ದಾರಾವಾಹಿ ಅದ್ಯಾಯ-15 ಏಕನಾಥರ ಪತ್ನಿ ನೀಡಿದ ಬೆಲ್ಲದ ಕಾಫಿ ಕುಡಿದ ಶಂಕರನಿಗೆ ಕಥೆ ಹೇಳುವ ಹುಮ್ಮಸ್ಸು ಇನ್ನಷ್ಟು ಹೆಚ್ಚಿದ್ದರಿಂದ ಮತ್ತೇನೋ ನೆನಪಾಯಿತು. ‘ಅಂದಹಾಗೆ ಗುರೂಜೀ, ಪುರಂದರಣ್ಣನಿಗೆ ಆ ಕಾಡು ಜನರು ಎಲ್ಲಿ ಸಿಕ್ಕಿದರು ಅಂತ ಕೇಳಿದಿರಿಲ್ಲಾ, ಹೇಳುತ್ತೇನೆ ಕೇಳಿ. ಇಲ್ಲೆ ಸಮೀಪದ ನೆರ್ಗಿಹಿತ್ತಲು ಗ್ರಾಮದ ತಮ್ಮ ಮೂಲದ ಮನೆಯಲ್ಲಿ ಪುರಂದರಣ್ಣನಿಗೆ ಎಕರೆಗಟ್ಟಲೆ ಪಿತ್ರಾರ್ಜಿತ ಆಸ್ತಿ ಉಂಟಲ್ಲವಾ. ಆ ಹೊಲಗದ್ದೆಗಳಲ್ಲಿ ಅವರೇ ನಿಂತು ಬೇಸಾಯ ಮಾಡಿಸುತ್ತಾರೆ. ಆ ಭೂಮಿಯ ಸುತ್ತಮುತ್ತ ದಟ್ಟ ಹಾಡಿಗಳಿವೆ. ಅವುಗಳಲ್ಲಿರುವ ನೂರಾರು ಕಾಡುಹಂದಿಗಳು ಯಾವಾಗಲೂ ಅವರ ಹೊಲಗದ್ದೆಗಳಿಗೆ ನುಗ್ಗಿ ಬೆಳೆಗಳನ್ನೆಲ್ಲ ಹಾಳು ಮಾಡುತ್ತಿದ್ದುದನ್ನು ನೋಡುತ್ತ ಬಂದವರಿಗೆ ತಲೆಕೆಟ್ಟು ಹೋಯ್ತಂತೆ. ಅದೇ ಸಂದರ್ಭದಲ್ಲಿ ಯಾರೋ ಸ್ನೇಹಿತರು ಅವರಿಗೆ ಈ ಜನರ ಪರಿಚಯ ಮಾಡಿಸಿದರಂತೆ. ಹಾಗಾಗಿ ಇವರು ಆಗಾಗ ಆ ಜನರನ್ನು ಕರೆಯಿಸಿಕೊಂಡು ಹಂದಿಗಳನ್ನು ಹಿಡಿಸುತ್ತಿದ್ದವರು ಒಂದೆರಡು ಹಂದಿಗಳನ್ನೂ ಮತ್ತು ಐದಾರು ಸಾವಿರ ರೂಪಾಯಿಗಳನ್ನೂ ಅವರಿಗೆ ಕೊಟ್ಟು ಖುಷಿಪಡಿಸುತ್ತಿದ್ದರು. ಉಳಿದ ಹಂದಿಗಳನ್ನು ಅವರಿಂದಲೇ ಕೊಲ್ಲಿಸಿ ಮಾಂಸ ಮಾಡಿಸುತ್ತಿದ್ದರು. ಈಶ್ವರಪುರದ ಪೇಟೆಯಲ್ಲಿ, ‘ಹೊಟೇಲ್ ಮೇನಕಾ’ ಅಂತ ದೊಡ್ಡ ತ್ರೀಸ್ಟಾರ್ ಹೋಟೆಲೊಂದಿದೆ ಗೊಂತ್ತುಂಟಾ ನಿಮಗೆ?’ ‘ಹೌದು ಮಾರಾಯಾ…ಬಹಳ ಫೇಮಸ್ ಹೊಟೇಲ್ ಅಲ್ಲವಾ ಅದು!’ ‘ಹೌದು ಗುರೂಜಿ ಅದು ಪುರಂದರಣ್ಣನದ್ದಲ್ಲವಾ…!’ ‘ಓಹೋ, ಹೌದಾ ಮಾರಾಯಾ…ಅವರೀಗ ಅಷ್ಟು ದೊಡ್ಡ ಕುಳವಾ…?’ ‘ಮತ್ತೆಂಥದು ಗುರೂಜಿ…ನೀವು ನನ್ನನ್ನು ಏನೆಂದುಕೊಂಡಿದ್ದೀರಿ! ಅಂತಿಂಥವರೊಡನೆಯೆಲ್ಲ ಬೆರೆಯುವವನಲ್ಲ ನಾನು. ಅವರೂ ನಾನೂ ತುಂಬಾ ಹಳೆಯ ದೋಸ್ತಿಗಳು. ಹಾಗಾಗಿ ಯಾವಾಗಲೂ ಒಟ್ಟಿಗಿರುತ್ತೇವೆ. ಅದಿರಲಿ. ಮುಂದೆ ಕೇಳಿ. ಕಾಡುಹಂದಿಯ ಮಾಂಸದಿಂದ ತಮ್ಮ ಹೊಟೇಲಿನಲ್ಲಿ ಅವರು ಎಷ್ಟೊಂದು ಬಗೆಯ ಚೈನೀಶ್ ಫುಡ್ ತಯಾರಿಸುತ್ತಾರೆ ಗೊತ್ತುಂಟಾ? ಹಾಗಾಗಿಯೇ ಅವರ ಹೊಟೇಲಿಗೆ ಕಂಡಾಬಟ್ಟೆ ಗಿರಾಕಿ!’ ಎಂದ ಶಂಕರ ನಗುತ್ತ. ‘ಅಯ್ಯೋ ದೇವರೇ, ಹೀಗೂ ಉಂಟಾ? ಇದೆಲ್ಲ ಅರಣ್ಯ ಇಲಾಖೆಗೆ ಗೊತ್ತಾದರೆ ಕೇಸು ಗೀಸು ಆಗಿ ಅವರ ಕಥೆ ಕೋಚಾ ಆಗಲಿಕ್ಕಿಲ್ಲವಾ ಮಾರಾಯಾ?’ ಎಂದು ಏಕನಾಥರು ಅಚ್ಚರಿಯಿಂದ ಪ್ರಶ್ನಿಸಿದರು. ‘ಎಂಥದು ಕೋಚಾ ಆಗುವುದು ಗುರೂಜೀ? ಅದಕ್ಕೆಲ್ಲ ಅವರು ತಕ್ಕ ವ್ಯವಸ್ಥೆ ಮಾಡಿಕೊಂಡೇ ವ್ಯಾಪಾರಕ್ಕಿಳಿದಿರುವುದು. ಕೇಸು ಮತ್ತು ಕೋರ್ಟು ಕಛೇರಿಗಳೆಲ್ಲ ನಮ್ಮಂಥವರಿಗೆ ಅಲ್ಲ ಗುರೂಜಿ. ಅದಕ್ಕೆಂದು ಬೇರೆಯೇ ವರ್ಗದ ಜನರಿದ್ದಾರೆ!’ ಎಂದು ಶಂಕರ ಗರ್ವದಿಂದ. ‘ಅಂದರೇ, ಈಗ ನಮ್ಮೂರಿನಲ್ಲಿ ಇಷ್ಟೆಲ್ಲ ಸಂಗತಿಗಳು ನಡೆಯುತ್ತಿದ್ದಾವಾ ಮಾರಾಯಾ…? ಇದೆಲ್ಲ ನಮಗೇ ಗೊತ್ತೇ ಇರಲಿಲ್ಲ ನೋಡು!’ ಎಂದು ಗುರೂಜಿ ವಿಸ್ಮಯ ತೋರಿಸಿದರು. ‘ಅದು ಬಿಡಿ ಗುರೂಜಿ, ಇನ್ನೊಂದು ಕೊನೆಯ ವಿಷಯವನ್ನು ಹೇಳಿ ಕಥೆ ಮುಗಿಸುತ್ತೇನೆ’ ಎಂದು ನಗುತ್ತ ಅಂದ ಶಂಕರ, ‘ನನ್ನ ಆ ಜಾಗದೊಳಗೆ ಒಂದು ಕೆರೆಯಿತ್ತು. ಅದು ಎಷ್ಟು ದೊಡ್ಡದಿತ್ತೆಂದರೆ ಸುಮಾರು ಎರಡು ಎಕರೆಯಷ್ಟು ವಿಶಾಲವಿತ್ತು. ಅದರ ಸುತ್ತಮುತ್ತ ಮರಮಟ್ಟುಗಳೆಲ್ಲ ಆಕಾಶದೆತ್ತರಕ್ಕೆ ಬೆಳೆದು ನಿಂತಿದ್ದವು. ಅವುಗಳ ಮೇಲೆ ದೊಡ್ಡ ದೊಡ್ಡ ಗಾತ್ರದ ಕೊರುಂಗ್ ಪಕ್ಷಿ(ವಲಸೆ ಕೊಕ್ಕರೆಗಳು)ಗಳಿದ್ದವು. ಅವು ನಮ್ಮೂರಿನ ಸಾಮಾನ್ಯ ಕೊರುಂಗುಗಳಂತೆ ಇರಲಿಲ್ಲ ಗುರೂಜಿ. ನಮ್ಮೂರಿನ ನಾಯಿಗಳಷ್ಟು ಎತ್ತರವಿದ್ದವು! ಅಲ್ಲಿನ ಮರಗಳನ್ನೆಲ್ಲ ಕಡಿದುರುಳಿಸುವಾಗ ಆ ಹಕ್ಕಿಗಳ ಐನೂರಕ್ಕೂ ಹೆಚ್ಚು ಮರಿಗಳು ಮತ್ತು ಅವುಗಳ ರಾಶಿರಾಶಿ ಮೊಟ್ಟೆಗಳೂ ಆ ಕಾಡು ಜನರಿಗೆ ಸಿಕ್ಕಿದವು. ಒಂದೊಂದು ಹಕ್ಕಿಮರಿಗಳು ಒಂದೊಂದು ಕಿಲೋದಷ್ಟು ತೂಕವಿದ್ದವು. ಅವೆಲ್ಲ ಪ್ರತೀವರ್ಷ ಸಾವಿರಾರು ಕಿಲೋಮೀಟರ್ ದೂರದ ಯಾವ್ಯಾವುದೋ ಹೊರ ದೇಶಗಳಿಂದೆಲ್ಲ ನಮ್ಮಲ್ಲಿಗೆ ವಲಸೆ ಬರುವ ಹಕ್ಕಿಗಳೆಂದು ಪುರಂದರಣ್ಣ ಹೇಳುತ್ತಿದ್ದರು. ಆದರೆ ಅವುಗಳ ಈ ವರ್ಷದ ಫಾರಿನ್ ಟೂರನ್ನು ನಾವು ಇಲ್ಲಿಯೇ ಮುಕ್ತಾಯಗೊಳಿಸಿ ಅವುಗಳ ಆತ್ಮಕ್ಕೆ ಸಾಮೂಹಿಕವಾಗಿ ಶಾಂತಿ ಕೋರಿದೆವು ಗುರೂಜಿ!’ ಎಂದು ಶಂಕರ ಒಮ್ಮೆ ಜೋರಾಗಿ ನಕ್ಕ. ಆಗ ಗುರೂಜಿಯ ಮುಖದಲ್ಲಿ ವಿಷಾದ ಮೂಡಿತು. ಆದರೆ ಅದನ್ನು ಗಮನಿಸದ ಶಂಕರ ಮತ್ತೆ ಕಥೆ ಮುಂದುವರೆಸಿದ. ‘ನಮ್ಮ ಕಾಡು ಜನರು ಆ ಪಕ್ಷಿಗಳನ್ನೆಲ್ಲ ಹಿಡಿದ್ಹಿಡಿದು ಅವುಗಳ ಕೊರಳು ಹಿಸುಕಿ ಕೊಂದು ಗೋಣಿ ಚೀಲಕ್ಕೆ ತುಂಬಿಸಿಕೊಂಡು ಕುಣಿದಾಡುತ್ತಿದ್ದರು. ಸುಮಾರಾಗಿ ರೆಕ್ಕೆ ಬಲಿತ ಮೂವತ್ತು, ನಲ್ವತ್ತು ದೊಡ್ಡ ಮರಿಗಳು ಪುರಂದರಣ್ಣನ ಹೊಟೇಲಿಗೂ ರವಾನೆಯಾದವು. ಹೀಗೆ ಆ ಜಾಗವನ್ನು ಸಮತಟ್ಟು ಮಾಡುವ ಸುಮಾರು ಎರಡು ತಿಂಗಳ ಕಾಲ ಆ ಮನುಷ್ಯರ ದೆಸೆಯಿಂದಾಗಿ ನಮ್ಮವರ ತಂಡವೂ ಬೇಕಾಬಿಟ್ಟಿ ಮಾಂಸದೂಟ ಮಾಡುತ್ತ ತೇಗುತ್ತಿತ್ತು. ಹಾಗಾಗಿ ಸತ್ಯ ಹೇಳುತ್ತೇನೆ ಗುರೂಜಿ, ಈಗ ‘ಮಾಂಸ’ ಎಂಬ ಶಬ್ದ ಕಿವಿಗೆ ಬಿದ್ದರೆ ಸಾಕು ವಾಕರಿಕೆ ಬಂದಂತಾಗುತ್ತದೆ!’ ಎಂದು ಶಂಕರ ಮುಖವನ್ನು ವಿಲಕ್ಷಣವಾಗಿ ಕಂಪಿಸುತ್ತ ತನ್ನ ವಿಕೃತ ಕಾಯಕವನ್ನು ವರ್ಣಿಸಿದ. ಅಷ್ಟು ಕೇಳಿದ ಏಕನಾಥರಿಗೆ ಮತ್ತೊಮ್ಮೆ ಹೇಸಿಗೆ ಒತ್ತರಿಸಿ ಬಂತು. ‘ಅಲ್ಲಾ ಮಾರಾಯಾ, ನೀವೆಲ್ಲ ಮನುಷ್ಯರೋ, ಮೃಗಗಳೋ ಆ ದೇವರಿಗೆ ಗೊತ್ತು. ಥು, ಥೂ…!’ ಎಂದು ಈ ಸಲ ಬಾಯಿಬಿಟ್ಟೇ ಉಗಿದುಬಿಟ್ಟರು. ಆದರೆ ಶಂಕರ ಅವರ ಮಾತಿಗೆ ಪಕಪಕಾ ನಗುತ್ತ ಮರಳಿ ಮಾತು ಮುಂದುವರೆಸಲಿದ್ದ. ಅಷ್ಟರಲ್ಲಿ ಏಕನಾಥರ ಮನೆಯೆದುರು ಒಂದಷ್ಟು ದೈತ್ಯ ಮರಗಳಿದ್ದ ತೋಟದೊಳಗಿಂದ ತಂಪಾದ ಗಾಳಿಯೆದ್ದು ವಠಾರದೊಳಗೆಲ್ಲ ಸುಳಿಯುತ್ತ ಬಂದುದು ಇವರನ್ನು ಹದವಾಗಿ ಸೋಕುತ್ತ ಒಳಗೆ ಹೋಗಿ ಮನೆಯೊಳಗೊಂದು ಸುತ್ತು ಹೊಡೆದು ಕಿಟಕಿ, ಬಾಗಿಲುಗಳ ಮೂಲಕ ಹಿತ್ತಲಿಗೆ ಹೊರಟು ಹೋಯಿತು. ಅದು ನಡು ಬೇಸಿಗೆಯ ಕಾಲ. ಹಾಗಾಗಿ ಏಕನಾಥರೂ, ಶಂಕರನೂ ವಿಪರೀತ ಸೆಕೆಯಿಂದ ಬೆವರುತ್ತಿದ್ದರಾದರೂ ಸಹಿಸಿಕೊಂಡು ಮಾತುಕತೆಯಲ್ಲಿ ಮುಳುಗಿದ್ದರು. ಈಗ ತಂಗಾಳಿ ಬೀಸಿದ್ದು ಶಂಕರನಲ್ಲಿ ಉಲ್ಲಾಸವನ್ನು ತರಿಸಿತು. ಆದ್ದರಿಂದ ಅವನು, ‘ಆಹ್ಹಾಯ್ ಗುರೂಜೀ…! ನಿಮ್ಮ ವಠಾರದಲ್ಲಿ ಭಾರೀ ಒಳ್ಳೆಯ ಗಾಳಿ ಉಂಟಲ್ಲವಾ ಅಬ್ಬಾ…! ಒಮ್ಮೆ ಜೀವ ಬಂದ ಹಾಗಾಯ್ತು ನೋಡಿ!’ ಎಂದು ಉದ್ಗರಿಸಿ, ತನ್ನ ಅಂಗಿಯ ನಾಲ್ಕು ಗುಂಡಿಗಳನ್ನು ಬಿಚ್ಚಿ ಎದೆಯ ಭಾಗವನ್ನು ಪೂರ್ತಿ ಗಾಳಿಗೊಡ್ಡುತ್ತ, ‘ಅದಕ್ಕೇ ಹೇಳುವುದು ನೋಡಿ, ಒಂದು ಮನೆ ಎಂದ ಮೇಲೆ ಅದರ ಸುತ್ತಮುತ್ತ ಹತ್ತಾರು ಗಿಡಮರಗಳು ಇರಲೇಬೇಕು ಅಂತ!’ ಎಂದು ದೊಡ್ಡ ಪರಿಸರ ಜ್ಞಾನಿಯಂತೆ ಅಂದ. ‘ಹೌದು ಹೌದು ಮಾರಾಯಾ. ನಮ್ಮ ತೋಟದಲ್ಲೂ ಬಹಳಷ್ಟು ಮರಮಟ್ಟುಗಳುಂಟು. ನನ್ನ ಅಜ್ಜ ಮತ್ತು ಅಪ್ಪ ಅವನ್ನೆಲ್ಲ ನೆಟ್ಟು ಬೆಳೆಸಿದ್ದಂತೆ. ‘ಮನೆಯೆಂದ ಮೇಲೆ ನಾಲ್ಕಾರು ಮರಗಳಿರಬೇಕು. ಇಲ್ಲದಿದ್ದರೆ ಅದು ಮನುಷ್ಯರ ವಾಸಸ್ಥಾನವೇ ಅಲ್ಲ ಅಂತ ಅವರು ಹೇಳುತ್ತಿದ್ದರು. ಆ ಮಾತು ಸತ್ಯ ನೋಡು. ಅವರಿಂದಾಗಿ ಇಂದು ನಮ್ಮ ವಠಾರದ ವಾತಾವರಣವು ಬಹಳ ಉತ್ತಮವಾಗಿದೆ. ನಮ್ಮ ಹಿರಿಯರು ನಮಗೆ ಆಸ್ತಿಪಾಸ್ತಿಯನ್ನೇನೂ ಮಾಡಿಟ್ಟು ಹೋಗದಿದ್ದರೂ ಇಂಥದ್ದೊಂದು ಜಾಗವನ್ನು ನಮಗೆ ಬಿಟ್ಟು ಹೋದದ್ದು ನಮ್ಮ ಪೂರ್ವಜನ್ಮದ ಪುಣ್ಯವೆಂದೇ ಹೇಳಬೇಕು ಮಾರಾಯಾ!’ ಎಂದರು ಏಕನಾಥರೂ ಹೆಮ್ಮೆಯಿಂದ. ‘ಹೌದು ಗುರೂಜಿ, ಆ ವಿಷಯದಲ್ಲಿ ನೀವು ಅದೃಷ್ಟವಂತರು!’ ಎಂದ ಶಂಕರ ಮರಳಿ ಮಾತು ಮುಂದುವರೆಸಿದ. ‘ಪುರಂದರಣ್ಣನ ಕಾಡು ಜನರು ಆ ಪಕ್ಷಿಗಳ ಕಥೆಯನ್ನೆಲ್ಲ ಮುಗಿಸಿದ ಮೇಲೆ ನಮಗೆ ಅವರ ಇನ್ನೊಂದು ಕಾರನಾಮೆಯೂ ತಿಳಿಯಿತು ಗುರೂಜೀ. ಆ ಮನುಷ್ಯರು ಬರೇ ಪ್ರಾಣಿಗಳನ್ನು ಮಾತ್ರ ತಿನ್ನುವುದಲ್ಲ ಅರಣೆ, ಓತಿಕೇತ, ಕ್ರಿಮಿಕೀಟ ಮತ್ತು ಸಿಕ್ಕಿಸಿಕ್ಕಿದ ಹಾವುಗಳನ್ನೆಲ್ಲ ಹಿಡಿದು ತಿನ್ನುತ್ತಾರೆ ಬಿಕನಾಸಿಗಳು!’ ಎಂದು ಅಸಹ್ಯದಿಂದ ಮೈಯನ್ನು ಹಿಂಡಿ ನಕ್ಕ. ಅಷ್ಟು ಕೇಳಿದ ಏಕನಾಥರಿಗೆ ಹೊಟ್ಟೆ ತೊಳಸಿದಂತಾಯಿತು. ‘ಥೂ! ಸಾಕು, ಸಾಕು ಮಾರಾಯ ನಿಲ್ಲಿಸು. ಆ ರಕ್ಕಸ ವಂಶದವರು ಸಾಯಲಿ ಅತ್ಲಾಗೆ! ನೀನು ಬಂದ ವಿಷಯವನ್ನು ಇನ್ನೂ ಹೇಳಲಿಲ್ಲ. ಅದನ್ನು ಹೇಳು!’ ಎಂದು ಮುಖ ಕಹಿ ಮಾಡಿಕೊಂಡು ಅಂದರು. ಏಕನಾಥರ ಮುಖ ಚಿರುಟಿದ್ದನ್ನು ಕಂಡ ಶಂಕರನಿಗೆ ನಗು ತಡೆಯಲಾಗಲಿಲ್ಲ. ಜೋರಾಗಿ ನಕ್ಕ. ಆಗ ಏಕನಾಥರಿಗೂ ನಗು ಬಂತು. ‘ಆಯ್ತು ಗುರೂಜೀ ಇಲ್ಲಿ ಕೇಳಿ, ಇನ್ನೊಂದು ಸ್ವಲ್ಪ ಉಂಟು ಅದನ್ನೂ ಹೇಳಿ ಬಿಡುತ್ತೇನೆ. ಒಮ್ಮೆ ನಮ್ಮ ಜೆಸಿಬಿ ಚಾಲಕನೊಬ್ಬ ಒಂದು ದಟ್ಟವಾದ ಬಲ್ಲೆಯನ್ನು ತೆಗೆಯುತ್ತಿದ್ದವನು ‘ಹಾವು ಹಾವೂ…! ಎಂದು ಬೊಬ್ಬೆ ಹೊಡೆದು ತಟ್ಟನೆ ಕೆಲಸ ನಿಲ್ಲಿಸಿಬಿಟ್ಟ. ಅಷ್ಟೊತ್ತಿಗೆ ಸುತ್ತಮುತ್ತಲಿದ್ದ ಕೆಲಸಗಾರರೆಲ್ಲ ಹೆದರಿ ದಿಕ್ಕಾಪಾಲಾಗಿ ಓಡಿ ಹೋದರು. ಯಾವ ಹಾವೆಂದು ತಿಳಿಯದ ನಮಗೂ ಭಯವಾಗಿ ದೂರ ಓಡಿದೆವು. ಆದರೆ ಆ ಕಾಡು ಜನರು ಒಮ್ಮೆಲೇ ಆ ಪೊದರಿನತ್ತ ನುಗ್ಗಿದರು. ಆಗ ನಮಗೆಲ್ಲ ಸ್ವಲ್ಪ ಧೈರ್ಯ ಬಂತು. ಮೆಲ್ಲನೇ ಸಮೀಪ ಹೋದೆವು. ಅಷ್ಟರಲ್ಲಿ ಅವರ ಐವರು ಯುವಕರು ಆ ಪೊದೆಯಿಂದ ದೊಡ್ಡ ದೊಡ್ಡ ಐದು ಹೆಬ್ಬಾವುಗಳ ಬಾಲಗಳನ್ನು ಹಿಡಿದು ದರದರನೇ ಹೊರಗೆಳೆದು ತಂದು ಮೈದಾನದಲ್ಲಿ ಹಾಕಿದರು. ಮತ್ತೊಬ್ಬ ಯುವಕ ಸುತ್ತಿಗೆಯೊಂದನ್ನು ತಂದ. ನಮ್ಮ ಕಂಕಣಬೆಟ್ಟಿನ ಉಮೇಶಾಚಾರಿ ಇದ್ದಾನಲ್ಲ ಅವನು ಕಾದ ಪಿಕ್ಕಾಸಿನ ತುದಿಯನ್ನು ಹೇಗೆ ಬಡಿಬಡಿದು ಹದ ಮಾಡುತ್ತಾನೆ ಎಂದು ನೀವು ನೋಡಿದ್ದೀರೋ ಇಲ್ಲವೋ ಗೊತ್ತಿಲ್ಲ, ಈ ಹುಡುಗನೂ ಒಂದೊಂದು ಪೆರ್ಮಾರಿಯ ತಲೆಗೂ ಲೆಕ್ಕದ ಎರಡೆರಡು ಪೆಟ್ಟು ಬೀಸಿ ಬೀಸಿ ಬಡಿದ ನೋಡಿ ಅವುಗಳ ತಲೆ ಒಡೆದು ಅಪ್ಪಚ್ಚಿಯಾಯಿತು. ಮರುಕ್ಷಣ ಅವು ಅಲ್ಲಲ್ಲೇ ನರಳಾಡಿ ಪ್ರಾಣಬಿಟ್ಟವು. ಬಳಿಕ ಅವರು ಅವುಗಳನ್ನು ಚೀಲಕ್ಕೆ ತುಂಬಿಸಿಕೊಂಡು ಗುಡಿಸಲಿನತ್ತ ಹೋದರು. ಅದನ್ನೂ ಪದಾರ್ಥ ಮಾಡಿ ತಿನ್ನುತ್ತಾರಂತೆ ಅವರು!’ ‘ಅಯ್ಯೋ ದೇವರೇ, ನೀವೆಲ್ಲ ಮಹಾಪಾಪಿಗಳು ಮಾರಾಯಾ!’ ಎಂದು ವಿಷಾದದಿಂದ ನಕ್ಕ ಗುರೂಜಿ, ‘ಅದೆಲ್ಲ ಹಾಗಿರಲಿ ಶಂಕರ. ನೀನು ಹೇಳಬೇಕೆಂದಿದ್ದ ವಿಷಯವನ್ನು ಕೊನೆಗೂ ಹೇಳಲೇ ಇಲ್ಲವಲ್ಲ? ನಮಗೂ ಪೂಜೆಗೆ ಹೊತ್ತಾಯಿತು ಮಾರಾಯಾ…!’ ಎಂದು ಅವನ ಮೂಕ ಜೀವರಾಶಿಯ ಮಾರಣಹೋಮದ ಕಥೆಗೆ ಮುಕ್ತಾಯ ಹಾಡಿದರು. ಆಗ ಶಂಕರ ಪೆಚ್ಚಾದ. ಆದರೂ ಸಂಭಾಳಿಸಿಕೊಂಡು, ‘ಓಹೋ, ಹೌದಲ್ಲವಾ ಗುರೂಜಿ. ನಮ್ಮ ಕಥೆ ಎಲ್ಲೆಲ್ಲಿಗೋ ಹೋಯಿತು. ಸರಿ, ಈಗ ಹೇಳುತ್ತೇನೆ ಕೇಳಿ’ ಎಂದವನು ಮುಖ್ಯ ವಿಷಯಕ್ಕೆ ಬಂದ. ‘ನನ್ನ ಜಾಗದ ಕಥೆ ಹೇಳಿದೆನಲ್ಲ ಅದರ ಮೂಲ ವಾರಸುದಾರರು ಅಮೆರಿಕದಲ್ಲೆಲ್ಲೋ ಇದ್ದಾರಂತೆ ಗುರೂಜಿ. ಅವರ ಪರವಾಗಿ ನನ್ನ ಜೊತೆ ಅದರ ವ್ಯವಹಾರ ಮಾಡಿದವನು ಅಬ್ದುಲ್ ರಜಾಕ್ ಅಂತ. ಅವನೂ ನನಗೆ ಒಳ್ಳೆಯ ಪರಿಚಯಸ್ಥ. ಅವನ ಕುಟುಂಬಕ್ಕೂ ಜಾಗದವರ ಕುಟುಂಬಕ್ಕೂ ಹಿಂದಿನಿಂದಲೂ ಬಹಳ ಹತ್ತಿರವಂತೆ. ಹಾಗಾಗಿ ನಾನು ಆ ಜಾಗದ ರೆಕಾರ್ಡ್ ಪರೀಕ್ಷಿಸಿ ಎಲ್ಲವೂ ಸರಿಯಾಗಿದೆ ಅಂತ ತಿಳಿದ ಮೇಲೆ ಅಡ್ವಾನ್ಸ್ ಕೊಟ್ಟು ಕಾಡು ಕಡಿಯಲಾರಂಭಿಸಿದೆ. ಆದರೆ ಅದು ಮುಗಿಯುವಷ್ಟರಲ್ಲಿ ಒಂದು ದೊಡ್ಡ ತಾಪತ್ರಯ ಬಂದು ವಕ್ಕರಿಸಿತು ನೋಡಿ! ಆ ಜಾಗವು ಶೆಟ್ಟರೊಬ್ಬರ ಮನೆತನಕ್ಕೆ ಸೇರಿದ್ದಂತೆ. ಅದರೊಳಗಿನ ಕಾಡು ಅವರ ಮೂಲದ ದೈವಭೂತಗಳ ಸ್ಥಾನವಂತೆ. ಆ ಕಾಡಿನೊಳಗೆ ನಾಗ, ಪಂಜುರ್ಲಿ, ನಂದಿಗೋಣ, ಲೆಕ್ಕೆಸಿರಿ, ಕ್ಷೇತ್ರಪಾಲ ಮತ್ತು ಗುಳಿಗ ದೈವಗಳ ಗುಂಡಗಳಿದ್ದವಂತೆ! ನಮ್ಮ ಜೆಸಿಬಿ ಮತ್ತು ಹಿಟಾಚಿ ಯಂತ್ರಗಳು ಕೆಲಸ ಮಾಡುವಾಗ ಒಂದು ಕಡೆ ವಿಶಾಲ ಜಾಗದಲ್ಲಿ ತರಗೆಲೆಯ ರಾಶಿಯ ಮಧ್ಯೆ ಬಹಳ ಹಿಂದಿನ ಕಾಲದ ಸವೆದು ಹೋದ ಹತ್ತಾರು ಮುರಕಲ್ಲುಗಳು ಸಿಕ್ಕಿದ್ದವು ಗುರೂಜಿ. ಆದರೆ ನನಗೇನು ಗೊತ್ತಿತ್ತು ಅವು ಭೂತದ ಕಲ್ಲುಗಳು ಅಂತ? ಹಾಗಾಗಿ ಅಲ್ಲಿನ ಮಣ್ಣು ಲೋಡು ಮಾಡುವಾಗ ಆ ಕಲ್ಲುಗಳು ಮಣ್ಣಿನೊಳಗೆಲ್ಲೋ ಸೇರಿಕೊಂಡು ಈಗ ಯಾರ ಮನೆಯ ಅಡಿಪಾಯದೊಳಗೋ ಅಥವಾ ಪೊಟ್ಟು ಬಾವಿಯೊಳಗೋ ಬಿದ್ದು ಮುಚ್ಚಿ ಹೋಗಿವೆಯೋ ಯಾರಿಗೆ ಗೊತ್ತು?’ ಎಂದು ಶಂಕರ ಮಾತು ನಿಲ್ಲಿಸಿ ಯಾವುದೋ ಚಿಂತೆಗೆ ಬಿದ್ದ. ಆಗ ಏಕನಾಥರಿಗೆ ಸಂಗತಿ ಮೆಲ್ಲನೆ ಮನವರಿಕೆಯಾಗತೊಡಗಿತು. ಆದ್ದರಿಂದ ಅವರು, ‘ಬೇರೇನು ತೊಂದರೆಯಾಗಿದೆ ಮಾರಾಯಾ, ಅದನ್ನೂ ಹೇಳು…?’ ಎಂದರು ಮೃದುವಾಗಿ. ಆಗ ಶಂಕರ ತನ್ನ ಹಿಂತಲೆಯನ್ನೊಮ್ಮೆ ಅಸಹನೆಯಿಂದ ಕೆರೆದುಕೊಂಡವನು, ‘ಈಗ ಒಂದು ದೊಡ್ಡ ಫಜೀತಿಯಾಗಿದೆ ಗುರೂಜಿ.