ಅಂಕಣ ಬರಹ ಕಬ್ಬಿಗರ ಅಬ್ಬಿ ಪಟ್ಟಣದ ಕವಿತೆಗೆ ಛಂದಸ್ಸಿಲ್ಲ! ಈ ಷಹರ ನಿದ್ರಿಸಲ್ಲ!. ಏರ್ಪೋರ್ಟ್ ನಲ್ಲಿ ಇಳಿಯಲು ಅನುಮತಿ ಸಿಗುವ ವರೆಗೆ ಪೈಲಟ್ ವಿಮಾನವನ್ನು ಷಹರಕ್ಕೆ ಸುತ್ತು ಹಾಕುತ್ತಿದ್ದ. ವಿಂಡೋ ದಿಂದ ಕಣ್ಣು ಹಾಯಿಸಿದರೆ, ಕೆಳಗೆ ಅಷ್ಟೂ ಬೆಳಕು. ಉದ್ದಕ್ಕೆ ಅಡ್ಡಕ್ಕೆ ಕೆಲವು ನೇರ,ಹಲವು ವಕ್ರ ರಸ್ತೆಗಳು. ಅವುಗಳನ್ನು ಬೆಳಗುವ ರಾತ್ರಿ ದೀಪಗಳು. ಈ ಪಟ್ಟಣಕ್ಕೆ ಮಧ್ಯರಾತ್ರಿ ಎನ್ನುವುದು ಬರೇ ಒಂದು ಪದ. ಆಕಾಶದಿಂದ ನೋಡಿದರೆ, ನೆಲದೆದೆಗೆ ಮೊಳೆ ಹೊಡೆದ ಹಾಗಿರುವ ಕಟ್ಟಡಗಳು. ಅವುಗಳ ಕಿಟಿಕಿಗಳಿಂದ ತಡರಾತ್ರೆ ದಣಿದು ಹೊರ ಜಾರುವ ಮಂದ ಬೆಳಕು. ಮನೆ ಕಟ್ಟಲು ಜಾಗ ಕಡಿಮೆ ಅಂತ ಸಾಲುಮನೆಗಳು ಗೋಡೆಗಳನ್ನು ಹಂಚಿಕೊಂಡಿವೆ. ಹ್ಞಾ! ಅಲ್ಲಿದೆ ನೋಡಿ, ವಾಂಖೇಡೆ ಸ್ಟೇಡಿಯಂ. ಈ ಅಂಗಣದಲ್ಲಿ ಐದಡಿಯ ಹುಡುಗ ಸಚಿನ್ ಸಿಕ್ಸರ್ ಹೊಡೆದಾಗ ಸಾವಿರ ಚಪ್ಪಾಳೆಗಳು ಅನುರಣಿಸಿತ್ತು. ಆತ ಸೊನ್ನೆಗೆ ಔಟಾದಾಗ ಜನ ಅವಹೇಳನದಿಂದ ಕಿರುಚಿದ್ದೂ ಇಲ್ಲಿಯೇ. ವಿಮಾನ ರೆಕ್ಕೆ ತಗ್ಗಿಸಿ ಎಡಕ್ಕೆ ವಾಲಿ, ಮೂತಿ ತಿರುಗಿಸುವಾಗ, ಕೆಳಗಿನ ರೆಡ್ ಲೈಟ್ ನ ರಸ್ತೆಗಳು, ಹತ್ತಿರವಾದಂತೆ ಕಂಡಿತು. ಇಲ್ಲಿ ಕೆಂಪು ದೀಪಗಳು ಮೊಟ್ಟೆಯಿಟ್ಟು, ಕಾಯದಕಾವು ಕೊಟ್ಟು, ಮರಿಯಾಗುವಾಗ ಬೆಳಕಿನ ಹೆಣ್ಣು-ಬಣ್ಣಕ್ಕೆ ಕಣ್ಣೀರು ಬೆರೆತು ರಾಡಿ ರಾಡಿಯಾಗಿ ಹರಡುತ್ತೆ. ಹರಡಿದ ವರ್ಣ ಕೊಲಾಜ್ ಆರ್ಟ್ ಅನ್ನೋವವರೂ ಇದ್ದಾರೆ. ಚಿತ್ರ ಚಲಿಸುತ್ತಾ ಚಲನಚಿತ್ರವಾಗಿ ಬಾಕ್ಸ್ ಆಫೀಸ್ ಹಿಟ್ ಕೂಡಾ ಆಗಿದೆ. ಆಗಸದ ಕಣ್ಣಿಗೆ, ಬುಸ್ ಬುಸ್ ಅಂತ ಬುಸುಗುಟ್ಟುತ್ತಾ ಓಡುವ ಉಗಿಬಂಡಿಗಳು ಸಹಸ್ರ ಪದಿಯಂತೆ ನಿಧಾನವಾಗಿ ತೆವಳುವಂತೆ ಕಂಡವು. ಇರುವೆ ಸಾಲಿನಂತೆ ರಸ್ತೆ ತುಂಬಾ ವಾಹನಗಳು. ಕರ್ರಗೆ ಹೊಗೆ ಕಾರ್ಖಾನೆಯ ಚಿಮಿಣಿಯಿಂದ, ರಜನೀಕಾಂತ್ ಸಿನೆಮಾದಲ್ಲಿ ಧೂಮದ ಉಂಗುರ ಬಿಟ್ಟ ಹಾಗೆ ಸುತ್ತಿ ಸುಳಿದು ವಿದ್ಯುತ್ ದೀಪಗಳ ನಡುವೆ ಕತ್ತಲನ್ನು ಕಪ್ಪಾಗಿಸಲು ಪ್ರಯತ್ನ ಮಾಡುತ್ತವೆ. ಸಹಸ್ರಾರು ವರ್ಷಗಳಿಂದ ದಡದಿಂದ ಬಿಡುಗಡೆಗೆ ಎಡೆಬಿಡದೆ ಅಲೆಯಾಗಿ ಅಪ್ಪಳಿಸಿ ಪ್ರಯತ್ನಿಸಿ ಉಪ್ಪುಪ್ಪಾದರೂ ಸೋಲೊಪ್ಪದ ಕಡಲಿನ ನೀರು, ಇಡೀ ಪೇಟೆಯ ಬೆಳಕನ್ನು ಪ್ರತಿಫಲಿಸಿ ತನ್ನೊಳಗೆ ಬಿಂಬವಾಗಿಸಿ ಬೆಚ್ಚಗಿದ್ದಂತೆ ಕಂಡಿತು. ಮುಂಬಯಿಯಲ್ಲಿ ಅತ್ಯಂತ ದೊಡ್ಡ ಸ್ಲಮ್ ಇದೆ ಅಂತಾರೆ. ಆದರೆ ಎತ್ತರದಲ್ಲಿ ಹಾರುವ ವಿಮಾನದಲ್ಲಿ ಕುಳಿತ ಕಣ್ಣುಗಳಿಗೆ ಈ ಗುಡಿಸಲುಗಳು, ನಿರ್ಲಕ್ಷಿಸುವಷ್ಟು ಚಿಕ್ಕವು. ಷಹರದ ಅಂಡರ್ ಗ್ರೌಂಡ್ ಚಟುವಟಿಕೆಗಳು ಮನಸ್ಸಿನ ಒಳಪದರದ ವ್ಯಭಿಚಾರೀ ಭಾವದ ಹಾಗೆ, ವಿಮಾನದ ನೇರ ಕಣ್ಣಿಗೆ ಕಾಣಿಸಲ್ಲ. ಪ್ಲೀಸ್ ಟೈ ಯುವರ್ ಸೀಟ್ ಬೆಲ್ಟ್. ವಿಮಾನ ಕೆಲವೇ ನಿಮಿಷಗಳಲ್ಲಿ ಲ್ಯಾಂಡ್ ಆಗಲಿದೆ ಅಂತ ಪೈಲಟ್ ಗೊಗ್ಗರು ಇಂಗ್ಲಿಷ್ ನಲ್ಲಿ ಕೊರೆದಾಗ ಪೇಟೆಯ ನೋಟದಿಂದ ಕಣ್ಣು ಒಳ ಸೆಳೆದು ವಿಮಾನದ ಚೌಕಟ್ಟಿನ ಒಳಗೆ ಸ್ಥಿರನಾದೆ. ಹೌದಲ್ಲಾ! ಇದೇ ಮುಂಬಯಿ ನಗರದ ಬಗ್ಗೆ ಜಿ.ಎಸ್.ಶಿವರುದ್ರಪ್ಪ ನವರು ಬರೆದ ಕವಿತೆ ನೆನಪಾಯಿತು. ಕೇಳುವಿರಾ.. ** ** ** ** ಮುಂಬೈ ಜಾತಕ ಹುಟ್ಟಿದ್ದು: ಆಸ್ಪತ್ರೆಯಲ್ಲಿ ಬೆಳೆದದ್ದು: ಬಸ್ಸು ಟ್ರಾಂ ಕಾರು ಟ್ಯಾಕ್ಸಿ ಎಲೆಕ್ಟ್ರಿಕ್ ಟ್ರೇನುಗಳಲ್ಲಿ ಕುಡಿದದ್ದು: ಕಾಣದೆಮ್ಮೆಯ ಕೆಚ್ಚಲು ಕರೆದು ಕಳುಹಿಸಿದ ಬಾಟ್ಲಿ ಹಾಲು, ಗ್ರೈಪ್ ಸಿರಪ್ ಹಾರ್ಲಿಕ್ಸ್ ಇತ್ಯಾದಿ ಕಂಡಿದ್ದು :ಬೆಳಗಿನಿಂದ ಸಂಜೆಯ ತನಕ ಲಕ್ಷ ಚಕ್ರದ ಉರುಳು ಅವಸರದ ಹೆಜ್ಜೆ ಯ ಮೇಲೆ ಸರಿವ ನೂರಾರು ಕೊರಳು ಕಲಿತದ್ದು: ಕ್ಯೂ ನಿಲ್ಲು:ಪುಟ್ಪಾತಿನಲ್ಲೇ ಸಂಚರಿಸು; ರಸ್ತೆವದಾಟುವಾಗೆಚ್ಚರಿಕೆ; ಓಡು, ಎಲ್ಲಿಯೂ ನಿಲ್ಲದಿರು; ಹೇಗೋ ಅವರಿವರ ತಳ್ಳಿ ಮುನ್ನುಗ್ಗು; ಎಲ್ಲಾದರೂ ಸರಿಯೆ, ಬೇರೂರು,ಹೀರು. ತಾಯಿ: ಸಾವಿರ ಗಾಲಿ ಉರುಳಿ ಹೊರಳುವ ರಸ್ತೆ ಯಂಚಿನಲ್ಲೇ ಕೈಹಿಡಿದು ನಡೆಸಿದವಳು. ಇರುವ ಒಂದಿಂಚು ಕೋಣೆಯಲ್ಲೇ ಹೊರಲೋಕವನು ಪರಿಚಯಿಸಿ ಎಚ್ಚರಿಕೆ ಕೊಟ್ಟವಳು. ತಂದೆ: ಬೆಳಗಿನಿಂದ ಸಂಜೆಯ ತನಕ ಕಣ್ಮರೆಯಾಗಿ ರಜಾ ದಿನಗಳಲ್ಲಿ ಕಣ್ಣಿಗೆ ಕಂಡು ಕುಳಿತು ಕೆಮ್ಮುವ ಪ್ರಾಣಿ. ವಿದ್ಯೆ: ಶಾಲೆ ಕಾಲೇಜುಗಳುವಕಲಿಸಿದ್ದು; ದಾರಿ ಬದಿ ನೂರಾರು ಜಾಹೀರಾತು ತಲೆಗೆ ತುರುಕಿದ್ದು, ರೇಡಿಯೋ ಸಿಲೋನ್ ವ್ಯಾಪಾರ ವಿಭಾಗ ಶಿಫಾರಸ್ಸು ಮಾಡಿದ್ದು. ನೀನಾಗಿ ಕಲಿತದ್ದು ಬಲು ಕಡಿಮೆ, ಬಸ್ ಸ್ಟಾಪಿನಲ್ಲಿ ನಿಂತ ಬಣ್ಣಗಳ ಕಡೆಗೆ ಕಣ್ಣಾಡಿಸುವುದೊಂದನ್ನು ಹೊರತು. ಜೀವನ: ಈ ಲಕ್ಷ ದಾರಿಗಳ ಚದುರಂಗದಾಟದಲಿ, ನೂರು ಬೆಳಕಿನ ಕೆಳಗೆ ಯಾರದೋ ಕೈಗೊಂಬೆಯಾಗಿ ಮುಂದುವರಿಯುವುದು. ಏಳುವುದು, ಬಟ್ಟೆಯಲ್ಲಿ ಮೈ ತುರುಕಿ ಓಡುವುದು; ರೈಲನ್ನೊ ಬಸ್ಸನೋ ಹಿಡಿಯುವುದು, ಸಾಯಂಕಾಲ ಸೋತು ಸುಸ್ತಾಗಿ ರೆಪ್ಪೆಯ ಮೇಲೆ ಹತ್ತು ಮಣ ಆಯಾಸವನ್ನು ಹೊತ್ತು ಹನ್ನೊಂದು ಘಂಟೆ ಹೊಡೆವಾಗ ಮನೆಯಲ್ಲಿ ಕಾದೂ ಕಾದೂ ತೂಕಡಿಸಿ ಮಂಕಾದ ಮಡದಿಯನು ಎಚ್ಚರಿಸುವುದು. ತಣ್ಣಗೆ ಕೊರೆವ ಕೂಳುಂಡು ಬಾಡಿಗೆ ಮನೆಯ ನೆರಳಿನ ಕೆಳಗೆ, ಮತ್ತೆ ಸಾವಿರ ಗಾಲಿಗಳುಜ್ಜುವ ಕನಸು ಬಂಡಿಯ ಕೆಳಗೆ ಹಾಸುಗಂಬಿಯ ಹಾಗೆ ತತ್ತರಿಸುತ್ತ ಮಲಗುವುದು. *** *** **** ಕವಿತೆಯ ಹೆಸರೇ ಮುಂಬೈಯ ಜಾತಕ. ಜಾತಕ ಎಂದರೆ ಹುಟ್ಟು, ಸಾವು ಇವಿಷ್ಟರ ನಡುವಿನ ಬದುಕಿನ ಚಿತ್ರವನ್ನು ಸೂತ್ರರೂಪದಲ್ಲಿ ಹಿಡಿದಿಟ್ಟ ಚಿತ್ರಸಮೀಕರಣ. ಕವಿತೆ ಮುಂಬಯಿ ನಗರದ ಬದುಕಿನ ಹಲವು ಘಟ್ಟಗಳನ್ನು ಒಂದೊಂದಾಗಿ ತೆರೆದಂತೆ ನಗರದ ಫಿಸಿಯಾಲಜಿ ಮತ್ತು ಸೈಕಾಲಜಿ ಎರಡರ ಪರಿಚಯವಾಗುತ್ತೆ. ಇಲ್ಲಿ ಅತ್ಯಂತ ಮುಖ್ಯ ಅಂಶವೆಂದರೆ, ಕವಿ ಪಟ್ಟಣವನ್ನು ಒಳ್ಳೆಯದು, ಕೆಟ್ಟದು ಎಂಬ ಬೈಪೋಲಾರ್ ದೃಷ್ಟಿಕೋನದಿಂದ ನೋಡುವುದೇ ಇಲ್ಲ. ಸರಿ- ತಪ್ಪುಗಳು, ಯಾವಾಗಲೂ ಮನುಷ್ಯನ ಪರಿಸ್ಥಿತಿಗೆ ಸಾಪೇಕ್ಷವಾಗಿರುವುದರಿಂದ, ಈ ಕವಿತೆಯ ಧ್ವನಿಗೆ ಸಮತೋಲನವಿದೆ. ಹುಟ್ಟಿದ್ದು: ಆಸ್ಪತ್ರೆಯಲ್ಲಿ ಯಾರು ಹುಟ್ಟಿದ್ದು! ಹಳೆಯ ಕಾಲದಲ್ಲಿ ಹಳ್ಳಿಯಲ್ಲಿ ಮನೆಯಲ್ಲಿಯೇ ಹೆರಿಗೆಯ ವ್ಯವಸ್ಥೆ ಇತ್ತು. ಹಳ್ಳಿಯಲ್ಲಿ ಮನೆಗೆ ಬಂದು ಹೆರಿಗೆ ಮಾಡಿಸುವ ಹೆಂಗಸು, ಮಗುವಿನ ಜೀವನದುದ್ದಕ್ಕೂ, ಎರಡನೇ ಅಮ್ಮನ ಥರ ವಿಶೇಷ ಅಟ್ಯಾಚ್ಮೆಂಟ್ ಮತ್ತು ಸ್ಥಾನಮಾನ ಪಡೆಯುತ್ತಾಳೆ. ಆ ಹೆಂಗಸು, ಆಗಾಗ ತಾನು ಹೆರಿಗೆ ಮಾಡಿದ ಮಕ್ಜಳನ್ನು ನೋಡಿ ಖುಷಿ ಪಡುವುದು ಅತ್ಯಂತ ಸಾಮಾನ್ಯ. ಅದೊಂದು ಭಾವನಾತ್ಮಕ ಸಂಬಂಧ. ಆದರೆ ನಗರದಲ್ಲಿ ಆಸ್ಪತ್ರೆಯಲ್ಲಿ ಹೆರಿಗೆ. ಅದೊಂದು ವ್ಯವಸ್ಥೆ. ಒಂದು ಥರಾ ಈ ಕಡೆ ಬಾಗಿಲಿಂದ ಗರ್ಭವತಿಯರು ಒಳ ಹೋದರೆ, ಆ ಕಡೆ ಬಾಗಿಲಿಂದ ಅಮ್ಮ ಮತ್ತು ಮಗು ಹೊರಗೆ ಬರುವಂತಹ ಇಂಡಸ್ಟ್ರಿಯಲ್ ವ್ಯವಸ್ಥೆ. ಇಲ್ಲಿ ಭಾವನಾತ್ಮಕ ಸಂಬಂಧ ಇಲ್ಲ. ಆಸ್ಪತ್ರೆಗೆ ಹಣ ಕಟ್ಟಿದರೆ, ಹೆರಿಗೆ ಮಾಡಿಸಿ ಕಳಿಸುತ್ತಾರೆ. ಹಾಗೆ, ಮಗುವಿನ ಹುಟ್ಟಿನಲ್ಲಿಯೇ ನಗರಸ್ವಭಾವವಿದೆ. ಹಾಗೆ ಹುಟ್ಟಿದ ಮಕ್ಕಳು ಬೆಳೆದು ನಗರದ ಪ್ರಜೆಗಳಾಗುತ್ತಾರೆ. ಅಂದರೆ ನಗರವೇ ಆಗುತ್ತಾರೆ. ಹಾಗೆ ನೋಡಿದಾಗ ತಿಳಿಯುತ್ತೆ, ಹುಟ್ಟಿದ್ದು ಆಸ್ಪತ್ರೆಯಲ್ಲಿ, ಅನ್ನುವಾಗ, ನಗರಕ್ಕೆ ನಗರವೇ ಹುಟ್ಟಿದ್ದು ಆಸ್ಪತ್ರೆಯಲ್ಲಿ ಅಂತ. ” ಬೆಳೆದದ್ದು: ಬಸ್ಸು ಟ್ರಾಂ ಕಾರು ಟ್ಯಾಕ್ಸಿ ಎಲೆಕ್ಟ್ರಿಕ್ ಟ್ರೇನುಗಳಲ್ಲಿ “ ಬಸ್ಸು,ಟ್ರಾಂ, ಕಾರು, ಎಲೆಕ್ಟ್ರಿಕ್ ಟ್ರೈನ್ ಗಳು ಸದಾ ಚಲನಶೀಲವಾದ, ಸದಾ ಗಿಜಿಗುಟ್ಟುವ, ವ್ಯವಸ್ಥೆಯ ಸಂಕೇತ. ಮುಂಬಯಿಯಲ್ಲಿ ಅಮ್ಮಂದಿರೂ ದಿನವಿಡೀ ಕೆಲಸಕ್ಕಾಗಿ ಚಲಿಸುವಾಗ ಕಂಕುಳಲ್ಲಿ ಮಗು! ಹಳ್ಳಿಯಲ್ಲಿ ಪ್ರಾಣಿ ಪಕ್ಷಿಗಳ ಜತೆಗೆ ಬೆಳೆದರೆ, ಮುಂಬಯಿ ಯಲ್ಲಿ ಬೆಳವಣಿಗೆಯ ಸಂಗಾತಿ, ಯಂತ್ರಗಳು. ಅದರ ಪರಿಣಾಮ ಮನಸ್ಸಿನ ಮೇಲೆ ಏನು ಎಂಬುದು ಓದುಗನ ಗ್ರಹಿಕೆಗೆ ಬಿಟ್ಟದ್ದು. ” ಕುಡಿದದ್ದು: ಕಾಣದೆಮ್ಮೆಯ ಕೆಚ್ಚಲು ಕರೆದು ಕಳುಹಿಸಿದ ಬಾಟ್ಲಿ ಹಾಲು, ಗ್ರೈಪ್ ಸಿರಪ್ ಹಾರ್ಲಿಕ್ಸ್ ಇತ್ಯಾದಿ “ ಸಾಧಾರಣವಾಗಿ ಹಳ್ಳಿಯ ಮನೆಯಲ್ಲಿ ದನ, ಅದರ ಹಾಲು ಕರೆದು ಮಗುವಿಗೆ ಕುಡಿಸುತ್ತಾರೆ. ಮಗು ಬೆಳೆದು ಮಾತಾಡಲು ತೊಡಗಿದಾಗ ಆ ದನವನ್ನು ಮಗುವಿಗೆ ಗೋಮಾತೆ ಎಂದು ಪರಿಚಯಿಸುವ ಪರಿಪಾಠ. ಆ ಮಗು ಮತ್ತು ದನದ ನಡುವೆ ಒಂದು ಅನೂಹ್ಯ ಸಂಬಂಧ ಬೆಳೆಯುತ್ತೆ. ಮುಂಬಯಿಯಲ್ಲಿ ಹಾಗಲ್ಲ. ಕಾಣದೆಮ್ಮೆಯ ಕೆಚ್ಚಲು ಕರೆದು ಕಳುಹಿಸಿದ ಬಾಟಲೀ ಹಾಲು!. ಮಗುವಿಗೆ ಹಾಲಿನ ಉಗಮವೇ ಒಂದು ಬಾಟಲಿಯಂತಹ ವಸ್ತುವಾದ ಹಾಗೆ. ಗೋಮಾತೆಯ ಜಾಗದಲ್ಲಿ ಬಾಟಲಿ. ಗ್ರೈಪ್ ಸಿರಪ್, ಹಾರ್ಲಿಕ್ಸು ಎಲ್ಲವೂ, ಜಾಹೀರಾತು ಜಗತ್ತಿನ ಪೇಯಗಳು. ಮಗು ಮತ್ತು ಅಮ್ಮ ಎಲ್ಲರೂ ಜಾಹೀರಾತಿನ ಮೇಲೆ ವಿಶ್ವಾಸವಿಟ್ಟು ಮಗುವಿನ ಬೆಳವಣಿಗೆಯ ಪೋಷಕಾಂಶಗಳ ನಿರ್ಧಾರ ಮಾಡುತ್ತಾರೆ. ” ಕಂಡಿದ್ದು: ಬೆಳಗಿನಿಂದ ಸಂಜೆಯ ತನಕ ಲಕ್ಷ ಚಕ್ರದ ಉರುಳು ಅವಸರದ ಹೆಜ್ಜೆಯ ಮೇಲೆ ಸರಿವ ನೂರಾರು ಕೊರಳು “ ಕಾಣುವುದು ಎಂದರೆ ದರ್ಶನ. ಬೆಳಗಿನಿಂದ ಸಂಜೆಯ ತನಕ ಎಂದರೆ, ಒಂದು ದಿನವೂ ಆಗಬಹುದು, ಹುಟ್ಟಿನಿಂದ ಸಾವಿನ ತನಕದ ಬದುಕೂ ಆಗಬಹುದು. ಲಕ್ಷ ಲಕ್ಷ ಚಕ್ರದ ಉರುಳು, ಕಾಲಚಕ್ರವೇ, ಋತುಚಕ್ರವೇ, ಬದುಕಿನ ಏರಿಳಿತವೇ, ನಗರದ ಚಲಿಸುವ ವಾಹನಗಳ ಚಕ್ರಗಳು ಉರುಳುವ ಚಲನಶೀಲತೆಯೇ, ಅಥವಾ ಕೊರಳಿಗೆ ಉರುಳಾಗುವ ಹಲವಾರು ಸಮಸ್ಯೆಗಳೇ?. ಸುಶಾಂತ್ ಸಿಂಗ್ ಹಾಕಿಕೊಂಡ ಉರುಳೇ?. ಅವಸರದ ಹೆಜ್ಜೆ ಹಾಕುವುದು, ಕಾಲುಗಳು. ಜತೆಗೇ ಸರಿಯುವುದು ಕೊರಳು. ಕೊರಳು ಎಂದರೆ ಧ್ವನಿ, ಮಾತು,ಅಭಿಪ್ರಾಯ ಸಿದ್ಧಾಂತ ಇತ್ಯಾದಿಗಳಾಗಿ ಅನ್ವಯಿಸಲು ಸಾಧ್ಯ. ನಡಿಗೆಯ ವೇಗಕ್ಕೆ ಪ್ರಾಮುಖ್ಯತೆ. ಕೊರಳಿನ ದನಿಗಲ್ಲ ಅನ್ನುವುದು ಒಂದರ್ಥವಾದರೆ, ಚಲನಶೀಲ ವ್ಯವಸ್ಥೆಗೆ ಸಾಪೇಕ್ಷವಾಗಿ ಸಿದ್ಧಾಂತ, ಅಭಿವ್ಯಕ್ತಿ, ಚಲಿಸುತ್ತೆ. ” ಕಲಿತದ್ದು: ಕ್ಯೂ ನಿಲ್ಲು:ಪುಟ್ಪಾತಿನಲ್ಲೇ ಸಂಚರಿಸು; ರಸ್ತೆವದಾಟುವಾಗೆಚ್ಚರಿಕೆ; ಓಡು, ಎಲ್ಲಿಯೂ ನಿಲ್ಲದಿರು; ಹೇಗೋ ಅವರಿವರ ತಳ್ಳಿ ಮುನ್ನುಗ್ಗು; ಎಲ್ಲಾದರೂ ಸರಿಯೆ, ಬೇರೂರು,ಹೀರು.” ಜೀವನದ ಶಾಲೆಯಲ್ಲಿ ನಡೆದ ಪ್ರತೀ ಹೆಜ್ಜೆ ಪಠ್ಯ. ಮೇಲಿನ ಪ್ಯಾರಾದಲ್ಲಿ ಅಷ್ಟೂ ಪ್ರತಿಮೆಗಳೇ. ಅವುಗಳನ್ನು ಓದುಗರ ಚಿಂತನೆಗೆ ಬಿಡಲೇ?. ಬೇರೂರು, ಹೀರು ಎನ್ನುವ ಕವಿಯ ಭಾವ ಚಲನಶೀಲ ಬದುಕು ಹಂಬಲಿಸುವ ಸ್ಥರತೆಯೇ?. ಬೇರೂರದಿದ್ದಲ್ಲಿ ಹೀರುವುದು ಹೇಗೆ. ಜೀವನದ ಸಾರವನ್ನು ಹೀರಲು ಚಲನಶೀಲತೆಯಷ್ಟೇ ಸ್ಥಿರಪ್ರಜ್ಞೆಯೂ ಆಳ ಚಿಂತನೆಯೂ ಅಗತ್ಯವೇ. ತಾಯಿ, ತಂದೆ, ವಿದ್ಯೆಯ ಬಗ್ಗೆ ಕವಿ ಸೂಚ್ಯವಾಗಿ ತಿಳಿಸುವ ಸಾಲುಗಳು ನಿಮ್ಮ ಸೃಜನಶೀಲ ಚಿಂತನೆಗೆ ಹಲವು ರೂಪದಲ್ಲಿ ಕಾಣ ಬಹುದು. ” ಜೀವನ: ಈ ಲಕ್ಷ ದಾರಿಗಳ ಚದುರಂಗದಾಟದಲಿ, ನೂರು ಬೆಳಕಿನ ಕೆಳಗೆ ಯಾರದೋ ಕೈಗೊಂಬೆಯಾಗಿ ಮುಂದುವರಿಯುವುದು. ಏಳುವುದು, ಬಟ್ಟೆಯಲ್ಲಿ ಮೈ ತುರುಕಿ ಓಡುವುದು; ರೈಲನ್ನೊ ಬಸ್ಸನೋ ಹಿಡಿಯುವುದು, ಸಾಯಂಕಾಲ ಸೋತು ಸುಸ್ತಾಗಿ ರೆಪ್ಪೆಯ ಮೇಲೆ ಹತ್ತು ಮಣ ಆಯಾಸವನ್ನು ಹೊತ್ತು ಹನ್ನೊಂದು ಘಂಟೆ ಹೊಡೆವಾಗ ಮನೆಯಲ್ಲಿ ಕಾದೂ ಕಾದೂ ತೂಕಡಿಸಿ ಮಂಕಾದ ಮಡದಿಯನು ಎಚ್ಚರಿಸುವುದು. ತಣ್ಣಗೆ ಕೊರೆವ ಕೂಳುಂಡು ಬಾಡಿಗೆ ಮನೆಯ ನೆರಳಿನ ಕೆಳಗೆ, ಮತ್ತೆ ಸಾವಿರ ಗಾಲಿಗಳುಜ್ಜುವ ಕನಸು ಬಂಡಿಯ ಕೆಳಗೆ ಹಾಸುಗಂಬಿಯ ಹಾಗೆ ತತ್ತರಿಸುತ್ತ ಮಲಗುವುದು.” ಈ ಸಾಲುಗಳಲ್ಲಿ ಪ್ರತಿಯೊಂದು ಪದವೂ ರೂಪಕ ಅಥವಾ ಪ್ರತಿಮೆ. ಬಟ್ಟೆಯಲ್ಲಿ ಮೈ ತುರುಕಿ ಓಡುವುದು! ಎಂತಹಾ ಕಲ್ಪನೆ ಅಲ್ಲವೇ. ಬಟ್ಟೆಗೆ ಹೊಂದುವಂತೆ ದೇಹವನ್ನು ಫಿಟ್ ಮಾಡುವ ಜರೂರತ್ತು. ಬಟ್ಟೆ ಎಂದರೆ ದಾರಿ ಎಂಬ ಅರ್ಥ ತಗೊಂಡರೆ, ಬದುಕಿನ ದಾರಿ ಹೇಗಿದೆಯೋ ಅದಕ್ಕೆ ಸರಿಯಾದ ದೇಹಶಿಸ್ತು ಅಗತ್ಯ. ಆಫೀಸ್ ೫೦ ಕ.ಮೀ.ದೂರದಲ್ಲಿ ಇದ್ದರೆ, ಬೆಳಗಿನ ಜಾವ ಎದ್ದು ಮೂಡುವ ಸೂರ್ಯನಿಗೆ ಬೆನ್ನು ಹಾಕಿ, ಆಫೀಸಿನತ್ತ ರೈಲುಗಾಡಿ ಹತ್ತಿ ಚಲಿಸಬೇಕು. ನಿದ್ದೆ ಬೇಡುವ ದೇಹವನ್ನು ದಂಡಿಸಿ, ಹೊಂದಿಸಿ, ಬದುಕಿನ ಬಟ್ಟೆಗೆ ತುರುಕಬೇಕು. ‘ಸಾಯಂಕಾಲ ರೆಪ್ಪೆಯ ಮೇಲೆ ಹತ್ತು ಮಣ ಭಾರ ಹೊತ್ತು’ ಬದುಕಿನ ಸಾಯಂಕಾಲವೇ? ಅನುಭವದ ಭಾರವೇ?. ಕಲಿತ, ನಂಬಿದ ಸಿದ್ಧಾಂತದ/ ನಂಬಿಕೆಗಳ ಭಾರವೇ. ಆ ಭಾರದಿಂದ ಮುಂದಿನ ದರ್ಶನದ ಬಾಗಿಲಾದ ರೆಪ್ಪೆ ಮುಚ್ಚುತ್ತಾ ಇದೆಯೇ?. “ಬಾಡಿಗೆ ಮನೆಯ ನೆರಳು” ಅನನ್ಯ ಅಭಿವ್ಯಕ್ತಿ. ಇಹ ಲೋಕವೇ ಬಾಡಿಗೆ ಮನೆಯೇ?. “ಸಾವಿರ ಗಾಲಿಗಳುಜ್ಜುವ ಕನಸು ಬಂಡಿಯ ಕೆಳಗೆ ಹಾಸುಗಂಬಿಯ ಹಾಗೆ ತತ್ತರಿಸುತ್ತ ಮಲಗುವುದು”