ಸಿನಿಮಾ ಅಲ್ಲ… ಜೀವನ ಮಧುರಾ ಕರ್ಣಮ್ ಬಾಲಸೂರ್ಯ ತನ್ನ ಹೊಂಗಿರಣಗಳನ್ನು ಸೂಸುತ್ತಿದ್ದಂತೆ ರಾಜರಥದ ಹೊರಭಾಗದಲ್ಲಿ ಅಂಟಿಸಿದ್ದ ಗಣೇಶನ ಚಿತ್ರದ ಮೇಲೆ ಬೆಳಕು ಪ್ರತಿಫಲಿತವಾಗಿ ಗಣೇಶ ಹೊಳೆಯತೊಡಗಿದ್ದ. ಅದೇ ತಾನೆ ತಟ್ಟೆ ಇಡ್ಲಿ ತಿಂದು ‘ಅ..ಬ್’ಎಂದು ತೇಗಿ ಮೇಲೊಂದು ಲೋಟ ಕಾಫಿ ಇಳಿಸಿ ಸಂತೃಪ್ತನಾಗಿ ಒಮ್ಮೆ ಹೊಟ್ಟೆಯ ಮೇಲೆ ಕೈಯಾಡಿಸಿಕೊಂಡೆ. “ನಿತ್ಯ ಹೊರಗೇ ಏಕೆ ತಿಂಡಿ ಮಾಡಾದು? ಮನೆಗೆ ಬಂದ್ರೆ ಒಳ್ಳೆ ತಿಂಡಿ ಹಾಕಾಕಿಲ್ವ?”ಎಂಬ ಅಮ್ಮನ ಕೋಪದ ನುಡಿಗಳು ನೆನಪಾಗಿ ನಗು ಸೂಸಿತು. ಬೆಳಿಗ್ಗೆ ಆರು ಗಂಟೆಗೆಲ್ಲ ಸ್ನಾನ ಮಾಡಿ ನನ್ನ ರಾಜರಥವನ್ನು ಎತ್ತಿಕೊಂಡು ಹೊರಬಿದ್ದು ಯಶವಂತಪುರದ ಸ್ಟೇಷನ್ ಬಳಿ ಬಂದರೆ ಬೇಕಾದಷ್ಟು ಬಾಡಿಗೆಗಳು. ತಿಂಡಿಗೆ ಕಾಯ್ದರೆ ಮನೆಯಲ್ಲೇ ಹತ್ತಾಗುತ್ತದೆ. ಅಲ್ದೇ ಪಾಪ.. ಅಮ್ಮ ಬೇಗ ಬೆಳಿಗ್ಗೆ ಎದ್ದು ಮಾಡಬೇಕು. ಮನೆಯ ಯೋಚನೆ ಕೊಡವಿ ನನ್ನ ರಾಜರಥವನ್ನು ಪ್ರೀತಿ..ಅಭಿಮಾನದಿಂದ ನೋಡಿದೆ. ಹೌದು..ನನ್ನ ರಾಜರಥ..ಕುದುರೆ ..ವಾಹನ ಎಲ್ಲ ಈ ಆಟೋ ಆಗಿತ್ತು. ನನ್ನ ಜೀವನಾಧಾರ ಎಂದರೂ ತಪ್ಪಿಲ್ಲ. ಹಿಂದೆ ಶಂಕರನಾಗ್‌ರ ‘ಆಟೋರಾಜ’ಚಿತ್ರದ ಪೋಸ್ಟರ್ ಸಣ್ಣದಾಗಿ ರಾರಾಜಿಸುತ್ತಿತ್ತು. ಆಟೊ ಚಾಲಕರೆಲ್ಲ ಇಷ್ಟ ಪಡುವ ಹೆಮ್ಮೆಯ ಚಿತ್ರವದು. ಪಾಪ..ಸದಾ ಟ್ರಾಫಿಕ್‌ನಲ್ಲೇ ಇರುವುದರಿಂದ ಮೇಲೆಲ್ಲ ದೂಳು ಹರಡಿತ್ತು. ತುಸು ದೂರ ಕ್ರಾಸ್ ರೋಡಿನಲ್ಲಿ ತಂದು ನಿಲ್ಲಿಸಿ ಹಳೆಯ ಬಟ್ಟೆಯಿಂದ ಒರೆಸಲಾರಂಭಿಸಿದೆ. ಆಗಲೇ ಅವಳು “ಅಮ್ಮಾ..”ಎಂದು ಕೂಗಿಕೊಂಡು ಅತ್ತಲಿಂದ ಓಡಿ ಬಂದದ್ದು. ನಾನೂ ಗಾಬರಿಯಿಂದ “ಏನು..ಏನಾಯ್ತು?”ಎಂದು ಕೇಳಿದೆ. ಉತ್ತರಿಸಲಾರದೆ ಕೈ ತೋರಿದಳು. ಪುಟ್ಟ ಹಾವೊಂದು ಅವಳಿಗಿಂತ ಹೆಚ್ಚು ಹೆದರಿಕೊಂಡು ಸರಸರನೆ ಸರಿದು ಹೋಗುತ್ತಿತ್ತು. ‘ಒಹ್! ಇದಕ್ಕಾ.. ಇವಳು ಇಷ್ಟು ಹೆದರಿ ಕೂಗಿಕೊಂಡದ್ದು..’ಎಂದುಕೊಂಡೆ. ದಾರಿಯಲ್ಲಿ ಜನರಾರೂ ಇರಲಿಲ್ಲ. ಸೀದಾ ಬಂದವಳು ನನ್ನ ಆಟೋ ಏರಿ ಕುಳಿತಳು. ಒಂದು ನಿಮಿಷ ಸುಮ್ಮನಿದ್ದು ನಾನು “ಅದು ಹೋಯಿತಮ್ಮ”ಎಂದೆ. ಅತ್ತಲಿಂದ ಉತ್ತರವಿಲ್ಲ. ಸೂಕ್ಷ್ಮವಾಗಿ ಅವಳನ್ನು ಗಮನಿಸಿದೆ. ಸೌಂರ‍್ಯದ ಖನಿ ಎಂದು ಹೇಳಲಾಗದಿದ್ದರೂ ಅಂದವಾಗಿದ್ದಳು. ಹಾಲು ಬಣ್ಣ, ನೀಳ ಮೂಗು, ಅರಳು ಕಂಗಳಲ್ಲಿ ಮಡುಗಟ್ಟಿದ್ದ ನೀರು, ಅಗಲ ಬಾಯಿಯಲ್ಲಿ ಅದರುತ್ತಿದ್ದ ಕೆಂಪು ತುಟಿಗಳು, ಹಣೆಯ ಮೇಲೆ ಸಾಲುಗಟ್ಟಿದ್ದ ಬೆವರ ಹನಿಗಳು.. ಅವಳಿನ್ನೂ ಕಂಪಿಸುತ್ತಿದ್ದಳು. ತುಸು ಮೃದುವಾಗಿ “ಮೇಡಮ್.. ಹೆದರಬೇಡಿ. ಅದು ಹೊರಟು ಹೋಯಿತು. ಇಳಿಯಿರಿ”ಎಂದೆ. ಅವಳು ನಡಗುತ್ತಲೇ “ಉಹ್ಞೂಂ.. ಹೆಬ್ಬಾಳಕ್ಕೆ ನಡೀರಿ” ಎಂದಳು. “ನಾನಲ್ಲಿಗೆ ಬರಲ್ಲ ಮೇಡಮ್. ಏರಿಯಾ ಸರಿಯಾಗಿ ಗೊತ್ತಿಲ್ಲ”ಎಂದೆ. ಚಿಕ್ಕ ಮಗು ರಚ್ಚೆ ಹಿಡಿದು ಕೇಳುವಂತೆ “ನಾನೀಗ ಇಳಿಯಲ್ಲ. ಕೆಳಗೆ ಕಾಲಿಡಲೂ ಹೆದರಿಕೆ ನಂಗೆ. ನಡೀರಿ.. ಪ್ಲೀಸ್..”ಎಂದು ಅಂಗಲಾಚಿದಳು. ಛೆ! ಇಂದು ಬೆಳಿಗ್ಗೆ ಯಾರ ಮುಖ ನೋಡಿದ್ದೆನೋ ಎನಿಸಿದರೂ ಅವಳ ಸ್ಥಿತಿ ಕಂಡು ಅಯ್ಯೋ.. ಎನಿಸದಿರಲಿಲ್ಲ. ಸುಮ್ಮನೆ ಒಳಗೆ ಕುಳಿತು ಮೀಟರ್ ಹಾಕಿ ಗಾಡಿ ಶುರು ಮಾಡಿದೆ. ಕನ್ನಡಿಯಲ್ಲಿ ಅವಳ ಪ್ರತಿಬಿಂಬ ಕಾಣುತ್ತಿತ್ತು. ಸ್ವತಂತ್ರವಾಗಿ ಹಾರಾಡಲು ಬಿಟ್ಟ ಕೂದಲು, ಕೈಗೆ ದುಬಾರಿ ವಾಚು, ಬೆಲೆ ಬಾಳುವ ಕ್ಲಚ್ ರೂಪದ ಪರ್ಸು.. ಸ್ಥಿತಿವಂತರ ಮನೆಯ ಹುಡುಗಿ ಎನ್ನುವುದರಲ್ಲಿ ಅನುಮಾನವೇ ಇಲ್ಲ. ವಿಳಾಸ ಹೇಳಲು ತಡವರಿಸುತ್ತಿದ್ದವಳನ್ನು “ಸಣ್ಣ ಪುಟ್ಟದ್ದಕ್ಕೆಲ್ಲಾ ಇಷ್ಟು ಹೆದರಬಾರದು ಮೇಡಮ್. ಮುಂದೆ ಜೀವನದಲ್ಲಿ ಎಂಥೆಂಥದ್ದಕ್ಕೆಲ್ಲಾ ತಲೆ ಕೊಡಬೇಕಾಗುತ್ತೆ. ‘ಧೈರ್ಯಂ ಸರ್ವತ್ರ ಸಾಧನಂ’ ಎಂಬಂತೆ ಧರ‍್ಯ ತಂದುಕೊಳ್ಳಿ” ಎಂದು ಸಾಂತ್ವನಿಸಿದಾಗ ಕೊಂಚ ತಹಬಂದಿಗೆ ಬಂದಿದ್ದಳು. ‘ಭರ್‌ರ್..’ಎಂದು ಓಡಿದ ನನ್ನ ರಥ ‘ವೀರಪ್ಪನ ಪಾಳ್ಯ’ಎಂದು ಬರೆದ ಕಮಾನಿನ ಮೂಲಕ ಹಾದು ತಿರುವುಗಳಲ್ಲಿ ತಿರುಗಿ ಅವಳು ತೋರಿಸಿದ ಭವ್ಯ ಬಂಗಲೆಯ ಮುಂದೆ ನಿಂತುಕೊಂಡಿತು. ಇಳಿದವಳು ಮೀಟರ್‌ನತ್ತ ನೋಡುವ ಗೊಡವೆಗೂ ಹೋಗದೇ ಐನೂರರ ನೋಟೊಂದನ್ನು ಕೊಟ್ಟು “ಥ್ಯಾಂಕ್ಸ.. ತುಂಬಾ ಥ್ಯಾಂಕ್ಸ”ಎಂದು ಹೊರಟು ಬಿಟ್ಟಳು. ರ‍್ರೀ.ಮೇಡಮ್, ಚಿಲ್ಲರೆನಾರೂ ತೊಗೊಳ್ಳಿ”ಎಂದು ಕೂಗಿದೆ. ತೆಗೆದುಕೊಂಡವಳು ಮನೆಯತ್ತ ನಾಲ್ಕು ಹೆಜ್ಜೆ ಹಾಕಿ ತಿರುಗಿ ನನ್ನತ್ತ ನೋಡಿ ಹೂನಗು ಬೀರಿದಳು. ಮೋಡ ಕರಗಿ ಮಳೆಯಲ್ಲಿ ಮಿಂದ ಹೂ ಶುಭ್ರವಾಗಿ ನಗುವಂತೆ.. ಹಾವು ನೋಡಿ ಹೆದರಿ ಕಂಪಿಸಿ ಕಣ್ತುಂಬಿದ ಕುರುಹೂ ಇರದಂತೆ.. ನನಗೆ ಅಚ್ಚರಿಯೊಂದಿಗೆ ಯಾವುದೋ ಪುಳಕದಲ್ಲಿ ಮಿಂದ ಭಾವ. ಒಂದೊಂದೇ ಹೆಜ್ಜೆಯನ್ನಿಡುತ್ತ ಮನೆಯೊಳಗೆ ನಡೆಯುವಾಗ ಮತ್ತೊಮ್ಮೆ ತಿರುಗಿ ಕೈ ಮಾಡಿದಳು. ನಾನೂ ಮುಗುಳ್ನಕ್ಕು ಕೈ ಮಾಡಿದೆ. ಮನಸ್ಸಿಗೆ ಎಂದೂ ಇಲ್ಲದ ವಿಚಿತ್ರ ಸಿಹಿ ಅನುಭವ. ಅದೆಂಥ ಆಕರ್ಷಣೆಯೋ.. ಗೊತ್ತಿಲ್ಲ. ಅದು ಅಲ್ಲಿಗೆ ಮುಗಿದ ಅಧ್ಯಾಯವಾಗಿದ್ದರೆ ಬೆಳೆದು ಕಥೆಯಾಗುತ್ತಿರಲಿಲ್ಲ. ನಾನು ನಿಮಗೆ ಹೇಳಬೇಕಾಗೂ ಇರಲಿಲ್ಲ. ಮರುದಿನ ನಾನು ಮಹಾಲಕ್ಷ್ಮಿಲೇಔಟಿನ ಪಂಚಮುಖಿ ಆಂಜನೇಯನಿಗೆ ನಮಿಸಿ ಮೂಲೆಯಲ್ಲಿದ್ದ ಅಂಗಡಿಯಲ್ಲಿ ಚಿತ್ರಾನ್ನ ತಿಂದು.. ಕಾಫಿ ಕುಡಿದು ನನ್ನ ರಥದ ಬಳಿ ಬಂದೆ. ತುಸುದೂರದಲ್ಲಿ ಕಾಯುತ್ತ ನಿಂತವಳು ಹೂನಗು ಬೀರುತ್ತ ಹತ್ತಿರ ಬಂದಳು. ನಿನ್ನೆ ಕಂಡ ಜಾಗ.. ಅದೇ ಹುಡುಗಿ..ಎಂದು ಖಚಿತಪಡಿಸಿಕೊಂಡೆ. “ಈವತ್ತೇನು.. ತಿಂಡಿ ಲೇಟಾ?”ಎಂದು ತುಂಬಾ ಪರಿಚಯವಿರುವಂತೆ ಕುಶಲೋಪರಿ ಆರಂಭಿಸಿದಳು. “ಹ್ಞೂಂ, ಏಳಲು ತಡವಾಯ್ತು”ಎಂದೆ. ತಟಕ್ಕನೆ ಆಟೋ ಏರಿ ಕುಳಿತು “ನಡೀರಿ ಹೆಬ್ಬಾಳಕ್ಕೆ..”ಎಂದಳು. ನಾನು ನುಸುಗೋಪದಿಂದ “ಆಗಲ್ಲ ಮೇಡಮ್.. ನಾನಲ್ಲಿಗೆ ಬರೋದೇ ಇಲ್ಲ. ನಿನ್ನೆ ನೀವು ತುಂಬಾ ಹೆದರಿಕೊಂಡಿದ್ರೀಂತ ಬಂದದ್ದಷ್ಟೇ.. ಬೇರೆ ಆಟೋ ನೋಡ್ಕೊಳಿ”ಎಂದೆ ಮಾಮೂಲಿ ಧಾಟಿಯಲ್ಲಿ. ಅವಳೂ ಭಂಡತನ ತೋರುತ್ತ “ನಾನಂತೂ ಇಳಿಯಲ್ಲ. ನನ್ನ ಬಿಟ್ಟು ಮುಂದೆ ಹೋಗಿ”ಎಂದಳು. ಕೋಪವೇರಿ “ಏನಂದುಕೊಂಡಿದ್ದೀರಿ ನನ್ನನ್ನ..?” ಎಂದು ಕೇಳಿದೆ. “ಒಬ್ಬ ಒಳ್ಳೆಯ ಸ್ನೇಹಿತ..ಹಿತೈಷಿ..” ಎಂದು ಮುದ್ದಾಗಿ ಉಲಿದಳು. ಹಾಳು ಮನಸ್ಸು ಮತ್ತೆ ಮೃದುವಾಯಿತು. ಮತ್ತೆ ಈ ಹುಡುಗಿ ಕಣ್ತುಂಬಿಕೊಂಡು ಹನಿ ಪಟಪಟನೆ ಉದುರಿಸಿದರೆ ಕಷ್ಟವೆನಿಸಿ ಸೀದಾ ಓಡಿಸಿದೆ. ಮಾಮೂಲು ದಾರಿಯಲ್ಲಿ ಓಡಿದೊಡನೆ ಹಸನ್ಮ್ಮಖಿಯಾದವಳು ದಾರಿಯಲ್ಲಿ ಪ್ರವರ ಆರಂಭಿಸಿದಳು. ಅವಳ ಹೆಸರು ಮಾನ್ಯ. ಇಂಜಿನಿಯರಿಂಗ್‌ನ ನಾಲ್ಕು ವರ್ಷಗಳು ಮುಗಿದರೂ ಕೆಲವು ವಿಷಯಗಳು ಉಳಿದುಕೊಂಡಿವೆಯಂತೆ. ಅದಕ್ಕೇ ಟ್ಯೂಟರ್ ಹತ್ತಿರ ಹೇಳಿಸಿಕೊಳ್ಳಲು ಮಹಾಲಕ್ಷ್ಮಿಲೇಔಟಿಗೆ ಬರುತ್ತಾಳೆ. ಬೆಳಿಗ್ಗೆ ಏಳು ಗಂಟೆಗೆಲ್ಲ ಅಪ್ಪನ ಡ್ರೆöÊವರ್ ಬಿಟ್ಟು ಹೋಗುತ್ತಾನೆ. ಅಪ್ಪ ಒಂಬತ್ತಕ್ಕೆಲ್ಲ ಆಫೀಸಿಗೆ ಹೊರಟುಬಿಡುತ್ತಾರೆ. ಹೀಗಾಗಿ ಮನೆ ಸೇರಲು ನನ್ನ ಬೆನ್ನು ಬಿದ್ದಿದ್ದಾಳೆ. ಅಪ್ಪ ಆದಾಯ ತೆರಿಗೆ ಅಧಿಕಾರಿ. ಭವ್ಯ ಬಂಗಲೆ ನೋಡಿಯೇ ‘ಭಾರೀ ಕುಳ’ಎನ್ನಬಹುದು. ಅಮ್ಮ ಮಹಿಳಾ ಸಮಾಜ, ಕ್ಲಬ್‌ಗಳ ಮೆಂಬರ್. ಅಣ್ಣ ಅಮೆರಿಕೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಇತ್ಯಾದಿ..ಇತ್ಯಾದಿಗಳನ್ನು ಹೇಳಿಕೊಳ್ಳುತ್ತ ತಟಕ್ಕನೇ ಅವಳು “ಇನ್ನು ಮುಂದೆ ನಿತ್ಯ ನಾನು ಟ್ಯೂಷನ್‌ಗೆ ಬರುವಷ್ಟು ದಿನ ನೀವೇ ನನ್ನನ್ನು ಮನೆಗೆ ಬಿಟ್ಟುಬಿಡಿ”ಎಂದಳು. “ಆಗಲ್ಲ ಮೇಡಮ್.. ಈ ರೂಟು ತುಂಬಾ ಬಿಝಿ ಇರುತ್ತೆ. ಟ್ರಾಫಿಕ್‌ನಲ್ಲಿ ತುಂಬಾ ಟೈಮ್ ಹಾಳಾಗುತ್ತೆ. ನೀವು ಓಲಾ..ಊಬರ್ .. ಬುಕ್ ಮಾಡಿದ್ರೆ ಬರ್ತಾರೆ”ಎಂದೆ. “ಅದೆಲ್ಲಾ ನನಗೆ ಗೊತ್ತು. ಅವರು ಬೇಡ. ನೀವೇ ಒಪ್ಕೊಳ್ಳಿ. ದುಡ್ಡು ಎಷ್ಟಾದ್ರೂ ಕೇಳಿ. ನಮ್ಮ ಏರಿಯಾದ ಶಾಪಿಂಗ ಕಾಂಪ್ಲೆಕ್ಸನಿಂದ ನಿಮಗೆ ಬೇಕಾದಷ್ಟು ಬಾಡಿಗೆಗಳೂ ಸಿಗುತ್ವೆ”ಎಂದು ಪಟ್ಟು ಹಿಡಿದಳು. ನಾನು ದ್ವಂದ್ವದಲ್ಲಿ ಮುಳುಗಿದರೂ ಯೋಚಿಸಿದೆ. ಒಳ್ಳೆ ಅವಕಾಶ. ಇಲ್ಲಿ ಕಾಯೋ ಬದಲು ಅಲ್ಲೇ ಹೊಡೀಬಹುದು. ಒಂದು ಲಾಂಗ್ ರೂಟ್ ಬಾಡಿಗೆಯಂತೂ ಫಿಕ್ಸು ಎನಿಸಿ ಒಪ್ಪಿಕೊಂಡೆ. ಹುಡುಗಿ ಫುಲ್ ಖುಷಿಯಾಗಿ“ಹರ‍್ರೇ..”ಎಂದಳು. ನನಗೋ.. ಒಮ್ಮೆ ಅಚ್ಚರಿ.. ಮತ್ತೊಮ್ಮೆ ನಗು..ಅದೇಕೆ ಈ ಹುಡುಗಿ ನನ್ನನ್ನು ಹಚ್ಚಿಕೊಳ್ಳುತ್ತಿದ್ದಾಳೆ ಎನ್ನುವ ಆತಂಕ. ದಿನಗಳು ಓಡುತ್ತಿದ್ದವು. ಬಿಡುವೇ ಇರದಂತೆ.. ಆಟೋ ಕೂಡ ಹಾಗೇ ಹೆಬ್ಬಾಳಕ್ಕೆ ಓಡುತ್ತಿತ್ತು. ಅವಳು ತನ್ನ ತಾಯಿ, ತಂದೆ, ಗೆಳತಿಯರ ಬಗ್ಗೆ ನಿತ್ಯವೂ ಹೇಳುತ್ತಿದ್ದಳು. ಒಬ್ಬ ಆಪ್ತ ಸ್ನೇಹಿತೆಗೆ.. ಹಿತಚಿಂತಕರಿಗೆ ಹೇಳುವಂತೆ.. “ಅಪ್ಪ ತುಂಬಾ ಸ್ಟಿçಕ್ಟ. ಮೊದಲು ಮಾಮೂಲಿಯಾಗಿದ್ದರು. ನನ್ನನ್ನು, ಅಣ್ಣನನ್ನು ಚೆನ್ನಾಗಿ ಮಾತನಾಡಿಸುತ್ತ ಪಿಕ್ಚರ್, ಪಾರ್ಕುಗಳಿಗೆಲ್ಲ ಕರೆದೊಯ್ಯುತ್ತಿದ್ದರು. ನಮ್ಮದೊಂದು ಮಧ್ಯಮ ವರ್ಗದ ಕುಟುಂಬವಾಗಿರುವವರೆಗೂ ಎಲ್ಲ ಚೆನ್ನಾಗೇ ಇತ್ತು. ಅಮ್ಮ ನಮ್ಮ ಬೇಕುಬೇಡಗಳನ್ನು ಪೂರೈಸುತ್ತ ಮನೆಗೆ ಆಧಾರವಾಗಿದ್ದಳು. ವಾರವಾರವೂ ಹೊಸ ತಿಂಡಿ, ಅಡಿಗೆ ಮಾಡೋಳು. ನಾವು ಅವಳಿಗೆ ಸಹಾಯ ಮಾಡುತ್ತಿದ್ದೆವು. ನಾನೂ ಸ್ನೇಹಿತೆಯರೊಂದಿಗೆ ಆಟ, ಓದು.. ಪಿಕ್ಚರ್ ಎಂದೆಲ್ಲ ಹಾಯಾಗಿದ್ದೆ. ಅಪ್ಪನಿಗೆ ಪ್ರಮೋಷನ್ ಆಗಿ ಇನ್‌ಕಮ್‌ಟ್ಯಾಕ್ಸ ಆಫೀಸರ್ ಆದ ಮೇಲೆ ಮನೆಯ ಚಿತ್ರವೇ ಬದಲಾಯಿತು. ಬಂಗಲೆ ದೊಡ್ಡದಾದಷ್ಟೂ ನಾವೆಲ್ಲ ದೂರವಾದೆವು. ನಮ್ಮೊಂದಿಗೆ ಮಾತನಾಡಲು ಅಪ್ಪನಿಗೆ ಸಮಯವೇ ಇರುವುದಿಲ್ಲ. ವಿಪರೀತ ಮೂಡಿಯಾಗಿ ಸದಾ ವ್ಯವಹಾರಗಳಲ್ಲೇ ಮುಳುಗಿ ಎಲ್ಲ ಮರೆತುಬಿಡುತ್ತಾರೆ. ನನ್ನ ಅಕೌಂಟಿಗೆ ದುಡ್ಡು ಹಾಕುವುದನ್ನು ಬಿಟ್ಟು.. .. ಎಲ್ಲವನ್ನೂ. ಅಮ್ಮ ಸದಾ ಕ್ಲಬ್‌ನ ಮೀಟಿಂಗಿನಲ್ಲೋ.. ಮಹಿಳಾ ಸಮಾಜದ ಸೋಷಿಯಲ್ ವರ್ಕಿನ ಹೆಸರಿನ ಫಂಕ್ಷನ್‌ಗಳಲ್ಲೋ ಲೀಡರ್ ಆಗಿ ಮಿಂಚುತ್ತಾರೆ. ಅದಕ್ಕೆ ಬ್ಯೂಟಿ ಪಾರ್ಲರ್‌ಗೆ ಹೆಚ್ಚು ಟೈಮು, ದುಡ್ಡು ಹಾಕ್ತಾರೆ. ನನಗೋಸ್ಕರ ಯಾರ ಬಳಿಯೂ ಸಮಯವಿಲ್ಲ.”ಎಂದಾಗ ನನಗಾಗಿ ಊಟ, ತಿಂಡಿ ಸಿದ್ಧ ಮಾಡಿ ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು ಕಾಯುತ್ತಾ “ನಾಗಾ.. ಒಂತುತ್ತು ತಿಂದು ಹೋಗೋ.. ಹಸಿದುಕೊಂಡು ಕೆಲಸ ಮಾಡ್ಬಾರ್ದು ಮಗಾ”ಎಂದು ಅಲವತ್ತುಕೊಳ್ಳುವ ನನ್ನಮ್ಮನ ನೆನಪಾಗಿತ್ತು. ಈ ರೀತಿಯ ಬಡ ಸಿರಿವಂತಿಕೆಗಿಂತ ನನ್ನಂಥವರ ಹೊಟ್ಟೆ ತುಂಬಿದ..ಪ್ರೀತಿ ತುಂಬಿದ ಶ್ರೀಮಂತ ಬಡತನವೇ ಲೇಸು ಎನಿಸಿತು. “ಅಣ್ಣ ಅಮೆರಿಕದಿಂದ ಆಗಾಗ ಫೋನ್ ಮಾಡ್ತಿರ್ತಾನೆ. ಅವನಿಗೆ ಇಲ್ಲಿ ಬರಲು ಇಷ್ಟವೇ ಇಲ್ಲ. ಇಲ್ಲಿನ ರೀತಿ, ನೀತಿಗಳೊಂದಿಗೆ ಅಪ್ಪನ ಲಂಚಗುಳಿತನ, ಭ್ರಷ್ಟಾಚಾರ, ಅಮ್ಮನ ಬೂಟಾಟಿಕೆ, ಆಡಂಬರ.. ಯಾವುದೂ ಇಷ್ಟವಾಗಲ್ಲ” ಇತ್ಯಾದಿ ವಿವರಗಳು ನಾನು ಕೇಳದೆಯೇ ನನಗೆ ದೊರಕಿದ್ದವು. ನಾನು ಬರೀ ‘ಹ್ಞೂಂ..’ಗುಡುವ ಯಂತ್ರವಾಗಿದ್ದೆ. ಆದರೆ ಮನದ ಮೂಲೆಯಲ್ಲಿ ತಟ್ಟನೆ ‘ಹಾಗಾದರೆ ಕಾಳು ಹಾಕಿದವರಿಗೆ ದೊಡ್ಡ ಸಾಮ್ರಾಜ್ಯವೇ ದೊರಕುವುದುಂಟು’ಎನಿಸಿದ್ದು ಸುಳ್ಳಲ್ಲ. “ಮನೇಲಿ ಅಡಿಗೆಯವಳು, ಕೆಲಸದವಳು, ಮಾಲಿ.. ಬಿಟ್ಟರೆ ಯಾರಿರುವುದಿಲ್ಲ. ದೊಡ್ಡ ಸುಂದರ ಮನೆಯನ್ನು ಅವರೇ ಎಂಜಾಯ್ ಮಾಡ್ತಾರೆ. ಎಲ್ಲರೂ ರಾತ್ರಿಯೇ ಬರುವುದು. ಅದಕ್ಕೇ ಸಿ.ಸಿ.ಟಿವಿ. ಬೇರೆ ಹಾಕಿಸಿದ್ದಾರೆ”ಎಂದು ನಕ್ಕಳು. ವಿಷಾದಭರಿತ ನಗೆ. ‘ತುಂಬಾ ಮುಗ್ಧೆ’ಎನಿಸಿತು. ಶ್ರೀಮಂತಿಕೆಯ ಮೆಟ್ಟಿಲೇರುವ ಹುಚ್ಚಿನಲ್ಲಿ ಅಮಾಯಕ ಮನವನ್ನು ಮರೆತಿದ್ದಾರೆ ಎಂಬ ಬೇಜಾರೂ ಸೇರಿಕೊಂಡಿತು. ಯಾರ ಅಕ್ಕರೆಯೂ ಸಿಗದ ಶ್ರೀಮಂತ ಸಕ್ಕರೆಯ ಗೊಂಬೆ ಪ್ರೀತಿಗೆ.. ವಿಶ್ವಾಸಕ್ಕೆ ಹಂಬಲಿಸುತ್ತಿದ್ದಾಳೆ ಎನ್ನುವುದು ಸ್ಪಷ್ಟವಾಗಿತ್ತು. ಯಾವ ವಿಷಯ ಹೇಳಬೇಕು.. ಹೇಳಬಾರದೆಂಬ ಅರಿವಿಲ್ಲದೇ ಮನೆಯ ಚಿತ್ರವನ್ನೆಲ್ಲ ಬಿಡಿಸಿಡುತ್ತಿದ್ದಾಳೆ. ಮಧ್ಯಾಹ್ನ ಹೋಗಿ ಕೊಳ್ಳೆ ಹೊಡೆಯಬಹುದು ಎನಿಸಿ ನಗು ಬಂತು. ಮಳೆಗಾಲ ಆರಂಭವಾಗಿತ್ತು. ತುಂತುರಾಗಿ ನೀರ ಧಾರೆ ಸುರಿಯತೊಡಗಿತ್ತು. ಆಟೋ ಹೆಬ್ಬಾಳಕ್ಕೆ ನಿತ್ಯವೂ ಓಡುತ್ತಿತ್ತು. “ಮಳೆಗಾಲ.. ಕಾರಲ್ಲೇ ಓಡಿಯಾಡಬಹುದಲ್ಲ..”ಎಂದೆ. ಅದಕ್ಕೆ ಅವಳು “ಹ್ಞಾಂ, ಅಪ್ಪ ಕೂಡ ಅದನ್ನೇ ಹೇಳಿದರು. ಡ್ರೈವರ್‌ನ ಕಳಿಸ್ತೀನಿ ಅಂದ್ರು. ನಾನೇ ಕ್ಯಾಬ್ ಬುಕ್ ಮಾಡ್ಕೋತೀನಿ ಅಂದೆ. ನಾನು ಆಟೋದಲ್ಲಿ ಓಡಿಯಾಡುವುದು ಅವರ ಅಂತಸ್ತಿಗೆ ಕಡಿಮೆ ಅಂತಾರೆ. ಈಗ ನಿತ್ಯ ನಾನು ಮನೆಗೆ ಹಿಂತಿರುಗುವಾಗ ಮನೇಲಿ ಯಾರೂ ಇರಲ್ಲ. ನೋಡಲ್ಲ..” ಎಂದಳು. “ಫ್ರೆಂಡ್ಸ ಜೊತೆ ಕ್ಯಾಬ್‌ನಲ್ಲೂ ಹೋಗಬಹುದು”ಎಂದೆ. “ಫ್ರೆಂಡ್ಸಾ.. ಶಬ್ದಾನೇ ಮರೆತು ಎಷ್ಟೋ ದಿನ ಆದಂಗಾಗಿದೆ. ಮೊದಲು ನಾವು ಚಿಕ್ಕ ಮನೇಲಿದ್ದಾಗ ತುಂಬಾ ಜನ ಫ್ರೆಂಡ್ಸ ಇದ್ದರು. ನಾವೆಲ್ಲ ಸಿನಿಮಾ, ಮಾಲ್, ಶಾಪಿಂಗ್ ಅಂತ ಓಡಾಡ್ತಿದ್ವಿ. ಎಲ್ಲರೂ ಕೊಳ್ಳೋದು ಜಾಸ್ತಿ ಇರಲಿಲ್ಲವಾದರೂ ವಿಂಡೋ ಶಾಪಿಂಗ್ ಮಾಡಿದ್ದೇ ಹೆಚ್ಚು. ಸಿನಿಮಾ ಅಂತೂ ಒಂದೂ ಬಿಡದೇ ನೋಡ್ತಿದ್ದೆವು. ಕನ್ನಡ, ಹಿಂದಿ, ತೆಲಗು, ತಮಿಳು, ಇಂಗ್ಲಿಷ್.. ನೋಡಿ ಮಜಾ ಮಾಡ್ತಿದ್ದೆವು. ಕನ್ನಡ ಸಿನಿಮಾದ ಡೈಲಾಗ್‌ಗಳನ್ನ ಉರು ಹೊಡೆದು ಹೇಳಿದ್ದೇ ಹೇಳಿದ್ದು. ದೊಡ್ಡ ಮನೆಗೆ ಬಂದ ಮೇಲೆ ಅವರು ಅಮ್ಮ, ಅಪ್ಪನಿಗೆ ಇಷ್ಟವಾಗಲಿಲ್ಲ. ಬಿಡಿಸಿಬಿಟ್ರು. ಅಮ್ಮ ತೋರಿಸಿದ ಹೈಕ್ಲಾಸ್ ಒಣ ಡಂಭಾಚಾರದ ಫ್ರೆಂಡ್ಸ