ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

 ಅವ್ವ ಎನ್ನುವ ಪದಕ್ಕೆ ಪರ್ಯಾಯವೇ ಇಲ್ಲ ಅಂತ ನಾನಂದುಕೊಂಡಿದ್ದರೆ ತಪ್ಪಾಗಬಹುದೇನೋ. ಅವ್ವ ಎಂದರೆ ಕಡಲು,ಅವ್ವ ಎಂದರೆ ಸಪ್ತ ಸಾಗರ,ಅವ್ವ ಎಂದರೆ ಆಕಾಶ, ಅವ್ವ ಎಂದರೆ ಭೂಮಿ,ಅವ್ವ ಎಂದರೆ ಅದ್ಭುತ ಹೀಗೆ ಹಲವು ಆಯಾಮಗಳಿಂದ ನನ್ನ ಅರ್ಥಕ್ಕೆ ನಿಲುಕಿದವಳು ಅವ್ವ. ಪ್ರೀತಿ,ಮಮತೆ,ವಾತ್ಸಲ್ಯ,ಕರುಣೆ,ದಯೆ,ಮಾನವೀಯತೆ,ಇವೆಲ್ಲವುಗಳನ್ನು ಪ್ರೀತಿಸಿ ಪ್ರೀತಿಯಿಂದ ಧಾರೆಯೆರೆದವಳು. ಈ ಜಗದ ಅಪರೂಪದ ದೇವರು. ದೇವರು ತಾನು ಎಲ್ಲೆಡೆಯೂ ಇರಲಾರನೆಂದು ತಾಯಿಯನ್ನು ಸೃಷ್ಟಿಸಿದ ಎಂಬ ಮಾತನ್ನು ಬಲ್ಲವರಿಂದ ಕೇಳಿರಬಹುದು. ಮನುಷ್ಯ ಹುಟ್ಟಿನಿಂದ ಉಸಿರಿರುವ ತನಕ ಅಷ್ಟೇ ಯಾಕೆ  ಉಸಿರು ನಿಲ್ಲುವಾಗಲೂ ‘ಅವ್ವ’ ಎಂದೇ ಉಸಿರು ನಿಲ್ಲಿಸುತ್ತಾನೆ.ಅವ್ವ ಎಂದರೆ ಹೃದಯದಲ್ಲಿ ಮಿಡಿತ ತುಡಿತವನ್ನೊಳಗೊಂಡ ಆರ್ದ್ರ ಮನಸ್ಸಿನ ಪ್ರತಿರೂಪ. ನೆಲ-ಕುಲ ಜಾತಿ-ಧರ್ಮ ಗಡಿ-ಸೀಮೆ ಭಾಷೆ-ಜನಾಂಗ ಇವ್ಯಾವುದರ ಹಂಗಿಲ್ಲದೆ ಮಾನವ ಕುಲ ಒಪ್ಪಿಕೊಂಡ ಜೀವಂತ ದೇವರು ತಾಯಿ. ಜಗತ್ತಿನಾದ್ಯಂತ ಏಕಭಾವದಿಂದ ಗೌರವಿಸಲ್ಪಡುವವಳು ತಾಯಿ ಮಾತ್ರ. ದೇವರು ಸೃಷ್ಟಿಸಿದ ಈ ಜಗದ ಅಪರೂಪದ ಅಚ್ಚರಿ ತಾಯಿ.ಎಂಥವರ ಬಾಳಿನಲ್ಲೂ ಕೊನೆಯಲೊಮ್ಮೆ ನೆನಪಾಗಿ ಬಿಡುವ ನೆನಪಾಗುತ್ತಲೆ ತಲ್ಲಣಗೊಳಿಸುವ  ಅವ್ವ ಎಲ್ಲರ ಬಾಳಿನ ಬೆಳಕು. ಅವಳಿಲ್ಲದೆ ಬಾಳು ಇಲ್ಲ.ಸಂಸಾರದ ಎಂಥ ಕಷ್ಟಗಳಲ್ಲೂ ಗಂಡ-ಮಕ್ಕಳು,ಅಣ್ಣ-ತಮ್ಮಂದಿರು, ಸಂಬಂಧಿಗಳು ಯಾರೇ ಇರಲಿ ಅವರಿಗಾಗಿ ಮಿಡಿಯುವ ಹೃದಯವೆಂದರೆ  ಅದು ಅವ್ವನದು ಮಾತ್ರ.

            ನನ್ನವ್ವ ಭೂತಾಯಿಯ ಮಗಳು,ಕಪ್ಪು ನೆಲದ ನೆರಳು.ಒಂದರಗಳಿಗೆಯು ಭೂತಾಯಿಯನ್ನು ಬಿಟ್ಟಿರಲಾರದವಳು.ಇನ್ನೂ ಹೆಚ್ಚುಗಾರಿಕೆಯಿಂದ ಹೇಳಬೇಕೆಂದರೆ  ಅವಳ ಕೇರಾಫ ಅಡ್ರೆಸ್ಸ್  ಭೂತಾಯಿಯ ಮಡಿಲು.ದುಡಿಯುವುದೊಂದೆ ಗೊತ್ತು.ಒಂದು ದಿನವೂ ಪುರುಸೊತ್ತಿಲ್ಲದ ಅವ್ವನಿಗೆ ಗಂಡ ಮಕ್ಕಳು,ಮನೆ ಮಂದಿ, ಹಬ್ಬ ಹುಣ್ಣಿವೆ ಎಲ್ಲವೂ ಒಂದೇ ಭೂತಾಯಿಯ ಒಡಲು.

         ಕೂಡು ಕುಟುಂಬ  ನಾಲ್ಕೆತ್ತಿನ ವಗತಾನ, ಇದ್ದೂರಾಗ ಒಕ್ಕಲುತನದ ಮನೆತನಕ್ಕೆ ಮದುವೆ ಮಾಡಿಕೊಟ್ಟಿದ್ದ ನಮ್ಮಜ್ಜ. ತವರಿನಲ್ಲಿ ಕೃಷಿ ಕಾಯಕದ ಅನುಭವವಿದ್ದ ಅವಳಿಗೆ ಗಂಡನಮನೆ ಹೊಸದೆನಸಲಿಲ್ಲ. ಗ್ರಾಮೀಣ ಭಾಗದಲ್ಲಿ ಮದುವೆಯಾದ ಹೆಣ್ಣು ಮಕ್ಕಳು ಗಂಡನ ಮನೆಯಲ್ಲಿ ಮನೆ ಕೆಲಸದ ಎಲ್ಲಾ ಜವಾಬ್ದಾರಿಯನ್ನು ಹೊತ್ತುಕೊಂಡು ಮನೆವಾಳ್ತೆ ಎಂಬುವ ಮನೋಭಾವವನ್ನು ಹೊಂದಿರುತ್ತಾರೆ. ಮದುವೆಯಾದ ಕೆಲವೇ ದಿನಗಳಲ್ಲಿ ಹೊಲದ ಕೆಲಸಕ್ಕೆ ಅಣಿಯಾದಳು.  ಹೊಸ ಜೋಡಿ ಪರಸ್ಪರ ಭೇಟಿ, ಒಬ್ಬರನ್ನೊಬ್ಬರು ನೋಡುವ ಕಾತುರ, ನಿರೀಕ್ಷೆ, ಹಂಬಲ ಮಾತುಕತೆ ಹೊಲದಲ್ಲಿಯೇ ಆಗಬೇಕು. ಅಪ್ಪ ಅವ್ವನನ್ನು ಎಷ್ಟು ಪ್ರೀತಿಸುತಿದ್ದನೆಂದರೆ ಹೊತ್ತು ಮುಳುಗಿದರೂ ಮನೆಗೆ ಹೋಗುವ ಅವಸರವಿರಲಿಲ್ಲ. ಮನೆಗೆ ಹೋದ ಮೇಲೂ ಅವಳ ಮುಖ ನೋಡುವುದು ಮಲಗುವಾಗ ಮಾತ್ರ.

 ಕಾಲ ಸರಿದಂತೆಲ್ಲ ಆರು ಮಕ್ಕಳ ತಾಯಿಯಾದಳು ಅವ್ವ. ದಿನ ಕಳೆದಂತೆ ಕೂಡು ಕುಟುಂಬಗಳು ಕಾಂಪ್ಯಾಕ್ಟ್ ಕುಟುಂಬಗಳಾದವು. ಲೋಕ ರೂಢಿಯಂತೆ ಹೊಲ-ಮನಿ ದನ-ಕರು ಅವರವರ ಪಾಲಿಗೆ ಹಂಚಿಕೆಯಾದವು. ಎರಡೆತ್ತಿನ ಕಮತ ಅಪ್ಪ ಅವ್ವನ ಪಾಲಿಗೆ ಬಂದಿದ್ದವು. ಹೈನಕ್ಕ ಅಂತ ಎರಡು ಎಮ್ಮೆ ಎರಡು ಆಕಳು ಇವುಗಳನ್ನು ಇಟ್ಟುಕೊಂಡರು. ಆಗಂತೂ ಅವ್ವನ ದುಡಿಮೆ ಇನ್ನೂ ಹೆಚ್ಚಾಗಿತ್ತು; ನೊಗ ಹೊತ್ತ ಎತ್ತಿನಂತೆ.  ಬಿಡುವಿಲ್ಲದ ಕಾಯಕ ಅವಳನ್ನು ಬಿರುಸಾಗಿಸಿತ್ತು. ಜೊತೆಗೆ ಜವಾಬ್ದಾರಿಗಳು. ಅಪ್ಪ ಯಾವತ್ತು ಸಂಸಾರಕ್ಕಾಗಿ ತಲೆಕೆಡಿಸಿಕೊಂಡವನಲ್ಲ. “ಆಳಾಗಿ ದುಡಿ” ಎನ್ನುವ ಮಾತಿಗೆ ಅನ್ವರ್ಥಕನಾಗಿದ್ದ. ಹೀಗಾಗಿ ಮನೆಯ ಎಲ್ಲಾ ವ್ಯವಹಾರಗಳನ್ನು ನಿರ್ವಹಿಸಿಕೊಂಡು ಹೋಗುವುದು ಅವ್ವನಿಗೆ ಅನಿವಾರ್ಯವಾಯಿತು. ನಾನು ಮತ್ತು ನನ್ನ ತಂಗಿ ಐದಾರನೇ ಕ್ಲಾಸಿನಲ್ಲಿ ಓದುತ್ತಿದ್ದೆವು. ಅವ್ವನ ಕೆಲಸ ಕಾರ್ಯದಲ್ಲಿ ಸಹಾಯ ಮಾಡುವಷ್ಟು ದೊಡ್ಡವರಾಗಿದ್ದೆವು. ದನಗಳಿಗೆ ಹುಲ್ಲು ತರಲು ನಮ್ಮನ್ನು ಹೊಲಕ್ಕೆ  ಕರೆದುಕೊಂಡು ಹೋಗುತ್ತಿದ್ದಳು. ಬೆಳಕು ಹರಿಯುವ ಮೊದಲೇ ನಮ್ಮನ್ನು ಎಬ್ಬಿಸಿಕೊಂಡು ಊರ ಮುಂದಿನ ಕಲ್ಲಪ್ಪಜ್ಜನ ಶೇಂಗಾದ ಹೊಲಕ್ಕೆ ಕರೆದೊಯ್ಯುತ್ತಿದ್ದಳು.
.ಚುಮು ಚುಮು ಬೆಳಕು ಮೂಡುವುದರೊಳಗೆ ಹೊಲದಾಗ ಇರಬೇಕು. ಶೇಂಗಾದ ಹೊಲದಾಗ ಬೆಳೆ ಮಧ್ಯೆ ಎದೆಯುದ್ದ ಬೆಳೆದ ಸಿಂಪಿಗ್ಯಾನ ಹುಲ್ಲ ನೋಡಿ ಅವ್ವಗ ಹಿಗ್ಗ ಆಕ್ಕಿತು.ಸಿಂಪ್ಪಿಗ್ಯಾನ ಹುಲ್ಲು ಅಂದರೆ ದನಕರುಗಳಿಗೆ ಅತ್ಯಂತ ಪ್ರೀತಿ ಅಂತ ಅವ್ವ ಹೇಳುತ್ತಿದ್ದಳು.

   ಮೂರು ಗಂಟು ಹುಲ್ಲು ಆರು ದಿನ ಮೇಯಿಸುತಿದ್ದಳು. ಹುಲ್ಲಿನ ಹೊರೆ ಹೊತ್ತುಕೊಂಡು ಮನೆ ಹಾದಿ ಹಿಡಿಯುವಲ್ಲಿ ಅಪ್ಪಿ ತಪ್ಪಿ ಕಲ್ಲಪ್ಪಜ್ಜ ಕಣ್ಣಿಗೆ ಬಿದ್ದರ “ ಯಜ್ಜ ನಿನ್ನ ಶೇಂಗಾದ ಹೊಲ ಹಸುನಾತು ಬೈಬೇಡಪ ದನ-ಕರುಗಳಿಗೆ ಒಂದಿಷ್ಟು ಹುಲ್ಲು ಮಾಡಿಕೊಂಡಿನಿ” ಎಂದು ಒಂದೇ ಉಸಿರಿಗೆ ಅವನ ಮಾತಿಗೆ ಮೊದಲೇ ತಾನೇ ಸಮಜಾಯಿಸಿ ಹೇಳಿ ಜಾರಿಕೊಳ್ಳುತ್ತಿದ್ದಳಾದರೂ ಒಮ್ಮೊಮ್ಮೆ ಕಲ್ಲಪ್ಪಜ್ಜನ ಕೆಂಗಣ್ಣಿಗೆ ಗುರಿಯಾಗುತ್ತಿದ್ದಳು. ಎಮ್ಮಿ ಆಕುಳುಗಳಿಗೆ ಹುಲ್ಲುಮೇಯಿಸಿ ಹಾಲು ಹಿಡ್ಕೊಂಡು ವರವಿ ಮನೆಗಳಿಗೆ ನಾವು ಹಾಲು ಕೊಟ್ಟು ಬರಬೇಕು. ಸಿಂಪಿಗ್ಯಾರ ಪದ್ಮಾಜಪ್ಪನ ಮೊಮ್ಮಗಳಿಗೆ ಆಕಳ ಹಾಲೇ ಆಗಬೇಕು. ಪತ್ತಾರ ನಾರಣಪ್ಪನವರ ಮನೆಗೆ ತುಸು ಗಟ್ಟಿ ಹಾಲು ಕೊಟ್ಟು ಅವರ ವಿಶ್ವಾಸ ಉಳಿಸಿಕೊಳ್ಳಬೇಕು. ಅಂಗಡಿ ಮಲ್ಲಪ್ಪ ಶೆಟ್ಟಿ ಮನೆಗೆ ಹಾಲು ಹಾಕಿ ದಿನಸಿ ತರಬೇಕು. ವ್ಯವಹಾರದಲ್ಲಿ ಚತುರೆಯಾಗಿದ್ದ ಅವ್ವ ಹಾಲಿನ ಲೆಕ್ಕದಲ್ಲೇ ಬಟ್ಟೆ-ಬರೆ ಹೊಲಿಸುತ್ತಿದ್ದಳು. ಹಾಲಿನ ಲೆಕ್ಕದಲ್ಲಿ ಕುಸುರಿ ಬೆಂಡೋಲಿ ಮಾಡಿಕೊಡಲು ಪತ್ತಾರ ನಾರಣಪ್ಪನಿಗೆ ಹೇಳುತಿದ್ದಳು. ಆಚಾರ್ಯ ನಾರಾಯಣಪ್ಪ ಮೂಲ ಕಾರವಾರದ ಕಡೆಯವನು. ಸುಮಾರು ವರ್ಷಗಳಿಂದ ಬಂದು ನಮ್ಮೂರಲ್ಲಿ ನೆಲೆಸಿದ್ದ. ಅವನು ಮಾಡಿಕೊಡುವ ಚಿನ್ನದ ಓಲೆಗಳ ಕುಸರಿ ಕೆಲಸ ಅವನ ಕೈ ಹಿಡಿದಿತ್ತು. ಊರಲ್ಲೆಲ್ಲ ಅಷ್ಟೇ ಯಾಕೆ ಅಕ್ಕ ಪಕ್ಕದ ಹಳ್ಳಿಯವರು ಅವನು ಮಾಡುವ ಒಡವೆಗಳನ್ನು ಮೆಚ್ಚಿಕೊಂಡು ಅವನ ವ್ಯಾಪಾರ ವೃದ್ಧಿಗೆ ಕಾರಣರಾಗಿದ್ದರು. ಅವರಲ್ಲಿ ಅವ್ವನು ಕೂಡ ಒಬ್ಬಳು. ಐದು ಜನ ಹೆಣ್ಣು ಮಕ್ಕಳಿಗೆ ಬೆಂಡೋಲಿ ಮಾಡಿಕೊಡುವುದು ನಾರಾಯಣಪ್ಪನ ಜವಾಬ್ದಾರಿಯನ್ನುವಂತೆ ಹಾಲಿನ ಲೆಕ್ಕವನ್ನು ಸರಿದೂಗಿಸುತ್ತಿದ್ದಳು. ಹೀಗೆ ಹೈನುಗಾರಿಕೆಯಲ್ಲಿ ಮನೆಯ ಸಂಸಾರದ ಖರ್ಚು ವೆಚ್ಚಗಳನ್ನು ಸರಿದೂಗಿಸಿಕೊಂಡು ಅಪ್ಪನ ಹೊಣೆಗಾರಿಕೆಯಲ್ಲಿ ಪಾಲುದಾರಳಾಗಿದ್ದಳು. ಅವ್ವನ ನಿರಂತರ ದುಡಿಮೆಯನ್ನು ದಿನವೂ ನೋಡುತ್ತಿದ್ದ ಬಡಿಗೇರ ಕಾಳಮ್ಮ ಸಂಜೆ ಹೊತ್ತಿನಲ್ಲಿ ಅವ್ವನೊಡನೆ ನಾಲ್ಕು ಮಾತಾಡಲು  ಬರುತ್ತಿದ್ದಳು.” ಆಸರಕಿ ಬ್ಯಾಸರಕಿ ಇಲ್ಲದ ದುಡಿಯುವಾಕಿ ಯವ್ವ ನೀನು” ಅಂತ ಅವ್ವನ ಬಗ್ಗೆ ಮೆಚ್ಚುಗೆ ಮಾತಾಡಿ ಹೋಗುತ್ತಿದ್ದಳು. ಹೀಗೆ ಅವ್ವ ಹತ್ಯಾಗಿ ಸಂಸಾರ ಮಾಡಿಕೊಂಡು ಎಲ್ಲರ ಮೆಚ್ಚುಗೆ ಗಳಿಸಿದ್ದಳು.

.  ಕಪ್ಪು ಎರೆ ಭೂಮಿ. ಹತ್ತಿ, ಮೆಣಸಿನಕಾಯಿ, ಉಳ್ಳಾಗಡ್ಡಿ ಮುಖ್ಯ ಬೆಳೆಗಳು. ಬೇಸಿಗೆ ಸಮೀಪಿಸುತ್ತಿದ್ದಂತೆ ಹತ್ತಿ ಅರಳಿ ಕೊಯ್ಲಿಗೆ ಸಜ್ಜಾಗುತ್ತಿತ್ತು. ಆಗ ನಮ್ಮ ಶಾಲೆಗಳಿಗೆ ರಜೆ. ಸುಗ್ಗಿಯ ದಿನಗಳಲ್ಲಿ ಆಳುಗಳ ಕೊರತೆಯಾಗುತ್ತಿತ್ತು. ಹೀಗಾಗಿ ನಮ್ಮನ್ನು ಹತ್ತಿ ಬಿಡಿಸಾಕ ಹೊಲಕ್ಕೆ ಕರೆದೊಯ್ಯುತ್ತಿದ್ದಳು ಅವ್ವ. ನಾವು ಮಕ್ಕಳು ಒಲ್ಲೆ ಅಂತ ಹಠ ಮಾಡಿದಾಗ ಜಾಡರ ದ್ಯಾಮವತ್ತಿ ಅಂಗಡಿಯಲ್ಲಿ
ಸಿನ್ನಿ(ಪುಟಾಣಿ ಹಿಟ್ಟಿನಿಂದ ಮಾಡಿದ ಕರದಂಟು) ದಾಣಿ (ಸೇವು) ಆಸೆ ಹಚ್ಚಿ ಹತ್ತಿ ಬಿಡಿಸಾಕ ಹುರಿದುಂಬಿಸುತ್ತಿದ್ದಳು. ಹತ್ತಿ ಬಿಡಿಸುವ ಕಾಲ ಹತ್ತೀಗಿ  ಬಂದಾಗ ಅರ್ಧ ಕಿಲೋದಷ್ಟು ಹತ್ತಿ ಉಂಡಿ ನಮ್ಮ ಕೈಯಾಗ ಇಟ್ಟು ಸಿನ್ನಿ ದಾಣಿ ತಿನ್ನ ಹೋಗ್ರಿ ಅಂತ ಮತ್ತಷ್ಟು ಹುರುಪು ತುಂಬಿ ಮರುದಿನದ ಕೆಲಸಕ್ಕೆ ನಮ್ಮನ್ನು ಪ್ರೇರೇಪಿಸುತ್ತಿದ್ದಳು. ಆ ದಿನಗಳಲ್ಲಿ ಹಳ್ಳಿಗಳಲ್ಲಿ ಜೋಳ,ಹತ್ತಿ ಇತರೆ ಧಾನಗಳನ್ನು ಕೊಟ್ಟು ಹಾಲು ಮೊಸರು ಸಿಹಿ ತಿಂಡಿಗಳನ್ನು ಕೊಳ್ಳುವ ವಾಡಿಕೆ ಇತ್ತು. ಸೂರ್ಯ ಕಣ್ತೆರೆಯುವ ವೇಳೆಗೆಲ್ಲ ನಾವು ಹೊಲಕ್ಕೆ ಹೋಗಲು ಸಿದ್ದರಾಗುತ್ತಿದ್ದೆವು. ಅವ್ವ ಚುಮು ಚುಮು ಬೆಳಗಾಗುವುದರೊಳಗೆ ರೊಟ್ಟಿ ಬುತ್ತಿ ಮಾಡ್ಕೊಂಡು ನಮ್ಮನ್ನೆಲ್ಲ ಕರೆದುಕೊಂಡು ಹೊಲದ ಹಾದಿ ಹಿಡಿಯುತ್ತಿದ್ದಳು. ಕೂಲಿ ಹೆಣ್ಣು ಮಕ್ಕಳೆಲ್ಲ ಸೇರಿಕೊಂಡು ಹತ್ತಿ ಬಿಡಿಸುವಾಗಿನ ಸಂಭ್ರಮ ಸೂರ್ಯ ನೆತ್ತಿಗೇರಿತು ತ್ತಿದ್ದಂತೆ ಕಳೆಗುಂದುತ್ತಿತ್ತು. ಆದರೂ ಅದನ್ನೆಲ್ಲ ಲೆಕ್ಕಿಸದೆ ಮಧ್ಯೆ ಮಧ್ಯೆ ಎರಕಲ ಬೀಡಿನಲ್ಲಿ ಜೋತುಬಿದ್ದ  ಜೇನಿನ ತಟ್ಟೆಯಿಂದ ಸೋರುತ್ತಿದ್ದ ಹನಿ ಹನಿ ಜೇನನ್ನು ಸವಿಯಲು ನಾವು ಕಾತರಿಸುತ್ತಿದ್ದೆವು. ಮಧ್ಯಾಹ್ನ ಹೊತ್ತು ಎಲ್ಲರೂ ಬುತ್ತಿ ಬಿಚ್ಚಿಕೊಂಡು ಊಟಕ್ಕೆ ಸಜ್ಜಾಗುತ್ತಿದ್ದರೆ ನಾವು ಈರಪ್ಪ ಮಾಮನ್ನ ಜೇನು ಬಿಡಿಸಿಕೊಡುವಂತೆ ಕಾಡುತ್ತಿದ್ದೆವು. ಮಾಮಾ ತಲೆ ತುಂಬಾ ಗೋಣಿಚೀಲ ಹೊದ್ದುಕೊಂಡು ಒಂದಿಷ್ಟು ಬೆಂಕಿ ಹಾಕಿ ಜೇನು ಹುಳುಗಳನ್ನು ಓಡಿಸಿ ಜೇನು ತಟ್ಟೆಯನ್ನು ಒಂದು ಗಂಗಾಳದಲ್ಲಿರಿಸಿ ಜೇನನ್ನು ಹಿಂಡಿಕೊಡುತ್ತಿದ್ದ. ಅಂಥ ಜೇನನ್ನು ತಿಂದ ಸುಖ ಸಂಭ್ರಮ ಇಂದು ನೆನಪು ಮಾತ್ರ.

      ವೈಶಾಖ ಬೇಸಿಗೆಯ ಸೂರ್ಯ ನೆತ್ತಿಗೇರುತ್ತಿದ್ದಂತೆ ನಮ್ಮಗಳ ನೆತ್ತಿ ಉರಿಯುತ್ತಿತ್ತು. ಹದಿನೈದರಿಂದ ಇಪ್ಪತ್ತು  ಕೆ.ಜಿ.ಯ ಹತ್ತಿಯ ಗಂಟನ್ನು ಹೊತ್ತುಕೊಂಡು ಹತ್ತಿ ಬಿಡಿಸುವವರ ಪೈಪೋಟಿಯ ಸಾಲಿನಲ್ಲಿ ಮೊದಲಿಗರಾಗುವ ಬಯಕೆ. ಮೈಯಲ್ಲಿ ದೇವರು ತುಂಬಿದ ಹಾಗೆ ದಕ್, ದಕ್ ಹೆಜ್ಜೆಯ ತಾಳಕ್ಕೆ ಭೂಮಿಯು ಅದುರುತ್ತಿತ್ತು. ಹದಿಮೂರು ಹದಿನಾಲ್ಕರ, ಆಗಷ್ಟೇ ಚಿಗುರೊಡೆಯುತ್ತಿರುವ ಹರೆಯ. ದುಂಡು ಮುಖ, ಗಂಡು ತೋಳುಗಳು, ಎದೆಯ ಮುಗುಳು ಬಟ್ಟಲಗಣ್ಣುಗಳು ಕಣ್ಣು ಕುಕ್ಕುವ  ಮೈಸಿರಿ. ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಬಡಿಗೇರ ಕಾಳಮ್ಮ
“ ಚಂಗಳಕವ್ನಂತ ಮಕ್ಕಳನ್ನ ರಣಗುಡುವ ಬಿಸಿಲಾಗ ಹೊಲಕ್ಕ ಯಾಕ ಕರ್ಕೊಂಡು ಹೋಕ್ಕೀದೀ” ಅಂತ ಅವ್ವನನ್ನು ಆಕ್ಷೇಪಿಸುತ್ತಿದ್ದಳು. ಆಗ ನಮ್ಮ ಹರೆಯದ ವಯಸ್ಸು ಅವ್ವನ ಅರಿವಿಗೆ ಬಂದು ,ಒಂದು ಕ್ಷಣ ಮೂಕಳಾಗುತ್ತಿದ್ದಳು. ಹೀಗೆ ಅರಿವಿಗೆ ಬಾರದ ಎಷ್ಟೋ ಸಂಗತಿಗಳು ನಿತ್ಯ ಕಾರ್ಯದಲ್ಲಿ ಸರಿದು ಹೋಗುತ್ತಿದ್ದವು
.
. ಸೂರ್ಯನ ಬೆಂಕಿಯಂತ ಬಿಸಿಲಿಗೆ ತನ್ನ ಹೊಟ್ಟೆಯ ಕಿಚ್ಚನ್ನು ಸೇರಿಸಿ ಮತ್ತಷ್ಟು ಕೆಂಡವಾಗಿದ್ದಳು ಸೋನಾಬಾಯಿ ಸೊಸೆ. ಹತ್ತು ಹಲವು ಹಂಬಲ ಬಯಕೆಗಳನ್ನು ಇಟ್ಟುಕೊಂಡು ಬಂದ ಭೀಮವ್ವಳಿಗೆ ಗಂಡನ ಮನೆಯ ಸುಖ ಸಂತೋಷಗಳು ಮರೀಚಿಕೆಯಾದವು. ಮದುವೆಯಾದ ತಿಂಗಳಲ್ಲೇ ಕೈಯಲ್ಲಿ ಕುರುಪಿ ಹಿಡಿದುಕೊಂಡು ಕೂಲಿ ಕೆಲಸಕ್ಕೆ ತನ್ನನ್ನು ಒಡ್ಡಿಕೊಳ್ಳಬೇಕಾಯಿತು. ಗಂಡನ ಹಂಬಲ ಅನ್ನೋದು ರಟಗಳ್ಳಿ ಹಣ್ಣಿನಂತಾಯಿತು. (ಪಾಪಾಸು ಕಳ್ಳಿಯ ಮುಳ್ಳಿನಿಂದ ಕೂಡಿದ ಹಣ್ಣು) ತನ್ನ ಒಡಲ ಬೇಗೆಯನ್ನೆಲ್ಲಾ ಅವ್ವನಂಥ ಹಿರಿಯಳ ಎದುರು ತೋಡಿಕೊಂಡು ಮನಸ್ಸು  ಹಗುರಾಗಿಸುತ್ತಿದ್ದಳು. ಅವ್ವ ಅವಳಿಗೆ ತಾಳ್ಮೆಯ ಪಾಠ ಹೇಳಿಕೊಡುತ್ತಾ ಅವಳ ಸಂಕಟಕ್ಕೆ ಸ್ಪಂದಿಸುತ್ತಿದ್ದಳು. ಹೀಗೆ….. ಅತ್ತೆಯಾದವರು ತಮ್ಮ ಸೊಸೆಯಂದಿರ ವರ್ತನೆಯ  ಡೊಂಕುಗಳನ್ನು ಹೇಳುತ್ತಾ ಅವ್ವನಿಂದ ಸಮಾಧಾನ ಹೇಳಿಸಿಕೊಳ್ಳುವವರು. ನಡುನಡುವೆ ಗಂಡಬಿಟ್ಟವರ ಗೋಳು, ಹರೆಯದ ಹುಡುಗಿಯರು ತಮ್ಮ ಪ್ರಿಯಕರನೊಂದಿಗೆ ಓಡಿ ಹೋದ ಪ್ರಸಂಗಗಳು, ವಿಧವೆಯರ ಉಡಕಿ ಗಂಡನ ಗೋಳು, ಗಂಡ-ಹೆಂಡಿರ ಜಗಳ ಹೀಗೆ ಕುಟುಂಬದ ನಾನಾ ಜಂಜಾಟಗಳಿಗೆ ಅವ್ವ ದನಿಯಾಗುತ್ತಿದ್ದ ರೀತಿ ನನ್ನ ಅರಿವಿಗೆ ಬರುತ್ತಿರಲಿಲ್ಲ. ನಡುನಡುವೆ ಹಿಗ್ಗಿನ ಹಬ್ಬಗಳ ನಗೆ ಪ್ರಸಂಗಗಳು ತೂರಿಕೊಳ್ಳುತ್ತಿದ್ದವು. ಇಂಥ ಮಾತು ಕಥೆಗಳು ಹತ್ತಿ ಬಿಡಿಸುವ ಕಾಯಕದ ಬಿಸಿಲ ಬೇಗೆ ಮತ್ತು ಬೇಸರವನ್ನು ಕಳೆಯುತ್ತಿದ್ದವು. ಗ್ರಾಮ ಬದುಕಿನ ಒಡಲೊಳಗಿನ ಸಂಕಟಗಳು , ವೇದನೆಗಳು, ನರಕ ಸದೃಶ ಸನ್ನಿವೇಶಗಳು ಅಸಹಾಯಕತೆಗಳೆಲ್ಲ ಅರಿವಿಗೆ ಬಾರದ ನನ್ನ ಮುಗ್ದತೆಗೆ ಅವುಗಳು ಒಂದು ರೀತಿಯ ಸಂಭ್ರಮದಂತೆ ತೋರುತ್ತಿದ್ದವು .

          ಕೃಷಿ ಕಾರ್ಯಗಳೆಲ್ಲ ಯುಗಾದಿ ಹೊತ್ತಿಗೆ ಮುಗಿದು ಅಷ್ಟಿಷ್ಟು ಕಾಳು-ಕಡಿ ರಾಶಿಗೈದರೆ, ನಂತರ ಒಂದಿಷ್ಟು ಬಿಡುವಿನ ಸಮಯ. ಅಪ್ಪನಂತ ಗಂಡಸರು ಗುಡಿ-ಗುಂಡಾರ, ಮಠ -ಮಸೀದಿಗಳ ನೆರಳು ಹುಡುಕಿ ಅರಳಿ ಕಟ್ಟೆ ಮೇಲೆ ಚಕ್ಕಾ ಆಡ್ಕೊಂತ ಹೊತ್ತು ಕಳೆದು ಮಧ್ಯಾಹ್ನದ ಹೊತ್ತಿಗೆ ಮೈಚಲ್ಲಿ ಗೊರಕಿ ಹೊಡೆಯುತ್ತಿದ್ದರೆ, ಇತ್ತ ದುಡಿಮೆಯ ದಣಿವರಿಯದ ಬೇಸರಕ್ಕೆ ಎಡೆಯಿಟ್ಟುಕೊಳ್ಳದ ನನ್ನವ್ವ;  ಅವ್ವನಂತ ಓಣಿಯ ಹೆಣ್ಣು ಮಕ್ಕಳು ಸೌತೆಬೀಜಾ ಶಾವಿಗೆ, ಗುಳಿಗೆ ,ಗೌಲಿ,ಪರಡಿ,(ಗೋಧಿ ಹಿಟ್ಟಿನಿಂದ ಮಾಡುವ ಪದಾರ್ಥಗಳು) ಹಪ್ಪಳ ,ಸೆಂಡಿಗೆ ಇವುಗಳನ್ನು ಮಾಡುವ ಸಂದರ್ಭದಲ್ಲಿ ಹಬ್ಬದ ವಾತಾವರಣವೇ ಮೈದಳೆಯುತ್ತಿತ್ತು. ಎಲ್ಲಾ ಕಾಯಕಗಳಲ್ಲಿ ಶಾವಿಗೆ ಹೊಸೆಯುವ ಕಾರ್ಯ ತುಸು ಸಂಕೀರ್ಣದ್ದೆಂದೇ ಹೇಳಬೇಕು. ಅಂತೇ ರಾಜ ಪದಾರ್ಥವಾದ ಶಾವಿಗೆ ‘ಶಾವಿಗೆ ಹಬ್ಬ ‘ಎಂಬ ವಿಶೇಷಣವನ್ನು ಹೊಂದಿತ್ತು. ಎರೆ ಹೊಲದ ಗೋದಿಗೆ ರಾತ್ರಿ ನೀರು ಹಚ್ಚಿ ನೂಲಿನ ಬಟ್ಟೆಯಲ್ಲಿ ಕಟ್ಟಿಟ್ಟು ಐದಾರು ತಾಸು ಬಿಟ್ಟು ಹಸಿ ಆರುವ ಮೊದಲೇ ಬೀಸಬೇಕು. ಅವ್ವ ನಸುಕಿನಲ್ಲಿಯೇ ಬೆಳಕು ಹರಿಯುವುದರೊಳಗೆ ನಮ್ಮನ್ನು ಎಬ್ಬಿಸಿ ಗೌಡರ ಮನೆಯ ದೊಡ್ಡ ಬಿಸುಕಲ್ಲಿನಲ್ಲಿ(ಮೂರು ಜನ ಕುಳಿತು ಬೀಸುವ ದೊಡ್ಡ ಬೀಸು ಕಲ್ಲು) ಗೋಧಿ ಬೀಸುವುದಕ್ಕೆ ಕರೆದುಕೊಂಡು ಹೋಗುವವಳು. ನಿದ್ದೆ ಕಣ್ಣಲ್ಲಿ ನಾವು ಅವನನ್ನು ಕಾಡುತ್ತಿದ್ದೆವು. ಅವ್ವ ಎಬ್ಬಿಸಿದಂತೆಲ್ಲ ನಮ್ಮ ನಿದ್ದೆ ಮಂಪರು ಜೋರಾಗುತ್ತಿತ್ತು. ಕೊನೆಯ ಅಸ್ತ್ರ ಎಂಬಂತೆ ಕಣ್ಣ ಮೇಲೆ ತಣ್ಣೀರೆರಚಿ ನಾವು ಏಳುವಂತೆ ಮಾಡುತ್ತಿದ್ದಳು. ಬೀಸುಕಲ್ಲಿನ ಪದ ಹೇಳಿಕೊಂಡು ಬೀಸುತ್ತಿದ್ದರೆ ಅವ್ವನ ಹಾಡಿಗೆ ನಾವು ದನಿಗೂಡಿಸುತ್ತಾ ಗುನುಗುಣಿಸುತಿದ್ದೆವು. ಬೆಳಗಿನ ಮಾರು ಹೊತ್ತಿಗೆಲ್ಲ ಓಣಿಯ ತುಂಬ ಗಡಿಬಿಡಿ.  ಹಿರಿ- ಕಿರಿಯ ಹೆಂಗಸರು ಅವಸರವಸರವಾಗಿ ಅತ್ತಿಂದಿತ್ತ- ಇತ್ತಿಂದತ್ತ ಓಡಾಟ. ನಮ್ಮ ಮನೆಯ ಹಿತ್ತಲಲ್ಲಿದ್ದ ಹುಣಸೆ ಮರದ ಕೆಳಗೆ ನಾವು ಸಣ್ಣವರೆಲ್ಲ ಶಾವಿಗೆ ಮಣೆಗಳ ಏರ್ಪಾಟು ಮಾಡುತ್ತಿದ್ದೆವು. ಓಣಿಯ ನಾಲ್ಕಾರು ಹೆಣ್ಣು ಮಕ್ಕಳು ನಾಲ್ಕೈದು ಉಳ್ಳಿ (ಹಿಟ್ಟಿನ ಉಂಡೆ) ಶಾವಿಗೆ ಹೊಸೆದು ಹೋಗುತ್ತಿದ್ದರು. ಇದು ಎಲ್ಲರ ಮನೆಯಲ್ಲೂ ಜಾರಿಯಾಗುತ್ತಿದ್ದ ಅಲಿಖಿತ ನಿಯಮ.  ಯಾರ ಮನೆಯ ಶಾವಿಗೆ ಇರಲಿ ಓಣಿಯ ಎಲ್ಲರೂ ಕೂಡಿಕೊಂಡು ನಾಲ್ಕೈದು ಉಳ್ಳಿ ಶಾವಿಗೆ ಹೊಸೆದು ಹೋಗುತ್ತಿದ್ದರು. ಹಳ್ಳಿಯಲ್ಲಿ ಪರಸ್ಪರ ಸಹಕಾರ ತತ್ವಕ್ಕೆ ಇದು ಸಾಕ್ಷಿಯಾಗಿ ನಿಲ್ಲುತ್ತದೆ. ಹೀಗೆ ತಿಂಗಳಾನುಗಟ್ಟಲೆ ಧೀರ್ಘಕಾಲ ಈ ಪ್ರಕ್ರಿಯೆ ಮುಂದುವರೆಯುತ್ತಿತ್ತು. ಮಹಿಳೆಯರ ಈ ಶಾವಿಗೆ ಹಬ್ಬ ಮಕ್ಕಳಿಗೆಲ್ಲ ಸಂಭ್ರಮವಾಗುತ್ತಿತ್ತು……..

 ಹೀಗೆ ದಿನಗಳು ಕಳೆದು ಹೋದಂತೆ ನಾವೆಲ್ಲ  ದೊಡ್ಡವರಾಗಿ  ಮದುವೆ ಕುರಿತ ಅವ್ವನ ಚಿಂತೆ ಅವಳ ತಲೆಯನ್ನು ನೆರೆಗೀಡು ಮಾಡಿತ್ತು. ಶಿಕ್ಷಣ ಕುರಿತಾಗಿ ಅಷ್ಟಾಗಿ ಯೋಚಿಸುತ್ತಿರಲಿಲ್ಲ. ಆ ದಿನಗಳಲ್ಲಿ ಹೆಣ್ಣು ಮಕ್ಕಳಿಗೆ ಮ್ಯಾಟ್ರಿಕ್ ಆದರೆ ಸಾಕು ಎನ್ನುವ ವಾತಾವರಣವಿತ್ತು. ಅದು ವಿಶೇಷವಾಗಿ ಕೃಷಿ ಕುಟುಂಬದಲ್ಲಿ.ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ನನ್ನಪ್ಪ ಊರ ಮುಂದಿನ ಚೆನ್ನಬಸಪ್ಪನ ಗುಡಿ ಕಟ್ಟಿ ಮ್ಯಾಲ ಗೊರಕಿ ಹೊಡೆಯುತ್ತಿದ್ದ. ಅವನ ಇಂಥ ವರ್ತನೆಗೆ ಬೇಸತ್ತು ಹೋಗಿದ್ದಳು ಅವ್ವ. ಅಪ್ಪನ ಈ ನಡುವಳಿಕೆಗಳು ಅವ್ವನನ್ನು ಚಿಂತೆಗೀಡುಮಾಡಿತ್ತು. .ಬದುಕಿನ ಜಂಜಾಟಗಳಲ್ಲಿ ನನ್ನವ್ವ ಕಳೆದು ಹೋಗಿದ್ದಳು. ಕೂಡು ಕುಟುಂಬದಿಂದ ಸಿಡಿದು ಹೋಗಿದ್ದರೂ ಆಸ್ತಿ ಪಾಲುದಾರಿಕೆಯ ವಿಷಯಗಳು, ದಾಯಾದಿಗಳ ತಂಟೆ ತಕರಾರುಗಳು ಬೆನ್ನು ಬಿಡಲಾರದ ಕುಟುಂಬದ ಕಲಹಗಳು ಅವ್ವನನ್ನು ಮತ್ತಷ್ಟು ಮೆತ್ತಗಾಗಿಸಿದ್ದವು. ಆದಾಗ್ಯೂ ಕೂಡ ತಾಕತ್ತನೆಲ್ಲ ಒಟ್ಟುಗೂಡಿಸಿಕೊಂಡು ಮನೋಧೀ:ಶಕ್ತಿಯನ್ನು ತುಂಬಿಕೊಂಡು ಮತ್ತೆ ಮೈಕೊಡವಿಕೊಂಡು ನಿಲ್ಲುವ ಅವ್ವ ಕೆಲವೊಮ್ಮೆ ನನಗೆ ಆಶ್ಚರ್ಯ ಅದ್ಭುತ ಎನಿಸುತ್ತಿದ್ದಳು. ಯಾವುದಕ್ಕೂ ಜಗ್ಗದ ಬಗ್ಗದ ಕಡಲತೆರೆಯಂತೆ ಬಂಡೆಗೆ ಹಾಯ್ದು ಹಾಯ್ದು ಗಟ್ಟಿಗೊಂಡಿದ್ದಳು. ಜೀವ ಚಿಲುಮೆ ಯಾವತ್ತೂ ಅವಳನ್ನು ಸುಮ್ಮನೆ ಕುಳಿತುಕೊಳ್ಳಲು ಬಿಡುತ್ತಿರಲಿಲ್ಲ. ಅದಮ್ಯ ಚೈತನ್ಯದ ಚಿಲುಮೆ ಪುಟಿಯುತ್ತಿತ್ತು. “ಸರಿಕರೆದುರು ಹೌದೆನ್ನುವಂತೆ ಬದುಕಿ ತೋರಿಸಬೇಕು ಹೊರತು ಬೆನ್ನು ತೋರಿಸಬಾರದು” ಎನ್ನುವ ಅವಳ ಸೋಲಪ್ಪದ ಬದುಕಿನ ಛಲ ನನ್ನಲ್ಲಿ ಉತ್ಸಾಹವನ್ನು ತುಂಬುತ್ತಿತ್ತು. ಏನು ತಿಳಿಯದ ಮುಗ್ಧ ವಯಸ್ಸಿಗೆ ಬದುಕಿನ ಅರ್ಥವಾಗದಿದ್ದರೂ ಶ್ರಮದ ವ್ಯಾಖ್ಯಾನವನ್ನು ಅವ್ವನಿಂದ ಕಲಿತಿದ್ದೆ. ದಾರಿಯಲ್ಲಿರುವ ಮುಳ್ಳುಗಳನ್ನು ದಾಟಿ ಹೋಗುವಾಗಲೂ ಕೂಡ ಕೆಲವೊಮ್ಮೆ ಚುಚ್ಚಿ ಗಾಯ ಮಾಡುವುದುಂಟು. ಆ ಗಾಯಕ್ಕೆ ಮದ್ದುಣಿಸಿ ದೂರದ ದಾರಿಯನ್ನು ಸವೆಸಿದ ಅವ್ವನಿಂದ ಇಂಥ ಪಾಠಗಳನ್ನು ಕಲಿತ ನನಗೆ ಭವಿಷ್ಯ ಕಟ್ಟಿಕೊಳ್ಳಲು ಕಷ್ಟವೆನಿಸಲಿಲ್ಲ. ಹೆಚ್ಚಿನ ಶಿಕ್ಷಣಕ್ಕಾಗಿ ನಿರಾಕರಿಸಿದಾಗಲೂ ಅವ್ವ ಮಕ್ಕಳ ಬೆನ್ನಿಗೆ ನಿಂತು ಅಷ್ಟಿಷ್ಟು ಜ್ಞಾನ ಪಡೆಯುವ ಅವಕಾಶ ಮಾಡಿಕೊಟ್ಟಳು. ಹೆಚ್ಚಿನ ವಿದ್ಯಾಭ್ಯಾಸಕ್ಕೆ ಧಾರವಾಡಕ್ಕೆ ಕಳಿಸಲು ನಿರಾಕರಿಸಿದ ಅಪ್ಪನೊಡನೆ ತಕರಾರು ಮಾಡಿ ನನ್ನ ಜಾಣತನವನ್ನು ಅರಿವು ಮಾಡಿಸುವಲ್ಲಿ ಯಶಸ್ವಿಯಾದಳು. ಅಕ್ಷರ ಕಲಿಯದ ಅವ್ವನ ವಿಚಾರಗಳು ನನ್ನಲ್ಲಿ ವೈಚಾರಿಕ ಪ್ರಜ್ಞೆ ಬೆಳೆಸಿಕೊಳ್ಳುವಲ್ಲಿ ಇಂಬುಕೊಟ್ಟವು. ಮೌಡ್ಯತೆ ಜಾತಿಭೇದವನ್ನು ಮೀರಿ ನಿಲ್ಲುವ ಅವಳ ಪ್ರಜ್ಞೆಗೆ ನಾನು ಬೆರಗಾಗಿ ಹೋದೆ.
 ಒಂದು ಪ್ರಸಂಗವನ್ನು ಇಲ್ಲಿ ಹೇಳಲೇಬೇಕು .ಅಂದಿನ ದಿನಗಳಲ್ಲಿ ಹಳ್ಳಿಗಳಲ್ಲಿ ಶ್ರಮಿಕ ವರ್ಗದ ದಲಿತರನ್ನು ಮನೆಯಲ್ಲಿ ಬಿಟ್ಟುಕೊಳ್ಳುತ್ತಿರಲಿಲ್ಲ. ಮುಗ್ಧತೆಯೇ ಮಾನವನ ಲಕ್ಷಣ ಎಂದು ನಂಬಿದ್ದ ಅವರಿಗೆ ಮೇಲ್ಜಾತಿಯವರ ಅಂಗಳದಲ್ಲಿಯೇ ನಿಂತುಕೊಳ್ಳಬೇಕು ಎಂಬ ಮನೋಭಾವ ಹೊಂದಿದವರಾಗಿದ್ದರು. ನಾನಾಗ ಏಳನೇಯ ಕ್ಲಾಸಿನಲ್ಲಿ ಓದುತ್ತಿದ್ದೆ. ಗೆಳತಿ ಒಬ್ಬಳು ನನ್ನನ್ನು ಶಾಲೆಗೆ ಕರೆಯಲು ಬಂದಳು. ಹಾಗೆ ಮಾತನಾಡುತ್ತಾ ಪಡಸಾಲೆವರೆಗೂ ಬಂದಾಗ ನನಗೂ ಗಾಬರಿ ಅವ್ವ ಬೈಯುವಳೋ ಏನು ಎನ್ನುತ್ತಾ….  ನೀನು ಹೀಗೆ ಪಡಸಾಲೆ ತನಕ ಬರಬೇಡ ಎಂದು ಅವಳಿಗೆ ಹೇಳುತ್ತಿದ್ದುದನ್ನು  ಹೊರಗಿನಿಂದ ಬರುತ್ತಿದ್ದ ಅವ್ವ ಕೇಳಿಸಿಕೊಂಡು “ಬರಲಿ ಬಿಡು ಏನಾತು? ಕೆಳ ಜಾತಿ ಮೇಲ್ಜಾತಿಯವರು ಎನ್ನುವ ಭೇದ ಪಾಪ ಆ ಕೂಸಿಗೆ ಏನು ಗೊತ್ತು”ಎಂದು ನನ್ನ ಭಯವನ್ನ ಹೋಗಲಾಡಿಸಿದಳು . “ಎಲ್ಲರೂ ಮನುಷ್ಯರೇ ಮಾನವ ಕುಲವೊಂದೇ” ಎನ್ನುವ ಅವಳ ವಿಶ್ವ  ಮಾನವತೆಯ ಪ್ರಜ್ಞೆ ಇಂದಿಗೂ ನನ್ನಲ್ಲಿ ಜಾಗೃತವಾಗಿದೆ. ಅವಳ ಇಂಥ ವಿಚಾರಗಳಿಗೆ ಅಜ್ಜನ ಸಂಸ್ಕಾರವೇ ಕಾರಣ. ನನ್ನ ಅಜ್ಜ ಹೆಚ್ಚು ಓದಿದವನಲ್ಲ ಆದರೆ ಬಸವಣ್ಣನವರನ್ನು ಹೆಚ್ಚು ತಿಳಿದುಕೊಂಡವನು.  ನಾಗಲಿಂಗಜ್ಜನ ಮಠ, ಗವಿಮಠಕ್ಕ ಭಾಳ ನಡೆದುಕೊಂಡವನು. ನನ್ನಿಂದಲೂ ಬಸವಣ್ಣನವರ ವಚನಗಳನ್ನು ಹೇಳಿಸುತ್ತಿದ್ದ. ಮಠಕ್ಕೆ ಕರೆದುಕೊಂಡು ಹೋಗುತ್ತಿದ್ದ. ಇಂಥ ಶರಣ ಸಂಸ್ಕೃತಿ ಅಜ್ಜನಿಂದ ನನ್ನವನಿಗೆ ಬಳುವಳಿಯಾಗಿ ಬಂದಿತ್ತು. ನನ್ನವ್ವ ಲೋಕದ ಪೂಜೆಗೆ ಮನಸ್ಸು ಮಾಡದೆ ಕಾಯಕವೇ ಕೈಲಾಸ ಎಂಬ ಶರಣರ ನುಡಿಗೆ ಸಾಕ್ಷಿಯಾಗಿ, ಮಾಡಿದ ಅಡಿಗೆಯಲ್ಲಿ ಓಣಿಯ ಗೆಳತಿಯರೊಟ್ಟಿಗೆ ಹಂಚಿ ತಿನ್ನುವ ದಾಸೋಹ ಪ್ರವೃತ್ತಿಯವಳು. ಸೂರ್ಯನಿಗೆ ಸಡ್ಡು ಹೊಡೆದು ನೀ ಮೊದಲೋ ನಾ ಮೊದಲೋ ಎನ್ನುವಂತೆ ಬೆಳ್ಳಿ ಚುಕ್ಕಿಯೊಂದಿಗೆ ಅವ್ವನಿಗೆ ಬೆಳಗು. ಒಂದು ಗಂಟು ಹುಲ್ಲು ತಂದು ದನ -ಕರುಗಳನ್ನು ಮೇಯಿಸಿ ಜಳಕ ,ಲಿಂಗ ಪೂಜೆ ಮುಗಿಸಿ ಊರಿಗೆ ಬೆಳಗಾಗುವ ಮುಂಚೆ ಹೊಲದೆಡೆಗೆ ಹೆಜ್ಜೆ ಹಾಕುವಳು. ಇದು ಅವಳ ನಿತ್ಯ ಕಾಯಕವಾಗಿತ್ತು.

     ಬದುಕಿನ ಬವಣೆಗಳ ಮಧ್ಯೆ ಮಕ್ಕಳ ಭವಿಷ್ಯ ಹೇಗೋ ಏನೋ ಎಂಬ ಚಿಂತೆಯಲ್ಲಿಯೇ ಸವಾಲುಗಳನ್ನು ಎದುರಿಸುತ್ತಾ ಬದುಕಿನ ಅಷ್ಟೂ ಸಾದ್ಯತೆಗಳಿಗೆ ತನ್ನನ್ನು ಒಡ್ಡಿಕೊಳ್ಳುವ ಪರಿ ಏನೂ ತಿಳಿಯದ ನನ್ನಲ್ಲಿ ಆಶ್ಚರ್ಯವನ್ನು ಮೂಡಿಸುತ್ತಿತ್ತು, ಏನಿದ್ದರೂ ಅದನ್ನು ಅರಗಿಸಿಕೊಳ್ಳಬಲ್ಲೆ ಎಂಬುವ ಆತ್ಮವಿಶ್ವಾಸವೆಂದೇ ಬದುಕನ್ನು ನಿಭಾಯಿಸುವ ಶಕ್ತಿಯನ್ನು ಕೊಡುತ್ತದೆ  ಎಂದು ನಂಬಿದವಳು. .ಸಹಜವಾಗಿಯೇ ಎದುರಾಗುವ ಸಂಸಾರದಲ್ಲಿನ ಕೊಂಕು ಕೆರೆದಾಟಗಳು, ಮನಸ್ತಾಪಗಳು ಬೇಸರ ಇವುಗಳನ್ನು ಮೀರಿ ನಿಲ್ಲುವ ಮನಸ್ಥಿತಿ ಅವಳ ಎದೆಗಾರಿಕೆಯನ್ನು ತೋರಿಸುತ್ತದೆ. ಆಕಸ್ಮಿಕವಾಗಿ ಎದುರಾಗುವ ಅಸಂಗತಗಳಿಗೆ, ಆಘಾತಗಳಿಗೆ ಸ್ವಾಸ್ಥ ಚಿತ್ತದಿಂದ ತನ್ನಲ್ಲೇ ದಾರಿ ಹುಡುಕಿಕೊಳ್ಳುತ್ತಿದ್ದಳು. ತನ್ನ ಅಂತರಂಗದ ನೋವು ನಲಿವುಗಳಿಗೆ ನಿಷ್ಠೆಯಿಂದ ಸ್ಪಂದಿಸುವ ಏಕೈಕ ಜೀವಿ ಬಡಿಗೇರ ಕಾಳಮ್ಮ. ಅವ್ವನ ಬೆನ್ನಿಗೆ ತಾಯಿಯಂತೆ ಇದ್ದು ಅವಳು ಯಾವತ್ತು ಅವ್ವನ ಒಡಲಾಳದ ನೋವಿಗೆ ದನಿಯಾಗುತ್ತಿದ್ದಳು. ಬದುಕು ಮುರಿದಾಗ ಮತ್ತೆ ಅದನ್ನು ಕಟ್ಟಿ ಗಟ್ಟಿಗೊಳಿಸುವ ಜಾಣ್ಮೆ ಅವ್ವನಿಗೆ ಕರಗತವಾಗಿತ್ತು. ಈ ನಡುವೆ ಹೊಣೆಗೇಡಿ ಅಪ್ಪನೊಂದಿಗೆ ಕಾದಾಡಿ ಎಲ್ಲ ಮಕ್ಕಳ ಮದುವೆ ಮಾಡುವಲ್ಲಿ ಹೌದನಿಸಿಕೊಂಡಿದ್ದಳು. ಬದುಕಿನುದ್ದಕ್ಕೂ ಅವಳು ನಡೆದು ಬಂದ ದಾರಿ ಸುಲಭವಾಗಿರಲಿಲ್ಲ. ನಡೆ ಕೂಡ ಅಷ್ಟೇ ಬಿಗುವಾಗಿತ್ತು. ಸಂಕಟಗಳ ಮಧ್ಯೆ ಬದುಕಿನ ದಾರಿಗುಂಟ ಅವಳು ಸವೆಸಿದ ದೂರದ ಹಾದಿ ಆಗ ನನ್ನ ಅರಿವಿಗೆ ನಿಲುಕದ್ದು. ಮಕ್ಕಳನ್ನೆಲ್ಲ ಬೆನ್ನಿಗೆ ಕಟ್ಟಿಕೊಂಡು ಯುದ್ಧ ಸೆಣಸಿದಂತೆ. ಯಾರದೋ ನಂಜು ಮಾತಿನ ಕೋವಿಗಳಿಗೆ ಎದೆಗೊಡುತ್ತಾ ರೆಕ್ಕೆ ಪುಕ್ಕಗಳಲ್ಲಿ ಮರಿಗಳನ್ನು ಮುಚ್ಚಿಟ್ಟುಕೊಳ್ಳುವ ತಾಯಿ ಹಕ್ಕಿಯಂತೆ ಮಕ್ಕಳನ್ನು ಮಡಿಲಲ್ಲಿ ಇಟ್ಟುಕೊಂಡು ಸಾಕಿ ಸಲುಹಿದವಳು. ತನ್ನ ಸೆರೆಗಿನ ಬಣ್ಣವನ್ನು ಮಕ್ಕಳ ರೆಕ್ಕೆಗೆ ತುಂಬಿ ಅವರ ಬದುಕಿಗೆ ಚಿತ್ತಾರ ಮೂಡಿಸಿದವಳು. ನಡೆ ತಪ್ಪಿ ನಡೆದುಕೊಂಡ ಗಂಡನನ್ನು ಸರಿದಾರಿಗೆ ತರುವಲ್ಲಿ ಅವ್ವನ ದನಿಯಲ್ಲಿ ಗುಡುಗು ಸಿಡಿಲಿನ ಅಬ್ಬರ. ಅದು ಕಂಡು ಅವಳ ಬಿರುಸುತನಕ್ಕೆ ಒಮ್ಮೊಮ್ಮೆ ನಾವು ಗಾಬರಿಯಾಗಿ ಪಿಳಿ ಪಿಳಿಕಣ್ಣು ಬಿಟ್ಟಿದ್ದೆವು. ಅವಳ ಗುಡುಗಿನಂತ ಗಂಡು ದನಿಗೆ ಅಂಜಿ ಹೊರಗೆ ಹೋದ ಮಕ್ಕಳನೆಲ್ಲ ಕರೆದು ಬಿಸಿ ರೊಟ್ಟಿ, ರೊಟ್ಟಿ ತೋಯ್ಯುವಷ್ಟು ಕಾರಬ್ಯಾಳಿ , ಮ್ಯಾಲೋಂದಿಷ್ಟು ಮಸಾಲೆ ಖಾರ….. ಹೀಗೆ ನಮಗೆ ಊಟ ಮಾಡಿಸಿದಾಗಲೇ ಅವಳ ಹೊಟ್ಟೆ ತಣ್ಣಗೆ. ಮಕ್ಕಳೆಲ್ಲ ಉಂಡಾದ ಮೇಲೆ “ನಿಮ್ಮಪ್ಪನ ಊಟಕ್ಕೆ ಕರೀರಿ” ಎನ್ನುವ ಅವ್ವನ ಕಕ್ಕುಲಾತಿಗೆ ಅಪ್ಪ ಕರಗಿ ಹೋಗಿದ್ದ. ಗಂಡನನ್ನು ಮಕ್ಕಳಂತೆ ಸಲಹುತಿದ್ದ ಅವಳ ಪ್ರೀತಿ, ವಾತ್ಸಲ್ಯ ಮಮತೆ ಇವುಗಳೆಲ್ಲವುಗಳಿಗೆ ಮೀರಿ ನಿಲ್ಲುವ ಮನಸ್ಥಿತಿ ಅವ್ವ ಎನ್ನುವುದು ನನಗೆ ಅರಿವಾದದ್ದು ತಡವಾಗಿ.

     ತುಂಬು ಜೀವನವನ್ನು ಬಾಳಿ ಬದುಕಿದ ನನ್ನಪ್ಪ ತನ್ನ ನಾಕಿಪ್ಪತ್ತನೆಯ ವಯಸ್ಸಿನಲ್ಲಿ ಜೀವನ ಜಾತ್ರೆಯನ್ನು ಮುಗಿಸಿ ಸೂರ್ಯನೊಂದಿಗೆ ಪಡುವಣದ ಯಾತ್ರೆಗೆ ನಡೆದುಹೋದ. ಎಂದಿನಂತೆ ನನ್ನವ್ವ ಮತ್ತೇ ಉದಯ ರವಿಯೊಂದಿಗೆ ತೆರೆದುಕೊಳ್ಳುವುದು ಅನಿವಾರ್ಯವಾಯಿತು. ಮತ್ತದೇ ಜವಾಬ್ದಾರಿಗಳು… ಯಾವುದು ಬದಲಾಗಲಿಲ್ಲ. ಅಪ್ಪ ಇದ್ದಾಗಲೂ ಅಷ್ಟೇ ಹೋದ ಮೇಲೂ ಅಷ್ಟೇ, ಏನು ವ್ಯತ್ಯಾಸ ಅನಿಸಲಿಲ್ಲ. ನಾನು ಸಣ್ಣವಳಿದ್ದಾಗ ನನ್ನ ಚುರುಕುತನವನ್ನು ಗಮನಿಸುತ್ತಿದ್ದ ಅವ್ವ ”ನೀನು ನಿಮ್ಮಜ್ಜನಂಗ ದೊಡ್ಡ ಮನುಷ್ಯಳ ಆಗಬೇಕು ನೋಡು” ಎಂದು ಹೇಳುತ್ತಿದ್ದ ಮಾತು ಇಂದಿಗೂ ನನ್ನ ಎದೆಯಲ್ಲಿ ಮಿಡಕುತ್ತದೆ. ಅಕಿ ಹತ್ರ ಹೋದಾಗೊಮ್ಮೆ ನೀ ನನಗ ಗಂಡ ಮಗ ಇದ್ದಂಗ ಅಂತ ಹೆಮ್ಮೆಯಿಂದ ಹೇಳುತ್ತಿದ್ದಳು. ಇದ್ದ ಒಬ್ಬ ಮಗ ದೂರದೂರಿಗೆ ಕೆಲಸಕ್ಕೆ ಅಂತ ಹೋದಾಗ ಅವನನ್ನು ನೆನಪಿಸಿಕೊಂಡು ಸಂಕಟ ಮಾಡಿಕೊಂಡಿದ್ದಳು. ನನ್ನನ್ನು ತೆಕ್ಕಿಗೆ ಹಾಕಿಕೊಂಡು ಹನಿ ಕಣ್ಣಾದುದನ್ನು ನಾನು ಗಮನಿಸುತ್ತಿದ್ದಂತೆ ನನಗರಿವಿಲ್ಲದೆ ನನ್ನ ಕಣ್ಣಂಚಿನ ಹನಿ ಕಪಾಳವನ್ನು ತೋಯಿಸುತಿದ್ದವು. “ಇಳಿ ಸಂಜೆಯ ಹೊತ್ತಿನಲ್ಲಿ ನೀ ಹಿಂಗ ತ್ರಾಸ ಮಾಡ್ಕೋಬೇಡ ಯವ್ವ” ಅಂತ ಹೇಳುವಾಗ ಮಾತುಗಳು ಗಂಟಲಲ್ಲೇ ಉಳಿದು ದುಃಖವಾಗುತ್ತಿತ್ತು.  ಹೇಳತಾ ಹೇಳ್ತಾನೆ ಅವಳು ಮೋಡವಾಗಿ ಸುರಿದರೆ ನಾನು ಹಳ್ಳವಾಗಿ ಹರಿದಿದ್ದೆ. ನನ್ನವ್ವ ಬದುಕಿರುವ ತನಕ ಯಾವುದೇ ಕಾಯಿಲೆ ಕಸಾಯಿ ಇಲ್ಲದೆ ತೊಳೆದ ಮುತ್ತು ಸವದಂಗೆ ಸವೆದಳು. ಅವಳು ಬಾಳಿ ಬದುಕಿದ ಸಂಭ್ರಮ, ಜೀವನೋತ್ಸಾಹ, ಮೌಲ್ಯಗಳು, ಆದರ್ಶಗಳು ಇವೆಲ್ಲವುಗಳಿಗೆ ನಾವು ಮಕ್ಕಳು ಸೋತು ಹೋಗಿದ್ದೆವು.

       ದುಡ್ಡು ದುಗ್ಗಾಣಿಯ ಹಂಗಿಲ್ಲದೆ ಭೂತಾಯಿಯ ಒಡನಾಡಿಯಾಗಿ ಇತಿಮಿತಿಯಲ್ಲಿ ಬಾಳಿ ಬದುಕಿ ನಮ್ಮೆಲ್ಲರಿಗೂ ಆದರ್ಶವಾದವಳು ನನ್ನವ್ವ.

     ನನ್ನವ್ವ ಯಾವ ಇತಿಹಾಸವನ್ನು ರಚಿಸಿದವಳಲ್ಲ.ಸೀದಾ – ಸಾದಾ ದುಡಿಯುವ ಒಕ್ಕಲಗಿತ್ತಿ . ಹೊಲದ ಪೈರಿಗೆ ಬಣ್ಣ ಬಳಿದವಳು. ಹರಿಯುವ ನೀರಿಗೆ ದಿಕ್ಕು ತೋರಿಸಿದವಳು. ಹಕ್ಕಿಪಕ್ಕಿಗಳಿಗೆ ಕಾಳು ತಿನ್ನಿಸಿದವಳು. ಬರೆದುಕೊಂಡವಳಲ್ಲ ಬರೆಯಿಸಿಕೊಂಡವಳು. ಬರೆಯುವವರಿಗೆ ಕಥೆಯಾಗುವಳು. ಓದು ಬಲ್ಲವರಿಗೆ ಮಾದರಿಯಾದವಳು. ಕಾಮನಬಿಲ್ಲಿನಂತೆ ಮೂಡಿ ಮರೆಯಾಗುವ ಹೊತ್ತಿಗೆ ಅವಳ ಬದುಕಿನ ಹೊತ್ತು  ಮುಳುಗುತ್ತಿದ್ದದ್ದು ಅವ್ವನಿಗೆ ಗೊತ್ತಾಗುತ್ತಿರಲಿಲ್ಲ. ಇಂಥ ಆದರ್ಶದ ಬಾಳನ್ನು ಬದುಕಿದ ಅವ್ವ, ಅವಳು ಮೂಡಿಸಿದ ಹೆಜ್ಜೆ ಗುರುತುಗಳು ಮಕ್ಕಳ ಬದುಕಿಗೆ ಮಾದರಿಯಾದವು. ಅವಳ ಹೆಜ್ಜೆಯಲ್ಲಿ ಹೆಜ್ಜೆಯನ್ನಿಟ್ಟು ಸಾಗುವ ನಮ್ಮ ಬದುಕೂ ಕೂಡಾ ಬಂಗಾರ..

      ಸಂಜೆಯ ಇಳಿ ಹೊತ್ತು ಸರಿದಂತೆ  ಶಾಂತವಾಗಿ ದೂರ ಹೋದಳು ನನ್ನವ್ವ. ಅವಳಿಲ್ಲದೆ ಬದುಕು ಇಲ್ಲ, ಭೂವಿಯು ಇಲ್ಲ ಎನ್ನುವಂತಹ ಸ್ಥಿತಿ. ನಮಗೆಲ್ಲ  ಸ್ಪೂರ್ತಿಯ ಸೆಲೆಯಾಗಿದ್ದವಳು. ಆಗಾಗ ನಮ್ಮವ್ವ ಹೇಳುತ್ತಿದ್ದ ಒಂದು ಮಾತು ಸ್ಮೃತಿ ಪಟಲದಲ್ಲಿ ಅಚ್ಚಳಿಯದೆ ಉಳಿದಿದೆ. “ಹರಿಯೋ ನೀರಿಗೆ ದಿಕ್ಕುಗಳು ನೂರು ಚಂದಾಗಿರ್ರೀ ನಿಮ್ಮ ನಿಮ್ಮ ಸಂಸಾರದಲ್ಲಿ …. ಯಾರ ಮನಸ್ಸಿಗೂ ನೋವಾಗುವಂತೆ ನಡೆದುಕೊಬ್ಯಾಡ್ರಿ.. ತಗ್ಗಿ -ಬಗ್ಗಿ ನಡೀರಿ”  ಅವಳ ಇಂಥ ಮೌಲ್ಯಯುತ ಮಾತುಗಳೇ ನಮ್ಮ ನಡುವಳಿಕೆಗೆ ಆಧಾರ. ‘ತೆನೆ ಬಿಟ್ಟ ಭತ್ತ ಬಾಗುವುದು ಗೊನೆ ಬಿಟ್ಟ ಬಾಳೆ ಬಾಗಲೇಬೇಕು ಬಾಗುವುದು ಬದುಕು ಬೀಗುವುದು ಅಲ್ಲ’ ಎಂದು ಹರಸಿ ಹಾರೈಸಿ ದೂರ ಸಾಗಿ ಹೋದಳು. ಅವಳ ಕಷ್ಟದ ಕಥೆಯನ್ನು ಬರೆಯಲು ಕೈ ನಡುಗುತ್ತವೆ. ಲೇಖನಿ ಬೆರಳುಗಳ ಸಂಧಿಯಿಂದ ಜಾರಿ ಬೀಳುತ್ತದೆ. ಅಕ್ಷರಗಳು ಗಂಟಲಲ್ಲೇ ಉಳಿದು ನಾಲಿಗೆ ತಡವರಿಸುತ್ತದೆ. ಭಾವನೆಗಳು ಬಿಕ್ಕುತ್ತವೆ. ಕಥೆಯಾದವಳ ಕಥೆಯನ್ನು ಹೇಳಿಕೊಂಡರೆ ನನಗೂ ಒಂದಿಷ್ಟು ಸಮಾಧಾನ. ಕೇಳಿದವರ ಎದೆಯಲ್ಲಿ ಮರುಕ ಹುಟ್ಟಬಹುದು. ಭಾವಗಳು ಕಂಪಿಸಬಹುದು ಕಣ್ಣುಗಳು ತೇವವಾಗಬಹುದು.

About The Author

1 thought on ““ಬದುಕಿನ ರೆಕ್ಕೆಗೆ ಬಣ್ಣ ತುಂಬಿದವಳು ನನ್ನವ್ವ”ಡಾ. ಮೀನಾಕ್ಷಿ ಪಾಟೀಲ್”

  1. ಡಾ ಶಶಿಕಾಂತ ಪಟ್ಟಣ ರಾಮದುರ್ಗ

    ನಿಜಕ್ಕೂ ಭಾವಪೂರ್ಣ ಸುಂದರ ದೇಸಿ ಭಾಷೆಯ ಲೇಖನ ಮೇಡಂ

Leave a Reply

You cannot copy content of this page

Scroll to Top