ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಮೌನದಲ್ಲಿ ಮಾತುಗಳ ಮೆರವಣಿಗೆ…

ಪುಸ್ತಕ ಪರಿಚಯ ಮಾತು ಮೌನದ ನಡುವೆ ಸಾಹಿತ್ಯ ಎನ್ನುವುದು ಮಾನವನ ಪಾರದರ್ಶಕ ಅನುಭವಗಳ ಅನುಪಮ ಅಭಿವ್ಯಕ್ತಿ. ಈ ಅನುಭವ ಅನುಭೂತಿಯ ಮೂಲ ಆಕರವೇ ನಮ್ಮ ಸುಂದರ ಸಮಾಜ. ನಮ್ಮ ಸುತ್ತ ಮುತ್ತಲಿನ ಪರಿಸರ, ಪ್ರಕೃತಿ, ಸನ್ನಿವೇಶ, ಘಟನೆಗಳು ಹಾಗೂ ಮಾನವರ ವ್ಯಕ್ತಿತ್ವವು ಪರಸ್ಪರ ವ್ಯಕ್ತಿಗಳ ಅನುಭವವನ್ನು ರೂಪಿಸುತ್ತವೆ. ವ್ಯಕ್ತಿಯ ಈ ಅನನ್ಯ ಅನುಭವಕ್ಕೆ ರೂಪ ಕೊಡುವ ಸಾಧನವೇ ಭಾಷೆ. ಇದು ನಮ್ಮ ಸಾಮಾಜಿಕ ವ್ಯವಸ್ಥೆಯ ಕೂಸು. ಇದನ್ನು ಬಳಸಿಕೊಂಡೆ ಕವಿಯು ತನ್ನ ಅನುಭವಕ್ಕೆ ಚಿತ್ರ ಬಿಡಿಸುವುದು. ಈ ನೆಲೆಯಲ್ಲಿ ಸಾಹಿತ್ಯವು ಬದುಕಿನಂತೆಯೇ ಅಪರಿಮಿತ ಹಾಗೂ ವಿಶಾಲ. ಇದರ ಜಾಡು ಹಿಡಿದು ಹೊರಟಾಗ ಸಾಹಿತ್ಯಕ್ಕೆ ತೀಕ್ಷ್ಣವಾದ ಸಾಮಾಜಿಕ ಸ್ಪಂದನೆ ಹಾಗೂ ಹೃದಯದ ಕದ ತಟ್ಟಲು ಪ್ರಸ್ತುತ ಪಡಿಸುವ ಮಾರ್ಗ ತುಂಬಾ ಮುಖ್ಯವಾಗುತ್ತದೆ. ಸಾಹಿತ್ಯದ ಬಹುದೊಡ್ಡ ಕೊಂಬೆ ಕಾವ್ಯ ಆ ಕಾವ್ಯ ಹಚ್ಚ ಹಸಿರಾಗಿಸಲು ಕವಿಗೆ ಸಾಮಾಜಿಕ ವ್ಯವಸ್ಥೆ, ಸಂಬಂಧಗಳ ಹೂರಣ ಹಾಗೂ ಮಾನಸಿಕ ತಳಮಳಗಳು ಕಾಡಬೇಕು. ಅಂದಾಗ ಮಾತ್ರ ಆ ಕಾವ್ಯ ಸಾರ್ವತ್ರಿಕ ಪೋಷಾಕು ತೊಡಲು ಸಾಧ್ಯ. ಕೂಸು ಹುಟ್ಟಿದ ಮೇಲೆಯೇ ಹೆಣ್ಣಿಗೆ ಹೆಣ್ತನದ ಅನುಭವ ಆಗುವಂತೆ, ಕವಿತೆಗೊಂದು ರೂಪ ಬಂದ ಮೇಲೆಯೇ ವ್ಯಕ್ತಿಯು ಕವಿಯೆನಿಸಿಕೊಳ್ಳಲು ಸಾಧ್ಯ           ಮೇಲಿನ ಈ ಎಲ್ಲ ಅಂಶಗಳನ್ನು ಶಿಲ್ಪಾ ಮ್ಯಾಗೇರಿಯವರ ಮಾತು ಮೌನದ ನಡುವೆ ಕವನ ಸಂಕಲನದಲ್ಲಿ ಕಾಣಬಹುದು. ಇದು ಅವರ ತೃತೀಯ ಕವನ ಸಂಕಲನ. ಸಮಾಜವನ್ನು ಪ್ರೀತಿಸುವ ಕವಯಿತ್ರಿ ಸಮಾಜದಿಂದ ಪಡೆದುಕೊಂಡದ್ದನ್ನು ಪುನಃ ಸಮಾಜಕ್ಕೆ ಹಿಂತಿರುಗಿಸಲು ಬಳಸಿಕೊಂಡಿರುವುದು ಸರಸ್ವತಿಯ ಮಡಿಲನ್ನು….!!           ಈ ಕವನ ಗುಚ್ಛವು  ೬೬+೦೧ ಕವನಗಳನ್ನು ಹೊಂದಿದೆ. ಕವಯಿತ್ರಿ ಅವರಿಗೆ ಸಾಮಾಜಿಕ ವ್ಯವಸ್ಥೆಗಿಂತಲೂ ಆ ವ್ಯವಸ್ಥೆಯ ಪ್ರಮುಖ ಭಾಗವಾದ ಸ್ತ್ರೀ ಸಂವೇದನೆಯು ಹೆಚ್ಚು ಕಾಡಿದೆ. ಎಲ್ಲದರಲ್ಲಿಯೂ ಸ್ತ್ರೀ ಸಂವೇದನೆಯು ಇಣುಕಿರುವುದನ್ನು ಗಮನಿಸಬಹುದು.‌ ಅದು ಹೆತ್ತವರ ಪ್ರೀತಿಯಾಗಿರಬಹುದು ಅಥವಾ ಮನದರಸನ ಪ್ರೀತಿಯಾಗಿರಬಹುದು… ಅಲ್ಲಿ ಸ್ತ್ರೀ ಸಂವೇದನೆಯೇ ಮುನ್ನೆಲೆಗೆ ಬಂದು ನಿಲ್ಲುತ್ತದೆ. ‘ಹೆಣ್ಣು’, ‘ಯಾರಿಗೂ ಕಾಣಲಿಲ್ಲ’, ‘ಸವಾಲು’, ‘ನನ್ನವನಿಗಾಗಿ’, ‘ಭ್ರಮೆ ವಾಸ್ತವ’, ‘ಪುರುಷೋತ್ತಮ’, ‘ಪುತ್ರ ವ್ಯಾಮೋಹ’, …. ಮುಂತಾದ ಕವನಗಳ ತಿರುಳೆ ಹೆಣ್ಣಿನ ಮನಸ್ಸಿನಲ್ಲಿರುವ ಮಾನಸಿಕ ತುಮುಲಗಳು.  “ಅಮ್ಮನ ಗರ್ಭದಿಂದಲೆ ಕಂಡಿರುವೆ ಅಡೆತಡೆಯ ನಂಟು”       ಈ ಅಡೆತಡೆ ಅನ್ನುವುದು ಹೆಣ್ಣಿಗೆ ನಮ್ಮ ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆ ನೀಡಿರುವ ಮರೆಯಲಾಗದಂತಹ ಸುಂದರ ಬಳುವಳಿ. ಗಂಡು ಮಗುವಿನ ಮೋಹದಲ್ಲಿ ಹೆಣ್ಣನ್ನು ಬಲಿ ಕೊಡುವ ಅಮಾನುಷ ಪದ್ಧತಿಗೆ ನಾಂದಿ ಹಾಡಿದವನೆ ಈ ಬುದ್ಧಿವಂತ ಮತಿಹೀನ ಮಾನವ. ಈ ಅತಿಯಾದ ಬುದ್ಧಿವಂತಿಕೆಯ ಫಲವಾಗಿಯೇ ಹೆಣ್ಣು ಭ್ರೂಣಾವಸ್ಥೆಯಲ್ಲಿ ಇರುವಾಗಲೇ ಸಾವಿನೊಂದಿಗಿನ ಹೋರಾಟಕ್ಕೆ ಅಣಿಯಾಗುತ್ತಾಳೆ.‌ ಇಲ್ಲಿ ಗಮನಿಸಬಹುದಾದ ಮತ್ತೊಂದು ವಿಷಯವೆಂದರೆ ಸ್ತ್ರೀಯು ತನಗೆ ಅರಿವಿದ್ದೋ, ಅರಿವಿಲ್ಲದೆಯೋ ಪುರುಷ ಪ್ರಧಾನ ಸಮಾಜದ ನಿಲುವುಗಳನ್ನು ಬೆಳೆಸಿಕೊಂಡು ಹೋಗುತ್ತಿರುವುದು. ಹೆಣ್ಣಾದ ತಾಯಿಯೇ ತನ್ನ ಮಕ್ಕಳಲ್ಲಿ ತಾರತಮ್ಯ ಮಾಡುತ್ತಿರುವುದನ್ನು ಇಲ್ಲಿಯ ಕವನವೊಂದು ಪ್ರತಿನಿಧಿಸುತ್ತದೆ. “ಅಮ್ಮ ನಿನ್ನ ತೋಳೆಂದು ಆಗಲೆ ಇಲ್ಲ ನನಗೆ ದಿಂಬು ನಿನ್ನ ಮಡಿಲು ಹಾಸಿಗೆಯಾದದ್ದು ನನಗೆ ನೆನಪಿಗಿಲ್ಲ….!” ಇದು‌ ತಾಯಿಯ ಪ್ರೀತಿಯಿಂದ ವಂಚಿತವಾದ‌ ಹೆಣ್ಣು ಮಗುವಿನ ಮಾನಸಿಕ ತೋಳಲಾಟ…!          ನನ್ನವನಿಗಾಗಿ ಕವನದ ಶೀರ್ಷಿಕೆಯು ಪ್ರೀತಿ, ಪ್ರೇಮವನ್ನು ಸೂಚಿಸಿದರೂ ತನ್ನೊಡಲೊಳಗೆ ಹೆಣ್ಣಿನ ಅಸಹಾಯಕತೆ, ನೋವು, ಅವಮಾನಗಳನ್ನು ಬಚ್ಚಿಟ್ಟುಕೊಂಡಿದೆ. “ನಾನು ಬರೆಯುತ್ತೇನೆ ಕವನ  ನನ್ನವನಿಗಾಗಿ ಹಸುವಂತೆ ತೋರಿದ ಹುಲಿಯಂತ ಕ್ರೌರ್ಯಕ್ಕಾಗಿ ಆಸರೆಯಾಗ ಬೇಕಾದವನಲ್ಲಿ ನಾ ಸೆರೆಯಾಗಿದ್ದಕ್ಕಾಗಿ  !”      ಇಲ್ಲಿ ಹೆಣ್ಣಿನ ತಣ್ಣನೆಯ ಪ್ರತಿಭಟನೆ ಇದೆ. ಪ್ರತಿಯೊಂದು ಹೆಣ್ಣು ನೂರಾರು ಕನಸುಗಳೊಂದಿಗೆ ಗಂಡನ ಮನೆಯನ್ನು ಪ್ರವೇಶಿಸುತ್ತಾಳೆ. ಆದರೆ ತಾನು ಬಂದದ್ದು ಪ್ರೇಮಿಯ ಮನೆಗಲ್ಲ, ಗಂಡಿನ ಸೆರೆಮನೆಗೆ ಎಂದು ಅನುಭವವಾಗುತ್ತಲೇ ಕುಸಿದು ಬೀಳುತ್ತಾಳೆ.         ಹೆತ್ತವರು.. ಹೃದಯದ ಬಂಧ. ಸಂಬಂಧಗಳ ತವರೂರು. ಆದರೆ ಅದೆಕೋ ಅಮ್ಮನ ಮಮತೆಯಲ್ಲಿ ಅಪ್ಪನನ್ನು ನಾವು ಮರೆಯುತ್ತಿರುವುದೆ ಹೆಚ್ಚು…!! ಸಮಾಜದ ಪ್ರತಿಬಿಂಬವಾದ ಸಾಹಿತ್ಯವೂ ಇದಕ್ಕೆ ಹೊರತಲ್ಲ. ಯಾರಿಗೂ ಕಾಣಲಿಲ್ಲ ಶೀರ್ಷಿಕೆಯ ಕವನವು ತಾಯಿಯ ವೇದನೆಯನ್ನು ಸಾರುತ್ತ ಹೋಗುತ್ತದೆ. ” ಜಗತ್ತಿಗೆ ಒಂದು ದಾರಿಯಾದರೆ ತನ್ನದೇ ರಾಜಮಾರ್ಗ ಎನ್ನುವ ಒಂದೊಮ್ಮೆ ಕುಡಿತದ ನಶೆಯಲ್ಲಿ ಮಗದೊಮ್ಮೆ ಸ್ವಯಾರ್ಜಿತ ಭ್ರಮೆಯ ಅಮಲಿನಲ್ಲಿ ಇದ್ದ ಅಪ್ಪನ ಬಿಟ್ಟಂತೆ ಹಿಡಿಯುತ ಹಿಡಿದಂತೆ ಬಿಡುತ ಗಂಟು ನಂಟಿನಾಟದಲಿ ಅವ್ವ ಜರ್ಜರಿತವಾದದ್ದು ಯಾರಿಗೂ ಕಾಣಲೇ ಇಲ್ಲ” ‌ ಇಲ್ಲಿ ಅಚ್ಚೊತ್ತಿರುವ ಭಾವ ಸಮಾಜದೆಲ್ಲೆಡೆ, ಕುಟುಂಬದೆಲ್ಲೆಡೆ ಕಾಣುತ್ತೇವೆ. ಮಕ್ಕಳೊಂದಿಗಿನ ತಾಯಿಯ ನಂಟೆ ಅವಳನ್ನು ಕುಟುಂಬದಲ್ಲಿ ಇರುವಂತೆ ಮಾಡುತ್ತದೆ. ಈ ಕಾರಣಕ್ಕಾಗಿಯೇ ಹೆಣ್ಣಿಗೆ ಕುಟುಂಬ ಮುಖ್ಯವಾದಷ್ಟು ಗಂಡಿಗೆ ಮುಖ್ಯವಾಗಲೇ ಇಲ್ಲ ಎಂಬುದಕ್ಕೆ ನಮ್ಮ ಸಮಾಜವೇ ಸಾಕ್ಷಿ…!!       ಕುಟುಂಬವನ್ನು ಪ್ರೀತಿಸುವ ಶಿಲ್ಪಾ ಮ್ಯಾಗೇರಿಯವರ ಕವನ ಸಂಕಲನದಲ್ಲಿ ಹಲವು ಕವನಗಳು ಕೌಟುಂಬಿಕ ಆಪ್ತತೆಯ ಮುದವನ್ನು ನೀಡುತ್ತವೆ. ತಂದೆ, ತಾಯಿ, ಗಂಡ, ಮಕ್ಕಳು, ಗೆಳತಿ… ಎನ್ನುವ ಹಲವು ಸಂಬಂಧಗಳ ಕುರಿತು ಕವನಗಳು ಆಪ್ತ ಸಮಾಲೋಚನೆ ಮಾಡುತ್ತವೆ. ಸಂಕಲನದ ಮೊದಲ ಕವನವೇ ಅಪ್ಪ ಅಪ್ಪನ ಗುಣಗಾನ ಮಾಡುತ್ತ, ಅಪ್ಪ ನಡೆದು ಬಂದ ರೀತಿ, ಮಕ್ಕಳನ್ನು ಬೆಳೆಸಿದ ಕ್ರಮ, ಕುಟುಂಬವನ್ನು ಮುನ್ನಡೆಸಿದ ಬಗೆ… ಎಲ್ಲವೂ ಕಣ್ಣಿಗೆ ರಾಚುವಂತೆ ವರ್ಣಗಳಲ್ಲಿ ಸೆರೆ ಹಿಡಿದು ನಿಲ್ಲಿಸಿದ್ದಾರೆ. ಆದರೆ ಅಪ್ಪನ ಹೀರೋಯಿಸಂ ನ ಹಿಂದಿರುವ ನೋವು, ತೊಳಲಾಟ, ದುಗುಡಗಳು ಮರೆಯಾಗಿವೆ. ಮೌಲ್ಯಗಳ ಪಾಲನೆ ಸರಳವಾದುದಲ್ಲ. ಆ ದಾರಿಯು ಬರೀ ಕಲ್ಲು ಮುಳ್ಳುಗಳನ್ನೇ ಹೊಂದಿರುತ್ತದೆ. ಆ ಹಾದಿಯಲ್ಲಿ ಸಾಗುವಾಗಿನ ಗಾಯಕ್ಕೆ ಸಾಹಿತ್ಯ ಸಾಕ್ಷಿಯಾಗಬೇಕಿದೆ…! ” ಕಾಯಕವೇ ಕೈಲಾಸವೆಂದು. ಎಂದೂ ಹೇಳದೆ  ಆಚರಣೆಗೆ ತಂದವ”     ಕಣ್ಣಿಗೆ ಕಂಡ ದೃಶ್ಯಗಳಿಗಿಂತಲೂ ಕಾಣದೇ ಇರುವ ಚಿತ್ರಣವನ್ನು ಬಿಡಿಸುವುದೆ ಕವಿ/ಕವಯಿತ್ರಿಗೊಂದು ಸವಾಲು. ಅದು ಇಲ್ಲಿ ಮರೆಯಾಗಿದೆ. ಯಾವ ಗುಣವೂ ಉದ್ಭವಮೂರ್ತಿಯಲ್ಲ. ಗುಣಗಳಿಗಿಂತ ಗುಣಗಳ ಅನುಷ್ಠಾನದ ದಾರಿಯ ಮೇಲೆ ಬೆಳಕು ಚೆಲ್ಲುವ ಅವಶ್ಯಕತೆ ಇದೆ.     ತಾಯಿ, ಮಗುವನ್ನು ಬೆಳೆಸುವ ರೀತಿ ಅನ್ಯೋನ್ಯ. ತಾಯಿಯೇ ಮೊದಲ ಗುರು. ಈ ಕಾರಣಕ್ಕಾಗಿಯೇ ಮಕ್ಕಳ ಬೆಳವಣಿಗೆಯಲ್ಲಿ ತಾಯಿಯ ಪಾತ್ರ ಅವಿಸ್ಮರಣೀಯ.. ! ಈ ನೆಲೆಯಲ್ಲಿ ತಾಯಿಯ ಹರಕೆ ಕವನವು ಓದುಗರ ಗಮನವನ್ನು ಸೆಳೆಯುತ್ತದೆ. ಅವಳು ಹೇಳುವ ಬುದ್ಧಿವಾದವು ಸಾರ್ವತ್ರಿಕ ಅನಿಸುವಷ್ಟು ಆಪ್ತವಾಗಿ ಮೂಡಿಬಂದಿವೆ. ” ಹಾಲು ಕುಡಿದರೂ ಬದುಕದ ಕಾಲವಿದು ವಿಷದ ನಶೆಯ ಮಾಡಬೇಡ ಕಂದ ಬದುಕಲಾಗದು ಜಯವ ಗಳಿಸಲಾಗದು  !” ವಾಸ್ತವ ಸಮಾಜದ ಚಿತ್ರಣದೊಂದಿಗೆ ಆತಂಕವನ್ನು ವ್ಯಕ್ತಪಡಿಸುತ್ತಿದೆ ಈ ಕವನವು.       ಈ ಸಂಕಲನದ ಕೊನೆಯ ಕಾವ್ಯ ಕರುಳ ಬಳ್ಳಿ ಆಪ್ತವೆನಿಸುತ್ತದೆ. ಇದು ಕವಯಿತ್ರಿ ಶಿಲ್ಪಾ ರವರ ಮಗ ಚಿ‌. ತುಷಾರ್ ಬರೆದಿರುವುದು..! ತಾಯಿ-ಮಗುವಿನ ಬಾಂಧವ್ಯ ಮನಸ್ಸಿಗೆ ಮುದ ನೀಡುತ್ತದೆ. ಇದರೊಂದಿಗೆ ವಿಶೇಷ ಗಮನ ಸೆಳೆಯುವ ಮತ್ತೊಂದು ಕಾವ್ಯವೆಂದರೆ ಎರಡು ನಕ್ಷತ್ರಗಳು ಇಲ್ಲಿ ತಂದೆಯ ಭಾವ ತನ್ನ ತಾಯಿ ಮತ್ತು ಮಗಳ ರೂಪದಲ್ಲಿ ಅನಾವರಣಗೊಂಡಿದೆ.        ಪ್ರೀತಿ… ಜೀವನದ ಸ್ಥಾಯಿ ಭಾವ. ಸಾಹಿತ್ಯದ ಎಲ್ಲ ಪ್ರಕಾರಗಳ ಮೂಲ ಆಕರವೆ ಈ ನವಿರಾದ ಪ್ರೀತಿ. ಈ ಸಂಕಲನದಲ್ಲಿ ಹಲವು ಕವನಗಳು ಪ್ರೀತಿ, ಪ್ರೇಮ, ಪ್ರಣಯ, ವಿರಹ…. ವನ್ನು ಹೃದಯದ ಕ್ಯಾನ್ವಾಸ್ ನಲ್ಲಿ ಸ್ಥಿರವಾಗಿ ಎರಕಹೊಯ್ಯುವಲ್ಲಿ ಯಶಸ್ವಿಯಾಗಿವೆ. “ನೂರೊಂದನೆಯ ನೋವು ನೀನು” ಎನ್ನುವ ಚರಣವು ಪ್ರೀತಿಯ ಆಳ, ಹರವನ್ನು ಪ್ರತಿಬಿಂಬಿಸುತ್ತದೆ.  “ಗೆಳೆಯ ಎದೆ ಭಾರವಾಗಿದೆ ನಿನ್ನ ಹೆಗಲು ಬೇಕು ಬಿಕ್ಕಳಿಸಿ ಹಗುರಾಗಲು” ಎನ್ನುವ ಪಂಕ್ತಿಗಳು‌ ಪ್ರೀತಿಯ ನಿವೇದನೆಯನ್ನು ಸಿಂಪಡಿಸುತ್ತವೆ. ಪ್ರೀತಿಯೊಂದಿದ್ದರೆ ಸಾಕು ಮನುಷ್ಯ ಏನನ್ನಾದರೂ ಗೆಲ್ಲಬಹುದು ಎಂಬುದನ್ನು ಸಾರುತ್ತದೆ. ‘ತುಂಬಿಕೊಂಡಿತು’, ‘ಒಲವ ಸುಳಿ’, ‘ನಾನು ನನ್ನವನು ಮತ್ತು ಚಂದ್ರ’, ‘ಆತ್ಮ ಸಖ’, ‘ನಿವೇದನೆ’, ‘ಅನುರಣನ’, ಕವನಗಳು ಮೆದುವಾದ ಪ್ರೇಮಲೋಕದಲ್ಲಿ ಓದುಗರನ್ನು ವಿಹರಿಸಲು ಪ್ರೇರೇಪಿಸುತ್ತವೆ. “ವೀಣೆಯಂತೆ ನುಡಿಸಿಬಿಡು ಸಪ್ತ ಸ್ವರವು ಮೇಳೈಸುವಂತೆ” ಈ ಸಾಲುಗಳು ಪ್ರೇಮದ ನಾಕವನ್ನು ಕಣ್ಮುಂದೆ ತಂದು ನಿಲ್ಲಿಸುತ್ತದೆ. ಪ್ರೇಮ ರಾಗವನ್ನು ಮೈ ಮನಗಳಲ್ಲಿ ನುಡಿಸುತ್ತದೆ.  ಇದರೊಂದಿಗೆ ಹಲವು ಕವನಗಳು ಜೀವನ ಶ್ರದ್ಧೆಯನ್ನು ಮೂಡಿಸುತ್ತವೆ. ಈ ನೆಲೆಯಲ್ಲಿ ಹಲವು ಸಾಲುಗಳು ಬದುಕಿಗೆ ಪ್ರೇರಣೆ ನೀಡುವಂತೆ ಸಕಾರಾತ್ಮಕವಾಗಿ ಮೂಡಿ ಬಂದಿವೆ. ಕವನಗಳನ್ನು ಓದಿದಾಗ ಸುಭಾಷಿತ, ಸೂಕ್ತಿಗಳ ಅನುಭೂತಿಯನ್ನು ನೀಡುತ್ತವೆ. “ಸುಲಭದಲ್ಲಿ ಗೆಲುವನ್ನು ಎಂದಿಗೂ ಕೊಡಬೇಡ ! ಗೆದ್ದು ಬೀಗುವತನಕ ಉಸಿರು ನಿಲ್ಲಿಸಬೇಡ” “ಸಂಪೂರ್ಣ ಸೋಲಲಾರದ ಮೇಲೆ ಪರಸ್ಪರ ಗೆಲ್ಲುವುದು ಹೇಗೆ” “ಆಮಿಷಗಳಿಂದ ಹೊರಗುಳಿದು ಬದುಕು ಕಟ್ಟಿಕೊಳ್ಳುವ ಶಕ್ತಿ ನೀಡು”      ಬಾಳು ಸ್ಥಾವರವಾಗಬಾರದು, ಜಂಗಮವಾಗಬೇಕು. ಆದರೆ ಬದಲಾವಣೆಯ ಬಿರುಗಾಳಿಯಲ್ಲಿ ಅಸ್ಮಿತೆಯನ್ನು ತೊರೆಯಬಾರದು. ದುರಂತವೆಂದರೆ ಇಂದು ನಾವು ಆಧುನಿಕತೆಯ ಒಡ್ಡೋಲಗದಲ್ಲಿ ನಮ್ಮ ಮೂಲವನ್ನೇ ಮರೆಯುತ್ತಿದ್ದೇವೆ. ಜಾಗತಿಕರಣದ ಜಾಲದಲ್ಲಿ ಮನುಕುಲ ಸಿಲುಕಿಕೊಂಡ ಪರಿಯನ್ನು ಧಾವಂತದ ಬದುಕು ಕವನವು ಮನಮುಟ್ಟುವಂತೆ ಅಭಿವ್ಯಕ್ತಿಸಿದೆ. ದಿನನಿತ್ಯದ ಓಡಾಟ, ಮುಖವಾಡದ ಜೀವನ, ಮಾನಸಿಕ ತಳಮಳ, ಬಿಸಿಲುಕುದುರೆ ಶಾಂತಿಗಾಗಿ ಪರದಾಟ…. ಇವೆಲ್ಲವನ್ನು ಈ ಸಾಲುಗಳು ತುಂಬಾ ಸಶಕ್ತವಾಗಿ ಹಿಡಿದಿಟ್ಟುಕೊಂಡಿವೆ. “ಎಲ್ಲರೊಟ್ಟಾಗಿ ಕುಳಿತು ಹರಟಿದ್ದ ಕಟ್ಟೆ ಈಗ ಖಾಲಿ ಖಾಲಿಯಾಗಿದೆ”       ಸಾಮಾಜಿಕ ಸ್ಪಂದನೆಯ ನೆಲೆಯಲ್ಲಿ ‘ರೈತ’, ‘ಅಸ್ಪೃಶ್ಯರು’, ಕವನಗಳು ಓದಿಸಿಕೊಂಡು ಹೋಗುತ್ತವೆ.        ಇಲ್ಲಿಯ ಕವನಗಳ ವಿಷಯ, ಭಾಷೆ ಹಾಗೂ ಶೈಲಿಯನ್ನು ಗಮನಿಸಿದಾಗ ನವೋದಯದ ವಿಷಯ, ಭಾಷೆ ಹಾಗೂ ನವ್ಯದ ಶೈಲಿಯನ್ನು ಕಾಣುತ್ತೇವೆ. ಕಾವ್ಯ ಮನೆಯಂಗಳದಿಂದ ಸಮಾಜದ ಮೂಲೆ ಮೂಲೆಗಳನ್ನು ಸ್ಪರ್ಶಿಸಿದಾಗ ಅದು ಪರಿಪೂರ್ಣ ಎನಿಸಿಕೊಳ್ಳುತ್ತದೆ. ಕಾವ್ಯವನ್ನು ಪೂರ್ವಾಗ್ರಹ ಪೀಡಿತರಾಗದೆ ಓದಿದಾಗ ಮಾತ್ರ ರಸಸ್ವಾದ ಸಾಧ್ಯವಾಗುತ್ತದೆ, ಇಲ್ಲದಿದ್ದರೆ ರಸಭಂಗವಾಗುತ್ತದೆ ಎಂಬುದನ್ನು ಇಲ್ಲಿಯ ಹಲವು ಕವನಗಳು ಸಾರಿ ತೋರಿಸುತ್ತವೆ. ಈ ಮಾತು ಮೌನದ ನಡುವೆ ಕಲಾಕೃತಿಯು ಪ್ರತಿಯೊಬ್ಬ ಸಹೃದಯ ಓದುಗನ ಮೌನದೊಂದಿಗೆ ಮಾತಾಡಲಿ ಎಂದು ಹಾರೈಸುತ್ತೇನೆ. ************************************************* ಡಾ. ಮಲ್ಲಿನಾಥ ಎಸ್. ತಳವಾರ

ಮೌನದಲ್ಲಿ ಮಾತುಗಳ ಮೆರವಣಿಗೆ… Read Post »

ಕಾವ್ಯಯಾನ

ನೀವು ಎದೆಗೆ ಗುಂಡು ಹೊಡೆದರೆ.

ಕವಿತೆ ನೀವು ಎದೆಗೆ ಗುಂಡು ಹೊಡೆದರೆ ಅಲ್ಲಾಗಿರಿರಾಜ್ ಕನಕಗಿರಿ ನೀವು ಜಲ ಫಿರಂಗಿಸಿಡಿಸಬಹುದು ನಮ್ಮ ಮೈ ಮೇಲೆ.ನಾವು ಮುಂಗಾರು ಮಳೆಯ ಆರ್ಭಟವೆಂದು ಭಾವಿಸುತ್ತೇವೆ.ಏಕೆಂದರೆ ನೀರು ನಮ್ಮ ವೈರಿಯಲ್ಲ. ನೀವು ಲಾಠಿ ಬೂಟುಗಳಿಂದದಾಳಿ ಮಾಡಬಹುದು ನಮ್ಮ ಮೈ ಮೇಲೆ.ನಾವು ನಮ್ಮ ಅನ್ನ ಉಂಡ ಮಕ್ಕಳ ಸಲಿಗೆ,ಪ್ರೀತಿಯೆಂದು ಭಾವಿಸುತ್ತೇವೆ.ಏಕೆಂದರೆ ಮಕ್ಕಳು ನಮ್ಮ ವೈರಿಗಳಲ್ಲ. ನೀವು ಅಶ್ರುವಾಯು ಸಿಡಿಸಿಕಣ್ಣು ಕತ್ತಲು ಮಾಡಬಹುದು ನಮ್ಮ ಕನಸುಗಳ ಮೇಲೆ.ನಾವು ಮಂಜುಕವಿದ ವಾತಾವರಣವೆಂದು ಭಾವಿಸುತ್ತೇವೆ.ಏಕೆಂದರೆ ಪ್ರಕೃತಿ ಎಂದೂ ನಮ್ಮ ವೈರಿಯಲ್ಲ. ಆದರೆ….. ಆದರೆನೀವು ದಲ್ಲಾಳಿಗಳ ಮಾತು ಕೇಳಿ, ಎದೆಗೆ ಗುಂಡು ಒಡೆದರೆನೆತ್ತರು ಕುಡಿದ ನೆಲ, ಬೆಳೆದು ನಿಂತ ಬೆಳೆಹೋರಾಟದ ಹಾಡು ಬರೆಯುತ್ತವೆ ಮರೆಯಬೇಡಿ. ಏಕೆಂದರೆ…….‘ಸರಕಾರ ರೊಕ್ಕ ಮುದ್ರಿಸಬಹುದೆ ಹೊರತುತುಂಡು ರೊಟ್ಟಿಯನ್ನಲ್ಲ ನೆನಪಿರಲಿ’. ******************************************

ನೀವು ಎದೆಗೆ ಗುಂಡು ಹೊಡೆದರೆ. Read Post »

ಕಾವ್ಯಯಾನ

ಮೌನದಲಿ ಕವಿತೆಯಾದವಳು

ಕವಿತೆ ಮೌನದಲಿ ಕವಿತೆಯಾದವಳು ವಿದ್ಯಾಶ್ರೀ ಅಡೂರ್ ಕವಿತೆಯಾದಳು ಆಕೆ ತಿಳಿದವರು ತಿಳಿದ ತರಹುಡುಕ ಹೋಗಲು ಬಗೆಯ ಬೇಗೆ ಬೆಂಬತ್ತಿತುಟಿತುದಿಯ ಕಿರುನಗೆಯ ಅರಿತವನ ಮನದ ಸ್ಥರಜಿಗಿವ ಜಿಂಕೆಯಂತೆ ಕವನವನ್ನು ಬಿತ್ತಿ ಹಣೆ ಮೇಲೆ ಆಕೆಯ ಗೆರೆಗಳನು ಕಂಡಾತಬರೆದಿಹನು ಪುಟಪುಟದ ಸಾಲುಗಳ ಹೆಚ್ಚಿತನ್ನನ್ನೇ ಬಣ್ಣಿಪನು, ಬಂದಿಹೆನು ತಾನೆಂದುಆಕೆಯ ಮನದೊಳಗೆ ದೀಪವನು ಹಚ್ಚಿ ಕಣ್ಣಂಚ ಹನಿಗಳನು ಮುತ್ತಂತೆ ಪೋಣಿಸುತರಂಗುಬಳಿದು ಅದಕೆ ಕಟ್ಟಿಹನು ಬೆಲೆಯಹಾದಿಬೀದಿಯ ಜನರು ಕೊಳ್ಳುವ ಸರಕಾಯ್ತುಅಳಿಸದೇ ಹೋಯ್ತವಳ ಕಣ್ಣೀರ ಸೆಲೆಯ ಮಾತಿನ ಪೇಟೆಯಲಿ ಬೆಲೆಯಿಲ್ಲ ಮೌನಕ್ಕೆಕುಗ್ಗಿಹಳು ಸಾಗರದ ಬಿಂದುವಾಗಿಮಾತಿರದ ಮೌನದಲಿ ಕವಿತೆಯಾದಳು ಅವಳುಕ್ಷಣಕೊಮ್ಮೆ ಕಣಕಣದಿ ಸಿಂಧುವಾಗಿ *******

ಮೌನದಲಿ ಕವಿತೆಯಾದವಳು Read Post »

ಅಂಕಣ ಸಂಗಾತಿ, ಅನುವಾದಿತ ಕೃತಿ ಪ್ರಪಂಚ ಪ್ರವೇಶ

ಗಾಯಗೊಂಡ ಹೃದಯದ ಸ್ವಗತ

ಪುಸ್ತಕ ಸಂಗಾತಿ ಗಾಯಗೊಂಡ ಹೃದಯದ ಸ್ವಗತ ಗಾಯಗೊಂಡ ಹೃದಯದ ಸ್ವಗತತೆಲುಗು ಮೂಲ : ಅಯಿನಂಪೂಡಿ ಶ್ರೀಲಕ್ಷ್ಮಿ ಕನ್ನಡಕ್ಕೆ : ರೋಹಿಣಿ ಸತ್ಯಪ್ರ : ಸ್ನೇಹ ಬುಕ್ ಹೌಸ್ಪ್ರಕಟಣೆಯ ವರ್ಷ : ೨೦೧೭ಬೆಲೆ : ರೂ.೭೦ಪುಟಗಳು : ೬೪ ಇದು ಒಂದು ನೀಳ್ಗವನ. ತನ್ನ ಗೃಹಕೃತ್ಯದ ಕರ್ತವ್ಯಗಳನ್ನು ಅಚ್ಚುಕಟ್ಟಾಗಿ ಶ್ರದ್ಧೆಯಿಂದ ನೆರವೇರಿಸುತ್ತಿದ್ದ ಗೃಹಿಣಿಯೊಬ್ಬಳು ಸ್ತನದ ಕ್ಯಾನ್ಸರಿನಿಂದ ಬಳಲಿ  ಚಿಕಿತ್ಸೆಯ ಅನೇಕ ಯಾತನಾಪೂರ್ಣ ಹಂತಗಳನ್ನು ದಾಟಿ, ಧೈರ್ಯ ಮತ್ತು ಆತ್ಮವಿಶ್ವಾಸಗಳಿಂದ  ಸಾವನ್ನು ಗೆಲ್ಲುವುದು ಈ ಕವಿತೆಯ ವಸ್ತು.  ಇದು ಕವಯಿತ್ರಿ ಅಯಿನಂಪೂಡಿ ಶ್ರೀಲಕ್ಷ್ಮಿಯವರ  ನಿಜ ಕಥೆಯೂ ಹೌದು. ಕವನದ ಉದ್ದಕ್ಕೂ ನಾವು ನಿರೂಪಕಿಯ ಬದುಕು ಹಾಗೂ ಆಕೆಯ ವ್ಯಕ್ತಿತ್ವದ ವಿವಿಧ ಮುಖಗಳನ್ನು ನೋಡುತ್ತ ಹೋಗುತ್ತೇವೆ. ಒಟ್ಟಿನಲ್ಲಿ ಇದು ಓದುಗನ ಮನಸ್ಸನ್ನು ಶುದ್ಧೀಕರಣಕ್ಕೊಳಗಾಗಿಸುವ ಕೆಥಾರ್ಸಿಸ್ ಪರಿಣಾಮವಿರುವ ಕಾವ್ಯ.  ಇದು ಒಂದು ಸ್ವಗತದ ನಿರೂಪಣೆಯಾದರೂ ಸ್ತ್ರೀಯ ಅಗಾಧವಾದ ಜೀವ ಚೈತನ್ಯ  ಮತ್ತು ಧಾರಣ ಶಕ್ತಿಗಳಿಗೆ ಬರೆದ ಭಾಷ್ಯವೇ ಆಗಿದೆ ಅನ್ನಬಹುದು. ಕ್ಯಾನ್ಸರ್ ಅನ್ನುವುದು ಎಲ್ಲರೂ ಹೆದರಿ ನಡುಗುವ ಒಂದು ಭಯಾನಕ ಕಾಯಿಲೆ.  ಬದುಕಿನ ಬಗೆಗಿನ ಭರವಸೆಗಳನ್ನೆಲ್ಲ ಬುಡಮೇಲು ಮಾಡಿ ವ್ಯಕ್ತಿಯನ್ನು ಭಯ-ತಲ್ಲಣಗಳ ಅಂಚಿಗೆ ದೂಡುವ ಒಂದು ಮಹಾಮಾರಿ. ಆದರೆ ಇಲ್ಲಿನ ಕಥಾನಾಯಕಿ ಸಾಮಾನ್ಯಳಲ್ಲ.  ಇಂಥ ಒಂದು ಗದಗುಟ್ಟಿಸುವ ಸನ್ನಿವೇಶ ಎದುರಾದಾಗಲೂ ಅದನ್ನು ಆಕೆ ಲೀಲಾಜಾಲವಾಗಿ ಮುಗುಳ್ನಗೆಯೊಂದಿಗೆ ಅತ್ಯಂತ ಸಹಜವಾಗಿ ನಿಭಾಯಿಸುತ್ತಾಳೆ.  ಮನಸ್ಸಿನ ತುಂಬಾ ಕೋಲಾಹಲವೇ ಆದರೂ  ಅದನ್ನು ತನ್ನೊಳಗೇ ಪರಿಹರಿಸಿಕೊಳ್ಳುತ್ತ, ಹೊರಗೆ ತೋರಗೊಡದೇ ಇರುವುದರಲ್ಲಿ ಆಕೆ ಯಶಸ್ವಿಯಾಗುತ್ತಾಳೆ.  ಯಾಕೆಂದರೆ ಇದೆಲ್ಲವನ್ನೂ ತಾನು ಒಂದು ದಿನ ಗೆದ್ದೇ ಗೆಲ್ಲುತ್ತೇನೆಂಬ ದೃಢವಾದ ನಂಬಿಕೆ ಅವಳಲ್ಲಿದೆ.  ಈ ನೀಳ್ಗವನವನ್ನು ಪ್ರೋಲಾಗ್, ಇಂಟ್ರೋ, ಸ್ಟೇಜ್ ೧, ಸ್ಟೇಜ್ ೨, ಸ್ಟೇಜ್ ೩, ಫ್ಲಾಷ್ಬಾಕ್, ಫ್ಲಾಷ್ ಪ್ರೆಸೆಂಟ್, ಇನ್ ದ ಥಿಯೇಟರ್, ಪಿಂಕ್ ಹೋಪ್,  ಮರಣಾಮರಣ-ಎಂದು ಒಂದು ಪಾಶ್ಚಾತ್ಯ ಪ್ರಾಚೀನ ನಾಟಕದ ರೂಪದಲ್ಲಿ ವಿಭಾಗಿಸಲಾಗಿದೆ. ಪ್ರಾಯಶಃ ಬದುಕು ಆಕಸ್ಮಿಕ ಸನ್ನಿವೇಶಗಳ ನಾಟಕವೆಂಬ ಕವಯಿತ್ರಿಯ ಧೋರಣೆ ಇದಕ್ಕೆ ಕಾರಣವಾಗಿರಬಹುದು. ಕವಯಿತ್ರಿ ತನ್ನ ನೋವುಗಳನ್ನೂ ಭಾವನಾತ್ಮಕ ಸಂವೇದನೆಗಳನ್ನೂ ತಾತ್ವಿಕ ಚಿಂತನೆಗಳನ್ನೂ  ಇಲ್ಲಿ ಸುಂದರವಾದ ಭಾಷೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ಅನುವಾದದ ಶೈಲಿಯೂ ಅಷ್ಟೇ ಕಾವ್ಯಾತ್ಮಕವಾಗಿದ್ದು ಸಹಜವಾಗಿ ಓದಿಸಿಕೊಂಡು ಹೋಗುತ್ತದೆ.   ಆರಂಭದಲ್ಲಿ ಎಂ.ಎಸ್.ಆಶಾದೇವಿಯವರ ಸೊಗಸಾದ ವಿಮರ್ಶಾತ್ಮಕ ಮುನ್ನುಡಿಯೊಂದಿಗೆ ಕಾವ್ಯವೇ ಒಂದು ಚಿಕಿತ್ಸೆ ಎಂಬ ಅರ್ಥದಲ್ಲಿ ಮಾಮಿಡಿ ಹರಿಕೃಷ್ಣ ಅವರು ಬರೆದ  ‘ಪೋಯಟ್ರಿ ಒಂದು ಫೀಲಿಂಗ್, ಒಂದು ಕೆಥಾರ್ಸಿಸ್ ಒಂದು ಥೆರಪಿ’ ಎಂಬ ಲೇಖನ, ಈ ಕಾವ್ಯದ ಹಿನ್ನೆಲೆಯನ್ನು ವಿವರಿಸಿ ಮೂಲ ಲೇಖಕಿ- ಅನುವಾದಕಿಯರ ಮಾತುಗಳಿವೆ. ************************************************************************ ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

ಗಾಯಗೊಂಡ ಹೃದಯದ ಸ್ವಗತ Read Post »

ಇತರೆ, ಜೀವನ

ಶರದದ ಹಗಲಲ್ಲಿ ಆಷಾಢದ ಮೋಡಗಳು…

ಶರದದ ಹಗಲಲ್ಲಿ ಆಷಾಢದ ಮೋಡಗಳು… ಎಂ.ಆರ್.ಕಮಲ. ಹೊರಗಿನ ಋತುಮಾನಕ್ಕೂ ಒಳಗಿನ ಋತುಮಾನಕ್ಕೂ ಸಂಬಂಧವಿದೆಯೇ ಎಂದು ಹಲವಷ್ಟು ಬಾರಿ ಯೋಚಿಸಿದ್ದೇನೆ. ಇದೆ ಎನ್ನುವುದು ನಿಜವಾದರೂ ಪೂರ್ಣಸತ್ಯವಲ್ಲ. ಬಯಲು ಸೀಮೆಯ ಬಿರುಬಿಸಿಲಲ್ಲಿ ಬೆಳೆದ ನನ್ನಂಥವರು ಬಾಯಿಯಲ್ಲಿ ಕೆಂಡವನ್ನೇ ಕಾರುತ್ತೇವೆ. ವಿನಾಕಾರಣ ಉದ್ವಿಗ್ನಗೊಂಡು. ಸಣ್ಣ ಸಣ್ಣ ವಿಷಯಕ್ಕೆಲ್ಲ ಜಗಳ ತೆಗೆಯುತ್ತೇವೆ. ಬಯಲು ಸೀಮೆಯ ಹೆಚ್ಚಿನ ಜನರ ಬೆಳಗುಗಳು ಗುದ್ದಾಟಗಳಿಂದಲೇ ಆರಂಭವಾಗುತ್ತದೆ. ವಸಂತನೇ ಬರಲಿ, ಗಿಡಮರಗಳು ಚಿಗುರುತ್ತಲೇ ಇರಲಿ, ಹೂವುಗಳು ತೂಗುತ್ತಲೇ ಇರಲಿ ಬೇಸಗೆಯ ಬಿರುಬಿಸಿಲಂಥ ಚಡಪಡಿಕೆ ಮಾತ್ರ ನಿಲ್ಲುವುದೇ ಇಲ್ಲ. ಆಷಾಢದ ಮೋಡ ಕವಿದ ವಾತಾವರಣ ಯಾರ ಎದೆಯಲ್ಲಿ ದುಗುಡ ಮೂಡಿಸುವುದಿಲ್ಲ ಹೇಳಿ? ಮಳೆ ಸುರಿಸುವುದು ಅಷ್ಟರಲ್ಲೇ ಇದ್ದರೂ ಮೋಡಗಳು ಮಾತ್ರ ದಟ್ಟೈಸುತ್ತಲೇ ಇರುತ್ತವೆ. ಈ ಕವಿದ ಮೋಡಗಳು, ಹಗಲಲ್ಲಿಯೇ ಕಾರ್ಗತ್ತಲನ್ನು ಸೃಷ್ಟಿಸಿ ಮನಸ್ಸಿಗೆ ಮಂಕು ಕವಿಸಿಬಿಡುತ್ತವೆ. ಭೋರೆಂದು ಬೀಸುವ ಗಾಳಿ ಕ್ಷಣಾರ್ಧದಲ್ಲಿ ಎಲ್ಲವನ್ನು ಚದುರಿಸುವಂತೆ ಕಂಡರೂ ಕಪ್ಪಿಟ್ಟ ಮನಸ್ಸು ಹೊಳವಾಗುವುದಿಲ್ಲ. ಇತ್ತ ವೈಶಾಖದ ಬೇಸಗೆಯ ಧಗೆ, ಅತ್ತ ಶ್ರಾವಣದ ಸಂತಸ ಎರಡನ್ನೂ ಹೊತ್ತು ವಿಚಿತ್ರ ತಳಮಳವನ್ನು ಒಳಗೂ ಹೊರಗೂ ಸೃಷ್ಟಿಸಿಬಿಡುತ್ತದೆ. ಹಾಡು ಹಗಲೇ ರವಿ ಕಾಣದಂತೆ ಮಾಡುವ ಶ್ರಾವಣದ ಮೋಡಗಳು ಸುರಿಸುವ ಮಳೆಯಿಂದಾಗಿ ಒಳಗೆ ತುಂಬಿದ್ದ ಕೊಳೆ ಕಶ್ಮಲಗಳು ತೊಡೆದು ಬದುಕಿಗೆಂಥ ಹುರುಪು ಹುಟ್ಟುತ್ತದೆ. ಸುತ್ತಲಿನ ಹಸಿರು, ಒಳಮನವನ್ನು ಚಿಗುರಿಸುತ್ತ ಹೋಗುತ್ತದೆ. ಶರದೃತುವಿನ ಬೆಳಗಿನ ತಿಳಿಆಗಸ ಮನಸ್ಸನ್ನು ಹಗುರಗೊಳಿಸುತ್ತ ಹೋದರೆ, ಹೇಮಂತದ ಸಂಜೆಗಳು ನೀರವವಾಗುತ್ತ, ಒಂಟಿತನದ ನೋವನ್ನು ದ್ವಿಗುಣಗೊಳಿಸುತ್ತದೆ. ಎಲೆ ಕಳಚುವಂತೆ ಮಾಡುವ ಶಿಶಿರನ ಹೆಜ್ಜೆಗಳು ಬದುಕಿನ ನಶ್ವರತೆಯನ್ನು ಎದೆಗೆ ತುಂಬಿ ಕಳವಳ ಹುಟ್ಟಿಸುತ್ತವೆ.. ಹೀಗಾಗಿಯೇ ಹವಾಮಾನಕ್ಕೆ ಅನುಗುಣವಾಗಿಯೇ ಹೆಚ್ಚಿನವರ ಸ್ವಭಾವಗಳು ರೂಪುಗೊಂಡಿರುತ್ತವೇನೋ ಎನ್ನುವ ಭಾವ ಮೂಡುವುದು. ಅದು ಹೆಚ್ಚಿನಂಶ ನಿಜವೂ ಹೌದು. ತಣ್ಣಗಿನ ಯೂರೋಪಿಯನ್ನರಿಗೂ ಕುಣಿತವೇ ಮೈವೆತ್ತ ಆಫ್ರಿಕನ್ನರಿಗೂ ಮತ್ತು ಮಲೆನಾಡಿನ ಜನಗಳ ಸೌಮ್ಯ ಸ್ವಭಾವಕ್ಕೂ ಬಯಲು ಸೀಮೆಯ ಜನರ ಉರಿಮಾರಿತನಕ್ಕೂ ಇರುವ ವ್ಯತ್ಯಾಸ ಗಮನಿಸಿದರೆ ಹೆಚ್ಚು ಅರ್ಥವಾಗುತ್ತದೆ. ಆದರಿದು ವಿಷಯದ ಹೊರಮೈ. ಅಂತರಂಗದಲ್ಲಿ ಎಲ್ಲರೂ ಕೊನೆಗೆ ಮನುಷ್ಯರೇ. ಮನುಷ್ಯನಿಗಿರುವ ಸ್ವಾರ್ಥ, ಕ್ರೌರ್ಯ, ಒಳ್ಳೆಯತನ ಇತ್ಯಾದಿಗಳು ಉಷ್ಣ, ಶೀತ, ಸಮಶೀತೋಷ್ಣ ಹೀಗೆ ಯಾವ ವಲಯದಲ್ಲಿದ್ದರೂ ಇದ್ದೇ ಇರುತ್ತವೆ. ಹೊರಗಿನ ವಾತಾವರಣಕ್ಕೆ ಹೊಂದಿಕೊಂಡಂತೆ ನಮ್ಮ ಪ್ರತಿಕ್ರಿಯೆ ಇರುವುದು ಕೂಡ ‘Danger of a single story ‘ ಅನ್ನಿಸುತ್ತದೆ. ಮನುಷ್ಯನ ಮನಸ್ಸು ಇವೆಲ್ಲವನ್ನೂ ಮೀರಿ ವರ್ತಿಸುವುದುಂಟು. ನಾನು ಓದಿದ ಪುತಿನ ಅವರ ಒಂದು ಕವಿತೆ ನನಗಿದಕ್ಕೆ ಸಮರ್ಥನೆ ಒದಗಿಸಿತು. ಅದೊಂದು ಶರದೃತುವಿನ ಬೆಳಗು. ಬಾನು ತಿಳಿಯಾಗಿದೆ. ಬಿಳಿಮುಗಿಲಿನ ದೋಣಿ ಆಕಾಶದಲ್ಲಿ ವಿಹಾರಕ್ಕೆ ಹೊರಟಿದೆ. ಕೊಳದ, ಬಯಲ, ಬೆಟ್ಟದ ಮೇಲೆಲ್ಲ ಬೆಚ್ಚನೆಯ ಕಿರುಬಿಸಿಲು ಒರಗಿಕೊಂಡಿದೆ. ಹಸಿರಿನ ಮೇಲಿರುವ ಹಿಮಮಣಿಗಳು ಮುತ್ತಿನ ಬಾಣಗಳನ್ನು ದಿಕ್ಕುದಿಕ್ಕಿಗೂ ಎಸೆದಿವೆ. ಆ ಶರದೃತುವಿನ ಹಗಲಲ್ಲಿ ಚೆಲುವಿದೆ, ಕಳೆಯಿದೆ, ಬಿಡುವಿದೆ. ಎಲೆಯ ಮೇಲುರುಳುತ್ತ , ಮುತ್ತಿನ ಕಂಠಿಯ ಕಮಲಕ್ಕೆ ಕಿರುದೆರೆಗಳು ಹಾರವನ್ನು ಹಾಕಿವೆ. ತಣ್ಣಗೆ ನುಣ್ಣಗೆ ಗಾಳಿ ನುಸುಳಿ ಬಳ್ಳಿಗೆ ಕಚಗುಳಿಯನ್ನು ನೀಡುತ್ತಿದೆ. ಪೆದರಿನಲ್ಲಿ, ಮೆಳೆಯಲ್ಲಿ, ವನದಲ್ಲಿ ಹಕ್ಕಿಯು ಹಾಡನ್ನು ಹರಡುತ್ತಿದೆ. ಅಂತ ಶರದದ ಹಗಲಲ್ಲಿ ಒಲವಿದೆ, ಗೆಲುವಿದೆ, ನಲವಿದೆ. ಆದರೆ ಕವಿಯ ಮನಸ್ಸು ಮಾತ್ರ ಒಲವಿನ ಪೂರ್ಣತೆಯನ್ನು ಅರಸುವ ದುಂಬಿಯಂತಿದೆ. ಚಿಂತೆಯ ಕಪ್ಪುಮೋಡದಲ್ಲಿ ಬೆಳಕನ್ನು ಕಾಣಲು ತವಕಿಸುತ್ತಿದೆ. ಬಾಳಿನ ಕನಸುಗಳಿಗೂ ಮತ್ತು ನನಸುಗಳಿಗೂ ಇರುವ ಅಪಾರ ಅಂತರವನ್ನು ನೆನೆದು ಉಲ್ಲಾಸ ಕುಗ್ಗಿ ಹೋಗುತ್ತಿದೆ. ಶರದೃತುವಿನ ಗೆಲುವಿನ ಹಗಲಲ್ಲಿ ನಲವಿನ ಸಂದೇಶವಿದ್ದರೆ ವಿಚಿತ್ರ ಎನ್ನುವಂತೆ ಬಾಳಿನ ನಲವನ್ನು ನೀಡುತ್ತಿರುವ ಸಂದೇಶವೇ ಮನಸ್ಸನ್ನು ಕುಗ್ಗಿಸುತ್ತಿದೆ.ಪೂರ್ಣತೆಯನ್ನು ಅರಸುತ್ತ ನವೆಯುವವರ ಕತೆಯೆಲ್ಲ ಹೀಗೆಯೋ ಏನೋ. ಯಾವುದನ್ನು ಕಂಡರೂ ಅಲ್ಲೊಂದು ಕೊರತೆಯಿದ್ದಂತೆ ಭಾಸವಾಗುತ್ತಿರುತ್ತದೆ. ಸಂಪೂರ್ಣವಾಗಿ ಯಾವುದರಲ್ಲೂ ತೊಡಗಿಕೊಳ್ಳಲಾಗದ, ಮತ್ತೇನನ್ನೋ ಬಯಸುವ ಮನಸ್ಸದು. ಅದಕ್ಕೆ ಹೊರಗಿನ ಚಳಿ, ಗಾಳಿ, ಮಳೆ ಯಾವುದೂ ಪರಿಣಾಮ ಬೀರಲಾರದು. ಋತುಮಾನಗಳನ್ನು ಧಿಕ್ಕರಿಸಿ ಏನನ್ನೋ ಅರಸಿ ಹಿಮಾಲಯದ ಗುಹೆಯೊಳಗೆ ತಪಸ್ಸಿಗೆ ಕೂರುವವರ ಮನಃಸ್ಥಿತಿಯದು. ನಮಗೆಲ್ಲ ಅನೇಕ ಬಾರಿ ಹೀಗಾಗುತ್ತದೆ. ಎಲ್ಲರೂ ಹೊಗಳುವ, ನಾಟಕಕ್ಕೋ, ಚಲನಚಿತ್ರಕ್ಕೋ, ನೃತ್ಯಕ್ಕೋ ಹೋಗುತ್ತೇವೆ. ಸುತ್ತಲಿನವರು ಖುಷಿಯಿಂದ ಕುಣಿಯುತ್ತಿರುತ್ತಾರೆ. ನಮಗೆ ಆ ದೃಶ್ಯ ಖುಷಿ ಕೊಟ್ಟಿರುವುದೇ ಇಲ್ಲ. ಸುತ್ತಲಿನವರು ನಗುತ್ತಿರುತ್ತಾರೆ. ನಾವು ಬೆಪ್ಪರಂತೆ ಸುಮ್ಮನೆ ಕುಳಿತಿರುತ್ತೇವೆ. ಯಾವುದೋ ವಿಷಯವನ್ನು ಗಹನವೆಂದು ಮಾತಾಡುತ್ತಿರುತ್ತಾರೆ. ನಮಗಲ್ಲಿ ಯಾವ ಗಹನತೆಯೂ ಕಾಣುವುದಿಲ್ಲ. ಹೊರಗಿನ ಲೋಕಕ್ಕೂ ನಮಗೂ ಏನೇನೂ ಸಂಬಂಧವಿಲ್ಲದವರಂತೆ ಇದ್ದುಬಿಡುತ್ತೇವೆ. ಅನೇಕ ಬಾರಿ ವಿದ್ಯಾರ್ಥಿಗಳ ಜೊತೆ ಪ್ರವಾಸ ಹೋದಾಗ ನನಗೆ ಈ ಅನುಭವವಾಗಿದೆ. ಅವರ ಉನ್ಮತ್ತ, ಖುಷಿಯ, ಕುಣಿವ ವಾತಾವರಣಕ್ಕೂ ನನಗೂ ಸಂಬಂಧವಿಲ್ಲವೇನೋ ಎನ್ನುವಂತೆ, ಆ ಜಗತ್ತಿನಿಂದ ನನ್ನನ್ನು ಬೇರೆ ಎಲ್ಲೋ ಇಟ್ಟಂತೆ ಭಾಸವಾಗಿರುತ್ತದೆ. ಆದರದನ್ನು ತೋರ್ಪಡಿಸಿಕೊಳ್ಳಲಾಗಿಲ್ಲ. ಹಾಗೆ ಮಾಡಿದರೆ ಬೇರೊಬ್ಬರ ಸಂತೋಷವನ್ನು ಹಾಳು ಮಾಡಿದಂತಾಗಿಬಿಡುತ್ತದಲ್ಲ. ವಸಂತ ಋತುವಿನಲ್ಲಿ ಶಿಶಿರ ಗಾನ ಹಾಡಿದಂತಾಗುವುದಲ್ಲ! ಈ ರೀತಿ ನರಳುವುದರಲ್ಲೂ ಮನುಷ್ಯನಿಗೆ ಎಂಥದ್ದೋ ಖುಷಿಯಿರಬೇಕು! ಇಲ್ಲದಿದ್ದರೆ ಹಾಗೇಕೆ ವರ್ತಿಸುತ್ತಾನೆ ಎಂದುಕೊಂಡದ್ದಿದೆ. ಈ ಕಾರಣಕ್ಕಾಗಿಯೇ ಯಾವುದೇ ಬೀಸು ಹೇಳಿಕೆಗಳನ್ನು ಯಾವ ವಿಷಯದ ಬಗ್ಗೆಯೂ ಒಪ್ಪಲಾಗುವುದೇ ಇಲ್ಲ. ಪ್ರತಿಯೊಂದು ವಿಷಯಕ್ಕೆ ಅನೇಕ ಮುಖಗಳಿವೆ, ಸತ್ಯಗಳಿವೆ. ಒಬ್ಬರಿಗೆ ಅನುಭವಕ್ಕೆ ಬಂದದ್ದು ಮತ್ತೊಬ್ಬರಿಗೆ ಬರುವುದೇ ಇಲ್ಲ. ಬಂದರೂ ಉಳಿದವರಿಗೆ ಅರ್ಥವಾಗುವುದೇ ಇಲ್ಲ. ಆಷಾಢದಲ್ಲಿ ಮೋಡಗಳ ದುಗುಡ ಹೆಚ್ಚಿದಂತೆ ಎಲ್ಲರೂ ದುಗುಡಗೊಳ್ಳುತ್ತಾರೆ ಎನ್ನುವುದು ಕೂಡ ಮೂರ್ಖತನ. ಈ ಕಪ್ಪು ಮೋಡಗಳನ್ನು ಸೀಳಿದ ಬೆಳಕಿನ ಗೆರೆಗಳು ಎಲ್ಲೆಲ್ಲೋ ಕುಣಿಯುತ್ತಿರಬಹುದು!…… (ಕೊಳದ ಮೇಲಿನ ಗಾಳಿ ಪುಸ್ತಕದಿಂದ..ಆಯ್ದ ಬರಹ) ****************************************

ಶರದದ ಹಗಲಲ್ಲಿ ಆಷಾಢದ ಮೋಡಗಳು… Read Post »

ನಿಮ್ಮೊಂದಿಗೆ

ಶರದದ ಹಗಲಲ್ಲಿ ಆಷಾಢದ ಮೋಡಗಳು…

ಶರದದ ಹಗಲಲ್ಲಿ ಆಷಾಢದ ಮೋಡಗಳು… ಎಂ.ಆರ್.ಕಮಲ ಹೊರಗಿನ ಋತುಮಾನಕ್ಕೂ ಒಳಗಿನ ಋತುಮಾನಕ್ಕೂ ಸಂಬಂಧವಿದೆಯೇ ಎಂದು ಹಲವಷ್ಟು ಬಾರಿ ಯೋಚಿಸಿದ್ದೇನೆ. ಇದೆ ಎನ್ನುವುದು ನಿಜವಾದರೂ ಪೂರ್ಣಸತ್ಯವಲ್ಲ. ಬಯಲು ಸೀಮೆಯ ಬಿರುಬಿಸಿಲಲ್ಲಿ ಬೆಳೆದ ನನ್ನಂಥವರು ಬಾಯಿಯಲ್ಲಿ ಕೆಂಡವನ್ನೇ ಕಾರುತ್ತೇವೆ. ವಿನಾಕಾರಣ ಉದ್ವಿಗ್ನಗೊಂಡು. ಸಣ್ಣ ಸಣ್ಣ ವಿಷಯಕ್ಕೆಲ್ಲ ಜಗಳ ತೆಗೆಯುತ್ತೇವೆ. ಬಯಲು ಸೀಮೆಯ ಹೆಚ್ಚಿನ ಜನರ ಬೆಳಗುಗಳು ಗುದ್ದಾಟಗಳಿಂದಲೇ  ಆರಂಭವಾಗುತ್ತದೆ. ವಸಂತನೇ ಬರಲಿ, ಗಿಡಮರಗಳು ಚಿಗುರುತ್ತಲೇ ಇರಲಿ, ಹೂವುಗಳು ತೂಗುತ್ತಲೇ ಇರಲಿ ಬೇಸಗೆಯ ಬಿರುಬಿಸಿಲಂಥ ಚಡಪಡಿಕೆ ಮಾತ್ರ ನಿಲ್ಲುವುದೇ ಇಲ್ಲ. ಆಷಾಢದ ಮೋಡ ಕವಿದ ವಾತಾವರಣ ಯಾರ ಎದೆಯಲ್ಲಿ ದುಗುಡ ಮೂಡಿಸುವುದಿಲ್ಲ ಹೇಳಿ? ಮಳೆ ಸುರಿಸುವುದು ಅಷ್ಟರಲ್ಲೇ ಇದ್ದರೂ ಮೋಡಗಳು ಮಾತ್ರ ದಟ್ಟೈಸುತ್ತಲೇ ಇರುತ್ತವೆ. ಈ ಕವಿದ ಮೋಡಗಳು, ಹಗಲಲ್ಲಿಯೇ ಕಾರ್ಗತ್ತಲನ್ನು ಸೃಷ್ಟಿಸಿ ಮನಸ್ಸಿಗೆ ಮಂಕು ಕವಿಸಿಬಿಡುತ್ತವೆ. ಭೋರೆಂದು ಬೀಸುವ ಗಾಳಿ ಕ್ಷಣಾರ್ಧದಲ್ಲಿ ಎಲ್ಲವನ್ನು ಚದುರಿಸುವಂತೆ ಕಂಡರೂ ಕಪ್ಪಿಟ್ಟ ಮನಸ್ಸು ಹೊಳವಾಗುವುದಿಲ್ಲ. ಇತ್ತ ವೈಶಾಖದ ಬೇಸಗೆಯ ಧಗೆ, ಅತ್ತ ಶ್ರಾವಣದ ಸಂತಸ ಎರಡನ್ನೂ ಹೊತ್ತು ವಿಚಿತ್ರ ತಳಮಳವನ್ನು ಒಳಗೂ ಹೊರಗೂ ಸೃಷ್ಟಿಸಿಬಿಡುತ್ತದೆ. ಹಾಡು ಹಗಲೇ ರವಿ ಕಾಣದಂತೆ ಮಾಡುವ ಶ್ರಾವಣದ ಮೋಡಗಳು ಸುರಿಸುವ ಮಳೆಯಿಂದಾಗಿ ಒಳಗೆ ತುಂಬಿದ್ದ ಕೊಳೆ ಕಶ್ಮಲಗಳು ತೊಡೆದು ಬದುಕಿಗೆಂಥ ಹುರುಪು ಹುಟ್ಟುತ್ತದೆ. ಸುತ್ತಲಿನ ಹಸಿರು, ಒಳಮನವನ್ನು ಚಿಗುರಿಸುತ್ತ ಹೋಗುತ್ತದೆ. ಶರದೃತುವಿನ ಬೆಳಗಿನ ತಿಳಿಆಗಸ ಮನಸ್ಸನ್ನು ಹಗುರಗೊಳಿಸುತ್ತ  ಹೋದರೆ, ಹೇಮಂತದ ಸಂಜೆಗಳು ನೀರವವಾಗುತ್ತ, ಒಂಟಿತನದ ನೋವನ್ನು ದ್ವಿಗುಣಗೊಳಿಸುತ್ತದೆ. ಎಲೆ ಕಳಚುವಂತೆ ಮಾಡುವ ಶಿಶಿರನ ಹೆಜ್ಜೆಗಳು ಬದುಕಿನ ನಶ್ವರತೆಯನ್ನು ಎದೆಗೆ ತುಂಬಿ ಕಳವಳ ಹುಟ್ಟಿಸುತ್ತವೆ.. ಹೀಗಾಗಿಯೇ ಹವಾಮಾನಕ್ಕೆ ಅನುಗುಣವಾಗಿಯೇ ಹೆಚ್ಚಿನವರ ಸ್ವಭಾವಗಳು ರೂಪುಗೊಂಡಿರುತ್ತವೇನೋ ಎನ್ನುವ ಭಾವ ಮೂಡುವುದು. ಅದು ಹೆಚ್ಚಿನಂಶ ನಿಜವೂ ಹೌದು. ತಣ್ಣಗಿನ ಯೂರೋಪಿಯನ್ನರಿಗೂ ಕುಣಿತವೇ ಮೈವೆತ್ತ ಆಫ್ರಿಕನ್ನರಿಗೂ ಮತ್ತು ಮಲೆನಾಡಿನ ಜನಗಳ ಸೌಮ್ಯ ಸ್ವಭಾವಕ್ಕೂ ಬಯಲು ಸೀಮೆಯ ಜನರ ಉರಿಮಾರಿತನಕ್ಕೂ ಇರುವ ವ್ಯತ್ಯಾಸ ಗಮನಿಸಿದರೆ ಹೆಚ್ಚು ಅರ್ಥವಾಗುತ್ತದೆ. ಆದರಿದು ವಿಷಯದ ಹೊರಮೈ. ಅಂತರಂಗದಲ್ಲಿ ಎಲ್ಲರೂ ಕೊನೆಗೆ ಮನುಷ್ಯರೇ. ಮನುಷ್ಯನಿಗಿರುವ ಸ್ವಾರ್ಥ, ಕ್ರೌರ್ಯ, ಒಳ್ಳೆಯತನ ಇತ್ಯಾದಿಗಳು ಉಷ್ಣ, ಶೀತ, ಸಮಶೀತೋಷ್ಣ ಹೀಗೆ ಯಾವ ವಲಯದಲ್ಲಿದ್ದರೂ ಇದ್ದೇ  ಇರುತ್ತವೆ. ಹೊರಗಿನ ವಾತಾವರಣಕ್ಕೆ ಹೊಂದಿಕೊಂಡಂತೆ ನಮ್ಮ ಪ್ರತಿಕ್ರಿಯೆ ಇರುವುದು ಕೂಡ ‘Danger of a single story ‘ ಅನ್ನಿಸುತ್ತದೆ. ಮನುಷ್ಯನ ಮನಸ್ಸು ಇವೆಲ್ಲವನ್ನೂ ಮೀರಿ ವರ್ತಿಸುವುದುಂಟು. ನಾನು ಓದಿದ ಪುತಿನ ಅವರ ಒಂದು ಕವಿತೆ ನನಗಿದಕ್ಕೆ ಸಮರ್ಥನೆ ಒದಗಿಸಿತು. ಅದೊಂದು ಶರದೃತುವಿನ ಬೆಳಗು. ಬಾನು ತಿಳಿಯಾಗಿದೆ. ಬಿಳಿಮುಗಿಲಿನ ದೋಣಿ ಆಕಾಶದಲ್ಲಿ ವಿಹಾರಕ್ಕೆ ಹೊರಟಿದೆ. ಕೊಳದ, ಬಯಲ, ಬೆಟ್ಟದ ಮೇಲೆಲ್ಲ ಬೆಚ್ಚನೆಯ ಕಿರುಬಿಸಿಲು ಒರಗಿಕೊಂಡಿದೆ. ಹಸಿರಿನ ಮೇಲಿರುವ ಹಿಮಮಣಿಗಳು ಮುತ್ತಿನ ಬಾಣಗಳನ್ನು ದಿಕ್ಕುದಿಕ್ಕಿಗೂ ಎಸೆದಿವೆ. ಆ ಶರದೃತುವಿನ ಹಗಲಲ್ಲಿ ಚೆಲುವಿದೆ, ಕಳೆಯಿದೆ, ಬಿಡುವಿದೆ. ಎಲೆಯ ಮೇಲುರುಳುತ್ತ , ಮುತ್ತಿನ ಕಂಠಿಯ ಕಮಲಕ್ಕೆ ಕಿರುದೆರೆಗಳು ಹಾರವನ್ನು ಹಾಕಿವೆ. ತಣ್ಣಗೆ ನುಣ್ಣಗೆ ಗಾಳಿ ನುಸುಳಿ ಬಳ್ಳಿಗೆ ಕಚಗುಳಿಯನ್ನು ನೀಡುತ್ತಿದೆ. ಪೆದರಿನಲ್ಲಿ, ಮೆಳೆಯಲ್ಲಿ, ವನದಲ್ಲಿ ಹಕ್ಕಿಯು ಹಾಡನ್ನು ಹರಡುತ್ತಿದೆ. ಅಂತ ಶರದದ ಹಗಲಲ್ಲಿ ಒಲವಿದೆ, ಗೆಲುವಿದೆ, ನಲವಿದೆ. ಆದರೆ ಕವಿಯ ಮನಸ್ಸು ಮಾತ್ರ ಒಲವಿನ ಪೂರ್ಣತೆಯನ್ನು ಅರಸುವ ದುಂಬಿಯಂತಿದೆ. ಚಿಂತೆಯ ಕಪ್ಪುಮೋಡದಲ್ಲಿ ಬೆಳಕನ್ನು ಕಾಣಲು ತವಕಿಸುತ್ತಿದೆ. ಬಾಳಿನ ಕನಸುಗಳಿಗೂ ಮತ್ತು ನನಸುಗಳಿಗೂ ಇರುವ ಅಪಾರ ಅಂತರವನ್ನು ನೆನೆದು ಉಲ್ಲಾಸ ಕುಗ್ಗಿ ಹೋಗುತ್ತಿದೆ. ಶರದೃತುವಿನ ಗೆಲುವಿನ ಹಗಲಲ್ಲಿ ನಲವಿನ ಸಂದೇಶವಿದ್ದರೆ ವಿಚಿತ್ರ ಎನ್ನುವಂತೆ ಬಾಳಿನ ನಲವನ್ನು ನೀಡುತ್ತಿರುವ ಸಂದೇಶವೇ ಮನಸ್ಸನ್ನು ಕುಗ್ಗಿಸುತ್ತಿದೆ.ಪೂರ್ಣತೆಯನ್ನು ಅರಸುತ್ತ ನವೆಯುವವರ ಕತೆಯೆಲ್ಲ ಹೀಗೆಯೋ ಏನೋ. ಯಾವುದನ್ನು ಕಂಡರೂ ಅಲ್ಲೊಂದು ಕೊರತೆಯಿದ್ದಂತೆ ಭಾಸವಾಗುತ್ತಿರುತ್ತದೆ. ಸಂಪೂರ್ಣವಾಗಿ ಯಾವುದರಲ್ಲೂ ತೊಡಗಿಕೊಳ್ಳಲಾಗದ, ಮತ್ತೇನನ್ನೋ ಬಯಸುವ ಮನಸ್ಸದು. ಅದಕ್ಕೆ ಹೊರಗಿನ ಚಳಿ, ಗಾಳಿ, ಮಳೆ ಯಾವುದೂ ಪರಿಣಾಮ ಬೀರಲಾರದು. ಋತುಮಾನಗಳನ್ನು ಧಿಕ್ಕರಿಸಿ ಏನನ್ನೋ ಅರಸಿ ಹಿಮಾಲಯದ ಗುಹೆಯೊಳಗೆ ತಪಸ್ಸಿಗೆ ಕೂರುವವರ ಮನಃಸ್ಥಿತಿಯದು. ನಮಗೆಲ್ಲ ಅನೇಕ ಬಾರಿ ಹೀಗಾಗುತ್ತದೆ. ಎಲ್ಲರೂ ಹೊಗಳುವ, ನಾಟಕಕ್ಕೋ, ಚಲನಚಿತ್ರಕ್ಕೋ, ನೃತ್ಯಕ್ಕೋ ಹೋಗುತ್ತೇವೆ. ಸುತ್ತಲಿನವರು ಖುಷಿಯಿಂದ ಕುಣಿಯುತ್ತಿರುತ್ತಾರೆ. ನಮಗೆ  ಆ ದೃಶ್ಯ ಖುಷಿ ಕೊಟ್ಟಿರುವುದೇ ಇಲ್ಲ. ಸುತ್ತಲಿನವರು ನಗುತ್ತಿರುತ್ತಾರೆ. ನಾವು ಬೆಪ್ಪರಂತೆ ಸುಮ್ಮನೆ ಕುಳಿತಿರುತ್ತೇವೆ. ಯಾವುದೋ ವಿಷಯವನ್ನು ಗಹನವೆಂದು ಮಾತಾಡುತ್ತಿರುತ್ತಾರೆ. ನಮಗಲ್ಲಿ ಯಾವ ಗಹನತೆಯೂ ಕಾಣುವುದಿಲ್ಲ. ಹೊರಗಿನ ಲೋಕಕ್ಕೂ ನಮಗೂ ಏನೇನೂ ಸಂಬಂಧವಿಲ್ಲದವರಂತೆ ಇದ್ದುಬಿಡುತ್ತೇವೆ. ಅನೇಕ ಬಾರಿ ವಿದ್ಯಾರ್ಥಿಗಳ ಜೊತೆ ಪ್ರವಾಸ ಹೋದಾಗ ನನಗೆ ಈ ಅನುಭವವಾಗಿದೆ. ಅವರ ಉನ್ಮತ್ತ, ಖುಷಿಯ, ಕುಣಿವ ವಾತಾವರಣಕ್ಕೂ ನನಗೂ ಸಂಬಂಧವಿಲ್ಲವೇನೋ ಎನ್ನುವಂತೆ, ಆ ಜಗತ್ತಿನಿಂದ ನನ್ನನ್ನು ಬೇರೆ ಎಲ್ಲೋ ಇಟ್ಟಂತೆ ಭಾಸವಾಗಿರುತ್ತದೆ. ಆದರದನ್ನು ತೋರ್ಪಡಿಸಿಕೊಳ್ಳಲಾಗಿಲ್ಲ. ಹಾಗೆ ಮಾಡಿದರೆ ಬೇರೊಬ್ಬರ ಸಂತೋಷವನ್ನು ಹಾಳು ಮಾಡಿದಂತಾಗಿಬಿಡುತ್ತದಲ್ಲ. ವಸಂತ ಋತುವಿನಲ್ಲಿ ಶಿಶಿರ ಗಾನ ಹಾಡಿದಂತಾಗುವುದಲ್ಲ! ಈ ರೀತಿ ನರಳುವುದರಲ್ಲೂ ಮನುಷ್ಯನಿಗೆ ಎಂಥದ್ದೋ ಖುಷಿಯಿರಬೇಕು! ಇಲ್ಲದಿದ್ದರೆ ಹಾಗೇಕೆ ವರ್ತಿಸುತ್ತಾನೆ ಎಂದುಕೊಂಡದ್ದಿದೆ. ಈ ಕಾರಣಕ್ಕಾಗಿಯೇ ಯಾವುದೇ ಬೀಸು ಹೇಳಿಕೆಗಳನ್ನು ಯಾವ ವಿಷಯದ ಬಗ್ಗೆಯೂ ಒಪ್ಪಲಾಗುವುದೇ ಇಲ್ಲ. ಪ್ರತಿಯೊಂದು ವಿಷಯಕ್ಕೆ ಅನೇಕ ಮುಖಗಳಿವೆ, ಸತ್ಯಗಳಿವೆ. ಒಬ್ಬರಿಗೆ ಅನುಭವಕ್ಕೆ ಬಂದದ್ದು ಮತ್ತೊಬ್ಬರಿಗೆ ಬರುವುದೇ ಇಲ್ಲ. ಬಂದರೂ ಉಳಿದವರಿಗೆ ಅರ್ಥವಾಗುವುದೇ ಇಲ್ಲ. ಆಷಾಢದಲ್ಲಿ ಮೋಡಗಳ ದುಗುಡ ಹೆಚ್ಚಿದಂತೆ ಎಲ್ಲರೂ ದುಗುಡಗೊಳ್ಳುತ್ತಾರೆ ಎನ್ನುವುದು ಕೂಡ ಮೂರ್ಖತನ. ಈ ಕಪ್ಪು ಮೋಡಗಳನ್ನು ಸೀಳಿದ ಬೆಳಕಿನ ಗೆರೆಗಳು ಎಲ್ಲೆಲ್ಲೋ ಕುಣಿಯುತ್ತಿರಬಹುದು! …… (ಕೊಳದ ಮೇಲಿನ ಗಾಳಿ ಪುಸ್ತಕದಿಂದ..ಆಯ್ದ ಬರಹ) *****************************************

ಶರದದ ಹಗಲಲ್ಲಿ ಆಷಾಢದ ಮೋಡಗಳು… Read Post »

ಇತರೆ, ಲಹರಿ

ಭಾವಲಹರಿ

ಲಹರಿ ಭಾವಲಹರಿ ರಶ್ಮಿ.ಎಸ್. ಸೌಹಾರ್ದ, ಸಹಬಾಳ್ವೆ ಮುಂತಾದ ಪದಗಳನ್ನು ನಾವೆಲ್ಲಿಯೂ ಓದಲಿಲ್ಲ. ವಿಶ್ಲೇಷಿಸಲಿಲ್ಲ. ಆದರೆ ಬಾಳಿದೆವು. ಆ ಬದುಕಿನ ಜೀವದ್ರವ್ಯ ಮೊಮ್ಮಾ.. ಜಿಯಾ ಸುಲ್ತಾನಾ. ಅವರ ನೆನಪಿನಲ್ಲಿ ಬರೆದ ಬರಹವಿದು.. ನಿಮ್ಮ ಉಡಿಗೆ.. ನೀವಷ್ಟು ಅವರ ಪ್ರೀತಿ ಉಣ್ಣಲಿ ಎಂದು… …………………………….. ಗಾಬರಿಯಾಗ್ತದ. ನಾವೆಲ್ಲ ಮೊಮ್ಮ ಇಲ್ಲದೇ ಬದುಕುತ್ತ್ದಿದೇವೆ. ಇನಿದನಿಯ, ವಾತ್ಸಲ್ಯ ತುಂಬಿ ಕರೆಯುವ ಮೊಮ್ಮ . ಸಾಯಿರಾಬಾನುವಿನ ಅಕ್ಕನಂತೆ ಕಾಣಿಸುತ್ತ್ದಿದ್ದ… ನಡೆದರೆ ದೇಹವೇ ಭಾರವೆಂದೆನಿಸುತ್ತ್ದಿದ ದೀರ್ಘದೇಹಿ. ಮುಟ್ಟಿದರೆಲ್ಲಿ ಕೊಳೆಯಗುವರೋ ಎಂಬ ದಂತವರ್ಣದವರು. ಮೊಮ್ಮ  ಇಲ್ಲ..!  ನಮ್ಮ ಮನೆಗೆ ಬಂದಾಗಲೆಲ್ಲ ಹಣೆಗೆ ಕುಂಕುಮವಿಟ್ಟುಕೊಂಡು, ಕೆನ್ನೆಗೆ ಅರಿಶಿನ ಲೇಪಿಸಿಕೊಂಡು ಉಡಿ ತುಂಬಿಸಿ, ಹೊಸಿಲಿಗೆ ಕೈ ಮುಗಿದು ಹೋಗುತ್ತ್ದಿದ ಮೊಮ್ಮ . ಆ ಕ್ಷಣ ನೋಡಿದರೆ ಇವರು ಅನ್ಯಧರ್ಮೀಯರೇ… ಮುಸ್ಲಿಂ ಮನೆತನದವರೇ ಎಂಬ ಸಂಶಯ ಮೂಡುತ್ತಿತ್ತು. ಆದರೆ ಪ್ರತಿ ವರ್ಷದ ಗೌರಿ ಹಬ್ಬಕ್ಕೆ ನಮ್ಮ ಮನೆಯ ಬಾಗಿನ ಪಡೆಯಲು ಬಂದಾಗಲೆಲ್ಲ ಕುಂಕುಮ ಅವರ ಹಣೆಯ ಮೇಲೆ ರಾರಾಜಿಸುತ್ತಿತ್ತು. ಆಗ ಅಲ್ಲಿ ಯಾವ ಮತಾಂಧ ನಂಬಿಕೆಗಳೂ ಇರಲಿಲ್ಲ. ಕೇವಲ ಪ್ರೀತಿ ಇತ್ತು.  ಮತಗಳಿಗೂ ಮೀರಿದ ಬಾಂಧವ್ಯವಿತ್ತು. ಮೊಮ್ಮ  ಬೀದರ್‌ನ ಮುಲ್ತಾನಿ ಮನೆತನ ಸೊಸೆ. ಬೆಳಗಾವಿ ಖಾನ್ ಮನೆತನದ ಮಗಳು. ಬೀದರ್‌ಗೆ ಸೊಸೆಯಾಗಿ ಬಂದಾಗ ಅದಿನ್ನೂ ರಜಾಕರ ಹಾವಳಿಯ ಕೆಟ್ಟ ನೆನಪುಗಳಿಂದ ಹೊರಬರುವ ಕಾಲ. ಅಲಿ ಇಕ್ಬಾಲ್ ಮುಲ್ತಾನಿ ಅವರ ವಧುವಾಗಿ ಬೀದರ್‌ಗೆ ಬಂದಾಗ ಹಬ್ಬದ ಚಂದ್ರನಂತೆ ಕಂಗೊಳಿಸುವ ಸೊಸೆ ಬಂದಳು ಎಂದು ಸಂಭ್ರಮಿಸ್ದಿದರಂತೆ ಓಣಿಯ ಜನ. ಎಳೆನಿಂಬೆ ವರ್ಣದ ಮೊಮ್ಮ ಕೆಂಪು ಚರ್ಮದ ಜ್ಯಾಕೆಟ್, ಗಂಬೂಟ್ಸ್ ಧರಿಸಿ, ಏರ್‌ಗನ್ ಹಿಡಿದು ಎನ್‌ಫೀಲ್ಡ್ ಬುಲೆಟ್ ಮೇಲೆ ಪತಿಯೊಡನೆ ಬೇಟೆಗೆ ಹೊರಟರೆ, ಓಣಿಯ ಹೆಂಗಳೆಯರೆಲ್ಲ ಕಿಟಕಿಯಿಂದಲೇ ಇಣುಕುತ್ತ್ದಿದರಂತೆ. ಬೀದರ್‌ನಲ್ಲಿ ಹೆಂಗಳೆಯರೆಲ್ಲ ಪರದೆಯಲ್ಲಿಯೇ ಬಾಳಬೇಕಾದ ದಿನಗಳು ಅವು. ದೊಡ್ಡ ಮನೆತನದವರು ಏನು ಮಾಡಿದರೂ ಚಂದವೇ ಎಂದು ಅದೆಷ್ಟೋ ಜನ ಮೂಗು ಮುರಿದ್ದಿದರಂತೆ. ಆದರೆ ಹಿತ್ತಲು ಮನೆಯ ಬಾಗಿಲು ಈ ಹೆಂಗಳೆಯರಿಗೆ ಸದಾ ತೆರೆದಿರುತ್ತಿತ್ತು. ಪ್ರತಿ ಮನೆಯ ವಿಚಾರವನ್ನೂ ಕಾಳಜಿಯಿಂದ ಕೇಳುತ್ತ್ದಿದರು.ಎಲ್ಲ ಮನೆಯ ಸುಖದುಃಖಗಳಲ್ಲೂ ಭಾಗಿಯಗುತ್ತ್ದಿದರು. ಸುಮ್ಮನೆ ಮಾತನಾಡುವ ಕುತೂಹಲದ ಬದಲು ಕಾಳಜಿಯ ಕಣಜವಾಗಿದ್ದರು ಅವರು. ದಲಿತ ಮಹಿಳೆಯ ಶೋಷಣೆಯನ್ನು ಸಹಿಸದೆ ಅವರ ಮನೆಯಂಗಳಕ್ಕೇ ಹೋಗಿ ಜಗಳ ಬಿಡಿಸಿ ಬಂದವರು. ಮತಾಂತರವಾದ ದಲಿತ ಮಹಿಳೆಯನ್ನು ಗಂಡ ಬಿಟ್ಟು ಹೋದಾಗ ಅವಳನ್ನೂ ಮನೆಗೆ ಕರೆತಂದವರೇ ಅವರು. ಕಾಶಮ್ಮ ಎಂಬ ಆ ಮಹಿಳೆಯ ಮಗಳಿಗೆ ಮದುವೆ ಮಡಿಕೊಟ್ಟ್ದಿದು ಎಲ್ಲವೂ ಕೇವಲ ಅಂತಃಕರಣದಿಂದ. ಈ ಅಂತಃಕರಣಕ್ಕೆ ಗೊತ್ತ್ದಿದ್ದಿದು ಕೇವಲ ಒಂದೇ ಭಾಷೆ. ಅದು ಪ್ರೇಮದ್ದು. ಪರಿಪೂರ್ಣ ಪ್ರೇಮದ್ದು. ಯಾವುದೇ ಕೊಡುಕೊಳ್ಳುವ ವ್ಯವಹಾರವಿಲ್ಲದ ಪ್ರೇಮವದು. ತನ್ನ ಸುತ್ತಲಿನವರು ಸಂತಸದಿಂದ ಇದ್ದರೆ ತನ್ನ ಪರಿಸರ ಸಮೃದ್ಧ ಎಂದು ನಂಬಿದ ಜೀವವದು. ಅಲ್ಲಿ ಯಾವ ಧರ್ಮಗಳೂ ಅಡ್ಡ ಬಂದಿರಲಿಲ್ಲ. ಅಮ್ಮ ಮದುವೆಯ ನಂತರ ೧೦ ವರ್ಷಗಳ ದೀರ್ಘ ವಿರಾಮದ ನಂತರ ಮತ್ತೆ ವಿದ್ಯಾಭ್ಯಾಸ ಮುಂದುವರೆಸ್ದಿದರು. ನಾನಾಗ ಕೈ ಕೂಸು. ಅಮ್ಮನ ಮಡಿಲಿನಿಂದ ಮೊಮ್ಮ ನ ಮಡಿಲಿಗೆ ಜಾರ‍್ದಿದೇ ಆಗ. ನನಗೆ ಯಶೋದಾ ಸಿಕ್ಕ್ದಿದಳು. ಅವರ ಮಗ ಫಿರೋಜ್‌ನೊಂದಿಗೆ ನಾನೂ ಬೆಳೆಯುತ್ತ್ದಿದೆ. ಫಿರೋಜ್‌ನ ಆಟಕ್ಕ್ದಿದ ಕೋಳಿ ಮರಿಗಳು ನನ್ನ ಗೆಜ್ಜೆ ಕುಕ್ಕಲು ಬಂದರೆ ಓಡಿ ಹೋಗಿ ಮೊಮ್ಮ ಳ ಮಡಿಲಿಗೆ ಹಾರುತ್ತ್ದಿದೆ. ಅವರೂ ಬಾಚಿ ತಬ್ಬುತ್ತ್ದಿದರು. ಆ ಬೆಚ್ಚನೆಯ ಅಪ್ಪುಗೆಯಲ್ಲಿ ಈಗಿರುವ ಮತಾಂಧ ದಳ್ಳುರಿ ಇರಲಿಲ್ಲ. ಮಮತೆಯ ಬಿಸುಪು ಇತ್ತು. ಫಿರೋಜ್‌ಗೊಂದು ತುತ್ತು, ನನಗೊಂದು ತುತ್ತು. ತುತ್ತಿಗೊಮ್ಮೆ ‘ಶೇರ್ ಬೇಟಾ ಹಿಮ್ಮತ್ ರಖೇಗಾ, ಕಭಿ ನ ಹಾರೇಗಾ’ ಎಂಬ ಮಾತುಗಳು. ಅದೆಷ್ಟೋ ಆತ್ಮಸ್ಥೈರ್ಯ ನೀಡುವ ಕತೆಗಳು. ಎಲ್ಲಿಯೂ ಗುಮ್ಮ ಬರುವ, ನಮ್ಮನ್ನು ಕಾಡುವ ಕತೆಗಳಿರಲಿಲ್ಲ. ನಾವೇ ಗುಮ್ಮನನ್ನು, ಸೈತಾನನನ್ನು ಹೊಡೆದು ಮುಗಿಸುವ ಕತೆಗಳು. ನಮ್ಮ ಬಾಲ್ಯದಲ್ಲಿ ಭಯವಿಲ್ಲದ, ಎಲ್ಲವನ್ನು ಎದುರಿಸಬಹುದಾದ ಮನೋಸ್ಥೈರ್ಯ ತುಂಬಿದವರು ಮೊಮ್ಮ.  ಪ್ರತಿ ಹಬ್ಬಕ್ಕೆ ರಂಜಾನ್‌ಗೆ ಅಮ್ಮನಿಗೆ ಮುತ್ತೈದೆಯ ಬಾಗಿನವಾಗಿ ‘ಸೋಲಾ ಸಿಂಗಾರ್’ನ ಎಲ್ಲ ಪ್ರಸಾಧನಗಳನ್ನೂ ಕಳುಹಿಸುತ್ತ್ದಿದರು. ಸೀರೆ, ಮೆಹೆಂದಿ, ಬಳೆ, ಕುಂಕುಮ, ನೂತನ ವಿನ್ಯಾಸದ ಮುತ್ತು, ಹರಳು ಅಲಂಕಾರದ ಟಿಕಳಿಗಳು, ವೀಳ್ಯ, ಹೂ ಮುಂತಾದವುಗಳ ಉಡುಗೊರೆಯ ಮೆರವಣಿಗೆಯೇ ಮನೆಗೆ ಬರುತ್ತಿತ್ತು. ನಾಗರ ಪಂಚಮಿಗೆ ಅಮ್ಮ ಅವರಿಗೆ ಉಡುಗೊರೆ ಕಳುಹಿಸುತ್ತ್ದಿದರು. ಅಣ್ಣನ ಮನೆಯ ಕೊಡುಗೆ ಎಂದು. ಗಣೇಶ ಚೌತಿ, ದುರ್ಗಾಷ್ಟಮಿ, ಸರಸ್ವತಿ ಪೂಜೆ, ಆಯುಧ ಪೂಜೆ, ಶ್ರಾವಣ ಮಸದ ಪಾರಾಯಣ ಇವೆಲ್ಲಕ್ಕೂ ಮೊಮ್ಮ  ಮನೆಯಲ್ಲೂ ಮಾಂಸದಡುಗೆ ವರ್ಜ್ಯವಾಗಿತ್ತು. ಸಂಜೆ ಸೆರಗು ಹ್ದೊದು, ಅರಿಶಿನ ಕುಂಕುಮ ಪಡೆದು, ಪೂಜೆಯ ವೀಳ್ಯ ಕಟ್ಟಿಸಿಕೊಂಡು ಪ್ರಸಾದ ಕೋಸಂಬರಿಯನ್ನು ಹಣೆಗೊತ್ತಿ ಸ್ವೀಕರಿಸುತ್ತಿದ್ದರು. ರಂಜಾನ್, ಈದ್ ಮಿಲಾದ್ ಹಬ್ಬಗಳಿಗೆ ಪ್ರಾರ್ಥನೆಯ ನಂತರ ದುವಾ ಓದುತ್ತ್ದಿದ ಮೊಮ್ಮ  ತಮ್ಮ ಮಕ್ಕಳೊಂದಿಗೆ ನಮ್ಮನ್ನೂ ಕರೆದು ಹಣೆಯ ಮೇಲೆ ಊದುತ್ತ್ದಿದರು. ಅಲ್ಲಿ ಪ್ರಾರ್ಥನೆಯೊಂದಿಗೆ ನಮ್ಮ ಮೇಲೆ ಅವರ ಚೇತನದ ಒಂದು ಭಾಗ ಪಸರಿಸುವ ಅನುಭವ ಅದು. ಹಣೆಗೂದಿ, ಹಣೆಗೊಂದು ಮುತ್ತಿಟ್ಟರೆ ಅಲ್ಲಿ ಪ್ರೀತಿಯ ಮುದ್ರೆ ಇರುತ್ತಿತ್ತು. ಅಯೋಧ್ಯೆ- ಬಾಬ್ರಿ ಮಸೀದಿ ಗಲಭೆಯಲ್ಲಿ ಇಡೀ ಬೀದರ್ ಹೊತ್ತಿ ಉರಿಯುತ್ತ್ದಿದರೆ ನಾವು ನಮ್ಮ ಮನೆಯ ಅಂಗಳದಲ್ಲಿ ಮೊಮ್ಮ ನ ಕುಟುಂಬದೊಡನೆ ಬೆಚ್ಚಗ್ದಿದೆವು. ಕಂಡಲ್ಲಿ ಗುಂಡು ಆದೇಶವಿತ್ತು. ಆಗಾಗ ಸೇನಾದಳದವರು ಗಾಳಿಯಲ್ಲಿ ಗುಂಡು ಹಾರಿಸುತ್ತ್ದಿದರು. ಆದರೆ ನಮ್ಮ ಮನೆಯಲ್ಲಿ ನಗೆ ಬುಗ್ಗೆಗಳು ಸ್ಫೋಟಿಸುತ್ತ್ದಿದವು. ಗಲಭೆ ಕಾಲಕ್ಕೆ ದೊಡ್ಡ ಮನೆಯ ಗೇಟೊಳಗೆ ಪ್ರವೇಶ ಪಡೆದ ಹಾಲು ತರುವ ಮುಸ್ತಫಾ, ಕ್ರೆಸ್ತ ಧರ್ಮಕ್ಕೆ ಸೇರಿದ ಬಟ್ಟೆ ಹೊಲಿಯುವ ಬಾಬು, ದಲಿತ ಮಹಿಳೆ ಕಾಶೆಮ್ಮ, ಅಮ್ಮನ ವಿದ್ಯಾರ್ಥಿ ರಾಜಶೇಖರ್ ಎಲ್ಲರೂ ಒಟ್ಟಾಗಿದ್ದೆವು. ಯಾವ ಕೋಮುಗಲಭೆಗಳ ಬಿಸಿ ತಾಕದೇ, ಸುರಕ್ಷಿತ ಬೆಚ್ಚನೆಯ ಭಾವ ನೀಡ್ದಿದೇ ಆ ಮುಲ್ತಾನಿ ಮನೆತನ. ಸಂಜೆ ವಚನ ಮತ್ತು ಸೂಫಿ ಗಾಯನ, ಮಕ್ಕಳೊಟ್ಟಿಗೆ ಆಟ… ಇಡೀ ಜಗತ್ತಿಗೆ ಸೇರದ ಲೋಕವೊಂದಿದ್ದರೆ ಅದು ಆ 18 ಕಮಾನುಗಳ ಮನೆಯಲ್ಲಿತ್ತು. ಮೂರು ಕುಟುಂಬಗಳು… ಸಂತಸವೇ ಆ ಮನೆಗಳ ಬಾಂಧವ್ಯದ ಕೊಂಡಿಯಾಗಿತ್ತು. ನನಗೆ ಮೊಮ್ಮಾ ಮಾಡುವ ಖಿಚಡಿಯಷ್ಟೇ ಪ್ರೀತಿ, ಅವರಿಗೆ ನಮ್ಮನೆಯ ಸಾಂಬರ್‌ ಮೇಲಿತ್ತು.  ನಮ್ಮ ಮನೆ ಎರಡು, ಧರ್ಮ ಬೇರೆ, ಜಾತಿ ಬೇರೆ, ನಂಬಿಕೆ ಬೇರೆ… ಆದರೆ ನಮ್ಮಲ್ಲಿ ಹುಟ್ಟ್ದಿದು ಬೆಳೆಸ್ದಿದು ಎರಡೇ ಭಾವ. ಅದು ಪರಸ್ಪರ ಗೌರವ ಮತ್ತು ಪ್ರೀತಿಯದು. ಈಗ ಧರ್ಮದ ಹೆಸರಿನಲ್ಲಿ ಅಮಾಯಕರನ್ನು ಕೊಲ್ಲುವ ಚಿಗುರು ಮೀಸೆಯೂ ಮೂಡದ ಹುಡುಗರನ್ನು ಕಂಡಾಗ ಇವರ‍್ಯಾರಿಗೂ ‘ಮೊಮ್ಮ ’ನಂಥವರು ಸಿಗಲಿಲ್ಲವೇ ಎನಿಸುತ್ತದೆ. ಕಳೆದುಕೊಂಡ ಮೊಮ್ಮ ರ ಕುಂಕುಮ ಅಳಿಸದ ಹಣೆ ನೆನಪಾಗುತ್ತದೆ. ನಮ್ಮ ಹಣೆಗೂದಿದ ದುವಾ ನೆನಪಾಗುತ್ತದೆ. ಅದರೊಂದಿಗೆ ದೇವರಿಗೆ ಇನ್ನೊಂದು ದುವಾ ಕೇಳುತ್ತೇನೆ… ಓಹ್ ದೇವರೇ ಎಲ್ಲ ಮನೆಯ ನೆರೆಯಲ್ಲಿಯೂ ಮೊಮ್ಮ ನಂಥ ಜೀವವೊಂದಿರಲಿ… ಆಮೇನ್…! ***********************************************

ಭಾವಲಹರಿ Read Post »

ಇತರೆ, ವರ್ತಮಾನ

ಪಾಠವಷ್ಟೇ ಅಲ್ಲ, ಆಟವೂ ಬದಲಾಗಿದೆ

ಲೇಖನ ಪಾಠವಷ್ಟೇ ಅಲ್ಲ, ಆಟವೂ ಬದಲಾಗಿದೆ ಅಕ್ಷತಾ ರಾಜ್ ಪೆರ್ಲ         “ಆಂಟೀ ಸ್ವಲ್ಪ ನಿಲ್ಲಿ” ಗೇಟಿನ ಬಳಿಯೇ ಪುಟಾಣಿಯೊಬ್ಬಳು ನಿಲ್ಲಿಸಿದಾಗ “ಯಾಕೆ?” ಕೇಳಿದೆ. “ನಿಮ್ದು ಬಿಸಿ ನೋಡ್ಲಿಕ್ಕಿದೆ” ಮುದ್ದಾಗಿ ಹೇಳುತ್ತಾ ಪಟಾಕಿ ಸಿಡಿಸುವ ಪಿಸ್ತೂಲೊಂದನ್ನು ನನ್ನ ಹಣೆಗೆ ತೋರಿಸಿದಳು. “ಬಿಸಿ ಇದ್ರೆ ಏನ್ಮಾಡ್ತೀಯಾ?” ಮತ್ತೆ ಕೇಳಿದೆ. “ಅಲ್ಲಿಗೆ ಹಾಕ್ತೇನೆ” ಅವಳು ತೋರಿಸಿದ ದಿಕ್ಕಿನತ್ತ ನೋಡಿದೆ, ಆಗಷ್ಟೇ ತನ್ನ ಮರಿಗಳೊಡನೆ ಸೇರಿಕೊಂಡ ಕೋಳಿಗೂಡು ಕಂಡಿತು. ಮನದಲ್ಲೇ ನಗುತ್ತಾ “ಅದ್ಯಾಕೆ ಹಾಗೆ?ನನ್ನ ಅಲ್ಲೇ ಯಾಕೆ ಹಾಕ್ಬೇಕು?” ಗಲ್ಲ ಚಿವುಟಿ ಪ್ರಶ್ನಿಸಿದೆ. “ಟಿ.ವಿ, ಪೇಪರ್ ಎಲ್ಲ ಏನೂ ನೋಡಲ್ವಾ! ಅಮ್ಮ ಈ ಆಂಟಿಗೆ ಏನೂ ಗೊತ್ತಿಲ್ಲ” ಸರ್ಟಿಫಿಕೇಟ್ ಕೊಟ್ಟೇ ಬಿಟ್ಟಳು ಪೋರಿ. “ಹೌದು ಇದೆಲ್ಲ ಎಲ್ಲಿ ಕಲಿತೆ ನೀನು” ಪುನಹ ಕೇಳಿದಾಗ “ಈಗ ಎಲ್ಲಾ ಕಡೆ ಮಾಡ್ತಾರೆ ಹೀಗೆ, ನನ್ನ ಮನೆಗೂ ಬರಬೇಕಾದರೆ ಟೆಸ್ಟು ಮಾಡಿಸ್ಬೇಕು” ಎಂದವಳೇ ಪಿಸ್ತೂಲನ್ನು ಕೆಳಗಿಳಿಸಿ ಪಕ್ಕದಲ್ಲಿದ್ದ ಪುಟ್ಟತಮ್ಮನಲ್ಲಿ “ನಾಲ್ಕು” ಹೇಳಿದಾಗ ಆತ ಪುಟ್ಟ ಚೀಟಿಯಲ್ಲಿ ಬರೆದು ನನ್ನ ಕೈಗಿತ್ತು ಸಾಬೂನು ನೀರನ್ನು ಪಿಚಕಾರಿಯಲ್ಲಿ ಸಿಡಿಸಿ ಗೇಟು ತೆರೆದ. “ಹ್ಞೂಂ, ಈಗ ಹೋಗ್ಬಹುದಾ ಒಳಗೆ?” ಕೇಳಿದಾಗ “ಹೋಗ್ಬಹುದು, ಹತ್ತು ಬಂದ್ರೆ ಮಾತ್ರ ಅಲ್ಲಿಗೆ” ಕೋಳಿ ಗೂಡು ತೋರಿಸಿದಾಗ “ಓಹೋ ಇವರ ಲೆಕ್ಕದಲ್ಲಿ ನಾಲ್ಕಾದರೆ ನಾರ್ಮಲ್, ಹತ್ತಾದರೆ ಅಬ್‌ನಾರ್ಮಲ್” ನನಗೆ ನಾನೇ ಹೇಳಿಕೊಳ್ಳುತ್ತಿರುವಾಗ “ಬಂದ್ರಾ! ನಿಮ್ಮನ್ನೂ ಕಾಡಿಸಿದ್ವಾ ಈ ಮಕ್ಳು? ಈಗ ಇದೇ ಆಟ ಇವುಗಳಿಗೆ….ಯಾರು ಬಂದ್ರೂ ಥರ್ಮಲ್ ಸ್ಕ್ಯಾನ್, ಮೊನ್ನೆ ತೆಂಗಿನಕಾಯಿ ಕೊಯ್ಯೋಕೆ ಬಂದ ಶಂಕ್ರನನ್ನು ಕೋಳಿಗೂಡಿಗೆ ಹಾಕ್ತೇವೆ ಅಂಥ ಎಳ್ಕೊಂಡು ಹೋಗಿದ್ದಾರೆ, ಶಾಲೆ ಆದ್ರೂ ಶುರು ಆಗ್ಬಾರ್ದಾ!” ಗೆಳತಿ ಗೊಣಗುತ್ತಾ ನನ್ನನ್ನು ಒಳಕರೆದೊಯ್ದಾಗ ಪುಟಾಣಿಗಳೂ ಓಡುತ್ತಾ ಬಂದು ಸೋಫಾದಲ್ಲಿ ಕುಳಿತರು.           ಅದ್ಯಾಕೋ ಈ ಮಕ್ಕಳ ಆಟ ಕಂಡಾಗ ಬಾಲ್ಯ ನೆನಪಾಯಿತು. ಮನೆ ತುಂಬಾ ಮಕ್ಕಳಿದ್ದ ಕಾಲದಲ್ಲಿ ಹೀಗೆ ಇತ್ತಲ್ಲವೇ ನಮ್ಮ ಬಾಲ್ಯ? ಅಪ್ಪ ಅಮ್ಮನ ಕಣ್ಗಾವಲಿರಲಿಲ್ಲ, ‘ಅಲ್ಲಿ ಹೋದರೆ ಬೀಳುವೆ, ಇಲ್ಲಿ ಬಂದರೆ ಅಳುವೆ” ಎಂಬ ಮುಂಜಾಗರೂಕತೆಯಿರಲಿಲ್ಲ. ಮರ ಹತ್ತುವಾಗಲೂ, ನೀರಿನೊಳಗೆ ಬೀಳುವಾಗಲೂ ಸಿಕ್ಕ ಕೈಗಳು ನಮ್ಮ ಕೈಗಳಿಗಿಂತ ತುಸುವೇ ನೀಳವಾಗಿದ್ದವು ಅಷ್ಟೇ! ಅಡುಗೆಮನೆಯಿಂದ ಉಮೇದುಗೊಂಡು ಯಾವುದೋ ಮರದ ಕೆಳಗೆ ಹಾಕುತ್ತಿದ್ದ ಒಲೆಯಲ್ಲಿ ಅದೆಷ್ಟು ವಿಧದ ಅಡುಗೆಗಳು ತಯಾರಾಗುತ್ತಿದ್ದವೆಂದರೆ ಮುಂದೆ ಅಡುಗೆಯ ಬಗೆಗಿನ ಆಸಕ್ತಿಗೆ ಅದೂ ಒಂದು ಪಾಠವಾಗುವಷ್ಟು ! ಅಪ್ಪನೊಡನೆ ಹೋಗುತ್ತಿದ್ದ ಆ ದಿನಸಿ ಅಂಗಡಿಯಿಂದ ಪಡಸಾಲೆಯಲ್ಲಿ ತಲೆಯೆತ್ತಿದ ಗೂಡಂಗಡಿಗೆ ಎಣ್ಣೆಯ  ಹಳೆಯ ಶೀಶೆಯೋ ಅಥವಾ ತೂತು ಮಂಡಗೆಯೋ ಭರಣಿಯಾಗಿ ಅದ್ಯಾವಾಗಲೋ ಅಪ್ಪ ಕೊಟ್ಟ ಚಿಲ್ಲರೆಕಾಸಿನಲ್ಲಿ ಕೊಂಡ ಕಟ್ಲೀಸುತುಂಡು ಅದರಲ್ಲಿ ತುಂಬಿಕೊಳ್ಳುತ್ತಿತ್ತು. ಆಗಿನ ಕೆಲವು ಗೆಳೆಯರು ಇಂದು ಯಶಸ್ವಿ ವ್ಯಾಪಾರಿಗಳಾಗಲು ಈ ಪಡಸಾಲೆ ಗೂಡಂಗಡಿ ಬಹುಮುಖ್ಯ ಭೂಮಿಕೆ. ಸುರೇಶ ಮಾಸ್ತರರ ದಪ್ಪ ಕನ್ನಡಕ ಎಷ್ಟರ ಮಟ್ಟಿಗೆ ಆಕರ್ಷಿಸಿತ್ತೆಂದರೆ ಹುಣಸೇಮರದ ಕೆಳಗೆ ಅಮ್ಮನ ಹಳೆಯ ಸೀರೆ ಮದೆ ಕಟ್ಟಿ ಆಡುತ್ತಿದ್ದ ಶಾಲೆಯಾಟಕ್ಕೆ ಅಜ್ಜನ ದಪ್ಪ ಕನ್ನಡಕ ಮೇಸ್ತರಾಗಿ ನಿಂತ ದಿನಗಳು ಇಂದಿಗೂ ಟೀಚರ್ ಎಂದರೆ ಇಂತಹುದೇ ಗಾಂಭೀರ್ಯ ಬೇಕೆನ್ನುವಷ್ಟು ಛಾಪು ಮೂಡಿಸಿದ್ದು ಹೌದು. ಇವೆಲ್ಲವೂ ಒಳಾಂಗಣ ಆಟಗಳ ಪಟ್ಟಿಗೆ ಸೇರಿದರೆ ಹೊರಾಂಗಣ ಆಟಗಳ ರುಚಿಯೇ ಬೇರೆ ರೀತಿಯದ್ದು.  ಲಗೋರಿಯಾಟದಲ್ಲಿ ಬೀಳುತ್ತಿದ್ದ ಚೆಂಡಿನ ಪೆಟ್ಟು, ಕಣ್ಣಾಮುಚ್ಚಾಲೆಯಲ್ಲಿ ಅವಿತು ಕುಳಿತುಕೊಳ್ಳುತ್ತಿದ್ದ ಗಲ್ಲಿಯ ಮೂಲೆಮೂಲೆಗಳು, ಕಬ್ಬಡ್ಡಿ – ಖೋಖೋ, ಮುಟ್ಟಾಟಗಳಲ್ಲಿ  ಬಿದ್ದ ಗಾಯಕ್ಕೆ ಯಾವುದೋ ಕಾಡುಸೊಪ್ಪನ್ನು ಅರೆದು ಕಟ್ಟುತ್ತಿದ್ದ ಬ್ಯಾಂಡೇಜ್  ಇಂದು ನೆನಪಾದಾಗ ಅನ್ನಿಸುವುದಿದೆ ಬಹುಶಃ ಸ್ವರಕ್ಷಣಾ ಪದ್ಧತಿ ಅದಾಗಿದ್ದಿರಬಹುದೇನೋ ! ಚಕ್ರವೇ ಇರದ ಬಸ್ಸಿನ ಚಾಲಕ, ನಿರ್ವಾಹಕನಲ್ಲೂ ಬದುಕಿನ ಬಂಡಿಯನ್ನು ನಾನು ಮುನ್ನಡೆಸಬಲ್ಲೆಯೆಂಬ ಆತ್ಮವಿಶ್ವಾಸ ಇದ್ದಂತಿತ್ತು. ವಿಭಿನ್ನ ವ್ಯಕ್ತಿತ್ವಗಳನ್ನು ಆವಾಹಿಸಿಕೊಂಡು ಆಡುತ್ತಿದ್ದ ಆ ಆಟಗಳು ಆಟವಷ್ಟೇ ಆಗಿರದೆ ಪ್ರತಿನಿತ್ಯದ ಕಲಿಯುವಿಕೆಯ ಒಬ್ಬ ಪ್ರತಿನಿಧಿಯಾಗಿ ನಿಲ್ಲುತ್ತಿದ್ದ.  ಇಲ್ಲಿ ಕೌಟುಂಬಿಕ ಸಂಬಂಧದ ಜೊತೆಗೆ ಸಮಾಜದೊಳಗೆ ನಾವು ಹೇಗೆ ಗುರುತಿಸಿಕೊಳ್ಳಬೇಕು ಹಾಗೂ ಸಮಾಜದಲ್ಲಿ ನಾವೇನು? ಎಂಬ  ನೈತಿಕ ಪಾಠವೂ ಸಿಗುತ್ತಿತ್ತು. ಆಟದಿಂದ ದೂರ ಉಳಿದುಬಿಟ್ಟರೆ ‘ಬೆಕ್ಕಿನ ಬಿಡಾರ ಬೇರೆ” ಎಂದೂ ಆಟದಲ್ಲಿ ಮೂಗೇಟಾದರೆ ಅಥವಾ ಸೋತೆನೆಂದು ಅತ್ತರೆ ‘ಅಳುಮುಂಜಿ’ಯೆಂದು ಕರೆಯುತ್ತಾರೆಂಬ ಅಂಜಿಕೆಯ ಒಳಗೆ ಹೊಸ ನಾಯಕ ಹುಟ್ಟುತ್ತಿದ್ದುದು ನಮ್ಮ ಅರಿವಿಗೆ ಬಾರದ್ದು. ಅಂದು ಆಟವಾಡಲು ಸಮಯ ಬೇಕಾದಷ್ಟು ಇತ್ತೇ ಎಂಬುದನ್ನು ಪ್ರಶ್ನಿಸಿದರೆ ಸಿಗುವ ಉತ್ತರ ‘ಅಪ್ಪನೊಡನೆ ಗೊಬ್ಬರ ಹೊರಲು ಹೆಗಲು ಕೊಟ್ಟದ್ದು, ಅಮ್ಮ ಕಟ್ಟುತ್ತಿದ್ದ ಬೀಡಿಗೆ ಸುರುಟುತ್ತಿದ್ದ ನೂಲು ಅಥವಾ ಶಾಲೆಯ ಪುಸ್ತಕಗಳಿಗಾಗಿ ಮಾಡುತ್ತಿದ್ದ ಅಂದಿನ ಕಾಲದ ಪಾರ್ಟ್ಟೈಮ್ ಕೆಲಸಗಳು’. ಆದುದರಿಂದ ಅಂದು ಆಡುತ್ತಿದ್ದ ಯಾವುದೇ ಆಟಗಳಾದರೂ ಅದು ಸಮಯ ಕಳೆಯಲು ಆಡುವಂತಹದ್ದಾಗಿರಲಿಲ್ಲ; ಬದಲಾಗಿ  ದಣಿದ ದೇಹಗಳಿಗೆ ಚೈತನ್ಯ ತುಂಬುವಂತಹದ್ದಾಗಿತ್ತು. ಆ ಕಾರಣಕ್ಕಾಗಿಯೇ ಅಂದಿನ ಬಹುತೇಕ ಆಟಗಳು ಒಬ್ಬನೇ ಆಡುವ ಆಟವಾಗಿರದೆ ಅಲ್ಲೊಂದು ಸಂಘ ಅನಿವಾರ್ಯವಾಗಿತ್ತು. ಲಗೋರಿಯ ಪಲ್ಲೆಯನ್ನು ನುಣುಪಾಗಿಸುವವನು ಒಬ್ಬನಾದರೆ, ಸಮಗಾತ್ರದ ಕಲ್ಲುಗಳನ್ನು ಆಯ್ಕೆ ಮಾಡುವವನೊಬ್ಬ, ಗೆರೆಯೆಳೆದು ಕೋಟೆ ಕಟ್ಟುವವನೊಬ್ಬ, ಉರುಳಿಸುವವನು ಇನ್ನೊಬ್ಬ!  ಬಿದ್ದೆದ್ದರೂ, ಅತ್ತು ನಕ್ಕರೂ, ಗುದ್ದಾಡಿ ಬಡಿದಾಡಿಕೊಂಡರೂ ನಡೆದುದು ದೊಡ್ಡವರ ತನಕ ಹೋಗಲೇಬಾರದೆಂಬ ಅಲಿಖಿತ ಒಪ್ಪಂದದ ಸಣ್ಣವರ ಆಟದಲ್ಲಿ ನಾವು ನೀವೆಲ್ಲರೂ ‘ಮಕ್ಕಳ ಸಮಾಜ’ದ ಅಧಿನಾಯಕರಾಗಿದ್ದವರು. ಡಿಜಿಟಲ್ ಬಾಲ್ಯ                 ‘ಆಡಿ ಬಾ ನನ ಕಂದ ಅಂಗಾಲ ತೊಳೆದೇನ’ ಎಂಬಲ್ಲಿAದ ‘ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು’ ಎಂಬ ಕಾಲಘಟ್ಟಕ್ಕೆ ಬಂದು ನಿಂತಾಗ ಮನೆಯಿಂದ ಮಗು ಹೊರಗೆ ಕಾಲಿಟ್ಟರೆ ಕಾಲಿಗೆಲ್ಲಿ ಮಣ್ಣು ಮೆತ್ತಿಸಿಕೊಳ್ಳುವುದೋ ! ನೆರೆಹೊರೆಯ ಮಕ್ಕಳೊಂದಿಗೆ ಆಟವಾಡಿ ಬಿದ್ದರೆ ಮಗು ನೋವೆಲ್ಲಿ ತಡೆದುಕೊಂಡೀತು ಎಂಬ ಭಯ, ಜೊತೆಯಲ್ಲಿ ನಾವಿಲ್ಲದಿದ್ದರೆ ಮಗು ಹೇಗೆ ಸಂಭಾಳಿಸಿಕೊಂಡೀತು? ಎಂಬ ಅತಿಯಾದ ಜಾಗರೂಕತೆ ಕರೆದೊಯ್ದಿದ್ದು ಡಿಜಿಟಲ್ ಬಾಲ್ಯದತ್ತ. ಯಂತ್ರಯುಗಕ್ಕೆ ವಿಭಕ್ತ ಕುಟುಂಬ ಅನಿವಾರ್ಯ ಎಂಬ ಸ್ಥಿತಿಗೆ ತಲುಪಿದಾಗ ಅಜ್ಜನ ಕೋಲೆಲ್ಲಿ? ಅಜ್ಜಿಯ ಕತೆಯೆಲ್ಲಿ? ಅತ್ತಾಗೊಂದು ಕಾರ್ಟೂನ್, ನಕ್ಕಾಗೊಂದು ಚಾಕ್ಲೇಟು ಎಂಬ ದಿನಗಳಲ್ಲಿ ಮರಕೋತಿಯಾಟ, ಪೆಪ್ರ‍್ಮೆಂಟು ಸವಿ ಸವಕಲು ನಾಣ್ಯವಾಗಿದ್ದೂ ಹೌದು. ಅಪ್ಪ ಅಮ್ಮ ಒಬ್ಬ ಮಗು ಹೀಗಿರುವ ಕಾಲದಲ್ಲಿ ಒತ್ತಡಗಳ ನಡುವೆ ಚೌಕಾಬಾರ, ಚೆನ್ನೆಯ ಮಣೆಗಳಿಗೆ ಜಾಗವಿಲ್ಲದಾದಾಗ ಆ ಸ್ಥಳವನ್ನು ಆಕ್ರಮಿಸಿಕೊಂಡಿದ್ದೇ ವೀಡಿಯೋ ಗೇಮ್ಸ್ಗಳು. ಇದು ಎಲ್ಲಿಯ ತನಕ ತನ್ನ ವ್ಯಾಪ್ತಿಯನ್ನು ವಿಸ್ತರಿಸಿತ್ತೆಂದರೆ ಅಂತರ್ಜಾಲವೆಂಬ ಹೊಸಲೋಕ ತೆರೆದುಕೊಳ್ಳುವವರೆಗೆ, ನಂತರದ ಮಿಂಚಿನ ಬದಲಾವಣೆಗಳು ನಮ್ಮನ್ನು ಎಷ್ಟು ದೂರ ತಂದು ನಿಲ್ಲಿಸಿಬಿಟ್ಟಿತೆಂದರೆ ಮನೆಯವರಿಗೆ ಅಪರಿಚಿತರಾಗಿ ಲೋಕಕ್ಕೆ ಪರಿಚಿತರಾಗುವಷ್ಟು. ಇಷ್ಟು ರೂಪಾಂತರಗೊಂಡಾಗ ಆ ಆಟಗಳು ಉಳಿದೀತೇ? ದಣಿವಾರಿಸಿಕೊಳ್ಳಲು ಆಡುತ್ತಿದ್ದ ಆಟಗಳು ಮರೆಯಾಗಿ ಹೊತ್ತು ಕಳೆಯಲು ಬಹಳಷ್ಟು ಆಟಗಳು ಬಂದವು. ಸಮಯವಿಲ್ಲವೆಂದು ಹಲುಬುವ ಜೊತೆಗೆ ಆಟಕ್ಕೆಂದೇ ಸಮಯ ಮೀಸಲಿಡುವಂತಾಯಿತೆಂದರೆ ಅಭ್ಯಾಸ ಚಟವಾಗುವ ಎಲ್ಲಾ ಸೂಚನೆಗಳೂ ಸಿಕ್ಕಿಬಿಟ್ಟಿತ್ತು. ಆಟಗಳು ಗೇಮ್ಸ್ಗಳಾಯಿತು ಹಾಗೂ ಅದರದ್ದೇ ಜಗತ್ತಿನಲ್ಲಿ ಒಂದಿಷ್ಟು ಜಿದ್ದು ಮತ್ತು ಕ್ರೌರ್ಯಗಳು ಬುಸುಗುಡಲಾರಂಭಿಸಿ ಅವುಗಳಿಗೆ ಒಗ್ಗಿಹೋಗಿದ್ದೇವೆಂಬುದು ಸ್ಪಷ್ಟವಾಗಿದ್ದೇ ಕೆಲವೊಂದು ಗೇಮ್ಸ್ಗಳು ನಿಷೇಧಿಸಲ್ಪಟ್ಟಾಗ ಜಗತ್ತೇ ಮುಳುಗಿಹೋಯಿತೆನ್ನುವಷ್ಟು ಅತ್ತವರು ಸಾಕ್ಷಿಯಾದಾಗ, ಯಾಕೆ ಹೀಗೆ? ಅಂದಿನ ನಮ್ಮ ಬಾಲ್ಯದ ಆಟಗಳು ವಯಸ್ಸಿನ ಒಂದು ಹಂತಕ್ಕೆ ತಲುಪಿದಾಗ ತನ್ನಷ್ಟಕ್ಕೇ ನಿಂತು ಹೊಸತಕ್ಕೆ ಒಗ್ಗಿಕೊಳ್ಳುತ್ತಿತ್ತು ಮತ್ತು ಅವು ಬೇಕೇ ಬೇಕೆಂದು ಅನ್ನಿಸಿಯೇ ಇರಲಿಲ್ಲ. ಆದರೆ ಡಿಜಿಟಲ್ ಗೇಮ್ಸ್ಗಳು ಹಾಗಿವೆಯೇ! ‘ಹಳ್ಳಿಗೂ – ದಿಲ್ಲಿಗೂ ಎಲ್ಲಿಯ ದೂರ’ ಎನ್ನುವ ಜಮಾನದಲ್ಲಿ ಈ ಗೇಮ್‌ಗಳು ವಯಸ್ಸಿನ ಅಂತರವಿಲ್ಲದೆಯೇ ಪ್ರಿಯವಾಗುತ್ತಾ ಹೋಗುತ್ತದೆ ಬಿಟ್ಟಿರಲಾರದಷ್ಟು, ಅಲ್ಲಿ ತೆರೆದುಕೊಳ್ಳುವ ಲೋಕ ‘ಮಕ್ಕಳ ಸಮಾಜ’ ಎಂಬ ಕಾರಕವಾಗಿ ಅಲ್ಲ ‘ಚಟ’ ಎಂಬ ಮಾರಕವಾಗಿ ! ಮತ್ತೆ ಬರುತ್ತಿದೆ ಆಟಗಳು                        ಕಾಲ ಬಹಳಷ್ಟು ಪಾಠಗಳನ್ನು ಇತ್ತೀಚಿನಿಂದ ಕಲಿಸಲಾರಂಭಿಸಿದೆ. ನಮ್ಮ ಮನೆಯೊಳಗೆ ನಾವು ಬಂಧಿಯಾಗಿದ್ದಾಗ ಹಳೆಯದೆಲ್ಲವೂ ನೆನಪಾಗಲಾರಂಭಿಸಿದೆ. ಏನು ಪಡೆದುಕೊಂಡೆವು? ಏನನ್ನು ಕಳೆದುಕೊಂಡೆವು? ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದ್ದೇ ಮೊದಲ ಉತ್ತರವಾಗಿ ಸಿಕ್ಕಿದ್ದು ಅದೇ ಆಟಗಳು. ಒಂದು ಕಾಲಕ್ಕೆ ಮಕ್ಕಳನ್ನು ಓಲೈಸಲು ಮೊಬೈಲ್ ಕೊಟ್ಟು ಕುಳ್ಳಿರಿಸುತ್ತಿದ್ದೆವು, ನಂತರ ಮಕ್ಕಳು ಅದಕ್ಕೆ ಸಮ್ಮೋಹಿತರಾಗುತ್ತಾರೆಯೆಂದು ತಿಳಿದೊಡನೆ ಮೊಬೈಲಿಗೂ ಟೈಮ್ ಟೇಬಲ್ ಮಾಡಿಕೊಟ್ಟೆವು. ಆದರೆ ಕಾಲಚಕ್ರ ! ಇವೆಲ್ಲವನ್ನೂ ಗಮನಿಸಿಕೊಂಡು ಮುನ್ನಡೆಯುತ್ತಿದೆ. ಮೊಬೈಲ್ ಹಿಡಿದರೆ ಮಕ್ಕಳು ಕೆಡುತ್ತಾರೆಂಬ ಆತಂಕದಲ್ಲಿದ್ದವರಿಗೆ ಈ ಕೋವಿಡ್ ಮಹಾಮಾರಿ ಕೊಟ್ಟ ಬಹುದೊಡ್ಡ ಶಿಕ್ಷೆ ‘ಆನ್ಲೈನ್ ಕ್ಲಾಸ್‌ಗಳು’. ಅಪ್ಪ ಅಮ್ಮನ ಮೊಬೈಲಿಗಾಗಿ ಹಠ ಮಾಡುತ್ತಿದ್ದ ಮಕ್ಕಳು ಇಂದು ಅವುಗಳೊಡನೆ ಕಲಿಯಬೇಕಾಗಿದೆ. ‘ಸಿಗದಿರುವುದಕ್ಕೆ ಆಸೆ ಹೆಚ್ಚು ಮತ್ತು ಬಳಿಯಿರುವುದಕ್ಕೆ ಬೆಲೆ ಕಡಿಮೆ’ ಎಂಬ ಮಾತಿನಂತೆ ಮೊಬೈಲ್ ಯಾವಾಗ ಮಕ್ಕಳ ಪಾಠದ ಒಂದು ಸಾಧನವಾಗಿ ಬಳಕೆಯಾಗತೊಡಗಿತೋ ಅಂದಿನಿಂದ ಮಕ್ಕಳು ಮೊಬೈಲಿನಿಂದಾಚೆಯ ಹೊಸ ಬೆಳಕನ್ನು ಹಂಬಲಿಸತೊಡಗಿದ್ದಾರೆ. ದಿನವಿಡೀ ಹೈರಾಣಾಗಿಸುವ ಆನ್ಲೈನ್ ಕ್ಲಾಸುಗಳಿಂದ ದಣಿದ ಜೀವಗಳಿಗೆ ಇಂದು ಮತ್ತೆ ಆಹ್ಲಾದ ಬೇಕಾಗಿದೆ; ಆ ಕಾರಣಕ್ಕಾಗಿ ತಾನು ನೋಡಿದ ವಿಷಯಗಳ ಬಗ್ಗೆ, ಅನುಭವಿಸಿದ ಅನುಭವಗಳ ಮೇಲೆ ಆಟಗಳ ಸ್ಕ್ರಿಪ್ಟ್ ಬರೆಯಲಾರಂಭಿಸಿದ್ದಾರೆಯೆಂದರೆ ನಾವೂ ಮಕ್ಕಳ ಈ ಅಭಿರುಚಿಗೆ ಒತ್ತಾಸೆಯಾಗಿ ನಿಲ್ಲುವುದು ಕರ್ತವ್ಯವಾಗುತ್ತದೆ. ಮತ್ತೆ ಮರೆಯಾಗುತ್ತಿರುವ ಆ ಆಟಗಳ ದಿನಗಳು ಮರಳುತ್ತಿದೆಯೇನೋ! ಅನ್ನಿಸಿದ್ದು ಈ ಮಕ್ಕಳನ್ನು ನೋಡಿದಾಗ. ಮಕ್ಕಳಿಗೆ ಈಗ ಮೊಬೈಲ್ ಆಟದ ವಸ್ತುವಾಗಿರದೆಯೇ ಬ್ಯಾಗ್ ತುಂಬಿಸಿಕೊಳ್ಳುತ್ತಿದ್ದ ಪುಸ್ತಕಗಳಾಗಿವೆ. ಎಲ್ಲೋ ನೋಡಿದ ಆ ಥರ್ಮಲ್ ಸ್ಕ್ಕಾನ್ ಅದೆಷ್ಟು ಸೂಕ್ಷ್ಮ ವಾಗಿ ಗಮನಿಸಿ ಟೆಂಪರೇಚರ್ ಹೆಚ್ಚಾಗಿದ್ದರೆ ಕ್ವಾರೆಂಟೈನ್ ಅನುಸರಿಸಬೇಕೆಂಬುದನ್ನು ಕೋಳಿಗೂಡಿನ ಮೂಲಕ ಹೇಳಿದಾಗ ಈ ಬುದ್ಧಿ ದೊಡ್ಡವರಿಗೆ ಸರಿಯಾಗಿ ಬಂದಿದ್ದರೆ ರೋಗವೊಂದು ಹೀಗೆ ಆಕ್ರಮಿಸಿಕೊಳ್ಳುತ್ತಿರಲಿಲ್ಲ ಅಂದುಕೊಳ್ಳುತ್ತಿರುವಾಗಲೇ “ಆಂಟೀ ಕೊರೊನಾ ಯಾವಾಗ ಹೋಗುತ್ತೆ? ಮತ್ತೆ ಎಚ್ಚರಿಸಿದಳು ಪೋರಿ. “ಯಾಕೆ?” ಕೇಳಿದಾಗ “ಶಾಲೆಗೆ ಕೊರೊನಾ ಬಂದಿದೆ, ಹೊಸ ಚೀಲ, ಛತ್ರಿ ಯಾವುದೂ ಇಲ್ಲ ಪುಟ್ಟತಮ್ಮ ಹೇಳಿದ. “ನಿಮ್ಮ ಶಾಲೆಗೆ ಮಾತ್ರ ಅಲ್ಲಪ್ಪಾ, ಲೋಕಕ್ಕೇ ಬಂದಿದೆ” ನುಡಿದೆ. “ಅದು ಗೊತ್ತಿಲ್ಲ, ನಮ್ಮ ಶಾಲೆಯಿಂದ ಹೋದ್ರೆ ಸಾಕು, ಪೋಲಿಸ್ ಮಾಮನಲ್ಲಿ ಹೇಳ್ಬೇಕು ಕೊರೊನಾ ಅರೆಸ್ಟ್ ಮಾಡ್ಲಿಕ್ಕೆ” ತುಂಟಿ ಮಾತು ಮುಗಿಸುವಷ್ಟರಲ್ಲಿ ಮತ್ತೆ ಗೇಟಿನ ಸದ್ದು ಕೇಳಿ “ಬಾರೋ ಚೆಕ್ ಮಾಡ್ಬೇಕು” ತಮ್ಮನನ್ನು ಎಳ್ಕೊಂಡು ಹೋದವಳನ್ನು ಕಂಡಾಗ ‘ಏನು ಮುದವಿದೆ ಈ ಬಾಲ್ಯಕ್ಕೆ! ಎಲ್ಲವನ್ನೂ ಒಪ್ಪಿಕೊಳ್ಳುವಷ್ಟು ಮತ್ತು ಪ್ರಶ್ನಿಸುವಷ್ಟು” ಅಂದುಕೊಂಡೆ ನನ್ನೊಳಗೆ. **********************************************************

ಪಾಠವಷ್ಟೇ ಅಲ್ಲ, ಆಟವೂ ಬದಲಾಗಿದೆ Read Post »

ಕಾವ್ಯಯಾನ

ಹಾಯ್ಕುಗಳು

ಹಾಯ್ಕುಗಳು ಶರಶ್ಚಂದ್ರ ತಳ್ಳಿ ಕುಪ್ಪಿಗುಡ್ಡ ಗಹಗಹಿಸಿದೆನರನರವು ನಿತ್ರಾಣವೈಧ್ಯನ ಬಾಣ ಹಾಳಾದ ಗೋರಿಕೂಗಿ ಕರೆದಿದೆ ಕವಿಯಕಾವ್ಯ ಗೀಚಲು. ಗೋರಿಯ ಮೇಲೆಕೊನೆಯ ದಿನ-ಹಚ್ಚಿದಕಣ್ಣೀರ ದೀಪ. ಹಸಿದ ಹೊಟ್ಟೆಅವ್ವ-ಕಾವಿನ ಜೀವತುಂಬಿದೊಲವು. ನಿದ್ರೆಯಲೆದ್ದುರುದ್ರ ಲೀಲೆ ಕುಣಿತಕಾಂಚಣ ರಾಣಿ ಗಾಳಿಯ ಗುಟ್ಟುಬದುಕಿನಡಿ ಹೇಡಿಜೊಳ್ಳಿನ ಸುಳ್ಳು ಹೊನ್ನ ಬಳ್ಳಿಹೊತ್ತ ಹಾದಿಯ ಬುತ್ತಿಕನ್ನಡ ಪದ. ಒಂದೇ ‘ಎನಲು’ಗುಡಿ ಚರ್ಚು ಮಸೀದಿನಲಿವು ನಾಡು. ಎಳೆ ಹಸುಳೆತೊದಲು ನುಡಿದವುಮಾಗೀ-ಚಳಿಗೆ ಶಿಶಿರ ಋತುಭೂದೇವಿ-ಹೆಡಿಗೆಹುಗ್ಗಿ ಹೋಳಿಗೆ. ಮುಗುದೆ ‘ಒಲ್ಲೆ’ಮೂಕ ಮಾತಿನ ಎದಿಗೆನಲ್ಲನುರಿಗಾವು ಎಲೆಲೆ-ಬಾಳುಹಿತ ಮಿತಕೆ ಸೋಲುನೆಲೆ-ನೆರಳು ಕಾಗೆ ಗೂಗೆ ಬಾವ್ಲಿಬೇತಾಳ-ತಾಳಮೇಳರಾಜಕೀಯ. ಒಡಲೊಳಗಿದೆಕೊಳೆತನಾರು ಬೆಳೆಕಲ್ಮಶ ದೊರೆ ಒಳ-ಹೊರಗೆಕುರುಡು ಕುಂಟೆ ಬಿಲ್ಲೆಮೀರಿದ ಎಲ್ಲೆ. ಕಾವಿಯ ಚಿತ್ತಕಾಯ್ದ ಹಂಚಿನ ಮೇಲೆತತ್ವದ ಮಾತು. ಮನದ ಮಾಯೆಹಿಡಿಯೆ ಕಣ್ಣು ಕತ್ತಲುಉಲಿ-ಬದುಕು ಎಲೆಲೆ-ಕೀಟಜಗದ ತಲೆಕೆದರಿನಗದಿರಿಣುಕಿ ನವ-ತುಡುಗಎದೆಗೆ ಮುತ್ತಿಟ್ಟಬಾನಿಗೇರುತ ತೂತಾದ ಕೊಡದಾರಿಗೆ ನೀರ ಬಿತ್ತಿದಚಿತ್ತದ-ಗತ್ತು. ಬಣ್ಣದ ಬೆಕ್ಕುತುತ್ತನದು ನೆಕ್ಕಿತುಬಹು ವಿಲಾಸಿ. ನಾನೇ-ದುರುಳಯಾರು-ಯಾರನು ದೂರಲಿಪಾತಕೀ ಲೋಕ. ಜಿದ್ದಿನ ಪೀಳಿಗೆಬಕ್ಷಣಕೆ ಬಾಯ್ದೆರೆದರಣ ಹದ್ದುಗಳು. ****************************************************************

ಹಾಯ್ಕುಗಳು Read Post »

ಕಾವ್ಯಯಾನ

ಕುಸುಮಾಂಜಲಿ

ಕವಿತೆ ಕುಸುಮಾಂಜಲಿ ಅಭಿಜ್ಞಾ ಪಿ ಎಮ್ ಗೌಡ ಕುಸುಮವು ನಗುತಿರೆನಸುಕಿನ ವೇಳೆಯುಮುಸುಕನು ತೆರೆಯುತ ನಲಿಯುತಿದೆಕಸವರ ವರ್ಣದಿಜಸದಲಿ ಬೀಗುತರಸಮಯ ಸೃಷ್ಟಿಸಿ ಜೀಕುತಿದೆ|| ಕುಹಕವ ಕೇಳದೆಕಹಿಯನು ಮರೆಯುತಮಹಿಯಲಿ ಹಾಸವ ಚೆಲ್ಲುತಿದೆಸಹನೆಯ ದಳವದುಸಹಿಸುತ ಬಿಸಿಲನುಬಹಳಾಕರ್ಷಣೆ ಗಳಿಸುತಿದೆ|| ಶುದ್ಧತೆ ಭಾವವುಬದ್ದತೆಯಿಂದಲೆಸಿದ್ಧತೆ ಹೊಂದುತ ಪಸರಿಸಿದೆಮುದ್ದಿನ ಹೂವಿದುಮದ್ದಲು ಮುಂದಿದೆಸದ್ದನು ಮಾಡದೆ ನಗುತಲಿದೆ|| ಭ್ರಾಂತಿಯ ತೊಲಗಿಸಿಶಾಂತಿಯ ಹರಡುವಕಾಂತಿಯು ದೇವರ ಮುಡಿಯಲ್ಲಿಕಾಂತನು ಕೊಟ್ಟಿಹಕಾಂತೆಗೆ ಸುಮವನುಕಾಂತಿಯು ಗುಂದದೆ ಹೊಳೆಯುತಿದೆ|| ನೋಡುವ ಕಣ್ಣಿಗೆಮಾಡಿದೆ ಮೋಡಿಯಕಾಡುತ ನಿತ್ಯವು ಕಚಗುಳಿಯಬೇಡುವ ಮನಸಿಗೆಕೇಡನು ಬಯಸದೆಬಾಡುವ ನಿರ್ಮಲ ಕುಸುಮವಿದು|| **********************************************

ಕುಸುಮಾಂಜಲಿ Read Post »

You cannot copy content of this page

Scroll to Top