ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಎತ್ತ ಹೋದಿರಿ?

ಡಾ. ಪುಷ್ಪಾ ಶಲವಡಿಮಠ

ಗುಳೆ ಹೊರಟ ಭಾವಗಳೇ
ಎತ್ತ ಹೋದಿರಿ?
ನೀವು ಹೋದ ಮರುಕ್ಷಣ
ನಾನು ನಾನಾಗಿಲ್ಲ

ಎನ್ನೆದೆಯೊಳಗಿನ ಕನಸುಗಳೆಲ್ಲ
ಕಾಲನ ಧಾಳಿಗೆ ಗೋರಿಯಾಗಿವೆ
ಮಡಕೆ ಹೊರಗೆ ಸುಟ್ಟುಕೊಂಡು
ಮೂರ್ತವಾದಂತೆ
ಭಾವಗಳು ಒಳಗೊಳಗೇ ಸುಟ್ಟುಕೊಂಡು
ಅಮೂರ್ತವಾಗಿವೆ
ಮೂರ್ತ -ಅಮೂರ್ತತತೆಯ
ಹುಡುಕಾಟ ನನ್ನಲ್ಲಿಗ

ದಿಕ್ಕುದಿಕ್ಕಿಗೂ ಪಸರಿಸಿದೆ ಅರಣ್ಯರೋಧನ
ಭಾರತಾಂಬೆಯ ಪಟವನ್ನೇ ಛಿದ್ರಗೊಳಿಸಿದೆ
ಬೆಟ್ಟದಷ್ಟು ದಟ್ಟವಾಗಿ ಬೆಳೆದ ಭಾವಗಳಿಗೆ
ತಂಪುಗಾಳಿ ಸೋಕಲೇ ಇಲ್ಲಾ
ಭಾವಗಳು ಕರಗಿ ಧರೆಗಿಳಿಯಲೇ ಇಲ್ಲಾ

ಎಲ್ಲಿಂದಲೋ ಬಂದ ಸುಂಟರಗಾಳಿ
ತರಗೆಲೆಗಳಂತೆ ಭಾವಗಳ
ಎತ್ತಲೋ ಕರೆದೋಯ್ದಿದೆ
ಭಾವಮೋಡಗಳೆಲ್ಲಾ ಚದುರಿ ಹೋಗಿವೆ
ಮಳೆಯಾಗಿ, ಹೊಳೆಯಾಗಿ,
ಜೀವಸೆಲೆಯಾಗಬೇಕಿದ್ದ ಭಾವಗಳಿಗೀಗ ನೆಲೆಯಿಲ್ಲ

ಸೂತ್ರ ಹರಿದ ಗಾಳಿಪಟದಂತೆ
ಚಿತ್ತ ತಿರುಗಿದತ್ತ ಅವುಗಳ ಓಟ
ಗತಿಗೆಟ್ಟ ಭಾವಗಳಿಗೊಂದು ಸ್ಥಿರತೆ ಬೇಕಿದೆ
ಗುರುಗೋವಿಂದನ ಬೆರಳಿನಿಂದ
ಶರೀಫನ ತಂಬೂರಿ ಮೀಟಬೇಕಿದೆ

ಧರ್ಮಧರ್ಮಗಳ ಕೆಸರೆರಚಾಟದಲಿ
ಅನಾಥವಾದ ಭಾವಗಳಿಗೆ
ದೇವಭಾವದ ಸ್ಪರ್ಶ ಬೇಕಿದೆ
ಜಗವೆಲ್ಲ ನಗುತಿರಲಿ ಹೃದಯದಲಿ
ಭಾವಗಳು ನಲಿಯುತ ಬರಲಿ
ಒಲವರಳಿ ಜಗವೆಲ್ಲಾ ಬೆಳಕಾಗಲಿ
ಭೇದಭಾವ ಮರೆತು ಮನವೆಲ್ಲಾ ಹೂವಾಗಲಿ

ಭಾವತೇರಿನಲ್ಲಿ ಸಮತೆ -ಮಮತೆಯ
ಹಣತೆಗಳ ಸಾಲು ಸಾಲು ಮೆರವಣಿಗೆ
ಸಡಗರದಿ ಸಾಗಿ ಬರಲಿ
ಬುದ್ಧ -ಬಸವ -ಯೇಸು -ಪೈಗಂಬರರ ದಿವ್ಯತೆಯಲಿ
ಗೋರಿಗೊಂಡ ಮನಸುಗಳು ಸಡಿಲವಾಗಲಿ
ಕಮರಿದ ಭಾವಗಳೀಗ ಕರಗಿ ತುಂತುರು ಮಳೆಯಾಗಿ
ಹಸಿರು ತೆನೆಗಳೆದ್ದು ನಿಲ್ಲಲಿ ಜಡವಿದು ದೂರವಾಗಲಿ

ಓ ಭಾವಗಳೇ ನೀವಿಲ್ಲದೇ
ನಾನು ಕವಿತೆಯಾಗಲಾರೆ
ಜಗದೆದೆಯ ತಣಿಸಲಾರೆ
ಬನ್ನಿ ಭಾವಗಳೇ ಎತ್ತ ಹೋದಿರಿ?
ಬನ್ನಿ ಭಾವಗಳೇ ಪದವಾಗಿ, ಕವಿತೆಯಾಗಿ
ಬನ್ನಿ ಭಾವಗಳೇ ಎದೆಯ ಪಲ್ಲಕ್ಕಿಯಲಿ
ಅನುರಣಿಸ ಬನ್ನಿ ಮೆರವಣಿಗೆ ಹೊರಡ ಬನ್ನಿ


About The Author

5 thoughts on “ಡಾ. ಪುಷ್ಪಾ ಶಲವಡಿಮಠ,ಕವಿತೆ-ಎತ್ತ ಹೋದಿರಿ?”

    1. ತುಂಬಾ ಅರ್ಥ ಗರ್ಭಿತ ವಾಗಿದೆ ಉಣಬಡಿಸಿದ್ದಕ್ಕೆ ಧನ್ಯವಾದಗಳು

Leave a Reply

You cannot copy content of this page

Scroll to Top