ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ. ಪುಷ್ಪಾ ಶಲವಡಿಮಠ

ದಾರಿ ಸಲೀಸಾಗಿದೆ

ಈಗೀಗ ದಾರಿ ಸಲೀಸಾಗಿದೆ
ನೀರಾಳವಾಗಿದೆ……

ಅನಿಸುತ್ತಿತ್ತು ಮೊದಮೊದಲು
ಕಲ್ಲುಗಳೇ ತುಂಬಿರುವ ದಾರಿಯಲ್ಲಿ
ನಡೆಯುವುದು ಮುಂದೆ ಸಾಗುವುದು ಹೇಗೆಂದು?!
ದಿನಗಳೆದಂತೆ
ಕಲ್ಲುಗಳ ದಾಟಿ ಹೃದಯಮೀಟಿ
ಎಡವಿ ಬೀಳದಂತೆ
ನಡೆಯುವುದನ್ನು ಕಲಿತಿರುವೆ
ದಾರಿಯೆಲ್ಲ ಸಲೀಸಾಯಿತು
ಕಲ್ಲುಗಳೆಲ್ಲ ಹೂವಾಗಿ ಅರಳಿದವು

ಭಯವಾಗುತ್ತಿತ್ತು
ದಾರಿಮಧ್ಯೆ ಹರವಿಕೊಂಡು
ನಾಲಿಗೆ ಚಾಚಿಕೊಂಡು
ಹೆಜ್ಜೆ ಹೆಜ್ಜೆಗೂ ಚುಚ್ಚಿಕೊಳ್ಳುವ
ಮುಳ್ಳುಕಂಟಿ ಕಂಡಾಗ…..
ದಿಗಿಲಾಗುತ್ತಿತ್ತು
ಹೇಗೆ ನಡೆದು ಹೋಗುವುದೆಂದು?!

ಕಲಿತುಕೊಂಡೆ
ಚಪ್ಪಲಿ ಹಾಕಿಕೊಂಡು ನಡೆಯುವುದನ್ನು
ಅರಿತುಕೊಂಡೆ
ಮುಳ್ಳುಗಳನ್ನೆಲ್ಲ ಸವರಿ ಬದುವಿಗೆ ಸರಿಸುವುದನ್ನು
ಮುಳ್ಳುಗಳೆಲ್ಲ ನಕ್ಷತ್ರವಾಗಿ ನಕ್ಕವು

ದಾರಿಯುದ್ಧಕ್ಕೂ ನೂರಾರು
ಕಂದರಗಳು ದಿಬ್ಬಗಳು
ಏರಿಳಿಯುವುದರಲ್ಲೇ ಬದುಕೇ
ಮುಗಿಯುವುದೆಂದು ತಲ್ಲಣಿಸಿದಾಗ
ಇಡುವ ಸಹಜ ಹೆಜ್ಜೆ
ಗಟ್ಟಿಯಾಗುತ್ತಾ ಸಾಗಿತ್ತು
ಬಯಸಿದ ತಾಣ ಕಣ್ಣೆದುರಿಗೇ ಇತ್ತು
ಮನಸ್ಸು ದೃಢವಾಗಿತ್ತು ಮಾಗಿತ್ತು
ಗಿರಿ ಕಂದರಗಳು ಹೆಮ್ಮೆಯಿಂದ ಬಾಗಿದವು

ನಡೆದು ಬಂದ ದಾರಿಯ
ನಾ ಮರೆಯಲಿಲ್ಲ
ಎಡವಿದ ಕಲ್ಲಿಗೆ
ತುಳಿದ ಮುಳ್ಳಿಗೆ
ಕ್ಷಮೆ ಬೇಡುವೆ
ಅರಿಯದೇ ತುಳಿದಿದ್ದಕ್ಕೆ

ದಾರಿಯಲ್ಲಿ ಕಲ್ಲುಮುಳ್ಳು ಸಹಜ
ಜಾಗ್ರತೆವಹಿಸಬೇಕಿತ್ತು ನಡೆಯುವಾಗ
ಎಚ್ಚರವಿರಬೇಕಿತ್ತು ತುಳಿಯದಂತೆ
ಏರಿಳಿತಗಳ ಮಧ್ಯೆದಲ್ಲಿಯೇ
ಬದುಕ ಕಟ್ಟಬೇಕು ಹಸನಾಗಿಸಬೇಕು

ಈಗೀಗ ಎಲ್ಲವೂ ಅರ್ಥವಾಗಿದೆ
ದಾರಿಯೀಗ ಸಲೀಸಾಗಿದೆ…


About The Author

7 thoughts on “ದಾರಿ ಸಲೀಸಾಗಿದೆ ಡಾ. ಪುಷ್ಪಾ ಶಲವಡಿಮಠರವರ ಕವಿತೆ-”

  1. ಎ ಎಸ್ ಮಕಾನದಾರ

    ಈಗೀಗ ದಾರಿ ಸಲೀಸ್ ಆಗಿದೆ
    ನಿರಾಳ ವಾಗಿದೆ ಎನ್ನುವ ಕವಿತೆ ವಿಭಿನ್ನ ವಾಗಿ ಓದುಗರ ಗಮನ ಸೆಳೆಯುತ್ತಿದೆ.

    ಎಡವಿದ ಕಲ್ಲಿಗೆ
    ತುಳಿದ ಮುಳ್ಳಿಗೆ
    ಕ್ಷೇಮೆ ಬೇಡುವೆ ಎನ್ನುವ
    ಕವಯತ್ರಿ ಡಾ. ಪುಷ್ಪಾ ಮೇಡಂ ಅವರು
    ದಾರಿಯಲ್ಲಿನ ಕಲ್ಲು ಮುಳ್ಳುಗಳ ಇರುವಿಕೆ ಕುರಿತು ಜಾಗೃತಿ ವಹಿಸಬೇಕಿತ್ತು ಎನ್ನುವ ಎಚ್ಚರಿಕೆ ಸಮ ಸಮಾಜದ ಕನಸು ಕಾಣುವ ಸಹಮಾನವನಿಗೂ ಅನ್ವಯವಾಗುತ್ತದೆ
    ಪರರ ತಪ್ಪುಗಳಕುರಿತಾಗಿ ಬೆರಳು ಮಾಡುವ ನಾವೂಗಳೂ ಕೂಡ ಎಚ್ಚರಿಕೆ ವಹಿಸುವುದು ಅಗತ್ಯವೆಂದು ಕವಿತೆ ಸಾರುತ್ತದೆ
    ಉತ್ತಮ ಕವಿತೆ ಪ್ರಕಟಿಸಿ ದ ಕಾವ್ಯ ಸಂಗಾತಿಗೆ ಕವಯತ್ರಿ ಡಾ ಪುಷ್ಪ ಮೇಡಂ ಅವರಿಗೆ ಶುಭಾಶಯಗಳು

    ಎ ಎಸ್. ಮಕಾನದಾರ.ಗದಗ

  2. Dr.Pushpavati Shalavadimath

    ಮಕನದಾರ್ ಸರ್, ನಿಮ್ಮ ಪ್ರತಿಯೊಂದು ಸಾಲೂ ನನ್ನ ಕವಿತೆಯ ತೂಕ ಹೆಚ್ಚಿಸಿವೆ. ಅಭಿಪ್ರಾಯಕ್ಕೆ ಧನ್ಯವಾದಗಳು ಸರ್.

    1. Neelakanthayya Odisomath

      ದಾರಿ ಸಲೀಸಾಗಿದೆ. ಕವಿತೆಯು ಅನುಭವ ಮತ್ತು ಅನುಭಾವದಿಂದ ಹುಟ್ಟಿದೆ. ಪ್ರತಿಯೊಬ್ಬರ ಜೀವನದಲ್ಲಿ ಏನೇಲ್ಲಾ ನೋವು, ನಲಿವು, ಎಡರುತೊಡರುಗಳನ್ನ ಮೆಟ್ಟಿ ನಿಂತಾಗ ಜೀವನದ ದಾರಿ ಸಲೀಸಾಗುತ್ತದೆ ಎಂಬ ಆಶಯವನ್ನು ವ್ಯಕ್ತಪಡಿಸಿದೆ.

  3. ವಾಯ್ ಎಂ ಯಾವಗಲ್

    ಅನುಭವ ಹೆಚ್ಚಾದಂತೆ ಸಮಸ್ಯೆಗಳು ತಾವಾಗಿಯೇ ಮಾಯವಾಗುತ್ತವೆ ಎಂಬ ನಿಮ್ಮ ಅನುಭವದ ಮಾತು ಮೆಚ್ಚುಗೆಯಾಯಿತು

    1. Dr.Pushpavati Shalavadimath

      ಈ ಜೀವನದ ಪಾಠ ಶಾಲೆಯಲ್ಲಿ ಕಲಿತ ಪಾಠಗಳು ಅರ್ಥವಾದಾಗ ಎಲ್ಲವೂ ಸಲಿಸು, ಯಾವಗಲ್ ಸರ್ ತಮ್ಮ ಕಾವ್ಯ ಗ್ರಹಿಕೆಗೆ ಶರಣು

  4. ಕವಿತೆ ತುಂಬಾ ಅರ್ಥಪೂರ್ಣವಾಗಿದೆ ಗುರುಮಾತೆ…❤️ ನನ್ನ ಜೀವನದ ದಾರಿಯು ಕೂಡಾ ಈ ನಿಮ್ಮ ಕವಿತೆಯಲ್ಲಿ ಅಡಗಿದೆ

Leave a Reply

You cannot copy content of this page

Scroll to Top