಪರಿಚಿತನನ್ನು
ಅನಾಮಧೇಯನನ್ನು
ಎದುರಾಳಿಗಳಂತೆ
ಪರಸ್ಪರ
ಕಿತ್ತಾಡಿಕೊಳ್ಳುವುದನ್ನು
ಆಮೇಲೆ ಗೊಣಗಿಕೊಂಡು
ಇನ್ನೆಲ್ಲೋ
ಇಳಿದುಕೊಂಡು ಹೋಗುವುದನ್ನು
ನೋಡಿದಾಗಲೆಲ್ಲಾ…
ಒಂದು ದೀರ್ಘ ಯುದ್ಧಕ್ಕೆ
ದೊರೆತ
ವಿರಾಮವೊಂದರ
ನಿಟ್ಟುಸಿರು ನಮ್ಮೆದೆಗೆ ತಾಕದಿದ್ದರೆ
ಈ ಯುದ್ಧಗಳ ಕುರಿತ
ನಮ್ಮ ತಿರಾಸ್ಕರವನ್ನು
ಇಲ್ಲಿಗೆ ನಿಲ್ಲಿಸಿ ಬಿಡೋಣಾ..!


About The Author

5 thoughts on ““ಪ್ರೇಮಿಸುವುದೇ ಒಂದು ಯುದ್ದ” ಪ್ರಶಾಂತ್ ಬೆಳತೂರು”

  1. ಪಾರ್ಥಸಾರಥಿ ಕೆ ಎಸ್

    ಕವಿತೆಯಾಗಿ ಒಂದು ಉತ್ತಮ ಕವಿತೆ
    ಅರ್ಥೈಸ ಹೊರಟರೆ ಹಲವಾರು ತಿರುವುಗಳನ್ನು ತುಂಬಿಕೊಂಡು ಇದು ಹೀಗೇ ಇದು ಸರಿ ..ಇದು ತಪ್ಪು ಅಂತ ಹೇಳಲಾಗುವುದಿಲ್ಲ..ನೋಡೋಣ ಯಾರು ಏನು ಬರೆಯುತ್ತಾರೆ ಅಂತ
    ಹರೆಯ ಆದರೆ ಸಾಮಾನ್ಯ ವಾಗಿ ಪೋರಿ ಆಗೋಲ್ಲ..ಹೆಣ್ಣು..ಯುವಕರ ಕೆಲಸ ಅದು

  2. ಕಾವ್ಯ ದೇವತೆ ಹೇಗೆ ಒಳಹೊಕ್ಕು ಹೊರಬರುವಳೋ
    ನಾ ಕಾಣೆ, ಕವಿತೆ ಸುಂದರವಾಗಿ ಮೂಡಿ ಬಂದಿದೆ.

Leave a Reply

You cannot copy content of this page

Scroll to Top