ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಂದು ಉರಿಬಿಸಿಲಲ್ಲೂ
ಸಂಜೆಯ ತಂಗಾಳಿಯ
ಹಿತಭಾವ ಸ್ಪರ್ಶದ
ಅನುಭಾವದ ಸಮಯ

ಏನೋ ದುಗುಡ ಕವಿದ
ಎವೆತೆರೆದ ಮನದಲ್ಲಿ
ಕಂಗಳ ಅಸ್ಥಿರ ಸಂಚಾರ
ಒಣಗಿದ ತುಟಿಯಂಚು
ಬಾಯಾರಿಕೆಯ ಸುಳಿವು
ನೇಸರನ ನೆಟ್ಟನೇರ ದೃಷ್ಟಿ
ಗಾಢಗಲಿಬಿಲಿಯ
ಎಲ್ಲೆಯಿಲ್ಲದೆ ದೊಡ್ಡೂರ ಗಲ್ಲಿ
ಸಕಲ ಸದ್ದಿಗೂ,ಸುದ್ದಿಗೂ
ಮೈಚಾಚಿದ ಕಾದರಸ್ತೆ
ಕಿವಿಗಳಿಗೆ ರಿಂಗಣಿಸುವ
ಜನಜಂಗುಳಿಯ ವಾಕ್
ಸಮರ ಸಮ್ಮೋಹನಗಳು
ಚಿತ್ತ ಚಾಂಚಲ್ಯ
ನಡುಗುವ ತಾಲವ್ಯ..

ಅದೇ ಕ್ಷಣ..
ಅದೊಂದೇ ಅರೆಕ್ಷಣ..
ನೆಟ್ಟ ನೋಟದಲ್ಲಿ
ವೈಶಾಖದ ಬೆಳದಿಂಗಳು
ಬಾಂದಳದ ತಿಂಗಳು..
ಎಂತವರನ್ನು ಸೆಳೆಯುವ
ಮಂತ್ರಮುಗ್ಧನಾಗಿಸುವ
ಮೌನದ ಜೀವಶಿಲ್ಪ
ಕಲಾಕೃತಿ, ಮನಸೆಳೆದ ಆಕೃತಿ

ಹಾಲ್ಬೆಳದಿಂಗಳ ವರ್ಣದ
ಸ್ನಿಗ್ಧ ಸೌಂದರ್ಯದ
ಕಂಗಳಕಾಯ
ಕಾಂತಿಯ ಚೆಲುವೆ,
ವೈಶಾಖಕ್ಕೆ ಬೆಚ್ಚಿದ್ದರೂ
ಗಟ್ಟಿ ಭಾವದ ಗಟ್ಟಿಗಿತ್ತಿ
ಮಲ್ಲಿಗೆ ಕನಕಾಂಬರದ
ಮುಡಿದ ಚಾರುಲತೆ
ಗಾಂಭೀರ್ಯದ ನೋಟ
ಮುಂಗುರುಳ ಆಟ
ಗುಳಿಕೆನ್ನೆಗೆ ಚುಚ್ಚುವ
ಮುಂಗುರುಳಿಗೆ
ಕೈಬೆರಳುಗಳಿಂದ ಕ್ಷಣಕ್ಷಣದ
ಬಂಧನದ ಭೀತಿ
ಸವಿಭಾವದ ಸಂಪ್ರೀತಿ

ನೋಡಿದಷ್ಟು ಆನಂದ
ಜಗದ ಪರಮಾನಂದ
ಘರ್ಜಿಸುವ ಗಲ್ಲಿಗೂ
ನಿಶ್ಯಬ್ದದ ಮೌನದ
ಮೆರವಣಿಗೆ
ಕೆಲ ಕ್ಷಣ ಎಲ್ಲವೂ ಸ್ತಬ್ದ,
ಕಾತುರದ ಕಂಗಳಲ್ಲಿ
ಸೂಕ್ಷ್ಮತೆಯ ಛಾಯೆ
ಏನೋ ತುಡಿತ,
ಕೈಯಲ್ಲಿ ಬಿಗಿಹಿಡಿತ
ಕಂಠದಲ್ಲಿ ಗದ್ಗದಿತ
ಭಾವದಲ್ಲಿ ಭವ್ಯತೆಯ ಸ್ಮಿತ.
ಝೇಂಕರಿಸುವ
ಭರಾಟೆಯಲ್ಲಿ ಬಸ್ಸನೇರಿ
ಹೊರಟಳು.
ವೈಶಾಖದ ಬೆಳದಿಂಗಳ
ಜೀವಂತ ಗೊಂಬೆ
ಒಂದೂ ಮಾತನಾಡದೇ.
ಮೌನಮುರಿಯದೇ.
ನೇಸರಿನಿಗೆ ತಲೆಯೆತ್ತದೆ.
ಪ್ರೇಮಪಸರಿಸದೆ
ಪ್ರೀತಿ ಸಿಂಚಿಸದೆ
ಸಖತನವ ಕೂಡಿಸದೆ
ಮುಂಗಾರಿನ ಆಹ್ವಾನಿಸಿ,
ಹಸಿರಿಗೆ ಪಸರಿಸುವಂತೆ
ಪಯಣಿಸಿತು ಪ್ರೇಮದೂರಿಗೆ.


About The Author

8 thoughts on “ತಾತಪ್ಪ.ಕೆ.ಉತ್ತಂಗಿ ಅವರ ಕವಿತೆ-ವೈಶಾಖದ ಬೆಳದಿಂಗಳೇ.”

  1. ಕಣ್ಣ ಮುಂದೆ ಆ ಕ್ಷಣಗಳು ಬರುವ
    ❤️ನಮ್ಮ ಗುರುಗಳ ಅದ್ಬುತವಾದ ಕವಿತೆ ✨️

Leave a Reply

You cannot copy content of this page

Scroll to Top