ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಂಕಣ ಸಂಗಾತಿ

ಶಿಕ್ಷಣ ಲೋಕ

ಡಾ.ದಾನಮ್ಮ ಝಳಕಿಯವರು

ಪ್ರತಿ ಮಂಗಳವಾರ ಬರೆಯಲಿದ್ದಾರೆ

ಮಕ್ಕಳ ಹಕ್ಕುಗಳ ಪಕ್ಷಿನೋಟ

ಅಪೇಕ್ಷಾ ಎಂಬ ಶಿಕ್ಷಕಿ ಮಕ್ಕಳೊಂದಿಗೆ ಮಕ್ಕಳ ಹಕ್ಕುಗಳ ಬಗ್ಗೆ ಚರ್ಚಿಸುತ್ತಿದ್ದಳು. ಅಷ್ಟರಲ್ಲಿ ಒಂದು ಮಗು ಎದ್ದು ನಿಂತು ಮೇಡಂ ನಿಜವಾಗಿಯೂ ನಮಗೆ ಹಕ್ಕುಗಳಿವೆಯೇ ? ಎಂದು ಕೇಳಿತು, ಆಗ ಶಿಕ್ಷಕಿ ಏಕೆ ನಿನಗೆ ಈ ಸಂಶಯ ಎಂದರು. ಆಗ ಮಗು, ಮೇಡಂ ಎಲ್ಲರ ಮನೆಯಲ್ಲಿಯೂ ಕನ್ನಡಿಗಳು, ವಾಶ್‌ ಬೇಶನ್‌ಗಳು ಇತ್ಯಾದಿಗಳೆಲ್ಲವೂ ದೊಡ್ಡವರು ತಮಗೆ ಅನುಕೂಲವಾದ ಎತ್ತರಕ್ಕೆ ಮಾಡುತ್ತಾರೆ ಮಕ್ಕಳ ಬಗ್ಗೆ ಆಲೋಚಿಸುವುದೇ ಇಲ್ಲವಲ್ಲ ಎಂದಿತು.  ಆ ಮಗು ಕೇಳಿದ ಪ್ರಶ್ನೆ ಕ್ಷಣಹೊತ್ತು ಶಿಕ್ಷಕಿಯನ್ನು ಆಲೋಚನೆಯಲ್ಲಿ ಮೊಳಗಿಸಿತು. ಹೌದು ನಾವೆಲ್ಲ ಇದನ್ನು ಗಮನಿಸಿ, ಮಕ್ಕಳ ತೊಂದರೆ ಪರಿಹರಿಸಬೇಕು. ಮಕ್ಕಳಿಗಾಗಿ ಚಿಕ್ಕ ಕುರ್ಚಿ ಅಥವಾ ಸ್ಟೂಲ್‌ ನ್ನು ಇಡಬೇಕು ಎಂದರು. ಈ ಆಲೋಚನೆ ಸರಿಯಾಗಿದೆ ಮೇಡಂ ಏಕೆಂದರೆ ನಾವು ಸ್ವಲ್ಪ ದೊಡ್ಡವರಾದ ಮೇಲೆ ಅದರ ಅವಶ್ಯಕತೆ ಇರುವುದಿಲ್ಲ ಎಂದು ಸಂತೋಷದಿಂದ ಹೇಳಿತು.

ತದನಂತರ ಮತ್ತೊರ್ವ ವಿದ್ಯಾರ್ಥಿನಿ ಎದ್ದು ನಿಂತು ಮೇಡಂ ಮಕ್ಕಳ ಹಕ್ಕುಗಳು ಏಕೆ ಬೇಕು? ಯಾವಾಗಿನಿಂದ ಜಾರಿಗೆ ಬಂದವು? ಅದರಲ್ಲಿ ಯಾವ ಯಾವ ಹಕ್ಕುಗಳಿವೆ ತಿಳಿಸಿ ಮೇಡಂ. ನಾವು ಮಕ್ಕಳು ನಮ್ಮ ಹಕ್ಕುಗಳನ್ನು ನಾವು ತಿಳಿಯಬೇಕು ಮತ್ತು ಅವುಗಳನ್ನು ಬಳಸಿಕೊಂಡು ಅಭಿವೃದ್ಧಿ ಹೊಂದಬೇಕು ಎಂದಳು. ಆಗ ಅಲ್ಲಿಯೇ ಪಕ್ಕದಲ್ಲಿದ್ದ ವಿದ್ಯಾರ್ಥಿಯೊಬ್ಬ ಮಕ್ಕಳು ಎಂದರೆ ಯಾರು? ಎಂದು ಕೇಳಿದನು.

ಆಗ ಶಿಕ್ಷಕಿ ಮಕ್ಕಳಿಗೆ ಅವರ ಹಕ್ಕುಗಳನ್ನು ನೀಡುವುದು ಕೇವಲ ನಮ್ಮ ಕರ್ತವ್ಯ ಅಲ್ಲ. ಅದು ನಮ್ಮ ಹಕ್ಕು,  ಹೀಗಾದಾಗ ಮಾತ್ರ ಅವರು ಮುಂದೆ ಈ ಸಮಾಜದಲ್ಲಿ ಎಲ್ಲರಂತೆ ಸ್ವಾಭಿಮಾನದಿಂದ ಬದುಕಲು ಸಾಧ್ಯ.

ಮಕ್ಕಳ ಹಕ್ಕುಗಳು ಮಾನವ ಹಕ್ಕುಗಳಲ್ಲಿನ ಒಂದು ಭಾಗ. ಮಕ್ಕಳ ಹಕ್ಕುಗಳನ್ನು ರಕ್ಷಿಸಿ ಬೆಳೆಸಿದಲ್ಲಿ ಮಾನವ ಹಕ್ಕುಗಳನ್ನು ರಕ್ಷಿಸಿದಂತೆ. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎಂಬ ಮಾತು ಮುಂಚೆ ಇತ್ತು. ಆದರೆ ಇಂದಿನ ಮಕ್ಕಳೇ ಇಂದಿನ ಪ್ರಜೆಗಳು ಎಂಬ ಮಾತು ಈಗ ಎಲ್ಲಡೆ ಕೇಳಿ ಬರುತ್ತಿದೆ. ಹೀಗಾಗಿ ಎಲ್ಲ ಮಕ್ಕಳು ಆರೋಗ್ಯವಂತ ಮತ್ತು ಪ್ರಜ್ಞಾವಂತ ನಾಗರಿಕರಾಗಿ ಬೆಳೆಯಲು ವಿಫುಲ  ಅವಕಾಶ ನೀಡುವುದಕ್ಕಾಗಿ ಪ್ರತಿ ವರ್ಷ ನವೆಂಬರ್ 20 ನ್ನು ವಿಶ್ವ ಮಕ್ಕಳ ಹಕ್ಕುಗಳ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಶಿಕ್ಷಕಿ ವಿವರಿಸಿದರು.

ಆಗ ವಿದ್ಯಾರ್ಥಿಯೊಬ್ಬಳು ಎದ್ದು ನಿಂತು ಮೇಡಂ ನವೆಂಬರ್ 20 ನೇಯ ದಿನಾಂಕವೇ ಏಕೆ ಜಾಗತಿಕ ಮಟ್ಟದ ಮಕ್ಕಳ ಹಕ್ಕುಗಳ ದಿನವಾಗಿದೆ ಎಂದು ಪ್ರಶ್ನಿಸಿದಳು.

ನವೆಂಬರ್ 20 ವಿಶ್ವದ ಎಲ್ಲ ಮಕ್ಕಳ ಪಾಲಿಗೆ ಮಹತ್ವದ ದಿನವಾಗಿದೆ ಏಕೆಂದರೆ, 1959 ರಲ್ಲಿ ವಿಶ್ವಸಂಸ್ಥೆಯಲ್ಲಿ ಇದೇ ದಿನ ಮಕ್ಕಳ ಹಕ್ಕುಗಳನ್ನು ಘೋಷಿಸಲಾಯಿತು. 1989 ರಲ್ಲೂ ಇದೇ ದಿನ ಮಕ್ಕಳ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದ ಒಪ್ಪಂದಕ್ಕೆ ಭಾರತವೂ ಸೇರಿದಂತೆ 190 ದೇಶಗಳು ಸಹಿ ಹಾಕಿದವು. ವಿಶ್ವಸಂಸ್ಥೆಯ ಒಡಂಬಡಿಕೆಗಳಲ್ಲಿ ಹಾಗೂ ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ಒಡಂಬಡಿಕೆ ಇದಾಗಿದೆ. ಇದರಲ್ಲಿ 54 ಪರಿಚ್ಚೇದಗಳು (ಅಂಶಗಳು ಅಥವಾ ಹಕ್ಕುಗಳು) ಇವೆ. ಅತ್ಯಂತ ಹೆಚ್ಚು ರಾಷ್ಟ್ರಗಳು ಸಹಿ ಮಾಡಿರುವ ಏಕೈಕ ಒಡಂಬಡಿಕೆ ಇದಾಗಿದೆ.  ಈ ಎರಡು ಮಹತ್ತರ ಘಟನೆಗಳ ನೆನಪಿಗಾಗಿ 1990 ರಿಂದ ವಿಶ್ವದಾದ್ಯಂತ ನವೆಂಬರ್ 20 ರಂದು ಮಕ್ಕಳ ಹಕ್ಕುಗಳ ದಿನಾಚರಣೆ ಆಚರಿಸಲು ನಿರ್ಧರಿಸಲಾಯಿತು. ಈ ಮಕ್ಕಳ ಹಕ್ಕುಗಳಲ್ಲಿ ಅತ್ಯಂತ ಪ್ರಮುಖವಾಗಿ ನಾಲ್ಕು ಅಂಶಗಳಿವೆ.  ಅವುಗಳೆಂದರೆ ಬದುಕುವ ಹಕ್ಕು, ರಕ್ಷಣೆಯ ಹಕ್ಕು, ಅವಕಾಸ ಮತ್ತು ವಿಕಾಸ ಹೊಂದುವ ಹಕ್ಕು ಹಾಗೂ  ಭಾಗವಹಿಸುವ ಹಕ್ಕು ಎಂದು ಶಿಕ್ಷಕಿ ತಿಳಿಸಿದಳು.

ಇದನ್ನೆಲ್ಲಾ ಅತ್ಯಂತ ಆಸಕ್ತಿಯಿಂದ ಆಲಿಸುತ್ತಿದ್ದ ವಿದ್ಯಾರ್ಥಿಯೊಬ್ಬ ಎದ್ದು ನಿಂತು ಮೇಡಂ, ಆ 54 ಪರಿಚ್ಚೇದಗಳು ಎಂದು ಹೇಳಿದಿರಲ್ಲ ಅದರಲ್ಲಿ ಏನೇನಿದೆ? ಎಂದು ಕೇಳಿದ ಆಗ ಶಿಕ್ಷಕಿ ಅದನ್ನು ಕುರಿತು ಹೇಳುತ್ತಾ,

ಮಕ್ಕಳ ಹಕ್ಕುಗಳ ಒಡಂಬಡಿಕೆಯ 54 ಪರಿಚ್ಚೇದಗಳಲ್ಲಿ ಏನಿದೆ ಎಂದರೆ,

1.        18 ವರ್ಷದೊಳಗಿನ ಎಲ್ಲಾ ಮನುಷ್ಯ ಜೀವಿಗಳು ಮಗು ಅಥವಾ ಮಕ್ಕಳು

2.        ಮಕ್ಕಳಲ್ಲಿ ಯಾವುದೇ ತಾರತಮ್ಯ ಮಾಡಬಾರದು

3.        ಮಕ್ಕಳ ಹಿತಾಸಕ್ತಿ ಕಾಪಾಡಬೇಕು

4.        ಮಕ್ಕಳ ಹಕ್ಕುಗಳನ್ನು ಸರ್ಕಾರ ಪ್ರಾಮಾಣಿಕವಾಗಿ ಜಾರಿಗೆ ತರಬೇಕು

5.        ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸುವ ಪೋಷಕರಿಗೆ ಸರ್ಕಾರದ ಮನ್ನಣೆ ದೊರೆಯಬೇಕು

6.        ಮಕ್ಕಳು ಜೀವಿಸುವ ಹಕ್ಕು ಹೊಂದಿದ್ದಾರೆ.

7.        ಮಕ್ಕಳು ಹೆಸರು ಹಾಗೂ ರಾಷ್ಟ್ರೀಯತೆಯನ್ನು ಪಡೆಯುವ ಹಕ್ಕನ್ನು ಹೊಂದಿದ್ದಾರೆ.

8.        ಮಕ್ಕಳ ಅನನ್ಯತೆಯನ್ನು ಕಾಪಾಡುವುದು (ಹೆಸರು, ಜಾತಿ, ವರ್ಗ,ಪರಿಸ್ಥಿತಿ ಕೌಟುಂಬಿಕ ಸಂಬಂಧ ಉಳಿಸಿಕೊಳ್ಳುವುದು)

9.        ಪೋಷಕರಿಂದ ರಕ್ಷಣೆಯ ಹಕ್ಕು

10.      ಪೋಷಕರೊಂದಿಗಿರುವ ಹಕ್ಕು

11.      ಸ್ಥಳಾಂತರದಿಂದ ರಕ್ಷಣೆ ಪಡೆಯುವ ಹಕ್ಕು (ಯಾವುದೇ ಮಗುವನ್ನು ಪೋಷಕರ, ಸರ್ಕಾರದ ಹಾಗೂ ಮಗುವಿನ ಅನುಮತಿ ಇಲ್ಲದೇ ಸ್ಥಳಾಂತರ ಮಾಡುವ ಹಾಗಿಲ್ಲ)

12.      ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು

13.      ಮಾಹಿತಿ ಪಡೆಯುವ ಹಕ್ಕು

14.      ಆತ್ಮಸಾಕ್ಷಿ ಮತ್ತು ಧರ್ಮದ ಅನುಸರಣೆ, ಧಾರ್ಮಿಕ ಹಕ್ಕು

15.      ಸಂಘಟಿತರಾಗುವ ಹಕ್ಕು

16.      ವೈಯಕ್ತಿಕ ರಕ್ಷಣೆಯ ಹಕ್ಕು

17.      ದೇಶ ಮತ್ತು ಅಂತರಾಷ್ಟ್ರೀಯ ಮಟ್ಟದ ಮಾಹಿತಿ ಪಡೆಯುವ ಹಕ್ಕು

18.      ಹೆತ್ತವರ/ಪೋಷಕರ ಪೋಷಣೆ ಲಾಲನೆ ಪಡೆಯುವ ಹಕ್ಕು

19.      ದುರುಪಯೋಗದಿಂದ ರಕ್ಷಣೆಯ ಹಕ್ಕು

20.      ಕುಟುಂಬ ವಾತಾವರಣದಿಂದ ವಂಚಿತ ಮಕ್ಕಳಿಗೆ ಪರ್ಯಾಯ ವ್ಯವಸ್ಥೆ ಪಡೆಯುವ ಹಕ್ಕು

21.      ದತ್ತು ನೀಡುವಾಗ ಅನ್ಯಾಯವಾಗದ ಹಾಗೆ ರಕ್ಷಿಸುವ ಹಕ್ಕು

22.      ನಿರಾಶ್ರಿತ, ನಿರ್ವಿಸಿತರಾಗುವದರಿಂದ ರಕ್ಷಣೆಯ ಹಕ್ಕು

23.      ಅಂಗವಿಕಲ ಮಕ್ಕಳಿಗೆ ರಕ್ಷಣೆಯ ಹಕ್ಕು

24.      ಉತ್ತಮ ಆರೋಗ್ಯ ಹೊಂದುವ ಹಕ್ಕು

25.      ಎಲ್ಲಾ ಮಕ್ಕಳ ಪಾಲನೆ ಕೇಂದ್ರಗಳಲ್ಲಿ ನಿಯಮಿತ ಅವಧಿಗಳಲ್ಲಿ ಪುನರ್ವಿಮರ್ಶೆ ಮಾಡಿ ಮಗುವನ್ನು ರಕ್ಷಿಸುವ ಹಕ್ಕು

26.      ಸಾಮಾಜಿಕ ಭದ್ರತೆಯನ್ನು ಪಡೆಯುವ ಹಕ್ಕು

27.      ಸೂಕ್ತ ಜೀವನ ಮಟ್ಟ ಪಡೆಯುವ ಹಕ್ಕು

28.      ಶಿಕ್ಷಣದ ಹಕ್ಕು

29.      ಮಕ್ಕಳು ಸ್ವಾವಲಂಬಿಯಾಗಿ ಬದುಕಲು ಪೂರಕವಾಗಿರುವಂತಹ ಶಿಕ್ಷಣದ ಹಕ್ಕು

30.      ಅಲ್ಪಸಂಖ್ಯಾತ ಸಮುದಾಯಗಳಿಗೆ ಅವರ ಸಂಸ್ಕೃತಿಯಲ್ಲಿ ಜೀವಿಸುವ ಹಕ್ಕು

31.      ಭಾಗವಹಿಸುವ ಹಕ್ಕು

32.      ಬಾಲಕಾರ್ಮಿಕ ಪದ್ಧತಿಯಿಂದ ರಕ್ಷಣೆಯ ಹಕ್ಕು (ಬಾಲಕಾರ್ಮಿಕತೆಯ ನಿಷೇದ)

33.      ಮಾದಕ ದ್ರವ್ಯಗಳಿಂದ ರಕ್ಷಣೆಯ ಹಕ್ಕು

34.      ಲೈಂಗಿಕ ಶೋಷಣೆಯಿಂದ ರಕ್ಷಣೆಯ ಹಕ್ಕು

35.      ಮಕ್ಕಳ ಮಾರಾಟ ಮಾಡುವ ಮತ್ತು ಅಕ್ರಮ ಬಂಧನದಲ್ಲಿಡುವುದರ ವಿರುದ್ಧ ರಕ್ಷಣೆಯ ಹಕ್ಕು

36.      ಇನ್ನಿತರ ಶೋಷಣೆಯ ವಿರುದ್ಧ ರಕ್ಷಣೆಯ ಹಕ್ಕು

37.      ಚಿತ್ರಹಿಂಸೆ ಮತ್ತು ಮರಣದಂಡನೆಯಿಂದ ರಕ್ಷಣೆಯ ಹಕ್ಕು

38.      ಯುದ್ಧ/ಸಶಸ್ತ್ರ ಸಂಘರ್ಷದಿಂದ ರಕ್ಷಣೆಯ ಹಕ್ಕು

39.      ಯಾವುದೇ ರೀತಿ ವಂಚಿತರಾಗಿದ್ದರೆ, ತಕ್ಷಣ ಪುನರ್ವಸತಿ ವ್ಯವಸ್ಥೆ ಹಕ್ಕು

40.      ಪರಿಸ್ಥಿತಿಗನುಗುಣವಾಗಿ ಸಮಸ್ಯೆಗಳಿಗೊಳಗಾಗಿದ್ದರೆ  ಮಕ್ಕಳಿಗೆ ನ್ಯಾಯ ದೊರಕಿಸಿಕೊಡುವ ಹಕ್ಕು

41.      ಮಕ್ಕಳ ಪರವಾದ ಕಾನೂನನ್ನು ಎತ್ತಿ ಹಿಡಿಯುವ ಹಕ್ಕು

42.      ಸರಕಾರ ಮಕ್ಕಳ ಹಕ್ಕುಗಳ ಬಗ್ಗೆ ವ್ಯಾಪಕ ಪ್ರವಾರ ಮಾಡಬೇಕು

43.      ಮಕ್ಕಳ ಹಕ್ಕುಗಳ ಬಗ್ಗೆ ಒಪ್ಪಿ. ಸಮಿತಿ ರಚಿಸಿ, ಪ್ರಗತಿಪಡಿಸಬೇಕು

44.      ಮಕ್ಕಳ ಹಕ್ಕುಗಳ ಕುರಿತ ವರದಿಯನ್ನು ವಿಮರ್ಶೆ ಮಾಡಿ, ವಿಶ್ವಸಂಸ್ಥೆಗೆ ಒಪ್ಪಿಸುವುದು.

45.      ಪರ್ಯಾಯ ವರದಿಗಳನ್ನು ಇತರ ಸಂಘಸಂಸ್ಥೆಗಳಸಹಕಾರದಿಂದ ಸಲಹೆ ಪಡೆದು ವಿಶ್ವಸಂಸ್ಥಗೆ ಕಳಿಸುವುದು.

46.      ಮಕ್ಕಳ ಹಕ್ಕುಗಳ ಈ ಅಂತರಾಷ್ಟ್ರೀಯ ಒಡಂಬಡಿಕೆಗೆ ಸಹಿ ಹಾಕಲು ಎಲ್ಲಾ ದೇಶಗಳಿಗೆ ಅವಕಾಶವಿದೆ.

47.      ಒಡಂಬಡಿಕೆಯನ್ನು ಒಪ್ಪಿದ ಮೇಲೆ ಆ ಪ್ರತಿಯು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳ ಬಳಿ ಇಡಲ್ಪಡುತ್ತದೆ.

48.      ಎಲ್ಲಾ ರಾಷ್ಟ್ರಗಳಿಗೆ ಈ ಒಡಂಬಡಿಕೆಯನ್ನು ತಿಳಿದು ಒಪ್ಪಲು ಸ್ವಾತಂತ್ರ್ಯ ಇದೆ.

49.      ಯಾವುದೇ ರಾಷ್ಟ್ರವು ಈ ಒಡಂಬಡಿಕೆಯನ್ನು ಒಪ್ಪಿ ಸಹಿ ಮಾಡಿ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಯವರಿಗೆ ನೀಡಿದ 30 ದಿನಗಳ ನಂತರ ಅದು ಜಾರಿಗೆ ಬರುತ್ತದೆ.

50.      ಈ ಒಡಂಬಡಿಕೆಗೆ ಸೂಕ್ತ ತಿದ್ದುಪಡಿ ಸೂಚಿಸಲು ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಅವಕಾಶವಿದೆ.

51.      ಈ ಒಡಂಬಡಿಕೆಗೆ ತಕರಾರು ಇದ್ದಲ್ಲಿ, ಒಪ್ಪಿಗೆಯಾಗದಿದ್ದಲ್ಲಿ ವಿಶ್ವಸಂಸ್ಥೆಗೆ ತಿಳಿಸಬೇಕು.

52.      ಯಾವುದಾದರೂ ರಾಷ್ಟ್ರ ಸದಸ್ಯತ್ವದಿಂದ ರಾಜೀನಾಮೆ ನೀಡುವದಿದ್ದರೆ ಪ್ರಧಾನ ಕಾರ್ಯದರ್ಶಿಗೆ ತಿಳಿಸಬೇಕು.

53.      ಒಡಂಬಡಿಕೆಯ ಮುಖ್ಯ ಪ್ರತಿ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಳಿ ಇರುತ್ತದೆ. ಅವರೇ ಇದರ ಮೇಲ್ವಿಚಾರಕರು.

54.      ಒಡಂಬಡಿಕೆಯ ಭಾಷಾ ಪ್ರತಿಗಳಾದ ಅರೇಬಿಕ್‌, ಚೈನೀಸ್‌,ಇಂಗ್ಲೀಷ, ಫ್ರೆಂಚ್‌, ರಷ್ಯನ್‌ ಮತ್ತು ಸ್ಯಾನಿಷ್‌ ಭಾಷೆಯ ಪ್ರತಿಗಳನ್ನು ಮೂಲಪ್ರತಿಗಳೆಂದE ಪರಿಗಣಿಸಿ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳ ಬಳಿ ಇಡಲಾಗುವುದು.

ಎಂದು ಶಿಕ್ಷಕಿ ಮಕ್ಕಳಿಗೆ ಅರ್ಥೈಸಿದರು

ಆಗ ಎಲ್ಲ ಮಕ್ಕಳು ಮೇಡಂ ಈ ದಿನಾಚರಣೆಯ ಅವಶ್ಯಕತೆಯನ್ನು ತಿಳಿಸಿ ಎಂದು ಕೇಳಿದರು ಆಗ ಶಿಕ್ಷಕಿ,

ಮಕ್ಕಳ ಹಕ್ಕುಗಳ ದಿನಾಚರಣೆಯ  ಏಕೆ ಅವಶ್ಯಕವೆಂದರೆ, ಹಲವು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಮಕ್ಕಳ ಸ್ಥಿತಿ ಶೋಚನೀಯವಾಗಿದೆ. ಪೌಷ್ಟಿಕ ಅಹಾರವಿಲ್ಲದೇ ನಾನಾ ರೋಗಗಳಿಗೆ ತುತ್ತಾಗುತ್ತಿರುವವರು, ಶಿಕ್ಷಣ ವಂಚಿತರು,  ಬಲವಂತದ ದುಡಿಮೆಯಲ್ಲಿ ನಲಗುತ್ತಿರುವವರು, ರಕ್ಷಣೆಯಿಲ್ಲದೇ ಅನೇಕ ಸಮಸ್ಯೆಗಳ ಸುಳಿಯಲ್ಲಿರುವ ಮಕ್ಕಳು ಸಾಕಷ್ಟು ಇದ್ದಾರೆ ಇದಕ್ಕೆ ನಮ್ಮ ದೇಶವೂ ಹೊರತಾಗಿಲ್ಲ ಕಾರಣ  ಮಕ್ಕಳನ್ನು ರಕ್ಷಿಸುವುದು ಹಾಗೂ ಅವರ ಹಿತದೃಷ್ಠಿಯನ್ನು ಕಾಪಾಡುವ ಮೂಲಕ ಸದೃಢ ನಾಗರಿಕರಿರುವ ಸಮಾಜವನ್ನು ಕಟ್ಟಲು ಮಕ್ಕಳ ಹಕ್ಕುಗಳು ಅಗತ್ಯವಾಗಿದೆ. ಆದ್ದರಿಂದಲೇ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವನ್ನು ಸ್ಥಾಪಿಸಲಾಯಿತು ಎಂದು ಶಿಕ್ಷಕಿ ತಿಳಿಸಿದರು.

            ಅಲ್ಲಿಯೇ ಇದ್ದ ಅನಿಲ ಮೇಡಂ ನನ್ನ ಅಣ್ಣ ಮಹೇಶ ಎಂ ಎ ಓದುತ್ತಿದ್ದಾನೆ ಅವನಿಗೂ ಈ ಮಕ್ಕಳ ಹಕ್ಕುಗಳು ಅನ್ವಯಿಸುತ್ತವೆಯೇ ಎಂದು ಪ್ರಶ್ನಿಸಿದನು. ಆಗ ಶಿಕ್ಷಕಿ ಈ ಹಕ್ಕುಗಳಲ್ಲಿ ಮಗುವೆಂದರೆ ಯಾರು? ಎಂದು ವಿವರಿಸುತ್ತಾ, ಅಂತರಾಷ್ಟ್ರೀಯ ಕಾನೂನಿನ ಪ್ರಕಾರ , ಮಗು ಎಂದರೆ  ೧೮ ವರ್ಷದೊಳಗಿನ ಎಲ್ಲ ಮಾನವ ಜೀವಿಗಳು.  ಇದು ಜಗತ್ತಿನಾದ್ಯಂತ ಒಪ್ಪಿತವಾದ  ಮಗುವಿನ ನಿರೂಪಣೆ ಮತ್ತು ಇದು ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಸಮಾವೇಶದಲ್ಲಿ .(UNCRC)   ಹೊರಹೊಮ್ಮಿದೆ. ಅಂತರಾಷ್ಟ್ರೀಯ ಕಾನೂನು ಸಾಧನ, ಬಹುತೇಕ ರಾಷ್ಟ್ರಗಳ ಒಪ್ಪಿಗೆ ಮತ್ತು  ಅನುಮೋದನೆ ಪಡೆದಿದೆ

            ಈ ಮೇಲಿನ ಎಲ್ಲ ಮಾಹಿತಿಯನ್ನು ಕೇಳಿದ ವಿದ್ಯಾರ್ಥಿಯೊಬ್ಬಳು ಎದ್ದು ನಿಂತು, ಮೇಡಂ ಹಾಗಾದರೆ ನಮ್ಮ ಬಾರತದಲ್ಲಿ ಮಕ್ಕಳಿಗೆ ನೀಡಿದ ಹಕ್ಕುಗಳಾವವು ಎಂದು ಕೇಳಿದಳು.

            ಭಾರತವು ೧೮ ವರ್ಷದೊಳಗಿನ   ವ್ಯಕ್ತಿಗಳ ಗುಂಪನ್ನು  ಸದಾ  ಕಾನೂನು ಸಮ್ಮತ  ವಿಭಿನ್ನ  ಘಟಕ ಎಂದು ಪರಿಗಣಿಸಿದೆ. ಅದಕ್ಕಾಗಿಯೇ ಅವರು  ಮತದಾನದ ಹಕ್ಕು ,ವಾಹನ ಚಾಲನಾ ಪರವಾನಿಗೆ   ಅಥವ ಕಾನೂನು ಸಮ್ಮತ  ಒಪ್ಪಂದ  ಮಾಡಿಕೊಳ್ಳಲು  ೧೮ ವರ್ಷ ಪೂರೈಸಿರಬೇಕು.  ಹುಡುಗಿಗೆ  ೧೮ ವರ್ಷ,  ಹುಡುಗನಿಗೆ ೨೧ ವರ್ಷ ಆಗದೆ ಇದ್ದರೆ ಬಾಲ್ಯವಿವಾಹ ಕಾಯಿದೆ ೧೯೨೯ರ ಪ್ರಕಾರ ಮದುವೆಯಾಗುವ ಹಾಗಿಲ್ಲ. ಅಲ್ಲದೇ ಬಾಲಕಾರ್ಮಿಕ ನಿಷೇದ ಕಾಯಿದೆ ಇತ್ಯಾದಿಗಳನ್ನು ಜಾರಿಗೆ ತರಲಾಗಿದೆ.

ಎಲ್ಲ ೧೮  ವರ್ಷದ ಒಳಗಿನ ವ್ಯಕ್ತಿಗಳು ಸರರ್ಕಾರದ ಆದೇಶದಲ್ಲಿ ಜಾರಿಮಾಡಿದ ಮತ್ತು ಅಂತರಾಷ್ಟ್ರೀಯ ಕಾಯಿದೆ ಪ್ರಕಾರ ಅನುಮೋದನೆ ಮಾಡಿದ ನಿಗದಿತ ಜೀವನ ಮಟ್ಟ ಮತ್ತು ಹಕ್ಕುಗಳನ್ನು ಹೊಂದಲು ಅರ್ಹತೆ ಪಡೆದಿರುವರು. ಭಾರತೀಯ  ಸಂವಿಧಾನ ಎಲ್ಲ ಮಕ್ಕಳಿಗೆ ಕೆಲವು ಹಕ್ಕುಗಳನ್ನು ಪ್ರದಾನ ಮಾಡಿದೆ. ಅವುಗಳಲ್ಲಿ ಪ್ರಧಾನವಾದವುಗಳೆಂದರೆ,

•          ಎಲ್ಲ ೬-೧೪ ವಯೋಮಾನದ ಮಕ್ಕಳು ಸಂವಿಧಾನದ  ( ಅನುಚ್ಛೇದ ೨೧ಎ) ಉಚಿತ ಕಡ್ಡಾಯ ಶಿಕ್ಷಣದ ಹಕ್ಕು ಇದೆ.

•          ಯಾವುದೆ ಅಪಾಯಕಾರಿ ಕೆಲಸದಲ್ಲಿ  ೧೪ ವರ್ಷ ತುಂಬುವವರೆಗೆ ತೊಡಗುವುದರಿಂದ ರಕ್ಷಿತರಾಗುವ ಹಕ್ಕು ಇದೆ( ಅನುಚ್ಛೇದ ೨೪)

•          ಆರ್ಥಿಕ ಕಾರಣಕ್ಖಾಗಿ ತಮ್ಮ ವಯಸ್ಸಿನ , ಸಾಮರ್ಥ್ಯಕ್ಕೆ ಅನುಗುಣವಲ್ಲದ ವೃತ್ತಿಯಲ್ಲಿ ತೊಡುಗುವುದನ್ನು ತಡೆಯುವ ರಕ್ಷಣೆ ಇದೆ     (ಅನುಚ್ಛೇದ ೩೯. ಇ)

•          ಆರೋಗ್ಯಕರವಾಗಿ  ಸ್ವಾತಂತ್ರ ವಾತಾವರಣದಲ್ಲಿ ಅಭಿವೃದ್ಧಿಹೊಂದಲು ಸಮಾನ ಅವಕಾಶ ಮತ್ತು ಅನುಕೂಲ, ನೈತಿಕ ಮತ್ತು ಆರ್ಥಿಕ ಶೋಷಣೆ ಇಲ್ಲದ ಬಾಲ್ಯ ಮತ್ತು ಯೌವ್ವನದ ಖಚಿತ ರಕ್ಷಣೆಯ ಹಕ್ಕು ಇದೆ(ಅನುಚ್ಛೇದ೩೯ ಎಫ್)

ಇವಲ್ಲದೆ ಅವರಿಗೆ ಭಾರತೀಯ ಪೌರರಾಗಿ ಯಾವದೇ ಪುರುಷ ಮತ್ತು ಮಹಿಳೆಯರಿಗೆ ಇರುವ  ಸಮಾನ ಹಕ್ಕುಗಳಿವೆ.

•          ಸಮಾನತೆಯ ಹಕ್ಕು (ಅನುಚ್ಛೇದ-೧೪)

          ತಾರತಮ್ಯದ ವಿರುದ್ಧದ ಹಕ್ಕು(ಅನುಚ್ಛೇದ೧೫)

•          ಕಾನೂನಿನ ಅಡಿಯಲ್ಲಿ ವೈಯುಕ್ತಿಕ ಸ್ವಾತಂತ್ರ್ಯ  (ಅನುಚ್ಛೇದ ೨೧)

•          ಜೀತದಾಳಾಗಲು ಸಾಗಣಿಕೆ ಮತ್ತು ಬಲವಂತದ ವಿರುದ್ಧ ರಕ್ಷಣೆಯ ಸ್ವಾತಂತ್ರ್ಯ (ಅನುಚ್ಛೇದ ೨೩)

•          ಸಾಮಾಜಿಕ ಅನ್ಯಾಯ ಮತ್ತು ಎಲ್ಲ ರೀತಿಯ ಶೋಷಣೆಯಿಂದ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ (ಅನುಚ್ಛೇದ ೪೬)

ಅಲ್ಲದೆ ರಾಜ್ಯವು:

•          ಮಕ್ಕಳಿಗೆ ಮಹಿಳೆಯರಿಗೆ ವಿಶೇಷ ವ್ಯವಸ್ಥೆಯನ್ನು ಮಾಡಬೇಕು (ಅನುಚ್ಛೇದ ೧೫-೩)

•          ಅಲ್ಪಸಂಖ್ಯಾತರ ಹಿತ ರಕ್ಷಣೆ ಮಾಡಬೇಕು. (ಅನುಚ್ಛೇದ ೨೯)

•          ದುರ್ಬಲ ವರ್ಗದ ಜನರ ಶೈಕ್ಷಣಿಕ ಅಗತ್ಯವನ್ನು ಉತ್ತೇಜಿಸಬೇಕು. (ಅನುಚ್ಛೇದ ೪೬)

•          ಜನರ ಆಹಾರದ  ಪೌಷ್ಟಿಕತೆಯ ಮಟ್ಟ ಮತ್ತು ಜೀವನ ಮಟ್ಟ, ಸಾರ್ವಜನಿಕ ಆರೋಗ್ಯವನ್ನು ಹೆಚ್ಚಿಸಬೇಕು(ಅನುಚ್ಛೇದ ೪೭)

ಸಂವಿಧಾನ ಮಾತ್ರವಲ್ಲದೆ, ಮಕ್ಕಳಿಗಾಗಿ ವಿಶೆಷ ಕಾಯಿದೆಗಳಿವೆ. ಜವಾಬ್ದಾರಿಯುತ ಶಿಕ್ಷಕರು ಮತ್ತು ನಾಗರೀಕರಾಗಿ ನಾವು ಅವುಗಳನ್ನು  ಮತ್ತು ಅವುಗಳ ಪ್ರಾಮುಖ್ಯತೆಯನ್ನು ಅರಿತಿರುವುದು ಅತಿ ಮುಖ್ಯ. ಅವುಗಳನ್ನು ಮಕ್ಕಳ ಹಕ್ಕುಗಳ ಕೈಪಿಡಿಯ ವಿವಿಧ ಭಾಗಗಳಲ್ಲಿ ಅವುಗಳಿಗೆ ಸಂಬಂಧಿಸಿದ ವಿಷಯಗಳೊಡನೆ ನೀಡಲಾಗಿದೆ. ವಿಶ್ವಸಂಸ್ಥೆಯ  ಮಕ್ಕಳ ಹಕ್ಕುಗಳ ಬಗೆಗಿನ ಸಮಾವೇಶದಲ್ಲಿ ಎಲ್ಲಕ್ಕಿಂತ ಅತಿ ಪ್ರಾಮುಖ್ಯವಾದ ಅಂತರಾಷ್ಟ್ರೀಯ ಕಾನೂನು ಎಂದರೆ ಮಕ್ಕಳ ಹಕ್ಕುಗಳ ಬಗೆಗಿನ ಸಮಾವೇಶದಲ್ಲಿ ತಗೆದು ಕೊಂಡದ್ದಾಗಿದೆ. ಅದು ಮಕ್ಕಳ ಹಕ್ಕುಗಳ ಸಮಾವೇಶ CRC  ಎಂದೆ ಜನಪ್ರಿಯವಾಗಿದೆ.

ಮಾನವ ಹಕ್ಕುಗಳು ಎಲ್ಲರಿಗೂ ಇವೆ.   ಅವರ ವಯಸ್ಸು ಗಣನೆಗೆ ಬರುವುದಿಲ್ಲ. ಮಕ್ಕಳು ಕೂಡಾ  ಅದರಲ್ಲಿ ಬರುವರು.   ಆದಾಗ್ಯೂ  ಮಕ್ಕಳ ವಿಶೇಷ ಸ್ಥಾನದ ಫಲವಾಗಿ  ಅವರಿಗೆ  ಹಿರಿಯರಿಗಿಂತ  ಹೆಚ್ಚುವರಿಯಾದ ರಕ್ಷಣೆ ಮತ್ತು ಮಾರ್ಗದರ್ಶನ ಅಗತ್ಯ.  ಮಕ್ಕಳು  ತಮ್ಮದೆ ಆದ ವಿಶೇಷ ಹಕ್ಕುಗಳನ್ನು ಹೊಂದಿರುವರು.  ಅವುಗಳನ್ನು ಮಕ್ಕಳ ಹಕ್ಕು ಎನ್ನುವರು. ಇವುಗಳನ್ನು ಅಂತರಾಷ್ಟ್ರೀಯ ಸಂಸ್ಥೆಯ  (CRC) UN  ಮಕ್ಕಳ ಹಕ್ಕಿನ   ಸಮಾವೇಶದಲ್ಲಿ  ಮಂಡಿಸಲಾಗಿದೆ ಎಂದು ಶಿಕ್ಷಕಿ ತಿಳಿಸಿದರು.

ಈ ಎಲ್ಲ ಚರ್ಚೆಗಳಿಂದ ಮಕ್ಕಳು ತಮ್ಮ ಹಕ್ಕುಗಳನ್ನು ಅರಿತು, ಮೇಡಂ ಧನ್ಯವಾದಗಳು, ನಮಗೆ ನಮ್ಮ ಹಕ್ಕಿನ ಅರಿವನ್ನು ಮೂಢಿಸಿ, ಪ್ರಜ್ಞಾವಂತರಾನ್ನಾಸಿದಿರಿ. ನಾವು ನಮ್ಮ ಹಕ್ಕುಗಳ ಸೂಕ್ತವಾದ ಬಳಕೆಯಿಂದ ಅತ್ಯುತ್ತಮ ನಾಗರಿಕರಾಗಿ ದೇಶದ ಹೆಮ್ಮೆಯ ಪ್ರಜೆಗಳಾಗುತ್ತೇವೆ ಎಂದರು.


ಡಾ.ದಾನಮ್ಮ ಝಳಕಿ

ಡಾ.ದಾನಮ್ಮ ಝಳಕಿ ಯವರು ಪ್ರಸ್ತುತ ಶ್ರೀಮತಿ ಸೋಮವ್ವ ಚ ಅಂಗಡಿಯ ಕರ್ನಾಟಕ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲರಾಗಿದ್ದು ಶಿಕ್ಷಣದಲ್ಲಿ ಇವರು ನಡೆಸಿದ ಹಲವು ಸಂಶೋದನಾ ಲೇಖನಗಳು ರಾಷ್ಟ್ರೀಯ ಅಂತರರಾಷ್ಟ್ರೀಯ ಸಂಸ್ತೆಗಳಿಂದ ಪ್ರಕಟಗೊಂಡಿವೆ.ರಾಜ್ಯಮಟ್ಟದಲ್ಲಿ ಉತ್ತಮ ಶಿಕ್ಷಕಿ ಪ್ರಶಸ್ತಿಗೂ ಬಾಜನರಾಗಿದ್ದಾರೆ.ಶಿಕ್ಷಣ ಮಾತ್ರವಲ್ಲದೆ ಸೃಜನಶೀಲ ಸಾಹಿತ್ಯ ರಚನೆಯಲ್ಲು ಇವರು ತಮ್ಮ ಛಾಪು ಮೂಡಿಸಿರುವ ಇವರ ಹಲವಾರು ಬರಹಗಳು ನಾಡಿನ ಬಹುತೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ

About The Author

Leave a Reply

You cannot copy content of this page

Scroll to Top