ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಎನ್ನೆದೆಯಾಳದಲ್ಲಿ ಜನ್ಮಿಸಿದ
ನೂರಾರು ಬಡಿತದ ಭಾವಗಳು
ಧರೆಯ ಮಡಿಲಲ್ಲಿ ಚಿಗುರಿದಂತೆ
ಹೊಸ ಹೊಸ ತುಡಿತದ ಕನಸುಗಳು
ಒಮ್ಮೊಮ್ಮೆ ಕುಸುಮವಾಗಿ ಅರಳಿ
ಮತ್ತೊಮ್ಮೆ ಕಮರಿದ ಕ್ಷಣಗಳು

ಒಮ್ಮೊಮ್ಮೆ ಯಾರನ್ನು ಹಂಬಲಿಸಿ
ಅವರಿಗಾಗಿ ನವಜೀವನ ಬಯಸಿ
ಒಲವಿನ ಚೆಲುವಿನ ಕನಸುಗಳು ಮೂಡಿಸಿ
ಮೌನ ನಲಿಯುತ್ತಾ ಹೂವಂತೆ ಅರಳಿದರೆ
ಮತ್ತೊಮ್ಮೆ ಮುಳ್ಳುಗಳಿಂದ ಹೃದಯಪರಚಿ ಸುಮ್ಮನೆ ಕುಳಿತಂತಾಗುವುದು

ಅದು ಕುಂತಲ್ಲಿ ಚಿಂತಿಸುವುದು
ನನ್ನ ಭವ್ಯಭವಿಷ್ಯದ ಬಗ್ಗೆ
ಒಮ್ಮೊಮ್ಮೆ ಪರದಾಡುವುದು
ಪಾರಿವಾಹಕ ಸೆಳೆತದ ಬಗ್ಗೆ
ಮತ್ತೊಮ್ಮೆ ಉಗ್ರವಾಗದೆ ಅರಿವುದು
ಗೋಮುಖ ವ್ಯಾಘ್ರ ದ ಮಾನವರ ಬಗ್ಗೆ

ಒಮ್ಮೊಮ್ಮೆ ನನ್ನದೆಯ ಅರಗಿಳಿಯು
ಸುಮಧುರ ಅಕ್ಷರಗಳನ್ನು ಪೋಣಿಸಿ
ಮಾತಿನ ಮುತ್ತಿನ ಹೊಳೆ ಸುರಿಸಿದರೆ
ಮತ್ತೊಮ್ಮೆ ಮಾಗಿಯ ಕೋಗಿಲೆಯಂತೆ
ಮೂಕಭಾವವನ್ನು ಆವರಿಸಿಕೊಂಡು
ಅಕ್ಷರಗಳೋತ್ಪತ್ತಿಯನ್ನು ನಂದಿಸುವುದು

ಒಮ್ಮೊಮ್ಮೆ ಸೊಂಪಾಗಿಬೀಸಿ
ಹುಟ್ಟುಹಾಕುವುದು ಆಸೆಗಳ ಮನದೊಳಗೆ
ಆಶಾಗೋಪುರವನ್ನು ನಿರ್ಮಿಸಿ
ಹರುಷದಿ ಸೊಗಸಾಗಿ ಸಂತೈಸಿದರೆ
ಮತ್ತೊಮ್ಮೆ ಎಲ್ಲವ ಕೆಡವಿ
ಒಳಗೊಳಗೇ ಅತ್ತು ದುಃಖಿಸುವುದು

ಒಮ್ಮೊಮ್ಮೆ ಕುಸುಮದಂತೆ ಅರಳಿ
ಎಲ್ಲೆಡೆ ಸುಮಧುರ ಸೌರಭವ ತಾಸೂಸಿ
ಪ್ರಶಾಂತತೆಯನ್ನು ಹರಡುತ್ತಾ ತನ್ನತ್ತ ಸೆಳೆದಂತಾಗುವುದು
ಮತ್ತೊಮ್ಮೆ ಬಿಸಿಲ ಬೇಗೆಯಿಂದ ಕಮರಿ
ತನ್ನಲ್ಲಿನ ಅರಳಿದ ಸುಮದದಿವ್ಯತೆಯನ್ನು ಹಿಸುಕಿಹಾಕಿದಂತಾಗುವುದು

ಒಮ್ಮೊಮ್ಮೆ ಶಾಂತವಾಗಿ ಸಾಗುವ
ಸಣ್ಣಸಣ್ಣ ಜುಳುಜುಳು ಝರಿಗಳಂತೆ
ಮನದಾಳದ ಕೆಟ್ಟ ಕಲ್ಮಶಗಳನ್ನು
ತೊಳೆದು ಶುಚಿ ಮಾಡಿ ಸಾಗಿದರೆ
ಮತ್ತೊಮ್ಮೆ ಕುಪಿತ ಕಡಲ
ಉಬ್ಬರವಿಳಿತದಂತೆ ಎದೆಗಪ್ಪಳಿಸುವುದು

ಒಮ್ಮೊಮ್ಮೆ ಮುಂಬತ್ತಿಯ ಬೆಳಕಂತೆ
ಶಾಂತ ಕಿರಣಗಳ ಎಲ್ಲೆಡೆ ಬೀರುತ್ತಾ
ಮನದೊಳಗೆ ಮರಿ ಮಿಣುಕುಹುಳು
ಚೈತನ್ಯದಿಂದ ಹಾರಾಡಿ ಸುತ್ತದೆ
ಮತ್ತೊಮ್ಮೆ ಪ್ರಜ್ವಲಿಸುವ ಬೆಂಕಿಯಾಗಿ
ರೆಕ್ಕೆ ಸುಟ್ಟು ಬೀಳಿಸಿ ಎಲ್ಲವ ದಹಿಸುತ್ತದೆ

ಒಂದೆಡೆ ಮುಂಜಾವ ಭಾಸ್ಕರ ಇಣುಕಿದಾಗ
ಚಿಲಿಪಿಲಿ ನಾದದ ಸಂಗ ಲಭಿಸಿ
ಎದೆಯೊಳಗೆ ಭದ್ರವಾದ ಧನಾತ್ಮಕ
ಚಿಂತನೆಗಳನ್ನು ಮೂಡಿಸಿದರೆ
ಮತ್ತೊಂದೆಡೆ ಕಿಚ್ಚು ಬಾವ ತುಂಬಿರುವ
ಧ್ವನಿಗಳು ಸಂಪೂರ್ಣ ಋಣಾತ್ಮಕವಾಗಿಸುತ್ತವೆ

ಕಳೆದ ಸುಮಧುರ ಕ್ಷಣಗಳು
ನೈಜತೆಯ ಜೀವನಕ್ಕೆ ಹೋಲಿಕೆಯಾಗದೆ
ಮುಂದಿನ ಭವಿಷ್ಯದ ಬದುಕಿಗೆ
ಸರಿಯಾದ ಸ್ಪಷ್ಟತೆಯು ನಿಲುಕದೆ
ಚಿಂತಿಸಿ ನಾಳೆಯ ಬೆಳಕು ಕಾಣದೆ
ಹುಡುಕಿ ನೊಂದು-ಬೆಂದು ನಂತರ ನಿಶಬ್ದ

ಆಸೆಗಳ ಚಿತ್ರಣಕ್ಕೆ ದರ್ಪಣ
ರಾತ್ರಿ ಕಂಡ ಬಾವಿಗೆ ಹಗಲೊತ್ತು ಬಿದ್ದಂತೆ
ಕನಸುಗಳ ನೆನಪಲ್ಲಿ ಪಯಣ
ಕೊನೆಗೆ ಮಂಕುಮುಸುಕಿದ ಜೀವನ ಚಿತ್ರಣ
ಅದು ಎಲ್ಲವೂ ಮೌನದ ಆವರಣ
ಎಲ್ಲವೂ ಮೌನ ಎಲ್ಲವೂ ಮೌನ


About The Author

3 thoughts on “ಚಂದ್ರು ಪಿ ಹಾಸನ್ಅವರ ಕವಿತೆ-‘ಬಡಿತದ ಭಾವ ಅಲೆಗಳು’”

  1. ಹೃದಯದ ಭಾವ ಬಡಿತಕ್ಕೆ ಹೃದಯಾಂತರಾಳದ ನಮನಗಳು. ಸೊಗಸಾಗಿದೆ ಕವಿತೆ.

Leave a Reply

You cannot copy content of this page

Scroll to Top