ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ದಾಟಿದೆವು ನಾವೂ… ಎರಡಿಪ್ಪತ್ತರ ವರುಷ

ದಾಟಿದೆವು ನಾವೂ… ಎರಡಿಪ್ಪತ್ತರ ವರುಷ ಅನಿತಾ ಪಿ. ಪೂಜಾರಿ ತಾಕೊಡೆ ಹಾಗೆಯೇ ಕಳೆದು ಹೋಗಿಲ್ಲ…!ಇದ್ದಲ್ಲಿ ಇರುವ ಹಾಗೆಯೇಇರುವಷ್ಟಕ್ಕೆ ಹೊಂದಿಸಿಕೊಳ್ಳುವ ನೆಲೆಯಲಿಚಿತ್ರ ವಿಚಿತ್ರದೊಳ ಸತ್ಯವನು ಅರುಹಿಜೀವ ಜೀವನದ ಒಳಮರ್ಮವನುಕಲಿಸಿಯೇ ತೀರಿತಲ್ಲಾ ಎರಡಿಪ್ಪತ್ತರ ಈ ವರುಷ ‘ಒಂದು ವರ್ಷದ ಲೆಕ್ಕಬಿಟ್ಟೇ ಬಿಡಬೇಕು’ ಎಂದವರೆಲ್ಲ ಕೇಳಿ…!ಹಾಗೆಯೇ ಕಳೆದು ಹೋಗಿಲ್ಲ ಈ ವರ್ಷಜಗದಗಲ ಗಣ್ಯ ನಗಣ್ಯಗಳ ಚಿತ್ರಪಟಗಳನುತಿರುಗಾ ಮುರುಗಾ ಮಾಡಿಹಿತ ಅಹಿತಗಳ ನಡುವೆ ತೂಗಿಸಿಮುಖ್ಯ ಅಧ್ಯಾಯವನೇ ತೆರೆದಿರಿಸಿತ್ತಲ್ಲಾ…! ಕಾಸು ಮೋಜಿನ ಪರಾಕಾಷ್ಠೆಯಲಿಕಳೆದು ಹೋದವರನೂಅಡ್ದ ದಾರಿಯನಪ್ಪಿಕೊಂಡು ಬೀದಿ ಬೀದಿ ಸುತ್ತುವವರನೂಅತಂತ್ರದ ಸುಳಿಯಲಿಟ್ಟು ಉಪ್ಪು ಖಾರ ಬೆರೆಸಿಎರಡಿಪ್ಪತ್ತರ ನಲುಗಿನ ಶ್ಲೇಷೆಯಲಿ ತಿಳಿ ಹೇಳದೆ ಬಿಡಲಿಲ್ಲ ಅರ್ಥ ಸ್ವಾರ್ಥಗಳು ಎಲ್ಲೆ ಮೀರದ ಹಾಗೆಇರುವಷ್ಟು ದಿನದ ಬದುಕಿನ ಮೌಲ್ಯವನುಅಳೆದಳೆದು ತೋರಿಸಿದ ರೀತಿಯ ಸಲುವಾಗಿಯೇಸೇರಿತೊಂದು ವರುಷ ಇತಿಹಾಸದ ಮುಖ್ಯ ಪುಟದೊಳಗೆ ದಾಟಿದೆವು ನಾವೂ…ಹೊಸ ಅರಿವು ಹೊಸದೊಂದು ತಿರುವಿನೊಡನೆಎರಡಿಪ್ಪತ್ತರ ವರುಷವನುಕಹಿಯನು ಮರೆತು ಸಿಹಿಯನು ನೆನೆದುಬರೀ ಇಂದಷ್ಟೆ ಅಲ್ಲ ಹೊಸದಾಗಬೇಕು ಪ್ರತಿ ನಾಳೆಯೂ **********

ದಾಟಿದೆವು ನಾವೂ… ಎರಡಿಪ್ಪತ್ತರ ವರುಷ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಅಶೋಕ ಬಾಬು ಟೇಕಲ್. ನೀ ಮಾಡಿದ ಒಲವಿನ ಗಾಯ ಮಾಗಿಸಿತು ಈ ಮಧು ಬಟ್ಟಲುದೂರ ತೊರೆದ ಭಾವಗಳಿಗೆ ವಿದಾಯ ಹೇಳಿಸಿತು ಈ ಮಧು ಬಟ್ಟಲು ಕ್ಷಣ ಕ್ಷಣದ ರೋದನವನ್ನು ಸಂತೈಸಿ ಲಾಲಿಸಿ ಪಾಲಿಸಿದೆಪ್ರತಿ ದಿನವೂ ಮಮತೆಯ ಮಡಿಲಾಗಿ ಆರಾಧಿಸಿತು ಈ ಮಧು ಬಟ್ಟಲು ಬಾಂದಳದಿ ಕೆಂಪ್ಹರಡುವ ರವಿಯೂ ನಾಚಿ ನಿಬ್ಬೆರಗಾಗುತಿದ್ದಇಳಿಸಂಜೆಗೂ ರಮಿಸಿ ಅಭ್ಯಂಜನ ಮಾಡಿಸಿತು ಈ ಮಧು ಬಟ್ಟಲು ಸುಯ್ ಗುಡುವ ಗಾಳಿಯೂ ಸದ್ದಡಗಿ ಪಲ್ಲಂಗದಲಿ ಮಲಗಿದೆನಿನ್ನ ಭಾವ ಭಂಗಿಯ ಕ್ಷಣ ಹೊತ್ತು ಮರೆಸಿತು ಈ ಮಧು ಬಟ್ಟಲು ಜರಿವ ಜಗಕೂ ಅರಿವಿದೆ ಅಬಾಟೇ ನೊಂದ ಜೀವವೆಂದುಮೋಹದ ಮದರಂಗಿಯ ಶಪಿಸಿತು ಈ ಮಧು ಬಟ್ಟಲು ************************************

ಗಜಲ್ Read Post »

ಇತರೆ

2020 ರ ಜೀವನ ಕಥನ

ಲೇಖನ 2020 ರ ಜೀವನ ಕಥನ ಸರಿತಾ ಮಧು ಕ್ರಿಕೆಟ್ ಆಟದಲ್ಲಿ 20- 20 ಆರಂಭವಾದಾಗ ಆಟದ ಗತಿಯೇ ಬದಲಾಗಿ  ಅಭಿಮಾನಿಗಳನ್ನು ರೋಮಾಂಚನಗೊಳಿಸಿತ್ತು. ನಮಗೂ ಹಾಗೆಯೇ ಸಿಹಿ ಕಹಿ ಗಳೆರಡೂ ಬೆರೆತು ಬಂದಿದೆ ಎನ್ನುವಷ್ಟರಲ್ಲಿ 2020 ಅನಿರೀಕ್ಷಿತ ತಿರುವು ನೀಡಿತ್ತಲ್ಲದೇ, ಬಹುದೊಡ್ಡ ಸವಾಲು ಹಾಕಿದ್ದು ಸುಳ್ಳಲ್ಲ. ಆರಂಭಿಕ ದಿನಗಳಲ್ಲಿ ಕೊರೊನಾ ಅಟ್ಟಹಾಸ ಬಹುತೇಕ ಜನರ ಪಾಲಿಗೆ ಕರಾಳವಾಗಿತ್ತು. ಅಕ್ಷರಶಃ ಜೀವನ ಸಂಕಷ್ಟಗಳನ್ನು ಇಂಚುಇಂಚಾಗಿ ಎದುರಿಸಬೇಕಾಯಿತು. ಪರದೇಶದ ಅಗೋಚರ ವೈರಾಣುವಿಗೆ ಇಡೀ ದೇಶದ ಆರ್ಥಿಕತೆ ತೊಡರುಗಾಲು ಹಾಕಿದ್ದು ನಮ್ಮ ಕಣ್ಣು ಕಟ್ಟಿದೆ. ಹಿಂದೆಯೂ ಪ್ರಾಕೃತಿಕ ವಿಕೋಪಗಳ ಸಂದರ್ಭಗಳಲ್ಲಿ ಧೈರ್ಯದಿಂದ ಮುನ್ನುಗ್ಗಿದ ಪ್ರತಿಯೊಬ್ಬರೂ ಕೊರೊನಾ ಅಟ್ಟಹಾಸಕ್ಕೆ ಹಿಮ್ಮೆಟ್ಟುವಂತಾಗಿತ್ತು. ಕಳೆದುಕೊಂಡ ಅಪ್ರತಿಮ ಚೇತನಗಳು ನಮ್ಮ ಕಣ್ಣಾಲಿಗಳ ತೋಯಿಸಿದ್ದರೂ , ಮನದ ಮುಂದಣ ಕತ್ತಲೆಗೆ ಹೊಸಬೆಳಕಿನ ಹಾದಿತೋರುತ ಮತ್ತೊಂದು ಘಟ್ಟದ ನಿರೀಕ್ಷೆ ಇದೆ.    ನಿರೀಕ್ಷೆಗಳೆಂದೂ ಧನಾತ್ಮಕವಾಗಿರಲಿ ಎನ್ನುವ ಧೋರಣೆ ನನ್ನದು. ಕಳೆದ ವರ್ಷ ಹಣವಂತರ ಪಾಲಿಗೆ ಹಾಗೂ ಇಲ್ಲದವರ ಪಾಲಿಗೂ ವಿಭಿನ್ನವಾಗಿತ್ತು.  ದೇಶದ ಲಾಕ್ಡೌನ್ ಸಂದರ್ಭದಲ್ಲಿ ಕುಟುಂಬದ ಸದಸ್ಯರು ಒಟ್ಟಿಗೆ ಇರುವ ಅವಕಾಶ ಒದಗಿಸಿದ್ದು ಮಾತ್ರವಲ್ಲ , ಉಳ್ಳವರಿಗಂತೂ ಬಯಸಿದ ಭೋಜನ ಸವಿಯುವ ಸುಸಂದರ್ಭ . ಯಾವಾಗಲೂ ಹಣದ ಹಿಂದೆ ಸವಾರಿ ಮಾಡಿದ್ದವರಿಗೆ ಒಂದು ಬ್ರೇಕ್ ಸಿಕ್ಕಂತಾಯಿತು. ಸಂತಸ ಪಟ್ಟರು, ಮಕ್ಕಳೊಟ್ಟಿಗೆ ಮನೆಯ ಎಲ್ಲ ಸದಸ್ಯರ ನಡುವೆ  ಮೌಲ್ಯಯುತ ಸಮಯ ಕಳೆದರು. ಅವರಿಗೆ ಜೀವನ ಕಷ್ಟವೆನಿಸಲಿಲ್ಲ ಕಾರಣ ಸಂಪಾದಿಸಿದ ಹಣವಿತ್ತು .ಆದರೂ ಕೊರೋನಾ ಅವರಿಗೂ ಕಾಡದೇ ಇರಲಿಲ್ಲ. ಹಣದಿಂದ ಜೀವ ಉಳಿಸಲು ಸಾಧ್ಯವಾಗಲಿಲ್ಲ ಎಂಬ ಅರಿವು ನೀಡಿತ್ತು. ಆದರೆ ದಿನದ ದುಡಿಮೆ ನಂಬಿದ ಅದೆಷ್ಟೋ ಕುಟುಂಬಗಳ ಪಾಡು ಹೇಳತೀರದು. ನಗರಗಳಿಗೆ ವಲಸೆ ಹೋದ ಸಾವಿರಾರು ಕುಟುಂಬಗಳು ನೂರಾರು ಮೈಲುಗಳು ನಡೆದು ಸ್ವಂತ ಊರುಗಳಿಗೆ ಹೊರಟರು. ನಗರದಲ್ಲಿ ಕೆಲಸವೂ ಇಲ್ಲ , ಊಟವೂ ಇಲ್ಲ. ಊರನ್ನಾದರೂ ತಲುಪಿದರೆ ಎಲ್ಲಾ ಸರಿಯಾಗಿಬಿಡಬಹುದು ಎಂಬ ನಿರೀಕ್ಷೆ ಧನಾತ್ಮಕವಾಗಿಯೇ ಇತ್ತು. ಆದರೆ ನಮ್ಮ ಹಳ್ಳಿಯ ಮಂದಿ ಇದಕ್ಕೆ ಸುತರಾಂ ಒಪ್ಪಲಿಲ್ಲ. ಬೇರೆಬೇರೆ ನಗರಗಳಿಂದ ಬಂದವರಿಗೆ ಊರೊಳಗೆ ನಿರ್ಬಂಧ ಹೇರಲಾಗಿತ್ತು. ಊರಿನ ಪ್ರವೇಶ ದ್ವಾರದಲ್ಲಿ ಮುಳ್ಳು ಬೇಲಿ ಹಾಕಿ ಕಾವಲು ನಿಂತರು. ಅತ್ತ ನಗರದಿಂದಲೂ ಇತ್ತ ತಮ್ಮ ಹುಟ್ಟೂರಿನಿಂದಲೂ ನಿರ್ಲಕ್ಷಿತರಾಗಿದ್ದು ಯಕಃಶ್ಚಿತ್ ಒಂದು ವೈರಾಣುವಿನ ಭಯಕ್ಕೆ.     ಮನುಷ್ಯ ಸಹಜವಾಗಿ ಜೀವಸಂಕುಲದಲ್ಲಿ ಬುದ್ದಿವಂತ ಪ್ರಾಣಿ. ಸಹಸ್ರಾರು ವರ್ಷಗಳ ಕಾಲ ಪ್ರಕೃತಿಯ ಮೇಲಿನ ದೌರ್ಜನ್ಯಕ್ಕೆ ಪ್ರತೀಕಾರದಂತೆ ಕಂಡಿದ್ದು ಈ ವರ್ಷ. ಮನುಷ್ಯನ ಅಟ್ಟಹಾಸವನ್ನು ಮೆಟ್ಟಿನಿಂತು ಸಹಜ ಜೀವನ ಶೈಲಿಗೆ ಸರಿಯುವಂತೆ ಮಾಡಿದ್ದು ಈ ವರ್ಷ. ಕೆಲಸ ಕಳೆದುಕೊಂಡು ಮಾನಸಿಕ ಒತ್ತಡಕ್ಕೆ ಒಳಗಾದ ಜನರೇ ನಮ್ಮಲ್ಲಿ ಹೆಚ್ಚು. ನಿಧಾನವಾಗಿ ಸಹಜ ಸ್ಥಿತಿಗೆ ಮರಳಿದ ಜನತೆಗೆ ಮತ್ತೊಮ್ಮೆ ಲಾಕ್ ಡೌನ್ ಎಂದರೆ ಕಂಗೆಡುವಂತೆ ಮಾಡುವುದು. ಮಾರ್ಚ್ ತಿಂಗಳಲ್ಲಿ ಶಾಲೆಯಿಂದ ಹೊರಗೆ ಬಂದ ಮಕ್ಕಳು ಆನ್ಲೈನ್ ತರಗತಿಗೆ ಸೇರಲು ಪರದಾಡುವಂತಾಯಿತು. ಪರೀಕ್ಷೆ ಬರೆಯದೇ ಪಾಸ್ ಆಗಿದ್ದು ವಿದ್ಯಾರ್ಥಿಗಳಿಗೆ ಸಂತಸ ನೀಡಿತ್ತು. ನಗರದ ಮಕ್ಕಳಿಗೆ ಇರುವ ಅನುಕೂಲ ಗ್ರಾಮೀಣ ಮಕ್ಕಳಿಗೆ ಇಲ್ಲದ ಕಾರಣ ಆನ್ಲೈನ್ ತರಗತಿಗಳು ಯಶಸ್ವಿ ಯಾಗಲಿಲ್ಲ. ಅನೇಕ ಏಳು ಬೀಳುಗಳ ನಡುವೆ ಶಿಕ್ಷಣ ವ್ಯವಸ್ಥೆ ನಡೆದದ್ದು ಈ ವರ್ಷದ ಕೊಡುಗೆ. ಅನೇಕ ಸವಾಲುಗಳ ನಡುವೆಯೂ SSLC ಪರೀಕ್ಷೆ ನಡೆಸಿದ್ದು ಮೆಚ್ಚುಗೆ ಪಡೆಯಿತು.  ಆರೋಗ್ಯ ಇಲಾಖೆ, ಪೋಲೀಸ್ ಇಲಾಖೆ, ಸ್ಚಚ್ಚತಾ ಸಿಬ್ಬಂದಿ ಹೀಗೆ  ಅನೇಕ ಇಲಾಖೆಯವರು ಕೊರೊನಾ ವಾರಿಯರ್ಸ್‌ ಆಗಿ ಸೇವೆ ಸಲ್ಲಿಸಿದರು , ಇಂಥ ಅಮೂಲ್ಯ ವ್ಯಕ್ತಿತ್ವಗಳಿಗೆ ಈ ಮೂಲಕ ನಮ್ಮೆಲ್ಲರ ಹೆಮ್ಮೆಯ ನಮನಗಳು. ಹೋರಾಟದ ಬದುಕಿಗೆ ಯಾರೂ ಜಗ್ಗಲಿಲ್ಲ. ಆದರೂ ಸಾವಿನ ಹೊಡೆತ ಜರ್ಜರಿತಗೊಳಿಸಿದ್ದು ನಮ್ಮ ಜನರನ್ನು. ಆತ್ಮೀಯರನ್ನು ಕಳೆದುಕೊಂಡು ಸಮೀಪಕ್ಕೆ ಹೋಗಲಾರದ, ಅಂತ್ಯಕ್ರಿಯೆ ಮಾಡಲೂ ಸಂಕಷ್ಟ ತಂದ ಪರಿಸ್ಥಿತಿ ನಿಜಕ್ಕೂ ಮನಸ್ಸಿಗೆ ಸಂಕಟವನ್ನು ಉಂಟುಮಾಡಿದರೆ ಅದು ಅನಿವಾರ್ಯವಾಗಿತ್ತು. ಕುಟುಂಬದವರನ್ನು ಕಳೆದುಕೊಂಡು ನರಳಿದವರಿಗೆ ಈ ಮೂಲಕ ನಮ್ಮೆಲ್ಲರ ಸಾಂತ್ವನ ನೀಡುವ ಅವಕಾಶವಿದು. ನೋವುಗಳುಂಡರೂ ಒಂದೆಡೆ ಸ್ಥಗಿತಗೊಳ್ಳುವ ಬದುಕು ನಮ್ಮದಲ್ಲ. ವರುಷ ಕಳೆದು ಮತ್ತೊಂದು ವರುಷ ಸಿದ್ಧವಾಗಿದೆ. ಕ್ಯಾಲೆಂಡರ್ ಬದಲಾಯಿಸುವ ಮುನ್ನ ಹಿನ್ನೋಟಕ್ಕೆ ಅವಕಾಶ ಇದೆ. ಸಿಂಹ ಕೂಡ ತಾನು ನಡೆದ ದಾರಿಯನ್ನೊಮ್ಮೆ ಅವಲೋಕಿಸುವಂತೆ ನಾವೆಲ್ಲರೂ ಕಳೆದ ಪ್ರತಿಯೊಂದು ಕ್ಷಣಗಳನ್ನು ಮೆಲುಕು ಹಾಕೋಣ.    ಸಂದಿಗ್ಧ ಪರಿಸ್ಥಿತಿಯಲ್ಲಿ ಸಹಾಯ ಮಾಡಿದ ಎಲ್ಲರಿಗೂ ಧನ್ಯತಾ ಭಾವದಿಂದ ಸ್ಮರಿಸುವ, ಅಗಲಿದ ಎಲ್ಲಾ ಚೇತನಗಳಿಗೂ ನಮನ ಸಲ್ಲಿಸುವ ಮೂಲಕ ಹೊಸ ಹೆಜ್ಜೆ ಇಡೋಣ. ಹಿಂದೂ ದೇಶವಾದ ನಮಗೆ ಇದು ಕೇವಲ ಕ್ಯಾಲೆಂಡರ್ ಹೊಸವರ್ಷ ಎಂಬುದು ನನ್ನ ಭಾವ. ಆಡಳಿತ ವ್ಯವಸ್ಥೆ ಒಪ್ಪಿಕೊಂಡ ಈ ಕ್ರಮಕ್ಕೆ ಯಾರೂ ಹೊರತಲ್ಲ. ಕೇವಲ ದಿನಗಳೆರಡು ಬಾಕಿಯಿದೆ 2021 ರ ಆರಂಭಕ್ಕೆ. ಕಳೆದ ಕಹಿ ಕ್ಷಣಗಳ ಮರೆತು ಹೊಸ ಬದುಕಿಗೆ ಸ್ವಾಗತ ಬಯಸುವ. ನಿರೀಕ್ಷೆ ಸದಾ ಒಳ್ಳೆಯದೇ ಇರಲಿ.

2020 ರ ಜೀವನ ಕಥನ Read Post »

ಕಾವ್ಯಯಾನ

ಪಯಣ

ಕವಿತೆ ಪಯಣ ಅಕ್ಷತಾ‌ ಜಗದೀಶ ಕಾನನದ ಒಡಲಾಳದಲ್ಲಿ ಹುಟ್ಟಿಕಲ್ಲು ಮಣ್ಣುಗಳ ದಾಟಿಕೆಂಪಾಗಿ ತಂಪಾಗಿ…ಕೊನೆಗೆ ಎಲ್ಲರೂ ಬಯಸುವಜಲವಾಗಿ ಹರಿದು..ಸಾಗುವ ದಾರಿಯುದ್ದಕ್ಕೂಹೊಲ ಗದ್ದೆಗಳಿಗೆ ನೀರುಣಿಸಿಮನುಕುಲದ ಮನತಣಿಸಿಜಲಧಾರೆಯಾಗಿ ಧುಮುಕಿ..ಅಂಧಕಾರಕ್ಕೆ ಬೆಳಕಾಗಿಜೀವರಾಶಿಗೆ ಉಸಿರಾಗಿಭೂಮಿ ತಾಯಿಯ ಹಸಿರುಡುಗೆಯಾಗಿಹರಿವ ಓ ನದಿಯೇ…ಏನೆಂದು ಹೆಸರಿಸಲಿ ನಾ ನಿನಗೆಗಂಗೆ, ತುಂಗಾ,ಕಾವೇರಿ, ಶರಾವತಿಸ್ವಾರ್ಥವಿಲ್ಲದ ಓ ಜಲರಾಶಿಕೂಡುವಿರಿ ಆಳವಾದ ಸಾಗರಕೆಅಗಾಧ ಜಲರಾಶಿಯ ಮಿಲನಕೆ..ನಿಸ್ವಾರ್ಥದೊಂದಿಗೆ ಓ ತೊರೆಯೆನಿನ್ನ ಜನನ..ಸಾರ್ಥಕತೆಯೊಂದಿಗೆ ಸಾಗಿತುನದಿಯಾಗಿ ನಿನ್ನ ಪಯಣ…

ಪಯಣ Read Post »

ಕಾವ್ಯಯಾನ

ಜೋಡಿ ಹೃದಯಗಳು

ಕವಿತೆ ಜೋಡಿ ಹೃದಯಗಳು ತೇಜಾವತಿ ಹೆಚ್. ಡಿ. ಆದಿಯಿಂದ ಅಂತ್ಯದವರೆಗೂಎಂದೆಂದಿಗೂ ಸಂಧಿಸದಸಮನಾನಂತರ ರೇಖೆಗಳು ಅವು ಪರಸ್ಪರ ಜೋಡಿಜೀವಗಳಂತೆಜೀವಿಸುವವು ಅನಂತದವರೆಗೆ ಒಂದನ್ನಗಲಿ ಮತ್ತೊಂದುಅರೆಘಳಿಗೆಯೂ ಬಿಟ್ಟಿರದ ಬಂಧ ಹೆಗಲಿಗೆ ಹೆಗಲು ಕೊಟ್ಟು ಬದುಕ ರಥ ಎಳೆಯುವ ಜೋಡೆತ್ತುಗಳು ಅವು ಸಮಭಾರ ಹೊತ್ತು ಸಹಜೀವನ ನಡೆಸುವಸರಳ ರೇಖೆಗಳು ಸಾಗುವ ಪಥದಲ್ಲಿ ನೂರು ಅಪಘಾತ ಸಂಭವಿಸಿದರೂನಂಬಿಕೆಯ ಹೊರೆತುಮತ್ಯಾವ ಬೇಡಿಕೆಗಳನ್ನೂನಿರೀಕ್ಷಿಸದ ನಿಸ್ವಾರ್ಥ ಜೀವಗಳು ಬೇಕಂತಲೇ ತೂರಿಬರುವ ನೆರೆಗಳೆದುರುಕೇವಲ ಆತ್ಮಶಕ್ತಿಯಿಂದಲೇ ಎದುರು ಈಜುವ ನಕ್ಷತ್ರಮೀನುಗಳು ಗಟಾರದೊಳಗಿನ ರಾಡಿಯೆಲ್ಲಾ ಮೇಲೇರಿಶನಿ ಬೇತಾಳನಂತೆ ಹೆಗಲಿಗೇರಿದರುಮೈಡೊದವಿ ಚಿಮ್ಮವ ಸಿಹಿಬುಗ್ಗೆಗಳು..ಉಸಿರುಗಟ್ಟುವ ಕೊನೆಯ ಘಳಿಗೆಯಲ್ಲೂತುಟಿ ಎರಡಾಗದ ಸ್ಥಿರ ನಾಮಗಳು.. ಕಾರ್ಮೋಡಗಳ ನಡುವೆ ಬಿಳ್ಮಿಂಚು ಹುಡುಕುತ್ತಭೂರಮೆಯ ಮಡಿಲ ಸೇರಲು ತವಕಿಸುವ ಅಮೃತ ಬಿಂದುಗಳು.. ಕೋಟಿ ಕೋಟಿ ಅವಮಾನಗಳ ಕುಲುಮೆಯಲ್ಲಿ ಕುದ್ದು ಕುದ್ದು ಪರಿಶುದ್ಧ ಬದುಕು ಕಟ್ಟಿಕೊಂಡ ಮಿಸುನಿಗಳವು.. ಅಂದಿಗೂ ಇಂದಿಗೂ ಮೈದೋರದ ವ್ಯತ್ಯಾಸ..ಆತ್ಮಗಳ ಸ್ಪರ್ಶಸಲಾಗದ ಸವಾಲುಗಳೆದುರುಶಿಲೆಗಳ ಕಡೆದಷ್ಟು ಶ್ರೇಷ್ಠತೆಗೆ ಹೆಸರಾದ ಮೂರ್ತಿಗಳು.. ಅದೇ ಸೌಮ್ಯತೆ ಅದೇ ಮಂದಹಾಸಅದೇ ಕವಿಮನ ಅದೇ ಜೀವನ..ಕಡೆಮೊದಲಿಲ್ಲದ ಹಗಲುರಾತ್ರಿಗಳು ದೂರಕ್ಕೆ ಕಣ್ಣು ಹಾಯಿಸಿದಷ್ಟು ಒಂದುಗೂಡುವರೈಲು ಹಳಿಗಳು ಅವು..ನಿತ್ಯ ನಿರಂತರವಾಗಿ ಜೊತೆಯಲ್ಲೇ ಸಾಗುವವು ಸಮಭಾರ ಹೊತ್ತು ಸಹಕಾರ ನೀಡಲು… *************************************

ಜೋಡಿ ಹೃದಯಗಳು Read Post »

ಇತರೆ, ಜೀವನ

ತೆರೆ ಮರೆಯಾಗಲಿರುವ ನತದೃಷ್ಟ ೨೦೨೦

ತೆರೆ ಮರೆಯಾಗಲಿರುವ ನತದೃಷ್ಟ ೨೦೨೦ ಚಂದಕಚರ್ಲ ರಮೇಶ ಬಾಬು ಒಂದು ವರ್ಷ ಸರಿದು ಹೋಗುವಾಗ ಅದು ಕೊನೆಗೆ ಕೊಟ್ಟ ಬವಣೆಯನ್ನು ಕಂಡು ವರ್ಷವನ್ನೇ ದೂರಲಾಗುವುದಿಲ್ಲ. ಎಂದಿನ ಹೊಸ ವರ್ಷದಂತೆ ೨೦೨೦ ರನ್ನು ಸಹ ನಾವೆಲ್ಲ ಸಂಭ್ರಮದಿಂದಲೇ ಸ್ವಾಗತಿಸಿದೆವು. ನಮ್ಮ ಕನಸುಗಳನ್ನು ನನಸಾಗಿಸಲು ಈ ವರ್ಷ ತನ್ನ ಪಾತ್ರ ಪೋಷಿಸುತ್ತದೆ ಎಂಬ ಭರವಸೆಯ ಆಶೆ ಹೊತ್ತೆವು. ಮೊದಲೆರಡು ತಿಂಗಳೂ ಯಾವುದಕ್ಕೂ ಕೊರತೆಯೆನಿಸಲಿಲ್ಲ. ಹಬ್ಬಗಳೂ, ಹರಿದಿನಗಳೂ, ಮದುವೆಗಳೂ ಎಲ್ಲ ಎಲ್ಲರೂ ಅಂದುಕೊಂಡಂತೆ ನಡೆದವು. ಅಷ್ಟರಲ್ಲೇ ಚೀನಾಕ್ಕೆ ಕೊರೋನಾದ ಸೋಂಕು ಕಾಲಿಟ್ಟಿತ್ತು. ಅಲ್ಲಿ ಸಾವುಗಳು ಸಂಭವಿಸಲಾರಂಭಿಸಿದ್ದವು. ಅವರು ತಮ್ಮನ್ನು ಇದರ ಬಗ್ಗೆ ಆಗಲೇ ಎಚ್ಚರಿಸಿಲಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ದೂರಿದ್ದು ಈ ಸೂಕ್ಷ್ಮಾಣು ಇತರೆ ದೇಶಗಳಲ್ಲೂ ತನ್ನ ಕರಾಳ ಹಸ್ತಗಳನ್ನು ಚಾಚಿದಾಗಲೇ. ನಮ್ಮ ದೇಶಕ್ಕೂ ಮಾರ್ಚ್ ತಿಂಗಳಲ್ಲಿ ಕಾಲಿಟ್ಟ ಈ ಕರೋನಾ ( ನಂತರ ಇದಕ್ಕೊಂದು ಕೋವಿಡ್-೧೯ ಅಂತ ನಾಮಕರಣ ಮಾಡಲಾಯಿತು ಅನ್ನಿ) ತನ್ನ ಪ್ರತಾಪ ತೋರಿಸಲಾರಂಭಿಸಿತ್ತು.  ಆ ಹೊತ್ತಿಗಾಗಲೇ ಇಟಲೀ, ಸ್ಪೆಯಿನ್, ಬ್ರಿಟನ್. ಫ್ರಾನ್ಸ್ ದೇಶಗಳಲ್ಲಿ ಸಾವಿರಾರು ಜನಗಳು ಸಾಯಲಾರಂಭಿಸಿದ್ದರು. ಅಮೆರಿಕಾ ಸಹ ಹಿಂದುಳಿದಿದ್ದಿಲ್ಲ. ಚೈನಾದ ಜೊತೆ ಉಳಿದ ದೇಶಗಳು ಇದರ ಬಗ್ಗೆ ಅಧ್ಯಯನ, ಚಿಕಿತ್ಸೆಗೆ ಬೇಕಾದ ಪ್ರಯೋಗ ಆರಂಭಿಸಿದವು. ವಿಶ್ವ ಆರೋಗ್ಯ ಸಂಸ್ಥೆ ಮಾರ್ಗದರ್ಶನದಂತೆ ಕೈಗಳನ್ನು ಬಾರಿಬಾರಿಗೂ ಶುಚಿಮಾಡಿಕೊಳ್ಳುವುದು, ಮುಖಕ್ಕೆ ಗವಸು ಹಾಕಿಕೊಳ್ಳುವುದು, ಸಾಮಾಜಿಕ ದೂರದ ಪಾಲನೆ ಮಾಡುವುದು ನಮ್ಮ ದೇಶದಲ್ಲೂ ಆರಂಭಮಾಡುತ್ತ ಮಾರ್ಚ್ ೨೪ ರಿಂದ ಮೂರು ವಾರಗಳ ಕಾಲ ಸಂಪೂರ್ಣ ಲಾಕ್ ಡೌನ್ ಘೋಷಿಸಲಾಯಿತು. ಅದನ್ನು ಲೆಕ್ಕಿಸದೇ ಹೊರಬಂದವರನ್ನು ಥಳಿಸಿ ಒಳಗೆ ಅಟ್ಟಲಾಯಿತು. ಕಚೇರಿಗಳಿಗೆ ಹೋಗುವ ಗಂಡಂದಿರು, ಶಾಲೆಗಳಿಗೆ ಹೋಗುವ ಮಕ್ಕಳು ಮನೆಯಲ್ಲೇ ಇರುತ್ತಿದ್ದು, ಅವರಿಗೆ ಹೊತ್ತು ಹೊತ್ತಿಗೂ ತಿಂಡಿ, ಊಟ ಒದಗಿಸುವುದಕ್ಕೆ ಮನೆ ಹೆಂಗಸರು ಹೆಣಗಾಡಿದರು. ಈ ಲಾಕ್ ಡೌನ್ ಸಮಯದಲ್ಲಿ ತಮಗೆ ಬೇಕಾದ ಎಣ್ಣೆ ಸಿಗದೇ ಮದ್ಯಪ್ರೇಮಿಗಳು ತಲೆಕೆಟ್ಟು ಆಡಿದ್ದು ನೆನೆಯಬಹುದಾಗಿದೆ. ಮೂರುವಾರ ಹೇಗೋ ಹಲ್ಲು ಕಚ್ಚಿ ತಡೆದುಕೊಂಡರಾಯಿತು ಎನ್ನುತ್ತ ಜನರು ಸಹ ಹುರುಪಿನಲ್ಲಿ ಚಪ್ಪಾಳೆ ತಟ್ಟಿ, ದೀಪ ಹಚ್ಚಿ ಮುಗಿಯುವುದಕ್ಕಾಗಿ ಕಾದರು. ಹೊಸ ದಿರಿಸುಗಳಂತೆ ಮುಖಕ್ಕೆ ಕವಚಿಕೊಳ್ಳುವ ಮುಸುಕಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚುಟುಕುಗಳು ಓಡಾಡಿದವು, ಹೊಸ ಕವಿತೆಗಳು ಹಾರಾಡಿದವು. ಪರಿಸರ ಮಾಲಿನ್ಯ ಕಮ್ಮಿಯಾಗಿ ವಾತಾವರಣ ತಿಳಿಯಾಯಿತು. ಎಂದೂ ಕೇಳದ ಕೋಗಿಲೆಯ ಇಂಚರ ಸತತವಾಗ ಕೇಳಿತು. ಕೆಲವರಿಗೆ ಅಲ್ಲಿಯವರೆಗೆ ಕಾಣದ ಹಿಮಾಲಯಗಳು  ಕಂಡವು. ತಾಂತ್ರಿಕತೆ ಮೈಗೂಡಿಸಿಕೊಂಡ ಜನರ ಈ ಉಸಿರುಗಟ್ಟುವ ಸನ್ನಿವೇಶದಲ್ಲೂ ತಮ್ಮದೇ ಆದ ಹೊಸ ಆಯಾಮಗಳನ್ನು ಹುಡಿಕಿದರು. ಝೂಮ್, ವೆಬ್ ನಾರ್, ಗೂಗಲ್ ನವರ ಆನ್ ಲೈನ್ ಸಮಾವೇಶಗಳು ಶುರುವಾದವು. ಸಮಾಚಾರ ತಂತ್ರದ ಸಂಸ್ಥೆಗಳು ಉದ್ಯೋಗಿಗಳಿಂದ ಮನೆಯಿಂದಲೇ ಕೆಲಸ ಮಾಡಿಸುತ್ತ ಅವರ ಕೆಲಸ ಕೆಡದಂತೆ ನೋಡಿಕೊಂಡರು. ಪಾಪ, ದಿನಗೂಲಿ ಕೆಲಸಗಾರರು, ಅಸಂಘಟಿತ ಕಾರ್ಮಿಕರು ತಮ್ಮ ತುತ್ತಿಗೆ ಒದ್ದಾಡಿದರು. ತಮ್ಮ ಮನೆಗಳಿಗೆ ಬೇಕಾದ ಸಂಚಾರದ ವ್ಯವಸ್ಥ ಕಾಣದೇ ಕಾಲ್ನಡಿಗೆಯಲ್ಲೇ ಮನೆಗಳಿಗೆ ತೆರಳುತ್ತಾ ಬವಣೆ ಅನುಭವಿಸಿದರು. ಅವರಿಗೆ ನೆರವಾಗುವ ಕೆಲ ಉದಾರಿ ಮನಗಳು ಹೊರಬಂದವು. ಕೆಲವರು ಮನೆಗಳಿಗೆ ಹೊರಟಿರುವ  ಈ ತರದ ಬಡಪಾಯಿಗಳಿಗೆ ಅನ್ನ, ವಸ್ತ್ರ, ವಸತಿ ನೋಡಿಕೊಂಡರ. ಕೆಲ ಸಂಸ್ಥೆಗಳು ತಮ್ಮ ಊರಿನಲ್ಲಿಯ ಬಡವರಿಗೆ ದಿನಸಿಯನ್ನು ಪೂರೈಸಿದರು. ಕರೋನಾ ಈ ತರದ ದಾನಶೀಲ ಗುಣವನ್ನು ಪ್ರಚೋದಿಸಿತ್ತು. ಝೂಮ್, ವೆಬ್ ನಾರ್, ಗೂಗಲ್ ನವರ ಆನ್ ಲೈನ್ ವೇದಿಕೆಗಳನ್ನು ಕಲಾಕಾರರು ಸಮರ್ಥವಾಗಿ ತಮ್ಮದಾಗಿಸಿಕೊಂಡು ತಮ್ಮ ಕಲಾ ಪ್ರದರ್ಶನಕ್ಕೊಂದು ಹೊಸ ವಿಧಾನ ಕಂಡುಕಂಡರು. ಕವಿಗೋಷ್ಠಿಗೆ ಅಥವಾ ಸಾಹಿತ್ಯ ಕಾರ್ಯಕ್ರಮಕ್ಕಾಗಿ ಆಯೋಜಕರು ಸಭಾಂಗಣಕ್ಕಾಗಿ ಒದ್ದಾಡುವುದು,ಕಲಾ ಕಾರರನ್ನು ಕರೆಸುವುದು, ಏನೋ ಅಡೆತಡೆಯಾಗಿ ತಡವಾಗಿ ಬರುವುದು ಅಥವಾ ಅನಾರೋಗ್ಯದಿಂದ ಬರದೇ ಇರುವುದು ಇವೆಲ್ಲವೂ ಇಲ್ಲದಾದವು. ಮನೆಯಲ್ಲಿ ತಮ್ಮ ಆರಾಮ ಕುರ್ಚಿಯಿಂದಲೇ ತಮ್ಮ ಸಾಹಿತ್ಯ ಕೃತಿಯನ್ನು ಓದಲು ಅನುಕೂಲವಾಯಿತು. ಯಕ್ಷಗಾನದ ಒಂದು ಪ್ರದರ್ಶನ ಸಹ ಪ್ರೇಕ್ಷಕರೇ ಇಲ್ಲದೇ ಪ್ರಯೋಗ ಮಾಡಿ ಮೆಚ್ಚುಗೆ ಗಳಿಸಲಾಯಿತು. ನಿರ್ಬಂಧಗಳು ಸಡಿಲವಾದ ಮೇಲು ಈ ಆನ್ ಲೈನ ವೇದಿಕೆಗಳಿಗೇ ಜನ ತಮ್ಮ ಒಲವನ್ನು ತೋರುತ್ತಿದ್ದಾರೆ. ಒಟಿಟಿ ವೇದಿಕೆಗಳು ತುಂಬಾ ಬೇಡಿಕೆಗೊಳಗಾದವು. ಅದರಲ್ಲಿ ಸಿಗುವ ಸಿನಿಮಾಗಳು ಜನಪ್ರಿಯವಾದವು. ಇನ್ನು ಕೆಲವೇ ದಿನಗಳಲ್ಲಿ ನಿರ್ಬಂಧ ಸಡಿಲಗೊಂಡು ಸಿನಿಮಾ ಟಾಕೀಸುಗಳು ತೆರೆದರೂ ಅವುಗಳಿಗೆ ಮುಗಿ ಬೀಳುವ ಜನತೆ ಕಮ್ಮಿಯೇ ಇರಬಹುದು. ಮನೆಯಲ್ಲಿಯೇ ಸಿನಿಮಾ ನೋಡಲು ಸಿಗುವಾಗ ಇನ್ನು ಟಾಕೀಸುಗಳಿಗೆ ಹೋಗುವರಾರು? ಅಲ್ಲವೇ ? ಈಗಿನ್ನೂ ಅರ್ಧದಷ್ಟು ಸಾಮರ್ಥ್ಯದಲ್ಲೇ ನಡೆಯುತ್ತಲಿವೆ. ಇವುಗಳ ಆರ್ಥಿಕ ಆಗುಬರುವಿಕೆಯ ಬಗ್ಗೆ ಪ್ರತ್ಯೇಕ ಅಧ್ಯಯನ ಮಾಡಬೇಕಾದೀತು. ಜೂಲೈ ತಿಂಗಳ ಹೊತ್ತಿಗೆ ಸರಕಾರ ಕೆಲವಾರು ವರ್ಗಗಳಿಗೆ ನಿಬಂಧನೆಗಳನ್ನು ಸಡಲಿಸಿತು. ಮತ್ತೆ ಜನ ಜೀವನ ರಸ್ತೆಗಳಿಗೆ ಬರಲು ಶುರುವಾಯಿತು. ಆದರೆ ಕರೋನಾ ಸೋಂಕಿದ ರೋಗಿಗಳ ಸಂಖ್ಯೆ ಕಮ್ಮಿಯಾಗಲಿಲ್ಲ. ಜನ ಸಂದಿಗ್ಧತೆಗೆ ಬಿದ್ದರು. ಹೊರಬರಲು ಹೆದರುವ ವರ್ಗವು ಒಂದಾದರೆ, ಯಾವುದಕ್ಕೂ ಲೆಕ್ಕಿಸದಿರುವ ಮತ್ತೊಂದು ವರ್ಗ ಹೀಗೆ. ಜೂಲೈ ತಿಂಗಳು ಮುಗಿಯುವಾಗ ಹತ್ತು ಲಕ್ಷ ಸೋಂಕುದಾರರಾದರು. ಆಗಸ್ಟ್ ತಿಂಗಳಾದರೂ ಕಮ್ಮಿಯಾಗಲಿಲ್ಲ. ಆದರೆ ನಿಬಂಧನೆಗಳು ಮಾತ್ರ ಸಡಿಲಗೊಳ್ಳುತ್ತಾ ಹೋದವು. ರಸ್ತೆಗಳ ಮೇಲೆ ಜನಸಂಚಾರ ಶುರುವಾಯಿತು. ಗಣಪತಿಯ ಹಬ್ಬಕ್ಕೆ ನಿಬಂಧನೆಗಳು ಸ್ವಲ್ಪ ಮಟ್ಟಿಗೆ ಸಡಿಲಗೊಂಡಿದ್ದರೂ ಜನರೇ ಹೆದರಿ ಜಾಸ್ತಿ ನೆರೆಯದಾದರು. ದಸರೆಗೂ, ದೀಪಾವಳಿಗೂ ಇದೇ ತರದ ಪರಿಸ್ಥಿತಿ. ನಮ್ಮ ದೇಶದಲ್ಲಿ ರಿಕವರಿ ಚೆನ್ನಾಗಿದೆ, ಮೃತರ ಸಂಖ್ಯೆ ತುಂಬಾ ಕಮ್ಮಿ ಅಂತ ಯಾವು ಯಾವುದೋ ಸಬೂಬುಗಳನ್ನು ಹೇಳಿಕೊಳ್ಳುತ್ತ ಸಮಾಧಾನ ಪಟ್ಟುಕೊಳ್ಳೋದು ಆಯಿತು. ಆದರೆ ನಂತರದ ದಿನಗಳಲ್ಲಿ ಮದುವೆ, ಗೃಹ ಪ್ರವೇಶಗಳು ಭರದಿಂದ ಮತ್ತೆ ಆಗ ತೊಡಗಿದವು. ಎಲ್ಲೆಲ್ಲೂ ಜನ ಕಾಣತೊಡಗಿದರು. ಛಾಂದಸರು ಮಾತ್ರ “ ಯಾರೂ ಕರೋನಾದ ನಿಬಂಧನೆಗಳನ್ನು ಪಾಲಿಸುತ್ತಲೇ ಇಲ್ಲ. ಏನು ಜನವಪ್ಪಾ!” ಎನ್ನುತ್ತ ಮೂಗು ಮುರಿಯುತ್ತ ಮನೆಗಳಲ್ಲೇ ಕಳೆಯತೊಡಗಿದರು. ಮನೆಯಲ್ಲಿಯ ದೊಡ್ಡವರಿಗೆ ತಮ್ಮ ನಿರ್ಬಂಧ ಹೇರತೊಡಗಿ ಹಿರಿಯರು ಚಡಪಡಿಸಲಾರಂಭಿಸಿದರು. ಅಮೆರಿಕದಲ್ಲಿಯ ಜನ ಮಾಸ್ಕ್ ಎನ್ನುವುದು ತಮ್ಮ ವೈಯಕ್ತಿಕ ಸ್ವಾತಂತ್ರ್ಯವನ್ನು ಕಸಿಯುವಂತಾಗುತ್ತದೆ ಎಂದು ಘೋಷಿಸಿ ಹಾಕದೇ ಎಲ್ಲ ಕಡೆಗೆ ತಿರುಗುತ್ತಾ ಅಲ್ಲಿದ್ದ ನಮ್ಮ ಭಾರತೀಯರಿಗೆ ತಳಮಳ ತಂದಿರುವುದು ಬೆಳಕಿಗೆ ಬಂದಿದೆ. ಅಲ್ಲಿ ಕರೋನಾದ ಅಟ್ಟಹಾಸ ಇನ್ನೂ ಕಮ್ಮಿಯಾಗಿಲ್ಲ. ಶಾಲೆಗಳು ಮಾತ್ರ ಇನ್ನೂ ಪ್ರಾರಂಭವಾಗಿಲ್ಲ. ಹಾಗಂತ ಮಕ್ಕಳಿಗೇನೂ ರಿಯಾಯ್ತಿಯಾಗಿಲ್ಲ. ಅವರಿಗೂ ಆನ್ ಲೈನಿನ ಮೇಲೆ ಪಾಠಗಳು ಮೂರು ತಿಂಗಳ ಹಿಂದಿನಿಂದಲೇ ಶುರುವಾಗಿವೆ. ಮಕ್ಕಳ ಶಾಲೆಯ ಶುಲ್ಕವೂ ಕಟ್ಟ ಬೇಕಾಗಿದ್ದು ಪಾಲಕರು ಎರಡೂ ಬಗೆಯ ನೋವನ್ನು ಅನುಭವಿಸುತ್ತಿದ್ದಾರೆ. ಕೆಲ ಖಾಸಗೀ ವಿದ್ಯಾ ಸಂಸ್ಥೆಗಳು ಬಂದಾಗಿ ಅಲ್ಲಿಯ ಶಿಕ್ಷಕರು ಬೀದಿಗೆ ಬಿದ್ದಿದ್ದಾರೆ. ಜೀವನ ನಡೆಸಲ ಯಾವ್ಯಾವುದೋ ಕೆಲಸಗಳನ್ನು ಮಾಡಿ ಬದುಕುತ್ತಿರುವುದು ಸಹ ಸಾಮಾಜಿಕ ಜಾಲತಾಣಗಳ, ಕಥೆಗಳ ವಸ್ತುವಾಗಿದೆ. ಆನ್ ಲೈನ ಪಾಠಗಳು, ಮೀಟಿಂಗ್ ಗಳು ನಡೆಯುವಾಗ ಮಧ್ಯದಲ್ಲಾಗುವ ಕೆಲ ಹಾಸ್ಯ ಪ್ರಸಂಗಗಳು ಮನಸ್ಸಿಗೆ ಮುದ ನೀಡಿವೆ. ಕೆಲ ನಿಯತ ಕಾಲಿಕ ಪತ್ರಿಕೆಗಳು ಅನ್ ಲೈನ್ ನ ಆಸರೆ ಪಡೆದು ಮುದ್ರಣವನ್ನು ಕೆಲ ಕಾಲ ನಿಲ್ಲಿಸಿದ್ದು, ಈಗಷ್ಟೇ ಮತ್ತೆ ಶುರುಮಾಡಿವೆ. ಈ ವರ್ಷದ ಕೊನೆಯ ಹೊತ್ತಿಗೆ ಇನ್ನೇನು ಎಲ್ಲಾ ಸೇವೆಗಳೂ ಪುನರಾರಂಭವಾಗುವುವು ಎನ್ನುವ ಹೊತ್ತಿಗೆ ಇಂಗ್ಲೆಂಡಿನಲ್ಲಿ ಮತ್ತೊಂದು ಇದರ ಸಂಬಂಧೀ ಸೋಂಕಿನ ಸೂಕ್ಷ್ಮಾಣು ಕಾಣಿಸಿಕೊಂಡು ತನ್ನ ಪ್ರತಾಪ ತೋರಲಾರಂಭಿಸಿದೆ. ಇದರ ಹಾವಳಿ ಏನು, ಹೇಗೆ ಅಂತ ಇನ್ನೂ ಗೊತ್ತಾಗುತ್ತಾ ಇಲ್ಲ. ಆದರೇ ಇತರೆ ದೇಶಗಳು ಅಪ್ರಮತ್ತವಾಗಿರುವು ಹೌದು. ಆದರ ಒಂದು ಸಮಾಧಾನದ ಅಂಶವೆಂದರೆ ಕೆಲ ದೇಶಗಳಲ್ಲಿ ಲಸಿಕೆಯನ್ನು ಕೊಡಲು ಶುರುಮಾಡಿದ್ದು. ನಮ್ಮ ಭಾರತದಲ್ಲಿ ಇದರ ಒಣ ಪ್ರಯತ್ನವನ್ನು ಮಾಡಿ ನೋಡುತ್ತಿದ್ದಾರೆ. ಲಸಿಕೆ ಎಲ್ಲರಿಗೂ ಸಿಗುವ ಹಾಗೆ ಮಾಡುತ್ತೇವೆಂದು ಸರ್ಕಾರ ಆಶ್ವಾಸನ ನೀಡಿದೆ. ಕಾಯಬೇಕು ಮಾತ್ರ. ಕರೋನಾ ಪ್ರಭಾವದಿಂದ ಹಲವಾರು ದೇಶಗಳ ಆರ್ಥಿಕ ಸ್ಥಿತಿಯನ್ನು ಹದಗೆಟ್ಟಿವೆ. ಹೊಸ ಉದ್ಯೋಗಗಳು ನಿರ್ಮಾಣವಾಗುವ ಅವಕಾಶ ಕಾಣದಾಗಿದೆ. ಇತರೆ ಕ್ಷೇತ್ರಗಳಲ್ಲಿ ನಡೆಯ ಬೇಕಾದ ಸಂಶೋಧನಾ ಕಾರ್ಯಕ್ರಮಗಳು ನಿಂತಿವೆ. ಎಲ್ಲರ ಲಕ್ಷ್ಯ ಬರೀ ಕರೋನಾಗೆ ಲಸಿಕೆ ಕಂಡ ಹಿಂಡಿಯುವುದರಲ್ಲೇ ಆಗಿದೆ. ನಿಧಿಗಳು ಸಹ ಅದಕ್ಕೇ ನೀಡಲಾಗುತ್ತಿದೆ. ವಿಶ್ವದಾದ್ಯಂತವಾಗಿ ೮ ಕೋಟಿ ಜನರು ಇದರಿಂದ ಪೀಡಿತರಾಗಿದ್ದಾರೆ. ಸುಮಾರು ೧೮ ಲಕ್ಷ ಜನರು ಸತ್ತಿದ್ದಾರೆ. ನೂರು ವರ್ಷದ ಹಿಂದೆ ಸ್ಪೆಯಿನ್ ಫ್ಲೂ ನಂತರ ಈ ತರದ ಜನರನ್ನು ಬಲಿ ತೆಗೆದುಕೊಂಡ ಮಹಾಮಾರಿ ಕರೋನಾವೇ ಆಗಿದೆ. ಜನರು ಅತಿ ಜರೂರು ಸಮಯಗಳಲ್ಲೂ ತಮ್ಮವರ ಹತ್ತಿರಕ್ಕೆ ಹೋಗಲಾರದೇ ಒದ್ದಾಡಿದ್ದಾರೆ. ಕೆಲವರ ಕೈ ಕಟ್ಟಿ ಹೋಗಿದೆ. ಬಡತನ ಹೆಚ್ಚಿದೆ. ಆದರೆ ಕರೋನಾ ಹೊಡೆತದಿಂದ ಕೆಲವಾರು ಸಾಮಾಜಿಕೆ ಸುಧಾರಣೆಗಳಾಗಿವೆ.  ಜನರಿಗೆ ತಾವೊಬ್ಬರೇ ಸುಖವಾಗಿರಬೇಕು ಎನ್ನಿಸದೇ ಇಡೀ ಸಮುದಾಯವೇ ರೋಗ ರಹಿತವಿರಬೇಕೆಂಬ ಭಾವನೆ ಬೆಳೆದಿದೆ. ಒಂದೈದಾರು ತಿಂಗಳು ವಾತಾವರಣ ತಿಳಿಯಾಗಿದ್ದು, ಪಶು ಪಕ್ಷಿಗಳು ಸುಖ ಕಂಡಿವೆ. ತಮ್ಮ ವೈಯಕ್ತಿಕ ಶುಭ್ರತೆಯ ಬಗ್ಗೆ ಜನರಿಗೆ ತಿಳಿದುಬಂದಿದೆ. ಇದರ ಬಗ್ಗೆ ಅತೀ ಮಡಿ ಮಾಡುವ ಜನರು ಬೆನ್ನು ತಟ್ಟಿಕೊಂಡಿದ್ದಾರೆ.  ಅಲ್ಲಲ್ಲಿ ಕೆಲ ಲೋಪದೋಷಗಳು ಕಂಡರೂ ಸರಕಾರದ ಬಗ್ಗೆ ಭರವಸೆ ಹುಟ್ಟಿದೆ. ಇವು ಯಾವುದಕ್ಕೂ ಕಾರಣವಲ್ಲದ ೨೦೨೦ರ ವರ್ಷ ಬರೀ ಸಾಕ್ಷಿಯಾಗಿ ನಿಂತು ಕಾಲಗಮನದಲ್ಲಿ ತನ್ನ ಪಾತ್ರವನ್ನು ಮುಗಿಸಿ ಹೊರಡಲಿದೆ. ಕೆಲಕಡೆ ೨೦೨೦ರ ಮೊದಲಲ್ಲಿ ಯಾರು ಹ್ಯಾಪೀ ನ್ಯೂ ಇಯರ್ ಹೇಳಿದ್ದು ಅಂತ ದೊಣ್ಣೆ ಹಿಡಿದು ನಿಂತ ಚುಟುಕನ್ನು ಕಂಡು ಈ ವರ್ಷ ನಗೆ ತಂದುಕೊಂಡಿದೆ. ತಾನು ಮಾಡಿದ್ದೇನು ಇದರಲ್ಲಿ ಅಂತ ಪ್ರಶ್ನಿಸಿಕೊಂಡಿದೆ. ಮನುಷ್ಯನ ದುರಾಸೆ, ಸ್ವಾರ್ಥ, ವಾತಾವರಣದ ಬಗ್ಗೆ ಯಾವ ಮಾತ್ರವೂ ಕಾಣದ ಕಾಳಜಿ ಇದಕ್ಕೆ ಕಾರಣಗಳು ಎಂದು ಅರಿಯದ ಮನುಷ್ಯ ಜಾತಿಯ ಬಗ್ಗೆ ಮರುಕ ಪಟ್ಟು ಹೊರಡಲಿದೆ. ಅದಕ್ಕೊಂದು ಸಮಾಧಾನ. ತನ್ನ ಅವಧಿ ಮುಗಿಯುವ ವೇಳೆಗೆ ಲಸಿಕೆ ಲಭ್ಯ ಅಂತ ಗೊತ್ತಾಗಿದ್ದು ಹರ್ಷದಾಯಕವೇ ಆದರೂ ಇನ್ನೇನು ಒಂದು ಸಂತೋಷದ ನಗೆಯಿಂದ ಮುಕ್ತಾಯವಾಗ ಬೇಕಿದ್ದ ತನ್ನ ಅವಧಿಗೆ ಕರೋನಾದ ಹೊಸ ಅವತಾರ ನಿರಾಶೆ ತಂದಿದೆ. ದುರಂತವೂ ಸುಖಾಂತವೂ ತಾನಂತೂ ತೆರೆ ಮರೆಯಾಗುವುದು ಖಂಡಿತಾ ಅಂತ ಗೊತ್ತಿದ್ದ ೨೦೨೦ ಜಗಕ್ಕೆ ಬಂದು ಅಪ್ಪಳಿಸಿದ ಈ ವಿಪತ್ತಿಗೆ ತನ್ನ ಪ್ರಮೇಯ ಏನೂ ಇಲ್ಲ ಎಂಬುದು ಎಲ್ಲರೂ ಅರಿಯಲಿ ಎಂದು ಆಶಿಸುತ್ತಾ ಮತ್ತು ೨೦೨೧ ಕರೋನ ಒಂದೇ ಅಲ್ಲ ಎಲ್ಲ ರೋಗ ರಹಿತ ಹೊಸ ವರ್ಷವಾಗಲಿ ಎಂದು ಹಾರೈಸುತ್ತಿದೆ. *********************                                                                                    

ತೆರೆ ಮರೆಯಾಗಲಿರುವ ನತದೃಷ್ಟ ೨೦೨೦ Read Post »

ಇತರೆ, ಜೀವನ

ಆಶ್ಚರ್ಯ,ಆಘಾತಗಳ ವರ್ಷ

ಆಶ್ಚರ್ಯ,ಆಘಾತಗಳ ವರ್ಷ ನೂತನ ದೋಶೆಟ್ಟಿ 2020ರ ವರ್ಷಕ್ಕೆ ಒಂದು ಪದದಲ್ಲಿ  ಶೀರ್ಷಿಕೆ ಕೊಡಿ ಎಂದರೆ ನಾನು ‘ದಿಗಿಲು’ ಎಂದು ಕೊಡುತ್ತೇನೆ. ಇದು ಭಯ, ಆಶ್ಚರ್ಯ, ಆಘಾತ ಮೊದಲಾದವುಗಳು ಒಟ್ಟು ಸೇರಿ ಉಂಟು ಮಾಡಬಹುದಾದ ಹೇಳಲು ಆಗದ ಒಂದು ಸ್ಥಿತಿ. ಇಂಥ ಸ್ಥಿತಿ ಆಗಾಗ ಎಲ್ಲರ ಜೀವನದಲ್ಲೂ ಬರುತ್ತಲೇ ಇರುತ್ತದೆ. ಆದರೆ ಒಟ್ಟಾರೆ ಮನುಕುಲವೇ ಇಂಥ ಸಮೂಹ ಸ್ಥಿತಿಗೆ ಒಳಗಾಗಿದ್ದು ಆಧುನಿಕ ಕಾಲದಲ್ಲಿ ಇದು ಮೊದಲ ಬಾರಿ ಎಂದು ಹೇಳಬಹುದು. ವಿಶ್ವ ಮಹಾಯುದ್ಧ ಗಳು  ನಡೆದ ಕಾಲದಲ್ಲಿ ಮಾಧ್ಯಮಗಳು, ಅದರಲ್ಲೂ ಸಾಮಾಜಿಕ ಮಾಧ್ಯಮಗಳು ಇರದ ಕಾರಣ ಇವುಗಳ ಘೋರ ಪರಿಣಾಮ ಇಡಿಯ ವಿಶ್ವದ ಮೇಲೆ ಈಗಿನಂತೆ ಆಗಿರಲಿಲ್ಲ. ಆದರೆ ಈಗ  ಕ್ಷಣಾರ್ಧದಲ್ಲಿ ವಿಶ್ವವನ್ನು ಸುತ್ತಿಬರುವ  ಸುದ್ದಿಗಳು ಈ ವರ್ಷದ ದಿಗಿಲನ್ನು ಹೆಚ್ಚಿಸಿವೆ ಎಂದರೂ ತಪ್ಪಿಲ್ಲ. ಇವೆಲ್ಲದರ ಹೊರತಾಗಿ ಬದುಕು ನಿಲ್ಲದೇ ನಡೆದು ದೊಂದು ದೊಡ್ಡ ಸೋಜಿಗ. ಹೃದಯವನ್ನು ಕಲಕುವ ಜನರ ಗುಳೆ, ಬಾಗಿಲಲ್ಲಿ ಬಂದು ನಿಂತು ಅಕ್ಕಿ, ಹಿಟ್ಟು ಏನಾದರೂ ಕೊಡಿ ಎಂದು ಕೇಳುವ ಚಿಕ್ಕ ವಯಸ್ಸಿನ ಹೆಂಗಸರು, ಚಿಕ್ಕ ಮಕ್ಕಳ ಮನಕಲಕುವ ಕಂಗೆಟ್ಟ ಮುಖಗಳು, ರಣಗುಡುವ ಏಕಾಂತ ಬೀದಿಗಳು, ಸತ್ತ ನೆರೆಹೊರೆಗಳು ಏಪ್ರಿಲ್, ಮೇ ತಿಂಗಳುಗಳನ್ನು ಈ ಮೊದಲು ಹೇಳಿದ ದಿಗಿಲಿಗೆ ಅಕಸ್ಮಾತ್ ಆಗಿ ನೂಕಿ ಕಂಗೆಡಿಸಿದ್ದವು. ಇನ್ನು ಕೈಯಲ್ಲಿ ಕಾಸಿದ್ದರೂ ಹೊರಗೆ ಹೋಗುವಂತಿಲ್ಲ. ಕೊಳ್ಳುವ ಶಕ್ತಿ ಇರುವವರ ಕತೆಯೇ ಹೀಗಾದರೆ ರಟ್ಟೆಯ ಬಲವನ್ನೇ ನಂಬಿ ಬದುಕುತ್ತಿದ್ದ ಅಸಂಖ್ಯಾತರ ಬದುಕು ಏನಾಗಿರಬೇಡ!!  ಇಂಥ ಕಾಲದಲ್ಲಿ ಕೈ ಹಿಡಿದು ನಡೆಸಿದ್ದು ಗಾಂಧೀಜಿಯವರ ಸರಳ ಜೀವನದ ಕಲ್ಪನೆ. ಕೊಳ್ಳುವ, ತಿನ್ನುವ ಎಲ್ಲ ಹಪಹಪಿಗಳಿಗೂ ಸಾರ್ವತ್ರಿಕವಾಗಿ ಕಡಿವಾಣ ಹಾಕಿ ಅಲ್ಪ ತೃಪ್ತಿಯನ್ನು ವಿಶ್ವಕ್ಕೇ ಕಲಿಸಿದ ಕಾಲ ಇದು. ಭಾರತದ ಮಟ್ಹಿಗೆ ಹೇಳುವುದಾದರೆ ಮೊದಲೆರಡು ಮೂರು ತಿಂಗಳುಗಳಿಗೆ ಬೇಕಾಗುವಷ್ಟು ಸಾಮಾನುಗಳನ್ನು ಮನೆಯಲ್ಲಿ ತಂದು ಪೇರಿಸಿಕೊಂಡ ಕೊಳ್ಳುಬಾಕರು,  ತಿಂದು ತೇಗಿದರೂ ನಂತರ ಸರಳತೆಯ ಕಡೆ ಅನಿವಾರ್ಯವಾಗಿ ಹೊರಳಬೇಕಾದ್ದು ಈ ವರ್ಷ ಕಲಿಸಿದ ದೊಡ್ಡ ಪಾಠ. ಗಾಂಧೀಜಿಯವರು ಹಾಲು, ಹಣ್ಣು, ಶೇಂಗಾಬೀಜ ಮೊದಲಾದ ಅತ್ಯಲ್ಪ ಆಹಾರವನ್ನು ಸೇವಿಸಿಯೂ ನೂರಾರು ಕಿ.ಮೀ ದೂರ ಕಾಲ್ನಡಿಗೆ ಮಾಡಬಲ್ಲ, ಹತ್ತಾರು ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡುವ ಸಾಮರ್ಥ್ಯವನ್ನು ದೇಹಕ್ಕೆ ಕಲಿಸಿದ್ದರು. ದೇಹ ನಮ್ಮ ಅವಶ್ಯಕತೆಗೆ ಒಗ್ಗಿಕೊಳ್ಳುವಂತೆ ಬಾಗಿಸುವ ಸಾಮರ್ಥ್ಯ ಎಲ್ಲರಿಗೂ ಇರುತ್ತದೆ. ಆದರೆ ತೀರದ  ಆಸೆಗಳು, ಜಿಹ್ವಾ ಚಾಪಲ್ಯ ಅದನ್ನು ತಡೆ ಹಿಡಿಯುತ್ತವೆ. ಇದನ್ನು ನಾನೂ ಏಕೆ ಪ್ರಯತ್ನಿಸಬಾರದು ಎಂದು ನನಗೆ ಸಲಹೆ ನೀಡಿದ್ದು ನನ್ನ ಮಗ.  ಮನೆಯಿಂದ ದೂರ ಇರಬೇಕಾದ ಅನಿವಾರ್ಯತೆ, ಹೊರಗೆ ಕೊಂಡು ತಿನ್ನಲು ಹೊಟೆಲ್ಲುಗಳಿಲ್ಲ. ಏನಾದರೂ ಸಿದ್ಧ ಪಡಿಸಿಕೊಳ್ಳೋಣವೆಂದರೆ ಹೊರಗೆ ಹೋಗಿ ಕೊಳ್ಳಬೇಕಾದ ಅನಿವಾರ್ಯತೆ. ಇವೆಲ್ಲವುಗಳಿಗೆ ಪರಿಹಾರವಾಗಿ ಬಂದಿದ್ದು ದ್ರವಾಹಾರದ ಪ್ರಯೋಗ.  ಮೂಲತಃ ಮಲೆನಾಡಿಗರಾದ ನಮ್ಮ ಬೆಳಗು ಆರಂಭವಾಗುವುದು ಕಷಾಯದಿಂದ. ಸುಮಾರು 15 ಪದಾರ್ಥಗಳನ್ನು ಹಾಕಿ ನಾನು ಮನೆಯಲ್ಲೇ ಮಾಡುವ ಈ ಕಷಾಯಕ್ಕೆ ಬೆಲ್ಲ ಹಾಕಿ ಕುಡಿದರೆ ಇದು ಸಾರ್ವಕಾಲಿಕ ಔಷಧ ನಮಗೆ. ಆನಂತರ ಸುಮಾರು 9 ಗಂಟೆಗೆ ವಿವಿಧ ಧಾನ್ಯಗಳು, ಮೊಳಕೆ ಕಾಳುಗಳ ಪುಡಿಯ ಮಿಶ್ರಣವನ್ನು ಹಾಲಿನಲ್ಲಿ ಕಲೆಸಿ ಕುಡಿದರೆ ಅದು ತಿಂಡಿಗೆ ಪರ್ಯಾಯ. ಮಧ್ಯಾಹ್ನದ ಊಟದ ಹೊತ್ತಿಗೆ ಹಣ್ಣು, ಸೌತೆಕಾಯಿ, ಗಜ್ಜರಿ, ಒಣಹಣ್ಣುಗಳು  ಇವುಗಳಲ್ಲಿ ಯಾವುದನ್ನಾದರೂ ತಿಂದು ಮತ್ತೆ ಒಂದು ಲೋಟ ಪುಡಿ ಮಿಶ್ರಣ ಮಾಡಿದ ಹಾಲು ಕುಡಿದರೆ ಊಟ ಮುಗಿದಂತೆ. ರಾತ್ರಿ ಊಟಕ್ಕೆ ಮತ್ತೆ ಮಧ್ಯಾಹ್ನದ ಊಟದಂತೆಯೇ. ಕೆಲವೊಮ್ಮೆ ರಾಗಿಯ ಮಾಲ್ಟ್ ಅನ್ನು ಊಟ ಅಥವಾ ತಿಂಡಿಗೆ ಪರ್ಯಾಯವಾಗಿ ಬಳಸುವುದು. ಮೊದಲ ನಾಲ್ಕೈದು ದಿನಗಳು ಸ್ವಲ್ಪ ಸುಸ್ತು ಎನ್ನಿಸಿದ್ದು ನಿಜ. ಆದರೆ ಯೋಗ, ವ್ಯಾಯಾಮ ಮಾಡುವಾಗ ಏನೂ ತೊಂದರೆಯಾಗುತ್ತಿರಲಿಲ್ಲ. ಲವಲವಿಕೆಗೂ, ಉತ್ಸಾಹಕ್ಕೂ ಕುಂದು ಬರಲಿಲ್ಲ. ಶ್ರವಣ ಬೆಳಗೊಳದ 650 ಮೆಟ್ಟಿಲುಗಳನ್ನು 25 ನಿಮಿಷಗಳಲ್ಲಿ  ಏದುಸಿರಿಲ್ಲದೇ ಹತ್ತಿದಾಗ ನನ್ನ ಆಹಾರ, ಜೀವನ ಶೈಲಿಯ ಬಗ್ಗೆ ನನಗೆ ಪೂರ್ಣ ನಂಬಿಕೆ ಬಂದಿತು. ಈಗ ನಾನು ಅದನ್ನೇ ಮುಂದುವರೆಸಿದ್ದೇನೆ. ಎಂದಾದರೊಂದು ದಿನ ಬಾಯಿ ಚಪಲದಿಂದಾಗಿ ಇತರ ತಿಂಡಿಗಳನ್ನು ತಿಂದರೂ ಮತ್ತೆ ಇದಕ್ಕೇ ಮರಳುತ್ತೇನೆ. ಈ ಮಿತ ಆಹಾರ  ನನಗೆ ಹೆಚ್ಚು ಆರಾಮದಾಯಕ ಎನ್ನಿಸುತ್ತದೆ. ಬಹುಶಃ ಈ ದಿಗಿಲಿನ ವರ್ಷ  ಬರೆದಿದ್ದರೆ ನಾನು ಇಂಥ ಪ್ರಯೋಗ ಮಾಡುತ್ತಿದ್ದೆನೋ ಇಲ್ಲವೋ. ಹೀಗೊಂದು ಸಂತ್ರಪ್ತಿ ತಂದ ವರ್ಷವೂ ಇದು ಎನ್ನುವುದು ನನಗೂ ಸೋಜಿಗವೇ. **********************************

ಆಶ್ಚರ್ಯ,ಆಘಾತಗಳ ವರ್ಷ Read Post »

ಅಂಕಣ ಸಂಗಾತಿ, ಚಿತ್ತ ಜನ್ಯ

ಅಂಕಣ ಬರಹ ನಿತ್ಯ ಎದುರಾಗುವ ನಿರ್ವಾಹಕರು ಪ್ರತಿನಿತ್ಯ ಕೆಲಸಕ್ಕೆ ಬಸ್ಸಿನಲ್ಲೆ ತೆರಳುವ ನಾವು ಹಲವಾರು ಜನ ಕಂಡಕ್ಟರುಗಳನ್ನು ಪ್ರತಿನಿತ್ಯ ನೋಡುತ್ತಿರುತ್ತೇವೆ. ಒಬ್ಬೊಬ್ಬ ನಿರ್ವಾಹಕರೇ ಒಂದೊಂದು ಥರ. ಕೆಲವರು ತಾಳ್ಮೆಯಿಂದ ಇರುತ್ತಾರೆ, ಕೆಲವರಿಗೆ ಎಂಥದ್ದೋ ಅವಸರ, ಕೆಲವರು ಎಷ್ಟೊಂದು ದಯಾಮಯಿಗಳು, ಮತ್ತೊಂದಿಷ್ಟು ಜನ ಜಗತ್ತಿನ ಎಲ್ಲ ಕೋಪವನ್ನೂ ಹೊತ್ತು ತಿರುಗುತ್ತಿರುವವರಂತೆ ಚಟಪಟ ಸಿಡಿಯುತ್ತಿರುತ್ತಾರೆ. ಮನಸಿನಂತೆ ಮಹದೇವ ಎನ್ನುವ ಹಾಗೆ ಮನಸಿನ ಅವತಾರಗಳಷ್ಟೇ ವೈವೀಧ್ಯಮಯ ನಿರ್ವಾಹಕರು. ಪ್ರತಿನಿತ್ಯ ನಿರ್ವಾಹಕರು ಮತ್ತು ಪ್ರಯಾಣಿಕರ ನಡುವೆ ಬಹುತೇಕ ಉಂಟಾಗುವ ಜಗಳಕ್ಕೆ ಮುಖ್ಯ ಕಾರಣವಾಗುವುದೇ ಚಿಲ್ಲರೆ ಸಮಸ್ಯೆ. ಬೆಳ್ಳಂಬೆಳಗ್ಗೆ ಬಸ್ ಹತ್ತಿದ ಹತ್ತಿರದ ಊರಿಗೆ ಹೋಗಬೇಕಾದವನು ಐನೂರರ ನೋಟೊಂದನ್ನು ಹಿಡಿದುಬಿಟ್ಟರೆ ನಿರ್ವಾಹಕರ ಪರಿಸ್ಥಿತಿ ಏನು… ಒಬ್ಬರಿಗೋ ಇಬ್ಬರಿಗೋ ಆದರೆ ಸರಿ, ಆದರೆ ಬಸ್ಸಿನಲ್ಲಿರುವ ಪ್ರತಿಯೊಬ್ಬರಿಗೂ ಚಿಲ್ಲರೆ ಕೊಡುವ ಪರಿಸ್ಥಿತಿ ಎದುರಾದಾಗ ಕಂಡಕ್ಟರ್ ಆದರೂ ಎಲ್ಲಿಂದ ಚಿಲ್ಲರೆ ತರಬೇಕು. ಅವರಾದರೂ ಮನೆಯಿಂದಲೂ ಹೆಚ್ಚು ಚಿಲ್ಲರೆ ತರುವಂತಿಲ್ಲ. ನಾನಂತೂ ಸದಾ ಚಿಲ್ಲರೆಯನ್ನು ನನ್ನ ಬ್ಯಾಗಿನಲ್ಲಿ ಇಟ್ಟುಕೊಂಡೇ ತಿರುಗುವುದು ರೂಢಿ ಮಾಡಿಕೊಂಡಿದ್ದೇನೆ. ಮತ್ತೆ ನಮಗೆ ಯಾವ ಕಂಡಕ್ಟರರಿಗೆ ಚಿಲ್ಲರೆ ಕೊಡಬೇಕು ಮತ್ತೆ ಯಾರಿಗೆ ಕೊಡಬಾರದು ಎನ್ನುವುದೆಲ್ಲ ಅದೆಷ್ಟು ಚೆನ್ನಾಗಿ ಗೊತ್ತಾಗಿಬಿಡುತ್ತದೆ! ಅವರು ಬೇರೆಯವರಿಗೆ ಟಿಕೆಟ್ ಕೊಡುವುದನ್ನು ನೋಡುವಾಗಲೇ “ಓ ಇವರಿಗೆ ಚಿಲ್ಲರೆ ಸಮಸ್ಯೆ ಇದೆ ಅಥವಾ ಇಲ್ಲ” ಎನ್ನುವುದನ್ನು ಅಭ್ಯಸಿಸಿಬಿಡುತ್ತೇವೆ. ನಂತರವೇ ನಾವು ಚಿಲ್ಲರೆ ತೆಗೆಯುವುದು. ತೀರಾ ಅಸಹನೆಯ ಕಂಡಕ್ಟರರ ಮುಂದೆ ಚಿಲ್ಲರೆ ಇಲ್ಲದೆ ದೊಡ್ಡ ನೋಟೊಂದನ್ನು ಹಿಡಿದು ನಿಲ್ಲಬೇಕಾಗಿ ಬಂದಾಗ ನಿಜಕ್ಕೂ ಅದೆಷ್ಟು ಅನವಶ್ಯಕ ಮಾತುಗಳನ್ನು ಕೇಳಬೇಕಾಗುತ್ತದೆ ಮತ್ತು ಬಳಸಲಿಕ್ಕೆ ತಯಾರಾಗಬೇಕಾಗಿ ಬರುತ್ತದೆ. ಈ ಕಂಡಕ್ಟರುಗಳದು ಬಹಳ ಒತ್ತಡದ ಕೆಲಸ. ಪ್ರತಿನಿತ್ಯ ಎಂತೆಂಥಾ ಪ್ರಯಾಣಿಕರು ಹತ್ತುತ್ತಾರೆಂದರೆ, ಕೆಲವರಂತೂ ಅವರನ್ನು ತೀರಾ ನಿಕೃಷ್ಟವಾಗಿ ಕಂಡು, ವ್ಯವಹರಿಸುವುದನ್ನು ನೋಡುವಾಗ ಇಂತಹ ಜನಗಳಿಂದಲೇ ಅವರು ಕಠೋರರಾಗಿಬಿಡುತ್ತಾನೋ ಅಂತಲೂ ಅನಿಸತೊಡಗುತ್ತದೆ. ಒಮ್ಮೆ ಬೆಂಗಳೂರಿನಿಂದ ಬರುತ್ತಿದ್ದ ಹುಡುಗಿಯೊಬ್ಬಳು ನಿರ್ವಾಹಕಿಯೊಡನೆ ಗಲಾಟೆ ಶುರುಮಾಡಿಕೊಂಡಿದ್ದಳು. ಆದದ್ದು ಇಷ್ಟು. ಆ ಹುಡುಗಿ ಗೌರಿಬಿದನೂರಿನ ಬಳಿಯ ಒಂದು ಹಳ್ಳಿಯಿಂದ ಬೆಂಗಳೂರಿಗೆ ನಿತ್ಯ  ಕಾಲೇಜಿಗೆ ಹೋಗಿ ಬರುತ್ತಾಳೆ. ಹಾಗಾಗಿ  ಅವಳಲ್ಲಿ ನಿತ್ಯದ ಪಾಸ್ ಇರುತ್ತದೆ. ಆದರೆ ಆ ಸಧ್ಯ ಅದರ ಅವಧಿ ಮುಗಿದದ್ದು, ಅವಳು ಈಗ ಟಿಕೇಟ್ ಕೊಳ್ಳಬೇಕಿತ್ತು. ಅವಳೇ ತಾನಿದ್ದಲ್ಲಿಗೆ ಬಂದು ಪಾಸ್ ಬಗ್ಗೆ ಹೇಳಿ ಟಿಕೇಟ್ ಪಡೆಯಬೇಕಿತ್ತು ಎನದಬುವುದಯ ನಿರ್ವಾಹಕಿಯ ವಾದ. ಇಲ್ಲ ತಾನಿದ್ದಲ್ಲಿಗೆ ಬಂದು ವಿಷಯ ತಿಳಿದುಕೊಂಡು ಟಿಕೇಟ್ ಕೊಡಬೇಕಿತ್ತು ಎನ್ನುವುದು ಆ ಹುಡುಗಿಯ ವಾದ. ಆದರೆ ಕನಿಷ್ಟ ವಯಸ್ಸಿಗೂ ಬೆಲೆ ಕೊಡದೆ ನಿರ್ವಾಹಕಿಯ ಬಳಿ ಹೇಗೆಂದರೆ ಹಾಗೆ ಜಗಳಕ್ಕಿಳಿದಿದ್ದ ಹುಡುಗಿಯ ವರ್ತನೆ ಅಸಹನೀಯವಾಗಿತ್ತು. ಸಾಲದ್ದಕ್ಕೆ “ಎಷ್ಟು ನಿನ್ ನಂಬರ್ರು? ಬಾ ಸ್ಟಾಂಡಿಗೆ ಕಂಪ್ಲೇಂಟ್ ಮಾಡ್ತೀನಿ…” ಎನ್ನುತ್ತಾ ಹೋದ ಹುಡುಗಿಯ ಬಗ್ಗೆ ನೋಡುತ್ತಿದ್ದ ನಮಗೇ ಕೋಪ ಬರುತ್ತಿತ್ತು. ಇಷ್ಟೊಂದು ಉದ್ಧಟತನ ಮತ್ತು ಅಹಂಕಾರವನ್ನು ತಂದೆ ತಾಯಂದಿರಾದರೂ ಹೇಗೆ ಬೆಳೆಯಲು ಬಿಡುತ್ತಾರೆ… ಅವಳಿಗೆ ಯಾವ ಮದವೇ ಇದ್ದಿರಲಿ, ಎದುರಿನವರನ್ನು ಕನಿಷ್ಟ ಗೌರವದಿಂದ ಮಾತಾಡಿಸದಿರುವಂತಹ ವರ್ತನೆ ಅಸಹನೀಯವೇ ಸರಿ. ನನ್ನ ಪುಟ್ಟ ಮಗಳಿಗೆ ಪ್ರತಿನಿತ್ಯ ನನ್ನ ಜೊತೆಗೇ ತಿರುಗಬೇಕಾದ ಅನಿವಾರ್ಯ. ಇನ್ನೂ ಸಣ್ಣವಳಿದ್ದಾಗ, ಅವಳಿಗೆ ಅದೆಂಥದೋ ತಾನೇ ನಿರ್ವಾಹಕರಿಗೆ ದುಡ್ಡು ಕೊಡಬೇಕು, ಟಿಕೇಟ್ ಪಡೆಯಬೇಕು, ಚಿಲ್ಲರೆ ಇಸಿದುಕೊಳ್ಳಬೇಕು ಎನ್ನುವ ಹಂಬಲ. ಆದರೆ ಟಿಕೆಟ್ಟನ್ನು ಮಕ್ಕಳ ಕೈಗೆ ಕೊಡಬೇಡಿ ಎನ್ನುವುದು ನಿರ್ವಾಹಕರ ಕಾಳಜಿ ಮತ್ತು ಆಜ್ಞೆ. ಅದರ ನಡುವೆಯೂ ಇವಳ ಆಸೆಯನ್ನು ಕಂಡು ಪಾಪ ಅನ್ನಿಸಿ ಒಮ್ಮೊಮ್ಮೆ ನಿರ್ವಾಹಕರು, ಖಾಲಿ ಟಿಕೆಟ್ ಹೊಡೆದು ಅವಳ ಕೈಗಿಟ್ಟಾಗ ಅವಳಿಗಾಗುತ್ತಿದ್ದ ಸಂಭ್ರಮವಂತೂ ಅಷ್ಟಿಷ್ಟಲ್ಲ… ಇನ್ನು ಮಾನವೀಯತೆಯೇ ಮೈವೆತ್ತಂತೆ ಇರುವ ಅದೆಷ್ಟೋ ನಿರ್ವಾಹಕರನ್ನು ಕಾಣುವಾಗ ಇವರು ಬರೀ ಕೆಲಸ ಮಾಡುತ್ತಾರೆ ಎನ್ನುವುದಕ್ಕೆ ಮನಸೇ ಬರುವುದಿಲ್ಲ. ಆ ಕ್ಷಣಕ್ಕೆ ಯಾರದೋ ತಂದೆ, ಮತ್ಯಾರದೋ ಅಣ್ಣ, ಇನ್ಯಾರದೋ ಮಗನ ಹಾಗೆ ವರ್ತಿಸುತ್ತಾ ನಮ್ಮವರೇ ಆಗಿಬಿಡುವ ಇವರನ್ನು ನಮ್ಮವರಲ್ಲ ಎಂದುಕೊಳ್ಳುವುದಾದರೂ ಹೇಗೆ ತಾನೆ ಸಾಧ್ಯ…. ****************************** ಆಶಾ ಜಗದೀಶ್ ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ. –

Read Post »

You cannot copy content of this page

Scroll to Top