ಪದ್ಯ/ಗದ್ಯ ನಮ್ಮೂರ ಕೆರೆಯ ವೃತ್ತಾಂತ ಡಾ. ಅರಕಲಗೂಡು ನೀಲಕಂಠ ಮೂರ್ತಿ ನಮ್ಮೂರ ವಿಶಾಲ ತಬ್ಬಿಅಲೆಯಲೆಯಾಗಿ ಹಬ್ಬಿಹರಿದಿದ್ದ ಸಾಗರದಂಥ ಕೆರೆಈಗ ಬಸ್ ನಿಲ್ದಾಣ! ಹೇಮಾವತಿಯ ಚಿತ್ತಹರಿಯುವ ಮುನ್ನನಮ್ಮೂರಿನತ್ತಆ ‘ದೊಡ್ಡ ಕೆರೆ’ಯೇಕೋಟೆ ಪೇಟೆಯಬಂಗಾರ ಜೀವಜಲ!ಅದೀಗ ನಮ್ಮೂರ ‘ಹೆಮ್ಮ’ಯಬಸ್ ಸ್ಟ್ಯಾಂಡ್! ಒಂದೊಮ್ಮೆ ಮೊಗೆಮೊಗೆದಷ್ಟೂಉಗ್ಗಿದ್ದ ನೀರು…ಎಂದೆಂದೂ ಬತ್ತಿ ಬರಡಾಗದೆನಿತ್ಯ ಹರಿದಿದ್ದ ತೇರು!ಶತಮಾನಗಳ ತಲೆಮಾರುಗಳಮೈ-ಮನ ತೊಳೆದಿದ್ದನೀರಡಿಕೆ ನಿರಂತರ ನೀಗಿದ್ದವರುಷ ವರುಷ ಗಜಗಾತ್ರಗಣೇಶ ಮೂರ್ತಿಗಳನೆಆಪೋಶಿಸಿದ್ದಆ ನೀರ ಮಹಾರಾಶಿಈಗಸೆಲೆಯೂ ಇಲ್ಲದ ಅಪರಂಜಿ –ಬರಡು!ಯಾರ ಚಿಂತನೆಯಅದೆಂಥ ಬೆರಗು!ಆ ನೀರ ಜೊತೆಜೊತೆಗೆಪ್ರತಿಫಲಿಸಿದ್ದಇನ್ನುಳಿದ ಕೆರೆಗಳೂ ಕೂಡಈಗ ನೆಲಸಮ…ಬರೀ ನೆನಪು! ಅಂದಿನ ಆ ನೀರ ಅನಂತತೆಇಂದು ನಿಶಾರಾತ್ರಿಗಳಲಿಕೇಕೆ ಹಾಕಿ ಊಳಿಡುವಹೊಚ್ಚ ಹೊಸ ಬಸ್ ಸ್ಟ್ಯಾಂಡ್..! ನೀರು…ನೀರು…ನೀರು! ನೀರಿನಬಗ್ಗೆ ಎಚ್ಚರಿಕೆಯ ಘಂಟೆ ಮೊಳಗುತ್ತಿದೆ ಜಗತ್ತಿನಾದ್ಯಂತ. ಜೊತೆಗೆ ಹಿಮಗೆಡ್ಡೆಗಳು ಕರಗುತ್ತಿರುವಂಥ, ಮತ್ತದರಿಂದ ಏರುಗತಿಯಲ್ಲಿರುವ ಸಮುದ್ರಮಟ್ಟ. ದಿಗ್ಭ್ರಮೆಗೊಳಿಸುವ ಚಂಡಮಾರುತಗಳು ಮತ್ತು ನಗರಗಳಲ್ಲೂ ಈಜು ಹೊಡೆಸುತ್ತಿರುವ ರಾಕ್ಷಸೀ ಮಳೆ! ಇಂಥ ಆಘಾತದ ವೈಜ್ಞಾನಿಕ ವರ್ತಮಾನಗಳು. ಕಾರಣವೂ ವಿಜ್ಞಾನದಲ್ಲಿ ಇಲ್ಲದಿಲ್ಲ. ಈ ವಿಷಯ ಒತ್ತಟ್ಟಿಗಿರಲಿ. ಈ ಲೇಖನಕ್ಕೂ ಮೇಲಿನ ವಿಷಯಕ್ಕೂ ಸದ್ಯದಲ್ಲಿ ಸಂಬಂಧವಿಲ್ಲ. ನೀರು ಮತ್ತು ನೀರನ್ನು ಹೊತ್ತು ತುಂಬಿತುಳುಕುವ ಕೆರೆಗಳ ಬಗ್ಗೆ…(ನಮ್ಮೂರ “ವಾಟರ್ ಬಾಡೀಸ್ ಬಗ್ಗೆ)… ನಮ್ಮೂರು ನಿಮಗೆಲ್ಲ ಈಗಾಗಲೇ ತಿಳಿದಿರುವಹಾಗೆ ಅರಕಲಗೂಡು. ಅ.ನ.ಕೃ.ಕುಟುಂಬದ ಮೂಲವಾದ ಊರು. ನಮ್ಮೂರು ಎರಡು ಭಾಗವಾಗಿದೆ — ಪೇಟೆ ಹಾಗೂ ಕೋಟೆ ಎಂದು. ಮಧ್ಯದಲ್ಲಿ ಪೇಟೆ ಯಿಂದ ಕೋಟೆಯಕಡೆ ಹೋಗುವಾಗ ಎಡಭಾಗದಲ್ಲಿ ಒಂದು ದೊಡ್ಡ ಕೆರೆ. ಪಕ್ಕದಲ್ಲೇ ಪೇಟೆ-ಕೋಟೆಯ ನಡುವೆ ಡಾಂಬರು ರಸ್ತೆ. ಇನ್ನೊಂದು ಪಕ್ಕ ಹಳ್ಳದ ತೋಟ. ಇದಲ್ಲದೆ ಪೇಟೆಯ ಸುತ್ತಮುತ್ತ ಇನ್ನೊಂದು ಮೂರು ಸಣ್ಣ ಕೆರೆಗಳಿದ್ದವು. ಇದಿಷ್ಟು ನಾವು ಚಿಕ್ಕಂದಿನಿಂದ ನೋಡುತ್ತಾ ಬೆಳೆದ ಚಿತ್ರಣ… ಆದರೀಗ ಅದು ಹಾಗಿಲ್ಲ! ಅದಕ್ಕೆ ಮೊದಲು, ಆ ಕೆರೆಯ ಬಗ್ಗೆ ಒಂದೆರಡು ಮಾತು… ನನ್ನ ಕಣ್ಣಲ್ಲಿ ಈಗಲೂ ಅದು ಹಾಗೇ ಅಂದಿನ ಹಾಗೆಯೇ ಸಾಗರ! ಬಹಳವೇ ವಿಶಾಲವಾಗಿತ್ತು. ಅದರ ನಿಜ ವಿಸ್ತೀರ್ಣ ನನಗೆ ಅರಿವಿಲ್ಲದಿದ್ದರೂ, (ಅದು ಇಲ್ಲಿ ಅಪ್ರಸ್ತುತ ಕೂಡ), ವಿಶಾಲವಾಗಿದ್ದುದು ನಿಜ. ಸುಮಾರು ಜಮಾನುಗಳಿಗೆ ಜೀವಜಲದಂತೆ ಉಣಬಡಿಸಿತ್ತು. ಕೋಟೆ ಪೇಟೆ ಎರಡೂ ಸೇರಿದಂತೆ ಅನೇಕಾನೇಕ ತುಂಬು ಮನೆಗಳ ಮೈಮನದ ಕೊಳೆ ಅಳಿಸಿ, ಶುಭ್ರ ಬಟ್ಟೆಗಳಿಗೆ ಕಾರಣವಾಗಿದ್ದ ಕೆರೆ. ಮತ್ತು ಹೇಮಾವತಿ (ಗೊರೂರಿನಿಂದ – ಸುಮಾರು ಐದು ಕಿಲೋಮೀಟರಿನಷ್ಟು ದೂರ -ನಮ್ಮೂರ ವರೆಗೆ) ನದಿಯ ನೀರು ನಮ್ಮ ತೃಷೆಯನ್ನು ನೀಗಿಸಲು ಹರಿದುಬರುವ ತನಕ, ಆ ದೊಡ್ಡ ಕೆರೆ ಯೇ ನಮ್ಮ ಬಾಯಾರಿಕೆಯನ್ನು ನಿರಂತರ ತಣಿಸಿದ್ದಲ್ಲದೆ, ನಮ್ಮೆಲ್ಲ ಕುಟುಂಬಗಳ ಅಡುಗೆ ಮನೆಯ ಒಲೆಗಳ ಮೇಲೆ ತದೇಕ ಕುದಿಯುತ್ತಿದ್ದ ಎಲ್ಲ ಥರದ ದ್ರವಾಹಾರದ ಮೂಲವೂ ಆಗಿದ್ದು, ಶೇಖರಣೆಗೆ ಕೊಳದಪ್ಪಲೆಗಳಲ್ಲಿ ತುಳುಕಿದ್ದಲ್ಲದೆ, ದೇವರ ವಿಗ್ರಹಗಳ ಶುಭ್ರತೆಗೂ, ತೀರ್ಥಕ್ಕೂ ಗಂಗಾಮಾತೆಯಾಗಿದ್ದ ಮೂಲಾಧಾರ! ಪ್ರತಿ ವರ್ಷ ನಮ್ಮೂರಲ್ಲಿ ಗಣೇಶನ ಹಬ್ಬಕ್ಕೆ ತುಂಬ ದೊಡ್ಡ ವಿಗ್ರಹವನ್ನು ಪ್ರತಿಸ್ಠಾಪಿಸುತ್ತಿದ್ದರು. ಆ ಅಷ್ಟು ದೊಡ್ಡ ಗಣಪತಿ ಮೂರ್ತಿಯನ್ನು ಕೂಡ ಇದೇ ನಮ್ಮ ಹೆಮ್ಮೆಯ ಕೆರೆಯಲ್ಲಿಯೇ ವಿಸರ್ಜನೆ ಮಾಡುತ್ತಿದ್ದುದು. ನಾನು ಸುಮಾರು ವರ್ಷ ಆಫ್ರಿಕ ಖಂಡದಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದೆ — ನನ್ನ ಮೈಸೂರಿನ ಕ್ಲಿನಿಕ್ ಆರಂಭಿಸುವ ಮುನ್ನ. ವರ್ಷಕ್ಕೊಮ್ಮೆ ರಜೆಗೆ ಕುಟುಂಬದ ಒಡನೆ ಭಾರತಕ್ಕೆ ಬಂದು ಹೋಗುತ್ತಿದ್ದೆ. ಆಗೆಲ್ಲ, ಹೇಗಾದರೂ ಬಿಡುವು ಮಾಡಿಕೊಂಡು ಊರಿಗೆ ಹೋಗುವುದು, ಆ ಕೆರೆಯನ್ನು ಹತ್ತಿರದಿಂದ ಕಣ್ತುಂಬಿಸಿಕೊಂಡು ಬರುವುದು ಅಭ್ಯಾಸವಾಗಿತ್ತು. ಇಂಥ ಕೆರೆ ಈಗಿಲ್ಲ! ಅನೇಕಾನೇಕ ಊರುಗಳ ದುರಂತ ಗಳ ಹಾಗೆ, ಅದು ಈಗಿಲ್ಲ…ಹಾಗಿದ್ದರೆ ಅದು ಈಗೆಲ್ಲಿ? ಹೌದು, ಈಗೆಲ್ಲಿ. ನಮ್ಮೂರಲ್ಲಿ ನಾನು ಚಿಕ್ಕವನಿದ್ದಾಗಿಂದ ಕಂಡಹಾಗೆ ಕೋಟೆ ಪೇಟೆಯ ನಡುವೆ ನಮ್ಮ ಬಸ್ ನಿಲ್ದಾಣವಿತ್ತು – ಚಿಕ್ಕದಾದರೂ ನಮ್ಮೂರಿಗೆ ಸಾಕಾಗಿತ್ತು. ಇತ್ತೀಚಿನವರೆಗೂ ಅದೇ ಇತ್ತು. ಯಾವ ತಲೆಯ ಅದೆಂಥ ಕೋಡೋ ಏನೋ ಎದ್ದಂತೆ, ಈಗಿರುವ ನಿಲ್ದಾಣದ ಅನತಿ ದೂರದಲ್ಲೇ ಇನ್ನೊಂದು, ಕಾಂಪೌಂಡ್ ಸಹಿತ, ನಿಲ್ದಾಣ ನಿರ್ಮಿಸಲಾಯಿತು. ನಿರ್ಮಿಸಿದ್ದಷ್ಟೇ ಲೆಕ್ಕ, ನಂತರ ಪಾಳು – ಎಲ್ಲ ಥರದ ಚಟುವಟಿಕೆಗಳ ತವರಾಯಿತು! ಇದಿಷ್ಟು ನಾನು ಕಣ್ಣಾರೆ ಕಂಡದ್ದು. ನಾನು ಆಫ್ರಿಕಾದಿಂದ ಭಾರತಕ್ಕೆ ಮರಳಿ, ನನ್ನ ಕ್ಲಿನಿಕ್ ಆರಂಭಿಸಿ, ನಮ್ಮ ಬದುಕಿನ ಚಟುವಟಿಕೆಯತ್ತ ತೊಡಗಿಸಿಕೊಳ್ಳುತ್ತಿದ್ದ ಹಾಗೇ, ಊರಿಗೆ ಮೊದಲ ರೀತಿ ಹೋಗಿಬರಲು ಕೂಡ ದುಸ್ತರವಾಗುತ್ತಿತ್ತು. ಹಬ್ಬ, ಹುಣ್ಣಿಮೆ, ಹಿರಿಯರ ತಿಥಿ ಮುಂತಾಗಿ ಹೋದಾಗ ಕೂಡ ಕೆರೆಯತ್ತ ತಿರುಗಲೂ ಆಗದಷ್ಟು ಧಾವಂತ! ಬೆಳಿಗ್ಗೆ ಹೋದರೆ, ಮಧ್ಯಾಹ್ನದ ಊಟದ ತಕ್ಷಣ ವಾಪಸ್ಸಾಗುವುದನ್ನೇ ನೋಡುವಷ್ಟು! ಹೀಗಾಗಿ ಕೆರೆಯ ಕಡೆ ಗಮನವೇ ಇರದಷ್ಟು ಅಥವಾ ಅಷ್ಟು ವ್ಯವಧಾನವಿರಲಿಲ್ಲ ಎನಿಸುವಷ್ಟು! ಆ ಒಂದು ದಿನ, ನನ್ನ ಕ್ಲಿನಿಕ್ಕಿಗೆ ನಮ್ಮೂರವರು ಒಬ್ಬರು ಬಂದರು. ಅವರಿಂದ ತಿಳಿಯಿತು – ಅತೀ ದುಃಖದ ಸಮಾಚಾರ… ನಮ್ಮೂರ ಕೆರೆ ಇನ್ನಿಲ್ಲ! ಹೌದು, ಕೆರೆ ಇಲ್ಲ. ಹಾಗಾದರೆ ಏನಾಯಿತು ಅಥವಾ ಎಲ್ಲಿಗೆ ಸಾಗಿಸಲಾಯಿತು–ಹೊಸದೇನಾದರೂ ತಾಂತ್ರಿಕತೆಯಿಂದ ಬೇರೆಡೆಗೇನಾದರೂ…?! ಉಹುಂ…ಇಲ್ಲ! ಮುಚ್ಚಲಾಗಿದೆ. ಮುಚ್ಚಿ ಮತ್ತೊಂದು, ಮೂರನೆಯ, ಬಸ್ ನಿಲ್ದಾಣ ನಿರ್ಮಿಸಲಾಗಿದೆ! ಆಹಾ…ಅದ್ಭುತ! ಎಂಥ ತಲೆ ಇರಬಹುದು, ಎಂಥ ಸಾಧನೆ! ಒಮ್ಮೆ ಊರಿನತ್ತ ಹೋದೆ…ವಿಶಾಲ ಕೆರೆಯಲೀಗ ಆ ವೈಶಾಲ್ಯವೇ ಇಲ್ಲ! ಕೆರೆಯ ಬದಲು ಅಲ್ಲಿ ಬಸ್ ಸ್ಟ್ಯಾಂಡ್! ಮತ್ತು ಅದರ ಅತ್ತಿತ್ತ ಮಕ್ಕಳ ಆಟಕ್ಕಾಗಿ ಒಂದು ಉದ್ಯಾನವನದ ರೀತಿ! ಅಷ್ಟೇ ಅಲ್ಲ. ಪೇಟೆಯ ಸುತ್ತ ಇದ್ದ ಯಾವ ಕೆರೆಯೂ ಈಗಿಲ್ಲ. ಎಲ್ಲ ಬರಡು. ಭಣ ಭಣ! ಯಾರು ಕಾರಣರೋ, ಅಥವಾ ಅದೆಂಥ ಕಾರಣವೋ (ಯಾರ ಪಾಪವೋ) ನಾನರಿಯೆ…ಆದರೆ ನನಗನಿಸಿದ್ದು…ಊರೂರಲ್ಲೂ ಇಂಥ ಒಬ್ಬೊಬ್ಬ ಪ್ರಭೃತಿಯಿದ್ದರೆ, ಜಗತ್ತು ಉದ್ಧಾರ! ಕಾವೇರಿ ಗಂಗೆಯರನ್ನು ಭೂಮಿಗಿಳಿಸಿದ ಅಗಸ್ತ್ಯ ಭಗೀರಥರೀಗ ಈ ಇಂಥವರಿಂದ ಧನ್ಯ…! ***********************************