ಅಂಕಣ ಸಂಗಾತಿ
ಚಾಂದಿನಿ
ಪತ್ರೊಡೆಯ ಘಮಕ್ಕೆ ಒಸರುವ ಜೊಲ್ಲು
ಜುಗಲ್ ಬಂದಿ ಗಜಲುಗಳ ಬಗ್ಗೆ
ಮಂಡಲಗಿರಿ ಪ್ರಸನ್ನ
ಜುಗಲ್ ಬಂದಿ ಗಜಲುಗಳ ಬಗ್ಗೆ Read Post »
ಲೇಖನ
ಶಿಕ್ಷಕನಿಗೆ ಒಂದು ಒಳ್ಳೆಯ ಭೋದನಾ ಸಾಮಗ್ರಿ
೧೦೧ ವಿಜ್ನಾನದ ಒಗಟುಗಳು
(ಪುಸ್ತಕ ಪರಿಚಯ)
ಶಿಕ್ಷಕನಿಗೆ ಒಂದು ಒಳ್ಳೆಯ ಭೋದನಾ ಸಾಮಗ್ರಿ Read Post »
ಕಾವ್ಯ ಸಂಗಾತಿ ನಮ್ಮನೆ ಕಿನ್ನರಿ ಅರುಣಾ ನರೇಂದ್ರ ಚಂದದಿ ನಗುವಾ ಚಿನ್ನಿ ಅಂದರೆಖುಷಿಯಲಿ ನಗ್ತಾಳೆಸ್ಮೈಲಿ ಅಂತ ತನ್ನ ಹೆಸರೆಂದುಹೇಳ್ಕೊಂಡ ಬೀಗ್ತಾಳೆ ಆಟದ ಗೊಂಬೆಯ ಮಾತಾಡಿಸುತಾಜೀವ ತುಂಬ್ತಾಳೆಅಮ್ಮನ ಕರೆಗೆ ಓಗೊಡುತಾಮೆಚ್ಚುಗೆ ಪಡಿತಾಳೆ ಸೈಕಲ್ ಮೇಲೆ ಕೂರಿಸಿಕೊಂಡುಆಟ ಆಡಿಸ್ತಾಳೆಶಾಲೆಯ ಮಿಸ್ ತಾನೆ ಆಗಿA B C ಬರೆಸ್ತಾಳೆ ಮಾತನು ಕೇಳದ ಪಾಪು ಎಂದುಪಟಪಟ ಹೊಡಿತಾಳೆನೋವಾಯ್ತಾ ಚಿನ್ನ ಎಂದುಮತ್ತೆ ರಮಿಸ್ತಾಳೆ ಕೆಟ್ಟು ಹೋಗಿರುವ ಫೋನ್ ಹಿಡ್ಕೊಂಡುಮಾಮಗೆ ಮಾತಾಡ್ತಾಳೆಚಾಕ್ಲೇಟ್ ಕೊಡಿಸದ ಅಣ್ಣನ ಬಗ್ಗೆಅಳ್ತಾ ಚಾಡಿ ಹೇಳ್ತಾಳೆ ನಮ್ಮನೆ ಮಗಳು ಮುತ್ತಿನ ಹರಳುಕಿನ್ನರಿಯಂತೆ ಕಾಣ್ತಾಳೆದೇವರ ದಯದಿ ಎತ್ತರ ಬೆಳೆದುಮನೆ-ಮನಗಳನು ಬೆಳಗ್ತಾಳೆ
ಪುಸ್ತಕ ಸಂಗಾತಿ
ಕವನ ಸಂಕಲನ : ಮನವೀಣೆಯ ಮೀಟು
ಕವಯಿತ್ರಿ : ಶ್ರೀಮತಿ ಸುಜಾತ ರವೀಶ್
ಕವನ ಸಂಕಲನ : ಮನವೀಣೆಯ ಮೀಟು Read Post »
ಅಂಕಣ ಸಂಗಾತಿ ವಿಜಯಶ್ರಿ ಹಾಲಾಡಿಯವರ ಅಂಕಣ ನೆಲಸಂಪಿಗೆ ಸಣ್ಣತನಗಳನ್ನು ಮೀರಲು… . ಈಗ ರಾತ್ರಿ ಹನ್ನೆರಡೂವರೆ ಹೊತ್ತಿಗೆ ನಾಯಿಗಳದ್ದು ಬೊಬ್ಬೆಯೋ ಬೊಬ್ಬೆ, ಸುಮಾರು ಇಪ್ಪತ್ತು ದಿನಗಳ ಕಾಲ ಬಿಡದೇ ಹೊಯ್ದ ಜಡಿಮಳೆ ಮನುಷ್ಯರು, ಪ್ರಾಣಿ-ಪಕ್ಷಿಗಳ ಹೊರ ಸಂಚಾರವನ್ನೇ ನಿಯಂತ್ರಿಸಿತ್ತು ಎಂದರೂ ಉತ್ಪೇಕ್ಷೆಯಲ್ಲ. ಮಳೆಯೊಂದಿಗೆ ಚಳಿ ಗಾಳಿಯೂ ಇದ್ದದ್ದರಿಂದ ಅಗತ್ಯ ಕೆಲಸಗಳನ್ನು ಹೊರತುಪಡಿಸಿ ಹೊರಗೆ ತಲೆ ಹಾಕಲು ಯಾರಿಗೂ ಇಷ್ಟವಿಲ್ಲ. ಆದರೆ ದಿನಚರಿ ಸಾಗದೆ ಬೇರೆ ಮಾರ್ಗವಿಲ್ಲ. ಹೀಗೆ ಎಲ್ಲರನ್ನೂ ಕಟ್ಟಿ ಹಾಕಿದ್ದ ಮಳೆ ಈಗೆರಡು ದಿನದಿಂದ ಹೊಳವಾದ್ದರಿಂದ ನಮ್ಮ ನಾಯಿಗಳ ಬದುಕಿನಲ್ಲೂ ಸ್ವಲ್ಪ ಉತ್ಸಾಹ ತುಂಬಿ, ಗಂಟಲಿಗೆ ಬಲ ಬಂದಂತಿದೆ! ಯಾಕೆ ಇಷ್ಟೊಂದು ಗಲಾಟೆ ಮಾಡುತ್ತಿವೆ ಎಂದು ಹೊರಗೆ ಹೋಗಿ ನೋಡಿದರೆ ನನಗೇನೂ ಕಾಣಲಿಲ್ಲ. ಟಾಮಿ, ಕೆಂಪಿ ಗೇಟಿನ ಹತ್ತಿರ ಆಚೀಚೆ ನುಗುಳುತ್ತಾ ಚಡಪಡಿಸುತ್ತಿದ್ದರೆ ಪ್ಯಾಚಿ ಮನೆಯ ಹತ್ತಿರ ಸರ್ತ ಕುಳಿತು ಸೂಕ್ಷ್ಮವಾಗಿ ವೀಕ್ಷಿಸುತ್ತಿತ್ತು. ಯಾರೋ ಹೊಡೆದು ಕಾಲಿಗೆ ತೀವ್ರ ಪೆಟ್ಟಾಗಿ ಈಗೊಂದು ವಾರದಿಂದ ಮೂರೇ ಕಾಲಿನಲ್ಲಿ ನಡೆಯುತ್ತಿರುವ ಗುಂಡ ಮತ್ತು ಸಣ್ಣ ಪುಟ್ಟಗಾಯವಾಗಿರುವ ಕರಡಿ(ಕರಿಯ) ಎರಡೂ ಸಿಟೌಟಿನಲ್ಲೇ ಮಲಗಿ ಕಿವಿ ಕೆಪ್ಪಾಗುವಂತೆ ಅರಚುತ್ತಲೇ ಇದ್ದವು. ಕರಡಿಯಂತೂ ಸ್ಟ್ಯಾಂಡಿನೊಳಗೆ ಮಲಗಿಯೇ ಕೂಗಾಡುತ್ತಿತ್ತು! ತಾವಿಬ್ಬರು ಯಾಕೆ ಕೂಗುತ್ತಿರುವುದೆಂದೇ ಇಬ್ಬರಿಗೂ ಗೊತ್ತಿಲ್ಲ! ಒಟ್ಟೂ ಬೊಗಳುವುದು! ಗೇಟಿನ ಹತ್ತಿರ ಯಾವುದೋ ನಾಯಿ ಸುಳಿವಾಡಿತೋ ಅಥವಾ ಬಾವಲಿ, ಗುಮ್ಮಗಳು ಓಡಾಡಿದವೋ… ಏನೋ ಸಣ್ಣ ಪುಟ್ಟ ಕಾರಣಇರಬಹುದು. ಆ ತಂಪು ವಾತಾವರಣದಲ್ಲಿ ತಿರುಗಾಡಿ ಬಂದ ನನಗಂತೂ ಗುಂಡ, ಕರಡಿಯರ ವೇಷ ಕಂಡು ನಗು ಬಂತು. ‘ಸುಮ್ನೆ ಮನಿಕಣಿ’ ಎನ್ನುತ್ತಾ ಬಾಗಿಲು ಹಾಕಿಕೊಂಡು ಬಂದು ಬರೆಯಲು ಕುಳಿತೆ. ಇದೇ ಥಂಡಿ ಥಂಡಿ ದಿನಗಳ ಬಾಲ್ಯದ ನೆನಪಾಗುತ್ತದೆ. ಅಂದಿನ ನಮ್ಮ ಮನೆ ಇರುವುದೇ ಗದ್ದೆ ಬಯಲಿನಲ್ಲಿ. ಗದ್ದೆ ಬಯಲೆಂದರೆ ಸಣ್ಣದಲ್ಲ. ಉದ್ದಾನುದ್ದಕ್ಕೆ ಎಲ್ಲರ ಮನೆಗಳ ಗದ್ದೆಗಳು. ಬದಿಯಲ್ಲಿ ಅವರವರ ಮನೆ. ಸುತ್ತಲೂ ಆವರಿಸಿದ ಹಾಡಿ, ಕಾಡುಗಳು. ಆ ದಿನಗಳಲ್ಲಿ ಕಾಡು ಜಾಸ್ತಿಯೇ ಇತ್ತು. ಮನೆಯ ಹಿಂಭಾಗದಲ್ಲಿ ತೋಟ ಮತ್ತು ತೋಟಕ್ಕೆ ಒತ್ತಿಕೊಂಡು ತೋಡು. ಈ ತೋಡಿಗೆ ಕಾಡಿನಿಂದ ಹರಿದು ಬಂದ ಸಹಜ ಉಜಿರೇ ನೀರಿನ ಮೂಲ. ಹೀಗಾಗಿ ಮಳೆ, ಚಳಿಗಾಲದಲ್ಲಿ ಬಯಲು ಪೂರ್ತಿ ಥಂಡಿ. ನಮ್ಮನೆಯಲ್ಲಿ ಅಪ್ಪಯ್ಯ ಹುಡುಕಿ ಹುಡುಕಿ ಶೋಲಾಪುರ ಹೊದಿಕೆಯನ್ನೇ ತರುತ್ತಿದ್ದುದು. ಇವು ಸೊಲ್ಲಾಪುರದಲ್ಲಿ ತಯಾರಾಗುವ ಉತ್ಕೃಷ್ಟ ಹೊದಿಕೆಗಳು. ಅಪ್ಪಯ್ಯ ಹಾಗೇ, ಅವರಿಗೆ ಯಾವ ವಸ್ತು ತೆಗೆದುಕೊಂಡರೂ ಅದು ಉತ್ತಮ ಗುಣಮಟ್ಟದ್ದೇ ಆಗಿರಬೇಕು. ಹಾಗಾಗಿ ಬಾಲ್ಯದಲ್ಲಿ ಪರಿಚಿತವಾದ ಈ ‘ಶೋಲಾಪುರ’ ಹೊದಿಕೆ ಇಂದಿಗೂ ನನ್ನನ್ನು ಬಿಟ್ಟುಹೋಗಿಲ್ಲ. ಇವುಗಳ ವಿಶೇಷತೆಯೆಂದರೆ ಗಟ್ಟಿಮುಟ್ಟು, ಸುದೀರ್ಘ ಬಾಳಿಕೆ, ಒಳ್ಳೇ ಉದ್ದ-ಅಗಲ ಮತ್ತು ಚಂದದ ಬಣ್ಣ, ಡಿಸೈನ್. ಇಷ್ಟಲ್ಲದೆ ಇವುಗಳ ದೊಡ್ಡ ಗುಣವೆಂದರೆ ಹೊದಿಕೆ ಒಂತರ ಥಂಡಿ. ನಮ್ಮದಕ್ಷಿಣ ಕನ್ನಡದ ವಾತಾವರಣಕ್ಕೆ ಚೆನ್ನಾಗಿ ಹೊಂದಿಕೆಯಾಗುತ್ತವೆ ಇವು. ಯಾಕೆಂದರೆ ಎಂಥಾ ಚಳಿಯೊಳಗೂ ಒಂಚೂರು ಉರಿ ಉರಿ, ಸೆಕೆ ಸೆಕೆ, ಬೆವರು ಬೆವರು ಅನ್ನಿಸುವ ವಾತಾವರಣ ಇಲ್ಲಿಯದು. ಹಾಗಾಗಿ ನನಗೇನೋ ಈ ಶೋಲಾಪುರ ಹೊದಿಕೆ ಹೊದ್ದು ಮಲಗಿದರೆ ನಿರಾಳ, ಒಳ್ಳೇ ನಿದ್ದೆ. ಈಗ ಮಗನಿಗೂ ಇದೇ ಅಭ್ಯಾಸವಾಗಿ ಹೋಗಿದೆ. ಈ ಹೊದಿಕೆಗಳ ಬಣ್ಣ, ಡಿಸೈನ್‌ಗಳ ಕುರಿತಾದ ವಿಷಯ ಬಂದಾಗ ಒಂದು ವಿಷಯವನ್ನು ಪ್ರಸ್ತಾಪಿಸಲೇಬೇಕು. ಸಣ್ಣವಳಿದ್ದಾಗ ನನಗೆ ಪದೇ ಪದೇ ಜ್ವರ ಬರುತ್ತಿತ್ತು. ಆಗ ನಾನು ಹೊದೆದ ಈ ಶೋಲಾಪುರ ಹೊದಿಕೆಯ ಕೆಂಪು ಹಸಿರು ನೀಲಿ ನೇರಳೆ ಬಣ್ಣಗಳು, ಚಿತ್ತಾರಗಳೆಲ್ಲ ದೊಡ್ಡ ಆಕಾರ ತಳೆದು ವಿಕಾರವಾಗಿ ಕಣ್ಣೆದುರು ಬಂದು ಹೆದರಿಸುತ್ತಿದ್ದವು. ಹಲ್ಲು ಕಚ್ಚಿಕೊಂಡು ಅವನ್ನೆಲ್ಲ ನೋಡುತ್ತ ಹೆದರಿ ಬೆವರುತ್ತಿದ್ದೆ. ಹೊದಿಕೆಯನ್ನು ಎಸೆಯೋಣ ಅನ್ನಿಸಿದರೂ ಕೈ ಮೇಲೇಳುತ್ತಿರಲಿಲ್ಲ. ಇಷ್ಟೆಲ್ಲ ಆದರೂ ಜ್ವರ ಬಿಟ್ಟ ನಂತರ ಮತ್ತೆ ಶೋಲಾಪುರ ಹೊದಿಕೆ ಹೊದ್ದು ಮಲಗಿದರೇ ಸರಿಯಾಗಿ ನಿದ್ದೆ ಬರುತ್ತಿದ್ದುದು! ಇಂತಹ ಹೊದಿಕೆ ಹೊದ್ದು ಅಮ್ಮಮ್ಮನ ಹತ್ತಿರ ಮಲಗಿದಾಗ ಚಳಿಗಾಲವಾದರೆ ಅಂಗಳದಲ್ಲಿ ಪಟ್ ಪಟ್ ಎಂದು ಹನಿಗಳು ಬೀಳುವ ಸದ್ದು ಕಿವಿಗೆ ಹಿತವಾಗಿ ತಾಕುತ್ತಿತ್ತು. ಅದು ತೆಂಗಿನ ಮರಗಳಿಂದ ಜಾರಿದ ಇಬ್ಬನಿ ಅಂಗಳದ ನುಣುಪು ನೆಲಕ್ಕೆ ಬೀಳುವುದು. ಹಾಗೇ ಕೆಲವೊಮ್ಮೆ ಗೆಣಸಿನ ಗದ್ದೆಗೆ ಬಂದ ಜೀವಾದಿಗಳನ್ನು ಓಡಿಸುವ ‘ಹಿಡ್ಡಿಡ್ಡಿ ಹಿಡಿ ಹಿಡಿ’ ಎಂಬ ಕೂಗು, ಕಬ್ಬಿನ ಗದ್ದೆಗೆ ಬಂದ ನರಿಗಳ ‘ಕುಕುಕುಕೂಕೂಕೂ’ ಎಂಬ ಮಧುರ ಹಾಡು ರೋಮಾಂಚನಗೊಳಿಸುತ್ತಿದ್ದವು. ಆಗೆಲ್ಲ ಕತ್ತಲ ಮಾಂತ್ರಿಕ ಲೋಕದೊಳಗೆ ಏನೋ ದೊಡ್ಡ ಬೆರಗಿದೆ ಎಂಬ ಭಾವ ನನ್ನೊಳಗೆ ಪ್ರವೇಶಿಸುತ್ತಿತ್ತು. ಕೆಲವೊಮ್ಮೆ ಹೊರಗಡೆ ದೊಡ್ಡ ಶಬ್ದ ಕೇಳಿಸಿದರೆ ಅಮ್ಮಮ್ಮ ಬ್ಯಾಟರಿ ಹಿಡಿದು ಹೋಗುತ್ತಿದ್ದರು. ಗದ್ದೆಯ ಕಂಟಗಳನ್ನು ಅಗೆದು ಅಲ್ಲಿ ಹುಳುಗಳನ್ನು ಹುಡುಕಲು ಕಾಡು ಹಂದಿಗಳು ಬರುತ್ತಿದ್ದವು. ಹಾಗೆ ಬಂದ ಅವು ಬಸಳೆ ಚಪ್ಪರದ ಗಿಡಗಳು, ಬತ್ತದ ಸಸಿಗಳು ಎಲ್ಲವನ್ನೂ ಒಕ್ಕಿ ತಲೆಕೆಳಗೆ ಮಾಡಿ ಹೋಗುತ್ತಿದ್ದವು. ಅಮ್ಮಮ್ಮಗಟ್ಟಿಗಂಟಲಲ್ಲಿ ಹೆದರಿಸಿ ಬಂದು ಗೊಣಗುತ್ತಾ ಮಲಗುತ್ತಿದ್ದರು. ಅವರಿಗೆ ಪಾಪ; ಈ ಹಂದಿಗಳ ದೆಸೆಯಿಂದ ಬೆಳೆ ಹಾಳಾಗುತ್ತಿದೆಯಲ್ಲ ಎಂಬ ಚಿಂತೆ. ಆದರೆ ನನಗೆ ಯಾವುದೋ ನಿಗೂಢ ಲೋಕಕ್ಕೆ ಪ್ರಯಾಣಿಸಿದ ಅನುಭವ. ಹೊದಿಕೆಯಿಂದ ಮುಖವನ್ನು ಮಾತ್ರ ಹೊರಗೆ ಹಾಕಿ ಮಲಗಿ ಎಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದೆ. ಮಳೆಗಾಲದಲ್ಲಂತೂ ಹೇಳುವುದೇ ಬೇಡ. ಮನೆ ಮುಂದಿನ ಗದ್ದೆಗಳೆಲ್ಲ ಕಪ್ಪೆಗಳು, ವಿವಿಧ ಕೀಟಗಳ ಸಂಗೀತ ಮೇಳಗಳಿಂದ ತುಂಬಿ ಹೋಗುತ್ತಿದ್ದವು. ಈ ಸಂಗೀತ ಒಂದು ಜೋಗುಳದಂತೆ ನಮ್ಮ ನಿದ್ದೆಯನ್ನು ಸಂತೈಸುತ್ತಿತ್ತು. ಕಣ್ಣು ಮುಚ್ಚಿದರೆ ತೆರೆದರೆ ಕಿವಿ ತುಂಬಿದ ಮಳೆಯ ಸದ್ದು; ಜೊತೆಗೆ ಕಪ್ಪೆಗಳ ಮೊರೆತ. ಇದರ ನಡುವೆ ಸುಖ ನಿದ್ದೆ! ನಡುನಡುವೆ ಗುಮ್ಮಗಳ ಕೂಗು! ‘ಊಂಹೂಂಹೂ’ ಎಂಬ ಗುಮ್ಮಗಳ ಪ್ರಶ್ನೋತ್ತರ ಹಿತವಾದ ನಡುಕ ಹುಟ್ಟಿಸುತ್ತಾ ಇನ್ನೂ ಕೂಗಲಿ, ಮತ್ತೂ ಕೂಗಲಿ ಎಂಬ ಕಾತುರ ತುಂಬುತ್ತಿತ್ತು. ಮಿಂಚುಹುಳುಗಳು ತಳಿಕಂಡಿಯಲ್ಲಿ ಒಳಗೆ ಬರುತ್ತಿದ್ದವು. ಅವು ಗತಿಸಿದ ಮನೆಯ ಹಿರಿಯರ ಆತ್ಮಗಳು ಅಂದರೆ ಜಕ್ಣಿಗಳು ಎಂದು ದೊಡ್ಡವರು ಹೇಳಿಟ್ಟಿದ್ದರಿಂದ ಅವುಗಳನ್ನು ನೋಡಿದರೆ ಒಂತರಾ ಹೆದರಿಕೆ. ಅವುಗಳನ್ನು ಮುಟ್ಟಬಾರದು ಎಂದಿದ್ದರು. ಆದರೂ ಮುಟ್ಟುವ ತವಕ. ದೂರದ ಕೇದಗೆ ಹಿಂಡಲಿನಲ್ಲಿ ಸೀರಿಯಲ್ ಲೈಟಿನಂತೆ ಜಗ್ಗನೆ ಅವು ಮಿಂಚುವುದನ್ನು ನೋಡುವಾಗ ಆಶ್ಚರ್ಯವಾಗುತ್ತಿತ್ತು. ಈ ನಡುವೆ ಜಿರಾಪತಿ ಮಳೆಯ ಶೀತ ವಾತಾವರಣದಿಂದ ಸಣ್ಣಗೆ ಒಡಲ ಜ್ವರ ಬಂದರೆ ಮಣಸಿನಕಾಳಿನ ಕಷಾಯ, ಹುರಿದಕ್ಕಿಗಂಜಿಯ ಉಪಚಾರ. ಜೋರು ಚಳಿಯಾದರೆ ಬೆಕ್ಕುಗಳೊಂದಿಗೆ ಅಡುಗೆಮನೆಯ ಒಲೆ ಬುಡದಲ್ಲಿ ಕುಳಿತು ಆಟವಾಡುವುದು. ಪ್ರೀತಿ, ಮುದ್ದು ಸಿಗುತ್ತಿದ್ದ; ಜವಾಬ್ದಾರಿಗಳೇ ಇಲ್ಲದ ಬಾಲ್ಯ! ನಿಜವಾಗಿಯೂ ಅದೊಂದು ಕಿನ್ನರ ಲೋಕವೇ. ರಾತ್ರಿ ಒಂಬತ್ತಕ್ಕೆ ಮಲಗಿದರೆ ಬೆಳಿಗ್ಗೆ ಆರರ ತನಕ ತುದಿ ಮೊದಲಿಲ್ಲದ ನೆಮ್ಮದಿಯ ಪ್ರಪಂಚ. ಆಗ ಹೊರಲೋಕದ ಯಾವ ತಲ್ಲಣಗಳೂ ನಮ್ಮಂತಾ ಮಕ್ಕಳನ್ನು ಬಾಧಿಸಲು ಸಾಧ್ಯವೇ ಇರಲಿಲ್ಲ. ಬದುಕಿನ ಉತ್ಕೃಷ್ಟ ದಿನಗಳವು! ಎಲ್ಲರ ಮನದೊಳಗೊಂದು ಮಗು ಇರುತ್ತದೆ, ಇರಬೇಕು. ಅದು ಸಂತೃಪ್ತಿಯಾಗಿದ್ದರೆ ವ್ಯಕ್ತಿ ನೆಮ್ಮದಿಯಿಂದ ದಿನ ದೂಡಬಹುದು. ಇಲ್ಲವಾದರೆ ಬದುಕೆಲ್ಲ ನೋವು, ನಿರಾಸೆ, ಗೊಂದಲ. ಮೊನ್ನೆ ಮಳೆ ಸ್ವಲ್ಪವೇ ಸ್ವಲ್ಪ ಹೊಳವಾದ ರಾತ್ರಿ, ಹನ್ನೊಂದರ ಸುಮಾರಿಗೆ ಇಲ್ಲಿ ನಮ್ಮನೆ ಹತ್ತಿರ ಗುಮ್ಮಕೂಗಿತ್ತು! ಇದು ಬಾಲ್ಯದ ‘ಊಹೂಂಹೂಂ’ ಗುಮ್ಮಅಲ್ಲ; ಇನ್ನೊಂದು ಪ್ರಭೇದದ್ದು. ‘ಗುಗ್ಗೂ… ಘುಘ್ಘೂ’ ಎಂಬ ಕೂಗಿನದ್ದು. ಮೈ ನವಿರೆದ್ದಿತು. ನಮ್ಮ ಮಾತು ಕೇಳಿ ಸಿಟ್ಟುಗೊಂಡು ಮನೆ ಹಿಂಭಾಂಗಕ್ಕೆ ಹೋದದ್ದು ತಿಳಿದು ಮನೆಯ ಎದುರಿನ ಲೈಟ್ ಆರಿಸಿ ಹಿಂಬದಿಗೆ ಹೋಗಿ ನಿಂತು ಕೇಳಿಸಿಕೊಂಡೆ. ಮೈಯ್ಯ ನರನರಗಳನ್ನೂ ಎಚ್ಚರಿಸಬಲ್ಲ ಕೂಗು. ಸುಮಾರು ಹತ್ತು ನಿಮಿಷ ಕೂಗಿ ಆಮೇಲೆ ಮೌನ ವಹಿಸಿತು. ಅಷ್ಟು ಹೊತ್ತು ಆ ಕಡುಕತ್ತಲಿನಲ್ಲಿ ನನ್ನಿಡೀ ಗಮನ ದೂರದ ಆ ಕೂಗಿನ ಮೇಲೆ ಮಾತ್ರ ಇತ್ತು. ಇಂತಹ ಅನುಭವಗಳಲ್ಲೇ ಬದುಕಿನ ಮೂಲದ್ರವ್ಯ ಅಡಗಿರುತ್ತದೆ ಅನಿಸುತ್ತದೆ ನನಗೆ. ನಮ್ಮ ಸಣ್ಣತನಗಳನ್ನು ಮರೆಸುವ ಇಂತಹ ಸಣ್ಣ ಸಣ್ಣ ಗಳಿಗೆಗಳನ್ನಾದರೂ ನಾವು ಹುಡುಕಿಕೊಳ್ಳಬೇಕು. ವಿಜಯಶ್ರೀ ಹಾಲಾಡಿ ಹುಟ್ಟೂರು: ಮುದೂರಿ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿಯ ಬಳಿ ಗ್ರಾಮ..ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ 16 ವರ್ಷಗಳ ಸೇವೆ ಮಾಡಿದ್ದಾರೆ. ಮಕ್ಕಳ ಸಾಹಿತ್ಯದಲ್ಲಿ ಹೆಚ್ಚು ಕೃಷಿ ಮಾಡಿದ್ದಾರೆ..ಆಸಕ್ತಿಯ ಕ್ಷೇತ್ರಗಳು:ಓದು, ಬರೆಹ, ನಿಸರ್ಗ, ಹಕ್ಕಿಗಳನ್ನು ಗಮನಿಸುವುದು, ಫೋಟೋಗ್ರಫಿ, ಕಾಡಿನ ತಿರುಗಾಟ ಮುಂತಾದವು.–ಕೃತಿಗಳು :ಬೀಜ ಹಸಿರಾಗುವ ಗಳಿಗೆ,ಓತಿಕ್ಯಾತ ತಲೆಕುಣ್ಸೆ,ಅಲೆಮಾರಿ ಇರುಳು, ಪಪ್ಪುನಾಯಿಯ ಪೀಪಿ, ಸೂರಕ್ಕಿ ಗೇಟ್, ಜಂಬಿಕೊಳ್ಳಿ ಮತ್ತು ಪುಟ್ಟವಿಜಿ,ಸಾಕು ಬೆಳಕಿನ ಮಾತು , ಪ್ರಕಟಿತ ಕೃತಿಗಳು.ಪಪ್ಪುನಾಯಿಯ ಪೀಪಿ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಬಂದಿದೆ.ಜಿ.ಬಿ. ಹೊಂಬಳ ಸಾಹಿತ್ಯ ಪುರಸ್ಕಾರ, ಡಿಸೋಜ- ಎಚ್ಚೆಸ್ವಿ ಪುಟಾಣಿ ಪುರಸ್ಕಾರ, ಮುಂಬೈ ಕರ್ನಾಟಕ ಸಂಘದ ಸುಶೀಲಾ ಶೆಟ್ಟಿ ಸ್ಮಾರಕ ಕಾವ್ಯ ಪ್ರಶಸ್ತಿ , ಶಾರದಾ ರಾವ್ ದತ್ತಿನಿಧಿ ಬಹುಮಾನ ಇನ್ನಿತರ ಕೆಲ ಪ್ರಶಸ್ತಿಗಳು ಬಂದಿವೆ. ಪತ್ರಿಕೆಗಳಲ್ಲಿ ಕವಿತೆ, ಕಥೆ, ಪ್ರಬಂಧ, ಲೇಖನಗಳು ಪ್ರಕಟವಾಗಿವೆ.ಎರಡು ಮಕ್ಕಳ ಕವಿತೆಗಳು ಸಿಬಿಎಸ್ ಸಿ ಸಿಲೆಬಸ್ ಲ್ಲಿ ಪಠ್ಯವಾಗಿದ್ದವು.ಈಗ ಏಳನೇ ತರಗತಿ ತೃತೀಯ ಭಾಷೆ ಕನ್ನಡ ಪಠ್ಯ ಪುಸ್ತಕದಲ್ಲಿ ಮಕ್ಕಳ ಪದ್ಯವೊಂದು ಪಠ್ಯವಾಗಿದೆ.
You cannot copy content of this page