ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಮಕಾನದಾರರ ಪ್ಯಾರಿ ಪದ್ಯಗಳಲ್ಲಿ ಭಾಷೆಯ ಬೆಡಗು

ಮಕಾನದಾರರ ಪ್ಯಾರಿ ಪದ್ಯಗಳಲ್ಲಿ ಭಾಷೆಯ ಬೆಡಗು ಶಮಾ. ಜಮಾದಾರ.   ಮಾನವೀಯ ಸಂಬಂಧಗಳನ್ನು ಸಾಹಿತ್ಯದಲ್ಲಿ ಹುಡುಕುವ ಸಮನ್ವಯ ಕವಿ, ಎ. ಎಸ್. ಮಕಾನದಾರ ಅವರು. ನ್ಯಾಯಾಲಯದ ಕಡತಗಳಲ್ಲಿ ತಡಕಾಡುತ್ತಲೇ ಸಾಹಿತ್ಯದ ಲೋಕದಲ್ಲಿ ಸದಾ ಸುದ್ದಿಯಲ್ಲಿ ಇರುತ್ತಾರೆ.. ಅಕ್ಕಡಿಸಾಲುಗಳಲ್ಲಿ ಅಕ್ಷರ ಬೀಜ ಬಿತ್ತುತ್ತಾ..ಮತ್ತು ಪ್ಯಾರಿಯ ಎದೆಯಲ್ಲಿ ಪ್ರೀತಿಯ ದೀಪ ಬೆಳಗುತ್ತಾ. ಸುಮಾರು ವರ್ಷಗಳಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡ ಎ. ಎಸ್. ಮಕಾನದಾರ ಅವರು ಈವರೆಗೂ ಆರು ಸ್ವರಚಿತ ಕವನ ಸಂಕಲನಗಳನ್ನು ನಮ್ಮ ಕೈಯಲ್ಲಿ ಇಟ್ಟಿದ್ದಾರೆ. ಉಳಿದ ಪ್ರಕಾರದ ಸಾಹಿತ್ಯದಲ್ಲೂ ಕೂಡ ಹಿಂದೆ ಬಿದ್ದಿಲ್ಲ. ಅವರ ಕವನ ಸಂಕಲನಗಳು, ಎದೆ ಸುಡುವ ನೆನಹುಗಳು ಕೆಳಗಲಮನಿಯ ಮಾಬವ್ವ ಮತ್ತು ಇತರೆ ಕವಿತೆಗಳು ಸಖಿಸಖ ಮೌನದ ಬೀಜ ಅಕ್ಕಡಿ ಸಾಲು ಪ್ಯಾರಿ ಪದ್ಯ.         ಆರೂ ಕವನ ಸಂಕಲನದ ಕವನಗಳು ಓದುಗರ ಮನದ ಮಾತಾಗಿವೆ. ಈಗ ಎಲ್ಲರ ಮನಕುಣಿಸುತಿರುವ ಪ್ಯಾರಿ ಪದ್ಯ ಸಂಕಲನವು..ಅನೇಕ ಹೊಸ ಗುಣಲಕ್ಷಣಗಳಿಂದ ಚರ್ಚೆಯಲ್ಲಿದೆ. ಹೊಸ ನೋಟ, ಹೊಸ ರೂಪ, ಪುಟ್ಟ ಹನಿಗಳಲ್ಲಿ ಜೇನೊಸರುವ ಮಾಧುರ್ಯ.. ಈ ಪ್ಯಾರಿಯನ್ನು ಕಂಡವರೆಲ್ಲಾ..ಪ್ಯಾರ್ಗೇ ಆಗಬುಟ್ಟೈತೆ..ಎಂದು ಪ್ಯಾರಿಯ ಹಿಂದೆ ಮುಂದೆ ಸುಳಿದಾಡುವ ದೃಶ್ಯ.. ಈಗ ಎಲ್ಲೆಲ್ಲೂ ಕಂಡುಬರುತ್ತಿದೆ. ಆ ಸಾಲಿನಲ್ಲಿ ನಾನು ಕೂಡ ಮುಂಚೂಣಿಯಲ್ಲಿರುವೆ.                             ಪ್ಯಾರಿಯ ಆ ಲಚಕ್, ಆ ನಜಾ಼ಕತ್ ನ್ನು ಉರ್ದು..ಹಿಂದಿ ಭಾಷೆಯ ಸಿರಿಯಲ್ಲಿ ಕವಿ ಕಟ್ಟಿಕೊಟ್ಟು..ಓದುಗರನ್ನು ಫಿದಾ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.  ಒಂದೊಂದು ಹನಿಗೂ ಮಧುರವಾದ ಕನ್ನಡ, ಉರ್ದು ಶೀರ್ಷಿಕೆ ಕೊಟ್ಟು ಇನ್ನೂ ಸುಂದರ ಗೊಳಿಸಿದ್ದಾರೆ. ಸಜನಿ, ಪ್ಯಾರಿ, ಲೇ ಇವಳೇ, ಹೂವಿ, ಸಾಕಿ, ಮಾಷುಕಾ, ದಿಲ್ ರುಬಾ..ಗೆಳತಿ, ಯಾ ರಬ್..ಆಹಾ!! ಸಂಬೋಧನೆಯೇ ಇಷ್ಟು ರಸಿಕತೆಯಿಂದ ಕೂಡಿರಲು ಒಳಗಿನ ಹೂರಣವೆಷ್ಟು ಸಿಹಿಯಾಗಿರಬೇಡ ಅಂತ.               ಒಂದು ಕೃತಿ ಗೆಲುವಿನ ಹೂಮುಡಿದು ಎಲ್ಲರ ಕೈಯಲ್ಲಿ ನಲಿಯಬೇಕಾದರೆ..ಅದಕ್ಕೆ ಮುದಗೊಳ್ಳುವ ಭಾಷೆಯ ಬೆಡಗು ಕೂಡ ಕಾರಣವಾಗುತ್ತದೆ. ಸಜನಿ.. ನೀ ಹಚ್ಚಿದ ಸುರಮಾ ಪೂಸಿದ ಅತ್ತರನಿಂದ ನನ್ನ ಜನಾಜಾ ಅರಳಿದೆ..      ಇಲ್ಲಿ, ಸುರಮಾ, ಅತ್ತರ ಜನಾಜಾ..ಸಜನಿ ಎಂಬ ಶೀರ್ಶಿಕೆಯನ್ನು ಪೋಷಿಸಿ ಬೆಳೆಸಿದವು. ಇದೇ ತೆರನಾಗಿ, ಮೆಹಬೂಬಾ, ದುವಾ ಕುಬುಲ್ ಆಗಿದೆ ಎದೆಗೆ ಒರಗಿದ ಪ್ರೇಯಸಿ ಮುಂಗುರುಳು ತೀಡುತ ಹನಿಸಿ ಬಿಟ್ಟಳು ತುಂಬಿ ತುಳುಕಿತು ಚಮ್ಲಾ..      ಇಲ್ಲಿ ಕೂಡ ಮೆಹಬೂಬಾಳ ಮೆಹರ್ಬಾನಿಯಿಂದ ಜಿಂದಗಿಯ ಚಮ್ಲಾ..ತುಂಬಿ ತುಳುಕಾಡಿದ ಧನ್ಯತೆ, ಬೇಡಿದ ದುವಾ ಸಿದ್ದಿಸಿದ ತೃಪ್ತಿ.. ಕವಿಯ ಕೈಚಳಕದಲ್ಲಿ ಅರ್ಥಪೂರ್ಣ ಶಬ್ದಗಳ ಆಯ್ಕೆಯಲ್ಲಿ ಸಾಕಾರವಾಗಿದೆ. ಹೂವಿ…ಆಹಾ!! ಎಂತಹ ಕೋಮಲ ಭಾವವಿದು. ಹೂವಿ ಕಮಲದ ಮುಖದವಳೇ ಕವಡೆಯ ಕಣ್ಣವಳೇ ಮಾಗಿದ ಹಣ್ಣಿನಂತವಳೇ ಕೇದಗಿಬನದಲಿ ಸರ್ಪವಾಗಿ ಕಾಡುವವಳೇ ಯಾವೂರ ಮಾಯಾಂಗನೆ ನೀ.        ಇಲ್ಲಿ ಗಮನಿಸಬೇಕಾದುದು..ಹೂವಿಯ ಚೆಲುವು, ಸ್ವಭಾವ, ವೈಯಾರ..ಎಲ್ಲವನ್ನೂ ಕನ್ನಡದ ಮೆದುಭಾಷೆಯಲ್ಲಿ ಬಣ್ಣಿಸಿ ಓದುಗರದೆಯ ಓಣಿಯಲ್ಲಿ ಗುಲ್ಲೆಬ್ಬಿಸಿದ್ದಾರೆ ಕವಿ.       ಸಾಕಿ ಎನ್ನುತ್ತಾ.. ಆತ್ಮಸಖಿಯೊಂದಿಗೆ ಮಾತಿಗಿಳಿವ ತರೀಖಾ.. ಯಾರಬ್ ಎನ್ನುತಾ ಆ ದೇವರ ಮುಂದೆ ಮಂಡಿಯೂರುವ ಪ್ರೀತಿ, ಪ್ಯಾರೀ..ಎಂದು ಹಿಗ್ಗುತಾ ಅವಳ ಪ್ರೀತಿಯ ಸೆರಗಿನಲ್ಲಿ ಅಡಗುವ ರಸಿಕತೆ..ಆ ಆಶಿಕ್ ನ ಆಷಿಯಾನಾ..ಫಕೀರ್ ನ ಏಕತಾರಿಯ ತಂತಿ ನುಡಿಸಿದ ವಿರಹ ವೇದನೆ.. ದಿಲ್ ರುಬಾ ಎನ್ನುತ್ತಾ ದಿಲ್ ಕಶ್ ಅಂದಾಜಿನ ಶರಣಾಗತಿ..ಸನಮ್ ಳೊಂದಗಿನ ಸೂಜಿದಾರವಾಗಿ ಗಡಿಗಳನ್ನು ಹೊಲಿಯುವ ಅನುಸಂಧಾನ.. ದಿವಾನಿಯೊಂದಗಿನ ಆ ದಿವಾನಾಪನ್..ಮೊಹಬತ್ತಿನ ಇಬಾದತ್ ನಲ್ಲಿ ಸಾಜನ್ ಜೊತೆಯಲ್ಲಿ ಸಜ್ದಾ ಮಾಡಿ ದುವಾಗಾಗಿ ಕೈಯೆತ್ತುವ ಆ ಇಷ್ಕ್ ಸುಭಾನಲ್ಹಾ!!  ಸಖ ಸತ್ತ ಹೃದಯ ಮಸಣ ಸೇರಿತು ನಿನ್ನ ಕುಡಿಮೀಸೆಯ ಕುಂಚದಿಂದ ತುಟಿಯ ಮಾಸ್ತಿಗಲ್ಲಿಗೆ ಹೆಸರು ಬರೆದು ಬಿಡು ಭಗ್ನ ಪ್ರೇಮಿಗಳು ಅಧ್ಯಯನಕ್ಕೆ ಬರಲಿ ಬಿಡು ಸುಡುಕೆಂಡಗಳ ಹಾಡು ಹಾಡಲಿ ಬಿಡು.           ತುಟಿಯ ಮಾಸ್ತಿಗಲ್ಲು..ಎಂತಹ ಅದ್ಭುತ ಕಲ್ಪನೆ.. ಮೀಸೆಯ ಕುಂಚದ ಕಚಗುಳಿ ಮೈನವಿರೇಳಿಸಿತು!! ಐತಿಹಾಸಿಕ ಪ್ರೇಮ ಕಥೆಯ ಮೇಲೆ ಪಿಹೆಚ್ಡಿ ಮಾಡಲು ಬರುವ ವಿರಹಿಗಳ ಎದೆಯಂಗಳದ ಕೋಗಿಲೆ ಸುಡುವ ಕೆಂಡದಂತಹ ಹಾಡು ಹಾಡಲೆನ್ನುವ ಆ ಸಖಿಯ ಉವಾಚ..ಮಾಯ್ದ ಗಾಯಗಳನ್ನು ಕೆದಕಿ..ಹೊಸಗಾಯ ಮಾಡುತ್ತದೆ. ಸಾಕಿ ಮೈಯತ್ ತೊಳೆಯಲು ಗುಸುಲ್ ನೀರು ಸಿದ್ಧವಾಗಿದೆ ಸಿದ್ಧ ಸಮಾಧಿಗೂ ಕವಿತೆ ಬದ್ಧವಾಗಿದೆ.            ಇಲ್ಲಿ ಮೈಯತ್ ಮತ್ತು ಗುಸುಲ್.. ಶಬ್ದಗಳು ಬಹಳಷ್ಟು ಸೂಕ್ತವಾಗಿ ಧ್ವನಿಸಿವೆ. ಪರ್ಯಾಯ ಪದಗಳನ್ನು ಅಲ್ಲಿ ಯೋಚಿಸಲೂ ಆಗದು. ಭಾವಲೋಲುಪ್ತತೆಗೆ ಆಪ್ತವೆನಿಸುವ ಭಾಷಾ ಶೃಂಗಾರದ ಬಗ್ಗೆ ಕವಿ ಪ್ರತಿ ಕ್ಷಣದಲ್ಲೂ ಯೋಚಿಸಬೇಕಾಗುತ್ತದೆ. ಕೊಟ್ಟ ಶೀರ್ಷಿಕೆಗೆ ಸೂಕ್ತ ಅರ್ಥ ಸೂಸುವ ಪದರತ್ನಗಳನು ಹೆಕ್ಕಿ.. ಹೆಕ್ಕಿ ಹಾರದಂತೆ ಪೋಣಿಸುವ ಕಲೆ, ಪ್ಯಾರಿಯ ಕವಿಗೆ ಕರತಲಾಮಲಕವಾಗಿದೆ. ಬಳಸಿದ ಅನ್ಯಭಾಷೆಯ ಶಬ್ದಗಳು ಎಲ್ಲೂ ಬಲವಂತದ ಬಳಕೆ ಅನಿಸಿಲ್ಲ. ಓದಿದೊಡನೆ ಕವಿಯ ಆ ಆಂತರಿಕ ತಲ್ಲಣಗಳು ಶಬ್ದಗಳಲ್ಲಿ ವ್ಯಕ್ತವಾಗಿ..ಎದೆಗಿಳಿದು ಸಿಹಿಕಹಿ ಸವಿಯನ್ನು ಉಣಿಸುವುದಕ್ಕೆ ನಿಂತುಬಿಡುತ್ತವೆ.             ಪ್ಯಾರಿಯ ಪ್ಯಾರ್ ಕಹಾನಿಯು ಸುಹಾನಿಯೆನಿಸುವ ಆ ಸಾರ್ಥಕ ಗಳಿಗೆಯು ಪುಟಪುಟಗಳಲ್ಲಿ..ಪುಟ್ಟ ಪುಟ್ಟ ಹೆಜ್ಜೆಗಳನಿಟ್ಟು ಓದುಗರನ್ನು ತೃಪ್ತಿಯ ಶಿಖರವನ್ನೇರಿಸುವುದು..ಸುಳ್ಳಲ್ಲ.             ಸಾಹಿತ್ಯ ಲೋಕದಲ್ಲಿ ಹೊಸ ಪ್ರಯತ್ನಗಳು ಸಾಗುತ್ತಲೇ ಇರುತ್ತವೆ. ಬಹಳಷ್ಟು ಕೃತಿಗಳು ಕೆಲದಿನಗಳ ಮಟ್ಟಿಗೆ ಸದ್ದು ಮಾಡಿ ನೇಪಥ್ಯಕ್ಕೆ ಸರಿದು ಬಿಡುವುದು ಸಹಜ. ಆದರೆ ಎ. ಎಸ್. ಮಕಾನದಾರ ಅವರ ಸಾಹಿತ್ಯ.. ಹಳೆಯದಾದರೂ ತನ್ನ ಘಮಲನ್ನು..ತಾಜಾತನವನ್ನು ಕಳೆದುಕೊಳ್ಳದೇ..ನಿತ್ಯ ನೂತನವೆನಿಸುತ್ತದೆ. ಸಾರ್ವಕಾಲಿಕ ಸಲ್ಲುವ ಇಂತಹ ಸಾಹಿತ್ಯದ ರಚನೆ..ನಿರಂತರವಾಗಿರಲಿ ಎಂದು ಹಾರೈಸುತ್ತೇನೆ. **************************

ಮಕಾನದಾರರ ಪ್ಯಾರಿ ಪದ್ಯಗಳಲ್ಲಿ ಭಾಷೆಯ ಬೆಡಗು Read Post »

ಪುಸ್ತಕ ಸಂಗಾತಿ

‘ಒಳಗೊಂದು ವಿಲಕ್ಷಣ ಮಿಶ್ರಣ’

ಪುಸ್ತಕ ಸಂಗಾತಿ ‘ಒಳಗೊಂದು ವಿಲಕ್ಷಣ ಮಿಶ್ರಣ’ ಪ್ರತಿಯೊಂದು ಕಾಲಘಟ್ಟದ ಮನೋಧರ್ಮ ಆಯಾ ಕಾಲದ ಸಾಹಿತ್ಯ, ಕಲೆ ಇತ್ಯಾದಿ ಮಾಧ್ಯಮಗಳ ಮೂಲಕ ಸೂಕ್ಷ್ಮವಾಗಿ ವಿಶ್ಣೇಷಣೆಗೋ ವಿಮರ್ಶೆಗೋ ಒಳಗಾಗುತ್ತಾ ವಿಧವಿಧವಾಗಿ ಅಭಿವ್ಯಕ್ತಗೊಳ್ಳುತ್ತಿರುತ್ತದೆ. ಸಮಕಾಲೀನ ಆಗುಹೋಗುಗಳನ್ನು ಸೂಕ್ಷ್ಮ ಮನಸ್ಸಿನ ಕವಿ/ಕಲಾವಿದ ತನ್ನದೇ ರೀತಿಯಲ್ಲಿ ಗ್ರಹಿಸುತ್ತಾ ಅಭಿವ್ಯಕ್ತಿಸುತ್ತಿರುತ್ತಾನೆ. ಆತನ ಪ್ರಶಾಂತ ಸಾಗರದಂಥಹ ಮನಸ್ಸನ್ನು ಕಲಕುವ ಸಂಗತಿಗಳು ಎಬ್ಬಿಸುವ ಅಲೆಗಳು ಅಗಾಧವೂ ಪರಿಣಾಮಕಾರಿಯೂ ಆಗಿರುತ್ತವೆ. ಕವಿ/ಕಲಾವಿದ ತನ್ನದೇ ಒಂದು ಕ್ಲೋಸ್ಡ್ ಜಗತ್ತೋಂದನ್ನು ನಿರ್ಮಾಣ ಮಾಡಿಕೊಂಡು ಅದರೊಳಗೆ ವಿಹರಿಸುತ್ತಿರುತ್ತಾನಾದರೂ ಆತನೂ ಮೂಲತಃ ಸಮಾಜದ ಒಂದು ಭಾಗವಾಗಿರುವುದರಿಂದ ಅಲ್ಲಿನ  ಆಗುಹೋಗುಗಳಿಗೆ ಆತನೂ ಸಾಕ್ಷಿದಾರ. ಆದರೆ ಆತನೇನೂ ಮೂಕಸಾಕ್ಷಿಯಲ್ಲ. ಬದಲಿಗೆ ಆ ಆಗುಹೋಗುಗಳು ಮತ್ತು ತಲ್ಲಣಗಳಿಗೆ ತನ್ನ ಕಲಾಸೃಷ್ಟಿಯ ಅಭಿವ್ಯೆಕ್ತಿಯ ಮೂಲಕ ಬದುಕಿನ ಸರಿ ತಪ್ಪುಗಳನ್ನು ತೋರುವ ತಿಳಿಗನ್ನಡಿಯಾಗುತ್ತಾನೆ.       ನಮ್ಮ ನಡುವಿನ ಪ್ರತಿಭಾವಂತ ಕಥೆಗಾರ ಇಂದ್ರಕುಮಾರರ ಚೊಚ್ಚಲ ಕವನಸಂಕಲನ ‘ ಒಳಗೊಂದು ವಿಲಕ್ಷಣ ಮಿಶ್ರಣ’ ಆಧುನಿಕ ಯಾಂತ್ರಿಕ ಬದುಕಿನ ತಲ್ಲಣಗಳು, ಆಲೋಚನೆಗಳು, ಅಸಹನೀಯ ವಿಲಕ್ಷಣ ಅನುಭವಗಳನ್ನು ಓದುಗನ ಮುಂದಿಟ್ಟು ಆತನ ಆತ್ಮಸಾಕ್ಷಿಯನ್ನು ಕಲಕುವ ಒಂದು ದರ್ಪಣ ಕೃತಿ. ಕಥನಕಲೆಯಲ್ಲಿ ಪಳಗಿರುವ ಇಂದ್ರಕುಮಾರರ ಕೈ ಕಾವ್ಯಸೃಷ್ಟಿಯಲ್ಲೂ ಯಶಸ್ವಿಯಾಗಿರುವುದನ್ನು ಈ ಕೃತಿ ಸಾಕ್ಷೀಕರಿಸುತ್ತದೆ.       ಕೃತಿಯ ಹೆಸರೇ ಸೂಚಿಸುವಂತೆ ಇಲ್ಲಿನ ಬಹುತೇಕ ಕವಿತೆಗಳು ವಿಲಕ್ಷಣಗಳ ಮಿಶ್ರಣವೇ ಸರಿ. ಈ ಕವಿತೆಗಳಲ್ಲಿರುವುದು ಇಡೀ ಆಧುನಿಕ ಸಮಾಜ ಮತ್ತು ಬದುಕನ್ನೊಳಗೊಳ್ಳುವ, ‘ಇಂದಿನ ಬಣ್ಣಗೆಟ್ಟ ಬದುಕಿ’ನ, ‘ಕಣ್ಣಿದ್ದೂ ಕುರುಡಾದ ಜನ’ರ , ‘ಅಸ್ವಸ್ತ ಅಸ್ತಿತ್ವ’ಗಳ ವಿಚಿತ್ರ ಮಿಶ್ರಣದ ಚಿತ್ರಣ. ಕವಿ ಹೇಳುವಂತೆ ಇಂದಿನ ಬದುಕು ಭರವಸೆಯಿಲ್ಲದ್ದು.                        “ ಬದುಕುವ ಭರವಸೆಗಳೆಲ್ಲ                        . . . . ಮಾರ್ಡನ್ ಟಾಯ್ಲೆಟ್ಟಿನೊಳಗೆ                          ಫ್ಲಷ್ ಆಗಿಹೋಗಿವೆ. ” ಇಲ್ಲಿನ ಕಾವ್ಯದ ಕಟ್ಟಡ ಕಟ್ಟಿರುವುದು ‘ಕಲಕಿದ ದ್ರಾವ್ಯ’ದ ಕಣಗಳಿಂದ. ಇಲ್ಲಿನ ಬಹುತೇಕ ಕವಿತೆಗಳು ಅತ್ಯಂತ ಪರಿಣಾಮಕಾರಿಯಾದ ಪದ ಚಿತ್ರಣಗಳಾಗಿವೆ. ಈ ಕವಿತೆಗಳು ಓದಿದಂತೆ ‘ಮನಸ್ಸು ಸಿಡಿದು ಸಾವಿರ ಹೋಳಾದಂತೆನಿಸುವುದು’ ಸಹಜವೇ. ಏಕೆಂದರೆ ಜಗತ್ತಿನ ಅಸಹನೀಯ ‘ಗೋಳಾಕಾರದ ಗೋಳು’ಗಳೆಲ್ಲಾ ‘ಪ್ರಕ್ಷುಬ್ಧ ಅಲೆಗಳಂತೆ’ ಈ ಕವಿತೆಗಳ ರೂಪದಲ್ಲಿ ಬಂದು ಮನಸ್ಸಿಗೆ ಬಡಿದು ವಿಚಲಿಸಿಬಿಡುವುದಷ್ಟೇ ಅಲ್ಲದೆ ಮನಃಸಾಕ್ಷಿಯ ‘ಕಟಕಟೆಗೆ’ ಎಳೆತಂದು ‘ ಖಾಲಿತನದ ಭಾರ ಎದೆಗಳ ಮೇಲೆ’ ಆವರಿಸುವಂತೆ ಮಾಡುತ್ತವೆ.     ಈ ಕವಿತೆಗಳ ವಸ್ತು ಇಂದಿನ ಬದುಕಿನ ಜಂಜಾಟಕ್ಕೆ ಸಂಬಂಧಿಸಿದಂತೆ ‘ ಕಾಣಿಸದ್ದು ಕೇಳಿಸದ್ದು’ ಥರದ್ದಾಗಿವೆ. ಈ ಬದುಕನ್ನು ನಾವು ತೂಗುತ್ತಿರುವುದು ‘ಜಂಗು ತಕ್ಕಡಿಯಲ್ಲಿ’ ಎಂಬ ಅರಿವುಮೂಡಿ, ಈ ಬದುಕು ‘ಸಾಲದ ಬದುಕು’ ಎನಿಸಿ ಸಾಲದು ಈ ಬದುಕು ಎನಿಸುತ್ತದೆ. ಈ ‘ನೆಲದೊಡಲಿನ ಮಿಸುಕಾಟ’ದಲ್ಲಿ ನಾಚಿಕೆಯೆಲ್ಲವ ಬಿಟ್ಟು ಸಾಗುತ್ತಿರುವುದು ವಿಷಾದನೀಯ. ಜಗತ್ತು ಮಾನವೀಯತೆ ಕಳೆದುಕೊಂಡು ಕಣ್ಣಿದ್ದೂ ಕುರುಡರಾಗಿರುವುದು ಇಂದಿನ ದುರಂತವೇ ಸರಿ. ಈ ಚಿತ್ರಣ ನೋಡಿ;                    “. . . .ಜಗತ್ತು ಆಪರೇಷನ್ ಥಿಯೇಟರ್‌ನ ಬಾಗಿಲಲ್ಲಿತ್ತು” ಹೆಚ್ಚು ಕಡಿಮೆ ಸತ್ತಿರುವ ಜಗತ್ತಿಗೆ ‘ ಮಂಡಕ್ಕಿ ಚಿಲ್ಲರೆ ತೂರುವವರಿಲ್ಲ.’ ಎನಿಸುತ್ತದೆ. ಏಕೆಂದರೆ ;                    “ಮಾನವೀಯತೆಯ ಕೋರ್ಸಿನಲ್ಲಿ                      ಮರುಕದ ಕ್ಲಾಸ್ ಬಂಕ್ ಮಾಡಿದವರೆಲ್ಲಾ                     ಹೆಣಕ್ಕೆ ಹೆಗಲು ಕೊಟ್ಟುದ್ದನ್ನು ಬಿಟ್ಟು                     ತೂರಿದ ರೊಕ್ಕ ಆರಿಸಿಕೊಳ್ಳುವಲ್ಲಿ                     ಮಗ್ನರಾಗಿರುವವರಲ್ಲ ! ”       ಮಾನವಸಹಜ ಪ್ರೀತಿ ಮಮತೆಗಳನ್ನೆಲ್ಲಾ ಗಾಳಿಗೆ ತೂರಿರುವ ಆಧುನಿಕ ಮನುಷ್ಯನ ಬದುಕಿನ ಹಲವಾರು ಸ್ತರಗಳ ಖಾಲಿತನದ ಅನಾವರಣ ಈ ಕವಿತೆಗಳಲ್ಲಿದೆ. ಮನುಷ್ಯ ಮಾನವೀಯತೆಯ ಒಳ-ಹೊರಗನ್ನು ಕಳೆದುಕೊಂಡು ‘ಗರ್ದಿಗಮ್ಮತ್ತಿನ ಓಡುವ ರೀಲು’ಗಳಾಗಿರುವುದು ವಿಪರ್ಯಾಸ.                   “ ಕಿಡ್ನಿ ಕಣ್ಣು ರಕ್ತ ಮಾರಿಕೊಳ್ಳುವುದು                     ಆಗಿನ್ನೂ ತಿಳಿದಿರಲಿಲ್ಲ.”                   “ ಇಲ್ಲಿ ಎಲ್ಲವೂ ಮಾರಾಟಕ್ಕಿದೆ                     ಸತ್ತ ಹೆಣ, ಅಂಡಾಣು, ವೀರ್ಯಾಣು.” ಮನುಷ್ಯನ ದೇಹವಷ್ಟೇ ಅಲ್ಲ ಮನಸ್ಸೂ ಮಾರಾಟದ ವಸ್ತುವಾಗಿದೆ. ‘ಅನ್ನದ ಮೇಲೆಯೇ ಉಚ್ಚೆಹೊಯ್ಯುವ,’ ‘ಅಮ್ಮ ಎಂಬ ಹಚ್ಚೆಗೈಯಲ್ಲೇ ಅವಳಿಗೆ ತದುಕುವ’ ಅಮಾನವೀಯ ಆಧುನಿಕ ಬದುಕಿದು. ಈ ಆಧುನಿಕ ಚಕ್ರವ್ಯೂಹದಲಿ ಸಿಲುಕಿ ನರಳುತ್ತಿರುವವರೇ ಬಹುತೇಕ ಮಂದಿ. ಇದು ವ್ಯಾಪಾರಿ ಯುಗ, ಡಿಸ್ಕೌಂಟ್ ಜಗತ್ತು. ‘ನಿಯತ್ತಿನ ತಲೆ ಮೊಟಕಿರುವ’ ಇಲ್ಲಿ ‘ಏನುಸಿಕ್ಕರೂ ನಾಲಿಗೆ ಒಡ್ಡುವವರೇ’ ಹೆಚ್ಚು. ‘ಆಡುವ ಪಿಸುಮಾತುಗಳೇ ಕಿವಿಗೆ ಘೋರವಾಗಿ ಬಡಿಯುವ’ ಸಮಾಜದಲ್ಲಿ ಸಾಗುತ್ತಿರುವ ಈ ಬದುಕು ಅದೆಷ್ಟು ಅನರ್ಥಕಾರಿ!                    “ ಸಿಟಿಯ ಸ್ಲಮ್ಮಿನಲ್ಲಿ ದೇವರಗುಡಿ                      ಹುಡುಕುತ್ತಿದ್ದೆ                      ದೇವರಿರಲಿಲ್ಲ ಯಾರೋ ಕದ್ದಿದ್ದರು.” ಎನ್ನುವ ಕವಿಯ ಆತಂಕದ ಶೋಧ ಬರೀ ಕವಿಯದ್ದಷ್ಟೇ ಆಗದೆ ಸೂಕ್ಷ್ಮ ಮನಸ್ಥಿತಿಯ ಎಲ್ಲರದ್ದೂ ಆಗಿದೆ. ಕವಿಯ ಕಾಡುವ ಒಂಟಿತನ ವಿಕ್ಷಿಪ್ತತೆ ಎಲ್ಲವೂ ಓದುಗರಿಗೂ ಕಾಡುತ್ತವೆ. ‘ಸೆಕೆಂಡುಗಳು ಗಂಟೆ ವರುಷಗಳಾಗಿ’ ಸಾಗುವಂತೆ ಏಕತಾನತೆಯಿಂದ ಕೂಡಿರುವ ಈ ಬದುಕಿನಲ್ಲಿ ಮನುಷ್ಯ ಸಹಜ ಪ್ರೀತಿ ಮಮತೆ ವಿಶ್ವಾಸಗಳನ್ನೆಲ್ಲಾ ಮರೆತು ‘ಕಲ್ಲಾಗಿಲ್ಲ, ಬದಲಿಗೆ ಮೃಗವಾಗಿದ್ದಾನೆ’ ಹಾಗು ‘ಜೀವನ ಪ್ರೀತಿಯ ಕೀಲಿಕೈ ಕಳೆದುಕೊಂಡಿದ್ದಾನೆ’ ಎನ್ನುವ ಕವಿ ಈ ಯಂತ್ರಯುಗದ ಯಾಂತ್ರಿಕ ಬದುಕಿನ ಕರಾಳಮುಖದ ದರ್ಶನಮಾಡಿಸುತ್ತಾರೆ. ಆಧುನಿಕ ಬದುಕಿನ ಸಾಂಸಾರಿಕ ಸಂಕಟಗಳು, ಪ್ರೇಮ-ಕಾಮ, ವಿವಾಹ-ವಿಚ್ಛೇದನಗಳು, ಒಂಟಿತನ, ಬಡತನ, ಬಗೆಬಗೆಯ ದೌರ್ಜನ್ಯಗಳ ಕುರಿತ ಅನೇಕ ಸಂಗತಿಗಳು ಈ ಕವಿತೆಗಳ ವಸ್ತು. ಇಂದಿನ ತಲ್ಲಣಗಳಿಗೆ ಕವಿ ಮನಸ್ಸು ಎಷ್ಟು ಸೂಕ್ಷ್ಮವಾಗಿ ಸ್ಪಂದಿಸುತ್ತದೆ ಎಂಬುದಕ್ಕೆ ಇಲ್ಲಿನ ಕವಿತೆಗಳೇ ಸಾಕ್ಷಿ. ಕವಿ ಮನಸ್ಸೇ ಹಾಗಲ್ಲವೆ? ಆತ ತನ್ನ ಸುತ್ತಲಿನ ಆಗುಹೋಗುಗಳಿಗೆ ಸೂಕ್ಷ್ಮವಾಗಿ ಪರಿಣಾಮಕಾರಿಯಾಗಿ ಸಾಕ್ಷೀಭಾವದಿಂದ ಎದುರುಗೊಳ್ಳುತ್ತಾನೆ. ಇಲ್ಲಿನ ಕವಿತೆಗಳು ಯಾವುದೋ ಆದರ್ಶ ಜಗತ್ತೊಂದನ್ನು ನಮ್ಮ ಕಣ್ಣಮುಂದೆ ತಂದಿರಿಸುವುದಿಲ್ಲ, ಬದಲಿಗೆ ಮನುಷ್ಯ ಸಮಾಜದ ಒಳ-ಹೊರಗಿನ ಜೊಳ್ಳನ್ನು ತೂರಿ ತೂರಿ ಜರಡಿಹಿಡಿಯುತ್ತವೆ. ಇಲ್ಲಿ ಬಳಸಿರುವ ಕಾವ್ಯಭಾಷೆ ವಸಂತಕಾಲದ ಕೋಕಿಲ ನುಡಿಯಲ್ಲ. ಅದು ಖಡ್ಗದಂತೆ ಮೊನಚಾದುದು, ನೇರವಾಗಿ ಮನಸಿಗೆ ನಾಟುವಂತಹ ತೀಕ್ಷ್ಣತೆ, ಭಾವತೀವ್ರತೆ ಈ ಭಾಷೆಗಿದೆ. ಯಂತ್ರಯುಗದ ತಲ್ಲಣಗಳನ್ನು ಕಟ್ಟಿಕೊಡುವಾಗ ಆ ಯುಗದ ಭಾಷೆಯನ್ನೇ ಬಳಸುವುದು ಸರಿಯಾದುದೇ ಆಗಿದೆ. ಕವಿಯಂತೂ ಭಾಷೆಯನ್ನು ಸೂಕ್ತವಾಗಿ ಅರ್ಥಪೂರ್ಣವಾಗಿ ದುಡಿಸಿಕೊಂಡಿದ್ದಾರೆ. ಅದೆಷ್ಟೋ ಸಾಲುಗಳು ಮನದಲ್ಲುಳಿಯುವ ಅರ್ಥಪೂರ್ಣ ಸಾಲುಗಳಿವೆ ಇಲ್ಲಿನ ಕವಿತೆಗಳಲ್ಲಿ. ಇಲ್ಲಿನ ‘ವಿಲಕ್ಷಣ ಮಿಶ್ರಣ’ ಕವಿಮನದೊಳಗಣ ಭಾವ ಲಹರಿಯೇನೋ ಎಂದು ಮೇಲ್ನೋಟಕ್ಕೆ ಒಮ್ಮೆಲೆ ಅನ್ನಿಸಿಬಿಡುವುದಾದರೂ, ಆಳವಾಗಿ ಅವಲೋಕಿಸಿದರೆ ಅದರ ವಸ್ತುವಿಷಯಗಳು ಹೊರ ಜಗತ್ತಿನಿಂದ ದೊರೆತ ಫಲಿತಗಳೇ ಆಗಿವೆ ಎಂಬುದು ಅರಿವಿಗೆ ಬರುತ್ತದೆ. ಹಾಗಾಗಿಯೇ ಇಲ್ಲಿನ ‘ಒಳಗು’ ಎಲ್ಲರದ್ದೂ ಆಗಿಬಿಡುತ್ತದೆ. ಈ ಕಾಡುವ ಕವಿತೆಗಳು ಓದುಗನ ಮನಸನ್ನು ಕಲಕುವ ‘ವಿಲಕ್ಷಣ ಮಿಶ್ರಣ’ವೇ ಸರಿ. *******************************              ಬಿ. ಜಿ. ಜಗದೀಶ ಸಾಗರ್

‘ಒಳಗೊಂದು ವಿಲಕ್ಷಣ ಮಿಶ್ರಣ’ Read Post »

ಕಾವ್ಯಯಾನ

ಮಳೆ ಹನಿಗಳು

ಮಳೆ ಹನಿಗಳು ವಿಶ್ವನಾಥ ಎನ್. ನೇರಳಕಟ್ಟೆ ಮಳೆಯಿರದ ಇರುಳಿನಲಿಗಡಿಯಾರದ ಮುಳ್ಳಿಗೂವಿರಹ ವೇದನೆ* ನನಗೆ ಗೊತ್ತಿದೆಮಳೆ ಪ್ರಿಯತಮೆಯಿದ್ದಂತೆಪ್ರೀತಿಸುವವರನ್ನು ಹೆಚ್ಚು ಆಟವಾಡಿಸುತ್ತದೆ* ಅಬ್ಬ! ಮಳೆ ಬಂತುಇನ್ನು ನನ್ನ ಕಣ್ಣೀರುಯಾರಿಗೂ ತಿಳಿಯುವುದಿಲ್ಲ* ದೇವರೂ ಅಳುತ್ತಾನೆ ನನ್ನಂತೆಎಂದು ತಿಳಿದು ಸಮಾಧಾನವಾಯಿತುಮಳೆ ಬಂದಾಗ* ಮಳೆಯ ಜೊತೆಗೆ ಬಂದಅವಳ ಕನವರಿಕೆ, ಕನಸುಗಳಿಗೆತೆರಿಗೆ ಕಟ್ಟಬೇಕಾಗಿಲ್ಲ* ಮಳೆ ಬಂದಾಗಕೊಡೆ ಮರೆತುಬಂದವನು‘ನೆನೆದ’* ಕಲ್ಲಿನಂಥ ಕಲ್ಲೂಕರಗಿತು‘ನೆನೆದಾಗ’* ಪ್ರಕೃತಿ ಸುರಿಸಿತು ಕಣ್ಣೀರುಮನುಷ್ಯತೊಯ್ದುಹೋಗಿದ್ದಾನೆ* ಸುರಿಯುತ್ತಿದ್ದ ಮಳೆನಿಂತಾಗಮನಸ್ಸೆಲ್ಲ ಖಾಲಿ ಖಾಲಿ*******************************

ಮಳೆ ಹನಿಗಳು Read Post »

ಇತರೆ

ಪಟ ಗಾಳಿಯಲಿ ಹಾರಿ

ಕೆಲವು ದಶಕಗಳ ಹಿಂದೆ ಆಷಾಢಮಾಸದಲ್ಲಿ ತಲೆಯೆತ್ತಿದರೆ “ ಜಿಗಿ ಜಿಗಿಯುತ ಪಟ ಗಾಳಿಯಲಿ ತೇಲಿ ಬಾನಲ್ಲಿ ಹಾರಾಡುತ್ತಿದ್ದ ಪಟಗಳು ಕಾಣುತ್ತಿದ್ದವು ನಮ್ಮ ಹಳೇ ಮೈಸೂರು ಪ್ರದೇಶದ ಊರು, ಕೇರಿ, ಹಳ್ಳಿ ಹಾಡಿಗಳಲ್ಲಿ. ಈಗ ಅವೆಲ್ಲಾ ಮರೆಯಾಗಿವೆ

ಪಟ ಗಾಳಿಯಲಿ ಹಾರಿ Read Post »

ಕಥಾಗುಚ್ಛ

ಸಭೆಯಿಂದ ಹೊರಹೋಗುತ್ತಿದ್ದ ಹೆಂಗಸರಿಬ್ಬರು ” ಗಂಡ, ಮನೆ,ಮಕ್ಕಳು, ಸಂಸಾರ ಅಂತ ಕಟ್ಟಿಕೊಂಡು ನಮ್ಮ ಹಾಗೆ ಏಗುವವರಿಗೆ ಕಥೆಕವಿತೆ ಬರೆಯುವ ಪುರುಸೊತ್ತಾದ್ರೂ ಎಲ್ಲಿರುತ್ತೆ? ಬಣ್ಣದ ಬೀಸಣಿಕೆಯಂತೆ ಬಳುಕುತ್ತಾ, ಅತ್ತೆ ಮಾವನಿಗೆ ಮನೆ ಚಾಕರಿ ಹಚ್ಚಿ ಝಂ ಅಂತ ಓಡಾಡಿಕೊಂಡಿರೋವ್ರು ಒಂದಲ್ಲ ನೂರು ಪುಸ್ತಕ ಬರೀತಾರೆ…

Read Post »

You cannot copy content of this page

Scroll to Top