ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ದಿನಗಳು ಉರುಳಿದವು, ತಿಂಗಳುಗಳು ಕಳೆದವು. ಅಮ್ಮನ ಅನುಪಸ್ಥಿತಿಯಲ್ಲಿಯೇ ಸುಮತಿಯ ಸೀಮಂತದ ಶಾಸ್ತ್ರವೂ ಮುಗಿಯಿತು. ಸುಮತಿಯ ಮನದಲ್ಲಿ ಈಗ ಆ ಪುಟ್ಟ ಕಂದನ ಕುರಿತಾದ ಸಂತಸದ ಆಲೋಚನೆಗಳಲ್ಲದೇ ಬೇರೆ ಏನೂ ಇರಲಿಲ್ಲ. ಈ ಸಮಯದಲ್ಲಿ ಒಳ್ಳೆಯ ಆಲೋಚನೆ ಮತ್ತು ಒಳ್ಳೆಯ ಪುಸ್ತಕಗಳನ್ನು ಓದಿದರೆ ಹುಟ್ಟುವ ಮಗುವಿನ ಮೇಲೆ ಅದರ ಪರಿಣಾಮವಿರುತ್ತದೆ. ಮಗುವಿನ ಮಾನಸಿಕ ಆರೋಗ್ಯ ಕೂಡಾ ಚೆನ್ನಾಗಿ ಇರುತ್ತದೆ ಎಂದು ಹಿರಿಯರು ಹೇಳಿದ್ದರು. ಹಾಗಾಗಿ ಅವಳು ಬಹಳ ಆಸಕ್ತಿಯಿಂದ ರಾಮಾಯಣ, ಮಹಾಭಾರತ, ಭಗವದ್ಗೀತೆ, ಭಾಗವತದಂತಹ ಅನೇಕ ಉತ್ತಮ ಪುಸ್ತಕಗಳನ್ನು ಓದುತ್ತಿದ್ದಳು. ಮಗುವಿನ ಮಾನಸಿಕ ಆರೋಗ್ಯ ಚೆನ್ನಾಗಿರಲಿ ಎಂದು ಸದಾ ಹಸನ್ಮುಖಿಯಾಗಿ ಇದ್ದು ಒಳ್ಳೆಯ ವಿಷಯಗಳನ್ನು ಯೋಚಿಸುತ್ತಾ ಉದ್ದಳು. ಮಾನಸಿಕ ನೆಮ್ಮದಿಗಾಗಿ ಧ್ಯಾನವನ್ನು ಮಾಡುತ್ತಿದ್ದಳು. ಸುಖಪ್ರಸವಾಗಲಿ ಎಂದು ಸದಾ ಚಟುವಟಿಕೆಯಿಂದ ಇರುತ್ತಿದ್ದಳು. ಆಗಾಗ ತನ್ನ ಉದರದ ಮೇಲೆ ಕೈಯನ್ನಿಟ್ಟು 

ಮಗುವಿನ ಜೊತೆ ಸಂಭಾಷಣೆಯಲ್ಲಿ ತೊಡಗುವಳು. ಮಗುವೂ ಅವಳ ಮಾತುಗಳನ್ನು ಆಲಿಸಿದಂತೆ ಅವಳೊಡನೆ ಸ್ಪಂದಿಸುತ್ತಿತ್ತು. ಆಗ ಸುಮತಿಗೆ ಅಪರಿಮಿತ ಆನಂದ. ಅವಳ ಮತ್ತು ಮಗುವಿನ ನಡುವೆ ಅವಿನಾಭಾವ ಸಂಬಂಧ ಏರ್ಪಟ್ಟಿತ್ತು. ಮಗುವಿನ ಮುಖವನ್ನು ಮನದಲ್ಲಿಯೇ ಚಿತ್ರಿಸಿಕೊಂಡು ಮುದಗೊಳ್ಳುತ್ತಿದ್ದಳು. ಮಗುವಿನ ಬಗ್ಗೆ ಹಲವಾರು ಹಗಲುಗನಸನ್ನು ಕಾಣುತ್ತಿದ್ದಳು. ಈಗಂತೂ ಹಗಲಿರುಳು ಅವಳಿಗೆ ಮಗುವಿನದೇ ಕಾಳಜಿ. ಮಗುವಿನ ಜೊತೆಗಿನ ಸಂಭಾಷಣೆಯ ಅವಳಿಗೆ ಬಹಳ ಪ್ರಿಯವೆನಿಸುತ್ತಿತ್ತು. ವೇಲಾಯುಧನ್ ಪತ್ನಿಯನ್ನು ಪ್ರತೀ ತಿಂಗಳೂ ತಪಾಸಣೆಗೆಂದು ಸಕಲೇಶಪುರದ ಸರ್ಕಾರಿ ಆಸ್ಪತ್ರೆಯ ಪ್ರಸೂತಿ ತಜ್ಞೆಯ ಬಳಿಗೆ ಕರೆದುಕೊಂಡು ಹೋಗುತ್ತಿದ್ದರು. 

ವೈದ್ಯರು ಈ ಸಮಯದಲ್ಲಿ ಪಾಲಿಸಬೇಕಾದ ಎಲ್ಲಾ ಸಲಹೆಗಳನ್ನು ನೀಡುತ್ತಾ ಸುಮತಿಯನ್ನು ಪ್ರಸವಕ್ಕೆ ಸಜ್ಜುಗೊಳಿಸುತ್ತಿದ್ದರು. ಅವಳ ಆತಂಕದ ಪ್ರಶ್ನೆಗಳಿಗೆಲ್ಲಾ ನಗುಮೊಗದಿಂದ ಉತ್ತರಿಸುತ್ತಿದ್ದರು. ಒಂಭತ್ತು ತಿಂಗಳಲ್ಲಿ ಸಣ್ಣ ನೋವು ಕಾಣಿಸಿಕೊಂಡರೂ ಕೂಡಲೇ ಆಸ್ಪತ್ರೆಗೆ ಬಂದು ದಾಖಲಾಗುವಂತೆ ಹೇಳಿದ್ದರು. ಅಂದೂ ಹಾಗೆಯೇ ಮನೆಯ ಕೆಲಸದಲ್ಲಿ ನಿರತಳಾಗಿದ್ದ ಸುಮತಿಗೆ ಸ್ವಲ್ಪ ಆಯಾಸದ ಅನುಭವವಾಯ್ತು. ಕಾಲುಗಳಲ್ಲಿ ಸೆಳೆತ ಸೊಂಟ ಹಾಗೂ ಹೊಟ್ಟೆಯಲ್ಲಿ ಸಣ್ಣಗೆ ನೋವು ಶುರುವಾಯಿತು. ಅಂದು ವೇಲಾಯುಧನ್ ಕಾರಣಾಂತರದಿಂದ ಕೆಲಸಕ್ಕೆ ಹೋಗಿರಲಿಲ್ಲ. ಹಾಗೂ ಹೀಗೂ ಸುಮತಿ ಮಧ್ಯಾಹ್ನಕ್ಕೆ ಅಡುಗೆ ಮಾಡಿಟ್ಟು ಪತಿಯ ಬಳಿಗೆ ಬಂದಳು. “ಏನೂಂದ್ರೆ ನನಗೇಕೋ ಹೊಟ್ಟೆ ಹಾಗೂ ಸೊಂಟದಲ್ಲಿ  ನೋವಾಗುತ್ತಿದೆ… ನೋವು ಬಂದಾಗ ಆಸ್ಪತ್ರೆಯಲ್ಲಿ ದಾಖಲಾಗಿ ಅಂತ ವೈದ್ಯರು ಹೇಳಿದ್ದರು”….

ಎಂದಳು.  ತಕ್ಷಣವೇ ವೇಲಾಯುಧನ್…”ಓಹ್ ಹೌದಾ ಹಾಗಾದರೆ ನಡೆ ಹೋಗೋಣ”…. ಎನ್ನುತ್ತಾ ಬಟ್ಟೆ ಬದಲಿಸಿ ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಯಾರಾದರು.  ಅಕ್ಕನ ಸಲಹೆಯಂತೆ ಆ ಸಮಯಕ್ಕೆ ಬೇಕಾದ ಬಟ್ಟೆ ಹಾಗೂ ಅಗತ್ಯವಾದ ಕೆಲವು ವಸ್ತುಗಳನ್ನು ಮೊದಲೇ ಒಂದು ಕೈ ಚೀಲದಲ್ಲಿ ಹಾಕಿ ಇಟ್ಟುಕೊಂಡಿದ್ದಳು. ಇಬ್ಬರೂ ಆಸ್ಪತ್ರೆಯ ಕಡೆಗೆ ನಡೆದರು.  ವಾಹನ ಸೌಕರ್ಯವು ಇಲ್ಲದ ಕಾರಣ ಆ ನೋವಿನಲ್ಲೂ ನಿಧಾನವಾಗಿ ಹೆಜ್ಜೆ ಇಡುತ್ತಾ ಆಸ್ಪತ್ರೆಯನ್ನು ತಲುಪಿದಳು. ಅವಳು ನೋವು ಸಹಿಸಿಕೊಂಡು ನಡೆಯುತ್ತಿರುವಾಗ ವೇಲಾಯುಧನ್ ಅವಳ ಕೈ ಹಿಡಿದುಕೊಂಡು ನಿಧಾನವಾಗಿ ನಡೆಯುವಂತೆ ಸೂಚಿಸಿದರು. ಪತಿಯ ಕೈ ಸ್ಪರ್ಶಕ್ಕೆ ನೋವು ಸ್ವಲ್ಪ ಕಡಿಮೆ ಆದಂತೆ ಅನಿಸಿ ಪತಿಯನ್ನು ನೋಡಿ ಮುಗುಳ್ನಕ್ಕು ಅವರ ಸಲಹೆಯಂತೆ ನಿಧಾನವಾಗಿ ಹೆಜ್ಜೆ ಹಾಕಿದಳು. 

ಆಸ್ಪತ್ರೆಯ ಬಳಿ ತಲುಪುತ್ತಾ ಇದ್ದಂತೆ ಅವಳಿಗೆ ನೋವು ವಿಪರೀತ ಎನಿಸತೊಡಗಿತು. ಬೆವರತೊಡಗಿದಳು. ಇದನ್ನು ಗಮನಿಸಿದ  ವೇಲಾಯುಧನ್ ಪತ್ನಿಯನ್ನು ಉದ್ದೇಶಿಸಿ… “ಬಾ ಇಲ್ಲಿ ಮೆಟ್ಟಿಲ ಮೇಲೆ ಸ್ವಲ್ಪ ಹೊತ್ತು ಕುಳಿತುಕೋ”…ಎಂದು ಹೇಳುತ್ತಾ ಅವಳನ್ನು ಮೆಟ್ಟಿಲಿನ ಮೇಲೆ ಕುಳ್ಳಿರಿಸಿದರು. ನಂತರ ಆಸ್ಪತ್ರೆಯ ಕಂಪೌಂಡರ್ ಹತ್ತಿರ ಹೋಗಿ ತನ್ನ ಪತ್ನಿಗೆ ಪ್ರಸವ ವೇದನೆ ಶುರುವಾಗಿದೆ. ಅವಳನ್ನು ಆಸ್ಪತ್ರೆಗೆ ದಾಖಲು ಮಾಡುವಂತೆ ಕೇಳಿಕೊಂಡರು. ಕಂಪೌಂಡರ್ ಸುಮತಿಯ ಹೆಸರನ್ನು ದಾಖಲಿಸಿ ಅಲ್ಲಿಯೇ ಇದ್ದ ಆಯಾಳಿಗೆ ಸುಮತಿಯನ್ನು ಪ್ರಸೂತಿ ಗೃಹಕ್ಕೆ ಕರೆದುಕೊಂಡು ಹೋಗುವಂತೆ ಹೇಳಿದರು.

ಅವರ ಹಿಂದೆಯೇ ಕೈ ಚೀಲವನ್ನು ಹಿಡಿದುಕೊಂಡು ವೇಲಾಯುಧನ್ ನಡೆದರು. ಪ್ರಸೂತಿ ಗೃಹ ತಲುಪಿದಾಗ ವೇಲಾಯುಧನ್ ರನ್ನು ಒಳಗೆ ಬರದಂತೆ ತಡೆದು ಆಯಾ ಹೇಳಿದರು. “ನೀವು ಇಲ್ಲಿಯೇ ಇರಿ ಇಲ್ಲಿ ಗಂಡಸರಿಗೆ ಪ್ರವೇಶವಿಲ್ಲ…. ಹೊರಗೆ ಇರುವ ಬೆಂಚ್ ಮೇಲೆ ಕುಳಿತುಕೊಳ್ಳಿ….ಏನಾದರೂ ಅಗತ್ಯ ಇದ್ದಾಗ ನಾವೇ ಇಲ್ಲಿ ಬಂದು ನಿಮಗೆ ತಿಳಿಸುತ್ತೇವೆ”… ಎಂದು ಹೇಳಿ ಅವರ ಕೈಯಿಂದ ಕೈ ಚೀಲವನ್ನು ಪಡೆದುಕೊಂಡು ಸುಮತಿಯನ್ನು ಒಳಗೆ ಕರೆದುಕೊಂಡು ನಡೆದರು. ಅಲ್ಲಿ ಆ ದೊಡ್ಡ ವಾರ್ಡನ್ನು ಪ್ರವೇಶಿಸುತ್ತಾ ಇದ್ದಂತೆ ಪುಟ್ಟ ಮಕ್ಕಳನ್ನು ಪಕ್ಕದಲ್ಲಿ ಮಲಗಿಸಿಕೊಂಡಿದ್ದ ಹಲವಾರು ತಾಯಿಯರನ್ನು ಕಂಡಳು. ಓಹ್!! ತಾನೂ ಕೂಡಾ ಹೀಗೆಯೇ ಪುಟ್ಟ ಮಗುವಿನ ತಾಯಿಯಾಗುವೆ ಎಂದುಕೊಳ್ಳುತ್ತಾ ಆ ನೋವಿನಲ್ಲೂ ಮೆಲುವಾಗಿ ನಕ್ಕಳು. ಅವಳ ನಗುವನ್ನು ಕಂಡ ದಾದಿಯು “ಬಾರಮ್ಮಾ ಸುಮತಿ… ಇನ್ನೂ ಸ್ವಲ್ಪ ಹೊತ್ತಿಗೆ ನೀನು ಕೂಡಾ ಇವರೆಲ್ಲರಂತೆ ಮಗುವನ್ನು ಮುದ್ದಾಡುವೆ”…. ಎಂದು ಹೇಳುತ್ತಾ ಒಳಗಿರುವ ಪ್ರಸೂತಿ ಕೊಠಡಿಗೆ ಕರೆದುಕೊಂಡು ಹೋದರು.

ದಾದಿಯ ಸಂಗಡ ಒಳಗೆ ಹೋದ ಸುಮತಿಗೆ ಒಳಗೊಳಗೇ ಸ್ವಲ್ಪ ಅಳುಕು, ಅಲ್ಲಿ ಇಟ್ಟಿದ್ದ ಸಾಮಗ್ರಿಗಳನ್ನು ಕಂಡು ಸ್ವಲ್ಪ ಹೆದರಿಕೆಯೂ ಆಯಿತು. ಅವಳ ಆತಂಕವನ್ನು ಕಂಡ ದಾದಿ ” ಹೆದರಬೇಡ ನಾವೆಲ್ಲಾ ಇಲ್ಲಿ ಇದ್ದೇವೆ… ಇನ್ನೇನು ವೈದ್ಯರು ಕೂಡಾ ಬರುವರು”…ಎಂದು ಹೇಳುತ್ತಾ ಅವಳ ಭುಜವನ್ನು ಹಿಡಿದು ಸಾಂತ್ವನ ಪಡಿಸಿದರು. ಸುಮತಿಯನ್ನು ಪ್ರಸ್ತವಕ್ಕೆ ಅಣಿ ಮಾಡಿದರು. ಸೊಂಟಕ್ಕೆ ಒಂದು ಇಂಜೆಕ್ಷನ್ ಕೊಟ್ಟರು. ಆಗ ಸುಮತಿಗೆ ನೋವು ಇನ್ನೂ ಅಧಿಕವಾಗುತ್ತಾ ಇರುವಂತೆ ಅನುಭವ ಆಯ್ತು. ನೋವಿನಿಂದ ತುಟಿಯನ್ನು ಕಚ್ಚಿ ಮುಖ ಕಿವುಚಿಕೊಂಡಳು. ಇದನ್ನು ಗಮನಿಸಿದ ದಾದಿಯು ಪ್ರಸೂತಿ ತಜ್ಞೆಯನ್ನು ಕರೆತರುವಂತೆ ಆಯಾಳಿಗೆ ಸೂಚಿಸಿದರು. ವೈದ್ಯರು ಬರುವಾಗ ಹೊರಗೆ ಬೆಂಚೀನ ಮೇಲೆ ಕುಳಿತಿದ್ದ ವೇಲಾಯುಧನ್ ರನ್ನು ಕಂಡು ಮುಗುಳ್ನಕ್ಕು ಒಳಗೆ ಮಲಗಿದ್ದ ಸುಮತಿಯ ಬಳಿಗೆ ಬಂದು ಅವಳನ್ನು ಪರಿಶೋದಿಸಿ ಈಗಲೇ ಹೆರಿಗೆ ಆಗುವುದೆಂದು ಖಚಿತ ಪಡಿಸಿಕೊಂಡು ದಾದಿಯರಿಗೆ ಕೆಲವು ಸಲಹೆಯನ್ನು ಕೊಟ್ಟು ಸುಮತಿಯ ತಲೆಯನ್ನು ನೇವರಿಸಿದರು. ಈಗ ಸುಮತಿಗೆ ನೋವು ಇನ್ನೂ ಹೆಚ್ಚಾಗುತ್ತಾ ಇರುವಂತೆ ಅನಿಸಿ ಮೆಲ್ಲಗೆ ಅಮ್ಮಾ ಎಂದಳು. ಮನದಲ್ಲಿ ತನ್ನ ಇಷ್ಟ ಶ್ರೀ ಕೃಷ್ಣನನ್ನು ಧ್ಯಾನಿಸಿದಳು. ಈಗ ಸಹಿಸಲಾರದ ಅತೀವ ನೋವಿನ ಅನುಭವವಾಯ್ತು ಸುಮತಿಗೆ. ಜೊತೆಗೆ ಪುಟ್ಟ ಮಗುವಿನ ಆಳುವೂ ಕೇಳಿಸಿತು. ಮಗುವಿನ ಅಳುವಿನ  ಧ್ವನಿ ಹೇಳಿದಾಗ ಸುಮತಿ ಸಂಭ್ರಮಿಸಿದಳು. ತಾನು ಇಷ್ಟು ಹೊತ್ತೂ ಅನುಭವಿಸಿದ ಮಾರಣಾಂತಿಕ ನೋವನ್ನೆಲ್ಲಾ ಮರೆತಳು. ” ಅಮ್ಮಾ ನಾನು ನಿನ್ನಂತೆಯೇ ತಾಯಿಯಾದೆ….ಎಲ್ಲಿರುವೆ ಅಮ್ಮಾ ಈಗಲಾದರೂ ಬರಲಾರೆಯಾ…. ಕೃಷ್ಣಾ ಅಮ್ಮನನ್ನು ಆದಷ್ಟು ಬೇಗ ಇಲ್ಲಿಗೆ ಬರುವಂತೆ ಮಾಡು”…. ಎಂದು ತನ್ನಲ್ಲಿ ತಾನೇ ಹೇಳಿಕೊಳ್ಳುತ್ತಾ ಕಣ್ಣನ್ನು ಬಿಗಿಯಾಗಿ ಮುಚ್ಚಿ ಪ್ರಾರ್ಥಿಸಿದಳು. ಮಗುವಿನ ಕರುಳ ಬಳ್ಳಿಯನ್ನು ಕತ್ತರಿಸಿದ ವೈದ್ಯರು ಅಮ್ಮ ಮತ್ತು ಮಗುವನ್ನು ಬೇರ್ಪಡಿಸಿ, ರಕ್ತಸಿಕ್ತವಾಗಿದ್ದ ಆ ಮಗುವನ್ನು ಸುಮತಿಗೆ ತೋರಿಸುತ್ತಾ…. “ನೋಡು ಸುಮತಿ ನಿನ್ನ ಮುದ್ದು ಮಗುವನ್ನು”… ಎಂದು ಹೇಳುತ್ತಾ ಅವಳ ಮುಂದೆ ಹಿಡಿದರು.


About The Author

Leave a Reply

You cannot copy content of this page

Scroll to Top