ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಯಾತ್ರೆ

ಕವಿತೆ ಯಾತ್ರೆ ರಾಜೇಶ್ವರಿ ಚನ್ನಂಗೋಡು ಮುಗಿವಾಗ ನೀನುನನ್ನೆದೆ ಧುತ್ತಂದುನಿಂದುಮುನ್ನಡೆದಿದೆ.ಎದೆಗಿನ್ನೇನು ದಾರಿ?ಇನ್ನೆಷ್ಟು ಮಂದಿ ನನ್ನವರುನನ್ನ ನಾನಾಗಿಸಿದವರುಹೋದಾಗಲೂ ಹೀಗೇ ಮುನ್ನಡೆಯುತಿರುವುದು…ಅರ್ಥಹೀನವೀ ಯಾತ್ರೆಹಿಂದಿದ್ದ ಸುಖವನೆಲ್ಲ ಬಿಟ್ಟು ಮುನ್ನಡೆಯಲೇ ಬೇಕಾದ ಯಾತ್ರೆಅಂದವ ಹುಡುಕಿ ಚಂದವ ಹುಡುಕಿನಡೆದಷ್ಟೂ ಹಿಂದಿನಂದುಗಳೇನೀನಿದ್ದಾಗಿನ ಅವರಿದ್ದಾಗಿನಂದುಗಳೇಸೊಗಸೆಂದರಿತೂಮುಂದಡಿಯಿಡುವ ಯಾತ್ರೆನಾಳೆ ಇವನೂ ಅವಳೂ ಇಲ್ಲದಕಂದರಗಳಿಹವೆಂದರಿತೂನಿಲ್ಲಿಸಲಾಗದ ಯಾತ್ರೆಬೆಳಕಿತ್ತ ನೀನಾರಿದಾಗಇನ್ನಾರೂ ಆರುವ ಮುನ್ನನಾನಾರಿದರೇ ಚೆನ್ನವೆಂದನಿಸುವ ಯಾತ್ರೆಹೇಗೆ ಕಲ್ಪಿಸಿಕೊಳಬೇಕು?ಯಾಕೆ ನಡೆಯಲೆ ಬೇಕೀ ಯಾತ್ರೆ?

ಯಾತ್ರೆ Read Post »

ಪುಸ್ತಕ ಸಂಗಾತಿ

ವಸುಂಧರಾ

ವಸುಂಧರಾ ಕಾದಂಬರಿ ಕುರಿತು ಬಾಳೆಯ ಹಣ್ಣನ್ನು ತಿಂದವರೆಸೆವರು, ಸಿಪ್ಪೆಯ ಬೀದಿಯ ಕೊನೆಗೆ ಕಾಣದೆ ಕಾಲಿಟ್ಟು ಜಾರುವರು ಅನ್ಯರು,_ ಕಷ್ಟವು ಬರುವುದೇ ಹೀಗೆ. ಎನ್ನುವುದೊಂದು , ಅನುಭವದ ನುಡಿಮುತ್ತು. ನಂಬಿಕೆ ಮತ್ತು ಮೂಡ ನಂಬಿಕೆಯ ನಡುವೆ ಅಪಾರ ವ್ಯತ್ಯಾಸವಿದೆ ಹಿಂದಿನಿಂದಲೂ ಈಗಲೂ ಜನ ಸಮುದಾಯದೊಳಗೆ ಮೂಢನಂಬಿಕೆಯ ಕಾರಣದಿಂದಾಗಿ ಆಗಿ ಹೋಗಿರುವ ಅನಾಹುತಗಳೇನೂ , ಕಡಿಮೆ ಇಲ್ಲ. ಮೊನ್ನೆ ಮೊನ್ನೆ ತಾನೆ ಕೇಳಿದ್ದು , ದೆವ್ವ ಬಿಡಿಸುವೆನೆಂದು  ಹೆಣ್ಣುಮಗಳೊಬ್ಬಳ  ಪ್ರಾಣವನ್ನೇ ಬಲಿತೆಗೆದುಕೊಂಡ ಜ್ವಲಂತ ಉದಾಹರಣೆ ನಮ್ಮ ಕಣ್ಣಮುಂದಿದೆ. ಹೀಗಿರುವಾಗ ಜಯಂತಿ ರವರ ವಸುಂದರ ಕಾದಂಬರಿ ಮೂಢನಂಬಿಕೆಗೆ ಬೆಳಕು ಚೆಲ್ಲಿ ಇಡೀ ಸಮುದಾಯ ಕಲಂಕಿನಿ ಎಂದು ಅಪಮಾನ ತೇಜೋವಧೆ ಮಾಡಿ ನಿರ್ಲಕ್ಷ ಗೊಳಿಸಿ ಮಾತಿನಿಂದಲೇ ಕೊಂದು  ಜೀವಂತ ಹೆಣವನ್ನಾಗಿ ಮಾಡಿದಂತಹ ಸಂದರ್ಭದಲ್ಲಿ ನೊಂದ ಮನಕ್ಕೆ  ಸಾಂತ್ವನವಷ್ಟೇ  ಅಲ್ಲ ಎಲ್ಲಾ ಸಂಕೊಲೆಗಳಿಂದ ಬಿಡಿಸುವುದು ಅಷ್ಟೇ ಅಲ್ಲ ಇಡೀ ಸಮುದಾಯವನ್ನು  ಬದಲಾಯಿಸಿ ಮೂಢನಂಬಿಕೆಯಿಂದ ಹೊರಬರುವಂತೆ ಮಾಡಿ ಅವರೆಲ್ಲರೂ ಅವಳನ್ನು ಗೌರವದಿಂದ ಕಂಡು ಪಶ್ಚಾತ್ತಾಪ ಪಡುವಂತೆ  ಮಾಡುವ ಅಪೂರ್ವ ಅಸಾಧಾರಣ ನಿರೂಪಣಾ ಶೈಲಿ ಯ ಸುಂದರ ಕೃತಿಯೇ ” ವಸುಂಧರಾ”-ಕಾದಂಬರಿ ಎಂದು ಹೇಳಬಹುದು. ಬಸವಣ್ಣನವರ ಒಂದು ಮಾತಿದೆ  ಕೈಲಾಸ ದೊಡ್ಡದಲ್ಲ/ ಕಾಯಕ ದೊಡ್ಡದು ಧರ್ಮ ದೊಡ್ಡದಲ್ಲ/ ದಯೆ ದೊಡ್ಡದು. ಅರಿವು ದೊಡ್ಡದಲ್ಲ / ಆಚಾರ ದೊಡ್ಡದು ಅಧಿಕಾರ ದೊಡ್ಡದಲ್ಲ  /ಅಭಿಮಾನ ದೊಡ್ಡದು ಆಸ್ತಿ ದೊಡ್ಡದಲ್ಲ  / ಆರೋಗ್ಯ ದೊಡ್ಡದು ಸನ್ಮಾನ ದೊಡ್ಡದಲ್ಲ / ಸಂಸ್ಕಾರ ದೊಡ್ಡದು ಹಣ ದೊಡ್ಡದಲ್ಲ / ಗುಣ ದೊಡ್ಡದು ವಿದ್ಯೆ ದೊಡ್ಡದಲ್ಲ  /ವಿನಯ ದೊಡ್ಡದು ಅನುಭವ ದೊಡ್ಡದು ಎಂಬ ಮಾತುಗಳಂತೆ ಒಂದೊಂದು ಅಧ್ಯಾಯಗಳಲ್ಲೂ , ಸ್ನೇಹ ಪ್ರೀತಿ ಆಚಾರ ನಡವಳಿಕೆ ಸಂಪ್ರದಾಯ ಸಂಭ್ರಮ ಎಲ್ಲವನ್ನು ಸುಮಧುರ ಹದದಲ್ಲಿ ಹಾಕಿ  ಪಾಕಗೊಳಿಸಿ  ಅಚ್ಚಿಗೆ ಹಾಕಿ  ಎರಕಹೊಯ್ದ ಅಪೂರ್ವ ಕೃತಿಯೇ   ವಸುಂಧರ ಅನ್ನುವುದು ಕೈಗೆತ್ತಿಕೊಂಡ ಕೆಲವೇ  ನಿಮಿಷಗಳಲ್ಲಿ  ನಮಗೆ ಗೋಚರಿಸುತ್ತದೆ.  ಅಂತಹ ಅಸಾಧಾರಣವಾದ ಸಂಭಾಷಣೆ ವಿವರಣೆ ಅದರಲ್ಲಿ ಅಡಕವಾಗಿದೆ ಒಂದೇ ಗುಕ್ಕಿಗೆ ವಿರಾಮ ನೀಡದೆ ಓದಿಸಿಕೊಳ್ಳುವ ಅಯಸ್ಕಾಂತೀಯ ಶಕ್ತಿ ಇದರಲ್ಲಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಪಾತ್ರಪೋಷಣೆ ಯ ಅಭಿವ್ಯಕ್ತಿಯ ಮಹಾಪೂರವೇ , ವಿಶೇಷ ತಿರುವುಗಳ ಚೈತನ್ಯವೇ ವಸುಂದರ ಕಾದಂಬರಿಯ ವಿಶೇಷ ಶಕ್ತಿಯಾಗಿದೆ ತಮ್ಮ ಅಸಾಧಾರಣ ಪ್ರತಿಭೆಯಿಂದ ಒಂದೊಂದು ಪಾತ್ರಕ್ಕೂ ಜೀವ ತುಂಬುತ್ತ ಕಣ್ಮುಂದೆಯೇ ನಡೆದಿದೆ ಎನ್ನುವಂತೆ ಎಷ್ಟೋ ಘಟನೆಗಳನ್ನು ಕಾಕತಾಳಿಯ ಎನ್ನಬಹುದಾದ ಸನ್ನಿವೇಶಸಂಗತಿಗಳನ್ನು, ಸೂಕ್ಷ್ಮಾತಿ  ಸೂಕ್ಷ್ಮವಾಗಿ , ವಿವರಿಸುತ್ತಾ ನಡೆದಿರುವ ರೀತಿ  ವಿಭಿನ್ನವಾಗಿದ್ದು , ಸೋಜಿಗವೆನಿಸುತ್ತದೆ. ಇಲ್ಲಿ ಬರುವ ಮುಖ್ಯ ಪಾತ್ರಗಳೆಂದರೆ ಕಥಾನಾಯಕಿ ವಸುಂದರ ಕಥಾನಾಯಕ ದಿನಕರ್ ಅವನ  ಊರು ಗುರಪುರ  ಇವನ ಸಹೋದರ ಸುಧಾಕರ , ಸಹೋದರಿ ,ತಾಯಿ , ದಿನಕರನ ಸ್ನೇಹಿತ ರಮಾನಾಥ ತಾಯಿ ಸುಂದರಮ್ಮ ಅಜ್ಜಿ ,ಹೆಂಡತಿ ಜಲಜ ,ಮಕ್ಕಳಾದ ಸರಿತ ಸವಿತಾ ಸಹೋದರ ಸೂರ್ಯ ಗಿರಿಜಾ ಮನೆಕೆಲಸದ ಹುಡುಗಿ ರಮಾನಾಥ ನ ಅತ್ತಿಗೆಯೇ ವಸುಂಧರಾ . ಜ್ಞಾನಮೂರ್ತಿ ಅರ್ಚಕರು ಮತ್ತು ಅವರ ಸಂಸಾರ ಊರ ಗೌಡ ರು ಹಾಗೂ ಊರಿನ ಗ್ರಾಮಸ್ಥರು , ಬಂಧು ಬಳಗದವರು .    ಹೀಗೆ ಇವುಗಳ ನಡುವೆ ಹೆಣೆದುಕೊಂಡ ಕರುಳುಬಳ್ಳಿ ಸಂಬಂಧಿತ  ಪಾತ್ರಗಳೆಂಬ  ದಾರಕ್ಕೆ ಅಕ್ಷರಗಳನ್ನು, ಭಾವನೆಗಳನ್ನು ,ಪೋಣಿಸುತ್ತ ಸಾಗಿದ ಬರವಣಿಗೆಯು ನಗುವಿನ ಅಳುವಿನ ನೋವಿನ ಏಳಿಗೆಯ ಕಾನೂನಿನ ಆಡಳಿತದ ಹಳ್ಳಿಯ ಹಟ್ಟಿಯ ಆಡಳಿತದ ಭಾವನೆಗಳನ್ನು ತಿರುವುಗಳ ನೋಟವನ್ನು ನಯ ನಡತೆ ವಂಚನೆ ದುರಾಸೆ ಬಾಯಾಳಿತನ   ಬೈಗುಳ ಎಲ್ಲವನ್ನೂ ಪ್ರಬುದ್ಧವಾಗಿ ಲಯಬದ್ಧವಾಗಿ ಕಟ್ಟುತ್ತಾ ಮನಮುಟ್ಟಿ  ತಟ್ಟಿ ಅಬ್ಬಾ ಶಬ್ಬಾಸ್ ಎಂದು ಉದ್ಗಾರ ತೆಗೆಯುವಂತೆ ಇದ್ದು , ಒಂದೇ ಗುಕ್ಕಿಗೆ ಓದಿಸಿಕೊಳ್ಳುವ ಆಕರ್ಷಣೆಯನ್ನು ಕೊನೆಯವರೆಗೂ ಕಾಪಾಡಿಕೊಂಡಿದೆ. ಪರಂಪರೆ ಮತ್ತು ವರ್ತಮಾನ ಎರಡನ್ನು ಬಳಸಿಕೊಳ್ಳುತ್ತಾ ಇಂದಿನ ಸಂವೇದನೆಗೆ ಹಿಂದಿನದನ್ನು ಬೆರೆಸಿ ಸಮಕಾಲೀನ ಸ್ಪಂದನೆಗೆ ಹಾಗೂ ಅಕಾಡೆಮಿಕ್ ಶಿಸ್ತಗೆ , ಒಳಗೊಂಡು ವಿಷಯವನ್ನು ಹೆಣೆಯುವಾಗ ಪಾತ್ರಗಳಿಗೆ ಸೊಗಸಾದ ಸನ್ನಿವೇಶದ ಬೆಳಕನ್ನು ನೀಡುತ್ತಾ ಪಾತ್ರಗಳಿಗೆ ,ಕೃತಿಗೆ ,ಓದುಗರಿಗೆ ,ಆಕರ್ಷಣೀಯ ಹಿಡಿತವನ್ನು ಕೊಡುವುದರಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಸ್ತ್ರೀಪಾತ್ರಗಳು ಸಮುದಾಯದಲ್ಲಿ ಸಾಮಾಜಿಕವಾಗಿ ಕೌಟುಂಬಿಕವಾಗಿ ಸಾಂಸ್ಕೃತಿಕವಾಗಿ ಅನುಭವಿಸುವ ಅಪಮಾನ ನಿರ್ಲಕ್ಷ ದೌರ್ಜನ್ಯ ಹಾಗೂ ಮೂಢನಂಬಿಕೆಗಳಿಗೆ ಸಿಲುಕಿ ನರಳುವ, ನೋಯುವ,ಬೇಯುವ,  ಜೀವ ಪರಿಯನ್ನು  ದೃಶ್ಯಗಳು ಕಣ್ಣೆದುರೇ ಮೂಡಿರುವಂತೆ ಚಿತ್ರಿಸುವುದರ , ಜೊತೆಗೆ ಜಾತ್ಯಾತೀತ ಧರ್ಮನಿರಪೇಕ್ಷವಾ ದ ಬಾಂಧವ್ಯವನ್ನು ಕಟ್ಟುವ ತುಡಿತ ಇವರಲ್ಲಿ ಇದ್ದು ಅದು ಪರೋಕ್ಷವಾಗಿ ಇವರ ರಚನೆಯಲ್ಲಿ ಕಾಣಿಸಿಕೊಂಡಿದೆ ಎಂದರೆ ತಪ್ಪಾಗಲಾರದು. ಇಡೀ ಕೃತಿಯ ಉದ್ದಕ್ಕೂ ಸಮಕಾಲೀನ ತೊಡಕು ನಂಬಿಕೆಗಳೊಂದಿಗೆ ಜೀವದ್ರವ್ಯ ಆದರ್ಶ, ಸತ್ಯ ,ಪ್ರಾಮಾಣಿಕತೆ ಪ್ರೀತಿ ಮಾನವೀಯ ಸಂಬಂಧಗಳ ಚೌಕಟ್ಟನ್ನು ಎಲ್ಲಿಯೂ ಸಡಿಲಗೊಳಿಸ ದಂತೆ ಮುನ್ನಡೆಸಿಕೊಂಡು ಸಾಗಿರುವ ವಿಶಿಷ್ಟ ಹಿಡಿತ ಈ ಕಾದಂಬರಿಯಲ್ಲಿದೆ ಅಪಕ್ವ ಮನಸ್ಸುಗಳಿಗೆ ತಿಳಿವಳಿಕೆ ಹೇಳುತ್ತಾ ಪ್ರತಿಯೊಂದು ಸನ್ನಿವೇಶದಲ್ಲೂ ಸಮಕಾಲೀನ ಸಂಬಂಧವನ್ನು ಅರ್ಥವಿಲ್ಲದ ಆಚರಣೆಯನ್ನು, ಟೀಕಿಸುತ್ತಾ ಕಾರಣ ಪರಿಣಾಮಗಳನ್ನು ತಿಳಿಸುತ್ತಾ ವಿಮರ್ಶಿಸುತ್ತಾ, ಅದರೊಂದಿಗೆ ಬೆರೆಯುತ್ತಾ ಹರಿಯುತ್ತಾ ಸಾಗಿ ನಿನ್ನೆಯ ಮೂಲಕವೇ ಇಂದಿನ ನಾಳಿನ ಬದುಕನ್ನು ಹೆಣೆದಿದ್ದಾರೆ.  ಈ ಕಲೆ ಅತ್ಯಂತ ಆಕರ್ಷಣೀಯವಾಗಿ ಯೂ ಸೋಜಿಗವಾಗಿ ಯೂ ಇದೆಯೆಂದರೆ ಅತಿಶಯೋಕ್ತಿಯಾಗಲಾರದು. ಮಾತು ಬೆಳ್ಳಿ ಮೌನ ಬಂಗಾರ ಎನ್ನುತ್ತಾ  ನಾವು ಮೌನವೇ ಶ್ರೇಷ್ಠ ಎಂದು ವ್ಯಾಖ್ಯಾನ ಮಾಡುತ್ತೇವೆ . ಆದರೆ ಕೆಲವೊಮ್ಮೆ ಕೆಲವು  ಸನ್ನಿವೇಶಗಳಲ್ಲಿ  ಉತ್ತಮ ,ಉತ್ತರ, ಸಾಧನವು ಆದರೆ   ಕೆಲವೊಮ್ಮೆ ಅದೇ ಮೌನ ನಮ್ಮನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಅವಮಾನಿಸುತ್ತಿದೆ .ಕೋಪವನ್ನು ತರಿಸುತ್ತದೆ . ಕೆಲವರ ಮೌನ ಎಷ್ಟು ಕೋಪವನ್ನು ಉಂಟುಮಾಡಿ ವಿರಸಕ್ಕೂ ಸಂಬಂಧಗಳ ಕಳಚುವಿಕೆಗೂ ದಾರಿಮಾಡಿಕೊಡುತ್ತದೆ ಎಂದ.ನಮ್ಮನಿಮ್ಮೆಲ್ಲರ ಅನುಭವಕ್ಕೂ ಬಂದಿರಬಹುದು. ಇಲ್ಲಿಯೂ  ಸುಧಾಕರ ಮತ್ತು ಜ್ಞಾನಮೂರ್ತಿ ಅವರ ಎದುರು ಮನೆಯವರೊಂದಿಗೆ ಮಾತನಾಡದೆ ಮೌನವಾಗಿದ್ದು ಮುಂದಿನ ಈ ಎಲ್ಲಾ ಘಟನೆಗಳಿಗೆ  ಕಾರಣವಾಗುತ್ತದೆ ಎಂಬುದನ್ನು ಕಾದಂಬರಿಯನ್ನು ಓದಿದಾಗ ಕಂಡುಬರುತ್ತದೆ . ಇನ್ನು ಕಾದಂಬರಿಯುದ್ದಕ್ಕೂ ಬಳಸಿರುವ ಪರಂಪರೆಯ ಕೊಂಡಿಗಳ ಬಗ್ಗೆ ಹೇಳಲೇಬೇಕು ಉದ್ದಕ್ಕೂ ಉತ್ತಮವಾದ ಬದುಕಿನ ಮಾರ್ಗದರ್ಶಕ ಸೂತ್ರಗಳನ್ನು ಇವರದೇ ಆದ ಶೈಲಿಯಲ್ಲಿ ಹೇಳುತ್ತಾ ಹೇಳುತ್ತಾ ಪರಂಪರೆ ಸಂಸ್ಕೃತಿ ಸಂಸ್ಕಾರಗಳನ್ನು ಉಳಿಸಿಕೊಳ್ಳಬೇಕು ಎಂಬ ಆದರ್ಶದ ನುಡಿಗಳನ್ನು ಕಥಾನಾಯಕನ ಬಾಯಿಯಲ್ಲಿ ಹೇಳಿಸುತ್ತಾ ಸಾಗಿರುವುದು  ಅತ್ಯಂತ  ಸುಂದರವಾಗಿದ್ದು ಕಿರಿಯರಿಗೆ , ಮಾರ್ಗದರ್ಶಕವಾಗಿ, ಅನುಕರಣೀಯವೂ  ಆಗಿದೆ. ಉದಾ, ನಾವು ಬದುಕನ್ನ ಬದಲಾಯಿಸಬೇಕು           ಬದುಕು ನಮ್ಮನ್ನು ಬದಲಾಯಿಸಬಾರದು. ಪುಟ 62 ನಾವು ಎಷ್ಟೇ ಸಾಧನೆ ಮಾಡಿದರೂ ನಮ್ಮ ಉತ್ತಮ ನಡವಳಿಕೆಗಳು ಆಚರಣೆಗಳು ಗೌರವ ಪ್ರೀತಿ ಆಧಾರಗಳು ಉಳಿಯಬೇಕು ಆಗಲೇ ನಾವು ನಾವು. ಎಷ್ಟೇ ಅಡೆತಡೆಗಳು ಬಂದರೂ ಭಾವನೆಗಳು ಬದಲಾಗಬಾರದು ಎಂದು ಹೇಳುವಲ್ಲಿ ಸಂಬಂಧಗಳನ್ನು ಗಟ್ಟಿಗೊಳಿಸುವ ಆದರ್ಶದ ನಡೆನುಡಿಗಳು ಸಮಾಜಕ್ಕೆ ಮಾರ್ಗದರ್ಶಕವೂ ಪ್ರೇರಕವಾಗಿವೆ ಎಂದರೆ ತಪ್ಪಿಲ್ಲ ಜೊತೆಗೆ ರಥೋತ್ಸವದ ಸನ್ನಿವೇಶ, ಬಂಧುಗಳ ಆಗಮನ ಸಂತೋಷ ಸಂಭ್ರಮ ಕೆಲಸಗಳ ಒತ್ತಡ ಎಲ್ಲವನ್ನೂ ಎಳೆಎಳೆಯಾಗಿ ನಾಜೂಕಾಗಿ ಪೋಷಿಸಿರುವ ಪೋಷಣೆ ಅಸಾಧಾರಣವಾಗಿದೆ.  ವಿವಾಹವಾಗಿ ಪತಿಯ ಮನೆಗೆ ತನ್ನ ಹೆತ್ತವರನ್ನು ಬಂಧುಬಳಗವನ್ನು ತನ್ನ ಒಡನಾಡಿಯಾದ ಸ್ನೇಹಿತರನ್ನು ಸಕಲ ಪರಿಸರಕ್ಕೂ ವಿದಾಯ ಹೇಳಿ ಹೋಗುವ ಸಂದರ್ಭದಲ್ಲಿ, ಹೆಣ್ಣುಮಕ್ಕಳು ಬಾಣಂತಿ ಆರೈಕೆಯನ್ನು ಮುಗಿಸಿ  ಗಂಡನ ಮನೆಗೆ  ಹೊರಟು ನಿಂತಾಗ ಊರಿಗೆ ಊರೇ ಕರೆದು ಮಡಿಲಕ್ಕಿ ಹುಯ್ಯುವುದು ಹಣೆಗೆ ತಿಲಕವಿಟ್ಟು ನೆತ್ತಿಗೆ ಎಣ್ಣೆ ಹಾಕಿ ತವರಿನ ನೆನಪು ಸದಾ ಇರಲಿ ತವರಿಗೆ ಶುಭ ಹಾರೈಕೆಯಿಂದ ತೆರಳಲಿ ತನ್ನ ಕೊಟ್ಟಮನೆಯಲ್ಲಿ ಕೀರ್ತಿಯನ್ನು ತರಲಿ , ಎಂದು ಶುಭ ಹಾರೈಸಿ ಕಳಿಸಿ ಕೊಡುವುದು ಈ ನಾಡ ,ಪರಂಪರೆ  ಸಂಪ್ರದಾಯ . ಆದರೆ  ಇತ್ತೀಚಿಗೆ ಇದು  ಕಡಿಮೆಯಾಗುತ್ತಿದೆ ಮರೆಯಾಗುತ್ತಿದೆ..ಈ ಒಂದು ಆಚರಣೆಯ  ಆಪ್ತತೆ  ,ಅನುಬಂಧ ಅವರ್ಣನೀಯ .    ಅಂತಹ ಒಂದು ಉತ್ತಮ ಪರಂಪರೆಯನ್ನು  ಇಲ್ಲಿ  ತಲೆತಲಾಂತರಕ್ಕೂ ಉಳಿಯುವಂತೆ ಮಾಡಲಾಗಿದೆ..       ಇಲ್ಲಿ ಯಾವ ಸಮುದಾಯದಿಂದ ಕಳಂಕಿತ ಎಂದು ಘೋಷಿಸಲ್ಪಟ್ಟಿದ್ದಳೋ ಅದೇ ಸಮುದಾಯ ಅವಳನ್ನು ಆಧರಿಸಿ ಪಶ್ಚಾತಾಪದಿಂದ ನೊಂದು   ಮನೆಗೆ ಆಹ್ವಾನಿಸಿ ಮಡ್ಲಕ್ಕಿ ಹುಯ್ದು , ತಿಲಕವಿಟ್ಟು , ನೆತ್ತಿಗೆ ಎಣ್ಣೆ ಹಾಕಿ ,ಅರಿಯದ ತಮ್ಮ ತಪ್ಪಿಗೆ  ಕ್ಷಮೆಯಾಚಿಸಿ ಬೀಳ್ಕೊಡುವುದು . ಆ ಸಂದರ್ಭದಲ್ಲಿ  ನಿಮ್ಮ ಪ್ರೀತಿಗೆ ನಾನೇನು ಕೊಡಲಿ ಎಂದು ಎಲ್ಲರಿಗೂ ಒಂದೊಂದು ರೂಪಾಯಿ ನಾಣ್ಯ ಕೊಡ್ತಾಳೆ ಹೆಣ್ಣುಮಕ್ಕಳು ಗೆಳತಿಯರು ಅದನ್ನು ಕೆಲವರು ಸೆರಗಿಗೆ ಕಟ್ಟಿಕೊಂಡರು ಕೆಲವರು ಅರಿಶಿನ ಜೀರಿಗೆ ಡಬ್ಬಿಗಳಿಗೆ ಹಾಕಿದರು ಇನ್ನು ಕೆಲವರು ಚೀಲಕ್ಕೆ ಹಾಕಿಕೊಂಡರು, ದಿನನಿತ್ಯ ಅರಿಶಿಣ ಜೀರಿಗೆ ಡಬ್ಬಿಗಳನ್ನು ಉಪಯೋಗಿಸುವಾಗ ಹಾಗೂ ಚೀಲದಲ್ಲಿ ಎಲೆಯಡಿಕೆ ಮೆಲ್ಲುವಾಗ ಅದನ್ನು ನೋಡುತ್ತ ಅವರನ್ನು ನೆನೆಸಿಕೊಳ್ಳಲು ಎಂಬುದೇ ಇದರ ಹಿಂದಿನ ಉದ್ದೇಶವಾಗಿದೆ ಇದೊಂದು ಅಪೂರ್ವ ವಾದಂತಹ  ವಿವರಣೆಯಾಗಿದೆ. ಹಾಗೆಯೇ ಮರೆಯಾಗುತ್ತಿರುವ ಅಜ್ಜಿಯರ ಎಲೆ ಅಡಿಕೆ ಚೀಲ ಅದರೊಳಗಿನ 2/3 ಕಂಪಾರ್ಟ್ಮೆಂಟ್ ಗಳು ಅದರೊಳಗೆ ಒಂದು ಹಣ ಇಡುವ ಗುಪ್ತ ಪ್ಯಾಕೆಟ್ ನಾಣ್ಯಗಳನ್ನು ಇಡುತ್ತಿದ್ದ ಕಿರು ಪತ್ರ ಇವೆಲ್ಲವೂ ನನಗೆ ನೆನಪಿಸಿ ನನಗೆ ನನ್ನ ಅಜ್ಜಿ ಅವರ  ಪ್ರೀತಿ  ಅನುಭೂತಿ  ನನ್ನ ಕಣ್ಣನ್ನು  ತೇವಗೊಳಿಸಿದವು ನಾನು ಶಾಲೆಗೆಂದು ಹೋಗುತ್ತಿದ್ದಾಗ ನನ್ನಜ್ಜಿ  ನನ್ನನ್ನು  ಹೇ ಮಗಾ ಬಾ ಇಲ್ಲಿ ನನ್ನ ಎಲೆ ಅಡಿಕೆ ಚೀಲದ ಕಿರು ಪತ್ರದಲ್ಲಿ ಎಂಟಾಣೆ ಇದೆ ಅದನ್ ತಗೊಂಡು ನಾಕಾಣೆ ಕಾಚು ಇನ್ ನಾಲ್ಕಾಣೆ ನೀನೇನಾದ್ರೂ ತಗೋ ಎಂದು ಕೈಯಲ್ಲಿ ಕೊಟ್ಟು  ಕಳುಹಿಸುತ್ತಿದ್ದುದು ನೆನಪಾಗಿ ಕ್ಷಣ ಮನಸ್ಸು ಎಲ್ಲಿಗೂ ಹೋದಂತಾಯಿತು. ಹೀಗೆ ಕಾದಂಬರಿ ಹಲವು ಮರೆತ ಬಾಂಧವ್ಯಗಳನ್ನು ಮತ್ತೊಮ್ಮೆ ನೆನಪಿಸಿಕೊಡವಂತಿದೆ . ಎಂದು ನನಗನ್ನಿಸಿತು . ಈ ಚೀಲದ ಸಂಬಂಧ ಸನ್ನಿವೇಶ ಮುಂದಿನ ಪೀಳಿಗೆಗೆ ಉಳಿಯುತ್ತದೆ ಎಂಬುದು ಸಂತೋಷದ ಸಂಗತಿಯಾಗಿದೆ ಇನ್ನು ಕಾದಂಬರಿಯ ತುಂಬಾ ಉಪಯೋಗಿಸಿ ರುವಂತಹ ಸಾಂಪ್ರದಾಯಿಕ ಅಡುಗೆಗಳು ಹೆಸರುಕಾಳು ಮೆಂತ್ಯ ಸೊಪ್ಪಿನ ತೊವೆ ರಾಗಿಕೀಲ್ಸ  ಕಡುಬು ನಿಂಬೆ ಹುಳಿ ಚಿತ್ರಾನ್ನ,  ಹುಳಿಯನ್ನ  ಇವುಗಳ ಸೊಗಸಾದ ನಿರೂಪಣೆ ಇದೆ  ಕೂಡುಕುಟುಂಬದ ಸಾಮರಸ್ಯ ಕಣ್ಮರೆಯಾಗಿರುವ ಕಾಲಘಟ್ಟದಲ್ಲಿ ನಾವಿದ್ದು ಇಂದು ಯಾರು ಯಾರ ಮನೆಯಲ್ಲಿ ಉಳಿಯುವ ಪರಿಪಾಠವೇ ಇಲ್ಲವಾಗಿದೆ ಹಾಗೂ ಕಡಿಮೆಯಾಗಿದೆ ಹಿಂದೆ ಊರ ಜಾತ್ರೆ ಮದುವೆ ರಥೋತ್ಸವ ಸಮಾರಂಭಗಳಲ್ಲಿ ನಾಲ್ಕೈದು ದಿನ ವಾರದವರೆಗೂ ಉಳಿದುಕೊಂಡಿದ್ದ ಸಾಮರಸ್ಯ ಈಗ ಮರೆಯಾಗಿದೆ ಆನಂದವು ಮರೆಯಾಗಿದೆ ಈಗ ನಾನು ನನ್ನ ಸಂಬಂಧ ಕೇವಲ ಮೊಬೈಲಿಗೆ ಅಥವಾ ನಾನು ನನ್ನ ಕುಟುಂಬ ಅಷ್ಟೇ ಆಗುತ್ತಿದೆ ಎಂಬುದು ವಿಷಾದಕರ .  ರಥೋತ್ಸವದ ಸಮಾರಂಭಕ್ಕೆ ಬಂಧುಗಳು ಚಿಕ್ಕಮ್ಮ-ಚಿಕ್ಕಪ್ಪ ದೊಡ್ಡಮ್ಮ ದೊಡ್ಡಪ್ಪ ಅಜ್ಜಿ ,ಭಾವ ಮೈದುನ ಅತ್ತಿಗೆ ಮಕ್ಕಳು ಸ್ನೇಹಿತರು ಹೀಗೆ ಎಲ್ಲರೂ ಒಂದೆಡೆ ಸೇರಿಕೊಂಡು ಸಂಭ್ರಮಿಸುವ ಸಾಮರಸ್ಯದ ಸಂಬಂಧಕ್ಕೆ ಮಾದರಿಯಾಗಿದೆ ಇನ್ನು ಕಾದಂಬರಿಯಲ್ಲಿ ಬರುವ ಆಡಳಿತಾತ್ಮಕ ಚಾಣಕ್ಯನ ನಡಿಗೆಗಳು ಬಹಳ ನಯವಾಗಿ ನಾಜೂಕಿನಿಂದ ಬೆಣ್ಣೆಯ ಮೇಲಿನ ಕೂದಲು ತೆಗೆದಂತೆ ತೊಡಕುಗಳನ್ನು ಸಿಕ್ಕುಗಳನ್ನು ಬಿಡಿಸಿಕೊಳ್ಳುತ್ತಾ ಸಾಗುವ ತಂತ್ರಗಾರಿಕೆ ಅತ್ಯಂತ ಸೂಕ್ಷ್ಮ ಹಾಗೂ ಉದಾರವಾಗಿದೆ . ತೊಂದರೆ ಮಾಡಿದ ಯಾವ ಪಾತ್ರವೂ ಸೆಟೆದು ನಿಂತು ಕೋಪಿಸಿಕೊಳ್ಳದಂತೆ ಅವರೇ ಪಶ್ಚಾತ್ತಾಪವಾಗುವಂತೆ  ಮಾಡಿ ಅವರಿಗೂ ಒಂದೊಂದು ಬದುಕಿನ ಹೊಸ ತಿರುವನ್ನು ಕೊಟ್ಟು ,ಆ ಆಯ್ಕೆಯಲ್ಲಿಯೇಅವರೂ ಖುಷಿಯಾಗ ಇವರನ್ನು ಸಂತೋಷದಿಂದ ಹಾರೈಸುವಂತೆ ಮಾಡಿರುವುದು ಕಾದಂಬರಿಕಾರರ ಹಿರಿಮೆಯಿಂದೇ ಹೇಳಬೇಕ ಅಂತಹ ಅಮೋಘ ನೈಪುಣ್ಯತೆ,  ವಸುಂಧರಾ ಕಾದಂಬರಿಯಲ್ಲಿ ಬಿಂಬಿತವಾಗಿದ್ದು , ಇವರೊಬ್ಬ ಉತ್ತಮ ನೀತಿಶಾಸ್ತ್ರ ವಿಶಾರದೆ ಎಂಬುದಕ್ಕೆ

ವಸುಂಧರಾ Read Post »

ಕಾವ್ಯಯಾನ

“ಬೆಳಕಾಗಲಿ ಬದುಕು”

ಕವಿತೆ ಬೆಳಕಾಗಲಿ ಬದುಕು ಪ್ರೊ.  ಚಂದ್ರಶೇಖರ ಹೆಗಡೆ ಪಲವಿನ್ನೂ ಹಸಿ ಹಸಿಯಾಗಿದೆ ಬನ್ನಿ ಗಿರಾಕಿಗಳೇ ಮುಖವಿಟ್ಟು ಆಸ್ವಾದಿಸಿಬಿಡಿ ಖಾಲಿಯಾಗಿರುವ ಎದೆಯ ಗೂಡಿನೊಳಗೊಮ್ಮೆ ಮಸಾಲೆಯ ಒಗ್ಗರಣೆಯೊಳಗೆ ಬೇಯಿಸಿ ಘಮಘಮಿಸಿಬಿಡಿ ಕಮಟಾಗಿ  ಹಳಸಿಹೋಗುವ ಮುನ್ನ ಯಾರ ಹೆಸರಿನ ಷರಾ ಬರೆದಿದೆಯೋ  ಕತ್ತಿಯಂಚಿನಲಿ ಕತ್ತರಿಸಿಕೊಂಡು  ಹೆಣವಾಗಿರುವ ಜೀವಕೋಶಗಳ ಮೇಲೆ  ಸಾವೊಂದು ಬದುಕಾಗಿದೆ ನನಗೆ ಬದುಕೊಂದು ಸಾವಾಗಿದೆ ಕೊನೆಗೆ ಪಯಣವಿನ್ನು ಯಾರದೋ ಮನೆಗೆ ನೇತುಹಾಕಿರುವ ಅಂಗಡಿಯೊಳಗೆ  ಒಡಲುಗೊಂಡದ್ದೆಲ್ಲವೂ ಬಿಕರಿಗೆ ಕಾಲು ಕೈ ಕಣ್ಣು ತೊಡೆಗಳೆಲ್ಲ ಮಾಗಿದ ಹಣ್ಣುಗಳ ಬನದ ಬೆಲ್ಲ ತನುವ ತುಂಬಿಕೊಳ್ಳಿ ಬಾಯಿ ಚಪ್ಪರಿಸಿ ಮುತ್ತಿಟ್ಟು ನಾಲಿಗೆಯ ಸುಲಿದ ರಸಗಲ್ಲದಲಿರಿಸಿ ಮುಗಿದು ಹೋಯಿತು ಕತೆಯೆಂದುಕೊಂಡೆ ಆರಂಭವಿದೆಂದು ಅಂತರಂಗ ತುಂಬಿಕೊಂಡೆ ಉಸಿರೆಳೆದುಕೊಂಡು ರಸಾಯನ ಕುದಿಸಿ ಶಾಶ್ವತವಾಗಿರುವಂತೆ ನೆನಹು ಹಸಿ ಹಸಿ ತುಂಡು ತುಂಡು ದಿಂಡು ಸುಖದ ಗೀರು ಏರಬೇಡಿ ಇಮ್ಮನದಿ ನಿಂತ ತೇರು ಮಿಗೆಯಾಗಲಿ ಆಯಸ್ಸು ಉಂಡು ಮರೆತ ಒಡಲ ಕನಸು ಅಳುವ ಕಂಡಿಲ್ಲ ಕೊಂದಹರೆಂದು ನಂಬಿಲ್ಲ ತಕ್ಕುದ ಮಾಡುವನೆಂದು ಬಯಲಾಗುವುದರಲ್ಲಿಯೇ ಬದಲು ಬೆಳಕಾಗಲಿ ಬದುಕೆನ್ನುವುದೇ ಮೊದಲು *********************************

“ಬೆಳಕಾಗಲಿ ಬದುಕು” Read Post »

ಅಂಕಣ ಸಂಗಾತಿ, ರಹಮತ್ ತರೀಕೆರೆ ಬರೆಯುತ್ತಾರೆ

ಅಂಕಣ ಬರಹ ಕಣ್ಣು-ಕಣ್ಕಟ್ಟು ರೋಣ ತಾಲೂಕಿನ ಗಜೇಂದ್ರಗಡಕ್ಕೆ ಗೆಳೆಯರ ಭೇಟಿಗೆಂದು ಹೊರಟಿದ್ದೆ. ಹಾದಿಯಲ್ಲಿ ಯಲಬುರ್ಗಾ ತಾಲೂಕಿನ ಪುಟ್ಟಹಳ್ಳಿ ನೆಲಜೇರಿ ಎಡತಾಕಿತು. ಗೋಧಿ ಉಳ್ಳಾಗಡ್ಡೆ ಸುರೇಪಾನ ಮೆಣಸು ಮೊದಲಾಗಿ ಮಳೆಯಾಶ್ರಯದ ಪೀಕು ತೆಗೆಯುವ ಎರೆಸೀಮೆಯಿದು. ಹೆಚ್ಚಿನ ತರುಣರು ಕೊಪ್ಪಳದ ಬಗಲಲ್ಲಿ ಬೀಡುಬಿಟ್ಟಿರುವ ಉಕ್ಕಿನ ಕಾರ್ಖಾನೆಗಳಿಗೆ ದಿನಗೂಲಿಗಳಾಗಿ ಹೋಗುತ್ತಾರೆ. ನೆಲಜೇರಿ ಆರ್ಥಿಕವಾಗಿ ಬಡಕಲಾದರೂ ಸಾಂಸ್ಕøತಿಕವಾಗಿ ಸಮೃದ್ಧ ಹಳ್ಳಿ. ಈ ವೈರುಧ್ಯ ಉತ್ತರ ಕರ್ನಾಟಕದ ಬಹಳಷ್ಟು ಹಳ್ಳಿಗಳ ಲಕ್ಷಣ.  ನೆಲಜೇರಿಯ ತಟ್ಟಿ ಹೋಟೆಲಿನಲ್ಲಿ ಚಹಾಪಾನ ಮಾಡುತ್ತ ಇಲ್ಲಿ ಯಾರಾದರೂ ಜನಪದ ಗಾಯಕರು ಇದ್ದಾರೆಯೇ ಎಂದು ಕೇಳಿದೆ. ಅಲ್ಲೊಬ್ಬ ಮೂಲೆಯಲ್ಲಿ ಟೀಯನ್ನೂ ಬೀಡಿಯನ್ನೂ ಒಟ್ಟಿಗೆ ಸವಿಯುತ್ತ ಕಾಲುಚಾಚಿ ಕುಳಿತವನು ಅವಸರವಿಲ್ಲದ ದನಿಯಲ್ಲಿ `ಅದಾನಲ್ಲ ಅಂದಾನಪ್ಪ. ರಿವಾಯತ್ ಪದ ಜಗ್ಗಿ ಹಾಡ್ತಾನ’ ಎಂದನು. ಅಂದಾನಪ್ಪನವರನ್ನು ನೋಡೋಣವೆಂದು ಮನೆಗೆ ಹೋದರೆ ಹೊಲಕ್ಕೆ ಹೋಗಿದ್ದರು. ಅವರು ಬರುವವರೆಗೆ ಜಗುಲಿಯಲ್ಲೇ ಬೀಡುಬಿಟ್ಟೆ. ಒಕ್ಕಲುತನದ ಹಳೇ ಮಾಳಿಗೆಮನೆ. ಹೊರಬಾಗಿಲ ಆಜುಬಾಜು ದೊಡ್ಡದಾದ ಎರಡು ಜಗುಲಿ. ಅವುಗಳ ಮೇಲೆ ಚೀಲಗಳಲ್ಲಿ ದವಸ. ಅವುಗಳ ಬದಿಗೆ ಕೌದಿಹಾಸಿ ದಿಂಬಿಟ್ಟು ಯಜಮಾನ ಕೂರಲು ಸಿದ್ಧಗೊಳಿಸಿದ ಆಸನ. ಗೋಡೆಯ ಮೇಲೆ ದಿವಂಗತರಾದ ಕುಟುಂಬದ ಹಿರಿಯರ ಪಟಗಳು. ಅವಕ್ಕೆ ಹುಲಿಯು ಪಂಜದಿಂದ ಗೆಬರಿದಂತೆ ಎಳೆದಿರುವ ವಿಭೂತಿ ಪಟ್ಟೆ. ಮನೆಯೊಳಗೆ ಇಣುಕಿದರೆ, ಸಿನುಗು ವಾಸನೆಯ ದನದ ಕೊಟ್ಟಿಗೆ. ತಾಯಿ ಮೇಯಲು ಹೋಗಿರುವುದರಿಂದ ಒಂಟಿಯಾಗಿದ್ದು ಅಂಬಾ ಎನ್ನುತ್ತಿರುವ ಎಳೆಗರು. ಅಟ್ಟಕ್ಕೆ ಕಟ್ಟಿರುವ ಉಳ್ಳಾಗಡ್ಡಿ ಬೆಳ್ಳುಳ್ಳಿ ಸಿವುಡು; ಒಣಗಿದ ಹೀರೇಕಾಯಿ ಗೊಂಚಲು. ಕೊಟ್ಟಿಗೆಯ ಬಳಿಕ ತುಸು ಎತ್ತರದಲ್ಲಿ ಮಬ್ಬು ಬೆಳಕಿನಲ್ಲಿ ಕಾಣುವ ಉಣ್ಣುವ ಜಗುಲಿ. ನಂತರ ಹೊಗೆಯಿಂದ ಕಪ್ಪಗಾಗಿ ಇದ್ದಬದ್ದ ಬೆಳಕನೆಲ್ಲ ಕುಡಿದು ಮತ್ತಷ್ಟು ಕತ್ತಲಾಗಿರುವ ಅಡುಗೆಕೋಣೆ.  ಹೀಗೆ ಪಂಚೇಂದ್ರಿಯಗಳಿಗೆ ಕೆಲಸ ಹಚ್ಚಿ ಆರಾಮಾಗಿ ಕೂತಿರುವಾಗ ಅಂದಾನಪ್ಪನವರ ಸವಾರಿ ಬಂತು. ಆರಡಿ ಎತ್ತರದ 75 ವರ್ಷದ ಹಿರಿಯ. ದಪ್ಪನೆಯ ಬಿಳಿಪಟಗ ಎದ್ದು ಕಾಣುತ್ತಿತ್ತು. ಕೈಬೆರಳು ಕುಷ್ಠದಿಂದ ಕರಗಿಹೋಗಿದ್ದರೂ ಮೋಟು ಬೆರಳಲ್ಲಿ ಸೈಕಲ್ ಹ್ಯಾಂಡಲನ್ನು ಹಿಡಿದು, ಬೀದಿಗೆ ಬೈತಲೆ ತೆಗೆದಂತೆ ಹರಿದ ಬಚ್ಚಲು ನೀರಿನ ಅಂಕುಡೊಂಕುಗಳಲ್ಲಿ ಬೀಳದಂತೆ ಸವಾರಿಸುತ್ತ ಬಂದರು. ಅಂಗಳದಲ್ಲಿ ನಿಂತ ಕಾರು ಅವರಿಗೆ ಗಲಿಬಿಲಿ ತಂದಂತಿತ್ತು. ನಮಸ್ಕಾರ ಮಾಡಿ ಭೇಟಿಯ ಉದ್ದೇಶ ತಿಳಿಸಿದೆ. ತನ್ನ ಹಾಡುಪ್ರತಿಭೆಗೆ ಪರಸ್ಥಳದ ಜನ ಬಂದಿರುವುದು ಅರಿತು ಮುಖದಲ್ಲಿ ಅಭಿಮಾನ ಮೂಡಿದಂತೆ ತೋರಿತು. ಲಗುಬಗೆಯಿಂದ ಅಡುಗೆ ಮನೆಯೊಳಗೆ ನುಗ್ಗಿ ಬಿಸಿರೊಟ್ಟಿ ಮಾಡಲು ಹೇಳಿದರು. ದೊಡ್ಡ ಚರಿಗೆಯಲ್ಲಿ ಮುಂಜಾನೆಯಷ್ಟೆ ಕಡೆದ ಮಜ್ಜಿಗೆ ತಂದುಕೊಟ್ಟರು. ಹಳತಾದ ನೋಟುಬುಕ್ಕನ್ನು ನಾಗಂದಿಯ ಮೇಲಿಂದ ತೆಗೆದು, ಧೂಳು ಝಾಡಿಸಿ, ಅದರಲ್ಲಿದ್ದ ರಿವಾಯತ್ ಪದವನ್ನು ಹಾಡಲು ಶುರುಮಾಡಿದರು. ಅವರ ಭಾರಿಕಾಯದೊಳಗೆ ಈ ಹೆಣ್ದನಿ ಹೇಗಾದರೂ ಅಡಗಿಕೊಂಡಿದೆಯೊ ಎಂದು ಅಚ್ಚರಿಸುತ್ತಿದ್ದ ನನಗೆ ಪೈಲವಾನರಂತಿರುವ ಬಡೇಗುಲಾಮಲಿ ಖಾನರು ಜೇನಲ್ಲಿ ಅದ್ದಿತೆಗೆದಂತೆ ಹಾಡಿದ `ಕ್ಯಾಕರ್ಞೂ ಸಜನೀ ಸಾಜನ್ ನ ಆವೆ’ ಠುಮ್ರಿಯ ನೆನಪಾಯಿತು. ರಿವಾಯತ್ ಹಾಡಿಕೆಯಲ್ಲಿ ಹಿಮ್ಮೇಳವಿದ್ದರೇ ಚಂದ. ಒಂಟಿದನಿ ಬೇಗ ದಣಿಯುತ್ತದೆ. ಅಂದಾನಪ್ಪ ಎರಡು ಹಾಡಿಗೆ ನಿಲ್ಲಿಸಿದರು. ಕೆಲವೇ ತಿಂಗಳುಗಳಲ್ಲಿ ತಮ್ಮೂರಿನಲ್ಲಿ ರಾಜಪ್ಪಸ್ವಾಮಿಯ ಉರುಸು ನಡೆಯಲಿದೆಯೆಂದೂ, ಅಲ್ಲಿ ಕೊಪ್ಪಳ ಸೀಮೆಯ ಬಹುತೇಕ ಗಾಯಕರು ಸೇರುವರೆಂದೂ ಆಗ ಖಂಡಿತ ಬರಬೇಕೆಂದೂ ತಿಳಿಸಿದರು. ಇದಾದ ಐದಾರು ತಿಂಗಳಿಗೆ ಅಂದಾನಪ್ಪನವರ ಫೋನು ಬಂತು. ಉರುಸು ಫಲಾನೆ ದಿನವಿದೆಯೆಂದೂ ತಪ್ಪದೇ ಬರಬೇಕೆಂದೂ ಊಟ ವಸತಿಗೆ ಚಿಂತೆ ಮಾಡಬಾರದೆಂದೂ ತಿಳಿಸಿದರು. ಸ್ಕೂಟರಿನಲ್ಲಿ ಹೋದೆ. ಸಂಜೆಯಾಗಿತ್ತು. ಸುತ್ತಮುತ್ತಲ ಗ್ರಾಮದವರು ಓದಿಕೆ ಮಾಡಿಸಿಕೊಂಡು ಕೈಯಲ್ಲಿ ವಸ್ತ್ರಹೊದಿಸಿದ ಪ್ರಸಾದದ ತಟ್ಟೆ ಹಿಡಿದು ಗುಂಪಾಗಿ ಮನೆಗೆ ಮರಳುತ್ತಿದ್ದರು. ಅಂದಾನಪ್ಪ, ಹೆಸರಿಗೆ ತಕ್ಕಂತೆ ಅನ್ನದಾನಿ. ಶಿಷ್ಯನ ಮನೆಯಲ್ಲಿ ಬಿಸಿರೊಟ್ಟಿ ಮೊಸರು ಬದನೆಪಲ್ಯ ಮಾಲ್ದಿಯಿರುವ ಊಟ ಹಾಕಿಸಿದರು. ರಾತ್ರಿ ಹತ್ತಕ್ಕೆ ಮೆರವಣಿಗೆ ಕುರುಬರ ಮನೆಯಿಂದ ರಾಜಪ್ಪನ ದರ್ಗಾಕ್ಕೆ ಹೊರಟಿತು. ಅದರ ಮುಂದೆ ಮನೆಯ ಹಿರೀಕರೊಬ್ಬರು ಮೈದುಂಬಿದ್ದರು. ಅವರ ಜತೆ ಬೇಡ ಸಮುದಾಯಕ್ಕೆ ಸೇರಿದ ಹನುಮಂತದೇವರ ಗುಡಿಯ ಪೂಜಾರಿ ಜತೆಗೂಡಿದನು. ಮೆರವಣಿಗೆಯಲ್ಲಿ ಮುಸ್ಲಿಮರನ್ನೂ ಒಳಗೊಂಡಂತೆ ಊರಿನ ಎಲ್ಲ ಜಾತಿ ಸಮುದಾಯಗಳಿಗೆ ಸೇರಿದ್ದರು. ಅಂದಾನಪ್ಪನವರು ದೊಡ್ಡದೊಂದು ಕೋಲಿನ ತುದಿಗೆ ಹಾಡುಗಾರರಿಗೆ ಕೊಡುವ ಬಹುಮಾನದ ಬೆಳ್ಳಿಬಳೆಗಳನ್ನು ಸಿಕ್ಕಿಸಿಕೊಂಡು ಮುಂಚೂಣಿಯಲ್ಲಿದ್ದರು. ಮೆರವಣಿಗೆ ಹಿಂಭಾಗದಲ್ಲಿ `ಕಂದೂರಿ’ಗೆ ಬಲಿಯಾಗಲಿರುವ ಕುರಿಗಳನ್ನು ಹಿಡಿದುಕೊಂಡು ಬರುತ್ತಿದ್ದ ಭಕ್ತರ ಸೈನ್ಯವೇ ಇತ್ತು.ಊರಹೊರಗೆ ದೊಡ್ಡ ಬಯಲಿನಲ್ಲಿ ಮರಗಳ ಗುಂಪಿನ ನಡುವೆ ರಾಜಪ್ಪಜ್ಜನ ಸಮಾಧಿಯಿದೆ. ಅದು ಸೂಫೀ ಗೋರಿಯಂತೆ ಉತ್ತರ ದಕ್ಷಿಣಮುಖಿಯಾಗಿದೆ. ಒಬ್ಬ ಮುಜಾವರ್ ಅಲ್ಲಿ ಫಾತೆಹಾ ನೆರವೇರಿಸುತ್ತಿದ್ದನು. ರಾಜಪ್ಪಜ್ಜನ ಪುಣ್ಯತಿಥಿಗೆ `ಉರುಸು’ ಎಂದು ಕರೆಯುವುದರಿಂದ, ಇದು ಸೂಫಿಸಂತನಿಗೆ ಸಂಬಂಧಪಟ್ಟಿದ್ದು ಎಂದು ನನ್ನ ಊಹೆಯಾಗಿತ್ತು. ಆದರೆ ರಾಜಪ್ಪಜ್ಜ ಎಂಬತ್ತು ವರ್ಷಗಳ ಹಿಂದೆ ಬದುಕಿದ್ದ ಆರೂಢನಾಗಿದ್ದರು. ಹಿಂದುಳಿದ ಜಾತಿಗೆ ಸೇರಿದ್ದ ಆತನ ಶಿಷ್ಯರಲ್ಲಿ ಹೆಚ್ಚಿನವರು ದಲಿತರಾಗಿದ್ದು, ಅವರ ಸಮಾಧಿಗಳು ಆಸುಪಾಸಿನಲ್ಲಿದ್ದವು. ರಾಜಪ್ಪಜ್ಜನ ಸಮಾಧಿ ಪೌಳಿದ್ವಾರದಲ್ಲಿ ಮೊಹರಂ ಚಿಹ್ನೆಗಳಾದ ಹುಲಿ ಹಾಗೂ ಹಸ್ತದ ಚಿತ್ರಗಳೂ ಇವುಗಳ ಜತೆ ಗಣಪತಿ ಹಾಗೂ ಹನುಮಂತನ ಚಿತ್ರಗಳೂ ಬರೆಯಲ್ಪಟ್ಟಿದ್ದವು. ಅಂದು ನಡೆಯಲಿದ್ದ ರಿವಾಯತ್ ಪದಗಳ ಹಾಡಿಕೆ ಸಹ ಮೊಹರಂ ಸಂಪ್ರದಾಯಕ್ಕೆ ಸೇರಿತ್ತು. ರಾತ್ರಿ ಹತ್ತರ ಸುಮಾರಿಗೆ ಗಾಯಕರು ಕಲೆತರು. ಕಂಬಕ್ಕೆ ಕಟ್ಟಿದ ಮೈಕಿನ ಸುತ್ತ ಗಾಯಕರು ತಮ್ಮ ಮೇಳದ ಜತೆ ಪ್ರದಕ್ಷಿಣೆ ಹಾಕುತ್ತ ಹಾಡಿದರು. ಹಾಡಿಕೆ ಬೆಳಗಿನ ಜಾವಕ್ಕೆ ಮುಗಿಯಿತು. ಚೀಲ ಚಾಪೆ ಹಾಸಿಕೊಂಡು ಕೌದಿ ಹೊದ್ದು ಕುಳಿತ ಜನ ಕೇಳಿತು. ಗಾಯಕರನ್ನು ಹಾಡಲು ಕರೆಯುವುದು, ಚೆನ್ನಾಗಿ ಹಾಡಿದಾಗ ಉತ್ತೇಜಿಸುವುದು, ಗೆದ್ದವರಿಗೆ ಬೆಳ್ಳಿಯ ಬಳೆ ಬಹುಮಾನವಾಗಿ ಕೊಡುವುದು ಮುಂತಾದ ಕಾರ್ಯಗಳನ್ನು ಅಂದಾನಪ್ಪ ಹರೆಯದವರಂತೆ ಓಡಾಡುತ್ತ ಮಾಡಿದರು. ಉರುಸಿನ ವಿಶೇಷ `ಕಂದೂರಿ’ ಎನ್ನಲಾಗುವ ಮಾಂಸದೂಟ. ರಾತ್ರಿ ಹತ್ತರ ಸುಮಾರಿಗೆ ಮೆರವಣಿಗೆಯಲ್ಲಿ ಆಗಮಿಸಿದ್ದ ಕುರಿಗಳನ್ನು ಮುಲ್ಲಾ ಹಲಾಲ್ ಮಾಡಿದನು. ಅವನ್ನು ಜನ ಬೀಡುಬಿಟ್ಟಲ್ಲೆ ದೊಂದಿಯ ಗ್ಯಾಸ್‍ಲೈಟಿನ ಬೆಳಕಲ್ಲಿ ಹಸಿಗೆ ಮಾಡಿದರು. ನಡುರಾತ್ರಿಯ ಹೊತ್ತಿಗೆ ಅಡುಗೆ ಶುರುವಾಯಿತು. ಇಡೀ ಬಯಲು ಒಲೆಗಳ ಬೆಂಕಿಯಿಂದ ಬೀಡುಬಿಟ್ಟ ಸೈನಿಕ ಶಿಬಿರವಾಯಿತು. ಬೆಳಗಿನ ಜಾವ ಪೂಜಾರಿ ಮೈದುಂಬಿ ವರ್ಷದ ಮಳೆಬೆಳೆಯ ಕಾರ್ಣೀಕ ಹೇಳಿದನು. ಇದಾದ ಬಳಿಕ ಊಟ ಶುರು. ಜಾತ್ರೆಗೆ ಬಂದವರನ್ನು ಎಲ್ಲರೂ ಕರೆದು ಉಣ್ಣಿಸುವವರೇ. ಮಾಡಿದ ಅಡುಗೆ ಬೆಳಕು ಕಣ್ಬಿಡುವ ಮೊದಲು ಖಾಲಿಯಾಗಬೇಕು. ಮನೆಗೆ ಒಯ್ಯುವಂತಿಲ್ಲ. ಊಟದ ಜತೆ ಉರುಸು ಮುಕ್ತಾಯ ಕಂಡಿತು. ಜನ ಟಂಟಂ, ಬಂಡಿಗಳಲ್ಲಿ ಊರುಗಳಿಗೆ ತೆರಳಿದರು. ಬಿಸಿಲೇರುವ ಹೊತ್ತಿಗೆ ದರ್ಗಾ ನಿರ್ಜನವಾಯಿತು. ನೇಲಜೇರಿಯಲ್ಲಿ ಉರಿಸಿದೆ, ಸೂಫಿ ಪರಂಪರೆಯಿಲ್ಲ; ರಿವಾಯತ್ ಹಾಡಿನ ಪರಂಪರೆಯಿದೆ, ಮೊಹರಂ ಅಲ್ಲ; ಮುಸ್ಲಿಮರ ಭಾಗವಹಿಸುವಿಕೆಯಿದೆ, ಸಾಂಪ್ರದಾಯಿಕ ಇಸ್ಲಾಮಲ್ಲ; ಹತ್ತಕ್ಕೆ ಒಂಬತ್ತರÀಷ್ಟು ಹಿಂದುಗಳ ಭಾಗವಹಿಸುವಿಕೆಯಿದೆ, ಜಾತ್ರೆಯಲ್ಲ; ಅವಧೂತ ಪರಂಪರೆಯ ಲಕ್ಷಣಗಳಿವೆ, ಗುರುದೀಕ್ಷೆ ಕೊಡುವ ಪದ್ಧತಿಯಿಲ್ಲ; ಹಾಗಾದರೆ ಇದನ್ನು ಯಾವ ಧರ್ಮ ಅಥವಾ ಪಂಥದ ಚೌಕಟ್ಟಿನಲ್ಲಿಟ್ಟು ನೋಡುವುದು? ನಿರ್ದಿಷ್ಟ ಚೌಕಟ್ಟಿನಲ್ಲಿಟ್ಟು ನೋಡುವ ಅಥವಾ ಅದಕ್ಕೆ ಹೆಸರು ಕೊಡುವ ತುರ್ತು ಉರುಸಿನಲ್ಲ್ಲಿ ಭಾಗವಹಿಸಿದ ಯಾರಲ್ಲೂ ಇರಲಿಲ್ಲ. ಅವರಿಗೆ ತಾವು ಮಾಡುವ ಉರುಸು, ಹಾಡುವ ಹಾಡು, ಉಣ್ಣುವ ಊಟ ಯಾವ ಧರ್ಮಕ್ಕೆ ಸಂಬಂಧಿಸಿದವು ಎಂಬುದು ಪ್ರಶ್ನೆಯಾಗಿ ಕಾಡದಿರುವಾಗ, ನನಗೇಕೆ ಚೌಕಟ್ಟಿನ ಪ್ರಶ್ನೆ ಕಾಡುತ್ತಿದೆ? ಯಾವುದೇ ಧಾರ್ಮಿಕ ಆಚರಣೆಯನ್ನು ಈಗಾಗಲೇ ನಿರ್ವಚನಗೊಂಡಿರುವ ಜಾತಿ ಧರ್ಮ ಇಲ್ಲವೇ ಪಂಥದ ಚೌಕಟ್ಟಿನಲ್ಲಿ ಇಟ್ಟುನೋಡಬೇಕು ಎಂಬುದು ನನ್ನ ಬೌದ್ಧಿಕ ತುರ್ತೇ? ನೆಲಜೇರಿಯ ಉರುಸು ತನಗೆ ತಾನೇ ಸ್ಥಳೀಯವಾಗಿ ರೂಪುಗೊಂಡಿರುವ ಜನತೆಯ ಧರ್ಮ. ಇದರಲ್ಲಿ ಸೂಫಿಗಳ ಅವಧೂತರ ಮೊಹರಮ್ಮಿನ ಇಸ್ಲಾಮಿನ ಚಹರೆಗಳೆಲ್ಲ ಸಹಜವಾಗಿ ಒಗ್ಗೂಡಿವೆ. ಇಂತಹ ಅನೇಕ ತಾಣ ಮತ್ತು ಸಮುದಾಯಗಳು ನಾಡಲ್ಲಿವೆ. ಈ ಲೋಕಗಳನ್ನು ಅರಿಯಲು ಸದ್ಯ ಚಾಲ್ತಿಯಲ್ಲಿರುವ ಚೌಕಟ್ಟು ಸಾಲುವುದಿಲ್ಲ. ರಾಜಕೀಯವಾಗಿ ಧರ್ಮವನ್ನು ನೋಡಲು ರೂಪುಗೊಂಡಿರುವ ಕಣ್ಕಟ್ಟುಗಳಂತೂ ಯಾತಕ್ಕೂ ಬಾರವು. ಈ ಲೋಕಗಳನ್ನು ನೋಡಲು ತೆರೆದಮನಸ್ಸಿನ ಕಣ್ಣನ್ನು ಪಡೆದುಕೊಳ್ಳುವ ಅಗತ್ಯವಿದೆ. ಹಿಂದೆ ಕಲಿತಿದ್ದನ್ನು ಮಾತ್ರ ನೋಡುವ ಕಣ್ಕಟ್ಟುಗಳನ್ನಲ್ಲ.  ಹಂಪಿಗೆ ತೆರಳುವ ಮುನ್ನ ಅಂದಾನಪ್ಪನವರಿಗೆ ವಿದಾಯ ಹೇಳಲೆಂದು ಹುಡುಕಿದೆ. ಜಂಗುಳಿಯಲ್ಲಿ ಸಿಗಲಿಲ್ಲ. ಅವರ ಮನೆಗೆ ಬಂದು ಕೇಳಿದೆ. ಅಷ್ಟುಹೊತ್ತಿಗೆ ಅವರು ಸೈಕಲ್ ಹತ್ತಿ ಹೊಲಕ್ಕೆ ಹೋಗಿಬಿಟ್ಟಿದ್ದರು. **************************** ರಹಮತ್‌ ತರೀಕೆರೆ ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ

Read Post »

ಕಥಾಗುಚ್ಛ

ಮರಳಿ ತವರಿಗೆ

ಸಣ್ಣ ಕಥೆ ಮರಳಿ ತವರಿಗೆ ನಾಗರಾಜ್ ಹರಪನಹಳ್ಳಿ ಕರೋನಾ ಕಾರಣವಾಗಿ ತವರು ಮನೆಗೆ ಕೊಲ್ಲಾಪುರ ದಿಂದ ಬಂದಿದ್ದ ರೋಶನಿ ತನ್ನೆರಡು‌ ಮಕ್ಕಳೊಂದಿಗೆ ಹೈಸ್ಕೂಲ್ ಗೆಳತಿ ಶರ್ಮಿತಾಳನ್ನು ಕಾಣಲು ಹೊರಟಳು.ಮಲೆ ‌ನಾಡಿನ ಒಂಟಿ ಮನೆಗಳು ಅಡಿಕೆ ತೆಂಗು ಹಾಗೂ ಕಾಡಿನ ಮರಗಳ ಮಧ್ಯೆ ಅಡಗಿರುವುದೇ ಹೆಚ್ಚು. ಶರ್ಮಿತಾಳ ತಾಯಿ ಮನೆ ಎದುರು ದನಗಳಿಗೆ ಕರಡ ಬೆಳೆಯಲು ಬಿಟ್ಟಿದ್ದ ಬಯಲು ಭೂಮಿ , ಜೂನ್  ತಿಂಗಳು ಎರಡು ವಾರ  ಸುರಿದ  ಮಳೆಯ ಕಾರಣ , ಅದಾಗಲೇ ಹಸಿರಾಗಿ ಇತ್ತು.‌‌  ಮೊದಲ ಮಹಡಿಯ ಮೇಲಿನ ಕಾರಿಡಾರ್ ನಿಂದ ತನ್ನ ಮನೆಯತ್ತ ಹೆಣ್ಮಗಳೊಬ್ಬಳು  ಮಕ್ಕಳೊಂದಿಗೆ ಬರುತ್ತಿರುವುದ ಗಮನಿಸಿ,  ‘ ಆಯಿ ,  ಯಾರೋ ನೆಂಟರು ಬಂದ್ರೆ’  ಅಂತ ಕೂಗಿ ಸೂಚನೆ ಕೊಟ್ಟಳು. ಮನೆಯಿಂದ ಹೊರ ಬಂದ ಆಯಿ , ದೂರದಿಂದಲೇ ಭಟ್ಟರ ಮನೆ ಮಗು ಅಂಬಂಗೆ ಕಾಣ್ತದೆ.  ಅವಳು ಈಚೆಗೆ ನಾಲ್ಕು ವರ್ಷ ಆಯಿತು ;  ಈಕಡೆ ಬಂದಿರಲಿಲ್ಲ.‌ ಈಗ ಬಂದಿರಬೇಕು ಎಂದ ಆಯಿ  ,ಬಳ್ಳಿಯಲ್ಲಿ ಅರಳಿದ ಮಲ್ಲಿಗೆ ಹೂ ಬಿಡಿಸಿತೊಡಗಿದಳು. ಪುಟಾಣಿ‌ ಮಕ್ಕಳೊಂದಿಗೆ ಮನೆ ಹತ್ತಿರ  ಬಂದಂತೆ ಆಕೆ ರೋಶನಿ ! ,  ತನ್ನ ಹೈಸ್ಕೂಲ್ ಗೆಳತಿ ಎಂದು ಶರ್ಮಿತಾಳಿಗೆ  ಮನದಟ್ಟಾಗುತ್ತಿದ್ದಂತೆ , ಕಣ್ಣುಗಳು ಅರಳಿದವು.  ಮನೆಯಂಗಳಕ್ಕೆ ಬಂದದ್ದೇ ನಗುವಿನ‌ ವಿನಿಮಯ, ಆತ್ಮೀಯ ‌ಅಪ್ಪುಗೆಯ ನಂತರ‌ ಇಬ್ಬರೂ  ಮಾತಿಗಿಳಿದರು .   ಗಂಟೆಗಟ್ಟಲೆ ಮಾತು.‌ ಅಪರೂಪಕ್ಕೆ ಹತ್ತು ವರ್ಷಗಳ ನಂತರದ ಭೇಟಿ.‌ ಕೇಳಬೇಕೆ? ಉತ್ಸಾಹ , ಕುತೂಹಲಗಳು ಮರದ ಕವಲುಗಳು  ಮುಗಿಲ ಕಡೆ ಮುಖ ಮಾಡಿದಂತೆ , ಮನಸು ದೂರ ಕಾಣುವ ದಿಗಂತ ನೋಡುತ್ತಲೇ ಗೆಳತಿರ ಕಣ್ಣೋಟಗಳು ಬೆರೆತಿದ್ದವು.  ಶರ್ಮಿತಾ ಈಗ ಕವಯಿತ್ರಿಯಾಗಿದ್ದಳು. ರೋಶನಿಯ ‘ಆಯಿ’  ಈ‌ ಸುದ್ದಿಯನ್ನು ‌ಕೊಲ್ಲಾಪುರದಿಂದ ಬಂದ ಮೊದಲ ದಿನವೇ  ಶರ್ಮಿತಾಳ ಸುದ್ದಿ ಮಾತಾಡಿ ಕುತೂಹಲ ನೂರ್ಮಡಿಸಿದ್ದಳು .  ಆ ಕುತೂಹಲ ತಣಿಸಿಕೊಳ್ಳಲು, ಅವಳ  ಕವನ ಸಂಕಲನ ಪಡೆಯಲು ಹಾಗೂ ಗೆಳತಿಯ ಪ್ರಸಿದ್ಧಿ ಅರಿತು ಖುಷಿಪಡಲು  ರೋಶನಿ ಬಂದದ್ದಾಗಿತ್ತು. ಅಂತೂ ಕವಯಿತ್ರಿಯ ಸುದ್ದಿ  ಕೇಳಿದ ಮೇಲೆ ; ತನ್ನ ಲಂಡನ್ ಪ್ರವಾಸ, ಅಲ್ಲಿನ ಜನ ,‌ಜೀವನ, ಯುವ ಜನರ ಬದುಕು, ಪ್ರೀತಿ, ಮುಕ್ತವಾದ ಜೀವನೋತ್ಸಾಹ , ಪ್ರಾಜೆಕ್ಟ್ ವರ್ಕ  ಬಗ್ಗೆ ಮಾತು ಹೊರಳಿ ಕೊಂಡವು ಹಾಗೂ ಕೊಲ್ಲಾಪುರದಿಂದ ಮರಳಿ ತವರಿಗೆ ಬಂದ ಕಾರಣದ  ವಿವರಗಳು  ಒಂದೊಂದೆ ಎಳೆ ಎಳೆಯಾಗಿ ಮಾತಲ್ಲಿ  ನಡೆಯುತ್ತಾ  ಹೋದವು.  ಸಮಾಜಶಾಸ್ತ್ರ ಅಧ್ಯಯನ, ಪಿಎಚ್ಡಿ  ಮಾಡಿದ್ದು …ಎಲ್ಲಾ ಹೇಳಿದ ನಂತರ ; ಗಂಡನ ಕಡೆ ಮಾತು‌ ಹೊರಳಿತು. ‘ ಹೇಗೆ ನಿಮ್ಮ ಮನೆಯವರು ಅಂತ ‘  ಪ್ರಶ್ನೆ ಎಸೆದಳು ಶರ್ಮಿತಾ . ‌ ಹಾಗೆ ನೋಡಿದರೆ ಶರ್ಮಿತಾಳ‌ ಊರಿನವನೇ ಆಗಿದ್ದ ವಿನಾಯಕ ಎಂಜಿನಿಯರಿಂಗ್ ಮಾಡಿ, ದೇಶ ಅಲೆದು,  ಮುಂಬಯಿ, ಪುಣೆ ಸುತ್ತಿ ಕೊಲ್ಲಾಪುರದಲ್ಲಿ ‌ನೆಲೆ ನಿಂತಿದ್ದ.‌   ಕರೋನಾ ಕಾರಣವಾಗಿ‌ ಅವನು ತನ್ನ ಮೂಲ ಮನೆಗೆ ಮರಳಿದ್ದ.‌ ಪಕ್ಕದ ವಾಟಗಾರ ಗ್ರಾಮದ ಹೈಸ್ಕೂಲ್ ಸಹಪಾಠಿ ರೋಶನಿಯನ್ನೇ ಮದುವೆಯಾಗಿದ್ದ. ಸಹಜವಾಗಿ ಕೇಳಿದ ಪ್ರಶ್ನೆ ಅದಾಗಿತ್ತು. ಒಂದು‌ ನಿಟ್ಟುಸಿರು ಬಿಟ್ಟ ರೋಶನಿ “ದೇಶ ವಿದೇಶ ಸುತ್ತಿದರೂ ಗಂಡಸರ‌ ಅನುಮಾನ ಹೋಗಲ್ಲ ಬಿಡು.‌ಅದೇ ಮೊಬೈಲ್ ಹಿಡಿದರೆ ತಕರಾರು.‌ ಕಾಣದ ಸಂಶಯಗಳು ಇದ್ದದ್ದೆ.‌ ಗಂಡಸರಿಗೆ ಎಷ್ಟು ಪ್ರೀತಿ ‌ಕೊಟ್ಟರೂ ,ಸಂಶಯಿಸುವುದ ಬಿಡಲ್ಲ ಎಂದು” ಮೌನವಾದಳು. ತನ್ನ ಸಮಸ್ಯೆಯೂ ಅದೇ ಎಂದು ಹೇಳಬೇಕೆಂದ ಶರ್ಮಿತಾಳ ತುಟಿತನಕ ಬಂದ ಮಾತು ತಡೆದು,‌ಮಾತು ಬದಲಿಸಿದಳು. ಹಾಗೂ  ನೀ‌ನು ಬರೆ ಏನಾದ್ರೂ ಅಂದ್ಲು.‌ “ಹು,‌ ಇನ್ನು ಬರೆಯಬೇಕು. ನೀನು ನಮ್ಮೂರಿಗೆ ಹೆಸರು ತಂದಿದಿಯಾ” .ಅದೇ ಸಂಭ್ರಮ.‌ ನೀ‌‌ ಕೊಟ್ಟ ಕಾವ್ಯದ ಪುಸ್ತಕ ನನ್ನತ್ತೆ ಇಟ್ಟುಕೊಂಡರು. ಅವರ ಮಗಳಿಗೆ ಕೊಡಲು. ನನಗೆ ಮತ್ತೊಂದು ‘ಮಲ್ಲಿಗೆ ದಂಡೆ’ ಕೊಡು ಎಂದು‌ ನಸು‌ನಕ್ಕಳು….ರೋಶನಿ. ಅವಳ ಮಾತಿನ  ಕಣ್ ಮಿಂಚು ಶರ್ಮಿತಾಳ ಎದೆಯೊಳಗೆ ಬೆಳಕು ಹಚ್ಚಿದಂತಾಯಿತು. *********************************

ಮರಳಿ ತವರಿಗೆ Read Post »

ಇತರೆ, ವರ್ತಮಾನ

ಕರೋನ ಅಬ್ಬರದಲ್ಲಿ ಕುಸಲಾಳ ಮನಸ್ಸಿನ ಏಕಾಂತ ಹೊಯ್ದಾಟ..!

ಪ್ರಸ್ತುತ ಕರೋನ ಅಬ್ಬರದಲ್ಲಿ ಕುಸಲಾಳ ಮನಸ್ಸಿನ ಏಕಾಂತ ಹೊಯ್ದಾಟ..! ಕೆ.ಶಿವು.ಲಕ್ಕಣ್ಣವರ ಹೌದಾ.. ನಿಜಾನಾ.. ಇದು ಹೇಗೆ ಸಾಧ್ಯ..? ನಿಜಕ್ಕೂ ಕೊರೊನಾ ವೈರಸ್‌ ಹಿಂದಿರೋ ಕರಾಳ ಸತ್ಯ ಇದೇನಾ..? ಇಡೀ ಜಗತ್ತನ್ನೇ ಕಿರುಬೆರಳಲ್ಲಿ ಆಡಿಸ್ತಿರೋ ಕೊರೊನಾ ವೈರಸ್‌ ಹುಟ್ಟಿನ ಹಿಂದೆ ದೊಡ್ಡ ಷಡ್ಯಂತ್ರವೇ ಇದ್ಯಾ..? ಸೋಶಿಯಲ್ ಮೀಡಿಯಾದಲ್ಲಿ ಕಳೆದೊಂದು ವರ್ಷದಿಂದ ವೈರಲ್ ಆಗ್ತಿರೋ ಒಂದು ವಿಡಿಯೋನ ನೋಡಿದವರ ತಲೆಯಲ್ಲಿ ಇಷ್ಟೊಂದು ಪ್ರಶ್ನೆಗಳು ಹರಿಡಾದ್ತಿವೆ. ಕೊರೊನಾ ವೈರಸ್‌ ಕಾಣಿಸಿಕೊಂಡ ಆರಂಭದಲ್ಲಿ ಶುರುವಾಗಿದ್ದ ಚರ್ಚೆಯೊಂದಕ್ಕೆ ಈ ವಿಡಿಯೋದಿಂದ ಮತ್ತೆ ಪುಷ್ಟಿ ಪುಷ್ಟಿ ನೀಡುತ್ತಿದೆ. ಏನಿದು ವಿಡಿಯೋ..? ಜಗತ್ತು ತಲೆ ಕೆಡಿಸಿಕೊಂಡಿರೋದೇಕೆ..? ಇದು ಆ ಕುಸಲಾಳ ಮನದಾಳದಲ್ಲಿ ಹೀಗೆಯೇ ಆ ಒಂದು ರಾತ್ರಿಯಿಂದ ಪದೆಪದೇ ಮೇಲೇಳಿತ್ತಿರುವ ಪ್ರಶ್ನೆ. ಅದುವೇ ಎಪಿಸೋಡ್‌ 10. 2018ರಲ್ಲಿ ಪ್ರಸಾರವಾದ ವೆಬ್‌ ಸಿರೀಸ್‌ ಇದು. ಸದ್ಯ ಈ ಕಂಟೆಂಟ್‌ ಯುಎಸ್‌ಎ ಹಾಗೂ ಯುಕೆಗೆ ಮಾತ್ರ ಲಭ್ಯವಿದೆ. 10ನೇ ಎಪಿಸೋಡ್‌ನಲ್ಲಿ ಬರುವ ಕೆಲ ಸೀನ್‌ಗಳಲ್ಲಿ ಕೊರೊನಾ ವೈರಸ್‌ನ ಉಲ್ಲೇಖ ಇದೆ. ಈ ವೈರಸ್‌ ಬಗ್ಗೆ, ಅದ್ರ ಹುಟ್ಟಿನ ಬಗ್ಗೆ, ಅದರ ಲಕ್ಷಣಗಳ ಬಗ್ಗೆ ಸಂಭಾಷಣೆ ಇದೆ. ಇದು ಕುಸಲಾಳನ್ನು ಕಂಗೆಡುಸುತ್ತಲೇ ಇದೆ. ಆ ಒಂದು ಕುಸಲಾಳ ಮನಸ್ಸಿನ ನಾಟಕದ ಪಾತ್ರದಾರಿಗಳ ಸಂಭಾಷಣೆ ಕುಸಲಾಳ ಮನಸ್ಸಿನ ಮೇಲೆ ಗಾಯ ಮಾಡಿದವು. ಆ ಪಾತ್ರಧಾರಿಗಳ ಸಂಭಾಷಣೆಗಳು ಹೀಗಿವೆ ನೋಡಿ… ಸೀನ್‌ ನಂಬರ್‌ 1: ಪಾತ್ರಧಾರಿ 1 -ನಾವು ಇದರ ಬಗ್ಗೆ ಮತ್ತಷ್ಟು ಸಂಶೋಧನೆ ಮಾಡಬೇಕಿದೆ. ಪಾತ್ರಧಾರಿ 2 -ಆದ್ರೆ ಅದು ಕೊರೊನಾ ವೈರಸ್‌ ರೀತಿ ಕಾಣುತ್ತಿದೆ..! ಪಾತ್ರಧಾರಿ 1 -ಕೊರೊನಾ..? MERS? ಪಾತ್ರಧಾರಿ 2 -MERS, SARS ಇವು ಸಾಮಾನ್ಯ ಜ್ವರಗಳಾಗಿದ್ವು. ಅವೆಲ್ಲವೂ ಒಂದು ವಿಧಕ್ಕೆ ಸೇರಿದ ಜ್ವರಗಳು. ಅವುಗಳ ಜೀನ್‌ ಇನ್ಫರ್ಮೇಶನ್‌ ಕೂಡ ಒಂದೇ ಆಗಿತ್ತು. ಆದ್ರೆ ಕೊರೊನಾ ವೈರಸ್‌ ರೆಸ್ಪಿರೇಟರಿ ಸಿಸ್ಟಮ್‌( ಉಸಿರಾಟ)ಗೆ ಅಟ್ಯಾಕ್‌ ಮಾಡುತ್ತೆ. 2015ರಲ್ಲಿ MERS ಸಾಂಕ್ರಾಮಿಕ ಕಾಯಿಲೆ ಬಂದಾಗ ಅದರ ಮರಣ ಪ್ರಮಾಣ 20% ಇತ್ತು. ಪಾತ್ರಧಾರಿ 1 -ಆಯುಧವಾಗಿ ಬಳಸೋಕೆ ಅದು ಸಾಕಾಗ್ತಾ ಇರ್ಲಿಲ್ವಾ? ಪಾತ್ರಧಾರಿ 2 -ನಾನ್‌ ಹೇಳಿದ ಹಾಗೆ ಕೊರೊನಾ ರೂಪಾಂತರಗೊಂಡ ವೈರಸ್‌. ಸಾವಿನ ಪ್ರಮಾಣ ಹೆಚ್ಚಾಗುವಂತೆ ಯಾರೋ ಅದನ್ನ ತಿರುಚಿದ್ದಾರೆ. ಇದರ ಮರಣ ಪ್ರಮಾಣ 90%. ಪಾತ್ರಧಾರಿ 1 -90%..!!! ಪಾತ್ರಧಾರಿ 2 -ಕೊರೊನಾ ಬಗ್ಗೆ ಅದಕ್ಕಿಂತಲೂ ಗಂಭೀರ ವಿಚಾರ ಏನು ಅಂದ್ರೆ ಈ ಕೊರೊನಾ ವೈರಸ್‌ ಬೆಳೆಯೋದಕ್ಕೆ 2 ರಿಂದ 14 ದಿನಗಳ ಸಮಯ ತೆಗೆದುಕೊಳ್ಳುತ್ತೆ. ಈ ವೈರಸ್‌ ಕಾಣಿಸಿಕೊಂಡ 5 ನಿಮಿಷಗಳಲ್ಲಿ ನೇರ ಶ್ವಾಸಕೋಶಕ್ಕೆ ಅಟ್ಯಾಕ್‌ ಮಾಡುವಂತೆ ರೂಪಿಸಲಾಗಿದೆ. ಪಾತ್ರಧಾರಿ 1 -ಇದಕ್ಕೆ ಔಷಧ ಇಲ್ವಾ..? ಪಾತ್ರಧಾರಿ 2 -ಈ ಸಮಯದಲ್ಲಿ ಈ ವೈರಸ್‌ಗೆ ಯಾವುದೇ ರೀತಿಯ ವ್ಯಾಕ್ಸಿನ್‌ ಲಭ್ಯವಿಲ್ಲ. ಅದನ್ನ ಅಭಿವೃದ್ಧಿಪಡಿಸೋದು ಕೂಡ ತುಂಬಾ ಕಷ್ಟ. ಸೀನ್ ನಂಬರ್‌ 2: ಪಾತ್ರಧಾರಿ 3 -ಮನುಷ್ಯನೇ ರೂಪಿಸಿದ ವೈರಸ್‌..??? ಪಾತ್ರಧಾರಿ 4 -ಹೌದು. ಪಾತ್ರಧಾರಿ 3 -ಮರಣ ಪ್ರಮಾಣ..? ಪಾತ್ರಧಾರಿ 4 -90% ಪಾತ್ರಧಾರಿ 3 -ಅವ್ರು ಬಯೋಕೆಮಿಕಲ್‌ ಟೆರರಿಸ್ಟ್‌ ಅಟ್ಯಾಕ್‌ಗೆ ಪ್ಲ್ಯಾನ್‌ ಮಾಡ್ತಿದ್ದಾರೆ. ನಾವು ಸಮಯ ಮತ್ತು ಸ್ಥಳವನ್ನು ಫೈಂಡ್‌ ಔಟ್ ಮಾಡಬೇಕು. ಸೀನ್ ನಂಬರ್‌ 3: ಪಾತ್ರಧಾರಿ 5 -ನಾನು ಮನುಷ್ಯನ ದೇಹದ ಮೇಲಿನ ಟೆಸ್ಟ್‌ನ ಪೂರ್ತಿ ಮಾಡಿದ್ದೇನೆ. ಪಾತ್ರಧಾರಿ 6 -ಹೇಗಾಯ್ತು ಟೆಸ್ಟ್‌..? ಪಾತ್ರಧಾರಿ 5 -ನಾವು ಜೆನೆರಿಕ್‌ ಮೆಟೀರಿಯಲ್‌ನ ಯಶಸ್ವಿಯಾಗಿ ಆತನ ದೇಹಕ್ಕೆ ಇಂಜೆಕ್ಟ್‌ ಮಾಡಿದ್ವಿ. ಕೋರ್ಸ್‌ ಪ್ರಾಜೆಕ್ಟ್‌ನ ಸ್ಟಾರ್ಟ್ ಮಾಡೋಕೆ ಇದು ಸೂಕ್ತ ಸಮಯ. ಇವಿಷ್ಟು ಪಾತ್ರಧಾರಿಗಳ ನಡುವೆ ಬರುವ ಸಂಭಾಷಣೆ. ಸೌತ್‌ ಕೊರಿಯಾದ ಭದ್ರತಾ ಸಂಸ್ಥೆಯ (ಎನ್‌ಎಸ್‌ಎ – ನ್ಯಾಷನಲ್‌ ಸೆಕ್ಯುರಿಟಿ ಏಜೆನ್ಸಿ) ಏಜೆಂಟ್‌ ಒಬ್ಬನ ಸ್ನೇಹಿತ ನಿಗೂಢವಾಗಿ ಸಾವನ್ನಪ್ಪಿರ್ತಾನೆ. ಈ ವಿಚಾರದ ಬಗ್ಗೆ ಎನ್‌ಎಸ್‌ಎ ತನಿಖೆ ಆರಂಭ ಮಾಡಿದಾಗ ಶತ್ರುಗಳು ಕೊರೊನಾ ವೈರಸ್‌ನ ಬಯೋಕೆಮಿಕಲ್‌ ವೆಪನ್‌ ಆಗಿ ಬಳಸಿದ್ದಾರೆ ಅನ್ನೋದು ಬೆಳಕಿಗೆ ಬರುತ್ತೆ. ಇದು ಒಂದು ಕುಸಲಾಳ ಮನಸ್ಸಿನ ವೆಬ್‌ ಸಿರೀಸ್‌ನ ಆ ಎಪಿಸೋಡ್‌ನಲ್ಲಿ ಬರುವ ಸ್ಟೋರಿ. ಅಚ್ಚರಿಯ ವಿಷಯ ಏನು ಅಂದ್ರೆ ಚೀನಾದಲ್ಲಿ ಮೊದಲ ಕೊರೊನಾ ಕೇಸ್ ಪತ್ತೆಯಾಗಿದ್ದು 2019ರ ನವೆಂಬರ್‌ನಲ್ಲಿ. ಆದ್ರೆ ಈ ವೆಬ್‌ ಸಿರೀಸ್ ಪ್ರಸಾರವಾಗಿದ್ದು 2018ರಲ್ಲಿ ಇದು ಹೇಗೆ ಸಾಧ್ಯ? ಕೊರೊನಾ ವೈರಸ್‌ ಬಗೆಗಿನ ಭವಿಷ್ಯವಾಣಿಗಳು ಈ ಹಿಂದೆಯೇ ಕೆಲವು ಬಂದಿದ್ರೂ ಕೂಡ ಈ ವೆಬ್‌ ಸಿರೀಸ್‌ನಲ್ಲಿ ಹೇಳಿರುವ ಡೈಲಾಗ್‌ಗಳು ಕರಾರುವಕ್ಕಾಗಿವೆ. ಇದು ಯಾರದ್ದೋ ಷಡ್ಯಂತ್ರದ ಫಲ ಅನ್ನೋದನ್ನ ಸಿನಿಮಾ ಡೈಲಾಗ್‌ ಅಂದ್ರೂ ಕೊರೊನಾದ ಬಗ್ಗೆ ಹೇಳಿರೋ ಲಕ್ಷಣಗಳು 100ಕ್ಕೆ 100ರಷ್ಟು ಸತ್ಯ. ಇದು ಹೇಗೆ ಸಾಧ್ಯ..? ‘ಕೊರೊನಾ’ ಸೃಷ್ಟಿಸಿದ್ದೇ ಚೀನಾ ಅಂದಿದ್ರು ಹಲವರು..! ಕೊರೊನಾ ಕಾಣಿಸಿಕೊಂಡ ಆರಂಭದಲ್ಲಿ ಚೀನಾದವರೇ ಈ ವೈರಸ್‌ನ ತಮ್ಮ ಲ್ಯಾಬ್‌ನಲ್ಲಿ ರೂಪಿಸಿದ್ರು. ಜಗತ್ತಿನ ಮೇಲೆ ಇದ್ರ ಮೂಲಕ ದಾಳಿ ನಡೆಸೋಕೆ ಮುಂದಾಗಿದ್ರು. ಆದ್ರೆ ಬೈ ಮಿಸ್ಟೇಕ್‌ ಅಲ್ಲಿನ ಲ್ಯಾಬ್‌ನಿಂದಲೇ ವೈರಸ್‌ ಲೀಕ್‌ ಆಗಿದೆ ಅನ್ನೋ ವದಂತಿಗಳು ಹರಿದಾಡಿದ್ವು. ಅದ್ರ ಸತ್ಯಾಸತ್ಯತೆ ಯಾರಿಗೂ ಗೊತ್ತಿಲ್ಲ. ಆದ್ರೀಗ ವೆಬ್‌ಸಿರೀಸ್‌ನಲ್ಲಿ ತೋರಿಸಿರುವ ಷಡ್ಯಂತ್ರದ ಸೀನ್‌, ನಿಜಕ್ಕೂ ಹಾಗೆಯೇ ಆಗಿದ್ಯಾ ಅನ್ನೋ ಅನುಮಾನ ಹುಟ್ಟುಹಾಕಿದೆ. ಚೀನಾದಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್‌ಗೂ ಸೌತ್ ಕೊರಿಯಾದ ವೆಬ್‌ ಸಿರೀಸ್‌ಗೂ ಏನ್‌ ಸಂಬಂಧ..? ನೆಟ್‌ಫ್ಲಿಕ್ಸ್‌ನಲ್ಲಿ ಈ ಬಗ್ಗೆ ಸ್ಟೋರಿ ಬಂದಿದೆ ಅಂದ್ರೆ ಇದ್ರ ಬಗ್ಗೆ ಮೊದಲೇ ಅರಿವಿತ್ತು ಅಂತ ಅರ್ಥ. ಅದು ಗೊತ್ತಿದ್ದೂ ಮುಂಜಾಗ್ರತ ಕ್ರಮ ತೆಗೆದುಕೊಳ್ಳೋಕೆ ತಡವಾಗಿದ್ದು ಏಕೆ? ಇಡೀ ಚೀನಾಗೆ ಹಬ್ಬುವವರೆಗೂ ಯಾಕೆ ತಲೆಕೆಡಿಸಿಕೊಂಡಿರಲಿಲ್ಲ. ಇಡೀ ಜಗತ್ತಿಗೇ ವೈರಸ್‌ ಈಗ ಹರಡಿಬಿಟ್ಟಿದೆ. ಆರ್ಥಿಕತೆಗೆ ದೊಡ್ಡ ಹೊಡೆತ ನೀಡಿದೆ. ಇದ್ರ ಹಿಂದೆ ನಿಜಕ್ಕೂ ಷಡ್ಯಂತ್ರ ಇದ್ದಿದ್ದು ಹೌದಾ ಅನ್ನೋ ಬಗ್ಗೆ ನೆಟ್ಟಿಗರು ಈಗ ತಲೆಕೆಡಿಸಿಕೊಳ್ತಿದ್ದಾರೆ. ಹೀಗೆಯೇ ಆ ಕುಸಲಾಳ ಏಕಾಂತ ಮನಸ್ಸಿನ ಅಲೆಗಳು ಏಳುತ್ತಲೇ ಇದ್ದವು. ಆ ಏಕಾಂತ ಮನಸ್ಸಿನ ತಾಕಲಾಟ ತಾಳಲಾರದೇ ಅವಳು ದಿಗ್ಗನೇ ಆ ಒಂದು ಬೆಡ್ ರೂಮಿನಿಂದ ಎದ್ದು ಹೊರ ಬಂದು ದೇವಾಲಯಕ್ಕೆ ಹೊರಡಲು ಅಣಿಯಾದಳು. ದೇವಾಲಯಕ್ಕೆ ಹೋಗಿ ಆ ದೇವರ ದರ್ಶನ ಪಡೆದುಕೊಂಡು ಮನಸ್ಸಿನಲ್ಲೇ ಆ ದೇವರನ್ನು ಬೇಡಿಕೊಂಡಳು ಅಯ್ಯೋ ದೇವರೇ ಈ ಕರೋನ ಸಂದರ್ಭದಲ್ಲಿ ನೀನೇ ಗತಿ ಈಗ ನಮಗೆ. ನಮ್ಮನ್ನು ಅಂದರೆ ಮಾನವರನ್ನು ನೀನೇ ಕಾಪಾಡಪಾ ಈಗ. ಹೀಗೆಯೇ ಆ ದೇವರನ್ನು ಬೇಡಿಕೊಳ್ಳುತ್ತಲೇ ಮಕ್ಕಳು ಮತ್ತು ಗಂಡನು ಆಫೀಸಿನಿಂದ ಮನೆಗೆ ಬರುವುದು ಸಮಯವಾಗಿದೆ ಎಂದು ದೇವಸ್ಥಾನದಿಂದ ಮನೆಗೆ ವಾಪಾಸಾದಳು ಕುಸಲಾಳು… *************************************

ಕರೋನ ಅಬ್ಬರದಲ್ಲಿ ಕುಸಲಾಳ ಮನಸ್ಸಿನ ಏಕಾಂತ ಹೊಯ್ದಾಟ..! Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ರವಿ.ವಿಠ್ಠಲ. ಆಲಬಾಳ. ತುಸು ಹೊತ್ತು ಕಳೆದೆ ,ತುಸು ದೂರ ನಡೆದೆ ,ಸಾಕಿಂದಿಗೆ ಈ ಪ್ರೀತಿಮೋಹಕ ನಗುವಿನಲಿ ಚೆಲುವೆಲ್ಲ ನೋಡಿದೆ ,ಸಾಕಿಂದಿಗೆ ಈ ಪ್ರೀತಿ. ಭಣಗುಡುವ ಎದೆಯಿಂದು ಉಲ್ಲಾಸವನು ತುಂಬಿ ತುಳುಕಿಸಿದೆತುಟಿಕೆಂಪಿನಲಿ ಹೊಸ ಮಿಂಚು ಕಾಣುತಿದೆ ,ಸಾಕಿಂದಿಗೆ ಈ ಪ್ರೀತಿ. ಕಳೆಕಟ್ಟಿಕೊಂಡು ಕಾಣುವ ಕನಸುಗಳಿಗೆ ಸಾವಿರದ ನೆನಕೆ ತಿಳಿಸುವೆಸವಿ ದಿನಗಳ ಕ್ಷಣವನು ತಿರುವಿ ಹಾಕುತಿದೆ ಸಾಕಿಂದಿಗೆ ಈ ಪ್ರೀತಿ . ಏನೆಲ್ಲ ಹೇಳಿದೆ,ಏನೆಲ್ಲ ಕೇಳಿದೆ ,ಬರೀ ಮಾತುಗಳಾಗೇ ಉಳಿದಿವೆದೂರವಿದ್ದರೂ ಸರಿಯೇ ,ನಿನ್ನ ಬಿಂಬ ಇಲ್ಲಿದೆ ಸಾಕಿಂದಿಗೆ ಈ ಪ್ರೀತಿ. ನೀ ಹೊರಟು ಹೋಗುವಾಗ ಕಣ್ಣೀರಲಿ ಎಷ್ಟೋ ಮಾತುಗಳಿದ್ದವುಧ್ವನಿಯಿಲ್ಲದ ಪದಗಳಲ್ಲಿ ಪ್ರೇಮವನೇ ಸುರಿದೆ ಸಾಕಿಂದಿಗೆ ಈ ಪ್ರೀತಿ. ಮರೆತುಬಿಡಲು ಹೃದಯವಿಲ್ಲದ ದೇಹ ನನ್ನದಲ್ಲ ಕೇಳು ಪ್ರಿಯತಮೆರವಿ ಹುಟ್ಟಿ ಮುಳುಗುವವರೆಗೆ ನಿನ್ನ ಗುಂಗಿದೆ ಸಾಕಿಂದಿಗೆ ಈ ಪ್ರೀತಿ. *********************

ಗಜಲ್ Read Post »

ಕಥಾಗುಚ್ಛ

ದನ ಕಾಯೋದಂದ್ರ ಏನ ಮ್ಮ

ಕಿರುಗಥೆ ದನ ಕಾಯೋದಂದ್ರ ಏ‌ನಮ್ಮ ರಶ್ಮಿ .ಎಸ್. ಅರ್ನಿ, ಹೋಂವರ್ಕ್‌ ಮಾಡಿಲ್ಲ… ಇಲ್ಲಮ್ಮ… ಮಾಡಾಂಗಿಲ್ಲ? ಇಲ್ಲಮ್ಮ… ಆಯ್ತು ಹಂಗಾರ… ನಾಳೆಯಿಂದ ಸಾಲೀಗೆ ಹೋಗಬ್ಯಾಡ… ದನಾ ಕಾಯಾಕ ಹೋಗು… ದನಾ ಕಾಯೂದಂದ್ರೇನಮ್ಮ.. ದನಾ ಕಾಯೂದಂದ್ರ ಒಂದು ನಾಲ್ಕು ಎಮ್ಮಿ ಕೊಡಸ್ತೀನಿ. ಎಮ್ಮಿ ಎಲ್ಲೆಲ್ಲಿ ಅಡ್ಡಾಡ್ತಾವ ಅಲ್ಲೆಲ್ಲ ಅದರ ಹಿಂದ ಹಿಂದೇ ಅಡ್ಯಾಡಬೇಕು. ಶಗಣಿ ಹಾಕಿದ್ರೂ, ಸುಸು ಮಾಡಿದ್ರೂ ಅದರ ಜೊತಿಗೇ ಇರಬೇಕು. ಶಗಣಿ ಹಾಕೂದಂದ್ರ? ಎಮ್ಮಿ ಕಕ್ಕಾ ಮಾಡೂದು.. ಅವಾಗೂ ಬಿಟ್ಟು ಹೋಗೂಹಂಗಿಲ್ಲಾ? ಇಲ್ಲ… ಓಹ್‌… ಆಸಮ್‌…ನಾ ಎಮ್ಮೀ ಜೊತೀಗೆ ಇರಬೇಕು.. ಹೌದು… ಅಮ್ಮಾ.. ಹಂಗಾರ ನಾ ಎಮ್ಮೀ ಒಲ್ಲೆ… ಅಮ್ಮಾನ ಕಾಯ್ತೀನಿ. ನೀ ಎಲ್ಲಿ ಹೋದ್ರೂ ನಿನ್ನ ಹಿಂದ ಇರ್ತೀನಿ. ಆಫೀಸಿಗೆ ಬರ್ತೀನಿ. ಮನ್ಯಾಗೂ ನಿನ್ನ ಜೊತಿಗೆ ಇರ್ತೀನಿ. ಬಾತ್‌ರೂಮಿಗೂ ಬರ್ತೀನಿ… ಪ್ಲೀಸ್‌ ಅಮ್ಮಾ… ನಾ ಅಮ್ಮಾಗ ಕಾಯ್ತೀನಿ. ಬೇಕಂದ್ರ ಅಪ್ಪಾಗೂ ಕಾಯ್ತೀನಿ… ಸಾಲೀ ಒಲ್ಲೆ… ……

ದನ ಕಾಯೋದಂದ್ರ ಏನ ಮ್ಮ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ (ಸಂಪೂರ್ಣ ಮತ್ಲಾ ಗಜಲ್) ಸಿದ್ಧರಾಮ ಹೊನ್ಕಲ್ ನನ್ನ ಸಖಿ ಈ ಜಗದಿ ಅಪರೂಪ ಏನನೂ ಬೇಡಳುಕೊಡುವೆ ಅಂದಾಕ್ಷಣವೇ ಕೋಪದಿ ಕ್ಷಣ ಮುನಿವಳು ಏನು ಕೊಟ್ಟರು ಕಡಿಮೆ ಅವಳಿಗೆ ಅಂತಹ ಗುಣದವಳುಮುಳ್ಳು ತರಚುವ ಮೃದು ಮಧುರ ಗುಲಾಬಿ ಅಂಥವಳು ಬೇಡ ಕೊಟ್ಟಷ್ಟು ಆಸೆ ಬೆಳಿವವು ಅಂದು ಕೊಂಡಿಹಳುಆಸೆಯೇ ಇಲ್ಲದ ಅಪ್ಪಟ ಬಂಗಾರು! ನನಗೆ ಸಿಕ್ಕಿಹಳು ತಾ ಕೊಡುವದರಲು ಹೀಗೆ ಬಲೂ ಕಂಜೂಸಿ ಮನದವಳುಮಾತೇ ಮುತ್ತಾಗಿಸಿದವಳು ಬೇಗ ಮುತ್ತು! ಸಹ ನೀಡಳು ಅಭಿಮಾನದಿ ಪ್ರೀತಿ ಪ್ರೇಮದ ಹೊಳೆಯ ಹರಿಸುವಳುಹೊಟ್ಟೆ ಬಟ್ಟೆ ದೇಹ ಬದುಕು ಬರಹ ಚೆಂದ ಮಾಡಿಹಳು ನೋವುಗಳ ನುಂಗಿಬಿಟ್ಟು ಬರೀದೆ ನಗು ನಟಿಸುವಳುಆಗಾಗ ಸಿಟ್ಟು ಸೆಡವು ಹುಸಿ ಕೋಪವು ತೋರುವಳು ಬದುಕಲಾರೆ ಬಿಟ್ಟಿರಲಾರೆ ಈ ಜೀವದ ಜೀವವವಳುಎಲ್ಲಿಯದೋ ಈ ಬಂಧ ಅನುಬಂಧ ಆಗಿಸಿದವಳು ಇದ್ದಲ್ಲೆ ಕಡು ಒಲವಿನ ಮೋಹದ ಮಳೆ ಸುರಿಸುವಳುಹೊನ್ನಸಿರಿ’ಮನ ಸರೋವರದಿ ಶಾಂತ ಇರಿಸುವಳು *******************

ಗಜಲ್ Read Post »

ಕಥಾಗುಚ್ಛ

ನಿರುತ್ತರ

ಕಥೆ ನಿರುತ್ತರ ಚಂದ್ರಿಕಾ ನಾಗರಾಜ್  ಹಿರಿಯಡಕ ಸೆರಗಿನಲ್ಲಿ ಹೆರಕಿ ತಂದಿದ್ದ ಹೂವುಗಳನ್ನು ಒಂದೊಂದಾಗಿಯೇ ತನ್ನ ಪಾಡಿಗೆ ತಾನು, ಹಮ್ಮು ಬಿಮ್ಮಿಲದೇ, ಪ್ರಫುಲ್ಲ ಮನಸ್ಥಿಯಲ್ಲಿ ಹರಿಯುತ್ತಿದ್ದ ತೊರೆಯಲ್ಲಿ ಹರಿಯ ಬಿಡುತ್ತಿದ್ದೆ. ಅದು ಹೂವ ಚಿತ್ತಾರದ ಸೀರೆಯುಟ್ಟ ನೀರೆಯಂತೆ ಬಳುಕುತ್ತಾ ಸಾಗುತ್ತಿತ್ತು.  ನಾನೇಕೋ ಇಂದು ಅದನ್ನು ಆಸ್ವಾದಿಸುವ ಮನಸ್ಥಿತಿಯಲ್ಲಿ ಇಲ್ಲ.  ಕೈಗಳು ಶಾಂತವಾಗಿ ತೊರೆಯ ಮೈ ಸವರುತ್ತಿತ್ತಷ್ಟೆ, ಮನವು ಪ್ರಕ್ಷುಬ್ಧ ಕಡಲಾಗಿತ್ತು.  ದುಃಖ ಹೆಪ್ಪು ಗಟ್ಟಿತ್ತು. ಅದು ಒಡೆದು ಹೋಗಲು ಅವನೇ ಬರಬೇಕು‌.  ಅವನ ಮೈಗಂಧವ  ತಂಗಾಳಿ ನನ್ನ ನಾಸಿಕಗಳಿಗೆ ಸವರಿ ಹೋದರೆ ಸಾಕು ನಾನು ಅದಾಗಲೇ ನಿಟ್ಟುಸಿರಾಗಬಲ್ಲೆ…ಅವನ ಹೆಜ್ಜೆಯ ಸಪ್ಪಳವ ತರಗೆಲೆಗಳು ಮೆತ್ತಗೆ ಚೀರಿ ಕಿವಿಗೆರೆದು ಹಾರಿದರೆ ಸಾಕು ನಾನು ಚುರುಕಾಗಬಲ್ಲೆ  ಇತರೆಡೆ ಗಮನವ ಹರಿಸದೆ ಪಂಚೇಂದ್ರೀಯಗಳು ಕೇವಲ ಆತನ ಹಾದಿಯತ್ತ ತಮ್ಮ ಚಿತ್ತ ಹರಿಸಿವೆ. ಬರಲಿ ಆತ, ಒಂದೊಮ್ಮೆ ಎದುರು ನಿಲಲಿ…ಇರುಳಲಿ ನಿಶಾಚರ ಪ್ರಾಣಿಯಂತಾಗಿದ್ದ ಮನವು ಆತನೆದೆಯಲಿ ನಿದ್ರಿಸಿಬಿಡುವುದೋ…ಮುಂಜಾವಿನಲಿ, ಹಕ್ಕಿಗಳಿಂಚರದಿ ಬೆರೆತು ತಾನು ಹಾಡಾಗದೆ ಉಳಿದ ದನಿ ಮಾತಾಗುವುದೋ…ಅಪರಾಹ್ನದಿ ಸೂರ್ಯದೇವನ  ತಾಪದಲಿ ಮಿಂದು ಬೆಂದಿರುವ ಈ ಒಡಲು ಅವನ ಸುಕೋಮಲ ಸ್ಪರ್ಷಕೆ ತಣಿದು ಕಡಲಾಗುವುದೋ… ಮುಸ್ಸಂಜೆಯ ಈ ರಂಗು ಕೆನ್ನೆಗಂಟಿ ಲಜ್ಜೆಯ ಮಜ್ಜೆಯಾಗುವುದೋ…ಅಥವಾ ವಿರಹದ ಕುಪಿತತೆಯ ಕುರುಹಾಗುವುದೋ…  ಹ್ಹ ಹ್ಹ! ನಿನ್ನ ಬಗೆಗೆ ನನಗೆ ಗೊತ್ತಿಲ್ಲವೇ!.. ಅವನು ಬರುತ್ತಾನೆ..ಒಂದೋ ನೀನವನನ್ನು ನೋಡಿ ಮುಖವ ಸಿಂಡರಿಸುತ್ತಿಯೇ…ಅವನು ಬಳಿ ಬಂದಂತೆ ಒಂದು ಮೋಡ ಮಗದೊಂದು ಮೋಡವ ಬೆಂಬತ್ತುವಂತೆ ನಿಮ್ಮಿಬ್ಬರ ಆಟ ನಡೆಯುತ್ತದೆ. ಮತ್ತೆ ಅವು ಸೇರಲೇ ಬೇಕಲ್ಲವೇ…ಇಲ್ಲವಾದಲ್ಲಿ, ಅವನು ಬರುತ್ತಿರುವಂತೆ ಪಂಜರದಿಂದ ಹೊರಬಿಟ್ಟ ಪಕ್ಷಿಯಂತೆ, ಬೇಡನಿಟ್ಟ ಬಲೆಗೆ ಸಿಲುಕಿದ ಜಿಂಕೆಯೊಂದ ಅದು ಯಾರೋ ಬಿಡಿಸಿದಾಗ  ಛಂಗನೆ ನೆಗೆಯುತ್ತದೆ ನೋಡು ಹಾಗೆ ನೀನು ಓಡಿ ಹೋಗಿ ಆತನ ಯೋಗ ಕ್ಷೇಮ ವಿಚಾರಿಸುತ್ತೀಯೇ, ಸೂರ್ಯ ದೇವನು ತನ್ನೊಡಲ ಸೇರಲು ಕಡಲ ಮೈಬಣ್ಣ ರಂಗೇರುವಂತೆ,  ಅವನ ಮೊಗದಲ್ಲರಳೋ ಕಿರುನಗೆ ನಿನ್ನ ಮೊಗದಲ್ಲಿ ನಸುಗೆಂಪ ಹಮ್ಮಿಸುತ್ತದೆ. ಅಲ್ಲವೇ…!? ಮನದ ಮಾತುಗಳು ಕಲ್ಪನಾ ರೂಪದಲ್ಲಿ ದೃಶ್ಯಗಳಾಗಿ ನಯನಗಳ ಮುಂದೆ ಚಲಿಸಿದಾಗ ನಾನು ಪಿಸು ನಕ್ಕು ತಣ್ಣಗೆ ಹರಿಯುತ್ತಿದ್ದ ತೊರೆಯೊಳಗೆ ಕಾಲ ಇಳಿಬಿಟ್ಟು ಹರ್ಷಿಸಲಾರಂಭಿಸಿದೆ. ಅಷ್ಟರಲ್ಲಾಗಲೆ  ಮೀನುಗಳು ನನ್ನ ಪಾದೋಪಚಾರಕ್ಕೆ ತೊಡಗಿಕೊಂಡವು. ನನ್ನೊಳಗೆ ಕಚಗುಳಿಯ ಅನುಭೂತಿ…ಮೆಲ್ಲನೆ ಬಾಗಿ ನೀರ ಬೊಗಸೆಯಲಿ ಹಿಡಿದು ನೋಡಿದೆ ನನ್ನದೇ ಪ್ರತಿಬಿಂಬ…ಕಾಯುವಿಕೆಯಲಿ ನೋಟವ ನೆಟ್ಟು  ಕಳೆಗುಂದಿರುವ ನೇತ್ರಗಳು…ಚಿಂತನೆಗಳಲಿ ಗಂಟು ಕಟ್ಟಿರುವ ಹುಬ್ಬು, ನೊಸಲು…ಒಲವ ಸುಗಂಧಕ್ಕೆ ಕಾದು ಸೋಲೊಪ್ಪಿಕೊಂಡಿರುವ ನಾಸಿಕ…ಸಾವಿರ ಮಾತುಗಳ ಆಡುವ ತವಕತೆ ಮರೆಯಾಗಿ ಮೌನಕ್ಕೆ ಶರಣಾಗಿರುವ ತುಟಿಗಳು…ನೀರುಣ್ಣದೆ ಬಾಡಿದ ನೈದಿಲೆಯಂತಾಗಿರುವ ಮುಗುಳ್ನಗೆಗೆ ಹಿಗ್ಗಬೇಕಾಗಿದ್ದ ಕೆನ್ನೆ ಗಲ್ಲಗಳು…ಹೌದು, ನಿರೀಕ್ಷೆಗಳು ಸುಡುತ್ತವೆ. ಚಿಂತೆ, ಚಿಂತನೆಗಳನ್ನು ಸೀಳಿ ಆ ಗಾನ ಹೊಮ್ಮಿತು…ಕೊಲ್ಮಿಂಚೊಂದು ಬಂದು ಅಂಧಕಾರದಿ ಬೆವಿತಿರೋ ಜಗವ ಒಮ್ಮೆಗೆ ಬೆಳಗಿ ಹೋದಂತೆ ನನ್ನೊಳಗೆ ಭಾಸವಾಯಿತು. ಮುರಳಿಯ ಗಾನ…ಇದೇ ರಾಗಕೆ ಕಾಯುತ್ತಿದ್ದ ಕರ್ಣಗಳು ನೆಟ್ಟಗಾದವು, ಕಂಗಳು ಮಿಂಚಿದವು, ನಾಸಿಕ ಕೆರಳಿದವು, ತುಟಿಗಳು ಅರಳಿದವು…ಅತ್ತ ಹೊರಟೆ…ಹೌದು, ಇದು ಅವನದೇ ವೇಣುವಿನ ನಾದ…ಇಷ್ಟು ಕಾಯಿಸಿ, ಸತಾಯಿಸಿ ಇದೀಗ ಬಂದನೇ…ಒಡತಿ ಹಾಕುವ ಕಾಳಿಗಾಗಿ ಹಸಿವಿನಿಂದ ಕಾದು ಕೂರುವ ಪಂಜರದ ಶುಕದಂತೆ ನಾನು ಚಡಪಡಿಸಿ ಬಿಟ್ಟೆನಲ್ಲಾ…ನಾನೇ ಬಳಿ ಸಾಗಿ ಬರಲೆಂದು ಅಲ್ಲೆಲ್ಲೋ ಕುಳಿತು ಸುನಾದ ನುಡಿಸುತ್ತಿದ್ದಾನಲ್ಲಾ ಎಂದು ಹುಸಿಗೋಪ ನಟಿಸುತ್ತಾ ನಡೆದೆ…ಇದೀಗಲೇ ಹೋಗಿ ಅವನ ಹೆಗಲಿಗೊರಗಿ ಜಗವ ಮರೆಯಬೇಕು! ಪಾದಗಳು ಅದ್ಯಾವುದೋ ಶಕ್ತಿ ಒಲಿದಿರುವಂತೆ  ಹೆಜ್ಜೆ ಇಡುತ್ತಿದ್ದವು. ಆಗಲೇ ಆ ದೃಶ್ಯ ಕಾಲುಗಳಿಗೆ ವಿರಾಮ ನೀಡಿತು.  ಎಂತಹ ತನ್ಮಯತೆ! ಜಗವ ಮರೆಯಿಸಿ, ತಾನೂ  ಮರೆತಿರುವ ಜಗದ್ದೋದ್ಧಾರಕ..! ಇಳಿ ಸಂಜೆಯಲಿ ತಂಗಾಳಿಯ ಹಾಸುತ್ತಿರುವ ಹಸನ್ಮುಖಿ! ಜೊತೆಗೆ ಅವನ ಮಡಿಲಲಿ ತಲೆ ಇಟ್ಟು ಕಣ್ಣೆವೆಗಳ ಮುಚ್ಚಿ ಅದ್ಯಾವುದೋ ಅವ್ಯಾಹತ ಆನಂದದಿ ಮುಳುಗಿರುವ ದೇವಿ ರುಕ್ಮಿಣಿ. ಹೆಗಲು ಖಾಲಿ…! ಆದರೆ!? ಅವನ ಮನ ತುಂಬಿದೆಯಲ್ಲವೇ..?  ಹಿಂತಿರುಗಿ ನಡೆದೆ… ನಾ ರಾಧೆ… ****************************

ನಿರುತ್ತರ Read Post »

You cannot copy content of this page

Scroll to Top