ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ತಡಕಿ ತಡಕಿ ತಡವರಿಸಿದೆ
ಕಣ್ಣು ಕಾಣುವಷ್ಟು ಬಯಲು ಬರಿ ಬಯಲು
ಬಯಲೆಂಬ  ಬಯಲೊಳಗೆ
ಹುಡುಕಿದೆ ಬಾಯಾರಿಕೆಯ ತಂಪಿಗೆ
ಕಾಣಲೇ ಇಲ್ಲ ಕಡೆಗೂ ಒಂದು ಹನಿ

ಸಾಕಿತ್ತು ಬೇಕಿತ್ತು ಬೊಗಸೆಯಷ್ಟೇ ಪ್ರೀತಿ
ಬಿಸಿಲ ಜಳದಲ್ಲಿ ಉರಿದು ಸಿಕಾದ ಮನಕೆ
ಒಡಲ ಕೆಂಡ ದುಂಡೆಗಳ ತಣಿವಿಗೆ
ಮಲಯ ಮಾರುತದ ಮಿಳಿತಕೆ
ಕಡೆಗೆ ಶಾಂತತೆಗೆ

ಅತ್ತಲೋ ಇತ್ತಲೋ ಎತ್ತಲಾದರೂ
ಬರಬಹುದೇ ನನ್ನತ್ತ
ಹಿಡಿದು ಬೋಗಸೆ ತುಂಬಾ ಪ್ರೀತಿಯನು
ಕುಡಿಸಿ ಕುಣಿಸುವವನ ಕಾಣಲು
ಒಂದೇ ಉಸಿರಲಿ ತೊಡರ ಕಾಲಲ್ಲಿ ನಿಂತೆ
ತುದಿಗಾಲಾಗಿ ಉಸಿರ  ಹಸಿರಲಿ
ಹರಸುತ್ತ  ಜೀವನದಿಯಾಗಿ

ನೆತ್ತಿ ಹತ್ತಿದ ಸೂರ್ಯ
ಏರು ಏರುತ್ತಲೇ  ಇದ್ದ ಒಳ ಬೆಂಕಿ
ಒಳ ಹೊರಗಿನ ತಾಪದ ಉರಿಯುವಿಕೆಗೆ
ಬಾಣಲೆಯ ಕುದಿಯ  ಕುರುಕಲ ಕರುಕಲಾಗಿದ್ದೆ .

ಇಳಿ  ಹೊತ್ತ ಹೊತ್ತು ತರುವ ಚಂದಿರನೆ
ಕಾದೆ ಕಾದೆ  ಬೋರ್ಗರೆವ ಕಡಲಾಗಿ
ಬೆಳದಿಂಗಳ ಬೆಳ್ಳನೆಯ ಬೆಳಕಾಗಿ
ಬುದ್ಧನಾಗಿ ಬಸವನಾಗಿ ನನಗೆ ನಾನಾಗಿ
ಕಂಡಿದ್ದೆ  ಪ್ರೀತಿಯ  ಬೊಗಸೆಯಲಿ

 ಡಾ. ಪದ್ಮ. ಟಿ. ಚಿನ್ಮಯಿ

About The Author

2 thoughts on “ಡಾ. ಪದ್ಮ. ಟಿ. ಚಿನ್ಮಯಿ ಅವರ ಕವಿತೆ-ಬುದ್ದನಾಗಿ”

  1. ಕೊನೆಯ ಸಾಲುಗಗಳಲ್ಲಿ ಪರಮಾರ್ಥದ ಸಾಕ್ಷಾತ್ಕಾರದ.ದರ್ಶನವಾಗಿದೆ ಪದ್ಮ.

Leave a Reply

You cannot copy content of this page

Scroll to Top