ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಥಾಗುಚ್ಛ

ನಡಿ ಕುಂಬಳವೇ ಟರಾ ಪುರಾ

ಕಥೆ ಪ್ರಜ್ಞಾ ಮತ್ತಿಹಳ್ಳಿ             ಇನ್ನೇನು ಈ ಬಸ್ಸು ಇಳಿದಿಳಿದು ಕೆರೆಯೊಳಗೇ ನುಗ್ಗಿ ಬಿಡುತ್ತದೆ ಎಂಬ ಭಾವ ಬಂದು ಮೈ ಜುಂ ಎನ್ನುವಷ್ಟರಲ್ಲಿ ರೊಯ್ಯನೆ ಎಡಕ್ಕೆ ತಿರುಗಿ ದಟ್ಟ ಕಾಡಿನ ಏರಿ ಶುರುವಾಗುತ್ತದೆ. ಅಂದರೆ ಇದರರ್ಥ ಇಳಿಯೂರು ಎಂಬ ಊರು ದಾಟಿತು ಹಾಗೂ ತಲೆಯೂರಿಗೆ ೧೫ ಕಿ.ಮೀ ಉಳಿದಿದೆ ಅಂತ. ಮೂರು ಜನರ ಸೀಟಿನ ಎಡತುದಿಗೆ ಕೂತಿದ್ದ ಬಸವರಾಜ ಎಡಬದಿಯ ಕಂಬಿಯನ್ನು ಗಟ್ಟಿಯಾಗಿ ಹಿಡಿದುಕೊಂಡು ಬೀಳುವುದನ್ನು ತಪ್ಪಿಸಿಕೊಳ್ಳುತ್ತಿದ್ದಾನೆ. ಇಕ್ಕೆಲದ ಎತ್ತೆತ್ತರದ ಮರಗಳು, ಅವುಗಳ ದಟ್ಟ ನೆರಳಿನಲ್ಲಿ ಬಿಸಿಲೇ ಕಾಣದ ಆಕಾಶ, ಬೈತಲೆಯಂಥ ಸಣ್ಣ ದಾರಿಯಷ್ಟೇ ಕಾಣುವ ಸ್ಟಾಪುಗಳು, ಅಲ್ಲಲ್ಲಿಳಿದುಕೊಂಡು ನಿರ್ಭಯವಾಗಿ ಸರಸರ ನಡೆಯುತ್ತ ಮಾಯವಾಗಿಬಿಡುವ ಜನರು. ಒಂದಿಷ್ಟು ಭತ್ತದ ಗದ್ದೆ, ಅಡಿಕೆ-ತೆಂಗಿನ ಮರಗಳಿರುವ ಒಂಟಿ ಮನೆಗೆ ಜನ ಒಂದು ಊರು ಎಂದು ಕರೆಯುವುದು ನಾಲ್ಕೈದು ದನ-ಕರು ಸಾಕಿಕೊಂಡು ೫-೬ ಜನರ ಕುಟುಂಬವೊಂದು ಆರಾಮವಾಗಿ ಸದ್ದಿಲ್ಲದೇ ಬದುಕುವ ರೀತಿ ಇವನ್ನೆಲ್ಲ ಈಗೊಂದು ೫-೬ ತಿಂಗಳಿಂದ ನೋಡುತ್ತಿದ್ದಾನೆ.  ಬೆಳಗಿನಿಂದ ರಾತ್ರಿಯವರೆಗೆ ಬಾಯ್ತುಂಬ ಎಲೆ-ಅಡಿಕೆ ತುಂಬಿಕೊಂಡು ಓಡಾಡುವ ಗಂಡಸರು, ತುರುಬು ಕಟ್ಟಿಕೊಂಡು ಅಬ್ಬಲ್ಲಿಗೆ ದಂಡೆ ಮುಡಿವ ಹೆಂಗಸರು. ಮೊದಮೊದಲು ಅವನಲ್ಲಿ ಭಯ ಹುಟ್ಟಿಸುತ್ತಿತ್ತದ್ದರು. ಪುಳು-ಪುಳು ಕುಣಿಯುವ ಮೀನು ಹಿಡಿದು ಅಡಿಗೆ ಮಾಡುವ ಸಂಗತಿಯೆ  ಅವನಿಗೆ ಎದೆ ಝಲ್ಲೇನ್ನಿಸುವಂತೆ ಮಾಡಿತ್ತು. ಬಿಜಾಪೂರ ಜಿಲ್ಲೆಯ ಬಸವನಬಾಗೇವಾಡಿಯ ಬಸವಣ್ಣನವರು ಹುಟ್ಟಿದೂರಿನಲ್ಲಿ ಹುಟ್ಟಿದ, ಬಿಜಾಪುರವೆಂಬ ಗುಮ್ಮಟಗಳ ಊರಿನಲ್ಲಿ ಓದಿದ, ಈ ಬಸವರಾಜ ಉಳ್ಳಾಗಡ್ಡಿಯೆಂಬ ಸಂಭಾವಿತ ಹುಡುಗ ಅರ್ಥಶಾಸ್ತ್ರದಲ್ಲಿ ಎಂ.ಎ. ಮಾಡುವಾಗ ಡಿಪಾರ್ಟಮೆಂಟಿನ ಹುಡುಗರ ಜೊತೆ ಟೂರು ಹೋಗುವಾಗ ತಲೆಯೂರಿನ ಮಾರಿಕಾಂಬಾ ದೇವಸ್ಥಾನವನ್ನು ನೋಡಿದ್ದ. ತನ್ನ ಕುಟುಂಬದ ಸದಸ್ಯರು ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿಯ ದರ್ಶನಕ್ಕೆ  ಕರೆದೊಯ್ಯುವಾಗ, ಇಲ್ಲಿಯ ಬಸ್ ಸ್ಟಾö್ಯಂಡಿನಲ್ಲಿಳಿದು, ಕೆ.ಎಸ್.ಆರ್.ಟಿ.ಸಿ., ಕ್ಯಾಂಟೀನಲ್ಲಿ ಚಾ ಕುಡಿದಿದ್ದ. ಅಷ್ಟು ಬಿಟ್ಟರೆ, ಅವನಿಗೆ ಈ ಊರು ಅಪರಿಚಿತವೆ. ನೆಟ್ ಪರೀಕ್ಷೆ ರಿಝಲ್ಟ ಬರುತ್ತಿದ್ದಂತೆ, ಕೆ.ಪಿ.ಎಸ್.ಸಿ.ಯ ಇಂಟರವ್ಯೂ ನಡೆಸಿ, ಸೆಲೆಕ್ಟ್ ಆದವರಿಗೆ ಪೋಸ್ಟಿಂಗ್ ಕೊಡುವಾಗ ಕೌನ್ಸೆಲಿಂಗ್ ಮಾಡಿದ್ದರು. ಲಿಸ್ಟಿನಲ್ಲಿ ಮೊದಲು ಹೆಸರಿದ್ದವರೆಲ್ಲ ಬೆಂಗಳೂರು, ಮೈಸೂರು, ಇತ್ಯಾದಿ ಊರುಗಳನ್ನು ಆಯ್ದುಕೊಂಡಿದ್ದರು. ಬಸವರಾಜನ ಪಾಳಿ ಬರುವಷ್ಟರಲ್ಲಿ ಇದ್ದವೆಲ್ಲ ಸಣ್ಣ-ಸಣ್ಣ ಊರುಗಳು, ಶಿವಮೊಗ್ಗ, ಉಡುಪಿ ಜಿಲ್ಲೆಯ ಊರುಗಳನ್ನು ಆಯ್ಕೆ ಮಾಡಿಕೊಳ್ಳಲು ಮನಸ್ಸು ಬರದೇ, ಇದ್ದುದರಲ್ಲೇ ವಿಜಾಪೂರ, ಬಾಗಲಕೋಟೆಗಳಿಂದ ಡೈರೆಕ್ಟ್ ಬಸ್ಸು ಇರುವ ಇದೇ ಅನುಕೂಲ ಎನ್ನಿಸಿತು. ಆದರೆ, ಕೆ.ಪಿ.ಎಸ್.ಸಿ., ಬಿಲ್ಡಿಂಗ್‌ನ ಹೊರಗಿನ ಕ್ಯಾಂಟೀನಿನಲ್ಲಿ ಚಾ ಕುಡಿಯುತ್ತ ನಿಂತಾಗ, ಯಾರೋ ಕುಮಟಾ ಕಡೆ ಹುಡುಗಿಯಂತೆ ಕಣ್ಣಲ್ಲಿ ನೀರು ತುಂಬಿಕೊAಡು ಮತ್ತೊಬ್ಬರಿಗೆ ಹೇಳುತ್ತಿದ್ದಳು. “ಇದೇ, ಇವ್ರೆಯಾ ತಲೆಯೂರು ತಗೊಂಬಿಟ್ರು. ಇವ್ರ ನೆಕ್ಸಟ್ ನಂದೇ ಇತ್ತು. ಸಾಯ್ಲಿ ತಪ್ಪೋಯ್ತು ಒಂದ್ ನಿಮಿಷ್ದಲ್ಲಿ ಕೈ ಬಿಟ್ ಹೋಯ್ತು”.  ಕುಡಿಯುತ್ತಿರುವ ಚಾ ನೆತ್ತಿಗೇರಿದಂತಾಗಿ, ಕೆಮ್ಮು ಬಂದಿತ್ತು. ಜೊತೆಗಿದ್ದ ವೀರೇಶ ಬಳಿಗಾರ ಅವಳನ್ನೇ ನೇರವಾಗಿ ಕೇಳಿಬಿಟ್ಟ. “ಯಾಕ್ರಿ ಮೇಡಮ್ಮರೆ ಏನಾಯ್ತ್ರೀ?  ಯಾರಿಗ್ಯಾವ್ದು ಬೇಕೋ ತಗೋತರ‍್ರಿ, ನಿಮ್ಗೇನ್ ಮಾಡ್ಯಾನಿಂವ?” “ಅಯ್ಯೋ ನಾ ಎಂತ ಹೇಳ್ದೆ? ನಮಗೆ ಲೇಡಿಸಿಗೆ ದೂರ ಹೋಗೋದು ತ್ರಾಸಲ.  ನೀವು ಜಂಟ್ಸ್ ಬೇಕಾರ ಹೋಗ್ಬಹ್ದು .ಕುಮ್ಟಾ, ಇಲ್ಲದಿದ್ರೆ ತಲೆಯೂರು ಸಿಗ್ತದೆ ಹೇಳಿ ಆಸೆ ಇತ್ತು” ಎಂದೇನೋ ಗಳಗಳ ಹೇಳಿದಳು. “ಯಾವ್ಯಾವ ಊರಿನ ನೀರಿನ ಋಣ ಯಾರ‍್ಯಾರಿಗೆ ಇರ್ತೈತಿ ಹೇಳಾಕ ಬರೂದಿಲ್ರಿ. ಇಷ್ಟಕ್ಕೂ ಪ್ರತಿವರ್ಷ ಟ್ರಾನ್ಸಫರ್ ಮಾಡಿ ಒಗಿತಿರ‍್ತಾರ. ನೀವು ಮುಂದಿನ್ವರ್ಷ ಟ್ರಾನ್ಸಫರ್ ಕೌನ್ಸೆಲಿಂಗ್‌ಗೆ ರ‍್ರಿ. ಎಕ್ಸಚೇಂಜ್ ಮಾಡಿಕೊಳ್ಳೋಣ”, ವೀರೇಶ ಅಕ್ಕಿಆಲೂರು ತೆಗೆದುಕೊಂಡಿದ್ದ. ಅದೊಂದು ಸಣ್ಣ ಹಳ್ಳಿ. ತಾನು ಪ್ರತಿ ಶನಿವಾರ ತಲೆಯೂರಿಗೆ ಬಂದುಬಿಡುತ್ತೇನೆ ಎಂದು ಹೇಳಿದ್ದ.             ಬಸವರಾಜ ಜಾಯ್ನ ಆಗಲು ಬಂದಾಗ ಅಕ್ಟೋಬರ್ ತಿಂಗಳು. ಸೆಮಿಸ್ಟರ್ ಮುಗಿಯಲು ಇನ್ನೊಂದೇ ತಿಂಗಳು ಬಾಕಿ ಇತ್ತು.  ಎಂ.ಎ. ಮಾಡುವಾಗ ಹಾಸ್ಟೇಲಲ್ಲಿ ಪರಿಚಯವಿದ್ದ ರಾಮಚಂದ್ರ ನಾಯ್ಕ ಸಮಾಜಶಾಸ್ತ್ರಕ್ಕೆ ಜಾಯ್ನ ಆಗಲು ಬಂದಿದ್ದ. ಅವನು ಭಟ್ಕಳದವನಾದ ಕಾರಣ, ಊರಿನ ಪರಿಚಯ ಚೆನ್ನಾಗೇ ಇತ್ತು. ಅವನು ತಾನು ಮನೆ ಬಾಡಿಗೆಗೆ ಹಿಡಿಯುತ್ತೇನೆ, ನೀನು ಶೇರ್ ಮಾಡು ಎಂದಾಗ ಬಸವರಾಜನಿಗೆ ಅನುಕೂಲವೇ ಆಯ್ತು. ದೊಡ್ಡ ಕಂಪೌಂಡಿನ ಮಹಡಿ ಮನೆಯ ಕೆಳಗಿನ ಭಾಗದಲ್ಲಿ ಮಾಲಕರು ಇದ್ದರು. ಮೇಲ್ಬಾಗದ ಮೂರು ರೂಮುಗಳ ಮನೆ ಇವ್ರದ್ದು. ಮಾಲಕ ವಿಶ್ವನಾಥ ಕಿಣಿಯದು ಪೇಟೆಯಲ್ಲಿ ಅಂಗಡಿ ಇತ್ತು. ಹೆಂಡತಿ ದೊಡ್ಡ ಧ್ವನಿಯ ಜೋರುಮಾತಿನ ಸಂಧ್ಯಾಬಾಯಿ. ಮಕ್ಕಳು ಹುಬ್ಬಳ್ಳಿಯಲ್ಲಿ ಇಂಜನಿಯರಿಂಗ್ ಓದುತ್ತಿದ್ದರು. ಜನಿವಾರ ಹಾಕಿಕೊಂಡು ಸಂಧ್ಯಾವಂದನೆ ಮಾಡುವ ಕಿಣಿ ಮೀನು ತಿನ್ನುವುದು ನೋಡಿ ಬಸವರಾಜ ಕಕ್ಕಾಬಿಕ್ಕಿಯಾಗಿದ್ದ.  ಅವರು ಸಾರಸ್ವತ ಬ್ರಾಹ್ಮಣರೆಂದೂ, ಕೊಂಕಣಿ ಮಾತಾಡುತ್ತಾರೆ ಹಾಗೂ ಮತ್ಸ್ಯಾಹಾರ ಸೇವಿಸುತ್ತಾರೆಂದೂ ರಾಮಚಂದ್ರನಾಯ್ಕ ವಿವರಣೆಯಿತ್ತಾಗ, ಬಸವರಾಜ ತಲೆಯಾಡಿಸಿದ. ಕೊಂಕಣಿ ಮಾತೃಭಾಷೆಯ ಕಿಣಿ ದಂಪತಿಗಳು ರಾಗವಾಗಿ ಮಾತನಾಡುವ ಕನ್ನಡ ಇವನಿಗೆ ಅರ್ಥವೇ ಆಗುತ್ತಿರಲಿಲ್ಲ. ಒಂದು ಸಲ ಸಂಧ್ಯಾ ಮನೆ ಬಾಗಿಲ ಮೆಟ್ಟಿಲ ಮೇಲೆ ಕುಳಿತು ಚಾ ಕುಡಿಯುತ್ತಿರುವಾಗ ಕಾಲೇಜು ಮುಗಿಸಿ ಬಂದ ರಾಮಚಂದ್ರ ಬಸವರಾಜರಿಗೆ “ಚಾ ಕುಡಿವಾ ರ‍್ರಿ” ಎಂದು ಕರೆದಳು. ಮುಖ ತೊಳೆದು ಕುಡಿದರಾಯ್ತು ಎಂದು ಬಸವರಾಜ “ಹಿಂದಾಗಡೆ ಕುಡಿತೀನ್ರಿ ಅಕ್ಕಾರೆ” ಎಂದ. “ಇಶ್ಯಿಶ್ಯಿ ನಾವು ಜಾತಿಬೇಧ ಮಾಡೋದಿಲ್ಲ. ಹಿತ್ಲಲ್ಲೆಲ್ಲ ಕೂತ್ಕೊಂಡು ಕುಡ್ಯುದೆಂತಕೆ, ಇಲ್ಲೇ ಕುಡೀರಿ” ಎಂದಳು.  ಬಸವರಾಜನ ಭಾಷೆಯನ್ನು ಕೆಲಮಟ್ಟಿಗೆ ಬಲ್ಲ ರಾಮಚಂದ್ರ ಹಿಂದಾಗಡೆ ಅಂದ್ರೆ ಆಮೇಲೆ ಅಂತ ಎಂದು ಕನ್ನಡವನ್ನು ಕನ್ನಡಕ್ಕೆ ಭಾಷಾಂತರ ಮಾಡಬೇಕಾಯ್ತು. ರಾಮಚಂದ್ರನ ಅನ್ನ, ಕರಾವಳಿಯ ತೆಂಗಿನ ಕಾಯಿ, ಮಸಾಲೆ ಸಾರಿನ ಅಡುಗೆ, ಬಸವರಾಜನಿಗೆ ರೂಢಿಸಲಿಲ್ಲ. ಊರಿಂದ ದೊಡ್ಡ ಗೋಣೀಚೀಲದಲ್ಲಿ ಕಟಕರೊಟ್ಟಿ, ಚಟ್ನಿಪುಡಿ, ತಂದಿಟ್ಟುಕೊಳ್ಳುತ್ತಿದ್ದ.  ಯಾವುದಾದರೂ ತರಕಾರಿಯ ಪಲ್ಯ ಅಥವಾ ಸಾಂಬಾರ್ ಮಾಡಿಕೊಂಡು ಅನ್ನ-ರೊಟ್ಟಿಗಳ ಜೊತೆ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ. ಬೆಳಗಿನ ತಿಂಡಿಗೆ ರಾಮಚಂದ್ರ ದೋಸೆ-ಇಡ್ಲಿ ಮಾಡುವುದು ಮಾತ್ರ ಬಸವರಾಜನಿಗೆ ಬಹಳ ಇಷ್ಟವಾಗುತ್ತಿತ್ತು. “ಮುಂಜಾನೆ ನಸಿಕ್ಲೆ ನಾಷ್ಟಾ ಮಾಡ್ತೀರಿ. ನೋಡಪ್ ನೀವೆಲ್ಲ. ನಮ್ಮೂರಾಗೆ ಬರೇ ಚಾ ಕುಡ್ದು ಮಂದಿ ಅಡ್ಡಾಡತೇವಿ. ಒಂದು ತುತ್ತು ಉಪ್ಪಿಟ್ಟು ಇಲ್ಲಾ, ಚುಮ್ಮರಿ ಒಗ್ಗರಣಿ ಕಾಣ್ಬೇಕಂದ್ರೆ ಹತ್ತು ಹೊಡೀತೇತಲೆ. ಅದು ಹ್ಯಾಂಗ ಏಳಕ್ಕೆ ತಿಂತಿರೋ ಮಾರಾಯ” ಎಂದು ಆಶ್ಚರ್ಯ ಪಡುತ್ತಿದ್ದ. ಎಂಟು ಗಂಟೆಯೆಂದರೆ, ಅಕ್ಕ-ಪಕ್ಕದ ಹೆಂಗಸರು ಒಬ್ಬರಿಗೊಬ್ಬರು “ಆಸ್ರಿ ಕುಡಿದ್ರಿ?” ಎಂದು ಕೇಳುತ್ತ ಚೊಂಯ್ ಚೊಂಯ್ ಎಂದು ದೋಸೆ ಎರೆವ ಸದ್ದಿನ ಹಿನ್ನೆಲೆ ಸಂಗೀತದೊಂದಿಗೆ ಓಡಾಡುತ್ತಿದ್ದರು.             ಬಸ್ಸಾಗಲೇ ತಲೆಯೂರಿನ ಬಸ್ ಸ್ಟಾö್ಯಂಡಲ್ಲಿ ನಿಂತು ಕಂಡಕ್ಟರ್ ಮುಖ ಹೊರಹಾಕಿ “ಡೈರೆಕ್ಟ ಕುಮ್ಟಾ, ಹೊನ್ನಾವರ್, ಭಟ್ಕಳ್ ಯರ‍್ರಿ” ಎಂದು ಕೂಗುತ್ತಿದ್ದ. ಪಕ್ಕದಲ್ಲಿ ಗೊರಕೆ ಹೊಡಿಯುತ್ತ ಮಲಗಿದ್ದ ಮಾವನನ್ನು ಅಲುಗಾಡಿಸಿ ಎಬ್ಬಿಸಿದ ಬಸವರಾಜ “ಏಳೋ ಮಾವಾ  ಊರ‍್ಬಂತು” ಸೀಟಿನ ಕೆಳಗಿನ ರೊಟ್ಟಿ ಚೀಲ, ಮೇಲಿಟ್ಟ ಬ್ಯಾಗುಗಳನ್ನು ತೆಗೆದುಕೊಂಡು ಇಬ್ಬರೂ ಇಳಿದರು. ಅವ್ನೌವ್ನ ಎಂಥಾ ನಿದ್ದೇಲೆ ಬಸು, ಹುಬ್ಬಳ್ಳಿ ದಾಟಿದ್ದೊಂದೇ ಗೊತ್ನೋಡೊ” ಎನ್ನುತ್ತ ಮಾಮಾ ಇಳಿದ. ಈ ಬಾರಿ ಊರಿಗೆ ಹೋದಾಗ ಅಕ್ಕನ ಗಂಡ ಮಲ್ಲಿಕಾರ್ಜುನ ತಾನೂ ಬರುವುದಾಗಿ ಬೆನ್ನು ಹತ್ತಿ ಬಂದಿದ್ದ.  ಬಸವರಾಜನ ಒಬ್ಬಳೇ ಅಕ್ಕ ನೀಲಾಂಬಿಕಾಳನ್ನು ಖಾಸಾ ಸೋದರ ಮಾವ ಮಲ್ಲಿಕಾರ್ಜುನನಿಗೆ ಕೊಟ್ಟಿದ್ದರು. ಬಸವನಬಾಗೇವಾಡಿಯ ಮಗ್ಗುಲಲ್ಲೇ ಇರುವ ನಿಡಗುಂದಿಯಲ್ಲಿ ಹೊಲ-ಮನೆ ಮಾಡಿಕೊಂಡು ಅನುಕೂಲವಾಗಿರುವ ಮಲ್ಕಾಜಿ ಮಾಮಾಗೆ ಹಿರಿಮಗಳು ಅಕ್ಕಮಹಾದೇವಿ.  ಅವಳನ್ನು ವಾಡಿಕೆಯಂತೆ, ತಮ್ಮನಿಗೇ ಕೊಡಬೇಕೆನ್ನುವ ಆಸೆ ನೀಲಕ್ಕನದು. ನೌಕರಿ ಸಿಕ್ಕಿದ್ದೇ ಮದುವೆ ಪ್ರಸ್ತಾಪ ಶುರುವಿಟ್ಟುಕೊಂಡರು. ಆದರೆ, ಅರ್ಥಶಾಸ್ತ್ರದ ಜೊತೆಗೆ ಒಂದಿಷ್ಟು ಸಾಹಿತ್ಯ, ವೈಚಾರಿಕತೆ ಅಂತೆಲ್ಲಾ ಓದುತ್ತ ಬೆಳೆದು ಇದೀಗ ನೌಕರಿಗೆ ಸೇರಿಕೊಂಡ ಬಸವರಾಜ ಉಳ್ಳಾಗಡ್ಡಿಗೆ ಅಕ್ಕನ ಮಗಳನ್ನು ಮದುವೆಯಾಗಲು ಎಳ್ಳಷ್ಟೂ ಮನಸ್ಸಿಲ್ಲದೇ ಒಲ್ಲೆನೆಂದು ಜಗಳ ತೆಗೆದಿದ್ದ. ಮೊದಲೇ ಈ ದೂರದ ಮಲೆನಾಡಿನ ಊರುಗಳನ್ನು ಸರಿಯಾಗಿ ನೋಡಿರದ ಬಾಗೇವಾಡಿಯ ಜನರಿಗೆ ಆತಂಕ ಶುರುವಾಗಿತ್ತು. ತಮ್ಮ ಬಸೂನನ್ನು ಅಲ್ಲಿ ಯಾರಾದರೂ ಬುಟ್ಟಿಗೆ ಹಾಕಿಕೊಂಡಿರುವರೇ, ಹೇಗೆಂದು  ತನಿಖೆ ಮಾಡುವ ಸಲುವಾಗಿ ಬಸೂನ ತಾಯಿ ಗೌರವ್ವ ತಮ್ಮನನ್ನು ಕಳಿಸಿದ್ದಳು. ಆಗಾಗ ಅಲ್ಲಿ-ಇಲ್ಲಿ ಊರು ನೋಡಿ ಬರುವ ಚಟವಿದ್ದ ಮಲ್ಕಾಜಿ ಮಾವ ತನ್ನ ಜೊತೆ ಬರುತ್ತೇನೆಂದಾಗ ಕಾರಣ ಗೊತ್ತಿರದ ಬಸೂ ಸಹಜವೇ ಇರಬೇಕೆಂದುಕೊಂಡು ಒಪ್ಪಿ ಕರೆತಂದಿದ್ದ. ಎರಡು ದಿನದ ರಜೆಗೆ ಊರಿಗೆ ಹೋಗಿದ್ದ ರಾಮಚಂದ್ರನಾಯ್ಕ ಮರುದಿನ ಬರುವವನಿದ್ದ ಕಾರಣ ರೂಮಿಗೆ ಬೀಗ ಹಾಕಿತ್ತು.  ಮೆಟ್ಟಿಲಮೇಲೆ ಕುಳಿತು ಪಕ್ಕದ ಮನೆ ಹೆಂಗಸಿನ ಜೊತೆ ಹರಟುತ್ತಿದ್ದ ಸಂಧ್ಯಾ,“ಏನು ಉಳ್ಳಾಗಡ್ಡಿ ರ‍್ರು, ಯಾರೋ ನೆಂಟ್ರಿಗೆ ಕಕ್ಕೊಂಬಂದಾರಲ್ಲ”ಎಂದಳು. “ಹೌದ್ರಿ ಅಕ್ಕಾರೆ, ಇವ್ರು ನಮ್ಮ ಮಾಮರ‍್ರಿ” ಎಂದ. “ಇನ್ ನಾಳೆ ಬೆಳಿಗ್ಗೇನೆ ನೀರು ಮ್ಯಾಲೇರ‍್ಸೋದು. ಹನಿ ಸಣ್ಣಕೆ ಬಿಟ್ಕಳ್ರಿ ಹಂ” ಎಂದಳು.  “ಯಕ್ಲೆ ಬಸ್ಯಾ ಈ ಊರಾಗೂ ನೀರಿನ ತ್ರಾಸೈತಿ” ಎಂದು ಭಯಂಕರ ಆಶ್ಚರ್ಯದಿಂದ ಕೇಳಿದ ಮಾವನಿಗೆ “ಇಲ್ಲೋ ಮಾರಾಯ ಈ ಮಾಲಕರು ಕೆಟ್ಟ ಜುಗ್ಗ ಅದಾರ. ದಿನಕ್ಕೊಮ್ಮೆ ಮುಂಜಾನೆ ನಳ ಬಿಟ್ಟಾಗ ನೀರು ಏರ‍್ಸತಾರ. ಕರೆಂಟು ಉಳ್ಸಾಕಂತ ಲೈಟು ರ‍್ಸಿ, ಅಂಗಳದಾಗ ಕೂಡೊ ಮಂದಿ ಐತಿ ಬಾ ಇಲ್ಲೆ” ಎಂದು ನಕ್ಕ.             ಅವ್ವ ಮಾಡಿಕೊಟ್ಟ ಮಾಡ್ಲಿ ಉಂಡಿ, ಚಕ್ಕುಲಿಗಳನ್ನು ಸಂಧ್ಯಾಗೆ ಕೊಡಲೆಂದು ಕೆಳಗೆ ಹೋದ.  “ಇದೇನು ರೇತಿ ಕಂಡಾಂಗೆ ಕಾಣ್ತದಲ್ಲ” ಎಂದು ಆಶ್ಚರ್ಯಪಟ್ಟಳು. ಹ್ಹೆ ಹ್ಹೆ ಹ್ಹೆ ಎಂದು ನಕ್ಕು ಮೇಲೆ ಬಂದ.  ರಾಮಚಂದ್ರನ ಫೋನು ಬಂದಾಗ ರೇತಿ ಎಂದರೇನೆಂದು ಕೇಳಿದ. ಅವನು ‘ಮರಳು’ ಅಂದಾಗಲೇ ಅರ್ಥವಾಗಿ ನಗು ಬಂದಿತು. ಮಾವನಿಗೆ ಊರು ತೋರಿಸಲು ಕರಕೊಂಡು ಹೊಂಟ.  ಅವರ ಮನೆಯಿದ್ದ ಅಯ್ಯಪ್ಪ ನಗರದಿಂದ ನಡೆಯುತ್ತ ಕೋಟೆಕರೆಗೆ ಬಂದರು. ಕೆರೆ ಏರಿ ಮೇಲೆ ನಡೆಯುತ್ತ ಹೊರಟಾಗ ಒಂದಿಬ್ಬರು ಹುಡುಗರು ಬಸವರಾಜನಿಗೆ “ನಮಸ್ಕಾರ ಸರ್, ವಾಂಕಿಗು?” ಎಂದು ಮಾತಾಡಿಸಿದರು. “ನಮ್ಮ ಮಾಮಾಗೆ ಊರು ತೋರಿಸ್ಬೇಕು’’ ಎಂದ. ಹಾಗಿದ್ರೆ ಮಾರಿಗುಡಿಗೆ ಹೊಗೋದು ಚೊಲೊ. ಈ ಬದಿಗೆ ಗಣಪತಿ ದೇವಸ್ಥಾನ ಮತ್ತೆಂತ ಉಂಟು ಈ ಊರಲ್ಲಿ.  ಆ ಹುಡುಗರಿಗೆ ತಮ್ಮ ಊರು ಎಂದರೆ, ಮಹಾಬೋರು. ಎರಡು ದೇವಸ್ಥಾನ-ಕೆರೆ ಇರುವ ಈ ಊರಲ್ಲಿ ಎಂತಾ ನೋಡ್ತಾರೆ ಅಂತ ಆಶ್ಚರ್ಯಪಟ್ಟರು. ಬನವಾಸಿಗೆ, ಜೋಗಕ್ಕೆ ಆಥ್ವಾ ಸಹಸ್ರಲಿಂಗಕ್ಕೆ ಹೋಗ್ಬಹುದು ಸರ್ ಎಂದ ಒಬ್ಬ. ಆಯ್ತು ಎಂದು ತಲೆಯಾಡಿಸುತ್ತ ಹೊರಟರು. “ಇವ್ರು ಹ್ಯಾಂಗ್ ಮಾತಾಡ್ತರ‍್ಲೆ, ಮಾಸ್ತರು ಅಂತ ಕಿಮ್ಮತ್ತಿಲ್ಲೇನಲ್ಲೆ? ರಿ ಹಚ್ಚಂಗಿಲ್ಲಲ್ಲ?” ಸಿಟ್ಟಿನಿಂದ ಕೇಳಿದ ಮಾವನಿಗೆ, “ನಂಗೂ ಹೀಗ ಅಗಿತ್ತಪ್ಪ ಶುರುವಿಗೆ. ಆಮೇಲೆ ಗೊತ್ತಾಯ್ತು.  ಇಲ್ಲಿ ಮಂದಿ ಕನ್ನಡ ಬ್ಯಾರೇನೇ ಐತಿ. ಯಾರಿಗೂ ರಿ ಹಚ್ಚಂಗಿಲ್ಲ. “ವಿಚಿತ್ರ ಊರು ಬಿಡಪ” ಎಂದು ಮಲ್ಕಾಜಿ ಪಾನಂಗಡಿ ಕಡೆ ನಡೆದು ಸಿಗರೇಟು ಹಚ್ಚಿಕೊಂಡ. ಬಾಳೆಹಣ್ಣು ಕೊಂಡ ಬಸೂ ಸಿಪ್ಪೆ ಸುಲಿದು ತಿನ್ನತೊಡಗಿದ.  “ಅರೆ ಸರ್, ನೀವು ಊರಿಂದ ಯಾವಾಗ ಬಂದ್ರಿ?” ಧ್ವನಿ ಕೇಳಿ ತಿರುಗಿದರೆ, ಫ್ಯೆನಲ್ ಬಿ.ಎ. ಹುಡುಗಿ ವರದಾ. ಇಡೀ ಕಾಲೇಜಿನಲ್ಲೇ ಹೆಚ್ಚು ಮಾತಾಡುವ ಐದೂ ಕಾಲಡಿ ಎತ್ತರದ ಕಟ್ಟುಮಸ್ತಾದ ಹುಡುಗಿ. ಆಟ-ಭಾಷಣ-ರಂಗೋಲಿ-ಡ್ಯಾನ್ಸು ಎಲ್ಲಾ ಸ್ಫರ್ಧೆಗಳಲ್ಲೂ ಬಹುಮಾನ ಗಳಿಸುತ್ತ ಉಪನ್ಯಾಸಕರ ಮುಖ ಕಂಡಾಗಲೊಮ್ಮೆ “ಇಂಟರ‍್ನಲ್ಸಗೆ ಇಪ್ಪತ್ತಕ್ಕೆ ಇಪ್ಪತ್ತು ಕೊಡ್ಬೇಕು ಹಂ ಈ ಸಲ ನಾವು ಫ್ಯೆನಲ್ ಇಯರ್. ಜೀವನದ ಪ್ರಶ್ನೆ ಮತ್ತೆ” ಎಂದು ತಾಕೀತು ಮಾಡುತ್ತ ತಿರುಗುತ್ತಿದ್ದಳು. ಹಾಂಗಂತ ಅಭ್ಯಾಸದಲ್ಲಿ ಅವಳು ತೀರಾ ಸಾಧಾರಣವಾದ ಅಂಕ ಪಡೆಯುವ ಹುಡುಗಿ. ಅವಳ ಭಯಕ್ಕೆ ಉಪನ್ಯಾಸಕರು ಅಂಕ ಕೊಡಬೇಕಾಗಿತ್ತು. ತೀರಾ ಕಟ್ಟುನಿಟ್ಟಿನ ಕಾಮತ್

ನಡಿ ಕುಂಬಳವೇ ಟರಾ ಪುರಾ Read Post »

ಕಥಾಗುಚ್ಛ

ಉದಾಹರಣೆ

ಕಥೆ ಮಧುರಾ ಕರ್ಣಮ್ ಎಲ್ಲ ಸರಿ ಇದ್ದವರು ಸುಮ್ಮನಿರಲಾಗದೇ ಮೈಮೇಲೆ ಇರುವೆ ಬಿಟ್ಕೊಂಡು ತುರಸ್ಕೋತಾರಂತೆ. ಹಾಗಾಗಿದೆ ನನ್ನ ಕತೆ. ನೀವು ಹೇಳಿದ್ರೆ ನಂಬ್ತೀರೋ ಇಲ್ಲವೋ, ಜನಕ್ಕೆ ನೂರೆಂಟು ತಾಪತ್ರಯಗಳು. ವೃದ್ಧರಿಗಂತೂ ಸಾವಿರದೆಂಟಂದ್ರೂ ಪರವಾಗಿಲ್ಲ. ಅಪರೂಪಕ್ಕೆ ನನಗೆ ತೊಂದರೆಗಳೇ ಇಲ್ಲದಂತಿದ್ದೆ. ‘ತೊಂದರೆಗಳು ನಾವು ನೋಡುವ ದೃಷ್ಟಿಯಲ್ಲಿರುತ್ತವೆ ಬಿಡಿ. ಆದ್ರೂನೂ ನನಗೆ ಒಂದೇ ಒಂದು ಕೊರತೆ ಅನಿಸಿದ್ದು ನನ್ನ ಪತ್ನಿ ಜಾನ್ಹವಿ, ಜಾನೂ ಇಲ್ಲದ್ದು. ಕೈಹಿಡಿದವಳು ಕೈಬಿಟ್ಟು ನಡೆದು ಆಗಲೇ ಹತ್ತು ವರ್ಷಗಳಾಗಿದ್ದವು. ಅದನ್ನು ಬಿಟ್ಟರೆ ಮೂರು ಜನ ಮಕ್ಕಳು ತಮ್ಮ ಪತ್ನಿಯರು, ಮಕ್ಕಳೊಂದಿಗೆ ಆರಾಮವಾಗಿದ್ದಾರೆ. ಮುವರೂ ಸಾಫ್ಟವೇರೇ. ಹಿರಿಯವ ಮುಕುಲ್ ಕಂಪನಿಯೊಂದರಲ್ಲಿ ಎ.ವಿ.ಪಿ. ಆಗಿದ್ದಾನೆ. ಎರಡನೆಯವ ನಕುಲ್ ಸಾಫ್ಟವೇರ್ ಜೊತೇನೆ ಅಮೆರಿಕಾ ಸೇರಿದ್ದಾನೆ. ಕೊನೆಯವ ಬಕುಲ್ ಮುಂಬಯಿ ಸೇರಿಕೊಂಡಿದ್ದಾನೆ. ಸೊಸೆಯಂದಿರು ಮೂವರು ಚಿಕ್ಕ ಪುಟ್ಟ ಭಿನ್ನಾಭಿಪ್ರಾಯಗಳನ್ನು ಬಿಟ್ಟರೆ ಒಳ್ಳೆಯವರೇ. ನನ್ನ ತಂಟೆಗೇನೂ ಬರುವದಿಲ್ಲ. ನಾನು ಎಂದಿಗೂ ಅವರು ಧರಿಸುವ ಬಟ್ಟೆ, ಮಾಡುವ ಖರ್ಚು ಶಾಪಿಂಗ್ಗಳ ಉಸಾಬರಿ ಮಾಡುವದಿಲ್ಲ.             ಎಲ್ಲೋ ಹುಟ್ಟಿ ಎಲ್ಲೋ ಹರಿದು ಎಲ್ಲೋ ಸೇರುವಂತೆ, ಧಾರವಾಡದಲ್ಲಿ ಹುಟ್ಟಿ ಬೆಳೆದು ಕರ್ನಾಟಕ ಕಾಲೇಜಿಗೆ ಮಣ್ಣು ಹೊತ್ತು ಪೋಸ್ಟಲ್ ಡಿಪಾರ್ಟಮೆಂಟಿಗೆ ಸೇರಿದ್ದೆ. ಮಕ್ಕಳ ಓದಿಗೆಂದು ಪುಣೆಗೆ ಬಂದವರು ಅಲ್ಲೇ ನೆಲೆ ನಿಂತೆವು. ಜೀವನವೂ ನಿಧಾನವಾಗಿ ಪುಣೇರಿ ಧಾಟಿಯಲ್ಲೇ ಬದಲಾಗತೊಡಗಿತ್ತು. ಅವಶ್ಯಕ ವಿಷಯಗಳ ಬಗ್ಗೆ ಮಾತ್ರ ಮಾತು, ಚರ್ಚೆ ಇತ್ಯಾದಿ. ಮಕ್ಕಳು ತಮ್ಮ ಆಸಕ್ತಿಯ ಕ್ಷೇತ್ರ ಆರಿಸಿಕೊಂಡರು. ಹಾಗೇ ಪತ್ನಿಯರನ್ನೂ. ಒಂದು ರೀತಿಯಲ್ಲಿ ಒಳ್ಳೆಯದೇ ಆಯಿತೆಂದಳು ಜಾನ್ಹವಿ. ಯಾವಾಗಲೋ ಒಮ್ಮೆ ಹೋಗಿ ಬರುತ್ತಿದ್ದ ಧಾರವಾಡದ ನಂಟು ಪೂರ್ತಾ ಕಡಿಮೆಯಾಯಿತು.             ಲಕ್ಷ್ಮಿ ರೋಡಿನ ಈ ಚಾಳದಲ್ಲಿ ನಲವತ್ತು ವರ್ಷಗಳ ಹಿಂದೆ ನಾವು ಹೊಸದಾಗಿ ಬಂದಾಗ ವಾಸಿಸಲಾರಂಭಿಸಿದ ಮನೆಯಲ್ಲೇ ಇಂದಿಗೂ ನಮ್ಮ ವಾಸ. ಹಳೆಯ ಮನೆಗಳು. ಅರವತ್ತು ರೂಪಾಯಿಗಳ ಬಾಡಿಗೆ. ಆಗಲೋ ಈಗಲೋ ಎನ್ನುವಂತಿದ್ದರೂ ಇನ್ನೂ ಏನೂ ಆಗಿಲ್ಲ. ನನ್ನ ಹಣೆಬರಹದಂತೆ ಗಟ್ಟಿಮುಟ್ಟಾಗಿವೆ. ಹಿಂದೆಯೇ ತುಳಸಿ ಬಾಗ. ಪುಣೆಯ ಖ್ಯಾತ ಮಾರುಕಟ್ಟೆ. ಅಲ್ಲಿ ಸದಾ ಸಂತೆಯೇ. ರಾತ್ರಿ ಹನ್ನೊಂದು ಗಂಟೆಯಲ್ಲೂ ಬೇಕಾದ್ದು ಸಿಗುತ್ತಿತ್ತು. ಆದರೆ ವ್ಯಾಪಾರಿಗಳ ಗಲಾಟೆ, ಚಿಕ್ಕ ಚಿಕ್ಕ ಖೋಲಿಗಳ ಮನೆ ಮಕ್ಕಳು ದೊಡ್ಡವರಾದಂತೆ ಅವರಿಗೆ ಹಿಡಿಸಲಿಲ್ಲ. ಮುಕುಲ್ ‘ಸಾರ್ಗೇಟ್’ನಲ್ಲಿ ದೊಡ್ಡ ಮನೆ ಮಾಡಿದ. ನಮ್ಮನ್ನೂ ಅಲ್ಲಿಗೇ ಕರೆದ. ಯಾಕೋ ಚಾಳ ಬಿಟ್ಟು ಹೋಗಲು ಮನಸ್ಸೊಪ್ಪಲಿಲ್ಲ. ಆದರೆ ಮೂರೂ ಮಕ್ಕಳ ಮದುವೆ, ಹೆಂಡಿರ ಸೀಮಂತ, ಮೊಮ್ಮಕ್ಕಳ ಜಾವಳ ಇತ್ಯಾದಿಗಳು ಈ ಗುಬ್ಬಿಗೂಡಿನಲ್ಲೇ ನಡೆದವು. ನಕುಲ್ ಹೆಂಡತಿಯೊಂದಿಗೆ ಅಮೆರಿಕಾ ಸೇರಿದವ ಆಗಾಗ್ಗೆ ಬಂದು ಹೋಗುತ್ತಾನೆ. ಬಕುಲ್ ಮುಂಬೈನಲ್ಲೇ ಓನರ್ಶಿಪ್ ಮೇಲೆ ಫ್ಲಾಟ್ ಕೊಂಡು ಆರಾಮವಾಗಿದ್ದಾನೆ.             ಮೊಮ್ಮಕ್ಕಳನ್ನು ಕಂಡ ಕೆಲವೇ ದಿನಗಳಲ್ಲಿ ಜಾನು ಹೋಗಿಬಿಟ್ಟಳು. ಕುಳಿತವಳು ಎದ್ದು ಹೋದಂತೆ. ಒಂದು ದಿನವೂ ಮಲಗಲಿಲ್ಲ. ‘ಎದೆನೋವು’ ಎಂದವಳು ನನ್ನ ಕೊಂಡಿಯಿಂದ ಕಳಚಿಕೊಂಡುಬಿಟ್ಟಳು. ಆಗಿನಿಂದಲೇ ನಾನು ಒಬ್ಬಂಟಿ. ಹತ್ತು ವರ್ಷಗಳು ಯಾಂತ್ರಿಕವಾಗಿ ಸಾಗಿದ್ದವು. ಶುಗರ್, ಬಿ.ಪಿ. ಇದ್ದರೂ ತೊಂದರೆ ಕೊಡಲಿಲ್ಲ. ನಿತ್ಯ ಒಂದು ಡಯಾನಿಲ್, ಒಂದು ಲೋಸಾರ್ ನುಂಗಿದರಾಯಿತು. ಹೀಗಾಗಿ ಚಾಳಿನ ಮನೆಯನ್ನೇನೂ ಬಿಟ್ಟಿರಲಿಲ್ಲ. ನಿತ್ಯ ಸಾರ್ಗೇಟ್ನಲ್ಲಿರುವ ಮಗನ ಮನೆಗೆ ವಾಕಿಂಗ್ ಮಾಡುತ್ತಾ ಹೋಗಿ ತಿಂಡಿ, ಊಟ ಮುಗಿಸಿ ಒಂದಿಷ್ಟು ಓಡಾಡಿ, ನಿವೃತ್ತರೊಂದಿಗೆ ಕಾಲ ಕಳೆದು, ದೇವಸ್ಥಾನ, ಲೈಬ್ರರಿಗಳಿಗೆ ಭೇಟಿ ನೀಡಿ ರಾತ್ರಿ ಊಟ ಮುಗಿಸಿಯೇ ಮನೆ ಸೇರುವದಿತ್ತು. ಮನೆ ಕೀಲಿ ಹಾಕಿಕೊಂಡು ಮುಂಬೈಗೆ ಹೋದರೆ ಮೂರು ತಿಂಗಳು ಪುಣೆಯತ್ತ ಹೊರಳುತ್ತಿರಲಿಲ್ಲ. ನಕುಲ್ ಎರಡು ಬಾರಿ ಅಮೆರಿಕೆಗೆ ಕರೆಸಿಕೊಂಡಿದ್ದ. ನಯಾಗರ ನೋಡಿಕೊಂಡು ಬಂದಿದ್ದೆ. ಪಾಪ, ಜಾನು ಏನೂ ನೋಡಲಿಲ್ಲ. ಅವಳ ಜೀವನವೆಲ್ಲ ಕತ್ತೆಯಂತೆ ದುಡಿದು ಗಂಡ, ಮಕ್ಕಳಿಗೆ ಚಪಾತಿ, ಪಲ್ಯದ ಡಬ್ಬಿ ಕಟ್ಟಿದ್ದೇ ಬಂತು. ಮಕ್ಕಳ ಶ್ರೀಮಂತಿಕೆ, ಕಾರುಗಳು, ಚಿನ್ನ ಏನೂ ಕಾಣಲಿಲ್ಲ. ಅವಳಿಗೊಂದೆರೆಡು ಒಡವೆ  ಕೂಡ ಕೊಡಿಸಲಾಗಲಿಲ್ಲ. ಹೇಗೆ ಕೊಡಿಸುತ್ತಿದ್ದೆ? ಮೂರು ಮಕ್ಕಳ ಶಿಕ್ಷಣ, ಪುಣೆಯಲ್ಲಿ ಜೀವನ ಎಂದರೆ ಹುಡುಗಾಟವೇ? ಹಾಸಿದರೆ ಹೊದೆಯಲಿಲ್ಲ, ಹೊದ್ದರೆ ಹಾಸಲಿಲ್ಲ ಎಂಬಂಥ ಪರಿಸ್ಥಿತಿ. ಹೊಂದಾಣಿಕೆ ಮಾಡಿಕೊಳ್ಳುತ್ತಲೇ ನಮಗಾಗಿ ಬದುಕು ಕಳೆದುಬಿಟ್ಟಳು. ಏನೇ ಆದರೂ ನಾವಿಬ್ಬರೂ ಸಂಕಷ್ಟಿಯಂದು ‘ಪರ್ವತಿ’ಯಲ್ಲಿದ್ದ ಗಣಪತಿಯ ದರ್ಶನ ತಪ್ಪಿಸುತ್ತಿರಲಿಲ್ಲ. ಇಬ್ಬರೂ ಸೇರಿ ದರ್ಶನ ಮಾಡಿಕೊಂಡು ಎದುರಿನ ಹೊಟೆಲ್ನಲ್ಲಿ ಸಂಕಷ್ಟಿಯ ಸ್ಪೆಶಲ್ ಸಾಬೂದಾಣೆಯ ವಡೆ, ಬಟಾಟೆಯ ಹಪ್ಪಳ ತಿಂದು ಬರುತ್ತಿದ್ದೆವು. ಈಗ ಯಾಂತ್ರಿಕವಾಗಿ ಒಬ್ಬನೇ ಹೋಗುತ್ತೆನೆ.             ಆ ಬಾರಿ ಅಂಗಾರಕ ಸಂಕಷ್ಟಿ ಬೇರೆ. ಪರ್ವತಿಯಲ್ಲಿ ಗಣಪತಿಯ ದರ್ಶನಕ್ಕೆ ಉದ್ದಾನುದ್ದ ಸಾಲು. ಸರತಿಯ ಸಾಲಿನಲ್ಲಿ ಯಾವುದೋ ಪರಿಚಿತ ಮುಖ ಕಂಡಂತಾಯಿತು. ನನ್ನಿಂದ ಅನತಿ ದೂರದಲ್ಲೇ. ತಲೆ ಕೆರೆದುಕೊಂಡು ಯೋಚಿಸಿದಾಗ ಚಿತ್ತಭಿತ್ತಿಯಲ್ಲಿ ಮೀನಾ ಕಂಡುಬಂದಳು. ಹೌದು, ಅವಳೇ ನನ್ನ ತಂಗಿ ಸುರೇಖಾಳ ಗೆಳತಿ ಮೀನಾ. ಸುರೇಖಾ ಮತ್ತು ಮೀನಾ ಆಟ್ರ್ಸ ತೆಗೆದುಕೊಂಡು ಧಾರವಾಡದ ಜೆ.ಎಸ್.ಎಸ್. ಕಾಲೇಜಿಗೆ ಹೋಗುತ್ತಿದ್ದರು. ಆಗ ನನ್ನದೂ ಹದಿ..ಹದಿ..ಹರಯ. ಅವಳ ಜಿಂಕೆಗಂಗಳ ಮೋಡಿಗೆ ಸಿಲುಕಿದ್ದೆ. ತೊಡುತ್ತಿದ್ದ ಲಂಗ, ದಾವಣಿ, ಸೀರೆ ಅವಳ ಮೈಮಾಟಕ್ಕೊಪ್ಪುತ್ತಿದ್ದವು. ಮಾತನಾಡಿಸಬೇಕೆಂಬ ಬಯಕೆ ತೀವ್ರವಾಗಿತ್ತು. ಆದರೆ ಅಪ್ಪನ ಹೆದರಿಕೆ. ಅಲ್ಲದೇ ಸುರೇಖಾ ಸದಾ ಅವಳ ಜೊತೆಯಲ್ಲೇ ಇರುತ್ತಿದ್ದಳು. ಕೊನೆಗೆ ಧಾರವಾಡ ರೆಸ್ಟೋರೆಂಟ್ ಪಕ್ಕ ಅವಳು ಟೈಪಿಂಗ್ ಕ್ಲಾಸಿಗೆ ಹೋಗುವದನ್ನು ತಿಳಿದುಕೊಂಡು ಅಲ್ಲೇ ಹೋಗಿ ಮಾತನಾಡಿಸಿದೆ. ಬಹುಶ: ಅವಳಿಗೂ ನನ್ನ ಮೇಲೆ ಆಕರ್ಷಣೆ ಇತ್ತು. ಹೀಗಾಗಿ ಹೆದರದೇ ಮುಗುಳ್ನಗುತ್ತ ಮಾತನಾಡಿದಳು. ಇಬ್ಬರೂ ಮೊದಲೇ ನಿಶ್ಚಯಿಸಿಕೊಂಡು ಒಮ್ಮೆ ನುಗ್ಗೀಕೇರಿಗೆ ಹೋಗಿದ್ದೆವು. ಹನುಮಪ್ಪನ ದರ್ಶನ ಪಡೆದು ಮುಂದೆ ಮರದ ನೆರಳಿನಲ್ಲಿ ಕುಳಿತು ಪ್ರೇಮ ನಿವೇದನೆ ಮಾಡುತ್ತಾ ಅವಳ ಮುಂಗೈಯನ್ನು ತುಟಿಗೊತ್ತಿಕೊಂಡಿದ್ದೆ. ರೋಮಾಂಚನವಾಗಿತ್ತು. ತಕ್ಷಣ ಅವಳು ನಾಚಿಕೊಂಡು ಕೈ ಕೊಸರಿಕೊಂಡು ಓಡಿಹೋಗಿದ್ದಳು. ಮಾತಿಗೆ ನಿಲುಕದ ಸುಖ. ಜನ್ಮಪೂರ್ತಾ ಮರೆಯಲಾಗಿರಲಿಲ್ಲ.             ಮುಂದೆ ನಾನು ಅಂಚೆ ಇಲಾಖೆ ಸೇರುತ್ತಿದ್ದಂತೆ ಸುರೇಖಾಳ ಮದುವೆಯಾಗಿತ್ತು. ಅವಳ ಮದುವೆಯಲ್ಲಿ ನಮ್ಮಿಬ್ಬರ ಓಡಾಟ ಕಂಡು ಕೆಲವರ ಕಣ್ಣು ಕೆಂಪಾಗಿದ್ದವು. ಮದುವೆ ಗಲಾಟೆ ಮುಗಿಯುತ್ತಿದ್ದಂತೆ ಅಪ್ಪ ಗುಡುಗಿದ್ದರು. ಅವರದು ಬ್ಯಾರೇ ಜಾತಿ. ನಿನಗ ಹುಡುಗಿನ್ನ ನಾವು ನೋಡೇವಿ ಎಂದಿದ್ದರು. ಅತ್ತ ಮೀನಳ ಮನೆಯಲ್ಲೂ ವಾಸನೆ ಬಡಿದಿತ್ತು. ವಾರದೊಳಗೇ ಅವಳ ಮದುವೆ ಗೊತ್ತಾಗಿತ್ತು. ನನಗೊಂದು ಭೇಟಿಗೂ ಅವಕಾಶವಾಗದಂತೆ ಮದುವೆ ಮುಗಿದು ಹೋಯಿತು. ರಾತ್ರಿ ಹೊದಿಕೆಯ ಒಳಗೇ ದು:ಖಿಸಿದ್ದೆ. ಮುಂದೆ ಜಾನು ನನ್ನ ಕೈಹಿಡಿದಳು. ಎಲ್ಲ ತೆರೆಯ ಮೇಲೆ ಸರಿಯುವ ರೀಲಿನಂತೆ. ಹಾಗೇ ಇದ್ದಾಳೆ. ಹೆಚ್ಚೇನೂ ಬದಲಾಗಿಲ್ಲ. ಮುಖದ ಮೇಲಿನೊಂದೆರಡು ಸುಕ್ಕುಗಳು, ಕಣ್ಣಸುತ್ತ ಕಪ್ಪು ವರ್ತುಲ , ನೋವಿನ ಗೆರೆಗಳನ್ನು ಬಿಟ್ಟು.. ..             ಗಣೇಶನ ದರ್ಶನ ಮಾಡಿಕೊಂಡು ಹುಡುಕುತ್ತ ಬಂದಾಗ ದೇವಾಲಯದ ಆವರಣದಲ್ಲೇ ಅವಳು ಪ್ರಸಾದದೊಂದಿಗೆ ಕುಳಿತಿರುವದು ಕಂಡಿತು. ತಟಕ್ಕನೇ ಮುಂದೆ ನಿಂತು  ಹೆಂಗಿದ್ದೀ ಮೀನಾ? ಎಂದೆ. ಅವಳು ಕಣ್ಕಣ್ಣು ಬಿಟ್ಟು ನೋಡಿದಳು. ನನ್ನ ಅರ್ಧ ಸಪಾಟಾದ ತಲೆ ಗುರುತು ಸಿಗಲು ತೊಡಕಾಗಿತ್ತು. ನಂತರ ಪ್ರ..ಕಾ..ಶ ? ಎಂದಳು ಪ್ರಶ್ನಾರ್ಥಕವಾಗಿ. ಹೌದು ಎನ್ನುತ್ತ ಕತ್ತಾಡಿಸಿದೆ. ನೀ ಹೆಂಗೋ ಇಲ್ಲೇ? ಎಂದಳು. ಅಲ್ಲೆ ಹೋಗೋಣ ಎಂದು ಕೊಂಚ ದೂರದ ಪಾರ್ಕ್ ಗೆ ಹೋಗಿ ಕುಳಿತೆವು. ನಾನು ನನ್ನ ಪ್ರವರವನ್ನೆಲ್ಲಾ ಹೇಳಿದೆ. ಕೇಳಿಸಿಕೊಂಡು ತನ್ನದನ್ನೂ ಹೇಳಿದಳು. ಹೇಳ್ಲಿಕ್ಕೆ ಭಾಳೇನಿಲ್ಲೋ ಪ್ರಕಾಶ. ಅವರದು ಸರ್ಕಾರಿ ಆಫೀಸಿನ್ಯಾಗ ಸ್ಟೆನೋ ಕೆಲಸಿತ್ತು. ಎರಡು ಮಕ್ಕಳು. ಮಗಳು ಮದಿವ್ಯಾಗಿ ‘ನಾಸಿಕ’ನ್ಯಾಗಿದ್ದಾಳ. ಮಗ ಭಾಸ್ಕರ ಪುಣೇದಾಗ ಬ್ಯಾರೇ ಮನಿ ಮಾಡಿಕೊಂಡು ಹೆಂಡ್ತಿ ಜೋಡಿ ಇದ್ದಾನ. ಅವರು ಹೋಗಿ ಹತ್ತು ವರ್ಷಾತು. ನಾ ಒಬ್ಬಾಕಿನ ಸಾರ್ಗೇಟ್ ಕಡೆ ಖೋಲಿ ಬಾಡಿಗಿಗೆ ತೊಗೊಂಡಿದ್ದೇನಿ. ಎಂದು ಮೌನವಾದಳು .             ಅಂದು ಮನೆಗೆ ಹಿಂತಿರುಗಿ ಬಂದರೂ ಮೀನಳ ಗುಂಗು ಆವರಿಸಿತ್ತು. ನಾವಿಬ್ಬರೂ ಸಮದು:ಖಿಗಳಿದ್ದಂತೆ. ಹೆಚ್ಚು ಕಡಿಮೆ ಜಾನು ಹೋದಾಗಲೇ ಅವಳ ಗಂಡನೂ ಹೋಗಿದ್ದು. ಅವಳದೂ ಒಂಟಿ ಜೀವ. ರಾತ್ರಿಯೆಲ್ಲ ಏಕೋ ಧಾರವಾಡದ ನುಗ್ಗಿಕೇರಿಯ ನಮ್ಮ ಭೇಟಿಯ ನೆನಪು ಮೂಡಿ ಬಂದಿತ್ತು. ಮುಂದಿನ ದಿನಗಳಲ್ಲಿ ನಾನು ಅನೇಕ ಬಾರಿ ಸಾರ್ಗೇಟ್ನ ಅವಳ ಮನೆಗೆ ಭೇಟಿ ಇತ್ತಿದ್ದೆ. ಅವಳೂ ನನ್ನ ಮನೆಗೆ ಬಂದು ಹೋಗಿದ್ದಳು. ಹಾಗೇ ನಮ್ಮ ಒಡನಾಟ ಬೆಳೆದು ವಾರಕ್ಕೆ ಎರಡು ಮೂರು ಬಾರಿಯಾದರೂ ನಾವು ಭೇಟಿಯಾಗುವಂತಾಯಿತು. ಹೆದರಿಸಲು ಇಲ್ಲೇನು ಅಪ್ಪನ ಕಣ್ಣುಗಳಿರಲಿಲ್ಲ. ಅಮ್ಮನ ನೊಂದ ಮುಖವಿರಲಿಲ್ಲ.             ಈ ಮನಸ್ಸಿನ ಕಥೆಯನ್ನೇ ನಾನು ಹೇಳಿದ್ದು. ಎಷ್ಟು ವಿಚಿತ್ರ ನೋಡಿ. ಹೆಂಡತಿ ಎಂಬ ಚೌಕಟ್ಟಿದ್ದರೆ ಒಳಗೇ ಹರಿದಾಡಿಕೊಂಡಿರುತ್ತದೆ. ಇಲ್ಲವಾದರೆ ಎಲ್ಲೆಲ್ಲೋ ನುಗ್ಗಿ ಒಡ್ಡು ಮೀರಿ ಹರಿಯುತ್ತ.. ..ಮೊರೆಯುತ್ತದೆ. ನನಗೀಗ ಅರವತ್ತೆರಡು ವರ್ಷಗಳು. ಇತ್ತೀಚೆಗೆ ನನಗೆ ‘ಮೀನಳನ್ನೇಕೆ ಮದುವೆಯಾಗಬಾರದು?’ ಎನಿಸಿತ್ತು. ಅಂದು ಅಪ್ಪನ ಹೆದರಿಕೆಯಿಂದ ನಿಂತು ಹೋದ ಪ್ರೀತಿ ಮತ್ತೆ ಮುಂದುವರೆಯಬಹುದಲ್ಲ. ನನ್ನ ಮಕ್ಕಳಂತೂ ಬೇಡವೆನ್ನಲಿಕ್ಕಿಲ್ಲ. ‘ಫಾರ್ವರ್ಡ’ಹುಡುಗರು. ಬೇರೆ ಏನೂ ಜಂಜಡವಿಲ್ಲ. ಇಬ್ಬರೂ ಸಮದು:ಖಿಗಳು. ಜೋಡಿಯಾಗಿ ವೃದ್ಧಾಪ್ಯ ಕಳೆಯಬಹುದು. ಈ ವಯಸ್ಸಿಗೆ ಅವಶ್ಯಕವಾಗಿ ಬೇಕಾಗುವದು ‘ಸಾಂಗತ್ಯ.’ ಇಬ್ಬರೂ ಒಬ್ಬರಿಗೊಬ್ಬರು ಆಸರೆಯಾಗಿ ಹೆಜ್ಜೆ ಹಾಕಿದರೆ.. ಅನೇಕ ‘ರೇ..ಳು ಮನದಲ್ಲಿ ಸುಳಿದವು. ನುಗ್ಗೀಕೇರಿಯ ಆಲದ ಮರದಡಿಯ ಚಿತ್ರ ಮುಂದೋಡಿ ಉತ್ತುಂಗ ಸುಖ ತಂದಿಡುವಂತೆ ಭಾಸವಾಯಿತು. ವಿಷಯ ಪ್ರಸ್ತಾಪಿಸಿದಾಗ ಮೀನಳಿಗೆ ಅಚ್ಚರಿಯೇನೂ ಆಗಿರಲಿಲ್ಲ. ಬದಲಿಗೆ ನಿರೀಕ್ಷಿಸುತ್ತಿದ್ದವಳಂತೆ ಸಮ್ಮತಿಸಿದ್ದಳು. ನನಗ ಇಬ್ಬರು ಮಕ್ಕಳಿದ್ದಾರಂತ ಹೇಳಿದೆನಲ್ಲ ಪ್ರಕಾಶ. ನೀ ಬೇಕಾದರೆ ಅವರಿಬ್ಬರನ್ನೂ ಒಮ್ಮೆ ಭೆಟ್ಟಿ ಮಾಡು ಎಂದಿದ್ದಳು. ನಾನು ಹೀರೋನ ಪೋಸು ಕೊಟ್ಟು ಬೇಕಾಗಿಲ್ಲ ಮೀನಾ. ನಿನ್ನ ಮಕ್ಕಳಂದ್ರ ನನ್ನ ಮಕ್ಕಳಿದ್ದಂಗ. ನನಗಂತೂ ಹೆಣ್ಣು ಮಕ್ಕಳಿಲ್ಲ. ಹಿಂಗರೆ ಒಬ್ಬಾಕಿ ಮಗಳು ಸಿಕ್ಕಂಗಾತು. ಎಂದಿದೆ.್ದ             ನನ್ನ ಮಕ್ಕಳಿಗೆ ವಿಷಯ ತಿಳಿಸಿದಾಗ ಅಚ್ಚರಿಯಿಂದ ಹುಬ್ಬೇರಿಸಿದರು. ಸೊಸೆಯಂದಿರೂ ಆಶ್ಚರ್ಯಚಕಿತರಾದರೂ ಬದಲು ಹೇಳಲಿಲ್ಲ. ಎಲ್ಲರ ಪರವಾಗಿ ಮುಕುಲ್ ಮಾತನಾಡಿದ್ದ. ದಾದಾ, ನಿಮ್ಮ ಇಚ್ಛಾಕ್ಕ ನಾವು ಅಡ್ಡ ಬರಂಗಿಲ್ಲ. ಆದ್ರ ನಮ್ಮವ್ವನ್ನ ನಾವು ಮರೀಲಿಕ್ಕಾಗೂದಿಲ್ಲ… .. ಎಂದಿದ್ದ. ಹೌದಲ್ಲ, ಇಷ್ಟೂ ದಿನಗಳೂ ಮೀನಳ ಭೇಟಿಯಾದಾಗಿನಿಂದ ನನ್ನ ಜಾನ್ಹವಿಯ ನೆನಪೇ ಬರದಷ್ಟು ಮರೆತು ಹೋಗಿದ್ದೆ. ‘ಈ ವಯಸ್ಸಿನಲ್ಲಿ..  ಮದುವೆಯಾಗಿ.. ಜಾನ್ಹವಿಗೇನಾದರೂ ಮೋಸ ಮಾಡುತ್ತಿದ್ದೇನಾ?’ ಎಂಬ ವಿಚಾರ ಒಳಹೊಕ್ಕು ತಲೆಯೆಲ್ಲ ಚಿಟ್ಟೆಂದಿತು. ‘ಉಹ್ಞೂಂ, ನಾನು ಜಾನ್ಹವಿಗೇನೂ ಅನ್ಯಾಯ ಮಾಡುತ್ತಿಲ್ಲ. ಒಮ್ಮೆ ನಿರ್ಧರಿಸಿ ಆಗಿದೆ. ಇನ್ನು ಮುಂದುವರೆದೇ ಸೈ’ ಎಂದು ತೀರ್ಮಾನಿಸಿದೆ. ಅಕ್ಕ ಪಕ್ಕದ ಒಂದೆರೆಡು ಮನೆಯವರಿಗೆ ವಿಷಯ ತಿಳಿಸಿದೆ. ಕೆಲವರು ಕಣ್ಣರಳಿಸಿದರು. ಹಲವರು ಸಂತೋಷದಿಂದ ಕಂಗ್ರಾಚುಲೇಷನ್ಸ ಎಂದರು. ಹಿಂದೆ ಆಡಿಕೊಂಡು ನಕ್ಕವರೂ ಇದ್ದರೆನ್ನಿ. ಏನೋ ಸಂತೋಷ, ಹುರುಪು.. ಮಹಾಬಲೇಶ್ವರದಲ್ಲಿ ಒಂದು ವಾರ ಮಜವಾಗಿ ಕಳೆದು ಬಂದು ಸಂಸಾರ ಆರಂಭಿಸಬೇಕು. ಏನೇನೋ ಕನಸುಗಳು, ಕನವರಿಕೆಗಳು…             ನಿರೀಕ್ಷಿಸಿದಂತೆ ದೇವಸ್ಥಾನದಲ್ಲಿ ಹಾರ ಬದಲಾವಣೆ ಮಾಡಿಕೊಂಡು ಸರಳವಾಗೇ ಮದುವೆಯಾದೆವು. ಬಕುಲ್ ಗ್ರೀಟಿಂಗ್ಸ ಕಳಿಸಿದ್ದ. ನಕುಲ್ನಿಂದ ಶುಭಾಷಯದ ಸಂದೇಶ ಬಂದಿತ್ತು. ಮುಕುಲ್ ಒಬ್ಬನೇ ಬಂದು ಶುಭ ಹಾರೈಸಿದ. ಹೆಂಡತಿ, ಮಕ್ಕಳು ಬೇಸಿಗೆ ರಜಕ್ಕೆ ತವರಿಗೆ ಹೋಗಿದ್ದರಂತೆ. ಶಿಷ್ಟಾಚಾರದಂತೆ ನನಗೆ ಮೀನಳಿಗೆ ನಮಸ್ಕರಿಸಿ ಆಫೀಸಿಗೆ ಹೊರಟು ಹೋದ. ನಾವೇ ನವದಂಪತಿಗಳು ಪಾಂಚಾಲಿ ಹೋಟೆಲ್ನಲ್ಲಿ ಊಟ ಮಾಡಿಕೊಂಡು ಮನೆಗೆ ಬಂದೆವು. ಚಾಳದ ಕಣ್ಣುಗಳೆಲ್ಲ ಆನಂದಾಶ್ಚರ್ಯಗಳಿಂದ ನೋಡಿ ಶುಭ ಹಾರೈಸಿದರು. ಮೊದಲು ಬಂದು ಜಾನ್ಹವಿಯ ಫೋಟೋಕ್ಕೆ ಕೈ ಮುಗಿದೆ.

ಉದಾಹರಣೆ Read Post »

ಕಾವ್ಯಯಾನ

ಕಣ್ಣುಗಳಲಿ ಮುಚ್ಚಿಡಲಾಗುತ್ತಿಲ್ಲ ಒಲವ

ಕವಿತೆ ನಾಗರಾಜಹರಪನಹಳ್ಳಿ ಪ್ರತಿಕ್ಷಣದ ಉಸಿರುನನ್ನೆದೆಯಲ್ಲಿ ಬಿಸಿರಕ್ತವಾಗಿದೆಕೈ ಬೆರಳ ಸ್ಪರ್ಶಹಾಡಿದ ರಾಗ ಅನುರಣಿಸುತ್ತಿದೆಕಣ್ಣುಗಳಲ್ಲಿ ಮುಚ್ಚಿಡಲಾಗುತ್ತಿಲ್ಲಒಲವ ಒಳಹರಿವು ……..** ಹಗಲು ರಾತ್ರಿಗಳನ್ನುಂಡು ನಿಶಬ್ದವಾಗಿಮಲಗಿರುವ ಬೆಟ್ಟಸಾಲುಗಳೇಬಯಲು ಕಣಿವೆ ಮುದ್ದಿಸಿ ಸಾಗುವಮಂಜು ಮೋಡಗಳೇಆಕೆಗೆಮುಗಿಲ ಸಂದೇಶವ ಅನುವಾದಿಸಿ ಬಿಡಿ ಈಗೀಗಪ್ರತಿ ಮಾತು ಒಲವಿನ ಸಂದೇಶಹೊತ್ತು ತರುತ್ತಿದೆಬದುಕು ಹಿತವೆನಿಸುತ್ತಿದೆಹಕ್ಕಿಯ ಇಂಚರಮಳೆಯ ಧ್ಯಾನಕ್ಕೂಹೊಸ ಅರ್ಥವ್ಯಾಪ್ತಿ ದಕ್ಕುತ್ತಿದೆ…….** ನಿನ್ನ ಬೆರಳಸ್ಪರ್ಶದಿಂದಕವಿತೆಗೆ ಹೊಸಅರ್ಥ ದಕ್ಕಿತುನಿನ್ನ ಹೆರಳಪರಿಮಳ ನನ್ನೆದೆಯಲ್ಲಿಹೊಸ ತರಂಗಗಳಅಲೆ ಎಬ್ಬಿಸಿತು

ಕಣ್ಣುಗಳಲಿ ಮುಚ್ಚಿಡಲಾಗುತ್ತಿಲ್ಲ ಒಲವ Read Post »

ಕಾವ್ಯಯಾನ

ಅರಮನೆ

ಕವಿತೆ ಕೃಷ್ಣಮೂರ್ತಿ ಕುಲಕರ್ಣಿ. ಅರಮನೆಗಳು ಎಂದರೆಹಾಗೇಯೆ ಸ್ವಾಮಿ,ಒಂದಿಲ್ಲ‌ ಒಂದುದಿನಅವು ತಮ್ಮದಿಮಾಕು ದೌಲತ್ತುಕಳೆದುಕೊಳ್ಳುತ್ತವೆ!ಬದುಕಿನಲ್ಲಿ ಬರುವಸುಖ ದುಃಖಗಳಂತೆ,ದುಃಖದ ನೋವಿಗೆ ನರಳದೆ,ಸುಖದ ಸಡಗರಕ್ಕೆ ಹಿಗ್ಗದೆ,ಅಲ್ಲಿರುವ ಬಾಗಿಲು ಕಿಟಕಿಗೋಡೆಯಲಿ ಹೂತಿರುವ ಗೂಟಗಳು ಮಾತ್ರ ನಿರಂಬಳವಾಗಿಉಳಿಯಲು ಸಾಧ್ಯ,ಅಲ್ಲಿಯೇ ಹುಟ್ಟಿಬೆಳೆದಇರುವೆಗಳು ಸಾಗಿಹೋಗುತ್ತವೆ,ಅರಮನೆ ಇರುವ ಮನೆಯಲ್ಲ,ಅದೊಂದು ಸ್ಮಾರಕ ಎಂಬುದು ಅವುಗಳ ಗಮನಕ್ಕೆ ಬಂದಿರಬೇಕು,ತಾವು ಕಟ್ಟುವ ಗೂಡಿಗೆಗೆದ್ದಿಲೊ ಹಾವೋ ಬರುವಹಾಗೆ,ದುಃಸ್ವಪ್ನ ಕಂಡಿರಲೂಬೇಕು,ವಿಶಾಲವಾದ ಸೌಧ ಕಟ್ಟಿದವರು,ವಿಶಾಲ ಮನೋಭಾವ ಬೆಳೆಸಲಿಲ್ಲ,ಅರಮನೆಯ ಅಂಗಳದಲ್ಲಿ,ಭಿನ್ನತೆಯ ಕರ್ಕಿ ಆಳಕ್ಕೆಬೇರುಗಳ ಇಳಿಬಿಟ್ಟು ದಟ್ಟವಾಗದಿದ್ದರೂ,ದಿಟ್ಟವಾಗಿಯೇ ಹಬ್ಬಿಹರಡಿದ್ದು,ಕಟ್ಟಿದವರ ಗಮನಕ್ಕೆ ಬರಲೇಇಲ್ಲ,ಸಂಕುಚಿತ ಮನೋಭಾವಗಳಸಂತೆ ಜರುಗಿದಾಗ,ಅರಮನೆ ಆಡಂಬರ‌ ಕಳೆದುಕೊಂಡು ಬರಡಾಯಿತು,ಏಕಾಂಗಿ ಸ್ಮಾರಕದ ಸುತ್ತಲೂ,ಬೀಸುವ ಬಿರುಗಾಳಿ ರಭಸಕ್ಕೆಮಾಗಿದ ಜೀವದಂತೆ ಸಹಿಸದನೋವು,ಮನೆಮುಂದೆ ಬೆಳೆದ ತುಳಸಿಹಿತ್ತಲಿನ ಮಲ್ಲಿಗೆ ಬಳ್ಳಿ,ಹೇಗೊ ಅಸ್ತಿತ್ವ ಉಳಿಸಿಕೊಂಡಿವೆ,ಪೂಜೆಗೆ ಕೊಂಡ್ವ್ಯಲು ಬರುವರೆಂದು,ದೊರೆ ಇರದ ಅರಮನೆಗೆಕಾವಲುಗಾರನೇಕೆ ಇದ್ದಾನು?ಪರಿವಾರದವರೇಕೆ ಸುಳಿದಾರು?ಸಂತೆ ಮುಗಿದಮೇಲೆಅಲ್ಯಾರು ಉಳಿದಾರು?ಅರಮನೆ ಅಂಗಳದಿ ಬೀಜಬಿತ್ತಲು ಮುಂದಾದರೈತರಿಗೂ ತಕರಾರು,ಗೊಂದಲದ ಗೂಡು ಅರಮನೆ, *********

ಅರಮನೆ Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ಅನ್ನಪೂರ್ಣಾ ಬೆಜಪ್ಪೆ ಇದ್ದರೂ ನೋವುಗಳು ಹಲವಾರು ನಗುತಿರು ಸಖೀಬಿದ್ದರೂ ಧೃತಿಗೆಡದೆ ಪುಟಿದೆದ್ದು ಸಾಗುತಿರು ಸಖೀ ವಿಶಾಲ ಜಗವಿದು ಅವಕಾಶಗಳಿಗಹುದೇನು ಕೊರತೆವಿಷಮ ಭಾವಗಳಳಿಸಿ ಹೊಸತನಕೆ ತೆರೆಯುತಿರು ಸಖೀ ಮುಂದೆ ಸರಿದಂತೆಲ್ಲ ಜಗ್ಗಲೆತ್ನಿಸುವ ಮನವೆ ಬಹುವಿಲ್ಲಿಹಿಂದೆ ಜಾರದಂತೆ ಸಮಸ್ಥಿತಿಯ ಕಾಯುತಿರು ಸಖೀ ಸೋಲು ಬಂತೆನಲು ಕೊರಗಿ ಹತಾಶೆ ತೋರುವುದೇಕೆಗೆಲುವು ಪಡೆಯುವ ತನಕವೂ ಬಿಡದೆ ಓಡುತಿರು ಸಖೀ ಕ್ಲೇಶ ಕಳೆಯಲು ಅನುವಿಗೆ ವಿಶ್ವಾಸವೇ ಬಲವಲ್ಲವೇನುತೋಷಕಾಗಿ ಕರ್ಮ ಸಾಧನೆಯ ಕಡೆ ನಡೆಯುತಿರು ಸಖೀ ********

ಗಝಲ್ Read Post »

ಅಂಕಣ ಸಂಗಾತಿ, ಮೂರನೇ ಆಯಾಮ

ನವಿರು ಹಾಸ್ಯದೊಳಗೆ ಚುಚ್ಚುವ ಮೊನಚಿದೆ ಹಿಂದೊಮ್ಮೆ ಪ್ರಮಿಳಾ ರಾಜ್ಯವೊಂದಿತ್ತಂತೆ. ಅಲ್ಲಿ ಮಹಿಳೆಯರೇ ರಾಣಿಯರು, ಅಧಿಕಾರದಲ್ಲಿರುವವರು ಎಲ್ಲಾ. ಅಲ್ಲಿ ಗಂಡಸರಿಗೆ ಪ್ರವೇಶವೇ ಇರಲಿಲ್ಲವಂತೆ. ಸಂತಾನ ಬೇಕಾದ ಸ್ತ್ರೀಯರೂ ರಾಜ್ಯದ ಹೊರಗೆ ಹೋಗಿ ಪಡೆಯಬೇಕಾಗಿತ್ತಂತೆ. ಒಂದುವೇಳೆ ಗಂಡು ಸಂತಾನವನ್ನು ಪಡೆದರೆ ಆ ಮಗುವನ್ನು ಅಲ್ಲಿಯೇ ಬಿಟ್ಟು ಬಿಡುವುದು ಅನಿವಾರ್ಯವಾಗಿತ್ತಂತೆ. ಆದರೆ ಹೆಣ್ಣು ಮಗುವಾಗಿದ್ದರೆ ಮಾತ್ರ ತಮ್ಮ ರಾಜ್ಯಕ್ಕೆ ಕರೆದೊಯ್ಯಬಹುದಿತ್ತಂತೆ. ಅಂತಹುದ್ದೊಂದು ಪ್ರಮಿಳಾ ರಾಜ್ಯವಿದ್ದರೆ  ನಾನೂ ಅಲ್ಲಿಯೇ ಹೋಗಿ ಇರಬಹುದಾಗಿತ್ತು ಎಂದು ಎಷ್ಟೋ ಸಲ ಅಂದುಕೊಳ್ಳುತ್ತಿರುತ್ತೇನೆ. ಎಷ್ಟೊಂದು ಕೆಲಸಗಳು. ಮುಗಿಯದ, ಮುಗಿಯಲೊಲ್ಲದ ಕೆಲಸಗಳು ದಿನವಿಡೀ ಆದಾಗಲೆಲ್ಲ ಮನೆಯಲ್ಲಿರುವ ಹಿರಿಯ, ಕಿರಿಯ ಮತ್ತು ಅತ್ತ ಹಿರಿಯನೂ ಅಲ್ಲದ, ಇತ್ತ ಕಿರಿಯನೂ ಅಲ್ಲದ ಮೂವರು ಗಂಡಸರಿಗೆ ಒಳಗೊಳಗೇ ಬೈಯ್ದುಕೊಳ್ಳುತ್ತೇನೆ. ಮಹಿಳಾ ಸಾಮ್ರಾಜ್ಯವಾಗಬೇಕಿತ್ತು. ಅಧಿಕಾರವೆಲ್ಲ ನಮ್ಮದೇ ಕೈಯ್ಯಲ್ಲಿದ್ದರೆ ಇವರನ್ನೆಲ್ಲ ಆಟ ಆಡಿಸಬಹುದಿತ್ತು ಎಂದುಕೊಳ್ಳುತ್ತ, ಏನೇನು ಮಾಡಬಹುದಿತ್ತು ನಾನು ಎಂದೆಲ್ಲ ಊಹಿಸಿಕೊಂಡು ಮನದೊಳಗೇ ನಸುನಗುತ್ತಿರುತ್ತೇನೆ ಆಗಾಗ. ನಾನು ಹಾಗೆ ನಗುವುದನ್ನು ಕಂಡಾಗಲೆಲ್ಲ ‘ಅಮ್ಮ ಹಗಲುಗನಸು ಕಾಣ್ತಿದ್ದಾಳೆ’ ಎಂದು ಗುಟ್ಟಾಗಿ ಅಪ್ಪನ ಬಳಿ ಹೇಳಿಕೊಂಡು ಮಕ್ಕಳು ನಗುತ್ತಿರುತ್ತಾರೆ. ಅಂತಹುದ್ದೇ ಒಂದು ಕನಸಿನ ಕಥೆ ಇಲ್ಲಿದೆ. ಸಂಕಲನದ ಮೊದಲ ಕಥೆ, ಶೀರ್ಷಿಕಾ ಕಥೆಯೂ ಆದ ಎಪ್ರಿಲ್ ಫೂಲ್ ಇದು. ಇಲ್ಲಿ ಗಂಡ ರಾಮು ಮನೆಗೆಲಸವನ್ನೆಲ್ಲ ಮಾಡುತ್ತಾನೆ. ಮಗ ದೀಪುವನ್ನು ಎಷ್ಟು ಓದಿದರೂ ಮನೆಗೆಲಸ ಮಾಡೋದು ತಾನೆ ಎಂದು ಮುಂದೆ ಓದಿಸದೇ ಮನೆಗೆಲಸ ಕಲಿಸಿದ್ದರು. ಮಗಳು ಭೂಮಿ ಮತ್ತು ಹೆಂಡತಿ ಮೈತ್ರಿ ರಾವ್ ಮಾತ್ರ ಹೊರಗಡೆ ಕೆಲಸಕ್ಕೆ ಹೋಗುವವರು. ಹೆಣ್ಣಿನ ಮೇಲೆ ಆಗುತ್ತಿರುವ ದೌರ್ಜನ್ಯ ಈಗ ಗಂಡಿನ ಮೇಲೆ ಆಗುತ್ತಿದೆ. ಗಂಡು ಹೆಣ್ಣಿನ ಅನುಗ್ರಹಕ್ಕಾಗಿ ಅಳುತ್ತಾನೆ. ತನ್ನನ್ನು ಬಿಟ್ಟು ಹೋದರೆ ಎಂದು ಹಳಹಳಿಸುತ್ತಾನೆ. ಹೆಣ್ಣು ಸರ್ವ ಸ್ವತಂತ್ರಳು. ಹೊರಗಡೆಯ ಜವಾಬ್ಧಾರಿ ಹೆಣ್ಣಿನದ್ದು. ಮಗುವನ್ನು ಹೆತ್ತುಕೊಟ್ಟರೆ ಆಯಿತು. ಪಾಲನೆ ಪೋಷಣೆ ಎಲ್ಲವೂ ಗಂಡಿನದ್ದೇ. ಆಹಾ ಎಂದು ಖುಷಿಯಲ್ಲಿ ಓದುತ್ತಿರುವಾಗಲೇ ಇದು ಕನಸು ಎಂದು ಕಥೆಗಾರ ಹೇಳಿಬಿಡುವುದರೊಂದಿಗೆ ನನ್ನ ಊಹಾಲೋಕವೂ ನಿಂತುಹೋಯಿತು. ಆದರೂ ಕಥೆಯಲ್ಲಿ ಬರುವ ಮೊನಚು ವ್ಯಂಗ್ಯ ಇಂದಿಗೂ ಹೆಣ್ಣಿನ ವೇದನೆಯನ್ನು ಕನ್ನಡಿಯಲ್ಲಿಟ್ಟು ತೋರಿಸುತ್ತದೆ. ಹನಮಂತ ಹಾಲಿಗೇರಿ ಒಬ್ಬ ಸಶಕ್ತ ಕಥೆಗಾರ. ನಿಸೂರಾಗಿ ಕಥೆ ಹೇಳುವ ಕಲೆ ಸಿದ್ಧಿಸಿದೆ. ಅದನ್ನು ಮನಮುಟ್ಟುವಂತೆ ಅಕ್ಷರಕ್ಕಿಳಿಸುವ ಶೈಲಿಯೂ ಕರಗತವಾಗಿದೆ. ಕಾರವಾರದಲ್ಲಿ ಪತ್ರಕರ್ತನಾಗಿದ್ದಾಗ ಕೆಲವು ವರ್ಷಗಳ ಕಾಲ ಹತ್ತಿರದಿಂದ ಗಮನಿಸಿದ್ದೇನೆ. ನೊಂದವರ ಪರ ನಿಲ್ಲುವ, ಶೋಷಣೆಗೊಳಗಾದವರ ಸಹಾಯಕ್ಕೆ ಧಾವಿಸುವ ಅವರ ಗುಣವನ್ನು ಕಣ್ಣಾರೆ ಕಂಡಿದ್ದೇನೆ. ಅಂತಹ ಗುಣದಿಂದಾಗಿಯೇ ಬಹುಪಾರಮ್ಯದ ಮಾಧ್ಯಮ ಲೋಕದಲ್ಲಿ  ಏಕಾಂಗಿಯಾಗಬೇಕಾದುದನ್ನೂ ಗಮನಿಸಿದ್ದೇನೆ. ಆದರೂ ತಳ ಸಮುದಾಯದ ಪರ ಅವರ ಕಾಳಜಿ ಯಾವತ್ತೂ ಕುಂದಿಲ್ಲ. ಹೀಗಾಗಿಯೇ ಇಲ್ಲಿನ ಕಥೆಗಳಲ್ಲಿ  ಶೋಷಣೆಗೊಳಗಾದವರ ನೋವುಗಳನ್ನು ನೇರಾನೇರ ತೆರೆದಿಡುವ ಗುಣವನ್ನು ಕಾಣಬಹುದು. ಅಲೈ ದೇವ್ರ್ರು, ಸುಡುಗಾಡು, ಪಿಡುಗು, ಸ್ವರ್ಗ ಸಾಯುತಿದೆ ಹೀಗೆ ಸಾಲು ಸಾಲಾಗಿ ಕಥೆಗಳು ನಮ್ಮ ಸಾಮಾಜಿಕ ಸ್ಥರಗಳ ಪರಿಚಯ ಮಾಡಿಕೊಡುತ್ತವೆ. ನಮ್ಮದೇ ಧರ್ಮಾಂಧತೆಯನ್ನು ಕಣ್ಣೆದುರು ಬಿಚ್ಚಿಡುತ್ತವೆ.    ನಾನು ಚಿಕ್ಕವಳಿರುವಾಗ  ಮನೆಯ ಸಮೀಪ ಒಂದು ಮುಸ್ಲಿಂ ಮನೆಯಿತ್ತು. ಅವರ ರಂಜಾನ್ ಬಕ್ರೀದ್‌ಗೆ ತಪ್ಪದೇ ಸುತ್ತಮುತ್ತಲಿನ ಮನೆಗಳಿಗೆ ಸುರ್‌ಕುಂಬಾ ಕಳಿಸುತ್ತಿದ್ದರು. ಬಹುತೇಕ ಮನೆಯವರು ಅದನ್ನು ತೆಗೆದುಕೊಂಡೂ ಚೆಲ್ಲಿಬಿಡುತ್ತಿದ್ದುದು ನನಗೀಗಲೂ ನೆನಪಿದೆ. ಆದರೆ ನಮ್ಮ ಮನೆಯಲ್ಲಿ ಅಮ್ಮ ಮಾತ್ರ ಲೋಟಕ್ಕೆ ಹಾಕಿ ಕುಡಿ ಎಂದು ಕುಡಿಸುತ್ತಿದ್ದಳು. ‘ಅವರ ಹಬ್ಬ, ಅವರು ಆಚರಿಸುತ್ತಾರೆ. ಸಿಹಿ ಕೊಡುತ್ತಾರೆ. ನಮ್ಮ ಹಬ್ಬ ಮಾಡಿದಾಗ ನಾವೂ ಪಾಯಸ ಕೊಡುವುದಿಲ್ಲವೇ ಹಾಗೆ’ ಎನ್ನುತ್ತಿದ್ದಳು. ಅಕ್ಕಪಕ್ಕದ ಮನೆಯವರೆಲ್ಲ ಚೆಲ್ಲುವುದನ್ನು ಹೇಳಿದಾಗ ಆಹಾರ ಯಾರೇ ಕೊಟ್ಟರೂ ಅದು ದೇವರಿಗೆ ಸಮಾನ. ಅದಕ್ಕೆ ಅಪಮಾನ ಮಾಡಬಾರದು ಎನ್ನುತ್ತಿದ್ದಳು. ಇತ್ತೀಚೆಗೆ ನಾನು ಈಗಿರುವ ಶಾಲೆಗೆ ಬಂದಾಗ ಎಂಟನೇ ತರಗತಿಗೆ ಬಂದ ಮುಸ್ಲಿಂ ಹುಡುಗ ತಮ್ಮ ಹಬ್ಬಕ್ಕೆ ಮತ್ತದೇ ಸಿರ್‌ಕುಂಬಾ ಹಿಡಿದುಕೊಂಡು ಬಂದಿದ್ದ. ನಾನು ಚಿಕ್ಕವಳಾಗಿದ್ದಾಗಿನ ಖುಷಿಯಲ್ಲಿಯೇ ಅದನ್ನು ಸವಿದಿದ್ದೆ. ಹತ್ತಿರದ ಸದಾಶಿವಗಡ ಕೋಟೆಯ ಬಳಿ ತನ್ನ ಆರಾಧ್ಯ ದೈವ ದುರ್ಗಾದೇವಿ ದೇವಸ್ಥಾನವನ್ನು ಕಟ್ಟಿದ್ದ ಶಿವಾಜಿ ಪಕ್ಕದಲ್ಲೇ ಒಂದು ಮಸೀದಿಯನ್ನೂ ಕಟ್ಟಿಸಿಕೊಟ್ಟಿದ್ದಾನೆ. ಹಿಂದೂ ಧರ್ಮದ ಅತ್ಯುಗ್ರ ನಾಯಕ ಎಂದು ಬಿಂಬಿಸುತ್ತ, ಶಿವಾಜಿಯನ್ನು ಮುಸ್ಲಿಂ ವಿರೋಧಿ ಎನ್ನುವಾಗಲೆಲ್ಲ ನನಗೆ ಈ ಮಸೀದಿ ನೆನಪಾಗುತ್ತಿರುತ್ತದೆ. ದುರ್ಗಾದೇವಿಯ ಜಾತ್ರೆಗೆ ಹಾಗೂ ದರ್ಗಾದ ಉರುಸ್‌ಗೆ ಪರಸ್ಪರ ಸಹಕಾರ ನೀಡುವ ಪದ್ದತಿ ಇಲ್ಲಿದೆ. ಹಿಂದೂ ಮುಸ್ಲಿಮರು ಆಚರಿಸುವ ಮೊಹರಂ ಬಗ್ಗೆ ಕೇಳಿದಾಗಲೆಲ್ಲ ಏನೋ ಖುಷಿ. ನನ್ನ ಪರಿಚಯದ ಒಂದು ಮುಸ್ಲಿಂ ಕುಟುಂಬ ಗಣೇಶ ಚತುರ್ಥಿಗೆ ಗಣೇಶನನ್ನು ಕುಳ್ಳಿರಿಸಿ ಪೂಜೆ ಮಾಡುತ್ತದೆ. ಅದೆಷ್ಟೋ ಕ್ರಿಶ್ಚಿಯನ್ ಕುಟುಂಬದೊಡನೆ ಆತ್ಮೀಯ ಸಂಬಂಧವಿದೆ. ನಮ್ಮೂರಿನ ಬಂಡಿ ಹಬ್ಬದ ಸವಿಗಾಗಿ ನಮ್ಮ ಸಹೋದ್ಯೋಗಿಗಳೂ ಮನೆಗೆ ಬರುವುದಿದೆ. ಕ್ರಿಸ್‌ಮಸ್ ಬಂತೆಂದರೆ ನನ್ನ ಪ್ರೀತಿಯ ವೈನ್‌ಕೇಕ್‌ನ ಸುವಾಸನೆ ನಮ್ಮ ಮನೆಯನ್ನೂ ತುಂಬಿರುತ್ತದೆ. ಧಾರ್ಮಿಕ ಸೌಹಾರ್ಧ ಎನ್ನುವುದು ಬರೀ ಬಾಯಿ ಮಾತಿನಲ್ಲಿ ಹೇಳಿದರೆ ಆಗದು. ಇಲ್ಲಿ ಅಲೈ ಹಬ್ಬದಲ್ಲಿ ಹಾಗೂ ಸುಡುಗಾಡು ಎನ್ನುವ ಕಥೆಗಳಲ್ಲಿ ಕಥೆಗಾರ ಧರ್ಮ ಸಾಮರಸ್ಯದ ಬಗ್ಗೆ ಹೇಳುತ್ತಾ ಹೋಗುತ್ತಾರೆ. ಅಲೈ ಹಬ್ಬದಲ್ಲಿ ಹೆಜ್ಜೆ ಹಾಕುವ ಹುಡುಗರು ಹಿಂದುಗಳು. ಆದರೆ ಅದರ ಆಚರಣೆ ಮಸೀದಿಯಲ್ಲಿ.  ಅದನ್ನು ನಿಲ್ಲಿಸಲೆಂದೇ ಬರುವ ಧರ್ಮದ ಕಟ್ಟಾಳುಗಳ ಮಾತನ್ನು ಮೀರಿಯೂ ಹಬ್ಬ ನಡೆಯುತ್ತದೆ. ಆದರೆ ಸುಡಗಾಡು ಕಥೆಯಲ್ಲಿ ಹಿಂದುಗಳ ರುದ್ರಭೂಮಿಯಲ್ಲಿ ಹೆಣದ ಕೆಲಸ ಮಾಡುತ್ತಿದ್ದವನ್ನು ಹೊರಗೆಸೆದು ಅವನ ಜೀವನವನ್ನೇ ನರಕವನ್ನಾಗಿಸುವ ಕಥೆಯಿದೆ. ಸಿದ್ದಯ್ಯನ ಪವಾಡ ಹಾಗೂ ಸ್ಥಿತಪ್ರಜ್ಞ ಕಥೆಗೂ ನಮ್ಮ ದೇವರೆಂಬ ಬಹುನಾಟಕದ ಕಥಾನಕಗಳನ್ನು ಹೇಳುತ್ತವೆ. ದೇವರೇ ಇಲ್ಲ ಎಂಬ ಸತ್ಯವನ್ನರಿತ ಸಿದ್ದಯ್ಯನನ್ನೇ ದೇವರನ್ನಾಗಿಸುವ ಜನರ ಮೂರ್ಖತನವೋ ಮುಗ್ಧತೆಯೋ ಎಂದು ಹೇಳಲಾಗದ ನಡುವಳಿಕೆಯಿದ್ದರೆ ಸ್ಥಿತಿಪ್ರಜ್ಞದಲ್ಲಿ ತನ್ನ ತಾಯಿ ತೀರಿ ಹೋದರೂ ನಗುನಗುತ್ತ ದೇವರ ಪೂಜೆಗೆ ಅಣಿಯಾಗುವ ಮಠಾಧೀಶನೊಬ್ಬನ ಮನುಷ್ಯತ್ವ ಕೊನೆಗೊಂಡ ವ್ಯಕ್ತಿಯ ಚಿತ್ರಣವಿದೆ. ಫಾರಿನ್ ಹೊಲೆಯ ಕಥೆಯಂತೂ ನಮ್ಮ ಧರ್ಮದ ಲೂಪ್‌ಹೋಲ್‌ಗಳನ್ನು ಅತ್ಯಂತ ತೀಕ್ಷ್ಣವಾಗಿ ನಮ್ಮೆದರು ಬೆತ್ತಲಾಗಿಸುತ್ತದೆ. ಬೀಪ್ ತಿನ್ನಬೇಕೆಂದು ಬಯಸಿದ ವಿದೇಶಿ ಕ್ಯಾಮರೂನ್ ಭಾರತದಲ್ಲಿ ಮಾತ್ರ ಸಿದ್ಧವಾಗುವ ಬೀಫ್‌ನ ಮಸಾಲೆ ರುಚಿಯನ್ನು ತಮ್ಮ ಊರಲ್ಲಿ ವರ್ಣಿಸುವುದನ್ನು ಹೇಳುತ್ತ ನಿರೂಪಕನ ಧರ್ಮವನ್ನು ಕರಾರುವಕ್ಕಾಗಿ ವಿಶ್ಲೇಷಿಸುತ್ತಾನೆ.    ಪಿಡುಗು ಕಥೆಯಲ್ಲಿ ವೇಶ್ಯೆಯರ ಬದುಕಿನ ಕಥೆಯಿದೆ. ಮಧ್ಯಮ ವರ್ಗದ ಮಹಿಳೆಯರು ಯಾವ್ಯಾವುದೋ ಅನಿವಾರ್ಯ ಕಾರಣಗಳಿಗಾಗಿ ಮೈಮಾರಿಕೊಳ್ಳಬೇಕಾದ ಅನಿವಾರ್ಯತೆಯನ್ನು ಈ ಕಥೆ ಹೇಳುತ್ತದೆ. ಕೆಲವು ವರ್ಷಗಳ ಹಿಂದೆ ಗೀತಾ ನಾಗಭೂಷಣರವರ ಒಂದು ಕಥೆ ಎಂಟನೆ ತರಗತಿಗಿತ್ತು. ಮಗನನ್ನು ಕಾಯಿಲೆಯಿಂದ ಉಳಿಸಿಕೊಳ್ಳಲು ಬೇಕಾದ ಔಷಧ ಹಾಗೂ ಆಸ್ಪತ್ರೆಯ ಖರ್ಚಿಗಾಗಿ ಅನಿವಾರ್ಯವಾಗಿ ತನ್ನ ಮೈಯನ್ನು ಒಪ್ಪಿಸಲು ನಿರ್ಧರಿಸುವ ಕಥೆಯದು. ಆದರೆ ಅಂತಹ ಸಂದಿಗ್ಧತೆಯನ್ನು ವಿವರಿಸಿ ಮಕ್ಕಳಿಗೆ ತಾಯಿಯ ಮಹತ್ವವನ್ನು ತಿಳಿಹೇಳಬೇಕಾದ ಅಗತ್ಯತೆ ಅಲ್ಲಿತ್ತು. ವೇಶ್ಯೆಯರೆಂದರೆ ಕೆಟ್ಟವರಲ್ಲ, ಇಂತಹ ಅನಿವಾರ್ಯ ಕಾರಣಗಳೂ ಇರುತ್ತವೆ ಎಂದು ಆಗತಾನೆ ಹರೆಯದ ಹೊಸ್ತಿಲಲ್ಲಿ ಹೆಜ್ಜೆ ಇಡುತ್ತಿರುವ ಮಕ್ಕಳಿಗೆ ಮನಮುಟ್ಟುವಂತೆ ತಿಳಿಸುವ ಗುರುತರ ಜವಾಬ್ಧಾರಿಯೂ ಶಿಕ್ಷಕರ ಮೇಲಿತ್ತು. ಆದರೆ ಆ ಕಥೆ ಹರೆಯದ ಮಕ್ಕಳ ಹಾದಿ ತಪ್ಪುವಂತೆ ಮಾಡುತ್ತದೆ ಎಂಬ ನೆಪ ಹೇಳಿ ಪಾಠವನ್ನು ರದ್ದುಗೊಳಿಸಲಾಯಿತು. ವೇಶ್ಯೆಯರೆಂದರೆ ಒಂದೇ ತಟ್ಟೆಯಲ್ಲಿಟ್ಟು ತೂಗುವ ಸಮಾಜದ ಹೊಸ ಪೀಳಿಗೆಗೆ ಈ ಕಥೆ ಹೇಳಿದರೆ ದೃಷ್ಟಿಕೋನ ಬದಲಾಗಬಹುದಿತ್ತು. ಇಲ್ಲಿಯೂ ಕೂಡ ಮಗಳಿಗಾಗಿ ಮೈಮಾರಿಕೊಳ್ಳುವ ಮಧ್ಯ ವಯಸ್ಕ ಗ್ರಹಿಣಿ ಮತ್ತು ಅವಳಿಗಾಗಿ ತಾನೇ ಗಿರಾಕಿಗಳನ್ನು ತರುವ ಗಂಡನ ಹಣದ ದಾಹ, ನಂತರ ತೀರಿ ಹೋದ ತಾಯಿಯಂತೆ ಅನಿವಾರ್ಯವಾಗಿ ಮತ್ತದೇ ದಂಧೆಗೆ ಇಳಿಯುವ ಮಗಳು ನಮ್ಮ ಆತ್ಮಸಾಕ್ಷಿಯನ್ನೇ ಬೀದಿಗೆ ತಂದು ಬೆತ್ತಲಾಗಿಸಿ ಪ್ರಶ್ನೆ ಕೇಳಿದಂತೆ ಅನ್ನಿಸುತ್ತದೆ.    ಇತ್ತ ಸ್ತ್ರೀ ಎಂದರೆ ಅಷ್ಟೇ ಸಾಕೆ ಎನ್ನುವ ಕಥೆ ಕೂಡ ನಮ್ಮನ್ನು ಯೋಚಿಸುವಂತೆ ಮಾಡುತ್ತದೆ. ತನ್ನ ಮಾರ್ಕೆಟಿಂಗ್ ವ್ಯವಹಾರವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತ ಮನೆಯ ಜವಾಬ್ಧಾರಿ ವಹಿಸಿಕೊಂಡವಳನ್ನು ಕುಗ್ಗಿಸಿ ತಮ್ಮ ಲಾಭಕ್ಕಾಗಿ ಪುರುಷರ ಮೂತ್ರಿಖಾನೆಯಲ್ಲಿ ಅವಳ ನಂಬರ್ ಬರೆದಿಟ್ಟ ಪುರುಚ ಸಮಾಜ ಅವಳು ಸಂಪೂರ್ಣ ಹತಾಷವಾಗುವಂತೆ ಮಾಡಿಬಿಡುತ್ತದೆ. ಒಮ್ಮೆ ಅನುಮಾನಿಸಿದರೂ ವಸ್ತುಸ್ಥಿತಿಯನ್ನು ಅರ್ಥ ಮಾಡಿಕೊಂಡು ಜೊತೆಗೆ ನಿಲ್ಲುವ ಗಂಡನೊಬ್ಬ ಇಲ್ಲಿದ್ದಾನೆ ಎಂಬುದೇ ಈ ಕಥೆ ಓದಿದ ನಂತರ ಒಂದು ನಿರಾಳ ನಿಟ್ಟುಸಿರಿಡುವಂತೆ ಮಾಡುತ್ತದೆ.       ರಾಷ್ಟ್ರೀಯ ಹೆದ್ದಾರಿ ೬೬ನ್ನು ಅಗಲೀಕರಣಗೊಳಿಸುವ ಪ್ರಕ್ರೀಯೆಗೆ ಚಾಲನೆ ದೊರೆತು ನಾಲ್ಕೈದು ವರ್ಷಗಳೇ ಉರುಳಿ ಹೋಗಿದೆಯಾದರೂ ಅಗಲೀಕರಣವಾಗುತ್ತದೆ ಎಂದು ಹೇಳಲಾರಂಭಿಸಿ ಅದೆಷ್ಟೋ ದಶಕಗಳೇ ಕಳೆದು ಹೋಗಿದೆ. ಚಿಕ್ಕವಳಿರುವಾಗ ‘ನಿಮ್ಮ ಮನೆ ರಸ್ತೆಗೆ ಹತ್ತಿರದಲ್ಲಿದೆ. ನಿಮ್ಮನೆ ಗ್ಯಾರಂಟಿ ಹೋಗ್ತದೆ ನೋಡು’ ಎನ್ನುವ ಮಾತು ಕೇಳುತ್ತಲೇ ಬೆಳೆದವಳು ನಾನು. ‘ನಮ್ಮನೆ ಹೋಗೂದಿಲ್ಲ. ಮನೆಪಕ್ಕದಲ್ಲಿ ಪುರಾತತ್ವ ಇಲಾಖೆಗೆ ಸೇರಿದ, ವಿಜಯನಗರ ಸಾಮ್ರಾಜ್ಯದ ಮೂಲ ಮನೆ ಹಾಗೂ ದೇವಸ್ಥಾನವಿದೆ’ ಎನ್ನುತ್ತಿದ್ದೆ ನಾನು. ನಾಗಬಲಿ ಎನ್ನುವ ಈ ಕಥೆಯಲ್ಲಿಯೂ ಬರೀ ಬಾಯಿ ಮಾತಿನಲ್ಲಿದ್ದ ಯೋಜನೆಗೆ ಚಾಲನೆ ದೊರೆತು ಹಾವೂರು ಎನ್ನುವ ಪುರಾತನ ದೇಗುಲದ ಮೇಲೆ ರಸ್ತೆ ಹಾದು ಹೋಗುವುದನ್ನು ವಿರೋಧಿಸುವ ಊರ ಜನರ ಹೋರಾಟ ಯಶಸ್ವಿಯಾದರೂ ಮುಂದೆ ಸರಕಾರ ಅಲ್ಲಿ ಸ್ನೇಕ್ ಟೆಂಪಲ್ ಎನ್ನುವ ಹಾವುಗಳ ಪಾರ್ಕ್ ಮಾಡಿ ಇಡೀ ಊರೆ ನಾಶವಾಗಿ ಹೋಗುವ ಕಥೆ ಇಲ್ಲಿದೆ. ಹಾವುಗಳ ಶಿಲ್ಪ ಮಾಡಿ ಪ್ರದರ್ಶಿಸುವ ನಾವು ನಿಜದ ಹಾವುಗಳನ್ನು ಹೇಗೆ ಕೊಲ್ಲುತ್ತೇವೆ ಎನ್ನುವ ವಿಷಾದ ಇಲ್ಲಿದೆ. ಅದೇರೀತಿ ಹಾಳಾಗಿ ಹೋದ ಊರಿನ ಮತ್ತೊಂದು ಕಥೆ ‘ಸ್ವರ್ಗ ಸಾಯುತ್ತಿದೆ’. ಇಲ್ಲಿ ದೇವಸಗ್ಗ ಎನ್ನುವ ಊರನ್ನು ತಮ್ಮ ಪಾಳೆಗಾರಿಕೆಯಿಂದ ವಶಡಿಸಿಕೊಂಡ ನಾಯಕ, ಹುಲಿಯೋಜನೆಯಿಂದಾಗಿ ಮನೆ ಬಿಟ್ಟ ಊರ ಜನರು, ಊರನ್ನು ಬಿಡಲೊಲ್ಲದ ಒಂದೆರಡು ಮನೆಯವರು ಉಡಲು ವಸ್ತ್ರವಿಲ್ಲದೇ ಬಳ್ಳಿ ಎಲೆಗಳನ್ನು ಸುತ್ತಿಕೊಂಡು ನಾಗರಿಕ ಸಮಾಜಕ್ಕೆ ಆದಿವಾಸಿಗಳಂತೆ ಗೋಚರಿಸುವುದನ್ನು ಕಥೆಗಾರ ಮನೋಜ್ಞವಾಗಿ ಹೇಳಿದ್ದಾರೆ. ಹುಲಿ ಯೋಜನೆ ಅನುಷ್ಟಾನಗೊಂಡ ಹಳ್ಳಿಗಳಲ್ಲಿ ಎಷ್ಟೋ ಸಲ ವಾಸಿಸಿದ್ದೇನೆ. ಮನೆ ಬಿಟ್ಟರೆ ಸರಕಾರ ಪರಿಹಾರ ನೀಡುತ್ತದೆ ಎನ್ನುವ ಆಕರ್ಷಕ ಕೊಡುಗೆಯ ಹೊರತಾಗಿಯೂ ಅಲ್ಲಿನ ಕೆಲ ಜನರು ಮನೆಯನ್ನು ಬಿಡಲೊಲ್ಲದೇ ಅಲ್ಲೇ ಇದ್ದಾರೆ. ಆದರೆ ಅಂತಹ ಹಳ್ಳಿಗಳ ಬಿಟ್ಟ ಮನೆಗಳಿಂದಾಗಿ ನಿರಾಶ್ರಿತರ ತವರೂರಿನಂತಾಗಿರುವುದನ್ನು ಕಂಡು ಬೇಸರಿಸಿದ್ದೇನೆ. ಹರಪ್ಪಾ ಮೊಹಂಜೋದಾರ್‌ನಂತೆ ಅವಶೇಷಗಳ ಊರು ಎನ್ನಿಸಿ ಖೇದವೆನಿಸುತ್ತದೆ. ಈ ಕಥೆಯನ್ನು ಓದಿದಾಗ ಅದೆಲ್ಲ ನೆನಪುಗಳು ಒತ್ತಟ್ಟಿಗೆ ಬಂದು ಕಾಡಲಾರಂಭಿಸಿದ್ದು ಸುಳ್ಳಲ್ಲ. ಮನೆ ಕಟ್ಟುವ ಆಟದಲ್ಲಿ ಬೆಂಗಳೂರೆಂಬ ಬೆಂಗಳೂರಲ್ಲಿ ಮನೆ ಕಟ್ಟಬೇಕೆಂದುಕೊಂಡ ಸಾಮಾನ್ಯ ಪ್ರಿಂಟಿಂಗ್ ಪ್ರೆಸ್‌ನ ನೌಕರನೊಬ್ಬನ ಬವಣೆಯ ಚಿತ್ರವಿದ್ದರೆ ‘ದೀಪದ ಕೆಳಗೆ ಕತ್ತಲು’ ಕಥೆ  ಮಲ ಬಾಚಲು ಹಿಂದೇಟು ಹಾಕಿದ ಪೌರ ಕಾರ್ಮಿಕ ನಂತರ ಎಲ್ಲೂ ಉದ್ಯೋಗ ದೊರಕದೇ ಒದ್ದಾಡುವ ಕಥೆಯನ್ನು ಹೇಳುತ್ತದೆ. ಮಣ್ಣಿಗಾಗಿ ಮಣ್ಣಾದವರು ಸೈನಿಕನೊಬ್ಬನ ಮನಮಿಡಿಯು ಕಥೆಯ ಜೊತೆಗೇ ಅವನ ನಂತರ ಅವನ ಹೆಂಡತಿ ಅನುಭವಿಸುವ ತಲ್ಲಣಗಳನ್ನು ವಿವರಿಸುತ್ತೆ. ಆದರೂ ಈ ಮೂರು ಕಥೆಗಳು ಮತ್ತಿಷ್ಟು ಗಟ್ಟಿಯಾಗಿದ್ದರೆ ಒಳ್ಳೆಯದಿತ್ತು.     ಗಂಡು ಜೋಗ್ಯ ಕಥೆಯು ಬದುಕಬೇಕೆಂಬ ಆಸೆ ಹೊತ್ತ ಮುತ್ತು ಕಟ್ಟಿಸಿಕೊಂಡ ಜೋಗಪ್ಪನ ಪ್ರೀತಿಯನ್ನು ವಿಷದಪಡಿಸಿದರೆ ಪ್ರೀತಿಗೆ ಸೋಲಿಲ್ಲ ಕಥೆ ಗಂಡು ಹೆಣ್ಣಿನ ಸಂಬಂಧದ ಕುರಿತು ಮಾತನಾಡುತ್ತದೆ. ಹಾಗೆ ನೋಡಿದರೆ ಇಡೀ ಸಂಕಲನವೇ ಮಾನವ ಸಹಜ ಭಾವನೆಗಳಿಂದ ಕೂಡಿಕೊಂಡಿದೆ. ಇಲ್ಲಿ ಪ್ರೀತಿಯಿದೆ, ದ್ವೇಷವಿದೆ, ಮೋಸ, ಸುಳ್ಳುಗಳಿವೆ, ಅಷ್ಟೇ ಸಹಜವಾದ ಕಾಮವೂ

Read Post »

ಅಂಕಣ ಸಂಗಾತಿ, ಸಂಪ್ರೋಕ್ಷಣ

ಮಾತು ಅರಳುವ ಹೊತ್ತು ನಗುವಿನೊಂದಿಗೆ ಜನ್ಮತಳೆದ ಸಂಬಂಧಗಳ ಭವಿಷ್ಯವನ್ನು ಮಾತು ನಿರ್ಣಯಿಸುತ್ತದೆ. ಮಾತು ಸರಾಗವೆನ್ನಿಸದ ಹೊರತು ಸಂಬಂಧಗಳನ್ನು ಸರಳವಾಗಿಸಿ ಸುಂದರಗೊಳಿಸಲಾಗದು. ಬದುಕಿನ ಸೂಕ್ಷ್ಮಗಳೆಲ್ಲವನ್ನೂ ತನ್ನೆಲ್ಲ ಚಾಣಾಕ್ಷತೆಯನ್ನು ಉಪಯೋಗಿಸಿ ಕಾಪಾಡಿಕೊಳ್ಳುವ ಮಾತು, ಅಗತ್ಯ ಬಿದ್ದಾಗಲೆಲ್ಲ ಸಂಬಂಧಗಳಿಗೊಂದು ಜೀವಂತಿಕೆಯನ್ನೂ ಒದಗಿಸುತ್ತದೆ. ಮಾತುಗಳೇ ಇಲ್ಲದ ಸಂಬಂಧವೊಂದು ಎಲ್ಲಿಯವರೆಗೆ ಜೀವಂತವಾಗಿ ಉಳಿದೀತು; ಎಲ್ಲ ನಕಾರಾತ್ಮಕತೆಯ ಪರಿಹಾರವೆನ್ನುವಂತೆ ಹೃದಯಕ್ಕಿಳಿವ ಮಾತು ಮಾತ್ರವೇ ಸಂಬಂಧಗಳನ್ನೆಲ್ಲ ಸಹೃದಯತೆಯ ಸೆರಗಿನಲ್ಲಿ ಬಚ್ಚಿಟ್ಟು ಸಾಕಿ ಸಲಹೀತು!           ಕಾಲಕಾಲಕ್ಕೆ ತಕ್ಕಂತೆ ಸಂಬಂಧಗಳ ಮೌಲ್ಯದ ಪರಿಕಲ್ಪನೆ ಬದಲಾಗುತ್ತಾ ಹೋದರೂ ಮಾತು ಮಾತ್ರ ಬೇಜಾರಿಲ್ಲದೇ ಬದಲಾವಣೆಗಳಿಗೆಲ್ಲ ಹೊಂದಿಕೊಂಡಿತು. ಪತ್ರಗಳ ಪ್ರಿಯ ಗೆಳತಿ-ಗೆಳೆಯಂದಿರೆಲ್ಲ ವಾಟ್ಸಾಪ್ ಮೆಸೇಜುಗಳ ಬ್ರೊ-ಡಿಯರ್ ಗಳಾದರು; ಪೋಸ್ಟ್ ಕಾರ್ಡ್ ನ ನಾಲ್ಕೇ ನಾಲ್ಕು ಸಾಲುಗಳ ಮಧ್ಯದಲ್ಲಿ ಕಷ್ಟಪಟ್ಟು ಹೊಂದಾಣಿಕೆ ಮಾಡಿಕೊಳ್ಳಬೇಕಾಗಿದ್ದ ಉದ್ದನೆಯ ವಿಳಾಸವೊಂದು ಏಳೆಂಟು ಅಕ್ಷರಗಳ ಇಮೇಲ್ ಅಡ್ರೆಸ್ಸಾಗಿ ನಿರಾಳವಾಗಿ ಕಾಲುಚಾಚಿತು; ಗ್ರೀಟಿಂಗ್ ಕಾರ್ಡುಗಳಲ್ಲಿ ಆತಂಕದಿಂದ ಬಸ್ಸನ್ನೇರುತ್ತಿದ್ದ ಪ್ರೇಮನಿವೇದನೆಯೊಂದು ಇಮೋಜಿಗಳಲ್ಲಿ, ಸ್ಮೈಲಿಗಳಲ್ಲಿ ಗೌಪ್ಯವಾಗಿ ಹೃದಯಗಳನ್ನು ತಲುಪಲಾರಂಭಿಸಿತು. ಹೀಗೆ ಸಂವಹನದ ಸ್ವರೂಪಗಳೆಲ್ಲ ಬದಲಾದರೂ ಮಹತ್ವ ಕಳೆದುಕೊಳ್ಳದ ಮಾತು ಕಾಲಕ್ಕೆ ತಕ್ಕ ಮೇಕಪ್ಪಿನೊಂದಿಗೆ ಅಪ್ಡೇಟ್ ಆಗುತ್ತಲೇ ಇರುತ್ತದೆ.           ಗಂಡ-ಹೆಂಡತಿ ಪರಸ್ಪರ ಮಾತನ್ನಾಡಿದರೆ ಸಾಕು ಮಕ್ಕಳು ಹುಟ್ಟುತ್ತವೆ ಎಂದು ನಾನು ನಂಬಿಕೊಂಡಿದ್ದ ಕಾಲವೊಂದಿತ್ತು. ಅಜ್ಜ-ಅಜ್ಜಿ ಜೊತೆಯಾಗಿ ಕೂತು ಮಾತನ್ನಾಡಿದ್ದನ್ನೇ ನೋಡಿರದ ನಾನು ಅವರಿಗೆ ಎಂಟು ಮಕ್ಕಳು ಹೇಗೆ ಹುಟ್ಟಿದವು ಎಂದು ಅಮ್ಮನನ್ನು ಪ್ರಶ್ನಿಸುತ್ತಿದ್ದೆ. ಇಂತಹ ಮುಗ್ಧ ಯೋಚನೆಯೊಂದು ಈಗ ನಗು ತರಿಸಿದರೂ, ಕಾಲಕಾಲಕ್ಕೆ ಸಂವಹನವೊಂದು ಬದಲಾಗುತ್ತಾ ಬಂದ ರೀತಿಯೂ ಅಚ್ಚರಿ ಹುಟ್ಟಿಸುತ್ತದೆ. ಅಜ್ಜ-ಅಜ್ಜಿಯ ಕಾಲದಲ್ಲಿ ಊಟ-ತಿಂಡಿ, ಪೂಜೆ-ಪುನಸ್ಕಾರಗಳ ಹೊರತಾಗಿ ಮಾತುಕತೆಯೇ ಇಲ್ಲದ ದಾಂಪತ್ಯವೊಂದು ಜಗಳ-ಮನಸ್ತಾಪಗಳಿಲ್ಲದೇ ನಿರಾತಂಕವಾಗಿ ಸಾಗುತ್ತಿತ್ತು. ಮಕ್ಕಳ-ಮೊಮ್ಮಕ್ಕಳ ಮಾತು-ನಗು ಇವುಗಳೇ ಅವರ ಸುಖೀಸಂಸಾರದ ರಹಸ್ಯಗಳೂ, ಗುಟ್ಟುಗಳು ಎಲ್ಲವೂ ಆಗಿದ್ದವು. ಪ್ರೀತಿಯ ಸೆಲೆಯೊಂದು ಸಂವಹನದ ಮಾಧ್ಯಮವಾಗಿ, ಮಾತು ಮೌನಧರಿಸಿ ಸಂಬಂಧಗಳನ್ನು ಸಲಹುತ್ತಿತ್ತು. ದುಡ್ಡು-ಕಾಸು, ಸೈಟು-ಮನೆ ಹೀಗೆ ಸಂಬಂಧಗಳಿಗೊಂದು ಮೌಲ್ಯವನ್ನು ದೊರಕಿಸದ ಮಾತುಕತೆಗಳು ಮನೆತುಂಬ ಹರಿದಾಡುವಾಗಲೆಲ್ಲ, ಮಾತೊಂದು ಪ್ರೀತಿಯ ರೂಪ ಧರಿಸುತ್ತಿದ್ದ ಅಜ್ಜ-ಅಜ್ಜಿಯ ಕಾಲಕ್ಕೆ ವಾಪಸ್ಸಾಗುವ ವಿಚಿತ್ರ ಆಸೆಯೊಂದು ಆಗಾಗ ಹುಟ್ಟಿಕೊಳ್ಳುತ್ತಿರುತ್ತದೆ.           ಹೀಗೆ ಆಗಾಗ ಆತ್ಮತೃಪ್ತಿಯ ಪರಿಕಲ್ಪನೆಯನ್ನೇ ಪ್ರಶ್ನಿಸಿಬಿಡುವಂತಹ, ಈ ಕ್ಷಣದ ಬದುಕಿನ ಸನ್ನಿವೇಶಕ್ಕೆ ಹೊಂದಾಣಿಕೆಯಾಗದೇ ವಿಲಕ್ಷಣವೆನ್ನಿಸಬಹುದಾದಂತಹ ಆಸೆಯೊಂದು ಎಲ್ಲರ ಬದುಕಿನಲ್ಲಿಯೂ ಇರುತ್ತದೆ. ಅಂತಹ ಆಸೆಯೊಂದರ ಅಕ್ಕಪಕ್ಕ ಬಾಲ್ಯವಂತೂ ಸದಾ ಸುಳಿದಾಡುತ್ತಲೇ ಇರುತ್ತದೆ; ಬಾಲ್ಯದ ಹಿಂದೆ-ಮುಂದೊಂದಿಷ್ಟು ಮಾತುಗಳು! ಆ ಮಾತುಗಳೊಂದಿಗೆ ನಾಡಗೀತೆಯನ್ನು ಸುಮಧುರವಾಗಿ ಹಾಡುತ್ತಿದ್ದ ಪ್ರೈಮರಿ ಸ್ಕೂಲಿನ ಟೀಚರೊಬ್ಬರ ಧ್ವನಿ, ಊರಿನ ದೇವಸ್ಥಾನದಲ್ಲಿ ಚಂಪಾಷಷ್ಠಿಯ ದಿನದಂದು ನಡೆಯುತ್ತಿದ್ದ ತಾಳಮದ್ದಳೆಯ ಮೃದಂಗದ ಸದ್ದು, ಕಪ್ಪು-ಬಿಳುಪು ಟಿವಿಯ ಶ್ರೀಕೃಷ್ಣನ ಅವತಾರ ಮಾತನಾಡುತ್ತಿದ್ದ ಅರ್ಧಂಬರ್ಧ ಅರ್ಥವಾಗುತ್ತಿದ್ದ ಹಿಂದಿ, ದುಷ್ಯಂತ-ಶಕುಂತಲೆಯ ಪ್ರಣಯವನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತಿದ್ದ ಸಂಸ್ಕೃತ ಶಿಕ್ಷಕರ ನಾಚಿಕೆ ಎಲ್ಲವೂ ಸೇರಿಕೊಂಡು ಅಲ್ಲೊಂದು ಹೊಸ ಪ್ರಪಂಚ ಸೃಷ್ಟಿಯಾಗುತ್ತಿರುತ್ತದೆ. ಆ ಪ್ರಪಂಚದ ಮಾತುಗಳೆಲ್ಲವೂ ಆತ್ಮಸಂಬಂಧಿಯಾದದ್ದೇನನ್ನೋ ಧ್ವನಿಸುತ್ತ, ಭಾಷೆಯೊಂದರ ಅಗತ್ಯವೇ ಇಲ್ಲದಂತೆ ಅಮೂರ್ತವಾದ ಅನುಭವವೊಂದನ್ನು ಒದಗಿಸುತ್ತಿರುತ್ತವೆ.           ಹಾಗೆ ಮಾತುಗಳೊಂದಿಗೆ ದಕ್ಕಿದ ಸ್ಮರಣ ಯೋಗ್ಯ ಅನುಭವವೆಂದರೆ ಇಸ್ಪೀಟಿನ ಮಂಡಲಗಳದ್ದು. ತಿಥಿಯೂಟ ಮುಗಿಸಿ ಕಂಬಳಿಯ ಮೇಲೊಂದು ಜಮಖಾನ ಹಾಸಿ ತಯಾರಾಗುತ್ತಿದ್ದ ಇಸ್ಪೀಟಿನ ವೇದಿಕೆಗೆ ಅದರದ್ದೇ ಆದ ಗಾಂಭೀರ್ಯವಿರುತ್ತಿತ್ತು. ಊರ ದೇವಸ್ಥಾನದ ಅಧ್ಯಕ್ಷಸ್ಥಾನದ ಚುನಾವಣೆಯಿಂದ ಹಿಡಿದು ಸಂವಿಧಾನದ ಆರ್ಟಿಕಲ್ ಗಳವರೆಗೆ ಚರ್ಚೆಯಾಗುತ್ತಿದ್ದ ಆ ವೇದಿಕೆಯಲ್ಲಿ ಇಸ್ಪೀಟಿನ ರಾಜ-ರಾಣಿಯರೆಲ್ಲ ಮೂಕಪ್ರೇಕ್ಷಕರಾಗುತ್ತಿದ್ದರು. ಸೋಲು-ಗೆಲುವುಗಳೆಲ್ಲ ಕೇವಲ ನೆಪಗಳಾಗಿ ಮಾತೊಂದೇ ಆ ಮಂಡಲದ ಉದ್ದೇಶವಾಗಿದ್ದಿರಬಹುದು ಎಂದು ನನಗೆ ಯಾವಾಗಲೂ ಅನ್ನಿಸುತ್ತಿರುತ್ತದೆ. ಆಧುನಿಕತೆಯೊಂದು ಮಾತಿನ ಜಾಗ ಕಸಿದುಕೊಂಡು ಎಲ್ಲರೂ ಅವರವರ ಪ್ರಪಂಚದಲ್ಲಿ ಮಗ್ನರಾಗಿರುವಾಗ, ಕಪಾಟಿನ ಮೂಲೆಯಲ್ಲಿ ಮಾತು ಮರೆತು ಕುಳಿತ ಜಮಖಾನದ ದುಃಖಕ್ಕೆ ಮರುಗುತ್ತಾ ರಾಜನೊಂದಿಗೆ ಗುಲಾಮ ಯಾವ ಸಂಭಾಷಣೆಯಲ್ಲಿ ತೊಡಗಿರಬಹುದು ಎಂದು ಯೋಚಿಸುತ್ತೇನೆ.           ಹೀಗೆ ಸಂಭಾಷಣೆಗೊಂದು ವೇದಿಕೆ ಸಿಕ್ಕರೂ ಸಿಗದಿದ್ದರೂ ಮಾತು ಒಮ್ಮೆ ವ್ಯಕ್ತವಾಗಿ, ಇನ್ನೊಮ್ಮೆ ಶ್ರಾವ್ಯವಾಗಿ, ಕೆಲವೊಮ್ಮೆ ಮೌನವೂ ಆಗಿ ತನ್ನದೇ ಆದ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತದೆ. ಸಿನೆಮಾದ ನಾಯಕನೊಬ್ಬ ಫೈಟ್ ಮಾಸ್ಟರ್ ನ ಮಾತನ್ನು ಆಕ್ಷನ್ ಗಿಳಿಸಿದರೆ, ರಂಗಭೂಮಿಯ ಮಾತೊಂದು ತಾನೇ ನಟನೆಗಿಳಿದು ಥಿಯೇಟರನ್ನು ತುಂಬಿಕೊಳ್ಳುತ್ತದೆ; ಪುಟ್ಟ ಕಂದನ ಅಳುವೊಂದು ಹಸಿವಿನ ಮಾತನ್ನು ಅಮ್ಮನಿಗೆ ತಲುಪಿಸುವಾಗ, ಅಮ್ಮನ ಪ್ರೇಮದ ಮಾತೊಂದು ಎದೆಯ ಹಾಲಾಗಿ ಮಗುವನ್ನು ತಲುಪುತ್ತದೆ; ಬಸ್ಸಿನ ಟಿಕೆಟಿನಲ್ಲಿ ಪೇಪರಿನ ನೋಟುಗಳು ಮಾತನಾಡಿದರೆ, ಕಂಡಕ್ಟರ್ ನ ಶಿಳ್ಳೆಯ ಮಾತು ಡ್ರೈವರ್ ನ ಕಿವಿಯನ್ನು ಅಡೆತಡೆಗಳಿಲ್ಲದೇ ತಲುಪುತ್ತದೆ. ಅಪ್ಪನ ಕಣ್ಣುಗಳ ಕಳಕಳಿ, ಪ್ರೇಮಿಯ ಹೃದಯದ ಕಾಳಜಿ, ಸರ್ಜರಿಗೆ ಸಿದ್ಧರಾದ ವೈದ್ಯರ ಏಕಾಗ್ರತೆ, ಪರೀಕ್ಷಾ ಕೊಠಡಿಯ ಪೆನ್ನಿನ ಶಾಯಿ ಎಲ್ಲವೂ ಮಾತುಗಳಾಗಿ ತಲುಪಬೇಕಾದ ಸ್ಥಳವನ್ನು ನಿರಾತಂಕವಾಗಿ ತಲುಪಿ ಸಂವಹನವೊಂದು ಅಚ್ಚುಕಟ್ಟಾಗಿ ರೂಪುಗೊಳ್ಳುತ್ತದೆ.           ಹೀಗೆ ಬೆರಗಿನ ಲೋಕವೊಂದನ್ನು ನಮ್ಮೆದುರು ತೆರೆದಿಡುತ್ತಾ, ತಾನೂ ಬೆಳೆಯುತ್ತ ನಮ್ಮನ್ನೂ ಬೆಳೆಸುವ ಸಂವಹನವೆನ್ನುವ ಸಂವೇದನೆಯೊಂದು ಮಾತಾಗಿ ಅರಳಿ ಮನಸ್ಸುಗಳನ್ನು ತಲುಪುತ್ತಿರಲಿ. ಪ್ರೈಮರಿ ಸ್ಕೂಲಿನ ಅಂಗಳದ ಮಲ್ಲಿಗೆಯ ಬಳ್ಳಿಯೊಂದು ಟೀಚರಿನ ಕಂಠದ ಮಾಧುರ್ಯಕ್ಕೆ ತಲೆದೂಗುತ್ತಿರಲಿ. ಭಕ್ತರ ಮಾತುಗಳನ್ನೆಲ್ಲ ತಪ್ಪದೇ ಆಲಿಸುವ ದೇವರ ಮೌನವೊಂದು ಶಾಂತಿಯ ಮಂತ್ರವಾಗಿ ಹೃದಯಗಳನ್ನು ಅರಳಿಸಲಿ. ಸಕಲ ಬಣ್ಣಗಳನ್ನೂ ಧರಿಸಿದ ಟಿವಿ ಪರದೆಯ ಪಾತ್ರಗಳೆಲ್ಲ ಪ್ರೀತಿ-ವಿಶ್ವಾಸಗಳ ಮಧ್ಯವರ್ತಿಗಳಾಗಿ ಮಾತಿನ ಮೂಲಕ ಮಮತೆಯನ್ನು ಬಿತ್ತರಿಸಲಿ. ನಾಚಿ ನೀರಾಗುತ್ತಿದ್ದ ಸಂಸ್ಕೃತ ಶಿಕ್ಷಕರ ಶಕುಂತಲೆಯ ಪ್ರೇಮಕ್ಕೆಂದೂ ಪರೀಕ್ಷೆಯ ಸಂಕಷ್ಟ ಎದುರಾಗದಿರಲಿ. ಕಲಿತ ಮಾತುಗಳೆಲ್ಲ ಪ್ರೀತಿಯಾಗಿ, ಪ್ರೀತಿಯೊಂದು ಹೃದಯಗಳ ಮಾತಾಗಿ, ಹೃದಯಗಳೊಂದಿಗಿನ ಸಂವಹನವೊಂದು ಸಂಬಂಧಗಳನ್ನು ಸಲಹುತ್ತಿರಲಿ. *************************************** ಲೇಖಕರ ಬಗ್ಗೆ ಎರಡು ಮಾತು: ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ

Read Post »

ಪುಸ್ತಕ ಸಂಗಾತಿ

ನಾಡಿ ಮಿಡಿತದ ದಾರಿ

ಪುಸ್ತಕಪರಿಚಯ ಪುಸ್ತಕ : ನಾಡಿ ಮಿಡಿತದ ದಾರಿ 🩺(ವೈದ್ಯಲೋಕದ ಅನುಭವ ಕಥನಗಳು) ಲೇಖಕರು: ಡಾ|| ಶಿವಾನಂದ ಕುಬಸದಪ್ರಕಾಶನ: ನೀಲಿಮಾ ಪ್ರಕಾಶನಬೆಂಗಳೂರುಪುಟಗಳು: 160ಬೆಲೆ: ರೂ. 130/-ಪ್ರಕಟಿತ ವರ್ಷ: 2019ಲೇಖಕರ ದೂರವಾಣಿ: 9448012767 ವೃತ್ತಿಯಿಂದ ಪರಿಣತ ಶಸ್ತ್ರ ಚಿಕಿತ್ಸಕರಾಗಿ, ಜನಾನುರಾಗಿ ವೈದ್ಯರಾಗಿ, ವಿವಿಧ ವ್ಯಾಧಿಗಳ ಕುರಿತು ಜನತೆಗೆ ಮಾಹಿತಿ ನೀಡುವ ವಕ್ತಾರರಾಗಿ, ಗ್ರಾಮೀಣರ ಮೂಡನಂಬಿಕೆಗಳನ್ನು ಹೋಗಲಾಡಿಸಿ ವೈಜ್ಞಾನಿಕ ಮನೋಭಾವ ಮೂಡಿಸುವ ಆಪ್ತ ಬಂಧುವಾಗಿ, ರೋಗಿಗಳ ಸೇವೆಯಲ್ಲಿ ದೇವರನ್ನು ಕಾಣುವ ಕಾಯಕ ಯೋಗಿಯಾಗಿ, ಸೃಜನಶೀಲ ಕವಿ, ಲೇಖಕರಾಗಿ ಒಂದು ಪ್ರದೇಶದ ಒಂದು ಕಾಲಗಟ್ಟದ ಇತಿಹಾಸಕಾರರಾಗಿ, ಎಲ್ಲರನ್ನು ಪ್ರೀತಿ, ಗೌರವ, ವಿಶ್ವಾಸದಿಂದ ಕಾಣುವ ವೈದ್ಯ ಸಾಹಿತಿಯಾಗಿರುವ ಮುಧೋಳದ ಡಾ|| ಶಿವಾನಂದ ಕುಬಸದ ಅವರು ಕಳೆದ ವರ್ಷ ಪ್ರಕಟಿಸಿದ “ನಾಡಿ ಮಿಡಿತದ ದಾರಿ” ಇಂದಿನ ಕೃತಿ ಪರಿಚಯ. ವೈದ್ಯಲೋಕದ ಜೀವನಾನುಭವಗಳ ಸುಂದರ ಇಪ್ಪತ್ನಾಲ್ಕು ಕಥನಗಳು ಇಲ್ಲಿ ದೃಶ್ಯಕಾವ್ಯಗಳಾಗಿವೆ. ಸಂವೇದನಾಶೀಲತೆ, ಮಾನವೀಯತೆ, ಸಾಮಾಜಿಕ ಜಾಡ್ಯಗಳಿಗೆ ಪರಿಹಾರೋಪಾಯ ಇಲ್ಲಿನ ವಿಷಯ ವಸ್ತು. ಲೇಖಕಿ ವೀಣಾ ಬನ್ನಂಜೆ ಅವರ ಅನುಭಾವದ ಮುನ್ನುಡಿ ಹಾಗೂ ಖ್ಯಾತ ಕಥೆಗಾರರಾದ ಕುಂ. ವೀರಭದ್ರಪ್ಪ ಅವರ ಆತ್ಮೀಯತೆಯ ಮಾತುಗಳು ಇಲ್ಲಿ ಮನೋಜ್ಞವಾಗಿ ಮೂಡಿ ಬಂದಿವೆ. ಇಲ್ಲಿರುವ ಎಲ್ಲ ಅನುಭವಾಮೃತದ ಕಥೆಗಳು ಉದಯವಾಣಿ ಪತ್ರಿಕೆಯಲ್ಲಿ ಅಂಕಣ ಬರಹಗಳಾಗಿ ಪ್ರಕಟವಾಗಿವೆ. ವರ್ತಮಾನದ ಸಾಂದರ್ಭಿಕ ಸಮಸ್ಯೆಗಳ ಮೇಲೆ ಸ್ಟೆಥಸ್ಕೋಪ್ ಆಡಿಸಿ, ಸಮಾಜದ ಸಾಕ್ಷಿಪ್ರಜ್ಞೆಯನ್ನು ಪೋಷಿಸಿ ರೋಗಿಗಳ ಮನೋಜ್ಞ ಚಿತ್ರಣ ನೀಡಿದ್ದಾರೆ. ಇಲ್ಲಿನ ಅಂಕಣ ಬರಹಗಳಿಗೆ ಕಥೆಗಳ ಜೀವದ್ರವ್ಯವಿದೆ. ಜಾತಕ, ಕುಂಡಲಿ ನಕ್ಷತ್ರಗಳಿಗಿಂತಲೂ ಆಸ್ತಿಕನಾಗಿ ರಕ್ತಪರೀಕ್ಷೆ, ನಾಡಿ ಮಿಡಿತ ಹಾಗೂ ಸೂಕ್ತ ಚುಚ್ಚು ಮದ್ದಿನ ಮೂಲಕ ರೋಗಿಯನ್ನು ಗುಣಪಡಿಸಬೇಕು ಎಂಬುದು ವೈದ್ಯರ ಆಶಯ. ವೃತ್ತಿ ಧರ್ಮದಲ್ಲಿ ದೇವರನ್ನು ಕಾಣುವ ಇವರು ‘ದಯವೇ ಧರ್ಮದ ಮೂಲ’ ಎನ್ನುತ್ತಾರೆ. ಇಲ್ಲಿನ ಕಥೆಗಳು ನೈಜ ಬದುಕಿನ ಅಭಿವ್ಯಕ್ತಿಯಾಗಿದ್ದು ಯಾವುದೂ ಸಹ ಕಾಲ್ಪನಿಕವಾಗಿಲ್ಲ. ‘ವೃತ್ತಿ ಸಾರ್ಥಕ್ಯದ ಆ ದಿನ’ ಎಂಬ ಬರಹ ಹೃದಯಸ್ಪರ್ಶಿಯಾಗಿದ್ದು ಹೆರಿಗೆ ಸಮಯದಲ್ಲಿ ಹೆಣ್ಣುಮಗಳೊಬ್ಬಳು ಜೀವನ್ಮರಣದೊಡನೆ ಹೋರಾಡುತ್ತಿರುವಾಗ ವೈದ್ಯರೇ ಸ್ವತಃ ರಕ್ತದಾನ ನೀಡಿ, ನಿರಂತರ ಒಂದು ಗಂಟೆ ಶಸ್ತ್ರಚಿಕಿತ್ಸೆ ನಡೆಸಿ ಅವಳ ಪ್ರಾಣ ಉಳಿಸಿದ ರೋಚಕ ಅನುಭವಗಾಥೆ ಓದುಗರಲ್ಲಿ ಧನ್ಯತಾ ಭಾವ ಮೂಡಿಸುತ್ತದೆ. ‘ಅವ್ವನೆಂಬ ಆಧಾರಸ್ತಂಭಕ್ಕೆ ಆಸರೆಯಾಗಿ’ ಎಂಬ ಲೇಖನದಲ್ಲಿ ತಾಯಿಯೇ ಸರ್ವಸ್ವ ಎಂದು ನಂಬಿದ ವೈದ್ಯಮಿತ್ರರೊಬ್ಬರು ಆಕಸ್ಮಿಕವಾಗಿ ಅನಾರೋಗ್ಯಕ್ಕೊಳಗಾದ ತಾಯಿಯನ್ನು ಏಳು ವರ್ಷಗಳ ಕಾಲ ಮಗುವಿನಂತೆ ಉಪಚರಿಸಿದ ಸಂಗತಿ ಎಲ್ಲರಿಗೂ ಆದರ್ಶಪ್ರಾಯ ಹಾಗೂ ಅನುಕರಣಿಯ. ‘ಜಗವೆಲ್ಲ ನಗುತಿರಲಿ ಜಗದಳುವು ನನಗಿರಲಿ’ ಎನ್ನುವ ಕವಿವಾಣಿಯಂತೆ ಇಲ್ಲಿ ರೋಗಿಯೊಬ್ಬ ತನಗೆ ಕ್ಯಾನ್ಸರ್ ಕಾಯಿಲೆ ಇದ್ದರೂ ಸಹ ಮನೆಯವರಿಗೆ ಹೇಳದೆ ತಾನೇ ಅನುಭವಿಸುವ ಸ್ಥಿತಿ ಕಂಡ ವೈದ್ಯರು ಅವನಲ್ಲಿ ಯೋಗಿಯ ಗುಣವನ್ನು ಕಾಣುತ್ತಾರೆ. ‘ಗುಟಕಾ ಎಂಬ ಹೊಗೆಯಿಲ್ಲದ ಬೆಂಕಿ’ ಎಂಬ ಕಥೆಯಲ್ಲಿ ಇಂದಿನ ಸಮಾಜದಲ್ಲಿ ಯುವಜನಾಂಗ ದುಶ್ಚಟಗಳಿಗೆ ದಾಸರಾಗುವುದನ್ನು ಕಂಡು ಖೇದ ವ್ಯಕ್ತಪಡಿಸುತ್ತಾರೆ. ಒಂದು ದಿನ ವೈದ್ಯರು ಆಸ್ಪತ್ರೆಗೆ ಬರದೇ ಮರುದಿನ ಬಂದಾಗ ಸಿರಿವಂತ ರೋಗಿ ಒಬ್ಬ ಕೋಪಗೊಂಡು ಬೈದಾಗಲೂ ಸಹ ಸ್ಥಿತಪ್ರಜ್ಞರಾಗಿ ಉಪಚರಿಸಿದ್ದು ಶ್ಲಾಘನೀಯ. ನೇಣು ಹಾಕಿಕೊಂಡು ಬದುಕುಳಿದವನ ದೇಹದಲ್ಲಾಗುವ ಬದಲಾವಣೆಗಳ ಬಗ್ಗೆ ಆಪ್ತ ಗೆಳೆಯನಂತೆ ತಿಳಿಸಿದ್ದಾರೆ. “ಮಡದಿ ಎಂಬ ಮಹಾಗುರು” ಎಂಬ ಅಧ್ಯಾಯದಲ್ಲಿ ಮದ್ಯಪಾನ ವ್ಯಸನಕ್ಕೆ ಒಳಗಾದ ಗಂಡನನ್ನು ಪತ್ನಿಯೊಬ್ಬಳು ಮದ್ಯವ್ಯಸನದಿಂದ ಮುಕ್ತನಾಗಿ ಮಾಡಿದ ಕಥೆ ಮಾರ್ಮಿಕವಾಗಿದೆ. ಮದ್ಯ ಸೇವನೆಯಿಂದ ಶರೀರದ ಮೇಲಾಗುವ ದುಷ್ಪರಿನಾಮಗಳ ಬಗ್ಗೆ ವಿವರಿಸುವಾಗ ಇಲ್ಲಿ ವೈದ್ಯರು ಶಾಲಾ ಅಧ್ಯಾಪಕನಂತೆ ಗೋಚರಿಸುತ್ತಾರೆ. ಅಪ್ಪ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ? ಪಿಯುಸಿಯಲ್ಲಿ ರಾಜ್ಯಕ್ಕೆ ಹತ್ತನೇ ಸ್ಥಾನ ಪಡೆದಾಗ ಅಪ್ಪನ ಮೊಗದಲ್ಲಿ ಮೂಡುವ ಗೆಲುವಿನ ಗೆರೆ, ಮಗ ವೈದ್ಯನಾದಾಗ ಕಣ್ಣಂಚಲ್ಲಿ ಹೊಮ್ಮಿದ ಸಾರ್ಥಕತೆ, ಕೈಬೆರಳು ಹಿಡಿದು ನಡೆಸಿದ ಅಪ್ಪ ಕೈಬಿಟ್ಟು ಹೋದಾಗ ಉಂಟಾಗುವ ಶೂನ್ಯತೆ. ಇವೆಲ್ಲವೂ “ಅಪ್ಪ ನೆನಪಾಗುತ್ತಾನೆ” ಎಂಬ ಅಧ್ಯಾಯದಲ್ಲಿ ಸಿನಿಮಾ ರೀಲಿನಂತೆ ಅಪ್ಪನ ನೆನಪುಗಳು ಬಿಚ್ಚಿಕೊಳ್ಳುತ್ತವೆ. ಹೀಗೆ ಇಲ್ಲಿರುವ ಎಲ್ಲ ಬರಹಗಳ ಹಿಂದೆ ಸ್ವಾರಸ್ಯಕರ ಅನುಭವ ಅವಿಸ್ಮರಣೀಯ ಸಂಗತಿಗಳು ಕಥಾವಸ್ತುಗಳಾಗಿವೆ. ವಾಸ್ತವ ಸಮಾಜಕ್ಕೆ ಕೈಗನ್ನಡಿಯಾಗಿ, ಸ್ವಸ್ಥ ಸಮಾಜಕ್ಕೆ ಮಾರ್ಗದರ್ಶಿಯಾಗಿ ನಿಲ್ಲುವ ಈ ಕೃತಿ ಸಾರಸ್ವತ ಲೋಕಕ್ಕೆ ಒಂದು ಅಮೂಲ್ಯ ಕೊಡುಗೆ. ಈಗಾಗಲೇ “ಇಷ್ಟು ಮಾಡಿದ್ದೇನೆ” ಎಂಬ ಕವಿತಾ ಸಂಕಲನ ಹಾಗೂ “ಗಿಲೋಟಿನ್” ಎನ್ನುವ ಯುರೋಪ್ ಪ್ರವಾಸ ಕಥನ ಪ್ರಕಟಿಸಿ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರಿಂದ ಇನ್ನಷ್ಟು ಮೌಲಿಕ ಕೃತಿಗಳು ಮೂಡಿ ಬರಲಿ ಎಂಬುದು ನಮ್ಮೆಲ್ಲರ ಬಯಕೆ. **** ಬಾಪು ಖಾಡೆ

ನಾಡಿ ಮಿಡಿತದ ದಾರಿ Read Post »

ಕಾವ್ಯಯಾನ

ಮಾರುವವಳು

ಕವಿತೆ ಮಾಂತೇಶ ಬಂಜೇನಹಳ್ಳಿ ಮೂರನೇ ತಿರುವಿನ ಬಾನೆತ್ತರದ ದೀಪದ ಕಂಬದ ಅಡಿ ನಿಂತ ಆಗಸದಗಲ ಛತ್ರಿಯ ಕೆಳ ಮಲ್ಲಿಗೆ ತುರುಬಿನ ಎಳವೆ ಮಲ್ಲೆಗೆ, ರಾಶಿಯೋಪಾದಿ ಕೋರೈಸುವ ಹೂಗಳ ಸ್ಪರ್ಶ ಗೆಳೆತನ. ಉದುರಿದ ದಿನಗಳು ಈಗೀಗ ಒಗ್ಗುತ್ತಿವೆ, ಬಿರಿದ ಚೆಂಗುಲಾಬಿ ಮುಡಿದು, ಸೂರ್ಯನಿಳಿವ ಹೊತ್ತಿಗೆ ಮುದುಡಿದ ದೇಹ, ಕತ್ತಲೆಯಾಗುತ್ತಲೇ ಹೊರಡುವ ತರಾತುರಿ.. ಒಣಗಿ ಮಬ್ಬೇರಿದ ಕಂದು ಹೂಗಳ ನೆತ್ತಿಯಿಂದೆ ಸುತ್ತಿದಾಕೆ, ತಾನು ಒಪ್ಪದ ವರನ ವರಿಸದ್ದಕ್ಕೆ, ಹಿಂದೆ ಬಿದ್ದವರ ಸಲಹಲು, ಭವಿಷ್ಯ ಪಕ್ಕಕ್ಕೆ ಎತ್ತಿಟ್ಟವಳು. ಈಗೀಗ ಮುಂಜಾನೆ ಅರಳಿ, ಸಂಜೆಗೂ ನಳನಳಿಸೋ ಹೂವಂತೆ ದಿನವೂ ಅರಳುವ ಮತ್ತು ಮನದಲ್ಲೇ ಮರುಗುವ, ನಿತ್ಯ ಒಳ ನರಳಿಗೆ ಕುಗ್ಗಿದ ಸುಕ್ಕು ಕುಸುರಿ ದೇಹ. ಬದುಕು ಬಯಸಿದಂತೆ ನಡೆದಿದ್ದರೆ, ಹೀಗೆ ಗಿರಾಕಿ ಬಯಸುವ ಬಣ್ಣದ, ಭಿನ್ನ ಅಳತೆಯ ಜಡೆ ಹಾರ ಕಟ್ಟುವ ಮಾರುವ,‌ ಕೂಗುವ ಮತ್ತೆ ಮೌನವಾಗುವ, ಅಂತರಂಗದ ಒಂಟೀ ತುಳಿತಕ್ಕೆ ಅಡಿಯಾಗುತ್ತಿರಲಿಲ್ಲವೇನೋ!?.. ಹೂವ ಚೌಕಾಸಿ ಕೇಳುವವರ ಬಳಿ, ಅರಿವಿರದೆ ಅಡ್ಡಿಗೊಳಿಸಿಕೊಂಡ, ಗತದ ಬಗ್ಗೆ ಈಗೀಗ ಅಲವತ್ತುಕೊಳ್ಳುತ್ತಾಳೆ. *************

ಮಾರುವವಳು Read Post »

ಪುಸ್ತಕ ಸಂಗಾತಿ

ಪ್ರೀತಿ ಮತ್ತು ಪ್ರೀತಿ ಮಾತ್ರ

ಪ್ರೀತಿ ಮತ್ತು ಪ್ರೀತಿ ಮಾತ್ರಲೇಖಕರು – ಜ್ಯೋತಿ ಗುರು ಪ್ರಸಾದ್ ಆರಂಭದ ಲೇಖನದಲ್ಲಿ ಪರಿಸರ ಹೋರಾಟಗಾತಿಯಾದ ದಿವಂಗತ ಕುಸುಮಾ ಸೊರಬ ಅವರ ಬಗ್ಗೆ ತಿಳಿಸುತ್ತಾ ಲೇಖಕಿಯು ಅವರ ಈ ಮಾತುಗಳನ್ನುಉಲ್ಲೇಖಿಸುತ್ತಾರೆ ಗಮನಿಸಿ – ” ಗಿಡ ಬೆಳೆಸಿದೆವನಿಗೆ ನರಕವಿಲ್ಲ” ಎಂಬ ಅಂಶ ಗರುಡ ಪುರಾಣದಿಂದಲೇ ಆರಂಭವಾಗಿ ಅಂದಿನ ಜನಜೀವನದ ದಿನನಿತ್ಯ ಕಾರ್ಯಕ್ರಮವಾಗಿತ್ತು. ಪರಿಸರ ರಕ್ಷಣೆ ಹಾಗೆಂದು ತಿಳಿದುಕೊಳ್ಳದೆಯೇ ಜೀವನದ ಆಂಗ ಆಗಿತ್ತು. ಈಗ ಮಾತ್ರ ಇದು ಫ್ಯಾಶನ್. ಮಳೆ – ಇಳೆ ಎಂಬ ಪೃಥ್ವಿಯನ್ನು ರಕ್ಷಣೆ ಮಾಡುವುದೇ ಎಂದರೆ ತನ್ನನ್ನು ತಾನೆ ರಕ್ಷಣೆ ಮಾಡಿಕೊಳ್ಳುವುದೇ ಮಹಿಳೆಯ ರಕ್ಷಣೆ. ಮದುವೆ ಮುಂಜಿಗಳಿಗೆ ಹೋಗಲು ಅನುಮತಿ ಬೇಕಾಗಿಲ್ಲ. ಆದರೆ ಯಾವುದೆ ಪರಿಸರ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಂದು ಮಹಿಳೆಗೆ ‘ ಅನುಮತಿ’ ಬೇಕಾಗಿದೆ. ಎಷ್ಟೊಂದು ಸತ್ಯವಿದೆ ! ಇಂತಹ ಮಾತುಗಳನ್ನು ಪ್ರಾಮುಖ್ಯ ಮಾಡುತ್ತ ಹೋಗುವಲ್ಲಿ ಲೇಖನ ಹೆಚ್ಚುಪರಿಣಾಮಕಾರಿಯಾಗಿದೆ.ದಾಂಪತ್ಯದ ಬಗ್ಗೆ ಸೊಗಸಾಗಿ ಹೀಗೆ ವ್ಯಾಖ್ಯಾನಿಸುತ್ತಾರೆ “ಕಾಮ ಪ್ರೇಮವಾಗಿ ವಾತ್ಸಲ್ಯವಾಗಿ ಹರಿಯುವುದೇ ದಾಂಪತ್ಯ ನಿಷ್ಠೆ”.ಗೊಮ್ಮಟನ ಎತ್ತರವನ್ನು ಕಣ್ಮುಂದೆ ನಿಲ್ಲಿಸಲು ಬರೆದ ಈ ಸಾಲುಗಳು ಲೇಖನದ ಮೌಲ್ಯವನ್ನು ಹೆಚ್ಚಿಸುವಲ್ಲಿ ಸಫಲ“ಭೂಮಿಯ ತಾಳ್ಮೆಯನ್ನು ಆಕಾಶಕ್ಕೆ ಮುಟ್ಟಿಸಲು ಹೊರಟಿರುವಂಥ ಸಂತ. ಮನುಷ್ಯ ಕುಲದಲ್ಲಿ ಎತ್ತರದ ಮೌಲ್ಯಗಳಿಗೆ ಎಲ್ಲಿಯವರೆಗೆ ಪ್ರಾಶಸ್ತ್ಯಇರುವುದೋ ಅಲ್ಲಿಯವರೆಗೆ ನಮ್ಮ ಬಾಹುಬಲಿ ಬೆಳಯುತ್ತಿರುತ್ತಾನೆಶುದ್ಧ ಮನಸುಗಳ ಭಾಗವಾಗುತ್ತಾನೆ ಬಾಹುಬಲಿಯ ನಗ್ನತೆಯು ನಮ್ಮ ತೆರೆದ ಮನಸ್ಸಿನ ದಿಟ್ಟತನವಾಗಿ ನಮ್ಮ ಹೃದಯದ ಸೌಂದರ್ಯವನ್ನು ಕಾಯ್ದುಕೊಳ್ಳಲಿ” ಎಂಬಮಾತುಗಳು ಗೊಮ್ಮಟನ ಎತ್ತರವನ್ನು ಸಹೃದಯಿಗಳ ಕಣ್ಮುಂದೆ ನಿಲ್ಲಿಸುವಲ್ಲಿ ಯಶಸ್ವಿಯಾಗಿವೆ.ತುಮಕೂರಿನ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿ ಮೊಗಳ್ಳಿ ಗಣೇಶ್ ರವರು ‘ ಪುಣ್ಯಕೋಟಿ ‘ ಪದ್ಯದ ಬಗ್ಗೆ ಎತ್ತಿದ ಪ್ರಶ್ನೆಯನ್ನು ಪ್ರಸ್ತಾಪಿಸುತ್ತ ಓದುಗರನ್ನು ಯೋಚನೆಗೆ ಹಚ್ಚುತ್ತಾರೆ.ಪೂ.ಚಂ.ತೇಜಸ್ವಿಯವರ ವ್ಯಕ್ತಿತ್ವವನ್ನು ಸಂಪೂರ್ಣವಾಗಿತೆರೆದಿಡಲು ಲೇಖಕಿಯು ಹೇಳುವ ಮಾತುಗಳು ಅವರ ಆಆಶಯವನ್ನು ನೆರವೇರಿಸುತ್ತ ಲೇಖಕಿಯ ಪ್ರೌಢ ಭಾಷಾ ಶೈಲಿಗೆ ಸಾಕ್ಷಿಯಾಗುತ್ತವೆ. ಕೆಳಗಿನ ಸಾಲುಗಳನ್ನು ಓದಿರಿ-೧. ತೇಜಸ್ವಿಯವರ ಬಗ್ಗೆ ಬರೆಯುವುದೆಂದರೆ ಜೀವನದಸರಳ ಸತ್ವಗಳನ್ನು ನಮಗೆನಾವೇ ಸಂಶೋಧಿಸಿಕೊಂಡಂತೆತೋರಿಕೆಯ ಯಾವುದೇ ಭಾರವಿಲ್ಲದೆ ಅವರ ಆತ್ಮಸಾಕ್ಷಿಗೆಅನುಗುಣವಾಗಿ ಅನಾವರಣವಾಗುವ ತೇಜಸ್ವಿ ಕುವೆಂಪುಅವರು ಆಶಯಗಳಿಗೆಲ್ಲಾ ರೂಪಕದಂತಿದ್ದಾರೆ.೨. ಕೀರ್ತಿ ಶನಿ ತೊಲಗಾಚೆ ದೂರ’ ಎನ್ನುವ ತಂದೆಯ ಕವಿವಾಣಿಗೆ ತಾವೇ ದನಿಯಾಗಿ,ತಮ್ಮ ಸ್ವತಂತ್ರ ವ್ಯಕ್ತಿತ್ವದಿಂದತಮ್ಮ ಕೃಷಿ ಆಸಕ್ತಿಯಲ್ಲಿ ತೊಡಗಿಸಿಕೊಂಡು ನಶ್ವರದ ಈಪುಟ್ಟ ಜೀವನದಲ್ಲಿ ಯಾವ ಸೋಗೂ ಇಲ್ಲದೆ ಒಬ್ಬ ‘ಸರಳ ಮನುಷ್ಯ’ ನಾಗಿ ಹೇಗೆ ಸಲ್ಲ ಬಹುದು ಎಂಬುದಕ್ಕೆ ತೇಜಸ್ವಿಖಂಡಿತ ಮಾದರಿಯಾಗಿದ್ದಾರೆ.೩. ಯಾವ ವಶೀಲಿ ಬಾಜಿಗಳಿಗೂ ಒಳಗಾಗಿದೆ ಪರಿಸರದಮುಖ್ಯ ಜೀವವಾಗಿ ಹಕ್ಕಿಯಂತೆ, ಮರದಂತೆ ಜೀವಿಸುತ್ತಾ ಇರುವ ಅವರ ಜೀವನ ತೆರೆದ ಪುಸ್ತಕದಂತಿದೆ.ವೀಚಿ (ಚಿಕ್ಕ ವೀರಣ್ಣನವರು )ಯವರ ಏನೂ ತಿಳಿಯದಓದುಗನಿಗೂ ಸಹ ಅವರ ಸಾಹಿತ್ಯದಲ್ಲಿ ಆಸಕ್ತಿ ಹುಟ್ಟಲು “ಇರುವ ಬದುಕನೆತ್ತರಿಸಲು, ಉತ್ತರಿಸಲು ಧ್ಯಾನಿಸು”,“ಪ್ರೀತಿಗೊಂದೇ ಮುಖವು ದ್ವೇಷಕ್ಕೆ ಹಲವಾರು”,“ಮುದವೆಂದರೇನನ್ನೋ ಕಲಿಯುವುದಿಲ್ಲ ತಾನೇ ಅದಾಗುವುದು” ಎಂಬ ಸಾಲುಗಳನ್ನು ಗುರುತಿಸಿದ್ದಾರೆ.ಹಾಗೆ ” ಕನ್ನಡಿಯೋ ಅಥವಾ ದೀಪವೋ ಆಗದ ಸಾಹಿತ್ಯ ಚಿಂತನೆ ವ್ಯರ್ಥ” ಎಂಬ ಡಿ. ಆರ್. ನಾಗರಾಜರವರ ಉಕ್ತಿಯನ್ನು ಅನುಷ್ಟಾನಕ್ಕೆ ತರಲು ಪ್ರಯತ್ನಿಸಿದ ಲೇಖಕರಾದ ಮುರಾರಿ ಬಲ್ಲಾಳರ ಬರಹದ ಬಗ್ಗೆ ಓದುಗರ ಕುತೂಹಲ ಮೂಡಿಸುವಲ್ಲಿ ಲೇಖಕಿಯು ಸಫಲರಾಗಿದ್ದಾರೆ.ಪ್ರೇಮವನ್ನು ಕುರಿತು ಲೇಖಕಿ ನೀಡಿರುವ ವ್ಯಾಖ್ಯಾನವುಎಷ್ಟು ಅರ್ಥಪೂರ್ಣ.”ಪ್ರೇಮ ನಮ್ಮ ಪ್ರಬುದ್ಧ ಆಯ್ಕೆಯ ಒಂದು ಸ್ಥಾಯಿಯಾದ ಶೋಧ. ಅದನ್ನು ಎಳೆದು ತಂದುಗಂಟು ಹಾಕಲಾಗುವುದಿಲ್ಲ”ಶಿಕ್ಷಣದಲ್ಲಿ ಕನ್ನಡ ಮಾಧ್ಯಮದ ಬಗ್ಗೆ ಲೇಖಕಿಯು ಹೇಳಿದ ಮಾತು ಹದಿನಾರು ವರ್ಷಗಳು ಕಳೆದರೂ ಪ್ರಸ್ತುತವಾಗಿದೆಸ್ತ್ರೀವಾದದ ಬಗ್ಗೆ ಜ್ಯೋತಿಯವರ ಪ್ರತಿಪಾದನೆ ಹೀಗಿದೆ _ “ಸ್ತ್ರೀವಾದವೆಂದರೆ ಹೆಣ್ಣಿನ ನೈಸರ್ಗಿಕ ಅಸ್ತಿತ್ವವನ್ನು ಉಳಿಸಿ ಕೊಂಡು ಆ ಸವಿಯ ಸ್ವಾತಂತ್ರದಲ್ಲೇ ಕಂಡು ಕೊಳ್ಳುವ ವ್ಯಕ್ತಿತ್ವದ ಪೂರ್ಣದೃಷ್ಟಿಯೆ ಹೊರತು ಬರಿಯ ವಾದಕ್ಕಾಗ ವಾದ ಮಾಡುವ ಒಣವಾದವಲ್ಲ” ಎಂಬ ಲೇಖಕಿಯವರ ಅಭಿಪ್ರಾಯ ಪರಿಪಕ್ವವಾಗಿದೆ. ಭಾರತದ ಸಾಂಸ್ಕೃ,ತಿಕ ಅನನ್ಯತೆಯನ್ನು ಪ್ರಸ್ತಾಪಿಸಿ “ತಲೆಬಾಗುವ ವಿನಯವೇ,ಕೈ ಜೋಡಿಸುವ, ಆಕಾಶಕ್ಕೆ ಕೈಯೊಡ್ಡಿಪ್ರಾರ್ಥಿಸುವ, ಎದೆ ಮುಟ್ಟಿ ದೇವರನ್ನು ಸ್ಪರ್ಶಿಸುವ ಅಂತರಂಗದ ಆಲಾಪವೇ ನನಗೆ ನಮ್ಮ ದೇಶದ ಮಹತ್ವ ಸಾಂಸ್ಕೃತಿಕ ಅನನ್ಯತೆ” ಈ ಮಾತು ನೈಜ ದೇಶಪ್ರೇಮದ ಪ್ರತೀಕ.ಬದುಕು ಬರಹದ ನಡುವೆ ಅಂತರಉಳಿಸಿಕೊಂಡ ಲೇಖಕ ಲಂಕೇಶ್ ರವರನ್ನು ಕಂಡಾಗ ಆದ ಭ್ರಮನಿರಸನ ಕುರಿತು ತಿಳಿಸಿದ್ದಾರೆಕೆಲವೊಂದು ಚಲನೆ ಚಿತ್ರಗೀತೆಗಳ ವಿಮರ್ಶೆ, ಮೆಚ್ಚಿನನಟರ ಬಗ್ಗೆ ಬರೆಯುವಂತೆ ಬಿ. ಆರ್. ಲಕ್ಷ್ಮಣ್ ರಾವ್ ರವರ ಪ್ರೇಮದ ಕುರಿತು ಪಂದ್ಯವನ್ನು ಟೀಕಿಸುತ್ತಾ.”ಆಕ್ಟ್ಆಫ್ ಲಿವಿಂಗ್” ಬಗ್ಗೆ ಹೇಳವಲ್ಲಿ ವಿಶೇಷ ಹೊಳಹುಗಳಿವೆಎಳ್ಳು ಜೀರಿಗೆ ಬೆಳೆಯೋಳ ಭೂಮಿತಾಯನ್ನು ನೆನೆಯುವಕೃತಜ್ಞತೆಯ ಮಹಾಪೂರದಲ್ಲಿ “ಸೂರ್ಯ ನಮಸ್ಕಾರ’ದ,‘ ಸಂಧ್ಯಾವಂದನೆ’ ಯು ‘ಗಾಯತ್ರಿ ಮಂತ್ರ’ದ ಎಲ್ಲಾ ಫಲಸಿದ್ಧಿಸುತ್ತವೆ. ಮುಖ್ಯ ಬೇಕಾಗಿರುವುದು ಒಳನೋಟ – ನಿಜದ ಸಂತಸವೆನ್ನವ ಲೇಖಕರ ಈ ಮಾತುಗಳು ಮನದಆಳಕ್ಕೆ ಇಳಿಯುತ್ತವೆ ಎಂಬುದು ಅಷ್ಟೇ ನಿಜ.ಮತಾಂಧರ ಕಣ್ಣಿಗೆ ಅಂಜನ ಹಾಕುವ ಅಂಜನೆ ಬೇಕಾಗಿದೆ ಎಂಬ ಸತ್ಯದ ಬೆಳಕಿನಲ್ಲಿ ಆಂಜನೇಯನ ಕಲ್ಪನೆಯಿದೆ.ಒಟ್ಟಾರೆ ಈ ಕೃತಿಯು ಲೇಖಕರ ಪ್ರಬುದ್ಧ ಚಿಂತನೆ ಹಾಗೂ ಪ್ರತಿಭೆಯ ಭಾರಕ್ಕೆ ಬಾಗಿದ ಕೃತಿಯೆನ್ನಬಹುದು. ಪ್ರೀತಿಗೆ ಪಾತ್ರರಾದವರ, ಪ್ರೀತಿಯ ಹಾಡುಗಳು ಹಾಗೂ ಪ್ರೀತಿಯ ವಸ್ತುಗಳೊಂದಿಗೆ ಪ್ರೀತಿಯ ಸೋಜಿಗವನ್ನು ನೋಡುತ್ತಾ ಬದುಕಿನ ಪ್ರೀತಿಗೆ ಬೇಕಾದ ಒಳನೋಟವನ್ನು ಒದಗಿಸುವ ಈ ಕೃತಿಯ ಶೀರ್ಷಿಕೆಯು ಸಮಂಜಸವಾಗಿದೆ ********** ಎಂ. ಆರ್. ಅನಸೂಯ

ಪ್ರೀತಿ ಮತ್ತು ಪ್ರೀತಿ ಮಾತ್ರ Read Post »

You cannot copy content of this page

Scroll to Top