ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಅನ್ನಪೂರ್ಣ ಸು ಸಕ್ರೋಜಿ

ಪುರುಷ ಪರುಷಮಣಿ

ಪುರುಷ ಕಲ್ಲು ಹೃದಯದವನು
ಅನ್ನುವುದು ಸಹಜ ಒಪ್ಪಿಕೊಂಡೆ
ಕಣ್ಣುಗಳಲಿ ಕಾಣದು ಆರ್ದ್ರತೆ
ಕಾಣದು ಭಾವನೆಗಳಲಿ ಒರತೆ

ವ್ಯಕ್ತವಾಗದು ಎಂದೂ ಸೀದಾ
ಸಹಜ ಸರಳ ಪ್ರೇಮ ಪ್ರೀತಿ
ಅವನ ಅವ್ಯಕ್ತ ಪ್ರೀತಿಯ ರೀತಿ
ಬೇರೆ ತರಹ ಭಿನ್ನವಾಗಿರುವುದು

ತಾಯಿ ಹೃದಯದ ಕಾಳಜಿ
ತಂದೆಯ ತೋರಿಕೆಯ ಕೋಪ
ಅಣ್ಣನ ಮಮತೆಯ ಗದರಿಕೆ
ಗೆಳೆಯನ ಸಲುಗೆಯ ಬೈಗುಳ

ಗಂಡಸಿನ ದರ್ಪ ಅಧಿಕಾರ
ಪುರುಷಪ್ರಿಯ ಅಹಂಕಾರ
ಪ್ರಿಯ ಪತ್ನಿಯ ಜೊತೆಗಾರ
ಪರಿವಾರದ ಪರಮೇಶ್ವರ

ಸಂಬಂಧಗಳ ಬಂಧ ಅರಿತವ
ಸದಾ ಮಧುರವಾಗಿಸುವವ
ಅವ್ವನೊಂದಿಗೆ ಹಂಚಿಕೊಳ್ಳಲಾರ
ಪತ್ನಿಯೊಂದಿಗೆ ತೋಡಿಕೊಳ್ಳಲಾರ

ಸಮತೆಯಿಂದ ಸಂಭಾಳಿಸುವನು
ಉದ್ಯೋಗದೊಂದಿಗೆ ಮನೆಯನು
ಸಹನೆಯಿಂದ ಬಾಳುವವನು
ಮನೆ ರಕ್ಷಿಸುವ ಕಾವಲುಗಾರನು

ತನ್ನ ಕನಸುಗಳ ಮುಚ್ಚಿಡುವವ
ಎಲ್ಲರಿಗಾಗಿ ಸಾಲ ಮಾಡುವವ
ವೃದ್ಧ ತಂದೆ ತಾಯಿ ಪತ್ನಿಗಾಗಿ
ದುಡಿಮೆಯೇ ದೈವವೆನ್ನುವವ

ಸಂಕಷ್ಟಗಳಗೆ ಎಂದೂ ಅಂಜದವ
ನಗುತ ನಂಜುಂಡನಾಗುವವ
ನಾನಿರುವೆನೆಂದು ನಂಬಿಸುವವ
ಕುಟುಂಬ ವತ್ಸಲನಾಗಿರುವವ

ಬೇಕು ಶಕ್ತಿ ಸೃಷ್ಟಿಕರ್ತನ ಕಾರ್ಯಕೆ
ಸ್ತ್ರೀ ಬೇಕು ಪುರುಷನ ಅಸ್ತಿತ್ವಕೆ
ಆಗ ಮಹಾ ಪುರುಷನೆನಿಸುವನು
ಪುರುಷ ಪರುಷಮಣಿಗೆ ವಂದನೆ


ಅನ್ನಪೂರ್ಣ ಸು ಸಕ್ರೋಜಿ ಪುಣೆ

About The Author

Leave a Reply

You cannot copy content of this page

Scroll to Top