ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

ಎ. ಹೇಮಗಂಗಾ

Red Heart Shaped Candles

ವಿರಹ ಹೃದಯಕೆ ಹೊರೆಯಾಗುತಿದೆ ತೊರೆದು ಹೋಗದಿರು ನನ್ನ
ಸನಿಹ ನೀನಿರದ ಕೊರಗು ಕೊರೆಯುತಿದೆ ತೊರೆದು ಹೋಗದಿರು ನನ್ನ

ಹೊಂಬೆಳಕ ಸೂರ್ಯನೂ ಕೆಂಡದಂತೆ ಸುಡುವನು ನಿಷ್ಕರುಣಿಯಾಗಿ
ಕುದಿಎಸರಿನಂತೆ ಮನಸು ಕುದಿಯುತಿದೆ ತೊರೆದು ಹೋಗದಿರು ನನ್ನ

ಭಾವ ಸಂವಹನಕೆ ಬರಿಯ ಕಂಗಳೇ ಸಾಕು ಮಾತಿನ ಹಂಗಿಲ್ಲ ನನಗೆ
ಎದೆಗೂಡಲಿ ಪ್ರೀತಿದೀಪವಿನ್ನೂ ಬೆಳಗುತಿದೆ ತೊರೆದು ಹೋಗದಿರು ನನ್ನ

ಸುಖವೆಲ್ಲಿದೆ ಒಂಟಿ ಬಾಳಲ್ಲಿ ನಿನ್ನ ಕೂಡಿ ಒಡನಾಡದ ಹೊರತು ?
ಮಧುಪಾನಕೆ ಅಧರ ಹಂಬಲಿಸುತಿದೆ ತೊರೆದು ಹೋಗದಿರು ನನ್ನ

ತನುವಿಂದು ಕೊರಡಾಗಿ ಬಾಡಿದೆ ಹಿತ ಸಂವೇದನೆಯ ಸ್ಪರ್ಶವಿರದೇ
ಅಪ್ಪುಗೆಯ ಬಿಸುಪು ನೆನಪಾಗಿ ಕಾಡುತಿದೆ ತೊರೆದು ಹೋಗದಿರು ನನ್ನ

ನನ್ನ ಮರೆತು ಬದುಕುವುದು ಬದುಕೇ ಅಲ್ಲವೆಂದು ಹಳಹಳಿಸಿದ್ದೆ
ಜೀವ ಸಹಿಸಲಾಗದ ನೋವ ಸಹಿಸುತಿದೆ ತೊರೆದು ಹೋಗದಿರು ನನ್ನ

ಬುವಿಯೊಂದು ಗೋಲ ಮರಳಲೇಬೇಕು ‘ಹೇಮ’ ಳೆಡೆಗೆ ಕೊನೆಗೊಮ್ಮೆ
ಹೊಸಬದುಕು ನಮಗಾಗಿ ಕಾಯುತಿದೆ ತೊರೆದು ಹೋಗದಿರು ನನ್ನ

******************************

About The Author

2 thoughts on “ಗಜಲ್”

  1. ನಾಗರತ್ನ ಸತ್ಯನಾರಾಯಣ ಪಾಳ್ಯಂ

    ಬಹಳ ಸಹಜವಾಗಿ ಸರಳವಾಗಿ ಭಾವನೆ ಗಳು ಅಕ್ಷರ ರೂಪ ಪಡೆದಿದೆ.ಅಭಿನಂದನೆಗಳು

Leave a Reply

You cannot copy content of this page

Scroll to Top