ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅವ್ವನ‌ ಮಣ್ಣು‌ ಮಾಡಿದ ಹೊಲದ
ಬದುವಿನ ಮೇಲೆ ಅವಳದೆ ನೆನಪುಗಳು
ಅಜ್ಜ‌ ಮುತ್ತಜ್ಜರ ನೆನಪಾಗಿ ನಿಂತ
ಹಳೆಯ ಬನ್ನಿ‌ ಮರದೊಂದಿಗೆ
ಅವ್ವನ‌ ನೆನಪೂ ತಳುಕು ಹಾಕಿ
ಎಲ್ಲ‌ ಕಲಸು‌ ಮೇಲೋಗರ

ಆಗೆಲ್ಲ ತುಂಬಿ‌ ನಿಂತ ಹೊಲದ ಬೆಳೆಗೆ
ಮದುವಣಗಿತ್ತಿಯಂತೆ ಸಿಂಗರಿಸಿಗೊಂಡು
ಬಂದ ಅವ್ವ ಚೆರಗ ಚೆಲ್ಲುತ್ತಿದ್ದಳು
ಚಿಳ್ಳೆಮಿಳ್ಳೆಗಳಾದ ನಾವು ಅವಳ ಸೀರೆಗೆ
ಅಂಟಿಕೊಂಡೆ
ಎಡವುತ್ತ ಬೀಳುತ್ತ
ಅವಳ ಸುತ್ತವೆ ಸುತ್ತುತ್ತಿದ್ದೆವು.

ಅವ್ವನಿಲ್ಲದ ಈ‌ ಮದ್ಯಾನ್ಹ
ರಣರಣ ಬಿಸಿಲಿನಲ್ಲಿ
ಅವಳದೆ ಧ್ಯಾನದಲಿ ಹೊಲದಲಿ‌
ಕುಳಿತಿದ್ದೇನೆ

ಇಲ್ಲ ಅವ್ವ ಎಲ್ಲೂ ಹೋಗಿಲ್ಲ ..
ಇಲ್ಲೆಲ್ಲೋ ಆಚೆ ಅಕ್ಕಡಿ ದಾಟಿ
ಕಸ ಕೀಳುತ್ತಿರಬಹುದು
ಮದ್ಯಾನ್ಹದ ಊಟಕ್ಕೆ ಹತ್ತರಕಿ
ಹರಿಯುತ್ತಿರಬಹುದು

ಅವಳಿದ್ದಾಗ ಒಂದು
ದಿನವೂ
ಈ‌ ಹೊಲಕ್ಕೆ ಬಾರದ ನಾನು
ಮತ್ತೆ ಅವಳದೆ ಇರುವಿಕೆಯ
ನನ್ನೊಳಗೆಯ ಆವಾಹಿಸಿಕೊಳ್ಳುವದಕ್ಕಾಗಿ
ಜೀವನದ ಈ ಸಂಧ್ಯೆಯ ಸಮಯಕ್ಕೆ
ಮತ್ತೆ ಹೊಲಕ್ಕೆ ಬರುತ್ತಿದ್ದೇನೆ

ಬಂದಾಗೊಮ್ಮೆ ಅವ್ವನ‌
ಮುಚ್ಚಿಕೊಂಡಿರುವ ಈ ಮಣ್ಣು
ನನಗೆ ದೇಗುಲದಂತೆ
ಅವಳ ಮಡಿಲಿನಂತೆ ಭಾಸವಾಗುತ್ತದೆ
ಈ ಇಳಿವಯಕೂ ಹೊಸ ಹೊಸ ಆಸೆ
ಮೂಡಿಸುತ್ತದೆ

ಈ ಕರಿ‌ಮಣ್ಣಿನ ಬರಿ ಹೊಲದಲ್ಲಿ
ಬಿತ್ತಿದ ಬೀಜದ ನಡುವೆ ಬೆಳೆಯಾಗಿ
ಅವ್ವ ಮತ್ತೆ ಮೂಡಿ ಬರಬೇಕು
ಹಸಿರಾಗಿ ನಳನಳಿಸಬೇಕು
ನನ್ನ, ಮೊಮ್ಮಕ್ಕಳ, ಬಂಧುಗಳ ತಾಗಿ
ಅಪ್ಪಿ
ಮಕ್ಕಳೇ ಎನಬೇಕು.

ಎಷ್ಟೊಂದು ಜೀವದಾಸೆಯ ಜೀವವಾಗಿದ್ದಳು
ಆ ಮಹಾದಾಯಿ! ಮಹಾಮಾಯಿ!!
ಮತ್ತೆ ಈ‌ ನಿರಾಕಾರ ಮಾನದ ಚಚ್ಚೌಕ ದಲ್ಲಿ
ಆಕೆ ರೂಪ ದಳೆಯಬೇಕು
ಹತ್ತು ಜನರ ಹೊಟ್ಟೆಗೆ ಜೋಳ ಗೋದಿ‌
ಕಡಲೆಯಾಗಿ ತುತ್ತು ನೀಡಬೇಕು

ಸಂಜೆಯ ಹೊತ್ತಿಗೆ
ಹಿಡಿ ಮಣ್ಣು ಹಿಡಿದು ನಮಿಸಿ
ಮತ್ತದೆ ನನ್ನ ಯಾಂತ್ರಿಕ ಬದುಕಿಗೆ
ಮರಳುತ್ತೇನೆ ..ಇಲ್ಲಿಗೆ ಬರಲು
ಇನ್ನೊಂದು
ದಿನಕೆ ಕಾಯುತ್ತ
ಮಹಾಮಾಯಿಗೆ ನಮಿಸುತ್ತ!!


About The Author

15 thoughts on “ಅವ್ವನಿಲ್ಲದ ಹೊಲದ ಬದುವಿನ‌ ಮೇಲೆ…ವೈ ಎಂ ಯಾಕೊಳ್ಳಿ”

  1. ಅವ್ವನಿಗೆ ಸಾವಿಲ್ಲ ಅವಳು ನಮ್ಮೊಂದಿಗೆ ಸದಾ ಜೀವಂತ.

    1. ಸರ್ಮ ಮಹಾದಾಯಿ ಮಹಾಮಾಯಿ ಕುರಿತು ಕವನ ಚೆನ್ನಾಗಿದೆ.ಎಸ್ ವಿ.ಮಾನಗುಂಡಿ

  2. ಡಾ ಶಶಿಕಾಂತ ಪಟ್ಟಣ ರಾಮದುರ್ಗ

    ಸರ್ ಅವನಿಲ್ಲದ ಬಾಳು
    ಉಪ್ಪಿಲ್ಲದ ಊಟ
    ಅವ್ವ ತವರಿನ ಸಿರಿ
    ಕಣ್ಣು ಒದ್ದೆಯಾದವು

  3. ಕೆ ಆರ್ ಸಿದ್ದಗಂಗಮ್ಮ

    ಯಾಕೊಳ್ಳಿಯವರೇ
    ಯಾವಾಗಲೂ ಅವ್ವ ನಮ್ಮಜೊತೆಗೆ ಇರುತ್ತಾಳೆ ನಾವಿರುವ ತನಕ ಎಂದುಕೊಂಡು ಎಸ್ತೊಂದು ಮಾತು ಉಳಿಸಿಕೊಂಡಿರುತ್ತೇವೆ ಅಲ್ಲವಾ
    ಅದನೆಲ್ಲ ಅವಳು ಕೇಳುವುದು ಎಂದು?

  4. ಅದ್ಬುತವಾದ ಅಂತರಾಳದ ನುಡಿಗಳು ಅವ್ವ ಗೆ ಸಾವಿರದ ಶರಣು.

  5. ಡಾ. ಮೀನಾಕ್ಷಿ ಪಾಟೀಲ್ ವಿಜಯಪುರ

    ಅವ್ವ ಕಪ್ಪು ನೆಲದಲ್ಲಿ ಹೊಲದ ಬದುವಿನಲ್ಲಿ ಕೆನಾಲಿನ ನೀರಿನಲ್ಲಿ ಮಳೆ ಬಿಸಿಲು ಗಾಳಿ ಹ**** ಪಕ್ಕಿಗಳಲ್ಲಿ ಹಸಿರು ಬೆಳೆಗಳಲ್ಲಿ ಬೇರೆ ಬೇರೆ ರೂಪಗಳಲ್ಲಿ ಅವ್ವ ಕಾಣಿಸಿಕೊಳ್ಳುತ್ತಾಳೆ ಅವ್ವ ಯಾವತ್ತು ನಮ್ಮ ಹೃದಯದ ಬಡಿತದೊಂದಿಗೆ ಜೀವಂತವಾಗಿರುತ್ತಾಳೆ ಅವನನ್ನು ಕಾವ್ಯವಾಗಿಸಿದ ನಿಮ್ಮ ಶೈಲಿ ಹೃದಯ ತಟ್ಟುವಂಥದ್ದು

  6. ಡಾ. ಮೀನಾಕ್ಷಿ ಪಾಟೀಲ್ ವಿಜಯಪುರ

    ಅವ್ವ ಕಪ್ಪು ನೆಲದಲ್ಲಿ ಮಳೆ ಬಿಸಿಲು ಗಾಳಿಯಲ್ಲಿ ಹರಿಯುವ ನೀರಲ್ಲಿ ಹಸಿರು ಬೆಳೆಗಳಲ್ಲಿ ಹ**** ಪಕ್ಕಿಗಳಲ್ಲಿ ನಿಸರ್ಗದಲ್ಲಿ ಜೀವಂತವಾಗಿರುವಳು ಯಾವತ್ತೂ ನಮ್ಮ ಹೃದಯದಲ್ಲಿ ಜೀವಂತವಾಗಿರುವವಳು ಅವ್ವ. ಅವನನ್ನು ಕಾವ್ಯವಾಗಿರಿಸುವ ನಿಮ್ಮ ಶೈಲಿ ಹೃದಯದಮ್ಮೆ

  7. ತಾಯಿ ಮತ್ತು ಮಗನ ಅಂತ:ಕರುಣ ಸಂಬಂಧ ಅನಂತ ಕುರಿತ ಕವಿತೆ ಸುಂದರ ವಾಗಿ ಮೂಡಿ ಬಂದಿದೆ ಸರ್.ಅಭಿನಂದನೆಗಳು.

Leave a Reply

You cannot copy content of this page

Scroll to Top