ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬೊಬ್ಬೆಯೇಳಿಸುವ ಮರಳಲ್ಲಿ ಬರಿ
ಪಾದಗಳ ಊರಿ ಅದೆಷ್ಟು ದೂರ ಸಾಗಿ ಬಂದಿದ್ದೇನೆ.!
ಬಿರುಮಳೆಗೆ ತೆರಳಿದ ನುರುಜುಗಲ್ಲುಗಳು ಅಂಗಾಲಲ್ಲಿ ರಕ್ತ ಕಾಣಿಸಿದರೂ ನಡೆದಿದ್ದೇನೆ.!

ಬರಿ ಪಾದಗಳಿಗಷ್ಟೇ ನೋವು ಗಾಯ.!
ಗುರಿ ಹೊಕ್ಕ ಮನಸಿನಲ್ಲಿ ಎಲ್ಲಾ ಕನವರಿಕೆಗಳು ಮಾಯ.!

ಇನ್ನೂ ನಡೆಯುತ್ತಲೇ ಇದ್ದೇನೆ.!
ಬಿಸಿಲಲ್ಲಿ ಪದೇ ಪದೇ
ಬದಲಾಗುವ ಓಯಸಿಸ್ಸಿನ ಕಡೆಗೆ.!
ಕಾಡಂಚಿನ ಹಸಿರಬಯಲಲ್ಲಿ
ಮಿಣುಕಿ ಮರೆಯಾಗುವ
ಮಿಂಚು ಹುಳುವಿನೆಡೆಗೆ.!

ಹುಚ್ಚನೆನ್ನಬಹುದು ನೀವು ತನ್ನಿಚ್ಛೆಗೂಡ
ನಡೆದಿರುವ ನನ್ನ.
ನಾ ಹುಡುಕಿ ಹೊರಟಿರುವೆ ನಿಮಗೆ ನಿಲುಕದ ಬೆಳಕನ್ನ.
ಮಾತುಗಳ ಹಂಗಿರದ ಮೌನದ ಮೇರು ಶಿಖರವನ್ನ.!

ಹಗಲೆನೋ ಬೇಯಿಸಬಹುದು.
ಇರುಳು ನೆರಳ ತರದಿರುವುದೇ?.

ನನ್ನ ದಾರಿಗೆ ಬೇಕಿಲ್ಲ ಯಾವ ದೀಪ ದೀಪಾವಳಿಗಳ ಗೊಡವೆ.!
ನೊಂದಿದ್ದೇನೆ ಬಳಲಿದ್ದೇನೆ ಗಾಳಿ ಊದಿ ದೀಪವಾರಿಸಿ ನಗುವ ಬಾಯಿಗಳ ನಡುವೆ.!!
ನನಗೆ ಗೊತ್ತಿದೆ
ಎಡವಿ ಬಿದ್ದರೆ ಅಂಡು ಬಡಿದುಕೊಂಡು ನಗಲು ಕೈಗಳೂ ಕಾದಿವೆ.!

ನಾನು ನಡೆವ ದಾರಿಗೆ ಸಗಣಿ ಹಾಕಿ ಸಾರಿಸಿ, ಹೂ ಪತ್ರೆಗಳ ಎರಚಿ..
ಅಕ್ಕ ಪಕ್ಕದಲೆಲ್ಲಾ ದೀಪಗಳ ಉರಿಸಿ.
ಇಕ್ಕೆಲಗಳಲ್ಲಿ ಸಾಲು ಮರಗಳ ನೆಡಿಸುವ ಮಹಾ ಮುಗುಳ್ನಗುವಿನ ಮನಸೆಲ್ಲಿದೆ ನಿಮಗೆ!?

ಕಲ್ಲೋ ಮುಳ್ಳೋ. ಮೋರಿಯೋ,ಚರಂಡಿಯೋ.
ಬೆಟ್ಟಕಣಿವೆಯೋ, ಬಯಲೋ.
ಎಲ್ಲವೂ ಒಂದೇ
ಚಳಿಯೇನು? ಗಾಳಿಯೇನು? ಪೂರಾ
ನೆಂದಿರುವ ನನಗೆ.!

ಬರೆದಿಟ್ಟು ಕೊಳ್ಳಿ ನಾನು ಗುರಿ ಮುಟ್ಟುವ ದಿನ.!
ನನ್ನ ಬೆವರ ಹನಿಯೆಲ್ಲಾ ಮುತ್ತಾಗುವ ಆ ದಿನ.!

ನಿಮ್ಮ ಮನಸಿನ ಮರುಭೂಮಿಯ ತುಂಬಾ ಪ್ರೀತಿಯ ಒಯಸಿಸ್ಸು ಹರಿಯುತ್ತದೆ.!
ನಿಮ್ಮ ಅಸೂಯೆಯ ಮುಳ್ಳು ಚುಚ್ಚಿದ ಕಣ್ಣುಗಳಿಗೆ ಕಣ್ಣೀರು ಪ್ರೀತಿಯ ಮುಲಾಮು ಹಚ್ಚುತ್ತದೆ.!

ನಿಮ್ಮ ಮನೆಯ ಗೇಟಿನ ಒಳಗಿನ ನಿಮ್ಮ ಸೋಲಿನ ನಾಯಿ ಕಚ್ಚುತ್ತದೆ ನಿಮ್ಮನ್ನೇ.!

ಆ ವಿಜಯಘೋಷದ ದುಂಧುಬಿಯಲ್ಲಿ ನೀವು ತೋರಿಯುವಿರಿ ಈ.ಮಣ್ಣನ್ನೇ.!!


About The Author

1 thought on “ಇಂದು ಶ್ರೀನಿವಾಸ್ ಅವರಕವಿತೆ-‘ಗುರಿಯ ಕಡೆಗಿನ ಹಾದಿ..’”

Leave a Reply

You cannot copy content of this page

Scroll to Top