ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

    ಕಾಶ್ಮೀರ ಈಗ ಬರಿ ಕನಸಷ್ಟೆ
    ಪ್ರೇಮ ಕಣಿವೆಯ ನಡುವೆ
    ಕಂದರದ ಆಳ ಪಾತಾಳಕ್ಕಿಳಿದಿದೆ
    ಎರಡು ದಡಗಳು ದೂರ ದೂರ
    ಗಡಿಗಳಾಚೆ ಈಚೆ ಮುಸುಗುಡುವ ಅಬ್ಬರ
    ಕನಸುಗಳು ನನಸಾಗಿ
    ಪ್ರೇಮಿಗಳದೆಯಲ್ಲಿ ಪ್ರೀತಿಯ ಒರತೆ
    ಪ್ರೇಮಲೋಕದ ತುಂಬೆಲ್ಲ ಒಲವ ಸಿಂಚನ
    ಕ್ಷಣದಲ್ಲೇ…….
    ಬರಸಿಡಿಲೊಂದು ಎದೆ ಸೀಳಿ
    ಕನಸುಗಳೊಡೆದು
    ಸ್ವರ್ಗದಲ್ಲಿ ವಿಹರಿಸುವ ಮನಸುಗಳ
    ಶವಯಾತ್ರೆಯ ಮೆರವಣಿಗೆ……

 ಎಷ್ಟೋ ದಿನಗಳ ಕನಸು
   ಮಕ್ಕಳೊಂದಿಗೆ ಮಂಜಿನಾಟ
   ಹಿಮ ಗುಡ್ಡದ ತುದಿಯಲ್ಲಿ
   ಇದ್ದಕ್ಕಿದ್ದಂತೆ ತುಪಾಕಿಗಳ ಸದ್ದು
   ಗುಂಡಿನ ಸುರಿಮಳೆ
   ವಿಷವುಂಡ ಕ್ರಿಮಿಗಳು
   ಚಟಪಟನೆ ಸತ್ತು ಬಿದ್ದಂತೆ
   ಹುಳಕ್ಕಿಂತ ಕಡೆಯಾಯಿತು ಜೀವ
   ಎಲ್ಲವೂ ಕಣ್ಣ ರೆಪ್ಪೆಯ ಸನ್ನೆಯಂತೆ

  ಭಯ ದುಗುಡ ಆತಂಕ
   ನಿಟ್ಟುಸಿರು ಎಲ್ಲವೂ ಅಡಗಿ ಹೋದವು      
   ಕಣಿವೆಯ ಆಳದಲ್ಲಿ
   ತಣ್ಣಗಿದ್ದ ಭೂತಾಯಿಯ ಸೆರಗೆಳೆದು
   ರಕ್ತದೋಕುಳಿಯಾಟ
   ಕೆಣಕಿದರು ಕುಟುಕಿದರು
   ಎಲ್ಲೋ ಹುಟ್ಟಿದವರು
   ಇಲ್ಲಿಯವರೆಂಬಂತೆ
   ಮುಖವಾಡದ ಮರೆಯಲ್ಲಿ
   ವೇಷ ಮರೆಸಿಕೊಂಡ ಖೂಳರು

  ಮತ್ತೆ ಮುಗಿಲಲ್ಲಿ ಸೂತಕದ ಛಾಯೆ
    ಬದುಕುಳಿದವರ ಉಸಿರು ನಿಂತಂತೆ
    ನಿಟ್ಟುಸಿರು ಗಂಟಲಲ್ಲೇ ಉಳಿದು
    ದನಿ ಕಳೆದುಕೊಂಡರು
    ಬರ್ಫಿನ ಗಡ್ಡೆಯಲ್ಲಿ
    ಹೂತು ಹೋದವು ಮಾತುಗಳು
    ಮತ್ತೆ……
    ಸೂರ್ಯನೊಟ್ಟಿಗೆ ಹುಟ್ಟಿದ
    ಭಯ ಭುಗಿಲುಗಳು ಮುಖಕ್ಕೆರಚಿ
    ರಪ್ಪನೆ  ಹೊಡೆದಂತೆ
    ಮಗು ಅತ್ತಂತೆ ಮಂಜಿನೊಂದಿಗೆ
    ಕರಗಿ ಹೋದವು ಕಂಬನಿ
    ಹನಿ ಹನಿಯಾಗಿ
    ತಮ್ಮ ನೋವಿನ ಕಥೆಯನ್ನು ಹೇಳುತ್ತ……
    ಸೂರ್ಯನೊಟ್ಟಿಗೆ ಹುಟ್ಟಿ
    ಅವನೊಟ್ಟಿಗೆ ಸಾವು
    ಮುಗಿಯಲೇ ಇಲ್ಲ ನೋವುಂಡವರ ಕಥೆ


About The Author

Leave a Reply

You cannot copy content of this page

Scroll to Top