ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಗಝಲ್

ಗಝಲ್ ರತ್ನರಾಯ ಮಲ್ಲ ಅಸಹಾಯಕತೆಯ ಬೇರಿಗೆ ನೀರೆರೆಯಬೇಡಿಮನಸ್ಸಿನ ಆತ್ಮವಿಶ್ವಾಸವನ್ನು ಚಿವುಟಬೇಡಿ ಕರುಣೆ-ಕನಿಕರದಿಂದ ಒಡಲ ಹಸಿವು ನೀಗದುಸಹಾನುಭೂತಿಯ ಜಾಲದಲ್ಲಿ ಸಿಲುಕಬೇಡಿ ಪಾಪ ಎಂದು ಪಾಪಿ ಎನ್ನುವರು ಜಗದೊಳಗೆಸಾಧನೆಯ ಶಿಖರದಿಂದ ಜಾರಿ ಬೀಳಬೇಡಿ ಕಾರಣಗಳು ಇತಿಹಾಸವನ್ನು ನಿರ್ಮಿಸುವುದಿಲ್ಲನೋವನ್ನು ಪ್ರದರ್ಶನದ ವಸ್ತು ಮಾಡಬೇಡಿ ‘ಮಲ್ಲಿ’ ಮಲ್ಲಿಗೆಯ ಮೊಗ್ಗನ್ನು ಪ್ರೀತಿಸುವರೆಲ್ಲರುಅನ್ಯರ ಕೈಯಲ್ಲಿ ಆಡುವ ಗೊಂಬೆ ಆಗಬೇಡಿ ***************************************

ಗಝಲ್ Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ಮುತ್ತು ಬಳ್ಳಾ ಕಮತಪುರ ಮಾತನಾಡುವದೇ ಬಿಟ್ಟಿರುವೆ ನುಡಿಗಳು ತಿರುಚಲಾಗುತ್ತಿದೆ |ಕೇಳಿಸಿಕೊಳ್ಳುವುದೇ ಬಿಟ್ಟಿರುವೆ ಸುಳ್ಳುಗಳು, ವಿಜೃಂಭಿಸಲಾಗುತ್ತಿದೆ || ನೋಡುವುದೇ ಬಿಟ್ಟಿರುವೆ ಬೆಂಕಿ ಹಚ್ಚುವುದು ಚಿತ್ರಿಸಲಾಗುತ್ತಿದೆ |ಪ್ರಶ್ನಿಸುವುದೇ ಬಿಟ್ಟಿರುವೆ ನಾಲಿಗೆಗೆ ಬೀಗ ಹಾಕಲಾಗುತ್ತಿದೆ || ಪುಸ್ತಕ ಓದುವದೇ ಬಿಟ್ಟಿರುವೆ ಕಂದಕ ಉಂಟು ಮಾಡುವುದೇ ಮುನ್ನೆಲೆಗೆ |ತಿನ್ನುವದೇ ಆತಂಕ ಹೊಲಗಳಲ್ಲಿ ವಿಷವನ್ನು ಬಿತ್ತಿ ಬೆಳೆಯಲಾಗುತ್ತಿದೆ || ಕಲಾ ಲೋಕದಲ್ಲಿ ಬಣ್ಣದ,ಬಾಚಣಿಗೆಯ ಮಂದಿಯೇ ತುಂಬಿಕೊಂಡಿದ್ದಾರೆ |ಎಲ್ಲಾ ಉಚಿತವಾಗಿ ವಿತರಣೆ ಮನುಜ ಪ್ರೀತಿ ಪೇಟೆಯಲಿ ಬಿಕರಿಯಾಗುತ್ತಿದೆ || ಜೀವನ ಪುಷ್ಪ ಮೊಗ್ಗಾಗಿ ಅರಳುವ ಕಾಲದಲಿ ಬಾಗಿಸಬಹುದು ಮುತ್ತು |ಪ್ರೀತಿ ತುಂಬಿದ ಮಾರ್ಗದರ್ಶನ ಈಗೀಗ ಎಳೆಯ ಮನಸಿಗೆ ಮಿಥ್ಯವಾಗುತ್ತಿದೆ | **********************************

ಗಝಲ್ Read Post »

ಕಾವ್ಯಯಾನ

ಬಿಂದಿಗೆ ಕಳೆದಿದೆ

ಕವಿತೆ ಬಿಂದಿಗೆ ಕಳೆದಿದೆ ಸುಮಾವೀಣಾ ನಂಬಿಕೆಯೆಂಬೋ ಬಿಂದಿಗೆ ಕಳೆದಿದೆಕಳ್ಳನ ಮನೆಗೆ ಮಹಾಕಳ್ಳ ಹೊಕ್ಕಂತೆ!ಅಪನಂಬಿಕೆಯ ಮೇಲೆ ಅವಿಶ್ವಾಸ ಹೊಕ್ಕಿದೆನಂಬಿಕೆ ಕಳೆದರೂ ಕಳೆಯಿತುಕಳೆದು ಹೋಗುವ ಮುನ್ನ ಹೇಳಲೇಬೇಕಿತ್ತು!ಹೇಗೆ ?ಹೇಳುವೆ! ನಾ ಮರೆತಿದ್ದೆ ನೀ ಕಳ್ಳ ತಾನೆ!ನಂಬಿಕೆ ಮೂರು ಕಾಸಿನದ್ದೆ?ನಿನಗಿದ್ದರೂಇರಬಹುದು!ಇರಬಹುದು!ಮೂರು ಕಾಸಾದರೂ ಕಾಸೇ ತಾನೇಆತ್ಮಘಾತಕತನ ಮಾಡಲುಬಾರದುಬಿಂದಿಗೆ ಕಳೆದಿದೆ! ಬಿಂದಿಗೆ ಕಳೆದಿದೆ!ಕದ್ದು ಹೋಗಿದೆ ನಂಬಿಕೆತಿರುಗಿ ಬಂದರೂ ವಿಶ್ವಾಸವಲ್ಲದ ನಂಬಿಕೆಹೋದರೆ ಹೋಗಲಿ ಬಿಂದಿಗೆಒಳಿತೇ ಆಯಿತುನಿನ್ನ ವ್ಯಘ್ರತೆ, ರಾಕ್ಷಸತ್ವ ದರ್ಶನವಾಯಿತಲ್ಲ! *******************************

ಬಿಂದಿಗೆ ಕಳೆದಿದೆ Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ಪ್ರತಿಮಾ ಕೋಮಾರ ನೆನಪುಗಳನ್ನೆಲ್ಲ ಕಣ್ರೆಪ್ಪೆಯಲಿ ಸೆರೆಯಾಗಿಸಿದ್ದೇನೆ ಕುಕ್ಕಬೇಡ ನೋಡುನಿರೀಕ್ಷೆಗಳನ್ನೆಲ್ಲ ಅಟ್ಟ ಏರಿಸಿದ್ದೇನೆ ಇಳಿಸಬೇಡ ನೋಡು ಒಳಗುದಿಯ ಒಳಗೇ ಇಟ್ಟು ಕುದಿಯುವುದೇಕೆ? ಹೇಳಿಬಿಡುಕೇಳಲೆಂದೆ ಎದೆಗಿವಿಯನ್ನು ತೆರೆದಿದ್ದೇನೆ ಮುಚ್ಚಿಡಬೇಡ ನೋಡು ಎನ್ನೆಲ್ಲ ಭಾವಗಳ ಚಿತ್ರ ಶಾಲೆಗೆ ಚಿತ್ತಾರಿಗನಾದವನು ನೀನುನಿನ್ನಾಸರೆಯಲಿ ನಲಿವ ರಾಶಿ ಹಾಕಿದ್ದೇನೆ ತೂರಬೇಡ ನೋಡು ತಪ್ಪನ್ನು ಕ್ಷಮಿಸಿ ಮುಂದಡಿ ಇಟ್ಟಾಗಲೇ ಸಾಗುವುದು ಪಯಣಘಾತದ ಭೂತವನ್ನೆಲ್ಲ ಮರೆತು ಬಿಟ್ಟಿದ್ದೇನೆ ಕೆದಕಬೇಡ ನೋಡು “ಪ್ರತಿ” ಯ ನಿಗ೯೦ಧ ಬಾಳು ಬಂಜರು ಭೂಮಿಗೆ ಸಮಾನಕನಸಗನ್ನಡಿಯ ಜೋಪಾನ ಮಾಡಿದ್ದೇನೆ ಒಡೆಯಬೇಡ ನೋಡು ********************************

ಗಝಲ್ Read Post »

ಇತರೆ

ಕಾದಂಬರಿ ಕುರಿತು ಮಲೆಗಳಲ್ಲಿ ಮದುಮಗಳು ಕುವೆಂಪು ಶತಮಾನದ ಶ್ರೇಷ್ಠ ಸಾಹಿತಿ ಎಂದು ಕುವೆಂಪು ಅವರನ್ನು ಕರೆದರೂ ಯಾಕೋ ಅವರ  ಬಗ್ಗೆ ತೀರ ಕಡಿಮೆಯಾಯ್ತು ಅನ್ನಿಸುತ್ತದೆ . ಯಾಕಂದ್ರೆ ಅವರ ಮಹದ್ ಬೃಹತ್ ಗ್ರಂಥ “ಮಲೆಗಳಲ್ಲಿ ಮದುಮಗಳು” ಇಂದು ನನ್ನ ಕೈಯಲ್ಲಿದ್ದು ತನ್ನನ್ನು ತಾನೇ ಓದಿಸಿಕೊಳ್ಳುತ್ತಿದೆ. ಹೆಸರಾಂತ ಸಾಹಿತಿ ದೇವನೂರು ಮಹಾದೇವ ಅವರ ಎದೆಯಾಳದ ಪ್ರಶ್ನೆಯೊಂದನ್ನು ಇಲ್ಲಿ ಇಡುವ ಮನಸ್ಸಾಗುತ್ತದೆ “ಕನ್ನಡದಲ್ಲಿ ಅತ್ಯುತ್ತಮ ಎನ್ನಿಸಿಕೊಂಡ ನಾಲ್ಕಾರು ಕೃತಿಗಳನ್ನು ತಕ್ಕಡಿಯ ಒಂದು ತಟ್ಟೆಯಲ್ಲಿಟ್ಟು ಕುವೆಂಪುರವರ  ಮದುಮಗಳನ್ನು ಇನ್ನೊಂದರಲ್ಲಿಟ್ಟರೆ ಗುಣದಲ್ಲೂ ಗಾತ್ರದಲ್ಲೂ ಮಲೆಗಳಲ್ಲಿ ಮದುಮಗಳು ಹೆಚ್ಚು  ತೂಗುತ್ತದೆ, ಈ ತಕ್ಕಡಿಗೆ ಏನಾಗಿದೆ? ಎಂದು ವಿದ್ಯಾರ್ಥಿಯಾಗಿದ್ದಾಗ ಕೇಳುತ್ತಿದ್ದೆ . ಈಗಲೂ ನೀವು ನನ್ನ ಪ್ರಬುದ್ಧ ಅಂದುಕೊಳ್ಳುವದಾದರೆ ತಕ್ಕಡಿಗೆ ಏನಾಗಿದೆ ? ಎಂದು ಅದೇ ಪ್ರಶ್ನೆ ಕೇಳುತ್ತೇನೆ.” ಎನ್ನುತ್ತಾರೆ ಹೆಸರಾಂತ ಮಾನವೀಯ ಸಾಹಿತಿ ದೇವನೂರು ಮಹಾದೇವ.  ಬಹುಷಃ ಮಲೆಗಳಲ್ಲಿ  ಮದುಮಗಳು ಓದಿದ ಎಲ್ಲರ ಎದೆಯಲ್ಲಿ ಎದ್ದುನಿಲ್ಲುವ ಪ್ರಶ್ನೆ ಇದು. ಬರೀ ಕಾದಂಬರಿಯಲ್ಲ ಇದು  ಮಲೆನಾಡಿನ ಸಮಸ್ತವನ್ನೂ ಒಳಗೊಂಡ ಮಲೆನಾಡ  ಜೀವಕೋಶ ಅಂದುಕೊಂಡರೆ ಒಳಿತು. ಮಲೆನಾಡ ಕಾನು ಕಾಡು ಬೆಟ್ಟ ಬಯಲು ಮಳೆ ನೀರು ನದಿ ಬದುಕು ಬವಣೆ ಏನುಂಟು ಏನಿಲ್ಲ ಇದರಲ್ಲಿ?. ಕಾಲೇಜು ದಿನಗಳಲ್ಲಿ  ಲೈಬ್ರರಿಯಿಂದ ತಂದು ಅಲ್ಲಲ್ಲಿ ಗಿಬರಾಡಿ ಕುಡಿಮೀಸೆ ಕೆದರಿದ ಕ್ರಾಪು ಗುಳಿಗೆನ್ನೆ ನವಿರು ಸೀರೆಗಾಗಿ ಹುಡುಕಾಡಿ  ಮದುಮಗಳಲ್ಲಿ ಅದೇನೂ ಕಣ್ಣಿಗೆ ಬೀಳದೇ ಅವಳ ಭಾರಕ್ಕೆ ಭಯಪಡುತ್ತಲೇ ಒಂದಷ್ಟು ಪುಟ ಮಗುಚಿ ಮರಳಿಸಿ ಬಂದಾದಮೇಲೆಯೂ ಪುರುಸೊತ್ತಾಗಿ ಒಮ್ಮೆ ಓದಬೇಕೆಂಬ ಕನಸಿದ್ದದ್ದಂತೂ ಸುಳ್ಳಲ್ಲ. ದಶಕಗಳು ಕಳೆದ ಮೇಲೆ ಕಾಲ ಕೂಡಿಬಂದು ಈಗಷ್ಟೇ ಓದಿಮುಗಿಸಿದಮೇಲೆ ಇಷ್ಟುದಿನ ಬರಿದೆ ಬರಿದೇ ಹೋಯ್ತು ಹೊತ್ತು ಅನ್ನಿಸ್ತಾ ಇದೆ.     ನನ್ನೊಳಗೆ ಇಷ್ಟೊಂದು ಒಳಸಂಚಲನೆಯನ್ನು ಹುಟ್ಟುಹಾಕಿದ ಕೃತಿ ಬೇರೊಂದಿಲ್ಲ ಅಂದುಕೊಂಡಿದ್ದೇನೆ. ನಾನೂ ಒಬ್ಬಳು ಹಸಿಬಿಸಿ ಬರಹಗಾರ್ತಿ     ಎಂಬ ಒಣ ಹಮ್ಮಿನ ನೆತ್ತಿಕುಟ್ಟಿ ಪುಡಿಮಾಡಿ ಬರೆದದ್ದೆಲ್ಲ ಬಾಲಿಷ ಅನ್ನಿಸತೊಡಗಿದೆ ಅನ್ನೋಕೆ ಯಾವ ಸಂಕೋಚವೂ ಕಾಡುತ್ತಿಲ್ಲ. ಕೃತಿಯನ್ನ ಅತ್ಯಂತ ಪ್ರೀತಿಯ ತಿನಿಸನ್ನು ಬೇಗ ಮುಗಿದುಹೋಗುವ ಭಯದಲ್ಲಿ ಇಷ್ಟಿಷ್ಟೇ ತಿಂದು ಉಳಿಸಿಕೊಂಡಂತೆ ತಿಂಗಳು ಕಾಲ ನಿಧಾನವಾಗಿ ಕೂತು ಬಾಲಕಿಯಾಗಿ ಓದುವ ಸುಖ ವರ್ಣನೆಗೆ ನಿಲುಕದ್ದು.        ಕುವೆಂಪುರವರ ಮಾತುಗಳಲ್ಲಿ ಹೇಳುವದಾದರೆ “ಇಲ್ಲಿ ಯಾರೂ ಮುಖ್ಯರಲ್ಲ ಯಾರೂ ಅಮುಖ್ಯರಲ್ಲ ಯಾವುದೂ ಯಕ್ಕಶ್ಚಿತವಲ್ಲ.” ಇಲ್ಲಿ ಗುತ್ತಿಯ ವ್ಯಕ್ತಿಚಿತ್ರಣದಷ್ಟೇ ಶೃದ್ಧೆಯಿಂದ ಅವನ ನಾಯಿ ಹುಲಿಯನನ್ನು ಕುರಿತು ಬರೆದಿದ್ದಾರೆ. ಹುಲಿಕಲ್ಲ್ ನೆತ್ತಿಯನ್ನು, ಮಲೆನಾಡಿನ ಮಳೆಗಾಲದ ರೌದ್ರ ರಮಣೀಯತೆಯನ್ನು ಕಡೆದಿಟ್ಟ ತನ್ಮಯತೆಯಲ್ಲೇ ಕಾಡಿನ ಇಂಬಳವನ್ನು ಸುಬ್ಬಣ್ಣ ಹೆಗ್ಗಡೆಯ ಹಂದಿದೊಡ್ಡಿಯನ್ನು ಕುರಿತೂ ಬರೆಯುತ್ತಾರೆ ಕುವೆಂಪು. ಚಿನ್ನಮ್ಮ ಮುಕುಂದಯ್ಯರ ನಡುವಿನ ಪ್ರೇಮದ ಸಂದರ್ಭದಲ್ಲಿ ಅವರ ಲೇಖನಿ ಬಾಗಿನಿಂತಂತೆ ಐತ-ಪೀಂಚಲು ಗುತ್ತಿ- ತಿಮ್ಮಿಯರ ಪ್ರೇಮಪ್ರಣಯಕ್ಕೂ ಅವರದು ಪ್ರೀತಿಯ ಪೂಜೆಯೇ…ಒಮ್ಮೆ  ಓದಿ ಮುಗಿಸಿದಮೇಲೆ ಕೃತಿಯ ಕುರಿತಾಗಿ ಓದುಗರೆದೆಗೆ ದಕ್ಕಿದ ಹೊಳಹುಗಳನ್ನೊಮ್ಮೆ ತಿಳಿಯಲು ಪುಟ ತಿರುವಿಬಂದೆ. ಅವುಗಳನ್ನು ವಿಮರ್ಶೆಗಳೆನ್ನದೇ ಹೊಳಹುಗಳು ಎಂಬುದಕ್ಕೆ ಕಾರಣ ಮಲೆಗಳಲ್ಲಿ ಮದುಮಗಳು ವಿಮರ್ಶೆಗೆ ನಿಲುಕದಷ್ಟು ಎತ್ತರಕ್ಕೆ ಮೀರಿಬೆಳೆದ ಕೃತಿ. ಈ ಕೃತಿ ಕನ್ನಡವಲ್ಲದೇ ವಿಶ್ವದ ಬೇರಾವುದೇ ಭಾಷೆಯಲ್ಲಿದ್ದಿದ್ದರೆ ನೋಬಲ್ ಪಾರಿತೋಷಕವನ್ನು ತನ್ನ ಮುಡಿಗೇರಿಸಿಕೊಳ್ಳುತ್ತಿತ್ತು ಎಂಬ ಮಾತಂತೂ ಸರ್ವಕಾಲಿಕ ಸತ್ಯವಾದರೂ ಕನ್ನಡದ ಈ ಶ್ರೇಷ್ಠ ಕೃತಿಗೆ ಪಾರಿತೋಷಕಗಳ ಹಂಗಿಲ್ಲ. ಕನ್ನಡಕ್ಕೆ ಈ ಕೃತಿಯೇ ಒಂದು ಸರ್ವಶ್ರೇಷ್ಠ ಪಾರಿತೋಷಕ. ಇಂಗ್ಲೀಷ್ ನಲ್ಲಿ ಬರೆಯುವಷ್ಟು ಭಾಷಾ ಪಾಂಡಿತ್ಯವಿದ್ದರೂ ಕೂಡ ಕನ್ನಡವನ್ನು ತಲೆಮೇಲಿಟ್ಟುಕೊಂಡು ಮೆರೆಸಿದ ರಸ ಋಷಿಗೆ ನಾಡಿಗರು ಸದಾ ಋಣಿಯಾಗಿರಲೇಬೇಕು. ಕೃತಿ ತನ್ನ ಕೇಂದ್ರವನ್ನು ಬಿಟ್ಟು ದೂರ ಸರಿದಿದ್ದನ್ನು ಉಲ್ಲೇಖಿಸಿದವರಿದ್ದಾರೆ. ಕುವೆಂಪು ಬರೀ ಕೇಂದ್ರದ ಸುತ್ತಲೇ ಸುತ್ತಿ ಕೃತಿಯನ್ನು ಸೀಮಿತಗೊಳಿಸದೇ’  ಅದು ಬರೀ ಕಾದಂಬರಿಯಾಗಿಯೇ ಉಳಿದು ಹೊಗುವದನ್ನು ತಪ್ಪಿಸಿ ಸರ್ವಕಾಲಕ್ಕೂ ಸಲ್ಲುವಂತಹ ಒಂದು ಅನನ್ಯ ಕೊಡುಗೆಯನ್ನ ಕನ್ನಡ ಸಾರಸ್ವತ ಲೋಕಕ್ಕೆ ನೀಡಿ ಕನ್ನಡದ ಓದುಗರಮೇಲೆ ಋಣಭಾರ ಹೊರಿಸಿದ್ದಾರೆ. ಶೋಷಿತ ವರ್ಗ ಗಳ ಪರವಾಗಿ ಕೃತಿಕಾರ ನಿಂತಿದ್ದಾರೆ ಎಂಬ ಹೇಳಿಕೆಗಳನ್ನು ಒಪ್ಪಿಕೊಳ್ಳುವಂತಿಲ್ಲ. ಇದ್ದುದ ಇದ್ದಂತೆ ಕಂಡುದ ಕಂಡಂತೆ ಕೃತಿಯೇ ಕೃತಿಕಾರನ ಕೈಹಿಡಿದು ನಡೆಸಿದಂತೆ ಬರೆಯಬೇಕಾದ ಅಗತ್ಯಗಳನ್ನೆಲ್ಲ ಬರೆದಿದ್ದಾರೆ. ಮೇಲ್ವರ್ಗಗಳ ಕಪಿಮುಷ್ಠಿಗೆ ಸಿಕ್ಕು ತಳವರ್ಗಗಳು ನರಳುವ ಕಾಲಘಟ್ಟದಲ್ಲಿ ಸತ್ಯಕ್ಕೆ ಚ್ಯುತಿಯಾಗದಂತ ಕೃತಿಯ ನಡಿಗೆ ಬೊಟ್ಟಿಡಲಾಗದಷ್ಟು ಸಹಜ.  ಪ್ರಕೃತಿ ಪ್ರಣಯ ವಿರಹ ಮಿಲನ     ಅದಾವುದೇ ಇರಲಿ ವರ್ಣನೆಯಲ್ಲಂತೂ ಕುವೆಂಪು ಅವರದ್ದು ಬೇರಾರಿಗೂ ನಿಲುಕದ ತಪಸ್ಸಿದ್ಧಿ. ” ಅರಣ್ಯಾಚ್ಛಾದಿತವಾಗಿ ಮೇಘಚುಂಬಿಗಳಾಗಿ ನಿಂತಿರುವ ಗಿರಿಶಿಖರ ಶ್ರೇಣಿಗಳ ಮಲೆನಾಡಿನಲ್ಲಿ ಎಲ್ಲಿಯೋ ಕೆಳಗೆ ಒಂದು ಕಣಿವೆ     ಮರಗಳ ನಡುವೆ ಹುದುಗಿರುವ ಮನೆಗಳಲ್ಲಿ ಹುಟ್ಟಿ ಕಣ್ಣುಬಿಡುವ ಮಕ್ಕಳ ಪಾಲಿಗೆ  ಆಕಾಶ ಕೂಡ ಕಾಡಿನಷ್ಟು ವಿಸ್ತಾರಭೂಮವಾಗಿ ಕಾಣಿಸುವುದಿಲ್ಲ. ಆಕಾಶಕ್ಕಿಂತಲೂ ಕಾಡೇ ಸರ್ವವ್ಯಾಪಿಯಾಗಿ ತನ್ನ ಅಧಿಕಾರವನ್ನು ಸ್ಥಾಪಿಸಿ ಭೂಮಂಡಲವನ್ನೆಲ್ಲ ವಶಪಡಿಸಿಕೊಂಡಂತಿರುತ್ತದೆ. ಪ್ರಥ್ವಿಯನ್ನೆಲ್ಲ ಹಬ್ಬಿ ತಬ್ಬಿ ಆಳುವ ಕಾಡಿನ ದುರ್ದಮ್ಯ ವಿಸ್ತೀರ್ಣದಲ್ಲಿ ಎಲ್ಲಿಯೋ ಒಂದಿನಿತಿನಿತೇ ಅಂಗೈಯಗಲದ ಪ್ರದೇಶವನ್ನು  ಮನುಷ್ಯ ಗೆದ್ದುಕೊಂಡು ತನ್ನ ಗದ್ದೆ ತೋಟ ಮನೆಗಳನ್ನು ರಚಿಸಿಕೊಂಡಿದ್ದಾನೆ , ಅಷ್ಟೆ . ” ಕುವೆಂಪು ನುಡಿಯಲ್ಲಿ ಕಾಡಿನ ಹಿರಿಮೆ.    ” ಇಷ್ಟಪ್ರಿಯ ಕಂಠ ಧ್ವನಿ ಕಿವಿಗೆ ಬಿದ್ದೊಡನೆ ಚಿನ್ನಮ್ಮನ ಚೇತನಗರಿ ಹಗುರವಾಗಿ ಹೆದೆ ತುಂಡಾದ ಬಿಲ್ಲಿನ ಸೆಟೆತವೆಲ್ಲ ತೊಲಗಿ ಆದರ ದಂಡವು ನೆಟ್ಟಗಾಗಿ ವಿರಾಮ ಭಂಗಿಯಲ್ಲಿ ಮಲಗುವಂತೆ ಒಂದೆರಡು ನಿಮಿಷಗಳಲ್ಲಿಯೇ ಆನಂದ ಮೂರ್ಛೆಯೋ ಎಂಬಂತಹ ಗಾಢ ನಿದ್ದೆಗೆ ಮುಳುಗಿ ಬಿಟ್ಟಳು . ನರಕ ನಾಕಗಳಿಗೆ ಅದೆಷ್ಟು ಅಲ್ಪಾಂತರವೋ ವಿರಹ ಮಿಲನ ನಾಟಕದಲ್ಲಿ.”   ಕಾವೇರಿ ಇಸ್ಕೂಲು ಬಾವಿಗೆ ಹಾರಿಕೊಂಡು ಸತ್ತಮೇಲೆ ಕುವೆಂಪು ಬರೆದ “ತನ್ನ ಮೈಯನು ಕೆಡಿಸಿದ್ದ ಕಡುಪಾಪಿಗಳಲ್ಲಿ  ಚೀಂಕ್ರನೂ ಸೇರಿದ್ದನೆಂಬುದು ಕಾವೇರಿಗೆ ಗೊತ್ತಾಗದಿದ್ದುದು ಒಂದು ಭಗವತ್ ಕೃಪೆಯೇ ಆಗಿತ್ತು. ಅದೇನಾದರೂ ಗೊತ್ತಾಗಿದ್ದರೆ ಭಗವಂತನೇ ಸತ್ತುಹೋಗುತ್ತಿದ್ದನು! ಆತ್ಮಹತ್ಯೆಗೂ ಪ್ರಯೋಜನ ವಿರುತ್ತಿರಲಿಲ್ಲ. ಸಕಲ ಮೌಲ್ಯ ವಿನಾಶವಾದ ಮೇಲೆ  ಸತ್ತಾದರೂ ಸೇರಿಕೊಳ್ಳಲು ಯಾವ ಪುರುಷಾರ್ಥರೂಪದ ಯಾವ ದೇವರು ತಾನೇ ಇರುತ್ತಿತ್ತು ? ”  ಇಂತಹ ಅದೆಷ್ಟೋ ಸಾಲುಗಳು ಮತ್ತೆಮತ್ತೆ ಮೆಲಕಿಗೆ ಸಿಕ್ಕು  ಎದೆಯಲ್ಲಿ ಮಿಸುಗುತ್ತಲೇ ಇರುತ್ತವೆ.       ತುಂಗಾ ನದಿಯ ನೆರೆಯ ರಭಸಕ್ಕೆ ಗುತ್ತಿಯ ನಾಯಿ ಹುಲಿಯ ಕೊಚ್ಚಿಹೋದದ್ದು ಕಾಲಲ್ಲಿ ಮುಳ್ಳುಮುರಿದಂತ ನೋವು. ತಮ್ಮಲ್ಲಿ ಜೀತಮಾಡುವ ಕುಟುಂಬಗಳ ಗಂಡು ಹೆಣ್ಣುಗಳ ಮದುವೆಕೂಡ ತಮ್ಮ ಮೀಸೆಗಳಡಿಯಲ್ಲೇ ತಮ್ಮಿಷ್ಟದಂತೆ ನಡೆಯಬೇಕೆಂಬ ಜಮೀನ್ದಾರ ರೊತ್ತಿಗೆಯ ಮೀರಿ ತಾನು ಮೆಚ್ಚಿಕೊಂಡ ಗುತ್ತಿಯೊಂದಿಗೆ ಓಡಿಹೋಗಿ ಕಡುಬವಣೆಯುಂಡರೂ ಬಿಡದೇ ಅವನನ್ನೇ ನೆಚ್ಚಿ ನಂಬಿ ಜೊತೆಯಾದ ಹೊಲೆಯರ ತಿಮ್ಮಿ , ಪ್ರೀತಿಗಾಗಿ ತಾನು ಅತಿಯಾಗಿ ಪ್ರೀತಿಸುವ ಅದಕ್ಕಿಂತ ಹೆಚ್ಚು ಭಯಪಡುವ ಅಪ್ಪನಿಗೂ ಬೆನ್ನಾಗಿ ಸ್ವಂತ  ಮದುವೆ ಚಪ್ಪರದಿಂದ ತಪ್ಪಿಸಿಕೊಂಡು ಕಾಡುಮೇಡಲೆದು ತನ್ನಪ್ರಿಯ ಮುಕುಂದಯ್ಯನ ಸೇರಿಕೊಂಡ ಚಿನ್ನಮ್ಮ ಈ ಎರಡೂ ಹೆಣ್ಣುಗಳು  ಒಲ್ಲದ ವ್ಯವಸ್ಥೆಯ ವಿರುದ್ಧ ಸೆಟೆದು ನಿಂತು ಗೆದ್ದು ನಿಲ್ಲುವ ಕಥಾನಾಯಕಿಯರು. ಪೀಂಚಲು ಐತರ ನಡುವಿನ ದಾಂಪತ್ಯವಂತೂ ಪ್ರೀತಿ ಪ್ರಣಯವನ್ನೂ ಮೀರಿನಿಂತ ಅದರಾಚೆಯ ಮಾತಿಗೆ ನಿಲುಕದ ವಿಹಂಗಮ ಪ್ರೇಮ. ಇನ್ನು ನಾಗಕ್ಕನೆಂಬ ನಿಯತ್ತಿನ ಹೆಣ್ಣು ಪತಿಯ ಮರಣದ ನಂತರ ಪುರುಷ ಸಾಂಗತ್ಯವನ್ನು ಹೀಂಕರಿಸಿ ದೂರನಿಂತವಳು. ಉಳ್ಳವರ ಮನೆಯ ಗಂಡಿಗೆ ವಿಧವೆ ಸೊಸೆಯನ್ನು ಕೂಡಿಕೆ ಮಾಡಿ ತನ್ನ ಸ್ವಾರ್ಥ ಸಾಧಿಸಿಕೊಳ್ಳುವ ಅತ್ತೆಯ ನೀಚ ಯೋಚನೆಗೆ ಸೆಡ್ಡು ಹೊಡೆದು ನಿಂತ ಹೆಣ್ಣು ತನ್ನಂತಹದ್ದೇ ಒಂದು ಪುಟ್ಟ ಹೆಣ್ಣುಜೀವಕ್ಕಾಗಿ ತನ್ನೊಳಗೇ ತಾನಿಟ್ಟುಕೊಂಡ ಕಟ್ಟಳೆಮೀರಿ ವೆಂಕಪ್ಪನಾಯಕನ ಒಪ್ಪಿಕೊಂಡಿದ್ದು ಹೆಣ್ತನದ ಪಾರಮ್ಯದ ಹೃದಯವೈಶಾಲ್ಯ.      ಗೊಬ್ಬೆ ಸೆರಗು ಹೊನ್ನಳ್ಳಿ ಹೊಡೆತ  ಕಪ್ಪೆಗೋಲು ಕುಳವಾಡಿ ಚಿಟ್ಟಳಿಲು ಒಡೆಯರ ದಿಬ್ಬ ದೈಯ್ಯದ ಹರಕೆ ಕಿವಿಚಟ್ಟೆ ಹಂದಿಹಸಗೆ ಉಮ್ಮಿಡಬ್ಬಿ  ಹರ್ಮಗಾಲ ಬೀಸಿಕಲ್ಲು ಮದೋಳಿಗ ಇಂತಹ ಅಸಂಖ್ಯ  ದೇಸಿಶಬ್ದಗಳ ಸಾಂಗತ್ಯದಲ್ಲಿ ಹೂವಳ್ಳಿ ಕೋಣೂರು ಸಿಂಬಾವಿ ಕಲ್ಲೂರು ಬೆಟ್ಟಳ್ಳಿ ಕಾಗಿನಳ್ಳಿ ಲಕ್ಕುಂದ ಮೇಗರವಳ್ಳಿಗಳ ಸುತ್ತಸುತ್ತಿ ,ಹೆಗ್ಗಡೆಗಳ ಗೌಡರ ಹೊಲೆಯರ ಹಸಲರ ಹಳೆಪೈಕದವರ ಕಿಲಿಸ್ತಾನರ ಕೇರಿಗಳನ್ನೆಲ್ಲ ಹೊಕ್ಕು ಮಂಜಮ್ಮ ಜಟ್ಟಮ್ಮ ದೇವಮ್ಮ ಚಿನ್ನಮ್ಮ ಮಂಜಮ್ಮ ಅಂತಕ್ಕ ಕಾವೇರಿ ಅಕ್ಕಣಿ ಪೀಂಚಲು ನಾಗತ್ತೆ ನಾಗಕ್ಕ ಪೀಂಚಲು ತಿಮ್ಮಿ ಪುಟ್ಟಿ  ದೇಯಿ ಹಿಂಡು ಹಿಂಡು ಹೆಣ್ಣುಗಳೊಟ್ಟಿಗೆ ನಿತ್ಯ ತಿಂಗಳುಗಟ್ಟಲೆ ಒಡನಾಡಿ ಕೊನೆಪುಟವ ಮೊಗಚುತ್ತಿದ್ದಂತೆ ಅಚಾನಕ್ ಒಂಟಿಯಾಗಿ ದೂರಕ್ಕೆ ಸಿಡಿದುಬಿದ್ದ ತಳಮಳ ಎದೆಗೆ. ಅಂತಕ್ಕನ ಮಗಳು ಕಾವೇರಿ  ದಟ್ಟಿರುಳಿನಲ್ಲೂ ಚೀಂಜ್ರ ಶೇರೇಗಾರನ ಕ್ರೌರ್ಯಜ್ಕೊಳಗಾಗಿ ಸತ್ತ ದೇಯಿ ಕನಸಿಗೆ ನುಗ್ಗಿ ನಿದ್ದೆಗೆಡಿದುತ್ತಿದ್ದಾರೆ……ಒಟ್ಟಿನಲ್ಲಿ ಮಲೆಗಳಲ್ಲಿ ಮದುಮಗಳು ಎದುರಿಗೆ ಇದ್ದರೆ ನಾವು ನಾವಾಗಿರದೇ ಅದರದೇ ಒಂದು ಭಾಗವಾಗಿ ಪಾತ್ರವಾಗಿ ಕಥೆಯ ತುಂಬಾ ಕೃತಿಯ ತುಂಬಾ ಖುದ್ದು ಓಡಾಡಿ ಬಂದ ಧನ್ಯತೆ. ಸರ್ವಶ್ರೇಷ್ಠ ಗಾಯಕರ ಕಂಠದಲ್ಲೊಮ್ಮೆ ಕೆ ಎಸ್ ನರಸಿಂಹ ಸ್ವಾಮಿಯವರ “ದೀಪವು ನಿನ್ನದೆ ಗಾಳಿಯು ನಿನ್ನದೇ ಆರದಿರಲಿ ಬೆಳಕು ಕೇಳುವಾಗಿನ ನಮ್ಮ ನಾವು ಮರೆತು ಹಾಡಿನಲ್ಲಿ ಒಂದಾಗುವ ಭಾವವೇ ಮಲೆಗಳಲ್ಲಿ ಮದುಮಗಳೆದುರು ಕೂತರೆ… ಅಂದುಕೊಂಡರೆ ಅತಿಶಯೋಕ್ತಿಯಲ್ಲ. ಒಮ್ಮೆ ಮುಗಿಸಿದಮೇಲೆ ಮತ್ತೆ ಕೈಬಿಡಲಾಗದೇ ಮರುಓದಿಗೆ ಪುಟ ಮಗುಚುತ್ತಿದ್ದೇನೆ. ಮಲೆಗಳಲ್ಲಿ ಮದುಮಗಳ ಎದುರಿಗೆ ಕೂತು ಪುಟ ಮಗುಚುವದೇ ಒಂದರ್ಥದಲ್ಲಿ ಜನ್ಮಸಾರ್ಥಕ್ಯ. ***************************** ಪ್ರೇಮಾ ಟಿ.ಎಂ.ಆರ್.

Read Post »

ಕಾವ್ಯಯಾನ

ವಿರಹಿ ದಂಡೆ

ಪುಸ್ತಕ ಪರಿಚಯ ವಿರಹಿ ದಂಡೆ ವಿಪ್ರಯೋಗದಲ್ಲಿ ಅರಳಿದ ಶೃಂಗಾರ ಕವಿತೆಗಳು ವಿರಹಿ ದಂಡೆಕವನ ಸಂಕಲನಲೇಖಕ : ನಾಗರಾಜ ಹರಪನಹಳ್ಳಿಪ್ರಕಾಶನ: ನೌಟಂಕಿ. ರಾಜಾಜಿ ನಗರ, ಬೆಂಗಳೂರು.ಬೆಲೆ : ೮೦/- ನಾಗರಾಜ್ ಹರಪನಹಳ್ಳಿ ಎಂಬ ಮಹೋದಕ ಪ್ರತಿಭೆ ಪ್ರೀತಿ, ಪ್ರೇಮ, ಪ್ರಣಯದ ಪರಾಕಾಷ್ಠೆಯನ್ನು ತಲುಪಿ ಸದಾ ಯಯಾತಿಯ ಧಿರಸನ್ನು ತೊಟ್ಟು ಎದೆ ತೆರೆದು ನಿಂತ ಅಪ್ಪೆ ಹುಳಿ, ಒಗರನ್ನು ಮೈಗೂಡಿಸಿಕೊಂಡಿರುವ ಬಯಲು ಸೀಮೆಯಿಂದ ದಂಡೆಗೆ ಬಂದ ಪ್ರೀತಿಯ ಕಡುಮೋಹಿ. ಈ ಕವಿ ಹುಟ್ಟಿದ್ದೇ ಗಾಢ ಆಲಿಂಗನದ ಆರ್ದ್ರ ಉಸಿರಿನ, ಅದುರುವ ತುಟಿಗಳ, ಮುತ್ತಿನ ಮತ್ತಿನ ಬಯಕೆಯಲ್ಲಿ ಸದಾ ತೇಲಾಡುವುದಕ್ಕಾಗಿಯೇ ಅನಿಸುತ್ತದೆ. ಅವರ `ವಿರಹಿ ದಂಡೆ’ಯ ಕವಿತೆಗಳನ್ನು ಓದಿದಾಗ ಖಂಡಿತಾ ಅನಿಸುತ್ತದೆ. ನನಗೆ ಅವರ ಮೊದಲ ಸಂಕಲನಕ್ಕೆ ಮುನ್ನುಡಿ ಬರೆಯಲು ಅವಕಾಶ ಕಲ್ಪಿಸಿದ್ದರು. ಈ `ವಿರಹಿ ದಂಡೆ’ ಅವರ ಎರಡನೇ ಸಂಕಲನ ವಾಗಿದೆ. ಪತ್ರಕರ್ತರಾಗಿ, ಉಪನ್ಯಾಸಕರಾಗಿ, ಬಂಡಾಯ ಸಾಹಿತ್ಯ ಸಂಘಟನೆ, ಸಾಹಿತ್ಯ ಪರಿಷತ್ತು ಎಲ್ಲವನ್ನು ಎದೆಗೆ ಹಚ್ಚಿಕೊಂಡು ಸದಾ ಕ್ರಿಯಾಶೀಲವಾಗಿ ಓಡಾಡಿಕೊಳ್ಳುತ್ತಲೇ ಕಥೆ, ಕವಿತೆ, ವಿಮರ್ಶೆ ಅಂತೆಲ್ಲಾ ಬರೆಯುತ್ತಲೇ ಕುವೆಂಪು, ಬೇಂದ್ರೆ, ಲಂಕೇಶ್, ನರೋಡ, ಬೋದಿಲೇರ್, ಅಲ್ಲಮ, ಬಸವಣ್ಣ, ದೇವನೂರು, ನೀಲು ಎಲ್ಲವನ್ನೂ ಓದುತ್ತಲೇ ದೇವರು ದಿಂಡರು ಬಗೆಗಿನ ಮೌಡ್ಯವನ್ನು ಪ್ರಶ್ನಿಸುತ್ತ ವೈಚಾರಿಕ ನೆಲೆಯ ಮನಸ್ಸನ್ನು ಬರಹಗಳ ಮೂಲಕ ಪ್ರಕಟಿಸುತ್ತ, ತಣ್ಣಗೆ ಪ್ರತಿಭಟಿಸುತ್ತ ತನ್ನದೇ ಆದ ಹಾದಿಯನ್ನು ತುಳಿದವರು. ಮಳೆ ಸುರಿಯುತ್ತಲೇ ಇದೆ ದಾಹ ಮಾತ್ರ ಹಿಂಗಿಲ್ಲ (ಎಷ್ಟು ನೀರು ಕುಡಿದರೂ) ಎನ್ನುವ ಕವಿ ಪ್ರೀತಿಯ ನಿರಂತರತೆ, ಚಲನಶೀಲತೆ, ಚಿರಂತನತೆಯನ್ನು ಪ್ರಕಟಿಸುತ್ತಾರೆ. ಈ ಮೇಲೆ `ಮಹೋದಕ ಎಂದದ್ದು ಈ   ಹಿನ್ನಲೆಯಲ್ಲಿಯೇ.’ ಪ್ರೀತಿ, ಕೆಮ್ಮು ಮುಚ್ಚಿಡಲಾಗೊಲ್ಲ’ ಎಂಬ ಮಾತಿನಂತೆ, ಎದೆ ತೆರೆದಂತೆ ಅವರು ಪ್ರೀತಿಯ ಮಜಲುಗಳನ್ನು ತೆರೆದಿಡುತ್ತಾರೆ. ಹಿರಿಯ ಕವಿ ಬಿ.ಆರ್. ಲಕ್ಷ್ಮಣರಾವ್ ತರ ಎಲ್ಲಾ ಕಾಲಕ್ಕೂ ಇವರು ಪ್ರೀತಿಯ ಬಗ್ಗೆಯೇ ಬರೆಯ ಬಹುದೆಂಬುದು ಅವರ ಕವಿತೆಗಳನ್ನು ಓದಿದಾಗ ಅನಿಸುತ್ತದೆ. ಭಾಷೆಯನ್ನು ದುಡಿಸಿಕೊಳ್ಳುತ್ತಲೇ ಪ್ರಬುದ್ಧತೆಯನ್ನು ಮೆರೆಯುವ ಹರಪನಹಳ್ಳಿಯವರು ತಮ್ಮ ಕವಿತೆಗಳಲ್ಲಿ ಹೊಸತನ ಪ್ರಕಟಿಸುತ್ತಾರೆ. ‘ ದಂಡೆಯ ಕೈಯಲ್ಲಿ ಚಂದ್ರನಿಟ್ಟು ಬರೋಣ’ ಎನ್ನುವ ಕವಿ ಸಂಜೆಯ ಮುದಗೊಂಡ ಗಾಳಿಯ ಸ್ಪರ್ಶಕ್ಕೆ ನಲುಗುವ ಹಳದಿ ಹೂಗಳ ಫಲುಕಿಗೆ ಬೆರಗಾಗುತ್ತಾರೆ. “ಕಣ್ಣು ಕಣ್ಣು ಬೆರೆತವು ಪ್ರೀತಿ ನಿರಾಕರಿಸಲಾಗಲಿಲ್ಲ’’ “ಬೀದಿಗಳಲ್ಲಿ ಎಷ್ಟೇ ತಿರುಗಿದರೂ ನಿನ್ನ ಜೊತೆ ನಡೆದಾಗ ಸಿಕ್ಕ ಸಂಭ್ರಮ ಸಿಗಲಿಲ್ಲ’’ “ಜಗತ್ತು ಹರಾಮಿ ಹಗಲು ದುಡಿಯುತ್ತದೆ ರಾತ್ರಿ ಕಾಮಿಸುತ್ತದೆ’’ “ಚಂದ್ರ ನಕ್ಕ ಆಕಾಶವೂ ಬಾಹುಗಳ ತೆರೆದು ಆಲಂಗಿಸಿತು’’ ಇಲ್ಲೆಲ್ಲ ಕವಿ ತನ್ನನ್ನು `ಪೋಲಿ’ ಎಂದು ಕರೆದುಕೊಂಡರೂ ಅದು ಪೋಲಿತನವಲ್ಲ. ಅಂತರಂಗದ ಭಾವ ಸಹಜತೆಯಾಗಿದೆ.ಅವರ ಕವಿತೆಗಳಲ್ಲಿ ಬರುವ ಚಂದ್ರ, ಆಕಾಶ, ದಂಡೆ, ಬಯಲುಗಳೆಲ್ಲವನ್ನೂ ಮನುಷ್ಯ ಸದೃಶ ಚಿತ್ರವಾಗಿ ಕವಿತೆಗಳಲ್ಲಿ ನಿಲ್ಲಿಸುತ್ತಾರೆ. ಪ್ರಕೃತಿಯ ಭಾಗಗಳನ್ನು ಮನುಷ್ಯ ಲೋಕಕ್ಕೆ ತರುವುದು ಹೊಸತನದ ರೂಪಕಗಳಾಗಿವೆ. ಇಂಗ್ಲೀಷಿನ flying kiss ಎನ್ನುವ ಮಾತನ್ನು ಕವಿತೆಯ ಸಾಲಾಗಿಸುವ ಕವಿ “ದೂರದಿಂದ ಕಳಿಸಿದ ಮುತ್ತು ಬಾಯಾರಿಕೆ ಹೆಚ್ಚಿಸಿದವು’’                   (ಪ್ರೇಮದ ಹನಿಗಳು) ನೀರ ಹನಿ ಬಿದ್ದಾಗ ಮುಟ್ಟಿದರೆ ಮುನಿ ( ನಾಚಿಕೆ ಮುಳ್ಳಿನ ) ಎಲೆ ನಾಚುವಂತೆ `ಹಠಾತ್ ಬಿದ್ದ ಮಳೆಗೆ ದಂಡೆ ನಾಚುತ್ತದೆ’ ಎನ್ನುತ್ತಾರೆ. ಪ್ರೊ.ವಿ.ಕೆ.ಗೋಕಾಕ್ ತಮ್ಮ ಕವಿತೆಯೊಂದರಲ್ಲಿ “ಇಲ್ಲಿ ಬಾಳಿಗೆ ಸಂತಸವೇ ಗುರಿ ಇಲ್ಲಿ ಭೋಗವೇ ಯೋಗವು’’ ಎಂದಂತೆ ಈ ಕವಿಯೂ ಕೂಡ “ಸೆರಗ ನೆರಳಲ್ಲಿ ಬಚ್ಚಿಟ್ಟು ಕೊಳ್ಳಬೇಕೊಮ್ಮೆ’’ ಎನ್ನುವ ಕವಿತೆಯಲ್ಲಿ “ಸೆರಗ ನೆರಳಲ್ಲಿ ಪ್ರೀತಿ ಪಲ್ಲವಿಯ ಹಾಡಬೇಕೊಮ್ಮೆ ನಶ್ವರತೆಗೂ ಮುನ್ನ ಬದುಕ ಮೋಹಿಸಬೇಕೊಮ್ಮೆ’’ ಎನ್ನುತ್ತ ಅದಮ್ಯ ಪ್ರೀತಿಯ ಜೊತೆ ಬದುಕನ್ನು ಸುಂದರಗೊಳಿಸುತ್ತಾರೆ. “ಈಗ ಬಿರು ಬೇಸಿಗೆ ನೀ ಹೋದ ಮೇಲೆ’’ ( ಹನಿಗಳು) ಯಾರೇ ಕೈ ಹಿಡಿದುಕೊಂಡು ನಡೆಯಲಿ ದಂಡೆ ಪುಳಕಗೊಳ್ಳುತ್ತದೆ ಪ್ರೇಮ ಎಂದರೆ ಅದಕೆ ರೋಮಾಂಚನ’’ (ಹನಿಗಳು) ಇಲ್ಲಿ ದಂಡೆಯನ್ನು ತನ್ನ ಪ್ರೀತಿಯ ಭಾಗವಾಗಿಸುತ್ತಾರೆ ಮತ್ತು ದಂಡೆಯ ಆಹ್ಲಾದಕರ ಸಂಜೆ ಕವಿತೆಯಾಗಿಸುವುದಕ್ಕೆ ಹೇಳಿ ಮಾಡಿಸಿದ ಜಾಗವಾಗಿದೆ. ಸಂಕಲನದ ಬಹುತೇಕ ಕವಿತೆಗಳು `ಹನಿ’ಗಳನ್ನು ಒಳಗೊಂಡಿವೆ.ಹನಿಗಳನ್ನು  `ಇಬ್ಬನಿ’ ಎನ್ನುವ ಕವಿ ಹನಿಗಳನ್ನೂ ಕವಿತೆಯಾಗಿಸಿದ್ದಾರೆ. ಸಂಕಲನದ ಬಹುತೇಕ ಕವಿತೆಗಳು ವಿಪ್ರಲಂಭ ಶ್ರಂಗಾರದ ವಿಪ್ರ ಯೋಗದಲ್ಲಿ ಮಿಂದು ಭೋಗದ ಕಲ್ಪನೆಯನ್ನು, ಭಾವ ಸಮಾಧಿಯನ್ನು ಅರಸುವ ಆ ಮೂಲಕ ಪ್ರೀತಿಯ, ಪ್ರಣಯದ ಭಾವಗಳನ್ನು ವ್ಯಕ್ತಪಡಿಸುವ ಕ್ರಮ ವಿಶಿಷ್ಠವಾದುದಾಗಿದೆ. ಈ ಕೆಳಗಿನ ಕವಿತೆಯನ್ನು ನೋಡಿ.. “ಕಣಿವೆ ನಿತಂಬಗಳು ಮತ್ತೇರಿವೆ ಬಾ ಸ್ವರ್ಗವೇ ಒಮ್ಮೆ ಬಂದುಬಿಡು ಮತ್ತೆ ಕನಸಿನರಮನೆಯ ಮತ್ತೆ ಕಟ್ಟೋಣ (ಕೆನ್ನೆಗಳು ಏಕಾಂತ ಅನುಭವಿಸುತ್ತಿವೆ) ಕಣಿವೆಗಳ ಶೃಂಗಾರ ಮಾಡೋಣ’’ “ಭೂಮಿಯ ಬಿರುಕಿಗೆ ಬೆರಳಿಟ್ಟ ಕ್ಷಣ ಗಾಢ ಉನ್ಮಾದ,ಕಡಲು,ನದಿ ಉಲ್ಲಾಸಗೊಂಡ ಘಳಿಗೆ’’ ಎನ್ನುವ ಕವಿತೆ ಶ್ರಂಗಾರದ ಪರಾಕಾಷ್ಠೆಯನ್ನು ಮುಟ್ಟುತ್ತದೆ. ಲಂಕೇಶ್ `ನೀಲು’ ಪದ್ಯಗಳನ್ನು ನೆನಪಿಸುತ್ತವೆ. ಅವುಗಳ ಪ್ರಭಾವ ಕೂಡ ಇಲ್ಲದಿಲ್ಲ! “ ಒಂದು ಹಣತೆ ಹಚ್ಚಿದೆ ಕತ್ತಲು ಬೆದರಿತು’’ “ಎಷ್ಟೊಂದು ದೀಪ ಹಚ್ಚಿಟ್ಟೆ ಪ್ರೀತಿ ಅರಳಿತು’’ “ಹಣತೆ ಹಚ್ಚಿದೆ ಹೊಸಿಲು ನಕ್ಕಿತು’’ ಈ ಸಾಲುಗಳು ಒಂದು ಕ್ಷಣ `ವಾಹ್’ ಎನಿಸಿ ನಿಲ್ಲಿಸಿಬಿಡುತ್ತವೆ. “ಬುದ್ಧನಾಗಲಾರೆ’’ ಎಂಬ ಕವಿತೆಯೂ ಸಹ ಸದಾ ಶ್ರಂಗಾರ ಭಾವದಲ್ಲಿ ಉಳಿಯುವೆ ಎನ್ನುವಂತೆ ಸಾರುತ್ತಾರೆ. “ಬೋದಿಲೇರ್ ಮತ್ತೆ ಮತ್ತೆ ನೆನಪಾದ’’ ಎನ್ನುವ ಕವಿತೆ ಗಮನ ಸೆಳೆಯುವುದಷ್ಟೇ ಅಲ್ಲಿ ಬೋದಿಲೇರ್‌ನ ಪ್ರಭಾವ ಕೂಡ ಇರುವುದು ಸ್ಪಷ್ಟ. “ಸದಾ ಏನನ್ನಾದರೂ ಕುಡಿದಿರು ಎಂದ ಕಡು ವ್ಯಾಮೋಹಿ ಮನುಷ್ಯ ಕವಿ ಇದೀಗ ನನ್ನ ದೇಶದಲ್ಲಿ ಹುಟ್ಟಬೇಕಿತ್ತು’’ ಎನ್ನುವ ಕವಿ ಹೆಣ್ಣನ್ನು ಇನ್ನಿಲ್ಲದಂತೆ ಭೋಗಿಸುವ,ಆರಾಧಿಸುವ ಮನಸ್ಸನ್ನು ಸ್ವಚ್ಛಂದ ಗಾಳಿಯಲಿ ಹರಿಬಿಡುವ ಬೋದಿಲೇರ್ ಈ ಕವಿಯ ಆರಾಧ್ಯ ದೈವವಾಗಿದ್ದಾನೆ. “ಮಧ್ಯರಾತ್ರಿ ಮಳೆ ಮಿಂದ ಭೂಮಿ ನಿದ್ದೆ ಹೋಗಿದೆ‘’ ಎಂಬ ದೀರ್ಘ ತಲೆಬರಹದ ಈ ಕವಿತೆ ಮದೋನ್ಮತ್ತ ಕಾಮವನ್ನು ಪ್ರತಿನಿಧಿಸುತ್ತದೆ. ನವ್ಯದ ಆರಂಭದಲ್ಲಿ ರಾರಾಜಿಸಿದ ಲೈಂಗಿಕ ಪ್ರಜ್ಞೆ ಭೂಮಿ, ಮಳೆಯಲ್ಲಿ ಏಕೀಭವಿಸಿ ಬದುಕಿನ ಸೂತ್ರದಲ್ಲಿ ಪ್ರತ್ಯೇಕಗೊಳಿಸಲಾರದಷ್ಟು ಹದವಾಗಿ ಬೆರೆತಿದೆ. ಶೃಂಗಾರದ ಮಡುವಲ್ಲಿ ಭೂಮಿ ಮೂರು ಬಾರಿ ಮಿಂದು ಇರಳಿಡೀ ಅನುಭವಿಸಿದ ಸುಖದ ಪರಾಕಾಷ್ಠೆಯ ಪರಮಾವಧಿಯಾಗಿದೆ. ಈ ಕವಿತೆ, ಕವಿ ಬರೀ ಪ್ರೀತಿಯ ಕಡುಮೋಹಿ ಅಷ್ಟೇ ಅಲ್ಲ, ಪ್ರಣಯದ ಕಡುಮೋಹಿಯೂ ಹೌದು ಎಂಬುದನ್ನು ನಿರೂಪಿಸುತ್ತದೆ. ಉಳಿದಂತೆ, ಭೂಮಿತಾಯಿ ತಲೆ ಬಾಚಿಕೊಳ್ಳುವ ಸಮಯ, ಉಳಿದದ್ದು ದಂಡೆ ವಿರಹ, ದಂಡೆಯ ಜೊತೆ ಮಾತುಬಿಟ್ಟೆ, ಶರಧಿ ಸಾಕ್ಷಿ, ದಂಡೆಯಲ್ಲಿನ ಹಕ್ಕಿ ನಾಚಿತು, ಎದೆಗೆ ಬಿದ್ದ ಅಕ್ಷರವ ಹೊತ್ತು, ಮುಂತಾದ ಕವಿತೆಗಳು ಅವುಗಳ ಭಾಷಾ ಪ್ರಯೋಗದಿಂದ ಗಮನ ಸೆಳೆಯುತ್ತವೆ. ಬದುಕನ್ನು ಕುರಿತು ಗಂಭೀರವಾಗಿ ಯೋಚಿಸುವಂತೆ ಮಾಡುವ’ ನೀರಲಿ ಹೊಳೆ ಹೊಳೆವ ನಿರಿಗೆ ನೆರಳ ಹಿಡಿದಂತೆ’ ಎನ್ನುವ ಕವಿತೆಯಲ್ಲಿ ಕಾಣುತ್ತೇವೆ. `ಬದುಕನ್ನು ಹೇಗೆಂದರೆ ಹಾಗೆ ವಿವರಿಸಲಾಗದು’ ಎನ್ನುವ ಕವಿ, ದಕ್ಕುವ ದಕ್ಕದೇ ಇರುವ ಸಂದರ್ಭಗಳ ನಡುವೆ ಕವಿತೆಯನ್ನು ಹುಡುಕುತ್ತಾರೆ. “ನಡೆದಷ್ಟೇ ದಾರಿ ತೆರೆದುಕೊಂಡಿತು ನಿಂತಲ್ಲೇ ನಿಂತು ಕಲ್ಪಿಸಿ ಭಾವಿಸಿ ಬಯಸುವುದಲ್ಲ ಬದುಕು’’ “ಪಿತೂರಿಯಲ್ಲಿ ದಿನವಿಡೀ ಕಳೆವ ಹುಲು ಮಾನವರ ಕಂಡು ಕಡಲು ಬಯಲು ನಗುತ್ತಿತ್ತು’’ “ಆಕೆ ಸಿಕ್ಕಿದ್ದಳು ಬೆಳಕಿನ ಜೊತೆ ಮಾತಾಡಿದಂತಾಯಿತು’’ “ಮಗು ಮಲಗಿತ್ತು ಅದರ ಮುಖ ಮುದ್ರೆಯಲ್ಲಿ ಬುದ್ಧ ಕಂಡ’’ “ಮುಗಿಲ ದುಃಖ ಭೂಮಿಯ ಬಾಯಾರಿಕೆ ಮುಗಿಯುವಂತದ್ದಲ್ಲ’’ “ಭೂಮಿ ಮಳೆ ಮಧ್ಯೆ ಗಾಳಿ ಸುಳಿಯಿತು ಗಿಡಮರ ಹಕ್ಕಿಗಳು ಆಡಿಕೊಂಡವು’’ “ಶಬ್ದಗಳು ಕರಗುತ್ತಿವೆ ತಣ್ಣಗೆ ಸುರಿವ ಮಳೆಯಲ್ಲಿ’’ “ಮಳೆ ನೆಲದೊಂದಿಗೆ ಪಿಸುಮಾತನಾಡುತ್ತ ಶೃಂಗಾರದ ಮತ್ತಿನಲ್ಲಿರುವಾಗ ಭೂಮಿಯು ನಗ್ನ ನಾನೂ ನಗ್ನ’’ “ಮಾತಿಗೆ ಮಾತು ಬೆಸುಗೆಯಾದವು ಹೃದಯ ಹೂವಾಯಿತು’’ “ಒಮ್ಮೆ ಗುಡುಗಿದಳು ಭೂಮಿ ನಡುಗಿತು ಕ್ಷಮೆ ಕೋರಿದೆ ಕರುಣೆಯ ಸಾಗರವಾದಳು’’ ಈ ಎಲ್ಲಾ ಸಾಲುಗಳನ್ನು ಗಮನಿಸಿದರೆ ಕವಿ ಭಾಷೆಯನ್ನು ಹೇಗೆ ಬಳಸಿಕೊಂಡಿದ್ದಾರೆ ಎಂಬುದು ಗೊತ್ತಾಗುತ್ತದೆ. ಯಾವ ಸಾಲು ವಾಚ್ಯವಾಗದ ಹಾಗೆ ಭಾಷೆಯ ಬಳಕೆಯಾಗಿದೆ. ಸಣ್ಣ ಸಣ್ಣ ಚಿತ್ರಗಳಿಂದ ಮನಸ್ಸನ್ನಾವರಿಸುವ `ಸುಳಿವ ಶಬ್ದವ ಹಿಡಿದು’ ಕವಿತೆ ಕೊನೆಗೆ ಪ್ರೀತಿಯ ಅಗಾಧತೆಯನ್ನು ಸೂಚಿಸುತ್ತದೆ. ಸಂಕಲನದ ಕೊನೆಯ ಕವಿತೆ  “ಈಗೀಗ..’’ ಭಾಷೆಯ ಚಂದ ಸಾರುತ್ತದೆ. “ತಣ್ಣಗೆ ಬೀಸುವ ಗಾಳಿಯಲಿ ನಿಟ್ಟುಸಿರದ್ದೇ ಕಾರುಬಾರು’’ “ಬಟಾ ಬಯಲು ಬಿದ್ದಿರುವ ಆಕಾಶದಲಿ ಕಂಗಾಲಾದ ಕನಸುಗಳು’’ “ಗಹಗಹಿಸಿ ನಗುವ ಬೆಂಕಿಯಲಿ ನಿನ್ನದೇ ಅನುರಾಗದ ನೆನಪುಗಳು’’ ಈ ಸಾಲುಗಳು ಕೊಡುವ ಸಣ್ಣ ಸಣ್ಣ ಚಿತ್ರಗಳು ಅರ್ತಗರ್ಭಿತವಾಗಿವೆ. ಒಟ್ಟಾರೆ “ವಿರಹಿ ದಂಡೆ’’ಯ ಕವಿತೆಗಳು ಕವಿಯ ಸಾಮರ್ಥ್ಯವನ್ನು ಸಾಬೀತುಪಡಿಸುತ್ತವೆ.ಕಥೆಗಾರರಾಗಿ ಗುರುತಿಸಿಕೊಂಡ ಹರಪನಹಳ್ಳಿಯವರು ಕೊನೆಗೆ ಕಾವ್ಯದ ಕಡೆಗೆ ಹೊರಳಿ ಬದುಕಿನ ಚಿರಂತನ ಪ್ರೀತಿಯನ್ನು ಮೊಗೆ ಮೊಗೆದು ಕೊಡುತ್ತ, ಎಲ್ಲಿಯೂ ವಾಚ್ಯವಾಗದ ಹಾಗೆ ಬರೆಯುತ್ತ ;  ಪ್ರೀತಿಯ ಬಗೆಗಿನ ಕಡು ಮೋಹವನ್ನು ಪ್ರಕಟಿಸುತ್ತಾರೆ. ಹರಪನಹಳ್ಳಿಯಿಂದ ಉದ್ಯೋಗ ಅರಸಿ ಕಡಲ ದಂಡೆಗೆ ಬಂದು ಉತ್ತರ ಕನ್ನಡದವರೇ ಆಗಿದ್ದಾರೆ. ಮುನ್ನುಡಿ ಬರೆದಿರುವ ಹಿರಿಯ ಕವಿ ಬಿ.ಎ.ಸನದಿ,ಮೋಹನ್ ಹಬ್ಬು, ಎಂ.ಆರ್. ಕಮಲ ಕವಿಯ ಕಾವ್ಯ ಪ್ರಜ್ಞೆಯನ್ನು ಸರಿಯಾಗಿಯೇ ಗುರುತಿಸಿದ್ದಾರೆ. ಈ ಕವಿಯಿಂದ ಇನ್ನಷ್ಟು ಸಂಕಲನಗಳು ಬರಲಿ. ಪ್ರೀತಿಯ ಮೇರೆ ದಾಟಿ ಬದುಕನ್ನು ಗಂಭೀರವಾಗಿ ಚಿಂತಿಸುವ, ಸಮಕಾಲೀನ ಸನ್ನಿವೇಶಗಳಿಗೆ ಸ್ಪಂದಿಸುವ ಕವಿತೆಗಳನ್ನು ಬರೆಯಲೆಂದು ಎದೆಯ ಹಾರೈಕೆ. *********************************************************  – ಫಾಲ್ಗುಣ ಗೌಡ ಅಚವೆ.

ವಿರಹಿ ದಂಡೆ Read Post »

ಇತರೆ

ಕಾದಂಬರಿ ಕುರಿತು ಮರಳಿಮಣ್ಣಿಗೆ ಡಾ.ಶಿವರಾಮ ಕಾರಂತ ಸುಮಾವೀಣಾ ಮರಳಿಮಣ್ಣಿಗೆ’ಯ ರಾಮನನ್ನು ನೆನಪಿಸಿದ ಕೊರೊನಾ ಕಾಲಾಳುಗಳು   ‘ಮರಳಿ ಊರಿಗೆ”, “ಮರಳಿ ಗೂಡಿಗೆ’, ‘ಮರಳಿ ಮನೆಗೆ’, ‘ಮರಳಿ ನಾಡಿಗೆ’ ಇವೆ ಪದಗಳು ಕೊರೊನಾ ಎಮರ್ಜನ್ಸಿಯಾದಾಗಿನಿಂದ ಕೇಳುತ್ತಿರುವ ಪದಗಳು.ಆದರೆ ಇವುಗಳ ಕಲ್ಪನೆ, ಯೋಚನೆ ನಮ್ಮ ‘ಕಡಲ ತಡಿಯ ಭಾರ್ಗವ’ನಿಗೆ ಅಂದೇ ಹೊಳೆದಿತ್ತು  ಹಾಗಾಗಿ ಕನ್ನಡದ ಶ್ರೇಷ್ಠ ಕಾದಂಬರಿಗಳಲ್ಲಿ ಒಂದಾದ ‘ಮರಳಿ ಮಣ್ಣಿಗೆ’ ಕಾದಂಬರಿಯನ್ನು ನಮ್ಮ  ಕೈಗಿತ್ತಿದ್ದಾರೆ. ಹ್ಯಾಟ್ಸ ಆಫ್ ಟು ಕಾರಂತಜ್ಜ  ಎನ್ನಬೇಕು. ‘ಮರಳಿ ಮಣ್ಣಿಗೆ’ ಕಾದಂಬರಿಯಲ್ಲಿ ರಾಮ, ಐತಾಳರು, ಲಚ್ಚ ಹಾಗು ರಾಮ ಎಂಬ ಮೂರು ತಲೆಮಾರುಗಳು ಬರುತ್ತವೆ.  ಮೊದಲನೆ ತಲೆಮಾರಿನಲ್ಲಿ   ರಾಮ ಐತಾಳರು ಮಾಡುವ ವೈದಿಕ ವೃತ್ತಿ ಹಾಗು ಪುರುಷಪ್ರಧಾನ ವ್ಯವಸ್ಥೆಯ ಧೋರಣೆಗಳು ಕಂಡು ಬರುತ್ತವೆ.  ನಂತರದ ತಲೆಮಾರಿನ ಲಚ್ಚನಲ್ಲಿ    ಆಧುನಿಕ ವಿದ್ಯಾಭ್ಯಾಸ ಅವನ ಬದುಕಿನ ನೆಲೆಯನ್ನು ಮರೆಯಿಸಿ   ಲೋಭಿ ಬದುಕಿನ ಬಿರುಗಾಳಿಯನ್ನು ಬೀಸಿಸುತ್ತದೆ. ಸುಳ್ಳು, ದುಂದು ವೆಚ್ಚ ಇತ್ಯಾದಿಗಳನ್ನು ಮಾಡುತ್ತಾನೆ.  ಈತನ ಹೆಂಡತಿ ನಾಗವೇಣಿ.  ಆಸೆ ಕಂಗಳಿಂದ ಮದುವೆಯಾಗಿ ಬಂದು ನಲುಗುತ್ತಾಳೆ.  ಗಂಡನಿಂದ ನೋವುಂಡ ನಾಗವೇಣಿ ಮಗನಿಂದ ಸಮಾಧಾನವನ್ನು ಪಡೆಯುತ್ತಾಳೆ. ಅಂತಹ ಮಗನೇ   ಮೂರನೆ ತಲೆಮಾರಿನ ರಾಮು.  ತಾಯಿಯ ಶ್ರಮವನ್ನು ಅರಿತ  ಈತ ಅತ್ಮಾಭಿಮಾನವುಳ್ಳವನಾಗಿ   ಮೆರೆಯುತ್ತಾನೆ. ರಾಮನು ಮರಳಿ ಮಣ್ಣಿಗೆ ಬಂದ  ನಂತರ ಶಾಲಾ ಮಾಸ್ತರಿಕೆ ಮತ್ತು ಕೃಷಿ ಎರಡನ್ನೂ ಆಪ್ತವಾಗಿ ದುಡಿಸಿಕೊಳ್ಳುತ್ತಾನೆ.ಹೋಟೇಲ್ ಉದ್ಯಮದಿಂದ ದಕ್ಷಿಣ ಕನ್ನಡ ಜಿಲ್ಲೆಯ ಮೇಲಾದ ಪ್ರಭಾವ  ಮತ್ತು ಪ್ರಾದೇಶಿಕತೆಯ ಸೊಗಡು  ಶಿವರಾಮ ಕಾರಂತರ ಮರಳಿ ಮಣ್ಣಿಗೆ ಕಾದಂಬರಿಯ ವೈಶಿಷ್ಟ್ಯ. 1850ರಿಂದ1940 ನಡುವಿನ ಸುಮಾರು ನೂರು ವರ್ಷಗಳ ಅವಧಿಯಲ್ಲಿ ಕರಾವಳಿ ಕರ್ನಾಟಕದ ಹಳ್ಳಿಯೊಂದರಲ್ಲಿ  ತಲೆಮಾರುಗಳ ನಡುವೆ ನಡೆದ  ಸಾಮಾಜಿಕ ಪ್ರಕ್ರಿಯೆಯನ್ನು ಕಾದಂಬರಿ ತೆರೆದಿಡುತ್ತದೆ. 1942ರಲ್ಲಿ  ಪ್ರಕಟವಾದ ಈ ಕಾದಂಬರಿ ಇವತ್ತಿಗೂ ಅಕ್ಷರಷಃ ಅನ್ವಯಿಸುತ್ತದೆ.   ‘ಮರಳಿ ಮಣ್ಣಿಗೆ’ ಕಾದಂಬರಿಯಲ್ಲಿ ಬರುವ ಮುಖ್ಯ ಪಾತ್ರ ರಾಮ  ಮುಂಬೈ ಬದುಕಿಗೆ ವಿದಾಯ ಹೇಳಿ ರೈಲು ನಿಲ್ದಾಣಕ್ಕೆ ಬಂದಾಗ ಅವನ ಫ್ರೆಂಡ್ಸ್ರೂಮಿನವರ ಜೊತೆಗೆ ಅವನ  ವಿದೇಶಿ ಚಿತ್ರ ಕಲಾ ಶಿಕ್ಷಕಿ ನೋವಾ ಕೂಢ ಬಂದು ಒಂದು ಪುಟ್ಟ ಚಿತ್ರಪಟವನ್ನು ಸುರುಳಿ  ಮಾಡಿ “ಇದು ನನ್ನ ಮನೆಯ ಹಿಂದಿನ ಗುಡ್ಡ” ಎಂದು ಹೇಳಿ ನಕ್ಕಿರುತ್ತಾಳೆ ಆಗ ರಾಮುವಿಗೆ  ನೋವಾ ತನ್ನ ನಾಡಿಂದ ಓಡಿಬಂದುದರಿಂದ ಆ ನಾಡಿಗಾಗಿ ಅವಳ ಜೀವ ಹಂಬಲಿಸುತ್ತಿದೆಯೇನೋ ಎಂದೆನಿಸಿ ಕಣ್ಣೀರು ಬರುತ್ತದೆ. ಇದೆ ನಾಡಿನ ಹಂಬಲ ತವರ ಹಂಬಲ  ಅಂದರೆ, ಅದಕ್ಕೇ ನಮ್ಮ ಜಾನಪದ ಹೆಣ್ಣುಮಕ್ಕಳು “ಕಾಸಿಗೆ ಹೋಗಲಿಕೆ ಏಸೊಂದು ದಿನ ಬೇಕ ತಾಸ್ಹೊತ್ತಿನ ಹಾದಿ ತವರೂರು” ಎಂದು  ತಾವು ಹುಟ್ಟಿದ ನೆಲವನ್ನು ಕಾಶಿಗೆ  ಹೋಲಿಸಿರುವುದು.      ಕಾದಂಬರಿಯಲ್ಲಿ ಅನ್ಯ ಮನಸ್ಥಿತಿಯ  ಒಂದೇ ಕುಟುಂಬದ ಮೂರು ಜನರನ್ನು ನೋಡಬಹುದು ಆದರೆ ಈಗ ಇಂಥ ಸಾವಿರ ಲಕ್ಷ  ಲಕ್ಷ ಮನಸ್ಸುಗಳು   ನಮ್ಮ ನಡುವಿವೆ. ಅನ್ಯ ದೇಶಗಳು “ಅನ್ಯದೇಶಿ” ಎನಿಸಿಕೊಂಡವರನ್ನು ಒಮ್ಮೆಗೇ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸುವದಿಲ್ಲ ಅಲ್ಲೂ ಜನಾಂಗೀಯ ಭೇದ, ಹಿಂಸೆ, ತಾರತಮ್ಯ ಗಳು ಇರಬಹುದು, ಹೊಂದಾಣಿಕೆಯ ಸಮಸ್ಯೆ ಇರಬಹುದು ಭಾಷೆಯ ಸಮಸ್ಯೆ ಇರಬಹುದು.  ಇದರ ನಡುವೆ ಅತ್ಯಂತ ಚೆನ್ನಾಗಿರುವ ಕುಟುಂಬಗಳು ಇವೆ ಅದರ ಬಗ್ಗೆ ತಕರಾರಿಲ್ಲ.    ‘ಮೆರೆಯುತ್ತಿದ್ದ ಭಾಗ್ಯವೆಲ್ಲ ಹರಿದು ಹೋಯಿತೆನುವ ತಿರುಕ ಮರಳಿ ನಾಚಿ ಮರಳುತ್ತಿದ್ದ ಮರುಳನಂತೆಯೇ’ ಎಂಬಂತೆ ಸೋ ಕಾಲ್ಡ್ ಹೈಪ್ರೊಫೈಲ್ ಇರುವವರಿಂದ  ಮೊದಲುಗೊಂಡು ಕಡುಬಡವರವರೆಗೂ  ಎಲ್ಲಾ ಸ್ಥರದ ಉದ್ಯೋಗಕ್ಕಾಗಿ, ಅಧ್ಯಯನಕ್ಕಾಗಿ,  ದಿನಗೂಲಿಗಾಗಿ ಊರು ಬಿಟ್ಟವರು ಮರಳಿ ತಮ್ಮ ಮನೆಯನ್ನು ತಮ್ಮ ತಮ್ಮ ಹಳ್ಳಿಗಳನ್ನು ಸೇರಬಯಸುತ್ತಿದ್ದಾರೆ.  ಹಳ್ಳಿಗಳಿಂದ  ನಗರಕ್ಕೆ ವಲಸೆ  ಬರುವ ಕಾಲ ಬದಲಾಗಿ ನಗರಗಳಿಂದಲೇ ಹಳ್ಳಿಗಳಿಗೆ  ವಲಸೆ  ಹೋಗುವ ಕಾಲ ಬಂದಿದೆ. ಲಾಕ್ ಡೌನ್ ಆಗಿದೆ ಇದ್ದಲ್ಲೆ ಇರಿ ಎಂದರೆ  ಕೇಳಲಿಲ್ಲ. ಅದರಲ್ಲೂ  ರಾಯಚೂರಿನ ಹೆಣ್ಣಮಗಳು  ತನ್ನೂರಿನವರೆಗೂ  ಕಡೆಗೂ ತನ್ನ ಮನೆಯನ್ನು  ಕಡೆಗೂ ಸೇರಲೇ ಇಲ್ಲವಲ್ಲ ಹಸಿವಿನಿಂದ ಹಾಗೆ ಪ್ರಾಣ ಬಿಟ್ಟಳಲ್ಲ. ಹಾಗೆ ದೂರದ ಕಣ್ಣೂರಿನಿಂದ ಮಂಗಳೂರಿಗೆ ಕಾಲ್ನಡಿಗೆಯಲ್ಲೇ ಬಂದ ಗರ್ಭಿಣಿ ಹೆಣ್ಣು ಮಗಳು ನಡೆದೇ ಬಂದಿದ್ದಾರಲ್ಲ ಏನು ಹೇಳ ಬೇಕು ಇದಕ್ಕೆ.  ಸರಕಾರ ಇಷ್ಟು  ಉಳಿದುಕೊಳ್ಳಲು ತಾತ್ಕಾಲಿಕ ವ್ಯವಸ್ಥೆ , ಊಟದ ವ್ಯವಸ್ಥೆ ಮಾಡಿದ್ದಾರೆ ಇಷ್ಟು ಆದ ಮೇಲೂ  ಏಕೆ ಈ ಹಂಬಲ ಎಂಬ ಪ್ರಶ್ನೆ ಸಹಜವಾಗಿ ಮೂಡುವಂಥದ್ದೆ. ಇನ್ನು ವಿದೇಶಗಳಲ್ಲಿ ಇರುವವರೂ ಕೂಡ ನಮ್ಮನ್ನು “ದೇಶಕ್ಕೇ ಕರೆಸಿಕೊಳ್ಳಿ…” ಎಂದು ಅಂಗಲಾಚಿ ಬೇಡಿಕೊಳ್ಳುತ್ತಿದ್ದಾರೆ. ಕಾರಣ ಇಷ್ಟೆ ತವರಿನ ಸೆಳೆತ.  ಆ ಸೆಳೆತವೇ  ಆಪ್ಯಾಯಮಾನ. ನಮ್ಮ ನಾಡಿನ ಸೌಗಂಧ ನಮಗೇ ಗೊತ್ತು. ಉಪ್ಪರಿಗೆಯ ಮೇಲಿನ ಮೆಟೀರಿಯಲ್ಸ್ಟಿಕ್  ಜೀವನ ನಿಜವಾದ ಅನುಭೂತಿಯನ್ನು ಕೊಡಲಾರದು.  ‘ಸಿರಿಗರವನ್ನು ಹೊಡೆದವರ ನುಡಿಸಲು ಬಾರದು’ ಎಂಬಂತೆ ಹಣದ ನಶೆಯೇರಿಸಿಕೊಂಡವರು,  ನಾವೇ ಎಲ್ಲಾ ಎಂಬ ಹುಂಬತನಕ್ಕೆ , ವ್ಯಾಮೋಹಗಳಿಗೆ ಒಳಗಾಗಿ ಪ್ರತಿಭಾಪಲಾಯನಗೈದವರು, ನಾವು ಭಾರತೀಯ ಸಂಜಾತರು ಎಂದು ಹೇಳಿ ಕೊಳ್ಳಲು ಹಿಂಜರಿಯುತ್ತಿದ್ದವರೆಲ್ಲಾ ಭಾರತಕ್ಕೆ ಮರಳಿ ಹೋಂ ಕ್ವಾರಂಟೈನ್ಗಳಾಗಿದ್ದರು. ಇನ್ನು ಕೆಲವರು  ಕ್ವಾರಂಟೈನ್  ಅವಧಿ ಮುಗಿದರೂ ಆಚೆ ಬಾರದೆ ಕಿಟಕಿಯ ಪರದೆ ಸರಿಸಿ ಹೊರಗೆ ಏನಾಗುತ್ತಿದೆ ಎಂದು ಮೆಲ್ಲಗೆ  ನೋಡುತ್ತಿದ್ದರು. ಇನ್ನು ನಗರ ಪ್ರದೇಶಗಳಿಂದ ಹಿಂದಿರುಗಿದವರು ಕೃಷಿ ಚಟುವಟಿಕೆಯಲ್ಲಿ ತೊಡಗಿರುವುದು “ಮರಳಿ ಮಣ್ಣಿಗೆ” ಪದಕ್ಕೆ ಘನತೆ ತಂದುಕೊಟ್ಟಿದೆ.  ‘ಮರಳಿ ಮಣ್ಣಿಗೆ’ ಕಾದಂಬರಿಯ ರಾಮನೂ ಮಾಡಿದ್ದೂ  ಕೃಷಿಯನ್ನೇ.  ಎಷ್ಟು ಸಾಂದರ್ಭಿಕವಾಗಿದೆಯಲ್ಲವೇ? ಹೌದು! ನಮಗೆ ಅನ್ಯ ದೇಶ ಅನ್ನ ಕೊಡಬಹುದು ಹಣ ಕೊಡಬಹುದು, ಸ್ಥಾನಮಾನ ಕೊಡಬಹುದು,  ಜೀವನ ಕೊಡಬಹುದು ಆದರೆ ನೆಮ್ಮದಿಯನ್ನು ಎಂದಿಗೂ ಕೊಡಲಾರದು ಎಂದೇ ನನ್ನ ಅನಿಸಿಕೆ. ವಲಸಿಗ ಹಕ್ಕಿಗಳು ತಮ್ಮ ವಿಹಾರವನ್ನು ಮುಗಿಸಿ ಸ್ವಸ್ಥಾನಕ್ಕೆ ಮರಳುವಂತೆ ತಮ್ಮ ಮೂಲ ನೆಲೆಗೆ ಮರಳಲೇಬೇಕು.    ಅದೇನೆ ಕೊಡುಗೆ ಕೊಡುವುದಿದ್ರೂ ನಮ್ಮ ದೇಶಕ್ಕೆ ಕೊಡಬಹುದಲ್ಲವೇ? ವಿಶ್ವದ ಯಾವ ಬಲಿಷ್ಠ ರಾಷ್ಟ್ರಕ್ಕೂ ಆರ್ಥಿಕ ಸಂಪತ್ತನಲ್ಲಿ, ಭೌದ್ಧಿಕ ಸಂಪತ್ತಿನಲ್ಲಿ ಭಾರತ ಕಡಿಮೆಯೇನಿಲ್ಲ . ಕೊರೊನಾ ಎಮರ್ಜನ್ಸಿ ಬಂದ ನಂತರ ಸಾಮಾಜಿಕ ಆಧ್ಯಯನ ಕಾರರು ಮೊದಲಿನಂತಹ ದಿನಗಳು ಇನ್ನು ಇರಲಾರವು ಎಂದಿದ್ದಾರೆ. ಇನ್ನು  ಎಂಥಹ ದಿನಗಳು ಬಂದರು ಅದಕ್ಕೆ ನಾವು ಸರ್ವ ಸನ್ನಧ್ಧರಾಗಿರಬೇಕು. ಲಾಕ್ ಡೌನ್ ಕಾಲ  “ಮರಳಿ ಮಣ್ಣಿಗೆ”  ಅಲ್ಲ “ಮರಳಿ ನಮ್ಮ ಸಂಸ್ಸ್ಕೃತಿ”ಗೆ ಎಂಬಂತಾಗಿದೆ. ಕೈ ಜೋಡಿಸಿ ನಮಸ್ಕರಿಸುತ್ತಿದ್ದೇವೆ . ಮನೆಯ ಅಡುಗೆ ರುಚಿಸುತ್ತಿದೆ. ಎಲ್ಲರೂ ಒಟ್ಟಾಗಿ ಕ್ವಾಲಿಟಿ ಟೈಮ್ ಕಳೆಯುತ್ತಿದ್ದೇವೆ. ನಮ್ಮ ಅಡುಗೆಮನೆಯನ್ನು ವಿದೇಶಿ ಅಡುಗೆ ಸಾಮಾಗ್ರಿಗಳು ಆಕ್ರಮಿಸಿಕೊಂಡಿದ್ದನ್ನು ತಡೆದು  “ ಹಿತ್ತಲ ಗಿಡ ಮದ್ದಲ್ಲ “ಎಂಬಂತೆ ನೇಪಥ್ಯಕ್ಕೆ  ಸರಿದಿದ್ದ ನಮ್ಮ ಅಡುಗೆಯಲ್ಲಿ ಹಿಂದಿನಿಂದಲೂ  ಬಳಸುತ್ತಿದ್ದ ಅರಿಸಿನ ಕಾಳುಮೆಣಸು, ಬೆಳ್ಳುಳ್ಳಿ ಶುಂಠಿಗಳು ಅಡುಗೆ ಮನೆಯ ಪರಿಮಳವನ್ನು  ಹೆಚ್ಚಿಸಿವೆ. “ ಕೆಟ್ಟು ಪಟ್ಟಣ ಸೇರು” ಎಂಬ ಗಾದೆ “ಕೆಟ್ಟು ಹಳ್ಳಿ ಸೇರು” ಎಂದು ಬದಲಾಗಿದೆ.  ಕೊರೊನಾ  ವೈರಸ್ ಬಂದಿದೆ ಸರಿ! ನಮ್ಮ ದೇಶದ  ಅರ್ಥ ವ್ಯವಸ್ಥೆಯ ಮೇಲೆ ಬಲವಾದ ಪೆಟ್ಟನ್ನೂ ನೀಡಿದೆ. ಆದರೆ ಜಾಗತಿಕ ಮಟ್ಟದಲ್ಲಿ ಭಾರತದ ಅಂತಃಶಕ್ತಿ ಏನು ಎಂಬುದನ್ನು ವೃದ್ಧಿಸಿಕೊಂಡಿದೆ. ವಿಶ್ವಸಂಸ್ಥೆಯಿಂದ ಮೊದಲುಗೊಂಡು  ಅಮೇರಿಕಾ  ಬ್ರೆಜಿಲ್  ರಾಷ್ಟ್ರಗಳು ನಮ್ಮನ್ನು ಕೊಂಡಾಡುತ್ತಿವೆ. ಮನಿ ಪವರ್ಗಿಂತ  ಈಗ ನಮ್ಮ   ಭಾರತ ಮಣ್ಣಿನ ಪವರ್ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ.  ನಮ್ಮ ದೇಶ, ನಾಡು  ಏನೂ ಅಲ್ಲ  ಎಂದ ರೋಗಗ್ರಸ್ಥ ಮನಸ್ಸುಗಳು ಕೊರೊನಾ ಬಂದಾಗಿನಿಂದ ಮರಳಿ ಮಣ್ಣಿಗೆ  ಬಂದಿವೆ ಬರುತ್ತಿವೆ. ******************************* ಸುಮಾವೀಣಾ

Read Post »

ಕಾವ್ಯಯಾನ

ಬದುಕುವೆ ರಾಜಹಕ್ಕಿಯಾಗಿ

ಕವಿತೆ ಬದುಕುವೆ ರಾಜಹಕ್ಕಿಯಾಗಿ ರಾಘವೇಂದ್ರ ದೇಶಪಾಂಡೆ ಈಡೇರುವವು ಆಸೆಗಳು ಸಾವಿರಾರುಈ ಭವದಲಿ…ಗಟ್ಟಿತನದ ಅಪೇಕ್ಷೆಯ ಆಶಯದಲಿನನ್ನೀ ಭಾವಪರವಶದಲಿ… ಹೊರಹೊಮ್ಮಿದವು ನಿರೀಕ್ಷೆಗಳುಕಮ್ಮಿಯೆನಿಸಿತಾದರೂ…ಪ್ರೀತಿಯ ಹುಟ್ಟು ಮತ್ತು ಸಾವಿನಲಿಕಾಣಸಿಗದಿಲ್ಲಿ ವ್ಯತ್ಯಾಸ… ಜೀವಿಸುತಿರುವೆ ಅಸದೃಶವಾಗಿಕತ್ತಲ ಗರ್ಭದಲಿ…ಕಟ್ಟಿಕೊಂಡ ಹಾಳೆಯ ಕೋಟೆ ಮಧ್ಯೆತೂರಿಬರುವ ಪ್ರೇಮಗಾಳಿಯಲಿ… ಇದೆ ಎನಗೆ ತಾಳ್ಮೆ ಕಾಯುವಲಿಅದೇ ತೃಪ್ತಭಾವದಲಿ…ಬದುಕುವೆ ಖಂಡಿತ ಆಸೆಗೂಡಿನಲಿಸ್ವಚ್ಛಂದದ ರಾಜಹಕ್ಕಿಯಾಗಿ… **************************************

ಬದುಕುವೆ ರಾಜಹಕ್ಕಿಯಾಗಿ Read Post »

ಅಂಕಣ ಸಂಗಾತಿ, ಚಿತ್ತ ಜನ್ಯ

ಅಂಕಣ ಬರಹ ಹಾಡು ಹಳೆಯದಾದರೇನು ಹಳೆಯ ಹಾಡುಗಳನ್ನು ಕೇಳುವಾಗಲೆಲ್ಲಾ ಎಂಥದೋ ಭಾವುಕತೆಗೆ ಒಳಗಾಗುವುದು, ಏನೋ ಒಂದು ರೀತಿ ಹೊಟ್ಟೆ ಚುಳ್ ಎನ್ನುವುದು, ಆ ಹಳೇ ದಿನಗಳ ನೆನಪುಗಳೆಲ್ಲಾ ಹಿಂದಿನ ಜನ್ಮದ ನೆನಪುಗಳೇನೋ ಎನ್ನುವಂತೆ ಕಾಡುವುದು… ಹೀಗೆಲ್ಲಾ ನನಗೆ ಮಾತ್ರ ಅನಿಸುತ್ತದಾ? ಬೇರೆಯವರಿಗೂ ಹೀಗೆಲ್ಲಾ ಆಗುತ್ತದಾ? ಗೊತ್ತಿಲ್ಲ. ಆದರೆ ನನಗೆ ಇದರ ಜೊತೆಗೆ ಇನ್ನೂ ವಿಚ್ ವಿಚಿತ್ರವಾಗೆಲ್ಲ ಏನೇನೋ ಅನ್ನಿಸುವುದಿದೆ. ಹಳೇ ಫೋಟೋಗಳನ್ನು ನೋಡುವಾಗ ಅದರಲ್ಲಿನ ಅಪರಿಚಿತರ ಬಗ್ಗೆ ಏನೇನೋ ಅನಿಸುತ್ತದೆ. ಅವರನ್ನು ನಾನೆಲ್ಲೋ ಭೇಟಿ ಮಾಡಿರುವೆ, ಮಾತಾಡಿಸಿರುವೆ, ಅಥವಾ ಇವರೆಲ್ಲಾ ಎಲ್ಲಿಯವರು, ಇವರೂ ನಮ್ಮಂತೆಯೇ ಬದುಕುತ್ತಿರುವರಾ… ಇನ್ನೂ ಏನೇನೋ ಅನಿಸಿ ಕಾಡತೊಡಗುತ್ತದೆ. ತಲೆ ಕೊಡವಿ ಎದ್ದು ಹೋಗದಿದ್ದರೆ ತಲೆಯೇ ಉದುರಿಹೋಗುತ್ತದೇನೋ ಅನಿಸಿಬಿಡುವಷ್ಟು. ಆದರೂ ಹಳೆಯ ಮಧುರ ಹಾಡುಗಳೆಂದರೆ ನನಗೆ ವಿಪರೀತ ಇಷ್ಟ. ಎಂದೋ ಪ್ರೀತಿಯಿಂದ ಹಾಡಿಕೊಳ್ಳುತ್ತಿದ್ದ ಹಾಡುಗಳು, ಎಂದೂ ಶ್ರುತಿ ತಾಳಗಳ ಲೆಕ್ಕಾಚಾರದ ಮಾತನ್ನು ನನ್ನೊಂದಿಗೆ ಆಡಿಲ್ಲ. ಭಾವದ ಅಗತ್ಯಕ್ಕೆ ತಕ್ಕಂತೆ ಒಂದಾಗಿವೆ. ಮನಸನ್ನು ಮುದಗೊಳಿಸಿವೆ. ನಾನು ಐದನೇ ತರಗತಿಯಲ್ಲಿದ್ದಾಗ ಸರ್ವಶಕ್ತ ಎನ್ನುವ ಪದ್ಯವೊಂದು ನಮ್ಮ ಪಠ್ಯಪುಸ್ತಕದಲ್ಲಿತ್ತು. “ದೇವ ನಿನ್ನ ಇರವ ನಂಬಿ ಜೀವಕೋಟಿ ಸಾಗಿದೆ, ಕಾವನೆಂಬ ಅರಿವಿನಲ್ಲಿ ನಿನ್ನ ಚರಣಕೆರಗಿದೆ” ಎಂದು ಅದರ ಪಲ್ಲವಿ. ಬರೆದ ಕವಿ ಹೆಸರನ್ನು ಮರೆತಿರುವುದಕ್ಕೆ ಕ್ಷಮೆ ಇರಲಿ. ಅದೆಷ್ಟು ಚಂದದ ರಾಗದಲ್ಲಿ ನಮಗದನ್ನು ನಮ್ಮ ಬಸವಣ್ಯೆಪ್ಪ ಮೇಷ್ಟ್ರು ಹೇಳಿಕೊಟ್ಟಿದ್ದರಂದರೆ ಆ ಪ್ರಾರ್ಥನೆಯನ್ನು ಹಾಡುತ್ತಾ ಹೋದಂತೆ ಕಣ್ತುಂಬುತ್ತಿತ್ತು. ಅಳು ಅಳುತ್ತಲೇ ಅದನ್ನು ಹಾಡಿ ಮುಗಿಸುವಾಗ ಎಂಥದೋ ಸಮಾಧಾನ, ಧನ್ಯತಾ ಭಾವ ಮನಸಿಗೆ. ನಿರಾಳ ಎನಿಸಿಬಿಡುತ್ತಿತ್ತು. ಇಂತಹ ಅದೆಷ್ಟೋ ಹಾಡುಗಳನ್ನು ನಮ್ಮ ಬಸವಣ್ಯಪ್ಪ ಮೇಷ್ಟ್ರು ಹೇಳಿಕೊಟ್ಟಿದ್ದರು. “ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು(ಬಿ.ಎಂ.ಶ್ರೀ.)”, ಆ ಹಾ ಹಾ ಮಲ್ಲಿಗೆ, ಬರುವೆನೇ ನಿನ್ನಲ್ಲಿಗೆ(ಬೇಂದ್ರೆ)”, ” ಈ ನಾಡಿನಲಿ ನಾನು ಮೂಡಿಬಂದುದೆ ಸೊಗಸು, ಭಾರತವ ಪ್ರೀತಿಸುವ ಭಾಗ್ಯವೆನದಾಯ್ತು”….. ಹೀಗೆ ಅದೆಷ್ಟೋ ಭಾವಪೂರ್ಣ ಹಾಡುಗಳನ್ನು ಮಕ್ಕಳಿಂದ ಹಾಡಿಸಿದ ಶ್ರೇಯ ಅವರದು. ಅವರಿಗೆ ಬಹುಶಃ ಗೊತ್ತಿರಲಿಕ್ಕಿಲ್ಲ ಅದರ ಪರಿಣಾಮ. ನಾವಿವತ್ತು ಏನಾಗಿ ಬೆಳೆದಿದ್ದೇವೋ ಅದರ ಹಿಂದಿನ ಮೌಲ್ಯಗಳನ್ನು ನಾವು ಪಡೆದದ್ದು ಇಂತಹ ಅದೆಷ್ಟೋ ಹಾಡುಗಳಿಂದ ಎಂದರೆ ಸುಳ್ಳಲ್ಲ. ಅವು ಕಾಲದ ಜೊತೆ ಮರೆಯಾಗತೊಡಗಿದಾಗ ಒಂಥರಾ ಸಂಕಟವಾಗುತ್ತಿತ್ತು. ಮೆದುಳಿನ ಸಾಮರ್ಥ್ಯದ ಬಗ್ಗೆ ಅನುಮಾನವಾಗುತ್ತಿತ್ತು. ಆಗ ಹೊಳೆದದ್ದು, ಡೈರಿಯೆನ್ನುವ ಗಂಧದ ಡಬ್ಬಿಯಲ್ಲಿ ನನ್ನ ಪ್ರೀತಿಯ ನವಿರಾದ ನವಿಲುಗರಿಯಂಥ ಹಾಡುಗಳನ್ನು ಬರೆದಿಡಬೇಕು ಎನ್ನುವುದು. ಬರೆದೆ. ಬರೆದ ಹಾಡುಗಳಲ್ಲಿ ನನ್ನಿಷ್ಟದ “ಕಾಡು ಮಲ್ಲಿಗೆಯೊಂದು ಕಾಡಿನಲಿ ನರಳುತಿದೆ, ಬಾಡಿಹೋಗುವ ಮುನ್ನ ಕೀಳುವರಾರೆಂದು” ಎನ್ನುವ ಕವಿತೆಯೂ ಇತ್ತು. ಆದರೆ ಚಿಕ್ಕಂದಿನಲ್ಲಿ ನನಗೆ ಅದನ್ನು ಬರೆದವರು ಯಾರು ಎನ್ನುವುದು ಗೊತ್ತಿರಲಿಲ್ಲ. ಇತ್ತೀಚೆಗೆ ಅದನ್ನಯ ಬರೆದವರು ವ್ಯಾಸರಾಯ ಬಲ್ಲಾಳರು ಎಂದು ತಿಳಿದದ್ದು. ಡೈರಿಯಲ್ಲೇನೋ ಬರೆದಿಟ್ಟಿದ್ದೆ. ಆದರೆ ಒಂದಿನ ಯಾರೋ ಆ ಡೈರಿಯನ್ನೇ ಅಪಹರಿಸಿಬಿಟ್ಟರು. ಎಷ್ಟು ಹುಡುಕಿದರೂ ಸಿಗಲಿಲ್ಲ. ಅಳುವೇ ಬಂತು. ನೆನಪಿದ್ದಷ್ಟೂ ಹಾಡುಗಳನ್ನು ಮತ್ತೆ ಬರೆದಿಟ್ಟುಕೊಂಡೆ. ಆದರೆ ಒಂದಷ್ಟು ಇಷ್ಟದ ಹಾಡುಗಳು ನೆನಪಿನಿಂದಲೂ ಹಾರಿದ್ದವು. ಅತ್ತೆ ಅಷ್ಟೇ. ಆಗಲೇ “ಕಾಡು ಮಲ್ಲಿಗೆಯೊಂದು…” ಕವಿತೆಯೂ, ಕಳೆದು ಹೋದದ್ದು. ಆದರೆ ಮೊನ್ನೆ ವಿಜಯ ಪ್ರಕಾಶರ ಧ್ವನಿಯಲ್ಲಿ ಆ ಹಾಡನ್ನು, ಅದೇ ಧಾಟಿಯಲ್ಲಿ ಮತ್ತೂ ವಿಸ್ತೃತ ಸ್ವರ ಪ್ರಸ್ತರ, ಆಲಾಪ ಮತ್ತು ಚಂದದ ಪ್ರಸ್ತುತಿಯೊಂದಿಗೆ ಕೇಳಿದಾಗ ಕಿವಿಗಳಿಗೆ ಅಪೂರ್ವ ಆನಂದವಾಅಯಿತು. ಅದರ ಸಾಹಿತ್ಯವೂ ಸಿಕ್ಕಿದ್ದು ಮತ್ತೊಂದೇ ಎತ್ತರದ ಖುಷಿ. ಆದರೆ ಕೆಲವರು ಯಾಕೆ ಹಾಗೆ ಮತ್ತೊಬ್ಬರ ಸಂಗ್ರಹವನ್ನು ಕದಿಯುತ್ತಾರೋ ಗೊತ್ತಿಲ್ಲ. ನನಗೆ ಹೀಗೆ ಡೈರಿಯಲ್ಲಿ ಬರೆದಿಟ್ಟುಕೊಳ್ಳುವ ಅಭ್ಯಾಸ ಶುರುವಾದದ್ದು ಬಹಳ ಚಿಕ್ಕಂದಿನಲ್ಲಿಯೇ. ಈಗ ನನ್ನ ತರಗತಿಯ ಪ್ರತಿಯೊಬ್ಬ ಮಗುವಿನಿಂದಲೂ ಈ ಕೆಲಸವನ್ನು ಮಾಡಿಸುತ್ತಿರುತ್ತೇನೆ. ಆಸಕ್ತಿ ಮತ್ತು ಪ್ರೀತಿಯಿಂದ ಮಾಡುವವರನ್ನು ಕಂಡಾಗ ಮಾಡಿಸಿದ ಕೆಲಸ ಸಾರ್ಥಕವಾಯಿತು ಎನಿಸುತ್ತದೆ. ಈ “ಕಾಡುಮಲ್ಲಿಗೆಯೊಂದು” ಕವಿತೆ ಒಂದೊಂದು ಬಾರಿ ಒಂದೊಂದು ಅರ್ಥವನ್ನು ಹೊಳೆಯಿಸುತ್ತದೆ. ನಿರ್ಲಕ್ಷಿತ ಸಮುದಾಯವೊಂದರ ದನಿಯಾಗಿ ಹಾಡುತ್ತದೆ. ಮೀರಾ ಎನ್ನುವ ಕವಯಿತ್ರಿಯ ಕವಿತೆಯೊಂದು ಕವಿತೆ ಇದ್ದಕ್ಕೆ ಸಮವರ್ತಿಯೆನ್ನುವಂತೆ ಇದೆ. “ಬಿಳಿ ಮಲ್ಲಿಗೆ ಮುಡಿ ಏರುತ ನಗುತಿರೆ, ಕಾಕಡ ಗಿಡದಲಿ ಬಾಡುತಿದೆ…” ಎಂದು ಆ ಹಾಡು ಶುರುವಾಗುತ್ತದೆ. “ಕಾಡುಮಲ್ಲಿಗೆ”ಯ ನೆನಪಲ್ಲಿ, ಅನುಪಸ್ಥಿತಿಯಲ್ಲಿ ಈ ಕವಿತೆ ನನಗೆ ಸಾಂತ್ವನ ಹೇಳಿತ್ತು. ಆದರೆ ” ಕಾಡು ಮಲ್ಲಿಗೆಯ” ಮುಂದೆ ಇದು ಸಪ್ಪೆಯೇ ಎಂದು ಬಹಳಷ್ಟು ಸಾರಿ ಅನ್ನಿಸಿದೆ. ಇವುಗಳ ಯಾದಿಯಲ್ಲಿ ಬರುವ ಮತ್ತೊಂದು ಗೀತೆಯೆಂದರೆ “ಬಂಗಾರದೆಲೆಯ ಮೇಲೆ ತಂಗಾಳಿ ಬೀಸಿ ಬಂತು, ಸಂಗಾತಿ ನಿನ್ನ ನೆನಪು, ನನ್ನೆದೆಗೆ ತಂಪು ತಂತು..” ಕವಿತೆ. ಹರೆಯದ ಕನಸುಗಳಿಗೆ ಕಸುವು ತುಂಬಿದ ಕವಿತೆ ಇದು ಎಂದರೆ ತಪ್ಪಾಗಲಾರದು. ಅಷ್ಟು ಮುದ್ದಾದ ಭಾವಗೀತೆ ಇದು. “ಆ ಶುಕ್ರ ತಾರೆ ನಕ್ಷತ್ರ ಧಾರೆ ಧರಗೇರಿ ಏರಿ ಏರಿ, ನನ್ನೆದೆಯ ವೀಣೆ ನಿನ್ನೆದೆಯ ಮೀಟಿ ಇದು ರಾಗ ರಾಸ ವೀಣೆ” ಎಂದು ತಾರಕವನ್ನು ಮುಟ್ಟುವ ಜಾಗವಂತೂ ಭಾವ ತೀವ್ರತೆ ತೀವ್ರ ಗತಿ ಪಡೆದುಕೊಂಡು ಶಿಖರ ಮುಟ್ಟುತ್ತದೆ. ಹಾಗೇ ನಾವೆಲ್ಲರೂ ಹಾಡಿನೊಳಗೆ ಲೀನವಾಗುತ್ತೇವೆ. ಚಿಕ್ಕಂದಿನಲ್ಲಿ ಹಾಡಿಕೊಳ್ಳುತ್ತಿದ್ದ ಮತ್ತೊಂದು ದೇಶಭಕ್ತಿ ಗೀತೆಯೆಂದರೆ, “ಮೊಳಗಲಿ ಮೊಳಗಲಿ ನಾಡಗೀತವು, ಮೂಡಲಿ ಮೂಡಲಿ ಸುಪ್ರಭಾತವು” ಎನ್ನುವ ಈ ಗೀತೆ. ಬಹಳ ವರ್ಷಗಳ ವರೆಗೂ ನನಗೆ ಈ ಗೀತೆಯನ್ನು ಬರೆದವರು ಎಚ್.ಎಸ್.ವೆಂಕಟೇಶಮೂರ್ತಿಯವರು ಎನ್ನುವ ವಿಚಾರವೇ ತಿಳಿದಿರಲಿಲ್ಲ. ಆದರೆ ಆ ಗೀತೆಗಿದ್ದ ಪ್ರಸಿದ್ಧಿಯ ಬಗ್ಗೆ ನಿಜಕ್ಕೂ ಆಶ್ಚರ್ಯವೆನಿಸುತ್ತದೆ. ಪುಟ್ಟ ಮಕ್ಕಳಿಂದ ಹಿರಿಯರವರೆಗೂ ಎಲ್ಲರ ನಾಲಿಗೆ ಮೇಲೆ ನಲಿದಾಡುತ್ತಿದ್ದ ಗೀತೆ ಅದು. ಈಗಲೂ ನಾ ನನ್ನ ಮಕ್ಕಳಿಗೆ ಅದನ್ನು ಹೇಳಿಕೊಡುತ್ತಿರುತ್ತೇನೆ. ಇಂತಹುದೇ ಮತ್ತೊಂದು ದೇಶಭಕ್ತಿ ಗೀತೆಯೆಂದರೆ “ಕುಹೂ ಕುಹೂ ನೀ ಕೋಗಿಲೆಯೆ ನಾ ಹಾಡುವ ಹಾಡೊಂದ ಹಾಡುವೆಯಾ ನಾ ಹೇಳುವ ಮಾತೊಂದ ಕೇಳುವೆಯಾ…” ಗೀತೆ. ಈಗಲೂ ಇದನ್ನು ಬರೆದ ಕವಿಯ ಬಗ್ಗೆ ನನಗೆ ಅಸ್ಪಷ್ಟ ತಿಳಿವಳಿಕೆ. ಆದರೆ ಅದು ಕೇಳುವ ಹಾಡುವ ಹೃದಯಗಳಲ್ಲಿ ನೆಲೆಸಿರುವ ರೀತಿಯ ಬಗ್ಗೆ ಸ್ವತಃ ಕವಿಗೇ ಎಂತಹ ಹೆಮ್ಮೆ ಮತ್ತು ಪರಮಾನಂದವಿರಬಹುದು… ಬಹುದೊಡ್ಡ ಅಚ್ಚರಿ… ಇಂತಹ ಅದೆಷ್ಟೋ ಮುಗಿಯದ ಹಾಡುಗಳು… ನಾನು ದೂರ ಶಿಕ್ಷಣದ ಮೂಲಕ ಬಿಎಡ್ ಮಾಡುತ್ತಿದ್ದ ಕಾಲದಲ್ಲಿ ನಡೆದ ಒಂದು ಘಟನೆಯನ್ನು ಹೇಳುವೆ. ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ನಮ್ಮ ಇಗ್ನೂ ಸೆಂಟರ್ ಇದ್ದದ್ದು. ಕಾಂಟ್ಯಾಕ್ಟ್ ಪ್ರೋಗ್ರಾಮಿಗಾಗಿ ಅಲ್ಲಿ ಉಳಿಯಬೇಕಾಗಿ ಬಂದಿತ್ತು. ಅಲ್ಲಿ ಮಹಿಳೆಯರಿಗಾಗಿ ಮತ್ತು ಪುರುಷರಿಗಾಗಿ ಪ್ರತ್ಯೇಕ ಡಾರ್ಮೆಟ್ರಿಗಳಿದ್ದವು, ಒಂದರ ಎದುರು ಇನ್ನೊಂದು. ಒಂದು ದಿನ ಸ್ನಾನಕ್ಕೆ ಹೋದಾಗ ನಾನು ಯಾವ ಪರಿವೆಯಿಲ್ಲದೆ “ಏನೆ ಕೇಳು ಕೊಡುವೆ ನಿನಗೆ ನಾನೀಗ…” ಎನ್ನುವ ಗೀತ ಚಿತ್ರದ ಹಾಡನ್ನು ಹಾಡಿಕೊಳ್ಳುತ್ತಾ ಮಜವಾಗಿ ಸ್ನಾನ ಮಾಡಿ ಬಂದಿದ್ದೆ. ಅವತ್ತು ಮಧ್ಯಾಹ್ನ ಯಾರೋ ಪಕ್ಕದ ಪುರುಷರ ರೂಮಿನವರೊಬ್ಬರು ಗೆಳತಿಯರಲ್ಲಿ “ಯಾರದು ಆ ಹಾಡನ್ನು ಹಾಡುತ್ತಿದ್ದವರು? ಏ ಚನ್ನಾಗಿ ಹಾಡುತ್ತಿದ್ದರು…” ಎಂದು ಒಂಥರಾ ನಗಾಡುತ್ತಾ ಕೇಳಿದರಂತೆ. ನನಗೆ ಹೀಗಾಗಬಹುದೆಂಬುದರ ಅರಿವೇ ಇರಲಿಲ್ಲ. ಜೀವ ಬಾಯಿಗೆ ಬಂದಂತಾಗಿತ್ತು. “ದಯವಿಟ್ಟು ಅದು ನಾನು ಎಂದು ತೋರಿಸಬೇಡಿ ಕಣ್ರೇ ಅವರಿಗೆ… ಪ್ಲೀಸ್..” ಎಂದು ಗೋಗರೆದಿದ್ದೆ. ಈಗಲೂ ಆ ಘಟನೆಯನ್ನು ನೆನೆದಾಗಲೆಲ್ಲಾ ನಗು ಬರುತ್ತದೆ… ಇಂತಹ ಅದೆಷ್ಟೋ ಬೆಚ್ಚನೆ ನೆನಪುಗಳನ್ನು ಕೊಟ್ಟ ಆ ಹಳೆಯ ಹಾಡುಗಳಿಗೆ ಶರಣು ಶರಣಾರ್ತಿ… ************************************* ಆಶಾ ಜಗದೀಶ್ ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.

Read Post »

ಅಂಕಣ ಸಂಗಾತಿ, ಹೊಸ ದನಿ-ಹೊಸ ಬನಿ

ಅಂಕಣ ಬರಹ ಹೊಸ ದನಿ – ಹೊಸ ಬನಿ-೧೩. ಸಿದ್ಧಾಂತದ ಚೌಕಟ್ಟಿನಲ್ಲೇ ಉಳಿದೂ ಬೆಳಕಿಗೆ ತಡಕುವ ವಸಂತ ಬನ್ನಾಡಿ ಕವಿತೆಗಳು ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ವಾಣಿಜ್ಯ ಪಾಠ ಕಲಿಸುತ್ತಿದ್ದ ಶ್ರೀ ವಸಂತ ಬನ್ನಾಡಿ ಅಲ್ಲಿನ ರಂಗ ಅಧ್ಯಯನ ಕೇಂದ್ರದ ಸಂಚಾಲಕರಾಗಿಯೂ ಪ್ರಸಿದ್ಧರು. ಶಬ್ದಗುಣ ಹೆಸರಿನ ಅರ್ಧವಾರ್ಷಿಕ ಸಾಹಿತ್ಯ ಪತ್ರಿಕೆಯನ್ನು ಅತ್ಯಂತ ಶ್ರೀಮಂತವಾಗಿ ಸಂಪಾದಿಸುತ್ತಿದ್ದವರು ಅವರು. ಶಬ್ದಗುಣ ಕೂಡ ಉಳಿದೆಲ್ಲ ಹಲವು ಸಾಹಿತ್ಯ ಪತ್ರಿಕೆಗಳ ಹಾಗೇ ಪ್ರಾರಂಭದಲ್ಲಿ ಅತಿ ಉತ್ಸಾಹ ತೋರುತ್ತಲೇ ಮೂರು ಸಂಚಿಕೆಗಳನ್ನು ಸಂಪಾದಿಸುವಷ್ಟರಲ್ಲೇ ಅಕಾಲಿಕ ಮರಣಕ್ಕೆ ತುತ್ತಾಯಿತು. ಸಾಹಿತ್ಯ ಪತ್ರಿಕೆಗಳ ಬಗ್ಗೆ ಪ್ರೀತಿಯ ಮಾತು ಆಡುತ್ತಲೇ ಅದರ ಪೋಷಣೆಗೆ ಅತಿ ಅವಶ್ಯವಾದ ಚಂದಾ ಕೊಡದೆ ಆದರೆ ಪತ್ರಿಕೆ ಪಾಪ ಪ್ರಕಟಣೆ ನಿಲ್ಲಿಸಿತೆಂದು ಚಿರ ಸ್ಮರಣೆಯ ಲೇಖನ ಬರೆಯುವ ಲೇಖಕರೇ ಹೆಚ್ಚಿರುವಾಗ ಸಾಹಿತ್ಯ ಪತ್ರಿಕೆಗಳ ಪ್ರಕಟಣೆಯ ಬಗ್ಗೆಯೇ ವಿಸ್ತೃತ ಲೇಖನ ಬರೆಯಬಹುದು. ಇರಲಿ,ಆದರೆ ತಂದದ್ದು ಮೂರೇ ಮೂರು ಸಂಚಿಕೆಗಳೇ ಆದರೂ ಆ ಸಂಚಿಕೆಗಳನ್ನು ರೂಪಿಸುವುದಕ್ಕೆ ಫಣಿರಾಜ್ ಮತ್ತು ರಾಜಶೇಖರರಂಥ ಅಪ್ಪಟ ಸಮಾಜ ವಾದೀ ಚಿಂತನೆಯ ಲೇಖಕರ ಸಹಕಾರ ಇವರಿಗೆ ಇತ್ತೆಂದರೆ ನಿಸ್ಸಂಶಯವಾಗಿ ಬನ್ನಾಡಿಯವರ ಚಿಂತನೆಯ ಹಾದಿಯನ್ನು ಮತ್ತೆ ಸ್ಪಷ್ಟಪಡಿಸುವ ಅವಶ್ಯಕತೆಯೇ ಇಲ್ಲ. ತಮ್ಮೆಲ್ಲ ಸಮಯ ಮತ್ತು (ಆರ್ಥಿಕ) ಶಕ್ತಿಯನ್ನು ಕೂಡ ರಂಗ ಅಧ್ಯಯನ ಕೇಂದ್ರದ ಚಟುವಟಿಕೆಗಳಿಗೆ ಮತ್ತು ಪ್ರಕಾಶನದ ಕೆಲಸಕ್ಕೂ ಬಳಸಿಯೇ (ಪ್ರ)ಸಿದ್ಧರಾದ ಶ್ರೀ ಬನ್ನಾಡಿ ರಂಗ ಕರ್ಮಿಯಾಗಿ ಕೂಡ ಸಮಾಜವಾದೀ ಸಿದ್ಧಾಂತದ ಪ್ರತಿ ಪಾದಕರಾಗಿ ನಿರಂತರವಾಗಿ ಫ್ಯೂಡಲ್ ತತ್ವಗಳ ವಿರುದ್ಧ ಅವಕಾಶ ಸಿಕ್ಕಾಗಲೆಲ್ಲ ಗರ್ಜಿಸುತ್ತಲೇ ಇರುವವರು‌. ಈವರೆಗೆ ಐದು ಕವನ ಸಂಕಲನಗಳನ್ನು ಪ್ರಕಟಿಸಿದ್ದರೂ ಫೇಸ್ಬುಕ್ಕಿನಲ್ಲಿ ಅತ್ಯಂತ ಚಟುವಟಿಕೆಯಿಂದ ಸಮಾಜ ಮುಖೀ ಬರಹಗಾರರ ಪರವಾಗಿ ಮಾತನಾಡುತ್ತಲೇ ಪ್ರಭುತ್ವದ ವಿರುದ್ಧದ ತಮ್ಮ ನಿಲುವುಗಳನ್ನು ಅತ್ಯಂತ ಸ್ಪಷ್ಟವಾಗಿಯೇ ಪ್ರಕಟಿಸುವ ಬನ್ನಾಡಿಯವರ ಕವಿತೆಗಳು ಫೇಸ್ಬುಕ್ಕಿನಲ್ಲಿ ಪ್ರಕಟಿಸುವ ರೀತಿಯೇ ಭಿನ್ನವಾದುದು. ಬಹುತೇಕರು ಫೇಸ್ಬುಕ್ಕಿನಲ್ಲಿ ಕವಿತೆ ಎಂದು ತಾವು ಭಾವಿಸಿದುದನ್ನು ಪ್ರಕಟಿಸುವಾಗ ಅದಕ್ಕೊಂದು ಶೀರ್ಷಿಕೆಯ ಅಗತ್ಯತೆ ಇದೆ ಎಂದೇ ಭಾವಿಸದೇ ಇರುವ ಹೊತ್ತಲ್ಲಿ ಇವರು ಪ್ರಕಟಿಸುವ ಪ್ರತಿ ಕವಿತೆಯೂ  ಅತ್ಯಂತ ಸಮರ್ಥ ಶೀರ್ಷಿಕೆ ಮತ್ತು ಅಗತ್ಯವಿದ್ದಲ್ಲಿ ಅತ್ಯಗತ್ಯವಾದ ಚಿತ್ರಗಳ ಜೊತೆಗೇ ಪ್ರಕಟವಾಗುವುದನ್ನು ನೀವು ಗಮನಿಸಿಯೇ ಇರುತ್ತೀರಿ‌. ಜೊತೆಗೇ ಸಹ ಬರಹಗಾರರ ಸಣ್ಣದೊಂದು ಬರಹಕ್ಕೂ ಚಂದದ ಪ್ರತಿಕ್ರಿಯೆ ಕೊಡುವ ಅವರ ಗುಣ ಕೂಡ ನೀವು ಬಲ್ಲಿರಿ. ಮೂಲತಃ ಒಂದು ಸಿದ್ಧಾಂತಕ್ಕೆ ಕಟ್ಟುಬಿದ್ದ ಯಾವುದೇ ಲೇಖಕ ಕವಿಯಾಗಿ ಪ್ರಕಟವಾಗುವುದು ಅಷ್ಟು ಸುಲಭದ ಮಾತಲ್ಲ. ಏಕೆಂದರೆ ಈಗಾಗಲೇ ಆ ಸಿದ್ಧಾಂತದ ಚೌಕಟ್ಟಿಗೆ ತನ್ನೆಲ್ಲ ಬೌದ್ಧಿಕ ಸಾಮರ್ಥ್ಯವನ್ನೂ ವ್ಯಯಿಸಿ ತನ್ನ ಚೌಕಟ್ಟಿನ ಆಚೆಗೆ ಹೊರಬರಲಾರದೇ ತಳಮಳಿಸುವುದು ಮತ್ತು ಏನೇ ಹೇಳ ಹೊರಟರೂ ಕಡೆಗೆ ಆ ಮೂಲಕ್ಕೇ ಮತ್ತೆ ಮತ್ತೆ ಮರಳುವ ಕಾರಣದಿಂದಾಗಿ ಕವಿಯಾಗಿ ಕಾಣುವುದಕ್ಕಿಂತ ಲೇಖಕನಾಗಿಯೇ ಉಳಿದುಬಿಡುವುದೂ ಮತ್ತು ಆ ಅಂಥ ಚಿಂತನೆಯ ಲೇಖಕ ಬರೆಯ ಹೊರಟ ಕವಿತೆಯು ಕೂಡ ಆ ಸಿದ್ಧಾಂತದ ಘೋಷ ವಾಕ್ಯವೇ ಆಗಿ ಪರಿಸಮಾಪ್ತಿ ಆಗುವುದನ್ನು ನಾವು ಬಲ್ಲೆವು. ಬನ್ನಾಡಿಯವರ ಕಾವ್ಯ ಕೃಷಿ ಈ ಆರೋಪಗಳನ್ನು ಅಥವ ಮಿತಿಗಳನ್ನು ಸಮರ್ಥವಾಗಿ ಎದುರಿಸುತ್ತಿರುವುದನ್ನು ಅವರ ಕವಿತೆಗಳ ಓದಿನ ಮೂಲಕ ಗುರ್ತಿಸಬಹುದು ಕಡಲ ಧ್ಯಾನ ಸಂಕಲನಕ್ಕೆ ಬಾಲೂರಾವ್ ದತ್ತಿನಿಧಿಯ ಬಿ.ಎಂ.ಶ್ರೀ ಕಾವ್ಯ ಪ್ರಶಸ್ತಿಯನ್ನು ಮತ್ತು ನೀಲಿ ಹೂ ಸಂಕಲನಕ್ಕೆ ಪುತಿನ ಕಾವ್ಯ ಪುರಸ್ಕಾರ ಪಡೆದ ಬನ್ನಾಡಿ ಕವಿತೆಗಳು ಬಿಎಂಶ್ರೀ ಅವರ ಹಾಗೆಯೇ ಸಮರ್ಥ ಅನುವಾದ ಸಾಮರ್ಥ್ಯವನ್ನೂ ಪುತಿನ ಥರದ ಸರ್ವರ ಸಮಾನತೆಯನ್ನೂ ಪಡೆದುದರ ಕಾರಣವಾಗಿದೆ. ಕಾವ್ಯ ವಿಮರ್ಶೆಯ ಸವೆದ ಜಾಡುಗಳು ಈ ಕವಿಯು ಎತ್ತಿಹಿಡಿದ ಭಾವನಾತ್ಮಕ ನೆಲೆಯಾಚೆಗಿನ ಬೌದ್ಧಿಕ ತಹತಹಿಕೆಗಳನ್ನು ಬೇಕೆಂತಲೇ ಬದಿಗೆ ಸರಿಸುವ ಕಾರಣದಿಂದಾಗಿ ಜನಪ್ರಿಯ ಆವೃತ್ತಿಯ ಬಹು ಪ್ರಸರಣದ ಪತ್ರಿಕೆಗಳಲ್ಲಿ ಇಂಥವರ ಕಾವ್ಯ ಪ್ರಕಟವಾಗುವುದು ಅಪರೂಪ. ಹಾಗೆಂದೇ ಏನೋ ತಮ್ಮ ಚಿಂತನೆಗಳನ್ನು ಕವಿತೆಗಳನ್ನಾಗಿ ಪೋಣಿಸುವ ವಸಂತರು ತಮ್ಮ ಹೆಸರಿನಂತೆಯೇ ಎಂಥ ಗ್ರೀಷ್ಮದಲ್ಲೂ ವಸಂತದ ಚಿಗುರನ್ನು ಕಾಣಿಸಬಲ್ಲ ಕನಸುಳ್ಳವರು. ಅವರ ಬಿಡಿ ಬಿಡಿ ಕವಿತೆಗಳ ಡಿಸೆಕ್ಷನ್ನಿಗಿಂತಲೂ ಒಟ್ಟೂ ಕಾವ್ಯದ ಅನುಸರಣದ ಅಭ್ಯಾಸಕ್ಕಾಗಿ ಈ ಟಿಪ್ಪಣಿಯಲ್ಲಿ ಎಂದಿನಂತೆ ಪ್ರತ್ಯೇಕವಾಗಿ ವಿಭಾಗಿಸದೇ ಅವರ ಕಾವ್ಯದ ನಿಲುವಿನ ಬದ್ಧತೆಯ ಸೂಕ್ಷ್ಮವನ್ನು ಒಟ್ಟಂದದಲ್ಲಿ ಸವಿಯಲು ಅವರ ನಾಲ್ಕು ಕವಿತೆಗಳನ್ನು ಇಲ್ಲಿ ಕಾಣಿಸುತ್ತಿದ್ದೇನೆ. “ಅರ್ಥವಾಗದಂತೆ ಯಾರಿಗಾಗಿ ಕಾವ್ಯ ಬರೆಯಬೇಕಾಗಿದೆ ಈಗ ನಾನು?” ಎನ್ನುವ ಸಂಕಟದಲ್ಲೇ ಒಟ್ಟೂ ವರ್ತಮಾನದ ದಾಂಗುಡಿಗಳನ್ನು ವಿಮರ್ಶಿಸುತ್ತಲೇ ಸುಳ್ಳು ಸುಳ್ಳೇ ಒಳಾರ್ಥಗಳಿವೆ ಎಂದು ಬಿಂಬಿಸುವವರ ಪ್ಯೂರಿಟಿಯನ್ನು ಈ ಇಂಪ್ಯೂರ್ ಕವಿತೆ ಹೇ(ಕೇ)ಳುತ್ತಿದೆ. ೧.ಯಾರಿಗಾಗಿ ಬರೆಯಬೇಕಾಗಿದೆ ಕಾವ್ಯ.. …………………………………………………………. ಈ ಜಗತ್ತು ಯಾವತ್ತೂ ನನಗೆ ಬೇಸರ ಬರಿಸಿರಲಿಲ್ಲ ನನ್ನ ಅಜ್ಜಿಯ ನಡುಗುವ ಕೈಗಳು ಮುಖದ ಸುಕ್ಕುಗಳು ನನ್ನ ಜೀವನ ಪ್ರೀತಿಯನ್ನು ಹೆಚ್ಚಿಸಿದವು ನನ್ನ ಸಂಪರ್ಕಕ್ಕೆ ಬಂದವರು ಒಳ್ಳೆಯವರೂ ಆಗಿರಲಿಲ್ಲ ಕೆಟ್ಟವರೂ ಆಗಿರಲಿಲ್ಲ ಅಥವಾ ಎರಡೂ ಆಗಿದ್ದರು ಎರಡೂ ಆಗಿರಲಿಲ್ಲ ಹೀಗೆ ಹಾರಿಹೋದವು ನನ್ನ ಯೌವ್ವನದ ದಿನಗಳು ಯಾವ ಪೂರ್ವನಿರ್ಧರಿತ ಯೋಚನೆಗಳೂ ಇಲ್ಲದೆ ಎಲ್ಲರಿಗೂ ಕಷ್ಟಗಳು ಇದ್ದವು ಸಾಗರದಂತೆ ಮೈ ಚಾಚಿಕೊಂಡ ಕಷ್ಟಗಳು ನಡುವೆ ಉಕ್ಕುವ ನಗು ಬದುಕಿನ ಭರವಸೆ ಹುಟ್ಟಿಸುವ ನಗು ಸುಟ್ಟು ಹಾಕಿಬಿಡಬಲ್ಲ ಬೆಂಕಿ ಹೂವಾಗಿ ಅರಳಿದ ಗಳಿಗೆಗಳೂ ಇದ್ದವು ನನ್ನ ಸಂಪರ್ಕಕ್ಕೆ ಬಂದವರೆಲ್ಲರೂ ಒಂದೋ ನಾನು ಓದುತ್ತಿರುವ ಪುಸ್ತಕಗಳಿಂದ ಎದ್ದು ಬಂದವರ ಹಾಗೆಯೂ ಅಥವಾ ಅವರೇ ಪುಸ್ತಕಗಳ ಒಳಗೆ ಸೇರಿಕೊಂಡವರ ಹಾಗೆಯೂ ಇರುತ್ತಿದ್ದುದರಿಂದ ನನಗೆ ಎಲ್ಲವೂ ಆಸಕ್ತಿದಾಯಕವೂ ನಿಗೂಢವೂ ಅಚ್ಚರಿದಾಯಕವೂ ಸಂತೋಷ ಕೊಡುವಂತದ್ದೂ ಖಿನ್ನನಾಗಿಸುವಂಥದ್ದೂ ಆಗಿ ಹೊಸ ವರ್ಷವೆನಿಸುತ್ತಿರಲಿಲ್ಲ ಯಾವ ವರ್ಷವೂ ಸಣ್ಣಪುಟ್ಟ ಆಸೆಗಳು ಹತ್ತಿಕ್ಕಿಕೊಂಡ ಸ್ವಾರ್ಥ ಹೆಡೆಬಿಚ್ಚುವ ಈಷ್ಯೆ೯ ಮನಸ್ಸು ಬಿಚ್ಚಿ ಹೇಳಿಕೊಳ್ಳುವ ಸಂಕಟಗಳು ಹೇಳದೇ ಉಳಿದ ಮಾತುಗಳು ಎಲ್ಲವೂ ನದಿಯೊಂದು ಹರಿಯುವ ಹಾಗೆ ಹರಿಯುತ್ತಲೇ ಇರುವಾಗ ಬೆಚ್ಚಿ ಬೀಳಿಸಿದ್ದು ಎಲ್ಲೋ ದೂರದಲ್ಲಿ ಎಂಬಂತೆ ಕೇಳಿಬರುತ್ತಿದ್ದ ಕೊಲೆಯ ಸದ್ದುಗಳು ಮನುಷ್ಯ ದೇಹವನ್ನು ಕತ್ತರಿಸಿ ಮೂಟೆಯಲಿ ಕಟ್ಟಿ ಬಿಸಾಕುತ್ತಿದ್ದ ಭೀಭತ್ಸಗಳು ಹಣಕ್ಕಾಗಿಯೋ ಪೂರ್ವದ್ವೇಷದಿಂದಲೋ ನಡೆಯುತ್ತಿದ್ದರಬಹುದಾದ ಕೃತ್ಯಗಳು ಅವೇ ಕೃತ್ಯಗಳು ಸಾಮೂಹಿಕವಾಗಿ ಬಿಟ್ಟರೆ? ಸಾಮೂಹಿಕವಾಗಿ ಒಬ್ಬನನ್ನು ಬೆನ್ನಟ್ಟಿದರೆ? ಗುಡಿಸಲುಗಳ ಮೇಲಿನ ಸಾಮೂಹಿಕ ದಾಳಿಯಾಗಿ ಬಿಟ್ಟರೆ? ಮುಗಿಸಿಬಿಡಲೆಂದೇ ಒಂದೇ ದಿಕ್ಕಿನಲ್ಲಿ ಯೋಚಿಸುವ ಇಬ್ಬರು ಮೂವರು ಹತ್ತಾರು ನೂರಾರು ಕೈಗಳು ಒಟ್ಟಾಗಿ ವಧಿಸತೊಡಗಿದರೆ? ಕಮರಿ ಹೋಯಿತು ನನ್ನ ಕಲ್ಪನೆ ಕಮರಿ ಹೋಗಿತ್ತು ನನ್ನ ಜಗತ್ತಿನ ಕಲ್ಪನೆಯೂ ನಡು ವಯಸ್ಸಿಗೆ ಕವಿದುಕೊಂಡಿತು ಕಣ್ಣಿಗೆ ಕತ್ತಲ ಪೊರೆ ಎಲ್ಲ ಅಸಡ್ಡಾಳಗಳ ನಡುವೆಯೂ ಸಹ್ಯವೆನಿಸಿದ್ದ ಜಗತ್ತು ಮೊದಲ ಬಾರಿಗೆ ಒಡೆದುಹೋಯಿತು ಕನ್ನಡಿಯೊಂದು ಠಳ್ಳನೇ ಒಡೆದು ಚೂರಾಗುವಂತೆ ಅರ್ಥವಾಗದಂತೆ ಯಾರಿಗಾಗಿ ಕಾವ್ಯ ಬರೆಯಬೇಕಾಗಿದೆ ಈಗ ನಾನು? ಸಿದ್ಧಾಂತದ ಅಂಟಲ್ಲಿ ಸಿಲುಕಿದವರು ಅದರಿಂದ ಹೊರ ಬಂದರೂ ಬಿಟ್ಟೂ ಬಿಡದೇ ಕಾಡುವ ಆ ಅದೇ ದಾರಿಗಳು ಅವರು ನಂಬಿದ ಅಧ್ಯಾತ್ಮದ ದಾರಿಯೇ ಆಗಿ ಬದಲಾಗುವುದನ್ನು ಈ ಪದ್ಯ ಸಮರ್ಥಿಸುತ್ತಿದೆ. ಈ ಕವಿತೆಯಲ್ಲಿ ಕವಿ ಯಾರೊಂದಿಗೆ ಸಂಕಟದ ಸಾಗರವನ್ನು ದಾಟಿದ್ದು ಪ್ರೇಮಿಯೊಂದಿಗೋ, ಗೆಳೆಯನೊಂದಿಗೋ ಅಥವ ತನ್ನದೇ ಸಿದ್ಧಾಂತದೊಂದಿಗೋ ಎನ್ನುವುದು ಆಯಾ ಓದುಗರ ಮರ್ಜಿಗೆ ಬಿಟ್ಟ ಸಂಗತಿ. ೨. ದಾಟಿದೆವು ನಾವು ಸಂಕಟದ ಸಾಗರವನು ……………………………………………………. ಸಂಕಟದ ಮಹಾಸಾಗರಗಳೇ ತುಂಬಿವೆ ನಮ್ಮ ಗತಕಾಲದ ದಿನಚರಿಯ ಪುಟಗಳಲಿ ಎಂತಹ ದಾರುಣ ಕಾಲವನು ದಾಟಿ ಬಂದೆವು ನಾವು ನಿನ್ನನು ತಲುಪಲು ನನ್ನ ಬಳಿ ಅಂದು ಒಂದು ಮುರುಕು ದೋಣಿಯೂ ಇರಲಿಲ್ಲ ಆಚೆ ದಡದಲ್ಲಿ ಕೈಬೀಸಿ ಹಾಗೆಯೇ ಮರೆಯಾಗಿ ಬಿಡುತ್ತಿದ್ದೆ ನೀನು ನಕ್ಷತ್ರಗಳ ಗೊಂಚಲನು ಮನೆಯಂಗಳದಲಿ ನೆಡುವ ಕಣಸ ಕಂಡಿದ್ದೆವು ನಾವು ಕಾಲೂರಲೊಂದು ಅಂಗುಲ ನೆಲ ಬಿಸಿಲ ತಾಪ ಮರೆಸಲು ನಾಕು ಹಿಡಿ ಸೋಗೆ ಇಷ್ಟಿದ್ದರೆ ಸಾಕು,ಗೆದ್ದೆವು ಅಂದುಕೊಂಡಿದ್ದೆವು ಇಕ್ಕಟ್ಟಾಗುತ್ತಾ ಹೋಗುವ ಊರ ಓಣಿಯ ದಾರಿ ಬೆನ್ನಿಗಂಟಿ ಈಟಿ ಇರಿವ ಮಂದಿಯ ಕಿಡಿ ಕಣ್ಣು ಸಾಗುತ್ತಲೇ ಇರಬೇಕೆಂಬ ಹಂಸ ನಡೆಯನು                 ಗಟ್ಟಿಗೊಳಿಸಿದವು ನಮ್ಮಲಿ ನಮ್ಮ ಜೊತೆಗಿದ್ದುದು ಗಾಳಿಯ ಮರ್ಮರ ಬಿಡದೆ ಹಿಂಬಾಲಿಸುವ ಕೋಗಿಲೆಯ ಕುಹೂ ಕುಹೂ ಗಾನ ಶೃತಿ ಹಿಡಿವ ಏಕತಾರಿ ಜೀರುಂಡೆ ಜೀಕು ಕವುಚಿ ಬಿದ್ದ ಬೋಗುಣಿಯೆಂಬ ಆಕಾಶದ ಸೊಗಸು ಪ್ರತೀ ಸಲ ಸಾಗರದ ಮುಂದೆ ನಿಂತಾಗಲೂ ಯೋಚಿಸುವುದಿದೆ ನಾವು ನಿರಾಳತೆಯ ಹೊದಿಕೆ ಹೊದ್ದಿರುವ ಸಾಗರವೆಂಬ ಸಾಗರವೇ ಹಾಗೆ ಕೂಗಿ ಕೊಳ್ಳುತ್ತಿದೆಯೇಕೆ ಲೋಕಕೆ ಮುಖ ಮಾಡಿ? ಕೊತ ಕೊತ ಕುದ್ದು ಅಲೆಯಲೆಯಾಗಿ ಹೊರಳಿ ದನಿಯೆತ್ತಿ ದಡಕ್ಕನೆ ಅಪ್ಪಳಿಸುತ್ತಿದೆಯೇಕೆ? ಅಂತಹ ಸಂಕಟ ಅದೇನು ಹುದುಗಿದೆ ನಿನ್ನ  ಒಡಲಲಿ? ನಮ್ಮ ಉಸಿರ ಬಿಸಿಯನು ಉಳಿಸಿದ್ದು ಧನ ಕನಕ ಬಣ್ಣ ಬಡಿವಾರಗಳಲ್ಲ ದಿನವೂ ಇಷ್ಟಿಷ್ಟೇ ಹಂಚಿಕೊಂಡ ಒಲವೆಂಬ ಮಾಯಕದ ಗುಟುಕುಗಳು ಮಿಂದುಟ್ಟು ನಲಿಯ ಬಯಸಿದ್ದು ನಾನು ನಿನ್ನ ಅಂಗ ಭಂಗಿಗಳ ನಿರಾಭರಣ ಝರಿಯಲಿ ಮುಗಿಲ ನಕ್ಷತ್ರಕೆ ಆಸೆಪಡದ ನಾನು ಮುಖವೂರಲು ಬಯಸಿದ್ದು ನಿನ್ನ ನಿಬಿಡ ಹೆರಳಿನ‌ ಸಿಕ್ಕುಗಳಲಿ ———————————- “ಕಡಲು ಮತ್ತು ನೀನು” ಪದ್ಯದ ವಿನಯವಂತಿಕೆ ಎಂದಿನ ಇವರ ರೂಕ್ಷ ರೀತಿಯಿಂದ ಬಿಡಿಸಿಕೊಂಡ ಆದರೆ ಸಂಬಂಧಕ್ಕೂ ಸಿದ್ಧಾಂತದ ಹೊರೆಯನ್ನು ದಾಟಿಸುವ ಯತ್ನ ೩.ಕಡಲು ಮತ್ತು ನೀನು ………………….‌….. ಮಳೆಗಾಲದ ಕಡಲು ಎಂದಿನ ಕಡಲಿನಂತಲ್ಲ ನೋಡಿದ್ದೀಯ ನೀನು ಮಳೆಗಾಲದ ಕಡಲನು? ಅದು ಅಲ್ಲೋಲ ಕಲ್ಲೋಲ ಮಗುಚುವುದನು? ಜಗತ್ತಿನ ಕೊಳೆ ಕೆಸರನು ಮರುಮಾತನಾಡದೆ ಹೊದ್ದು ಕೆಸರಾಗುವುದನು ತಾನೂ ನೀಲಾಕಾಶ ತಾನಾಗಬೇಕೆಂದು ವರುಷವಿಡೀ ಕನಸುವ ಕಡಲು ಈಗ ಕಪ್ಪಾಗುವುದು ಅದೂ ಎಂಥಾ ಕಪ್ಪು ಕಾಡಿಗೆ ಕಪ್ಪು ಕಡಲು! ತಾಳಲಾರದೆ ತಳಮಳ ಅಗ್ನಿಕುಂಡವಾಗುವುದು ಕೊತ ಕೊತ ಕುದಿಯುವುದು ನೋಡಿದ್ದೀಯಾ ನೀನು ನೋಡಿದ್ದೀಯಾ ನೋಡಿದ್ದೇನೆ ನಾನು ಕಡಲನು ನಿನ್ನ ಕಣ್ಣುಗಳಲಿ ಕಡಲು ಅಲ್ಲಿ ತುಳುಕಾಡುವುದನು ಯಾರ ಊಹೆಗೂ ನಿಲುಕದ ಭಾವ ಕಡಲು ಒಂದು ವ್ಯತ್ಯಾಸವಿದೆ ಮಳೆಗಾಲದ ಕಡಲಿಗೂ ನಿನ್ನ ಕಾಡಿಗೆ ಕಣ್ಣಿಗೂ ಭೋರ್ಗರೆವ ನೀನು ರೆಪ್ಪೆಗಳ ಒಳಗೇ ಕೂಗು ಹಾಕುವುದಿಲ್ಲ ಕಡಲಂತೆ ಕತ್ತರಿಸುತ್ತಾ ಹರಿಯುವುದೂ ಇಲ್ಲ ಯಾರನೂ ನೋಯಿಸುವ ಇರಾದೆ ಇರದ ನೀನು ಎಲ್ಲವನು ಬಲ್ಲ ಮೌನ ಕಡಲು ಬೇಸರ ಮುತ್ತಿಕೊಂಡಾ ನಿನ್ನನು ಮರಳುವೆ ನೀನು ನಿನ್ನ ಅಲೆಹಾಡಿನರಮನೆಗೆ ಅನುಗಾಲದ ಕಡಲಂತೆ ಶಾಂತ,ಗಂಭೀರ ಅಲೆ ಅಲೆಗಳಲಿ ಫಳಫಳ ಬೆಳ್ಳಿ ಬೆಳಕ ಚಿಮ್ಮಿಸುವ ರುದ್ರ ನೀಲ ಮನೋಹರ ಮಡಿಲು ಇಂಗಿ ಹೋಗುವುದು ನಿನ್ನೊಳಗೆ ಯಾರ ಗಮನಕೂ ಬಾರದೆ ಬೆಂಕಿಯ ನದಿಯೊಂದು ದೂರದಲೆ ನಿಂತು ನಿನ್ನ ನೋಡುವೆ ನಾನು ಕಡಲ ಅನತಿ ದೂರದಲಿ ಕೈ ಕಟ್ಟಿ ನಿಂತಿರುವ ಅನಾದಿ ಬಂಡೆಯೊಂದಿರುವುದಲ್ಲ ಹಾಗೆ ಪ್ರೀತಿಯ ಸಿಂಚನದಲಿ ದಿನವೂ ತೋಯಬಯಸುವವನು ಸ್ಪರ್ಶದ ದಿಗಿಲಿಗೆ ಹಾತೊರೆಯುವವನು ಬಿರುಮಳೆ ಹೆಂಡದ ನಶೆ ಏರಿಸಿಕೊಂಡ ಕಡಲು ಬಾನೆತ್ತರ ಚಿಮ್ಮಿ ಬಂದೆರಗುವುದಲ್ಲ ಬಯಸುವೆ ಅದನೇ ನಾನೂ ಉಪ್ಪು ತೋಳಾಗಿ ಬಂದು ನೀನು ಅಪ್ಪುವುದನು ———————————————— ಮಾಧ್ವ ಸಂಪ್ರದಾಯವನ್ನು ಬಿಡದೆಯೂ ಮಾರ್ಕ್ಸ್ ವಾದದ ಅಪ್ರತಿಮ ಪ್ರತಿ ಪಾದಕರಾಗಿದ್ದ ಕವಿ ಸು.ರಂ.ಎಕ್ಕುಂಡಿ ಯಾಕೋ ಈಗ ನೆನಪಾಗುತ್ತಾರೆ. ತಾವು ನಂಬಿದ ಸಿದ್ಧಾಂತ ಮತ್ತು ತತ್ವಕ್ಕೆ  ನಿಷ್ಠೆ ಇಟ್ಟುಕೊಂಡೂ ಬದುಕಿನ ರೀತಿಯಲ್ಲಿ ರಾಜಿಯಾಗದೆ ಆದರ್ಶವಾಗುವುದು ಕಡು ಕಷ್ಟದ ಕೆಲಸ. ವಸಂತ ಬನ್ನಾಡಿಯವರೂ ಎಕ್ಕುಂಡಿಯವರ ಮಾರ್ಗವನ್ನು ಅನುಲಕ್ಷಿಸಿದ್ದೇ ಆದರೆ ಅವರೊಳಗಿನ ಕವಿಗೆ ಮತ್ತಷ್ಟು ಕಸುವು ಮತ್ತು ಕಸುಬು ಸಿದ್ಧಿಸೀತೆಂಬ ಆಶಯದೊಂದಿಗೆ “ಮಳೆಗಾಲದ ಹಾಡು ಪಾಡು” ಕವಿತೆಯ ಸಾಲುಗಳಾದ

Read Post »

You cannot copy content of this page

Scroll to Top