ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಅದೇ!

ದೀಪ್ತಿ ಬಿ.ಸಿ

ಅದೇ

ಸರಿದಾಡುತ್ತಿದೆ ಆ ಕತ್ತಲ ಮೂಲೆಯಲ್ಲೊಂದು
ಜೀವ
ಇಹದ ಪರಿವೆಯ ದಣಪೆ ದಾಟಿ
ಇರುಳೊಂದನ್ನುಅರಗಿಸಿ ಕುಡಿದಂತೆ
ಕಾಣುವ ಅರೆಗಣ್ಣುಗಳು ಉಳಿದ ಹಗಲುಗಳ
ನಿಶೆಯ ಸುರಳಿಯಲ್ಲಿ
ಸುತ್ತಿ ಕಳೆವ ಹುನ್ನಾರದಲ್ಲಿವೆ..
ಚಲಿಸುವ, ಅತ್ತಿತ್ತ ಹುಡುಕಾಡುವ
ನೂರು ಭಾವದೊಳಗೆ
ಅದೇನಿದೆಯೋ ಕಂಡವರಿಲ್ಲ..
ಹೇಳಿಕೊಳ್ಳುತ್ತದೆ ತನ್ನಷ್ಟಕ್ಕೆ ತಾನೇ
ಏನನ್ನೋ ಯಾವುದನ್ನೊ ಹೇಗೋ
ಎಲ್ಲಿಯೋ ಬಚ್ಚಿಟ್ಟದ್ದನ್ನು
ಬಿಟ್ಟು ಉಳಿಸಿದ್ದನ್ನು
ಅಸ್ಪಷ್ಟ ಹೆಜ್ಜೆಗಳಿಗೆ ನಿರ್ದಿಷ್ಟ
ದಾಪುಗಳಿಲ್ಲ..
ಕಳೆದಹೋದ ಕಾಲಚಕ್ರದಲ್ಲಿ
ಅದಕ್ಕೂ ಒಂದು ನಂಟು ಇದ್ದಿರಬೇಕು..
ಚಂಡಿನ ಹಾಗೆ ಇದನ್ನು ಒದೆಯುತ್ತ
ಹೀಗೆ ನಿಶೆಯ ಅಂಗಳಕ್ಕೆ
ತಂದು ಬಿಟ್ಟಿರಬೇಕು..
ಹರಿದ ರವಿಕೆಯ ಬೆನ್ನು
ಅಸ್ತವ್ಯಸ್ತ ಸೀರೆ ಎಂದೋ ಬಿಚ್ಚಿ ಗಂಟು ಹೆಕ್ಕಿದ
ಹೆರಳು
ಯಾವ ಸಾಮ್ರಾಜ್ಯ ಕುಸಿದಿದ್ದರ
ಗಹನಗುರುತು?
ಬೆಳಕು ಸರಿದಾಡುವಾಗೆಲ್ಲ ಬೆಚ್ಚಿಕೂರುವ
ದಿಗಿಲಿಗೆ ಮರುಳೆನ್ನ ಬೇಕಲ್ಲದೆ
ಮತ್ತಿನ್ನೇನು?
ಮೆತ್ತಿಕೊಳ್ಳುತ್ತಿದೆ ತಿಂದ ಅನ್ನ
ನೊಂದ ಬೆವರು
ಬಳಸಿ ಬಿಸಾಡಿದ ಒಗರು..
ಹೊಡೆಯುತ್ತದೆ ಕೇಕೆ ಕಡುಗಪ್ಪು ಬಣ್ಣವೊಂದು
ಗಾಢವಾದಂತೆಲ್ಲ
ಅರೆ! ಅರೆ! ಅದೀಗ ಇತ್ತಲೇ ಬರುತ್ತಿದೆ
ಮತ್ತೆ…ಮತ್ತೆ,,,
ಮತ್ತೆ
ಅದು ನಾನೇ ಆಗುತ್ತಿದ್ದೇನೆ..


    About The Author

    2 thoughts on “ದೀಪ್ತಿ ಬಿ.ಸಿರವರ ಹೊಸಕವಿತೆ-ಅದೇ!”

    1. ಚೆನ್ನಾಗಿದೆ…

      ಶತಮಾನಗಳ ‌ಶೋಷಣೆಯನ್ನು ಒಂದೇ ಉಸಿರಲ್ಲಿ ಕವಿತೆ ದಾಟಿಸುತ್ತದೆ. ಕತ್ತಲು ನಿರೂಪಿಸುವನನ್ನೇ ನುಂಗುವುದು, ಒಳಗೊಳ್ಳುವುದು ಕವಿತೆಯ ಸಶಕ್ತತೆಗೆ ಸಾಕ್ಷಿಯಾಗಿದೆ.

    Leave a Reply

    You cannot copy content of this page

    Scroll to Top