ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಜೀವದಾತೆ ಪ್ರಕೃತಿ ಮಾತೆ

ಕವಿತೆ ಜೀವದಾತೆ ಪ್ರಕೃತಿ ಮಾತೆ ಸುವಿಧಾ ಹಡಿನಬಾಳ ಹೇ ಪ್ರಭು , ಋತುರಾಜ ವಸಂತನೀ ಬಂದೆ ನಸುನಗುತ‌ಪ್ರಕೃತಿಗೆ ಹೊಸ ಕಳೆಯ ನೀಡುತ್ತಆದರೆ ಕಳೆದಿಲ್ಲ ಮನುಕುಲದದುಗುಡ ದುಮ್ಮಾನ ನಿನ್ನ ಆಗಮನದಿಂದ ! ಗಿಡಮರಗಳು ಹಸಿರೆಲೆ ಚಿಗುರು ಬಿಟ್ಟುಹೂ ಹಣ್ಣು ಕಾಯಿ ತೊಟ್ಟುಕೋಗಿಲೆ ಗಿಳಿ ಗೊರವಂಕಗಳುಲಿವಾಗಮನುಜನಿಗೇಕೆ ಈ ವಿಯೋಗ ? ಜೀವಸಂಕುಲವೆ ತಿಂದುಂಡು ನಲಿದುಹಾಯಾಗಿ ಇರುವಾಗ ನಿನ್ನದೆಒಂದು ಭಾಗ ಹುಲು ಮಾನವನಿಗೇಕೆಜೀವಭಯ ತಳಮಳ ತುಮುಲ? ಹೇ ಕಾಮಧೇನು ಕರುಣಾಮಯೀಪ್ರಕೃತಿ ಮಾತೆ ಜೀವದಾತೆನಿನ್ನ ಮೇಲೆ ಅಟ್ಡಹಾಸಗೈವಸ್ವಾರ್ಥ ನರನ ಮೇಲೆ ಕೋಪವೆಅಥವಾ ನಿನ್ನ ಬಲಿದಾನಕೆ ನೀನಿಟ್ಡ ಶಾಪವೆ? ಸಾಕು ಪ್ರಭು, ಸಹಿಸಲಾಗುತ್ತಿಲ್ಲಸಾವಿನ ಸರಣಿ ಓಟವಮುಗ್ಧ ಜನರ ನರಳಾಟವಕಂಬನಿ ತುಂಬಿದ ಕಣ್ಣ ನೋಟವ ಇನ್ನಾದರೂ ಬುದ್ಧಿ ಕಲಿತಾನು ಬಿಡುಅಧಿಕಾರ ಹಣದಾಸೆ ಅಹಂಕಾರ ಸೇಡುಕರುಣೆ ತೋರು ಮೊರೆಯ ಕೇಳುರಕ್ಷಿಸು ಮನುಕುಲವ ಹೇ ದಯಾಸಿಂದೂ…… *****************************************

ಜೀವದಾತೆ ಪ್ರಕೃತಿ ಮಾತೆ Read Post »

ಕಥಾಗುಚ್ಛ

ಸುಂದರ ರಾವಣ

ಕಥೆ ಸುಂದರ ರಾವಣ ವಿಶ್ವನಾಥ ಎನ್ ನೇರಳಕಟ್ಟೆ ಸಂಬಂಧಿಕರ ಮನೆಯಲ್ಲೊಂದು ಪೂಜೆ. ಪರಿಚಯಸ್ಥರಲ್ಲಿ ಮಾತನಾಡುತ್ತಾ ನಿಂತಿದ್ದೆ. “ತಗೋ ಮಾಣಿ ಹಲಸಿನ ಹಣ್ಣು” ಎನ್ನುವ ಮಾತಿನ ಜೊತೆಜೊತೆಗೇ ಬೆನ್ನ ಮೇಲೊಂದು ಗುದ್ದು. ಯಾರೆಂದು ತಿರುಗಿದರೆ ನಲುವತ್ತು- ನಲುವತ್ತೈದರ ಒಬ್ಬ ವ್ಯಕ್ತಿ. ಕಾಣುವಾಗಲೇ ವಿಕ್ಷಿಪ್ತ. ಹಲಸಿನ ಎರಡು ಸೊಳೆಗಳನ್ನು ಕೈಯ್ಯಲ್ಲಿ ಹಿಡಿದುಕೊಂಡು ವಿಚಿತ್ರವಾಗಿ, ಭಯ ಹುಟ್ಟಿಸುವಂತೆ ನಗುತ್ತಾ ನಿಂತಿದ್ದ. ಕೊಳಕಾದ ಹಲ್ಲು, ಮಣ್ಣು ಮೆತ್ತಿಕೊಂಡ ಕೈ, ಕೊಳಕು ಬಟ್ಟೆ. ಅವನು ಕೊಟ್ಟ ಹಣ್ಣು ತೆಗೆದುಕೊಳ್ಳುವುದು ಸರಿ ಕಾಣಲಿಲ್ಲ. ಹಾಗೆಂದು ತೆಗೆದುಕೊಳ್ಳದೇ ಹೋದರೆ ಎಲ್ಲರೆದುರು ಬೊಬ್ಬೆ ಹೊಡೆದರೆ ಎಂಬ ಭಯ ಕಾಡಿತು. ತೆಗೆದುಕೊಂಡು ಅವನಿಗೆ ಗೊತ್ತಾಗದಂತೆ ಪ್ಯಾಂಟಿನ ಜೇಬಿಗೆ ಸೇರಿಸಿದೆ. “ಎಮ್ಡಿ, ಬೇರೆಯವರಿಗೆ ಕಿರಿಕಿರಿ ಕೊಡುವುದಲ್ಲ, ಅಲ್ಲಿ ಹೋಗಿ ಸುಮ್ಮನೆ ಕುಳಿತುಕೊಳ್ಳಬೇಕು” ಎಂದು ಅಲ್ಲೇ ನಿಂತಿದ್ದವರೊಬ್ಬರು ಗದರಿದರು. ಸಪ್ಪೆಮುಖ ಮಾಡಿಕೊಂಡು ಮೂಲೆಯಲ್ಲಿ ಹೋಗಿ ನಿಂತುಕೊಂಡ. ಮರುಕ್ಷಣವೇ ಮತ್ತೆ ಹಲಸಿನ ಸೊಳೆ ತೆಗೆದುಕೊಳ್ಳಲು ಹೊರಟ. ಅಲ್ಲಿ ಮತ್ತೆ ಯಾರೋ ಗದರಿ ಕಳುಹಿಸಿದರು. ಸುತ್ತ ನಿಂತಿದ್ದ ಮಕ್ಕಳು ಬಾಯಿಗೆ ಕೈಯ್ಯಿಟ್ಟು ಮನಸ್ಸೋ ಇಚ್ಛೆ ನಕ್ಕರು. ಎಲ್ಲರೂ ಅವನನ್ನು ‘ಎಮ್ಡಿ’ ಎಂದು ಕರೆಯುತ್ತಾರೆ ಎನ್ನುವುದು ತಿಳಿಯಿತು. ತೋರುವಷ್ಟೇನೂ ಅಪಾಯಕಾರಿ ವ್ಯಕ್ತಿ ಅವನಲ್ಲ ಎನ್ನುವುದೂ ಸ್ಪಷ್ಟವಾಯಿತು. ಮನೆಗೆ ಹೋದ ಮೇಲೆ ಮಾಡುವುದಕ್ಕೆ ಏನೂ ಕೆಲಸ ಇಲ್ಲದ್ದರಿಂದ ಅವನ ಬಗ್ಗೆ ಅಮ್ಮನಲ್ಲಿ ಹೇಳಿಕೊಂಡು ಮನಸೋ ಇಚ್ಛೆ ನಗಾಡಿದೆ. ತತ್ತ್ವಶಾಸ್ತ್ರ, ಕಾವ್ಯಮೀಮಾಂಸೆ ಪುಸ್ತಕಗಳನ್ನೆಲ್ಲಾ ತಿಂದು ಮುಗಿಸಿದ್ದ ನನಗೆ ನಾಲ್ಕನೆಯ ತರಗತಿ ಓದಿದ್ದ ನನ್ನ ಅಮ್ಮ ಇನ್ನೊಬ್ಬರನ್ನು ಅಪಹಾಸ್ಯ ಮಾಡಬಾರದೆಂದು ಬುದ್ಧಿವಾದದ ಮಾತು ಹೇಳಿದ್ದರು. ನನ್ನ ನಗು ಮತ್ತೂ ನಿಲ್ಲದಿದ್ದಾಗ, “ಅವನು ತುಂಬಾ ಬುದ್ಧಿವಂತ ಆಗಿದ್ದ. ಏನೋ ಗ್ರಹಚಾರ ಕೆಟ್ಟು ಹೀಗಾಗಿದ್ದಾನೆ. ಏನು ಮಾಡುವುದು!” ಎಂಬ ವಿಷಾದದ ಮಾತನ್ನಾಡುತ್ತಾ ಅಡುಗೆ ಕೋಣೆಯೊಳಕ್ಕೆ ನಡೆದಿದ್ದರು. ಅಮ್ಮನಿಗೆ ಅವನ ಬಗ್ಗೆ ತಿಳಿದಿರುವ ಹಾಗಿದೆ ಎಂಬ ವಿಚಾರ ನನ್ನ ತಲೆಗೆ ಹೊಳೆದಾಗ ಆತನ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಮೂಡಿತು. ಅಮ್ಮ ನನ್ನ ಕುತೂಹಲದ ಬುತ್ತಿಯನ್ನು ಖಾಲಿ ಮಾಡತೊಡಗಿದರು. *** ಹಿರಿಯರಿಂದ ಹಿಡಿದು ಮೊನ್ನೆ ಮೊನ್ನೆ ಹುಟ್ಟಿದ ಮಕ್ಕಳಿಂದಲೂ ಕೂಡ ಎಮ್ಡಿ ಎಂದು ಹೆಸರ್ಹಿಡಿದೇ ಕರೆಸಿಕೊಳ್ಳುವ ಇವನ ಪೂರ್ತಿ ಹೆಸರು ಮಹಾಬಲ ದಬ್ಬೆಕಟ್ಟೆ. ಶ್ರೀಮಂತ ಅವಿಭಕ್ತ ಕುಟುಂಬ. ದಬ್ಬೆಕಟ್ಟೆ ಮಹಾಲಿಂಗ ಭಟ್ಟರೆಂದರೆ ಊರಿಗೆಲ್ಲಾ ಬೇಕಾದವರು. ಅವರು ಮಹಾಬಲನ ತಂದೆ. ಇಂತಹ ಮಹಾಬಲ ಚಿಕ್ಕಂದಿನಿಂದಲೂ ಚುರುಕುಮತಿ. ಆದರೆ ತುಂಬಾ ಸಾಧು. ತಾನಾಯಿತು, ತನ್ನ ಕೆಲಸವಾಯಿತು ಎಂಬಂತಹ ಸ್ವಭಾವ. ಮಗ ಚೆನ್ನಾಗಿ ಓದಿ, ಡಾಕ್ಟರ್ ಇಲ್ಲವೇ ಇಂಜಿನಿಯರ್ ಆಗಬೇಕೆಂದು ಅವನಮ್ಮ ಲಕ್ಷೀಯಮ್ಮನ ಯೋಚನೆ. ತಾಯಿಯ ಇಚ್ಛೆಗೆ ತಕ್ಕವನೆಂಬಂತೆ ಈತನೂ ಇದ್ದ. ದ್ವಿತೀಯ ಪಿ. ಯು. ಸಿ. ಯನ್ನು ಉತ್ತಮ ಅಂಕಗಳೊಂದಿಗೆ ಮುಗಿಸಿದವನು ಇಂಜಿನಿಯರಿಂಗ್ ಮಾಡಲು ಬೆಂಗಳೂರು ಸೇರಿಕೊಂಡ. ಕೊನೆಯ ಪರೀಕ್ಷೆಯಷ್ಟೇ ಬಾಕಿ ಇತ್ತು. ಅದೇ ಸಮಯಕ್ಕೆ ಊರಿನಿಂದ ಫೋನು. ಫೋನು ಎತ್ತಿಕೊಂಡರೆ ತಮ್ಮ ಸದಾಶಿವನ ಆತಂಕದ ಧ್ವನಿ- “ತಂದೆಗೆ ಸೀರಿಯಸ್ಸಾಗಿದೆ. ಬೇಗ ಹೊರಟು ಬಾ.” ಸಾರಿಗೆ ಸೌಲಭ್ಯವೇ ಸರಿಯಾಗಿಲ್ಲದ ಸಮಯ ಅದು. ಬಸ್ಸು ಏಜೆಂಟರ ಕೈಕಾಲು ಹಿಡಿದು ಹೇಗೋ ಊರಿಗೆ ಬಂದು ತಲುಪಿದರೆ ತಂದೆ ಹೆಣವಾಗಿ ಒಂದು ಗಂಟೆ ಕಳೆದಿತ್ತು. ಊರಿಗೆ ಬಂದು ಹದಿನೈದು ದಿನಗಳು ಕಳೆದಿದ್ದವು. ಕೊನೆಯ ಪರೀಕ್ಷೆಗೆ ಹೋಗಲಾಗಿಲ್ಲ. ಆರೋಗ್ಯವಾಗಿಯೇ ಇದ್ದ ತಂದೆ ಇದ್ದಕ್ಕಿದ್ದ ಹಾಗೆ ಸಾವನ್ನಪ್ಪಿದ್ದಾರೆ. ಇದೇ ಚಿಂತೆಯನ್ನು ತಲೆ ತುಂಬಾ ಹೊತ್ತು ಈ ಮಹಾಬಲ ಅದೆಷ್ಟು ಸಮಯ ಕುಳಿತಿದ್ದನೋ ಗೊತ್ತಿಲ್ಲ. ಬಳಿ ಬಂದು ತಾಯಿ ತನ್ನನ್ನೇ ನೋಡುತ್ತ ಕುಳಿತದ್ದೂ ಈತನಿಗೆ ಗೊತ್ತಾಗಿರಲಿಲ್ಲ. “ಮಹಾಬಲ, ಇಲ್ಲಿಯ ಬಗೆಗೆ ತಲೆಕೆಡಿಸಿಕೊಂಡದ್ದು ಸಾಕು. ನೀನು ಬೆಂಗಳೂರಿಗೆ ಹೊರಡು. ಮತ್ತೆ ಪರೀಕ್ಷೆ ಬರೆದು, ಅಲ್ಲೇ ಎಲ್ಲಾದರೂ ಉದ್ಯೋಗ ಗಿಟ್ಟಿಸಿಕೊಂಡರೆ ಒಳ್ಳೆಯದು” ಅಮ್ಮನ ಮಾತಿನಲ್ಲಿ ಸಣ್ಣ ಆತಂಕ ಇದ್ದುದನ್ನು ಶೂನ್ಯ ಮನಸ್ಕನಾಗಿದ್ದ ಮಹಾಬಲನಿಗೆ ಗುರುತಿಸಲಾಗಲಿಲ್ಲ. “ಇಲ್ಲಾಮ್ಮ. ಈ ಸಂದರ್ಭದಲ್ಲಿ ನಾನು ಬೆಂಗಳೂರಿಗೆ ಹೋಗುವುದಂತೂ ಸಾಧ್ಯವಿಲ್ಲ, ಸರಿಯೂ ಅಲ್ಲ. ಸದಾಶಿವ ಪಿ. ಯು. ಸಿ. ಓದುತ್ತಿದ್ದಾನೆ. ಮನೆಯ ಇಡೀ ಜವಾಬ್ದಾರಿ ತೆಗೆದುಕೊಳ್ಳುವ ವಯಸ್ಸು ಅವನದಲ್ಲ. ಉಳಿದವನು ನಾನೇ. ಈಗ ಇಲ್ಲೇ ಉಳಿದುಕೊಂಡು ಮನೆ, ತೋಟ ನಿಭಾಯಿಸುತ್ತೇನೆ. ಮುಂದೆ ಏನಾದರೂ ವ್ಯವಸ್ಥೆ ಆದಾಗ ಪರೀಕ್ಷೆ, ಉದ್ಯೋಗ ಎಲ್ಲ ನೋಡಿಕೊಂಡರಾಯಿತು ಬಿಡು” ಮಹಾಬಲನ ಮಾತಿನಲ್ಲಿ ಖಚಿತತೆಯಿತ್ತು. “ಬೇಡ ಮಹಾಬಲ. ಇಲ್ಲಿನ ವ್ಯವಹಾರ ಎಲ್ಲ ನಾನೂ, ಸದಾಶಿವ ಹೇಗೋ ನಿಭಾಯಿಸುತ್ತೇವೆ. ನೀನು ಬೆಂಗಳೂರಿನಲ್ಲಿರುವುದೇ ಸರಿ” ಅಮ್ಮನ ಈ ಮಾತಿನಲ್ಲಿ ತನ್ನನ್ನು ಊರಿನಿಂದ ಸಾಗಹಾಕಬೇಕೆನ್ನುವ ಇಚ್ಛೆಯೇ ಬಲವಾಗಿ ಇದ್ದಂತೆ ಮಹಾಬಲನಿಗೆ ಅನ್ನಿಸಿತು. ಅದನ್ನೇ ಅಮ್ಮನಲ್ಲಿ ಹೇಳಿದ. “ಚಿಕ್ಕಪ್ಪನಿಂದ ನಿನಗೇನಾದರೂ ತೊಂದರೆಯಾದೀತು ಎಂಬ ಹೆದರಿಕೆ ಅಮ್ಮನಿಗೆ”, ಕಂಬಕ್ಕೆ ಒರಗಿ ಕುಳಿತು ಇವರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ಸದಾಶಿವ ನುಡಿದಿದ್ದ. ತಮ್ಮನ ಮಾತಿನ ಹಿನ್ನೆಲೆ ಮಹಾಬಲನಿಗೆ ಅರ್ಥವಾಗಲಿಲ್ಲ. ಆರು ವರ್ಷಗಳ ಹಿಂದೆ ದಬ್ಬೆಕಟ್ಟೆ ಮಹಾಲಿಂಗ  ಭಟ್ಟರು ಹಾಗೂ ಅವರ ತಮ್ಮ ಕೇಶವ ಭಟ್ಟರ ಮಧ್ಯೆ ನಾಲ್ಕು ಎಕರೆ ಜಾಗವನ್ನು ಕೈವಶ ಮಾಡಿಕೊಳ್ಳುವುದಕ್ಕೆ ಜಗಳ ಶುರುವಾಗಿತ್ತು. ಇದು ಊರಿಗೆಲ್ಲಾ ತಿಳಿದಿದ್ದ ವಿಷಯವೇ. ‘ನನಗೆ ಸಲ್ಲಬೇಕಾದ ಭೂಮಿ ಅದಲ್ಲ’ ಎನ್ನುವ ಅರಿವಿದ್ದೂ ಕೋರ್ಟಿನ ಮೊರೆಹೋಗಿದ್ದರು ಕೇಶವ ಭಟ್ಟರು. ನ್ಯಾಯ ಗೆದ್ದಿತ್ತು. ಮಹಾಲಿಂಗ ಭಟ್ಟರಿಗೆ ಭೂಮಿ ದೊರೆತಿತ್ತು. ಅದಾದ ಬಳಿಕ ಅವರಿಬ್ಬರ ಮಧ್ಯೆ ಮಾತುಕತೆ ಇರಲಿಲ್ಲ. ಅದೊಂದು ದಿನ ರಸ್ತೆಯಲ್ಲಿ ಎದುರಾದ ತಮ್ಮನಲ್ಲಿ ಮಹಾಲಿಂಗ ಭಟ್ಟರು ಹಳೆಯ ದ್ವೇಷವನ್ನು ಮರೆತು ಮಾತನಾಡುವ ಪ್ರಯತ್ನ ನಡೆಸಿದ್ದರು. ಸುತ್ತಮುತ್ತ ಜನರಿದ್ದಾರೆ ಎನ್ನುವುದನ್ನೂ ನೋಡದೆ ರೇಗಾಡಿದ್ದರಂತೆ ಕೇಶವ ಭಟ್ಟರು. ಮನೆಗೆ ಬಂದು ಪತ್ನಿ, ಮಕ್ಕಳೆದುರು ವಿಷಯ ತಿಳಿಸುವಾಗ ಮಹಾಲಿಂಗ ಭಟ್ಟರ ಧ್ವನಿ ದೃಢತೆ ಕಳೆದುಕೊಂಡಿತ್ತು. ಅದೊಂದು ದಿನ ಜೋರು ಮಳೆಗೆ ‘ಒಂದೇ ಕೊಡೆಯಲ್ಲಿ ನಾವಿಬ್ಬರೂ ಸಾಗುವುದಂತೂ ಸಾಧ್ಯವಿಲ್ಲ’ ಎಂದು ಅಂದಾಜಿಸಿದ ಮಹಾಲಿಂಗ ಭಟ್ಟರು ಮತ್ತು ಮಹಾಬಲ ಪರಿಚಯದ ರುಕ್ಮಯ್ಯನ ಅಂಗಡಿ ಹೊಕ್ಕಿದ್ದರು. ಅದಾಗಲೇ ಅಂಗಡಿ ಹೊಕ್ಕು, ಬಾಯಿತುಂಬಾ ಬೀಡಾ ಜಗಿಯುತ್ತಾ ನಿಂತಿದ್ದ ಕೇಶವ ಭಟ್ಟರ ಕಾಲಿನ ಒಂದು ಬದಿಗೆ ಮಹಾಬಲನ ಕೈಯ್ಯಲ್ಲಿದ್ದ ಒದ್ದೆ ಕೊಡೆ ತಾಗಿತ್ತು. ಮೊದಲೇ ತೂಕಡಿಸುತ್ತಿದ್ದವನಿಗೆ ಹಾಸಿಗೆ ಹಾಸಿ ಕೊಟ್ಟಂತಾಯಿತು. ‘ಸಿಕ್ಕಿದ್ದೇ ಛಾನ್ಸ್’ ಎಂಬಂತೆ ಮಹಾಬಲನನ್ನೇ ದಿಟ್ಟಿಸುತ್ತಾ ಬೊಬ್ಬೆ ಹೊಡೆದಿದ್ದರು ಅವರು. ಇದಾದ ಬಳಿಕ ತಮ್ಮನ ಸುದ್ದಿಗೆ ಮಹಾಲಿಂಗ ಭಟ್ಟರು ಹೋದದ್ದೇ ಇಲ್ಲ. ತನಗೊಬ್ಬ ತಮ್ಮ ಇದ್ದಾನೆ ಎಂಬ ವಿಚಾರವನ್ನೇ ಮರೆತುಬಿಟ್ಟಿದ್ದರು. ಆದರೆ ಕೇಶವ ಭಟ್ಟರು ಮಾತ್ರ ಬೆನ್ನ ಹಿಂದಿನಿಂದ ಕತ್ತಿ ಮಸೆಯುವ ಜಾಯಮಾನ ಬಿಟ್ಟಿರಲಿಲ್ಲ. “ಮೋಸ ಮಾಡಿ ಕೇಸು ಗೆದ್ದಿದ್ದಾನೆ ಅವನು. ಹಣ ನೆಕ್ಕುವವರೆಲ್ಲಾ ಜಡ್ಜುಗಳೆನಿಸಿಕೊಂಡು ತೀರ್ಪು ಕೊಡುವವರಾದದ್ದಕ್ಕೇ ನಾನು ಸೋತದ್ದು. ನನಗೆ ಸಲ್ಲಬೇಕಾದ ಭೂಮಿ ಅದು. ದೈವಕ್ಕೆ ಇಟ್ಟಿದ್ದೇನೆ. ಅವನು ಉದ್ಧಾರ ಆಗುವುದಿಲ್ಲ” ಇಂತಹ ಮಾತುಗಳನ್ನು ಊರಲ್ಲಿ ಸಿಕ್ಕ ಸಿಕ್ಕವರಲ್ಲಿ ಹೇಳಿಕೊಂಡು ತಿರುಗಾಡತೊಡಗಿದ್ದರು. ಆದರೆ ಈಗ ತಮ್ಮ ಸದಾಶಿವ, ಚಿಕ್ಕಪ್ಪನ ಪ್ರಸ್ತಾಪ ಮಾಡಿದ್ದೇಕೆ? ಮಹಾಬಲನಲ್ಲಿ ಪ್ರಶ್ನೆಯೆದ್ದಿತ್ತು. ಉತ್ತರಕ್ಕಾಗಿ ತಮ್ಮನ ಮುಖ ನೋಡಿದ. ತಮ್ಮ ಎಲ್ಲವನ್ನೂ ವಿವರಿಸಿದ್ದು ಹೀಗೆ- ಕೇಶವ ಭಟ್ಟರು ಆ ದಿನ ಜಗಳಾಡುವುದಕ್ಕೆಂದೇ ಬಂದಂತೆ ಮಹಾಲಿಂಗ ಭಟ್ಟರ ಅಂಗಳಕ್ಕೆ ಬಂದಿದ್ದಾರೆ. ತನ್ನ ಮನೆಯ ಕೆಲಸದಾಳು ಚೋಮನಿಗೆ ಮಹಾಲಿಂಗ ಭಟ್ಟರು ಬೆಳಗ್ಗೆ ಬೈದ ವಿಚಾರವನ್ನು ನೆಪವಾಗಿಟ್ಟುಕೊಂಡು ಹೀನಾಮಾನ ಬೈದಿದ್ದಾರೆ. ಮಹಾಲಿಂಗ ಭಟ್ಟರಿಗೂ ಕೋಪ ನೆತ್ತಿಗೇರಿದೆ. ನಾಲಗೆ ಯಾವತ್ತಿಗಿಂತ ರಭಸವಾಗಿಯೇ ಓಡಾಡಿದೆ. ಇದನ್ನೇ ಕಾಯುತ್ತಿದ್ದವನಂತೆ ಕೇಶವ ಭಟ್ಟರು ಮುಂದೆ ಬಂದು ಮಹಾಲಿಂಗ ಭಟ್ಟರ ಎದೆಗೆ ಕೈಯ್ಯಿಟ್ಟು ತಳ್ಳಿದ್ದಾನೆ. ಆಯತಪ್ಪಿ ಬಿದ್ದ ಭಟ್ಟರ ಎದೆಗೆ ಅಂಗಳದ ಕಟ್ಟೆ ಬಲವಾಗಿಯೇ ಬಡಿದಿದೆ. ಆಸ್ಪತ್ರೆ ಸೇರಿ ಒಂದಷ್ಟು ಹೊತ್ತಿನಲ್ಲಿ ಪ್ರಾಣ ಹೋಗಿದೆ. ಈ ವಿಚಾರ ಲಕ್ಷೀಯಮ್ಮ ಮತ್ತು ಸದಾಶಿವನಿಗೆ ಬಿಟ್ಟರೆ ಊರಿನವರ್ಯಾರಿಗೂ ತಿಳಿದಿಲ್ಲ. *** “ಆ ಎಮ್ಡಿಯ ಕಥೆ ಹೇಳುತ್ತಿದ್ದೀಯಾ ಅವನಿಗೆ?” ಬಾಗಿಲಿನಾಚೆ ಚಪ್ಪಲಿ ಬಿಟ್ಟು, ಒಳಬರುತ್ತಿದ್ದ ಅಪ್ಪ ನಗುನಗುತ್ತಾ ಅಮ್ಮನಲ್ಲಿ ಪ್ರಶ್ನಿಸಿದ್ದರು. ಅಮ್ಮ ಹೌದು ಎಂಬಂತೆ ತಲೆಯಾಡಿಸಿದ್ದಕ್ಕೆ ಪ್ರತಿಯಾಗಿ ತನ್ನದೂ ಒಂದಿರಲಿ ಎಂಬಂತೆ ಅಪ್ಪ ಹೇಳತೊಡಗಿದರು- “ನಾವು ಮೊದಲು ಬಾಡಿಗೆ ಮನೆಯಲ್ಲಿದ್ದೆವಲ್ಲ, ಅಲ್ಲಿಗೊಮ್ಮೆ ಬಂದಿದ್ದ. ಆಗಲೇ ಅವನ ತಲೆ ಅರ್ಧ ಕೆಟ್ಟಿತ್ತು. ತಿಂಡಿ ಕೊಟ್ಟದ್ದಕ್ಕೆ ಕುಶಿಯಿಂದ ತಿಂದಿದ್ದ. ಪೇಪರ್‍ನಲ್ಲಿದ್ದ ಸಿನಿಮಾ ನಟಿಯರ ಫೋಟೋಗಳನ್ನೆಲ್ಲಾ ಒಂದೂ ಬಿಡದೆ ತನ್ನ ಹರಕು ಚೀಲಕ್ಕೆ ತುಂಬಿಸಿಕೊಂಡು ಹೊರಟಿದ್ದ. ಅವನಿಗದೊಂದು ಹುಚ್ಚು. ಸಿನಿಮಾ ನಟಿಯರ ಫೋಟೋ ಎಲ್ಲ ಕತ್ತರಿಸಿ ಇಟ್ಟುಕೊಳ್ಳುವ ಹುಚ್ಚು. ಹೊರಹೋಗುತ್ತಿದ್ದ ಅವನನ್ನು ನೋಡಿ, ಪಾಪದವನು ಎನಿಸಿ, ನನ್ನ ಹಳೆಯ ಎರಡು ಶೂಗಳನ್ನು ಅವನಿಗೆ ಕೊಟ್ಟು ಕಳುಹಿಸಿದ್ದೆ.” ಹೇಳಿ ಮುಗಿಸಿದ ಅಪ್ಪ ಸ್ನಾನದ ಕೋಣೆಯ ಕಡೆಗೆ ನಡೆದರು. ನನ್ನಲ್ಲಿನ ಕುತೂಹಲ ಹಾಗೇ ಇತ್ತು. “ಹಾಗಾದರೆ ಎಮ್ಡಿ ಅವನ ತಂದೆಯನ್ನು ಕೊಂದ ಚಿಕ್ಕಪ್ಪನಿಗೆ ಆಗ ಸರಿಯಾಗಿ ಬುದ್ಧಿ ಕಲಿಸಿರಬೇಕಲ್ಲಾ?” ಎಂದು ಅಮ್ಮನನ್ನು ಪ್ರಶ್ನಿಸಿದೆ. “ಅಂತಹ ಗುಣವೇ ಇಲ್ಲದವನು ಪಾಪ. ನಾನು ಆಗಲೇ ಹೇಳಿದನಲ್ಲ, ಸಾಧು ಮನುಷ್ಯ ಅಂತ. ಚಿಕ್ಕಪ್ಪನ ಸುದ್ದಿಗೇ ಹೋಗದೆ ಕೃಷಿ ಕೆಲಸ ನೋಡಿಕೊಂಡು ಉಳಿದುಬಿಟ್ಟ” ನಿಟ್ಟುಸಿರೊಂದು ಹೊರಬಂತು, ಅಮ್ಮನೊಳಗಿಂದ. ಬೆನ್ನಿಗೇ ನಾನು ಪ್ರಶ್ನಿಸಿದೆ- “ಹಾಗಾದರೆ ಅವನಿಗೆ ಹುಚ್ಚು ಹಿಡಿದದ್ದು ಹೇಗೆ?” “ಕೃಷಿ ಕೆಲಸ ನೋಡಿಕೊಂಡು ಇದ್ದನಂತೆ. ಅದೊಂದು ದಿನ ಕಾಲೇಜಿನಿಂದ ಮನೆ ಕಡೆಗೆ ನಡೆದುಕೊಂಡು ಬರುತ್ತಿದ್ದ ಇವನ ತಮ್ಮನಿಗೆ ಲಾರಿಯೊಂದು ಗುದ್ದಿ ಪರಾರಿಯಾಯ್ತಂತೆ. ಅವನು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ. ವಿಷಯ ತಿಳಿದ ಲಕ್ಷ್ಮೀಯಮ್ಮನಿಗೆ ಹಾರ್ಟ್ ಅಟ್ಯಾಕ್ ಆಗಿದೆ. ಅವರೂ ಎರಡು ತಿಂಗಳು ಬದುಕಿದ್ದದ್ದಷ್ಟೆ. ಆಮೇಲೆ ಇಡೀ ಮನೆಯಲ್ಲಿ ಈ ಮಹಾಬಲ ಒಬ್ಬನೇ. ಆ ಸಂದರ್ಭದಲ್ಲಿಯೇ ಅವನ ಚಿಕ್ಕಪ್ಪ ಕೇಶವ ಭಟ್ಟರು ಹಳೇ ದ್ವೇಷ ಮರೆತು ಇವನಲ್ಲಿ ಮಾತನಾಡಿದರಂತೆ. ಅವರ ಮನೆಯಿಂದಲೇ ಆವಾಗಾವಾಗ ಊಟ, ತಿಂಡಿ ಎಲ್ಲ ತಂದು ಕೊಡುತ್ತಿದ್ದರಂತೆ. ಇವನಿಗೆ ಏನಾಯ್ತೋ ಏನೋ, ಇದೆಲ್ಲಾ ಆಗಿ ಮೂರ್ನಾಲ್ಕು ತಿಂಗಳುಗಳಲ್ಲಿಯೇ ವಿಚಿತ್ರವಾಗಿ ನಡೆದುಕೊಳ್ಳುವುದಕ್ಕೆ ಶುರು ಮಾಡಿದ್ದಾನೆ. ಅದೊಂದು ದಿನ ಊಟ ತಂದುಕೊಟ್ಟ ಚಿಕ್ಕಪ್ಪನ ಮುಖಕ್ಕೇ ಅದನ್ನು ಬಿಸಾಡಿದನಂತೆ. ಮತ್ತೆ ಅವರು ಅವನ ಮನೆಯ ಕಡೆಗೇ ಹೋಗಿಲ್ಲ. ಇವನು ಮನೆ ಬಿಟ್ಟು ಅಲೆದಾಡುವುದಕ್ಕೆ ಶುರುವಿಟ್ಟುಕೊಂಡಿದ್ದಾನೆ. ಕೇಶವ ಭಟ್ಟರು ನಾಲ್ಕೆಕರೆ ಜಾಗದ ವಿಷಯಕ್ಕೆ ದೈವಕ್ಕೆ ಹೇಳಿಕೊಂಡಿದ್ದರಲ್ಲ, ಆ ಕಾರಣದಿಂದಲೇ ಮಹಾಲಿಂಗ ಭಟ್ಟರ ಕುಟುಂಬ ಹಾಳಾಗಿಹೋಯಿತು ಎಂದು ಎಲ್ಲರೂ ಹೇಳುತ್ತಾರೆ…” ಅಮ್ಮನಿಗೆ ಮತ್ತೂ ಹೇಳುವುದಕ್ಕಿತ್ತೇನೋ. ಆದರೆ ಸ್ನಾನದ ಕೋಣೆಯಿಂದ ಹೊರಬಂದ ಅಪ್ಪ, ಅಮ್ಮನ ಮಾತಿಗೆಡೆಕೊಡದೆ ನುಡಿದರು- “ನಿನಗೆ ಗೊತ್ತಿಲ್ಲ ಹಾಗಿದ್ದರೆ ಆ ಕಂತ್ರಿ ಕೇಶವ ಭಟ್ಟರ ಬುದ್ಧಿ. ನಿನಗೆ ಎಂದಲ್ಲ, ಊರಿನವರ್ಯಾರಿಗೂ ಗೊತ್ತಿಲ್ಲ. ಎಲ್ಲರಿಗೂ ಗೊತ್ತಿರುವುದು, ಹಳೆ ದ್ವೇಷ ಮರೆತು ಅಣ್ಣನ ಮಗನನ್ನು ಒಪ್ಪಿಕೊಂಡ ಕೇಶವ ಭಟ್ಟರು ಮಾತ್ರ. ಆದರೆ ಅವರಂಥ ಕುತಂತ್ರಿ ಇನ್ನೊಬ್ಬರಿಲ್ಲ. ಸದಾಶಿವ ಲಾರಿ ಗುದ್ದಿ ಸತ್ತದ್ದು, ಮಹಾಬಲ ಅರೆಹುಚ್ಚ ಆದದ್ದು ಎಲ್ಲದಕ್ಕೂ ಕಾರಣ ಅವರೇ. ಅದ್ಯಾವುದೋ ಅಲೋಪತಿ ಮಾತ್ರೆಯನ್ನು ಒಂದು ತಿಂಗಳು ಊಟದಲ್ಲಿ ತಿನ್ನಿಸಿದ್ದರಂತೆ, ಈ ಮಹಾಬಲನಿಗೆ. ತಲೆ ಕೆಡಿಸುವ ಮಾತ್ರೆಯಂತೆ ಅದು. ಮಂಗಳೂರಿನ ಯಾವುದೋ ವೈದ್ಯರಿಗೆ ಎರಡು ಪಟ್ಟು ಹಣ ಕೊಟ್ಟು ತಂದದ್ದಂತೆ. ಅವರ ಮನೆಯಲ್ಲಿ ಕೆಲಸಕ್ಕಿದ್ದನಲ್ಲ ತನಿಯ, ಅವನೇ ನನ್ನಲ್ಲಿ ಹೇಳಿದ್ದು.  ಬಟ್ಟಲು ಬಿಸಾಕಿದ, ಹೊಡೆದ ಇದೆಲ್ಲಾ ಶುದ್ಧ ಸುಳ್ಳು.

ಸುಂದರ ರಾವಣ Read Post »

ಇತರೆ

ಗಜಲ್ ಕ್ಷೇತ್ರದ ಮೇರು ಪರ್ವತ ಗಾಲಿಬ್

ವಿಶೇಷ ಲೇಖನ ಗಜಲ್ ಕ್ಷೇತ್ರದ ಮೇರು ಪರ್ವತ ಗಾಲಿಬ್ ಸಿದ್ಧರಾಮ ಹೊನ್ಕಲ್ . ಇತ್ತೀಚಿನ ದಿನಗಳಲ್ಲಿ ನನಗೆ ಬಹುವಾಗಿ ಕಾಡಿ ನನ್ನಿಂದ ಮೂರು ಗಜಲ್ ಕೃತಿಗಳು ಹೊರಬರಲು ಕಾರಣ ಆದ ಗಜಲ್ ಸಾಹಿತ್ಯಕ್ಕೆ ಸಂಬಂಧಿಸಿದ ಗಜಲ್ ಸಾಹಿತ್ಯದ ಮೇರು ಪರ್ವತ  ಗಾಲಿಬ್ ಕುರಿತ ನನ್ನ ಪುಟ್ಟ ಬರಹ. . ಗಾಲಿಬ್ ಹುಟ್ಟಿನಿಂದ  ಸಾವಿನವರೆಗೆ ಆತನ ಬದುಕು ಬರಹ ಹವ್ಯಾಸ ಸುಖ ದುಃಖ ಸಾಲ ಸೋಲ ನೋವು ಅವಮಾನ ಸ್ವಾಭಿಮಾನ ಎಲ್ಲ ತಿಳಿದಾಗ ಅಂತಹ ಮಹತ್ವದ ಕಾವ್ಯ ಹುಟ್ಟಲು ಇದೇ ಭೂಮಿಕೆ ಕಾರಣ ಅನಿಸುತ್ತದೆ. ಗಜಲ್ ಕ್ಷೇತ್ರದ ಮೇರು ಪರ್ವತ ಅನ್ನುವಷ್ಟರ ಮಟ್ಟಿಗೆ ಬೆಳೆದ ಆತನ ಅಪ್ರತಿಮ ಗಜಲ್ ಕಾವ್ಯವನ್ನು, ಆತನ ವ್ಯಕ್ತಿತ್ವವನ್ನು ನಾವು ಅರಿಯಬಹುದಾಗಿದೆ. ನೂರು ತಲೆಮಾರಿನಿಂದ ನಡೆದು ಬಂದಿದೆ ಸೈನಿಕ ವೃತ್ತಿ ಕೀರ್ತಿ ಸ್ಥಾನ ಪಡೆಯಲೋಸುಗ ನಾನು ಕಾವ್ಯ ರಚಿಸಬೇಕಾದುದಿಲ್ಲ! ಮಹಾ ಆತ್ಮಾಭಿಮಾನಿಯಾದ ಗಾಲಿಬ್ ನ ಈ ಸಾಲುಗಳ ಮೂಲಕ ಆತನ ಕಾವ್ಯ ಧೋರಣೆಯ ಆಶಯದ ಅರಿವಾಗಬಹುದಾಗಿದೆ. ನಿನ್ನ ನೋಡಲೆಂದು ನನ್ನ ಕಣ್ಣೀರು ಸ್ವ ಪ್ರತಿಷ್ಠೆಯ ಚಿನ್ನವನ್ನು ಸಂಪೂರ್ಣ ತೊಳೆದು ಹಾಕಿದೆ! ಈಗ ಮಂಜು ಹನಿಯಂತಿರುವ ಪವಿತ್ರ ದೃಷ್ಟಿಯೊಂದು ಮಾತ್ರ ಉಳಿದಿದೆ! – ಗಾಲಿಬ್ @@@@ ನಿನ್ನ ಚೆಲುವಿನ ಮಿಂಚಿನ ಹೊಳಪಿನಿಂದಾಗಿ ನನ್ನ ದೃಷ್ಟಿ ಸುಟ್ಟು ಕೇವಲ ರೆಪ್ಪೆಯ ಕೂದಲು ಮಾತ್ರ ಉಳಿಯಿತು ಎಲ್ಲ ಸುಟ್ಟು ಬೂದಿಯುಳಿಯುವ ಹಾಗೆ… – ಗಾಲಿಬ್ @@@@  ಆಶೆಗಳ ತೋಟ ಬೇಸಿಗೆಯ ಬೇಟೆಯಾಗಿದೆ  ಮತ್ತೆ ವಸಂತ ಬರಬಹುದು;ಆದರೆ ನನ್ನ ನಿರಾಶೆಗಳ ಸಿಟ್ಟು ಸಿರಿನೊಲು!  ಗಾಲಿಬ್  ಉಳಿದಿಲ್ಲ ಪ್ರೆಯಸಿಯ ನೋಟದಚ್ಚರಿ,ಇಲ್ಲ ಸುರೆಯ ಸಹವಾಸ ಕೇಳು ಗಾಲಿಬ್ ನನ್ನ ಮಹಫಿಲ ದಿ ಉಳಿದಿಹದು ಬರಿ ಭಾಗ್ಯ ಚಕ್ರ –   ಗಾಲಿಬ್ ಹೀಗೆ ಅನಂತ ಗಜಲ್ ಗಳ ಮೂಲಕ ಇಂದಿಗೂ ಗಜಲ್ ಅಂದ್ರೆ ಗಾಲಿಬ್  ಎನ್ನುವಂತೆ ಗಜಲ್ ಸಾಹಿತ್ಯ ಅಭಿಮಾನಿಗಳ ಮನದಲ್ಲಿ ಸದಾ ಜೀವಂತವಾಗಿರುವ ಗಾಲಿಬ್ ರ  ರೋಚಕ ಬದುಕು ಅವರ ಬರಹದ ವೈವಿಧ್ಯಮಯತೆಗೆ ಸಾಕ್ಷಿಯಾಗಿ ನಿಲ್ಲುತ್ತದೆ.ಗಾಲಿಬ್‌ ಒಂದು ಹಂತದಲ್ಲಿ ಕಡು ಕಷ್ಟದಲ್ಲಿ ಇದ್ದಾಗ ಆತನ ಅಭಿಮಾನಿಗಳು ದೆಹಲಿಯ ಕಾಲೇಜು ಒಂದರಲ್ಲಿ ಬೋಧಕ ವೃತ್ತಿ ಖಾಲಿ ಇದೆ.ಅದನ್ನು ನೀವು ಮಾಡಿ.ನಿಮ್ಮ ಜೀವನ ನಿರ್ವಹಣೆಗೆ ಸಹಾಯ ಆಗುತ್ತದೆ ಎಂದು ತುಂಬಾ ಒತ್ತಾಯಿಸಿ ಆ ಆಡಳಿತ ಮಂಡಳಿಯವರ ಮನ ಒಲಿಸಿ ಆ ಹುದ್ದೆಗೆ ನೇಮಕಾತಿ ಕೊಡಿಸುತ್ತಾರೆ. ಒಂದು ದಿನ ಆ ಹುದ್ದೆಗೆ ಸೇರಲು ತಮ್ಮ ಮೇನೆಯಲ್ಲಿ ಕುಳಿತು ಕಾಲೇಜು ಮುಂದೆ ಹೋಗಿ ಇಳಿಯುತ್ತಾರೆ.ಸ್ವಲ್ಪ ಹೊತ್ತು ಕಾಯುತ್ತಾರೆ. ಇವರನ್ನು ಒಳ ಕರೆದೊಯ್ಯಲು ಯಾರು ಬರುವದಿಲ್ಲ. ಬೇಸತ್ತ ಗಾಲಿಬ್ ಅದೇ ಮೇನೆಯಲ್ಲಿ ಕುಳಿತು ಮನೆಗೆ ಮರಳುತ್ತಾರೆ.     ಮರುದಿನ ಇವರನ್ನು ಹುಡುಕಿಕೊಂಡು ಬಂದ ಅಭಿಮಾನಿಗಳು ನಿನ್ನೆ ನೀವು ಕೆಲಸಕ್ಕೆ ಏಕೆ ಜ್ವಯಿನ್ ಆಗಲಿಲ್ಲ.ಹೋಗಲಿಲ್ಲವೇ? ಆಡಳಿತ ಮಂಡಳಿಯವರು ನಿಮಗಾಗಿ ಕಾದಿದ್ದರು ಅನ್ನುತ್ತಾರೆ.ಆಗ ಗಾಲಿಬ್ ರು‌ ನನ್ನನ್ನು‌ ಸ್ವಾಗತಿಸಲು ಯಾರು ಬಾಗಿಲಿಗೆ ಬರಲಿಲ್ಲ.ಹಾಗಾಗಿ ನಾ ಅಲ್ಲಿಯವರೆಗೆ ಹೋದವ ಹಿಂದೆ ಬಂದೆ ಅನ್ನುತ್ತಾರೆ.     ನಿಮ್ಮನ್ನು ಸ್ವಾಗತಿಸಲು ನೀವು ಆ ಕಾಲೇಜಿಗೆ ಅತಿಥಿಯಾಗಿ ಹೋಗಿಲ್ಲ.ಕೆಲಸ ಮಾಡಲು ಹೋಗಿದ್ದು. ಕೆಲಸಗಾರನಿಗೆ ಯಾರು ಸ್ವಾಗತಿಸುವದಿಲ್ಲವೆಂದು ಸಹಜವಾಗಿ ಹೇಳುತ್ತಾರೆ.ನಾ ಮಾಡುವ ಕೆಲಸದಿಂದ ಅಲ್ಲಿ ನನಗೆ‌ ಗೌರವ ಸಿಗುವದಿಲ್ಲವೆಂದರೆ ನಾನೇಕೆ ಅಂತಹ ಕೆಲಸ ಮಾಡಲಿ.ನನಗೆ ಗೌರವ ಸಿಗದ ಕೆಲಸ ಬೇಡ ಅಂತ ಆ ಕೆಲಸವೇ ಬೇಡ ಅಂತ ಬಿಟ್ಟುಕೊಟ್ಟು ತಮ್ಮ ಕಡುಕಷ್ಟದ ಜೀವನವೇ ಆಯ್ಕೆ ಮಾಡಿಕೊಳ್ಳುತ್ತಾರೆ.ಇದು ಗಾಲಿಬ್.     ಇದು ಅವರ ಬದುಕಿನ ಒಂದು ನಡೆದ ಘಟನೆ ಅಂತ ಅವರ ಕುರಿತು ಬರೆದವರು ಉಲ್ಲೇಖಿಸುತ್ತಾರೆ.ಮೋಜು, ಮಸ್ತಿ,ರಸಿಕತೆ, ಕವಿತೆ ಸಾಲ ಸೋಲ ಸಾವುಗಳು ಹೀಗೆ ಅನೇಕ ಜಂಜಡಗಳಿಗೆ ಬಲಿಯಾದರು ಸಹ ಗಾಲಿಬ್ ತಮ್ಮ ಗಜಲ್ ರಚನೆಗಳ ಮೂಲಕ ಎಲ್ಲವನ್ನೂ ಮರೆತು ಹಗುರಾಗಿ ಅದ್ಭುತವಾದ ಗಜಲ್ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದು ನಮ್ಮ ಕಣ್ಣ ಮುಂದಿದೆ.ಇದು ಗಾಲಿಬ್ ಕುರಿತು ಕೃತಿಗಳಲ್ಲಿ ಗಮನಿಸಿದಾಗ ನನಗನಿಸಿದ ಒಂದು ಪುಟ್ಟ ಬರಹ ಅಷ್ಟೇ. ಇನ್ನೂ ಬಹಳ ಅವರ ಬಗ್ಗೆ ಓದಲಿದೆ.ಓದಿದಾಗ ಮತ್ತೆ ಹಂಚಿಕೊಳ್ಳುವೆ. (ಡಾ.ಪಂಚಾಕ್ಷರಿ ಹಿರೇಮಠ ಅವರು ೫೦ ವರ್ಷಗಳ ಹಿಂದೆ ಪ್ರಕಟವಾದ ಸಾಹಿತ್ಯ ಸೌಗಂಧ ಕೃತಿಯಲ್ಲಿ ಬರೆದ ಯುಗ ಪುರುಷ ಗಾಲಿಬ್ ಲೇಖನದ ಓದಿನಿಂದ ನನಗೆ ದಕ್ಕಿದ್ದು ಇದು) ಇದು ನನಗೂ ಅನ್ವಯಿಸುತ್ತದೆ. ಹತ್ತಾರು ತಲೆಮಾರಿನಿಂದ ನಡೆದು ಬಂದಿದೆ ಬಹುದೊಡ್ಡ ವ್ಯಾಪಾರಿ, ಒಕ್ಕಲುತನದ ವೃತ್ತಿ. ಕೀರ್ತಿ ಸ್ಥಾನ ಮಾನ ಪಡೆಯಲೋಸುಗ ನಾನು ಕಾವ್ಯರಚಿಸಬೇಕಾದುದಿಲ್ಲ! ಆತ್ಮತೃಪ್ತಿಗಾಗಿಯಷ್ಟೆ  ಹೊನ್ನಸಿರಿ ************************************

ಗಜಲ್ ಕ್ಷೇತ್ರದ ಮೇರು ಪರ್ವತ ಗಾಲಿಬ್ Read Post »

ಇತರೆ, ಪ್ರಬಂಧ

‘ಅಮ್ಮನ ನಿರಾಳತೆ’

ವಸುಂಧರಾ ಕದಲೂರು ಬರೆಯುತ್ತಾರೆ

ಒಟ್ಟಿನಲ್ಲಿ ಹೊಟ್ಟೆ ತುಂಬಿದ ಮಗು ಒಂದಷ್ಟು ಹೊತ್ತು ತರಲೆ ಮಾಡದೇ ಆಡಿಕೊಂಡೋ, ಮಲಗಿಕೊಂಡೋ ಇದ್ದರೆ ಅಮ್ಮನಿಗೆ ಸಿಗುವ ನಿರಾಳತೆ ಇದೆಯಲ್ಲಾ ಅದಕ್ಕೆ ಬೆಲೆ ಕಟ್ಟಲಾಗದು.

‘ಅಮ್ಮನ ನಿರಾಳತೆ’ Read Post »

ಇತರೆ, ಪ್ರಬಂಧ

ಒಳ್ಳೆಯದು ಬಾಡದ ಹೂವಿನಂತೆ ನಗುತಿರಲಿ

ಪ್ರಬಂಧ ಒಳ್ಳೆಯದು ಬಾಡದ ಹೂವಿನಂತೆ ನಗುತಿರಲಿ ಜಯಶ್ರೀ.ಜೆ. ಅಬ್ಬಿಗೇರಿ    ಇಸ್ಲಾಂ ಧರ್ಮದ ಪ್ರಖ್ಯಾತ ಗುರು ‘ಸಾದಿ’ ಸಣ್ಣವರಿದ್ದಾಗ ತನ್ನ ತಂದೆಯೊಂದಿಗೆ ಮಸೀದಿಗೆ ಹೋಗಿದ್ದರು. ತಂದೆ ಮಕ್ಕಳು ಮಸೀದಿಯ ಮೇಲ್ವಿಚಾರಣೆ ನೋಡಿಕೊಳ್ಳಬೇಕಿತ್ತು. ಅಲ್ಲಿ ಪ್ರಾರ್ಥನೆಗೆ ಬಂದವರೆಲ್ಲ ನಿದ್ದೆಗೆ ಜಾರಿದ್ದರು. ಅದನ್ನು ಕಂಡ ಸಾದಿಗೆ ಆಶ್ಚರ್ಯವಾಯಿತು. ಆತ ತಂದೆಗೆ ತಿಳಿಸಿದ. ‘ನಮ್ಮಿಬ್ಬರನ್ನು ಬಿಟ್ಟು ಬಾಕಿಯವರೆಲ್ಲ ಮಲಗಿ ಬಿಟ್ಟಿದ್ದಾರೆ. ಆತನ ತಂದೆಗೆ ಕೋಪ ಬಂದಿತು.’ನಿನ್ನ ಕೆಲಸ ನೀನು ಮಾಡು. ಬೇರೆಯವರು ಏನು ಮಾಡುತ್ತಿದ್ದಾರೆಂದು ನೋಡುವುದು ನಿನ್ನ ಕೆಲಸವಲ್ಲ. ‘ಬೇರೆಯವರಲ್ಲಿ ತಪ್ಪು ಕಂಡು ಹಿಡಿಯುವುದರಿಂದ ಯಾವ ಪ್ರಯೋಜನವೂ ಇಲ್ಲ. ಅದರ ಬದಲು ನಿನ್ನಲ್ಲಿರುವ ತಪ್ಪುಗಳ ಬಗ್ಗೆ ಆತ್ಮಾವಲೋಕನ ಮಾಡಿಕೊ. ಬೇರೆಯವರಲ್ಲಿ ಹಲವು ತಪ್ಪುಗಳಿದ್ದು ಒಂದೇ ಒಂದು ಒಳ್ಳೆಯ ಗುಣವಿದ್ದರೂ ಅದರ ಮೇಲೆ ನಿನ್ನ ಗಮನವಿಡು.ಒಳ್ಳೆಯದರತ್ತ ಗಮನ ಹರಿಸುವುದರಿಂದ ಒಳ್ಳೆಯದೇ ಆಗುತ್ತದೆ.’ ಎಂದರು.     ಸಂಪೂರ್ಣವಾಗಿ ಒಳ್ಳೆಯ ಗುಣಗಳು ತುಂಬಿರುವ ವ್ಯಕ್ತಿ ಸಿಗುವುದು ದುರ್ಲಭ. ಹಾಗಂತ ಸಂಪೂರ್ಣ ಕೆಟ್ಟ ಗುಣಗಳಿರುವ ವ್ಯಕ್ತಿ ಸಿಗುವುದು ಸುಲಭ ಅಂತಿಲ್ಲ. ಹಾಗಿದ್ದರೆ ಪ್ರತಿಯೊಬ್ಬರಲ್ಲೂ ಒಳ್ಳೆಯ ಮತ್ತು ಕೆಟ್ಟ ಗುಣಗಳು ಇದ್ದೇ ಇರುತ್ತವೆ ಅನ್ನುವುದು ಸೂರ್ಯನಷ್ಟೇ ಸ್ಪಷ್ಟ. ಈ ಸಂಗತಿಯನ್ನು ಇನ್ನಷ್ಟು ಸರಳವಾಗಿ ಹೇಳುವುದಾದರೆ ಪ್ರತಿಯೊಬ್ಬ ವ್ಯಕ್ತಿ ಒಳ್ಳೆಯ ಮತ್ತು ಕೆಟ್ಟ ಗುಣಗಳ ಒಟ್ಟು ಮೊತ್ತ. ಹಾಗಾದರೆ ಒಳ್ಳೆಯ ಮತ್ತು ಕೆಟ್ಟ ವ್ಯಕ್ತಿ ಅಂತ ಹೇಗೆ ಗುರುತಿಸುತ್ತೇವೆ? ಯಾರಲ್ಲಿ ಒಳ್ಳೆಯ ಗುಣಗಳು ಹೆಚ್ಚಿವೆಯೋ ಅವರು ಒಳ್ಳೆಯವರು. ಹಾಗೆಯೇ ಕೆಟ್ಟ ಗುಣಗಳ ಪ್ರಮಾಣ ಹೆಚ್ಚಿದ್ದವರು ಕೆಟ್ಟವರು ಎಂದು ನಿರ್ಧರಿಸಲಾಗುತ್ತದೆ. ಉತ್ತಮವಾದುದನ್ನು ನಿರೀಕ್ಷಿಸಿದರೆ ಅದನ್ನು ಪಡೆಯಬಹುದು. ಇತರರಲ್ಲಿ ಒಳ್ಳೆಯ ಗುಣಗಳನ್ನು ಮಾತ್ರ ಕಾಣುತ್ತಿದ್ದರೆ ಇಡೀ ಜಗತ್ತೇ ಒಳ್ಳೆಯದಾಗಿ ಕಾಣಿಸುವುದು. ಒಳಿತು ಕೆಡುಕುಗಳಿಗಿಂತ ನೋಡುವ ದೃಷ್ಟಿ ಒಳ್ಳೆಯದಾಗಿರಬೇಕು.  ಸಾಕಷ್ಟು ಕೆಡುಕುಗಳ ಮಧ್ಯೆಯೂ ಒಳ್ಳೆಯದನ್ನು ಹುಡುಕುವುದೇ ಒಳ್ಳೆಯತನ.ಮುಳ್ಳುಗಳ ನಡುವೆ ಅರಳಿ ನಿಂತ ಗುಲಾಬಿಯತ್ತ ಗಮನಿಸಬೇಕೇ ಹೊರತು ಮುಳ್ಳುಗಳೆಡೆಯಲ್ಲ.ಕಮಲದತ್ತ ದೃಷ್ಟಿ ನೆಡಬೇಕೇ ಹೊರತು ಕೆಸರಿನತ್ತ ಅಲ್ಲ.  ತೊಂದರೆ ಮಧ್ಯದಲ್ಲಿ ಹೇಗೆ ಅವಕಾಶಗಳು ಅವಿತುಕೊಂಡಿರುತ್ತದೆಯೋ ಹಾಗೆಯೇ ಕೆಟ್ಟದರ ನಡುವೆಯೂ ಒಳ್ಳೆಯದು ಅಡಗಿರುತ್ತದೆ. ಅದನ್ನು ಹೆಕ್ಕಿ ತೆಗೆದು ಬೆಳೆಸುವುದೇ ಜಾಣತನ. ಯಾವುದರ ಬಗೆಗೆ ಮನಸ್ಸನ್ನು ಕೇಂದ್ರೀಕರಿಸುತ್ತೇವೆಯೋ ಅದನ್ನೇ ದಕ್ಕಿಸಿಕೊಳ್ಳುತ್ತೇವೆ. ಗಮನವನ್ನು ಸದಾ ಒಳ್ಳೆಯ ಗುಣಗಳತ್ತ ಹರಿಸಬೇಕು. ಯಾಂತ್ರಿಕವಾಗಿ ದಿನವನ್ನು ದೂಡುತ್ತಿದ್ದರೆ ಒಳಿತು ಕೆಡುಕುಗಳ ಫರಕು ಗೊತ್ತಾದರೂ ಬದಲಾಗುವುದು ವಿರಳ. ನಮ್ಮ ಅಭ್ಯಾಸಗಳು ನಮ್ಮನ್ನು ಇತರರಿಂದ ಬೇರೆಯಾಗಿಸುತ್ತವೆ. ಒಳಿತನ್ನು ಹುಡುಕುವುದು ಒಂದು ಒಳ್ಳೆಯ ಅಭ್ಯಾಸ. ಒಳ್ಳೆಯದು ಮಹತ್ತರವಾದ ಸ್ಪೂರ್ತಿ ನೀಡುತ್ತದೆ. ಚೈತನ್ಯವನ್ನು ತುಂಬುತ್ತದೆ. ಒಳ್ಳೆಯದನ್ನು ಗಂಭೀರವಾಗಿ ಪರಿಗಣಿಸಬೇಕು. ಅದನ್ನು ಮೆಚ್ಚಬೇಕು. ನೀರೆರದು ಪೋಷಿಸಬೇಕು. ನಿರ್ಲಕ್ಷಿಸಿದರೆ ಒಣಗಿದ ಬಳ್ಳಿಯಂತಾಗುತ್ತದೆ.ಕೆಟ್ಟದ್ದನ್ನು ಸಾಕುವುದೆಂದರೆ ಫಲ ಕೊಡದ ಮುತ್ತುಗದ ಗಿಡಕ್ಕೆ ಹತ್ತಾರು ವರ್ಷ ಪೂಜಿಸಿದಂತೆ. ಯಾವುದೇ ಪ್ರಯೋಜನವಿಲ್ಲ. ನಿರಾಸೆಯ ಹೊರತು ಮತ್ತೇನೂ ಲಭಿಸದು. ಒಳ್ಳೆಯ ಗುಣಗಳನ್ನು ಪೋಷಿಸದಿದ್ದರೆ ಪ್ರೋತ್ಸಾಹಿಸದಿದ್ದರೆ ಒಳ್ಳೆಯವರು ನಿರಾಶರಾಗಬಹುದು. ‘ಎಷ್ಟು ಒಳ್ಳೆಯವರಾಗಿದ್ದರೂ ಅಷ್ಟೇ ಇದೆ. ಯಾವುದೇ ಲಾಭವಿಲ್ಲ. ಮತ್ತಷ್ಟು ನೋವನ್ನು ಅನುಭವಿಸುವುದು ಯಾರಿಗೆ ಬೇಕಿದೆಯೆಂದು ನೊಂದ ಮನಸ್ಸು ಕೆಟ್ಟದ್ದರತ್ತ ವಾಲುತ್ತದೆ.’ ಅಂದರೆ ಕೆಟ್ಟವರು ಮೂಲತಃ ಕೆಟ್ಟವರಲ್ಲ. ಅವರು ಪರಿಸ್ಥಿತಿಯ ಕೂಸಾಗಿ ಕೆಟ್ಟವರಾಗಿರುತ್ತಾರೆ. ಬೇಕಂತಲೇ ಅಪರಾಧಗಳ ಸುಳಿಯಲ್ಲಿ ಸಿಕ್ಕಿ ಹಾಕಿಕೊಳ್ಳುವುದು ಯಾರಿಗೂ ಬೇಕಾಗಿರುವುದಿಲ್ಲ.     ಒಳ್ಳೆಯದನ್ನು ಅಲ್ಲಗಳೆಯುವುದು ತುಚ್ಛವಾಗಿ ಕಾಣುವುದು ತಪ್ಪು. ಹಣ ಅಧಿಕಾರ ಅಂತಸ್ತಿನಿಂದ ಒಣ ಪ್ರತಿಷ್ಟೆಯಿಂದ ಪಡೆದ ಸುಳ್ಳು ಒಳ್ಳೆಯತನದ ಬಿರುದು ದೀಪದ ಬೆಳಕಿನಂತೆ ಎಣ್ಣೆ ಇರುವವರೆಗೆ ಮಾತ್ರ ಇರುತ್ತದೆ.ನಿಜವಾದ ಒಳ್ಳೆಯತನಕ್ಕೆ ಸಿಗುವ ಗೌರವ ಸೂರ್ಯನಂತೆ ಸೃಷ್ಟಿ ಇರುವವರೆಗೆ ಬೆಳಗುತ್ತದೆ. ಒಳ್ಳೆಯ ಸಮಾಜ ಕಟ್ಟಬೇಕೆಂದರೆ ಪ್ರತಿಯೊಬ್ಬ ವ್ಯಕ್ತಿಯೂ ಮೊದಲು ಅನ್ಯರ ಒಳಿತಿಗಾಗಿ, ನಂತರ ತನ್ನ ಒಳಿತಿಗಾಗಿ ದುಡಿಯುವ ಮನೋಭಾವ ಹೊಂದಿರಬೇಕು. ಯೋಚನೆಗಳು ಕಾರ್ಯಗಳು ಒಳ್ಳೆದಾದರೆ ಬದುಕು ಒಳ್ಳೆಯದಾಗುತ್ತದೆ. ಒಳ್ಳೆಯದನ್ನು ಗುರುತಿಸೋಣ ಒಳ್ಳೆಯದನ್ನು ಬೆಳೆಸೋಣ. ಒಳ್ಳೆಯ ಗುಣಗಳು ಮತ್ತೆ ಮತ್ತೆ  ಚಿಗುರೊಡೆಯಲು ಪ್ರೋತ್ಸಾಹಿಸೋಣ. ಉದುರಿ ಹೋದ ಹೂಗಳು ತಮ್ಮ ಸುವಾಸನೆಯನ್ನು ಚೆಲ್ಲುತ್ತವೆ. ಒಳ್ಳೆಯ ಪುಸ್ತಕಗಳು ಒಳ್ಳೆಯ ವ್ಯಕ್ತಿಗಳು ಒಳ್ಳೆಯತನ ಕೂಡಲೇ ಅರ್ಥವಾಗುವುದಿಲ್ಲ. ಪುಸ್ತಕವನ್ನು ಮತ್ತೆ ಮತ್ತೆ ಓದಿದಾಗ ಮಾತ್ರ ಅದರ ಸತ್ಯ ಅರಿವಾಗುವುದು. ಹಾಗೆಯೇ ವ್ಯಕ್ತಿಗಳ ಮನಸ್ಸನ್ನು ಸ್ವಚ್ಛ ಮನಸ್ಸಿನಿಂದ ಅರಿಯಲು ಪ್ರಯತ್ನಿಸಿದರೆ ಮಾತ್ರ ಒಳ್ಳೆಯತನ ತಿಳಿಯುವುದು.ಸಾಕಷ್ಟು ಒಳ್ಳೆಯ ಗುಣಗಳು ಇರುವವರು ಸಿಗುವರು ಎಂದು ಕಾಯುವುದು ಬೇಡ. ಸಿಕ್ಕ ಜನರಲ್ಲಿಯೇ ಒಳ್ಳೆಯ ಗುಣಗಳನ್ನು ಗುರುತಿಸಿ ಪೋಷಿಸೋಣ. ಆಗ ಒಳ್ಳೆಯದು ಬಾಡದ ಹೂವಿನಂತೆ ನಗುತ್ತಿರುತ್ತದೆ. ============================================================= .

ಒಳ್ಳೆಯದು ಬಾಡದ ಹೂವಿನಂತೆ ನಗುತಿರಲಿ Read Post »

ಕಾವ್ಯಯಾನ

“ಅನ್ನದಾತನ ಸ್ವಗತ “

“ಅನ್ನದಾತನ ಸ್ವಗತ “ ಗೀತಾ ಅನಘ ಮುನಿನಸ್ಯಾಕೆ ತಾಯಿ ನನ್ನ ಮ್ಯಾಲ,ಕಾರ್ಖಾನೆ ಕಟ್ಟಿ ನಿನ್ನುಸಿರ ಮಲಿನ ಗೊಳಿಸಲಿಲ್ಲ,ರಾಜಕಾರಣಿಗಳಂತೆ ಸುಳ್ಳು ಭರವಸೆನೀಡಲಿಲ್ಲ,ಬ್ಯಾಂಕಿಗೆ ಸಾಲ ಕೇಳಿದೆ ಅಷ್ಟೇ,!!!!!!ಬೆಳೆ ಬಿತ್ತಲು,,,,,,,,,,,,,ಪಚ್ಚೆ ಪೈರು ಗಳಿಂದ ನಿನ್ನೊಡಲ ತುಂಬಲು,ಅದೇಕೋ ಕಾಣೆ ನಿನಗೂ ನನ್ನ ಮೇಲೆ ಮುನಿಸು,ಕೆಲವೊಮ್ಮೆ ಇಳೆಗೆ ಮಳೆಯ ಸುರಿಸದೆ,ನನಗೆಂದು ಮೀಸಲಿಟ್ಟ ನಿನ್ನ ದೇಹದ ಒಂದಿನಿತು ಭಾಗ ಬರಡಾಯಿತು,ಇನ್ನೊಮ್ಮೆ ಬಹಳಷ್ಟು ಮಳೆ ಬಂದು ಇಳೆ ನೆಂದು ನಿನ್ನೊಡಲ ಹಸಿರಾಗಿಸಿ ಫಸಲು ನೋಡಿ,ಸಂಭ್ರಮಿಸುವ ಸಮಯದಿಯಾಕೆ ನಿನ್ನಯ ರುದ್ರನರ್ತನ?! ಬಯಸಿದ್ದಕ್ಕಿಂತ ಹೆಚ್ಚು ಮಳೆರಾಯನ ಆರ್ಭಟ ಹೆಸರೆಂಬುದು ಪ್ರವಾಹ, ಮಾಧ್ಯಮಗಳಿಗೆ ಆಹಾರ, ನನಗೆ! ನನ್ನ ಗೂಡು,ಗುಡಿಸಲು, ಬೆಳೆ ಎಲ್ಲವನ್ನು ಕಳೆದುಕೊಂಡುಅನಾಥನಾಗಿ ಗಂಜಿಕೇಂದ್ರ ಸೇರಿದನೆಲ್ಲ,ಆಗ ನಮ್ಮಯ ಸ್ಥಿತಿ ಕಂಡು ಶ್ರೀಮಂತ ವರ್ಗದವರು ಮರುಗಿದರು.!!!!!!!!“ಛೇ ,,,,,ಪಾಪ”“ಅಯ್ಯೋ ಪಾಪ”“ಅಯ್ಯೋ ಬಿಡಿ ಪ್ರತಿವರ್ಷವೂ ಇವರದು ಇದೇ ಗೋಳು”ಅದ್ಯಾಕೋ ಅರಿವಾಗಲಿಲ್ಲ ಅವರಿಗೆ,ಅವರ ಕುಟುಂಬವು ಸವಿಯುತ್ತಿರುವ ಮೃಷ್ಟಾನ್ನ ಭೋಜನಕ್ಕೆ ಕಾರಣಕರ್ತರು ನಾವೆಂದು!!! ಎಲ್ಲವೂ ಸರಿ ಎನಿಸಿ, ಮಳೆ ಸಕಾಲದಲ್ಲಿ ಸಹಕರಿಸಿ ,ನಾನು ನನ್ನವರು, ನನ್ನ ಬಾಂಧವರು ಬೆವರು ಸುರಿಸಿ,ಬೆಳೆ ಬೆಳೆಸಿ,ದೂರದ ಕಂಡು ಕಾಣದ ಪ್ಯಾಟೆಗೆ ಬಂದರೆ,ಬೆಲೆ ಕುಸಿತ, ದಲ್ಲಾಳಿಗಳಿಂದಲೆ ತೊಂದರೆ,ಬ್ಯಾಂಕಿನ ಸಾಲ ವಿರಲಿ,“ಬೇಸಾಯ ಮನೆ ಮಂದಿಯೆಲ್ಲ ಸಾಯ”ಎಂಬ ಗಾದೆಮಾತಿನಂತೆ ಪರಿಶ್ರಮಕ್ಕೆ ಬೆಲೆ ಇಲ್ಲ,ಕೈಗಳು ಕಾಣಲಿಲ್ಲ ಕಾಂಚಾಣದ ಕಂತೆ,‘ದಲ್ಲಾಳಿಗಳೇಕೇ’ ನಾನೇ ಮಾರಿ ಬರುವೆ ಎಂದು ಬಂದ ನನಗೆ ದಿಕ್ಕು ತೋಚದಾಯಿತು.ಹೇಳಿದ ಬೆಲೆಗೆ ಅರ್ಧಕ್ಕೆ ಕೇಳುವ ಚೌಕಾಸಿ ಮಾಡುವ ಜನರಿಗೆ ನನ್ನ ನೋವು ಅರ್ಥವಾಗಲಿಲ್ಲ. ನನ್ನ ಮಗನನ್ನು ಇಂಗ್ಲೀಷ್ ಶಾಲೆಗೆ ಸೇರಿಸಲಿಲ್ಲ ,ಹಾಗಾಗಿ ಅವನ ಮಾತೃಭಾಷಾ ಪ್ರೇಮಕ್ಕೆ ದ್ರೋಹವಿಲ್ಲ ಅದುಮಾತ್ರವಲ್ಲ ನಮ್ಮನ್ನು ವೃದ್ಧಾಪ್ಯದಲ್ಲಿ ವೃದ್ಧಾಶ್ರಮಕ್ಕೆ ಸೇರಿಸಲಿಲ್ಲ,ಗುರು- ಹಿರಿಯರ ಬಗ್ಗೆ ಭಕ್ತಿಸಂಸ್ಕಾರ,ಶಾಲೆ ಕಲಿಕೆಗಿಂತ, ನಮ್ಮನ್ನು ನೋಡಿ ಕಲಿಯುತ್ತಾರೆ.ಎಂಬುದು ನಿಮಗೆ ಅರ್ಥವಾಗುವುದೇ ಇಲ್ಲ..ಇನ್ನೂ ನನ್ನಾಕೆ ಪೌಡರ್ ಪಾರ್ಲರ್ ಕಾಣದಾಕೆ ,ನನ್ನ ಮುನಿಸು, ನನ್ನ ನೋವು ಸಹಿಸು ವಾಕೆ.ಚಿಕ್ಕ ಚಿಕ್ಕ ವಿಚಾರಕ್ಕೆ ವಿಚ್ಛೇದನ ಕೇಳುವ ನಿಮ್ಮ ವಿಚಾರ ದಡಿಯಲ್ಲಿ ಸುಸಂಸ್ಕೃತಳು ಈಕೆ. ಇನ್ನು ವರ್ಷಕ್ಕೊಮ್ಮೆ ಬರುವ ಜಾತ್ರೆಯ ಸಡಗರ, ಸದ್ದಿಲ್ಲದೇ ಸಾಗುತ್ತಿದೆ ನಿರೀಕ್ಷಿಸದೆ ಆಡಂಬರ. ಹಾಗೆ, ಐದು ವರ್ಷಕ್ಕೊಮ್ಮೆ ಠಾಕುಠೀಕಾಗಿ ಬಂದು ಇಳಿಯುವಿರಿ ಕಾರಿನಲಿ,ಒಂದಷ್ಟು ಮುಗ್ಧ, ಒಂದಷ್ಟು ಪುಡಾರಿಗಳು ಮಿಂದೇಳುವ ರು ನಿಮ್ಮ ಮೋಸದ ಜಾಲದಲ್ಲಿ. ಓಟು, ನೋಟು ,ಬಿರಿಯಾನಿ ಮೋಹದ ಬರಾಟೆ, ನುಚ್ಚುನೂರಾಗಿಸಿ ನಮ್ಮಯ ನೆಮ್ಮದಿಯ ಕೋಟೆ . ನಿಮ್ಮಲ್ಲಿ ಯಾರೊಬ್ಬರಿಗೋ ಜಯಭೇರಿ,ತದನಂತರ ಯಾರಿಲ್ಲ ನಮ್ಮ ತಿಳಿಯಲು ನೋವಿನ ಪರಿ. ಒಮ್ಮೆ ಬಾರದ ಮಳೆಗಾಗಿ ಬೆಳೆ ಕಳೆದುಕೊಂಡೆ ,ಇನ್ನೊಮ್ಮೆ ಬೆಳೆದ ಬೆಳೆಗೆ ಬೆಲೆ ಕಾಣದೆ ಬಳಲಿದೆ ,ಮಗದೊಮ್ಮೆ ಅತಿವೃಷ್ಟಿ ತೀವ್ರತೆಗೆ ನಲುಗಿದೆ.ಕೊನೆಗೊಮ್ಮೆ ನಿರ್ವಿಕಾರ ದಿ,ಸಾಲದ ಬಾಧೆ ತಾಳಲಾರದೆ,ನನ್ನ ನೆಲದ, ಒಂಟಿ ಮರದ ರಂಬೆಗೆ,ನಾನೇ ತಂದ ಹಗ್ಗಕ್ಕೆ ,ನನ್ನ ಕರುಳಮಂದಿ ಮರೆತು ಕೊರಳ ಕೊಡ ಬಯಸುವೆ. ಯಾರನ್ನು ದೂಷಿಸಲಿ? ****************************

“ಅನ್ನದಾತನ ಸ್ವಗತ “ Read Post »

ಅಂಕಣ ಸಂಗಾತಿ, ದೀಪದ ನುಡಿ

ಅಂಕಣ ಬರಹ ಬೆಳೆದು ದೊಡ್ಡವರಾಗುವುದೆಂದರೆ ಬೆಳೆದು ದೊಡ್ಡವರಾಗುವುದೆಂದರೆ ಪ್ರಜ್ಞೆ ಮತ್ತು ಸೂಕ್ಷ್ಮತೆಗಳನ್ನು ಕಳೆದುಕೊಳ್ಳುವುದಲ್ಲ.ಹದಿಹರೆಯದಲ್ಲಿ ಮಕ್ಕಳು ಬೆಳೆಸಿಕೊಳ್ಳುವ ಮನೋಧೋರಣೆಯನ್ನ ನಂತರ ಬದಲಿಸುವುದು ಬಹಳ ಕಷ್ಟ. ಇದೇ ಕಾರಣಕ್ಕೆ ಹದಿಹರೆಯದ ಮಕ್ಕಳ ತಾಯ್ತಂದೆಯರು ಬಹಳ ವ್ಯಥಿತರಾಗುವುದು.ಮಕ್ಕಳು ಹೇಳುವ ಒಂದು ಸಣ್ಣ ಸುಳ್ಳು , ಅವರು ತೋರುವ ಒಂದು ಸಣ್ಣ ನಿರ್ಲಕ್ಷ್ಯ ತಂದೆ ತಾಯಿಗೆ ಬಹಳ ನೋವನ್ನುಂಟುಮಾಡುತ್ತದೆ. ಮಕ್ಕಳೇ ಅವರ ಜಗತ್ತು.ಮಕ್ಕಳಿಗಾಗೇ ಬದುಕು ಸವೆಸುವ ತಾಯ್ತಂದೆಯರನ್ನ ಮಕ್ಕಳು ಅರ್ಥ ಮಾಡಿಕೊಳ್ಳುವಲ್ಲಿ ಬಹಳಷ್ಟು ಸಲ ಎಲ್ಲೋ ಸೋಲುತ್ತಾರೆ. ಹಾಗೊಮ್ಮೆ ಅರ್ಥ ಮಾಡಿಕೊಂಡರೂ ಕಾಲ ಮಿಂಚಿ ಹೋಗಿರುತ್ತದೆ. ಆ ಮಕ್ಕಳು ಮುಂದೆ ತಾಯಿಯ ಅಥವಾ ತಂದೆಯ ಪಾತ್ರ ಧರಿಸಿದಾಗ ಹಳೆಯದೆಲ್ಲ ನೆನಪಾಗಿ ತೀವ್ರ ಪಶ್ಚಾತ್ತಾಪ ಪಡುತ್ತಾರೆ. ನಮ್ಮ ಮಕ್ಕಳು ಎಂದೂ ಕೆಟ್ಟ ಹಾದಿ ಹಿಡಿಯಲಾರರು ಎಂಬ ನಂಬಿಕೆಯಿಂದಲೇ ತಾಯ್ತಂದೆಯರು ಮಕ್ಕಳಿಗೆ ಸ್ವಾತಂತ್ರ್ಯ ನೀಡುವುದು. ಮಕ್ಕಳ ಯಾವುದೋ ಒಂದು ನಡೆಯಿಂದ ಈ ನಂಬಿಕೆಗೆ ಘಾಸಿಯಾದರೂ ಮತ್ತೆ ಅದನ್ನು ಗಳಿಸಲು ಸಾಧ್ಯವೇ ಇಲ್ಲ.     ಹದಿಹರೆಯದ ಮಕ್ಕಳ ದೃಷ್ಟಿಯಲ್ಲಿ ತಂದೆ ತಾಯಿಯರೆಂದರೆ ಸದಾ ತಮ್ಮ ಬಗ್ಗೆ ಪತ್ತೇದಾರಿ ಕೆಲಸ ಮಾಡುವವರು, ಅನುಮಾನಪಡುವವರು…ಸದಾ ಬೆನ್ನ ಹಿಂದೆ ಹಿಂಬಾಲಿಸುವವರು…ಸದಾ ತಮ್ಮ ಮೊಬೈಲ್ , ನೋಟ್ ಬುಕ್ ಗಳನ್ನ ಕಪಾಟು ,ಚೀಲಗಳನ್ನ ಹುಡುಕುವ ಪತ್ತೇದಾರರು..ನಾನು ದೊಡ್ಡವನಾದರೂ ನನ್ನ ಮೇಲೆ ನಂಬಿಕೆಯಿಲ್ಲ  , ಪ್ರೈವೆಸಿ ಕೊಡುವುದಿಲ್ಲ ಎನ್ನುವುದು ಬಹಳ ಮಕ್ಕಳ ದೂರು .ಆದರೆ ಇಲ್ಲಿ ತಾಯ್ತಂದೆಯರು ನಿಜಕ್ಕೂ ತಮ್ಮ ಮಕ್ಕಳ ಬಗೆಗಿನ ಕಾಳಜಿಯಿಂದ ಇಷ್ಟೆಲ್ಲಾ ಮಾಡುತ್ತಾರೆಯೇ ಹೊರತು ಅಪನಂಬಿಕೆಯಿಂದಲಲ್ಲ ಎನ್ನುವುದು ಆ ಬೆಳೆದ ಮಕ್ಕಳಿಗೆ ಅರ್ಥವಾಗುವುದೇ ಇಲ್ಲ.        ತಮ್ಮ ಮಕ್ಕಳ ನಡೆನುಡಿಯಲ್ಲಾಗುವ ಸೂಕ್ಷ್ಮ ಬದಲಾವಣೆಗಳೂ ತಾಯ್ತಂದೆಯರ ಹೃದಯಕ್ಕೆ ಕೂಡಲೇ ಪತ್ತೆಯಾಗಿಬಿಡುತ್ತದೆ.ಒಂದಾನೊಂದು ಕಾಲದಲ್ಲಿ ಅವರೂ ಮಕ್ಕಳೇ ಆಗಿದ್ದವರಲ್ಲವೆ!! ಈ ಆಧುನಿಕ ,ಡಿಜಿಟಲ್ ಯುಗದಲ್ಲಿ  ಎಲ್ಲರೂ ಅವರವರದೇ  ಆದ ಲ್ಯಾಪ್ ಟಾಪ್, ಮೊಬೈಲ್ ಗಳ ಹಿಡಿದು ಕೆಲಸ , ಆನ್ ಲೈನ್ ಕಲಿಕೆ , ಸೋಷಿಯಲ್ ಮೀಡಿಯಾ ಎಂದು ಮುಳುಗಿ ಹೋಗಿರುವಾಗ ಮಕ್ಕಳ ಬಗ್ಗೆ ಕಾಳಜಿ ಹೊಂದಿರುವ ಪೋಷಕರು ನಿಜಕ್ಕೂ ಆತಂಕಕ್ಕೆ ಒಳಗಾಗುತ್ತಾರೆ. ಬದುಕು ನಿಜಕ್ಕೂ  ಅಷ್ಟು ಸಲೀಸಲ್ಲ…ಹದಿಹರೆಯಕ್ಕೆ ಬಂದರೂ ಸಹಾ ಮಕ್ಕಳು ಈ ಜಗತ್ತಿಗೆ , ಈ ಬದುಕಿನ ಅನುಭವಗಳಿಗೆ ಅಪರಿಚಿತರೇ!!             ಅಪ್ಪ-ಅಮ್ಮದಿರ ಬಗ್ಗೆ ಇದಕ್ಕಾಗಿ ಅಸಮಾಧಾನಗೊಳ್ಳದೆ ನಿನಗೇನು ಗೊತ್ತು  ಈ ಜನರೇಷನ್ ಎಂದು ಹೀಯಾಳಿಸದೆ ಮಕ್ಕಳು ತಮ್ಮ ತಾಯ್ತಂದೆಯರ ವಯಸ್ಸು ,ಅನುಭವಗಳನ್ನ ಗೌರವಿಸಬೇಕಿದೆ. ತಾಯ್ತಂದೆಯರೇ ಬದುಕಲ್ಲ ..ಆದರೆ ತಾಯಗತಂದೆಯರು ಬದುಕಿನ ಬಹುಮುಖ್ಯ ಭಾಗ ಎಂಬುದನ್ನು ಮಕ್ಕಳು ಅರಿಯಬೇಕಿದೆ. ಒಂದೆಡೆ ಕುದಿರಕ್ತದ ವಯಸ್ಸು ಇನ್ನೊಂದೆಡೆ ಸ್ನೇಹಿತರು ಇವೆರಡರ ನಡುವೆ ಅಪ್ಪ ಅಮ್ಮದಿರಿಗೂ ಸಮಯ ಕೊಡುವ ,ಗೌರವ ಕೊಡುವ ಮನೋಭಾವವನ್ನು ಮಕ್ಕಳು ಬೆಳೆಸಿಕೊಳ್ಳಬೇಕಿದೆ. ಅಪ್ಪ ಅಮ್ಮದಿರು ಮಕ್ಕಳಿಗೆ ಸ್ನೇಹಿತರೂ ಆಗಬಲ್ಲರೂ ಪೋಷಕರೂ ಆಗಬಲ್ಲರು .ಆದರೆ ಸ್ನೇಹಿತರೆಂದಿಗೂ ಅಪ್ಪ ಅಮ್ಮನ ಸ್ಥಾನ ತುಂಬಲು ಸಾಧ್ಯವೇ ಇಲ್ಲ.               ತಾಯ್ತಂದೆಯರಿಂದ ಮುಚ್ಚಿಟ್ಟ ವಿಷಯಗಳು , ಹೇಳಿದ ಸುಳ್ಳುಗಳು ಎಂದಿಗೂ ಮಕ್ಕಳನ್ನು ರಕ್ಷಿಸುವುದಿಲ್ಲ. ಹೀಗೆ ಮಾಡುವುದರ ಮೂಲಕ ಮಕ್ಕಳು ಕೇವಲ ತಮ್ಮ  ತಾಯ್ತಂದೆಯರಿಗೆ ಮೋಸ ಮಾಡುವುದಲ್ಲ ತಮಗೆ ತಾವೇ ಮೋಸ ಮಾಡಿಕೊಳ್ಳುತ್ತಿದ್ದೇವೆಂದು ಅರಿವಾಗುವ ಹೊತ್ತಿಗೆ ಬಹಳ ತಡವಾಗಿಬಿಟ್ಟಿರುತ್ತದೆ.ಮಕ್ಕಳು  ಬೆಳೆದಂತೆಯೇ ತಾಯ್ತಂದೆಯರೂ ಬೆಳೆಯುತ್ತಾರೆಂಬುದನ್ನು ಮಕ್ಕಳು ಮರೆಯಬಾರದು. ವಯಸ್ಸು ಹೆಚ್ಚುತ್ತಿದ್ದಂತೆ ಆ ತಾಯ್ತಂದೆಯರ ಹೃದಯ ಬಯಸುವುದು ಮಕ್ಕಳ ಪ್ರೀತಿಯನ್ನು ಕಾಳಜಿಯನ್ನು. ಮಕ್ಕಳನ್ನು ಬೆಳೆಸುವುದು ನಮ್ಮ ಕರ್ತವ್ಯ ಅವರಿಂದ ಏನನ್ನೂ ಬಯಸಬಾರದು ,ನಿರೀಕ್ಷಿಸಬಾರದು  ಎಂದು ಎಷ್ಟೇ ಹೇಳಿಕೊಂಡರೂ ಆ ಜೀವಗಳು ಮಕ್ಕಳಿಗಾಗಿಯೇ ಬದುಕು ಸವೆಸಿ ಜೀವನದ ಸಂಧ್ಯೆಯಲ್ಲಿ ನಿಂತಾಗ ಬೇರಾವ ವಸ್ತು, ಹಣದ ನಿರೀಕ್ಷೆ ಅವರಿಗಿರುವುದಿಲ್ಲ. ಮಕ್ಕಳ ಪ್ರೀತಿ ಮತ್ತು ಸಾನಿಧ್ಯ ಎರಡೇ ಅವರ ನಿರೀಕ್ಷೆಗಳು!.                 ಸದಾ ಅಪ್ಪ ಅಮ್ಮದಿರ ಜೊತೆ ಮಕ್ಕಳು ಇರಲಾಗದು ರೆಕ್ಕೆ ಬಂದ ಹಕ್ಕಿಗಳು ಗೂಡು ತೊರೆದು ಹಾರಲೇ ಬೇಕು .ಅದೇ ಪ್ರಕೃತಿನಿಯಮ.ಆದರೆ ಹಾಗೆ ಹಾರಿ ಹೋದರೂ ಆಗಾಗ್ಗೆ ಮರಳಿ ಗೂಡಿಗೆ ಬಂದು ಕಾಳಜಿ ತೋರುವುದು ಮಾನವನ ಬದುಕಿನ ನಿಯಮವಾಗಬೇಕು.                 ಎಷ್ಟೋ ಬಾರಿ  ಮಕ್ಕಳು ನಾನೇನು ಹುಟ್ಟಿಸು ಎಂದು ಕೇಳಿದ್ದೆನಾ ಎಂದು ಅಪ್ಪ ಅಮ್ಮನನ್ನು ಕೇಳುವುದೂ ಇದೆ. ಈ ಇಂಥ ಮಾತುಗಳಿಂದ ಆ ಹಿರಿಜೀವಗಳಿಗಾಗುವ ಆಘಾತ ಆ ಮಕ್ಕಳಿಗೆ ಅರ್ಥವಾಗಬೇಕಾದರೆ ಅವರೂ ಅಪ್ಪ ಅಮ್ಮದಿರಾಗಬೇಕು!!!ಆದರೆ ಬಹಳಷ್ಟು ಸಂದರ್ಭಗಳಲ್ಲಿ ಅಪ್ಪ ಅಮ್ಮನ ಮನ ನೋಯಿಸಿದ ಮಕ್ಕಳು ನಂತರ ಅರಿತು ಪಶ್ಚಾತ್ತಾಪ ಪಡುವ ಹೊತ್ತಿಗೆ ಅಲ್ಲೇನೂ ಉಳಿದಿರುವುದಿಲ್ಲ..ಗೋಡೆಗಂಟಿದ ಅಪ್ಪ ಅಮ್ಮನ  ಮೂಕ ಭಾವ ಚಿತ್ರಗಳ ಬಿಟ್ಟು!!                 ಬರಿದೆ ಪಶ್ಚಾತ್ತಾಪದಿಂದ ಪ್ರಯೋಜನವಿಲ್ಲ.ಹಿರಿಮರಗಳು ಉರುಳಿದ ಜಾಗದಲ್ಲಿ  ಕುಡಿಸಸಿಯಲ್ಲದೇ ಮತ್ತೊಮ್ಮೆ ಏಕಾಏಕಿ ಹಿರಿಯ ಮರವೊಂದು ಮೂಡದು.ಇಂದಿನ  ಬಹುತೇಕ ಮಕ್ಕಳಿಗೆ ಡಿಜಿಟಲ್ ಪ್ರಪಂಚ ಗೊತ್ತಿದೆ, ಸೋಷಿಯಲ್ ಮೀಡಿಯಾ ಗೊತ್ತಿದೆ, ಗೂಗಲ್ ಸರ್ಚ್ ಗೊತ್ತಿದೆಯೆ ವಿನಃ ಬದುಕಿನ ಭಾಷ್ಯ ಗೊತ್ತಿಲ್ಲ.ನಮ್ಮಿಷ್ಟದಂತೆ ಬದುಕುವುದೇ ಬದುಕು ಎನ್ನುವ ಕುರುಡು ಅಹಂ ಅವರನ್ನು ಹಾದಿ ತಪ್ಪಿಸುತ್ತಿದ್ದರೂ ಅದೇ ಸರಿಯಾದ ಹಾದಿ ಎಂದು ಭ್ರಮೆಯಲ್ಲಿ ನಡೆಯುತ್ತಿರುತ್ತಾರೆ. ದುರಂತವೆಂದರೆ ಗೂಗಲ್ ಗಿಂತ ಹೆಚ್ಚಿನ ಜ್ಞಾನ ಇಲ್ಲದ ಅಪ್ಪ ಅಮ್ಮ ಬದುಕಿನ ಅನುಭವಗಳನ್ನು ಬೊಗಸೆ ಬೊಗಸೆ ಮೊಗೆದು ಕುಡಿದಿದ್ದಾರೆ ,ಒಮ್ಮೆ ಕೈ ಚಾಚಿದರೆ ತಮ್ಮ ಬೊಗಸೆಗೂ ಅದನ್ನ ಧಾರೆಯೆರೆಯಲು ಕಾತರರಾಗಿದ್ದಾರೆಂಬ ಸತ್ಯ ಬಹಳಷ್ಟು ಮಕ್ಕಳಿಗೆ ಗೊತ್ತೇ ಆಗದು.                  ಬಹಳ ಹಿಂದೆ ಸಹೋದ್ಯೋಗಿಯೊಬ್ಬರು ಹೇಳಿದ ಮಾತು ನೆನಪಾಗುತ್ತಿದೆ.”ಮಕ್ಕಳನ್ನ ದೊಡ್ಡ ಓದು ಓದಿಸಬಾರದು…ವಿದೇಶ ಸೇರಿ ಕೊನೆಗಾಲದಲ್ಲಿ  ನೋಡಲೂ ಬಾರದ ಸ್ಥಿತಿ ಬರೋದೇ ಬೇಡ..ಸುಮ್ನೆ ನಮ್ಮಂತೆ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಹತ್ತಿರವೇ ಇರಲಿ ”  ಸದಾ ಮಕ್ಕಳ ಏಳಿಗೆಯನ್ನೇ ಬಯಸುವ ಅದಕ್ಕಾಗಿ ಜೀವ ತೆರಲೂ ಸಿದ್ಧವಿರಬೇಕಾದ ತಂದೆಯೊಬ್ಬ ಹೀಗೆ ಹೇಳಿ ತಾಯಿ ಅದಕ್ಕೆ ಹೂಗುಟ್ಟುವ ಪರಿಸ್ಥಿತಿ  ಬಂದಿದೆಯೆಂದರೆ ನಾವಿರುವುದು ಎಂಥಹಾ ದುರಂತದ ಕಾಲದಲ್ಲಿ ಎಂದು ಖೇದವಾಗುತ್ತದೆ. ಆ ತಂದೆ ಹೀಗೆನ್ನಬೇಕಾದರೆ ಸುತ್ತ ಮುತ್ತ ನಡೆವ ಅದೆಷ್ಟು ಘಟನೆಗಳನ್ನ ನೋಡಿ ಆ ಮನಸ್ಸು ರೋಸಿಹೋಗಿರಬೇಕು!!              ನಮ್ಮ ಕಾಲ ಬೇರೆ ನಿಮ್ಮ ಕಾಲ ಬೇರೆ ..ಅದೆಲ್ಲ ಈಗ ಮೂರು ಕಾಸಿಗೂ ಬಾರದು ಎಂದು ಹಿರಿಯರ ಹಿತವಚನಗಳ ಮೂಲೆಗೊತ್ತುವ ಮಕ್ಕಳಿಗೆ  ಅಪ್ಪ ಅಮ್ಮನೆಂದರೆ ಶತಮಾನ ಹಳೆಯ ಧೂಳು ತುಂಬಿಕೊಂಡ ಮೂಟೆಗಳು!!  ದುರಂತವೆಂದರೆ ಇದೇ ಮಕ್ಕಳಿಗೆ ಮುಂದೊಂದು  ದಿನ ಅವರ ಮಕ್ಕಳಿಂದಲೂ ಇಂತಹುದೇ  ಕಟು ಅನುಭವ ಕಾದಿದೆಯೆನ್ನುವ ಅರಿವೂ ಇಲ್ಲದಿರುವುದು.              ದೀಪ ತಾನು ಬೆಳಗಿದರಷ್ಟೆ ಮತ್ತೊಂದು ದೀಪವನ್ನು ಬೆಳಗಿಸಬಲ್ಲುದು. ತಾಯ್ತಂದೆಯರ ಬಗ್ಗೆ ಅಕ್ಕರೆ, ಗೌರವ ಹೊಂದಿರುವ ಮತ್ತು ಅದನ್ನು ಕೊನೆಯವರೆಗೂ ಉಳಿಸಿಕೊಂಡು ಹೋಗುವ ಮಕ್ಕಳಷ್ಟೇ ಭವಿಷ್ಯದಲ್ಲಿ ತಮ್ಮ ಮಕ್ಕಳಿಗೂ ಅದನ್ನು ಕಲಿಸಲು ಸಾಧ್ಯವಾಗುವುದು.       ಎಲ್ಲರೂ ಶ್ರವಣಕುಮಾರನಾಗಲಿ, ಶ್ರೀರಾಮನಾಗಲೀ ,ಭಕ್ತಪುಂಡಲೀಕನಂತಾಗಲೀ ತಾಯ್ತಂದೆಯರ ಸೇವೆ ಮಾಡಲು ಸಾಧ್ಯವಿಲ್ಲ ನಿಜ. ಆದರೆ ಸದಾ ತಾನು ನಿನ್ನೊಂದಿಗಿರುವೆ ಎಂಬ ಸಂತಸದಾಯಕ ಭಾವವನ್ನು  ಹೆತ್ತವರಲ್ಲಿ ಉಂಟುಮಾಡಲು  ಸೋಲಬಾರದು.                 ಮಕ್ಕಳೆಲ್ಲ ತಮ್ಮ ತಾಯ್ತಂದೆಯರ ಪಾಲಿನ ದೀಪವಾಗಲಿ .ಭವಿಷ್ಯದಲ್ಲಿ ಹೊಸ ದೀಪಗಳ ಹಚ್ಚುವ ಬೆಳಗುವ ಹಣತೆಗಳಾಗಲಿ.ಸಾಲು ದೀಪಗಳು ಬೆಳಗಿ ಸುತ್ತಮುತ್ತಲಿರುವ ಕತ್ತಲೆಯ ಮಣಿಸುವಂತಾಗಲಿ.      ತುಷ್ಟಯಾಂ ಮಾತರಿ ಶಿವೆ ತುಷ್ಟೇ ಪಿತರೀ ಪಾರ್ವತಿ | ತವ ಪ್ರೀತಿರ್ಭವೇದೇವಿ ಪರಬ್ರಹ್ಮ ಪ್ರಸೀದತಿ || ******************************************* ಶುಭಾ ಎ.ಆರ್  (ದೇವಯಾನಿ) ಕಾಲೇಜು ದಿನಗಳಿಂದ ದೇವಯಾನಿ ಹೆಸರಿನಲ್ಲಿ ಕಥೆ ,ಕವನ ,  ಅನುವಾದಿತ ಕಥೆ , ಪ್ರಬಂಧ ಬರೆಯುತ್ತಿದ್ದು ತುಷಾರ, ಮಯೂರ ,ಕಸ್ತೂರಿ , ಪ್ರಜಾವಾಣಿ, ವಿಕ್ರಮ , ಉತ್ಥಾನ, ಉದಯವಾಣಿ, ತರಂಗ ,ವಿಜಯ ಕರ್ನಾಟಕ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ವೃತ್ತಿಯಿಂದ ಗಣಿತ ವಿಜ್ಞಾನ ಪ್ರೌಢಶಾಲಾ ಶಿಕ್ಷಕಿ.ಇಪ್ಪತ್ತನಾಲ್ಕು ವರ್ಷಗಳಿಂದ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿ ಹಲವಾರು ಸಂಪನ್ಮೂಲ ಸಾಹಿತ್ಯವನ್ನು ರಚಿಸಿದ್ದು ಹಲವಾರು ರಾಜ್ಯಮಟ್ಟದ ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಶಾಲಾ ಮಕ್ಕಳಿಗಾಗಿ ” ಧರೆಯನುಳಿಸುವ ಬನ್ನಿರಿ, ಮೂರು ವೈಜ್ಞಾನಿಕ ನಾಟಕಗಳು” , “ತುಟಿ ಬೇಲಿ ದಾಟಿದ ನಗು” ಕವನ ಸಂಕಲನ ,  “ತುಂಡು ಭೂಮಿ ತುಣುಕು ಆಕಾಶ”  ಕಥಾ ಸಂಕಲನ ಪ್ರಕಟಿಸಿದ್ದು ಅನುವಾದಿತ ಕಥಾ ಸಂಕಲನ ಅಚ್ಚಿನಲ್ಲಿರುತ್ತದೆ   

Read Post »

You cannot copy content of this page

Scroll to Top