ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಲಹರಿ

ಭರವಸೆಯ ಹೊರತು ಬೇರೇನೂ ಉಳಿದಿಲ್ಲ

ಲಹರಿ  ವಸುಂಧರಾ ಕದಲೂರು  ಖಾಲಿ ಮಂಕರಿ ಕವಚಿ ಹಾಕಿದಂತೆ ಎಲ್ಲಾ ಖಾಲಿಖಾಲಿಯಾದ ಭಾವ. ನಿರಾಳ ಅಂತೇನಲ್ಲ. ಮನಸ್ಸು ಭಾರವಾಗಿದೆ. ಏನೆಲ್ಲಾ ಇದೆ. ಆದರೂ ಏನೇನೂ ಇಲ್ಲ ಎನ್ನುವ ಒಂಟಿತನ ಹಿಂಡಿಹಿಪ್ಪೆ ಮಾಡುವಂತೆ. ಬಿಸಿಲಿಗೆ ಒಣ ಹಾಕಿದ ಬಟ್ಟೆ ಒಣಗೀ ಒಣಗೀ ಅಲ್ಲೇ ಇದ್ದು ಕೊನೆಗೆ ಬಣ್ಣಗೆಟ್ಟಂತೆ…      ಸದಾ ಗಿಜಿಗಿಜಿ ಗಜಿಬಿಜಿಯಲ್ಲಿ ಸುತ್ತಾಡುತ್ತಿದ್ದ ಮೈ ಮನಸ್ಸೆಲ್ಲಾ ಒಂದು ಕ್ಷಣಕ್ಕೆ  ಥಟ್ ಎಂದು ಏಕಾಂತ ವಾಸಕ್ಕೆ ನಿರ್ಜನ ಕಾಡ ಮಧ್ಯದಲ್ಲಿ ವಿರಮಿಸಿದಂತೆ ಭಾಸವಾಯಿತು. ಆಹಾ..!! ಇದೇ ಬೇಕಾಗಿತ್ತು ನನಗೆ ಎನಿಸಿ ಎಷ್ಟು ಖುಷಿಪಟ್ಟಿತೋ ಮನಸ್ಸು ಗೊತ್ತಿಲ್ಲ. ಆದರೆ ದಿನ ಕಳೆದ ಮೇಲೆಯೇ ಗೊತ್ತಾದದ್ದು ಅದು ವಿಶ್ರಮಿಸುವ ಏಕಾಂತವಲ್ಲ ಭಯ ಹುಟ್ಟಿಸುವ ಸೆರೆವಾಸವೆಂದು.       ಏನೇನೋ ಕಸರತ್ತುಗಳು. ಸಮಾಧಾನಕ್ಕೆ, ಸ್ಫೂರ್ತಿಗೆ, ಭರವಸೆಗೆ ಯತ್ನಿಸುತ್ತಾ ನಾನೂ ನನ್ನವರೂ ಎಲ್ಲರನ್ನೂ ಹುರಿದುಂಬಿಸಲು ಪ್ರಯತ್ನಿಸುತ್ತಲೇ ಇರುವುದು.     ಇದೇ ಸರಿಯಾದ ಸಮಯ. ನಿನ್ನೊಳಗೆ ನೀನೇ ಇಣುಕಿ ನೋಡು. ನೀನು ಯಾರೆಂಬುದೇ ಮರೆತಿದ್ದೆಯಲ್ಲಾ. ಮನೆ, ಮಕ್ಕಳು, ಮನೆಯವರು… ಇನ್ನಾದರೂ ಗಮನಕೊಡು. ಆಂತರ್ಯದ ಕೂಗು ಇನ್ನಿಲ್ಲದಂತೆ ಎಬ್ಬಿಸಲು ಪ್ರಯತ್ನಿಸಿತು. ಹೌದು ನಿಜ. ನಮ್ಮ ಬದುಕು ಈಗ ಮತ್ತೆ ನಮಗೇ ಸಿಕ್ಕಿದೆ. ನಮ್ಮ ಇಷ್ಟದ ತಿನಿಸು, ಮನೆಯವರಿಷ್ಟದ ಉಣಿಸು, ಸಿನೆಮಾ, ಪುಸ್ತಕ…     ಇಷ್ಟಯೇ… ಸಾಕೇ..?!    ಇಲ್ಲ, ಸ್ನೇಹವಿಲ್ಲದೇ, ಸುತ್ತಾಟವಿಲ್ಲದೇ ಇರಲಾಗದು, ಇರಲಾಗದು. ನಾನೇನು ಅವ್ವ, ಅಮ್ಮನ ಕಾಲದವಳೇ..?  ಪ್ರತಿ ದಿನವೂ ಎಂಟರಿಂದ ಹತ್ತು ಗಂಟೆ ಕಾಲ ಮನೆಯ ಹೊರಗೇ ಕಾಲನ್ನು ಇಟ್ಟವಳು. ಈಗ ಕಾಲಿನ ಚಲನೆಯೂ ಇಲ್ಲದಂತೆ, ಕಾಲದ ಚಲನೆಯೂ ಕಾಣದಂತೆ ಉಳಿದುಬಿಡುವುದು ಹೇಗೆ ಸಾಧ್ಯ?     ಎಷ್ಚೆಂದು ಟಿ.ವಿ ನೋಡುವುದು? ಪುಸ್ತಕ ಸಾಂಗತ್ಯ ಮಾಡುವುದು? ಮನೆ ಮಂದಿಯೊಡನೆ ಹರಟುವುದು?  ಅವರಿಗೂ ಬೇಸರವೇ…    ಮಕ್ಕಳಂತೂ ಜೊತೆಗಾರರಿಲ್ಲದೆ ಮೊಬೈಲ್, ಲ್ಯಾಪ್ಟಾಪು, ಟಿ.ವಿ. ಗಳ ಸಾಂಗತ್ಯದಲ್ಲಿ  ರೊಬೋಟುಗಳೇ ಆಗಿಬಿಡುತ್ತಾರೇನೋ ಎಂಬ ಆತಂಕ. ಮಡದಿಯೊಡನೆ ಹೇಳಿಕೊಳ್ಳಲಾರದ ಆಡಲಾರದ ಮಾತುಗಳಿಗೆ ಗಂಡನಿಗೆ ಗೆಳೆಯನ ಕಿವಿ ಬೇಕು. ಹೃದಯದ ಸಾಂತ್ವಾನಕೆ ಸ್ನೇಹದ ಕೈ ಕುಲುಕುವಿಕೆ ಬೇಕು. ಪತಿಯನ್ನು ಪ್ರತಿ ದಿನವೂ ಕೆರಳಿಸಲಾಗದೆ, ಅರಳಿಸಲಾಗದೆ, ಸಮಾಧಾನಿಸಲಾಗದ ಹೆಂಡತಿಯ ಸಂಕಟಕೆ ಸ್ನೇಹಿತೆ ಬೇಕು. ಆಕೆಯೊಡನಾಡುವ ನಾಕಾರು ಮಾತುಗಳು, ಹೊಸ ಪಾಕದ ಪಾಠ, ಧಾರಾವಾಹಿಯ ಕಂತುಗಳ ಕುರಿತ ವಿಮರ್ಶೆ,  ಬಿರುಸಾಗಿ ಪಾರ್ಕುಗಳಲ್ಲಿ ಒಂದರ್ಧ ಗಂಟೆ ಸುತ್ತಾಡುವ ಸ್ವಾತಂತ್ಯ್ರ ಮತ್ತೆ ಇವೆಲ್ಲವೂ ಅವಶ್ಯ ಬೇಕು.         ಪ್ರತಿ ದಿನವೂ ಕೈ ಗಾಡಿಯಲಿ ಸೊಪ್ಪು ತರಕಾರಿ ಹಣ್ಣುಗಳನ್ನಿಟ್ಟುಕೊಂಡು ಕುಳಿತಿರುತ್ತಿದ್ದ ಅಜ್ಜನೋ, ಯುವಕನೋ, ಅಕ್ಕ – ತಂಗಿಯಂತಹವರೋ ತಮ್ಮತಮ್ಮ ಊರದಾರಿ ಹಿಡಿದಿದ್ದಾರೆ. ಅವರಿಗಲ್ಲಿ ಏನಾಗಿದೆಯೋ..? ಪ್ರತಿದಿನದ ಒಂದು ಸಣ್ಣ ನಗೆಯ ವಿನಿಮಯ ಈಗ ಕಡಿತಗೊಂಡಿದೆ. ಮೊಬೈಲ್ ನಂಬರೂ ಪಡೆದಿಲ್ಲ. ದಿನಂಪ್ರತಿ ಸಿಗುವ ಭರವಸೆಯಿದ್ದಾಗ ಮೊಬೈಲ್ ನಂಬರ್ ಪಡೆದು ದೂರಕರೆ ಮಾಡುವ ಜರೂರೇನಿತ್ತು?           ವಾರಕ್ಕೊಮ್ಮೆ ಹೆಚ್ಚು ಖಾರ, ಈರುಳ್ಳಿ, ಕ್ಯಾರೆಟ್ಟು ಹಾಕಿಸಿಕೊಂಡು ತಿನ್ನುತ್ತಿದ್ದ ಮೈಸೂರು ಚುರುಮುರಿಯವನ ಗಾಡಿಯ ಸದ್ದು ಈಗ ಅಡಗಿ ಹೋಗಿದೆ.     ದಿನಪತ್ರಿಕೆಗಳ ಜೊತೆಗೆ ಬರುತ್ತಿರುವ ಜಾಹೀರಾತುಗಳಲ್ಲಿ ಒಂದು ಕರೆ ಮಾಡಿದರೆ ಸಾಕು ಅರ್ಧ ಗಂಟೆಯೊಳಗೆ ನೀವು ಬಯಸಿದ್ದೆಲ್ಲಾ ಮನೆ ಬಾಗಿಲಿಗೆ ಬಂದು ಡೆಲಿವರಿಯಾಗುತ್ತದೆ ಎಂಬುದನ್ನು ನೋಡೀ ನೋಡೀ ಸಾಕಾಗಿದೆ.      ಮನೆಗೆ ಸ್ನೇಹಿತರನ್ನೂ ಬಂಧುಗಳನ್ನೂ ಆರ್ಡರ್ ಮಾಡಿಸಿ ತರಿಸಿಕೊಳ್ಳಬಹುದೇ….?! ಕಾಲ ಇಷ್ಟು ನಿರ್ದಯಿಯಾಗಿ ಹೀಗೆ ಎಲ್ಲವನ್ನೂ ಕಡಿತ ಮಾಡಬಾರದಿತ್ತು… ಆದರೆ ಈಗ ಭರವಸೆಯ ಹೊರತು ಬೇರೇನೂ ಉಳಿದಿಲ್ಲ.  **********

ಭರವಸೆಯ ಹೊರತು ಬೇರೇನೂ ಉಳಿದಿಲ್ಲ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಸುಜಾತಾ ಲಕ್ಮನೆ ಇಲ್ಲಿ ಅಬ್ಬರದ ಬಿನ್ನಾಣ, ಮಾತಿನ ಸಂಚಲಿ ಮೌನ ಗೆಲ್ಲುವುದಿಲ್ಲಸಭ್ಯ ನಡೆಗೆಲ್ಲ ನ್ಯಾಯದ ತಕ್ಕಡಿಯಲಿ ಮಾನ್ಯತೆ ಸಿಗುವುದಿಲ್ಲ ತಾ ನಡೆವ ದಾರಿಯೆಲ್ಲವೂ ರಾಜಪಥವೆಂಬ ವಿಭ್ರಮೆ ತರವೇಯಾವ ಪಯಣವೂ ಕವಲೊಡೆಯದೇ ಗುರಿ ತಲುಪುವುದಿಲ್ಲ ಶಶಿ ಸೂಸುವ ಕಿರಣ ಪ್ರಭೆ ಇಳೆಯ ಕಣಕಣಕೂ ತಂಪನ್ನೆರಚದೇಒಳತೋಟಿಗಳ ತೂರಿದಂತೆ ಎದೆಯ ತೊಳಲಾಟ ತಗ್ಗುವುದಿಲ್ಲ ಅಂತರಂಗ ತೆರೆದಿಟ್ಟ ಭಾವಗಳು ಬೀದಿಗಳಲಿ ಬಿಕರಿಯಾಗುತ್ತವೆಸುಳ್ಳಿನ ಜಗದಲಿ ಸತ್ಯದ ಕದಪಿಗಿಟ್ಟ ಮಸಿ ಬಿಳಿಯಾಗುವುದಿಲ್ಲ ನೇರವಾಗಿ ನಿಂತಷ್ಟೂ ವಕ್ರರೇಖೆಯ ಬಣ್ಣ ಬೆನ್ನಿಗೆ ಮೆತ್ತುವರುಒಳದನಿಯ ಧಿಕ್ಕರಿಸಿ ನಡೆದಂತೆಲ್ಲ ಬಂಧ ಹಿತವಾಗುವುದಿಲ್ಲ ಕೈ ಚೀಲ ಹಿಡಿದು ಹಲ್ಕಿರಿದು ಓಲೈಸುವವರಿಗಷ್ಟೇ ಮನ್ನಣೆಯಿಲ್ಲಿನಲ್ನುಡಿಗಳಿಗೂ ಕೆಸರೆರಚುವವರ ಘನತೆ ಅಟ್ಟಕ್ಕೇರುವುದಿಲ್ಲ ಒಲವು, ಆದರವಿಲ್ಲದ ಕಡೆ ಇದ್ದು ಸಾಧಿಸುವುದೇನು “ಸುಜೂಅಸಲಿ, ನಕಲಿಯನೆ ಒರೆ ಹಚ್ಚಲು ಸೋತರೆ ಮೌಲ್ಯವಿರುವುದಿಲ್ಲ **************************

ಗಜಲ್ Read Post »

ಅಂಕಣ ಸಂಗಾತಿ, ಕಬ್ಬಿಗರ ಅಬ್ಬಿ

ಕಬ್ಬಿಗರ ಅಬ್ಬಿ – ಸಂಚಿಕೆ ೩

ಶ್ರಾವಣ ಗೀತ ಮಹಾದೇವ ಕಾನತ್ತಿಲ ಸಂಕ್ರಮಣ! ಹೌದು, ಸಂಕ್ರಮಣ, ಒಂದು ಸ್ಥಿತಿಯಿಂದ ಇನ್ನೊಂದಕ್ಕೆ, ಮತ್ತೆ ಮತ್ತೊಂದಕ್ಕೆ!.  ಅಂಗಳದಲ್ಲಿ ಲಂಗದಾವಣಿ ಹಾಕಿ ಕುಣಿದು ಹಾರುತ್ತಿದ್ದ ಹುಡುಗಿ, ಪುಷ್ಪವತಿಯಾಗಿ, ಗಾಂಭೀರ್ಯ ತುಂಬಿ, ಗಜಗಾಮಿನಿಯಾದಾಗ ಸಂಕ್ರಮಣ. ಒಂದು ಮುಂಜಾನೆ, ಕಪ್ಪುಹಸಿರು ಜಡ ಎಲೆಗಳ ಮಾಮರದಲ್ಲಿ, ನಸುಗೆಂಪು ತಳಿರು ಚಿಗುರೊಡೆದಾಗ ಮರಕ್ಕೆ ಸಂಕ್ರಮಣ. ನಲವತ್ತರ ನಸುಕಲ್ಲಿ, ಕಣ್ಣು ಮಬ್ಬಾಗಿ ನೆಟ್ಟ ನೇರ ನೋಟಕ್ಕೆ, ಚಾಳೀಸು ಬಂದಾಗ ಸಂಕ್ರಮಣ. ಅರುವತ್ತಕ್ಕೆ ವೃತ್ತಿಯಿಂದ ನಿವೃತ್ತಿ ಸಂಕ್ರಮಣ. ಹೆಚ್ಚೇನು! ಸೂರ್ಯೋದಯ,ಸೂರ್ಯಾಸ್ತಮಾನ ದಿನ ರಾತ್ರೆಗಳ ಅದಲು ಬದಲು ಸಂಕ್ರಮಣ!.  ಪ್ರಕೃತಿಯಲ್ಲಿ, ಬದುಕಿನ ಘಟನೆಗಳಲ್ಲಿ, ಅರ್ಥವ್ಯವಸ್ಥೆಯ ಸಾಧ್ಯತೆಗಳಲ್ಲಿ, ನೇರವಾಗಿ ಚಲಿಸುವ ನಮ್ಮ ಕಾರು, ಅಚಾನಕ್ ಆಗಿ ರಸ್ತೆ ಬಲಕ್ಕೋ, ಎಡಕ್ಕೋ  ತಿರುಗಿದರೆ ಒಂದು ಬಿಂದುವಿನಲ್ಲಿ ದಾರಿ ಸಂಕ್ರಮಿಸುತ್ತದೆ. ಹೌದು ಅಲ್ಲೊಂದು ಸಂಧಿಬಿಂದುವಿದೆ. ಇಂತಹ ಸಂಕ್ರಮಣಕ್ಕೆ, ಕವಿಮನಸ್ಸನ್ನು ಹೇಗೆ ಸ್ಪಂದಿಸಬಹುದು ಎನ್ನುವುದು ಕೌತುಕವೇನಲ್ಲ. ಕವಿಮನಸ್ಸು ಅತ್ಯಂತ ಸೂಕ್ಷ್ಮ. ಸುತ್ತುಮುತ್ತಲಿನ ಅತಿ ಚಿಕ್ಕ ಬದಲಾವಣೆಗಳನ್ನೂ, ಗಮನಿಸಿ ಸ್ಪಂದಿಸುವ, ಅನುಭವಿಸಿ, ಸೃಜಿಸುವ ಮನಸ್ಸದು. ಉದಾಹರಣೆಗೆ, ನಿನ್ನೆಯವರೆಗೆ ರಣರಣ ಬಿಸಿಲು, ಸಾಯಂಕಾಲ ಗಾಳಿಬೀಸಿದರೂ, ಒಲೆಯಿಂದ ಹೊರಟ ತಿದಿಯ ಹಾಗೆ ಬೇಯಿಸುವ ಗಾಳಿ. ಧೂಳನ್ನೆಬ್ಬಿಸುವ, ಸುಳಿ ಸುಳಿಯಾಗಿ ತಿರುಗಿಸುವ ಸುಂಟರಗಾಳಿ. ಆಕಾಶದಲ್ಲಿ ಬಿಳೀ ಮೋಡಗಳು ನಿರಾಶೆಯ ಹೆಣವನ್ನು ಹೊತ್ತು ಸ್ಮಶಾನ ಹುಡುಕುವಂತೆ ಸುತ್ತುವಾಗ, ಮಳೆಯೆಲ್ಲಿಯದು! ಎಲ್ಲೋ ಮರೀಚಿಕೆಯಂತೆ ಒಂದೋ ಎರಡೋ ಹನಿ ಉದುರಿಸಿ ವಾತಾವರಣವನ್ನು, ಇಡ್ಲಿ ಬೇಯಿಸುವ ಕುಕ್ಕರ್ ನೊಳಗಿನ ಹಬೆಯಂತೆ ಬೆವರಿಳಿಸುವ ಹವೆ.  ಹಾಗಿದ್ದಾಗ ಅಚಾನಕ್ ಆಗಿ ಮಳೆ ಬಂದರೆ! ಅದೆಂಥಾ ಮಳೆ!. ಇಳೆ ತಣಿಸುವ, ನೊಂದು ಬಿಕ್ಕಳಿಸುವ ಮನಸ್ಸಿಗೆ ಬೆನ್ನು ಸವರಿ ಸಾಂತ್ವನ ಹೇಳುವ ಅಮ್ಮನ ಸ್ಪರ್ಶದಂತಹಾ ಮಳೆ!. ಮಳೆಯೋ ಮಳೆ. ಹ್ಞಾ! ಇದೊಂದು ಮೈನವಿರೇಳಿಸುವ ಸಂಕ್ರಮಣವೇ!. ಹೀಗೆ ಉತ್ತರ ಕರ್ನಾಟಕಕ್ಕೆ ಹಾಜರು ಹಾಕುವುದು ಶ್ರಾವಣ! (ಇವಿಷ್ಟೂ ಮಲೆನಾಡು ಮತ್ತು, ಕರಾವಳಿಗೆ ಅನ್ವಯವಾಗಲ್ಲ. ಅಲ್ಲಿ, ಆಷಾಢ ಪೂರ್ತಿ ಮಳೆಸುರಿದು,ಶ್ರಾವಣದಲ್ಲಿ ಸೋನೆಮಳೆ.) ಶ್ರಾವಣ ಬಂತೆಂದರೆ, ಬೇಂದ್ರೆಯಂತಹ ಬೇಂದ್ರೆ, ಕರಗಿ ಹರಿಯುತ್ತಾರೆ.. “ಶ್ರಾವಣ ಬಂತು ಕಾಡಿಗೆ ಬಂತು ನಾಡಿಗೆ ಬಂತು ಬೀಡಿಗೆ ಬಂತು ಶ್ರಾವಣ ಓ! ಬಂತು ಶ್ರಾವಣ” ಸಮ ದೃಷ್ಟಿ, ಬೇಂದ್ರೆಯವರ ಶ್ರಾವಣಕ್ಕೆ!.  ಈ ಶ್ರಾವಣ, ಎಲ್ಲರಿಗೂ, ಎಲ್ಲಾ ನೆಲಕ್ಕೂ, ತಾರತಮ್ಯವಿಲ್ಲದೆ ಕದ ತಟ್ಟಿ, ಎಲ್ಲವನ್ನೂ ಹೊಸತಾಗಿಸುವ ಸಂಕ್ರಮಣ ಕ್ರಿಯೆ. ಶ್ರಾವಣದ ಅಗಾಧತೆ,  ಮನಷ್ಯನ ಯೋಚನೆಗೂ ಮೀರಿದ ಅದರ ಶಕ್ತಿಯನ್ನು, ವ್ಯಾಪ್ತಿಯನ್ನು ಬೇಂದ್ರೆಯವರು ಈ ಕೆಳಗಿನ ಸಾಲುಗಳಲ್ಲಿ ಅನುಭವಿಸುತ್ತಾರೆ. “ಕಡಲಿಗೆ ಬಂತು ಶ್ರಾವಣಾ| ಕುಣಿಧ್ಹಾಂಗ ರಾವಣಾ| ಕುಣಿದಾವ ಗಾಳಿ| ಭೈರವನ ರೂಪತಾಳಿ” ಇಲ್ಲಿ, ಕಡಲು, ಗಾಳಿ ಇತ್ಯಾದಿಗಳು, ಬೇಂದ್ರೆಯವರ ಕಾವ್ಯ ಕುಸುರಿಯ ಹಲವು ಅರ್ಥಸಾಧ್ಯತೆಗಳು. ಅವರು ಮುಂದುವರೆದು, “ಶ್ರಾವಣ ಬಂತು ಘಟ್ಟಕ್ಕ ರಾಜ್ಯ ಪಟ್ಟಕ್ಕ, ಬಾಣ ಮಟ್ಟಕ್ಕ” ಅನ್ನುತ್ತಾರೆ. ಶ್ರಾವಣ ಎಂಬ ಪ್ರತಿಮೆಯನ್ನು, ಮಳೆಯಿಂದ, ಎತ್ತರಕ್ಕೆ ಬೆಳೆಸಿ, ಅದಕ್ಕೆ ರಾಜ್ಯಭಾರದ ಹವಾಮಾನದ ಪ್ರತಿಮೆ, ವಿವಿಧ ಬದುಕಿನ ಸ್ತರಗಳನ್ನು ಅದು ಆವರಿಸುವ ಪ್ರತಿಮೆ, ಅದರ ಅಗಾಧತೆ ಇತ್ಯಾದಿ ಆಯಾಮಗಳಿಂದ ಅರ್ಥವರ್ಷವಾಗಿಸುತ್ತಾರೆ. ಆಷಾಢ ಮಾಸದ ಅಗಂತುಕ, ಅಪರೂಪದ ಅತಿಥಿ ಮಳೆ. ನೆಲ ಹಸನು ಮಾಡಿ, ಬಿತ್ತಿ, ಮಳೆಗಾಗಿ ಕಾಯುವಾಗ, ಅದೋ ನೋಡಿ, ಆಗಸ ತುಂಬಾ ದಟ್ಟ ಮೋಡಗಳು.ಮೋಡಗಳು ಜೀವಜಾಲಕ್ಕೆ ಹೊಸ ಭರವಸೆಯ ಮೋಡ.‌ ಬರೇ ಮೋಡವಲ್ಲ, ಆಗಸದ ತುಂಬಾ ತೂತು ಬಿದ್ದು ಸೋರಿ ಬೀಳುವ ತುಂತುರು ನಿರಂತರ ಮಳೆ, ಆಶೆ ಆಶೋತ್ತರಗಳ ಸಂಕೇತ. “ಬನಬನ ನೋಡು ಈಗ ಹ್ಯಾಂಗ| ಮದುವಿ ಮಗನ್ಹಾಂಗ ತಲಿಗೆ ಬಾಸಿಂಗ| ಕಟ್ಟಿಕೊಂಡೂ| ನಿಂತಾವ ಹರ್ಷಗೊಂಡು” ಶ್ರಾವಣ ಎಂದರೆ ಬೇಂದ್ರೆಯವರಿಗೆ ಸೃಷ್ಟಿಯ ಮುಖಬಾಗಿಲು.  ಅಸಂಖ್ಯ ಬೀಜಗಳು ತಂತಾನೇ ಮೊಳೆತು ಜೀವಸಂಕುಲಗಳ ಚಿಲಿಪಿಲಿ ಎಷ್ಟು ಅಗಾಧ ಎಂದರೆ  ಬೆಟ್ಟಗಳೆಲ್ಲಾ ಹಸಿರಿನ ಅಂಗಿ ತೊಡುತ್ತವೆ. ಶ್ರಾವಣ ಎಂದರೆ ಅದು ಸೃಷ್ಟಿಕ್ರಿಯೆಯ ಉತ್ಸವವೂ ಹೌದು.  ಬನಬನಗಳೂ ಬಾಸಿಂಗ ಕಟ್ಟಿ ಮದುಮಗ, ಮದುಮಗಳಾಗಿ ಸಂಭ್ರಮಿಸುವದನ್ನು ಬೇಂದ್ರೆಯವರು, ಶ್ರಾವಣದ ಮೂಲಕ ಕಾಣುತ್ತಾರೆ. ರೈತರಿಗೆಲ್ಲ, ಬಿತ್ತಿದ,ಬೀಜ, ಮೊಳಕೆ ಹಸಿರು ಚಿಗುರೊಡೆಯುವ ಸಂತಸ. ಪ್ರಕೃತಿ ಹಸಿರುಮನೆಯಾಗಿ ಹೊಸ ಹಕ್ಕಿಗಳನ್ನು ಕರೆಯುತ್ತೆ, ಬಳ್ಳಿಗಳು ಬಳುಕಿ ಮರವೇರಿ ಹೂಗಳ ಬಾವುಟ ಹಾರಿಸುತ್ತವೆ. ಇಂತಹಾ ಶ್ರಾವಣ, ಪ್ರಕೃತಿಯ ಸಂಭ್ರಮದ ಬಾಗಿಲು ತೆರೆದಂತೆ,  ಜೀವಸಂಕುಲಕ್ಕೆ ಚೇತನ ಮೂಡಿಸಿದಂತೆ,  ಹಬ್ಬಗಳೂ ಜನಮಾನಸಕ್ಕೆ ಬಣ್ಣ ತುಂಬುತ್ತವೆ. ಮದುವೆಯಾಗಿ ಗಂಡನಮನೆ ಸೇರಿದ ಹೆಣ್ಣು ಮಗಳನ್ನು ಹೊಕ್ಕುಳಬಳ್ಳಿ ಸೆಳೆಯುತ್ತೆ,ಆಷಾಢ ಮಾಸದ ಕೊನೆಯಲ್ಲಿ. ಅಣ್ಣ ಬಂದು ತವರುಮನೆಗೆ ಕರೆದೊಯ್ಯುವ, ಹಬ್ಬದ ಸಡಗರ ಶ್ರಾವಣದ ಚೌತಿ ಮತ್ತು ಪಂಚಮಿ. ಜಾನಪದ ಸಂಗೀತಕ್ಕೂ ಮತ್ತು ಶ್ರಾವಣಕ್ಕೂ ಬಿಟ್ಟಿರದ ಸಂಬಂಧ. ‘ಆನಂದ ಕಂದ’ ( ಬೆಟಗೇರಿ ಕೃಷ್ಣಶರ್ಮ) ಅವರು ಜಾನಪದ ಶೈಲಿಯಲ್ಲಿ ಬರೆದ ಹಾಡು.. “ಪಂಚಮಿ ಹಬ್ಬ ಉಳಿದಿದೆ ದಿನ ನಾಕs.. ಅಣ್ಣ ಬರಲಿಲ್ಲ ಯಾಕs ಕರಿಯಾಕs..” ಅಂತ ಆರ್ತದನಿಯಲ್ಲಿ ಅಣ್ಣನಿಗಾಗಿ ಕಾಯುವ ತಂಗಿಯ ಹಾಡು.  ಈ ಹಾಡು ಮನಮನವನ್ನೂ ಹೊಕ್ಕು, ಪ್ರತಿಯೊಂದು ಮನೆಯಲ್ಲೂ ಗುನುಗುನಿಸಿ, ಬರೆದವರ ಹೆಸರೇ ಮರೆತಷ್ಟು ಜಾನಪದ ಹಾಡಿನ ಸ್ವರೂಪ ಪಡೆದಿದೆ. ಈ ಶ್ರಾವಣವೇ ಹೀಗೆ. ಇದರ ಮಳೆ, ಇದರ ಮೋಡ, ಮೊಳಕೆಯೊಡೆಯುವ ಹೊಲ, ಎಲ್ಲವೂ ಆಶೆ ಆಶೋತ್ತರಗಳನ್ನು, ಭರವಸೆಗಳನ್ನು ಸೋನೆಮಳೆಯಾಗಿ ಸುರಿಸುತ್ತೆ. ಈ ಹಾಡಿನ ಕೆಳಗಿನ ಸಾಲುಗಳನ್ನು ನೋಡಿ.. “ನಮ್ಮ ತವರೀಲಿ ಪಂಚಮಿ ಭಾರಿ ಮಣದ ತುಂಬಾ ಬಟ್ಟಲ ಕೊಬ್ಬರೀ ಎಳ್ಳು ಅವಲಕ್ಕಿ ತಂಬಿಟ್ಟು ಸೂರಿ ನಾನೂ ತಿನುವಾಕಿ ಬಂದ್‌ ಹಾಂಗ ಮನಕ- ಅಣ್ಣ ಬರಲಿಲ್ಲ ಯಾಕೋ ಕರಿಲಾಕ …” ಪಂಚಮಿ ಹಬ್ಬದ ಸಿಹಿ ತಿಂಡಿಗಳು, ಮನೆ ಮುಂದೆ ಚಿತ್ರಿಸುವ ರಂಗೋಲಿಗಳು, ಹೆಣ್ಮಕ್ಕಳೆಲ್ಲಾ ಮಕ್ಕಳೆಲ್ಲಾ ಸಪ್ತವರ್ಣದ ಬಳೆ ತೊಟ್ಟು ಗಲಗಲಿಸಬೇಕು, ಹೊಸ ಅಂಗಿ ತೊಟ್ಟು,ಜೋಕಾಲಿ ಆಡಬೇಕು, ಎಷ್ಟೆಂದರೆ, ಈ ಹಬ್ಬವನ್ನೇ, ಜೋಕಾಲಿ ಹಬ್ಬ ಎನ್ನುವಷ್ಟು!. ಶ್ರಾವಣ ಅಂದರೆ ಬರೇ ಮಳೆಯಲ್ಲ, ಇದೊಂದು ಸಮಾಜದಿಂದ ಸಮಾಜಕ್ಕೇ ಕಳೆಕಟ್ಟುವ ಹಬ್ಬಗಳ ತೋರಣ. ಶ್ರಾವಣದ ಪಂಚಮಿಯಂದು ಮದುವೆಯಾದ ಹೆಣ್ಣುಮಗಳು ತನ್ನ ತವರಿಗೆ ಬಂದು,  ನಾಗನಿಗೆ ಹಾಲೆರೆದು ತಮ್ನ ಬೆನ್ನು, ಬಸಿರು ತಣ್ಣಗಿರಿಸಬೇಕೆಂದು ನಾಗನಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ತನ್ನ ಬೆನ್ನು ಎಂದರೆ ತವರು, ಅಣ್ಣ ತಮ್ಮಂದಿರು, ಬಸಿರು ಎಂದರೆ ಮುಂದಿನ ಪೀಳಿಗೆ. ಹೀಗೆ ತವರಿಗಾಗಿ ಮತ್ತು ತನ್ನ ಪೀಳಿಗೆಗಾಗಿ ಪ್ರಾರ್ಥನೆ ಮಾಡುವಾಗ,ಆಕೆ, ಎರಡು ಮನೆಗಳನ್ನು ತನ್ನ ಮೂಲಕ ಜೋಡಿಸುತ್ತಾಳೆ. ಶ್ರಾವಣ ಕಳೆಯುವ ಕಾಲವಲ್ಲ, ಕೂಡುವ ಕೂಡಿ ಚಿಗುರುವ ಸಮೃಧ್ಧಿಯ ಕಾಲ. ಹೀಗೆ ಶ್ರಾವಣ, ಕವಿಮನಸ್ಸಿನೊಳಗೆ ಹೇಗೆ ಹಲವಾರು ಪ್ರತಿಮೆಗಳ ರೂಪತಳೆದು ಜನ್ಮಿಸುತ್ತದೋ,ಹಾಗೆಯೇ ಜಾನಪದದಲ್ಲೂ ಹಲವು ಆಯಾಮಗಳಿಗೆ ರೂಪಕವಾಗಿ, ಹಳತನ್ನು ಮರೆಯದೆ ಹೊಸತಿಗೆ ತೆರೆಯುವ, ಸ್ವಸ್ಥ ಸಮಾಜದ ನಿರ್ಮಾಣದ, ಸಂಕ್ರಮಣ, ಜೀವಸಂಭ್ರಮ. **********

ಕಬ್ಬಿಗರ ಅಬ್ಬಿ – ಸಂಚಿಕೆ ೩ Read Post »

ಪುಸ್ತಕ ಸಂಗಾತಿ

ಕಣ್ಣ ಮುಂದಿನ ಎರಡು ಮೌಲ್ಯಗಳು -ಎರಡು ದಾರಿಗಳು

ಪುಸ್ತಕ ವಿಮರ್ಶೆ ನಾಗರಾಜಹರಪನಹಳ್ಳಿ ಬಹಳ ದಿನಗಳಿಂದ ನನ್ನ ಕಾಡುತ್ತಿರುವ ವಿಷಯವನ್ನು ಇಲ್ಲಿ ಪ್ರಸ್ತಾಪಿಸುವೆ. ಒಂದು ದೇವನೂರು ಮಹಾದೇವ ಅವರ `ಎದೆಗೆ ಬಿದ್ದ ಅಕ್ಷರ’ ಕೃತಿ ಹಾಗೂ ಇನ್ನೊಂದು ಸಾರ್ವಜನಿಕರ ಕವಿ ಎಂದೇ ಹೆಸರಾಗಿದ್ದ ಡಾ.ಸಿದ್ದಲಿಂಗಯ್ಯ ಅವರ `ನನ್ನ ಜನಗಳು ಮತ್ತು ಇತರೆ ಕವಿತೆಗಳು’. ಕನ್ನಡದಲ್ಲಿ ಬಹಳ ಮಹತ್ವದ ಎರಡು ಕೃತಿಗಳ ಹೆಸರು ಹೇಳಿ ಅಂತ ಯಾರಾದರೂ ನನ್ನ ಪ್ರಶ್ನಿಸಿದರೆ ನಾನು ಮೊದಲು ಹೇಳುವ ಕೃತಿಗಳ ಹೆಸರು `ಎದೆಗೆ ಬಿದ್ದ ಅಕ್ಷರ’, `ನನ್ನ ಜನಗಳು’ ಕವಿತಾ ಸಂಕಲನ. ಯಾಕೆ ಈ ಎರಡು ಕೃತಿಗಳು ಮಹತ್ವದವು ? ಯಾಕೆ ಈ ಕೃತಿಗಳನ್ನು ಓದಬೇಕು ? ಎಂಬುದಕ್ಕೆ ಒಂದಿಷ್ಟು ಹಿನ್ನೆಲೆ ಕಾರಣಗಳನ್ನು ನೋಡಬೇಕಾಗುತ್ತದೆ. ಹಾಗೆಯೇ ದೇವನೂರು ಮತ್ತು ಡಾ.ಸಿದ್ದಲಿಂಗಯ್ಯ ಇಬ್ಬರಲ್ಲಿ ಯಾರು ಇಷ್ಟ ಎಂದು ಪ್ರಶ್ನಿಸಿದರೆ, ದೇವನೂರು ನನ್ನ ಮೊದಲ ಉತ್ತರ. ಕಾರಣ ಇದೆ. ವಿವರಿಸುವೆ. ಇಬ್ಬರದೂ ಒಂದೊಂದು ದಾರಿ. ಇಬ್ಬರೂ ಬದುಕಿರುವಾಗಲೇ ಇತಿಹಾಸ ಸೃಷ್ಟಿಸಿದವರು. ಇಬ್ಬರಲ್ಲೂ ಅಗಾಧ ಪ್ರತಿಭೆ ಇದೆ. ಇಬ್ಬರೂ ಕರ್ನಾಟಕದ ಜನ ಜೀವನದ ಮೇಲೆ, ಶೋಷಿತರ ಮೇಲೆ, ದುಡಿಯುವ ಜನರ, ದಲಿತ ಸಮುದಾಯದ ಅಕ್ಷರಸ್ಥರ  ಆಲೋಚನೆಗಳ ಮೇಲೆ ಪ್ರಭಾವ ಬೀರಿದವರು. ಒಬ್ಬರು ಅಧಿಕಾರದ ಬೆನ್ನು ಹತ್ತಿದವರು. ಇನ್ನೊಬ್ಬರು ಅಧಿಕಾರ ಕೇಂದ್ರವೇ ತಮ್ಮ ಮನೆಯ ಬಳಿಗೆ ಬರುವಂತೆ ಬದುಕಿದವರು. ಮುಖ್ಯಮಂತ್ರಿಯೇ ಮನೆಬಾಗಿಲಿಗೆ ಬಂದು ಮಾತಾಡಿಕೊಂಡು, ಸಲಹೆ ಕೇಳಿಕೊಂಡು ಹೋಗುವಂತೆ ಬದುಕಿದವರು. ಒಬ್ಬರು ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ತಾತ್ವಿಕ ಕಾರಣಕ್ಕೆ ನಿರಾಕರಿಸಿದವರು. ಮತ್ತೊಬ್ಬರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ  ಅಧ್ಯಕ್ಷ ಸ್ಥಾನವನ್ನು ಅಪ್ಪಿಕೊಂಡವರು. ಒಬ್ಬರು ಸಮಾಜದ ಮತ್ತು ಸರ್ಕಾರದ ನಡೆಗಳಿಗೆ ಪ್ರತಿಕ್ರಿಯಿಸುತ್ತಾ ಸಾಗಿದವರು. ಮತ್ತೊಬ್ಬರು ಎಲ್ಲಾ ಘಟನೆಗಳಿಗೂ ಪ್ರತಿಕ್ರಿಯಿಸಿದೇ ಮೌನಿಯಾದವರು. ಇದೆಲ್ಲಾ  ಸಿದ್ಧಲಿಂಗಯ್ಯ ಮತ್ತು ದೇವನೂರು ಸಮಕಾಲೀನರಿಗೆ ಗೊತ್ತಿದೆ. ಆದರೆ ಅವರ ನಂತರದ ತಲೆಮಾರಿಗೆ, ಇವತ್ತಿನ ಯುವ ಜನಾಂಗಕ್ಕೆ ಈ ಇಬ್ಬರು ಬರಹದ ಬಗ್ಗೆ ಸ್ವಲ್ಪವಾದರೂ ಗೊತ್ತಿರಬಹುದು, ಆದರೆ ಅವರ ಬದುಕಿನ ದಾರಿಯ ಬಗ್ಗೆ, ನಿಲಯವುಗಳ ಬಗ್ಗೆ, ಸವೆಸಿದ ಬದುಕಿನ ವಿವರಗಳು ಗೊತ್ತಿರಲಿಕ್ಕಿಲ್ಲ.ಜೊತೆಗೆ  ಕೆಲ ಸಂಗತಿಗಳು ಮರೆತು ಹೋಗಬಾರದು ಎಂಬ ಕಾರಣಕ್ಕೆ ಇಲ್ಲಿ ಪ್ರಸ್ತಾಪಿಸುವೆ. ಕಾರಣ ನಮ್ಮ ಕಣ್ಣ ಮುಂದಿರುವ ಎರಡು ಭಿನ್ನ  ದಾರಿಗಳ ಆಯ್ಕೆಯಲ್ಲಿ ಯಾವ ಹಾದಿಯಲ್ಲಿ ಸಾಗಬೇಕು ಎಂಬ ಸ್ಪಷ್ಟತೆ ಇದ್ದರೆ ಒಳಿತು. ಇವತ್ತಿನ ಆಧುನಿಕ ಯುಗದಲ್ಲಿ ವೇಗವಾಗಿ ಪ್ರಸಿದ್ಧಿ ಪಡೆವ  ಮನಸ್ಥಿತಿಯಲ್ಲಿ ಕಠಿಣ ಹಾದಿಯನ್ನು, ಆದರ್ಶದ ಮೌಲ್ಯದ ಹಾದಿಯನ್ನು ಹಿಡಿಯುವವರು ಎಷ್ಟು ಜನ ಇದ್ದಾರೆ ? ಯಾರಿಗೆ ಬೇಕಾಗಿದೆ ಕಠಿಣ ಹಾದಿ ?  ಈಗ ಕಠಿಣ ಹಾದಿ ಬೇಕೋ,  ಅವಕಾಶವಾದಿ ದಾರಿ ಬೇಕೋ ಎಂಬ ನಿರ್ಣಯ ಹೊಸ ತಲೆಮಾರಿಗೆ ಬಿಟ್ಟದ್ದು. ದೇವನೂರು ಮಹಾದೇವ ಅವರ ಹೆಸರನ್ನು ನಾನು ಮೊದಲು ಕೇಳಿದ್ದು ೧೯೯೧ರಲ್ಲಿ. ಅವರ ನೀಳ್ಗತೆ ಒಡಲಾಳ ಎಂ.ಎ.ಕನ್ನಡ ವಿದ್ಯಾರ್ಥಿಗಳಿಗೆ ಪಠ್ಯವಾಗಿತ್ತು. ಹಸಿವು ಮತ್ತು ಆಸ್ತಿತ್ವದ ಪ್ರಶ್ನೆಯನ್ನು ಕಟ್ಟಿಕೊಡುವ ಹಾಗೂ ದಲಿತರ ಹಸಿವಿನ ಹೋರಾಟವನ್ನು ಒಡಲಾಳದ  ಸಾಕವ್ವನ ಧ್ವನಿಯ ಮೂಲಕ ಕಟ್ಟಿಕೊಡುವ ಲೇಖಕ ಹೊಸ ಲೋಕವನ್ನು ಕನ್ನಡಿಗರ ಮುಂದೆ ಇಟ್ಟಿದ್ದರು. ಇದಕ್ಕೂ ಮುನ್ನ ದ್ಯಾವನೂರು ಕಥಾ ಸಂಕಲನ ಕನ್ನಡ ಸಾಹಿತ್ಯದಲ್ಲಿ ಸಂಚಲನ ಮೂಡಿಸಿತ್ತು. ಕುಂಬಾರ ವೀರಭದ್ರಪ್ಪನವರು ಆ ಹೊತ್ತಿಗಾಗಲೇ ದಲಿತರ ಹಸಿವಿನ ಕತೆಯನ್ನು ಠೊಣ್ಣಿ  ಮತ್ತು ಕತ್ತಲನು ತ್ರಿಶೂಲ ಹಿಡಿದ ಕತೆ ಹಾಗೂ  ಇತರ ಕತೆಗಳಲ್ಲಿ ಕಟ್ಟಿಕೊಟ್ಟಿದ್ದರು. ಕುಂವೀ ಕತೆಗಳಲ್ಲಿ ಬರುವ ಆಕ್ರೋಶ, ದೇವನೂರು ಕತೆಗಳಲ್ಲಿ ಭಿನ್ನವಾಗಿದ್ದರೂ, ಭಾಷಾ ಬಳಕೆ ಮತ್ತು ಕತೆ ಕಟ್ಟುವ ಮತ್ತು ಪ್ರಾಮಾಣಿಕ ಅಭಿವ್ಯಕ್ತಿಯಿಂದ ದ್ಯಾವನೂರು ಕತೆಗಳು ಕನ್ನಡದಲ್ಲಿ ಮೈಲಿಗಲ್ಲಾದವು. ದೇವನೂರು ಅವರ “ಎದೆಗೆ ಬಿದ್ದ ಅಕ್ಷರ” ಕೃತಿಯಂತೂ ಕನ್ನಡ ಬರುವವರೆಲ್ಲಾ ಓದಲೇ ಬೇಕಾದ ಕೃತಿ. ಎದೆಗೆ ಬಿದ್ದ ಅಕ್ಷರದಲ್ಲಿ ಬರುವ ಆರಂಭದ  ಲೇಖನಗಳಾದ  ನಾನು ಚಿತ್ರಿಸಿದಂತೆ ನನ್ನ ದೇವರು, ನನ್ನ ದೇವರು, ಮನವ ಕಾಡುತಿದೆ, ದಯೆಗಾಗಿ ನೆಲ ಒಣಗಿದೆ, ಮೂರ್ಛಾವಸ್ಥೆಯಲ್ಲಿ ಕಾರುಣ್ಯ, ಕೇವಲ ಮನುಷ್ಯನಾಗುವುದೆಂದರೆ, ಅಸ್ಪೃಶ್ಯತೆ ನಿನ್ನ ಮೂಲ ಎಲ್ಲಿ? ಎಂಬ ಪುಟ್ಟ ಪುಟ್ಟ ಬರಹಗಳನ್ನು ಓದಲೇ ಬೇಕು. ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ಕೊಡುವುದು…ಎಂಬ ಆಶಾವಾದ ದೇವನೂರು ಅವರದು. ನನ್ನದು ಕೂಡಾ.  ಅತ್ಯಂತ ಕಡಿಮೆ ಬರೆದು ಅಂತರಾಷ್ಟ್ರೀಯ ಮಟ್ಟದಲ್ಲಿ ದೇವನೂರು ಭಾರತೀಯ ಸಾಹಿತ್ಯಕ್ಕೆ ಹೆಸರು ತಂದು ಕೊಟ್ಟಿದ್ದರು. ಮೈಸೂರಿನ ಸಿಐಐಎಲ್ ನಲ್ಲಿ ಕೆಲಸ ಮಾಡುತ್ತಿದ್ದ ದೇವನೂರು ಕೆಲಸಕ್ಕೆ ರಾಜೀನಾಮೆ ನೀಡಿ ಕೃಷಿಯನ್ನು ಆಯ್ಕೆ ಮಾಡಿಕೊಂಡರು. ಶ್ರವಣಬೆಳಗೋಳದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಅವರು ಆಯ್ಕೆಯಾಗಿದ್ದರು. ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳನ್ನು ಸರ್ಕಾರ ಅನುಷ್ಠಾನಕ್ಕೆ ತರುವುದಿಲ್ಲವಾದರೆ, ಅಧ್ಯಕ್ಷತೆ ವಹಿಸಿ ಮಾತನಾಡುವುದು ವ್ಯರ್ಥ ಎಂದು ಅವರು ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನವಹಿಸಲು ನಿರಾಕರಿಸಿದರು. ಹೀಗೆ ಆದರ್ಶದ ಹಾದಿಯನ್ನು ದೇವನೂರು ಆಯ್ಕೆ ಮಾಡಿಕೊಂಡರು. ದಲಿತ ಚಳುವಳಿಯನ್ನು ಪ್ರಭಾವಿಸಿದರು. ನಾಡಿನ ಪ್ರಗತಿಪರ ಸಂಘಟನೆಗಳನ್ನು ಒಗ್ಗೂಡಿಸಲು ಯತ್ನಿಸಿದರು. ಈಗಲೂ ಚಲನಶೀಲ ರಾಜಕೀಯ ಪಕ್ಷ ಕಟ್ಟಲು ಅವರ ಪ್ರಯತ್ನ ನಿಂತಿಲ್ಲ. ಇನ್ನು ಸಿದ್ಧಲಿಂಗಯ್ಯ ೧೯೭೫ ರಲ್ಲಿ ಹೊಲೆ ಮಾದಿಗರ ಹಾಡು ಬರೆದರು. ೧೯೭೯ರಲ್ಲಿ ಸಾವಿರಾರು ನದಿಗಳು ಕಾವ್ಯವನ್ನು ಕನ್ನಡಕ್ಕೆ, ಕರ್ನಾಟಕಕ್ಕೆ ನೀಡಿದರು. ಆಗ ಸಿದ್ದಲಿಂಗಯ್ಯ ಕರ್ನಾಟಕದ ಸಾರ್ವಜನಿಕ ಕವಿ ಎಂದೇ ಹೆಸರಾಗಿದ್ದರು. “ಹಸಿವಿನಿಂದ ಸತ್ತೋರು ಸೈಜುಗಲ್ಲು ಹೊತ್ತವರು,ವದೆಸಿಕೊಂಡು ವರಗಿದವರು ನನ್ನ ಜನಗಳು.ಹೊವಲನುತ್ತು ಬಿತ್ತೋರು ಬೆಳೆಯ ಕುಯ್ದು ಬೆವರೋರು, ಬಿಸಿಲಿನಲ್ಲಿ ಬೇಯೋರು ನನ್ನ ಜನಗಳು”.  “ನಿನ್ನೆ ದಿನ ನನ್ನ ಜನ ಬೆಟ್ಟದಂತೆ ಬಂದರು ಕಪ್ಪು ಮುಖದ ಬೆಳ್ಳಿಗಡ್ಡ ಉರಿಯುತಿರುವ ಕಣ್ಣುಗಳು ಹಗಲ ರಾತ್ರಿಗಳನು ಸೀಳಿ ನಿದ್ದೆಯನ್ನು ಒದ್ದರು ಕ್ರಾಂತಿಯ ಬಿರುಗಾಳಿಯಲ್ಲಿ ಕೈ ಬೀಸಿದ ನನ್ನ ಜನ ಛಡಿಯ ಏಟು ಹೊಡೆದವರ ಕುತತಿಗೆಗಳ ಹಿಡಿದರು ಪೊಲೀಸರ ದೊಣ್ಣೆಗಳು ಏಜೆಂಟರ ಕತ್ತಿಗಳು  ವೇದಶಾಸ್ತ್ರ ಪುರಾಣ ಬಂದೂಕದ ಗುಡಾಣ, ತರಗೆಲೆ ಕಸಕಡ್ಡಿಯಾಗಿ ತೇಲಿ ತೇಲಿ ಹರಿದವು  ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು… ಹೀಗೆ… ಸಿದ್ಧಲಿಂಗಯ್ಯನವರ  ಕವಿತೆಯನ್ನು ದಲಿತರ ಹೋರಾಟಕ್ಕೆ ಬಳಸಿದರು. ರೈತ ಹೋರಾಟಗಳಿಗೆ, ಕಾರ್ಮಿಕರ ಹೋರಾಟಗಳಿಗೆ ಸಹ ಸಿದ್ಧಲಿಂಗಯ್ಯನವರ ಕಾವ್ಯ ಬಳಕೆಯಾಯಿತು. ಯಾರಿಗೆ ಬಂತು, ಎಲ್ಲಿಗೆ ಬಂತು, ನಾಲ್ವತ್ತೇಳರ ಸ್ವಾತಂತ್ರ್ಯ ಕವಿತೆಯಂತೂ ಹೋರಾಟಗಾರರ ನಾಲಿಗೆಯ ಶಕ್ತಿಯಾಗಿತ್ತು. ೧೯೭೫ ರಿಂದಾಚೆಗೆ ದಲಿತರು ಹೊಸ ಪ್ರಜ್ಞಾವಂತ ಜನಾಂಗವಾಗಿ ಕರ್ನಾಟಕದಲ್ಲಿ ಸಿದ್ಧಲಿಂಗಯ್ಯನವರ ಕವಿತೆಗಳ  ಎರಕದಲ್ಲಿ ರೂಪುಗೊಂಡರು. ಅದಕ್ಕಾಗಿಯೇ ದಲಿತರ ಮೆರವಣಿಗೆ ಬೀದರ್ ನಿಂದ ಕೋಲಾರದತನಕ ಯಾವುದೇ ಮೂಲೆಯಲ್ಲಿ ನಡೆದರೂ ಅಲ್ಲಿ ಕವಿಯ ಹಾಡುಗಳನ್ನು ಹಾಡುತ್ತಿದ್ದರು. ಅದಕ್ಕಾಗಿಯೇ ಇದು ಸಾರ್ವಜನಿಕ ಕಾವ್ಯದ ಅಂತಿಮ ಯಶಸ್ಸು ಎನ್ನುತ್ತಾರೆ ಕನ್ನಡದ ಖ್ಯಾತ ವಿಮರ್ಶಕ ಡಿ.ಆರ್.ನಾಗರಾಜ್. ಕುತೂಹಲದ ಸಂಗತಿಯೆಂದರೆ ಕವಿ ಸಿದ್ಧಲಿಂಗಯ್ಯನವರ  ಮೊದಲ ಕವಿತೆಗಳಲ್ಲಿ  ಅಂಬೇಡ್ಕರ್,ಮಾರ್ಕ್ಸವಾದ  ಕಾಣುವ ಭಾವನೆಗಳ ಖಾಚಿತ್ಯ  ಅವರ ಎರಡನೇಯ ಹಂತದ ಕಾವ್ಯದಲ್ಲಿಲ್ಲ ಎಂದು ಡಿ.ಆರ್.ನಾಗರಾಜ್ ಗುರುತಿಸಿದ್ದಾರೆ. ಹೌದು. ಮುಂದೆ ರಾಮಕೃಷ್ಣ ಹೆಗಡೆ ಅವರ ಸ್ನೇಹದಿಂದ ವಿಧಾನ ಪರಿಷತ್ತನ್ನು ಸಹ ಸಿದ್ಧಲಿಂಗಯ್ಯ ಪ್ರವೇಶಿಸಿದರು. ಬಿಜೆಪಿ ಅಧಿಕಾರದ ಅವಧಿಯಲ್ಲಿ ಸಹ ವಿಧಾನಪರಿಷತ್ ಸದಸ್ಯರಾಗಿ ಕೆಲಸ ಮಾಡಿದರು.  ಅನೇಕ ಪ್ರಚಲಿತ ವಿದ್ಯಮಾನಗಳಿಗೆ ಮೌನಿಯಾದರು. ಪಂಪ ಪ್ರಶಸ್ತಿ ಸಹ ಪಡೆದರು. ೨೦೨೦ ಫೆಬ್ರುವರಿಯಲ್ಲಿ ಬನವಾಸಿಯಲ್ಲಿ ಪಂಪ ಪ್ರಶಸ್ತಿ ಸ್ವೀಕರಿಸಿದ ಸಿದ್ಧಲಿಂಗಯ್ಯ ಪ್ರಭುತ್ವವನ್ನು ಹೊಗಳಿದರು. ಮುಖ್ಯಮಂತ್ರಿಯ ಕಾರ್ಯವೈಖರಿ ಪ್ರಶಂಸಿದರು. ಪ್ರಭುತ್ವದ ಜೊತೆಗಿದ್ದೇ, “ಅರಸರನ್ನು ಒಲೈಸಿ ಬಾಳುವುದು ಕಡು ಕಷ್ಟ” ಎಂದ ಪಂಪನ ಹೆಸರೆತ್ತಲಿಲ್ಲ ನಮ್ಮ ಸಿದ್ಧಲಿಂಗಯ್ಯನವರು.  ಪಂಪನ ಕಾವ್ಯದ ಒಂದೇ ಒಂದು ಸಾಲನ್ನು ಅವರ ಪ್ರಸ್ತಾಪಿಸಲಿಲ್ಲ. ಸಾಹಿತ್ಯದ ಕುರಿತು ಮಾತೇ ಆಡಲಿಲ್ಲ. ದಲಿತ ಚಳುವಳಿಗೆ ದಿಕ್ಕು ತೋರಿಸಿಬೇಕಿದ್ದ ಕ್ರಾಂತಿಕಾರಿ ಕವಿ ಮೌನಕ್ಕೆ ಜಾರಿದರು. ಇದೇ ಕಾಲದ ವಿಪರ್ಯಾಸ. ಎರಡು ಧ್ರುವಗಳು : ಈಗಲೂ ಸರ್ಕಾರಗಳು ಎಡವಿದಾಗ ಅದಕ್ಕೆ ಪ್ರತಿಕ್ರಿಯಿಸುತ್ತಾ ಪ್ರತಿರೋಧವನ್ನು ಕಾಲ ಕಾಲಕ್ಕೆ  ದೇವನೂರು ಮಹಾದೇವ ಎತ್ತುತ್ತಲೇ ಬಂದಿದ್ದಾರೆ. ತಾವು ನಡೆದ ದಾರಿಯಲ್ಲಿ ಉತ್ತರ ಧ್ರುವ, ದಕ್ಷಿಣ ಧ್ರುವಗಳಿಂತಿರುವ ದೇವನೂರು ಮತ್ತು ಸಿದ್ಧಲಿಂಗಯ್ಯ ನಾಡಿನ ಯುವ ಜನತೆಗೆ ಏನು ಸಂದೇಶವನ್ನು ತಮ್ಮ ಬದುಕಿನ ಮೂಲಕ ಹೇಳಿದ್ದಾರೆ ಎಂಬುದು ನಮ್ಮ ಕಣ್ಣಮುಂದಿದೆ. ಆಯ್ಕೆ ಮಾತ್ರ ನಮ್ಮದು… ******************

ಕಣ್ಣ ಮುಂದಿನ ಎರಡು ಮೌಲ್ಯಗಳು -ಎರಡು ದಾರಿಗಳು Read Post »

ಕಾವ್ಯಯಾನ

ವರುಣರಾಗ

ಕವಿತೆ ಅರುಣ್ ಕೊಪ್ಪ ಹಸಿರು ಚಿಮ್ಮುವ ಬುವಿಯೊಳು….ವರುಣನ ಹನಿಗಳ ಸದ್ದು.!ಕವಿದ ಮೋಡಗಳು…ಎಲ್ಲೋ ಸೇರಿಹೋದವು…ಹನಿಯೊಂದೇ …..ಕೂಗುತ್ತಾಕ್ರಮಿಸುತ್ತಿದೆ….ಭೂ ಗರ್ಭವ!ಆಳ ಆಳವನು ಸೇರುವಾಸೆ….ಎಲ್ಲ ಕಡೆ ನರ್ತನ ಮಾಡುವಾಸೆ…ನಿನ್ನ ಹಾಡಿಗೆ ದ್ವನಿಗೂಡುವಹಿಂಡೇ ಈ ಪ್ರಪಂಚ!!ನೀ ಇದ್ದರೆ ಜೀವವೇ ಸಂಗೀತಮಯ…ಹಸಿರು…,ಹಸೀವು…,ಒಲವು ಎಲ್ಲ…..ನೀ ನರಿಯದಿಹ ಮಿಂಚು!!ಬಿರುಗಾಳಿ ಬೆನ್ನಟ್ಟಿ ಬಂದಾಗಆಗುವ ಭಯ!!ನೀ ಕಾಣದಾದಾಗ ಆಗುವ ವ್ಯಥೆ …..ಬಣ್ಣಿಸಲಾಗದಷ್ಟು ಭಾವಪೂರಿತ…ನೀ ಸುರಿವ ಸದ್ದೆ ಚಂದನೀ ಬೆರೆವ ಸಾಲು ಸಾಲುನೆರೆಗಳೇ ….ಪ್ರಾಕೃತಿಕ ಸೌಂದರ್ಯದ ಅಂತರಾಳ….ಆದರೆ ನಿನ್ನ ಆಳವ ಬಲ್ಲವರಾರಿಲ್ಲ….ಸಾಗರವೇ….??ನೀ ಮಳೆಯ ಮಗು,ನಗು,ಮಡದಿ,ಎಲ್ಲ ವೂ ನೀನೇ. ಎಲ್ಲ ನಿನ್ನ ಮಾಯೇ **************

ವರುಣರಾಗ Read Post »

ಕಾವ್ಯಯಾನ

ಬಂದಿಯಾಗಿಹ ರವಿ

ಕವಿತೆ ನೀ.ಶ್ರೀಶೈಲ ಹುಲ್ಲೂರು ಉದಯಿಸುವ ರವಿಯ ದಿನದೋಟಕೆಅಡ್ಡಿಯಾಗಿದೆ ಕುರಿಮೋಡ ಕರಿಸಾಲುಕುರಿಗಾರ ಪವನನೆದ್ದು ಬರುವನಕಹಿಂಡು ಕುರಿಗಳ ನಡುವೆ ರವಿ ಕಂಗಾಲು ಮಳೆಗಾಲದೀಗಿನೀ ಹಗಲ ಹೊತ್ತುಮೋಡಗಳದು ನಿಲದ ನಿತ್ಯ ರಂಪಾಟಕೆಂಪಾದವನಿಗದೇನೋ ಮಮಕಾರಮೋಡಗಳೊಂದಿಗವನದೂ ತುಂಟಾಟ ಶುಕಪಿಕಗಳ ಇನಿದನಿಯ ಗಾಢಮೌನಮಂಕಾದ ಮನಗಳಲಿ ಗೌಣ ಸೊಗಸುಅವನೆದ್ದರೆ ಬೆಳಗು ಏಳುವರು ಎಲ್ಲಹೊದಿಕೆಯಡಿಯಲೆ ಕಾಣುವರು ಕನಸು ಸುರಿವ ವರುಣನ ನಡುವೆ ನೆಲದ ಗಾನಝರಿ ತೊರೆ ನದಿಗಳಲಿ ರಭಸದೋಟತಡೆವರಾರಿಲ್ಲ ತಿಮಿರದಾಲಿಂಗನವಮೋಡಗಳಡಿಯೆ ರವಿಯ ಮಿಲನ ಕೂಟ ಕಡಲಿನೊಡಲಿಗದೇನೋ ಸಡಗರರವಿಯ ಚುಂಬನವು ಮರೆತ ಗೀತಅಮ್ಮನೊಡಲಲಿ ನದಿಗೆ ಧನ್ಯ ಭಾವಕಡಲ ಕುಡಿಗಳಲದೋ ನವ ಸಂಗೀತ **********

ಬಂದಿಯಾಗಿಹ ರವಿ Read Post »

ಕಥಾಗುಚ್ಛ

ನಡಿ ಕುಂಬಳವೇ ಟರಾ ಪುರಾ

ಕಥೆ ಪ್ರಜ್ಞಾ ಮತ್ತಿಹಳ್ಳಿ             ಇನ್ನೇನು ಈ ಬಸ್ಸು ಇಳಿದಿಳಿದು ಕೆರೆಯೊಳಗೇ ನುಗ್ಗಿ ಬಿಡುತ್ತದೆ ಎಂಬ ಭಾವ ಬಂದು ಮೈ ಜುಂ ಎನ್ನುವಷ್ಟರಲ್ಲಿ ರೊಯ್ಯನೆ ಎಡಕ್ಕೆ ತಿರುಗಿ ದಟ್ಟ ಕಾಡಿನ ಏರಿ ಶುರುವಾಗುತ್ತದೆ. ಅಂದರೆ ಇದರರ್ಥ ಇಳಿಯೂರು ಎಂಬ ಊರು ದಾಟಿತು ಹಾಗೂ ತಲೆಯೂರಿಗೆ ೧೫ ಕಿ.ಮೀ ಉಳಿದಿದೆ ಅಂತ. ಮೂರು ಜನರ ಸೀಟಿನ ಎಡತುದಿಗೆ ಕೂತಿದ್ದ ಬಸವರಾಜ ಎಡಬದಿಯ ಕಂಬಿಯನ್ನು ಗಟ್ಟಿಯಾಗಿ ಹಿಡಿದುಕೊಂಡು ಬೀಳುವುದನ್ನು ತಪ್ಪಿಸಿಕೊಳ್ಳುತ್ತಿದ್ದಾನೆ. ಇಕ್ಕೆಲದ ಎತ್ತೆತ್ತರದ ಮರಗಳು, ಅವುಗಳ ದಟ್ಟ ನೆರಳಿನಲ್ಲಿ ಬಿಸಿಲೇ ಕಾಣದ ಆಕಾಶ, ಬೈತಲೆಯಂಥ ಸಣ್ಣ ದಾರಿಯಷ್ಟೇ ಕಾಣುವ ಸ್ಟಾಪುಗಳು, ಅಲ್ಲಲ್ಲಿಳಿದುಕೊಂಡು ನಿರ್ಭಯವಾಗಿ ಸರಸರ ನಡೆಯುತ್ತ ಮಾಯವಾಗಿಬಿಡುವ ಜನರು. ಒಂದಿಷ್ಟು ಭತ್ತದ ಗದ್ದೆ, ಅಡಿಕೆ-ತೆಂಗಿನ ಮರಗಳಿರುವ ಒಂಟಿ ಮನೆಗೆ ಜನ ಒಂದು ಊರು ಎಂದು ಕರೆಯುವುದು ನಾಲ್ಕೈದು ದನ-ಕರು ಸಾಕಿಕೊಂಡು ೫-೬ ಜನರ ಕುಟುಂಬವೊಂದು ಆರಾಮವಾಗಿ ಸದ್ದಿಲ್ಲದೇ ಬದುಕುವ ರೀತಿ ಇವನ್ನೆಲ್ಲ ಈಗೊಂದು ೫-೬ ತಿಂಗಳಿಂದ ನೋಡುತ್ತಿದ್ದಾನೆ.  ಬೆಳಗಿನಿಂದ ರಾತ್ರಿಯವರೆಗೆ ಬಾಯ್ತುಂಬ ಎಲೆ-ಅಡಿಕೆ ತುಂಬಿಕೊಂಡು ಓಡಾಡುವ ಗಂಡಸರು, ತುರುಬು ಕಟ್ಟಿಕೊಂಡು ಅಬ್ಬಲ್ಲಿಗೆ ದಂಡೆ ಮುಡಿವ ಹೆಂಗಸರು. ಮೊದಮೊದಲು ಅವನಲ್ಲಿ ಭಯ ಹುಟ್ಟಿಸುತ್ತಿತ್ತದ್ದರು. ಪುಳು-ಪುಳು ಕುಣಿಯುವ ಮೀನು ಹಿಡಿದು ಅಡಿಗೆ ಮಾಡುವ ಸಂಗತಿಯೆ  ಅವನಿಗೆ ಎದೆ ಝಲ್ಲೇನ್ನಿಸುವಂತೆ ಮಾಡಿತ್ತು. ಬಿಜಾಪೂರ ಜಿಲ್ಲೆಯ ಬಸವನಬಾಗೇವಾಡಿಯ ಬಸವಣ್ಣನವರು ಹುಟ್ಟಿದೂರಿನಲ್ಲಿ ಹುಟ್ಟಿದ, ಬಿಜಾಪುರವೆಂಬ ಗುಮ್ಮಟಗಳ ಊರಿನಲ್ಲಿ ಓದಿದ, ಈ ಬಸವರಾಜ ಉಳ್ಳಾಗಡ್ಡಿಯೆಂಬ ಸಂಭಾವಿತ ಹುಡುಗ ಅರ್ಥಶಾಸ್ತ್ರದಲ್ಲಿ ಎಂ.ಎ. ಮಾಡುವಾಗ ಡಿಪಾರ್ಟಮೆಂಟಿನ ಹುಡುಗರ ಜೊತೆ ಟೂರು ಹೋಗುವಾಗ ತಲೆಯೂರಿನ ಮಾರಿಕಾಂಬಾ ದೇವಸ್ಥಾನವನ್ನು ನೋಡಿದ್ದ. ತನ್ನ ಕುಟುಂಬದ ಸದಸ್ಯರು ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿಯ ದರ್ಶನಕ್ಕೆ  ಕರೆದೊಯ್ಯುವಾಗ, ಇಲ್ಲಿಯ ಬಸ್ ಸ್ಟಾö್ಯಂಡಿನಲ್ಲಿಳಿದು, ಕೆ.ಎಸ್.ಆರ್.ಟಿ.ಸಿ., ಕ್ಯಾಂಟೀನಲ್ಲಿ ಚಾ ಕುಡಿದಿದ್ದ. ಅಷ್ಟು ಬಿಟ್ಟರೆ, ಅವನಿಗೆ ಈ ಊರು ಅಪರಿಚಿತವೆ. ನೆಟ್ ಪರೀಕ್ಷೆ ರಿಝಲ್ಟ ಬರುತ್ತಿದ್ದಂತೆ, ಕೆ.ಪಿ.ಎಸ್.ಸಿ.ಯ ಇಂಟರವ್ಯೂ ನಡೆಸಿ, ಸೆಲೆಕ್ಟ್ ಆದವರಿಗೆ ಪೋಸ್ಟಿಂಗ್ ಕೊಡುವಾಗ ಕೌನ್ಸೆಲಿಂಗ್ ಮಾಡಿದ್ದರು. ಲಿಸ್ಟಿನಲ್ಲಿ ಮೊದಲು ಹೆಸರಿದ್ದವರೆಲ್ಲ ಬೆಂಗಳೂರು, ಮೈಸೂರು, ಇತ್ಯಾದಿ ಊರುಗಳನ್ನು ಆಯ್ದುಕೊಂಡಿದ್ದರು. ಬಸವರಾಜನ ಪಾಳಿ ಬರುವಷ್ಟರಲ್ಲಿ ಇದ್ದವೆಲ್ಲ ಸಣ್ಣ-ಸಣ್ಣ ಊರುಗಳು, ಶಿವಮೊಗ್ಗ, ಉಡುಪಿ ಜಿಲ್ಲೆಯ ಊರುಗಳನ್ನು ಆಯ್ಕೆ ಮಾಡಿಕೊಳ್ಳಲು ಮನಸ್ಸು ಬರದೇ, ಇದ್ದುದರಲ್ಲೇ ವಿಜಾಪೂರ, ಬಾಗಲಕೋಟೆಗಳಿಂದ ಡೈರೆಕ್ಟ್ ಬಸ್ಸು ಇರುವ ಇದೇ ಅನುಕೂಲ ಎನ್ನಿಸಿತು. ಆದರೆ, ಕೆ.ಪಿ.ಎಸ್.ಸಿ., ಬಿಲ್ಡಿಂಗ್‌ನ ಹೊರಗಿನ ಕ್ಯಾಂಟೀನಿನಲ್ಲಿ ಚಾ ಕುಡಿಯುತ್ತ ನಿಂತಾಗ, ಯಾರೋ ಕುಮಟಾ ಕಡೆ ಹುಡುಗಿಯಂತೆ ಕಣ್ಣಲ್ಲಿ ನೀರು ತುಂಬಿಕೊAಡು ಮತ್ತೊಬ್ಬರಿಗೆ ಹೇಳುತ್ತಿದ್ದಳು. “ಇದೇ, ಇವ್ರೆಯಾ ತಲೆಯೂರು ತಗೊಂಬಿಟ್ರು. ಇವ್ರ ನೆಕ್ಸಟ್ ನಂದೇ ಇತ್ತು. ಸಾಯ್ಲಿ ತಪ್ಪೋಯ್ತು ಒಂದ್ ನಿಮಿಷ್ದಲ್ಲಿ ಕೈ ಬಿಟ್ ಹೋಯ್ತು”.  ಕುಡಿಯುತ್ತಿರುವ ಚಾ ನೆತ್ತಿಗೇರಿದಂತಾಗಿ, ಕೆಮ್ಮು ಬಂದಿತ್ತು. ಜೊತೆಗಿದ್ದ ವೀರೇಶ ಬಳಿಗಾರ ಅವಳನ್ನೇ ನೇರವಾಗಿ ಕೇಳಿಬಿಟ್ಟ. “ಯಾಕ್ರಿ ಮೇಡಮ್ಮರೆ ಏನಾಯ್ತ್ರೀ?  ಯಾರಿಗ್ಯಾವ್ದು ಬೇಕೋ ತಗೋತರ‍್ರಿ, ನಿಮ್ಗೇನ್ ಮಾಡ್ಯಾನಿಂವ?” “ಅಯ್ಯೋ ನಾ ಎಂತ ಹೇಳ್ದೆ? ನಮಗೆ ಲೇಡಿಸಿಗೆ ದೂರ ಹೋಗೋದು ತ್ರಾಸಲ.  ನೀವು ಜಂಟ್ಸ್ ಬೇಕಾರ ಹೋಗ್ಬಹ್ದು .ಕುಮ್ಟಾ, ಇಲ್ಲದಿದ್ರೆ ತಲೆಯೂರು ಸಿಗ್ತದೆ ಹೇಳಿ ಆಸೆ ಇತ್ತು” ಎಂದೇನೋ ಗಳಗಳ ಹೇಳಿದಳು. “ಯಾವ್ಯಾವ ಊರಿನ ನೀರಿನ ಋಣ ಯಾರ‍್ಯಾರಿಗೆ ಇರ್ತೈತಿ ಹೇಳಾಕ ಬರೂದಿಲ್ರಿ. ಇಷ್ಟಕ್ಕೂ ಪ್ರತಿವರ್ಷ ಟ್ರಾನ್ಸಫರ್ ಮಾಡಿ ಒಗಿತಿರ‍್ತಾರ. ನೀವು ಮುಂದಿನ್ವರ್ಷ ಟ್ರಾನ್ಸಫರ್ ಕೌನ್ಸೆಲಿಂಗ್‌ಗೆ ರ‍್ರಿ. ಎಕ್ಸಚೇಂಜ್ ಮಾಡಿಕೊಳ್ಳೋಣ”, ವೀರೇಶ ಅಕ್ಕಿಆಲೂರು ತೆಗೆದುಕೊಂಡಿದ್ದ. ಅದೊಂದು ಸಣ್ಣ ಹಳ್ಳಿ. ತಾನು ಪ್ರತಿ ಶನಿವಾರ ತಲೆಯೂರಿಗೆ ಬಂದುಬಿಡುತ್ತೇನೆ ಎಂದು ಹೇಳಿದ್ದ.             ಬಸವರಾಜ ಜಾಯ್ನ ಆಗಲು ಬಂದಾಗ ಅಕ್ಟೋಬರ್ ತಿಂಗಳು. ಸೆಮಿಸ್ಟರ್ ಮುಗಿಯಲು ಇನ್ನೊಂದೇ ತಿಂಗಳು ಬಾಕಿ ಇತ್ತು.  ಎಂ.ಎ. ಮಾಡುವಾಗ ಹಾಸ್ಟೇಲಲ್ಲಿ ಪರಿಚಯವಿದ್ದ ರಾಮಚಂದ್ರ ನಾಯ್ಕ ಸಮಾಜಶಾಸ್ತ್ರಕ್ಕೆ ಜಾಯ್ನ ಆಗಲು ಬಂದಿದ್ದ. ಅವನು ಭಟ್ಕಳದವನಾದ ಕಾರಣ, ಊರಿನ ಪರಿಚಯ ಚೆನ್ನಾಗೇ ಇತ್ತು. ಅವನು ತಾನು ಮನೆ ಬಾಡಿಗೆಗೆ ಹಿಡಿಯುತ್ತೇನೆ, ನೀನು ಶೇರ್ ಮಾಡು ಎಂದಾಗ ಬಸವರಾಜನಿಗೆ ಅನುಕೂಲವೇ ಆಯ್ತು. ದೊಡ್ಡ ಕಂಪೌಂಡಿನ ಮಹಡಿ ಮನೆಯ ಕೆಳಗಿನ ಭಾಗದಲ್ಲಿ ಮಾಲಕರು ಇದ್ದರು. ಮೇಲ್ಬಾಗದ ಮೂರು ರೂಮುಗಳ ಮನೆ ಇವ್ರದ್ದು. ಮಾಲಕ ವಿಶ್ವನಾಥ ಕಿಣಿಯದು ಪೇಟೆಯಲ್ಲಿ ಅಂಗಡಿ ಇತ್ತು. ಹೆಂಡತಿ ದೊಡ್ಡ ಧ್ವನಿಯ ಜೋರುಮಾತಿನ ಸಂಧ್ಯಾಬಾಯಿ. ಮಕ್ಕಳು ಹುಬ್ಬಳ್ಳಿಯಲ್ಲಿ ಇಂಜನಿಯರಿಂಗ್ ಓದುತ್ತಿದ್ದರು. ಜನಿವಾರ ಹಾಕಿಕೊಂಡು ಸಂಧ್ಯಾವಂದನೆ ಮಾಡುವ ಕಿಣಿ ಮೀನು ತಿನ್ನುವುದು ನೋಡಿ ಬಸವರಾಜ ಕಕ್ಕಾಬಿಕ್ಕಿಯಾಗಿದ್ದ.  ಅವರು ಸಾರಸ್ವತ ಬ್ರಾಹ್ಮಣರೆಂದೂ, ಕೊಂಕಣಿ ಮಾತಾಡುತ್ತಾರೆ ಹಾಗೂ ಮತ್ಸ್ಯಾಹಾರ ಸೇವಿಸುತ್ತಾರೆಂದೂ ರಾಮಚಂದ್ರನಾಯ್ಕ ವಿವರಣೆಯಿತ್ತಾಗ, ಬಸವರಾಜ ತಲೆಯಾಡಿಸಿದ. ಕೊಂಕಣಿ ಮಾತೃಭಾಷೆಯ ಕಿಣಿ ದಂಪತಿಗಳು ರಾಗವಾಗಿ ಮಾತನಾಡುವ ಕನ್ನಡ ಇವನಿಗೆ ಅರ್ಥವೇ ಆಗುತ್ತಿರಲಿಲ್ಲ. ಒಂದು ಸಲ ಸಂಧ್ಯಾ ಮನೆ ಬಾಗಿಲ ಮೆಟ್ಟಿಲ ಮೇಲೆ ಕುಳಿತು ಚಾ ಕುಡಿಯುತ್ತಿರುವಾಗ ಕಾಲೇಜು ಮುಗಿಸಿ ಬಂದ ರಾಮಚಂದ್ರ ಬಸವರಾಜರಿಗೆ “ಚಾ ಕುಡಿವಾ ರ‍್ರಿ” ಎಂದು ಕರೆದಳು. ಮುಖ ತೊಳೆದು ಕುಡಿದರಾಯ್ತು ಎಂದು ಬಸವರಾಜ “ಹಿಂದಾಗಡೆ ಕುಡಿತೀನ್ರಿ ಅಕ್ಕಾರೆ” ಎಂದ. “ಇಶ್ಯಿಶ್ಯಿ ನಾವು ಜಾತಿಬೇಧ ಮಾಡೋದಿಲ್ಲ. ಹಿತ್ಲಲ್ಲೆಲ್ಲ ಕೂತ್ಕೊಂಡು ಕುಡ್ಯುದೆಂತಕೆ, ಇಲ್ಲೇ ಕುಡೀರಿ” ಎಂದಳು.  ಬಸವರಾಜನ ಭಾಷೆಯನ್ನು ಕೆಲಮಟ್ಟಿಗೆ ಬಲ್ಲ ರಾಮಚಂದ್ರ ಹಿಂದಾಗಡೆ ಅಂದ್ರೆ ಆಮೇಲೆ ಅಂತ ಎಂದು ಕನ್ನಡವನ್ನು ಕನ್ನಡಕ್ಕೆ ಭಾಷಾಂತರ ಮಾಡಬೇಕಾಯ್ತು. ರಾಮಚಂದ್ರನ ಅನ್ನ, ಕರಾವಳಿಯ ತೆಂಗಿನ ಕಾಯಿ, ಮಸಾಲೆ ಸಾರಿನ ಅಡುಗೆ, ಬಸವರಾಜನಿಗೆ ರೂಢಿಸಲಿಲ್ಲ. ಊರಿಂದ ದೊಡ್ಡ ಗೋಣೀಚೀಲದಲ್ಲಿ ಕಟಕರೊಟ್ಟಿ, ಚಟ್ನಿಪುಡಿ, ತಂದಿಟ್ಟುಕೊಳ್ಳುತ್ತಿದ್ದ.  ಯಾವುದಾದರೂ ತರಕಾರಿಯ ಪಲ್ಯ ಅಥವಾ ಸಾಂಬಾರ್ ಮಾಡಿಕೊಂಡು ಅನ್ನ-ರೊಟ್ಟಿಗಳ ಜೊತೆ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ. ಬೆಳಗಿನ ತಿಂಡಿಗೆ ರಾಮಚಂದ್ರ ದೋಸೆ-ಇಡ್ಲಿ ಮಾಡುವುದು ಮಾತ್ರ ಬಸವರಾಜನಿಗೆ ಬಹಳ ಇಷ್ಟವಾಗುತ್ತಿತ್ತು. “ಮುಂಜಾನೆ ನಸಿಕ್ಲೆ ನಾಷ್ಟಾ ಮಾಡ್ತೀರಿ. ನೋಡಪ್ ನೀವೆಲ್ಲ. ನಮ್ಮೂರಾಗೆ ಬರೇ ಚಾ ಕುಡ್ದು ಮಂದಿ ಅಡ್ಡಾಡತೇವಿ. ಒಂದು ತುತ್ತು ಉಪ್ಪಿಟ್ಟು ಇಲ್ಲಾ, ಚುಮ್ಮರಿ ಒಗ್ಗರಣಿ ಕಾಣ್ಬೇಕಂದ್ರೆ ಹತ್ತು ಹೊಡೀತೇತಲೆ. ಅದು ಹ್ಯಾಂಗ ಏಳಕ್ಕೆ ತಿಂತಿರೋ ಮಾರಾಯ” ಎಂದು ಆಶ್ಚರ್ಯ ಪಡುತ್ತಿದ್ದ. ಎಂಟು ಗಂಟೆಯೆಂದರೆ, ಅಕ್ಕ-ಪಕ್ಕದ ಹೆಂಗಸರು ಒಬ್ಬರಿಗೊಬ್ಬರು “ಆಸ್ರಿ ಕುಡಿದ್ರಿ?” ಎಂದು ಕೇಳುತ್ತ ಚೊಂಯ್ ಚೊಂಯ್ ಎಂದು ದೋಸೆ ಎರೆವ ಸದ್ದಿನ ಹಿನ್ನೆಲೆ ಸಂಗೀತದೊಂದಿಗೆ ಓಡಾಡುತ್ತಿದ್ದರು.             ಬಸ್ಸಾಗಲೇ ತಲೆಯೂರಿನ ಬಸ್ ಸ್ಟಾö್ಯಂಡಲ್ಲಿ ನಿಂತು ಕಂಡಕ್ಟರ್ ಮುಖ ಹೊರಹಾಕಿ “ಡೈರೆಕ್ಟ ಕುಮ್ಟಾ, ಹೊನ್ನಾವರ್, ಭಟ್ಕಳ್ ಯರ‍್ರಿ” ಎಂದು ಕೂಗುತ್ತಿದ್ದ. ಪಕ್ಕದಲ್ಲಿ ಗೊರಕೆ ಹೊಡಿಯುತ್ತ ಮಲಗಿದ್ದ ಮಾವನನ್ನು ಅಲುಗಾಡಿಸಿ ಎಬ್ಬಿಸಿದ ಬಸವರಾಜ “ಏಳೋ ಮಾವಾ  ಊರ‍್ಬಂತು” ಸೀಟಿನ ಕೆಳಗಿನ ರೊಟ್ಟಿ ಚೀಲ, ಮೇಲಿಟ್ಟ ಬ್ಯಾಗುಗಳನ್ನು ತೆಗೆದುಕೊಂಡು ಇಬ್ಬರೂ ಇಳಿದರು. ಅವ್ನೌವ್ನ ಎಂಥಾ ನಿದ್ದೇಲೆ ಬಸು, ಹುಬ್ಬಳ್ಳಿ ದಾಟಿದ್ದೊಂದೇ ಗೊತ್ನೋಡೊ” ಎನ್ನುತ್ತ ಮಾಮಾ ಇಳಿದ. ಈ ಬಾರಿ ಊರಿಗೆ ಹೋದಾಗ ಅಕ್ಕನ ಗಂಡ ಮಲ್ಲಿಕಾರ್ಜುನ ತಾನೂ ಬರುವುದಾಗಿ ಬೆನ್ನು ಹತ್ತಿ ಬಂದಿದ್ದ.  ಬಸವರಾಜನ ಒಬ್ಬಳೇ ಅಕ್ಕ ನೀಲಾಂಬಿಕಾಳನ್ನು ಖಾಸಾ ಸೋದರ ಮಾವ ಮಲ್ಲಿಕಾರ್ಜುನನಿಗೆ ಕೊಟ್ಟಿದ್ದರು. ಬಸವನಬಾಗೇವಾಡಿಯ ಮಗ್ಗುಲಲ್ಲೇ ಇರುವ ನಿಡಗುಂದಿಯಲ್ಲಿ ಹೊಲ-ಮನೆ ಮಾಡಿಕೊಂಡು ಅನುಕೂಲವಾಗಿರುವ ಮಲ್ಕಾಜಿ ಮಾಮಾಗೆ ಹಿರಿಮಗಳು ಅಕ್ಕಮಹಾದೇವಿ.  ಅವಳನ್ನು ವಾಡಿಕೆಯಂತೆ, ತಮ್ಮನಿಗೇ ಕೊಡಬೇಕೆನ್ನುವ ಆಸೆ ನೀಲಕ್ಕನದು. ನೌಕರಿ ಸಿಕ್ಕಿದ್ದೇ ಮದುವೆ ಪ್ರಸ್ತಾಪ ಶುರುವಿಟ್ಟುಕೊಂಡರು. ಆದರೆ, ಅರ್ಥಶಾಸ್ತ್ರದ ಜೊತೆಗೆ ಒಂದಿಷ್ಟು ಸಾಹಿತ್ಯ, ವೈಚಾರಿಕತೆ ಅಂತೆಲ್ಲಾ ಓದುತ್ತ ಬೆಳೆದು ಇದೀಗ ನೌಕರಿಗೆ ಸೇರಿಕೊಂಡ ಬಸವರಾಜ ಉಳ್ಳಾಗಡ್ಡಿಗೆ ಅಕ್ಕನ ಮಗಳನ್ನು ಮದುವೆಯಾಗಲು ಎಳ್ಳಷ್ಟೂ ಮನಸ್ಸಿಲ್ಲದೇ ಒಲ್ಲೆನೆಂದು ಜಗಳ ತೆಗೆದಿದ್ದ. ಮೊದಲೇ ಈ ದೂರದ ಮಲೆನಾಡಿನ ಊರುಗಳನ್ನು ಸರಿಯಾಗಿ ನೋಡಿರದ ಬಾಗೇವಾಡಿಯ ಜನರಿಗೆ ಆತಂಕ ಶುರುವಾಗಿತ್ತು. ತಮ್ಮ ಬಸೂನನ್ನು ಅಲ್ಲಿ ಯಾರಾದರೂ ಬುಟ್ಟಿಗೆ ಹಾಕಿಕೊಂಡಿರುವರೇ, ಹೇಗೆಂದು  ತನಿಖೆ ಮಾಡುವ ಸಲುವಾಗಿ ಬಸೂನ ತಾಯಿ ಗೌರವ್ವ ತಮ್ಮನನ್ನು ಕಳಿಸಿದ್ದಳು. ಆಗಾಗ ಅಲ್ಲಿ-ಇಲ್ಲಿ ಊರು ನೋಡಿ ಬರುವ ಚಟವಿದ್ದ ಮಲ್ಕಾಜಿ ಮಾವ ತನ್ನ ಜೊತೆ ಬರುತ್ತೇನೆಂದಾಗ ಕಾರಣ ಗೊತ್ತಿರದ ಬಸೂ ಸಹಜವೇ ಇರಬೇಕೆಂದುಕೊಂಡು ಒಪ್ಪಿ ಕರೆತಂದಿದ್ದ. ಎರಡು ದಿನದ ರಜೆಗೆ ಊರಿಗೆ ಹೋಗಿದ್ದ ರಾಮಚಂದ್ರನಾಯ್ಕ ಮರುದಿನ ಬರುವವನಿದ್ದ ಕಾರಣ ರೂಮಿಗೆ ಬೀಗ ಹಾಕಿತ್ತು.  ಮೆಟ್ಟಿಲಮೇಲೆ ಕುಳಿತು ಪಕ್ಕದ ಮನೆ ಹೆಂಗಸಿನ ಜೊತೆ ಹರಟುತ್ತಿದ್ದ ಸಂಧ್ಯಾ,“ಏನು ಉಳ್ಳಾಗಡ್ಡಿ ರ‍್ರು, ಯಾರೋ ನೆಂಟ್ರಿಗೆ ಕಕ್ಕೊಂಬಂದಾರಲ್ಲ”ಎಂದಳು. “ಹೌದ್ರಿ ಅಕ್ಕಾರೆ, ಇವ್ರು ನಮ್ಮ ಮಾಮರ‍್ರಿ” ಎಂದ. “ಇನ್ ನಾಳೆ ಬೆಳಿಗ್ಗೇನೆ ನೀರು ಮ್ಯಾಲೇರ‍್ಸೋದು. ಹನಿ ಸಣ್ಣಕೆ ಬಿಟ್ಕಳ್ರಿ ಹಂ” ಎಂದಳು.  “ಯಕ್ಲೆ ಬಸ್ಯಾ ಈ ಊರಾಗೂ ನೀರಿನ ತ್ರಾಸೈತಿ” ಎಂದು ಭಯಂಕರ ಆಶ್ಚರ್ಯದಿಂದ ಕೇಳಿದ ಮಾವನಿಗೆ “ಇಲ್ಲೋ ಮಾರಾಯ ಈ ಮಾಲಕರು ಕೆಟ್ಟ ಜುಗ್ಗ ಅದಾರ. ದಿನಕ್ಕೊಮ್ಮೆ ಮುಂಜಾನೆ ನಳ ಬಿಟ್ಟಾಗ ನೀರು ಏರ‍್ಸತಾರ. ಕರೆಂಟು ಉಳ್ಸಾಕಂತ ಲೈಟು ರ‍್ಸಿ, ಅಂಗಳದಾಗ ಕೂಡೊ ಮಂದಿ ಐತಿ ಬಾ ಇಲ್ಲೆ” ಎಂದು ನಕ್ಕ.             ಅವ್ವ ಮಾಡಿಕೊಟ್ಟ ಮಾಡ್ಲಿ ಉಂಡಿ, ಚಕ್ಕುಲಿಗಳನ್ನು ಸಂಧ್ಯಾಗೆ ಕೊಡಲೆಂದು ಕೆಳಗೆ ಹೋದ.  “ಇದೇನು ರೇತಿ ಕಂಡಾಂಗೆ ಕಾಣ್ತದಲ್ಲ” ಎಂದು ಆಶ್ಚರ್ಯಪಟ್ಟಳು. ಹ್ಹೆ ಹ್ಹೆ ಹ್ಹೆ ಎಂದು ನಕ್ಕು ಮೇಲೆ ಬಂದ.  ರಾಮಚಂದ್ರನ ಫೋನು ಬಂದಾಗ ರೇತಿ ಎಂದರೇನೆಂದು ಕೇಳಿದ. ಅವನು ‘ಮರಳು’ ಅಂದಾಗಲೇ ಅರ್ಥವಾಗಿ ನಗು ಬಂದಿತು. ಮಾವನಿಗೆ ಊರು ತೋರಿಸಲು ಕರಕೊಂಡು ಹೊಂಟ.  ಅವರ ಮನೆಯಿದ್ದ ಅಯ್ಯಪ್ಪ ನಗರದಿಂದ ನಡೆಯುತ್ತ ಕೋಟೆಕರೆಗೆ ಬಂದರು. ಕೆರೆ ಏರಿ ಮೇಲೆ ನಡೆಯುತ್ತ ಹೊರಟಾಗ ಒಂದಿಬ್ಬರು ಹುಡುಗರು ಬಸವರಾಜನಿಗೆ “ನಮಸ್ಕಾರ ಸರ್, ವಾಂಕಿಗು?” ಎಂದು ಮಾತಾಡಿಸಿದರು. “ನಮ್ಮ ಮಾಮಾಗೆ ಊರು ತೋರಿಸ್ಬೇಕು’’ ಎಂದ. ಹಾಗಿದ್ರೆ ಮಾರಿಗುಡಿಗೆ ಹೊಗೋದು ಚೊಲೊ. ಈ ಬದಿಗೆ ಗಣಪತಿ ದೇವಸ್ಥಾನ ಮತ್ತೆಂತ ಉಂಟು ಈ ಊರಲ್ಲಿ.  ಆ ಹುಡುಗರಿಗೆ ತಮ್ಮ ಊರು ಎಂದರೆ, ಮಹಾಬೋರು. ಎರಡು ದೇವಸ್ಥಾನ-ಕೆರೆ ಇರುವ ಈ ಊರಲ್ಲಿ ಎಂತಾ ನೋಡ್ತಾರೆ ಅಂತ ಆಶ್ಚರ್ಯಪಟ್ಟರು. ಬನವಾಸಿಗೆ, ಜೋಗಕ್ಕೆ ಆಥ್ವಾ ಸಹಸ್ರಲಿಂಗಕ್ಕೆ ಹೋಗ್ಬಹುದು ಸರ್ ಎಂದ ಒಬ್ಬ. ಆಯ್ತು ಎಂದು ತಲೆಯಾಡಿಸುತ್ತ ಹೊರಟರು. “ಇವ್ರು ಹ್ಯಾಂಗ್ ಮಾತಾಡ್ತರ‍್ಲೆ, ಮಾಸ್ತರು ಅಂತ ಕಿಮ್ಮತ್ತಿಲ್ಲೇನಲ್ಲೆ? ರಿ ಹಚ್ಚಂಗಿಲ್ಲಲ್ಲ?” ಸಿಟ್ಟಿನಿಂದ ಕೇಳಿದ ಮಾವನಿಗೆ, “ನಂಗೂ ಹೀಗ ಅಗಿತ್ತಪ್ಪ ಶುರುವಿಗೆ. ಆಮೇಲೆ ಗೊತ್ತಾಯ್ತು.  ಇಲ್ಲಿ ಮಂದಿ ಕನ್ನಡ ಬ್ಯಾರೇನೇ ಐತಿ. ಯಾರಿಗೂ ರಿ ಹಚ್ಚಂಗಿಲ್ಲ. “ವಿಚಿತ್ರ ಊರು ಬಿಡಪ” ಎಂದು ಮಲ್ಕಾಜಿ ಪಾನಂಗಡಿ ಕಡೆ ನಡೆದು ಸಿಗರೇಟು ಹಚ್ಚಿಕೊಂಡ. ಬಾಳೆಹಣ್ಣು ಕೊಂಡ ಬಸೂ ಸಿಪ್ಪೆ ಸುಲಿದು ತಿನ್ನತೊಡಗಿದ.  “ಅರೆ ಸರ್, ನೀವು ಊರಿಂದ ಯಾವಾಗ ಬಂದ್ರಿ?” ಧ್ವನಿ ಕೇಳಿ ತಿರುಗಿದರೆ, ಫ್ಯೆನಲ್ ಬಿ.ಎ. ಹುಡುಗಿ ವರದಾ. ಇಡೀ ಕಾಲೇಜಿನಲ್ಲೇ ಹೆಚ್ಚು ಮಾತಾಡುವ ಐದೂ ಕಾಲಡಿ ಎತ್ತರದ ಕಟ್ಟುಮಸ್ತಾದ ಹುಡುಗಿ. ಆಟ-ಭಾಷಣ-ರಂಗೋಲಿ-ಡ್ಯಾನ್ಸು ಎಲ್ಲಾ ಸ್ಫರ್ಧೆಗಳಲ್ಲೂ ಬಹುಮಾನ ಗಳಿಸುತ್ತ ಉಪನ್ಯಾಸಕರ ಮುಖ ಕಂಡಾಗಲೊಮ್ಮೆ “ಇಂಟರ‍್ನಲ್ಸಗೆ ಇಪ್ಪತ್ತಕ್ಕೆ ಇಪ್ಪತ್ತು ಕೊಡ್ಬೇಕು ಹಂ ಈ ಸಲ ನಾವು ಫ್ಯೆನಲ್ ಇಯರ್. ಜೀವನದ ಪ್ರಶ್ನೆ ಮತ್ತೆ” ಎಂದು ತಾಕೀತು ಮಾಡುತ್ತ ತಿರುಗುತ್ತಿದ್ದಳು. ಹಾಂಗಂತ ಅಭ್ಯಾಸದಲ್ಲಿ ಅವಳು ತೀರಾ ಸಾಧಾರಣವಾದ ಅಂಕ ಪಡೆಯುವ ಹುಡುಗಿ. ಅವಳ ಭಯಕ್ಕೆ ಉಪನ್ಯಾಸಕರು ಅಂಕ ಕೊಡಬೇಕಾಗಿತ್ತು. ತೀರಾ ಕಟ್ಟುನಿಟ್ಟಿನ ಕಾಮತ್

ನಡಿ ಕುಂಬಳವೇ ಟರಾ ಪುರಾ Read Post »

ಕಥಾಗುಚ್ಛ

ಉದಾಹರಣೆ

ಕಥೆ ಮಧುರಾ ಕರ್ಣಮ್ ಎಲ್ಲ ಸರಿ ಇದ್ದವರು ಸುಮ್ಮನಿರಲಾಗದೇ ಮೈಮೇಲೆ ಇರುವೆ ಬಿಟ್ಕೊಂಡು ತುರಸ್ಕೋತಾರಂತೆ. ಹಾಗಾಗಿದೆ ನನ್ನ ಕತೆ. ನೀವು ಹೇಳಿದ್ರೆ ನಂಬ್ತೀರೋ ಇಲ್ಲವೋ, ಜನಕ್ಕೆ ನೂರೆಂಟು ತಾಪತ್ರಯಗಳು. ವೃದ್ಧರಿಗಂತೂ ಸಾವಿರದೆಂಟಂದ್ರೂ ಪರವಾಗಿಲ್ಲ. ಅಪರೂಪಕ್ಕೆ ನನಗೆ ತೊಂದರೆಗಳೇ ಇಲ್ಲದಂತಿದ್ದೆ. ‘ತೊಂದರೆಗಳು ನಾವು ನೋಡುವ ದೃಷ್ಟಿಯಲ್ಲಿರುತ್ತವೆ ಬಿಡಿ. ಆದ್ರೂನೂ ನನಗೆ ಒಂದೇ ಒಂದು ಕೊರತೆ ಅನಿಸಿದ್ದು ನನ್ನ ಪತ್ನಿ ಜಾನ್ಹವಿ, ಜಾನೂ ಇಲ್ಲದ್ದು. ಕೈಹಿಡಿದವಳು ಕೈಬಿಟ್ಟು ನಡೆದು ಆಗಲೇ ಹತ್ತು ವರ್ಷಗಳಾಗಿದ್ದವು. ಅದನ್ನು ಬಿಟ್ಟರೆ ಮೂರು ಜನ ಮಕ್ಕಳು ತಮ್ಮ ಪತ್ನಿಯರು, ಮಕ್ಕಳೊಂದಿಗೆ ಆರಾಮವಾಗಿದ್ದಾರೆ. ಮುವರೂ ಸಾಫ್ಟವೇರೇ. ಹಿರಿಯವ ಮುಕುಲ್ ಕಂಪನಿಯೊಂದರಲ್ಲಿ ಎ.ವಿ.ಪಿ. ಆಗಿದ್ದಾನೆ. ಎರಡನೆಯವ ನಕುಲ್ ಸಾಫ್ಟವೇರ್ ಜೊತೇನೆ ಅಮೆರಿಕಾ ಸೇರಿದ್ದಾನೆ. ಕೊನೆಯವ ಬಕುಲ್ ಮುಂಬಯಿ ಸೇರಿಕೊಂಡಿದ್ದಾನೆ. ಸೊಸೆಯಂದಿರು ಮೂವರು ಚಿಕ್ಕ ಪುಟ್ಟ ಭಿನ್ನಾಭಿಪ್ರಾಯಗಳನ್ನು ಬಿಟ್ಟರೆ ಒಳ್ಳೆಯವರೇ. ನನ್ನ ತಂಟೆಗೇನೂ ಬರುವದಿಲ್ಲ. ನಾನು ಎಂದಿಗೂ ಅವರು ಧರಿಸುವ ಬಟ್ಟೆ, ಮಾಡುವ ಖರ್ಚು ಶಾಪಿಂಗ್ಗಳ ಉಸಾಬರಿ ಮಾಡುವದಿಲ್ಲ.             ಎಲ್ಲೋ ಹುಟ್ಟಿ ಎಲ್ಲೋ ಹರಿದು ಎಲ್ಲೋ ಸೇರುವಂತೆ, ಧಾರವಾಡದಲ್ಲಿ ಹುಟ್ಟಿ ಬೆಳೆದು ಕರ್ನಾಟಕ ಕಾಲೇಜಿಗೆ ಮಣ್ಣು ಹೊತ್ತು ಪೋಸ್ಟಲ್ ಡಿಪಾರ್ಟಮೆಂಟಿಗೆ ಸೇರಿದ್ದೆ. ಮಕ್ಕಳ ಓದಿಗೆಂದು ಪುಣೆಗೆ ಬಂದವರು ಅಲ್ಲೇ ನೆಲೆ ನಿಂತೆವು. ಜೀವನವೂ ನಿಧಾನವಾಗಿ ಪುಣೇರಿ ಧಾಟಿಯಲ್ಲೇ ಬದಲಾಗತೊಡಗಿತ್ತು. ಅವಶ್ಯಕ ವಿಷಯಗಳ ಬಗ್ಗೆ ಮಾತ್ರ ಮಾತು, ಚರ್ಚೆ ಇತ್ಯಾದಿ. ಮಕ್ಕಳು ತಮ್ಮ ಆಸಕ್ತಿಯ ಕ್ಷೇತ್ರ ಆರಿಸಿಕೊಂಡರು. ಹಾಗೇ ಪತ್ನಿಯರನ್ನೂ. ಒಂದು ರೀತಿಯಲ್ಲಿ ಒಳ್ಳೆಯದೇ ಆಯಿತೆಂದಳು ಜಾನ್ಹವಿ. ಯಾವಾಗಲೋ ಒಮ್ಮೆ ಹೋಗಿ ಬರುತ್ತಿದ್ದ ಧಾರವಾಡದ ನಂಟು ಪೂರ್ತಾ ಕಡಿಮೆಯಾಯಿತು.             ಲಕ್ಷ್ಮಿ ರೋಡಿನ ಈ ಚಾಳದಲ್ಲಿ ನಲವತ್ತು ವರ್ಷಗಳ ಹಿಂದೆ ನಾವು ಹೊಸದಾಗಿ ಬಂದಾಗ ವಾಸಿಸಲಾರಂಭಿಸಿದ ಮನೆಯಲ್ಲೇ ಇಂದಿಗೂ ನಮ್ಮ ವಾಸ. ಹಳೆಯ ಮನೆಗಳು. ಅರವತ್ತು ರೂಪಾಯಿಗಳ ಬಾಡಿಗೆ. ಆಗಲೋ ಈಗಲೋ ಎನ್ನುವಂತಿದ್ದರೂ ಇನ್ನೂ ಏನೂ ಆಗಿಲ್ಲ. ನನ್ನ ಹಣೆಬರಹದಂತೆ ಗಟ್ಟಿಮುಟ್ಟಾಗಿವೆ. ಹಿಂದೆಯೇ ತುಳಸಿ ಬಾಗ. ಪುಣೆಯ ಖ್ಯಾತ ಮಾರುಕಟ್ಟೆ. ಅಲ್ಲಿ ಸದಾ ಸಂತೆಯೇ. ರಾತ್ರಿ ಹನ್ನೊಂದು ಗಂಟೆಯಲ್ಲೂ ಬೇಕಾದ್ದು ಸಿಗುತ್ತಿತ್ತು. ಆದರೆ ವ್ಯಾಪಾರಿಗಳ ಗಲಾಟೆ, ಚಿಕ್ಕ ಚಿಕ್ಕ ಖೋಲಿಗಳ ಮನೆ ಮಕ್ಕಳು ದೊಡ್ಡವರಾದಂತೆ ಅವರಿಗೆ ಹಿಡಿಸಲಿಲ್ಲ. ಮುಕುಲ್ ‘ಸಾರ್ಗೇಟ್’ನಲ್ಲಿ ದೊಡ್ಡ ಮನೆ ಮಾಡಿದ. ನಮ್ಮನ್ನೂ ಅಲ್ಲಿಗೇ ಕರೆದ. ಯಾಕೋ ಚಾಳ ಬಿಟ್ಟು ಹೋಗಲು ಮನಸ್ಸೊಪ್ಪಲಿಲ್ಲ. ಆದರೆ ಮೂರೂ ಮಕ್ಕಳ ಮದುವೆ, ಹೆಂಡಿರ ಸೀಮಂತ, ಮೊಮ್ಮಕ್ಕಳ ಜಾವಳ ಇತ್ಯಾದಿಗಳು ಈ ಗುಬ್ಬಿಗೂಡಿನಲ್ಲೇ ನಡೆದವು. ನಕುಲ್ ಹೆಂಡತಿಯೊಂದಿಗೆ ಅಮೆರಿಕಾ ಸೇರಿದವ ಆಗಾಗ್ಗೆ ಬಂದು ಹೋಗುತ್ತಾನೆ. ಬಕುಲ್ ಮುಂಬೈನಲ್ಲೇ ಓನರ್ಶಿಪ್ ಮೇಲೆ ಫ್ಲಾಟ್ ಕೊಂಡು ಆರಾಮವಾಗಿದ್ದಾನೆ.             ಮೊಮ್ಮಕ್ಕಳನ್ನು ಕಂಡ ಕೆಲವೇ ದಿನಗಳಲ್ಲಿ ಜಾನು ಹೋಗಿಬಿಟ್ಟಳು. ಕುಳಿತವಳು ಎದ್ದು ಹೋದಂತೆ. ಒಂದು ದಿನವೂ ಮಲಗಲಿಲ್ಲ. ‘ಎದೆನೋವು’ ಎಂದವಳು ನನ್ನ ಕೊಂಡಿಯಿಂದ ಕಳಚಿಕೊಂಡುಬಿಟ್ಟಳು. ಆಗಿನಿಂದಲೇ ನಾನು ಒಬ್ಬಂಟಿ. ಹತ್ತು ವರ್ಷಗಳು ಯಾಂತ್ರಿಕವಾಗಿ ಸಾಗಿದ್ದವು. ಶುಗರ್, ಬಿ.ಪಿ. ಇದ್ದರೂ ತೊಂದರೆ ಕೊಡಲಿಲ್ಲ. ನಿತ್ಯ ಒಂದು ಡಯಾನಿಲ್, ಒಂದು ಲೋಸಾರ್ ನುಂಗಿದರಾಯಿತು. ಹೀಗಾಗಿ ಚಾಳಿನ ಮನೆಯನ್ನೇನೂ ಬಿಟ್ಟಿರಲಿಲ್ಲ. ನಿತ್ಯ ಸಾರ್ಗೇಟ್ನಲ್ಲಿರುವ ಮಗನ ಮನೆಗೆ ವಾಕಿಂಗ್ ಮಾಡುತ್ತಾ ಹೋಗಿ ತಿಂಡಿ, ಊಟ ಮುಗಿಸಿ ಒಂದಿಷ್ಟು ಓಡಾಡಿ, ನಿವೃತ್ತರೊಂದಿಗೆ ಕಾಲ ಕಳೆದು, ದೇವಸ್ಥಾನ, ಲೈಬ್ರರಿಗಳಿಗೆ ಭೇಟಿ ನೀಡಿ ರಾತ್ರಿ ಊಟ ಮುಗಿಸಿಯೇ ಮನೆ ಸೇರುವದಿತ್ತು. ಮನೆ ಕೀಲಿ ಹಾಕಿಕೊಂಡು ಮುಂಬೈಗೆ ಹೋದರೆ ಮೂರು ತಿಂಗಳು ಪುಣೆಯತ್ತ ಹೊರಳುತ್ತಿರಲಿಲ್ಲ. ನಕುಲ್ ಎರಡು ಬಾರಿ ಅಮೆರಿಕೆಗೆ ಕರೆಸಿಕೊಂಡಿದ್ದ. ನಯಾಗರ ನೋಡಿಕೊಂಡು ಬಂದಿದ್ದೆ. ಪಾಪ, ಜಾನು ಏನೂ ನೋಡಲಿಲ್ಲ. ಅವಳ ಜೀವನವೆಲ್ಲ ಕತ್ತೆಯಂತೆ ದುಡಿದು ಗಂಡ, ಮಕ್ಕಳಿಗೆ ಚಪಾತಿ, ಪಲ್ಯದ ಡಬ್ಬಿ ಕಟ್ಟಿದ್ದೇ ಬಂತು. ಮಕ್ಕಳ ಶ್ರೀಮಂತಿಕೆ, ಕಾರುಗಳು, ಚಿನ್ನ ಏನೂ ಕಾಣಲಿಲ್ಲ. ಅವಳಿಗೊಂದೆರೆಡು ಒಡವೆ  ಕೂಡ ಕೊಡಿಸಲಾಗಲಿಲ್ಲ. ಹೇಗೆ ಕೊಡಿಸುತ್ತಿದ್ದೆ? ಮೂರು ಮಕ್ಕಳ ಶಿಕ್ಷಣ, ಪುಣೆಯಲ್ಲಿ ಜೀವನ ಎಂದರೆ ಹುಡುಗಾಟವೇ? ಹಾಸಿದರೆ ಹೊದೆಯಲಿಲ್ಲ, ಹೊದ್ದರೆ ಹಾಸಲಿಲ್ಲ ಎಂಬಂಥ ಪರಿಸ್ಥಿತಿ. ಹೊಂದಾಣಿಕೆ ಮಾಡಿಕೊಳ್ಳುತ್ತಲೇ ನಮಗಾಗಿ ಬದುಕು ಕಳೆದುಬಿಟ್ಟಳು. ಏನೇ ಆದರೂ ನಾವಿಬ್ಬರೂ ಸಂಕಷ್ಟಿಯಂದು ‘ಪರ್ವತಿ’ಯಲ್ಲಿದ್ದ ಗಣಪತಿಯ ದರ್ಶನ ತಪ್ಪಿಸುತ್ತಿರಲಿಲ್ಲ. ಇಬ್ಬರೂ ಸೇರಿ ದರ್ಶನ ಮಾಡಿಕೊಂಡು ಎದುರಿನ ಹೊಟೆಲ್ನಲ್ಲಿ ಸಂಕಷ್ಟಿಯ ಸ್ಪೆಶಲ್ ಸಾಬೂದಾಣೆಯ ವಡೆ, ಬಟಾಟೆಯ ಹಪ್ಪಳ ತಿಂದು ಬರುತ್ತಿದ್ದೆವು. ಈಗ ಯಾಂತ್ರಿಕವಾಗಿ ಒಬ್ಬನೇ ಹೋಗುತ್ತೆನೆ.             ಆ ಬಾರಿ ಅಂಗಾರಕ ಸಂಕಷ್ಟಿ ಬೇರೆ. ಪರ್ವತಿಯಲ್ಲಿ ಗಣಪತಿಯ ದರ್ಶನಕ್ಕೆ ಉದ್ದಾನುದ್ದ ಸಾಲು. ಸರತಿಯ ಸಾಲಿನಲ್ಲಿ ಯಾವುದೋ ಪರಿಚಿತ ಮುಖ ಕಂಡಂತಾಯಿತು. ನನ್ನಿಂದ ಅನತಿ ದೂರದಲ್ಲೇ. ತಲೆ ಕೆರೆದುಕೊಂಡು ಯೋಚಿಸಿದಾಗ ಚಿತ್ತಭಿತ್ತಿಯಲ್ಲಿ ಮೀನಾ ಕಂಡುಬಂದಳು. ಹೌದು, ಅವಳೇ ನನ್ನ ತಂಗಿ ಸುರೇಖಾಳ ಗೆಳತಿ ಮೀನಾ. ಸುರೇಖಾ ಮತ್ತು ಮೀನಾ ಆಟ್ರ್ಸ ತೆಗೆದುಕೊಂಡು ಧಾರವಾಡದ ಜೆ.ಎಸ್.ಎಸ್. ಕಾಲೇಜಿಗೆ ಹೋಗುತ್ತಿದ್ದರು. ಆಗ ನನ್ನದೂ ಹದಿ..ಹದಿ..ಹರಯ. ಅವಳ ಜಿಂಕೆಗಂಗಳ ಮೋಡಿಗೆ ಸಿಲುಕಿದ್ದೆ. ತೊಡುತ್ತಿದ್ದ ಲಂಗ, ದಾವಣಿ, ಸೀರೆ ಅವಳ ಮೈಮಾಟಕ್ಕೊಪ್ಪುತ್ತಿದ್ದವು. ಮಾತನಾಡಿಸಬೇಕೆಂಬ ಬಯಕೆ ತೀವ್ರವಾಗಿತ್ತು. ಆದರೆ ಅಪ್ಪನ ಹೆದರಿಕೆ. ಅಲ್ಲದೇ ಸುರೇಖಾ ಸದಾ ಅವಳ ಜೊತೆಯಲ್ಲೇ ಇರುತ್ತಿದ್ದಳು. ಕೊನೆಗೆ ಧಾರವಾಡ ರೆಸ್ಟೋರೆಂಟ್ ಪಕ್ಕ ಅವಳು ಟೈಪಿಂಗ್ ಕ್ಲಾಸಿಗೆ ಹೋಗುವದನ್ನು ತಿಳಿದುಕೊಂಡು ಅಲ್ಲೇ ಹೋಗಿ ಮಾತನಾಡಿಸಿದೆ. ಬಹುಶ: ಅವಳಿಗೂ ನನ್ನ ಮೇಲೆ ಆಕರ್ಷಣೆ ಇತ್ತು. ಹೀಗಾಗಿ ಹೆದರದೇ ಮುಗುಳ್ನಗುತ್ತ ಮಾತನಾಡಿದಳು. ಇಬ್ಬರೂ ಮೊದಲೇ ನಿಶ್ಚಯಿಸಿಕೊಂಡು ಒಮ್ಮೆ ನುಗ್ಗೀಕೇರಿಗೆ ಹೋಗಿದ್ದೆವು. ಹನುಮಪ್ಪನ ದರ್ಶನ ಪಡೆದು ಮುಂದೆ ಮರದ ನೆರಳಿನಲ್ಲಿ ಕುಳಿತು ಪ್ರೇಮ ನಿವೇದನೆ ಮಾಡುತ್ತಾ ಅವಳ ಮುಂಗೈಯನ್ನು ತುಟಿಗೊತ್ತಿಕೊಂಡಿದ್ದೆ. ರೋಮಾಂಚನವಾಗಿತ್ತು. ತಕ್ಷಣ ಅವಳು ನಾಚಿಕೊಂಡು ಕೈ ಕೊಸರಿಕೊಂಡು ಓಡಿಹೋಗಿದ್ದಳು. ಮಾತಿಗೆ ನಿಲುಕದ ಸುಖ. ಜನ್ಮಪೂರ್ತಾ ಮರೆಯಲಾಗಿರಲಿಲ್ಲ.             ಮುಂದೆ ನಾನು ಅಂಚೆ ಇಲಾಖೆ ಸೇರುತ್ತಿದ್ದಂತೆ ಸುರೇಖಾಳ ಮದುವೆಯಾಗಿತ್ತು. ಅವಳ ಮದುವೆಯಲ್ಲಿ ನಮ್ಮಿಬ್ಬರ ಓಡಾಟ ಕಂಡು ಕೆಲವರ ಕಣ್ಣು ಕೆಂಪಾಗಿದ್ದವು. ಮದುವೆ ಗಲಾಟೆ ಮುಗಿಯುತ್ತಿದ್ದಂತೆ ಅಪ್ಪ ಗುಡುಗಿದ್ದರು. ಅವರದು ಬ್ಯಾರೇ ಜಾತಿ. ನಿನಗ ಹುಡುಗಿನ್ನ ನಾವು ನೋಡೇವಿ ಎಂದಿದ್ದರು. ಅತ್ತ ಮೀನಳ ಮನೆಯಲ್ಲೂ ವಾಸನೆ ಬಡಿದಿತ್ತು. ವಾರದೊಳಗೇ ಅವಳ ಮದುವೆ ಗೊತ್ತಾಗಿತ್ತು. ನನಗೊಂದು ಭೇಟಿಗೂ ಅವಕಾಶವಾಗದಂತೆ ಮದುವೆ ಮುಗಿದು ಹೋಯಿತು. ರಾತ್ರಿ ಹೊದಿಕೆಯ ಒಳಗೇ ದು:ಖಿಸಿದ್ದೆ. ಮುಂದೆ ಜಾನು ನನ್ನ ಕೈಹಿಡಿದಳು. ಎಲ್ಲ ತೆರೆಯ ಮೇಲೆ ಸರಿಯುವ ರೀಲಿನಂತೆ. ಹಾಗೇ ಇದ್ದಾಳೆ. ಹೆಚ್ಚೇನೂ ಬದಲಾಗಿಲ್ಲ. ಮುಖದ ಮೇಲಿನೊಂದೆರಡು ಸುಕ್ಕುಗಳು, ಕಣ್ಣಸುತ್ತ ಕಪ್ಪು ವರ್ತುಲ , ನೋವಿನ ಗೆರೆಗಳನ್ನು ಬಿಟ್ಟು.. ..             ಗಣೇಶನ ದರ್ಶನ ಮಾಡಿಕೊಂಡು ಹುಡುಕುತ್ತ ಬಂದಾಗ ದೇವಾಲಯದ ಆವರಣದಲ್ಲೇ ಅವಳು ಪ್ರಸಾದದೊಂದಿಗೆ ಕುಳಿತಿರುವದು ಕಂಡಿತು. ತಟಕ್ಕನೇ ಮುಂದೆ ನಿಂತು  ಹೆಂಗಿದ್ದೀ ಮೀನಾ? ಎಂದೆ. ಅವಳು ಕಣ್ಕಣ್ಣು ಬಿಟ್ಟು ನೋಡಿದಳು. ನನ್ನ ಅರ್ಧ ಸಪಾಟಾದ ತಲೆ ಗುರುತು ಸಿಗಲು ತೊಡಕಾಗಿತ್ತು. ನಂತರ ಪ್ರ..ಕಾ..ಶ ? ಎಂದಳು ಪ್ರಶ್ನಾರ್ಥಕವಾಗಿ. ಹೌದು ಎನ್ನುತ್ತ ಕತ್ತಾಡಿಸಿದೆ. ನೀ ಹೆಂಗೋ ಇಲ್ಲೇ? ಎಂದಳು. ಅಲ್ಲೆ ಹೋಗೋಣ ಎಂದು ಕೊಂಚ ದೂರದ ಪಾರ್ಕ್ ಗೆ ಹೋಗಿ ಕುಳಿತೆವು. ನಾನು ನನ್ನ ಪ್ರವರವನ್ನೆಲ್ಲಾ ಹೇಳಿದೆ. ಕೇಳಿಸಿಕೊಂಡು ತನ್ನದನ್ನೂ ಹೇಳಿದಳು. ಹೇಳ್ಲಿಕ್ಕೆ ಭಾಳೇನಿಲ್ಲೋ ಪ್ರಕಾಶ. ಅವರದು ಸರ್ಕಾರಿ ಆಫೀಸಿನ್ಯಾಗ ಸ್ಟೆನೋ ಕೆಲಸಿತ್ತು. ಎರಡು ಮಕ್ಕಳು. ಮಗಳು ಮದಿವ್ಯಾಗಿ ‘ನಾಸಿಕ’ನ್ಯಾಗಿದ್ದಾಳ. ಮಗ ಭಾಸ್ಕರ ಪುಣೇದಾಗ ಬ್ಯಾರೇ ಮನಿ ಮಾಡಿಕೊಂಡು ಹೆಂಡ್ತಿ ಜೋಡಿ ಇದ್ದಾನ. ಅವರು ಹೋಗಿ ಹತ್ತು ವರ್ಷಾತು. ನಾ ಒಬ್ಬಾಕಿನ ಸಾರ್ಗೇಟ್ ಕಡೆ ಖೋಲಿ ಬಾಡಿಗಿಗೆ ತೊಗೊಂಡಿದ್ದೇನಿ. ಎಂದು ಮೌನವಾದಳು .             ಅಂದು ಮನೆಗೆ ಹಿಂತಿರುಗಿ ಬಂದರೂ ಮೀನಳ ಗುಂಗು ಆವರಿಸಿತ್ತು. ನಾವಿಬ್ಬರೂ ಸಮದು:ಖಿಗಳಿದ್ದಂತೆ. ಹೆಚ್ಚು ಕಡಿಮೆ ಜಾನು ಹೋದಾಗಲೇ ಅವಳ ಗಂಡನೂ ಹೋಗಿದ್ದು. ಅವಳದೂ ಒಂಟಿ ಜೀವ. ರಾತ್ರಿಯೆಲ್ಲ ಏಕೋ ಧಾರವಾಡದ ನುಗ್ಗಿಕೇರಿಯ ನಮ್ಮ ಭೇಟಿಯ ನೆನಪು ಮೂಡಿ ಬಂದಿತ್ತು. ಮುಂದಿನ ದಿನಗಳಲ್ಲಿ ನಾನು ಅನೇಕ ಬಾರಿ ಸಾರ್ಗೇಟ್ನ ಅವಳ ಮನೆಗೆ ಭೇಟಿ ಇತ್ತಿದ್ದೆ. ಅವಳೂ ನನ್ನ ಮನೆಗೆ ಬಂದು ಹೋಗಿದ್ದಳು. ಹಾಗೇ ನಮ್ಮ ಒಡನಾಟ ಬೆಳೆದು ವಾರಕ್ಕೆ ಎರಡು ಮೂರು ಬಾರಿಯಾದರೂ ನಾವು ಭೇಟಿಯಾಗುವಂತಾಯಿತು. ಹೆದರಿಸಲು ಇಲ್ಲೇನು ಅಪ್ಪನ ಕಣ್ಣುಗಳಿರಲಿಲ್ಲ. ಅಮ್ಮನ ನೊಂದ ಮುಖವಿರಲಿಲ್ಲ.             ಈ ಮನಸ್ಸಿನ ಕಥೆಯನ್ನೇ ನಾನು ಹೇಳಿದ್ದು. ಎಷ್ಟು ವಿಚಿತ್ರ ನೋಡಿ. ಹೆಂಡತಿ ಎಂಬ ಚೌಕಟ್ಟಿದ್ದರೆ ಒಳಗೇ ಹರಿದಾಡಿಕೊಂಡಿರುತ್ತದೆ. ಇಲ್ಲವಾದರೆ ಎಲ್ಲೆಲ್ಲೋ ನುಗ್ಗಿ ಒಡ್ಡು ಮೀರಿ ಹರಿಯುತ್ತ.. ..ಮೊರೆಯುತ್ತದೆ. ನನಗೀಗ ಅರವತ್ತೆರಡು ವರ್ಷಗಳು. ಇತ್ತೀಚೆಗೆ ನನಗೆ ‘ಮೀನಳನ್ನೇಕೆ ಮದುವೆಯಾಗಬಾರದು?’ ಎನಿಸಿತ್ತು. ಅಂದು ಅಪ್ಪನ ಹೆದರಿಕೆಯಿಂದ ನಿಂತು ಹೋದ ಪ್ರೀತಿ ಮತ್ತೆ ಮುಂದುವರೆಯಬಹುದಲ್ಲ. ನನ್ನ ಮಕ್ಕಳಂತೂ ಬೇಡವೆನ್ನಲಿಕ್ಕಿಲ್ಲ. ‘ಫಾರ್ವರ್ಡ’ಹುಡುಗರು. ಬೇರೆ ಏನೂ ಜಂಜಡವಿಲ್ಲ. ಇಬ್ಬರೂ ಸಮದು:ಖಿಗಳು. ಜೋಡಿಯಾಗಿ ವೃದ್ಧಾಪ್ಯ ಕಳೆಯಬಹುದು. ಈ ವಯಸ್ಸಿಗೆ ಅವಶ್ಯಕವಾಗಿ ಬೇಕಾಗುವದು ‘ಸಾಂಗತ್ಯ.’ ಇಬ್ಬರೂ ಒಬ್ಬರಿಗೊಬ್ಬರು ಆಸರೆಯಾಗಿ ಹೆಜ್ಜೆ ಹಾಕಿದರೆ.. ಅನೇಕ ‘ರೇ..ಳು ಮನದಲ್ಲಿ ಸುಳಿದವು. ನುಗ್ಗೀಕೇರಿಯ ಆಲದ ಮರದಡಿಯ ಚಿತ್ರ ಮುಂದೋಡಿ ಉತ್ತುಂಗ ಸುಖ ತಂದಿಡುವಂತೆ ಭಾಸವಾಯಿತು. ವಿಷಯ ಪ್ರಸ್ತಾಪಿಸಿದಾಗ ಮೀನಳಿಗೆ ಅಚ್ಚರಿಯೇನೂ ಆಗಿರಲಿಲ್ಲ. ಬದಲಿಗೆ ನಿರೀಕ್ಷಿಸುತ್ತಿದ್ದವಳಂತೆ ಸಮ್ಮತಿಸಿದ್ದಳು. ನನಗ ಇಬ್ಬರು ಮಕ್ಕಳಿದ್ದಾರಂತ ಹೇಳಿದೆನಲ್ಲ ಪ್ರಕಾಶ. ನೀ ಬೇಕಾದರೆ ಅವರಿಬ್ಬರನ್ನೂ ಒಮ್ಮೆ ಭೆಟ್ಟಿ ಮಾಡು ಎಂದಿದ್ದಳು. ನಾನು ಹೀರೋನ ಪೋಸು ಕೊಟ್ಟು ಬೇಕಾಗಿಲ್ಲ ಮೀನಾ. ನಿನ್ನ ಮಕ್ಕಳಂದ್ರ ನನ್ನ ಮಕ್ಕಳಿದ್ದಂಗ. ನನಗಂತೂ ಹೆಣ್ಣು ಮಕ್ಕಳಿಲ್ಲ. ಹಿಂಗರೆ ಒಬ್ಬಾಕಿ ಮಗಳು ಸಿಕ್ಕಂಗಾತು. ಎಂದಿದೆ.್ದ             ನನ್ನ ಮಕ್ಕಳಿಗೆ ವಿಷಯ ತಿಳಿಸಿದಾಗ ಅಚ್ಚರಿಯಿಂದ ಹುಬ್ಬೇರಿಸಿದರು. ಸೊಸೆಯಂದಿರೂ ಆಶ್ಚರ್ಯಚಕಿತರಾದರೂ ಬದಲು ಹೇಳಲಿಲ್ಲ. ಎಲ್ಲರ ಪರವಾಗಿ ಮುಕುಲ್ ಮಾತನಾಡಿದ್ದ. ದಾದಾ, ನಿಮ್ಮ ಇಚ್ಛಾಕ್ಕ ನಾವು ಅಡ್ಡ ಬರಂಗಿಲ್ಲ. ಆದ್ರ ನಮ್ಮವ್ವನ್ನ ನಾವು ಮರೀಲಿಕ್ಕಾಗೂದಿಲ್ಲ… .. ಎಂದಿದ್ದ. ಹೌದಲ್ಲ, ಇಷ್ಟೂ ದಿನಗಳೂ ಮೀನಳ ಭೇಟಿಯಾದಾಗಿನಿಂದ ನನ್ನ ಜಾನ್ಹವಿಯ ನೆನಪೇ ಬರದಷ್ಟು ಮರೆತು ಹೋಗಿದ್ದೆ. ‘ಈ ವಯಸ್ಸಿನಲ್ಲಿ..  ಮದುವೆಯಾಗಿ.. ಜಾನ್ಹವಿಗೇನಾದರೂ ಮೋಸ ಮಾಡುತ್ತಿದ್ದೇನಾ?’ ಎಂಬ ವಿಚಾರ ಒಳಹೊಕ್ಕು ತಲೆಯೆಲ್ಲ ಚಿಟ್ಟೆಂದಿತು. ‘ಉಹ್ಞೂಂ, ನಾನು ಜಾನ್ಹವಿಗೇನೂ ಅನ್ಯಾಯ ಮಾಡುತ್ತಿಲ್ಲ. ಒಮ್ಮೆ ನಿರ್ಧರಿಸಿ ಆಗಿದೆ. ಇನ್ನು ಮುಂದುವರೆದೇ ಸೈ’ ಎಂದು ತೀರ್ಮಾನಿಸಿದೆ. ಅಕ್ಕ ಪಕ್ಕದ ಒಂದೆರೆಡು ಮನೆಯವರಿಗೆ ವಿಷಯ ತಿಳಿಸಿದೆ. ಕೆಲವರು ಕಣ್ಣರಳಿಸಿದರು. ಹಲವರು ಸಂತೋಷದಿಂದ ಕಂಗ್ರಾಚುಲೇಷನ್ಸ ಎಂದರು. ಹಿಂದೆ ಆಡಿಕೊಂಡು ನಕ್ಕವರೂ ಇದ್ದರೆನ್ನಿ. ಏನೋ ಸಂತೋಷ, ಹುರುಪು.. ಮಹಾಬಲೇಶ್ವರದಲ್ಲಿ ಒಂದು ವಾರ ಮಜವಾಗಿ ಕಳೆದು ಬಂದು ಸಂಸಾರ ಆರಂಭಿಸಬೇಕು. ಏನೇನೋ ಕನಸುಗಳು, ಕನವರಿಕೆಗಳು…             ನಿರೀಕ್ಷಿಸಿದಂತೆ ದೇವಸ್ಥಾನದಲ್ಲಿ ಹಾರ ಬದಲಾವಣೆ ಮಾಡಿಕೊಂಡು ಸರಳವಾಗೇ ಮದುವೆಯಾದೆವು. ಬಕುಲ್ ಗ್ರೀಟಿಂಗ್ಸ ಕಳಿಸಿದ್ದ. ನಕುಲ್ನಿಂದ ಶುಭಾಷಯದ ಸಂದೇಶ ಬಂದಿತ್ತು. ಮುಕುಲ್ ಒಬ್ಬನೇ ಬಂದು ಶುಭ ಹಾರೈಸಿದ. ಹೆಂಡತಿ, ಮಕ್ಕಳು ಬೇಸಿಗೆ ರಜಕ್ಕೆ ತವರಿಗೆ ಹೋಗಿದ್ದರಂತೆ. ಶಿಷ್ಟಾಚಾರದಂತೆ ನನಗೆ ಮೀನಳಿಗೆ ನಮಸ್ಕರಿಸಿ ಆಫೀಸಿಗೆ ಹೊರಟು ಹೋದ. ನಾವೇ ನವದಂಪತಿಗಳು ಪಾಂಚಾಲಿ ಹೋಟೆಲ್ನಲ್ಲಿ ಊಟ ಮಾಡಿಕೊಂಡು ಮನೆಗೆ ಬಂದೆವು. ಚಾಳದ ಕಣ್ಣುಗಳೆಲ್ಲ ಆನಂದಾಶ್ಚರ್ಯಗಳಿಂದ ನೋಡಿ ಶುಭ ಹಾರೈಸಿದರು. ಮೊದಲು ಬಂದು ಜಾನ್ಹವಿಯ ಫೋಟೋಕ್ಕೆ ಕೈ ಮುಗಿದೆ.

ಉದಾಹರಣೆ Read Post »

ಕಾವ್ಯಯಾನ

ಕಣ್ಣುಗಳಲಿ ಮುಚ್ಚಿಡಲಾಗುತ್ತಿಲ್ಲ ಒಲವ

ಕವಿತೆ ನಾಗರಾಜಹರಪನಹಳ್ಳಿ ಪ್ರತಿಕ್ಷಣದ ಉಸಿರುನನ್ನೆದೆಯಲ್ಲಿ ಬಿಸಿರಕ್ತವಾಗಿದೆಕೈ ಬೆರಳ ಸ್ಪರ್ಶಹಾಡಿದ ರಾಗ ಅನುರಣಿಸುತ್ತಿದೆಕಣ್ಣುಗಳಲ್ಲಿ ಮುಚ್ಚಿಡಲಾಗುತ್ತಿಲ್ಲಒಲವ ಒಳಹರಿವು ……..** ಹಗಲು ರಾತ್ರಿಗಳನ್ನುಂಡು ನಿಶಬ್ದವಾಗಿಮಲಗಿರುವ ಬೆಟ್ಟಸಾಲುಗಳೇಬಯಲು ಕಣಿವೆ ಮುದ್ದಿಸಿ ಸಾಗುವಮಂಜು ಮೋಡಗಳೇಆಕೆಗೆಮುಗಿಲ ಸಂದೇಶವ ಅನುವಾದಿಸಿ ಬಿಡಿ ಈಗೀಗಪ್ರತಿ ಮಾತು ಒಲವಿನ ಸಂದೇಶಹೊತ್ತು ತರುತ್ತಿದೆಬದುಕು ಹಿತವೆನಿಸುತ್ತಿದೆಹಕ್ಕಿಯ ಇಂಚರಮಳೆಯ ಧ್ಯಾನಕ್ಕೂಹೊಸ ಅರ್ಥವ್ಯಾಪ್ತಿ ದಕ್ಕುತ್ತಿದೆ…….** ನಿನ್ನ ಬೆರಳಸ್ಪರ್ಶದಿಂದಕವಿತೆಗೆ ಹೊಸಅರ್ಥ ದಕ್ಕಿತುನಿನ್ನ ಹೆರಳಪರಿಮಳ ನನ್ನೆದೆಯಲ್ಲಿಹೊಸ ತರಂಗಗಳಅಲೆ ಎಬ್ಬಿಸಿತು

ಕಣ್ಣುಗಳಲಿ ಮುಚ್ಚಿಡಲಾಗುತ್ತಿಲ್ಲ ಒಲವ Read Post »

ಕಾವ್ಯಯಾನ

ಅರಮನೆ

ಕವಿತೆ ಕೃಷ್ಣಮೂರ್ತಿ ಕುಲಕರ್ಣಿ. ಅರಮನೆಗಳು ಎಂದರೆಹಾಗೇಯೆ ಸ್ವಾಮಿ,ಒಂದಿಲ್ಲ‌ ಒಂದುದಿನಅವು ತಮ್ಮದಿಮಾಕು ದೌಲತ್ತುಕಳೆದುಕೊಳ್ಳುತ್ತವೆ!ಬದುಕಿನಲ್ಲಿ ಬರುವಸುಖ ದುಃಖಗಳಂತೆ,ದುಃಖದ ನೋವಿಗೆ ನರಳದೆ,ಸುಖದ ಸಡಗರಕ್ಕೆ ಹಿಗ್ಗದೆ,ಅಲ್ಲಿರುವ ಬಾಗಿಲು ಕಿಟಕಿಗೋಡೆಯಲಿ ಹೂತಿರುವ ಗೂಟಗಳು ಮಾತ್ರ ನಿರಂಬಳವಾಗಿಉಳಿಯಲು ಸಾಧ್ಯ,ಅಲ್ಲಿಯೇ ಹುಟ್ಟಿಬೆಳೆದಇರುವೆಗಳು ಸಾಗಿಹೋಗುತ್ತವೆ,ಅರಮನೆ ಇರುವ ಮನೆಯಲ್ಲ,ಅದೊಂದು ಸ್ಮಾರಕ ಎಂಬುದು ಅವುಗಳ ಗಮನಕ್ಕೆ ಬಂದಿರಬೇಕು,ತಾವು ಕಟ್ಟುವ ಗೂಡಿಗೆಗೆದ್ದಿಲೊ ಹಾವೋ ಬರುವಹಾಗೆ,ದುಃಸ್ವಪ್ನ ಕಂಡಿರಲೂಬೇಕು,ವಿಶಾಲವಾದ ಸೌಧ ಕಟ್ಟಿದವರು,ವಿಶಾಲ ಮನೋಭಾವ ಬೆಳೆಸಲಿಲ್ಲ,ಅರಮನೆಯ ಅಂಗಳದಲ್ಲಿ,ಭಿನ್ನತೆಯ ಕರ್ಕಿ ಆಳಕ್ಕೆಬೇರುಗಳ ಇಳಿಬಿಟ್ಟು ದಟ್ಟವಾಗದಿದ್ದರೂ,ದಿಟ್ಟವಾಗಿಯೇ ಹಬ್ಬಿಹರಡಿದ್ದು,ಕಟ್ಟಿದವರ ಗಮನಕ್ಕೆ ಬರಲೇಇಲ್ಲ,ಸಂಕುಚಿತ ಮನೋಭಾವಗಳಸಂತೆ ಜರುಗಿದಾಗ,ಅರಮನೆ ಆಡಂಬರ‌ ಕಳೆದುಕೊಂಡು ಬರಡಾಯಿತು,ಏಕಾಂಗಿ ಸ್ಮಾರಕದ ಸುತ್ತಲೂ,ಬೀಸುವ ಬಿರುಗಾಳಿ ರಭಸಕ್ಕೆಮಾಗಿದ ಜೀವದಂತೆ ಸಹಿಸದನೋವು,ಮನೆಮುಂದೆ ಬೆಳೆದ ತುಳಸಿಹಿತ್ತಲಿನ ಮಲ್ಲಿಗೆ ಬಳ್ಳಿ,ಹೇಗೊ ಅಸ್ತಿತ್ವ ಉಳಿಸಿಕೊಂಡಿವೆ,ಪೂಜೆಗೆ ಕೊಂಡ್ವ್ಯಲು ಬರುವರೆಂದು,ದೊರೆ ಇರದ ಅರಮನೆಗೆಕಾವಲುಗಾರನೇಕೆ ಇದ್ದಾನು?ಪರಿವಾರದವರೇಕೆ ಸುಳಿದಾರು?ಸಂತೆ ಮುಗಿದಮೇಲೆಅಲ್ಯಾರು ಉಳಿದಾರು?ಅರಮನೆ ಅಂಗಳದಿ ಬೀಜಬಿತ್ತಲು ಮುಂದಾದರೈತರಿಗೂ ತಕರಾರು,ಗೊಂದಲದ ಗೂಡು ಅರಮನೆ, *********

ಅರಮನೆ Read Post »

You cannot copy content of this page

Scroll to Top