ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಥಾಗುಚ್ಛ

ಕಾರ್ಮಿಕ ದಿನದ ವಿಶೇಷ-ಕಥೆ

ಕಥೆ ಕರ್ಮ ಮತ್ತು ಕಾರ್ಮಿಕ!  ಪೂರ್ಣಿಮಾ ಮಾಳಗಿಮನಿ ಕರ್ಮ ಮತ್ತು ಕಾರ್ಮಿಕ!  ಎಲ್ಲರ ಮನೆಯ ದೋಸೆಯೂ ತೂತೇ, ಹಾಗಂತ ತೂತಿಲ್ಲದ ದೋಸೆಗಾಗಿ ಹಾತೊರೆಯುವುದನ್ನು ರಾಗಿಣಿ ಬಿಟ್ಟಿರಲಿಲ್ಲ. ಮನೆಯೊಳಗಿನ ಸಣ್ಣ ಪುಟ್ಟ ಜಗಳಗಳಿಗೆ, ಮೂವತ್ತೈದು ವರ್ಷಕ್ಕೇ ಜೀವನವೇ ಸಾಕಾಗಿ ಹೋಗಿದೆ, ಎಂದು ಕೈ ಚೆಲ್ಲಿ ಕುಳಿತ ಹೆಂಡತಿ ರಾಗಿಣಿಯನ್ನು ಮ್ಯಾರೇಜ್ ಕೌನ್ಸಲರ ಬಳಿ ಕರೆದೊಯ್ಯುವ ವಿಚಾರ ಮಾಡಿದ್ದು ಪ್ರಶಾಂತನೇ. ಮಕ್ಕಳೂ ಆಗಿಲ್ಲವೆಂದ ಮೇಲೆ ನಿಮ್ಮ ಹೆಂಡತಿ ಟೈಮ್ ಪಾಸ್ ಮಾಡುವುದಾದರೂ ಹೇಗೆ ಎಂದು  ದಬಾಯಿಸಿ, ಕೌನ್ಸಲರ ಒಂದು ನಾಯಿ ಮರಿ ಸಾಕಿ ಕೊಳ್ಳಿ ಎಂದು ಉಪದೇಶ ಮಾಡಿದ್ದರು.ನಾಯಿ ಮರಿಯನ್ನಾದರೆ ಪದೇ ಪದೇ ಒಂದು, ಎರಡು ಮಾಡಿಸಲು ಮನೆ ಹೊರಗೆ ಕರೆದೊಯ್ಯ ಬೇಕು, ಅದರ ಬದಲು ಬೆಕ್ಕು ಸಾಕಿಕೊಳ್ಳಿ, ಟಾಯ್ಲೆಟ್ ಟ್ರೈನ್ಡ್ ಸಿಗುತ್ತವೆ ಎಂದು ಪಕ್ಕದ ಮನೆ ನಯನ ಹೇಳಿದಾಗ ಫೇಸ್ಬುಕ್ ಮೂಲಕ ಎರಡು ಮುದ್ದಾದ ಬೆಕ್ಕಿನ ಮರಿಗಳನ್ನು ತಂದು ಪ್ರಶಾಂತ ರಾಗಿಣಿ ಮಡಿಲಿಗೆ ಹಾಕಿ, ಇನ್ನಾದರೂ ಶಾಂತಿ ಸಿಗಬಹುದು ಎಂದು ಆಶಿಸಿ, ತನ್ನ ಕೆಲಸದಲ್ಲಿ ಮತ್ತೆ ಮುಳುಗಿ ಬಿಟ್ಟಿದ್ದ. ಹೊಸದಾಗಿ ಸಿಕ್ಕ ಸ್ನೇಹಿತರನ್ನು ಬಹಳ ಹಚ್ಚಿಕೊಂಡ ರಾಗಿಣಿ, ಅವುಗಳ ಆರೈಕೆ, ಊಟ, ವ್ಯಾಕ್ಸೀನ್, ಸ್ನಾನ ಮಾಡಿಸುವುದು, ಹೇನುಗಳಾಗದಂತೆ ಕೂದಲನ್ನು ಬಾಚುವುದು, ದಿನಕ್ಕೊಂದು ಹೊಸ ಸಾಮಾನಿನ ಶಾಪಿಂಗ್, ಎಲ್ಲದರ ಮಧ್ಯೆ ಪ್ರಶಾಂತನೊಂದಿಗೆ ಜಗಳ ಆಡುವುದು ಮರೆತು ಬಿಟ್ಟಳು.  ಹೆಸರುಘಟ್ಟದಲ್ಲಿದ್ದ ಕೃಷಿ ಇಲಾಖೆಯ ಸಾವಿರಾರು ಎಕರೆ ಜಮೀನಿನಲ್ಲಿ ತರಕಾರಿ ಹಣ್ಣು ಹಂಪಲುಗಳ ಕುರಿತು ಸಂಶೋಧನೆ ಮಾಡುವ ವಿಜ್ಞಾನಿಯಾಗಿದ್ದರೂ ಅಪ್ಪಟ ಮಣ್ಣಿನ ಮಗನಾಗಿಬಿಡುತಿದ್ದ  ಪ್ರಶಾಂತನಿಗೆ ತನ್ನ ಕೆಲಸದಲ್ಲಿ ಬಹಳ ಶ್ರದ್ಧೆ ಮತ್ತು ಆಸಕ್ತಿ. ತರಕಾರಿಗಳ ಹೊಸ ಹೊಸ ತಳಿಗಳನ್ನು ಬೆಳೆಸಿ, ಅದಕ್ಕಾಗಿ ಹಗಲಿರುಳೂ ಶ್ರಮಿಸುತ್ತಾ ತನ್ನದೇ ಲೋಕದಲ್ಲಿರುತಿದ್ದ. ಒಮ್ಮೊಮ್ಮೆ ಇಲಾಖೆಯಿಂದ ಅವನಿಗೆ ಒದಗಿಸುತಿದ್ದ ಕೂಲಿ ಆಳುಗಳು ಬರದಿದ್ದರೆ, ತನ್ನ ಆಫೀಸ್ ಕೋಣೆಯಲ್ಲಿ ಇಟ್ಟುಕೊಂಡಿದ್ದ ಒಂದು ಟಿ ಶರ್ಟ್ ಮತ್ತು ಶಾರ್ಟ್ಸ್ ಹಾಕಿಕೊಂಡು ತಾನೇ ಗಿಡಗಳಿಗೆ ಪಾತಿ ಮಾಡುವುದು, ನೀರು ಬಿಡುವುದು ಮಾಡುತ್ತಿದ್ದ. ಮರುದಿನ ಅವರು ಕೈಗೆ ಸಿಕ್ಕಾಗ ನೀರು ಬಿಡದೆ ಗಿಡ ಒಣಗಿಸಿದ್ದಕ್ಕೆ ಚೆನ್ನಾಗಿ ಬೈಯ್ಯ ಬೇಕೆಂದುಕೊಂಡಿದ್ದರೂ, ದಿನಗೂಲಿ ಕಂಟ್ರಾಕ್ಟರ್ ತಿಮ್ಮಾ ರೆಡ್ಡಿ, ತಮ್ಮನ್ನು skilled labour ಅಂತ ಸೇರಿಸಿಕೊಂಡರೂ, unskilled labour ಸಂಬಳವನ್ನೇ ಕೊಡುತ್ತಿದ್ದಾನೆಂದು ಕೂಲಿ ಆಳುಗಳು ದುಃಖ ತೋಡಿಕೊಂಡಾಗ, ಪ್ರಶಾಂತ ತನ್ನ ಥರ್ಮಾಸ್ ನಲ್ಲಿ ತಂದ ಚಹವನ್ನೂ ಅವರಿಗೆ ಬಸಿದುಕೊಟ್ಟು, ಜೇಬಿನಿಂದ ಐದು ನೂರು ಕೊಟ್ಟು ಹಂಚಿಕೊಳ್ಳಿ ಎಂದು ಹೇಳಿ ಹೋಗಿಬಿಡುತಿದ್ದ. ಪ್ರಶಾಂತನ ಸಹೋದ್ಯೋಗಿ, ಅನೂಪ್ ವರ್ಮಾ, ಇದೇ ಕೂಲಿಯಾಳುಗಳು ತಮ್ಮ ಊಟದ ಡಬ್ಬಿಯಲ್ಲಿ ಆರ್ಕಿಡ್, ಕ್ಯಾಕ್ಟಸ್, ಅಣಬೆ, ವಿಭಿನ್ನ ಬಣ್ಣದ ಗುಲಾಬಿ ಮುಂತಾದ ದುಬಾರಿ ಗಿಡಗಳನ್ನು ಬಚ್ಚಿಟ್ಟುಕೊಂಡು ಹೋಗಿ ತಿಮ್ಮಾ ರೆಡ್ಡಿಗೆ ಮಾರಿಕೊಳ್ಳಲು ಕೊಡುತ್ತಿದ್ದುದನ್ನು ತಾನು ಕಣ್ಣಾರೆ ನೋಡಿದ್ದೇನೆ ಎಂದಾಗ, “ಇವರು ಬರೀ ಕಾರ್ಮಿಕರು, ಕರ್ಮದ ಫಲ ಏನೇ ಆಗಿದ್ದರೂ ಅದನ್ನು ಮಾಡಿಸಿದ ರೆಡ್ಡಿ ಅಷ್ಟೇ ಅನುಭವಿಸುತ್ತಾನೆ ಬಿಡಿ.” ಎಂದು ಉಪೇಕ್ಷಿಸಿದ್ದ.   ಪ್ರಶಾಂತನಿಗೆ ಸ್ವಲ್ಪ ಹಣ ಖರ್ಚು ಮಾಡಿದರೆ ಮನಃಶಾಂತಿ ಸಿಗುತ್ತದೆ ಎಂದರೆ ಅದಕ್ಕಿಂತ ಉತ್ತಮ ಒಪ್ಪಂದ ಬೇರೆ ಇಲ್ಲವೆಂದೇ ನಂಬಿಕೆ.  ರೆಡ್ಡಿ ತನ್ನ ಮಾತು ಕೇಳದಿದ್ದರೆ, ಎಂತದ್ದೇ ತುರ್ತು ಪರಿಸ್ಥಿತಿಯಿದ್ದರೂ ಆಳುಗಳಿಗೆ ರಜೆ ಕೊಡುತ್ತಿರಲಿಲ್ಲ. ಎಷ್ಟೋ ಬಾರಿ ಕೆಂಡದಂತೆ ಮೈ ಸುಡುತ್ತಿದ್ದರೂ, ದಿನಗೂಲಿ ಕಳೆದುಕೊಂಡರೆ ಮನೆ ಮಂದಿಯೆಲ್ಲಾ  ಊಟಕ್ಕೆ ಪರೆದಾಡುವಂತಾದೀತು ಎಂದು ಕೂಲಿ ಆಳು ನರಸಯ್ಯ ಕೆಲಸಕ್ಕೆ ಬರುತಿದ್ದುದನ್ನು ಪ್ರಶಾಂತ ನೋಡಿದ್ದ. ಇದ್ದುದರಲ್ಲೇ ಮೈ ಕೈ ತುಂಬಿಕೊಂಡಿದ್ದ ಪುಟ್ಟಮ್ಮ ಮಾತ್ರ ತಿಂಗಳಲ್ಲಿ ನಾಲ್ಕಾರು ಬಾರಿ ರಜೆ ಹಾಕಿ, ಪೂರ್ತಿ ಇಪ್ಪತ್ತಾರು ದಿನಗಳ ಕೂಲಿ ತೆಗೆದುಕೊಳ್ಳುತ್ತಿದ್ದಳು. ಅವಳ ಬಗ್ಗೆ ಮತ್ಸರವಿದ್ದರೂ, ಹೆಂಗಸರಿಗೂ, ಗಂಡಸರಿಗೂ ದಿನಗೂಲಿ ಒಂದೇ ಎಂದು ಹೇಳಿ, ಅವಳಂತೆ ಉಳಿದ ಹೆಂಗಸರಿಗೆ ರೆಡ್ಡಿಯಿಂದ ಆಗುತ್ತಿದ್ದ ಅನ್ಯಾಯವನ್ನೂ ನರಸಯ್ಯನೇ ತಪ್ಪಿಸಿದ್ದ.  ಅದೊಂದು ದಿನ ರಾಗಿಣಿ, “ಈ ಮೂಕ ಪ್ರಾಣಿಗಳಿಗೆ ಆಶ್ರಯ ಕೊಟ್ಟಿದ್ದೇನೋ ಸರಿ. ಆದರೆ ನನಗೆ ಇನ್ನೂ ಏನಾದರೂ ಸಮಾಜ ಸೇವೆ ಮಾಡಬೇಕು ಅನಿಸುತ್ತಿದೆ ಕಣ್ರೀ.” ಎಂದು ರಾಗ ಎಳೆದಾಗ ಪ್ರಶಾಂತ ಆಶ್ಚರ್ಯದಿಂದ ಅವಳನ್ನೇ ಒಂದು ಗಳಿಗೆ ನೋಡಿದ.  “ನಿಜಕ್ಕೂ ಸಮಾಜ ಸೇವೆ ಮಾಡಬೇಕೆಂದಿದ್ದರೆ, ನಮ್ಮ ಕ್ಯಾಂಪಸ್ಸಿಗೆ ಬಂದುಬಿಡು. ನೂರಾರು ಕೂಲಿ ಆಳುಗಳಿರುತ್ತಾರೆ. ಅವರಲ್ಲಿ ಒಂದಿಬ್ಬರಿಗಾದರೂ ಆರೋಗ್ಯ ಸರಿ ಇರುವುದಿಲ್ಲ. ಅಂತವರಿಗೆ ಮರದಡಿ ಮಲಗಲು ಹೇಳಿ, ಅವರ ಕೆಲಸ ನೀನು ಮಾಡು. ಹೇಗೆ?” ಎಂದು ಕೇಳಿ ತನ್ನ ಅದ್ಭುತ ಯೋಚನೆಗೆ ತಾನೇ ತಲೆದೂಗಿ ಕೇಳಿದ.  “ನನಗೆ ಮೊದಲಿನಿಂದಲೂ ಅನುಮಾನ ಇತ್ತು, ನಿಮಗೆ ತಲೆ ಸರಿ ಇಲ್ಲಾಂತ.” ಎಂದು ಬುಸುಗುಡುತ್ತಾ ಹೋದ ರಾಗಿಣಿ ಅಷ್ಟಕ್ಕೇ ಸುಮ್ಮನಾಗಲಿಲ್ಲ.  ‘ಹೆಂಡತಿಗೇ ಕೂಲಿ ಮಾಡಲು ಹೇಳುತ್ತಿದ್ದಾನೆ, ಎಂತಹ ಕ್ರೂರಿ’ ಎಂದು ಅಪ್ಪ ಅಮ್ಮನಿಂದಲೂ ಮತ್ತು ಅತ್ತೆ ಮಾವಂದಿರಿಂದಲೂ ಸರಿಯಾಗಿ ಪೂಜೆ ಮಾಡಿಸಿದಳು. ಪ್ರಶಾಂತ ತೆಪ್ಪನಾದ!  ವಾರ್ಷಿಕ ಕೃಷಿ ಮೇಳಕ್ಕೆ ಇನ್ನು ಎರಡೇ ತಿಂಗಳು ಉಳಿದಿದ್ದುವು. ಸಂಸ್ಥೆಯಲ್ಲಿ ಎಲ್ಲರೂ ಭರದಿಂದ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಮೂರು ದಿನಗಳ ಕಾಲ ನಡೆಯುವ ಕೃಷಿ ಮೇಳದಲ್ಲಿ ಕಾರ್ಯಾಗಾರ, ಬೋಧನೆ, ಪ್ರದರ್ಶನ ಎಲ್ಲದಕ್ಕೂ ಕೂಲಿ ಆಳುಗಳ ಸಹಕಾರ ಬೇಕೇಬೇಕು. ಆದ್ದರಿಂದ ಪ್ರಶಾಂತ ತನ್ನ ತಂಡದಲ್ಲಿದ್ದ ಕೂಲಿಯವರನ್ನು ಖುಷಿಯಾಗಿಟ್ಟುಕೊಳ್ಳಲು ಪ್ರಯತ್ನಿಸುತಿದ್ದ. ಪ್ರತಿದಿನವೂ ಆರೈಕೆ ಬೇಡುವ ಸಸಿಗಳು ಭಾನುವಾರ ರಜೆ ಎಂದರೆ ಮಾತು ಕೇಳಬೇಕಲ್ಲ? ಒಂದು ದಿನವೂ ಮನೆಯಲ್ಲಿರುವುದಿಲ್ಲ ಎಂದು ರಾಗಿಣಿ ರಂಪ ಮಾಡಿದರೂ ಪ್ರಶಾಂತ ಭಾನುವಾರವೂ ತಪ್ಪದಂತೆ ಆಫೀಸಿಗೆ ಬಂದು ಕೆಲಸ ಮಾಡುತಿದ್ದ. ಇದರ ನಡುವೆಯೇ ದಾವಣಗೆರೆಯಲ್ಲಿದ್ದ ಪ್ರಶಾಂತನ ಅಪ್ಪನಿಗೆ ಇದ್ದಕ್ಕಿದ್ದಂತೆ ರಕ್ತದೊತ್ತಡ ಹೆಚ್ಚಾಗಿ ಬಿಟ್ಟಿತು. “ಬಿಡುವಿದ್ದಿದ್ದರೆ ನಾನೇ ಬರುತ್ತಿದ್ದೆ, ಆದರೆ ಕೆಲಸದೊತ್ತಡ ಬಹಳ ಇರುವುದರಿಂದ ಡ್ರೈವರ ಜೊತೆಯಲ್ಲಿ ಬಂದು ಬಿಡಿ.” ಎಂದು ಕಾರು ಕಳಿಸಿದ. ಬೆಂಗಳೂರಿಗೆ ಬಂದಿಳಿದ ಸಂಜೆಯೇ ಅಮ್ಮನಿಗೆ ಭೇದಿ ಕಿತ್ತುಕೊಂಡಿತು. ಅದಕ್ಕೆ ದಾರಿಯಲ್ಲಿ ಮಾಡಿದ ಹೋಟೆಲು ಊಟವೇ ಕಾರಣ ಎಂದು ಡ್ರೈವರಿಗೆ ಅಮ್ಮ ಹಿಡಿ ಶಾಪ ಹಾಕಿದಾಗ, ಪ್ರಶಾಂತ ಮನದೊಳಗೇ ನಡುಗಿದ. ಏಕೆಂದರೆ ಯಾವ ಹೋಟೆಲಿನಲ್ಲಿ ಊಟಕ್ಕೆ ನಿಲ್ಲಿಸಬೇಕು ಎಂದು ಕೂಡ ಪ್ರಶಾಂತನೇ ಡ್ರೈವರಿಗೆ ಹೇಳಿದ್ದ! ಅಮ್ಮನ ಶಾಪ ಯಾರಿಗೆ ತಗಲುವುದೋ ಎಂದು ಹೆದರುತ್ತಲೇ, ಅವಳ ಆರೈಕೆ ಮಾಡಿದ.  ರಾಗಿಣಿ ಅಪರೂಪಕ್ಕೆ ಬಂದ ಅತ್ತೆ ಮಾವಂದಿರ ಸೇವೆಯನ್ನು ಎರಡು ದಿನ ಪ್ರೀತಿಯಿಂದಲೇ ಮಾಡಿದಳು. ಆದರೆ ಅವರು, ಮನೆ ತುಂಬಾ ರಾಜಾರೋಷವಾಗಿ ಓಡಾಡಿಕೊಂಡಿದ್ದ, ಕೊಬ್ಬಿದ್ದ ಬೆಕ್ಕುಗಳನ್ನು ಸಹಿಸುವುದು ಆಗದು, ಅವುಗಳನ್ನು ಈ ಕೂಡಲೇ ಹೊರಗಟ್ಟಿರಿ, ಎಂದಾಗ ಕೆರಳಿದಳು. ಎಲ್ಲೆಂದರಲ್ಲಿ ಅವುಗಳ ಕೂದಲುಗಳೇ; ಅಡುಗೆ ಮನೆಯಲ್ಲಿ ಎಲ್ಲ ಪಾತ್ರೆಗಳಿಗೂ ಬಾಯಿ ಹಚ್ಚಿ ಬಿಡುತ್ತಿದ್ದುದು ನೋಡಿದಾಗಲಂತೂ ಅಮ್ಮ ತನಗೆ ಊಟವೇ ಬೇಡವೆಂದು ಹಠ ಮಾಡಿದರು. ಆಫೀಸಿನ ಕೆಲಸದ ನಡುವೆ ಅಪ್ಪನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾದ ಅನಿವಾರ್ಯತೆಯಿಂದ ಪ್ರಶಾಂತ ಆಗಲೇ ಚಡಪಡಿಸುತ್ತಿದ್ದ. ಇದರ ನಡುವೆ ಬೆಕ್ಕುಗಳದೇ ದೊಡ್ಡ ತಲೆನೋವಾಗಿ ಬಿಟ್ಟಿತು. ರಾಗಿಣಿ ಅಡುಗೆ ಮಾಡುವುದನ್ನಷ್ಟೇ ಅಲ್ಲದೆ ಮಾತು ಕೂಡ ಬಿಟ್ಟಿದ್ದಳು. ಮನೆಗೆ ಬರುವುದು ಎಂದರೆ ಬಹಳ ಧೈರ್ಯಸ್ಥರ ಕೆಲಸ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾದಾಗ, ಮನೆಮಂದಿಯನ್ನೆಲ್ಲಾ ಕೌನ್ಸಲರ ಬಳಿ ಕರೆದುಕೊಂಡು ಹೋಗಬಾರದೇಕೆ ಎನ್ನುವ ಯೋಚನೆ ಬಂದರೂ ಅದನ್ನು ತಳ್ಳಿ ಹಾಕಿ, ಪ್ರಶಾಂತ ಒಂದು ಉಪಾಯ ಮಾಡಿದ.  “ನೋಡು ರಾಗಿಣಿ, ಅಪ್ಪ ಅಮ್ಮ ಇರುವತನಕ ಬೆಕ್ಕುಗಳನ್ನು ನಮ್ಮ ಇಲಾಖೆಯ ಜಮೀನಿನಲ್ಲಿ ಬಿಟ್ಟಿರುತ್ತೇನೆ. ಅವುಗಳನ್ನು ನೋಡಿಕೊಳ್ಳಲು ಒಬ್ಬ ಕೂಲಿ ಹುಡುಗನಿಗೆ ಹೇಳಿ ಸ್ವಲ್ಪ ದುಡ್ಡು ಕೊಟ್ಟಿರುತ್ತೇನೆ. ಆಮೇಲೆ ಮತ್ತೆ ಕರೆ ತಂದರಾಯಿತು.” ಎಂದು ಹೇಳಿದ.  ಸ್ವಭಾವತಃ ದುರ್ಬುದ್ದಿಯವಳೇನಲ್ಲದ ರಾಗಿಣಿ ಬಹಳ ಹೊತ್ತು ಪುಸಲಾಯಿಸಿದ ಮೇಲೆ ಒಪ್ಪಿದಳು.  “I love you ಕಣೇ” ಎಂದು ಪ್ರಶಾಂತ ಅವಳ ಹಣೆಗೆ ಮುತ್ತಿಟ್ಟು, ಅವಳು ಮನಸ್ಸು ಬದಲಾಯಿಸುವ ಮೊದಲೇ ದೊಡ್ಡ ಬುಟ್ಟಿಯೊಂದರಲ್ಲಿ ಎರಡೂ ಮರಿಗಳನ್ನು ಹಾಕಿಕೊಂಡು ಕಾರಿನತ್ತ ನಡೆದ. ಏನನ್ನೋ ನೆನೆಸಿಕೊಂಡು ಹಿಂದೆಯೇ ಬಂದ ರಾಗಿಣಿ, “ಅಲ್ಲಾ ರೀ, ಇವತ್ತು ತಾರೀಖು ಮೇ, ಒಂದು, ತಾನೇ? ಲೇಬರ್ಸ್ ಡೇ, ರಜೆ ಅಲ್ವಾ?” ಎಂದು ಕೇಳಿ, ಇನ್ನೊಂದು ದಿನ ಬೆಕ್ಕುಗಳನ್ನು ಜೊತೆಯಲ್ಲಿಟ್ಟುಕೊಳ್ಳಬಹುದೇನೋ ಎಂದು ಆಸೆಯಿಂದ ನೋಡಿದಳು.  “ರಜೆ ತಕೊಳ್ಳೋಕೆ ನಾನೇನು ಲೇಬರ್ ಏನೇ? ಸೀನಿಯರ್ ಸೈಂಟಿಸ್ಟ್ ನಾನು. ತಲೆಗೆ ಕೆಲಸ ಕೊಡದೆ ಹೇಳಿದ ಕೆಲಸ ಮಾಡುವವರು ಲೇಬರ್ಸು. ದಡ್ಡಿ.” ಎಂದು ತನ್ನ ಜೋಕಿಗೆ ತಾನೇ ನಗುತ್ತ ಪ್ರಶಾಂತ ಹೊರಟೇ ಬಿಟ್ಟ.  ಅವನೆಣಿಕೆಯಂತೆ ಅಂದೂ ಕೂಡ ದಿನಗೂಲಿ ಆಸೆಗೆ ಸುಮಾರು ಜನ ಕೂಲಿ ಆಳುಗಳು ಬಂದಿದ್ದರು. ಆಗಲೇ ಎಷ್ಟೋ ಜನ ವಿವಿಧ ಖಾನೆಗಳಲ್ಲಿ ಬೆಳೆದ ಗಿಡಗಳಿಗೆ ಗೊಬ್ಬರ ಹಾಕುವುದು, ಔಷದಿ ಹೊಡೆಯುವುದು, ಕುಂಬಳ ಕಾಯಿಗಳಿಗೆ ಪ್ಲಾಸ್ಟಿಕ್ ಕವರು ಕಟ್ಟುವುದು, ಪಾತಿ ಮಾಡುವುದು, ಮಣ್ಣಿಗೆ ನೇರವಾಗಿ ಬಿಸಿಲು ಬಿದ್ದು ಒಣಗದಂತೆ ಕಾಪಾಡಲು ಗಿಡಗಳ ಮಧ್ಯೆ ತಾಡಪಾಲು ಹಾಸುವುದು ಮುಂತಾದ ಕೆಲಸಗಳನ್ನು ಮಾಡುತ್ತಿದ್ದರು. ನರಸಯ್ಯನೂ ಅಣತಿ ದೂರದಲ್ಲೇ ಕಂಡಾಗ, ಪ್ರಶಾಂತ ಅವನನ್ನು ಕಾರಿನ ಬಳಿ ಬರುವಂತೆ ಕರೆದ.  “ನರಸಯ್ಯ, ಒಂದು ಸ್ವಲ್ಪ ದಿನ ಈ ಬೆಕ್ಕಿನ ಮರಿಗಳನ್ನು ಇಲ್ಲೇ ಹೊಲದಲ್ಲಿ ಬಿಟ್ಟಿರ್ತೀನಿ, ನೋಡಿ ಕೊಳ್ತೀಯಾ?” ಎಂದು ಕಾರಿನ ಹಿಂದಿನ ಸೀಟಿನಲ್ಲಿ ಬುಟ್ಟಿಯೊಳಗಿಂದ ಒಂದೇ ಸಮನೆ ದೈನ್ಯತೆಯಿಂದ ಕೂಗಿ ಕೊಳ್ಳುತ್ತಿದ್ದ ಬೆಕ್ಕಿನ ಮರಿಗಳನ್ನು ತೋರಿಸಿ, ಒಂದು ಸಾವಿರ ರೂಪಾಯಿಗಳನ್ನು ಕೈಯ್ಯಲ್ಲಿ ಹಿಡಿದು ಚಾಚಿದ.   “ಸಾವಿರಾರು ಎಕರೆ ಜಾಗ ಇದು ಬುದ್ದಿ. ಹಾವು, ನಾಯಿ, ನರಿ ಏನಾದರೂ ಒಂದೇ ದಿನಕ್ಕೆ ಕೊಂದಾಕ್ ಬುಡ್ತಾವೆ.” ಮರುಕದಿಂದ ನರಸಯ್ಯ ಹೇಳಿದ.  ಪ್ರಶಾಂತ ತನ್ನೆದುರೇ ಹಾದು ಹೋದ ಕಾರು ತನ್ನ ಡೈರೆಕ್ಟರದು ಎಂದು ಗುರುತಿಸಿ ಅವಸರ ತೋರಿದ. ಮತ್ತೆ ಜೇಬಿಗೆ ಕೈ ಹಾಕಿ ಇನ್ನೊಂದು ಸಾವಿರ ರೂಪಾಯಿಗಳನ್ನು ಸೇರಿಸಿದ.  “ಕಾಸ್ ಕೊಟ್ ಬುಟ್ಟಿ ಪಾಪ ಎಂಗ್ ಕಳಕಂಡೀರಿ ಬುದ್ದಿ? ನಾನೆಷ್ಟೇ ಆದ್ರೂ ನೀವ್ ಯೋಳಿದ್ ಕೆಲ್ಸ ಮಾಡೋ ಕಾರ್ಮಿಕ ಅಷ್ಟೇಯಾ, ಅಲ್ಲವುರಾ? ಅದರ ಪಾಪ ಪುಣ್ಯ ಎಲ್ಲಾ… ”  ಪ್ರಶಾಂತ ಪೆಚ್ಚಾಗಿ ನರಸಯ್ಯನನ್ನು ನೋಡುತ್ತಲೇ ಇದ್ದ.  “ಇವತ್ತು ಕಾರ್ಮಿಕರ ದಿನ ಅಂತ ನಮ್ಮ ರೆಡ್ಡಿ ಸಾಬು ಸ್ವೀಟ್ ಕೊಡ್ತಾವ್ನೆ ಎಲ್ಲಾರಗುವೆ,” ಎಂದು ಹೇಳಿ ಮೂಕನಾಗಿದ್ದ ಪ್ರಶಾಂತನ ಕೈಯಿಂದ ಹಣ ಪಡೆದುಕೊಂಡು, “ಇವತ್ತೊಂದಿನ ಕಾರ್ಮಿಕನಂಗೆ ಯೋಳಿದ್ ಕೆಲ್ಸ ಮಾಡಾಕಿಲ್ಲ ಬುದ್ದಿ. ಈ ಮರಿಗೋಳ್ನ ಮನೆಗ್ ಎತ್ಗವೋಯ್ತಿನಿ, ಬುಡಿ.” ಎನ್ನುತ್ತಾ ಕಾರಿನ ಹಿಂದಿನ ಬಾಗಿಲು ತೆಗೆದು ಬುಟ್ಟಿಯನ್ನು ಕೈಗೆತ್ತಿಕೊಂಡ.       *******

ಕಾರ್ಮಿಕ ದಿನದ ವಿಶೇಷ-ಕಥೆ Read Post »

ಇತರೆ

ಕಾರ್ಮಿಕ ದಿನದ ವಿಶೇಷ -ಲೇಖನ

ಲೇಖನ ವಿಶ್ವದ ಕಾರ್ಮಿಕರು ಒಂದಾಗಿ ಎನ್ನುವ ಕಾರ್ಮಿಕ ದಿನಾಚರಣೆ ಚಂದ್ರು ಪಿ ಹಾಸನ್ ವಿಶ್ವದ ಕಾರ್ಮಿಕರು ಒಂದಾಗಿ ಎನ್ನುವ ಕಾರ್ಮಿಕ ದಿನಾಚರಣೆ ಕಾಯಕವೇ ಕೈಲಾಸವೆಂಬ ವಿಶ್ವಗುರು ಜಗಜ್ಯೋತಿ ಶ್ರೀ ಬಸವೇಶ್ವರ ರ ಸನ್ನುಡಿ ಗಳಂತೆ ಭೂಮಿಯ ಪ್ರತಿಯೊಂದು ಜೀವಿಯು ಜನಿಸಿದ ಮೇಲೆ ತನ್ನದೇ ಆದ ನಿತ್ಯಕರ್ಮ ಗಳಿಂದ ಜೀವನ ನಡೆಸಬೇಕಾಗುತ್ತದೆ ಕಾರ್ಮಿಕ ಜೀವನಶೈಲಿಯು ಅತ್ಯಂತ ಸುಂದರ ಹಾಗೂ ಸಮಾಧಾನಕರವಾಗಿದೆ . ಕರ್ಮಯೋಗಿ ಕಾರ್ಮಿಕ ಅವನು ಎಲ್ಲ ರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿ ಕೊಂಡು ತನಗಾಗಿ, ತನ್ನವರಿಗೆ, ನನಗೋಸ್ಕರ ದುಡಿಯುತ್ತಲೇ ಇರುವನು. ಈಗಿರುವಾಗ “ವಿಶ್ವದ ಕಾರ್ಮಿಕರೇ ಒಂದಾಗಿರಿ ಒಂದಾಗಿರಿ” ಇದು ವಿಶ್ವಕಾರ್ಮಿಕ ದಿನಾಚರಣೆಯ ಧ್ಯೇಯವಾಕ್ಯ. “ವಿಶ್ವದಾದ್ಯಂತ ಸಮಾಜವಾದೀ ಸ್ಥಾಪನೆಗೆ ಒಂದಾಗಬೇಕು” ಎಂಬುದು ಇದರ ಉದ್ದೇಶ ಸಮಾಜವಾದದ ಮುಖವಾಡ ಧರಿಸಿ ಬಂಡವಾಳಶಾಹಿ ಸಾಮ್ರಾಜ್ಯಶಾಹಿ ವ್ಯವಸ್ಥೆಯನ್ನು ಅಸಮಾನತೆ ಅನ್ಯಾಯ ಶೋಷಣೆಗಳನ್ನು ಶಾಶ್ವತ ಗೊಳಿಸುತ್ತಿರುವ ರಾಷ್ಟ್ರದ ಆಳುವವರ್ಗಗಳ ಬಂಡಾಯ ಶಾಹಿ ಭೂಮಾಲಿಕ ವರ್ಗಗಳ ಶೋಷಿತ ಆಳ್ವಿಕೆಯನ್ನು ಕೊನೆಗೊಳಿಸಲು ರಾಷ್ಟ್ರದಲ್ಲಿನ ಶೋಷಿತ ಕಾರ್ಮಿಕರು ಹಾಗೂ ಇತರ ಎಲ್ಲಾ ಶೋಷಿತ ವರ್ಗಗಳು ಒಂದಾಗಿ ಈ ಶೊಷಕ  ವರ್ಗದ ಆಡಳಿತಕ್ಕೆ ಅಂತ್ಯ ಹಾಡದಿದ್ದರೆ ಸಂವಿಧಾನದಲ್ಲಿ ಘೋಷಿಸಲ್ಪಟ್ಟಿರುವ ಸಮಾಜವಾದವು ಕೇವಲ ಕಾಗದದ ಆಶ್ವಾಸನೆಯಾದೀತೆ ಹೊರತು ಸಾಮಾಜಿಕ ವಾಸ್ತವಿಕತೆ ಆಗಲಾರದು. ಅಂತೆಯೇ ಈ ಮೇ ದಿನಾಚರಣೆಯ ಸಂದೇಶ ‘ಶೋಷಿತ ಕಾರ್ಮಿಕರು ಒಗ್ಗೂಡಿ ಹೋರಾಟಕ್ಕೆ ಮುಂದಾಗಿ ಸಮಾಜವಾದಿ ಸಮಾಜ ಸ್ಥಾಪನೆಗೆ ಕಂಕಣಬದ್ಧರಾಗಬೇಕು’ ಎಂಬುದಾಗಿದೆ ಈ ಎಲ್ಲಾ ನಿಟ್ಟಿನಲ್ಲಿ ಕಾರ್ಮಿಕನು ತನಗೆ ತನ್ನವರಿಗಾಗಿ ಅವರಿಗೋಸ್ಕರ ಕಾರ್ಮಿಕ ಪ್ರಭುತ್ವದ ಅಡಿಯಲ್ಲಿ ತನ್ನ ಪ್ರಭುತ್ವವನ್ನು ಸಾಧಿಸಿ ಜೀವನ ಸಾಗಿಸುತ್ತಾ ಇಂತಹ ಒಂದು ನಿಟ್ಟಿನಲ್ಲಿ ನಡೆಯುತ್ತಿರುವ ಇವನಿಗೊಂದು ದಿನವನ್ನು ಮೀಸಲಿಟ್ಟರೆ ಅದಕ್ಕೆ ಶುಭ ಅರ್ಥ ಸಿಗಬಹುದೆಂಬ ಚಿಂತನೆಗಳು ಅನಾದಿಕಾಲದಿಂದ ಬೆಳೆದುಕೊಂಡು ಬಂದಿತ್ತು. ಕಾರ್ಮಿಕ ಪ್ರಭುತ್ವದ ಕುರುವಿಗಾಗಿ ಮೇ 1 ರಂದು ಉತ್ಸವ ಆಚರಣೆ ಮಾಡಬೇಕೆಂದು ರಾಬರ್ಟ್ ಓವೆನ್ ಸೂಚಿಸಿದನಂತೆ . ಆದರೆ ವಾಸ್ತವವಾಗಿ  1889 ಕ್ಕಿಂತ ಮುಂಚೆ ಮೇ ದಿನಾಚರಣೆ ಮಾಡಿದ್ದಕ್ಕೆ ಯಾವ ಪುರಾವೆಗಳು ದೊರಕಿಲ್ಲ 1889 ರಲ್ಲಿ ಪ್ಯಾರಿಸ್ನಲ್ಲಿ ಸಮಾವೇಶಗೊಂಡಿದ್ದ ಸಮಾಜವಾದಿ ಅಂತರರಾಷ್ಟ್ರೀಯ ಪ್ರಥಮ ಅಧಿವೇಶನದಲ್ಲಿ ಮೇ ಒಂದನೇ ತಾರೀಕು ಅಂತರಾಷ್ಟ್ರೀಯ ಉತ್ಸವವೆಂದು ಆಚರಿಸಬೇಕು ಎಂದು ನಿರ್ಧರಿಸಲಾಯಿತು ಅಲ್ಲದೆ ಮೇ ಒಂದರಂದು ಸಾರ್ವಜನಿಕ ರಜಾದಿನವೆಂದು ಘೋಷಿಸಬೇಕೆಂದು ಒತ್ತಾಯ ಪಡಿಸಲು ನೇರ ಕ್ರಮ ಕೈಗೊಳ್ಳಬೇಕೆಂದು ನಿರ್ಧರಿಸಲಾಯಿತು ಯುರೋಪಿನ ಬಹುತೇಕ ರಾಷ್ಟ್ರಗಳಲ್ಲಿ ಮೇ 1 ರಂದು ಕಾರ್ಮಿಕ ದಿನಾಚರಣೆಯನ್ನಾಗಿ ಆಚರಿಸಲಾಯಿತು. ಹಾಗೆಯೇ ಭಾರತದಲ್ಲಿ ಮೇ ದಿನವೇ ಕಾರ್ಮಿಕ ದಿನ ಇದು ದಶಕದ ದ್ವಿತೀಯಾರ್ಧದಲ್ಲಿ ಕಾರ್ಮಿಕ ಸಂಘಟನೆಗಳ ಪ್ರಭಾವ ಹೆಚ್ಚಿದ್ದರಿಂದ ಇದರ ಆಚರಣೆ ಆರಂಭವಾಯಿತು. ಮೇ ದಿನಾಚರಣೆಯನ್ನು ಭಾಗವಹಿಸಿದ ಮೊಟ್ಟಮೊದಲ ಭಾರತೀಯ ಕಾರ್ಮಿಕರು ಇಂಗ್ಲೆಂಡಿನಲ್ಲಿ ಇದ್ದ ಭಾರತೀಯ ನಾವಿಕರು ಭಾರತಕ್ಕೆ ಸ್ವಾತಂತ್ರ್ಯ ನೀಡಬೇಕೆಂದು ಘೋಷಣೆಯನ್ನು ಒಳಗೊಂಡ ಪ್ರದರ್ಶನ ಚಿತ್ರಗಳನ್ನು ಹಿಡಿದು 1925ರಂದು ಮೆರವಣಿಗೆಯಲ್ಲಿ ಅವರು ಹೈಡ್ ಪಾರ್ಕಿನ ಮೇ ದಿನದ ಉತ್ಸವ ಸಭೆಗೆ ಹೋದರು. ಭಾರತದಲ್ಲಿ ಅವರ ನೆನಪಿಗಾಗಿ ಈ ಮೇ 1 ರಂದು ಕಾರ್ಮಿಕ ದಿನವೆಂದು ಘೋಷಿಸಲಾಯಿತು. 1927 ರಿಂದ ಈಚೆಗೆ ಮುಂಬಯಿಯಲ್ಲಿ ನಡೆದ ಉತ್ಸವದಲ್ಲಿ ಅನೇಕ ಕಾರ್ಮಿಕರ ಮುಖಂಡರು ಭಾಗವಹಿಸಿದ್ದರು, ಅದೇ ರೀತಿ ಎರಡನೇ ಮಹಾಯುದ್ಧದ ನಂತರ ಆ ದಿನವನ್ನು ಹೆಚ್ಚು ವ್ಯಾಪಕವಾಗಿ ಆಚರಿಸಲು ಪ್ರಾರಂಭವಾಯಿತು. ಕಾರ್ಮಿಕರು, ಕಾರ್ಮಿಕ ಸಂಘಗಳ ಕಾಂಗ್ರೆಸ್ ಒಂದನ್ನು ಬಿಟ್ಟು ಉಳಿದೆಲ್ಲ ಕಾರ್ಮಿಕ ಸಂಘಗಳ ಒಟ್ಟಾಗಿ ತಮ್ಮ ಹಕ್ಕುಗಳನ್ನು ಸಾಧಿಸಲು ಭಾರಿ ಮೆರವಣಿಗೆಯಲ್ಲಿ ಪಾರ್ಲಿಮೆಂಟ್ ಭವನದ ಬಳಿಗೆ ಮೆರವಣಿಗೆ ಪ್ರದರ್ಶನ ನಡೆಸಿದ್ದರು. ಇವೆಲ್ಲದರ ಪರಿಣಾಮವಾಗಿ ಅಂದಿನಿಂದ ಇಂದಿನವರೆಗೆ ಭಾರತದಲ್ಲಿ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯನ್ನು ಪ್ರತಿವರ್ಷ ಮೇ 1. ನೇ ತಾರೀಕಿನಂದು ಆಚರಿಸಲಾಗುತ್ತಿದೆ. ಇದರ ಮಹತ್ವವನ್ನು ವಿಶ್ವದಲ್ಲೇ ಪ್ರಥಮ ಸಮಾಜವಾದಿ ರಾಷ್ಟ್ರ ನಿರ್ಮಾಪಕ ರಷ್ಯಾ ಕ್ರಾಂತಿಕಾರಿ ನಾಯಕ ಲೆನಿನ್ ಬಣ್ಣಿಸಿದ್ದು ಹೀಗೆ “ಒಂದು ಸಂಪ್ರದಾಯ ಕ್ರಿಯೆಯಲ್ಲಿ ಶೋಷಿತವರ್ಗಗಳ ಹಾಗೂ ದೇಶಗಳ ವಿಮೋಚನೆಗಾಗಿ ನಡೆಸಬೇಕಾದ ಕ್ರಾಂತಿಕಾರಿ ಹೋರಾಟಗಳು ರಾಜಕೀಯ ಹೋರಾಟಗಳು ಸಾಮ್ರಾಜ್ಯಶಾಹಿ ವಿರೋಧಿ ಅಂತಾರರಾಷ್ಟ್ರೀಯ ಕಾರ್ಮಿಕವರ್ಗದ ಹೋರಾಟ ಅವಶ್ಯಕವಾದ ಚೈತನ್ಯವನ್ನು ಕಾರ್ಮಿಕರು ಬೆಳೆಸಿಕೊಳ್ಳಬೇಕಾದ ಮಹತ್ವದ ದಿನ ಇದು ತಮಗೆ ಸಂಬಂಧಿಸಿದ ದಿನನಿತ್ಯದ ಬೇಡಿಕೆಗಳಿಗಾಗಿ ಸಣ್ಣ ಸಣ್ಣ ಬೇಡಿಕೆಗಳಿಗಾಗಿ ಆಂದೋಲನ ನಡೆಸುವ ಸಂದರ್ಭವಲ್ಲ ಇದು ಅಂತರವನ್ನು ಅರಿತುಕೊಂಡು ಮೇ ದಿನವನ್ನು ಆಚರಿಸುವುದು ಅತ್ಯವಶ್ಯ” ಎಂದು ಈ ಒಂದು ಸಂದೇಶ ನಿಜಕ್ಕೂ ಅದ್ಭುತವಾಗಿದೆ ಒಂದು ನಿಟ್ಟಿನಲ್ಲಿ ಕಾರ್ಮಿಕ ದಿನ’ವನ್ನು ಆಚರಿಸಬೇಕಾಗಿದೆ ಒಬ್ಬ ಕಾರ್ಮಿಕನು ಇತರರ ಅಧೀನದಲ್ಲಿ ಅಂದರೆ ತಮ್ಮ ಸೇವಕ ದಾರರ, ಉದ್ಯೋಗದಾತರ ಗಣಿಗಳ ಅಥವಾ ಯಜಮಾನರ ಕೈಕೆಳಗೆ ದುಡಿಯುವ ಜನರ ಕೆಲಸಕ್ಕೆ ಸಂಬಂಧಿಸಿದಂತೆ ರಚಿತವಾದ ಕೆಲವು ಕಾನೂನುಗಳು ಇವನ್ನು ಕೈಗಾರಿಕ ಕಾನೂನುಗಳು ಅಥವಾ ಕೈಗಾರಿಕಾ ನ್ಯಾಯ ಎಂದು ಕರೆಯಬಹುದು. ಉದ್ಯೋಗದಾತ ಅವನ ಅಧೀನದಲ್ಲಿ ಕೆಲಸ ಮಾಡುವವನಿಗೆ ಏರ್ಪಡುವ ಸಂಬಂಧವನ್ನು ಕಾನೂನಿನ ನಿಯಂತ್ರಣಕ್ಕೆ ಒಳಪಡಿಸುವುದು ಅವಶ್ಯ ಯಜಮಾನ ಕಾರ್ಮಿಕರ ನಡುವಿನ ಸಂಬಂಧ ವಾಸ್ತವವಾಗಿ ಇರಲಿ ಅಥವಾ ಮುಂದೆ ಉದ್ಭವಿಸುವ ಅಂತದ್ದಾಗಿರಲಿ ಕಾರ್ಮಿಕನ ದುಡಿಮೆ ದೈಹಿಕವಾದ್ದಾಗಿರಲಿ, ಮಾನಸಿಕವಾದ್ದಾಗಿರಲಿ ಇಂಥ ಎಲ್ಲ ಸಂದರ್ಭಗಳಿಗೂ ಕಾರ್ಮಿಕ ಕಾನೂನುಗಳು ಅನ್ವಯಿಸುತ್ತದೆ. ಸ್ವತಂತ್ರವಾಗಿ ದುಡಿಮೆ ಮಾಡುವ ಕಾರ್ಮಿಕ ಕಾನೂನು ಅನ್ವಯಿಸುವುದಿಲ್ಲ. ವ್ಯಾಪಕವಾದ ಅರ್ಥದಲ್ಲಿ ಪರಿಗಣಿಸಿದಾಗ ಸಂಘಟನೆ ನಿರುದ್ಯೋಗ ನಿವಾರಣೆ ಕೈಗಾರಿಕಾ ಸಂಬಂಧಗಳು, ಮುಷ್ಕರಗಳು, ಕಾರ್ಖಾನೆಗಳ ಬೀಗಮುದ್ರೆ ಸಂಬಂಧಿಸಿದ ಕಾನೂನು ಗಳನ್ನು ತೆಗೆದುಕೊಂಡು ಅದರಂತೆ ನಡೆಯುವುದು ಈ ದಿನದ ಮಹತ್ವ ಮತ್ತು ಅವರ ಕರ್ತವ್ಯವಾಗಿದೆ. ಕಾರ್ಮಿಕನಿಗೆ ತೊಂದರೆಯಾಗದಂತೆ, ನೆಮ್ಮದಿಗೆ ಭಂಗವಾಗದಂತೆ, ಅವನ ಆರೋಗ್ಯ ಕೆಡದಂತೆ ನೋಡಿಕೊಳ್ಳುವುದು ಈ ದಿನದ ಸಂದೇಶ ಹಾಗೂ ಉದ್ದೇಶ. ಕಾರ್ಮಿಕರ ದುಡಿಮೆಯ ಸಮಯದಲ್ಲಿ ಸಂಭವಿಸಬಹುದಾದ ಕ್ಷ ತಿ ಅಥವಾ ಸಾವಿಗೆ ಸೂಕ್ತ ಪರಿಹಾರ ನೀಡುವ ಕಾಯ್ದೆಯನ್ನು ಸರ್ಕಾರ ಅಂಗೀಕಾರ ಮಾಡಿದೆ ಈ ಎಲ್ಲಾ ಪ್ರಯೋಜನಗಳಿಂದ ಉದ್ಭವ ವಾದ ಕಾರ್ಮಿಕ ದಿನಾಚರಣೆ ಯನ್ನು ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಕಾರ್ಮಿಕ ಸಂಘಗಳು ಮತ್ತು ಸಮಾಜವಾದಿ ಮುಖ್ಯವಾಗಿ ಆಚರಿಸುವ ಸಂಭ್ರಮದ ದಿನ, ಉತ್ಸವದ ದಿನ “ಲೇಬರ್ ಡೇ”. ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಯಲ್ಲಿ ಪ್ರತಿವರ್ಷ ಈ ದಿನದ ಮಹತ್ವವನ್ನು ಪ್ರಪಂಚದ ಹಲವು ದೇಶಗಳಲ್ಲಿ ಅತಿ ಸಡಗರದಿಂದ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ದಿನದಂದು ಕಾರ್ಮಿಕ ಆಂದೋಲನ ಸಾಮಾಜಿಕ ಮತ್ತು ಆರ್ಥಿಕ ಸಾಧನೆಗಳನ್ನು ಆಚರಿಸಲಾಗುತ್ತದೆ, ಅಲ್ಲದೆ ಬಹುತೇಕ ರಾಷ್ಟ್ರಗಳಲ್ಲಿ ಕಾರ್ಮಿಕರ ಮೆರವಣಿಗೆ ಪ್ರದರ್ಶನ ಏರ್ಪಡಿಸಿ ಮಾನವೀಯ ಮೌಲ್ಯಗಳೊಂದಿಗೆ ವಿಶೇಷತೆಯನ್ನು ಮತ್ತು ಕಾರ್ಮಿಕ – ಮಾಲೀಕರ ಸಹಭಾಗಿತ್ವವನ್ನು ಇಲ್ಲಿ ಜರುಗಬಹುದಾದ ಕಾರ್ಮಿಕ ಕಾನೂನುಗಳನ್ನು ಪರಸ್ಪರ ಆರೋಗ್ಯಕರ ಹಂಚಿಕೆಯಿಂದ ಸಂಭ್ರಮದಿಂದ ಆಚರಿಸಲಾಗುತ್ತದೆ ಎಂದು ಹೇಳಬಹುದು **********

ಕಾರ್ಮಿಕ ದಿನದ ವಿಶೇಷ -ಲೇಖನ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಅಪರೂಪದ ಕತೆಗಳು ಕೆ.ವಿ. ತಿರುಮಲೇಶ್ ಅಪರೂಪದ ಕತೆಗಳು ಕಥಾಸಂಕಲನ ಕೆ.ವಿ. ತಿರುಮಲೇಶ್ ಅಭಿನವ ಪ್ರಕಾಶನ. ಇದು ಒಂದು ಅಪೂರ್ವವಾದ ಕಥೆಗಳ ಸಂಕಲನ ಎಂದು ಹೇಳಿದರೆ ತಪ್ಪಾಗಲಾರದು. ಇಲ್ಲಿ ಒಟ್ಟು ಹದಿನಾರು ಕತೆಗಳಿವೆ. ವಿಭಿನ್ನ ಮತ್ತು ವಿಶಿಷ್ಟ ರೀತಿಯಲ್ಲಿ ತಿರುಮಲೇಶರು ಈ ಕತೆಗಳನ್ನು ಹೇಳಿದ್ದಾರೆ. ಅವರ ಕವನ ಸಂಕಲನಗಳು – ಅಕ್ಷಯ ಕಾವ್ಯ,ಅರಬ್ಬಿ, ಅವಧ, ಏನೇನ್ ತುಂಬಿ,ಪಾಪಿಯೂ, ಮಹಾಪ್ರಸ್ಥಾನ, ಮುಖವಾಡಗಳು,ಮುಖಾಮುಖಿ,ವಠಾರ. ಕಥಾಸಂಕಲನಗಳು- ನಾಯಕ ಮತ್ತು ಇತರರು, ಕೆಲವು ಕಥಾನಕಗಳು,ಕಳ್ಳಿ ಗಿಡದ ಹೂ,ಅಪರೂಪದ ಕತೆಗಳು. ಕಾದಂಬರಿಗಳು- ಆರೋಪ, ಮುಸುಗು, ಅನೇಕ. ನಾಟಕಗಳು – ಕಲಿಗುಲ, ಟೈಬೀರಿಯಸ್ ತಿರುಮಲೇಶರು ಭಾಷೆ ಮತ್ತು ವ್ಯಾಕರಣದ ಮೇಲೆ ಬಹಳ ಆಳವಾದ ಹಿಡಿತವನ್ನು ಹೊಂದಿರುವುದು ಇಲ್ಲಿ ಕಂಡುಬರುತ್ತದೆ. ಈ ಕಥಾಗುಚ್ಛದಲ್ಲಿ ನನಗೆ ಅತ್ಯಂತ ಪ್ರಿಯವಾದ ಕತೆ ‘ ಭುಜ್’. ಸದಾಶಿವ ಮತ್ತು ಶಾರದಾ ಹಳ್ಳಿಯಲ್ಲಿ ವಾಸಿಸುತ್ತಿರುವವರು. ಅವರ ತೋಟದಲ್ಲಿ ಕೆರೆಯ ಕೆಸರು ತೆಗೆಯುವ ಕೆಲಸ ಶುರು ಮಾಡಿದ ಮಾಹಿತಿಯೊಂದಿಗೆ ಕತೆ ಆರಂಭವಾಗುತ್ತದೆ. ಭುಜ್ ಎಂಬುದು ಅವರ ಮನೆಯಲ್ಲಿ ಸಾಕಿದ ನಾಯಿ. ಅದು ಅಪರಿಚಿತ ವ್ಯಕ್ತಿಗಳನ್ನು ಕಂಡರೆ ಬೊಗಳುವುದು. ಈ ಕೆಲಸಕ್ಕೆ ಬಂದ ಕೆಲಸಗಾರರ ಮುಖ್ಯಸ್ಥ ನಂಜೇಶನನ್ನು ನೋಡಿ ಬೊಗಳುವುದು ಜಾಸ್ತಿ ಆಗುತ್ತದೆ. ಕೆಸರೆತ್ತುವ ಕೆಲಸವನ್ನು ತೀರ್ಪಿಗೆ ( ಗುತ್ತಿಗೆಗೆ) ನಂಜೇಶನಿಗೆ ನೀಡಿದ ಮೇಲೆ ಸದಾಶಿವರಿಗೆ ಅವನ ಮೇಲೆ ಅಲವರಿಕೆ ಶುರುವಾಗುತ್ತದೆ. ಕೆಲಸ ವಿಳಂಬವಾಗುತ್ತಿದೆ ಎಂದು ಅನುಮಾನ ಉಂಟಾಗುತ್ತದೆ. ಮಧ್ಯೆ ಅವರಿಗೆ ಬೆಂಗಳೂರು ತಿರುಗಾಟ ಬೇರೆ. ಆಗ ಅವರ ಸಂಶಯ ಓದುಗರದೂ ಆಗುತ್ತದೆ. ಹೀಗೆ ಹಲವು ತಿರುವುಗಳನ್ನು ಪಡೆಯುತ್ತಾ ಕತೆ ಸಾಗುತ್ತದೆ‌. ಆದರೆ ಈ ಕತೆ ನಾಯಿಯ ನಿಷ್ಠೆಯ ಬದಲಾವಣೆ, ಅದರಿಂದ ಸದಾಶಿವರಿಗೆ ಉಂಟಾಗುವ ವೇದನೆ ಮತ್ತು ಅವರು ಅಂತಿಮವಾಗಿ ಕಂಡುಕೊಳ್ಳುವ ಊಹಿಸಲಾಗದ ಪರಿಹಾರದೊಂದಿಗೆ ಅಂತ್ಯಗೊಳ್ಳುತ್ತದೆ. ಈ ಕತಾಸಂಕಲನದ ಆರಂಭದ ಕತೆ ಐತ – ಇಲ್ಲಿ ಅಜಿತ ಎಂಬಾತನ ಮೂಲಕ ಬಾಲ್ಯ ಮತ್ತು ಅದರ ನೋವು, ಹಲ್ಲು ಮುರಿದುಕೊಳ್ಳುವ ಪ್ರಸಂಗ ಎಲ್ಲ ಹೇಳುವಾಗ ಒಮ್ಮೊಮ್ಮೆ ಕತೆಗಾರ ಕತೆಯ ಒಳನುಗ್ಗಿ ಏನೋ ಹೇಳುತ್ತಿದ್ದಾರೆ ಅನಿಸುತ್ತದೆ. ಅದೇ ರೀತಿ ಅವಿನಾಶನ ಜನ್ಮದಿನ 1 ಮತ್ತು 2 ರಲ್ಲಿ ಹಾಗೂ ಅನೇಕ: ದ ಮಾರ್ಜಿನಲ್ ಮ್ಯಾನ್ ಎಂಬ ಕಥೆಗಳಲ್ಲಿ ಕಟುವಾಸ್ತವ ಮತ್ತು ತಮ್ಮ ಅನುಭವಕ್ಕೆ ಬಂದ ವಿಷಾದವನ್ನು ಅನಾವರಣ ಮಾಡಿದ್ದಾರೆ ಎಂದೆನಿಸುತ್ತದೆ. ಸಿಂಗರೇನಿ ಸಿರಾಮಿಕ್ಸ್ ಮನೋವೈಜ್ಞಾನಿಕ ಹಿನ್ನೆಲೆಯಲ್ಲಿ ತೆರೆದುಕೊಳ್ಳುವ ಒಂದೊಳ್ಳೆಯ ಕತೆ. ಅತಿಥಿ ನಟಿ ಗ್ರಾಮೀಣ ಪರಿಸರದಲ್ಲಿ ನಡೆಯುವ ಉತ್ತಮ ಕತೆ. ಅರೇಬಿಯಾ – ಅರಬ್ ದೇಶಗಳಲ್ಲಿ ನಡೆದ ಕ್ರಾಂತಿ, ಧಂಗೆ, ಧರ್ಮ ರಾಜಕಾರಣದ ಬಗ್ಗೆ ಹೇಳುತ್ತಾ ವಿಶ್ವದ ರಾಜಕೀಯವನ್ನು ನಮ್ಮ ಮುಂದಿಡುತ್ತದೆ. ಕಾಡಿನ ಯಕ್ಷಿಯೂ ಕಾಡಗದ ರಾಣಿಯೂ ಜನಪದದ ಕತೆಯನ್ನು ಹೇಳುತ್ತಾ ಹಳ್ಳಿಯ ಅಮಾಯಕತೆಯನ್ನು, ವಾತಾವರಣವನ್ನೂ ಬಿಚ್ಚಿಡುತ್ತದೆ. ಎಲ್ಲಿ ಮನಕಳುಕಿರದೊ ಒಂದು ನವಿರಾದ ಪ್ರೇಮ ಮತ್ತು ಸಾಮಾಜಿಕ ಕತೆ. ಸಂಧ್ಯಾದೇವಿ ಎಂಬ ಕತೆಯಲ್ಲಿ ಆರಂಭದಲ್ಲಿ ಮೂರು ಡಾಟು ಮತ್ತು ಅಂತ್ಯದಲ್ಲಿ ನಾಲ್ಕು ಡಾಟು ಬಿಟ್ಟರೆ ಮಧ್ಯೆ ಯಾವ ವಿರಾಮವೂ ಇಲ್ಲ. ಇದು ಚನ್ನಣ್ಣ ವಾಲೀಕಾರ ಅವರನ್ನು ನೆನಪಿಸಿತು. ಮಾತು ಮತ್ತು ಮೌನದ ಕತೆಯಿದು. ಒಂಯ್ಕ ಒಬ್ಬ ಹಳ್ಳಿಯ ಹುಡುಗನ ಕತೆ. ಇಶ್ನಾತ ಮಾಸ್ತರರು ಒಂಯ್ಕ ಓಂಕಾರನಾಥ ಎಂಬ ಹೆಸರಾಂತ ನಟನಾಗಲು ಹೇಗೆ ಕಾರಣರಾದರು ಎಂಬುದನ್ನು ಈ ಕಥೆ ಹೇಳುತ್ತದೆ. ಕಂದೀಲಿನ ಸ್ತ್ರೀ, ಮಾಯಾಬಝಾರ್, ನಿನಾದಗಳು, ಶುಭವಾಗುತೈತೆ! ಕತೆಗಳು ಕೂಡ ತಿರುಮಲೇಶರ ಛಾಪಿನ ವಿಭಿನ್ನ ಕತೆಗಳು. ಈ ವಿಶಿಷ್ಟವಾದ ಕಥಾಸಂಕಲನವನ್ನು ಒಮ್ಮೆ ಓದಿ, ಆಸ್ವಾದಿಸಿ. ***************************************** ಡಾ. ಅಜಿತ್ ಹರೀಶಿ

ಪುಸ್ತಕ ಸಂಗಾತಿ Read Post »

ಅಂಕಣ ಸಂಗಾತಿ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ

ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಮುಚ್ಚಿದ ಬಾಗಿಲು-ತೆರೆಯದ ಕಿಟಕಿ ಭಾಗ-1 ಆಯ್ಕೆ ಬೆಳೆಗಾರರ ಕೈಯಲ್ಲಿಯೇ ಇದೆ ಮೈಸೂರಿನ ನೈಸರ್ಗಿಕ ಕೃಷಿಕ ಕೈಲಾಸಮೂರ್ತಿಯವರು ನಿಸರ್ಗದೊಂದಿಗೆ ಒಡನಾಡುತ್ತ ತಮ್ಮ ಬಾಳ ಇಳಿಸಂಜೆಯನ್ನು ಅರ್ಥಪೂರ್ಣವಾಗಿ ಕಳೆಯುತ್ತಿರುವವರು. ಮನಸೊಬಾ ಪುಕುವೋಕಾ ಅವರ ಪ್ರಭಾವಕ್ಕೊಳಗಾದವರು.. ಬೆಳೆಗಿಂತ ಹೆಚ್ಚು ಕಳೆ ಬಗ್ಗೆ ನಾನು ತಲೆಕೆಡಿಸಿಕೊಳ್ಳುತ್ತೇನೆ ಎಂದು ತಮ್ಮ ಬಗ್ಗೆ ತಾವೇ ತಮಾಷೆ‌ ಮಾಡಿಕೊಳ್ಳುವ ಕೈಲಾಸಮೂರ್ತಿಯವರ ಬಿತ್ತನೆಯಿಂದ ಬೆಳೆದ ಭತ್ತದ ಕೃಷಿ ನೋಡಲು ಕೆಲ ಕಾಲದ ಹಿಂದೆ ಅವರ ಗದ್ದೆಗೆ ಹೋಗಿದ್ದೆ. ‘ಮುಂಗಾರಿನಲ್ಲಿ ಬೆಳೆದ ಭತ್ತದ ತೆನೆಗಳನ್ನು ಕೊಯ್ದು ಉಳಿದ ಹುಲ್ಲನ್ನು ಮಣ್ಣಿಗೇ ಬೆರೆಸಿದ್ದೇವೆ. ಹಿಂಗಾರಿಯಲ್ಲಿ ಅದೇ ಗದ್ದೆಯಲ್ಲಿ ಉದ್ದು ಸಾಸಿವೆ ಬೆಳೆದು ಕಾಲು ಕೊಯ್ದು ಅದನ್ನೂ ಮಣ್ಣಿಗೇ ಸೇರಿಸಿ ಉತ್ತಿ ಭತ್ತ ಬಿತ್ತನೆ ಮಾಡುತ್ತೇವೆ. ನಾವು ಭೂಮಿಗೆ ಗೊಬ್ಬರ ಹಾಕೋದಿಲ್ಲ. ಕಳೆ ತೆಗೆಯೋದಿಲ್ಲ, ಕೀಟನಾಶಕ ಹೊಡೆಯೋದಿಲ್ಲ. ಹೇಗಿದೆ ನೋಡಿ ನಮ್ಮ ಗದ್ದೆಯಲ್ಲಿ ಫಸಲು’..ಎಂದು ಹೆಮ್ಮೆಯಿಂದ ಹೇಳುವ ಕೈಲಾಸಮೂರ್ತಿ ಯವರ ಹೊಲ ಹಸಿರಿನಿಂದ ಕಂಗೊಳಿಸುತ್ತಿತ್ತು! ಇವರ ತೋಟದಲ್ಲಿ ಬೆಳೆದಿರುವ ಮಾವು, ಹಲಸು, ಪರಂಗಿ, ಬಾಳೆ, ಪಪ್ಪಾಯ.. ಸೇರಿದಂತೆ ಎಲ್ಲ ಬೆಳೆ ಬೆಳೆಯುವುದಕ್ಕೂ ಇದೇ ಶಿಸ್ತು. ಕಳೆ ತೀರಾ ಹೆಚ್ಚಾಗದಂತೆ ಕೊಯ್ದು ಅವುಗಳನ್ನೇ ಬೆಳೆಗೆ ಮುಚ್ಚಿಗೆ ಮಾಡುತ್ತಾರೆ. ಅಲ್ಪ ಪ್ರಮಾಣದ ನೀರು ಕೊಡುತ್ತಾರೆ. ಅದ್ಬುತ ಬೆಳೆ ತೆಗೆಯುತ್ತಾರೆ. ಕಳೆಗಿಡಗಳು ಮಣ್ಣಿನ ಜೀವಂತಿಕೆಯನ್ನು ಹೆಚ್ಚಿಸುತ್ತವೆ ಅವುಗಳ ಬುಡದಲ್ಲಿರುವ ಸೂಕ್ಷ್ಮಾಣು ಜೀವಿಗಳು ಮಣ್ಣನ್ನು ಫಲವತ್ತಾಗಿಸುತ್ತವೆ. ಬೆಳೆದ ಬೆಳೆದ ಬೆಳೆ ಸುರಕ್ಷಿತವಾದ ವಿಷಮುಕ್ತ ಆಹಾರ. ‘ಯಾರಿಗೇ ಧಾನ್ಯ, ಹಣ್ಣು, ತರಕಾರಿ ಮಾರುವಾಗ ನನಗೆ ಅಳುಕಿರುವುದಿಲ್ಲ. ಮುಂದಿನ ತಲೆಮಾರಿಗೆ ಸುಸ್ಥಿತಿಯಲ್ಲಿ ಭೂಮಿಯನ್ನು ಕೊಡುತ್ತೇನೆ.ಎಂಬ ಸಮಾಧಾನವೂ ಇದೆ ಎನ್ನುತ್ತಾರೆ’ ಕೈಲಾಸಮೂರ್ತಿ ಯವರು. ಮನೆ ಪಕ್ಕದಲ್ಲಿ ಸೋಲಾರ ಶಕ್ತಿಯಿಂದ ನಡೆಸಬಹುದಾದ ಮಿಲ್ಲ ಹಾಕಿಸಿಕೊಂಡಿದ್ದಾರೆ. ಈ ರೈತರು ತಾವು ಬೆಳೆಸಿದ ಪತ್ರವನ್ನು ಅಕ್ಕಿ ಮಾಡಿ ಗ್ರಾಹಕರಿಗೆ ತಲುಪಿಸುವ ಕೆಲಸವನ್ನೂ ಕೂಡಾ ಮಾಡುತ್ತಿದ್ದಾರೆ. ಇವರ ಕೃಷಿ ಸಾಧನೆಗೆ ಹಲವು ಪ್ರಶಸ್ತಿ, ಪುರಸ್ಕಾರಗಳು ಸಂದಿವೆ. ಇವರ ತೋಟಕ್ಕೆ ದೇಶ ವಿದೇಶದಿಂದ ನೈಸರ್ಗಿಕ ಕೃಷಿ ಅಧ್ಯಯನಕ್ಕೆಂದೇ ಜನರು ಬರುತ್ತಾರೆ. ಲಾಕ್ ಡೌನ್ ಅವಧಿಯಲ್ಲಿ ಮತ್ತೊಮ್ಮೆ ಅವರನ್ನು ಮಾತನಾಡಿಸಿದೆ. ಹೇಗಿದ್ದೀರಿ ಸರ್?… ಚೆನ್ನಾಗಿದ್ದೇವೆ ಮೇಡಂ.ನಮ್ಮ ಬದುಕಿಗೆ ಅಗತ್ಯವಾದ ಬಹುತೇಕ ಬೆಳೆಗಳನ್ನೆಲ್ಲ ನಾವೇ ಬೆಳೆದುಕೊಳ್ಳುವುದರಿಂದ ಮಾರುಕಟ್ಟೆಯ ಅವಲಂಬನೆ ನಮಗಿಲ್ಲ. ಯಾವುದೇ ಬೆಳೆ ಬೆಳೆಯಲು ನಾನು ಮಾಡುವ ಖರ್ಚು ಅತ್ಯಂತ ಕಡಿಮೆಯಾಗಿರುವುದರಿಂದ ಬೆಳೆ ಬಂದಿದ್ದಷ್ಟೂ ಲಾಭವೇ!, ತೋಟದಲ್ಲಿ ಬೆಳೆದ ಹಣ್ಣು ತರಕಾರಿಯನ್ನು ಕೊಯ್ದು ತರುವಾಗ ನಮಗೆ ಬೇಕಾದುದಷ್ಟನ್ನು ಇಟ್ಟುಕೊಂಡು ಉಳಿದದ್ದನ್ನು ಪರಿಚಿತರಿಗೆ ಸ್ನೇಹಿತರಿಗೆ ಹಂಚಿಬಿಡುತ್ತೇನೆ. ಕೊಯಿಲು ಮಾಡದೇ ಬಿಟ್ಟಿದ್ದನ್ನು ಪ್ರಾಣಿ ಪಕ್ಷಿಗಳು ತಿನ್ನುತ್ತವೆ. ಬೇಸಿಗೆಯಲ್ಲಿ ಅವುಗಳಿಗೂ ಅಹಾರದ ಕೊರತೆ ಇರುತ್ತದೆ. ಅದು ಕೂಡಾ ಧನ್ಯತೆ ಮೂಡಿಸುವ ಕೆಲಸವೇ… ಎಂದರು. ಇಂತಹ ನೈಸರ್ಗಿಕ ಕೃಷಿ ಪ್ರಯೋಗವನ್ನು ಎಲ್ಲ ಕೃಷಿಕರೂ ಕೈಗೊಳ್ಳಬಹುದು. ಆರಂಭದಲ್ಲಿ ಅಷ್ಟು ಲಾಭದಾಯವವೆನಿಸದಿದ್ದರೂ ಕಡಿಮೆ ವೆಚ್ಚದಿಂದಾಗಿ ಕೃಷಿಕಾರ್ಯ ಹೊರೆ ಆಗುವುದಿಲ್ಲ ಎನ್ನುವುದನ್ನು ಖಾತ್ರಿಯಾಗಿ ಹೇಳಬಹುದು. ಆದರೆ ಕ್ರಮೇಣ ಇಡೀ ತೋಟ, ಗದ್ದೆಯ ಚಿತ್ರಣವನ್ನೇ ಬದಲಿಸಬಹುದಾದ ಸಾಧ್ಯತೆಯನ್ನು ಕೈಲಾಸಮೂರ್ತಿಯವರು ತಮ್ಮ ತೋಟ ಗದ್ದೆಯನ್ನು ಆಧಾರಸಮೇತವಾಗಿ ತೋರಿಸಿ ಹೇಳುತ್ತಾರೆ.. ರಾಸಾಯನಿಕ ಗೊಬ್ಬರ, ಕೀಟನಾಶಕ, ಕಳೆನಾಶಕಗಳ ಬಲದಲ್ಲಿ ಬೆಳೆ ಬೆಳೆಯುವ ಪಂಜಾಬ್ ಹಸಿರುಕ್ರಾಂತಿಯ ಮುಂಚೂಣಿಯಲ್ಲಿ ನಿಂತಿದೆ. ತತ್ಪರಿಣಾಮವಾಗಿ ಅಲ್ಲಿ ಸರಿಸುಮಾರಾಗಿ ಪ್ರತಿ ಮನೆಯಲ್ಲೂ ಕ್ಯಾನ್ಸರ್ ರೋಗಿಗಳಿದ್ದಾರೆ. ಕೃಷಿಕರೇ ಆಯ್ಕೆ ಇನ್ನೂ ನಿಮ್ಮ ಕೈಯಲ್ಲೇ ಇದೆ. ವಿಷಕೃಷಿ, ಬರಡಾಗುತ್ತಿರುವ ಭೂಮಿ, ಬತ್ತುತ್ತಿರುವ ಜಲಮೂಲ, ಹದಗೆಡುವ ಆರೋಗ್ಯವೇ? ಅಥವಾ ನಿರ್ವಿಷ ಅನ್ನ ,ಫಲವತ್ತಾದ ಭೂಮಿ,ಶುದ್ಧ ಗಾಳಿ, ನೀರು, ಸುಸ್ಥಿರ ಕೃಷಿಯೇ? ಕೊರೋನಾ ವಿಷಕೃಷಿಯ ಬಾಗಿಲು ಮುಚ್ಚುವಂತಾಗಲಿ. ಮುಂದುವರಿಯುವುದು… **********

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ Read Post »

ಕಾವ್ಯಯಾನ

ಕಾರ್ಮಿಕ ದಿನದ ವಿಶೇಷ-ಕವಿತೆ

ಕವಿತೆ ಕಾಯಕದ ದಿನ ನಗರ ಸತ್ತು‌ ಹೋಗಿದೆ ನಾಗರಾಜ ಹರಪನಹಳ್ಳಿ ಕಾಯಕದ ದಿನ ನಗರ ಸತ್ತು‌ ಹೋಗಿದೆ ಕಾಯಕ‌ ಜೀವಿಗಳ ದಿನ ನಗರ ಸತ್ತು‌ ಹೋಗಿದೆ ಬೆವರು ಸುರಿಸಿ‌ ಬದುಕುವ ಜನರ‌ ಹೊರದಬ್ಬಿದೆ ಮಹಲುಗಳ ಕಟ್ಟಿ ಗುಡಿಸಲಲಿ ಬದುಕಿದ ಜನ ಗುಳೆಬಂದ ನಾಡಿಗೆ ಹಸಿವು ಹೊತ್ತು ಮರಳಿದ್ದಾರೆ ಮಡಲಲ್ಲಿ ಕಣ್ಣೀರು ನಿಟ್ಟುಸಿರು ತುಂಬಿಕೊಂಡು ಭೂಮಿ ಬಿಟ್ಟು ಬಂದದ್ದಕ್ಕೆ ಪರಿತಪಿಸಿದ್ದಾರೆ ಈ‌ ಬಿಸಿಲಿಗೂ ಕರುಣೆಯಿಲ್ಲ ಕಾಯಕದ ಮಂತ್ರ ಕೊಟ್ಟ ಬಸವಣ್ಣ, ದುಡಿಮೆಯಲ್ಲಿ ಪಾಲು ಕೇಳಿದ ಕಾರ್ಲಮಾರ್ಕ್ಸ ಮಣ್ಣಲ್ಲಿ ಮಣ್ಣಾಗಿ ಮಲಗಿದ್ದಾರೆ ಸಮಾನತೆ , ಸ್ವಾಭಿಮಾನ ಕಲಿಸಿದ ಕರುಣೆಯ ಬಾಬಾ ಸಾಹೇಬ ಕಲ್ಲಾಗಿದ್ದಾರೆ ಅತ್ತ ಹಳ್ಳಿ ,ಭೂಮಿ ತೊರೆದು ಬಂದವರ ನಗರ ತಳ್ಳಿದ ಕ್ಷಣ ತಲ್ಲಣಗೊಂಡಿದೆ ಒಡಲು ತಾಯಿ‌ನೆಲ ಕಂಗೆಟ್ಟಿದೆ ಹಂಗಿನ‌ ನಗರ ಹೊರತಳ್ಳಿದೆ ಎತ್ತ ಹೋಗಲಿ ಬದುಕೇ ನಡುವಿನ ದಾರಿ ನಿಟ್ಟುಸಿರು‌ ಬಿಟ್ಟಿದೆ ನೆತ್ತಿಯ ಸೂರ್ಯ ಮತ್ತಷ್ಟು ನೆತ್ತಿ‌ಸುಟ್ಟಿದ್ದಾನೆ ಸೋತ ಕಾಲುಗಳು ಹೆಜ್ಜೆ‌ಯಿಡಲು‌ ಸೋಲುತ್ತಿರಲು ಹೊಸ ಆಶಾಕಿರಣ ಮೂಡಿದೆ ಮುಗಿಲಿಗೆ ದಿಗಿಲು ಬಡಿದಂತೆ ಮೋಡಗಳು ದಟ್ಟೈಸಿವೆ ನೆಲ‌ ಹನಿ ಪ್ರೀತಿಗಾಗಿ ಕಾದಿದೆ ಊರ ನೆಲ ತನ್ನ ಜನರ ತಬ್ಬಿಕೊಳ್ಳಲು‌ ಕಾದಿದೆ *********

ಕಾರ್ಮಿಕ ದಿನದ ವಿಶೇಷ-ಕವಿತೆ Read Post »

ಕಾವ್ಯಯಾನ

ಕಾರ್ಮಿಕ ದಿನದ ವಿಶೇಷ-ಕವಿತೆ

ಕವಿತೆ ಕಾರ್ಮಿಕರು ನಾವು ಡಾ.ಪ್ರಸನ್ನ ಹೆಗಡೆ ಕಾರ್ಮಿಕರು ನಾವು ಕಾರ್ಮಿಕರು ನಾವು ಯಂತ್ರದ ವೀಣೆಯ ತಂತಿಯ ಮೀಟುವ ವೈಣಿಕರು ನಾವು ಕಾರ್ಮಿಕರು ನಾವು ಆರ್ಥಿಕ ದೋಣಿಯ ಚಂದದಿ ನಡೆಸುವ ನಾವಿಕರು ನಾವು ಕಾರ್ಮಿಕರು ನಾವು ಒಡೆಯನ ಕನಸಿನ ಬೀಜವ ಬಿತ್ತುವ ಜೀವಿಗಳು ನಾವು ಕಾರ್ಮಿಕರು ನಾವು ಹಗಲಿರುಳೆನ್ನದೆ ನಿಲ್ಲದೆ ನಡೆಯುವ ಕಾಲನ ಕಾಲುಗಳು ನಾವು ಕಾರ್ಮಿಕರು ನಾವು ಮಳೆಬಿಸಿಲೆನ್ನದೆ ಕಾರಣ ಒಡ್ಡದೆ ದುಡಿಯುವ ಜನ ನಾವು ಕಾರ್ಮಿಕರು ನಾವು ಗಣಿಯೊಳಗಿಳಿದು ಕುಲುಮೆಯೊಳ್ಬೆಂದು ಹೊನ್ನಾಗುವ ಜನ ನಾವು ಕಾರ್ಮಿಕರು ನಾವು ಹೊಗೆಯಂಗಳದೊಳಗೆ ಹಗೆಯನು ಎಣಿಸದೆ ಹೂ ನಗೆ ಬೀರುವ ಜನ ನಾವು *********

ಕಾರ್ಮಿಕ ದಿನದ ವಿಶೇಷ-ಕವಿತೆ Read Post »

ಕಾವ್ಯಯಾನ

ಕಾವ್ಯಯಾನ

ಸುರಿಮಳೆ ವೀಣಾ ರಮೇಶ್ ಧೋ ಎಂದಿದೆ ನಗುಮಳೆ ಮನಸಿನ ಸುಂದರ ನಗರಿಯಲಿ ನಿನ್ನ ನಸುನಗುವಿನ ಸಿಹಿ ಸಿಂಚನದ ಕಳೆ ಬಿಸಿಯೇರಿದ ವಿರಹದ ಕಾವಿಗೆ ಒಂದಷ್ಟು ತಂಪು ನೀಡಿದೆ,,ಎಡಬಿಡದೆ ಸುರಿವ ನಿನ್ನ ನಗುವಿನ ನರ್ತನದಲಿ ಮನದ ಇಳೆ ನನ್ನ ಮೈ ಮನಗಳು ಒದ್ದೆಯಾಗಿವೆ ತುಸು ಮೆಲ್ಲ ಬೀಸಿದೆ ನೆನಪಿನ ತಂಗಾಳಿ ಕತ್ತಲೆಯ ಮೌನವಷ್ಟೇ ಸೀಳಿದೆ ತಬ್ಬಿ ಈ ಸುಳಿಗಾಳಿ ಮತ್ತದೇ ಸಿಹಿ ಹನಿಗಳು ಆಳಕೆ ಸುರಿದಿದೆ, ನಾ ತೇಲಿ ಹೋಗುವಷ್ಟು ಹರ್ಷ ಧಾರೆಯಲಿ ನೆನೆಯದಂತೆ ಬಚ್ಚಿಟ್ಟು ಕೊಂಡಿರುವೆ ನೆನಪುಗಳು ನನ್ನೊಳಗೆ ತೋಯದಂತೆ ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಸ್ವರ ಮಾಧುರ್ಯ ಬಿ ಅರುಣ್ ಕುಮಾರ್ ಹೃದಯ ವೀಣೆ ನಾದ ಅಲೆ ಅಲೆಯಾಗಿ ಮನ ಕಡಲಿಗೆ ತಾಕುತಿದೆ ನೋಡು ಒಳಗೆ ಒಮ್ಮೆ ಕಡಲತೀರ ತೆರೆ ತಾಕಲಾಟ ಭಾವಕೋಶ ಪತಂಗದಾಟ ಬಾನುಲಿ ದಿಗಂತ ಮುಟ್ಟಲು ಹಕ್ಕಿಗಳುಲಿಯುತ ಪುಟ ನೆಗೆತ ಪಂಚ ಇಂದ್ರಿಯ ನಿಗ್ರಹಿಸಿ ಒಂದೊಮ್ಮೆ ಕೇಳಿ ನೋಡು ಕರ್ಣಾನಂದ ಉಕ್ಕಿ ಹರಿದು ಆನಂದಬಾಷ್ಪ ಹೊಮ್ಮುವುದು ಒಲವಿನಾಲಿಂಗನ ಮಿಲನ ನಿಸರ್ಗ ಸ್ತನಪಾನ ಚೈತನ್ಯ ಏಳು ಸಾಗರಗಳ ಎಲ್ಲೆ ಮೀರಿ ಕೋಗಿಲೆ ಕಳಕಂಠ ಬೆರೆಸಿದೆ ನಾಕು ತಂತಿಯಲಿ ಹುಟ್ಟಿದ ಸಪ್ತ ಸ್ವರಗಳ ಮಾಧುರ್ಯ ಮಧುರ ರಾಗ ಸಂಭವಿಸಿ ಅಂತರಂಗ ಗಂಗೆ ಹರಿದಿದೆ ಜಗದ ಜಂಜಾಟ ಜರಿದು ಬಾಳಿನ ಸಂಕಟ ಹಿಸುಕಿ ನೋಡು ಒಳಗೆ ಒಮ್ಮೆ ನಾದಮಯ ದೇಹ ದೇಗುಲ. ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ತೇಜಾವತಿ ಹೆಚ್.ಡಿ. ಮೌನದ ಮಾತು ಅರ್ಥವಾಯಿತು ನಿನ್ನಿಂದ ಕಾಣದ ಕನಸು ಗೋಚರವಾಯಿತು ನಿನ್ನಿಂದ ಹದವಾದ ಭೂಮಿ ಬಂಜರಾಗಿತ್ತು ನೀನಿಲ್ಲದೆ ಉತ್ತುವ ಕಾರ್ಯ ಅರ್ಥವಾಯಿತು ನಿನ್ನಿಂದ ಪ್ರೀತಿ ಹೃದಯದಿಂದ ಒಸರುತ್ತಿತ್ತು ರಸಜೇನಾಗಿ ಸವಿಯ ಸವಿವುದು ಶುರುವಾಯಿತು ನಿನ್ನಿಂದ ನೆರಳೂ ಹಿಂಬಾಲಿಸಲು ಅದುರುತ್ತಿತ್ತು ನನ್ನನ್ನು ಕಣ್ಣಲ್ಲಿ ಬೆಳಕು ಒಮ್ಮೆಲೇ ಪ್ರಜ್ವಲಿಸಿತು ನಿನ್ನಿಂದ ಕಾಯಕ್ಕೂ ಆತ್ಮಕ್ಕೂ ಹೊಂದಿಕೆ ಇರಲಿಲ್ಲ ಎನ್ನಲ್ಲಿ ಮನದೊಳಗೆ ತೇಜಸ್ಸಿರುವುದು ತಿಳಿಯಿತು ನಿನ್ನಿಂದ *******

ಕಾವ್ಯಯಾನ Read Post »

ಅಂಕಣ ಸಂಗಾತಿ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ

ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಮುಚ್ಚಿದ ಬಾಗಿಲು-ತೆರೆಯದ ಕಿಟಕಿ ಭಾಗ-10 ಆತ್ಮಾವಲೋಕನಕ್ಕಿದು ಸಕಾಲ.. ಉಳಿದೆಲ್ಲ ಕ್ಷೇತ್ರಗಳಲ್ಲಿಯೂ ದುಡಿಮೆ ನಿಂತರೂ ಕೃಷಿಕ್ಷೇತ್ರದಲ್ಲಿ ದುಡಿಮೆ ನಿಂತಿಲ್ಲ. ಅದನ್ನು ನಿಲ್ಲಿಸುವಂತಿರುವುದೂ ಇಲ್ಲ.ದಾಸ್ತಾನು ಮಾಡಬಹುದಾದ ಬೆಳೆ ಬೆಳೆಯುವ ರೈತರು ಈಗ ಅಷ್ಟಾಗಿ ಚಿಂತೆ ಮಾಡುತ್ತಿಲ್ಲ. ಈ ಬಿಡುವನ್ನು ಸ್ವಲ್ಪ ರಜೆಮೂಡಿನಲ್ಲಿ ಅನುಭವಿಸುತ್ತಿದ್ದಾರೆ. ತೋಟದ ಕೆಲಸವನ್ನು ನಿರ್ವ ಹಿಸುತ್ತಿದ್ದಾರೆ. ಆದರೆ ತರಕಾರಿ ಹೂವು, ಹಣ್ಣು ಬೆಳೆದವರು ಸಂಕಷ್ಟಕ್ಕೆ ಸಿಲುಕಿದ್ದಾರೆ ಅಲ್ಪಾವಧಿಯಲ್ಲಿ ಬರುವ ಬೆಳೆಗೆ ಬೇಸಿಗೆಯಲ್ಲಿ ಉತ್ತಮ ಧಾರಣೆ ದೊರೆಯುತ್ತಿತ್ತು ( ಜಾತ್ರೆ ,ತೇರು ಸಮಾರಂಭಗಳು ಈ ಸಮಯದಲ್ಲಿ ನಡೆಯುತ್ತಿದ್ದವು) ಲಾಕ್ ಡೌನ್ ಅವರ ಎಲ್ಲ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದೆ. ಬಳಕೆದಾರ ರಿಗೆ ಕೊರತೆಯಾಗದಷ್ಟು ಹಣ್ಣು ತರಕಾರಿಗಳು ಮಾರುಕಟ್ಟೆಗೆ ಬರುತ್ತಿವೆ. ಆದರೆ ಅಗ್ಗದ ಬೆಲೆಯಲ್ಲಿಯೇ ದೊರಕುತ್ತಿರುವ ತರಕಾರಿ ಹಣ್ಣುಗಳನ್ನು ಕೊಳ್ಳುವಾಗ ಬೆಳೆದವರಿಗೆ ಸಿಕ್ಕುವುದೆಷ್ಟು ಎಂಬ ಪ್ರಶ್ನೆ ಪ್ರಜ್ಞಾವಂತರ ಮನದಲ್ಲಿ ಏಳುತ್ತಿದೆ. ಕೆಲವು ಧೈರ್ಯಸ್ಥ ರೈತರು ತಾವು ಬೆಳೆದ ಹಣ್ಣು ತರಕಾರಿಗಳನ್ನು ವಿಡಿಯೋ ಮಾಡಿ ಆನ್ಲೈನ್ ಮೂಲಕವೇ ಮಾರಿ ಲಾಭಗಳಿಸಿಕೊಂಡರೆ ಕೆಲವು ರೈತರು ವಾಹನಗಳಲ್ಲಿ ಹಣ್ಣು ತರಕಾರಿ ತುಂಬಿಕೊಂಡು ಮಾರುತ್ತಿದ್ದಾರೆ. ಕೆಲವರು ಬೆಳೆ ವಿನಿಮಯದ ಮೂಲಕ ಸಮಸ್ಯೆ ಗೆ ಪರಿಹಾರ ಹುಡುಕಲೆತ್ನಿಸುತ್ತಿದ್ದಾರೆ. ಹಲವರು ಹತಾಶೆಯಿಂದ ಬೆಳೆದ ಬೆಳೆಯನ್ನು ಬುಲ್ಡೊಜರ್ ಹಚ್ಚಿ ನೆಲಸಮ ಮಾಡುತ್ತಿದ್ದಾರೆ. ಈಗ ಕೃಷಿಕರು ಆತ್ಮ ವಿಮರ್ಶೆ ಮಾಡಿಕೊಳ್ಳಲು ಸಕಾಲ. ಈಗ ಬೆಳೆದ ಒಂದು ಬೆಳೆಗೆ ಸೂಕ್ತ ಬೆಲೆ ದೊರೆಯದಿದ್ದರೂ ಮತ್ತೆ ಬೆಳೆಯಲು ಬೇಕಾದ ಭೂಮಿ ನಿಮ್ಮ ಬಳಿ ಇದ್ದೇ ಇದೆ.( ನಿರುದ್ಯೋಗದ ಭೀತಿ ಇಲ್ಲ) ನಿಮ್ಮ ಊರಿನ ಹವಾಮಾನಕ್ಕೆ ಸೂಕ್ತವಾದ, ಲಭ್ಯವಿದ್ದ ನೀರು ಗೊಬ್ಬರದಲ್ಲಿ ಬೆಳೆಯಬಹುದಾದ ಬೆಳೆಯನ್ನು ಬೆಳೆಯಲು ವಿಚಾರ ಮಾಡಿ.ಅದಕ್ಕೆ ಸ್ಥಳೀಯವಾದ ಮಾರುಕಟ್ಟೆಯೂ ಇದ್ದರೆ ಅನುಕೂಲ. ಇರುವ ಜಮೀನಿನಲ್ಲಿ ಆಹಾರ ಧಾನ್ಯ ತೋಟಗಾರಿಕೆ ಬೆಳೆ, ವಾಣಿಜ್ಯ ಬೆಳೆ… ಹೀಗೆ ಎಲ್ಲವುಗಳನ್ನೂ ಬೆಳೆಯಲೆತ್ನಿಸಿ. ಒಂದು ಬೆಳೆ ಕೈಕೊಟ್ಟರೆ ಇನ್ನೊಂದು ಬೆಳೆ ಕೈಹಿಡಿಯಬಹುದು. ಪ್ರತಿ ಊರಿನಲ್ಲಿರುವ ರೈತರು ಬಗ್ಗಟ್ಟಾಗಿ ಯಾರ ಹೊಲದಲ್ಲಿ ಏನೇನು ಬೆಳೆದರೆ ಒಟ್ಟಾಗಿ ಮಾರುಕಟ್ಟೆ ಹುಡುಕಬಹುದು ಎನ್ನುವುದನ್ನು ವಿಚಾರ ಮಾಡಿ. ಪ್ರತಿ ಬೆಳೆಯನ್ನು ಉತ್ತಮ ಬೆಳೆ ಬರುವವರೆಗೆ ಸಂಸ್ಕರಿಸಿ ದಾಸ್ತಾನು ಇಡುವುದು ಹೇಗೆ, ಮೌಲ್ಯವರ್ಧನೆ ಮಾಡುವುದು ಹೇಗೆ? ಮಧ್ಯವರ್ತಿಗಳ ಕಾಟವಿಲ್ಲದೇ ಬೆಳೆದ ಬೆಳೆಯನ್ನು ಗ್ರಾಹಕರಿಗೆ ತಲುಪಿಸುವುದು ಹೇಗೆ? ಎಂಬುದನ್ನು ಊರ ಜನರು ಒಟ್ಟಾಗಿ ವಿಚಾರ ಮಾಡಿ ಉತ್ತರ ಕಂಡುಕೊಳ್ಳಬೇಕಿದೆ.. ಬೆಳೆ ಬೆಳೆಯಲು ಖರ್ಚು ಕಡಿಮೆ ಮಾಡಿಕೊಂಡರೆ ಬಂದಿದ್ದೆಲ್ಲವೂ ಲಾಭವೇ ಎನ್ನುವ ರೈತರನ್ನು ನಾಳೆ ಪರಿಚಯಿಸುತ್ತೇನೆ… ಮುಂದುವರಿಯುವುದು. ******** ಮಾಲತಿ ಹೆಗಡೆ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ Read Post »

You cannot copy content of this page

Scroll to Top