ನೂರು ಪದಗಳಮೂರು ಕಥೆಗಳು
ಕಥೆಗಳು ಡಾ.ಪ್ರೇಮಲತ ಬಿ. ಸಮಸ್ಯೆ ಆ ಮನೆಯಲ್ಲಿದ್ದ ಎಲ್ಲರೂ ಚಿಂತಾಕ್ರಾಂತರಾಗಿದ್ದರು. ವಿಷಯವೂ ಗಂಭೀರದ್ದೇ ಆಗಿತ್ತು. ಸಮಸ್ಯೆಯ ಜಾಡನ್ನಿಡಿದು ಅದು ಹೇಗೆ ಶುರುವಾಯ್ತು, ಹೇಗೆ ಬೆಳೆಯಿತು ಎಂದು ಮತ್ತೆ ಮತ್ತೆ ಎಷ್ಟು ಯೋಚಿಸಿದರೂ ಅದಕ್ಕೊಂದು ಉತ್ತಮ ಪರಿಹಾರ ಹೊಳೆದಿರಲಿಲ್ಲ. ಒಂದು ರೀತಿಯ ಒಪ್ಪಂದಮಾಡಿಸಿದರೆ, ನಿಮ್ಮಿ ಮತ್ತು ಶೈಲಜಾರ ಬದುಕು ಹಸನಾಗುತ್ತಿತ್ತು ಆದರೆ ರಾಘವನಿಗೆ ಘೋರ ಅನ್ಯಾಯವಾಗುತ್ತಿತ್ತು. ರಾಘವನ ಕಡೆ ವಾಲಿದರೆ ಇಡೀ ಸ್ತ್ರೀ ಕುಲಕ್ಕೇ ಮಸಿ ಬಳೆವಂತ ಪರಿಹಾರ ಹೇಳಿದ ಪಾಪ ವೆಂಕಣ್ಣಯ್ಯನ ಹೆಗಲೇರಿ ಕಾಡುತ್ತಿತ್ತು. ಈ ಸಂದಿಗ್ದದಲ್ಲಿ ದಿನಕ್ಕೊಂದು ರೀತಿಯಲ್ಲಿ ಸಮಸ್ಯೆ ಬಗೆಹರಿಸಲು ವೆಂಕಣ್ಣಯ್ಯ ಯೋಚಿಸುತ್ತಿದ್ದರಾದರೂ ಅದನ್ನು ನಿಜವಾಗಿ ಕಾರ್ಯರೂಪಕ್ಕೆ ಇಳಿಸಲು ಅವರಲ್ಲಿ ಧೈರ್ಯ ಸಾಲುತ್ತಿರಲಿಲ್ಲ. ಬದುಕೇ ಹೀಗಲ್ಲವೇ? ಅದೇನು ಪರಿಹಾರವನ್ನು ದೃಷ್ಟಿಯಲ್ಲಿಟ್ಟುಕೊಂಡೇ ಶುರುವಾಗುತ್ತವೇನು? ಬದುಕನ್ನು ಕಟ್ಟುತ್ತ ಕಟ್ಟುತ್ತ ದಾರಿ ಕಂಡುಕೊಳ್ಳುತ್ತ ಸಾಗಬೇಕು. ಒಳ್ಳೇ ಪೇಚಿನಲ್ಲಿ ಸಿಕ್ಕಿಬಿಟ್ಟೆನಲ್ಲ?ಎಂದುಕೊಂಡರು. ಹಾಗಂತ ಅಂತ್ಯದಲ್ಲಾದರೂಸಮಸ್ಯೆಗೆ ಒಂದು ಒಳ್ಳೆಯ ಪರಿಹಾರ ಇಲ್ಲದಿದ್ದರೆ ಏನು ಚೆನ್ನಾಗಿರುತ್ತದೆ? ವೆಂಕಣ್ಣಯ್ಯ ಐವತ್ತನೇ ವಯಸ್ಸಿನಲ್ಲಿ ಹೊಸದಾಗಿ ಕಥೆ ಬರೆಯಲು ಶುರುಮಾಡಿದ್ದು ತಾನೇ? ಅದೂ ಮೊದಲ ಕಥೆ! ———- ರಕ್ಷಣೆ-ಭಕ್ಷಣೆ ಯಾಕೋ ಬಟ್ಟೆಚೀಲ ವಾಪಸ್ತಂದೆ? ಹೋಗೋದ್ರೊಳಗೆ ತುಂಕೂರಿಗೆ ಕರ್ಕೊಂಡೋಗ್ಬಿಟ್ಟಿದ್ರು… ಅಯ್ಯೋ ಹಾಕ್ಕೊಳ್ಳೋಕೆ ಒಂದುಬಟ್ಟೆಇಲ್ಲ, ಕೈಯಲ್ಲೊಂದು ಕಾಸಿರ್ಲಿಲ್ಲ..ಈಗೇನ್ಮಾಡೋದು? ಅದಿರ್ಲಿ..ಈಗನಮ್ಮನ್ನೂ ಚೆಕ್ಮಾಡೋಕೆ ಬರ್ತಾರೆ ಅನ್ನಿಸುತ್ತೆ. ನಾವೇನ್ಮಾಡಿದ್ದೀವಿ ಅಂತ? ಜೊತೇಲಿದ್ವಲ್ಲಅದಕ್ಕೆ… ಮನೇಸುತ್ತ ತಗಡು ಹೊಡೀಬಹುದು.. ಯಾಕೆ ?ತಗಡುಹೊಡಿದ್ರೆ ..ಏನಾಗುತ್ತೆ? ನೋಟೀಸೂ ಅಂಟಿಸಬಹುದು.. ನಂದೀಶ…ಅವೆಲ್ಲ ಯಾಕೇಂತ ಹೇಳೋ? ಯಾರಿಗ್ಗೊತ್ತು…ಸಾಬರೇನಾದ್ರೂ ಆಗಿದ್ರೆಇಬ್ಬರುಪೋಲೀಸರ್ನುಕಾವಲುಹಾಕ್ತಿದ್ರುಗೊತ್ತಾ?…ಇಲ್ದಿದ್ರೆ ಅವರು ತಪ್ಪಿಸ್ಕೊಂಡು ಓಡಾಡ್ತಾರಂತೆ… ನಾವು ಹಂಗ್ಮಾಡಲ್ಲ ಅಂತ ಬರಕೊಟ್ರೆ?ನಮ್ಮನ್ನೆಲ್ಲ ಕೂಡಾಕಿದ್ರೆ ಅಮ್ಮಂಗ್ ಬಟ್ಟೆ ಕೊಡೋರ್ಯಾರು? ನಿಮ್ಮಜ್ಜಿಗೆ ಫೋನ್ ಮಾಡಕ್ಕೂ ಬರಲ್ವಲ್ಲೋ?ಎಷ್ಟು ಹೆದರ್ಕೊಂಡಿರತ್ತೋ… ಜ್ವರ -ಕೆಮ್ಮು ಅಂತ ಕರ್ಕೊಂಡು ಹೋಗಿದ್ದೇ ತಪ್ಪಾಯ್ತು… ಕೈಕಾಲೇ ಆಡ್ತಿಲ್ಲ ಕಣೋ… ಒಂದೇ ಸಮನೆ ಅತ್ತಳು ಸುಭದ್ರ. –ಮರುದಿನ- ಸುಭದ್ರ-ಅಯ್ಯೋ …..ಪೋಲೀಸ್ರು.. ಈಗ್ನಮ್ಮನ್ನೂ ಕರ್ಕೊಂಡೋಗ್ತಾರೇನೋ?… ಪೋಲಿಸ್ರು-ಅಮ್ಮಾ….. ಅದೇನಂದ್ರೇ.. ಆಸ್ಪತ್ರೇಲಿ ನಿಮ್ಮವ್ವ..ಕೊರೋನಾ ಮಾರಿಗ್ ಹೆದರ್ಕೊಂಡು ಉಟ್ಕೊಂಡಿದ್ದ ಸೀರೇಲೇ ನೇಣು ಹಾಕ್ಕೊಂಡು ಬಿಟ್ಟವ್ರೆ……… ಸ್ವಲ್ಪ ಸಮಾಧಾನ ಮಾಡ್ಕಳಿ ತಾಯಿ…. ———– ನೊಸ್ಟಾಲ್ಜಿಯ ಮಳೆ ಬಂದು ಬಿಟ್ಟ ಸಂಜೆ,ತಂಪಾದ ಗಾಳೀಲಿ ಸುಟ್ಟ ಮುಸುಕಿದ ಜೋಳದ ವಾಸನೆ…, ಸ್ಟೇಡಿಯಂ ಮೆಟ್ಟಿಲ ಮೇಲೆ ಕೂತು,ಬೆಚ್ಚಗಿನಉಪ್ಪು-ಖಾರ, ಮಸಾಲೆ ಹಚ್ಚಿದ ಮುಸುಕಿನ ಜೋಳನ ಕಚ್ಚಿ, ಕಚ್ಚಿ ಜಗಿದು ತಿನ್ನುತ್ತ ಅದರ ಹಾಲನ್ನು ಚಪ್ಪರಿಸೋದು ಎಂಥ ಮಜಾ… “ ಅದಕ್ಕಿನ್ನ ಮಜಾ ಅಂದ್ರೆ, ಸ್ಕೂಲ್ ಮುಂದೆ ತಳ್ಳೋಗಾಡೀ ರಾಮಕ್ಕ ಅದೆಲ್ಲಿಂದನೋ ತರ್ತಿದ್ದ ಹಸಿರು ಕಿರು ಗಿತ್ತಳೆ ಹಣ್ಣುಗಳು. ಅದನ್ನು ಮಧ್ಯಕ್ಕೆ ಹೋಳು ಮಾಡಿ, ಚೆನ್ನಾಗಿ ಉಪ್ಪು-ಖಾರ ಹಚ್ಚಿ ಕೊಡೋಳು, ಬಾಯಿಗಿಡೋಕೆ ಮುನ್ನವೇ ಚುಳ್ಳಂತ ನಾಲ್ಗೇ ಕೆಳಗೆ ನೀರು ತುಂಬ್ಕೊಳ್ಳೋದು, ಮೊದಲು ಅದನ್ನು ನೆಕ್ಕೋದು, ಆಮೇಲೆ ಅದರ ಹುಳೀ ಸಮೇತ ನಾಲ್ಗೇ ಮೇಲೆ ಹಿಂಡಿಕೊಳ್ಳೋದು.. ಆಮೇಲೆ ಅದರ ತೊಳೆಗಳನ್ನು ಕಚ್ಚಿ, ಕಚ್ಚಿ ತಿನ್ನೋದು…ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಅನ್ನಂಗಿರೋದು ಈಗ ಅವನ್ನು ನೆನಸ್ಕೊಂಡ್ರೆ ಬಾಯಲ್ಲಿ ನೀರು ಬರುತ್ತೆ ಆದ್ರೆ ಉಳಿದಿರೋ ಹಲ್ಲೆಲ್ಲ ಚುಳ್ಳಂತ ನಡುಗಿಬಿಡ್ತವೆ ಬಿಡು ಮಾರಾಯ್ತಿ.. “.ಎಂದ ಶಾಮಣ್ಣ. ಕಟ್ಟಿಸಿಕೊಂಡ ಹಲ್ಲು ಸೆಟ್ಟನ್ನು ಕಟ-ಕಟನೆಂದು ಆಡಿಸಿ ಪಕ-ಪಕನೆ ನಕ್ಕಳು ಪಂಕಜಮ್ಮ. ****************************
ನೂರು ಪದಗಳಮೂರು ಕಥೆಗಳು Read Post »









