ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ನೀ ಬರಲಾರೆಯಾ

ಕವಿತೆ ನೀ ಬರಲಾರೆಯಾ ವಿದ್ಯಾಶ್ರೀ ಅಡೂರ್ ಚಂದಿರನ ಬೆಳಕಿನಲಿ ತಂಪಮಳೆ ಸುರಿದಾಗನನ್ನ ಜತೆಗಿರಲು ನೀ ಬರಲಾರೆಯಾ ಇನ್ನು ಸನಿಹಕೆ ಸಾಗಿ ಉಸಿರ ಬಿಸಿಯನು ಸೋಕಿನನ್ನ ಜತೆಗಿರಲು ನೀ ಬರಲಾರೆಯಾ ಒಂದಿರುಳು ಕನಸಿನಲಿ ನಿನ್ನ ಜತೆ ಕೈಹಿಡಿದುಕಡಲಬದಿ ನಿಲುವಾಸೆ ನೀ ಬರಲಾರೆಯಾ ಮರಳಿನಲಿ ನಿನ ಹೆಜ್ಜೆ ಮೇಲೆನ್ನ ಹೆಜ್ಜೆಯನುಇಡುವಾಸೆ ಒಂದೊಮ್ಮೆ ಬರಲಾರೆಯಾ ಭೋರ್ಗರೆವ ಅಲೆಗಳಿಗೆ ಮೈಯೊಡ್ಡಿ ನಿಲುವಾಗಬಿಡದೆನ್ನ ಕೈಹಿಡಿಯೇ ಬರಲಾರೆಯಾ ಮಾಯಕದ ನಗುವೊಂದು ಚಂದದಲಿ ಮೂಡಿರಲುನನ ಮೋರೆ ದಿಟ್ಟಿಸಲು ಬರಲಾರೆಯಾ. ********************************

ನೀ ಬರಲಾರೆಯಾ Read Post »

ಇತರೆ

ನಿತ್ಯ ಸಾವುಗಳ ಸಂತೆಯಲಿ ನಿಂತು

ಲೇಖನ ನಿತ್ಯ ಸಾವುಗಳ ಸಂತೆಯಲಿ ನಿಂತು ಬದುಕ ಪ್ರೀತಿ ಧೇನಿಸುತ್ತಾ… ಮಲ್ಲಿಕಾರ್ಜುನ ಕಡಕೋಳ ಕೊರೊನಾ ಎಂಬ ಸಾವುಗಳ ಶಕೆ ಆರಂಭವಾಗಿ ಆರೇಳು ತಿಂಗಳುಗಳೇ ಕಳೆಯುತ್ತಿವೆ. ತೀರಾ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳನ್ನು ಜಾಲಾಡುತ್ತಿದ್ದರೆ ಗುಡ್ಡೆ, ಗುಡ್ಡೆ ಸಾವುಗಳ ಗುಡ್ಡವೇ ಗೋಚರ. ಜತೆಯಲಿ ಕೆಲಸ ಮಾಡಿದ ಸಹೋದ್ಯೋಗಿಗಳು ಸೇರಿದಂತೆ ನಮ್ಮ ಸಾಂಸ್ಕೃತಿಕ ಬಳಗದ ಒಡನಾಟದಲ್ಲಿರುವ ಸಾಹಿತಿ, ಕಲಾವಿದರ ಸಾಲು ಸಾಲು ಸಾವುಗಳು. ಸಾಹಿತಿ, ಕಲಾವಿದರ ಸಾವಿಲ್ಲದ ದಿನಗಳೇ ಇಲ್ಲ ಎನ್ನುವಂತಾಗಿದೆ. ನಾಳೆ ಯಾರ ಸರದಿಯೋ..? ಸಾವಿನ ಸರದಿಯಲ್ಲಿ ಕಾಯುತ್ತಾ ನಿಂತಂತಹ ನಡುಕ ಹುಟ್ಟಿಸುವ ದುಗುಡ, ದುಮ್ಮಾನ ಬಹುತೇಕ ಎಲ್ಲರನ್ನೂ ಕಾಡುತ್ತಿರುವುದು ಸುಳ್ಳಲ್ಲ. ಅರೇ! ಇದೇನಿದು ಸಂಸ್ಕೃತಿ ಚಿಂತಕರು ಈ ಪರಿಯಾಗಿ ಸಾವಿಗಂಜುವುದೇ!? ಅಂತ ಅನಿಸಬಹುದು. ಹಾಗೆ ಅಂಜಿ ಅಡಗಿ ಕುಳಿತರೇನು ಸಾವು ದೂರ ಸರಿಯುವುದುಂಟೇ ? ಇಲ್ಲವೇ ಇಲ್ಲ ಅದು ಯಾರನ್ನೂ ಬಿಡುವುದಿಲ್ಲ. ಸಾವು ಬಂದರೇನು ಸಿಟ್ಟಿಲ್ಲ. ಅದು ಮಹಾ ಮಹಾಂತರನೇ ಬಿಟ್ಟಿಲ್ಲ ಎಂಬ ತತ್ವಪದ ನೆರವಿಗಿದ್ದರೂ ಸಾವು ಬೇಕಾದರೆ ಬರಲಿ. ಆದರೆ ಕೊರೊನಾ ಬಾರದಿರಲಿ. ಸೋಜಿಗವೆಂದರೆ ದುಗುಡ ತುಂಬಿದ ಈ ದುರಿತ ಕಾಲದಲ್ಲೇ ಬಹಳಷ್ಟು ಬರಹಗಳು, ಚಿಂತನೆಗಳು, ಆನ್ ಲೈನ್ ಎಂಬ ಮಹಾಬಯಲು ಆಲಯದಲ್ಲಿ ಬೆಳಕು ಕಾಣುತ್ತಿವೆ. ಒಂದು ಮಾತು ಮಾತ್ರ ಖರೇ, ಅದೇನೆಂದರೆ : ಸಾವಿಗಂಜದವರೂ ಪ್ರಾಣಹಂತಕ ಕೊರೊನಾ ವೈರಾಣುವಿಗೆ ಹೆದರಿದ್ದಾರೆ. ಹೀಗೆ ಕೊರೊನಾಕ್ಕೆ ಹೆದರಿ, ಹೆದರಿ ಖಿನ್ನತೆಯ ದರಪ್ರಮಾಣ ಯದ್ವಾತದ್ವಾ  ಏರಿಕೆಯಾಗಿದೆ. ಸಮೀಕ್ಷೆಯೊಂದರ ಪ್ರಕಾರ ಶೇಕಡಾ ಎಪ್ಪತ್ತಕ್ಕೂ ಹೆಚ್ಚುಮಂದಿ ಮಧ್ಯಮ ವರ್ಗದವರು ಕೊರೊನಾ ಭೀತಿರೋಗದ ಖಿನ್ನತೆಯಿಂದ ನರಳುತ್ತಿದ್ದಾರೆ. ಮನುಷ್ಯರ ಸಾವಿನ ಸುದ್ದಿ ಕೇಳುತ್ತಿದ್ದಂತೆಯೇ ನೆನಪಿಗೆ ಬರುವುದೇ ಕೊವಿಡ್. ಅವರಿಗೆ ಬಂದುದು ಕೊವಿಡ್ಅಲ್ಲರಿ, ಅದು ಹಾರ್ಟ್ ಅಟ್ಯಾಕ್ ಅಂತ ಹೇಳಿದರೂ ನಂಬುಗೆಯೇ ಬರುವುದಿಲ್ಲ. ಕೊವಿಡ್ ಎಂಬ ಕಳಂಕದ ಅಪರಾಧಪ್ರಜ್ಞೆ ಭಲೇ ಭಲೇ ವಿದ್ಯಾವಂತರನ್ನೇ ಕಾಡುತ್ತಿದೆ. ಪತ್ರಿಕೆ, ಮೊಬೈಲುಗಳ ತುಂಬೆಲ್ಲಾ ದಿನನಿತ್ಯವೂ ಸಾವಿನ ಸುದ್ದಿಗಳದೇ ಸುಗ್ಗಿ. ವಾಟ್ಸ್ಯಾಪ್, ಮುಖಹೊತ್ತಿಗೆಗಳನ್ನು ಓಪನ್ ಮಾಡಲು ಧೈರ್ಯಬಾರದು. ಅಬ್ಬಾ! ಇವತ್ತು ಯಾರು ನಮ್ಮನ್ನು ಅಗಲಿದ್ದಾರೆಂಬ ಭಯಾನಕ ಹೆದರಿಕೆ. ತೀರಿಹೋದ ಸಾಹಿತಿ, ಕಲಾವಿದರ ಕೃತಿಗಳು ಅವರ ಬದುಕಿನ ಸಾಂಸ್ಕೃತಿಕ ಒಡನಾಟಗಳು, ಅವರ ಸಕ್ರಿಯ ಚಟುವಟಿಕೆಗಳು ನನ್ನಂಥ ಅನೇಕರನ್ನು ಆರ್ದ್ರವಾಗಿ ಕಾಡುವುದು ಸಹಜ. ಅದೆಲ್ಲ ಭಾವನಾತ್ಮಕ ನಡವಳಿಕೆ, ಪುಕ್ಕಲು ಮನಸ್ಥಿತಿ  ಎಂದು ಹಗುರವಾಗಿ ಪರಿಗಣಿಸಲು ಬಾರದು, ಅದು ತರವಲ್ಲ. ಹೀಗೆ ಕಾಡುತ್ತಲೇ ಇರುವ ಕಾಡಾಟದ ಹಿಂದೆ ದೈಹಿಕ ಸಾವಿಗೆ ಕಾರಣವಾದ ಪೈಶಾಚಿಕ ಗಾತ್ರದ ಪ್ಯಾಂಡಮಿಕ್ ಹುಡುಕಾಟ. ಈ ಜಿಜ್ಞಾಸೆ ಅತಿರೇಕಗೊಂಡು ದುಃಸ್ವಪ್ನದಂತೆ ನಮಗೆ ನಾವೇ ಕಂಡುಕೊಳ್ಳುವ ಎಲ್ಲ ಸಾವುಗಳ ಹಿಂದಿನ ಕಾರಣ ಕೊರೊನಾ. ಅದೀಗ ಜಾಗತಿಕ ಮಟ್ಟದಲ್ಲಿ ಮೃತ್ಯುವಿನ ಪೆಡಂಭೂತವಾಗಿದೆ. ಹೌದು ಸಾವಿಗೆ ಪರ್ಯಾಯ ಪದವೇ ಮತ್ತೆ ಮತ್ತೆ ಕೊರೊನಾ.. ಕೊರೊನಾ.. ಮಾತ್ರ ಎನ್ನುವಂತಾಗಿದೆ.  ಹೀಗೆ ಎಲ್ಲ ಸಾವುಗಳ ಹಿಂದೆ ಕೊರೊನಾ ಡೊಕ್ಕು ಹೊಡೆದಿರುತ್ತದೆಂಬ ಅಚಲ ನಂಬಿಕೆಯು ಸಾರ್ವತ್ರಿಕವಾಗತೊಡಗಿದೆ. ಅಕ್ಷರಶಃ ಅಕ್ಷರಸ್ಥ ಮತ್ತು ವಿದ್ಯುನ್ಮಾನ ಲೋಕದ ಒಡನಾಟವಿರುವ ಎಲ್ಲರ ಗಾಢ ನಂಬುಗೆಯೆಂದರೆ ನಿಸ್ಸಂದೇಹವೆಂಬಂತೆ  ಜಗತ್ ಪ್ರಸಿದ್ದ ಜಡ್ಡು ಎಂಬ ಖ್ಯಾತಿ ಗಳಿಸಿರುವ ಕೊರೊನವೇ ಸಾವಿನ ಮೂಲ. ಅದೀಗ ಹಳ್ಳಿ ಹಳ್ಳಿಗಳಲ್ಲಿಯೂ ರುದ್ರನರ್ತನ ಶುರುಮಾಡಿದೆ. ಕೊರೊನಾ ವೈರಾಣುಗಿಂತ ಅದರ ಸುತ್ತ ಹೆಣೆದು ಸ್ಥಾಯೀಗೊಳಿಸಿದ ಥರಾವರಿ ಹುನ್ನಾರದ ಕಥಾಕಥಿತ ಭಯಾನಕ ವಿದ್ಯಮಾನಗಳೇ ಮರಣವನ್ನು ತರುತ್ತಿವೆ. ಇಂತಹ ಸಾವುಗಳ ಶವಸಂಸ್ಕಾರ ಮತ್ತೊಂದು ಘನಘೋರ ಎಪಿಸೋಡ್. ಕ್ರೂರಿ ಕೊರೊನಾದ ಈ ಕಾಲಘಟ್ಟದಲ್ಲಿ ವಯೋಸಹಜ ಸಾವಿಗೂ ಸಿಗಬೇಕಾದ ಗೌರವ ಖಂಡಿತಾ ಸಿಗುತ್ತಿಲ್ಲ. ಎಲ್ಲಾ ಸಾವುಗಳನ್ನು ಕೊರೊನಾ ಕನ್ನಡಕದ ಮೂಲಕ ನೋಡುವಂತಾಗಿದೆ. ಮುಂಬಯಿನಂತಹ ಮಹಾನಗರಗಳಲ್ಲಿ ಕೊರೊನಾ ಪೀಡಿತರ ಸಾವುಗಳ ಕುಟುಂಬದವರೇ ಶವವನ್ನು ಪಡೆಯದೇ ಅನಾಥ ಶವಗಳಂತೆ ಮಹಾನಗರ ಪಾಲಿಕೆಗೆ ಶವ ಒಪ್ಪಿಸಿಬಿಡುವ ಅಮಾನವೀಯ ಸ್ಥಿತಿ ನಿರ್ಮಾಣಗೊಂಡಿದೆ. ನಮ್ಮಲ್ಲಿಯೂ ಪರಿಸ್ಥಿತಿ ಅಷ್ಟೇನು ಭಿನ್ನವಾಗಿಲ್ಲ. ಮಹಾನಗರ ಪಾಲಿಕೆಗಳು ನೆರವೇರಿಸುವ ಕೊವಿಡ್ ಶವಸಂಸ್ಕಾರ ಹೇಗಿರುತ್ತದೆಂಬುದನ್ನು ಮಾಧ್ಯಮಗಳಲ್ಲಿ ನೋಡಿದ್ದೇವೆ. ಅಸಲಿಗೆ ಅಲ್ಲಿ ಶವಸಂಸ್ಕಾರದ ತರಬೇತಿ ಪಡೆದ ಸಿಬ್ಬಂದಿ ಇರುವುದಿಲ್ಲ. ಮನುಷ್ಯರಿಗೆ ಬದುಕಿದ್ದಾಗಲೂ ಗೌರವ ಸಿಗದ ಸನ್ನಿವೇಶದ ಈ ಕಾಲದಲ್ಲಿ ಸತ್ತಾಗಲಾದರೂ ಕಿಂಚಿತ್ ಗೌರವ ಬೇಡವೇ.? ಬಳ್ಳಾರಿ, ಚನ್ನಗಿರಿ, ಯಾದಗಿರಿ ಘಟನೆಗಳು ನಮ್ಮೆದುರಿಗಿವೆ . ಬಳ್ಳಾರಿಯಲ್ಲಂತೂ ಒಂಬತ್ತು ಹೆಣಗಳನ್ನು ಸತ್ತ ನಾಯಿ, ಹಂದಿಗಳನ್ನು ಎಳಕೊಂಡು ಬರುವಂತೆ ದರದರನೆ ಎಳಕೊಂಡು ಬಂದು ಎಲ್ಲಾ ಒಂಬತ್ತು ಹೆಣಗಳನ್ನು ಒಂದೇ ಗುಣಿಯಲ್ಲಿ ಎಸೆದು ಬಿಡುವ ದೃಶ್ಯಗಳನ್ನು ನೋಡುತ್ತಿದ್ದರೆ ಕೊರೊನಾ ಎಂತಹ ರಣಭೀಕರ ಭಯ ಹುಟ್ಟಿಸಿದೆಯೆಂಬುದು ತಿಳಿಯುತ್ತದೆ. ಖುದ್ದು ಮಗನೇ ತಂದೆ ತಾಯಿ ಹೆಣದ ಮುಖ ನೋಡಲು ಸಿದ್ದನಿಲ್ಲ. ಇನ್ನು ಒಡಹುಟ್ಟಿದವರು ತಮ್ಮ ತಮ್ಮ ಮನೆಯವರ ಕೊವಿಡ್ ಹೆಣಗಳನ್ನು ಖುದ್ದು ಶವಸಂಸ್ಕಾರಕ್ಕೆ ಸಿದ್ಧರಿಲ್ಲ. ಹೀಗೆ ಮನುಷ್ಯ ಸಂಬಂಧ, ಪ್ರೀತಿ, ಅಂತಃಕರಣಗಳು ನಿರ್ನಾಮಗೊಳ್ಳುತ್ತಿವೆ. ಒಟ್ಟು ಮಾನವ ಸಮಾಜ ಮಾನವೀಯತೆ ಕಳೆದುಕೊಳ್ಳುವ ಹೆದ್ದಾರಿಯಲ್ಲಿದೆ. ಇದೆಲ್ಲ ಗಮನಿಸುತ್ತಿದ್ದರೆ ಕೊವಿಡ್ ಸಂವೇದನಾಶೀಲ ಜೀವಸಂಬಂಧಗಳನ್ನೇ ಛಿದ್ರ ವಿಛಿದ್ರಗೊಳಿಸಿದ್ದು ಖರೇ. ತಂದೆ, ತಾಯಿ, ಮಕ್ಕಳ ನಡುವಿನ ಸಂಬಂಧಗಳನ್ನೇ ಕೊಂದು ಹಾಕಿದೆ. ತಿಂಗಳುಗಟ್ಟಲೇ ವಿದ್ಯುನ್ಮಾನ ಮಾಧ್ಯಮಗಳು ಕೊರೊನಾ ಕುರಿತು ರಣಭಯಂಕರ ಭಯ ಹುಟ್ಟಿಸಿ ಇದೀಗ ತಾರಾಲೋಕದ ನಶಾ ಜಗತ್ತಿನತ್ತ ಚಿತ್ತ ಹರಿಸಿವೆ. ಕೊವಿಡ್ ಕುರಿತು ಅವು  ಒಂದು ವರ್ಷಕ್ಕಾಗುವಷ್ಟು ಭಯೋತ್ಪಾದನೆಯ ಎಲ್ಲ ಬಗೆಯ ವೈರಾಣುವಿಗಿಂತ ಭೀಕರವಾದ ಸರಕು, ಶಸ್ತ್ರಾಸ್ತ್ರಗಳನ್ನು ಸಿದ್ಧಗೊಳಿಸಿಯಾಗಿದೆ‌.    ಕೊವಿಡ್ ಕೇಂದ್ರಗಳು ಮತ್ತು ಜಿಲ್ಲಾ ಮಟ್ಟದ ಎಲ್ಲಾ ಆಸ್ಪತ್ರೆಗಳಲ್ಲಿ ಮುಖ್ಯವಾಗಿ ಬೇಕಿರುವುದು ಆಪ್ತಸಮಾಲೋಚನೆಯ ಘಟಕ. ಅಲ್ಲಿ ಪರಿಣಿತ ಸಿಬ್ಬಂದಿಗಳಿರಬೇಕು. ಎಷ್ಟೋಮಂದಿ ಭಯಭೀತರಾಗಿ ಕೊರೊನಾ ಶಂಕೆಯಿಂದಾಗಿ ಆತ್ಮಹತ್ಯೆಯ ಮೊರೆ ಹೋಗಿರುವುದುಂಟು. ಇಂಥವರಿಗೆ ಸಕಾಲದಲ್ಲಿ ಆಪ್ತಸಮಾಲೋಚಕರಿಂದ ಸೂಕ್ತ ಕೌನ್ಸೆಲಿಂಗ್ ದೊರಕಿದ್ದರೆ ಬದುಕುಳಿಯುವ ಸಾಧ್ಯತೆಗಳಿದ್ದವು. ಕೊರೊನಾಕ್ಕೆ ಚಿಕಿತ್ಸೆಯೇ ಇಲ್ಲವೆಂದಾದಲ್ಲಿ ಹೆಚ್ಚುಪಾಲು ಆಪ್ತ ಸಮಾಲೋಚನೆಯೇ ಸರಿಯಾದ ಮದ್ದು. ಬಹಳಷ್ಟು ಜನ ಕೊರೊನಾ ಕುರಿತು ಪ್ಯಾನಿಕ್ ಆಗಿಯೇ ರೋಗನಿರೋಧಕ ಶಕ್ತಿ ಕಳೆದುಕೊಳ್ಳುತ್ತಾರೆ. ಅಂಥವರೇ ಅಧಿಕ ಸಂಖ್ಯೆಯಲ್ಲಿರುವುದರಿಂದ ಆಪ್ತ ಸಮಾಲೋಚನೆಗೆ ಅಧಿಕ ಆದ್ಯತೆ ನೀಡಬೇಕಿದೆ. ಮಾಸ್ಕ್ ಬಿಸಾಕಿ ನಿರ್ಭಯವಾಗಿ ಜನರ ನಡುವೆ ಓಡಾಡುವ, ಮೊದಲಿನಂತೆ ಸಮುದಾಯದಲ್ಲಿ ನಿರ್ಭೀತಿಯಿಂದ ಬೆರೆತು ಬಾಳುವ ಸಹಭಾಗಿತ್ವದ ವಾತಾವರಣ ಇನ್ನುಮುಂದೆ ಇಲ್ಲವೇ? ಕೊವಿಡ್ ಹತ್ತೊಂಬತ್ತರ ದುರಿತಕಾಲ ಕೊನೆಗೊಂಡು ಮತ್ತೆ ಮರಳಿ ಹಿಂದಿನ ಆ ದಿನಗಳನ್ನು ಕಾಣಬಲ್ಲೆವೇ ? ಕಾಣುವುದಾದರೆ ಯಾವಾಗ ಯಾವ ತಿಂಗಳ ಯಾವ ದಿನಗಳಿಂದ ? ಮಣಭಾರದ ಈ ಪ್ರಶ್ನೆಗಳಿಗೆ ಸರಕಾರದ ಬಳಿ, ವಿಜ್ಞಾನಿಗಳ ಬಳಿ, ವೈದ್ಯರ ಬಳಿ, ಹೋಗಲಿ ದೇವರಿದ್ದರೆ ದೇವರ ಬಳಿ ಹೀಗೆ ಯಾರ ಬಳಿಯಲ್ಲಾದರು ಉತ್ತರಗಳಿದ್ದರೆ ಸಾರ್ವಜನಿಕವಾಗಿ ತಿಳಿಸಿ ಪುಣ್ಯ ಕಟ್ಟಿಕೊಳ್ಳಲಿ. *********************************************  

ನಿತ್ಯ ಸಾವುಗಳ ಸಂತೆಯಲಿ ನಿಂತು Read Post »

ಇತರೆ

ಎಂಜಿನಿಯರ್ಸ್ ಆಗಿ ನಾವೇನು ಮಾಡಬಹುದು?

ಲೇಖನ ಎಂಜಿನಿಯರ್ಸ್ ಆಗಿ ನಾವೇನು ಮಾಡಬಹುದು? ಸುಶ್ಮಿತಾ ಐತಾಳ್        ಎಂಜಿನಿಯರ್ಸ್ ಡೇ ಆದ ಇಂದು ಎಲ್ಲೆಲ್ಲೂ ನಮಗೆ ಆದರ್ಶ ಪ್ರಾಯರಾಗಿರುವ ಮಹಾನ್ ವ್ಯಕ್ತಿ ವಿಶ್ವೇಶ್ವರಯ್ಯನವರ ಭಾವಚಿತ್ರಗಳು ರಾರಾಜಿಸುತ್ತಿರುವುದು ಕಾಣುತ್ತಿವೆ. ಅವರು ಎಷ್ಟು  ಬುದ್ಧಿವಂತರಾಗಿದ್ದರು, ಎಷ್ಟು ಪರಿಶ್ರಮಿಗಳೂ ಪ್ರಾಮಾಣಿಕ ಕೆಲಸಗಾರರೂ ಶಿಸ್ತಿನ ಸಿಪಾಯಿಯೂ ಆಗಿದ್ದರು ಮುಂತಾಗಿ ಅವರ ಗುಣ ಗಾನ ಮಾಡುವುದು ಕೇಳುತ್ತಿದೆ. ಆದರೆ ಇಷ್ಟು ಮಾಡಿದರೆ ಮುಗಿಯಿತೇ? ವಿಶ್ವೇಶ್ವರಯ್ಯ ಅವರ ಹುಟ್ಟಿದ ದಿನವನ್ನು ಎಂಜಿನಿಯರ್ಸ್ ಡೇ ಎಂದು ನಾವು ಯಾಕೆ ಆಚರಿಸುತ್ತೇವೆ? ಈ ದಿನ ನಾವು ಏನನ್ನು ನೆನಪಿಸಿಕೊಳ್ಳ ಬೇಕಾಗಿದೆ?         ನಮ್ಮ ದೇಶದಲ್ಲಿ ದಿನದಿನವೂ ಸಾವಿರಾರು ಅಪಘಡ ಮತ್ತು ಅಪಘಾತಗಳ ಬಗ್ಗೆ ನಾವು ಕೇಳುತ್ತಿದ್ದೇವೆ..ರಸ್ತೆಗಳುದ್ದಕ್ಕೂ ಕಾಣುವ ಹೊಂಡ ಗುಂಡಿಗಳು, ಮುರಿದು ಬೀಳುವ ಸೇತುವೆಗಳು, ಬಿರುಕು ಬಿಡುವ ಗೋಡೆಗಳು, ಸೋರುವ ತಾರಸಿಗಳು, ಕುಸಿಯುವ ಕಟ್ಟಡಗಳು, ಹೊಗೆಯುಗುಳಿ ಪರಿಸರವನ್ನು ವಿಷಮಯಗೊಳಿಸುವ ಕಾರ್ಖಾನೆಗಳು- ಹೀಗೆ ಎಲ್ಲೆಡೆಯೂ ಸರಕಾರದಿಂದಲೋ ಖಾಸಗಿ ಸಂಸ್ಥೆ ಮತ್ತು ವ್ಯಕ್ತಿಗಳಿಂದಲೋ  ಹಂಚಿಕೆಗೊಳಿಸಲ್ಪಡುವ ಹಣವನ್ನು ನುಂಗಿ ಒಳಗೆ ಹಾಕಿಕೊಂಡು ಯಾವುದೇ ಸಾಮಾಜಿಕ ಜವಾಬ್ದಾರಿಯ ಪ್ರಜ್ಞೆ ಇಲ್ಲದೆ ಜನತೆಗೆ ದ್ರೋಹ ಬಗೆಯುವ ಎಂಜಿನಿಯರ್ಗಳು ನಮ್ಮ ನಡುವೆ ಸಾಕಷ್ಟು ಮಂದಿ ಇದ್ದಾರೆ. ಇಂಥವರಲ್ಲಿ ಜವಾಬ್ದಾರಿಯ ಅರಿವು ಮೂಡಿಸುವವರು ಯಾರು? ಅಥವಾ ಮೂಡಿಸುವ ಬಗೆ ಎಂತು?     ಮನುಷ್ಯ ಮನಸ್ಸು ಮಾಡಿದರೆ ಸಾಧ್ಯವಾಗದಿರುವುದು ಯಾವುದೂ ಇಲ್ಲ. ಸಂಕಲ್ಪ ಶಕ್ತಿ ನಮ್ಮಲ್ಲಿ ಇರಬೇಕು ಅಷ್ಟೆ. ಎಂಜಿನಿಯರುಗಳು ದೇಶದ ಬೆನ್ನೆಲುಬು ಇದ್ದ ಹಾಗೆ. ಅನೇಕ ಯುವ ಎಂಜಿನಿಯರುಗಳಿಗೆ ತಾವೇನು ಮಾಡಬೇಕಾಗಿದೆ, ಏನು ಮಾಡುತ್ತಿದ್ದೇವೆ ಅನ್ನುವ ಅರಿವಾಗಲಿ ಚಿಂತನೆಯಾಗಲಿ ಇರುವುದಿಲ್ಲ. ಕೈಗೆ ಸಂಬಳವೋ ಗಿಂಬಳವೊ ಬಂದರಾಯಿತು, ಜನತೆಯ ಸೌಖ್ಯದ ಚಿಂತೆ ತಮಗೆ ಯಾಕೆ ಅಂದುಕೊಳ್ಳುತ್ತಾರೆ. ಅಂಥವರಲ್ಲಿ ಅರಿವು ಮೂಡಿಸುವ ಕೆಲಸವನ್ನು ಎಂಜಿನಿಯರುಗಳ ಸಂಘಟನೆಗಳು ಮಾಡಬೇಕು. ಕಾಲಕಾಲಕ್ಕೆ ಇಂಥ ವಿಷಯಗಳ ಬಗ್ಗೆ ಸಭೆಗಳಲ್ಲಿ ಚರ್ಚಿಸುವುದರಿಂದ ರಾತ್ರಿ ಬೆಳಗಾಗುವುದರೊಳಗೆ ಬದಲಾವಣೆಯಾಗದಿದ್ದರೂ, ಯುವಜನತೆಯಲ್ಲಿ     ಜವಾಬ್ದಾರಿಯ ಪ್ರಜ್ಞೆ ಮೂಡಿಸುವ ಕೆಲಸವಾದರೂ ಆಗಬಹುದು.ಆ ಮೂಲಕ ವಿಶ್ವೇಶ್ವರಯ್ಯನವರು ಮಾಡಿದ ಘನಕಾರ್ಯಗಳಿಗೆ ಗೌರವವಿತ್ತಂತಾಗಬಹುದು. *******************************************

ಎಂಜಿನಿಯರ್ಸ್ ಆಗಿ ನಾವೇನು ಮಾಡಬಹುದು? Read Post »

ಪುಸ್ತಕ ಸಂಗಾತಿ

ಇರುವೆ ಗೂಡಿನ ಬಾಯಿ ತೆರೆದ ನೆಲದ ಮಾತು

ಪುಸ್ತಕಪರಿಚಯ “ಥಟ್ ಅಂತ ಬರೆದು ಕೊಡುವ ರಸೀತಿಯಲ್ಲ ಕವಿತೆ” ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇವರು ಕೊಡಮಾಡುವ ಪ್ರೊ.ಡಿ.ಸಿ.ಅನಂತಸ್ವಾಮಿ ಸಾಹಿತ್ಯ ದತ್ತಿ 2019 ಪುರಸ್ಕಾರಕ್ಕೆ ಭಾಜನವಾಗಿರುವುದು “ಥಟ್ ಅಂತ ಬರೆದು ಕೊಡುವ ರಸೀತಿಯಲ್ಲ ಕವಿತೆ” ಇದೇ ಪುಸ್ತಕಕ್ಕೆ ಬಾಗಲಕೋಟರ ಜಿಲ್ಲೆಯ ಸಮೀರವಾಡಿ ಸಾಹಿತ್ಯ ದತ್ತಿ ಪ್ರಶಸ್ತಿ ಬಂದಿರುವುದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು. ಕಾಜಾಣ ಪುಸ್ತಕವು 2019ರಲ್ಲಿ ಪ್ರಕಟಿಸಿರುವ ಈ ಕವನ ಸಂಕಲನದಲ್ಲಿ ಮೂವತ್ತಾರು ಕವಿತೆಗಳಿವೆ. ಈ ಸಂಕಲನದ ಮೂಲಕ ಕಾವ್ಯ ಪ್ರಪಂಚಕ್ಕೆ ಪರಿಚಯಗೊಂಡಿರುವ ಸುಮಿತ್ ಮೇತ್ರಿ ಹಲಸಂಗಿಯ ಅಪರೂಪದ ಪ್ರತಿಭೆ. ಸೆರಗು ಜಾರಿದ ಕೊರಳ ಹರಿವಿಗೆ ಸಾವಿರಾರು ಹಗಲು ಮಿಣುಕು ಚುಕ್ಕಿಗಳು ಫಳ್ಳನೆ ಹೊಳೆಯುವ ಕರಿಬೆಕ್ಕಿನ ಕಣ್ಣ ಬೆಳದಿಂಗಳು ಎನ್ನುವಂತಹ ಸಾಲುಗಳನ್ನು ನೋಡಿದಾಗ ಇದನ್ನು ಬರೆದ ಕವಿಯ ಮೊದಲ ಸಂಕಲನವೆಂದು ಅನ್ನಿಸುವುದೇ ಇಲ್ಲ.  ಹೀಗೆ ಈ ಸಂಕಲನದ ಉದ್ದಕ್ಕೂ ಕಣ್ಣಾಡಿಸಿದರೆ ಪ್ರಬುದ್ಧ ಮನಸ್ಸಿನ ಗಮನಾರ್ಹವಾದ ಅಭಿವ್ಯಕ್ತಿಯ ಚಿತ್ರವೊಂದು ಮೂಡುತ್ತದೆ. ಮಾತಾಗುವ ಕಾಗದದ ಹೂವುಗಳು ಬಸವನ ಹುಳುವಿನ ಧಾವಂತ ಸಾವಿರದ ಕಣ್ಣಿನ ನವಿಲು ಬಯಲೊಳಗಿನ ಬಾಗಿಲು ಬೆತ್ತಲೆ ಹಣೆಯ ಒಂಟಿ ಸಿಂಧೂರ ಜೊತೆಯಾಗದ ನೆರಳ ಎದೆಯ ಗರ್ಭದ ಸಂವಹನ ಹೀಗೆ ಕವಿತೆಯ ಕುರಿತು ಹೊಸದೇ ಆದ ಆಲೋಚನೆಗಳನ್ನು ಇಟ್ಟುಕೊಂಡು ಆದ್ಯಾತ್ಮದ ಬೆಳಕಿನಲ್ಲಿ ಅಕ್ಷರದ ಕೈ ಹಿಡಿದು ನಡೆಯುತ್ತಿರುವ ವಿಶಿಷ್ಟ ಕವಿ ಸುಮಿತ್ ಮೇತ್ರಿ. ಸಂತೆ ಪೇಟೆಯ ಗಿಜಿಗುಡುವ ತಿರುವಿನಲ್ಲಿ ಥಟ್ಟನೆ ಎದುರಾಗುವ ಹಸಿರು ತೋಟದಂತೆ ತಾಜಾ ಕವಿತೆಗಳ ಸಂಕಲನವನ್ನು ಕೈಗಿಟ್ಟಿದ್ದಾರೆ ಈ ಪ್ರಾಮಾಣಿಕ ಕವಿ ಮಿತ್ರ. ಹೌದು ಸುಮಿತ್ ಕವಿತೆಯ ಪಾಠಶಾಲೆಯ ಒಬ್ಬ ಪ್ರಾಮಾಣಿಕ ವಿದ್ಯಾರ್ಥಿ. ಆದ್ದರಿಂದಲೇ ಇವರು ಸದಾ ತಮ್ಮನ್ನು ತಾವು ಜೀವಪರ ಕಾಳಜಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಹಲಸಂಗಿಯ ಹುಲುಸಾದ ನೆಲದಲ್ಲಿ ಮಧುರಚೆನ್ನರನ್ನು ಬಿತ್ತಿದ್ದಾರೆ ಎಂಬ ವರಕವಿ ಬೇಂದ್ರೆಯವರ ಮಾತಿಗೆ ಸಾಕ್ಷಿ ಎನ್ನುವಂತೆ ಇವರ ಕಾವ್ಯ ಚಿಗುರು ಸಾಕ್ಷಿ ಹೇಳುತ್ತದೆ. ಈ ಕ್ಷಣದ ತೇಲುವ ಪುಳಕ ಅನುಭವಿಸುವ ಗಿಡದಿಂದುರುವ ಹೂವಿಗೆ ತನ್ನನ್ನು ತಾನು ಸಮೀಕರಿಸಿಕೊಂಡಿರುವ ಇವರು ಪದ್ಯದ ಹೊಳೆಯಲ್ಲಿ ತೇಲುವ ಸುಖದ ಪಲುಕಿನ ಘಳಿಗೆಗಳನ್ನು ದಾಖಲಿಸಿರುವುದಕ್ಕೆ ಅನೇಕ ಸಾಲುಗಳು ಸಾಕ್ಷಿ ಹೇಳುತ್ತವೆ. ಆತ್ಮ ಹೊರಡುತ್ತದೆ ತೊಳೆದಿಟ್ಟ ಪ್ರತಿಮೆಯಂತ ಹೊಳೆಯುವ ಇಳಿಜಾರಿನ ನವಿಲೂರಿಗೆ ರೈನರ್ ಮಾರಿಯಾ ರಿಲ್ಕ್ ಹೇಳುತ್ತಾನೆ “ ನಮ್ಮ ಬದುಕು ಯಶಸ್ವಿಯೋ ಅಲ್ಲವೋ ಎಂಬುದರ ಪ್ರಮಾಣ ಪುರಾವೆಯೇ ಪ್ರೀತಿ. ನಾವು ಮಾಡುವ ಎಲ್ಲ ಕೆಲಸಗಳೂ ಪ್ರೀತಿಗಾಗಿ ಮಾಡಿಕೊಳ್ಳುವ ಸಿದ್ಧತೆಗಳು ಮಾತ್ರ” ಸುಮಿತ್ ಅವರ ಕೆಲವು ಕವಿತೆಗಳು ರಿಲ್ಕ್ ಹೇಳಿದ ಮಾತು ಸತ್ಯವೆಂಬುದಕ್ಕೆ ಸಾಕ್ಷಿ ಹೇಳುತ್ತವೆ. ಬಯಲಾಗದೇ ಸುರಿಯುವ ಈ ಮಳೆಯಲ್ಲಿ ಪಾದದ ಕಿರುಬೆರಳಿಗೆ ಮುತ್ತಿಡುವಾಸೆ ಮೂಡಿದೆ ಸುಮಿತ್ ಅವರ ಲೇಖನಿಗೆ ಸಹಜ ಕಾವೊಂದು ಪ್ರಾಪ್ತವಾದಂತೆ ಬರೆಸಿಬಿಡುವ ಶಕ್ತಿ ಪ್ರೀತಿಗಿದೆ ಎಂಬ ಭಾವನೆ ಹುಟ್ಟಿಸುವ ಸಾಲುಗಳನ್ನು ನೋಡಿ ಕಿಟಕಿಯ ಬದಿ ನಿಂತು ಮುಂಗುರುಳು ಬದಿಗೊತ್ತಿ ಕಿವಿಯಾಗದಿರು ಸದ್ದೇ ಮಾಡದ ನಿಶಬ್ದಕೆ! ರಿಲ್ಕ್ ಹೇಳುತ್ತಾನೆ “ಒಂದು ಸೃಜನಶೀಲ ಆಲೋಚನೆಯಲ್ಲಿ ನಾವು ಮರೆತು ಹೋದ ಸಾವಿರ ಸಾವಿರ ರಾತ್ರಿಗಳ ಪ್ರೀತಿ ಮತ್ತೆ ಜೀವ ಪಡೆಯುತ್ತದೆ.” ಹಾಗೆ ಪ್ರೀತಿಯೆನ್ನುವುದು ಸುಮಿತ್ ಅವರ ಆಲೋಚನೆಗಳನ್ನು ಸಜೀವಗೊಳಿಸುತ್ತದೆ ಮತ್ತು ಉತ್ಸಾಹಭರಿತ ಸಾಲುಗಳನ್ನು ಬರೆಸುತ್ತದೆ. ಬೆತ್ತಲೆ ರಸ್ತೆಗೆ ಹಬ್ಬಿದ ಇಬ್ಬನಿಯ ಸ್ಪರ್ಶ ಹೇಗೆ ಹೇಳಲಿ ಆ ಕ್ಷಣ ಗಿಳಿಯ ತುಟಿಯ ರಂಗು  ಅವಳ ಗುಂಗು ಹೀಗೆ ಹೊಚ್ಚ ಹೊಸ ಉಪಮೆಗಳನ್ನು ಬಳಸಿ ಓದುಗರು ಕೂಡಾ ಉಲ್ಲಾಸಗೊಳ್ಳುವಂತಹ ಸಾಲುಗಳನ್ನು ಒಕ್ಕಣಿಸುತ್ತಾರೆ. ಮುಂದುವರಿದು ಪ್ರೀತಿಯ ತೀವೃತೆಯ ಕಂಪಿಸುವ ಲಯಕ್ಕೆ ಶರಣಾದ ಭಕ್ತನಂತೆ ಸುಮಿತ್ ದೇವರೆದುರು ಸತ್ಯದ ತಪ್ಪೊಪ್ಪಿಗೆಗೂ ತಯಾರಾಗಿಬಿಡುತ್ತಾರೆ. ಕ್ಷಮಿಸು ಭಗವಂತ ಅವಳಷ್ಟು ನಿನ್ನನ್ನು ಪ್ರೀತಿಸಲಾರೆ ನಿನ್ನಷ್ಟು ನಾನು ಅವಳಲ್ಲಿ ಲೀನವಾಗಲಾರೆ ಉತ್ಕಟ ಪ್ರೇಮದ ಅಭಿವ್ಯಕ್ತಿಯ ಘಳಿಗೆಯಲ್ಲಿ ತಾಜಾ ಹೂವಿನ ಘಮದಂತೆ ಭಾಸವಾಗುವ ಸುಮಿತ್ ಅವರ ಕವಿತೆ ಸಾಮಾಜಿಕ ಕಳಕಳಿಯನ್ನು ಪ್ರತಿಪಾದಿಸುವ ಹಠಕ್ಕೆ ಬಿದ್ದಾಗ ಮಾತಾಗುವ ಕಾಗದದ ಹೂವಿನಂತೆ ಕಾಣುತ್ತದೆ. ಮಧುರಚೆನ್ನರನ್ನು ತಮ್ಮ ಆತ್ಮಸಾಥ್ ಮಾಡಿಕೊಂಡಿರುವ ಸುಮಿತ್ ಅವರಿಗೆ ಭಾವಲೋಕದಲ್ಲಿ ಒರತೆ ಹುಟ್ಟಿಸಿಕೊಂಡು ಹೊಳೆವ ಅಲೆಗಳೊಡನೆ ಚಿನ್ನಾಟವಾಡುವ ಕಾವ್ಯಸುಖದ ಬಗ್ಗೆ ಯಾರೇನು ಉಪದೇಶ ಕೊಡಬೇಕಾಗಿಲ್ಲ. ಆದರೂ ಪ್ರೀತಿಯಿಂದ ಅಭಿನಂದಿಸುತ್ತ “ಈ ಪ್ರಶಸ್ತಿ ಬಂದಿರುವುದು ನನ್ನ ಕೃತಿಗೇ ಹೊರತು ವೈಯಕ್ತಿಕವಾಗಿ ನನಗಲ್ಲ”  ಎನ್ನುವ ಒಳ ಎಚ್ಚರವೊಂದನ್ನು ಜಾಗೃತವಾಗಿಟ್ಟುಕೊಂಡು ಸಾಮಾಜಿಕ ಘೋಷಣೆಗಳನ್ನ ಹಾಗೆಯೇ ಸಾಲಿಗಿಳಿಸಿದರೆ ವೃತ್ತಪತ್ರಿಕೆಯ ವರದಿಯಾಗುತ್ತದೆಯೇ ಹೊರತು ಅದರಲ್ಲಿ ಕವಿತೆ ಇರುವುದಿಲ್ಲ ಎಂಬ ಸತ್ಯವನ್ನು ಮನನ ಮಾಡಿಕೊಳ್ಳುತ್ತ ಉಕ್ಕಿ ಹರಿವ ಪ್ರೀತಿಗೆ ಒಪ್ಪಿಸಿಕೊಂಡ ಉದ್ದೀಪಿತ ಮನಸ್ಸಿನ ಘಮಲಿನಂತಹ ತಾಜಾ ಕವಿತೆಗಳನ್ನು ಮತ್ತಷ್ಟು ಬರೆಯಿರಿ ಎಂದು ಕೋರುತ್ತೇನೆ. ಮನಸ್ಸಿಗೆ ಹೊಳೆಯುವ ಪೂರ್ವ ಸೂಚನೆಗಳಾಚೆಗೆ ಒಂದಿಷ್ಟನ್ನು ನೋಡುವ ಶಕ್ತಿಯನ್ನು ಕವಿತೆಯ ಅಂತಸತ್ವದಿಂದ ನಾವು-ನೀವು ಪಡೆದುಕೊಳ್ಳೋಣ ಎಂಬುದೇ ಇವತ್ತಿನ ಹಾರೈಕೆ. ************************************** ಪ್ರಜ್ಞಾ ಮತ್ತಿಹಳ್ಳಿ

ಇರುವೆ ಗೂಡಿನ ಬಾಯಿ ತೆರೆದ ನೆಲದ ಮಾತು Read Post »

ಇತರೆ

ವಿಶ್ವ ಅಭಿಯಂತರರ ದಿನಾಚರಣೆ.

ಲೇಖನ ವಿಶ್ವ ಅಭಿಯಂತರರ ದಿನಾಚರಣೆ. ಜಯಶ್ರೀ.ಭ.ಭಂಡಾರಿ. ಮೋಕ್ಷಗುಂಡ ವಿಶ್ವೇಶರಯ್ಯನವರ ಜನ್ಮದಿನವನ್ನು ಇಂಜನೀಯರ್ಸ ಡೇಯಾಗಿ ಆಚರಿಸಲಾಗುತ್ತದೆ. ಇಂದು (ಸಪ್ಟಂಬರ 15) ಜಗತ್ತಿನ ಶ್ರೇಷ್ಠ ವಿಜ್ಞಾನಿಗಳಲ್ಲೊಬ್ಬರಾದ ಭಾರತರತ್ನ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಜನ್ನದಿನ. ಇದನ್ನು ಭಾರತದಲ್ಲಿ ಇಂಜನೀಯರ್ಸ ಡೇ ಯನ್ನಾಗಿ ಆಚರಿಸಲಾಗುತ್ತಿದೆ.ಇಂಜನೀಯರಿಂಗ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಅಪಾರ ಸೇವೆಯ ನೆನಪಿಗಾಗಿ ಅವರ ಜನ್ಮ ದಿನವನ್ನು ‘ಇಂಜನೀಯರ ದಿನ’ವನ್ನಾಗಿ ಆಚರಿಸಲಾಗುತ್ತದೆ.ಭಾರತ ಜನನಿಯ ತನುಜಾತೆ ಕರ್ನಾಟಕಕ್ಕೆ ವಿಶ್ವೇಶ್ವರಯ್ಯನವರು ದೊಡ್ಡ ಕೊಡುಗೆ.ಸಪ್ಟಂಬರ 15 1860 ರಂದು ಜನಸಿದ ಇವರು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿ ಮುಂಬೈ ರಾಜ್ಯದ ಪೂನಾದಲ್ಲಿ 1884 ರಲ್ಲಿ ಇಂಜನೀಯರಿಂಗ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮುಂಬೈ ಸರ್ಕಾರದಲ್ಲಿ ಸೇವೆಯನ್ನು ಆರಂಭಿಸಿದರು.1907 ರವರೆಗೆ ಮುಂಬೈ ಸರ್ಕಾರದಲ್ಲಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದು ಮುಂದಿನ ಅವಧಿಯಲ್ಲಿ ಇಡೀ ಭಾರತ ದೇಶದಲ್ಲಿ ತಮ್ಮ ಪ್ರತಿಭೆಯಿಂದ ಹಾಗೂ ಕಾರ್ಯಗಳಿಂದ ಪ್ರಸಿದ್ಧರಾದರು.   ಮುಂಬೈ ರಾಜ್ಯದಲ್ಲಿ ವಿಶ್ವೇಶ್ವರಯ್ಯನವರ ಸೇವೆ ಅಸಾಧಾರಣ.ಪುಣೆ,ಕೊಲ್ಲಾಪುರ,ಸೋಲಾಪುರ, ವಿಜಾಪುರ ಮತ್ತು ಧಾರವಾಡ ಈ ನಗರಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ವಿನ್ಯಾಸಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.ಮುಂಬೈ ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವಾಗಲೇ ಇಟಲಿ ದೇಶದ ವಿಲಾಸ ಮತ್ತು ಈಡನ ನಗರಗಳಿಗೆ ಭೇಟ್ಟಿ ನೀಡಿ ಆ ನಗರಗಳ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಗಳ ಯೋಜನೆಯನ್ನು ರೂಪಿಸಿದ್ದರು. ಮುಂಬೈ ರಾಜ್ಯದಲ್ಲಿ ಅವರು ಸೇವೆಯಲ್ಲಿದ್ದಾಗ ಪುಣೆ ನಗರದಲ್ಲಿ ಆಗಿನ ಮಹಾನ ನಾಯಕರಾಗಿದ್ದ ಲೋಕಮಾನ್ಯ ತಿಲಕ,ರಾನಡೆಯವರು ಮತ್ತು ಗೋಪಾಲಕೃಷ್ಣ ಗೋಖಲೆಯವರಿಂದ ದೇಶಪ್ರೇಮವನ್ನು ಬೆಳೆಯಿಸಿಕೊಂಡರು.ಈ ಧೀಮಂತ ನಾಯಕರುಗಳ ಸಂಪರ್ಕದಿಂದ ರಾಷ್ಟ್ರಕ್ಕಾಗಿ ಯಾವ ರೀತಿಯಿಂದ ಸೇವೆ ಮಾಡಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟವರು.1902 ರಲ್ಲಿ ವಿಶ್ವೇಶ್ವರಯ್ಯನವರು ಮುಂಬೈಯಲ್ಲಿ ಸೇವೆಯಲ್ಲಿದ್ದಾಗಲೇ “Pಡಿeseಟಿಣ Sಣಚಿಣe oಜಿ ಇಜuಛಿಚಿಣioಟಿ iಟಿ ಒಥಿsoಡಿe” ಎನ್ನುವ ಪುಸ್ತಕವನ್ನು ಬರೆದು ಆಗಿನ ಮೈಸೂರು ಸಂಸ್ಥಾನದಲ್ಲಿ ಇರುವ ಸ್ಥಿತಿಗತಿಗಳನ್ನು ಉತ್ತಮ ಪಡಿಸುವುದಕ್ಕಾಗಿ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಹಲವಾರು ರೂಪುರೇಷೆಗಳನ್ನು ಹಾಕಿದ್ದರು. ಮುಂಬೈ ರಾಜ್ಯದಲ್ಲಿ ನಿವೃತ್ತಿ ಪಡೆದುಕೊಂಡ ನಂತರ ಹೈದ್ರಾಬಾದ ಸಂಸ್ಥಾನದ ನಿಜಾಮರ ಕರೆ ಮೇರೆಗೆ ಹೈದ್ರಾಬಾದ ನಗರದ ನೀರು ಸರಬರಾಜು ಒಳಚರಂಡಿ ವ್ಯವಸ್ಥೆಯನ್ನು ಅಧ್ಯಯನ ಮಾಡಿ ಒಂದು ಯೋಜನೆಯನ್ನು ವಿನ್ಯಾಸಗೊಳಿಸಿದರು . ವಿಶ್ವೇಶ್ವರಯ್ಯನವರ ಸೇವೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಹೈದ್ರಾಬಾದ ಸಂಸ್ಥಾನದ ನಿಜಾಮರು ವಿಶ್ವೇಶ್ವರಯ್ಯನವರು ರೂಪಿಸಿದ ಯೋಜನೆಯನ್ನು ಅನುಷ್ಠಾನಗೊಳಿಸಿದರು.ಹೈದ್ರಾಬಾದ ನಗರವನ್ನು ನವೀಕರಿಸಿ ಆಧುನೀಕರಿಸುವಲ್ಲಿ ವಿಶ್ವೇಶ್ವರಯ್ಯನವರ ಪಾತ್ರ ಹಿರಿದಾಗಿತ್ತು. ಮೈಸೂರು ಸಂಸ್ಥಾನದ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಇವರು ವಿಶ್ವೇಶ್ವರಯ್ಯನವರ ಖ್ಯಾತಿಯನ್ನು ಮನಗಂಡು ಅವರ ಸೇವೆಯನ್ನು ಮೈಸೂರಿಗೆ ಬಳಸಿಕೊಳ್ಳಲು ಇಚ್ಛಿಸಿದಾಗ ವಿಶ್ವೇಶ್ವರಯ್ಯನವರು ಮೈಸೂರ ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆ ಮತ್ತು ರಾಜ್ಯದ ಸರ್ವಾಂಗೀಣ ಪ್ರಗತಿಗಾಗಿ ನನ್ನ ಸೇವೆ ಮೀಸಲಿರುವುದಾಗಿ ತಿಳಿಸಿ,ಇದಕ್ಕೆ ಒಪ್ಪುವುದಾದರೆ ನನ್ನ ಸೇವೆ ಮೈಸೂರು ರಾಜ್ಯಕ್ಕೆ ಲಭ್ಯವೆಂದು ತಿಳಿಸಿದರು.ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ ಸಹ ಸಂಸ್ಥಾನದ ಅಭಿವೃದ್ಧಿ ಕುರಿತು ದೂರದೃಷ್ಠಿ ಹೊಂದಿದ್ದರಿಂದ ವಿಶ್ವೇಶ್ವರಯ್ಯನವರ ಬೇಡಿಕೆಗೆ ಒಪ್ಪಿದರು. ವಿಶ್ವೇಶ್ವರಯ್ಯನವರು 1909ರಲ್ಲಿ ಮೈಸೂರು ಸಂಸ್ಥಾನದ ಮುಖ್ಯ ಇಂಜೀಯರ ಆಗಿ ಸೇವೆ ಸಲ್ಲಿಸುತ್ತಿದ್ದರೂ,ಇವರು ತಮ್ಮ ವ್ಯಾಪ್ತಿಯನ್ನು ಮುಖ್ಯ ಇಂಜನೀಯರ ಹುದ್ದೆಗೆ ಸೀಮಿತಗೊಳಿಸದೇ ಮೈಸೂರು ಸಂಸ್ಥಾನದಲ್ಲಿ ಕೈಗಾರಿಕಾ ಅಭಿವೃದ್ಧಿಯನ್ನು ರೂಪಿಸುವಲ್ಲಿ ಕಾರಣೀಭೂತರಾದರು.ಇವರು ಮೈಸೂರು ಸಂಸ್ಥಾನದ ಸರ್ವಾಂಗೀಣ ಅಭಿವೃದ್ಧಿಗೆ ಯೋಜನೆಯನ್ನು ರೂಪಿಸಿ 1911 ರಲ್ಲಿ ಸಂಪದಭಿವೃದ್ಧಿ ಸಮ್ಮೇಳನ ವನ್ನು ಪ್ರಾರಂಭಿಸಿ ಸಂಸ್ಥಾನದ ಪ್ರಮುಖರೆಲ್ಲರನ್ನು ಸೇರಿಸಿ ರಾಜ್ಯದ ಸಂಪನ್ಮೂಲಗಳು,ಕೈಗಾರಿಕೆಗಳು ಇವುಗಳನ್ನು ಯಾವ ರೀತಿಯಲ್ಲಿ ಬಳಸಿಕೊಳ್ಳಬಹುದೆಂಬ ಬಗ್ಗೆ ಅಧ್ಯಯನ ಕೈಗೊಂಡರು.ತಂತ್ರಜ್ಞಾನ ಇಷ್ಟೊಂದು ಆಧುನಿಕರವಾಗಿರದ ಅಂದಿನ ಕಾಲದಲ್ಲಿಯೇ ಅವರು ನಿರ್ಮಿಸಿದ ಕರ್ನಾಟಕದ ಕೃಷ್ಣರಾಜ ಸಾಗರ ಆಣಿಕಟ್ಟು,ಬೃಂದಾವನ ಗಾರ್ಡನ,ಭದ್ರಾವತಿಯ ಉಕ್ಕಿನ ಕಾರ್ಖಾನೆ,ಮೈಸೂರು ಗಂಧದೆಣ್ಣೆ ಕಾರ್ಖಾನೆ ಮುಂತಾದವುಗಳ ಮೂಲಕ ವಿಶ್ವೇಶ್ವರಯ್ಯನವರು ಕರ್ನಾಟಕ್ಕೆ ಸರ್ವಾಂಗೀಣ ಪ್ರಗತಿಗೆ ಕಾರಣರಾದರು.ತಂತ್ರಜ್ಞಾನದ ಅದ್ಭುತಗಳನ್ನು ಭಾರತಕ್ಕೆ ಕೊಟ್ಟ ವಿಶ್ವೇಶ್ವರಯ್ಯನವರಿಗೆ ಬ್ರಿಟಿಷ ಸರಕಾರ ಸ್ವಾತಂತ್ರ್ಯ ಪೂರ್ವದಲ್ಲಿಯೇ ‘ನೈಟಹುಡ್’ ಪ್ರಶಸ್ತಿ ನೀಡಿತ್ತು. 1955 ರಲ್ಲಿ ಅವರಿಗೆ ‘ಭಾರತ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆಂಗ್ಲರು ಭಾರತದ ಸಂಪತ್ತನ್ನು ದೋಚಿ ತಮ್ಮ ದೇಶಕ್ಕೆ ರವಾನೆ ಮಾಡಿ,ಅಲ್ಲಿ ಸಿದ್ಧಪಡಿಸಿದ ವಸ್ತುಗಳನ್ನು ಭಾರತಕ್ಕೆ ಮಾರಾಟ ಮಾಡಿ, ಭಾರತೀಯ ಗುಡಿ ಕೈಗಾರಿಕೆಗಳನನು ಸಂಪೂರ್ಣ ನಾಶಮಾಡಿ ತಮ್ಮ ಸರಕುಗಳಿಗೆ ಭಾರತವನ್ನು ಮಾರುಕಟ್ಟೆ ಮಾಡಿಕೊಂಡು ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸಿಕೊಳ್ಳುತ್ತಿದ್ದರು. ಪರಿಸ್ಥಿತಿಯ ತೀವ್ರತೆಯನ್ನು ಅರಿತ ಸರ ಎಂ.ವಿ. ಬ್ರಿಟಿಷರ ವಿರೋಧದ ನಡುವೆಯೂ ಭಾರತೀಯ ಕೈಗಾರಿಕೆಗಳನ್ನು ಉಳಿಸಿ,ಬೆಳೆಸುವ ಹಲವಾರು ಯೋಜನೆಯನ್ನು ಕಾರ್ಯರೂಪಕ್ಕೆ ತಂದರು. ಉಕ್ಕಿನ ಕಾರ್ಖಾನೆಯಂತಹ ಬೃಹತ್ ಕೈಗಾರಿಕೆಗಳಿಗೆ ವಿಶ್ವ ಮಾನ್ಯತೆ ದೊರಕಿಸಿಕೊಡುವಲ್ಲಿ ಯಶಸ್ವಿಯಾದರು ಇಂತಹ ಮಾನವ ಕುಲ ಈ ದಿನವನ್ನು “ವಿಶ್ವ ಅಭಿಯಂತರ ದಿನ” ಎಂದೆ ಪರಿಗಣಿಸಿ ಅವರನ್ನು ಅವರ ಕಾಯಕ ನಿಷ್ಠತೆಯನ್ನು ನೆನಪಿಸಿಕೊಳ್ಳುತ್ತದೆ.ಆ ಮೂಲಕ ವಿಶ್ವದ ಮಹಾನ ಚೇತನಕ್ಕೆ ಈ ದಿನದ ಗೌರವ ಸಮಪಿರ್ತವಾಗಿದೆ.ಕನ್ನಡಿಗರ ಆರಾಧ್ಯ ದೈವ ಈ ಅಭಿಯಂತರರು ವಿಶ್ವೇಶ್ವರಯ್ಯನವರು. ನಾವೆಲ್ಲರೂ ಮಾಡುವ ಕಾಯಕದಲ್ಲಿ ಶಿಸ್ತು, ಸ್ವಯಮ,ಆದರ್ಶಗಳನ್ನು ಅಳವಡಿಸಿಕೊಂಡು ಅವಿರತವಾಗಿ ದುಡಿದು ಅವರ ಪಥದಲ್ಲಿ ಸಾಗೋಣ ಈ ಮೂಲಕ ಅವರಿಗೆ ಗೌರವ ನಮನಗಳನ್ನು ಸಲ್ಲಿಸೋಣ.  ಜಗತ್ತು ಸುತ್ತಿಕೊಂಡ ಮಹಾಮಾರಿಗೆ ಎಲ್ಲ ಉತ್ಸವ, ಹಬ್ಬ-ಹರಿದಿನಗಳು, ಜಾತ್ರೆ ನಿಬ್ಬಣಗಳು, ದಿನಾಚರಣೆ, ಜಯಂತಿಗಳು ಬೆರಳೆಣಿಕೆಯಷ್ಟು ಜನರ‌ ನಡುವೆ ಅತೀ ಸರಳವಾಗಿ ನಡೆಯುತ್ತಿವೆ.ಇದು ಇಂದಿನ ಕಾಲಘಟ್ಟದಲ್ಲಿ ತುಂಬಾ ಅನಿವಾರ್ಯ ಕೂಡ. ವಿಶ್ವಮಾನ್ಯ ವಿಶ್ವೇಶ್ವರಯ್ಯ ನವರ ದಿನಾಚರಣೆ ಕೂಡ ಸರಳವಾಗಿ ಆಚರಿಸಿ ಪುನೀತರಾಗೋಣ.ಎಲ್ಲರಿಗೂ ವಿಶ್ವ ಅಭಿಯಂತರ ದಿನಾಚರಣೆ ಶುಭಾಶಯಗಳು. ***************************************

ವಿಶ್ವ ಅಭಿಯಂತರರ ದಿನಾಚರಣೆ. Read Post »

ಕಥಾಗುಚ್ಛ

ವಿಭ್ರಮ

ಕಥೆ ವಿಭ್ರಮ ಮಧುರಾ   ಕರ್ಣಮ್ “ಚರಿ, ಇಪ್ಪ ಎನ್ನ ಪಣ್ಣಣು?” ಎಂದು  ದುಗುಡ ತುಂಬಿದ ಮುಖದಿಂದ ಕೇಳಿದಳು ಆಂಡಾಳು. “ಏನ್ಮಾಡೋದು? ಇದ್ದುದನ್ನು ಇದ್ದ ಹಾಗೇ ಪ್ರಾಮಾಣಿಕವಾಗಿ ನಿಜ ಹೇಳಿಬಿಡೋದು. ನಮ್ಮ ಮನಸ್ಸಿಗಾದ್ರೂ ನೆಮ್ಮದಿ ಇರುತ್ತೆ. ಎಷ್ಟು ದಿನಾಂತ ಸುಳ್ಳು ಪಳ್ಳು ಹೇಳಿ ಮುಚ್ಚಿಟ್ಕೊಳ್ಳೋಕಾಗುತ್ತೆ?” ಎಂದರು ವರದರಾಜ ಐಯ್ಯಂಗರ‍್ರು. “ಗುರುವಾಯೂರಪ್ಪಾ, ನಾನು ನಿಮ್ಮನ್ ಕೇಳ್ತಿದೀನಲ್ಲ, ನನಗೆ ಬುದ್ಧಿ ಇಲ್ಲ.” ಎಂದು ಕೂಗುತ್ತ ಒಳಗೋಡಿದಳು ಆಂಡಾಳು. ಅವಳಿಗೆ ಸಮಸ್ಯೆ ಎಲ್ಲರಿಗೂ ಗೊತ್ತಾಗುವದು ಬೇಡವಾಗಿತ್ತು. ಹಾವೂ ಸಾಯದಂತೆ ಕೋಲೂ ಮುರಿಯದಂತೆ ಮಧ್ಯದ ದಾರಿ ಹುಡುಕಬೇಕಾಗಿತ್ತು. ಐಯ್ಯಂಗಾರ‍್ರದೋ..ನೇರ ನಡೆ. ಸುಳ್ಳು ಅವರ ಜಾಯಮಾನದಲ್ಲೇ ಇಲ್ಲ.             ಅವರ ಮನೆಯಲ್ಲಿ ಈ ವಾಗ್ಯುದ್ಧ ಆರಂಭವಾಗಿ ತಿಂಗಳುಗಳೇ ಕಳೆದಿದ್ದವು. ಪರಿಹಾರ ಕಂಡಿರಲಿಲ್ಲ. ಕಾಣುವುದು ಅಷ್ಟು ಸುಲಭವೂ ಆಗಿರಲಿಲ್ಲ. ಇಷ್ಟು ದಿನ ನಿತ್ಯವೂ ಬಿಡದೆ ಗುರುವಾಯೂರಪ್ಪನ ದೇವಸ್ಥಾನಕ್ಕೆ ಹೋಗಿ ತಲೆ ಬಾಗದೇ ತುತ್ತು ಬಾಯಿಗಿಟ್ಟವರಲ್ಲ. ಅದರ ಫಲವೋ ಎಂಬಂತೆ ಒಬ್ಬನೇ ಮಗ ವೇಲು ಎಲ್ಲಾ ಪರೀಕ್ಷೆಗಳನ್ನೂ ಉತ್ತಮ ಅಂಕಗಳೊಂದಿಗೆ ಪಾಸು ಮಾಡಿದ್ದ. ಎಂಜಿನಿಯರಿಂಗ್ ಮುಗಿದು ಕ್ಯಾಂಪಸ್ ಸೆಲೆಕ್ಷನ್ ಕೂಡ ಆಗಿತ್ತು. ತಂದೆ ತಾಯಿಗಳ ಮುಖದಲ್ಲಿ ಸಂತೋಷ ಉಕ್ಕಿ ಹರಿದಿತ್ತು. ಆದರೆ ವೇಲು ಮುಂದೆ ಓದಲು ಉತ್ಸುಕನಾಗಿದ್ದ. ಜಿ.ಆರ್.ಇ. ಟೋಫೆಲ್ ಪರೀಕ್ಷೆಯಲ್ಲೂ ಒಳ್ಳೆ ಅಂಕಗಳನ್ನು ಗಳಿಸಿದ. ತಂದೆ ತಾಯಿಗಳ ಕಾಲಿಗೆ ಬಿದ್ದು ಸ್ಕಾಲರ್‌ಶಿಪ್‌ನೊಂದಿಗೆ ಎಜುಕೇಷನ್ ಲೋನೂ ತೆಗೆದುಕೊಂಡು ಅಮೆರಿಕಕ್ಕೆ ರವಾನೆಯಾದ. ಅಲ್ಲಿಂದಲೇ ಆಂಡಾಳುವಿಗೆ ವಿಭ್ರಮ ಆರಂಭವಾಗಿದ್ದು. ಸಂತಸ, ದು:ಖ ಎರಡೂ ಮೇಳೈಸಿದ ಸ್ಥಿತಿ. ಮಗ ಯಶಸ್ವಿಯಾಗಿ ಮುಂದುವರೆಯುತ್ತಿದ್ದಾನೆಂದು ಆನಂದಿಸಬೇಕೆಂದುಕೊಂಡವಳಿಗೆ ಮಗನನ್ನು ಅಗಲಿ ಇರಬೇಕೆನ್ನುವ ದು:ಖ. ಆದರೆ ಅದು  ತಾತ್ಕಾಲಿಕವಲ್ಲವೇ? ತಾನೇ ಸಂತೈಸಿಕೊಂಡಳು.              ವೇಲು ಎಂ.ಎಸ್. ಮುಗಿಸಿ ಅಲ್ಲೇ ಕೆಲಸಕ್ಕೆ ಸೇರಿದ. ಸಾಫ್ಟವೇರ್ ಉದ್ಯೋಗ. ಬದುಕು ಹಾರ್ಡೇ. ಎಜುಕೇಷನ್ ಲೋನ್ ತೀರಿಸಬೇಡವೇ? ಆದರೆ ಕೈತುಂಬ ಸಂಬಳ. ‘ಮೂರ‍್ನಾಲ್ಕು ವರ್ಷಗಳಲ್ಲಿ ಎಲ್ಲ ತೀರಿಸಿ ಬಂದ್ಬಿಡ್ತೀನಿ’ ಎಂದು ಭರವಸೆ ನೀಡಿದ. ಎರಡು ದಿನಕ್ಕೊಂದು ಬಾರಿಯಾದರೂ ಫೋನು. ಮಗನೊಡನೆ ಮಾತು, ಹರಟೆ, ನಗು ಎಲ್ಲವೂ ಸರಿಯಾಗಿತ್ತು. ತಂದೆ ತಾಯಿಗಳಿಬ್ಬರೂ ಅಮೆರಿಕಕ್ಕೆ ಬರಬೇಕೆಂದು ಅವನ ಆಸೆ .‘ನಮ್ಮ ಆಚಾರ,ವಿಚಾರಗಳು ಅಲ್ಲಿ ನಡೆಯುವದಿಲ್ಲ. ಬೇಡ.’ ಎಂಬ ಮಾತು ನಡೆಯಲಿಲ್ಲ. ಅವನ ಒತ್ತಾಯಕ್ಕೆ ಮಣಿದು ಹೋಗಿ ಆರು ತಿಂಗಳಿದ್ದು ಅವನಿಗೆ ಪೊಂಗಲ್, ಪುಳಿಯೋಗರೆ ಮಾಡಿ ಬಡಿಸಿ, ಮಾಡಲು ಕಲಿಸಿ ನಯಾಗರ ಜಲಪಾತ ನೋಡಿಕೊಂಡು ಬಂದದ್ದಾಯಿತು. ಬರುವಾಗ ಆಂಡಾಳು ಮೆಲ್ಲನೆ “ಒಂದು ತಿಂಗಳಾದ್ರೂ ರಜ ತೆಗೆದುಕೊಂಡು ಬಾ. ಹುಡುಗಿ ನೋಡಿಟ್ಟಿರ್ತೀನಿ. ಬಂದು ನೋಡಿ ನಿನಗಿಷ್ಟವಾದ ಹುಡುಗೀನ ಮದುವೆ ಮಾಡ್ಕೊಂಡು ಹೋಗು. ಅಂದ್ರೆ ನಮಗೆ ನಿಶ್ಚಿಂತೆ. ನಿನಗೆಷ್ಟು ದಿನ ಬೇಕೋ ಇಲ್ಲಿದ್ದುಕೊಂಡು ಸಾಕೆನಿಸಿದಾಗ ಬಾ”ಎಂದಳು.             ಅಷ್ಟೇ ಮೆತ್ತಗಿನ ಧ್ವನಿಯಲ್ಲಿ ಮಗರಾಯ “ಮಮ್ಮೀ, ಮದುವೇಂದ್ರೆ…ಇಲ್ಲಿ ನಾನೊಂದು ಹುಡುಗೀನ ಇಷ್ಟಪಟ್ಟಿದೀನಿ. ನೀನು ಬೇಜಾರು ಮಾಡ್ಕೋತೀಯಾಂತ ಮೊದಲೇ ಹೇಳಿರಲಿಲ್ಲ. ಮಿನಿ ನನ್ನ ಜೊತೆ ನಮ್ಮಾಫೀಸಿನಲ್ಲೇ ಕೆಲಸ ಮಾಡುತ್ತಾಳೆ. ದೆಹಲಿಯವಳು. ತುಂಬಾ ಜಾಣೆ. ನಮ್ಮಿಬ್ಬರ ಐಡಿಯಾಲಜಿ ಒಂದೇ ರೀತಿ ಇದೆ. ಆದರೆ ಮದುವೆ ಬಗ್ಗೆ ನಾವಿನ್ನೂ ಯೋಚಿಸಿಲ್ಲ. ಸದ್ಯಕ್ಕೆ ಒಳ್ಳೆ ಫ್ರೆಂಡ್ಸ ಅಷ್ಟೇ.” ಎಂದು ಶಾಕ್ ನೀಡಿದ್ದ.             ಆಂಡಾಳು ಒಂದು ಕ್ಷಣ ಗರ ಬಡಿದವರಂತೆ ನಿಂತಿದ್ದವಳು ಸಾವರಿಸಿಕೊಂಡು ಕಣ್ತುಂಬಿಕೊಂಡಳು. “ಅವಳು ನಿನಗಷ್ಟೇ ಹೆಂಡತಿಯಾಗ್ತಾಳೇ ಹೊರತು ನಮಗೆ ಸೊಸೆಯಾಗ್ತಾಳೋ ಇಲ್ಲವೋ ಗೊತ್ತಿಲ್ಲ. ಎಷ್ಟೆಲ್ಲಾ ಆಸೆ ಇಟ್ಕೊಂಡಿದ್ದೆ. ಏನೆಲ್ಲಾ ಕನಸು ಕಟ್ಟಿದ್ದೆ? ಒಳ್ಳೇ ಐಯ್ಯಂಗಾರ್ ಹುಡುಗೀನೇ ತಂದು ಭರ್ಜರಿಯಾಗಿ ಮದುವೆ ಮಾಡಬೇಕು. ಗುರುವಾಯೂರಪ್ಪನ ದೇವಸ್ಥಾನದಲ್ಲಿ ಒಂಬತ್ತು ಮೊಳದ ಮಡಸಾಲು ಸೀರೆ ಉಡಿಸಿ, ನಿಮ್ಮಿಬ್ಬರ ಕೈಲಿ ಪೂಜೆ ಮಾಡಿಸಿ..  ಎಲ್ಲಾ ಅವನಿಚ್ಛೆ. ಈಗಲೂ ಕಾಲ ಮಿಂಚಿಲ್ಲ. ನಿನಗಿಷ್ಟವಾಗೋ ಐಯ್ಯಂಗಾರ‍್ರ ಹುಡುಗೀನೇ ಮದುವೆಯಾಗು. ನಮ್ಮ ಬಗ್ಗೆಯೂ ಯೋಚಿಸು ಕಣ್ಣಾ.” ಎಂದು ಹೇಳಲಷ್ಟೇ ಸಾಧ್ಯವಾಗಿತ್ತು. ದಂಪತಿಗಳಿಬ್ಬರೂ ವಿಷಣ್ಣವದನರಾಗೇ ತಿರುಗಿ  ಬಂದಿದ್ದರು.             ಆಕಾಶವೇ ತಲೆಮೇಲೆ ಬಿದ್ದಂತೆ ಕುಳಿತ ಹೆಂಡತಿಯನ್ನು ಐಯ್ಯಂಗಾರ‍್ರೇ ಸಮಾಧಾನಿಸಬೇಕಾಗಿ ಬಂತು. “ಏನೋ ಹರಯದ ಆಕರ್ಷಣೆ ಕಣೆ. ಈ ವಯಸ್ಸಿನಲ್ಲಿ ಇವೆಲ್ಲ ಸಹಜ ತಾನೇ. ಏನು ಬರುತ್ತೋ ಅದನ್ನ ಎದುರಿಸೋ ಧೈರ‍್ಯ, ಶಕ್ತಿ ಕೊಡೂಂತ ಗುರುವಾಯೂರಪ್ಪನಲ್ಲಿ ಬೇಡಿಕೊಳ್ಳೋಣ.” ಎಂದು ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ಹೇಳಿದ್ದರು. ಆಂಡಾಳು “ಇವನು ಜಾಣನಾಗಿರದೇ ಇದ್ರೇನೆ ಚೆನ್ನಾಗಿತ್ತು. ಏನೋ ಒದ್ಕೊಂಡು ಇಲ್ಲೇ ಕೆಲಸ ಮಾಡೋನು. ಒಳ್ಳೇ ಹುಡುಗಿ ನೋಡಿ ಮದುವೆ ಮಾಡಿ ಮೊಮ್ಮಕ್ಕಳನ್ನಾಡಿಸ್ಕೊಂಡು ಹಾಯಾಗಿ ಇರ್ತಾ ಇದ್ವಿ. ಇವನು ಸ್ಕಾಲರ್ ಆಗಿದ್ದೇ ನಮಗೆ ಕಷ್ಟವಾಯ್ತಾಂತ?” ಎಳೆಎಳೆಯಾಗಿ ನೋವು ಬಿಡಿಸಿಟ್ಟರು. ಐಯ್ಯಂಗರ‍್ರು “ಛೀ, ಬಿಡ್ತು ಅನ್ನು. ಅವರ ಏಳಿಗೆ ಮುಖ್ಯ ತಾನೇ. ನಮ್ಮ ಹಣೇಲಿ ಏನು ಬರ್ದಿದಾನೋ ಗುರುವಾಯೂರಪ್ಪ? ಸದ್ಯ, ಎಲ್ಲಾ ಚಿಂತೇನೂ ಅವನ ಮೇಲೆ ಹಾಕಿ ನಿಶ್ಚಿಂತರಾಗಿದ್ದು ಬಿಡೋಣ.” ಎಂದು ಸಂತೈಸಿದರು.             ದಿನಗಳು ಓಡುತ್ತಿದ್ದವು. ಪೊಂಗಲ್, ಆಡಿ ಶುಕ್ರವಾರ, ಜನ್ಮಾಷ್ಟಮಿ..  ಹೀಗೆ ಹಬ್ಬಗಳು, ಪೂಜೆಗಳು. ಮಡಸಾಲು ಸೀರೆಯುಟ್ಟು ಉದ್ದ ತಿಲಕವಿಟ್ಟ ಆಂಡಾಳು, ನಾಮ ತೀಡಿ ಮುಗುಟ ಉಟ್ಟ ಐಯ್ಯಂಗರ‍್ರ ಜೊತೆಯಲ್ಲಿ ನಿತ್ಯ ಬೆಳಿಗ್ಗೆ ಗುರುವಾಯೂರಪ್ಪನ ದೇವಸ್ಥಾನಕ್ಕೆ ಹೋಗುವದನ್ನು ತಪ್ಪಿಸಲಿಲ್ಲ. ಮುತ್ದೈದೆ  ಸಾವನ್ನೇ ಬಯಸುತ್ತ ಎದುರಿಗಿದ್ದ ಪಾರಿಜಾತ ವೃಕ್ಷದ ಹೂಗಳನ್ನಾಯ್ದು ನಿತ್ಯ ಸ್ವಾಮಿಗಿಟ್ಟು ಬೇಡಿಕೊಳ್ಳುವದನ್ನು ಮರೆಯಲಿಲ್ಲ. ಮೇಲುಕೋಟೆಯ ವೈರಮುಡಿ ಉತ್ಸವಕ್ಕೆ ಹೋಗಿ ತಲೆಬಾಗದೇ ಇರಲಿಲ್ಲ. ವೇಲು ಕೂಡ ವಾರಕ್ಕೆರಡು ಬಾರಿಯಾದರೂ ಫೋನು, ಚಾಟ್ ಮಾಡುವದನ್ನು ತಪ್ಪಿಸಲಿಲ್ಲ. ಗುರುವಾಯೂರಪ್ಪನೂ ಇವರನ್ನು ಕಡೆಗಣಿಸಲಿಲ್ಲ.             ಸಮಸ್ಯೆ ಚಿಕ್ಕದಾಗಿ ಕಾಣುವದು ಯಾವಾಗ? ಮೊದಲಿದ್ದ ಸಮಸ್ಯೆಗಿಂತ ದೊಡ್ಡದೇ ಎದುರಾದಾಗ. ಇಲ್ಲೂ ಹಾಗೇ ಆಯಿತು. ಒನ್ ಫೈನ್ ಡೇ ವೇಲು ತಾನು ಮಿನಿಯೊಂದಿಗೆ ‘ಲಿವಿಂಗ್ ಟುಗೆದರ್’ ಸಂಬಂಧ ಹೊಂದಿದ್ದೇನೆಂದು ಹೇಳಿದ. ದಂಪತಿಗಳಿಗೆ ಮತ್ತೊಂದು ಶಾಕ್. ‘ಕಲ್ಲಿಗಿಂತ ಇಟ್ಟಿಗೆಯೇ ಮೆದು’ ಎಂಬಂತೆ ಮದುವೆ ಇಲ್ಲದೇ ಒಟ್ಟಿಗೆ ಬಾಳುವುದಕ್ಕಿಂತ ‘ಮದುವೆಯಾದರೇ ಚೆನ್ನ’ ಎನಿಸಲಾರಂಭಿಸಿತು. ಇವರಿಗೆ ‘ಲಿವಿಂಗ್ ಟುಗೆದರ್’ ನ ಪರಿಕಲ್ಪನೆಯೇ ಭಯಾನಕ. ಭಾರತದಲ್ಲೂ ಆರಂಭವಾಗಿದ್ದರೂ ಚಿತ್ರತಾರೆಯರೂ, ಸೆಲಿಬ್ರಿಟಿಗಳಲ್ಲೇ ಹೆಚ್ಚಾಗಿತ್ತು. ಸಾಮಾನ್ಯರ ಮಟ್ಟಕ್ಕಿನ್ನೂ ದೂರವೇ. ಮಗನ ಜೊತೆ ಚರ್ಚೆ ಮಾಡಿ “ಮದುವೆ ಮಾಡಿಕೊಂಡು ಬಿಡಿ. ಇಲ್ಲವೇ ಇಲ್ಲಿ ಬನ್ನಿ. ನಾವೇ ಮಾಡುತ್ತೇವೆ.” ಎಂಬ ಆಯ್ಕೆಗಳನ್ನೂ ಕೊಟ್ಟರು.             ವೇಲು ಸ್ಪಷ್ಟವಾಗಿ “ನಿನಗೆ ಇಲ್ಲಿನ ಕಾನೂನು ಗೊತ್ತಿಲ್ಲ. ಮದುವೆ ಎಂಬ ಬಂಧನದ ನಂತರ ಸಂಬಂಧ ಸರಿಹೋಗದೇ ವಿಚ್ಛೇದನವಾದರೆ ಕಾಂಪನ್ಸೇಷನ್ ಕೊಡಲು ಜೀವಮಾನದಲ್ಲಿ ಕೂಡಿಟ್ಟದ್ದನ್ನೆಲ್ಲ ಸುರಿಯಬೇಕಾಗುತ್ತದೆ. ಬೀದಿಗೆ ಬಂದು ನಿಲ್ಲುತ್ತೇವೆ. ಆ ವಿಷಯದಲ್ಲಿ ಕಾನೂನು ತುಂಬ ಕಠಿಣ. ಅದಕ್ಕೆ ಇಲ್ಲಿ ಮದುವೆ ಇಲ್ಲದೇ ಒಟ್ಟಿಗೆ ವಾಸಿಸುವದು. ಅವಳಿಗೆ ಬೇಡವಾದರೆ ಅವಳು ‘ಬಾಯ್’ ಹೇಳಿ ಹೊರಡಬಹುದು. ನನಗೆ ಬೇಡವಾದರೆ ನಾನು ದೂರ ಹೋಗಬಹುದು. ಯಾವುದೇ ನಿರ್ಬಂಧವಿಲ್ಲ. ಈಗ ನನಗೆ ಕಂಪನಿ ಹೆಚ್ಚಿನ ಹೊಣೆ ಹೊರಿಸಿದೆ. ವಿಶೇಷ ತರಬೇತಿಗಾಗಿ ಜರ್ಮನಿಗೆ ಹೋಗಬೇಕು. ಮದುವೆಯ ಉರುಳಿಗೆ ಸಿಲುಕುವುದಿಲ್ಲ.”ಎಂದು ಖಡಾ ಖಂಡಿತವಾಗಿ ಹೇಳಿಬಿಟ್ಟ.             ಎಲ್ಲೋ ಬಂಡೆ ಬಿರುಕು ಬಿಟ್ಟ ಹಾಗೆ, ತಾವು ನಂಬಿಕೊಂಡು ಬಂದ ಮೌಲ್ಯಗಳು, ಸಂಬಂಧಗಳು ತಮ್ಮ ಮುಂದೆಯೇ ಜಾಳು ಜಾಳಾಗಿ ನೀರಲ್ಲಿ ಕರಗಿ ಹೋದಂತೆ ಭಾಸವಾಯಿತು ಇಬ್ಬರಿಗೂ. ಜನ್ಮ ಜನ್ಮಾಂತರದ ಸಂಬಂಧಕ್ಕೊಳಪಟ್ಟು ಇಬ್ಬರೂ ಹೊಂದಿಕೊಂಡು ಕಷ್ಟಸುಖಗಳಲ್ಲಿ ಸಮಭಾಗಿಯಾಗಿ ಒಬ್ಬರಿಗಾಗೇ ಇನ್ನೊಬ್ಬರು ಬಾಳುವ ಪರಿ ಎಲ್ಲಿ? ಬೇಕೆಂದಾಗ ಜೊತೆಗಿದ್ದು ಬೇಡವಾದಾಗ ದೂರವಾಗುವ ಬಗೆ ಎಲ್ಲಿ? ಅಜಗಜಾಂತರ. ಬೇಕೆಂದಾಗ ತೀಟೆ ತೀರಿಸಿಕೊಂಡು..  … ‘ಪಶುಸಮಾನ’ ಎನ್ನಿಸಿತು ಆಂಡಾಳುವಿಗಂತೂ. ಮಿನಿಯ ಜೊತೆ ಹರಕು ಮುರುಕು ಇಂಗ್ಲೀಷಿನಲ್ಲಿ ಹಿಂದಿ ಸೇರಿಸಿ ಮಾತನಾಡಿದಳು. “ಇಷ್ಟವಿದ್ದರೆ ಬೆಂಗಳೂರಿಗೆ ಬಂದು ಹಾಯಾಗಿರಬಹುದು.” ಎಂಬುದನ್ನು ಒತ್ತಿ ಹೇಳಿದಳು. “ಶಾದಿ ನೌ? ಬುಲ್‌ಶಿಟ್, ಹಮ್ ದೋನೋ ತೀನ ಚಾರ ಸಾಲ ತೊ ಸಾಥ ರೆಹಕೆ ದೋನೋಮೆ ಬನತಾ ಹೈ ಕ್ಯಾ ದೇಖತೆ ಹೈ. ಫಿರ್ ಶಾದಿ ಕೆ ಬಾರೆ ಮೆ ಸೋಚೇಂಗೆ( ಮದುವೆಯೇ? ಈಗಲೇ? ನಾವು ಮೂರ‍್ನಾಲ್ಕು ವರ್ಷಗಳಾದರೂ ಜೊತೆಗಿದ್ದು ಇಬ್ಬರ ಸ್ವಭಾವಗಳು ಹೊಂದಾಣಿಕೆಯಾಗುತ್ತವೋ ನೋಡುತ್ತೇವೆ. ನಂತರ ಮದುವೆಯ ಬಗ್ಗೆ ಯೋಚಿಸುತ್ತೇವೆ).” ಎಂದವಳು ಇವರನ್ನು ಪರಿಹಾಸ್ಯ ಮಾಡುತ್ತಲೇ ಫೋನಿಟ್ಟಳು.             ಎರಡನೇ ಸಮಸ್ಯೆಯೂ ಚಿಕ್ಕದಾಗುತ್ತ ಹೋಯಿತು. ವಾರಕ್ಕೊಮ್ಮೆಯಾದರೂ ವೇಲು ತಂದೆ, ತಾಯಿಗಳೊಂದಿಗೆ ಚಾಟ್ ಮಾಡುತ್ತಿದ್ದ. ಕೆಲವೊಮ್ಮೆ ಮಿನಿ ಕೂಡ ಮಾತನಾಡುತ್ತಿದ್ದಳು. ಎನೋ ಹೇಳಲಾಗದ ಬಂಧ ಮೆಲ್ಲನೆ ಬೆಸೆಯತ್ತಿತ್ತು. ಆಂಡಾಳ್ ‘ಪೊಂಗಲ್’ ಹಬ್ಬಕ್ಕೆ ರೇಷ್ಮೆ ಸೀರೆ ಕಳುಹಿಸಿದಳು. ಮಿನಿ ಅದನ್ನು ಸೊಟ್ಟ ಸೊಟ್ಟಗೇ ಉಟ್ಟು ವೆಬ್‌ಕ್ಯಾಮ್‌ನಲ್ಲಿ ಚಾಟ್ ಮಾಡುವಾಗಲೇ ತೋರಿಸಿದ್ದಳು. ‘ಎಲ್ಲ ಸರಿಯಾಗಿಲ್ಲ’ ಎಂಬ ವ್ಯಥೆಯೊಂದಿಗೆ ‘ಏನೋ ಒಂದು ನಡೆಯುತ್ತಿದೆ.’ ಎಂಬ ತುಸು ಸಮಾಧಾನ ಮಿಳಿತವಾಗಿ ಬದುಕು ಏರಿಳಿಯುತ್ತಿತ್ತು.             ಎರಡನೇ ಸಮಸ್ಯೆಯೂ ಕರಗಿ ಚಿಕ್ಕದಾಗಿದ್ದು ಮೂರನೇ ದೊಡ್ಡ ಸಮಸ್ಯೆ ಬಂದಾಗಲೇ. ಮಿನಿ ಮತ್ತು ವೇಲು ಬೆಂಗಳೂರಿಗೆ ಬರುವ ಯೋಚನೆ ಮಾಡಿದ್ದರು. “ಮಮ್ಮೀ, ಮಿನಿ ಸೌತ್ ಇಂಡಿಯಾನೇ ನೋಡಿಲ್ಲ. ಅವಳು ಹುಟ್ಟಿ ಬೆಳೆದಿದ್ದೆಲ್ಲ ಅಮೆರಿಕದಲ್ಲೇ. ಆಗಾಗ ದೆಹಲಿಗೆ ಹೋಗಿ ಬಂದು ಅಭ್ಯಾಸವಿದೆಯಷ್ಟೇ. ಇಬ್ಬರೂ ಜೊತೆಯಾಗಿ ಬಂದು ಎರಡು ತಿಂಗಳಿದ್ದು ಸೌತ್ ಇಂಡಿಯಾವನ್ನೆಲ್ಲ ಸುತ್ತಿ ಹೋಗುತ್ತೇವೆ.” ಎಂದಿದ್ದ ವೇಲು. ವಿಭ್ರಮ ಕಾಡಿತ್ತು ಆಂಡಾಳುವಿಗೆ. ಮಗ ಬರುತ್ತಾನೆಂದರೆ ಸಂತೋಷ. ಮಿನಿ ಬಂದರೂ ಸಂತಸವೇ. ಆದರೆ ಅವರ ಸಂಬಂಧದ ಬಗ್ಗೆ ಏನು ಹೇಳುವದು? ಗೆಳತಿಯೋ, ಪ್ರಿಯೆಯೋ, ಹೆಂಡತಿಯೋ..  ಅದೇ ಬೃಹತ್ ಸಮಸ್ಯೆಯಾಗಿಬಿಟ್ಟಿತು. ‘ಸೊಸೆ’ ಎನ್ನುವ ಹಾಗಿಲ್ಲ. ‘ಮಗನ ಸಹೋದ್ಯೋಗಿ, ಭಾರತ ನೋಡಲು ಬಂದಿದ್ದಾಳೆ’ ಎಂಬ ಹಸೀ ಸುಳ್ಳು ನಡೆಯಲ್ಲ. ಇಬ್ಬರೂ ಅಂಟಿಕೊಂಡೇ ಇರುವುದನ್ನು ನೋಡಿದರೆ ಯಾರಾದರೂ ಜೋಡಿ ಎಂದು ಹೇಳಿಯಾರು. ‘ಮಗನ ಗರ್ಲಫ್ರೆಂಡ್, ಜೊತೆ ಸಂಬಂಧ ಹೊಂದಿರುವವಳು’ ಎಂಬ ನಿಜವನ್ನು ಇಲ್ಲಿಯ ಸಮಾಜ ಅಷ್ಟು ಸುಲಭವಾಗಿ ಒಪ್ಪಲ್ಲ. ಹಾಗಿರುವಾಗ ನಿತ್ಯ ಹೋಗುವ ದೇವಸ್ಥಾನದಲ್ಲಿನ ಎಷ್ಟೊಂದು ಜನ ಗೆಳತಿಯರಿಗೆ ಏನು ಹೇಳಲಿ? ಸಂಜೆ ಹೋಗುವ ಪಾಠ, ಪ್ರವಚನಗಳಲ್ಲಿನ ಆತ್ಮೀಯರಿಗೆ ಏನು ಹೇಳಬೇಕು? ನೆರೆ ಹೊರೆ ಎಲ್ಲ ಏನು ತಿಳಿಯುತ್ತಾರೆ? ಏನೋ ಹೇಗೋ ಸುಧಾರಿಸಿಕೊಂಡು ಹೋಗಲು ಅದೇನು ಒಂದಿನವೇ? ಒಂದು ವಾರವೇ? ಎರಡು ತಿಂಗಳು, ಎಂದರೆ ಅರವತ್ತು ದಿನಗಳು.             ‘ಸೊಸೆ’ ಎನ್ನಲು ಮದುವೆ ಮಾಡಿಲ್ಲ. ಪಾಯಸದೂಟ ಹಾಕಿಲ್ಲ. ಹೋಗಲಿ, ‘ಅಲ್ಲೇ ಮದುವೆಯಾಗಿದ್ದಾರೆ’ಎಂದರೆ ಮಗ, ಮಿನಿ ಒಪ್ಪಬೇಕಲ್ಲ. ಕೊರಳಲ್ಲಿ ತಾಳಿ, ಹಣೆಯಲ್ಲಿ ಕುಂಕುಮ, ಸಿಂಧೂರ ಯಾವುದೂ ಇಲ್ಲ. “ಹೇಗೂ ಬಂದಿರುತ್ತೀರಿ. ಇಲ್ಲೇ ಮದುವೆ ಮಾಡಿ ಬಿಡುತ್ತೇವೆ.”ಎಂದಿದ್ದು ಇಬ್ಬರಿಗೂ ರುಚಿಸಿರಲಿಲ್ಲ. “ನಮಗೀಗ ಆ ಯೋಚನೆಯೇ ಇಲ್ಲ.” ಎಂದಿದ್ದರು. ಅವರು ಬರುವದು ಇನ್ನೂ ಐದು ತಿಂಗಳಿತ್ತು. ಐಯ್ಯಂಗಾರ್ ದಂಪತಿಗಳು ನಿತ್ಯ ಕುಲುಮೆಯಲ್ಲಿ ಬೇಯುತ್ತಿದ್ದರು. ಎರಡು ಸಂಸ್ಕೃತಿಗಳ ನಡುವಿನ ಅಂತರ ಏನೆಲ್ಲಾ ಪೀಕಲಾಟಗಳನ್ನು ಸೃಷ್ಟಿಸಬಲ್ಲುದು ಎಂಬ ಅರಿವಾಗಿತ್ತು ಅವರಿಗೆ. ಗುರುವಾಯೂರಪ್ಪನಿಗೂ ಇವರ ಕಷ್ಟ ಗೊತ್ತು. ಆದರೂ ಸುಮ್ಮನೆ ಮಂದಹಾಸ ಬೀರುತ್ತಿದ್ದ.             ಮೂರನೇ ಸಮಸ್ಯೆಗೆ ಹೊಂದಿಕೊಳ್ಳುವಷ್ಟರಲ್ಲಿ ನಾಲ್ಕನೇ ಸಮಸ್ಯೆ ಬಾಯಿ ತೆರೆದು ಕೂತಿತ್ತು. ವೇಲು ತಾವು ಬರುವ ದಿನಾಂಕವನ್ನು ನಿಶ್ಚಿತವಾಗಿ ತಿಳಿಸಿದ. ಜೊತೆಗೆ “ಮಮ್ಮಿ, ಮಿನಿ ಈಗ ಮೂರು ತಿಂಗಳ ಗರ್ಭಿಣಿ. ಅಲ್ಲಿಗೆ ಬರುವಾಗ ಫೋರ್ ಮಂತ್ಸ್ ಆಗಿರುತ್ತೆ. ವಿಶೇಷ ಆರೈಕೆ ಬೇಕಾಗಬಹುದು”ಎಂದ. ಮತ್ತದೇ ವಿಭ್ರಮ ಆಂಡಾಳ್‌ಗೆ. ಮೊಮ್ಮಗುವಿನ ಬರುವಿಕೆ ಸಂತಸ ತಂದರೂ ನಲಿಯಲಾಗುತ್ತಿಲ್ಲ. ದು:ಖಪಡಲೂ ಆಗುತ್ತಿಲ್ಲ. “ಈಗಲಾದರೂ ಮದುವೆಯಾಗಿ.” ಎಂದು ದಂಪತಿಗಳಿಬ್ಬರೂ

ವಿಭ್ರಮ Read Post »

ಕಾವ್ಯಯಾನ

ಅಂದುಕೊಳ್ಳುತ್ತಾಳೆ

ಕವಿತೆ ಅಂದುಕೊಳ್ಳುತ್ತಾಳೆ ಪ್ರೇಮಾ ಟಿ.ಎಂ.ಆರ್. ಏನೆಲ್ಲ ಮಾಡಬೇಕೆಂದುಕೊಳ್ಳುತ್ತಾಳೆ ಅವಳು ನಗಿಸಬೇಕು ನಗಬೇಕುನೋವುಗಳಿಗೆಲ್ಲ ಸಾಂತ್ವನವಾಗಬೇಕುಕಲ್ಲೆದೆಗಳ ಮೇಲೆ ನಿತ್ಯನೀರೆರೆದು ಮೆತ್ಗಾಗಿಸಿ ನಾದಬೇಕು ತನ್ನೊಳಗಿನ ಕೊರತೆಗಳನ್ನೆಲ್ಲಪಟ್ಟಿಮಾಡಿ ಒಪ್ಪಿಕೊಂಡುಬಿಡಬೇಕೆಂದುಕೊಳ್ಳುತ್ತಾಳೆನೀರವ ಇರುಳಲ್ಲಿ ತಾರೆಗಳಎಣಿಸುತ್ತ ಹೊಳೆದಂಡೆಮರದಡಿಗೆ ಕೂತಲ್ಲೇ ಅಡ್ಡಾಗಿನಿದ್ದೆಹೋಗಬೇಕು ಕಪ್ಪು ಕಲ್ಲರೆಮೇಲೆ ಬೆಳ್ನೊರೆಯಕಡಲಾಗೋ ಮಳೆಹನಿಯಜೊತೆಗೊಮ್ಮೆ ಜಾರಬೇಕುಹಿಂದೆಹಿಂದಕೆ ಹಿಂತಿರುಗುವಂತಿದ್ದರೆಕುಂಟಾಬಿಲ್ಲೆ ಕಣ್ಣಾಕಟ್ಟೆಮತ್ತೊಮ್ಮೆ ಆಡಬೇಕುಬಿಸಿಲುಕೋಲುಗಳೆಲ್ಲ ಸಾರ್ಕೆಹೊರೆಮಾಡಿ ಹೊರಬೇಕುಮರದಡಿಯ ನೆರಳುಗಳಬರಗಿ ಬುತ್ತಿಯ ಕಟ್ಟಿತಲೆಮೇಲೆ ಹೊತ್ತು ಬಿಸಿಲಡಿಯಜೀವಗಳಿಗೆ ಹೊದೆಸಬೇಕುಅದೆಷ್ಟು ಸಾಲಗಳಿವೆ ತೀರುವದಕ್ಕೆಬಿಡಿಸಿಕೊಳ್ಳಬೇಕಿತ್ತುಗೋಜಲುಗಳ ಗಂಟುಗಳಅಂದುಕೊಳ್ಳುತ್ತಾಳೆಸದ್ದಿಲ್ಲದೇ ನಿದ್ದೆಹೋದ ಹಾದಿಯಮೇಲೆ ಒಬ್ಬಂಟಿಯಾಗಿ ನಡೆಯುತ್ತಲೇಇರಬೇಕು ಯಾರೂಅತಿಕ್ರಮಿಸದ ಗ್ರಹವೊಂದಕ್ಕೆಒಮ್ಮೆ ಗುಳೆಹೋಗಬೇಕು ತನ್ನಉಸಿರನ್ನೊಮ್ಮೆ ತಾನೇ ಕೇಳಿಸಿಕೊಳ್ಳಬೇಕುಅಂದುಕೊಳ್ಳುತ್ತಾಳೆ ***************************

ಅಂದುಕೊಳ್ಳುತ್ತಾಳೆ Read Post »

ಅಂಕಣ ಸಂಗಾತಿ, ಅನುವಾದಿತ ಕೃತಿ ಪ್ರಪಂಚ ಪ್ರವೇಶ

ಶತಮಾನದ ಕವಿ ಯೇಟ್ಸ್

ಅಂಕಣ ಬರಹ ಶತಮಾನದ ಕವಿ ಯೇಟ್ಸ್ ಅನುವಾದ :ಡಾ. ಯು.ಆರ್.ಅನಂತಮೂರ್ತಿಪ್ರ : ಅಭಿನವ ಪ್ರಕಾಶನಪ್ರಕಟಣೆಯ ವರ್ಷ : ೨೦೦೮ಬೆಲೆ : ರೂ.೭೫಻ಪುಟಗಳು : ೧೨೮ ಜಗತ್ಪ್ರಸಿದ್ಧ ಇಂಗ್ಲಿಷ್ ಕವಿ ಡಬ್ಲಿಯೂ.ಬಿ.ಯೇಟ್ಸ್ನ ಮಹ ತ್ವದ ೧೭ ಕವನಗಳ ಅನುವಾದ ಈ ಸಂಕಲನದಲ್ಲಿದೆ.  ಜೊತೆಗೆ ಕವಿ-ಕಾವ್ಯ ಪರಿಚಯ,ಪ್ರವೇಶಿಕೆ ಮತ್ತು ವಿಶ್ಲೇಷ ಣೆಗಳೂ ಇವೆ. ಕಾವ್ಯ ರಚನೆಯ ಹಿಂದಿನ ಶ್ರಮ ಮತ್ತು  ಗಂಡು-ಹೆಣ್ಣು ಪರಸ್ಪರ ತಮ್ಮೊಳಗೆ ಹುಟ್ಟಿಕೊಳ್ಳುವ ಪ್ರೀತಿ ಯನ್ನು ತೆರೆದು ಹೇಳಿಕೊಳ್ಳಲು ಪಡುವ ಒದ್ದಾಟಗಳ ಕುರಿ ತು ‘ಆದಮ್ಮಿನ ಶಾಪ’ ಹೇಳಿದರೆ,ಮುಂದಿನ ಕವನ. ‘ಓ  ಬಹುಕಾಲ ಪ್ರೀತಿಸಬೇಡ’ ಪ್ರೀತಿಯ ಬಗೆಗೇ ಇದೆ.  ‘ಈಸ್ಟರ್ ೧೯೧೬’ ಐರ್ಲ್ಯಾಂಡಿನ ಸ್ವಾತಂತ್ರ್ಯ ಹೋರಾಟದ ಲ್ಲಿ  ಅಸುನೀಗಿದ ಹುತಾತ್ಮರ ಕುರಿತು ಸಾಂದರ್ಭಿಕವಾಗಿ ಬರೆದ ಕವನವಾದರೂ ಯೇಟ್ಸನ ರಾಜಕೀಯ ಚಿಂತನೆ, ಕಲಾತ್ಮಕ ದೃಷ್ಟಿಕೋನ,ಮತ್ತು ವೈಯಕ್ತಿಕ ಭಾವನಾತ್ಮಕ ಬೆಸುಗೆಗಳ ಸುಂದರ ಬೆಸುಗೆ ಇಲ್ಲಿದೆ. ಬದುಕಿನ ಅಗ್ನಿ ದಿವ್ಯ ದಲ್ಲಿ ಸುಟ್ಟು ಪುಟಗೊಳ್ಳುವ ಕವಿಯ ಆಸೆಯನ್ನು ‘ಬೈಝಾಂಟಿಯಮ್ಮಿಗೆ ಯಾನ’ ವ್ಯಕ್ತ ಪಡಿಸು ತ್ತದೆ.ಕವಿಯ ದೃಷ್ಟಿಯಲ್ಲಿ ದೇಹವೆಂದರೆ ಮದದಿಂದ ಕೊ ಬ್ಬುವ,ಆದರೆ ಮುದಿತನದಲ್ಲಿ ಬೆದರುಗೊಂಬೆಯಂತೆ ಸು ಕ್ಕಿ ಸೊರಗುವ ಪಶು.ಇಲ್ಲಿ ಕವಿ ಜೈವಿಕವಾದ ಹಾಡುವ ಶಕ್ತಿ ಎಂದೆಂದಿಗೂ ಸೊರಗದೆ ಉಳಿಯುವ ಬಂಗಾರದ ಪಕ್ಷಿ ಯಾಗಲು ಪ್ರಯತ್ನಿಸುತ್ತಾನೆ.  ‘ಜೀವ-ಆತ್ಮರ ನಡುವೆ ಸಂವಾದ’ ಎಂಬ ಕವನವೂ ದೇಹ ಮತ್ತು ಆತ್ಮಗಳ ನಡುವಣ ದ್ವಂದ್ವ-ತಾಕಲಾಟಗಳ ಕುರಿತು ಚರ್ಚಿಸುತ್ತದೆ. ಇಲ್ಲಿ ದೇಹಕ್ಕೆ ಎದುರಾಗಿ ನಿಲ್ಲುವ ಆತ್ಮದ ಮಾತು ತಾತ್ವಿಕವಾದದ್ದು.ಆದರೆ ಕೊನೆಯಲ್ಲಿ ಕವಿ ಜೀವ ಪರವಾಗಿ ಮಾತನಾಡುತ್ತಾನೆ.ಎಲ್ಲ ಸಂಕೋಚಗಳನ್ನು ಗಾ ಳಿಗೆ ಚೆಲ್ಲಿ ಮುಕ್ತನಾದ ಜೀವಿಯಷ್ಟೇ ಶುಭ್ರನಾಗುತ್ತಾನೆ.  ವೃದ್ಧಾಪ್ಯದಲ್ಲಿ ವೈರಾಗ್ಯದತ್ತ ವಾಲಿದ್ದ ಯೇಟ್ಸ್ ಕೊನೆಗಾಲ ದಲ್ಲಿ  ಕಾಮವನ್ನು ಹತ್ತಿಕ್ಕಲಾಗದೆ ಬರೆದ ‘ಹುಚ್ಚು ಕವನ’ ಗಳಲ್ಲಿ ಒಂದಾದ ‘ಮರುಳಿ ಜೇನ್ ಪಾದ್ರಿಗೆ’ ಕಾಮವನ್ನು ಮುಕ್ತವಾಗಿ ಅನುಭವಿಸಿದ  ಓರ್ವ ವೇಶ್ಯೆ ಕಾಮವನ್ನು ಬಲವಂತವಾಗಿ ಹತ್ತಿಕ್ಕಿಕೊಂಡು ಬದುಕಿದ ಒಬ್ಬ ಬಿಷಪ್ಪನಿ ಗೆ ಹಾಕುವ ಸವಾಲುಗಳ ಮೂಲಕ ಕವಿ ಕಂಡುಕೊಂಡ ಸತ್ಯಗಳನ್ನು ಬಯಲು ಮಾಡುತ್ತದೆ. ಹೀಗೆ ದೇಶ-ಕಾಲಗಳ ಪರಿಮಿತಿಗಳನ್ನು ಮೀರಿ ಮಹತ್ವ ಪಡೆದ ಕವನಗಳನ್ನು ಈ ಸಂಕಲನ ಸೇರಿಸಿಕೊಂಡಿದೆ. ಇವು ಅನುವಾದ ಅನ್ನುವುದಕ್ಕಿಂತಲೂ ಯೇಟ್ಸನ ಮೂಲ ಕವನಗಳ ಸ್ಫೂರ್ತಿ ಪಡೆದು ಬರೆದ ಸ್ವತಂತ್ರ ಕವನಗಳಂತಿ ವೆ.ಹಲವು ಪದಗಳು,ಪದಪುಂಜಗಳು,ಕೆಲವೊಮ್ಮೆ ಪೂ ರ್ತಿ ಸಾಲುಗಳೇ ತಮ್ಮ ಸ್ವರೂಪದಲ್ಲಿ ಮೂಲಕ್ಕಿಂತ ಭಿನ್ನ ವಾಗಿ ನಿಲ್ಲುವುದು ಸ್ಪಷ್ಟವಾಗಿ ಕಾಣುತ್ತದೆ. ‘ಆಫ್ಟರ್ ಲಾಂ ಗ್ ಸೈಲೆನ್ಸ್’, ‘ಅ ಡಯಲಾಗ್ ಆಫ್ ದ ಸೆಲ್ಫ್ ಅಂಡ್ ಸೋಲ್’ ‘ದ ಚಾಯಿಸ್’ ಮೊದಲಾದ ಕವನಗಳಲ್ಲಿ ಇದಕ್ಕೆ ನಿದರ್ಶನಗಳನ್ನು ಕಾಣಬಹುದು. ************************** ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

ಶತಮಾನದ ಕವಿ ಯೇಟ್ಸ್ Read Post »

You cannot copy content of this page

Scroll to Top