ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಕಸಾಪಗೆ ಮಹಿಳಾ ಅಧ್ಯಕ್ಷರು ಯಾಕಿಲ್ಲ?

ಚರ್ಚೆ . ಕನ್ನಡ ಸಾಹಿತ್ಯ ಪರಿಷತ್ತು ನೂರು ವರ್ಷದ ಹಾದಿ ಸವೆಸಿ ಮೇಲೆ ನಾಲ್ಕು ವರ್ಷಗಳಾಗಿವೆ.‌ ಮತ್ತೊಂದು  ಚುನಾವಣೆ ಎದುರಿಸಿ, ಕಸಾಪ ಅಧ್ಯಕ್ಷ ಗದ್ದುಗೆ ಏರಲು ಹಲವಾರು ಕಸರತ್ತುಗಳು ನಡೆದಿವೆ. ಕಸಾಪ ಅಧ್ಯಕ್ಷರ  ಅವಧಿ ಐದು ವರ್ಷ ಎಂದೂ ಬೈ ಲಾದಲ್ಲಿ (ಠರಾವು)ತಿದ್ದುಪಡಿಯಾಗಿ, ಅದಕ್ಕೆ ಕಸಾಪ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಮುದ್ರೆ ಸಹ ಬಿದ್ದಿದೆ. ಚಾಮರಾಜನಗರದಲ್ಲಿ  ೨೦೧೯ ರಲ್ಲಿ ನಡೆದ ರಾಜ್ಯ ಕಸಾಪ ಸರ್ವಸದಸ್ಯರ ಸಭೆಯಲ್ಲಿ ಅಧ್ಯಕ್ಷರ ಅವಧಿ ಐದು ವರ್ಷ ಎಂದು ಅನುಮೋದನೆ ಸಹ ಸಿಕ್ಕಿದೆ. ಅದರ ಫಲ ಮುಂದೆ ಕಸಾಪ ಅಧ್ಯಕ್ಷರಾಗಿ ಗೆದ್ದು ಬರುವವರು ಉಣ್ಣಲಿದ್ದಾರೆ‌ .ಈಗ  ಕಸಾಪ ಅಧ್ಯಕ್ಷರಾಗಿ ಸಾಹಿತ್ಯದ ರಥ ಎಳೆಯಲು ಕೆಲವರು  ಬಹಿರಂಗ ವಾಗಿ, ಕೆಲವರು ಅಪ್ತರಲ್ಲಿ  ಚುನಾವಣೆಗೆ ಸ್ಪರ್ಧಿಸುವ ಬಯಕೆ ವ್ಯಕ್ತಪಡಿಸುತ್ತಿದ್ದಾರೆ‌ . ಇದು ಸಹಜ. ಪ್ರಜಾಪ್ರಭುತ್ವದ ದಾರಿಯಲ್ಲಿ ಎಲ್ಲವೂ ಸಾಗಿದೆ. ಪ್ರಶ್ನೆ ಏನಪ ಅಂದರ ಕಸಾಪ ೧೦೪ ವರ್ಷದ ತನ್ನ ಅವಧಿಯಲ್ಲಿ ಒಮ್ಮೆಯೂ ಮಹಿಳಾ ಅಧ್ಯಕ್ಷೆಯನ್ನು ಕಂಡಿಲ್ಲ.‌ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಅರ್ಹರಾದ ಮಹಿಳೆಯರು , ಮಹಿಳಾ ಸಾಹಿತಿಗಳ ದೊಡ್ಡ ಪಡೆ ನಮ್ಮಲ್ಲಿದೆ. ಕರ್ನಾಟಕ ಲೇಖಕಿಯರ ಸಂಘವೂ ಇದೆ. ಆದರೆ ಅವರು ಚುನಾವಣೆಗೆ ಸ್ಪರ್ಧಿಸಲು ಮನಸು ಮಾಡಿದಂತಿಲ್ಲ.‌ ಯಾಕೆ ಮನಸು ಮಾಡಲಿಲ್ಲ ಎಂಬ ಪ್ರಶ್ನೆ ಗಿಂತ , ಮುಂದೆ ಅವರು ಸ್ಪರ್ಧಿಸಲಿ ಎಂಬುವ ಪುರುಷ ಮನಸುಗಳು  ಸಹ ಇವೆ.‌ಹಣ ,ಜಾತಿ ರಾಜಕೀಯ, ರಾಜಕೀಯದ ಪರೋಕ್ಷ ಬೆಂಬಲ ಇವೆಲ್ಲವನ್ನೂ ಪಕ್ಕಕ್ಕೆ ಇಟ್ಟು , ಸ್ಪರ್ಧಿಸಲು ಅವಕಾಶವಿದೆ. ಅತ್ಯಂತ ಪ್ರಖರ ವೈಚಾರಿಕತೆ ಇರುವ ಮಹಿಳಾ ಬರಹಗಾರರು ಇದ್ದಾರೆ.‌ಹಾಗಾಗಿ ಮಹಿಳೆಯೊಬ್ಬರು ಮುಂಬರುವ ಕಸಾಪ ಅಧ್ಯಕ್ಷ ಗಾದಿಗೆ ಸ್ಪರ್ಧಿಸಬೇಕಿದೆ.‌ಇದು ಸಾಹಿತ್ಯ ಸಂಗಾತಿ ಕನ್ನಡ ವೆಬ್ನ ಆಶಯ. ಯಾಕೆ ಮಹಿಳೆ ಬೇಕು? ಕಸಾಪ ಅಧ್ಯಕ್ಷ ಹುದ್ದೆಗೆ ಮಹಿಳೆ;  ಪುರುಷರಷ್ಟೇ ಅರ್ಹಳು. ಇದು ಕರ್ನಾಟಕ.‌ ಮಹಿಳಾ ಸಮಾನತೆಯನ್ನು ೧೨ ನೇ ಶತಮಾನದಲ್ಲಿ ಸಾಧಿಸಿದ ನೆಲ. ಪುರುಷರಷ್ಟೇ , ಸಮರ್ಥ ಆಡಳಿತ ನೀಡುವ ಹಾಗೂ ಪಾರದರ್ಶಕ ಆಡಳಿತ ನೀಡಲು ಮಹಿಳೆಯರಿಗೂ ಸಾಧ್ಯವಿದೆ.‌ ಆಡಳಿತ ಮಾಡುವ ಛಾತಿ ಇದೆ.‌ಸಮ್ಮೇಳನ ನಡೆಸುವ ಚಾಕಚಕ್ಯತೆ ಇದೆ.‌ಒಮ್ಮೆ ಕಣಕ್ಕೆ ಇಳಿದರೆ, ಚುನಾವಣಾ ವಾತಾವರಣ ಬದಲಾಗಿ ಮಹಿಳೆಯನ್ನೇ  ಅವಿರೋಧವಾಗಿ ಆಯ್ಕೆ ಮಾಡುವ ಸನ್ನಿವೇಶ ಸೃಷ್ಟಿಯಾಗಬಹುದು.ಸಾಹಿತ್ಯ ಸಮ್ಮೇಳನದಲ್ಲಿ ಪುರುಷ ಪ್ರಾಬಲ್ಯವನ್ನು ತಪ್ಪಿಸಬಹುದು. ಅಲ್ಲದೆ ಇಚ್ಛಾ ಶಕ್ತಿಯಿಂದ ಸಮ್ಮೇಳನದ ನಿರ್ಣಯಗಳನ್ನು ಜಾರಿ ಮಾಡಿಸಬಹುದು . ಮುಖ್ಯಮಂತ್ರಿಗಳ ಕಿವಿಹಿಂಡಿ ಕನ್ನಡದಲ್ಲಿ ಆಡಳಿತವನ್ನು ಇನ್ನೂ ಪರಿಣಾಮಕಾರಿ ಮಾಡಬಹದು.ಕಾರಣ ಮಹಿಳೆಗೆ ತಾಯ್ತನದ ಗುಣವಿರುತ್ತದೆ‌ .ಹಾಗಾಗಿ ಈ ಸಲ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಮಹಿಳಾ ಸಾಹಿತಿ ಸ್ಪರ್ಧಿಸುವುದು ಔಚಿತ್ಯಪೂರ್ಣ. ಅಲ್ಲದೇ ಇದು ಲಿಂಗ ಸಮಾನತೆಯ ಪ್ರಶ್ನೆಯೂ ಆಗಿದೆ.ಕಸಾಪವನ್ನು ಇನ್ನೂ ಎಷ್ಟು ದಿನ ಪುರುಷಪ್ರಧಾನ ವ್ಯವಸ್ಥೆಯಲ್ಲಿ ನಡೆಸುವುದು?. ಈ ಸಲ ಮಹಿಳಾ ಸಾಹಿತಿಗಳು ಸಭೆ ಸೇರಿ ಒಂದು ನಿರ್ಧಾರಕ್ಕೆ ಬರಲಿ. ‌ನಮ್ಮಲ್ಲಿ ಹಿರಿಯರಾದ ವೀಣಾ ಶಾಂತೇಶ್ವರ, ಸುಕನ್ಯಾ ಮಾರುತಿ, ಬಿ.ಟಿ.ಜಾನ್ಹವಿ, ಬಿ.ಟಿ.ಲಲಿತಾ ನಾಯಕ, ವಸುಂದರಾ ಭೂಪತಿ, ಸುನಂದಾ‌ಕಡಮೆ, ಸಾರಾ ಅಬೂಬಕರ್,‌ಮಹಿಳಾ  ವಿ.ವಿ.ಕುಲಪತಿಯಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ಸಬಿಹಾ ಭೂಮಿಗೌಡ, ಕನ್ನಡ ಹಂಪಿ ವಿವಿ ನಿಕಟಪೂರ್ವ ಕುಲಪತಿ‌ ಮಲ್ಲಿಕಾ‌ ಘಂಟಿ, ಭಾನು‌ ಮುಷ್ತಾಕ, ಡಾ.ಎಚ್.ಎಸ್.ಅನುಪಮಾ, ವೈದೇಹಿ, ಡಾ.ಮೀನಾಕ್ಷಿ  ಬಾಳಿ, ಗುಲ್ಬರ್ಗಾದ ಹೋರಾಟಗಾರ್ತಿ ನೀಲಾ,  ದು.ಸರಸ್ವತಿ , ಪ್ರತಿಭಾ ನಂದಕುಮಾರ್…ಹೀಗೆ  ದೊಡ್ಡ ಮಹಿಳಾ ಪಡೆಯೇ ಕರ್ನಾಟಕದಲ್ಲಿ ಇದೆ. ಇವರಲ್ಲಿ ಯಾರಾದರೂ ಒಬ್ಬರೂ ಕಸಾಪ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಬೇಕು. ಕನ್ನಡಿಗರಾದ ನಾವು ಅವರ ಚುನಾವಣಾ ವೆಚ್ಚ ಭರಿಸೋಣ.  ಪಾರದರ್ಶಕವಾಗಿ ಕಸಾಪ ಸದಸ್ಯರ ಮತ ಕೇಳೋಣ.‌ ಇದು‌ ಮಹಿಳಾ ಸಮಾನತೆಯ ಹಕ್ಕಿನ ಪ್ರಶ್ನೆ .‌ಬಾಯ್ಮತಲ್ಲಿ  ಮಹಿಳಾ ಪ್ರಾತಿನಿಧ್ಯ ಎಂಬುದಕ್ಕಿಂತ ಅದು ಕಸಾಪ ಅಧ್ಯಕ್ಷ ಸ್ಥಾನದಿಂದ ಅನುಷ್ಠಾನವಾಗಲಿ. ಕನ್ನಡಿಗರ ಪ್ರಾತಿನಿಧಿಕ ಕನ್ನಡ ಸಾಹಿತ್ಯ ಪರಿಷತ್ತಗೆ  ಮಹಿಳೆ ಅಧ್ಯಕ್ಷೆಯಾಗಿ ೫ ವರ್ಷ ಕನ್ನಡಿಗರ ಕಷ್ಟ ಸುಖಗಳಿಗೆ ಸ್ಪಂದಿಸಲಿ.‌ ಸರ್ಕಾರಕ್ಕೆ  ಕನ್ನಡ ಭಾಷೆ, ಆಡಳಿತ, ಶಿಕ್ಷಣದ ವಿಷಯದಲ್ಲಿ ಮಹತ್ವದ ಮಾರ್ಗದರ್ಶನ ಮಾಡುವಂತಾಗಲಿ.‌ ಈ ಎಲ್ಲಾ ದೃಷ್ಟಿಯಿಂದ  ರಾಜ್ಯ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಮಹಿಳೆ, ಮಹಿಳಾ ಸಾಹಿತಿ ಸ್ಪರ್ಧಿಸಬೇಕೆಂದು ನನ್ನ  ಹಾಗೂ ಸಾಹಿತ್ಯ ಸಂಗಾತಿಯ ಆಶಯವಾಗಿದೆ. ಈ ಸಂಬಂಧ ಮುಕ್ತ ಚರ್ಚೆಗೆ ಸಾಹಿತ್ಯ ಸಂಗಾತಿ ವೇದಿಕೆ ಒದಗಿಸುತ್ತದೆ. …. ************************* ನಾಗರಾಜ ಹರಪನಹಳ್ಳಿ ಈ ಅಭಿಯಾನದಲ್ಲಿ ತಾವೂ ಪಾಲ್ಗೊಳ್ಳಬಹುದು. ನಿಮ್ಮಅಭಿಪ್ರಾಯಗಳನ್ನುನಮಗೆಬರೆಯಿರಿ

ಕಸಾಪಗೆ ಮಹಿಳಾ ಅಧ್ಯಕ್ಷರು ಯಾಕಿಲ್ಲ? Read Post »

ಕಾವ್ಯಯಾನ

ಬೆಳೆಯೋಣ ಬನ್ನಿ..

ಕವಿತೆ ಸುಜಾತ ಲಕ್ಷ್ಮೀಪುರ. ಮನುಜ ಮನುಜನೆದೆಯಲಿಪ್ರೀತಿ ನೀತಿಯ ಸಸಿ ನೆಟ್ಟುಸಹಕಾರ ಸಮಾನತೆ ನೀರೆರೆದುಮನುಷ್ಯತ್ವದ ಹೂ ಹಣ್ಣು ಕಾಯಿ ಬೆಳೆದುಬಯಲ ಮಕ್ಕಳೆಲ್ಲಾ ಸೇರಿ ಸವಿಯೋಣ ಬನ್ನಿ. ನಿತ್ಯ ನಡೆ ನುಡಿ ಆಚಾರದಲಿಸದ್ಭಾವನೆಯ ಸಿಂಪಡಿಸಿಸರ್ವೋದಯದ ಸಕಾರವನೆ ಉಸಿರಾಡುತ್ತಾಸಕಲ ಜೀವರಾಶಿಯ ಲೇಸು ಬಯಸೋಣ ಬನ್ನಿ ಕಟ್ಟೋಣ ನಾವುಎಲ್ಲರ ಹೃದಯಗಳಿಗೂಅಂತಃಕರಣದ ಸ್ನೇಹ ಸೇತುವೆನಾನು ನೀನಳಿದು ನಾವು ಆದಸಮಷ್ಟಿಯ ಸರ್ವಹಿತದಲಿ. ಸದಾ ಜೀಕೋಣ ಬನ್ನಿಒಬ್ಬರಿಗೊಬ್ಬರು ಕೈ ಕೈಯಿಡಿದು.ನಾವೆಲ್ಲಾ ಒಂದೇ ನಾವು ಜೀವ ಚೈತನ್ಯರು.ಸಾರಿ ಸಾರಿ ಘೋಷಿಸುತ್ತಾಸುತ್ತೋಣ ಬನ್ನಿಮಾನವಪ್ರೇಮದ ನಂದನವನ. *****************************

ಬೆಳೆಯೋಣ ಬನ್ನಿ.. Read Post »

ಕಾವ್ಯಯಾನ

ನಮಗೊಂದು ಪ್ರಕೃತಿಯು..!

ಕವಿತೆ –ರಮಣ ಶೆಟ್ಟಿ ರೆಂಜಾಳ. ನಮಗೊಂದು ದೇಹವಕೊಟ್ಟನು ಆ ದೇವ,ಕೊಟ್ಟದರಲ್ಲಿಟ್ಟನು ಪರಿ ಪರಿಯ ನೋವ !ನಮಗೊಂದು ಮನವಕೊಟ್ಟನು ಆ ದೇವ,ಕೊಟ್ಟದರಲ್ಲಿಟ್ಟನು ನಾನಾ ಪರಿ ಚಿಂತೆಯ !ನಮಗೊಂದು ಜಿಹ್ವೆಯಕೊಟ್ಟನು ಆ ದೇವ,ಕೊಟ್ಟದರಲ್ಲಿಟ್ಟನು ವಿಧ ವಿಧ ರುಚಿಯ !ನಮಗೊಂದು ನಾಸಿಕವಕೊಟ್ಟನು ಆ ದೇವ,ಆಘ್ರಾಣಿಸಬಿಟ್ಟನು ಇಹಪರದ ವಾಸನೆಯ !ನಮಗೆರಡು ಕಂಗಳಕೊಟ್ಟನು ಆ ದೇವ,ಕೊಟ್ಟದರಲ್ಲಿಟ್ಟನು ಚಂಚಲ ನೋಟವ !ನಮಗೆರಡು ಕಿವಿಗಳಕೊಟ್ಟನು ಆ ದೇವ,ಕೇಳಲೆಂದನವ ತರಹಾವರಿ ಶಬ್ಧವ !ನಮಗೆರಡು ಕೈ ಕಾಲುಗಳಕೊಟ್ಟನು ಆ ದೇವ,ಗಂಟುಗಳಲಿಟ್ಟು ವೃದ್ಧಾಪ್ಯಕೆನೋವ ನಿರಖು ಠೇವಣಿಯ !ನಮಗೊಂದು ಜೀವನವಕೊಟ್ಟನು ಆ ದೇವ,ಅನುಭವಿಸಲೆಂದು ಈ ಪರಿಯೊಳುಸಕಲ ಸುಖದುಃಖವ !ಆದರೇನು?ನಮಗೊಂದು ಪ್ರಕೃತಿಯಕೊಟ್ಟನು ಆ ದೇವ ,ಹಾಳುಗೈಯದೆ ಅದನುಹಾಳಾಗಗೊಡದಿರಿಯೆಂದ ನಿಮ್ಮ ತನುಮನವ!

ನಮಗೊಂದು ಪ್ರಕೃತಿಯು..! Read Post »

ಕಾವ್ಯಯಾನ

ಮನೋ ಇಂಧನ

ಕವಿತೆ ವಿದ್ಯಾ ಶ್ರೀ ಎಸ್ ಅಡೂರ್ ಸೀಟಿ ಹೊಡೆಯುತ್ತದೆ ಕುಕ್ಕರ್…ತಾಳದೇತನ್ನ ಅಡಿಯಲ್ಲಿ ಉರಿಯುತ್ತಿಯುವ ಬೆಂಕಿ.ನಾನೂಹೊರಹಾಕುತ್ತೇನೆ ನೋವು ನಲಿವುಗಳಪೆನ್ನು ಕಾಗದ ಹಿಡಿದು ,ಮನವನ್ನು ಕೆದಕಿ ಕೆದಕಿ . ಹಣೆಮೇಲಿನ ನೆರಿಗೆ, ಕಣ್ಣಂಚಿನ ಹನಿತುಟಿಯ ಮೇಲ್ಮುಖ ….ಕೆಳಮುಖ ಬಾಗುವಿಕೆಯಾವುದೂ ಅರ್ಥವಿಲ್ಲದ್ದಲ್ಲ….ಆಕಸ್ಮಿಕವಲ್ಲಪ್ರತಿಯೊಂದಕ್ಕೂ ಇದೆ ಬೇರೆ ಬೇರೆಯೇ ಪೀಠಿಕೆ. ಮನದ ಮ್ಲಾನತೆಯೋ, ಆಹ್ಲಾದಕತೆಯೋಮುಖದ ಮೇಲೆ ಕಾಣಬೇಕಾದರೆ…ಬೇಕುಏನಾದರೂ ಒಂದು ಇಂಧನ….ಅದಕ್ಕೇ..ಕುಕ್ಕರ್ ನ ಉದಾಹರಣೆ ಒಂದೇ..ಸಾಕು. ಮನವೆಂಬುದು ಒಂದು ಕುಲುಮೆಯೇ ಸರಿ..ಬೇಯುತ್ತಿರುತ್ತದೆ ಅಲ್ಲಿ ಬೇರೆ ಬೇರೆ ವಿಷಯಯಾವುದು ಮೊದಲು, ಯಾವುದು ಮತ್ತು, ಹೇಳುವಹಾಗಿಲ್ಲ,ಹೊರಹಾಕುತ್ತದೆ ನೋಡಿಕೊಂಡು ಸಮಯ…. ಅಲ್ಲಿ ಬೇಯುತ್ತಿರುವುದು ಖುಷಿಯೋ…ತ್ರಾಸವೋಯಾವುದೇ ಆದರೂ ಆ ಕ್ಷಣಕ್ಕೆ ಅದು ಮನಸಿಗೆ ಇಂಧನವಿಷಯವಿಲ್ಲದ ಮನಸು ದೆವ್ವದ ಮನೆಯಂತೆಅದಕ್ಕೇ…ಗಿಜಿಗುಡುತ್ತಲೇ ಇರಬೇಕು ಮನಸು, ಪ್ರತೀಕ್ಷಣ. *********************

ಮನೋ ಇಂಧನ Read Post »

ಕಾವ್ಯಯಾನ

ಮೌಢ್ಯ

ಕವಿತೆ ವೀಣಾ ರಮೇಶ್ ಮಾನದಂಡವಿಲ್ಲದ ಮೂಢ ಸಂತೆಯೊಳಗೆಬದುಕು ವ್ಯಾಪಾರ ವಾಗುತ್ತಿದೆ .ನಂಬಿಕೆಯ ನಡುವೆ ಮೂಢತ್ವ ಬಿತ್ತಿಮೊಳಕೆಯೊಡೆದುಬೇರು ಚಾಚಿಮೌಢ್ಯ ಹೆಮ್ಮರವಾಗಿದೆ ಬೆತ್ತಲಾಗಬೇಡ ಬತ್ತಿದಕನಸುಗಳಿಗೆಪೊಳ್ಳು ಕಟ್ಟು ಪಾಡುಗಳಹೆಗಲೇರಿ ಶವವಾಗಬೇಡ. ನಿನ್ನ ಕನಸುಗಳ ಚಲುವಿಗೆಸುಜ್ಞಾನ ತೊಡಿಸಿಜ್ಞಾನ ದಾರದಿಂದ ಬಿಗಿದುಅಭಿಜ್ಞಾನದೆಡೆಗೆ ಹರಿಸಿ ಅಹಂಕಾರದ ಕತ್ತಲೆಯಮರೆಸಿ ಆತ್ಮದ ಹಣತೆಯಲಿಅಂತರಾತ್ಮದ ನವಿರು ಸ್ಪರ್ಶ ಬೆಳಕು ನೀಡಲಿ **********************************

ಮೌಢ್ಯ Read Post »

ಕಾವ್ಯಯಾನ

ಕಣ್ಣುಗಳು ನನ್ನದಲ್ಲ

ಕವಿತೆ ಜಹಾನ್ ಆರಾ ಎಚ್. ಕೋಳೂರು ನಾನು ನಿನ್ನನ್ನು ನೋಡಿದ್ದೇನೆಆದ್ರೆ ಕಣ್ಣುಗಳು ನನ್ನದಲ್ಲ ದಶರಥನ ಮಹೋನ್ನತ ಯೋಚನೆಯಲ್ಲಿಮಂಥರೆಯ ಮೋಸದಲಿಊರ್ಮಿಳೆಯ ಉದಾಸೀನತೆ ಯಲ್ಲಿಲಕ್ಷ್ಮಣನ ನೆರಳಿನಲ್ಲಿಹನುಮಾನನ ಸೇವೆಯಲಿರಾವಣನ ಶೌರ್ಯದಲ್ಲಿಹೌದು ಅದೇ ಸೀತೆಯ ಕಂಬನಿಯಲ್ಲಿ ನಿನ್ನನ್ನು ಮತ್ತೆ ನೋಡುತಿದ್ದೇನೆಮತ್ತೆ ಮತ್ತೆ ಕಣ್ಣುಗಳು ನನ್ನದಲ್ಲ ಧರ್ಮದ ಚದರಿನಲ್ಲಿಜನ್ಮ ಭೂಮಿಯ ಹಂಗಿನಲಿರಾಜಕೀಯದ ದಾಳದಲಿಕೋರ್ಟುಗಳ ವಿವಾದಗಳಲಿದಾನಿಗಳ ದಾನದಲಿಮೌಢ್ಯದ ಹಾದಿಯಲ್ಲಿಮಾಧ್ಯಮದ ಗದ್ದಲದಲ್ಲಿ ನಿನ್ನ ಸೃಷ್ಟಿದ ವಾಲ್ಮೀಕಿಕಡತಗಳ ಹಿಡಿದುಇನ್ನೂ ಹೊರಗೆ ನಿಂತಿದ್ದಾನೆಅವನ್ನು ವಿಚಾರಿಸುನೀ ಮತ್ತೆ ಬರುವ ಅಗತ್ಯ ಇತ್ತೆ ಎಂದು? ಸಾವು ನೋವುಗಳ ಮೇಲೆ ಹಿಡಿತತಪ್ಪಿರುವಾಗ ದೇವರಾಗುವಬದಲು ವೈದ್ಯನಾಗುಮಂದಿರ ಮಂದಿರವಾಗಿಯೋ ಉಳಿಯುತ್ತದೆ ಆಗ ಮಾತ್ರ ನೀನು ನನ್ನಅವನ ಇವನ ಮತ್ತೊಬ್ಬನಕಣ್ಣಿಗೆ ಕಾಣುವೆಕ್ಷಮಿಸುನಿನಗೆ ಸಾದ್ಯವಾದರೆರಾಮರಾಜ್ಯ ಬೇಕಿದೆ ನಮಗೆಕೊಟ್ಟು ಬಿಡು ***********************

ಕಣ್ಣುಗಳು ನನ್ನದಲ್ಲ Read Post »

ಇತರೆ

ಕಾಡುವ ನೆನಪು

ನೆನಪು ವೀಣಾ ನಿರಂಜನ್ ಭೂತದ ಹುತ್ತದಲ್ಲಿ ಅಡಗಿ ಕುಳಿತಿರುವ ನೆನಪುಗಳನ್ನು ಮೆಲುಕು ಹಾಕುತ್ತಾ ಮೊದಲ ಕವಿತೆಯ ರೋಮಾಂಚನವನ್ನು ಅನುಭವಿಸುತ್ತಿದ್ದೇನೆ. ನಾನು ಯಾವ ಗಳಿಗೆಯಲ್ಲಿ, ಯಾಕೆ ಕವಿತೆಯನ್ನು ಹಚ್ಚಿಕೊಂಡೆ ಎನ್ನುವುದೇ ಮೊದಲ ಕವಿತೆಯ ಹುಟ್ಟಿಗೂ ಕಾರಣವಾಯಿತೇನೊ. ನನ್ನಪ್ಪ ನನಗೊಂದು ಅಚ್ಚರಿಯಾಗಿದ್ದ. ಮೇಷ್ಟ್ರಾಗಿದ್ದ ಅಪ್ಪ ಯಾವುದೇ ವಿಷಯದ ಕುರಿತು ತುಂಬ ಸೊಗಸಾಗಿ, ವಿಸ್ತಾರವಾಗಿ, ಪ್ರಭುತ್ವದಿಂದ ಪಾಠ ಮಾಡುತ್ತಿದ್ದ. ಭಾಷಣ ಮಾಡುತ್ತಿದ್ದ. ಮನೆ ತುಂಬ ಪುಸ್ತಕಗಳು. ಅಪ್ಪನ ಭೇಟಿಗೆಂದು ಮನೆಗೆ ಬರುತ್ತಿದ್ದವರು ಕೂಡ ಅಂಥವರೇ. ಸದಾ ಸಾಹಿತ್ಯ, ಕಲೆಯ ಕುರಿತು ಚರ್ಚೆ, ಮಾತುಗಳು. ಚಿಕ್ಕವಳಾಗಿದ್ದ ನಾನು ಇದೆಲ್ಲವನ್ನೂ ವಿಸ್ಮಯದಿಂದ ನೋಡುತ್ತಿದ್ದೆ. ಆದರೆ ದುರದೃಷ್ಟವಶಾತ್ ಅಪ್ಪ ನಾನಿನ್ನೂ ಬದುಕನ್ನು ಬೆರಗಿನಿಂದ ನೋಡುತ್ತಿರುವಾಗಲೇ ಮರಳಿ ಬಾರದ ಲೋಕಕ್ಕೆ ತೆರಳಿ ಬಿಟ್ಟ. ಕಾಯಿಲೆಯಿಂದ ನರಳುತ್ತಿದ್ದ ಅಪ್ಪನ ಸಂಕಟ ಮತ್ತು ಸಾವು ಆಗಲೇ ನನ್ನನ್ನು ಅಕಾಲ ಮುಪ್ಪಿಗೆ ತಳ್ಳಿದಂತೆ ಯೋಚಿಸತೊಡಗಿದ್ದೆ. ಅಪ್ಪ ಇಲ್ಲದೆ ಸೃಷ್ಟಿಯಾದ  ನಿರ್ವಾತದಿಂದ, ಅನಾಥ ಪ್ರಜ್ಞೆಯಿಂದ ಬಿಡುಗಡೆ ಪಡೆಯುವುದಕ್ಕಾಗಿಯೇ ಎಂಬಂತೆ ಓದನ್ನು, ಬರವಣಿಗೆಯನ್ನು ವಿಪರೀತ ಹಚ್ಚಿಕೊಂಡು ಬಿಟ್ಟೆ.     ಅಪ್ಪ…     ಇಂದು ನೀವಿದ್ದಿದ್ದರೆ     ಖಂಡಿತ ಹೀಗಾಗುತ್ತಿರಲಿಲ್ಲ     ನಾವು ಭೂತದ ಕಡೆಗೆ     ತಲೆ ತೂರಿಸುತ್ತಿರಲಿಲ್ಲ     ಭವಿಷ್ಯಕ್ಕೆ ಹೆದರುತ್ತಿರಲಿಲ್ಲ     ಪದೇ ಪದೇ ಮುಗ್ಗರಿಸಿ     ಪಶ್ಚಾತ್ತಾಪ ಪಡುತ್ತಿರಲಿಲ್ಲ.     ಅಂತ ಏನೇನೋ ಹಳಹಳಿಕೆಗಳೇ ಕವಿತೆಯಾಗಿ ಮೂಡಿ ಬರತೊಡಗಿದ್ದವು ಆಗ.     ಕುವೆಂಪು ಅವರು ನಮ್ಮನ್ನಗಲಿದ ದಿನ ಹೀಗೇ ತೋಚಿದ್ದು ಗೀಚಿದ್ದೆ.      ಮರೆಯಾಯಿತು      ಮರೆಯಾಗಿ ಮಲೆನಾಡ ಕಾಡಿನ      ಭವ್ಯ ರಮಣೀಯತೆಯಲ್ಲಿ      ರುದ್ರ ಭಯಂಕರ ಮನೋಹರ      ಶೂನ್ಯದಲ್ಲಿ ಸೇರಿಕೊಂಡಿತು      ಮರೆಯಾಯಿತು ಕರುನಾಡ ಜ್ಯೋತಿ      ಅಪ್ಪ ಲಂಕೇಶ್ ಪತ್ರಿಕೆಯ ಕಟ್ಟಾ ಅಭಿಮಾನಿ. ಮನೆಗೆ ತಪ್ಪದೆ ಪತ್ರಿಕೆ ಬರುತ್ತಿತ್ತು. ಅಪ್ಪನ ನಂತರವೂ ಪತ್ರಿಕೆ ಬರುವುದು ನಿಲ್ಲಲಿಲ್ಲ. ಆಗ ಪತ್ರಿಕೆಯಲ್ಲಿ ಪುಂಡಲೀಕ ಶೇಟ್ ಅವರ ಕಾಲಂ ಬರುತ್ತಿತ್ತು. ಅವರು ಉತ್ತರ ಕರ್ನಾಟಕದ ಅಪ್ಪಟ ಜವಾರಿ ಕನ್ನಡದಲ್ಲಿ ಅದನ್ನು ಬರೆಯುತ್ತಿದ್ದುದು ಎಲ್ಲರಿಗೂ ಗೊತ್ತಿದ್ದದ್ದೆ. ನಾನು ಡಿಗ್ರಿ ಓದುತ್ತಿದ್ದಾಗ ಅಕಸ್ಮಾತ್ ಒಂದು ಪುಂಡಲೀಕ ಶೇಟ್ ಅವರು ಅಪಘಾತದಲ್ಲಿ ಹೋಗಿ ಬಿಟ್ಟರು ಎನ್ನುವ ಸುದ್ದಿ ಬಂತು. ಅವರ ಅಭಿಮಾನಿಯಾಗಿದ್ದ ನಾನು ಮತ್ತೊಮ್ಮೆ ಸಾವಿನ ಕುರಿತು ಯೋಚಿಸಿದ್ದೆ. ಅವರ ಅಕಾಲಿಕ ಅಗಲಿಕೆಯ ಕುರಿತು ನಮ್ಮ ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲಿಯೇ ಒಂದು ಕವಿತೆ ಬರೆದೆ ‘ಹ್ಯಾಂಗ ಮರಿಯೂದು’ ಅಂತ. ಆ ಕವಿತೆಯನ್ನು ಒಂದು ಕವಿಗೋಷ್ಠಿಯಲ್ಲಿ ಓದುವ ಅವಕಾಶ ಸಿಕ್ಕಿತು. ಅಳುಕುತ್ತ, ಹಿಂಜರಿಯುತ್ತ ಓದಿ ಬಂದಿದ್ದೆ. ಮೊದಲೇ ಸಂಕೋಚದ ಮುದ್ದೆ ನಾನು. ಓದಿ ಬಂದು ಮೂಲೆಯಲ್ಲಿ ಮುದ್ದೆಯಾಗಿ ಕುಳಿತೆ. ನಂತರ ಅಂದಿನ ಕವಿಗೋಷ್ಠಿಯ ಅಧ್ಯಕ್ಷರು ನನ್ನ ಕವಿತೆಯನ್ನೇ ಪ್ರಧಾನವಾಗಿ ಎತ್ತಿಕೊಂಡು ಭಾಷಣ ಪ್ರಾರಂಭಿಸಿದಾಗ ಪುಳಕದಿಂದ, ಹೆಮ್ಮೆಯಿಂದ ಬೀಗಿದ್ದೆ. ಮುಂದೆ ಆ ಕವಿತೆ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದಾಗ ಎಲ್ಲ ಕಡೆಯಿಂದಲೂ ಒಳ್ಳೆಯ ಪ್ರತಿಕ್ರಿಯೆ ಬಂದು ನಾನು ನನಗೆ ತಿಳಿಯದೇ ಕವಿಯತ್ರಿಯ ಪಟ್ಟ ಧರಿಸಿ ಬಿಟ್ಟಿದ್ದೆ. ಆದರೆ ಆ ಕವಿತೆ ಈಗ ನನ್ನ ಬಳಿ ಇಲ್ಲ ಹಾಗೂ ಅದರ ಸಾಲುಗಳು ನೆನಪಿನಲ್ಲಿಲ್ಲ. ನನ್ನ ಬದುಕಿನ ಅಸ್ತವ್ಯಸ್ತ ಅಧ್ಯಾಯದಲ್ಲಿ ಎಲ್ಲೋ ಕಳೆದು ಹೋಗಿದೆ.        ಹೀಗೆ ಏಕಾಏಕಿ ದೊರಕಿದ ಕವಿಯತ್ರಿ ಎಂಬ ಬಿರುದು ನನ್ನನ್ನು ಮತ್ತೆ ಮತ್ತೆ ಬರೆಯುವಂತೆ ಪ್ರೇರೇಪಿಸಿತು. ಆಕಾಶವಾಣಿ ಧಾರವಾಡ ಕೇಂದ್ರವು ಏರ್ಪಡಿಸಿದ್ದ ಕವನ ಸ್ಪರ್ಧೆಯಲ್ಲಿ ನನ್ನ ಮತ್ತೊಂದು ಕವಿತೆ ಪ್ರಥಮ ಸ್ಥಾನ ಪಡೆದಿತ್ತು. ಸ್ಪರ್ಧೆಯ ತೀರ್ಪುಗಾರರಾಗಿ ಬಂದಿದ್ದ ಹಿರಿಯ ಕವಿ ಚೆನ್ನವೀರ ಕಣವಿಯವರು ಕವಿತೆಯ ಕುರಿತು ಆಡಿದ ಮಾತುಗಳು ನನ್ನನ್ನು ಭಾವುಕಳನ್ನಾಗಿಸಿ ಬಿಟ್ಟಿದ್ದವು. ಆ ಕವಿತೆ      ಇದೆಂಥ ಊರು!      ಎಲ್ಲಿಯೋ ಉದಿಸಿ ಎಲ್ಲಿಯೋ ಬೆಳಗಿ      ಮತ್ತೆಲ್ಲಿಯೋ ಮುಳುಗುವ      ಸೂರ್ಯ ಕೂಡ      ಇಲ್ಲಿಯವನೇ ಆಗಿ ಬಿಡುತ್ತಾನಲ್ಲ ! ಅಂತ ಶುರುವಾಗಿ       ನನ್ನೂರು, ನನ್ನ ಮನೆ, ನನ್ನ ನಾಡು       ಎಂದೆಲ್ಲ ಹತ್ತಿರವಾದಂತೆ       ಹರವು ಪಡೆಯುತ್ತ ಬಿಚ್ಚಿ ಕೊಳ್ಳುತ್ತ       ನಮ್ಮೂರು, ನಮ್ಮ ಮನೆ, ನಮ್ಮ ನಾಡು         ಎಂದೆಲ್ಲ ವಿಶಾಲವಾಗಿ ಬಿಡುತ್ತದಲ್ಲ!       ಒಳಹೊಕ್ಕು ತಡಕಾಡಿದಾಗ       ತನ್ನೆಲ್ಲವನ್ನೂ ತೆರೆಕೊಂಡು        ಈಟೀಟು ಇಡಿ ಇಡಿಯಾಗಿ       ಬೆರೆತು ಕೊಂಡು ಮತ್ತೆ       ಆಪ್ತವಾಗಿ ಬಿಡುತ್ತದಲ್ಲ !!                                             ಹೀಗೆ ಕವಿತೆ ನಿಧಾನವಾಗಿ ನನ್ನನ್ನು ನನ್ನ ನೋವುಗಳಿಂದ, ಹಳಹಳಿಕೆಗಳಿಂದ ದೂರ ಮಾಡುತ್ತಾ, ಸಾಂತ್ವನ ಹೇಳುತ್ತ ನನ್ನ ಸುತ್ತ ಹೊಸದೊಂದು ಲೋಕವನ್ನು ನಿರ್ಮಾಣ ಮಾಡತೊಡಗಿತು. ಮುಂದೆ ಕವಿವಿ ಕನ್ನಡ ಅಧ್ಯಯನ ಪೀಠ, ಕ್ರೈಸ್ಟ್ ಕಾಲೇಜು ಸಂಘ, ಜೆ ಎಸ್ ಎಸ್ ಧಾರವಾಡ ಮುಂತಾದವರು ಏರ್ಪಡಿಸಿದ ಕವನ ಸ್ಪರ್ಧೆಗಳಲ್ಲಿ ಸತತವಾಗಿ ಬಹುಮಾನ ಪಡೆದೆ. ಆದರೆ ನಂತರದ ದಿನಗಳಲ್ಲಿ ವೈಯಕ್ತಿಕ ಬದುಕಿನಲ್ಲಿ ಘಟಿಸಿದ ಅನಿರೀಕ್ಷಿತ ಆಘಾತಗಳು, ಅದರಿಂದಾದ ಆರೋಗ್ಯದಲ್ಲಿನ ಏರುಪೇರುಗಳು, ಸಂಸಾರದ ಜವಾಬ್ದಾರಿ ಎಲ್ಲವೂ ಸೇರಿ ಒಂದು ಸುದೀರ್ಘ ಮೌನ… ಕಾವ್ಯ ಸಖಿಯಿಂದ ವಿಮುಖಳಾಗಿ ಬಿಟ್ಟೆ. ಇತ್ತೀಚೆಗೆ ಮತ್ತೆ ಕಾವ್ಯ ನನ್ನನ್ನು ತನ್ನೆಡೆಗೆ ಸೆಳೆಯುತ್ತಿದೆ.  ಈ ಸೆಳೆತವೇ ಒಂದೂ ಸಂಕಲನವಿಲ್ಲದ ನನ್ನನ್ನು ಕೂಡ ಮೊದಲ ಕವಿತೆಯ ಕುರಿತು ಬರೆಯುತವಂತೆ ಪ್ರೇರೆಪಿಸಿದ್ದು. ಎಲ್ಲ ಹಳವಂಡಗಳಿಂದ ನನ್ನ ಮುಕ್ತ ಗೊಳಿಸಿ ಕಾವ್ಯದ ಮೇಲಿನ ಮೋಹ ಮತ್ತೊಮ್ಮೆ ಬದುಕನ್ನು ಪ್ರೀತಿಸುವಂತೆ ಮಾಡಿದೆ. **********************************

ಕಾಡುವ ನೆನಪು Read Post »

ಕಾವ್ಯಯಾನ

ಪಯಣ

ಕವಿತೆ ಪಾರ್ವತಿ ಸಪ್ನ ಹೊಗಳಿದರೆ ಹಿಗ್ಗದೆತೆಗಳಿದರೆ ಕುಗ್ಗದೆಅಪ್ಪಳಿಸುವ ಮಾತಿನಅಲೆಗಳಿಗೆ ಜಗ್ಗದೆನಿನ್ನ ಹಾದಿಯಲ್ಲೇನಿಲ್ಲದೆ..ನೀ ಸಾಗಿಬಿಡು..!! ಕಾಲಿಗೊಂದು ಮುಳ್ಳುಕೈಯಿಗೊಂದು ಕಲ್ಲುನಾಲಿಗೆಯಲ್ಲಿ ಸುಳ್ಳುಅಚ್ಚರಿಯೇನಿಲ್ಲ..ಲೋಕವೇ ಡೊಂಕುಮಾತೆಲ್ಲಾ ಕೊಂಕುಇರಲಿಬಿಡು.. ನಿನ್ನಷ್ಟಕ್ಕೇನೀ….ಸಾಗಿಬಿಡು…!! ತಪ್ಪು ಹುಡುಕುವಬೆಪ್ಪನಿಗೆ..ತುಪ್ಪ ಸವರಿದರೂಮೊಸರಲ್ಲೂ ಕಲ್ಲಂತೆ,,ಕಾಣದ ಗಾಳಿಯದುಬೊಗಸೆಯಲ್ಲಿ ಹಿಡಿದಂತೆ,,ಸುಮ್ಮನೆ ನಡೆದುಬಿಡುನಿನ್ನ ಹಾದಿಯಲ್ಲಿ ಸಾಗಿಬಿಡು…!! ಎಲ್ಲವೂ ಜಂಜಾಟಪ್ರತಿಕ್ಷಣ ಒಂದು ಪಾಠಸಮಯ ಗುರುವುಕಲಿಸುವುದು ನೋಡುಅವನ ಆಟಕ್ಕೆ ನೀ ಕುಣಿದುಬಿಡುತಿರುಗಿ ಮತ್ತೆ ನೋಡದಿರುವ್ಯಥೆಯನ್ನೆಲ್ಲಾ ತೂರಿಬಿಡುನಿನ್ನ ಗುರಿಯ ಸೇರಿಬಿಡು…!! ********************

ಪಯಣ Read Post »

ಕಾವ್ಯಯಾನ

ಇಲ್ಲದೆಯೂ ಎಲ್ಲವನ್ನೂ ಬಯಸುತ್ತೇನೆ

ಕವಿತೆ ಸ್ಮಿತಾ ಭಟ್ ಅಬ್ಬರಿಸಿ ಬರುವ ನಿನ್ನ ಮಾತಿನಹೊಡೆತಕ್ಕೆ ಸಿಲುಕಿದ ಒಂಟಿ ದೋಣಿಮತ್ತೊಂದು ಪ್ರಶಾಂತ ನಿಲುವಿಗಾಗಿಯಾಕೋ ಕಾಯಬೇಕೆನಿಸುತ್ತಿಲ್ಲಕೊಚ್ಚಿ ಕಾಣದಾಗಲೆಂದು ಬಯಸುತ್ತೇನೆ ಬುಡಮೇಲಾದ ನಂಬಿಕೆಯಮತ್ತೆ ಊರಿ ಅದಕ್ಕೇ ಚಿಗುರೊಡೆವಸಮಯಕ್ಕಾಗಿಯಾಕೋ ಕಾಯಬೇಕೆನಿಸುತ್ತಿಲ್ಲಕುರುಹೂ ಇಲ್ಲದಂತೆ ನಶಿಸಿ ಹೋಗಲು ಬಯಸುತ್ತೇನೆ. ಹೊಸದೇನೋ ಘಟಿಸುತ್ತದೆ ಎಂಬ ಬಯಕೆಯಲಿಹಳೆಯ ಪೋಷಾಕುಗಳನೇ ಮತ್ತೆ ಮತ್ತೆ ಹೊದ್ದುಅಸತ್ಯದ ನಗುವಿನಲಿ ಯಾಕೋ ಕಾಯಬೇಕೆನಿಸುತ್ತಿಲ್ಲಸಕಲವನೂ ತೊರೆದು ನಿರಾಳವಾಗಲು ಬಯಸುತ್ತೇನೆ. ಯಾವ ಕಿಂಡಿಯೂ ಉಳಿದಿಲ್ಲಕಿರಣದ ಸ್ಪರ್ಶವ ಅನುಭವಿಸಲುಹೊರದಾರಿಗೆ ಯಾರೋ ಬಾಗಿಲು ತರೆಯುವುದಕ್ಕಾಗಿ ಯಾಕೋ ಕಾಯಬೇಕೆನಿಸುತ್ತಿಲ್ಲಗೂಡಿನ ಮಾಡು ಸರಿಸಿ ದಿಗಂತದಲಿಹಂಗು ತೊರೆದು ಹಾರಲು ಬಯಸುತ್ತೇನೆ ಆಶಾವಾದಿತನದ ಬದುಕಿಗೆಚೆಲ್ಲಿದ ಬೊಗಸೆಗಳೆಲ್ಲ ಚಪ್ಪಾಳೆ ತಟ್ಟಿ ನಕ್ಕಿದೆಹೊಸ ಬಯಕೆಗಳ ಹೂವು ಅರಳಲುಯಾಕೋ ಕಾಯಬೇಕೆನಿಸುತ್ತಿಲ್ಲ.ಚುಕ್ಕಿಯ ದಂಡಿನಲಿ ಸೇರಿ ಸಕಲವನೂನೋಡಿ ನಗಲು ಬಯಸುತ್ತೇನೆ. ********************

ಇಲ್ಲದೆಯೂ ಎಲ್ಲವನ್ನೂ ಬಯಸುತ್ತೇನೆ Read Post »

ಅಂಕಣ ಸಂಗಾತಿ, ಹೊಸ ದನಿ-ಹೊಸ ಬನಿ

ಅಂಕ(ಣ)ದ ಪರದೆ ಸರಿಯುವ ಮುನ್ನ.

ಸಂಗಾತಿ ಸಾಹಿತ್ಯ ಪತ್ರಿಕೆಯನ್ನು ಅದರ ನಿಲುವನ್ನೂ ಹಲವು ಗೆಳೆಯರು ಗಮನಿಸಿರಬಹುದು. ಸದಾ ಹೊಸ ಆಲೋಚನೆಗಳಿಗೆ ಮತ್ತು ಆಧುನಿಕ ಕಾಲದ ಸಂವೇದನೆಗೆ ವೇದಿಕೆಯಾಗಿರ ಬಯಸುವ ಸಂಗಾತಿ ಸ್ಥಾಪಿತ ಹಿತಾಸಕ್ತಿಗಳನ್ನು ಮತ್ತು ಬರಿಯ ತೋರಿಕೆಯನ್ನು  ಎಂದಿಗೂ ಎತ್ತಿಹಿಡಿದಿಲ್ಲ. ಅವರು ಇವರು ಎಂದಲ್ಲ. ಫೇಸ್ಬುಕ್ ಈ ನಡುವೆ ಬಹುತೇಕರ ನಿರಂತರ ನಿಲುದಾಣ, ತಂಗುದಾಣ, ಹಾಗೂ ಅಭ್ಯಾಸದ ಮೈದಾನವೂ ಆಗಿದೆ. ಹಲವರನ್ನು  ಫಾಲೋ ಮಾಡುತ್ತ ಅವರ ರಚನೆಗಳನ್ನು ಗಮನಿಸಿದರೆ ದಿನದಿಂದ ದಿನಕ್ಕೆ ಪ್ರಭೃದ್ಧರಾಗುತ್ತಿರುವ ಹಲವರಿದ್ದಾರೆ. ಇನ್ನು ಒಂದೋ ಎರಡೋ ಸಂಕಲನ ತಂದೂ ಫೇಸ್ಬುಕ್ಕಲ್ಲಿ ಕ್ರಿಯಾಶೀಲರಾಗಿ ಇರುವ ಹಲವರಿದ್ದಾರೆ. ಇಂಥ ಎಲೆ ಮರೆಯ ಪ್ರತಿಭೆಗಳನ್ನು ಅವರು ಪ್ರಕಟಿಸಿರುವ ಕವಿತೆಗಳ ಅವಲೋಕನದ ಜೊತೆಗೆ ಪರಿಚಯಿಸುವ ಇರಾದೆಯಿಂದ ಹುಟ್ಟಿದ್ದು ಈ ಅಂಕಣ “ಹೊಸ ದನಿ – ಹೊಸ ಬನಿ”. ಈ ಶೀರ್ಷಿಕೆ ಹೊಳೆದದ್ದು ಕೂಡ ಆಕಸ್ಮಿಕವೇನಲ್ಲ. ಖ್ಯಾತ ಕವಿ ಶ್ರೀ ಜಿ ಕೆ ರವೀಂದ್ರ ಕುಮಾರ್ ಬೆಂಗಳೂರು ಆಕಾಶವಾಣಿ ನಿರ್ದೇಶಕರಾಗಿ ನಿಯುಕ್ತರಾದಾಗ ಅವರ ಜೊತೆಯಾದವರು ಮತ್ತೊಬ್ಬ ಪ್ರತಿಭೆ ಡಾ.ಎನ್.ರಘು. ಅದ್ಭುತ ಸಂಗೀತ ಪ್ರತಿಭೆಯ ರಘು ಮತ್ತು ಜಿ ಕೆ ಆರ್ ಜೋಡಿ ನಾಡಿನಾದ್ಯಂತ ಇರುವ ಕವಿಗಳಿಂದ ತಿಂಗಳಿಗೊಂದು ಹೊಸ ಕವಿತೆ ಬರೆಸಿ ಅದಕ್ಕೆ ಅದ್ಭುತ ಸಂಗೀತ ಹೊಂದಿಸಿ ಭಾವಗೀತೆ ಆಗಿಸಿ ಜನಪ್ರಿಯ ಕಾರ್ಯಕ್ರಮ ಮಾಡತೊಡಗಿದರು. ಈ ಹಿಂದೆಯೂ ಆಕಾಶವಾಣಿ “ನವಸುಮ” “ತಿಂಗಳ ಹೊಸಹಾಡು” ಎಂದು ಖ್ಯಾತ ಕವಿಗಳ ರಚನೆಗಳಿಗೆ ಸಂಗೀತ ಜೋಡಿಸಿ ಹಾಡಾಗಿ ಪ್ರಸಾರ ಮಾಡುತ್ತಿತ್ತು. ಎರಡು ಬಾರಿ ನನ್ನ ಕವಿತೆಗಳಿಗೆ ಈ ಅವಕಾಶ ಸಿಕ್ಕು ನನ್ನ ಕವಿತೆಗಳೂ ಹಾಡಾಗಿ ಬಿತ್ತರವಾದುವು. ಆ ಕಾರ್ಯಕ್ರಮದ ಶೀರ್ಷಿಕೆ “ಹೊಸ ದನಿ – ಹೊಸಬನಿ” ಎಂದೇ ಆಗಿತ್ತು. ಹೆಸರೇ ತಿಳಿಸುವಂತೆ ಸುಗಮ ಸಂಗೀತ ಕ್ಷೇತ್ರಕ್ಕೆ ಹೊಸ ದನಿಯನ್ನು ಸೇರಿಸಿ ಆ ಕವಿಯ ಕವಿತೆಗೆ ರಾಗ ಸಂಯೋಜಿಸಿ ತಿಂಗಳ ಹಾಡಾಗಿ ಪ್ರಸಾರ ಮಾಡುತ್ತಿದ್ದ ಆ ಕಾರ್ಯಕ್ರಮ ತುಂಬ ಜನಪ್ರಿಯವೂ ಆಯಿತು. ಅದೇ ಶೀರ್ಷಿಕೆಯಲ್ಲೇ ಇವತ್ತು ಫೇಸ್ಬುಕ್ಜಿನಲ್ಲಿ ಬರೆಯುತ್ತಿರುವ ಕವಿತೆಗಳನ್ನು ಗುರ್ತಿಸಿ ತನ್ಮೂಲಕ ಕವಿಯ ಸಾಹಿತ್ಯಕ ಸಾಧನೆಯನ್ನು ಓದುಗರಿಗೆ ತಿಳಿಸುವುದು ಈ ಅಂಕಣದ ಉದ್ದೇಶ. ಕಳೆದ ಮೂವತ್ತೈದು ವರ್ಷಗಳಿಂದಲೂ ಕವಿತೆಯ ಸಾಗಂತ್ಯದಲ್ಲಿ ಬದುಕು ಕಂಡುಕೊಂಡ ನನಗೆ ಹೊಸಕಾಲದ ಅದರಲ್ಲೂ ಹೊಸ ಮಾಧ್ಯಮಗಳಾದ ಫೇಸ್ಬುಕ್ ಮತ್ತು ವಾಟ್ಸ್ ಅಪ್ ಗುಂಪುಗಳಲ್ಲಿ ಹಾಗೇ ವೈಯುಕ್ತಿಕ ಪೇಜಲ್ಲಿ ಬರೆಯುತ್ತಿರುವ ಹಲವರ ಬಗ್ಗೆ ಖುಷಿ ಮತ್ತು ಕೆಲವರ ಬಗ್ಗೆ ಸಂತಾಪಗಳೂ ಇವೆ. ಹೊಗಳಿಕೆಗೋ ಲೈಕಿಗೋ ಅಥವ ತುಂಬ ಈಸಿಯಾದ ಇಮೋಜಿಗಳಿಗೋ ಇರುವ ಪ್ರಾಧಾನ್ಯತೆ ವಿಮರ್ಶೆಯ ನಿಜದ ಮಾತುಗಳಿಗೆ ಪ್ರೋತ್ಸಾಹಕ್ಕೆ ಹೇಳಿದ ತಿದ್ದುಪಡಿಗಳಿಗೆ ಇಲ್ಲದುದನ್ನು ಕಂಡಾಗ ಬೇಸರವೂ ಆಗಿದೆ. ಕಾವ್ಯಕೇಳಿ, ಕಾಜಾಣ, ಪದ್ಯ, ಮೊದಲಾದ ತಾಣಗಳು, ಹಾಗೇ ಅವಧಿ, ಕೆಂಡಸಂಪಿಗೆ, ಸಂಗಾತಿ, ಸಂಪದ ಮೊದಲಾದ ವೆಬ್ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವ ಕವಿತೆಗಳೂ ಇದುವರೆಗೂ ನಂಬಿದ್ದ ಸಾಹಿತ್ಯ ಚರಿತ್ರೆ ಕಟ್ಟಿಕೊಟ್ಟಿದ್ದ ಮಿತಿ ಮತ್ತು ಪಾತಳಿಯನ್ನು ವಿಸ್ತರಿಸಿ ಹಾಗೇ ಕೆಡವಿ ಹೊಸದನ್ನು ಕಟ್ಟುತ್ತಿರುವ ಈ ಕಾಲದ ಎಲ್ಲ ನಿಜ ಕವಿಗಳನ್ನೂ ಅಭಿನಂದಿಸುತ್ತೇನೆ. ಈ ಕುರಿತು ಸದ್ಯ ಅನಿಸಿದ್ದನ್ನು ವಿಸ್ತರಿಸಿ ಈ ಲೇಖನ. ನಮ್ಮಲ್ಲಿ ಬಹಳ ಜನ ಕವಿತೆಯೆಂದರೆ ಕವಿಗೋಷ್ಠಿಯೆಂದರೆ ಮೂಗು ಮುರಿಯುತ್ತೇವೆ. ಕವಿತೆಯನ್ನು ಓದುವುದು ಅಥವ ಬರೆಯುವುದೆಂದರೆ ಮಾಡಲು ಬೇರೇನೂ ಕೆಲಸವಿಲ್ಲದವರು ಹೊಂಚಿಕೊಂಡ ಕೆಲಸವೆಂದು ಅನ್ನುವವರೂ ಇದ್ದಾರೆ. ಆದರೂ ಸಾಹಿತ್ಯ ಸಮ್ಮೇಳನಗಳ ಮುಖ್ಯ ಆಕರ್ಷಣೆಯೇ ಕವಿಗೋಷ್ಠಿಗಳಾಗಿರುವುದೂ ವಿಶೇಷವೇ. ಪಂಡಿತರಿಗಷ್ಟೇ ಕವಿತೆ ಪಾಮರರಿಗೆ ಏಕದರ ಗೊಡವೆ ಅನ್ನುವವರೂ ಇದ್ದಾರೆ. ಇನ್ನು ಕವಿಯಲ್ಲದವರು ಅಥವ ಕವಿತೆಯ ಗೊಡವೆ ಬೇಡದೆಯೂ ಕವಿತೆಯ ಜೊತೆಗೆ ಅನಿವಾರ್ಯವಾಗಿ ಬೆರೆಯುವವರೆಂದರೆ ಅದನ್ನು ಪಠ್ಯವಾಗಿ ಓದಲೇಬೇಕಿರುವ ವಿದ್ಯಾರ್ಥಿಗಳು ಮತ್ತು ಅದನ್ನವರಿಗೆ ಪಾಠ ಹೇಳಬೇಕಾದ ಗುರುತರ ಜಾವಾಬ್ದಾರಿ ಹೊಂದಿರುವ ಅಧ್ಯಾಪಕರು. ಕವಿತೆಯನ್ನು ಪಾಠ ಮಾಡುವುದು ಎಂದರೆ ಅಧ್ಯಾಪಕರಿಗೆ ಹಿಂಜರಿಕೆ.ವರ್ಷಾವಧಿ  ಪರೀಕ್ಷೆಯಲ್ಲಿ ಕವಿತೆಗಳ ಮೇಲೆ ಕೇಳಿದ ಪ್ರಶ್ನೆಗಳಿಗೆ ಉತ್ತರಗಳನ್ನು ಬರೆಯುವುದೆಂದರೆ ವಿದ್ಯಾರ್ಥಿಗಳಿಗೆ ಅಂಜಿಕೆ. ಅರ್ಥವಾಗದು ಎಂಬ ಅಂಜಿಕೆ ಹುಡುಗರಿಗೆ. ಅರ್ಥವಾಗದಿದ್ದರೆ ಎಂಬ ಅಂಜಿಕೆ ಅಧ್ಯಾಪಕರಿಗೆ. ಓದಿದ ಕವಿತೆ ಅರ್ಥವಾಗದಿದ್ದರೆ ನಮ್ಮ ಅಹಂಕಾರಕ್ಕೆ ಪೆಟ್ಟು. ಅದಕ್ಕೇ ನಮಗೆ ಕವಿತೆಯ ಉಸಾಬರಿಯೇ ಬೇಡ ಎಂದು ಮುಖ ತಿರುಗಿಸುವ ಮಂದಿ ಬಹಳ. ಕವಿತೆಯೊಂದನ್ನು ಓದಿದೊಡನೆಯೇ ಅದು ಅರ್ಥವಾಗಲೇ ಬೇಕು ಎಂದು ದಯವಿಟ್ಟು ಹಠಮಾಡಬೇಡಿ. ಕವಿತೆಯನ್ನು ಅರ್ಥದ ಗೂಟಕ್ಕೆ ಕಟ್ಟಬೇಡಿ. ಅದನ್ನು ಸುಮ್ಮನೆ ವಿಹಾರಕ್ಕೆ ಬಿಡಿ. ಅಂಗಳದಲ್ಲಿ ಆಡಬಯಸುವ ಪುಟ್ಟ ಮಗುವಿನಂತೆ ಕವಿತೆ ಆರಾಮಾಗಿ ನಿಮ್ಮ ಮನದ ಅಂಗಳದಲ್ಲಿ ಆಡಿಕೊಳ್ಳಲಿ. ಕವಿತೆಯ ಭಯವನ್ನು ಗೆಲ್ಲಲು ನಾವು ಆರಂಭದಲ್ಲಿ ಕೈಗೊಳ್ಳಬೇಕಾದ ಸುಲಭ ಉಪಾಯವಿದು. ಸುಮ್ಮನೆ ಓದುತ್ತಾ ಹೋದರೆ, ಓದುತ್ತಲೇ ಹೋದರೆ ಹೇಗೆ ಈಗ ತಾನೇ ಓಡಾಡಲು ಪ್ರಾರಂಭಿಸಿರುವ ಮಗು ತನ್ನ ಆಟದಲ್ಲಿ ಒಂದು ಲಯ ಕಂಡೀತೋ ಹಾಗೆಯೇ ನೀವೂ ಕವಿತೆಯನ್ನು ಕಾಣಬೇಕು. ಕವಿತೆ ಹೇಗೆ ನಡೆಯುವುದು, ಹೇಗೆ ನಗುವುದು, ಹೇಗೆ ಅತಾರ್ಕಿಕವನ್ನು ಪಲುಕುವುದು ಗಮನಿಸಿ. ಕವಿತೆ ಎಂದರೆ ಮೊದಲು ಗಮನಿಸ ಬೇಕಾದದ್ದು ಅದನ್ನು ಕವಿಯು ಹೇಗೆ ಗುನುಗುನಿಸುವ ಮಾತುಗಳನ್ನು ಹಿಡಿದು ನೇಯ್ದು ಮಾಲೆ ಮಾಡಿದ್ದಾನೆ ಎಂಬುದನ್ನು ಓದಿನ ಮೂಲಕವೇ ದಕ್ಕಿಸಿಕೊಳ್ಳಬೇಕು. ಕವಿತೆಯ ಗ್ರಹಿಕೆ ಎಂಬುದು ಕವಿತೆಯ ಶಬ್ದ ಸಾಮಗ್ರಿಯಿಂದ ನೀವೇ ಸ್ವಂತ ಕಟ್ಟಿಕೊಂಡ ಗ್ರಹಿಕೆ ಎಂಬುದನ್ನು ಮರೆಯದಿರಿ. ಈ ಪದ್ಯದ ಇನ್ನೊಬ್ಬ ಓದುಗ ಭಿನ್ನವಾದ ಬೇರೆ ಒಂದು ಗ್ರಹಿಕೆಯನ್ನೇ ತನ್ನ ಓದಿನಿಂದ ಕಟ್ಟಿಕೊಂಡರೆ ನೀವು ಆತಂಕಗೊಳ್ಳಬೇಕಿಲ್ಲ. ಸದ್ಯಕ್ಕೆ ಇದು ನಿಮ್ಮ ಕಾವ್ಯ ಗ್ರಹಿಕೆ. ಮುಂದೆ ನಿಮ್ಮ ಓದು ಪರಿಷ್ಕಾರಗೊಂಡಂತೆ ಕವಿತೆ ಬೇರೊಂದು ವಿಭಿನ್ನವಾದ ಗ್ರಹಿಕೆಯನ್ನೇ ಕಟ್ಟಿಕೊಳ್ಳಬಲ್ಲುದು. ಕವಿತೆ ಒಂದೇ; ಆದರೆ ಅದರ ಗ್ರಹಿಕೆಗಳು ಅನಂತ. ಈ ನಂಬಿಕೆ ಮತ್ತು ವಿಶ್ವಾಸದೊಂದಿಗೆ ಹೊಸ ಕಾವ್ಯಾರ್ಥಿಗಳು ತಮ್ಮ ಕಾವ್ಯ ಶೋಧವನ್ನು ಮುಂದುವರೆಸಲಿ. ಕವಿತೆಯೆಂಬುದು ನಿರಂತರ ವಿಕಸನಶೀಲವಾದ ಒಂದು ಜೈವಿಕ ಭಾಷಾನುಸಂಧಾನ ಎಂಬ ಅರಿವು ನಿಮಗಿರಲಿ. ಅದಕ್ಕಿಂತ ಮುಖ್ಯ ನಮ್ಮ ಪೂರ್ವಸೂರಿಗಳನ್ನೂ ಹಾಗೇ ಸಮಕಾಲೀನರನ್ನೂ ಎಷ್ಟು ಓದಿಕೊಂಡಿದ್ದೀರಿ ಎನ್ನುವುದು ಮುಖ್ಯ. ಸಾಹಿತ್ಯ ಚರಿತ್ರೆಯ ಅದು ನಡೆದ ಬಂದ ದಾರಿಯ ಬಗ್ಗೆ ಕೊಂಚವಾದರೂ ತಿಳುವಳಿಕೆ ನಾವು ನಡೆಯುತ್ತಿರುವ ದಾರಿಗೆ ತೋರುಬೆರಳು ಅನ್ನುವುದನ್ನು ಮರೆಯದಿರೋಣ.  ಹಲವು ಯುವ ಬರಹಗಾರರು ಪರಂಪರೆಯನ್ನು ಧ್ಯಾನಿಸದೇ ಸುಮ್ಮನೇ ಮುಂದುವರಯುತ್ತಿರುವುದನ್ನೂ ಓದಿನಿಂದ ಬಲ್ಲೆ. ನಿಜಕ್ಕೂ ಭಾಷೆಯ ಸೊಗಸು, ಅದರ ನಿರ್ಮಿತಿಯ ವಿನ್ಯಾಸ ಹಾಗೂ ಮಿತಿ ಅರ್ಥವಾಗುವುದೇ ನಿರಂತರದ ಓದಿನಿಂದ. ಅನ್ಯರನ್ನು ಓದದೇ ನಾವು ನಮ್ಮ ಕಾವ್ಯ ಬೆಳೆಯಲಾರದು. ಸದ್ಯದ ಕಾವ್ಯ ಇನ್ನೂ ತನ್ನ ದಾರಿಯನ್ನು ಸ್ಪಷ್ಟಗೊಳಿಸಿಕೊಳ್ಳಬೇಕಿದೆ. ನವೋದಯದ ರಮ್ಯತೆ ಕಳೆದು ನವ್ಯದ ಪ್ರತಿಮೆ ರೂಪಕಗಳೂ ಸವೆದು ಬಂಡಾಯದ ದನಿ ಉಡುಗಿಹೋಗಿರುವ ಸಂದರ್ಭದಲ್ಲಿ ಕಾವ್ಯವೆಂದರೆ ಆ ಕ್ಷಣ ಅನ್ನಿಸಿದ್ದನ್ನು ತತ್ ಕ್ಷಣವೇ ಬರೆದು ಪ್ರಕಟಿಸುವ ಸಾಮಾಜಿಕ ಜಾಲತಾಣಗಳ ಪುಟಗಳಾಗಿ ಬದಲಾಗುತ್ತಿದೆ. ಇದು ಗಮನಿಸಬೇಕಾದ ಮುಖ್ಯ ಸಂಗತಿ. ಕವಿತೆ ಬರೆಯುವವರೆಂದರೆ ಅದ್ಯಾಪಕರೇ ಎಂಬ ಹುಸಿಯನ್ನು ವರ್ತಮಾನದ ಕವಿಗಳು ಅಳಿಸಿಹಾಕಿದ್ದಾರೆ. ಬದುಕಿನ ಹಲವು ಸ್ತರಗಳಿಂದ ಅನುಭವಗಳಿಂದ ಹುರಿಗೊಂಡ ಅನೇಕ ಮನಸ್ಸುಗಳು ಆಧುನಿಕ ಕಾವ್ಯ ಪ್ರಕಾರವನ್ನು ಕಟ್ಟುತ್ತಿವೆ. ತಮಗನ್ನಿಸಿದ್ದನ್ನು ನಿರ್ಭಿಡೆಯಿಂದ ಸ್ಪಷ್ಟವಾಗಿ ಹೇಳುವ ಸಿದ್ಧ ಸಾಮಗ್ರಿ ಈಕಾಲದ ಕವಿಗಳಿಗಿರುವುದು ವಿಶೇಷ. ಹೊಸ ದನಿ- ಹೊಸ ಬನಿಯ ಮೂಲಕ ಎಲ್ಲರನ್ನೂ ಗುರುತಿಸುತ್ತೇವೆ, ಬೆನ್ನು ತಟ್ಟುತ್ತೇವೆ ಎನ್ನುವುದಷ್ಟೇ ಈ ಅಂಕಣದ ಉದ್ದೇಶವಲ್ಲ. ಆದರೆ ನಿಜಕ್ಕೂ ಚೆನ್ನಾದ ಕವಿತೆಗಳನ್ನು ಬರೆಯುತ್ತಿದ್ದರೂ ಬೇರೆ ಬೇರೆ ಕಾರಣಗಳಿಂದಾಗಿ ಪತ್ರಿಕೆಗಳಲ್ಲಿ ಅಷ್ಟಾಗಿ ಕಾಣಿಸಿ ಕೊಳ್ಳದ ಕವಿಗಳನ್ನು ಪರಿಚಯಿಸುವುದು ಮುಖ್ಯ ಉದ್ದೇಶ. ಇದರ ಜೊತೆಗೆ ಜನಪ್ರಿಯ ಪತ್ರಿಕೆಗಳಲ್ಲಿ ಪ್ರಕಟಣೆಗಾಗಿ ಕಾದು ಕಾದು ಕಡೆಗೆ ಫೇಸ್ಬುಕ್ಕಲ್ಲಿ ಪ್ರಕಟಿಸಿ ಭೇಶ್ ಅನ್ನಿಸಿಕೊಂಡ ಹಲವರನ್ನು ನಾವು ಬಲ್ಲೆವು. ಫೇಸ್ಬುಕ್ ಗೆಳೆಯಲ್ಲಿ ವಿನಂತಿ. ಸ್ಟೇಟಸ್ಸಿನಲ್ಲಿ ಎರಡು ಸಾಲು ಬರೆದೋ, ಅವರಿವರ ಸಾಲು ಎಗರಿಸಿ ತಮ್ಮದೆಂದೇ ಹೇಳುವವರು ಬೇಕಿಲ್ಲ ಉಳಿದಂತೆ ಚೆಂದಾಗಿ ಬರೆಯುತ್ತಿದ್ದೇನೆ ಅಂತ ಅನ್ನಿಸಿದವರು ಸಂಗಾತಿಗೆ ತಮ್ಮ ಹತ್ತು ಹನ್ನೆರಡು ಕವಿತೆಗಳ ಗುಚ್ಛದೊಂದಿಗೆ ನಿಮ್ಮ ಭಾವಚಿತ್ರ ಮತ್ತು ಸ್ವಪರಿಚಯದೊಂದಿಗೆ ಕಳಿಸಿ. ನಿಮ್ಮ ಕವನ ಗುಚ್ಛದಲ್ಲಿ ಫೇಸ್ಬುಕ್ಕಲ್ಲಿ ಪ್ರಕಟಿಸಿದ ದಿನಾಂಕಗಳನ್ನು ನಮೂದಿಸಿ ಅಥವ ಆ ಪದ್ಯಗಳ ಲಿಂಕ್ ಲಗತ್ತಿಸಿ. ಕವಿತೆಗಳು ಕನಿಷ್ಠ ಹದಿನೈದು- ಇಪ್ಪತ್ತು ಸಾಲಾದರೂ ಇರಲಿ. ಪ್ರತಿ ಗುರುವಾರ ಉದ್ದೇಶಿತ ಅಂಕಣ ಪ್ರಕಟವಾಗಲು ಓದುಗರ, ಕವಿಗಳ ಸಹಕಾರವೂ ಮುಖ್ಯ. *********************************** ಲೇಖಕರ ಬಗ್ಗೆ: ತರೀಕೆರೆ ಮೂಲದವರಾದ ಡಿ.ಎಸ್.ರಾಮಸ್ವಾಮಿಯವರು ಜೀವವಿಮಾ ನಿಗಮದ ಅಧಿಕಾರಿಯಾಗಿ ಅರಸೀಕೆರೆಯಲ್ಲಿ ನೆಲೆಸಿದ್ದಾರೆ.ಇವರ ‘ಉಳಿದ ಪ್ರತಿಮೆಗಳು’ ಕವನಸಂಕಲನಕ್ಕೆಮುದ್ದಣ ಕಾವ್ಯ ಪ್ರಶಸ್ತಿದೊರೆತಿದೆ.

ಅಂಕ(ಣ)ದ ಪರದೆ ಸರಿಯುವ ಮುನ್ನ. Read Post »

You cannot copy content of this page

Scroll to Top