ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಎಚ್ಚರಿಕೆ

ಯೋಗೇಂದ್ರಾಚಾರ್ ಎ ಎನ್

ಎಚ್ಚರಿಕೆ…..

ಹೆಣ್ಣನ್ನು ಪೂಜಿಸುವ
ಹೆಣ್ಣನ್ನು ಗೌರವಿಸುವ
ಹೆಣ್ಣನ್ನು ಹಾಡಿ ಹೊಗಳಿ
ಲಾಲಿತ್ಯಾದಿ ಪದಗಳಿಂದ
ಹೊಗಳುವ ನಾಡಲ್ಲಿ
ಹೆಣ್ಣನ್ನು ತುಂಡು ತುಂಡಾಗಿಸಿ
ಹಲ್ತಿಕ್ಕಿ ಮತ್ಸರ ಮಸೆವ
ಕಾಮಿಷ್ಟ ಸೈಕೋಗಳಿದ್ದಾರೆ
ಎಚ್ಚರಿಕೆ

ಮಣ್ಣನ್ನು ಕಣ್ಗೊತ್ತಿಕೊಳ್ಳುವ
ಮಣ್ಣನ್ನು ಎದೆಗವಚಿಕೊಳ್ಳುವ
ಮಣ್ಣನ್ನು ಉತ್ತಿ ಬಿತ್ತಿ
ಹೊನ್ನ ತೆಗೆಯುವವರ ನಾಡಲ್ಲಿ
ಅಕ್ರಮ ಸಕ್ರಮವೆಂದು
ತಲೆ ಹಿಡಿವ ಲೂಟಿಕೋರರಿದ್ದಾರೆ
ಎಚ್ಚರಿಕೆ

ಮಾತನ್ನು ಹೂರಣವನ್ನಾಗಿಸುವ
ಮಾತನ್ನು ವಚನವನ್ನಾಗಿಸುವ
ಮಾತನ್ನು ಹೂದೋಟವನ್ನಾಗಿಸುವ
ಹೃದಯವಂತರ ನಾಡಲ್ಲಿ
ರಾಜಕೀಯ ಬಣ್ಣವ ಮೆತ್ತಿ
ಕತ್ತಲಲ್ಲಿ ಕೂರಿಸುವ
ಗರಗಸ ಜಿಹ್ವೆಯ
ಭಂಡ ಮಾತಿನ ಮಲ್ಲರಿದ್ದಾರೆ
ಎಚ್ಚರಿಕೆ

ಕಪ್ಪನ್ನು ಜರಿಯುವ
ವಿಷವನ್ನು ಕಕ್ಕುವ
ಹಣವೆಂದರೆ
ತಿಪ್ಪೆ ಗುಂಡಿ ಚರಂಡಿ
ಡಾಂಬಾರು ಸಗಣಿಯನ್ನೂ
ನೆಕ್ಕಿ ಜೇಬಿಗೇರಿಸುವ
ನರ ಹಂತಕರಿದ್ದಾರೆ
ಎಚ್ಚರಿಕೆ
ಎಚ್ಚರಿಕೆ


About The Author

Leave a Reply

You cannot copy content of this page

Scroll to Top